೩ ಶೂದ್ರ ಆಚರಣೆಗಳ ಆದಾನ ಪ್ರದಾನ:

ಜೈನ ಮಹಿಳೆಯರು, ಅದರಲ್ಲೂ ಗ್ರಾಮ ಜಗತ್ತಿನಲ್ಲಿ ಒಕ್ಕಲುತನವನ್ನು ಮಾಡಿ ಬದುಕು ಸಾಗಿಸುವವರು ಅನೇಕ ಶೂದ್ರಾಚರಣೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಜೈನಧರ್ಮ ತಿರಸ್ಕರಿಸಿದ ದೇವ-ದೇವತೆಗಳನ್ನು ಇವರು ಭಯ-ಕ್ತಿಯಿಂದ ಪೂಜಿಸುತ್ತಾರೆ. ಊರಿನ ಗ್ರಾಮ ದೇವತೆಗಳನ್ನು ಕೂಡಾ ಪೂಜಿಸುವದರೊಂದಿಗೆ ಆ ದೇವರುಗಳ ಹೆಸರಿನಲ್ಲಿ ವ್ರತ ಉಪವಾಸ ಇತ್ಯಾದಿಗಳನ್ನು ಕೂಡಾ ಮಾಡುತ್ತಾರೆ. ಪ್ರತಿಯೊಂದು ಹೊಲದ ಸೀಮೆಯಲ್ಲಿ ಸೀಮಿ ಲಕ್ಕವ್ವ ಅಥವಾ ಸೀಮಿ ಬಸವಣ್ಣ ಇಲ್ಲವೆ ಬನ್ನಿ ಮರದವ್ವ, ದುರ್ಗವ್ವ ಹೀಗೆ ದೇವರುಗಳಿರುತ್ತವೆ. ಈ ದೇವರುಗಳು ತಮ್ಮ ಹೊಲದಲ್ಲಿಯ ಬೆಳೆಗಳನ್ನು ರಕ್ಷಣೆ ಮಾಡುತ್ತಾರೆ ಎನ್ನುಬ ನಂಬಿಕೆಯನ್ನು ಉಳಿದ ಗ್ರಾಮೀಣ ಮಹಿಳೆಯರಂತೆ ಜೈನ ಮಹಿಳೆಯರೂ ಕೂಡಾ ನಂಬಿ ನಡೆದುಕೊಳ್ಳುತ್ತಾರೆ. ವರ್ಷದಲ್ಲಿ ಒಂದು ಸಲವಾದರೂ ಈ ದೇವರು ಇರುವ ಭಾಗದಲ್ಲಿ ಹೊಲ ಇದ್ದವರು ಆಯಾ ದೇವರುಗಳಿಗೆ ಮುತ್ತೈದೆ ತನಕ್ಕೆ ಹೇಳುತ್ತಾರೆ. ಅದಕ್ಕೆ ಜೈನಮಹಿಳೆಯರೂ ಮುತ್ತೈದೆಯಾಗಿ ಹೋಗುತ್ತಾರೆ. ಆ ದೇವರಿಗೆ ಕರೀ ಸೀರೆ ಏರಿಸಿ ಉಡಿ ತುಂಬುತ್ತಾರೆ. ದೇವರ ಪ್ರಸಾದ ಭಂಡಾರವನ್ನು ಹಣೆಗೆ ಹಚ್ಚಿಕೊಳ್ಳುತ್ತಾರೆ. ಜೈನಧರ್ಮ ಭಂಡಾರ ದೇವರುಗಳನ್ನು ಪೂಜಿಸಬಾರದು ಎನ್ನುತ್ತದೆ.

ಕುರುಬರ ಬೀರಪ್ಪ, ಖಿಳೇಗಾವಿ ಬಸವಣ್ಣ, ಎಲ್ಲಮ್ಮ, ಚಿಂಚಲಿ ಮಾಯವ್ವ, ಮುಚ್ಚಂಡಿಯ ಧರೆಪ್ಪ ಇಲ್ಲಿ ಜೈನರ ಮನೆಯಲ್ಲಿ ಮನೆದೇವರಾಗಿ ಪೂಜಿಸಲ್ಪಡುತ್ತಾರೆ. ಅದಕ್ಕಾಗಿಯೇ ಜೈನಸ್ವಾಮಿಗಳು ಆಹಾರಕ್ಕಾಗಿ ಮನೆಗೆ ಬಂದಾಗ ಮಿಥ್ಯಾದೇವರನ್ನು ಬಿಟ್ಟಿದ್ದೇವೆ, ಅನ್ನಾ ನೀರು ಶುದ್ಧೈತೆ ಎಂದು ಹೇಳಬೇಕಾಗುತ್ತದೆ. ಅಥಣಿ, ಜಮಖಂಡಿ ತಾಲೂಕುಗಳಲ್ಲಿ ಬಬಲಾದಿ ಸದಾಶಿವಪ್ಪ ಸ್ವಾಮಿ ಬಹಳ ಪ್ರಸಿದ್ಧ. ಅವನನ್ನು ಜೈನರು ಭಕ್ತಿಯಿಂದ ಪೂಜಿಸುತ್ತಾರೆ. ತಮ್ಮ ಮನೆಯ ಮುಂದೆ ದೇವರ ಮೆರವಣಿಗೆ ನಡೆದರೆ ಮಲ್ಲಯ್ಯ ಬಂದರೆ ಬೆಲ್ಲ ತೆಂಗಿನ ಕಾಯಿ, ಮಲ್ಲಿಕ ಸಾಬ ಬಂದರೆ ಸಕ್ಕರಿ, ದುರ್ಗವ್ವ ಬಂದರೆ ಅಂಬಲಿ, ಕಿಚಡಿ, ಬಸವಣ್ಣ ಬಂದರೆ ಕಡುಬು, ಹೀಗೆ ಬಾನ ಕೊಡುವ ಮೂಲಕ ಆ ದೇವರಿಗೆ ನಡೆದು ಕೊಳ್ಳುತ್ತಾರೆ.

ಕೆಲ ಜೈನಮಹಿಳೆಯರು ಜೈನರು ಪೂಜಿಸಲೇಬಾರದು ಎಂದು ಹೇಳಿದ ದೇವರುಗಳಿಗೂ ಬಹಳ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ತಮ್ಮ ಗಂಡುಮಕ್ಕಳ ಮದುವೆಯಲ್ಲಿ ಗುಗ್ಗಳ ತೆಗೆಯುವದು, ಚೇಂಗಬಲ್ಲ ಆಡಿಸುವದು, ಮಾಡುವದರೊಂದಿಗೆ ಮನೆಯ ದೇವರೆಂದು ಅನ್ಯದೇವತೆಗಳನ್ನು ಮನೆಯಲ್ಲಿ ಪೂಜಿಸುತ್ತಾರೆ.

ನಾನು ಹೀಗೆ ಅನ್ಯ ದೇವರುಗಳನ್ನು ಪೂಜಿಸುವ ಜೈನ ಮಹಿಳೆಯನ್ನು ಭೇಟಿ ಮಾಡಿ ಕೇಳಿದಾಗ ಆ ಮಹಿಳೆ (ಊರು ನಂದಗಾಂವ, ತಾಲೂಕ ಅಥಣಿ, ಹೆಸರು ಚಂಪವ್ವ ಮಗದುಮ, ವಯಸ್ಸು ೭೦) ಅದಕ್ಕೆ ಸಮಜಾಯಿಷಿ ಕೊಟ್ಟ ಬಗೆ ಕುತೂಹಲಕಾರವಾಗಿತ್ತು. ಅವಳು ಹೇಳಿದ್ದು—“ಅಯ್ಯ, ನಮ್ಮ ದೇವ್ರ ಏನ ಕೊಡಾವ ಅಲ್ಲ. ಬಿಡಾವ ಅಲ್ಲ. ಆತ್ಮ ಕಲ್ಯಾಣ ಮಾಡಕೋರಿ ಅಂತಾರ. ಅದರ ಮನಸ್ಸಿಗಿ ಸಮಾಧಾನ ಆಗಲಾಕ ಪೂಜಿ ಪುನಸ್ಕಾರ ಬೇಕ. ನಮ್ಮ ದೇವರಾ ತ್ಯಾಗ ಮಾಡಿರಿ ಅತಾವ. ಜೀವ್ನಾ ಅಂದ್ರ ಬರೇ ತ್ಯಾಗ ಮಾಡುದ ಅಲ್ಲ. ಬೇಡಕೊಳ್ಳೂದು ಇರತೈತಿ! ಅಲ್ಲೇನ್ರಿ>”

೪ ಹಲ್ಲಿಗೆ ಜಾಚೀಲಿ:

ಇನ್ನೂ ಒಂದು ವಿಶೇಷವೆಂದರೆ ಈ ಭಾಗದ ಮಹಿಳೆಯರು ಹೆರಿಗೆಯಾದ ಸಂದರ್ಭದಲ್ಲಿ ಹಲ್ಲಿಗೆ ಜಾಚೀಲಿ ಹಚ್ಚಿಕೊಳ್ಳುತ್ತಾರೆ. ಜಾಚೀಲಿ ಒಂದು ತರಹದ ರಾಸಾಯನಿಕ ಪದಾರ್ಥವಾಗಿದ್ದು ಹಲ್ಲುಗಳನ್ನು ಕರ್ರ‍ಗೆ ಮಿಂಚುವಂತೆ ಮಾಡುತ್ತದೆ. ಹಲ್ಲಿಗೆ ಜಾಚೀಲಿಯನ್ನು ಬಹಳ ಹಿಂದೆ ಕೇವಲ ದಲಿತ ಮಹಿಳೆಯರು ಅದರಲ್ಲೂ ಬಸವಿ ಮತ್ತು ಜೋಗತಿಯರು ಹಚ್ಚಿಕೊಳ್ಳುತ್ತಿದ್ದರು. ಆದರೆ ಜೈನಮಹಿಳೆಯರು, ಯಾವಾಗಿನಿಂದ ಮತ್ತು ಯಾಕಾಗಿ ಹೀಗೆ ಹಲ್ಲುಗಳನ್ನು ಕರ್ರ‍ಗೆ ಮಾಡಿಕೊಳ್ಳುವುದನ್ನು ರೂಢಿಸಿಕೊಂಡರು ಎಂದು ತಿಳಿಯದು. ಈಗ ಜಾಚೀಲಿಯನ್ನು ಹಚ್ಚಿಕೊಳ್ಳುವುದಿಲ್ಲ. ಆ ಮಾತು ಬೇರೆ. ಆದರೆ ಒಂದು ಕಾಲದಲ್ಲಿ ಜೈನ ಮಹಿಳೆ ಇಂತಹ ಪದಾರ್ಥವನ್ನು ಬಳಸುತ್ತಿದ್ದಳು ಎನ್ನುವುದು ಕುತೂಹಲಕಾರಕವಾಗಿದೆ. ಸಾಧಾರಣವಾಗಿ ಅರವತ್ತರಿಂದ ಎಪ್ಪತ್ತು ವಯಸ್ಸಿನ ಹಿರಿಯ ಮಹಿಳೆಯರ ಹಲ್ಲುಗಳು ಈಗಲೂ ಕಪ್ಪಗಿವೆ. ಯಾಕೆ ಹೀಗೆ ಹಚ್ಚಿಕೊಳ್ಳುತ್ತಿದ್ದಿರಿ, ಎಂದು ಕೇಳಿದರೆ ಹಲ್ಲು ಗಟ್ಟಿಯಾಗುತ್ತವೆ ಬೇಗ ಬೀಳುವುದಿಲ್ಲ. ಜಾಚೀಲಿ ಹಲ್ಲಿನ ವಸಡುಗಳನ್ನು ಗಟ್ಟಿಗೊಳಿಸುವದಲ್ಲದೇ ಬಾಯಿ ವಾಸನೆ ಬರುವದಿಲ್ಲ ಮತ್ತು ಮಲಗುವ ಮುನ್ನ ಹಲ್ಲಿಗೆ ಹಚ್ಚಿಕೊಂಡು ಮಲಗಿದರೆ ಮುಂಜಾನೆ ಹಲ್ಲು ತಿಕ್ಕುವ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಈ ಭಾಗದ (ಬೆಳಗಾವಿ ಮತ್ತು ವಿಜಾಪುರ ಜಿಲ್ಲೆಗಳು) ಹೆಣ್ಣು ದೇವತೆಗಳು ಹೆಚ್ಚಾಗಿ ಕರಿಹಲ್ಲನ್ನೇ ಪಡೆದಿರುವದು ಕೂಡಾ ಇದಕ್ಕೆ ಪ್ರಭಾವ ಬೀರಿರಬಹುದು ಎನ್ನಬಹುದಾಗಿದೆ.

ಮುತ್ತಿನ ಮೂಗುತಿ
ನಕ್ಕರೆ ಕರಿ ಹಲ್ಲ
ಅಕ್ಕ ನಿಯಾರ ಲಕ್ಕವ್ವ……..ಅಕ್ಕ ನಿಯಾರ ಲಕ್ಕವ್ವ
ನಮ್ಮೂರ ಮಕ್ಕಳ ತಾಯಿ ನೀನವ್ವ…..

ಇಂತಹ ಜಾನಪದ ಹಾಡುಗಳು ಈ ಭಾಗದಲ್ಲಿ ಸಹಜವಾಗಿ ಕರಿಹಲ್ಲಿನ ಮಹಿಮೆಯನ್ನು ಹುಟ್ಟು ಹಾಕಿರಬೇಕು ಮತ್ತು ಜೈನಮಹಿಳೆ ಗ್ರಾಮಜಗತ್ತಿನಲ್ಲಿ ವಾಸಿಸುತ್ತಾ ಅದನ್ನು ಅನುಕರಣೆ ಮಾಡಿರಬೇಕು ಎನಿಸುತ್ತದೆ.

ಇಲ್ಲಿ ಹನ್ನೊಂಲದು ವಿಚಿತ್ರವಿದೆ. ಮನೆಯ ಗಂಡಸು ಕೂಲಿಕಾರನಾಗಿ ದುಡಿದು ಹಣ ಗಳಿಸಿ ಮಕ್ಕಳನ್ನು ಶಾಲೆ ಕಲಿಸಿ ಅವರನ್ನು ಸಮಾಜ ಒಪ್ಪುವ ಅತ್ಯುತ್ತಮ ನಾಗರಿಕನನ್ನಾಗಿ ಮಾಡಿದರೆ ಆ ಕುಟುಂಬಕ್ಕೆ ನಿಧಾನವಾಗಿಯಾದರೂ ಸಮಾಜದಲ್ಲಿ ಒಂದು ಬಗೆಯ ಗೌರವ ಬರುತ್ತದೆ. (ಸ್ವತಃ ಈ ಲೇಖಕ ಒಬ್ಬ ಕೂಲಿಕಾರ ಜೈನ ತಂದೆಯ ಮಗ) ಆದರೆ ತಾಯಿ ಕೂಲಿ ಮಾಡಿ ಹಣ ಗಳಿಸಿದರೆ ಅವರು ಮುಂದೆ ಶ್ರೀಮಂತರಾದರೂ ಸಮಾಜ ಅವರನ್ನು ಒಂದು ಬಗೆಯ ಕೀಳುದೃಷ್ಟಿಯಿಂದ ನೋಡುತ್ತದೆ. ಇದಕ್ಕೆ ಯಾವ ಕಾರಣ ಇರಬೇಕು? ನನಗೆ ತಿಳಿಯದು! ಬಹುಶಃ ಹೆಣ್ಣಿನ ದುಡಿಮೆಯು ದುಡಿಮೆ ಅಲ್ಲ. ಅವಳು ಮನೆ ಕಟ್ಟಿ ಬೆಳೆಸಿದರೆ ಅದಕ್ಕೆ ಉನ್ನತಿ ಇಲ್ಲ. ಏನೇ ಅಭಿವೃದ್ಧಿಯಾಗುವಂತಿದ್ದರೆ ಅದು ಪುರುಷನಿಂದಲೇ ಎನ್ನುವ ನಂಬಿಕೆಯೇ ಇದಕ್ಕೆಲ್ಲ ಕಾರಣ ಎನ್ನಬಹುದೇನೋ! ಅಂದರೆ ಬಡತನದಲ್ಲಿಯೂ ಲಿಂಗಭೇದದ ತಾರತಮ್ಯ ಮಾಡುವದನ್ನು ಏನೆಂದು ತಿಳಿಯುವದು.

೫ ಶಿಕ್ಷಣ ಪಡೆದು ನೌಕರಿ ಮಾಡುವ ಮಹಿಳೆಯ ಸ್ಥಾನ ಮಾನ:-

ಮೊದಲೆಲ್ಲಾ ಹೆಣ್ಣುಮಕ್ಕಳಿಗೆ ಶಾಲೆ ಕಲಿಸುವದಿರಲಿ, ಅವರು ಋತುಮತಿಯಾಗುವ ಮೊದಲೇ ಮದುವೆ ಮಾಡಿಕೊಡಲಾಗುತ್ತಿತ್ತು. ಈಗ ಎಲ್ಲರೂ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದಾರೆ. ಸಹಜವಾಗಿಯೇ ಹಾಗೆ ಉನ್ನತ ಶಿಕ್ಷಣವನ್ನು ಪಡೆದ ಮಹಿಳೆ ತನ್ನೊಳಗೆ ಅರಿವನ್ನು ತುಂಬಿಕೊಂಡಿರುತ್ತಾಳೆ. ಹಾಗಾಗಿ ಅನಕ್ಷರಸ್ಥ ಮಹಿಳಾ ಗುಂಪಿನಲ್ಲಿ ಇವಳು ಎದ್ದು ಕಾಣುವಂತೆ ಆಗುತ್ತಾಳೆ. ಇತ್ತೀಚೆಗೆ ಜೈನಸಮಾಜ ತಮ್ಮ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಅಪಾರವಾದ ಕಾಳಜಿಯನ್ನು ವಹಿಸುತ್ತಿದೆ. ಎಂಜಿನಿಯರಿಂಗ್‌, ಹೋಮಿಯೋಪತಿ ಮತ್ತು ಆಯುರ್ವೇದ ವೈದ್ಯಕೀಯ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ನೀಡತೊಡಗಿದ್ದಾರೆ. ಆದರೆ ಕನ್ನಡಶಾಲೆಯ ಶಿಕ್ಷಕಿಯರಾಗಿ ಕರ್ನಾಟಕದಲ್ಲಿ ಬಹಳ ಕಡಿಮೆ ಜೈನ ಹೆಣ್ಣುಮಕ್ಕಳಿದ್ದಾರೆ. ಹೈಸ್ಕೂಲ್‌ಶಿಕ್ಷಕರು ಮತ್ತು ಜೂನಿಯರ್ ಕಾಲೇಜದಲ್ಲಿ ವಿವಿಧ ವಿಷಯವನ್ನು ಬೋಧಿಸುವ ಮಹಿಳೆಯರು ಸಿಗುತ್ತಿದ್ದಾರೆ. ಇನ್ನುಳಿದಂತೆ ವಿಶ್ವವಿದ್ಯಾಲಯದಲ್ಲಿ ಪ್ರೋಫೆಸರುಗಳಾಗಿ ರೀಡರ್ ಇತ್ಯಾದಿ ಹುದ್ದೆಯನ್ನು ಪಡೆದವರು ಕರ್ನಾಟಕದಲ್ಲಿ ಕೇವಲ ಆರು ಜನ ಮಾತ್ರ ಇದ್ದಾರೆ ಎನ್ನುವದು, ಜೈನಮಹಿಳೆಗೆ ಈಗ ಹತ್ತಿಪ್ಪತ್ತು ವರ್ಷಗಳ ಹಿಂದೆ ಉನ್ನತ ಶಿಕ್ಷಣ ಸಿಗುತ್ತಿರಲಿಲ್ಲ ಎನ್ನುವದು ವೇದ್ಯವಾಗುತ್ತದೆ.

ಕರ್ನಾಟಕದಲ್ಲಿ ಈವರೆಗೂ ಯಾವೊಬ್ಬ ಜೈನ ಮಹಿಳೆ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯನ್ನು ಹೊಂದಿಲ್ಲ (ಜೈನ ಪುರುಷರೂ ಕೂಡಾ ಅಂತಹ ಹುದ್ದೆಯನ್ನು ಈ ವರೆಗೂ ಕರ್ನಾಟಕದಲ್ಲಿ ಪಡೆದಿಲ್ಲ, ಆ ಮಾತು ಬೇರೆ.) ಗೆಜೆಟೆಡ್‌ಆಫೀಸರುಗಳು, ಎಂಜಿನಿಯರರು, ಬ್ಯಾಂಕ ಮ್ಯಾನೆಜರುಗಳು, ಲಾಯರಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಸಂಖ್ಯೆಯಲ್ಲಿದ್ದಾರೆ.

ಇಲ್ಲಿಯವರೆಗೂ ಎಂ.ಎಲ್‌.ಸಿ,ಎಂ.ಎಲ್‌.ಏ, ಮತ್ತು ಎಂ ಪಿ, ಆಗಿ ಯಾವೊಬ್ಬ ಜೈನ ಮಹಿಳೆಯೂ ಕರ್ನಾಟಕದಲ್ಲಿ ಆಗಿ ಹೋಗಿಲ್ಲ. ಇನ್ನು ಕಮಂತ್ರಿ ಪದವಿಯನ್ನು ಎಲ್ಲಿಂದ ತರುವದು? ಅಷ್ಟರ ಮಟ್ಟಿಗೆ ಜೈನಮಹಿಳೆ ರಾಜಕಾರಣದಲ್ಲಿ ಹಿಂದೆ ಇದ್ದಾಳೆ ಅಥವಾ ಅವಳನ್ನು ರಾಜಕೀಯವಾಗಿ ಮುಂದೆ ಬಿಡುವ ಔದಾರ್ಯವನ್ನು ಈ ವರೆಗೂ ಜೈನ ಸಮಾಜವು ತೋರಿಸಿಲ್ಲ. ಆದರೆ ಝೆಡ್‌ಪಿ, ಸದಸ್ಯರಾಗಿ ಉಪಾಧ್ಯಕ್ಷರಾಗಿ ವಿಜಾಪುರ ಜಿಲ್ಲೆಯಲ್ಲಿ ಒಬ್ಬ ಮಹಿಳೆ ಮಾತ್ರ ಕಾರ್ಯ ನಿರ್ವಹಿಸಿದ್ದಾಳೆ. ಇನ್ನುಳಿದಂತೆ ಮಂಡಲ ಪಂಚಾಯತ ಮತ್ತು ಗ್ರಾಮಪಂಚಾಯತ ಸದಸ್ಯರಾಗಿ ಹಲವಾರು ಮಹಿಳೆಯರು ಆರಿಸಿ ಬಂದಿದ್ದಾರೆ. ಇದಕ್ಕೆ ಕಾರಣವೆನೆಂದರೆ ಅದು ಆಯಾ ಊರಿನಲ್ಲಿಯ ಮೀಸಲಾತಿಯ ಪರಿಣಾಮ. ಆ ವಾರ್ಡಿಗೆ ಮಹಿಳೆಯನ್ನೇ ನಿಲ್ಲಿಸಬೇಕಾಗಿರುವುದರಿಂದ ಮತ್ತು ಅಲ್ಲಿಯ ಜೈನ ಪುರುಷರಿಗೆ ಆ ಭಾಗದಲ್ಲಿ ಅಧಿಕಾರವನ್ನು ಬಿಟ್ಟು ಕೊಡುವದು ಮನಸ್ಸಿಲ್ಲವಾದ್ದರಿಂದ ತಮ್ಮ ಹೆಂಡತಿಯ ಹೆಸರನ್ನು ನಾಮಿನೇಟ್‌ಮಾಡಿ ಆರಿಸಿ ಕಳಿಸಿ, ಅವಳ ಹೆಸರಲ್ಲಿ ತಾವೇ ಮುಂದಾಗಿ ಅಧಿಕಾರವನ್ನು ಚಲಾಯಿಸುತ್ತಾರೆ. ಇವಳು ನಾಮ ಕಾ ವಾಸ್ತೆ ಸದಸ್ಯಳಾಗಿ ಹೇಳಿದ್ದಕ್ಕೆ ಸಹಿ ಹಾಕುತ್ತ ಇರುವಂತಾಗಿದೆ.

ಇದೆಲ್ಲ ಕಾರಣಕ್ಕಾಗಿ ರಾಜ್ಯ ರಾಜಕಾರಣದಲ್ಲಿ ಜೈನ ಮಹಿಳೆ ಮುಂದೆ ಬಂದಿಲ್ಲ. ಸಾಂಸ್ಕೃತಿಕವಾಗಿ ಶಾಸ್ತ್ರೀಯ ಸಂಗೀತ, ಲಘು ಸಂಗೀತ, ಭಾವಗೀತೆ ಹಾಡುಗಾರರು, ಹವ್ಯಾಸಿ ನಟಿಯರು, ಸಾಮಾಜಿಕ ಹೋರಾಟಗಾರ್ತಿಯರು, ಪತ್ರಕರ್ತೆಯರು, ಸಿನೆಮಾ ಅಥವಾ ಕಿರುತೆರೆ ನಿರ್ದೇಶಕಿಯರು ಈಗ ಇಲ್ಲವೇ ಇಲ್ಲ. ಕೆಲವು ದಿನಗಳ ಹಿಂದೆ ನಿವೇದಿತಾ ಜೈನ ಎಂಬ ನಟಿ ಕನ್ನಡ ಸಿನೇಮಾದಲ್ಲಿ ನಟಿಸಿದ್ದಳು. ಅವಳ ಆಕಸ್ಮಿಕ ಸಾವು ಸಂಭವಿಸಿದ ಮೇಲೆ ಮತ್ತೊಬ್ಬ ನಟಿ ಸಿನೇಮಾ ಜಗತ್ತಿಗೆ ಕಾಲಿರಿಸಿಲ್ಲ. ನಿವೇದಿತಾ ಜೈನ ಕೂಡಾ ಮಾರವಾಡಿ ಜೈನಳಾಗಿದ್ದಳು. ಒಟ್ಟಾರೆ ಸಾಂಸ್ಕೃತಿಕ ಲೋಕದಲ್ಲಿ ಜೈನ ಮಹಿಳೆ ತನ್ನನ್ನು ಗುರುತಿಸಿಕೊಳ್ಳಲು ಹಿಂದೇಟು ಹಾಕುತ್ತಾಳೆ. ಇದಕ್ಕೆ ಅವಳ ಬಾಲ್ಯಕಾಲದ ಸಂಸ್ಕಾರಗಳು ಮತ್ತು ಜೈನಸಮಾಜದ ಮನೋಭಾವವೇ ಕಾರಣವಾಗಿದೆ.

ಜೈನ ಧರ್ಮವು ಇಂದು ತನ್ನ ಗತದ ನೆನಪಲ್ಲಿ ಸುಖಿಸುತ್ತಿದೆ. ದಾನ ಚಿಂತಾಮಣಿ ಅತ್ತಿಮಬ್ಬೆ, ಶಾಂತಲೆ, ಚೇಳಿನಿ, ಚಕ್ರೇಶ್ವರಿ, ಗುಂಡಮಬ್ಬೆ(ಅತ್ತಿಮಬ್ಬೆಯ ಅಕ್ಕ, ಸಹಗಮನದಿಂದ ಜೀವ ಬಿಟ್ಟವಳು) ರಾಣಿ ಅಬ್ಬಕ್ಕ (ಕರಿಮೆಣಸಿನ ರಾಣಿ– (Pepper) ಎಂದೇ ಪ್ರಸಿದ್ಧಿ, ಅಲ್ಲದೆ ಪೊರ್ತುಗೀಜರೊಂದಿಗೆ ಹೋರಾಡಿದ ಮೊದಲ ರಾಣಿ) ಕಾಳವ್ವೆ (ಚಾವುಂಡರಾಯನ ತಾಯಿ) ಸುನಂದೆ (ಭರತ, ಬಾಹುಬಲಿಯರ ತಾಯಿ ಮತ್ತು ಮೊಟ್ಟ ಮೊದಲು ಭಗವಾನ್‌ಮಹಾವೀರರಿಗೆ ಆಹಾರ ದಾನ ಮಾಡಿದವಳು) ಕುಂಕುಮ ಮಹಾದೇವಿ (ವಿಕ್ರಮಪುರ-ಅರಸೀಬೀದಿಯ ರಾಣಿ) ಹೀಗೆ ಗತದ ಮಹಾರಾಣಿಯರನ್ನು ನೆನಪು ಮಾಡಿಕೊಳ್ಳುವ ಸಮಾಜವು ವರ್ತಮಾನದ ಮಲಹಿಳೆಯರನ್ನು ಧಿಕ್ಕರಿಸುವದು ವಿಚಿತ್ರವಾಗಿದೆ. ಜೈನಧರ್ಮದಲ್ಲಿ ಅನೇಕ ಒಳ ಬಿರುಕುಗಳು ಇವೆ. ಅದರಲ್ಲಿಯ ಎಲ್ಲ ಬಿರುಕುಗಳನ್ನು ದಾಟಿ ಧರ್ಮದ ಪ್ರಣಾಳಿಕೆಯು ಸಮಾಜವನ್ನು ಒಡೆಯದೆ ಮುನ್ನಡೆಯುವಂತೆ ನೋಡಿಕೊಳ್ಳುತ್ತ ಸಾಗಿದೆ. ಜೈನಧರ್ಮ ತನ್ನ ತತ್ವಪ್ರಣಾಳಿಕೆಯಂತೆಯೇ ಇಂದೂ ಕೂಡಾ ನಡೆಯುತ್ತ ಬಂದಿದೆ. ಅಂದರೆ ಅದಕ್ಕೆ ಜಾತಿಯ ಭೇದವಿಲ್ಲ. ಇಂದಿಗೂ ಜೈನ ನಿರ್ಗ್ರಂಥ ಮುನಿಯಾಗಲೂ ಸರ್ವ ಧರ್ಮದವರಿಗೆ ಅವಕಾಶವಿದೆ. ಇಂದು ಭಾರತದಲ್ಲಿ ೧೫೬ ನಿರ್ಗ್ರಂಥ ಜೈನ ಮುನಿಗಳಿದ್ದಾರೆ. ಅದರಲ್ಲಿ ಆರು ಜನ ಮುನಿಗಳು ಪೂರ್ವಾಶ್ರಮದಲ್ಲಿ ಜೈನರಲ್ಲ ಎನ್ನುವದು ಬಹಳ ಮುಖ್ಯವಾಗಿದೆ. ಮುನಿಧರ್ಮದಲ್ಲಿ ಜೈನತ್ವವನ್ನು ಪಾಲಿಸಿಕೊಂಡು ಹೋಗುತ್ತಿರುವ ಜೈನಧರ್ಮ ಮಹಿಳೆಯರ ಬಗ್ಗೆ ಸರಿಯಾಗಿ ನಡೆದುಕೊಂಡಿಲ್ಲ ಮತ್ತು ನಡೆದುಕೊಳ್ಳುತ್ತಿಲ್ಲ ಎನ್ನಬೇಕಾಗುತ್ತದೆ.

೬ ಜೈನ ಸಮಾಜ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಮಹಿಳೆ:

ಭಾರತದ ಬಹುತೇಕ ಧರ್ಮಗಳಲ್ಲಿ ಇರುವಂತೆ ಜೈನಸಮಾಜವೂ ಕೂಡಾ ಮಹಿಳೆಯನ್ನು ಸಮಾನದೃಷ್ಟಿಯಿಂದ ನೋಡಿಲ್ಲ. ಅದರ ಧಾರ್ಮಿಕ ಸಂರಚನೆ ಮತ್ತು ನೀತಿಯಲ್ಲಿ ಮಹಿಳೆಗೆ ಬಹಳ ಉನ್ನತವಾದ ಸ್ಥಾನವನ್ನು ನೀಡಲಾಗಿದೆ. ಆದರೆ ಜೈಃನ ಸಮಾಜದ ಸಂವೇದನೆ ಅದನ್ನು ಒಪ್ಪಿಕೊಂಡಂತೆ ಕಾಣುವದಿಲ್ಲ. ಅದರ ಸಾಮಾಜಿಕ ನೆಲೆಯಲ್ಲಿ ದಲಿತರನ್ನು ನೋಡುವಂತೆ ಮಹಿಳೆಯನ್ನು ಕೂಡಾ ನೋಡಲಾಗುತ್ತದೆ.

“ಭಾರತೀಯ ಸಂಸ್ಕೃತಿ ಎಂದರೇನೆ ಮಹಿಳೆಯರ ಮೇಲೆ ಹಲವು ವಿಧದ ನಿಯಂತ್ರಣವನ್ನು ಹೇರುವದೇ ಆಗಿದೆ” (ಸಾರಾ ಅಬೂಬಕರ, ಭಾರತೀಯ ಸಮಾಜ ಸಂಸ್ಕೃತಿ ಮಹಿಳೆ, ಪುಟ ೩೭) ವಿಧವಾ ಸ್ತ್ರೀಯರನ್ನು ನೋಡುವ ರೀತಿ, ಬಂಜೆಯಾದ ಮಹಿಳೆಯನ್ನು ಸಮಾಜದಲ್ಲಿ ನಡೆಸಿಕೊಳ್ಳುವ ರೀತಿ (ಕೆಲವು ಸಲ ಗಂಡಸು ಬಂಜೆಯಾಗಿದ್ದರೂ ಕೂಡಾ ಅದನ್ನು ಪರೀಕ್ಷೆಗೆ ಒಡ್ಡದೆ ತಪ್ಪನ್ನು ಮಹಿಳೆಯ ಮೇಲೆ ಹೇರಲಾಗುತ್ತದೆ.) ಪ್ರಕೃತಿನಿಯಮವನ್ನು ಅಸ್ಪೃಶ್ಯತೆಯಂತೆ ನೋಡುವ ರೀತಿ, ಇವೆಲ್ಲವು ಕೆಲವು ಉದಾಹರಣೆಗಳು ಮಾತ್ರ. ಇದಕ್ಕೆ ಜೈನ ಸಮಾಜವು ಹೊರತಾಗಿಲ್ಲ. ಜೈನ ಧರ್ಮ ಉನ್ನತ ರೀತಿಯಿಂದ ಮಹಿಳೆಗೆ ಎಲ್ಲ ಬಗೆಯ ಹಕ್ಕುಗಳನ್ನು ತನ್ನ ಧರ್ಮ ಪ್ರಣಾಳಿಕೆಯಲ್ಲಿ ಕೊಟ್ಟಿತೇನೋ ನಿಜ! ಆದರೆ ಸಮಾಜ ಅದನ್ನು ಒಪ್ಪಿಕೊಂಡಂತೆ ಕಾಣುವುದಿಲ್ಲ. ಏಕೆಂದರೆ ಜೈನ ಸಂವೇದನೆಯ ಒಳ ಭಾಗದಲ್ಲಿ ವೈದಿಕ ಸಂವೇದನೆಯ ಕೆಲವು ಸಿದ್ಧ ಮಾದರಿಯ ನಂಬಿಕೆಗಳು ನುಸುಳಿಕೊಂಡಿವೆ. ಅಥವಾ ವೈದಿಕತ್ವದಿಂದ ಬಿಡಿಸಿಕೊಂಡು ಬಂದು ಬಹು ದೂರ ಸಾಗಿದ್ದರೂ ಕೂಡಾ ಜೈನಸಂವೇದನೆಯಲ್ಲಿ ಆಳವಾಗಿ ವೈದಿಕತ್ವದ ನೆನಪುಗಳು ಇವೆ. ಅಂದರೆ ವೈದಿಕತನದಿಂದ ಜೈನತ್ವ ಬಿಡಿಸಿಕೊಂಡರೂ ‘ವೈದಿಕ’ ಮಾತ್ರ ‘ಜೈನ’ವನ್ನು ಬಿಡಲಿಲ್ಲ. ಮುಟ್ಟು, ಕೂಸಿನ ಆರೈಕೆ, ಹೆರಿಗೆ, ಮನೆಗೆಲಸ, ಇತ್ಯಾದಿ ಜೈವಿಕ ಸಂಬಂಧಿ ಕೆಲಸವನ್ನು ಮಾಡುವ ಸ್ತ್ರೀಯು ಪುರುಷನಂತೆ ಸ್ವಚ್ಛವಾಗಿ ಇರಲಾರಳು. ಇದೇ ಕಾರಣವನ್ನು ಮುಂದೆ ಮಾಡಿ ವೈದಿಕ ಧರ್ಮವು ಅವಳಿಗೆ ಹೊಲೆತನದ ಪಟ್ಟ ಕಟ್ಟಿತು. ಅದನ್ನೇ ಜೈನಧರ್ಮವೂ ಕೂಡಾ ಅನುಸರಿಸುತ್ತಿದೆ. ಹೆರಿಗೆಯ ಮನೆಯನ್ನು ಹತ್ತು ದಿನಗಳವರೆಗೆ ಹೊಲೆ ಮನೆಯೆಂದು ಇಂದಿಗೂ ಕರೆಯಲಾಗುತ್ತದೆ. ಮುಟ್ಟಾಗಿ ನಾಲ್ಕು ದಿನಗಳವರೆಗೆ ಅವಳಿಗೆ ಜಿನಮಂದಿರದಲ್ಲಿ ಮತ್ತು ಮನೆಯ ಪಡಸಾಲೆಯಲ್ಲಿ ಪ್ರವೇಶವಿಲ್ಲ. ಅವಳನ್ನು ದನ ಕಟ್ಟುವ ಜಾಗದಲ್ಲಿ ಕೂಡ್ರಿಸಿ, ನಾಲ್ಕು ದಿನ ಎತ್ತಿ ಊಟಕ್ಕೆ ಹಾಕಲಾಗುತ್ತದೆ. ಆ ಸಮಯದಲ್ಲಿ ಅವಳಿಂದ ಹೆಂಡಿ, ಕೆಸರು ಇತ್ಯಾದಿಗಳನ್ನು ಬಳಿದು ಸ್ವಚ್ಛಮಾಡುವ ಹೇಯ ಕೆಲಸವನ್ನು ಹಚ್ಚಿ ಅವಳ ವ್ಯಕ್ತಿತ್ವವನ್ನು ಅವಮಾನಿಸಲಾಗುತ್ತದೆ.

ಜೈನ ಮಹಿಳೆಗೆ ಕಾಣಿಸುವ ಸಮಾಜ ಯಾವುದು? ಜಿನ ಮಂದಿರಗಳು, ನೋಂಪಿ, ಧಾರ್ಮಿಕ ಪೂಜೆ ಪುನಸ್ಕಾರಗಳು, ಮುನಿಗಳ ಆಗಮನ, ಆಹಾರ ದಾನ, ಮಂತ್ರ ಹಾಗೂ ಏಕಾಂತ! ಸಾಮಾಜಿಕ ಆಚರಣೆಗಳಲ್ಲಿ, ಊರಿನ ಸಾಂಸ್ಕೃತಿಕ ಬದುಕಿನಲ್ಲಿ ಅವಳಿಗೆ ಸ್ಥಾನವಿಲ್ಲ. ಇದ್ದರೂ ಕೂಡಾ ಅವಳಿಗೆ ಗಂಡನೊಂದಿಗೆ ಸಹಧರ್ಮಿಣಿ, ಸಹ ಭಾಗಿನಿಯಾಗಿ ಮಾತ್ರ ಅಲ್ಲಿ ಪ್ರವೇಶವಿದೆ. ಕುಸ್ತಿ ಪಂದ್ಯಾಟಗಳು, ಓಕಳಿ, ಊರ ಹಬ್ಬ ಹರಿದಿನಗಳಲ್ಲಿ ನಡೆಯುವ ಆಟ, ಸೋಗು ಇತ್ಯಾದಿ ನೋಡಲು ಜೈನ ಮಹಿಳೆ ಹೋಗುವುದಿಲ್ಲ. ಅವಳ ಸಾಮಾಜಿಕ ರಚನೆ ಅದಕ್ಕೆ ಅವಕಾಶ ಕೊಟ್ಟಿಲ್ಲ. ಆದರೆ ಅದೇ ಊರಿನ ದಲಿತ ಮಹಿಳೆಯರು ಹೋಗುತ್ತಾರೆ. ಆ ಹಕ್ಕು ಹೆಚ್ಚು ನಾಗರಿಕ ಎನಿಸಿಕೊಂಡಿರುವ ಜೈನ ಮಹಿಳೆಗೆ ಇಲ್ಲ. ಅದನ್ನು ಆ ಮಹಿಳೆ ಮರುದಿನ ಅದೇ ದಲಿತ ಮಹಿಳೆಯಿಂದ ಹಿತ್ತಲದಲ್ಲಿ ಕರೆದು ಕೇಳಿ ಆನಂದಿಸಬೇಕು ಅಷ್ಟೆ ಅವಳ ಸೌಭಾಗ್ಯವಾಗಿದೆ.

ಜೈನರಲ್ಲಿ ಯಾವ ಮಹಿಳೆಯೂ ಈಜು ಕಲಿತಿರುವುದಿಲ್ಲ. ನದಿದಂಡೆಯಲ್ಲಿ ಬದುಕು ಮಾಡುವ ಎಲ್ಲರಿಗೂ ಜೀವ ಉಳಿಸಿಕೊಳ್ಳುವಷ್ಟಾದರೂ ಈಜು ಬರಬೇಕು. ಆದರೆ ತಮ್ಮ ಗಂಡು ಮಕ್ಕಳಿಗೆ ಈಜು ಕಲಿಸಲು ಮುಂದಾಗುವ ಜೈನ ಸಮಾಜ ಹೆಣ್ಣು ಮಕ್ಕಳಿಗೆ ಕಲಿಸುವುದಿಲ್ಲ. ಹಾಗೆ ಏನಾದರೂ ಆದರೆ ಅಲ್ಲಿ ಗಂಡಸರು ಅವಳ ಜೀವ ಉಳಿಸಲು ಇರುತ್ತಾರೆ. ಅಥವಾ ಇರಬೇಕು ಎಂದು ಜೈನಸಮಾಜ ನಿರೀಕ್ಷಿಸುತ್ತದೆ. ಇನ್ನು ಕುದುರೆ ಹತ್ತುವದು, ಗಿಡ ಹತ್ತುವದು ಇದೆಲ್ಲ ಹೆಣ್ಣು ಮಕ್ಕಳು ಮಾಡುವ ಹಾಗಿಲ್ಲ. ಜೈನರಾಣಿಯರನ್ನು ಆದರ್ಶವನ್ನಾಗಿ ಮಾಡಿಕೊಂಡಿರುವ ಜೈನ ಸಮಾಜ ರಾಣಿಯರು ಕುದುರೆ ಹತ್ತಿದ್ದನ್ನು ಆನಂದಿಸುತ್ತದೆ. ಆದರೆ ಪಂಚಮ ಕಾಲದಲ್ಲಿಯ ತಮ್ಮ ಹೆಣ್ಣು ಮಕ್ಕಳು ಹಾಗೆ ಮಾಡಬಾರದು ಎಂದು ಯೋಚಿಸುತ್ತದೆ. ಇದಕ್ಕೇನು ಹೇಳುವದು? ಒಂದು ಅರ್ಥದಲ್ಲಿ ಏಕಮುಖವಾದ ಅವಳ ಬದುಕು ಅನಿವಾರ್ಯ ಮತ್ತು ಅಸಹಾಯಕ ಸ್ಥಿತಿಯಲ್ಲಿದೆ.

ಇದಕ್ಕಾಗಿಯೇ ಬಹುಶಃ ಜೈನಮಹಿಳೆ ಬಾಹ್ಯವಾಗಿ ಜಿನ ಮಂದಿರ, ಜಿನ ಪೂಜೆಯಲ್ಲಿ ನಿರತಳಾಗಿ ಜಿನ ಮಂದಿರ, ಜಿನ ಪೂಜೆಯಲ್ಲಿ ನಿರತಳಾಗಿ ಜೈನಸ್ವಾಮಿಗಳ ದರ್ಶನಾಕಾಂಕ್ಷಿಯಾಗಿ ಕಾಣುತ್ತಿದ್ದರೂ ಕೂಡಾ ಅಂತರಾಳದಲ್ಲಿ ಮಹಾ ಪರಿಗ್ರಹಿಯಾಗಿ ರೂಪ ತಾಳಿರುತ್ತಾಳೆ. ಜೈನಪುರುಷರೂ ಸರಳವಾಗಿಯಾದರೂ ಒಂದಿಷ್ಟು ಅಪರಿಗ್ರಹವನ್ನು ಪಾಲಿಸಿದರೆ, ಮಹಿಳೆ ಮಾತ್ರ ಅದಕ್ಕೆ ವಿರುದ್ಧವಾಗಿ ಮಹಾ ಪರಿಗ್ರಹಿಯಾಗಿ ಸಂಗ್ರಹಬುದ್ಧಿಯನ್ನು ಹೊಂದಿರುತ್ತಾಳೆ.

ಜೈನ ಮಹಿಳೆ ಬಂಗಾರ ಡಾಗೀಣುಗಳ ಪ್ರಿಯೆಯಾಗಿ, ರೇಶಿಮೆ ಸೀರೆ ಮತ್ತು ಅಂತಸ್ತಿನ ಅಹಮಿಕೆಯನ್ನು ಹೊಂದಿದವಳಾಗಿ, ಸೊಸೆಯಂದಿರನ್ನು ಕಾಡಿಸುವ ಖಳನಾಯಕಿಯರಾಗಿ ಇರಲು ಬಹುಶಃ ಅವರ ಸಾಮಾಜಿಕ ಸ್ಥಿತಿಯೇ ಕಾರಣವಾಗಿದೆ ಎನ್ನಬಹುದಾಗಿದೆ. ಜೈನರ ಪರ್ವಗಳಾದ ಅನಂತ ನೋಂಪಿ, ದಶಲಕ್ಷಣ ನೋಂಪಿ, ಶೋಳಾಕಾರ ನೋಂಪಿ ವ್ರತಗಳನ್ನು ಮಾಡುವವರಲ್ಲಿ ಶೇಕಡಾ ೯೦ ರಷ್ಟು ಜೈನ ಮಹಿಳೆಯೇ ಇರುತ್ತಾಳೆ. ನಿರ್ಗ್ರಂಥ ಮುನಿಗಳ ಪುರಾಣ ಕೇಳುವ ಶ್ರೋತೃಗಳಲ್ಲಿ ಹೆಚ್ಚು ಮಂದಿ ಮಹಿಳೆಯರೇ ಇರುತ್ತಾರೆ. ಗಂಡಸರಿಗೆ ಆರ್ಥಿಕ ಹೊಣೆಗಾರಿಕೆ ಇದ್ದರೆ, ಮಹಿಳೆಯರಿಗೆ ಅದು ಇಲ್ಲವಾದ್ದರಿಂದ ಅವರೆಲ್ಲಾ ಇಂಥಲ್ಲಿ ತೊಡಗಿಸಿಕೊಂಡು ತಮ್ಮ ಏಕಾಂತವನ್ನು ಮರೆಯುತ್ತಾರೆ. ಊರಲ್ಲಿ ಜೈನ ಮುನಿ ಸಂಘ ಬಂದರೆ ಅವರು ಇದ್ದಷ್ಟು ದಿನ ಶ್ರದ್ಧೆಯಿಂದ ಸೇವೆ ಮಾಡುವವರಲ್ಲಿ ಜೈನ ಮಹಿಳೆಯರೇ ಅಧಿಕವಾಗಿರುತ್ತಾರೆ. ಮುನಿಗಳು ಆ ಊರು ಬಿಟ್ಟು ಮತ್ತೊಂದು ಊರಿಗೆ ತೆರಳುವಾಗ ಓಣಿ ಓಣಿಯಲ್ಲಿ ಪಾದಪೂಜೆ ಮಾಡಿ ಆರತಿ ಬೆಳಗುವ ಕೆಲಸ ಮಹಿಳೆಯರದೇ ಆಗಿರುತ್ತದೆ. ಮುನಿಗಳು ಹೊರಟು ಹೋಗುವಾಗ ಅವರನ್ನು ಊರ ಹೊರಗಿನ ತನಕ ಕಳಿಸಲು ಲಬಂದ ಬಹುತೇಕ ಮಹಿಳೆಯರು ತಮ್ಮ ಸ್ವಂತ ಮಕ್ಕಳು ಹೋಗುತ್ತಿರುವಾಗ ಅಳುವಂತೆ ಬಿಕ್ಕಿ ಬಿಕ್ಕಿ ಅಳುತ್ತಿರುತ್ತಾರೆ. ಸ್ವಾಮಿಗಳು ಊರು ಬಿಟ್ಟು ಹೋಗುವಾಗ ಅಳುವಂತಾಗಲು ಮಲಹಿಳೆಯರ ಸಂವೇದನೆಯ ಯಾವ ಮೂಲ ಕಾರಣವಾಗುತ್ತದೆ? ಬಹುಶಃ ಸ್ವಾಮಿಗಳು ಇಲ್ಲದ ಊರಲ್ಲಿ (ಜೈನ ಸ್ವಾಮಿಗಳು ವರ್ಷಕ್ಕೊಮ್ಮೆ ಇಲ್ಲವೆ ಎರಡು ವರ್ಷಕ್ಕೊಮ್ಮೆ ಒಂದೊಂದು ಊರಿಗೆ ಹೋಗುತ್ತಾರೆ) ಮತ್ತೊಂದು ಸಂಘ ಬರುವವರೆಗೂ ಅದೇ ಉಸಿರುಗಟ್ಟಿಸುವ ವಾತಾವರಣದಲ್ಲಿ ಇರಬೇಕಾಗುತ್ತದೆ ಎನ್ನುವ ಆತಂಕವೇ ಅವರ ಅಳುವಿಗೆ ಮೂಲ ಕಾರಣವಾಗುತ್ತದೆ. ಹೀಗೆ ಅಳುವದರಲ್ಲಿ ಮಧ್ಯ ವಯಸ್ಕ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಇರುತ್ತಾರೆ ಎನ್ನುವ ಸತ್ಯದ ಹಿಂದೆ ಇದು ಸ್ಪಷ್ಟವಾಗುತ್ತದೆ. ಕೇಶಲೋಚನ ಕಾರ್ಯಕ್ರಮ (ಜೈನ ಸ್ವಾಮಿಗಳು ತಮ್ಮ ತಲೆ ಕೂದಲುಗಳನ್ನು ಕೈಯಿಂದ ಕಿತ್ತುಕೊಳ್ಳುವ ಕಾರ್ಯಕ್ರಮ) ಮತ್ತು ಪಂಚಕಲ್ಯಾಣ ಕಾರ್ಯಕ್ರಮಗಳನ್ನು ಜೈನ ಸಮಾಜ ಅತ್ಯಂತ ಅದ್ದೂರಿಯಾಗಿ ನಡೆಸಿಕೊಂಡು ಬರುತ್ತದೆ. ಕೇಶಲೋಚನ ಕಾರ್ಯಕ್ರಮದಿಂದ ದೇಹದ ಮೇಲೆ ಉಂಟಾಗುವ ಕ್ಲೇಶಗಳು ಆತ್ಮಕ್ಕೆ ಸಂಬಂಧ ಪಡುವುದಿಲ್ಲ ಎನ್ನುವ ಸಂದೇಶವನ್ನು ಪ್ರಚುರಪಡಿಸಲಾಗುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಮಹಿಳೆಯರೇ ಸೇರುತ್ತಾರೆ. ಅಲ್ಲಿ ನಡೆಯುವ ಭಾಷಣ ಪ್ರವಚನ ಇತ್ಯಾದಿಗಳ ಕಡೆ ಅವರ ಲಕ್ಷ್ಯ ಇರುವುದಿಲ್ಲ. ಬೇರೆ ಬೇರೆ ಊರುಗಳಿಂದ ಬಂದು ಸೇರಿದ ಆ ಮಹಿಳಾ ಗುಂಪು ತಮ್ಮ ಸುಖ-ದುಃಖವನ್ನು ಹಂಚಿಕೊಳ್ಳುವುದರಲ್ಲೇ ಆನಂದವನ್ನು ಪಡುತ್ತಿರುತ್ತದೆ.

ಪಂಚ ಕಲ್ಯಾಣ (ಹೊಸ ಮೂರ್ತಿ ಸ್ಥಾಪನಾ ಕಾರ್ಯಕ್ರಮ) ಕಾರ್ಯಕ್ರಮದಲ್ಲಿ ಇಡೀ ಪೂಜೆಯ ಮುಖ್ಯಸ್ಥನನ್ನು ಆಯ್ಕೆ ಮಾಡಲು ಯಜಮಾನ ಪದವಿಯ ಸವಾಲು ನಡೆಯುತ್ತದೆ. ಸಮಾಜದಲ್ಲಿ ಹೆಚ್ಚು ಹಣವನ್ನು ಕೊಟ್ಟವನು ಆ ಸಮಾರಂಭದ ಯಜಮಾನನಾಗುತ್ತಾನೆ. ಮಹಿಳೆ ಹೀಗೆ ಯಜಮಾನ ಆಗಿರುವ ತನ್ನ ಗಂಡನೊಂದಿಗೆ ಆನೆಯ ಮೇಲೆ ಕೂಡ್ರುತ್ತಾಳೆ. ಆದರೂ ಅಲ್ಲಿ ಸವಾಲು ನಡೆಯುವದು ಯಜಮಾನಪದವಿಗೆ ವಿನಾ ಯಜಮಾನತಿ ಪದವಿಗೆ ಅಲ್ಲ. ಜೈನಸಮಾಜದಲ್ಲಿ ಈ ಯಜಮಾನಸಂಸ್ಕೃತಿ ಬಹಳ ಆಳವಾಗಿದೆ. ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಶ್ರವಣಬೆಳಗೊಳದ ಬಾಹುಬಲಿ ಸ್ವಾಮಿ ಮಸ್ತಕಾಭಿಷೇಕ ಕಾರ್ಯಕ್ರಮದಲ್ಲೂ ಕೂಡಾ ಹೆಚ್ಚು ಹಣ ಕೊಟ್ಟವನೇ ಯಜಮಾನನಾಗಿ ಎಲ್ಲಕ್ಕಿಂತ ಮೊದಲು ಬಾಹುಬಲಿ ಸ್ವಾಮಿಗೆ ಬಂಗಾರದ ಕಳಶದಿಂದ ಜಲಾಭಿಷೇಕವನ್ನು ಮಾಡುತ್ತಾನೆ.

ಇಲ್ಲಿ ಮಹಿಳೆ ಅದು ಎಷ್ಟೇ ಶ್ರೀಮಂತಳಿದ್ದರೂ ಕೂಡಾ ಯಜಮಾನತಿಯಾಗಿ ಸವಾಲನ್ನು ಹಿಡಿಯುವ ಹಕ್ಕನ್ನು ಪಡೆದಿಲ್ಲ. ಅಲ್ಲದೆ ವಿಧವೆ ಮತ್ತು ಅವಿವಾಹಿತೆಗೆ ಅಲ್ಲಿ ಸ್ಥಾನವೇ ಇಲ್ಲ. ಸಮಾಜ ಈ ಬಗೆಯ ಕಟ್ಟು ಪಾಡುಗಳನ್ನು ಬಹಳ ಹಿಂದಿನಿಂದಲೂ ಒಪ್ಪಿಕೊಂಡು ಬಂದಿದೆ.

ಮಹಿಳೆಯಾದವಳಿಗೆ ವೈರಾಗ್ಯ ಬಂದು ಸನ್ಯಾಸ ಸ್ವೀಕರಿಸಲು ಮನಸ್ಸಾದರೆ ಅವಳು ಹಾಗೆ ಮಾಡಲು ಗಂಡನ ಮತ್ತು ಮಕ್ಕಳ ಒಪ್ಪಿಗೆ ಬೇಕಾಗುತ್ತದೆ. ಪುರುಷನಿಗೂ ಈ ನಿಯಮ ಇದೆ. ಆದರೂ ಕೂಡಾ ಅವನ ವೈರಾಗ್ಯವನ್ನು ಬೇಗನೇ ಎಲ್ಲರೂ ಒಪ್ಪಿಕೊಂಡು ಅನುಮತಿಯನ್ನು ನೀಡುತ್ತಾರೆ. ಆದರೆ ಮಹಿಳೆಗೆ ಈ ಅನುಮತಿ ಸಿಗುವದು ಬಹಳ ಕಠಿಣವಾಗಿದೆ. ಸಲ್ಲೇಖನ (ಸಾಯುವವರೆಗೂ ಅನ್ನ-ನೀರಿಲ್ಲದೆ ಇದ್ದು, ಜಿನದೇವರನ್ನು ಜಪಿಸುತ್ತ ಪ್ರಾಣ ಬಿಡುವದು) ದಂತಹ ನಿವೃತ್ತಿಮಾರ್ಗವನ್ನು ಅನುಸರಿಸಬೇಕಾದರೂ ಕೂಡಾ ಮಹಿಳೆಗೆ ಮನೆಯವರ ಅಪ್ಪಣೆ ಬೇಕು. ಒಂದು ಅರ್ಥದಲ್ಲಿ ಜೈನ ಧರ್ಮದ ಉಳಿಯುವಿಕೆಯಲ್ಲಿ ಮಹಿಳೆಯರು ಮುಖ್ಯ ಪಾತ್ರವನ್ನು ವಹಿಸಿದ್ದಾರೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಆದರೆ ಅದೇ ಜೈನ ಸಮಾಜ ಮತ್ತು ಜೈನಧರ್ಮವು ಅವಳ ಮುಕ್ತಿಗೆ ನೇರ ರಹದಾರಿಯನ್ನು ತೋರಿಸಿಲ್ಲ. ಇನ್ನ ಕೌಟುಂಬಿಕ ಒತ್ತಡಗಳು, ಸಾಮಾಜಿಕ ಜವಾಬ್ದಾರಿಗಳು ಹಾಗೂ ಧಾರ್ಮಿಕ ಅವಶ್ಯಕತೆಗಳು ಜೈನಮಹಿಳೆಯನ್ನು ಅಸಹಾಯಕಳನ್ನಾಗಿಸಿವೆ.

ಜೈನ ಇತಿಹಾಸದಲ್ಲಿಲಯೂ ಕೂಡಾ ಪುರುಷ ರಾಜರಿಗಿಂತ ಮಹಿಳಾ ರಾಣಿಯರೇ ಚಾರಿತ್ರಿಕ ವ್ಯಕ್ತಿಗಳಾಗಿ ಗಮನ ಸೆಳೆಯುತ್ತಾರೆ. ‘ಜಿನಧರ್ಮ ಪಾದಾಂಬುಜೆ’ ‘ಜಿನ ಪಾದಾಂಬುಜ ಭೃಂಗಿ’ ಇತ್ಯಾದಿ ಅಭಿಧಾನಗಳಿಗೆ ಜೈನ ಮಹಿಳೆಯರೇ ಪಾತ್ರರಾಗಿದ್ದಾರೆ. ಜೈನ ಪುರಾಣ ಮತ್ತು ಐತಿಹಾಸಿಕ ಕಥೆಗಳಲ್ಲಿ ಮಹಾ ಜಿನಭಕ್ತರಿಗಿಂತ ‘ಮಹಾ ಜಿನಭಕ್ತೆ’ಯರೇ ಹೆಚ್ಚಾಗಿದ್ದಾರೆ. ಅದನ್ನು ಸಮಾಜ ಕೊಂಡಾಡುತ್ತದೆ. ಸ್ವತಃ ತನ್ನ ಕಾಲದಲ್ಲೆ ಮಹಿಳೆಯನ್ನು ಸಮಾನವಾಗಿ ಕಾಣಲಾರದ ಜೈನಸಮಾಜವು ಅಂತಹ ಮಹಿಳೆ ಕಥಾ ನಾಯಕಿಯಾಗಿ ಬಂದಾಗ ತುಂಬ ಉತ್ಸಾಹದಿಂದ ಅದನ್ನು ಕೇಳಿ ಆನಂದಿಸುತ್ತದೆ.

ಮುನಿ ಸಂಘಗಳಲ್ಲಿಯೂ ಕೂಡಾ ಅರ್ಜಿಕೆ (ಅಮ್ಮಾ- ಮಹಿಳಾ ಸನ್ಯಾಸಿ) ಸಂಘದ ಮುಖ್ಯಸ್ಥಳಾಗುವಂತಿಲ್ಲ. ನಿರ್ಗ್ರಂಥ ಮುನಿಗಳಷ್ಟೇ ಸ್ಥಾನದಲ್ಲಿ ಎತ್ತರಕ್ಕೆ ಏರಿದ್ದರೂ ಕೂಡಾ ಸಂಘಸ್ಥಾಪನೆಯ ಹಕ್ಕು ಏನಿದ್ದರೂ ನಿರ್ಗ್ರಂಥ ಮುನಿಯ ಹಕ್ಕು. ಕೊನೆಯವರೆಗೂ ಅಂತಹ ಒಂದು ಮುನಿಸಂಘದಲ್ಲಿ ಸಾಮಾನ್ಯ ಮಹಿಳಾ ಸನ್ಯಾಸಿನಿಯಾಗಿ ಇರಬೇಕಾಗುತ್ತದೆ. ಅಲ್ಲದೇ ಏಕಾಂಗಿಯಾಗಿ ಮಹಿಳಾ ಸನ್ಯಾಸಿ ವಿಹಾರ ಮಾಡುವ ಹಾಗಿಲ್ಲ. ಅದೇನಿದ್ದರೂ ಸಂಘ ಮತ್ತು ಗುಂಪಿನಲ್ಲಿಯೇ ಅವಳು ಕಾಲ ಕಳೆಯಬೇಕಾಗುತ್ತದೆ. ಜೈನಧರ್ಮದಲ್ಲಿ ಈ ವರೆಗೂ ಬಂದ ಶಾಸ್ತ್ರ ಗ್ರಂಥಗಳು, ಪ್ರವಚನಗಳು,  ಧರ್ಮೋಪದೇಶಗಳು ಎಲ್ಲವೂ ಮುನಿಗಳಿಂದಲೇ ಬರೆಯಲ್ಪಟ್ಟಿವೆ. ಈ ವರೆಗೂ ಯಾವದೇ ಮಹಿಳಾ ಸನ್ಯಾಸಿನಿ ಧರ್ಮಗ್ರಂಥವನ್ನು ಬರೆದಿಲ್ಲ. ಮಹಿಳಾ ‘ಸನ್ಯಾಸಿನಿಯರು ಪುಸ್ತಕಗಳನ್ನು ಬರೆದಿದ್ದಾರೆ. ಆದರೆ ಅವೆಲ್ಲ ಮಹಿಳೆಯರು ಹೇಗೆ ಇರಬೇಕು ಎನ್ನುವ ನೀತಿ ಪಾಠಗಳೇ ಆಗಿವೆ.

ಶ್ವೇತಾಂಬರ ಜೈನರ ಪ್ರಕಾರ ವರ್ತಮಾನ ಕಾಲದಲ್ಲಿ ಆಗಿ ಹೋದ ೨೪ ತೀರ್ಥಂಕರರಲ್ಲಿ ಮಲ್ಲಿನಾಥ ತೀರ್ಥಂಕರ ಮಹಿಳೆಯಾಗಿದ್ದಾಳೆ. ಅವರ ಶಾಸ್ತ್ರಗಳು ಮಹಿಳೆಯರೂ ಕೂಡಾ ತೀರ್ಥಂಕರರಾಗಬಹುದು ಎನ್ನುವುದನ್ನು ಸೂಚಿಸುತ್ತವೆ. ಆದರೆ ದಿಗಂಬರರ ಪ್ರಕಾರ ಮಲ್ಲಿನಾಥನೂ ಒಬ್ಬ ಪುರುಷ ತೀರ್ಥಂಕರನೇ ವಿನಾ ಮಹಿಳೆಯಲ್ಲ. ಇವೆಲ್ಲ ವಾದ ವಿವಾದಗಳು ಮಹಿಳೆಗೆ ಜೈನಧರ್ಮ ಅತಿ ಕಡಿಮೆ ಸ್ಥಾನವನ್ನು ಕೊಟ್ಟಿದೆ ಎನ್ನುವುದನ್ನು ಸೂಚಿಸುತ್ತವೆ.

ಜೈನ ಮಹಿಳೆ ಮತ್ತು ಸೃಜನಾತ್ಮಕತೆ

೧ ಜನಪದ ಸಾಹಿತ್ಯ:

ಜೈನ ಮಹಿಳೆ ಎಲ್ಲ ಭಾರತೀಯ ಗ್ರಾಮೀಣ ಮಹಿಳೆಯರಂತೆಯೇ ಜನಪದ ಹಾಡುಗಳನ್ನು ಹಾಡಿದ್ದಾಳೆ. ಅವಳು ನಡೆಸುವ ನೊಂಪಿಗಳು, ವ್ರತಾಚರಣೆಗಳು, ಮುನಿಗಳ ಆಗಮನ ಇತ್ಯಾದಿಗಳನ್ನು ತನ್ನ ಹಾಡುಗಳಲ್ಲಿ ಅಭಿವ್ಯಕ್ತಿಗೊಳಿಸಿದ್ದಾಳೆ. ಅಲ್ಲದೆ ಅವಳು ನೋಡಿದ ಸಿದ್ಧಕ್ಷೇತ್ರಗಳು (ಶ್ರವಣಬೆಳಗೊಳ, ಊರ್ಜಯಂತಗಿರಿ, ಸಮ್ಮೇದಗಿರಿ ಇತ್ಯಾದಿ) ವರ್ಣನೆ, ತನ್ನ ಆರಾಧ್ಯ ದೇವರಾದ ಹುಂಚ(ಹೊಂಬುಜ)ದ ಪದ್ಮಾವತಿ ಇವರೆಲ್ಲರ ಮೇಲೆ ಹಾಡು ಕಟ್ಟಿ ಹಾಡಿದ್ದಾಳೆ. ಇದಲ್ಲದೆ ಜೈನ ಮಹಿಳೆಗೆ ಅತ್ಯಂತ ಆಘಾತಕಾರಿ ಸಂಗತಿಯಾದ ಗಂಡು ಮಗನ ಮುನಿ ದೀಕ್ಷೆಯ ಬಗ್ಗೆ ಅತ್ಯಂತ ವ್ಯಾಕುಲದಿಂದ ಹಾಡು ಕಟ್ಟಿ ಹಾಡಿದ್ದಾಳೆ. ಈ ಅಧ್ಯಾಯದ ಮೊದಲ ಭಾಗದಲ್ಲಿ ಜಾನಪದ ಹಾಡು, ಕಥೆಗಳನ್ನು ಉಲ್ಲೇಖಿಸಿದ್ದೇನೆ. ಎರಡನೆಯ ಭಾಗದಲ್ಲಿ ವರ್ತಮಾನ ಕಾಲದಲ್ಲಿ ನಮ್ಮ ಮಹಿಳೆಯರು ಕನ್ನಡ ಸಾಹಿತ್ಯದಲ್ಲಿ ಮಾಡಿದ ಕೃಷಿಯ ಬಗ್ಗೆ ಅವಲೋಕಿಸಿದ್ದೇನೆ.

ಹಾಲ ಸೋಸ ಮಗಳೆ ನೀರ ಸೋಸ
ಜಿನರ ಧರ್ಮದಲಿ ನಡಿ ಮಗಳ | ಅಂದರ
ಸ್ವರ್ಗ ಬಂದೀತ ನಿನ್ನ ಅಂಗಳಕ |

ಅರಹಂತಗೋಯ್ಯ ಅರಳು ಮಲ್ಲಿಗೆ ಹೂವ
ಗುರುಗಳಿಗೊಯ್ಯ ಹೊಸ ಪಿಂಚ| ಹೊಂಬುಜದ
ತಾಯಮ್ಮ ಗೊಯ್ಯ ನೆನೆಗಡಲೆ|

ಜೈನಧರ್ಮದಲ್ಲಿ ನೀರು ಮತ್ತು ಹಾಲನ್ನು ಬಟ್ಟೆಯಲ್ಲಿ ಸೋಸಿ ಕುಡಿಯುವುದು ಧಾರ್ಮಿಕ ವಿಧಿ-ವಿಧಾನದಲ್ಲಿ ಒಂದು. ಅದನ್ನೇ ತನ್ನ ಮಗಳಿಗೆ ಜಿನಧರ್ಮದಲ್ಲಿ ನಡೆಯುವುದಕ್ಕಾಗಿ ಹಾಲು ನೀರನ್ನು ಸೋಸು ಎಂದು ಸಂಸ್ಕಾರದ ದೀಕ್ಷೆಯನ್ನು ಕೊಡುತ್ತಾಳೆ. ಜಿನದೇವರಿಗೆ ಅರಳಿದ ಹೂವು, ನಿರ್ಗ್ರಂಥ ಮುನಿಗಳಿಗೆ ನವಿಲುಗರಿಯ ಪಿಂಚ ಮತ್ತು ಹೊಂಬುಜ ಪದ್ಮಾವತಿಗೆ ನೆನೆಗಡಲೆಯನ್ನು ಕೊಂಡೊಯ್ಯುವ ನೀತಿಯನ್ನು ಇಲ್ಲಿ ಹೇಳಿದ್ದಾಳೆ.

ಜೈನಮಹಿಳೆ ಮಹಾ ಧಾರ್ಮಿಕವಾಗಿ ಬದುಕಲು ಯತ್ನಿಸುತ್ತಾಳೆ. ತನ್ನ ಊರಿನ ಜಿನಮಂದಿರಕ್ಕೆ ಬಂದ ಮುನಿಗಳನ್ನು ಬಹಳ ಭಕ್ತಿಯಿಂದ ಆದರಿಸಿ ಅವರ ಸೇವೆ ಮಾಡುತ್ತಾಳೆ. ಆದರೆ ಅಂತಹ ಸ್ವಾಮಿಯಾಗಿ ತನ್ನ ಮಗನೇ ಬರುವದು ಅವಳಿಗೆ ಬೇಡ. ಇದೊಂದು ಬಹಳ ನಾಜೂಕಿನ ಪ್ರಸಂಗವನ್ನು ಜೈನ ಮಹಿಳೆ ಎದುರುಗೊಳ್ಳುತ್ತಾಳೆ. ಏಕೆಂದರೆ ಜೈನಮುನಿಯ ಕಾಯಕ್ಲೇಶಗಳನ್ನು ಕಣ್ಣಾರೆ ನೋಡುವ ಜೈನಮಹಿಳೆ ಒಂಬತ್ತು ತಿಂಗಳು ತಾನು ಹೊತ್ತು ಹೆತ್ತು ಸಾಕಿದ ತನ್ನ ಮಗನೇ ಇಂತಹ ಕಠಿಣವಾದ ದೇಹದಂಡನೆಯನ್ನು ಮಾಡಿಕೊಳ್ಳುತ್ತ ಸಾಗುವುದನ್ನು ಅವಳ ತಾಯಿಕರುಳು ಸಮ್ಮತಿಸುವುದಿಲ್ಲ. ಆದ್ದರಿಂದ ತನ್ನ ಮಗನಿಗೆ ಮುನಿಯಾದ ಮೇಲೆ ನಡೆಸಿಕೊಂಡು ಹೋಗಬೇಕಾಗಿರುವ ಸಂಗತಿಗಳನ್ನು ನೆನಪ೦ಇಸಿ ಅಂತಹ ಮುನಿದೀಕ್ಷೆ ಬೇಡ ಮಗನೇ ಎಂದು ತನ್ನ ಮಗನನ್ನು ಸೆರೆಗೊಡ್ಡಿ ಬೇಡಿಕೊಳ್ಳುವುದು ಮನ ಮಿಡಿಯುವಂತಿದೆ. ಇಲ್ಲಿ ಧರ್ಮದ ಹಂಗನ್ನೂ ಮೀರಿ ತಾಯಿತನ ಮುಂದಾಗುವದು ಮಹಿಳಾ ಸಂವೇದನೆ ಯಾವ ಕಡೆಗೆ ವಾಲುತ್ತದೆ ಎನ್ನುವುದನ್ನು ಕಾಣಬಹುದಾಗಿದೆ.

ನೆತ್ತಿ ಕೂದಲು ಬೇರಾಗಡಿ ಕೀಳುವಾಗ
ಹೆತ್ತ ಹೊಟ್ಟೀಲಿ ಉರುಲಾವೋ| ಕಂದಯ್ಯ
ನೀ ಹೋಗ ಬ್ಯಾಡೋ ಜಿನದೀಕ್ಷೆ |

(ಜೈನ ಮುನಿಗಳು ತಮ್ಮ ತಲೆಯ ಕೂದಲುಗಳನ್ನು ಕೈಯಿಂದ ಕಿತ್ತು ಕೊಳ್ಳುತ್ತಾರೆ.)

ಒಪ್ಪತ್ತುಪವಾಸ ಒಂದೇ ಮಗ್ಗುಲ ನಿದ್ದೆ
ತಾಳಲಾರೆ ಮಗನೇ ಜಿನದೀಕ್ಷೆ | ಉಜ್ಜಂತಗಿರಿಗೆ
ಬ್ಯಾಡಾ ಕಣೋ ಮಗನೇ ಜಿನದೀಕ್ಷೆ |

ಹೀಗೆ ಜಿನದೀಕ್ಷೆಯನ್ನು ಪಡೆದಾದ ಮೇಲೆ ಏನೆಲ್ಲ ಕಷ್ಟಗಳನ್ನು ಎದುರಿಸಬೇಕು ಎಂದು ಮಗನಿಗೆ ಹೇಳಿದ ತಾಯಿ, ಅವನು ಕೇಳದೇ ಇದ್ದಾಗ ಚಂದದ ಕನ್ಯೆಯನ್ನು ತಂದು ಮದುವೆ ಮಾಡುವುದಾಗಿ ಮಗನನ್ನು ಈ ಕೆಳಗಿನಂತೆ ಪುಸಲಾಯಿಸುತ್ತಾಳೆ:

ತಾಯಿ- ಕಣ್ಣೀಗೊಪ್ಪುವ ಕನ್ನೆಯ ಧಾರೆಯ ಮಾಡಿ
ರನ್ನ ಗಾರಿಗೆಯ ಹಿಡಿದೇನು| ಕಂದಯ್ಯ
ಬ್ಯಾಡಾ ಕಣೋ ಮಗನೇ ಜಿನದೀಕ್ಷೆ |

ಮಗ-   ಅನ್ಯರ ಮಕ್ಕಳ ತಂದು ಪಾಪ ಮಾಡದಕಿಂತ
ಅಣ್ಣನ ಪಾಲೀಗಿ ಹೆಣಗಾಡೀ | ಅದಕ್ಕಿಂತ
ನಾನ್ಹೋಗ ತಾಯೆ ಜಿನದೀಕ್ಷೆ |

ತಾಯಿ- ಉಪ್ಪರಿಯೊಳಗೆ ಪಟ್ಟೆ ಮಂಚದ ಮ್ಯಾಲೆ
ತುಪ್ಪ ಸಕ್ಕರೆ ನಿನಗುಂಟು| ಕಂದಯ್ಯ
ಬ್ಯಾಡ ಕಣೋ ಮಗನೇ ಜಿನ ದೀಕ್ಷೆ |

ಮಗ-   ಹತ್ತು ಮಾರುದ್ದ ವಾಲೆ ನಮ ಕೂಡೆ
ಓದಬೇಕು ತಾಯೆ ಜಿನದೀಕ್ಷೆ| ಉಜ್ಜಂತಗಿರಿಗೆ
ಹೋಗ ಬೇಕು ತಾಯೇ ಜಿನದೀಕ್ಷೆ |

ಇಂತಹ ಹೃದಯಸ್ಪರ್ಶಿ ಮಾತುಗಳು ಹಾಡಿನ ರೂಪದಲ್ಲಿ ಹಲವಾರು ಇವೆ.  ತಾಯಿಯ ಕರುಳಿಗಿಂತ ಮಗನಿಗೆ ತ್ಯಾಗವೇ ಬಹಳ ದೊಡ್ಡದಾಗಿ ಕಾಣಿಸುತ್ತದೆ. ಅವನಿಗೆ ಮದುವೆ ಮಾಡುವ, ಸಕ್ಕರೆ-ತುಪ್ಪ ತಿನ್ನಿಸುವ ಐಹಿಕ ಸುಖಭೋಗ, ಲಾಲಸೆಗಳು ಅವನ ನಿವೃತ್ತಿ ಮಾರ್ಗವನ್ನು ಸಡಿಲಿಸುವುದಿಲ್ಲ. ಇಂತಹ ಹಾಡುಗಳನ್ನು ಮುಂಜಾನೆ ನಸುಕಿನಲ್ಲಿ ಜೋಳ ಬೀಸುತ್ತ ಜೈನಮಹಿಳೆಯರು ಹಾಡುತ್ತಿದ್ದರು. ಇಂತಹ ಹಾಡುಗಳು ಅಲ್ಲಿಯೇ ಮಲಗಿದ ತನ್ನ ಕರುಳುಕುಡಿಗಳಿಗೆ ಎರಡೂ ಬಗೆಯ ಸಂಸ್ಕಾರವನ್ನು (ಜಿನದೀಕ್ಷೆ ಪಡೆಯುವ ಮತ್ತು ಬಿಡುವ) ಕೊಡುತ್ತಿದ್ದವು. ಆದರೆ ಆಶ್ಚರ್ಯವೆಂದರೆ ಜೈನಧರ್ಮದಲ್ಲಿ ಮಹಿಳೆಯರಿಗೂ ಕೂಡಾ ಸನ್ಯಾಸಿನಿಯರಾಗುವ ಅವಕಾಶವಿದೆ. ಅವರೂ ಕೂಡಾ ತಲೆ ಕೂದಲನ್ನು ಕಿತ್ತುಕೊಂಡು ಒಂದೇ ಹೊತ್ತು ಅಂಗೈಯಲ್ಲಿ ಊಟಮಾಡಿ ಒಂದೇ ಮಗ್ಗುಲಲ್ಲಿ ಮಲಗುತ್ತಾರೆ. ಆದರೆ ಮಗಳನ್ನು ಜಿನದೀಕ್ಷೆಗೆ ಹೋಗಬೇಡ ಎಂದು ಹೇಳುವ ಒಂದೇ ಒಂದು ಜನಪದ ಹಾಡು ಇಲ್ಲ. ಯಾಕೆ? ಮಗಳು ಸನ್ಯಾಸಿನಿ ಆದರೂ ತಾಯಿಯ ಕರುಳು ಒದ್ದಾಡುತ್ತದೆ. ಆದರೆ ಅದಕ್ಕಿಂತ ಕಷ್ಟದ ದಾರಿ ಅವಳ ಬದುಕಿನಲ್ಲಿ ಇದೆ ಎನ್ನುವ ಸತ್ಯ ಆ ತಾಯಿಗೆ ಮಗಳು ಸಂಸಾರದಲ್ಲಿ ಇದ್ದು ಕಷ್ಟ ಪಡುವುದಕ್ಕಿಂತ ಸನ್ಯಾಸಿನಿಯಾಗಿ ಕಷ್ಟ ಪಟ್ಟರೆ ಒಳಿತು ಎಂದು ಅನಿಸಿರ ಬೇಕು. ಮಗಳಿಗೆ ಹಾಲು ಸೋಸು, ನೀರು ಸೋಸು, ಜಿನಧರ್ಮದ ನೆರಳಲ್ಲಿ ನಡೆ, ಎಂದು ಉಪದೇಶ ಮಾಡುತ್ತಾಳೆಯೇ ವಿನಾ ದೀಕ್ಷೆ ಬಗ್ಗೆ ಚಕಾರ ಎತ್ತುವುದಿಲ್ಲ. ಅಲ್ಲದೆ ಜೈನಧರ್ಮದಲ್ಲಿ ಕೆಲವು ಕಾಲ ಸಹಗಮನ ಪದ್ಧತಿ ಜಾರಿಯಲ್ಲಿತ್ತು. ರನ್ನ ಕವಿಯ ಕೆಲವು ಪದ್ಯದ ಸಾಲುಗಳನ್ನು (ಮಹಾಸತಿ ಸಮುಚಿತ ಆಚಾರ, ಗುಂಪೆಲ್ಲಂ ಪೊಗಳೆ, ಅತ್ತಿಮಬ್ಬೆಯ ಅಕ್ಕ ಗುಂಡಮಬ್ಬೆಯ ಸಹಗಮನವನ್ನು ನೋಡಿ ಕವಿ ರನ್ನ ಹೇಳಿದ ಪದ್ಯ) ಬಿಟ್ಟರೆ ಜನಪದ ಅದಕ್ಕೆ ದಿವ್ಯ ಮೌನವನ್ನು ವಹಿಸಿರುವದು ಕುತೂಹಲಕಾರಕವಾಗಿದೆ.