ಪ್ರತಿಯೊಂದು ಋತುಕಾಲದಲ್ಲಿಯೂ ಹಗಲು ಇರುಳುಗಳ ಅವಧಿಯಲ್ಲಿ ಬಿಸಿಲು, ಹವೆ, ಶೀತ, ಉಷ್ಣಾಂಶಗಳ ಬದಲಾವಣೆ ಹೀಗೆ ಪರಿಸರದಲ್ಲಿ ನಾನಾ ವೈಚಿತ್ಯ್ರಗಳು ಜರುಗುತ್ತಿರುತ್ತದೆ. ನಾವು ಆರೋಗ್ಯಕ್ಕೆ ಅನುಕೂಲವಾಗುವಂತೆ ಒಂದೇ ರೀತಿಯ ಆಹಾರ ವಿಹಾರಗಳನ್ನೂ ಎಲ್ಲ ಕಾಲದಲ್ಲೂ ಅನುಸರಿಸುತ್ತ ಹೋಗುವುದು ಸರಿ ಎನಿಸುವುದಿಲ್ಲ. ಆಯಾ ಋತುಮಾನಕ್ಕೆ ತಕ್ಕಂತೆ ಮಾನವ ವಾತಾವರಣಕ್ಕನುಗುಣವಾಗಿ ಮಾನವ ಪ್ರಾಣಿಯಲ್ಲೂ ಅದರ ಪ್ರಕ್ರಿಯೆಗಳು ಕಾಣಲೇಬೇಕಾಗುತ್ತದೆ. ಈ ಪ್ರತಿಕ್ರಿಯಾ ಸ್ವರೂಪದ ವಿಕಾರಗಳಿಂದ ನಮ್ಮ ಆರೋಗ್ಯವು ಕೆಡದಂತೆ ನಮ್ಮ ನಿತ್ಯ ಆಹಾರ ವಿಹಾರಗಳಲ್ಲಿಯೇ ಕೆಲ ಬದಲಾವಣೆ ಮಾಡಿಕೊಂಡರೆ ಅವುಗಳನ್ನೂ ವಿರೋಧಿಸಬಹುದು.

ವರ್ಷದಲ್ಲಿಯ ೧೨ ತಿಂಗಳುಗಳಲ್ಲಿ ಮಾಘಮಾಸದಿಂದ ಮೊದಲ್ಗೊಂಡು ಎರಡೆರಡು ತಿಂಗಳುಗಳ ಆರು ಗುಂಪುಗಳನ್ನು ಮಾಡಿದರೆ ಕ್ರಮವಾಗಿ, ಶಿಶಿರ, ವಸಂತ, ಗ್ರೀಷ್ಮ, ವರ್ಷಾ, ಶರತ್ ಮತ್ತು ಹೇಮಂತ ಎಂಬ ಋತುಗಳು ಬರುತ್ತವೆ. ಮೊದಲಿನ ಮೂರು ಋತುಗಳು ಉತ್ತರಾಯಣ(ಅದಾನ ಕಾಲ-ಬಲವನ್ನು ಕುಂದಿಸು)ಎಂತಾದರೆ ಮುಂದಿನ ಮೂರು ಋತುಗಳು ದಕ್ಷಿಣಾಯಣ (ವಿಸರ್ಗ ಕಾಲ – ಸೃಷ್ಠಿಸುವ ಕಾಲ) ಎಂದು ಕರೆಯಲಾಗಿದೆ.

. ಶಿಶಿರ ಋತು: ಈ ಋತುವು ಮಾಘ-ಪಾಲ್ಗುಣ ಮಾಸಗಳಲ್ಲಿ ಎಂದರೆ ಈಗಿನ ಜನವರಿ ೧೬ ರಿಂದ ಮಾರ್ಚ್‌೯-೧೫ನೇ ತಾರೀಖಿನವರೆಗೆ ಬರುವುದು. ಈ ಕಾಲದ ಹವೆಯು ತುಂಬ ಶೈತ್ಯಮಯವಾಗಿರುತ್ತದೆ. ಆದ್ದರಿಂದ ಶೀತದಿಂದ ರಕ್ಷಿಸುವ ಆಹಾರ-ವಿಹಾರಗಳನ್ನು ಅನುಸರಿಸಬೇಕಾಗುತ್ತದೆ. ಈ ಕಾಲದಲ್ಲಿ ಜಠರಾಗ್ನಿಯು ಪ್ರದೀಪ್ತವಾಗಿರುವುದರಿಂದ ಹಸಿವು ಹೆಚ್ಚು. ಸ್ವಾದು, ಆಮ್ಲ, ಲವಣ ಕಫ ಪ್ರಧಾನವಾದ ಆಹಾರಪದಾರ್ಥಗಳನ್ನು ವಿಶೇಷವಾಗಿ ಸೇವಿಸಬೇಕು. ವ್ಯಾಯಾಮ, ಅಭ್ಯಂಗ, ಸ್ನಾನ, ಉಷ್ಣದ್ರವ್ಯಗಳಿಂದ ಅನುಲೇಪನ, ಉಷ್ಣಕಾರಕ ಬಟ್ಟೆಗಳನ್ನು ಧರಿಸುವುದು. ಬಿಸಿಲು ಮತ್ತು ಉಷ್ಣವಾದ ನೆಲ, ಮನೆ ಮತ್ತು ಗರ್ಭಗೃಹಗಳಲ್ಲಿ ವಾಸಿಸಬೇಕು. ಮನೆಯಲ್ಲಿ ಅಗ್ಗಷ್ಟಿಕೆಗಳನ್ನು ಹಾಕಿಕೊಳ್ಳಬೇಕು. ಲಘುವಾದ, ವಾತವೃದ್ಧಿ ಮಾಡತಕ್ಕ ಅನ್ನಪಾನಗಳನ್ನು, ಬಿರುಗಾಳಿ, ಗಂಜಿ ನೀರುಗಳನ್ನು ಹಿಮವಿದ್ದಾಗ್ಗೆ ತ್ಯಜಿಸಬೇಕು. ಆಹಾರವನ್ನೂ ಸ್ವಲ್ಪ ಪ್ರಮಾಣದಲ್ಲಿ ಸೇವಿಸದೇ ಹೆಚ್ಚು ಸೇವಿಸಬೇಕು.

. ವಸಂತ ಋತು: ಈ ಋತು ಕಾಲವು ಚೈತ್ರ ವೈಶಾಖ ಮಾಸಗಳಲ್ಲಿ ಎಂದರೆ ಈಗಿನ ೧೬ ಮಾರ್ಚದಿಂದ ೧೫ ಮೇ ವರೆಗೆ ಬರುವುದು. ಈ ಋತುಕಾಲದಲ್ಲಿ ದಕ್ಷಿಣದಿಂದ ಗಾಳಿ ಬೀಸುತ್ತದೆ. ಸೂರ್ಯನು ಪ್ರಖರವಾಗತೊಡಗಿ ಉಷ್ಣತೆಯು ಹೆಚ್ಚುವುದು. ಹೇಮಂತ ಶಿಶಿರ ಋತುಗಳಲ್ಲಿ ಸಂಚಿತ ಕಫವು ಕರಗಲಾರಂಭಿಸುವುದರಿಂದ ಕಫದ ವಿಕಾರಗಳು ಬರುವುದು ಹೆಚ್ಚು. ಆದ್ದರಿಂದ ಕಫದೋಷ ನಿವಾರಕ ಆಹಾರ ವಿಹಾರಗಳನ್ನು ಅನುಸರಿಸಬೇಕಾಗುತ್ತದೆ. ಪ್ರಾರಂಭದಲ್ಲಿ ಒಮ್ಮೆ ವಾಂತಿ ಮಾಡಿಸಬೇಕು. ಗುರು, ಸ್ನಿಗ್ಧ, ಮಧುರ ಪದಾರ್ಥಗಳನ್ನು ಸೇವಿಸಬೇಕು. ಹಗಲು ನಿದ್ರೆ ಮಾಡಬೇಕು. ಒಣಶುಂಠಿ ಹಾಕಿ ಕುದಿಸಿದ ನೀರನ್ನು ಕುಡಿದರೆ ಕಫದ ವಿಕಾರಗಳು ದೂರವಾಗುವುವು.

. ಗ್ರೀಷ್ಮ ಋತು: ಈ ಋತು ಕಾಳವು ಜೇಷ್ಠ – ಆಷಾಢ ಎಂದರೆ ೧೬ ಮೇ ರಿಂದ ೧೫ ಜುಲೈ ವರೆಗೆ ಬರುವುದು. ಈ ಕಾಲದಲ್ಲಿ ಬಿಸಿಲು ಹೆಚ್ಚಾಗುತ್ತ ಹೋಗುವುದರಿಂದ ಬಿಸಿಯಾದ ವಾಯು, ಬಿಸಿಲು ಹಾಗೂ ಹೆಚ್ಚಾಗಿ ಬರುವ ಬೆವರಿನಿಂದ ಜೀವಿಗಳು ನಿರುತ್ಸಾಹಗೊಳ್ಳುವುವು. ಕಫವು ಕ್ಷೀಣಿಸಿ ವಾತವು ಪ್ರಕೋಪವಾಗುವುದರಿಂದ ಉಪ್ಪು ಕಾರ, ಹುಳಿ ರಸಗಳನ್ನು ವ್ಯಾಯಾಮ, ಬಿಸಿಲುಗಳ ವಿಹಾರವನ್ನು ತ್ಯಜಿಸಬೇಕಾಗುವುದು. ಮಧುರ ರಸ ಪ್ರಧಾನವಾದ ಸ್ನಿಗ್ಧ ಹಾಗೂ ಶೀತವರ್ಯಯದ ಆಹಾರ ಪದಾರ್ಥಗಳನ್ನು ಸೇವಿಸಬೇಕು. ತಣ್ಣನೆಯ ಹಾಲಿಗೆ ಸಕ್ಕರೆ ಸೇರಿಸಿ ಕುಡಿಯಬೇಕು.

ಉದ್ಯಾನವನಗಳಲ್ಲಿ ಶೀತಲ ಜಲಧಾರೆ ಇರುವ ಸ್ಥಳದಲ್ಲಿ ಮಧ್ಯಾಹ್ನ ವಿಶ್ರಾಂತಿ, ಲಘು ನಿದ್ರೆ ತೆಗೆದುಕೊಳ್ಳಬೇಕು. ವಾತಾವರಣದಲ್ಲಿ ಮಾನವನ ಶಕ್ತಿ ಹರಣವಾಗುತ್ತಿರುವುದರಿಂದ ಈ ಕಾಲದಲ್ಲಿ ಲೈಂಗಿಕ ಸಂಪರ್ಕ ಮಾಡಬಾರದು. ಲಾವಂಚ ಕಡ್ಡಿಗಳಿಂದ ತಯಾರಿಸಿದ್ದ ಬೀಸಣಿಕೆಗಳನ್ನು ಉಪಯೋಗಿಸಬೇಕು. ತಂಪಾದ ಗಾಳಿಯ ಸೇವನೆ, ಹಣ್ಣು-ಹಂಪಲುಗಳನ್ನು ವಿಶೇಷವಾಗಿ ಸೇವಿಸುವುದು. ಹೂವುಗಳನ್ನು ಮೂಸಿಸುವುದು, ಧರಿಸುವುದನ್ನು ಈ ಕಾಲದಲ್ಲಿ ಆರೋಗ್ಯ ದೃಷ್ಟಿಯಿಂದ ಮಾಡಬೇಕಾಗುವುದು.

. ವರ್ಷಾ ಋತು: ಶ್ರಾವಣ- ಭಾದ್ರಪದ ತಿಂಗಳುಗಳಲ್ಲಿ ಎಂದರೆ ಜುಲೈ ೧೬ ರಿಂದ ಸೆಪ್ಟೆಂಬರ್ ೧೬ರ ವರೆಗೆ ಈ ಋತುಕಾಲ ಇರುವುದು. ಸಮುದ್ರಗಳ ಕಡೆಯಿಂದ ಗಾಳಿ ಬೀಸುವುದು. ಗುಡುಗು ಮಿಂಚುಗಳೊಡನೆ ಧಾರಾಕಾರವಾಗಿ ಮಳೆ ಸುರಿಯುವುದು. ಭೂಮಿಯ ಮೇಲೆ ಎಲ್ಲೆಡೆಗೆ ನೀರು, ಹಸಿರು ವಾತಾವರಣ ಕಂಡುಬರಲಾರಂಭಿಸುವುದು. ಈ ಕಾಲದಲ್ಲಿ ಜಠರಾಗ್ನೀಯ ಕ್ಷೀಣತೆ, ಪಿತ್ತಪ್ರಕೋಪ, ಕಫ ಪ್ರಕೋಪಗಳಾಗುವುದರಿಂದ ತ್ರಿದೋಷಹರಣಗಳಾದ ಆಹಾರ ವಿಹಾರಗಳನ್ನೂ ಮುಖ್ಯವಾಗಿ ಅಗ್ನಿದೀಪ್ತಿಕರಗಳಾದ ಆಹಾರಗಳನ್ನು ಸೇವಿಸಬೇಕು. ವಿರೇಚನ, ನಿರೂಹಬಸ್ತಿ ತೆಗೆದುಕೊಂಡು ಮಲಶುದ್ಧಿಯಾದ ಬಳಿಕ ಹಳೆಯ ಅಕ್ಕಿಯ ಅನ್ನ, ಒಣಶುಂಠಿ, ದಾಲಚಿನ್ನಿಚೆಕ್ಕೆ, ಜೀರಿಗೆ, ಮೆಣಸು, ಧನಿಯಗಳನ್ನು ಹಾಕಿ ತಯಾರಿಸಿದ ಕಷಾಯ, ತೊಗರಿಯ ಕಟ್ಟು, ಜೇಷ್ಠ ಮಧು ಹಾಕಿ ಕಾಯಿಸಿದ ನೀರು, ಸೌವರ್ಚಲವಣ ಮುಂತಾದವುಗಳನ್ನು ಸೇವಿಸಬೇಕು. ನೀರುನ್ನು ಕುದಿಸಿ ಕುಡಿಯಬೇಕು. ಹುಳಿ, ಉಪ್ಪ, ತುಪ್ಪ, ಎಣ್ಣೆಗಳನ್ನು ಹೆಚ್ಚಾಗಿ ಸೇರಿಸದೆ ಶುಷ್ಕ ಪದಾರ್ಥಗಳ ಭೋಜನವನ್ನು ಲಘುವಾಗಿರುವಂತೆ ತೆಗೆದುಕೊಳ್ಳಬೇಕು. ಬರಿಗಾಲುಗಳಿಂದ ನಡೆಯಬಾರದು. ಶರೀರವನ್ನು ಅದಷ್ಟು ಉಷ್ಣತೆಯಲ್ಲಿಟ್ಟುಕೊಳ್ಳಬೇಕು. ಹಗಲು ನಿದ್ರೆ, ಸ್ತ್ರೀ ಸಂಗ, ವ್ಯಾಯಾಮ ಹಾಗೂ ಆಯಾಸದ ಕೆಲಸಗಳನ್ನು ಮಾಡಬಾರದು.

. ಶರದ್ ಋತು: ಕಾರ್ತೀಕ-ಆಶ್ವೀಜ ಮಾಸಗಳಲ್ಲಿ ಎಂದರೆ ೧೬ ಸೆಪ್ಟೆಂಬರ್ ದಿಂದ ನವೆಂಬರ್ ೧೫ರ ವರೆಗೆ ಈ ಋತು ಕಾಲವಿರುವುದ. ಮಳೆಯು ಹೋಗಿ ಸೂರ್ಯ ಕಿರಣಗಳು ಚೆನ್ನಾಗ ಬೀಳುತ್ತ ಹೋಗುವುದರಿಂದ ಪಿತ್ತವು ಪ್ರಕೋಪಗೊಳ್ಳುವುದು. ಆದ್ದರಿಂದ ಪಿತ್ತನಿವಾರಕಗಳಾದ ತಿಕ್ತಘೃತಪಾನ, ವಿರೇಚನೌಷಧಿಗಳನ್ನೂ ತೆಗೆದುಕೊಳ್ಳಬೇಕು. ರಕ್ತ ಮೋಕ್ಷಣ ಮಾಡಿಸಿಕೊಳ್ಳಬೇಕು. ಹಸಿವಾದಾಗ ತಿಕ್ತ, ಸ್ವಾದು, ಕಷಾಯ ರಸಗಳಿಂದ ತಯಾರಿಸಿದ ಲಘುವಾದ ಅನ್ನವನ್ನು ಊಟಮಾಡಬೇಕು. ಶಾಲಿ, ರಕ್ತಶಾಲಿ(ಅಕ್ಕಿ ಬೇದಗಳು) ಹೆಸರು, ಸಕ್ಕರೆ, ನೆಲ್ಲಿಕಾಯಿ, ಪಡವಲಕಾಯಿಗಳನ್ನೂ ವಿಶೇಷವಾಗಿ ತಿನ್ನಬೇಕು. ಕುಡಿಯಲು ಹಾಗೂ ಸ್ನಾನಮಾಡಲು ‘ಹಂಸೋದಕ’ಎಂಬ ಶುದ್ದ ನೀರನ್ನೇ ಉಪಯೋಗಿಸಬೇಕು. ಶ್ರೀಗಂಧ, ಲಾವಂಚ, ಪಚ್ಚ , ಕರ್ಪೂರಗಳಿಂದ ಅನುಲೇಪನವನ್ನೂ ರಾತ್ರಿ ವೇಳೆಯಲ್ಲಿ ಚಂದನ ಕಿರಣಗಳು ಬೀಸುವ ತಾಣದಲ್ಲಿ ಕುಳಿತು ವಿಶ್ರಾಂತಿ ತೆಗೆದುಕೊಳ್ಳವುದರಿಂದ ಪಿತ್ತ ಹರಣವಾಗುವುದು. ಈ ಋತು ಕಾಲದಲ್ಲಿ ಮಂಜು ಬೀಳುವ ಸ್ಥಳಗಳನ್ನು ತ್ಯಜಿಸಬೇಕು. ಕ್ಷಾರಗಳನ್ನೂ ಸೇವಿಸಬಾರದು. ಹೆಚ್ಚು ಆಹಾರ ತಿನ್ನಬಾರದು. ಮೊಸರು, ತೈಲ, ಬಿಸಿಲು, ಹಗಲು ನಿದ್ರೆ, ಪೂರ್ವ ದಿಕ್ಕಿಗೆ ಬೀಸುವ ಗಾಳಿಗೆ ಎದುರಾಗಿ ನಡೆಯುವುದು ಮೊದಲಾದವುಗಳನ್ನು ಬಿಡಬೇಕು.

. ಹೇಮಂತ ಋತು: ಮಾರ್ಗಶೀರ್ಷ-ಪುಷ್ಯ ಮಾಸಗಳಲ್ಲಿ ಎಂದರೆ -ನವೆಂಬರ್ ೧೬ ರಿಂದ ಜನವರಿ ೧೫ರ ವರೆಗೆ ಈ ಋತುಕಾಲವಿರುವುದು. ಈ ಮೊದಲು ಶಿಶಿರ ಋತುವಿನಲ್ಲಿ ಆಚರಿಸಬೇಕಾದ ಆಹಾರ ವಿಹಾರಗಳನ್ನೇ ಅನುಸರಿಸಬೇಕು.

ಋತು ಸಂಧಿಕಾಲ: ಮೊದಲಿನ ಋತುವು ಪೂರ್ತಿಯಾಗಲು ಹಿಂದಿನ ಏಳು ದಿವಸಗಳೂ, ಮುಂಬರುವ ಋತುವಿನ ಏಳು ದಿವಸಗಳ ಅವಧಿಗೆ ‘ಋತು ಕಾಲ ಸಂಧಿ’ ಎನ್ನುವರು. ಮೊದಲಿನ ಏಳು ದಿವಸಗಳಲ್ಲಿ ಹಿಂದಿನ ಋತುವಿನ ಆಹಾರ ವಿಹಾರಗಳನ್ನು ಬಿಡುತ್ತ ಬಂದು ಮುಂದಿನ ಏಳು ದಿವಸಗಳಲ್ಲಿ ಆಯಾ ಋತುವಿನ ಚರ್ಯೆಯನ್ನು ಪಾಲಿಸಬೇಕು. (ಆಧಾರಕಲ್ಯಾಣಕಾರಕ ಅಧ್ಯಾಯ)

ಪ್ರತಿದಿನ ಋತುವಿಭಾಗ

ವರ್ಷದಲ್ಲಿ ಕಂಡು ಬರುವ ಆರು ಋತುಕಾಲಗಳ ಹವಾಮಾನವನ್ನು ನಾವು ಪರಿಸರದಲ್ಲಿ ನಿತ್ಯ ಕಾಣಬಹುದಾಗಿದೆ. ಬೆಳಿಗ್ಗೆ ವಸಂತ ಋತುವಿನ ಹವೆ, ಮಧ್ಯಾಹ್ನ ಗ್ರೀಷ್ಮ ಋತು, ಸಾಯಂಕಾಲ ಪ್ರಾವೃತ್‌, ರಾತ್ರಿ ಅರ್ಧ ಭಾಗದಲ್ಲಿ ವರ್ಷಾ ಪರಿಸರ, ಮಧ್ಯ ರಾತ್ರಿ ಶರತ್ಕಾಲ ಹಾಗೂ ಅತಿ ಬೆಳಗಿನ ಜಾವ ಹೇಮಂತ ಋತುವಿನ ಹವಾಮಾನವನ್ನು ಕಾಣಬಹುದು.[1]

ದೋಷಗಳ ಸಂಚಯ ಹಾಗೂ ಪ್ರಕೋಪಗಳು

ಹೇಮಂತ ಋತುವಿನಲ್ಲಿ ಸಂಚಿತ ಕಫವು ವಸಂತ ಋತುವಿನಲ್ಲಿ ಕುಪಿತವಾಗುವುದು. ಗ್ರೀಷ್ಮ ಋತುವಿನಲ್ಲಿ ಸಂಚಿತ ವಾಯು ಪ್ರಾವೃತ್ ಋತುವಿನಲ್ಲಿ ಪ್ರಕೋಪವಾಗುವುದು. ವರ್ಷಾ ಋತುವಿನಲ್ಲಿ ಸಂಚಿತ ಪಿತ್ತವು ಶರತ್ಕಾಲದಲ್ಲಿ ಪ್ರಕೋಪವಾಗುವುದು. ಇದು ದೋಷಗಳ ಸಂಚಯ ಹಾಗೂ ಪ್ರಕೋಪ ವಿಧ ಇದೆ. ಈ ರೀತಿ ಸಂಚಿತ ದೋಷಗಳ ಪ್ರಕೋಪ ಸಮಯದಲ್ಲಿ ವಾತ ದೋಷವನ್ನು ವಸ್ತಿಕರ್ಮದಿಂದ, ಪಿತ್ತವನ್ನು ವಿರೇಚನದಿಂದ, ಕಫವನ್ನು ವಾಂತಿ ಮಾಡಿಸುವ ಮೂಲಕ ಹೊರಹಾಕಿದರೆ ದೋಷಗಳ ನಿರ್ಹಹಣೆ ಆಗುವುದು. ಇಲ್ಲವಾದರೆ ಈ ದೋಷಗಳಿಂದ ಅನೇಕ ವಿಕಾರಗಳು ಹುಟ್ಟಿಕೊಳ್ಳುವುವು.[2]

[1] ಪೂರ್ವಾಣ್ಹೆತು ವಸಂತನಾಮಸಮಯೋಮಧ್ಯಂದಿನಂ ಗ್ರೀಷ್ಮಕಃ |
ಪ್ರಾವ್ಯಷ್ಯಂ ಹ್ಯಾಪರಾಣ್ಹ ಗ್ರಿತ್ಯಭಿಹಿತಂ ವರ್ಷಾಗಮಃ ಪ್ರಾಗ್ನಿಶಾ ||
ಮಧ್ಯಂ ನಕ್ತ ಮುದಾಹೃತಂ ಶರದೀತಿ ಪ್ರತ್ಯೂಷಕಾಲೋ ಹಿಮೋ |
ನಿತ್ಯಂ ವತ್ಸರವತ್ಕಮಾತ್ ಪ್ರತಿದಿನಂ ಷಣ್ಣಾಂ ಋತುನಾಂ ಗತಿಃ ||
(ಕ.ಅ.೪, ಶ್ಲೋಕ.೭)

 

[2] ಗ್ರೀಷ್ಮಾ ಕುಪ್ಯತಿ ಸದ್ವಸಂತಸಮಯ ಹೇಮಂತ ಕಾಲಾರ್ಜಿತಃ |
ಪ್ರಾವೃಷ್ಯೇವ ಹಿ ಮಾರುತ ಪ್ರತಿಧಿನಂ ಗ್ರೀಷ್ಮೆ ಸದಾ ಸಂಚಿತಃ ||
ಪಿತ್ತಂ ತಚ್ಛರದಿ ಪ್ರತೀತ ಜಲದವ್ಯಾಪಾರತೊತ್ಸ್ಯುತ್ಕಟಂ |
ತೇಷಾಂ ಸಂಚಯಕೋಪಲಕ್ಷಣ ವಿಧರ್ದೋಷಾಂಸ್ತದಾ ನಿರ್ಹರೇತ್ ||
(ಕ.ಅ.೪, ಶ್ಲೋಕ-೮)]