ಡ) ಸುರಗಿ:

ಮದುವೆಯಲ್ಲಿ ಹೆಣ್ಣುಮಕ್ಕಳು ಬಹಳ ಸಂತೋಷದಿಂದ ನಡೆಸಿಕೊಡುವ ಕಾರ್ಯಕ್ರಮವೆಂದರೆ ಸುರಗಿ ಕೊಡುವ ಕಾರ್ಯಕ್ರಮವಾಗಿದೆ. ಮಾಂಗಲ್ಯಧಾರಣೆ ಮತ್ತು ಅಕ್ಷತಾರೋಪಣ ಕಾರ್ಯಕ್ರಮವಾದ ಮೇಲೆ ಹೆಣ್ಣಿನ (ವಧುವಿನ) ಚಿಕ್ಕಪ್ಪ ಅಥವಾ ದೊಡ್ಡಪ್ಪ ಅಥವಾ ಅವರು ಯಾರೂ ಇರದಿದ್ದರೆ ಸ್ವತಃ ತಂದೆ-ತಾಯಿ ಬಂದು ಅಳಿಯನ ಪಾದ ತೊಳೆದು ಧಾರೆ ಎರೆಯುವ ಕಾರ್ಯಕ್ರಮಗಳು ಮದುವೆ ಮಂಟಪದಲ್ಲಿ ನಡೆಯುತ್ತಿರುವಾಗಲೇ ಸುರಗಿ ಕೊಡುವ ಕಾರ್ಯಕ್ರಮ ಸುರು ಆಗುತ್ತದೆ. ಇದಕ್ಕಾಗಿ ಮದುವೆಯ ಮುಂಚೆಯೇ ಹೆಣ್ಣಿನ ಕಡೆಯವರು ಹಲವಾರು ತಿಂಡಿಗಳನ್ನು ಮಾಡಿ ಇಟ್ಟುಕೊಂಡಿರುತ್ತಾರೆ. ಅವೆಲ್ಲ ಪ್ರಾದೇಶಿಕ, ಸಿಹಿ ಮತ್ತು ಖಾರದ ತಿಂಡಿಗಳಾಗಿರುತ್ತವೆ. ಅವನ್ನು ಒಂದೊಂದು ತಾಟಿನಲ್ಲಿ ಹಾಕಿ-ಇಪ್ಪತ್ತರಿಂದ ಮೂವತ್ತು ತಾಟುಗಳಿರುತ್ತವೆ-ಒಬ್ಬೊಬ್ಬ ಹುಡುಗನ ಕೈಯಲ್ಲಿ ಕೊಡುತ್ತಾರೆ. ಅವರೆಲ್ಲಾ ಎರಡು ಸಾಲುಗಳಲ್ಲಿ ನಿಂತ ಬಳಿಕ ಮಹಿಳೆಯೊಬ್ಬಳು ತುಂಬಿದ ಕೊಡ ಹೊತ್ತು ನಿಲ್ಲುತ್ತಾಳೆ. ಅವಳ ಮಗ್ಗುಲಲ್ಲಿ ಅವಳ ಗಂಡ ಯಾವುದಾದರೂ ಒಂದು ಸಿಹಿ ತಿಂಡಿಯನ್ನು ಬಿದಿರಿನ ಬುಟ್ಟಿಯಲ್ಲಿ ಹಾಕಿ ಹಿಡಿದುಕೊಂಡಿರುತ್ತಾನೆ. ಮುಂದೆ ವಾದ್ಯಸಮೇತ ಈ ಮೆರವಣಿಗೆ ವರನ ಮನೆ ಅಂದರೆ ಹಂದರದ ಕಡೆಗೆ ಹೋಗುತ್ತದೆ. ಅಲ್ಲಿ ಅವರನ್ನು ಇದಿರುಗೊಳ್ಳಲು ದಂಪತಿ ಸಮೇತವಾಗಿ ಬೀಗರು ನಿಂತಿರುತ್ತಾರೆ.

ಅವರನ್ನು ಎದುರುಗೊಂಡು ಸುರಗಿ ಹೊತ್ತ ಮಹಿಳೆಗೆ ಸೀರೆ ಮತ್ತು ಖಣ ಉಡುಗೊರೆಯಾಗಿ ಕೊಡುತ್ತಾರೆ. ಹೆಣ್ಣಿನ ಕಡೆಯವರು ಮಾಡಿದ ತಿಂಡಿಗಳು ಈ ಊರಲ್ಲಿ ಮೆರವಣಿಗೆಯಾಗುವುದರಿಂದ ಅವರ ಅಡುಗೆ ಸಂಸ್ಕಾರ, ಪರಿಣಿತಿ ಮತ್ತು ಶುಚಿತ್ವಗಳು ಇಲ್ಲಿ ಸಾರ್ವಜನಿಕರಿಂದ ಪರೀಕ್ಷೆಗೊಳಗಾಗುತ್ತವೆ. ಆದ್ದರಿಂದ ಸುರಗಿ ಸಾಮಾನುಗಳನ್ನು ತಯಾರು ಮಾಡುವ ಮಹಿಳೆಯರು ಇದನ್ನು ಬಹಳ ಮುತುವರ್ಜಿಯಿಂದ ಮಾಡುತ್ತಾರೆ. ಅಲ್ಲದೆ ಗಂಡನ ಮನೆಯಲ್ಲಿ ಇರಲಾರದ ವಿಶೇಷವಾದ ತಿಂಡಿಗಳನ್ನು ಮಾಡಿ ಬೀಗರ ಊರಲ್ಲಿ ಮೆಚ್ಚುಗೆ ಮತ್ತು ಪ್ರತಿಷ್ಠೆಯನ್ನು ಉಂಟು ಮಾಡುವುದಕ್ಕಾಗಿ ಪೈಪೋಟಿ ನಡೆಯುತ್ತದೆ. ತಿಂಡಿಗಳೊಂದಿಗೆ ಇತರ ಸಾಮಾನುಗಳು ಅಂದರೆ ವಧು ಮತ್ತು ಅವಳ ಗೆಳತಿಯರು ಮಾಡಿದ ವಿಶೇಷವಾದ ಗೃಹ ಅಲಂಕರಣ ಸಾಮಾನುಗಳನ್ನು ಕೂಡಾ ಸುರಗಿಯಲ್ಲಿ ಕೊಡುತ್ತಾರೆ. ಇದರಿಂದ ಕೂಡಾ ತಮ್ಮ ಊರಿಗೆ ಸೊಸೆಯಾಗಿ ಬಂದವಳ ಕುಶಲತೆಯನ್ನು ಆ ಊರಿನ ಜನ ನೋಡಿ ಮೆಚ್ಚಿಕೊಳ್ಳುತ್ತಾರೆ. ಇತ್ತೀಚೆಗೆ ಸುರಗಿ ವಸ್ತುಗಳನ್ನು ನಗರಗಳಿಂದ ಕೊಂಡು ತಂದು ಪ್ರದರ್ಶನಮಾಡಿ ಕೊಡಲಾಗುತ್ತಿದೆ. ತಿಂಗಳಾನುಗಟ್ಟಲೆ ತಿಂಡಿ ಮಾಡುವ, ಅಲಂಕಾರಿಕ ವಸ್ತುಗಳನ್ನು ಹೆಣೆಯುತ್ತ ಕೊಡ್ರುವ ಸಂಯಮ ಮತ್ತು ಪುರಸೊತ್ತು ಈಗಿನ ಕಾಲದ ಹುಡುಗಿಯರಲ್ಲಿ ಇಲ್ಲ. ಅಲ್ಲದೆ ಈಗ ಮನೆಯ ಅಲಂಕಾರದ ವಿನ್ಯಾಸಗಳೂ ಕೂಡಾ ಬದಲಾಗಿದ್ದರಿಂದ ಯಾರೂ ಅಂತಹ ಅಲಂಕಾರ ವಸ್ತುಗಳನ್ನು ಮಾಡುತ್ತ ಕೂಡ್ರುವದಿಲ್ಲ. ಗ್ರಾಮಗಳು ನಾಗರಿಕತೆಗೆ ಒಳಗಾಗುತ್ತಿರುವುದರಿಂದ ಮನೆಯ ವಿನ್ಯಾಸ, ಅಲಂಕರಣ ವಸ್ತುಗಳು ಹಾಗೂ ತಿನ್ನುವ ತಿಂಡಿಪದಾರ್ಥಗಳು ಬದಲಾಗಿ ಮದುವೆಯ ಮುಂಚೆ ಹೆಣ್ಣು ಮಕ್ಕಳಿಗೆ ಯಾವುದೇ ಕೆಲಸ ಇಲ್ಲದಂತೆ ಆಗಿದೆ.

ಇಡೀ ಸುರಗಿ ಕೊಡುವ ಕಾರ್ಯಕ್ರಮದಲ್ಲಿ ಸುರಗಿ ಕೊಡ ಹೊತ್ತ ಮಹಿಳೆ ಪ್ರಮುಖವಾಗಿರುವದು ವಿಶೇಷವಾಗಿದೆ. ಅದು ತುಂಬಿದ ಕೊಡವಾಗಿರುವುದರಿಂದ ಹೆಣ್ಣು ಕೊಟ್ಟವರು ಪಡೆದುಕೊಂಡವರ ಮನೆಗೆ ಸೌಖ್ಯವನ್ನು ಆಶಿಸಿಯೇ ಅದನ್ನು ಕೊಡುತ್ತಾರೆ. ಗ್ರಾಮಜಗತ್ತಿನಲ್ಲಿ ತುಂಬಿದ ಕೊಡ ಯಾವಾಗಲೂ ಶುಭ ಸೂಚಕವಾದುದಾಗಿದೆ. ಹೊತ್ತು ಮುಳುಗುವ ಸಮಯದಲ್ಲಿ ಮನೆಯಲ್ಲಿ ಒಂದು ತುಂಬಿದ ಕೊಡ ಇರದಿದ್ದರೆ ಕೊನೆಯ ಪಕ್ಷ ಒಂದು ಸಣ್ಣ ತಂಬಿಗೆಯನ್ನಾದರೂ ಆ ಮನೆಯ ಗೃಹಿಣಿಯಾದವಳು ಅಲ್ಲಿ ತುಂಬಿ ಇಟ್ಟಿರುತ್ತಾಳೆ. ಆ ಸಮಯದಲ್ಲಿ ಮನೆಗೆ ಲಕ್ಷ್ಮಿ ಬರುವ ಸಮಯವೆಂದು ಗ್ರಾಮಸ್ಥರು ಭಾವಿಸುತ್ತಾರೆ. ಇದನ್ನು ಗ್ರಾಮಜಗತ್ತಿನೊಂದಿಗೆ ಮಿಳಿತವಾಗಿರುವ ಜೈನ ಸಮಾಜ ಕೂಡಾ ಮನ್ನಿಸಿ ಆಚರಿಸುತ್ತ ಬಂದಿದೆ. ಬಹುಶಃ ಇದೇ ಆಶಯವು ಸುರಗಿ ಕೊಡುವ ಸಂಪ್ರದಾಯದಲ್ಲಿ ಇದೆ ಎಂದು ನಾವು ತಿಳಿಯಬಹುದಾಗಿದೆ.

ಜೈನರಲ್ಲಿ ಮದುವೆಯ ಸಂಪ್ರದಾಯಗಳು ಪ್ರಾದೇಶಿಕ ಭಿನ್ನತೆಯನ್ನು ಹೊಂದಿವೆ. ದಕ್ಷಿಣ ಕನ್ನಡದ ತುಳುನಾಡ ಜೈನರಲ್ಲಿ ಹೀಗೆ ಮೇಲೆ ಹೇಳಿದ ಆಚರಣೆಗಳು ಇಲ್ಲ. ಬದಲಾಗಿ ಅಲ್ಲಿ “ತಾಳಿಬಂಧ ಪ್ರಸ್ತ” “ತೋರಣ ಮುಹೂರ್ತ” “ಹೋಮ ಮತ್ತು ಸಪ್ತ ಪದಿ”ಗಳು ನಡೆಯುತ್ತವೆ.

ತಾಳಿಬಂಧ ಪ್ರಸ್ತವೆಂದರೆ ಮದುಮಗಳಿಗೆ ಮಾಡಿಸಿದ ತಾಳಿಯನ್ನು ಹಿರಿಯ ಮುತ್ತೈದೆಯರು ಕೂಡಿಕೊಂಡು ಪೂಜಿಸಿ ಅದು ಎಂದೆಂದೂ ಚಿರಾಯುವಾಗಲಿ ಎನ್ನುವ ಆಶಯದೊಂದಿಗೆ ಆಶೀರ್ವದಿಸುತ್ತಾರೆ. ತೋರಣ ಮೂಹೂತ್ ಕೂಡಾ ಮಹಿಳಾ ಪ್ರಧಾನವಾದ ಒಂದು ಆಚರಣೆಯಾಗಿದೆ. ಮಾವಿನ ಎಲೆಯ ತೋರಣ ಮಾಡಿ ಗಂಡು ಹೆಣ್ಣು ಚಿರಕಾಲ ಬಾಳಲಿ ಎಂಬ ಸಂಕಲ್ಪದೊಂದಿಗೆ ಮುತ್ತೈದೆಯರು ಅದನ್ನು ಪೂಜಿಸುತ್ತಾರೆ. ತಾಳಿಬಂಧ ಪ್ರಸ್ತ ಗೋದೂಳಿ ಸಮಯದಲ್ಲಿ ಆದರೆ, ತೋರಣ ಮೂಹೂರ್ತ ಮುಂಜಾನೆ ಮತ್ತು ಸಂಜೆ ನಡೆಯುತ್ತದೆ.

ದಕ್ಷಿಣ ಕನ್ನಡದಲ್ಲಿ ಇನ್ನೊಂದು ಬಗೆಯ ಮದುವೆ ಸಂಪ್ರದಾಯ ಕೂಡಾ ಇದೆ. ಅದೇ ಪೋಡಶ ವಿಧಾನ ಮದುವೆ. ಇದೊಂದು ಶುದ್ಧ ಧಾರ್ಮಿಕ ಚೌಕಟ್ಟಿನಲ್ಲಿ ನಡೆಯುವ ಮದುವೆಯಾಗಿದೆ. ಎಂದಿನಂತೆ ಇಲ್ಲಿಯೂ ಕೂಡಾ ಮಹಿಳೆಯದೇ ಪ್ರಧಾನ ಪಾತ್ರವಿದೆ.

ಮದುವೆಯ ಈ ಎಲ್ಲ ಆಚರಣೆಗಳು ಜೈನಸಮುದಾಯಗಳು ವಾಸಿಸುತ್ತ ಬಂದಿರುವ ಆಯಾ ಪ್ರದೇಶದ ಸಂಸ್ಕೃತಿಯೊಂದಿಗೆ ಮಿಳಿತವಾಗಿ ಬಂದಿವೆ. ಆ ಎಲ್ಲ ಆಚರಣೆಗಳು ಕರ್ನಾಟಕದ ಎಲ್ಲ ಸಮುದಾಯಗಳು ಕಡ್ಡಾಯವಾಗಿ ಮಾಡುವ ಆಚರಣೆಗಳೇನಲ್ಲ. ಆಯಾ ಪ್ರದೇಶದ ಸಂಸ್ಕೃತಿಯೊಂದಿಗೆ ಮಿಳಿತವಾಗಿರುವ ಕೃಷಿಯನ್ನೇ ಅವಲಂಬಿಸಿರುವ ಜೈನಸಮುದಾಯಗಳು ಅಲ್ಲಿ ರೂಢಿಗತವಾಗಿರುವ ಇಂತಹ ಅನೇಕ ಪ್ರಾದೇಶಿಕ ನಡಾವಳಿಕೆಗಳನ್ನು ಯಾವುದೋ ಕಾಲದಲ್ಲಿ ಅನುಸರಿಸುತ್ತ ಬಂದಿದ್ದಾರೆ. ಇಂತಹ ಆಚರಣೆಗಳನ್ನು ಅದೇ ಪ್ರದೇಶದಲ್ಲಿ ಬದುಕುತ್ತಿರುವ ಇತರ ಸಮುದಾಯಗಳಿಂದ ಇವರು ಪಡೆದುಕೊಂಡಿರಬಹುದು. ಸಮುದಾಯಗಳ ಸಾಂಸ್ಕೃತಿಕ ಚಲನೆಯಲ್ಲಿ ಚಂದ ಕಂಡದ್ದನ್ನು ಮತ್ತು ಉತ್ತಮವಾಗಿರುವುದನ್ನು ತನ್ನೊಂದಿಗೆ ಮಿಳಿತಗೊಳಿಸಿಕೊಳ್ಳುವ ಕ್ರಿಯೆ ಅಬಾಧಿತವಾಗಿ ನಡೆಯುತ್ತಲೇ ಇರುತ್ತದೆ. ಕಾಲಾಂತರದಲ್ಲಿ ಕೆಲವು ಬಿಟ್ಟು ಹೋಗಬಹುದು ಅಥವಾ ಇನ್ನೂ ಕೆಲವು ಕೂಡಿಕೊಳ್ಳಬಹುದು. ಈ ಆದಾನ-ಪ್ರಧಾನವು ಯಾವ ಕಾಲಘಟ್ಟದಲ್ಲಿ ನಡೆಯಿತು? ಯಾಕಾಗಿ ನಡೆಯಿತು? ಎಂಬುದರ ಶೋಧವೇ ಒಂದು ಅಧ್ಯಯನವಾಗಬಹುದು. ಅದೇನೇ ಇರಲಿ, ಪ್ರತಿಯೊಂದು ಇಂತಹ ಆಚರಣೆಗಳಲ್ಲಿ ಮಹಿಳೆ ಇರುವುದನ್ನು ಕಡ್ಡಾಯಗೊಳಿಸಿರುವುದು ಮಾತ್ರ ಅನುಕರಣೀಯವಾಗಿದೆ. ಗ್ರಾಮ ಸಮುದಾಯಗಳಲ್ಲಿ ಮಿಳಿತವಾಗಿರುವ ಜೈನಕುಟುಂಬಗಳು ಅಲ್ಲಿಯ ಸಂಸ್ಕೃತಿಯೊಂದಿಗೆ ತಾವೂ ಸಹ ಮಿಳಿತವಾಗಿದ್ದೇವೆ ಎಂದು ತೋರಿಸುವ ಇಂತಹ ಆಚರಣೆಗಳು ರೂಢಿಯಲ್ಲಿ ಬಂದಿದ್ದರೂ ಬಂದಿರಬಹುದು.

ಈಗ ಕಾಲ ಬದಲಾಗುತ್ತಿದೆ. ಮೊದಲೆಲ್ಲ ಏಳು ದಿನಗಳ ವರೆಗೆ ಮದುವೆ ನಡೆಯುತ್ತಿದ್ದವು. ಅದೆಲ್ಲ ಹೋಗಿ ಒಂದು ದಿನಕ್ಕೆ ಬಂದು ನಿಂತು ಈಗ ಒಂದು ಗಂಟೆಯಲ್ಲಿ ಮದುವೆ ಕಾರ್ಯ ಮುಗಿದು ಹೋಗುತ್ತಿದೆ. ಬೆಳಗಾಂವ, ವಿಜಾಪುರ ಮತ್ತು ಬಾಗಲಕೋಟ ಜಿಲ್ಲೆಗಳಲ್ಲಿ ಹೆಚ್ಚಾಗಿ ಮಹಾರಾಷ್ಟ್ರದೊಂದಿಗೆ ಸಂಬಂಧ ಮಾಡುವ ಪ್ರದೇಶದಲ್ಲಿ ಹೊಸ ಮದುವೆ ಸಂಪ್ರದಾಯವೊಂದು ಜಾರಿಯಲ್ಲಿ ಬಂದಿದೆ. ವಿಶೇಷವಾಗಿ ಇದನ್ನು ಜೈನರು ಮಾತ್ರ ಮಾಡತೊಡಗಿದ್ದಾರೆ. ಅದೇ ಯಾದಿ ಮೇ ಶಾದಿ.

೧೦.೨ ಯಾದಿ ಮೇ ಶಾದಿ:

ಇದೊಂದು ತರಹದ ಅವಸರದ ಮದುವೆಯಾಗಿದೆ. ಉತ್ತರಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮತ್ತು ಮಹಾರಾಷ್ಟ್ರದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಈ ಯಾದಿಮೇ ಶಾದಿ ಮದುವೆ ಪದ್ಧತಿಯನ್ನು ಸದ್ಯಕ್ಕೆ ಜೈನರು ಮಾತ್ರ ನಡೆಸಿಕೊಂಡು ಬರುತ್ತಿದ್ದಾರೆ. ಇದು ಮೂಲದಲ್ಲಿ ಮಹಾರಾಷ್ಟ್ರದ ಜೈನರಿಂದ ಪ್ರಾರಂಭವಾಯಿತು. ಆದ್ದರಿಂದ ಅವರೇ ಇಟ್ಟ ಮರಾಠಿ ಭಾಷೆಯಲ್ಲಿಯ ಹೆಸರು ಇಂದು ಕನ್ನಡದಲ್ಲೂ ಪ್ರಚಾರದಲ್ಲಿ ಇದೆ. ಯಾದಿಮೆ ಶಾದಿ ಹಣ ಉಳಿಸುವ, ಶ್ರಮವನ್ನು ಉಳಿಸುವ ಅವಸರದ ಮದುವೆಯಾಗಿದೆ. ಒಂದು ಅರ್ಥದಲ್ಲಿ ಇದು ಒಪ್ಪಂದದ ಮದುವೆಯಾಗಿದೆ.

ಮದುವೆ ಎನ್ನುವದು ಒಂದು ಗಂಡು ಮತ್ತು ಒಂದು ಹೆಣ್ಣು ಕೂಡಿ ಸಂಸಾರ ಮಾಡಲು ಬೇಕಾದ ಸಾರ್ವತ್ರಿಕ ಒಪ್ಪಿಗೆಯಾಗಿದೆ. ಅದು ಎಷ್ಟೇ ಸಾರ್ವಜನಿಕವಾಗಿದ್ದು ಮುಂದೆ ಆ ದಂಪತಿಗಳಲ್ಲಿ ಜಗಳ ಬರದಂತೆ ಸಮಾಜ ನೋಡಿಕೊಳ್ಳುವ ಭರವಸೆ ಗ್ರಾಮಸಮುದಾಯದಲ್ಲಿ ಇದ್ದರೂ ಕೂಡಾ ಮದುವೆಯ ಮುಂಚೆ ಎರಡೂ ಕಡೆಯ ಹಿರಿಯರುಗಣ್ಯರು ಕೂಡಿಕೊಂಡು ಒಂದು ಯಾದಿ (List) ಬರೆದು ಯಾರು ಯಾರಿಗೆ ಏನೇನು ಕೊಡಬೇಕು ಮತ್ತು ಯಾವ ಸಮಯದಲ್ಲಿ ಕೊಡಬೇಕು (ಯಾವ ಮಿತಿಯಲ್ಲಿ) ಎನ್ನುವ ಕರಾರು ಪತ್ರ ಬರೆದು ಗುರು-ಹಿರಿಯರ ಸಹಿ ಮಾಡಿಸಿ ದ್ವೀ ಪ್ರತಿ ಮಾಡಿ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಜೈನರಲ್ಲಿ ನಡೆಯುವ ಯಾವುದೇ ಮದುವೆಯಲ್ಲಿ ಈ ಯಾದಿಪತ್ರವನ್ನು ತಪ್ಪದೇ ಬರೆಯಲಾಗುತ್ತದೆ. ಇದೊಂದು ರೀತಿಯ Registration ಇದ್ದ ಹಾಗೆ. ಮುಂದೆ ನ್ಯಾಯ ನಿಬಾಧಿಗಳು ಬಂದರೆ ಈ ಯಾದಿಯಲ್ಲಿಯ ಕರಾರುಗಳನ್ನು ಓದಿ ಹಿರಿಯರು ನ್ಯಾಯ ಕೊಡುವ ಪದ್ಧತಿ ಇತ್ತು. ಆದರೆ ಇಂದು ಯಾದಿ ಬರೆಯಲು ಕುಳಿತ ಆ ಕೆಲವೇ ಗಣ್ಯರ ನಡುವೆ ದಿಢೀರ್ ಮದುವೆ ಮಾಡಲಾಗುತ್ತದೆ. ಇದೇ ಯಾದಿ ಮೇ ಶಾದಿ.

ಯಾದಿ ಮೇ ಶಾದಿ ಯಾಕೆ?:

ಜೈನರು ಪಾಲಿಸಬೇಕಾದ ಅನೇಕ ಆಚಾರಗಳಲ್ಲಿ ಅಪರಿಗ್ರಹ ಅತ್ಯಂತ ಮಹತ್ವದ್ದಾಗಿದೆ. ಅಪರಿಗ್ರಹ ಎಂದರೆ ಸಂಗ್ರಹಬುದ್ಧಿಯನ್ನು ಬಿಡುವದು. ಅದಕ್ಕಾಗಿಯೇ ಜೈನಮುನಿಗಳು ತೀರ ಕಟ್ಟು ನಿಟ್ಟಿನ ಅಪರಿಗ್ರಹ ಸಾಧನೆಯನ್ನು ಮಾಡುವುದಕ್ಕಾಗಿ ತಮ್ಮ ಹತ್ತಿರ ಕಮಂಡಲ, ಪಿಂಚ ಮತ್ತು ಪುಸ್ತಕಗಳ ಹೊರತಾಗಿ ಏನನ್ನೂ ಇಟ್ಟುಕೊಳ್ಳುವುದಿಲ್ಲ. ಆದ್ದರಿಂದಲೇ ಅವರು ನಿರ್ಗ್ರಂಥರಾಗಿ ಸಂಚರಿಸುತ್ತಾರೆ. ಆದರೆ ಮುನಿಧರ್ಮವೇ ಬೇರೆ, ಶ್ರಾವಕ ಧರ್ಮವೇ ಬೇರೆ. ಹೊರ ಸಮಾಜ ಶ್ರಾವಕರನ್ನು ನಿರಂತರವಾಗಿ ಬೆಲೆಯುಳ್ಳ ವಸ್ತುಗಳಿಗಾಗಿ ಆಶೆ ಪಡುವಂತೆ ಮಾಡುತ್ತಿರುತ್ತದೆ. ಅದಕ್ಕೆ ಜೈನ ಮಹಿಳೆ ಹೊರತಾಗಿಲ್ಲ. ಜೈನ ಮಹಿಳೆಯರು ಎಷ್ಟೇ ಧಾರ್ಮಿಕ ಶ್ರದ್ಧೆಯನ್ನು ರೂಢಿಸಿಕೊಂಡು ಜೈನ ಧರ್ಮದ ಉಳಿವಿಗೆ ಕಾರಣರಾಗಿದ್ದರೂ ಕೂಡಾ ಒಳ ಒಳಗೆ ಮಹಾ ಪರಿಗ್ರಹಿಗಳಾಗಿದ್ದಾರೆ. ಸಂಗ್ರಹ ಬುದ್ಧಿಯನ್ನು ಬೆಳೆಸಿಕೊಂಡಿರುವ ಜೈನಮಹಿಳೆಯರು ಬಂಗಾರ, ಆಸ್ತಿ, ರೇಶಿಮಜೆ ಸೀರೆ ಇಂತಹದ್ದಕ್ಕೆಲ್ಲಾ ಆಶೆ ಪಡುತ್ತಾರೆ. ಜೈನಮಹಿಳೆಯರಲ್ಲಿ ಈ ಪರಿಗ್ರಹ(ಸಂಗ್ರಹದ ಆಶೆ) ಬುದ್ಧಿ ಎಷ್ಟು ಬೆಳೆದಿದೆ ಎಂದರೆ ತಮ್ಮ ಸೊಸೆ ತನ್ನ ತವರು ಮನೆಯಿಂದ ಎಷ್ಟು ತಂದರೂ ಕೂಡಾ ಅವಳಿಗೆ ಶಾಂತಿ, ಸಮಾಧಾನ ಇಲ್ಲವಾಗಿದೆ.

ಅವಳ ಈ ಬಗೆಯ ಪರಿಗ್ರಹತ್ವದ ಪರಿಣಾಮದಿಂದ ಜೈನಸಮಾಜ ತನ್ನದೇ ಆದ ಧರ್ಮಪ್ರಣಾಳಿಕೆಯ ವಿರುದ್ಧಗತಿಯಲ್ಲಿ ಚಲಿಸತೊಡಗಿದೆ. ರೇಶಿಮೆ ಸೀರೆ, ಬಂಗಾರ ವಸ್ತು, ಒಡವೆಗಳ ಮೋಹಿಯಾಗಿ ಜೈನ ಮಹಿಳೆಯರು ತಮ್ಮ ಸೊಸೆಯಂದಿಯರನ್ನು ಅತ್ಯಂತ ಕ್ರೂರವಾಗಿ (ಜೈನರು ಮತ್ತು ಕ್ರೂರತನ!!) ನಡೆಸಿಕೊಳ್ಳತೊಡಗಿದರು. ಇದರಿಂದ ಹೆಣ್ಣು ಹೆತ್ತು ಹೊತ್ತು ಮದುವೆ ಮಾಡಿ ಕೊಟ್ಟ ಮೇಲೆ ಅವಳ ಸಂಸಾರ ಸುಖವಾಗಿ, ಶಾಂತವಾಗಿ ನಡೆಯುತ್ತದೆಯೇ? ಎನ್ನುವ ಆತಂಕ ಜೈನಸಮಾಜಕ್ಕೆ ಕಾಡತೊಡಗಿತು. ಪರಿಣಾಮವಾಗಿ ಹೆಣ್ಣು ಭ್ರೂಣ ಹತ್ಯೆ ವ್ಯಾಪಕವಾಗಿ ಜೈನರಲ್ಲಿ ಸದ್ದಿಲ್ಲದೆ ನಡೆಯಿತು. ಹೆಣ್ಣನ್ನು ಹಡೆಯುವದಾದರೂ ಯಾಕೆ? ಎನ್ನುವ ನಿರಾಶೆಯಿಂದ ಸದ್ದಿಲ್ಲದೇ ಗುಪ್ತವಾಗಿ ಈ ಕ್ರಿಯೆ ನಡೆದು ನಡೆದು ಇಂದು ಜೈನಸಮಾಜ ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿದೆ. ಎರಡು ಗಂಡಿಗೆ ಒಂದು ಹೆಣ್ಣು ಅನುಪಾತ (Ratio) ಇದೆ. ಪರಿಣಾಮ ಗಂಡಿಗೆ ಸೂಕ್ತವಾದ ವರ ಸಿಗದೆ ಸಮಾಜದವರು ಪರದಾಡತೊಡಗಿದ್ದಾರೆ. ಎಲ್ಲರೂ ಶೋಷಣೆ ತಪ್ಪಿಸುವ ಸಲುವಾಗಿ ಗಂಡು ಹಡೆಯುವವರೇ ಆದರೆ ಅವಕ್ಕೆಲ್ಲಾ ಹೆಣ್ಣನ್ನು ಎಲ್ಲಿಂದ ತರುವದು? ಇಂತಹ ಪರಿಸ್ಥಿತಿ ಸಮಾಜಕ್ಕೆ ಬಂದಿದೆ ಎನ್ನುವದು ಎಲ್ಲರಿಗೂ ಮನವರಿಕೆಯಾಗಿದ್ದರೂ ಕೂಡಾ ಯಾವ ಅತ್ತೆಯರೂ ತಮ್ಮ ಮನೆಗೆ ಬಂದ ಸೊಸೆಯನ್ನು ಕಾಡದೇ ಬಿಡುವುದಿಲ್ಲ. ಮತ್ತೊಬ್ಬರ ಮನೆಗೆ ಸೊಸೆಯಾಗಿ ಹೋಗಿರುವ ತಮ್ಮ ಮಗಳ ಚಿಂತೆ ಮಾಡುವ ಇವರು ತಮ್ಮ ಮನೆಗೆ ಬಂದಿರುವ ಹೆಣ್ಣು ಕೂಡಾ ಇನ್ನೊಬ್ಬರ ಮಗಳು ಅವರ ತಂದೆ-ತಾಯಿಗೆ ತಮ್ಮ ಮಗಳ ಬಗ್ಗೆ ಕಾಳಜಿ ಇದೆ  ಎನ್ನುವುದನ್ನು ಮರೆತು ಕ್ರೂರತನವನ್ನು ಪ್ರದರ್ಶಿಸುತ್ತಾರೆ. ಯಾಕೆ ಹೀಗೆ? ಬಾಲ್ಯದಿಂದಲೆ ಅವರಿಗೆ ಮಾಡಿಸಿದ ಜೈನಸಂಸ್ಕಾರ ಅಹಿಂಸೆ, ಜಿನದೇವರ ಪೂಜೆ, ಸಂಯಮದ ಪಾಠಗಳು ಸೊಸೆಯನ್ನು ನಡೆಸಿಕೊಳ್ಳುವಾಗ ಗಮನಕ್ಕೆ ಯಾಕೆ ಬರುವದಿಲ್ಲ? ಇದಕ್ಕೆ ಮುಖ್ಯ ಕಾರಣವೆಂದರೆ ಬಹುತೇಕ ಮಹಿಳೆಯರು ಜೈನ ಸಂಸ್ಕಾರವನ್ನು ಮನಸಾರೆ ಮಾಡುವುದಿಲ್ಲ. ಮದುವೆ ಆಗುವಾಗ ಗಂಡಿನ ಕಡೆಯವರು ಕೇಳುತ್ತಾರೆ ಎನ್ನುವ ಒಂದೇ ಕಾರಣಕ್ಕೆ ನೋಂಪಿ, ವ್ರತ, ಮಂತ್ರಗಳ ಕಂಠಪಾಠವನ್ನು ಇವರು ಮಾಡಿದ್ದರಿಂದ ತಾವು ಸೊಸೆಯಾಗಿದ್ದಾಗ ಅನುಭವಿಸಿದ್ದ ಕಷ್ಟಗಳನ್ನು ತಮ್ಮ ಸೊಸೆಯ ಮೇಲೆ ತೀರಿಸಿಕೊಳ್ಳುತ್ತಾರೆ. ಇದರ ದುಶ್ಪರಿಣಾಮವನ್ನು ಸಮಾಜ ಈಗ ಎದುರುಗೊಳ್ಳುತ್ತಿದೆ. ಆದರೆ ಯಾರೂ ಸೊಸೆಗೆ ಆಗುತ್ತಿರುವ ಹಿಂಸೆಯನ್ನು ತಡೆಯುವ ನಿಟ್ಟಿನಲ್ಲಿ ಸಮಾಜ ಜಾಗೃತಿಯನ್ನು ಮಾಡುತ್ತಿಲ್ಲ.

ಇದರಿಂದ ಕನ್ಯೆ ನೋಡಿದ ತಕ್ಷಣವೇ ಬೇರೆ ಯೋಚನೆಗಳು ವರನ ಮನೆಯವರಿಗೆ ಬರದಿರುವಂತೆ ಅಂದೇ ಮದುವೆ ಮಾಡುವ ಪದ್ಧತಿ ನಡೆಯುತ್ತಿದೆ. ಅಂದರೆ ಸಾಂಪ್ರದಾಯಿಕವಾಗಿ ಯಾದಿ ಬರೆದು ಅಲ್ಲಿಯೇ ವಧು-ವರರನ್ನು ಕರೆಸಿ ಮದುವೆ ಮಾಡಿ ಬಿಡಲಾಗುತ್ತಿದೆ. ಇದರಿಂದಾಗಿ ಪ್ರಾರಂಭದಲ್ಲಿ ಹೇಳಿದ ಮದುವೆ ಸಂಪ್ರದಾಯ, ಆಚರಣೆಗಳು, ವಿಧಿ-ವಿಧಾನಗಳು ಇವೆಲ್ಲ ಇಲ್ಲವಾಗಿ ಮದುವೆ ಎನ್ನುವದು ಒಂದು ಒಪ್ಪಂದಕ್ಕೆ ಬಂದು ನಿಂತಿದೆ. ಇದರಿಂದ ಎರಡು ಬಗೆಯ ಅನುಕೂಲಗಳು ಉಂಟಾಗಿವೆ:

೧) ಮದುವೆಗಾಗಿ ಖರ್ಚು ಮಾಡಬೇಕಾದ ಹಣ ವಿನಾಕಾರಣ ಪೋಲಾಗುತ್ತಿತ್ತು. ಹಂದರ ಹಾಕಲು, ಸಮಾಜದವರಿಗೆ ಊಟ, ವಾದ್ಯ, ಮೋಜು ಮದಾಲಸಿ, ವಿಪರೀತ ಸಂಪ್ರದಾಯದಿಂದಾಗಿ ಪ್ರತಿಯೊಂದು ಕಾರ್ಯ ಮುಗಿದಾಗಲೂ ಕೊಡಬೇಕಾದ ಆಹೇರಿ ಇತ್ಯಾದಿ ತಪ್ಪಿ ಹೋಗಿದೆ.

೨) ಮದುವೆ ಸಿದ್ಧತೆಗಾಗಿ ಊರಲ್ಲಿ ಎಲ್ಲರೂ ತಮ್ಮ ಕೆಲಸ ಬಿಟ್ಟು ಈ ಮನೆಯಲ್ಲಿ ಬಂದು ನಿಲ್ಲಬೇಕಾಗುತ್ತಿತ್ತು. ಇಂದಿನ ಒತ್ತಡದ ದಿನಗಳಲ್ಲಿ ಹೀಗೆ ತಮ್ಮ ಕೆಲಸ ಬಿಟ್ಟು ಇವರ ಮನೆಗೆ ಬರುವುದು ನಿಂತು ಹೋಗಿ ಎಲ್ಲರಿಗೂ ಸಮಾಧಾನವಾಗಿದೆ.

ಈಗ ಬಂದಿರುವ ಯಾದಿ ಮೆ ಶಾದಿ ಸರಳ ಮದುವೆಯಿಂದಾಗಿ ಎಲ್ಲರೂ ನಿರಾಳರಾಗಿದ್ದಾರೆ. ಮುಖ್ಯವಾಗಿ ಹೆಣ್ಣು ಹೆತ್ತವರು ತಮ್ಮ ಮಗಳ ಮದುವೆ ಇಷ್ಟು ಸರಾಗವಾಗಿ ಆಗುತ್ತಿರುವುದಕ್ಕೆ ಸಂತೋಷ ಪಡುತ್ತಿದ್ದಾರೆ. ವಿಚಿತ್ರವೆಂದರೆ ತಮ್ಮ ಮನೆ ಮಗಳ ಮದುವೆ ಮತ್ತು ಅವಳ ಭಾವೀ ಸಂಸಾರದ ಬಗ್ಗೆ ಆತಂಕ ಪಟ್ಟು ಹೆಣ್ಣು ಹಡೆಯುವುದನ್ನೇ ನಿಲ್ಲಿಸಿ ಸಮಾಜದಲ್ಲಿ ಅಸಮಾನ ಅನುಪಾತವನ್ನು ಉಂಟು ಮಾಡಿದವರೇ ತಮ್ಮ ಮನೆಗೆ ಸೊಸೆಯಾಗಿ ಬಂದವಳು ಕೂಡಾ ಅಂತಹದೆ ಆತಂಕ ಮತ್ತು ಅತಂತ್ರದ ಭಾವದಿಂದ ತನ್ನ ಮನೆಗೆ ಬಂದಿದ್ದಾಳೆ ಎನ್ನುವುದನ್ನು ಯೋಚಿಸುವುದಿಲ್ಲ ಎನ್ನುವದು ಜೈನಸಮಾಜದಲ್ಲಿ ಆತಂಕವನ್ನು ಹುಟ್ಟಿಸುತ್ತಿದೆ. ಯಾದಿ ಮೆ ಶಾದಿ ಮದುವೆಗಳು ಈಗ ಉತ್ತರ ಕರ್ನಟಕದ ಬೆಳಗಾವಿ, ವಿಜಾಪುರ, ಬಾಗಲಕೋಟ ಜಿಲ್ಲೆಗಳಲ್ಲಿ ಜೈನ ಚತುರ್ಥರಲ್ಲಿ ಮಾತ್ರ ವ್ಯಾಪಕವಾಗಿ ಆಚರಣೆಯಲ್ಲಿವೆ. ಹಳೆಯ ಮೈಸೂರು, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಾಗೀ ಜೈನ ಪಂಚಮ (ವ್ಯಾಪಾರಿ ಕುಲ) ಸಮಾಜಗಳಲ್ಲಿ ಇನ್ನೂ ಜಾರಿಯಲ್ಲಿ ಬಂದಿಲ್ಲ. ಇದಕ್ಕೆ ಬಹುಶಃ ಜೈನ ಪಂಚಮ ಸಮಾಜವು ಜೈನ ಚತುರ್ಥ ಸಮಾಜಕ್ಕಿಂತ ಆರ್ಥಿಕವಾಗಿ ಸದೃಢವಾಗಿರುವದು ಮತ್ತು ಆ ಸಮಾಜದಲ್ಲಿ ಸೊಸೆಯಂದಿರಿಗೆ ಚತುರ್ಥ ಸಮಾಜದಲ್ಲಿ ಇರುವಷ್ಟು ಕಿರುಕುಳ ಇಲ್ಲವಾಗಿದ್ದು ಹೆಣ್ಣು ಸಿಗುವದು ಸುಲಭವಾಗಿರುವುದು ಇದಕ್ಕೆ ಕಾರಣವಾಗಿರಬೇಕು. ಅಲ್ಲದೆ ಜೈನ ಚತುರ್ಥ ಸಮಾಜದಲ್ಲಿ ಇನ್ನೂ ಅನಕ್ಷರಸ್ಥ ಅತ್ತೆಯರು ಇರುವದು, ಸೊಸೆಯಂದಿರ ಶೋಷಣೆ ನಡೆಯುತ್ತಲೇ ಇರುವದು ಕಾರಣವಾಗಿ ಮದುವೆ ನಿಶ್ಚಿತಾರ್ಥ ಮಾಡಿ ಕೆಲವು ದಿನ ಬಿಡುವ ಧೈರ್ಯ ಇಲ್ಲದಿರುವದು ಈ ದಿಢೀರ್ ಮದುವೆ ನಡೆಯಲು ಕಾರಣವಾಗಿದೆ. ಇಂತಹ ಮದುವೆಗಳು ರಾತ್ರಿ ಹತ್ತು ಅಥವಾ ಹನ್ನೆರಡು ಗಂಟೆಯ ವರೆಗೂ ನಡೆಯುತ್ತಿವೆ. ಗೋಧೂಳಿ ಮುಹೂರ್ತ, ಶಾಸ್ತ್ರ, ಹೋಮ-ಹವನಗಳನ್ನು ನೆಚ್ಚಿಕೊಂಡು ಬಹಳಷ್ಟು ವಿಧಿ ವಿಧಾನಗಳಿಂದ ತಮ್ಮ ಮಕ್ಕಳನ್ನು ಮದುವೆ ಮಾಡಲು ಲುತ್ಸುಕರಾಗಿದ್ದ ಜೈನಸಮುದಾಯ ಎಲ್ಲ ಮೂಹೂರ್ತಗಳನ್ನು ಧಿಕ್ಕರಿಸಿ ತಮ್ಮ ಮಗನಿಗೆ ಹೆಣ್ಣು ಸಿಕ್ಕರೆ ಸಾಕು ಎನ್ನುವ ಹಂತಕ್ಕೆ ಬರಲು ಕಾರಣರಾಗಿರುವ ಮಹಿಳೆಯರು ಇಂದು ಅಪರ ಒತ್ತಡದಲ್ಲಿ ಇದ್ದಾರೆ. ಏಕೆಂದರೆ ಚತುರ್ಥ ಜೈನಸಮುದಾಯವು ಒಕ್ಕಲುತನವನ್ನೇ ತಮ್ಮ ಆರ್ಥಿಕ ಮೂಲವನ್ನಾಗಿಸಿಕೊಂಡು ಇಷ್ಟು ದಿನ ಜೀವನ ಸಾಗಿಸುತ್ತ ಬಂದಿದೆ. ಒಕ್ಕಲುತನವೆಂದರೆ ಎತ್ತು ಎಮ್ಮೆ ಹೊಲ ಮನಿ ಎನ್ನುತ್ತ ಸದಾ ಕಠಿಣವಾದ ಕೆಲಸದಲ್ಲಿ ಆ ಮನೆಗೆ ಬಂದ ಸೊಸೆ ತೊಡಗಬೇಕಾಗುತ್ತದೆ. ಇಂತಹ ಕೆಲಸ ಮಾಡಲು ಇಂದಿನ ಆಧುನಿಕ ಹುಡುಗಿಯರು ಒಪ್ಪುತ್ತಿಲ್ಲ. ಪರಿಣಾಮ ಏನಾಗಿದೆ ಎಂದರೆ ನೌಕರಿ ಇರುವ ವರ ಮಹಾಶಯನಿಗೆ ಮೊದಲ ಆದ್ಯತೆ. ಏಕೆಂದರೆ ನಗರಗಳಲ್ಲಿ ಆರಾಮವಾಗಿ ಇರಬಹುದು ಎನ್ನುವ ಕಾರಣ ಒಂದಾದರೆ, ಅಲ್ಲಿ ಹೊಲ ಮನೆ ಬಿಟ್ಟು ಅತ್ತೆಯಾದವಳು ಬರುವುದಿಲ್ಲ ಎನ್ನುವದು ನಿಜವಾದ ಕಾರಣವಾಗಿದೆ. ವ್ಯಾಪಾರ ಎರಡನೆಯ ಆದ್ಯತೆಯಾಗಿದೆ. ವ್ಯಾಪಾರ ಕೂಡಾ ನಗರ ವಲಯದಲ್ಲಿಯೇ ನಡೆದರೂ ಅದು ಅತಂತ್ರವಾದ ಉದ್ಯೋಗವಾಗಿದೆ. ಯಾವಾಗ ಬೇಕಾದರೂ ಹಾನಿ ಸಂಭವಿಸಿ ಬದುಕು ಅತಂತ್ರವಾಗಬಹುದು ಎನ್ನುವ ತರ್ಕ ಇದರ ಹಿಂದೆ ಇದೆ. ಇನ್ನು ಮೂರನೆ ಪ್ರಕಾರವಾದ ಒಕ್ಕಲುತನ ಮಾಡುವ ವರನಿಗೆ ಹೆಣ್ಣು ಸಿಗಲಾರದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಆತ ಎಷ್ಟೇ ಶ್ರೀಮಂತನಾಗಿದ್ದರೂ ಕೂಡಾ ಗ್ರಾಮದಲ್ಲಿಯೇ ಬೆಳೆದ ಕನ್ಯೆ ತಿರುಗಿ ಗ್ರಾಮದಲ್ಲಿಯೇ ವಾಸಿಸುವ ವರನನ್ನು ತಿರಸ್ಕರಿಸತೊಡಗಿದ್ದಾಳೆ. ಇದು ಮಲಹಿಳೆಯ ದಿಗ್ವಿಜಯವೇ? ಉತ್ತರವಿಲ್ಲ!

೧೧) ಸೋಡಪತ್ರ – ಬಿಡುಗಡೆ:

ಜೈನಸಮಾಜದಲ್ಲಿ ಹೆಣ್ಣಿನ ಅಭಾವ ಉಂಟಾಗಿರುವ ಸಂಗತಿ ಜಗಜ್ಜಾಹೀರ ಆಗಿರುವದರಿಂದ ಮನೆಗೆ ಸೊಸೆಯಾಗಿ ಬಂದ ಹೆಣ್ಣು ಮಗಳು ಅಲ್ಲಿಯ ವ್ಯವಸ್ಥೆ ಸರಿಹೋಗದಿದ್ದರೆ ಆ ಮನೆಯನ್ನು ಮತ್ತು ಗಂಡನನ್ನು ಯಾವುದೇ ಅಳುಕು ಇಲ್ಲದೆ ಬಿಟ್ಟು ಹೋಗುವದು ಈಗ ಪ್ರಾರಂಭವಾಗಿದೆ. ಹಾಗೆ ಸೋಡಪತ್ರವನ್ನು ಕೊಟ್ಟು ತವರು ಮನೆ ಸೇರಿದ ಅವಳನ್ನು ಅದೇ ದಿನ ಇನ್ನೊಬ್ಬರು ಬಂದು ಮದುವೆ ಆಗುತ್ತಿರುವದು ಈಗ ನಡೆದಿದೆ. ಹೀಗಾಗಿ ಸೊಸೆಯಾಗಿ ಬರುವವಳನ್ನು ಜೋಪಾನವಾಗಿ ನೋಡಿಕೊಂಡು ಹೋಗಬೇಕಾದ ನಾಜೂಕಿನ ಪರಿಸ್ಥಿತಿಯನ್ನು ಜೈನಸಮಾಜ ತನ್ನ ಮೇಲೆ ಹಾಕಿ ಕೊಂಡಿದೆ. ಏಕೆಂದರೆ ಹೆಣ್ಣಿನ ಅಭಾವ ಎಷ್ಟಿದೆ ಎಂದರೆ ಹೆಣ್ಣು ಗಂಡು ಗೊತ್ತುಪಡಿಸುವ ಸಂದರ್ಭದಲ್ಲಿ ಹೆಣ್ಣಿನ ಮನೆಯಲ್ಲಿ ಅಲ್ಪ ಸ್ವಲ್ಪ ಸಾಲ ಇದ್ದರೆ (ಲಕ್ಷ, ಎರಡು ಲಕ್ಷ) ಅದನ್ನು ಹರಿದು ಕನ್ಯೆಗೆ ಬೇಕಾದ ರೇಶ್ಮೆ ಸೀರೆ, ವಸ್ತ್ರ, ಒಡವೆಗಳನ್ನೆಲ್ಲಾ ಗಂಡಿನ ಕಡೆಯವರೇ ಮಾಡಿಸಿ ಮದುವೆಯನ್ನೂ (ಯಾದಿ ಮೇ ಶಾದಿ) ಕೂಡಾ ತಾವೆ, ಮಾಡಿ ಮನೆ ತುಂಬಿಸಿಕೊಳ್ಳುತ್ತಿದ್ದಾರೆ.

ಬಹಳ ಹಿಂದೆ ಹೆಣ್ಣಿಗೆ ತೆರವು ಕೊಟ್ಟು ಮನೆ ತುಂಬಿಸಿಕೊಳ್ಳುವ ಒಂದು ವ್ಯವಸ್ಥೆ ಜೈನ ಸಮಾಜದಲ್ಲಿ ಇತ್ತು. ಹೆಣ್ಣಿಗೆ ಕೊಡಬೇಕಾದ ತೆರವು ಹಣ ಕೊಡುವುದು ಸಾಧ್ಯವಾಗದೆ ಆಜನ್ಮ ಮದುವೆಯಾಗದೇ ಉಳಿದಿದ್ದ ಮುದುಕರನ್ನು ಕೆಲವು ವರ್ಷಗಳ ಹಿಂದೆ ಊರಿಗೆ ಒಂದಿಬ್ಬರನ್ನಾದರೂ ನೋಡಬಹುದಾಗಿತ್ತು. ನಂತರ ಹೆಣ್ಣು ಸಂತತಿ ಹೆಚ್ಚಾಗಿ ತೆರವು ಬದಲಾಗಿ ವರದಕ್ಷಿಣೆ ಜಾರಿಯಲ್ಲಿ ಬಂದ ಮೇಲೆ ಸೊಸೆಯಂದಿರನ್ನು ಸೋಡಪತ್ರ ಕೊಟ್ಟು ಬಿಡುವದು, ಕಾಡಿಸುವದು, ವಧೂದಹನ, ಉರುವಲು ಹಾಕಿ ಕೊಲ್ಲುವುದು, ಬಾವಿಯಲ್ಲಿ ಕಾಲು ಜಾರಿ ಬಿದ್ದು ಸತ್ತಳು ಎನ್ನುವದು ನಡೆದವು. ಆಗ ಕಾಲ ಹೇಗಿತ್ತು ಎಂದರೆ ಯಾರದೇ ಮನೆಯ ಸೊಸೆ ಸತ್ತ ಸುದ್ದಿ ಕೇಳಿ ಮನೆತನದ ಕ್ರೌರ್ಯವನ್ನು ಮನಗಾಣದೆ ಮತ್ತೆ ಅದೇ ಮನೆಗೆ ಮತ್ತೊಬ್ಬ ತಂದೆ-ತಾಯಿ ತಮ್ಮ ಮಗಳನ್ನು ಮದುವೆ ಮಾಡಿಕೊಡುತ್ತಿದ್ದರು. ಇದರಿಂದ ಸಮಾಜದಲ್ಲಿ ಹೆಣ್ಣಿನ ಗೋಳನ್ನು ಯಾರೂ ಪರಿಗಣಿಸುವ ಗೋಜಿಗೆ ಹೋಗದೆ ಬೆಳೆದು ನಿಂತ ತಮ್ಮ ಮಗಳನ್ನು ಹೇಗಾದರೂ ಎಲ್ಲಿಯಾದರೂ ದಾಟಿಸುವ ಉಪಾಯವನ್ನು ಮಾತ್ರ ಸಮಾಜದ ಜನ ಯೋಚಿಸುತ್ತಿದ್ದರು. ಪರಿಣಾಮ, ಸೊಸೆಯಂದಿರನ್ನು ಕೊಂದು ಹಾಕಿದವರು ಅವರ ಸಾವಿನಿಂದ ಯಾವ ಶಿಕ್ಷೆಯನ್ನೂ ಅನುಭವಿಸದೆ ಮತ್ತೊಂದು ಸೊಸೆಯನ್ನು ಪಡೆದುಕೊಂಡು ಮತ್ತೆ ಲಾಭದ ಕಡೆಗೆ ಮುಖ ಮಾಡುತ್ತಿದ್ದರು. ಈಗ ಕಾಲ ತಿರುವು ಮುರುವು ಆಗಿದೆ. ಈಗ ನಿಧಾನವಾಗಿ ಸದ್ದಿಲ್ಲದೆ ಮತ್ತೆ ತೆರವು ನೀಡುವ ಅನಿವಾರ್ಯತೆಗೆ ಜೈನ ಸಮಾಜ ಬಂದು ನಿಂತಿದೆ. ಇದಕ್ಕೆಲ್ಲ ಕಾರಣವಾಗಿದ್ದುದು ಜೈನ ಸಮಾಜದ ಮಹಿಳೆಯರ ಆಶೆಬುರುಕುತನ. ಸೊಸೆಯಾದವಳು ಎಲ್ಲವನ್ನೂ ತಂದು ಕೊಡಬೇಕು. ಇಲ್ಲವಾದರೆ ತೊಂದರೆ ಅನುಭವಿಸಬೇಕು ಎನ್ನುವ ಅನೀತಿ ಇತ್ತು. ಅದರ ಶಾಪ ಈಗ ಎಲ್ಲರನ್ನೂ ತಟ್ಟತೊಡಗಿದೆ. ಇದರಿಂದ ಸಮಾಜ ಜಾಗ್ರತವಾಗಿದೆ ಎನ್ನುವುದು ಸುಳ್ಳು. ಆದರೆ ಮದುವೆ ಆಗುವ ಹೆಣ್ಣು ಮಕ್ಕಳಿಗೆ ಆಯ್ಕೆಯ ಸ್ವಾತಂತ್ಯ್ರ ಸಿಕ್ಕಿದೆ ಅಷ್ಟೆ. ಕಾಲಚಕ್ರದ ಈ ಬದಲಾವಣೆ ಮತ್ತೊಮ್ಮೆ ಹೆಣ್ಣು-ಗಂಡುಗಳ ಅನುಪಾತದಲ್ಲಿ ಹೆಣ್ಣುಗಳ ಸಂಖ್ಯೆ ಹೆಚ್ಚಾದರೆ ಮತ್ತೊಮ್ಮೆ ಹಿಂದಿನ ಕಾಲದ ಕ್ರೌರ್ಯ ಮರುಕಳಿಸಬಹುದು.

ಇದೇ ಸಂದರ್ಭದಲ್ಲಿ ಗಂಡಿನ ಅಭಾವ ಇದ್ದಾಗ ಉಡುಕಿ ಮದುವೆ ಆಗುತ್ತಿದ್ದವು ಎನ್ನುವುದನ್ನು ನೆನಪಿಸಿಕೊಂಡು, ಆ ಉಡುಕಿ ಮದುವೆಯ ವಿಧಿ-ವಿಧಾನ ಬಗ್ಗೆ ಕೆಲವು ಮಾತುಗಳನ್ನು ಇಲ್ಲಿ ಬರೆಯಬೇಕಾಗಿದೆ. ಏಕೆಂದರೆ ಮಹಿಳಾ ಶೋಷಣೆ ಎನ್ನುವದು ಹಲವು ಮುಖ. ಅಂತಹ ಹಲವಾರು ಮುಖಗಳ ರಾಕ್ಷಸರೂಪದ ಚಿತ್ರಣವನ್ನು ಸ್ವಲ್ಪಾದರೂ ನಾವು ನೋಡಿದರೆ ಮಹಿಳಾ ಜಗತ್ತು ಅನುಭವಿಸುತ್ತಿದ್ದ ಯಾತನೆಯ ಪರಿಚಯವಾಗುತ್ತದೆ.

೧೨) ಉಡುಕಿ ಮದುವೆ:

ಉಡುಕಿ ಮದುವೆ ಈಗ ಇಲ್ಲವಾಗಿದ್ದಾಗಲೂ ಕೂಡಾ ನಮ್ಮ ಜೈನ ಮಹಿಳೆಯರಲ್ಲಿ ಬಹಳ ಹಿಂದೆಯೇ ಉಡುಕಿಯಾಗಿರುವವರು ಈಗಲೂ ಸಿಗುತ್ತಾರೆ. ಅವರ ಅನುಭವವನ್ನು ಈ ಲೇಖಕ ಕಿವಿಯಾರೆ ಕೇಳಿದ್ದಾನೆ. ಈ ಕಾಲಘಟ್ಟದಲ್ಲಿರುವ ನನಗೆ ಅಂತಹ ಮದುವೆಯನ್ನು ನೋಡುವದು ಸಾಧ್ಯವಾಗಿಲ್ಲ ಮತ್ತು ಅದು ಸಂಪೂರ್ಣ ಮಹಿಳಾ ಜಗತ್ತಿನ ಖಾಸಗಿ ಕಾರ್ಯಕ್ರಮದಂತೆ ನಡೆಯುವದರಿಂದ ಉಡುಕಿಯಾದ ಗಂಡಸನ ಹೊರತಾಗಿ ಯಾರೂ ನೋಡಲು ಸಾಧ್ಯವಿಲ್ಲ. ಗಂಡ ಸತ್ತ ವಿಧವೆಯನ್ನು ಹುಡುಕಿ ಮಾಡುವ ದಿನ ಒಂದು ನಿಶ್ಚಿತ ಸ್ಥಳಕ್ಕೆ ರಾತ್ರಿ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಅವಳನ್ನು ಮದುವೆಯಾಗುವ ವಿಧುರ ಗಂಡಸನ್ನು ಬಿಟ್ಟು ಯಾರೂ ಇರುವದಿಲ್ಲ. ಮದುವೆ ಮಾಡಿಸುವವರೆಲ್ಲಾ ಗಂಡ ಸತ್ತವರೇ ಆಗಿರುತ್ತಾರೆ. ಮಂತ್ರ ಇಲ್ಲ. ಮೂಹೂರ್ತವಿಲ್ಲ. ಆ ಹುಡುಗಿಯನ್ನು ಜಳಕ ಮಾಡಿಸಿ ಹೊಸ ಬಟ್ಟೆ ತೊಡಿಸುತ್ತಾರೆ. ಹೊಸ ಬಟ್ಟೆ ಇಲ್ಲದಿದ್ದರೂ ನಡೆಯುತ್ತದೆ. ಅದಾದ ಮೇಲೆ ಹಿರಿಯ ವಿಧವೆಯೊಬ್ಬಳು ಉಡುಕಿಯಾಗುವವಳ ಮುಂಗುರಳನ್ನು ಕತ್ತರಿಯಿಂದ ಕತ್ತರಿಸುತ್ತಾಳೆ. ಮಲ್ಲಿಗೆ ಹೂವಿನ ದಂಡೆಯ ಬದಲು ಹಳದಿ ಬಣ್ಣದ ಹೂವಿನ ದಂಡೆಯನ್ನು ಅವಳಿಗೆ ಮುಡಿಸುತ್ತಾರೆ. ಹೊಸ ಬಳೆಗಳನ್ನು ತೊಡಿಸುತ್ತಾರೆ. ಆ ಇಡೀ ಮನೆಯಲ್ಲಿ ಗಂಡನಾಗುವವನನ್ನು ಬಿಟ್ಟರೆ ಎಲ್ಲರೂ ಹೆಂಗಸರೇ ಇರುತ್ತಾರೆ. ಅದೂ ಅವರೆಲ್ಲ ಗಂಡ ಸತ್ತವರೇ ಆಗಿರುತ್ತರೆ. ಎಲ್ಲ ಕತ್ತಲೆಯಲ್ಲಿ ನಡೆಯುವದರಿಂದ ಯಾವದೇ ಅದ್ದೂರಿ ಅಲ್ಲಿ ಇರುವದಿಲ್ಲ. ನಗೆ ಇಲ್ಲ, ಮಾತಿಲ್ಲ. ಅವನು ಅವಳಿಗೆ ತಾಳಿ ಕಟ್ಟಿದ ಮೇಲೆ ಮದುವೆ ಮುಗಿದು ಹೋಯಿತು. ಅದೇ ಮನೆಯಲ್ಲಿ ಅದೇ ವೇಳೆಯಲ್ಲಿ ತಾಳಿ ಕಟ್ಟಿದ ಗಂಡ ಸಂಸಾರ ಸುರು ಮಾಡುತ್ತಾನೆ.

ಮರುದಿನದಿಂದ ಅವಳು ಆ ಮನೆಯ ಒಡತಿಯಾಗುತ್ತಾಳೆ. ಅಲ್ಲಿಂದ ಆಕೆ ಯಾವುದೇ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ. ಅಷ್ಟೇ ಏಕೆ, ಎಲ್ಲವನ್ನೂ ತ್ಯಾಗ ಮಾಡಿದ ಜೈನ ನಿರ್ಗ್ರಂಥ ಸ್ವಾಮಿಗಳೂ ಕೂಡಾ ಅಂತಹ ಮಹಿಳೆಯಿಂದ ಆಹಾರ ತೆಗೆದುಕೊಳ್ಳುವುದಿಲ್ಲ. (ಈ ಜೈನಮುನಿಗಳು ಉಡುಕಿಯಾದ ಹೆಣ್ಣು ಮಗಳಿಂದ ಆಹಾರ ಪಡೆಯುವದಿಲ್ಲ ಮತ್ತು ಯಾವುದಾದರೂ ಮಹಿಳೆಗೆ ಬಿಳಿ ತೊನ್ನು, ಚರ್ಮ ರೋಗ ಆಗಿದ್ದರೆ ಅಂಥವಳಿಂದಲೂ ಕೂಡಾ ಜೈನಮುನಿಗಳು ಆಹಾರವನ್ನು ತೆಗೆದುಕೊಳ್ಳುವದಿಲ್ಲ. ಗಂಡ ಸಾಯುವದು, ತೊನ್ನು ರೋಗ ಬರುವದು ಇತ್ಯಾದಿಗಳಿಗೆ ಮಹಿಳೆಯನ್ನು ಹೊಣೆ ಮಾಡುವದು ಎಷ್ಟರ ಮಟ್ಟಿಗೆ ಸರಿ? ಇವರಿಂದ ಆಹಾರವನ್ನು ತೆಗೆದುಕೊಂಡರೆ ಅದು ಧರ್ಮಕ್ಕೆ ಹೇಗೆ ಚ್ಯುತಿಯನ್ನು ತರುತ್ತದೆ? ಇದನ್ನು ಈ ವರೆಗೂ ಯಾರೂ ಕೇಳಲು ಹೋಗಿಲ್ಲ ಎನ್ನುವದನ್ನು ನೋಡಿದರೆ ಜೈನಧರ್ಮ ಮಹಿಳೆಯರನ್ನು ಹೇಗೆ ಲಘುವಾಗಿ ನೋಡುತ್ತದೆ ಎನ್ನುವದು ತಿಳಿಯುತ್ತದೆ.) ಹಾಗೆ ಉಡಿಕಿಯಾದ ಮಹಿಳೆ ಹದಿನೆಂಟರಿಂದ ಇಪ್ಪತ್ತು ವರ್ಷದವಳಿರುತ್ತಾಳೆ. ಅದಾಗಲೇ ತನ್ನ ಗಂಡನಿಗೆ ಮೊದಲನೆಯ ಹೆಂಡತಿಯಿಂದ ಮಕ್ಕಳಾಗಿರುತ್ತವೆ. ಅದೆಲ್ಲವನ್ನು ನಿಭಾಯಿಸುತ್ತ, ವಯಸ್ಸಾದ ಗಂಡನೊಂದಿಗೆ ಅವಳು ಬಾಳ್ವೆ ಮಾಡುತ್ತ ಹೋಗುವಾಗ ಬದುಕಿನ ಕ್ಷಣ ಕ್ಷಣಕ್ಕೂ ಅನುಭವಿಸುವ ಹಿಂಸೆ ಬಹಳ ದೊಡ್ಡದಾಗಿರುತ್ತದೆ. ಆದರೆ ಈಗ ಎಲ್ಲ ಬದಲಾವಣೆಯಾಗಿದೆ. ಕಾಲಚಕ್ರ ತನ್ನ ಒಂದು ಸುತ್ತು ತಿರುಗಿದೆ.

ಡ) ಗೊಂಚಲು ಮುತ್ತೈದೆ:

ಇದಕ್ಕೆ ಬ್ರಾಹ್ಮಣರು ಹಿತ್ತಲಗೊರಚಿ ಎನ್ನುತ್ತಾರೆ. ದಲಿತ ಸಮುದಾಯದವರು ಸುವರ್ಣ ಮುತ್ತೈದೆ ಎನ್ನುತ್ತಾರೆ. ಜೈನರು ಗೊಂಚಲು ಮುತ್ತೈದೆ ಎನ್ನುತ್ತಾರೆ. ಅಂದರೆ ಗಂಡ ಇದ್ದು ತಾಳಿ ಹೊಂದಿದವಳು ಮುತ್ತೈದೆ ಎನಿಸಿಕೊಂಡರೆ ಗೊಂಚಲ ಮುತ್ತೈದೆಗೆ ವಿಶೇಷವಾದ ಮರ್ಯಾದೆ ಇದೆ. ಗೊಂಚಲ ಮುತ್ತೈದೆ ಹಾಗೆಂದರೇನು? ಮುತ್ತೈದೆಯಾದವಳಿಗೆ ಆಕೆಯ ಗಂಡ, ಗಂಡನ ತಂದೆ ಮತ್ತು ತಾಯಿ (ಅತ್ತೆ-ಮಾವ) ತೀರಿಕೊಂಡಿರಬಾರದು. ಅಲ್ಲದೆ ಅವಳ ತವರುಮನೆಯಲ್ಲಿ ಅವಳ ತಾಯಿ ಮತ್ತು ತಂದೆ ಜೀವಂತವಾಗಿರಬೇಕು. ಅಲ್ಲದೆ ಅವಳಿಗೆ ಮಕ್ಕಳಾಗಿದ್ದರೆ ಯಾವ ಮಕ್ಕಳೂ ಸತ್ತಿರಬಾರದು ಮತ್ತು ಗಂಡನ ಮನೆಯಲ್ಲಿ ಅಣ್ಣ-ಅಕ್ಕ, ತಮ್ಮ-ತಂಗಿ ಇವರು ಹುಟ್ಟಿದ್ದರೆ ಅವರಾರೂ ಸತ್ತಿರಬಾರದು. ಅಂತಹ ಮಹಿಳೆ ಗೊಂಚಲು ಮುತ್ತೈದೆ ಎನಿಸಿಕೊಳ್ಳುತ್ತಾಳೆ. ಬೆಳಗಾಂವ ಜಿಲ್ಲೆಯ ಚತುರ್ಥ ಜೈನ ಸಮಾಜದಲ್ಲಿ ಗೊಂಚಲ ಮುತ್ತೈದೆಗೆ ವಿಶೇಷವಾದ ಮಾನ, ಸಮ್ಮಾನಗಳಿವೆ.

ಮಹಿಳೆ – ಧರ್ಮ, ಸಮಾಜ ಮತ್ತು ತತ್ವದ ಹಿನ್ನೆಲೆಯಲ್ಲಿ ಕಾಣುವಂತೆ:

೧ ಜೈನ ಧರ್ಮ ಮತ್ತು ಮಹಿಳೆ:

ಜೈನಧರ್ಮ ಅಹಿಂಸೆಯನ್ನು ತನ್ನ ಧರ್ಮದ ಪ್ರಧಾನ ಪ್ರಣಾಳಿಕೆಯನ್ನಾಗಿ ಮಾಡಿಕೊಂಡು ಹಿಂಸೆಯನ್ನು ತ್ಯಜಿಸಿದ ಧರ್ಮವೆಂದು ಪ್ರಚಾರದಲ್ಲಿದೆ. ಸಕಲ ಜೀವಗಳಲ್ಲಿ ಮಿತ್ರಭಾವವನ್ನು ಹೊಂದಬೇಕು ಎನ್ನುತ್ತದೆ. ತನ್ನ ನಿತ್ಯ ಸಾಮಾಯಿಕ ಪಾಠದಲ್ಲಿ ಇದೇ ಮಂತ್ರವನ್ನು ಎಲ್ಲರೂ ಹೇಳುತ್ತಾರೆ. ಆದರೆ ಮಹಿಳೆಯರ ಬಗ್ಗೆ ಜೈನಧರ್ಮ ಬಹಳ ಕೀಳಾದ ವಿಚಾರಗಳನ್ನು ಹೇಳಿದೆ. ಜೈನರು ನಿತ್ಯ ಪಾರಾಯಣ ಮಾಡುವ ಗ್ರಂಥಗಳಾದ ರತ್ನಕರಂಡಕ ಶ್ರಾವಕಾಚಾರ, ಆತ್ಮಾನುಶಾಸನ ಇತ್ಯಾದಿ ಗ್ರಂಥಗಳಲ್ಲಿ ಸ್ತ್ರೀಯರ ಬಗ್ಗೆ ಬಹಳ ಖೇದಕರವಾದ ಸಂಗತಿಗಳನ್ನು ಹೇಳಲಾಗಿದೆ. ಸ್ವಾಮಿ ಗುಣಭದ್ರಾಚಾರ್ಯರು ರಚಿಸಿದ ಆತ್ಮಾನುಶಾಸನವನ್ನು ಜೈನರಾದ ಮಹಿಳೆ ಮತ್ತು ಪುರುಷ ಇಬ್ಬರೂ ಬಹಳ ಶ್ರದ್ಧೆಯಿಂದ ಓದುತ್ತಾರೆ. ಆದರೆ ಅದರಲ್ಲಿ ಮಹಿಳೆ ನಮ್ಮನ್ನು ಧರ್ಮಭ್ರಷ್ಟಳನ್ನಾಗಿ ಮಾಡುವ ವಿಷಸರ್ಪ ಎಂದು ಬಣ್ಣಿಸಲಾಗಿದೆ. ಸ್ತ್ರೀಯರ ದೇಹದಲ್ಲಿ ಅಪಾರ ವಿಷ ತುಂಬಿಕೊಂಡಿದೆ ಎನ್ನುತ್ತದೆ ಆ ಗ್ರಂಥ.

ಈ ಪ್ರಬಂಧವು ಮಹಿಳೆಯ ಕುರಿತು ಎಲ್ಲ ಆಯಾಮಗಳನ್ನು ಅಧ್ಯಯನ ಮಾಡುವದಿಂರ ಆತ್ಮಾನುಶಾಸನ ದಲ್ಲಿಯ ಕೆಲವು ಪದ್ಯಗಳನ್ನು ಇಲ್ಲಿ ಉಲ್ಲೇಖಿಸುವದು ಉಚಿತ ಎಂದು ಭಾವಿಸಿದ್ದೇನೆ. ಆತ್ಮಾನುಶಾಸನ ಒಟ್ಟು ೨೭೦ ಪದ್ಯಗಳನ್ನು ಹೊಂದಿದೆ. ಅದರಲ್ಲಿ ಆರು ಪದ್ಯಗಳು ಸ್ತ್ರೀಯರ ಬಗ್ಗೆ ಇವೆ. ಆ ಆರೂ ಪದ್ಯಗಳು ಸ್ತ್ರೀಯರನ್ನು ಅತ್ಯಂತ ಕೆಡಕಿನ ಪ್ರಾಣಿಗಳೆಂದು ಚಿತ್ರಿಸುತ್ತವೆ. ಪುರುಷನ ಏಳ್ಗೆಯನ್ನು ಹಾಳು ಮಾಡಲೆಂದೇ ಸ್ತ್ರೀ ಬಂದಿದ್ದಾಳೆ ಎನ್ನುತ್ತದೆ. ಪುರುಷ ಒಬ್ಬ ಅಸಹಾಯಕ ಕೂಸಿದ್ದಾಗ ಅವನನ್ನು ಎತ್ತಿ ಬೆಳೆಸಿದವಳು ಅವನ ಏಳ್ಗೆಗೆ ಹೇಗೆ ಮಾರಕವಾಗುತ್ತಾಳೆ? ಇದನ್ನು ಯೋಚಿಸದೆ ಶಾಸ್ತ್ರದಲ್ಲಿ ಕೆಟ್ಟ ರೀತಿಯಿಂದ ವರ್ಣನೆಗೆ ಒಳಪಟ್ಟಿರುವದು ವಿಪರ್ಯಾಸವಾಗಿದೆ. ಅದರಲ್ಲಿಯ ೧೨೬ನೆ ಪದ್ಯದಲ್ಲಿ ಹೀಗೆ ಹೇಳಲಾಗಿದೆ.

ಮಿಥ್ಯಾ ದೃಷ್ಟಿ…… …… …….. ……… ……….. ……… ………
ಸ್ತ್ರೀರೂಪೇಣ ವಿಷಂ ಹಿ ಕೇವಲಮತಸ್ತದ್ಗೋಚರಂ ಮಾಸ್ಮ ಗಾಃ || ೧೨೬ ||

ಅದೆಷ್ಟೋ ಜನರು ಅನೇಕ ವಿಷಜಾತಿ ಹಾವುಗಳಿವೆ ಎನ್ನುತ್ತಾರೆ. ಆದರೆ ಅದು ಸುಳ್ಳು. ಆ ವಿಷವನ್ನು ನಾನು ಸ್ತ್ರೀಯರಲ್ಲಿ ನೋಡಿದ್ದೇನೆ. ಸ್ತ್ರೀಯರ ಕಣ್ಣನೋಟದಿಂದ ಜನರ ಸರ್ವಾಂಗಗಳು ದಹಿಸಿ ಹೋಗುತ್ತವೆ. ಅವರು ಸ್ತ್ರೀರೂಪದಿಂದ ವಿಷದ ಪುಂಜವೇ ಆಗಿದ್ದಾರೆ. ಆದುದರಿಂದ ನೀನು ಅವರ ದೃಷ್ಟಿಗೆ ಗೋಚರವಾಗಬೇಡ.

ಹನ್ಯಃ ಸ್ತ್ರೀಭುಜಗಾಃ ಪುರೇಹ ಚ ಮುಹುಃ ಕ್ರುದ್ಧಾಃ ಪ್ರಸನ್ನಾಸ್ತಥಾ.
ಯೋಗೀಂದ್ರಾನಪಿ ತಾನ್ನಿರೌಷಧ್ವಿಷಾ ದೃಷ್ಟಾಶ್ಚ ದೃಷ್ಟಾಪಿ ಚ |೧೨೭||

ಹಾವುಗಳ ವಿಷವನ್ನು ಇಳಿಸಲು ಜಗತ್ತಿನಲ್ಲಿ ಔಷಧಿಯನ್ನು ಕಂಡು ಹಿಡಿಯಲಾಗಿದೆ. ಆದರೆ ಸ್ತ್ರೀ ಎಂಬ ಹಾವಿನ (ಸ್ತ್ರೀಭುಜಗಃ) ವಿಷವನ್ನು ಅಳಿಸಿ ಹಾಕುವ ಔಷಧಿ ಈ ಜಗತ್ತಿನಲ್ಲಿಯೇ ಇಲ್ಲ. ಅವರು ಯಾರ ಕಡೆಗೆ ನೋಡುತ್ತಾರೆ ಮತ್ತು ಅವರನ್ನು ಯಾರು ನೋಡುತ್ತಾರೆ ಅವರೆಲ್ಲರನ್ನೂ ಅವಳು ಸಾಯಿಸಿ ಬಿಡುತ್ತಾಳೆ.

……..  . . .  ……..  . . .  … .  . . .  . . … . .
ಸ್ತ್ರೀಭಿಃ ಸ್ತ್ರಿಯೋ ಹಿ ವಿಷಂ ವಿಷಮ್‌||೧೩೫||

ಸ್ತ್ರೀಯರೇ ಇತರ ಎಲ್ಲ ವಿಷಗಳಿಗಿಂತಲೂ ವಿಷಮತರವಾದ ವಿಷವಿದ್ದಾರೆ.

ಇನ್ನೊಂದು ಪದ್ಯದಲ್ಲಿ ಸ್ವಾಮಿ ಗುಣಭದ್ರಾಚಾರ್ಯರು ಸ್ತ್ರೀಯರ ಅಂಗಾಂಗಗಳು ಹೇಗೆ ಕಾಮರೂಪವಾಗಿವೆ? ಹೇಗೆ ಹೇಯವಾಗಿವೆ? ಹೇಗೆ ಮನಸ್ಸನ್ನು ಸೆಳೆಯುವಲ್ಲಿ ಕುಟಿಲತನವನ್ನು ಮಾಡುತ್ತವೆ? ಎಂದು ವಿಸ್ತಾರವಗಿ ಹೇಳುತ್ತಾರೆ. ಸ್ತ್ರೀಯರ ಯೋನಿಯು ಕಾಮರೂಪದ ಮಹಾ ಸರ್ಪದ ಬಿಲವಾಗಿದೆ (ಮಾಹುರ್ಬುಧಾ ಜಘನರಂಧ್ರಮಧಃ ಸುದತ್ಯಾಃ) ಎನ್ನುತ್ತಾರೆ. ಇಂತಹ ಹಲವಾರು ಪದ್ಯಗಳನ್ನು ರಚಿಸುವ ಮೂಲಕ ಮಹಿಳೆಯರನ್ನು ಹೇಯವಾಗಿ ಕಾಣಲಾಗಿದೆ. ಅವರ ೧೩೪ ನೆಯ ಪದ್ಯದಲ್ಲಿ ಸ್ತ್ರೀಯ ಯೋನಿಸ್ಥಾನವು ಮನುಷ್ಯನ ಜನ್ಮಭೂಮಿಯಾಗಿರುವುದರಿಂದ ಅವಳು ತಾಯಿಯಾಗಿದ್ದಾಳೆ ಎಂದು ಮನ್ನಿಸುತ್ತೇನೆ (ಜನಸ್ಯ ಜನನೀಂ ಪ್ರಾಗ್ಜನ್ಮಭೂಮಿಂ ಚ…) ಎನ್ನುತ್ತಾರೆ. ಇಂಥವೆ ಧಾರ್ಮಿಕ ಸಾಹಿತ್ಯವನ್ನು ಧರ್ಮದ ತತ್ವವನ್ನಾಗಿ ಬೋಧಿಸಲಾಗುತ್ತದೆ. -ಕರೇಮಿ ಬಂಥೇ ಸಮಾಯಿಮಮ್-ಎಲ್ಲ ಜೀವಿಗಳ ಮೇಲೆ ಸಮಭಾವವನ್ನು ನನಗೆ ನೀಡು ಎಂದು ನಿತ್ಯ ಸಾಮಾಯಿಕ ಪಾಠವನ್ನು ಪಠಿಸುವ ಜೈನಧರ್ಮ ಮಹಿಳೆಯರನ್ನು ವಿಷಪೂರಿತ ಹಾವುಗಳು ಎನ್ನುವಂತೆ ಚಿತ್ರಿಸಿರುವದು ವಿಚಿತ್ರವಾಗಿದೆ. ಆದರೆ ಅದೇ ಜೈನ ಕವಿಗಳು ಜೈನಧರ್ಮದ ಸ್ತ್ರೀಯರ ಈ ವಿಚಾರಕ್ಕೆ ಪ್ರತಿಯಾಗಿ, ಸ್ತ್ರೀ ರೂಪೇಣ ರೂಪಂ, ಸುರತ ಗಂಧಮೇ ಗಂಧಂ (ನೇಮಿಚಂದ್ರ ಲೀಲಾವತಿ ಕಾವ್ಯ) ಎಂದು ಸ್ತ್ರೀಯ ದೇಹವನ್ನು ಕೂಡಾ ಮನ್ನಿಸಿ ಕಾವ್ಯ ಬರೆದಿದ್ದಾರೆ ಎನ್ನುವ ಸಂಗತಿ ಸಮಾಧಾನವನ್ನು ಕೊಡುತ್ತದೆ.

೨ ಜೈನ ಮಹಿಳೆ: ಕೌಟುಂಬಿಕ ಸ್ಥಾನ ಮಾನ.

ಜೈನ ಕುಟುಂಬಗಳಲ್ಲಿ ಮಹಿಳೆಗೆ ಇರುವ ಸ್ಥಾನ ಮಾನಗಳು ಒಟ್ಟು ಭಾರತೀಯ ಮನೋಭಾವಕ್ಕೆ ಹೊರತಾಗೇನೂ ಇಲ್ಲ. ಹೊರಗಿನಿಂದ ಬಂದ ಸೊಸೆಯನ್ನು ತನ್ನ ಅಧಿಕಾರವನ್ನು ಕಿತ್ತುಕೊಳ್ಳಲೇ ಬಂದವಳು ಎನ್ನುವಂತೆ ಅತ್ತೆ ಕಾಣುತ್ತಾಳೆ. ಅದೇ ಮನೆಯಲ್ಲಿ ಹುಟ್ಟಿ ಈಗ ಗಂಡನ ಮನೆಯನ್ನು ಕಂಡು ಬಂದ ಅಥವಾ ಇನ್ನೂ ಗಂಡನ ನಿರೀಕ್ಷೆಯಲ್ಲಿ ಮನೆಯಲ್ಲಿಯೇ ಉಳಿದಿರುವ ನಾದಿನಿಯರಿಗೆ ಅವಳ ಬದುಕು ಇರುಸು ಮುರುಸು ಉಂಟುಮಾಡುವಂತಹದ್ದಾಗಿದೆ. ತನ್ನ ಮನೆಯಲ್ಲಿಯ ಸ್ವಾತಂತ್ಯ್ರವನ್ನು ಹೀಗೆ ಬಂದವಳು ತನ್ನ ಮುಂದೆಯೇ ಕಿತ್ತುಕೊಳ್ಳುವದನ್ನು ಅವರು ಕಣ್ಣಾರೆ ನೋಡುತ್ತ ಸಹಿಸದೆ ಅವಳ ಮೇಲೆ ವಿನಾಕಾರಣ ದ್ವೇಷವನ್ನು ಮನಸ್ಸಿನಲ್ಲಿ ಮಾಡಿಕೊಳ್ಳುತ್ತಾರೆ. ಮತ್ತು ತನ್ನ ಅವ್ವ (ಅತ್ತೆ) ನೊಂದಿಗೆ ಗುಪ್ತವಾಗಿ ಮಾತಾಡುತ್ತಾ ಅವಳನ್ನು ಪರಕೀಯವಾಗಿ ನೋಡತೊಡಗುತ್ತಾರೆ. ಒಕ್ಕಲುತನ ಮಾಡುವ ಮನೆ ಮತ್ತು ಅವಿಭಕ್ತ ಕುಟುಂಬದಲ್ಲಿ ಮಹಿಳೆಗೆ ಕಡಿಮೆ ಸ್ವಾತಂತ್ಯ್ರವಿದೆ. ಉತ್ತರ ಕರ್ನಾಟಕದ ಜೈನ ಚತುರ್ಥ ಕುಟುಂಬಗಳಲ್ಲಿ ಮತ್ತು ದಕ್ಷಿಣ ಕನ್ನಡ ಮಲೆನಾಡಿನ ಜೈನ ಕುಟುಂಬಗಳಲ್ಲಿ ಒಕ್ಕಲುತನವೇ ಪ್ರದಾನವಾದ ಆದಾಯದ ಮೂಲವಾಗಿರುವುದರಿಂದ ಅಲ್ಲೆಲ್ಲಾ ಮಹಿಳೆಯರೇ ಕೆಲಸ, ಕಾರ್ಯವನ್ನು ಮಾಡುತ್ತಾರೆ. ಅದಕ್ಕಾಗಿ ಸಾಧ್ಯವಾದಷ್ಟು ಅವರು ಅವಿಭಕ್ತ ಕುಟುಂಬವಾಗಿ ಇರಲು ಇಚ್ಛಿಸುತ್ತಾರೆ. ಏಕೆಂದರೆ ಒಕ್ಕಲುತನಕ್ಕೆ ಹೆಚ್ಚು ಜನರು ಬೇಕು. ಹೊಲಗಳಲ್ಲಿ ಎಮ್ಮೆ, ಆಕಳು ಇತ್ಯಾದಿ ಜಾನುವಾರುಗಳ ನಿರ್ವಹಣೆ, ಆಳು-ಕಾಳುಗಳಿಗೆ ಊಟದ ವ್ಯವಸ್ಥೆ, ಹಾಲು-ಹೈನುಗಳ ನಿರ್ವಹಣೆ, ಆಳು-ಕಾಳುಗಳಿಗೆ ಊಟದ ವ್ಯವಸ್ಥೆ. ಹಾಲು-ಹೈನುಗಲ ನಿರ್ವಹಣೆ, ಹೊಲದಿಂದ ಬರುವ ಹುಟ್ಟುವಳಿಗಳನ್ನು ಒಪ್ಪವಾಗಿ ಇಡುವ ಕೆಲಸ, ಮನೆಗೆ ಬಂದು ಹೋಗುವವರು ಉಪಚಾರ ಇತ್ಯಾದಿಗಳಲ್ಲಿ ಹೆಂಗಸರದೇ ಪಾತ್ರ ಇರುತ್ತದೆ. ಹಾಲು, ಬೆಣ್ಣೆ, ಮೊಸರು, ತುಪ್ಪಗಳು ಒಕ್ಕಲುತನದ ಉಪ ಉತ್ಪನ್ನಗಳಾಗಿವೆ. ಗಂಡಸರು ಹಾಲನ್ನು ಹೊಲದಿಂದ ತಂದು ಮನೆಯ ಹೆಂಗಸರ ಹತ್ತಿರ ಕೊಟ್ಟರೆ ಸಾಕು. ಅದನ್ನು ಕಾಯಿಸಿ ಮುತುವರ್ಜಿಯಿಂದ ಹೆಪ್ಪು ಹಾಕಿ ಮುಂಜಾನೆ ಮೊಸರು ಮಜ್ಜಿಗೆ ಬೆಣ್ಣೆಗಳನ್ನು ತೆಗೆದು ತಿಂದು, ಉಳಿದದ್ದನ್ನು ಮಾರಿ ಬಂದ ಹಣವನ್ನು ಮನೆಯ ಮೇಲು ಖರ್ಚಿಗಾಗಿ ಹಣ ಸಂಗ್ರಹಿಸಲಾಗುತ್ತದೆ. ಈ ಕೆಲಸಗಳೆಲ್ಲ ಒಲೆಯ ಮುಂದೆ ಮತ್ತು ಅಡಿಗೆ ಮನೆಯಲ್ಲಿ ನಡೆಯಬೇಕಾಗಿದ್ದರಿಂದ ಹೆಂಗಸರೇ ಮಾಡ ಬೇಕಾಗುತ್ತದೆ.

ಇನ್ನು ಹೊಲದಲ್ಲಿ ಬೆಳೆದ ಬಾಡ ಜೀನಸುಗಳು, ಕಾಯಿಪಲ್ಲೆ, ಹಣ್ಣು-ಹಂಪಲುಗಳು ಇತ್ಯಾದಿಗಳನ್ನು ಮಾರಲು ಹೆಂಗಸರೇ ಹೋಗಬೇಕಾಗುತ್ತದೆ. ಹಾಗೆ ಕುಳಿತು ಮಾರಿ ಬಂದ ಹಣದಲ್ಲಿ ಸ್ವಲ್ಪ ಸ್ವಲ್ಪವಾಗಿ ತಮ್ಮ ಸ್ವಂತಕ್ಕೆ ಇಟ್ಟುಕೊಂಡು ಗುಪ್ತವಾಗಿ ಊರ ಹೆಂಗಸರೊಂದಿಗೆ ಬಡ್ಡಿ ವ್ಯಾಪಾರ ಮಾಡಿ ಹಣ ಗಳಿಸಿಕೊಂಡು ಗಂಡಸರಿಗೆ ಗೊತ್ತಾಗದಂತೆ ಬಂಗಾರ, ಸೀರೆ ಇತ್ಯಾದಿಗಳನ್ನು ಕೊಂಡುಕೊಳ್ಳುತ್ತಾರೆ. ಅದು ಅಕಸ್ಮಾತ್‌ಗಂಡಸರಿಗೆ ಗೊತ್ತಾಗಿ ಹೋದರೆ ಸೋಡಪತ್ರದ ತನಕ ಆ ಜಗಳ ನಿಲ್ಲುವುದಿಲ್ಲ. ಹೀಗೆ ಹಣ ಮಾಡಿಕೊಳ್ಳುವ ಹೆಂಗಸು ಆ ಮನೆಯಲ್ಲಿ ಹಿರಿಯಳಾಗಿದ್ದರೆ (ಹಿರಿ ಸೊಸೆ ಅಥವಾ ಅತ್ತೆ ಅಥವಾ ಗಂಡನನ್ನು ಬಿಟ್ಟು ಬಂದ ನಾದಿನಿ) ಅವಳ ಅಧಿಕಾರಕ್ಕೇನೂ ತೊಂದರೆ ಬರಲಾರದು. ಆದರೆ ಅವಳು ಕುಟುಂಬದಲ್ಲಿ ಚಿಕ್ಕ ಸೊಸೆಯಾಗಿದ್ದರೆ (ಅವಳಿಗೆ ಅರವತ್ತು ವರ್ಷವಾದರೂ ಮನೆಯಲ್ಲಿ ಹಿರಿ ಸೊಸೆ ಇದ್ದರೆ ಅವಳು ಚಿಕ್ಕವಳು) ಸ್ವತಂತ್ರವಾಗಿ ಹಣ ಮಾಡಿಕೊಳ್ಳುವಂತಿಲ್ಲ.

ಆದರೆ ವಿಭಕ್ತ ಕುಟುಂಬಗಳಲ್ಲಿ ಮಹಿಳೆಗೆ ಸ್ವಲ್ಪ ಸ್ವಾತಂತ್ಯ್ರ ಇರುತ್ತದೆ. ಏಕೆಂದರೆ ಅಲ್ಲಿ ಗಂಡ ಮತ್ತು ತನ್ನ ಮಕ್ಕಳು ಮಾತ್ರ ಇರುತ್ತಾರೆ. ಅದಕ್ಕಾಗಿಯೇ ಜೈನ ಸಮಾಜದ ಹೆಣ್ಣು ಕೊಟ್ಟ ಎಲ್ಲರೂ ಗಂಡನ ಮನೆಗೆ ತನ್ನ ಮಗಳು ಹೋದ ಕೂಡಲೆ, ಅವಳು ತನ್ನ ಗಂಡನೊಂದಿಗೆ ಅತ್ತೆ-ಮಾವನಿಂದ ಬಿಡಿಸಿಕೊಂಡು ಬೇರೆ ವಗೆತನ ಮಾಡಬೇಕು ಎಂದು ಬಯಸುತ್ತಾರೆ. ಇದರಿಂದಲೇ ಅನೇಕ ಜಗಳಗಳಾಗುತ್ತವೆ. (ಅಣ್ಣಾರಾಯರ ನಿಸರ್ಗ ಕಾದಂಬರಿಯಲ್ಲಿ ಕೂಡಾ ಸುಂದರಾ ತನ್ನ ಮಗಳು ತಾರಾ ಮತ್ತು ಭರಮ ಅತ್ತೆಯಿಂದ ಬ್ಯಾರೆ ಆಗಿ ನಿಲ್ಲಲಿ ಎಂದು ಆಶಿಸುತ್ತಾಳೆ) ಕಾದಂಬರಿಯಲ್ಲಿ ಅದು ಸಾಧ್ಯವಾಗುವುದಿಲ್ಲ. ನಿಜ ಜೀವನದಲ್ಲಿ ಕೂಡಾ ಇದು ಅಸಾಧ್ಯವಾದ ಮಾತಾಗಿದೆ. ಏಕೆಂದರೆ ಬಹುತೇಕ ಜೈನ ಹುಡುಗರು ತನ್ನ ಹೆಂಡತಿಯ ಮಾತಿಗಿಂತ ತನ್ನ ತಾಯಿಯ ಮಾತನ್ನೇ ಶಿರಸಾವಹಿಸಿ ಪಾಲಿಸುತ್ತಾರೆ. ಅಂತಹ ಒಂದು ಭಾವನಾತ್ಮಕವಾದ ಕರುಳುಬಳ್ಳಿಯ ಪ್ರೀತಿಯನ್ನು ಆ ತಾಯಿ ತನ್ನ ಮಕ್ಕಳ ಮೇಲೆ ಹಾಕಿ ಬೆಳೆಸಿರುತ್ತಾಳೆ. ಮೇಲುನೋಟಕ್ಕೆ ಇದರಲ್ಲಿ ಏನು ತಪ್ಪು? ಮಗ ತಾಯಿಯ ಮಾತು ಕೇಳುವದು ನ್ಯಾಯವಲ್ಲವೇ? ಎನಿಸುತ್ತದೆ. ಆದರೆ ಅದೆಲ್ಲಾ ತಿಳಿವಳಿಕೆ ಇದ್ದ ತಾಯಿಯಾಗಿದ್ದರೆ ಸೊಸೆ ಬಜಾವಾಗುತ್ತಾಳೆ. ಇಲ್ಲವಾದರೆ ಅವಳು ಅದೇ ತಾಯಿಯಿಂದ ನಾನಾ ತರಹದ ಕಷ್ಟವನ್ನು ಅನುಭವಿಸುತ್ತಾಳೆ.

ಜೈನ ಕುಟುಂಬಗಳಲ್ಲಿ ಅತ್ತೆ (ಮನೆಯ ಹಿರಿಯಳು) ನಾದಿನಿಯರಿಗೆ (ಅವಳು ಬೇರೆ ಮನೆಗೆ ಹೋಗುವವಳಾಗಿದ್ದರಿಂದ) ಮರ್ಯಾದೆಯ ಸ್ಥಾನವಿದೆ. ಸೊಸೆ ಯಾವತ್ತೂ ಆ ಮನೆಗೆ ಹೊರಗಿನಿಂದ ಬಂದವಳೇ ಆಗಿ ಉಳಿಯುತ್ತಾಳೆ. ಎಷ್ಟೋ ಮನೆತನಗಳಲ್ಲಿ (ಈ ಲೇಖಕ ನೋಡಿ ಮನೆಗಳಲ್ಲಿ) ಅತ್ತೆ-ನಾದಿನಿಯರು ಮನೆಯ ಸೊಸೆಯರೊಂದಿಗೆ ಊಟಕ್ಕೆ ಕೂಡುವುದಿಲ್ಲ. ಇಂತಹ ಮಾನಸಿಕ ಹಿಂಸೆಯನ್ನು ಸೊಸೆಯಾದವಳು ಅನುಭವಿಸುತ್ತಲೇ ಸಂಸಾರ ಸಾಗಿಸುತ್ತಾಳೆ. ಅವಳಿಗೆ ಆ ಮನೆಯಲ್ಲಿ ಗಂಡನೊಬ್ಬನೆ ಆಧಾರ ಸ್ಥಂಭ. ಆದರೆ ಮಾವ ಮಾತ್ರ ಯಾವತ್ತೂ ಸೊಸೆಯ ಬೆಂಬಲಕ್ಕೆ ಇರುತ್ತಾನೆ. ಆದರೆ ಅವನು ಹೊರಗೆ ಹೆಚ್ಚು ಇರುವುದರಿಂದ ಸೊಸೆಗೆ ಆಗುವ ಈ ಬಗೆಯ ದಿನನಿತ್ಯದ ಕಿರಿ ಕಿರಿ ಅವನಿಗೆ ಕಾಣಿಸುವುದಿಲ್ಲ.

ಕುಟುಂಬಗಳಲ್ಲಿ ನ್ಯಾಯ ನೀಡುವವನು ಗಂಡಸೇ ವಿನಾ ಮನೆಯ ಹಿರಿಯಳಾದ ತಾಯಿಯಲ್ಲ. ತಾಯಿಯಾದವಳು ತನ್ನ ಮಗನಿಗೆ ಹೀಗೆ ಮಾಡಬಹುದಾಗಿತ್ತು ಎಂದು ಒಂದು ಬಗೆಯ ಗೊಣಗಾಟದ ಸಲಹೆಯನ್ನು ನೀಡಬಹುದೇ ವಿನಾ ಸರಿ-ತಪ್ಪುಗಳನ್ನು ಮನೆಯ ಗಂಡಸೇ ನಿಭಾಯಿಸುತ್ತಾನೆ. ಮಿರ್ಜಿ ಅಣ್ಣಾರಾಯರ ರಾಷ್ಟ್ರ ಪುರುಷ ಕಾದಂಬರಿಯಲ್ಲಿ ಮನೆಯ ಹಿರಿಯಳಾಗಿ ಆದಗೌಡನ ತಾಯಿ ಇರುತ್ತಾಳೆ. ಆದರೂ ಅಲ್ಲಿ ಏನಿದ್ದರೂ ಆದಗೌಡನದೆ ಅಂತಿಮ ತೀರ್ಮಾನವಾಗಿರುತ್ತದೆ. ಇದು ಪ್ರತಿಯೊಂದು ಜೈನ ಕುಟುಂಬಗಳಲ್ಲಿ ಮಹಿಳೆಯ ಸ್ಥಾನವು ಅಡುಗೆ ಮಾಡುವದು ಮತ್ತು ಮಕ್ಕಳನ್ನು ಜೋಪಾನ ಮಾಡುವದಕ್ಕೆ ಮಾತ್ರ ಮೀಸಲು. ಇನ್ನುಳಿದಂತೆ ಹೊಲ ಖರೀದಿ, ವ್ಯಾಪಾರ, ವಹಿವಾಟು ಇತ್ಯಾದಿಗಳಲ್ಲಿ ಮಹಿಳೆಯ ಪಾತ್ರ ಏನೂ ಇಲ್ಲ. ಮಹಿಳೆಗೆ ಗಂಡ ಸತ್ತಿದ್ದರೆ ಅವಳ ಮಗ ಎಷ್ಟೇ ಚಿಕ್ಕವನಾಗಿದ್ದರೂ ಕೂಡಾ ಮನೆಯ ವ್ಯವಹಾರ-ಮುಖ್ಯವಾಗಿ ಆರ್ಥಿಕವಾದ ಕೊಡು ಕೊಳ್ಳುವಿಕೆ ಇತ್ಯಾದಿ–ಯನ್ನು ಆ ಸಣ್ಣ ಮಗನೆ ಮಾಡುತ್ತಾನೆಯೇ ವಿನಾ ಆ ಮನೆಯ ಹಿರಿಯ ಜೀವಿ ತಾಯಿಯಲ್ಲ.

ಶ್ರೀಮಂತ ಕುಟುಂಬಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವೇನೂ ಇಲ್ಲ. ತಿನ್ನಲು ಉಣ್ಣಲು ಯಾವ ತೊಂದರೆ ಇರದಿದ್ದರೂ ಕೂಡಾ ಮಹಿಳೆಗೆ ಅಲ್ಲಿ ಯಾವುದೇ ಸ್ವಾತಂತ್ಯ್ರವಿಲ್ಲ. ಅವಳು ತನ್ನ ಅಡುಗೆ ಮನೆ ಮತ್ತು ಪಡಸಾಲೆಯನ್ನು ಬಿಟ್ಟು ಹೊರಗೆ ಬರಲಾರದ ಸ್ಥಿತಿ ಇರುತ್ತದೆ. ಮನೆಯ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುವವನು ಗಂಡಸೇ  ಆಗಿರುವುದರಿಂದ ಆ ಮನೆತನ ಎಷ್ಟೇ ಶ್ರೀಮಂತವಾಗಿದ್ದರೂ ಕೂಡಾ ಮಹಿಳೆಯ ಕೈಯಲ್ಲಿ ಹಣ ಇಲ್ಲದ್ದರಿಂದ ಸಣ್ಣ ಪುಟ್ಟ ಅವಶ್ಯಕತೆಗಳಿಗಾಗಿ ಅವಳು ಪುರುಷನನ್ನೇ ಎದುರು ನೋಡಬೇಕಾಗುತ್ತದೆ. ಅದಕ್ಕಾಗಿ ಜೈನ ಮಹಿಳೆಯರು ಹೆಚ್ಚು ಹೆಚ್ಚು ಬಸದಿ, ಜಿನಪೂಜೆ, ಜಿನ ಶಾಸ್ತ್ರಗಳ ಅಧ್ಯಯನದಲ್ಲಿ ತೊಡಗಿಕೊಳ್ಳುತ್ತಾ, ತಮ್ಮ ಒಳಗಿನ ಏಕಾಂತವನ್ನು ಮರೆಯಲು ಪ್ರಯತ್ನಿಸುತ್ತಾರೆ. ಜಿನಮಂದಿರಗಳು ಅವರಿಗೆ ಬಿಡುಗಡೆಯ ದಾರಿಗಳಂತೆ ಕಾಣಿಸುತ್ತವೆ. ಮನೆಯಲ್ಲಿಯ ಉಸಿರುಗಟ್ಟಿಸುವ ವಾತಾವರಣದಿಂದ ಸ್ವಲ್ಪ ಮಟ್ಟಿನ ಬಿಡುಗಡೆಯನ್ನು ಅಲ್ಲಿ ಅವರು ಪಡೆಯುತ್ತಾರೆ.

ವ್ಯಾಪಾರಿ ಕುಲವಾದ ಪಂಚಮ ಜೈನ ಸಮಾಜದಲ್ಲಿಯ ಮಹಿಳೆಯರ ಸ್ಥಿತಿ ಇನ್ನೂ ವಿಚಿತ್ರವಾಗಿದೆ. ವ್ಯಾಪಾರವೆಂದರೆ ನಗರವಲಯದಲ್ಲಿಯೇ ಮನೆ ಮಾಡ ಬೇಕಾಗುತ್ತದೆ. ಮುಂದೆ ಅಂಗಡಿ, ಹಿಂದೆ ಮನೆ ಮಾಡಿ ಇಂತಹ ಇಕ್ಕಟ್ಟಾದ ಮನೆಯಲ್ಲಿ ಏಕಾಂತವಾಗಿ ಇರಬೇಕಾಗುತ್ತದೆ. ಜೈನ ಮಹಿಳೆಯರು ಅಂಗಡಿಯಲ್ಲಿ ಕುಳಿತು ವ್ಯಾಪಾರವನ್ನು ಮಾಡುವದು ಬಹುತೇಕ ಸಾಧ್ಯವಿಲ್ಲ. ವ್ಯಾಪಾರ ಮಾಡುತ್ತ ಪೇಟೆಯಲ್ಲಿ ಕಾಲ ಕಳೆದರೆ ಅಲ್ಲಿ ಬೇರೆ ಗಂಡಸರ ಸಂಪರ್ಕ ಬರುವದನ್ನು ತಪ್ಪಿಸಲಿಕ್ಕೆ ಆಗುವುದಿಲ್ಲವಾದ್ದರಿಂದ ಅವರನ್ನು ವ್ಯಾಪಾರಕ್ಕಾಗಿ ಅಂಗಡಿಗೆ ಕಳಿಸುವುದಿಲ್ಲ.

ಈ ನಿಟ್ಟಿನಲ್ಲಿ ಒಕ್ಕಲುತನ ಮಾಡುವ ಜೈನ ಚತುರ್ಥ ಮಹಿಳೆ ತಾನು ತನ್ನ ಹೊಲದಲ್ಲಿ ಬೆಳೆದ ಬಾಡ ಜೀನಸುಗಳನ್ನು ಹಾಗೂ ಮೊಸರು ಬೆಣ್ಣೆ ತುಪ್ಪಗಳನ್ನು ಮಾರುವದಕ್ಕಗಿ ಸಂತೆಗೆ ಹೋಗುತ್ತಾಳೆ. ಅಷ್ಟು ಸ್ವಾತಂತ್ಯ್ರ ಕೂಡಾ ಈ ಪಂಚಮ ಜೈನ ಮಹಿಲೆಗೆ ಇರುವುದಿಲ್ಲ. ಇಂತಹ ಮಹಿಳೆ ನಗರಗಳಲ್ಲಿ ವಾಸಿಸುವಾಗ ಮನೆಯೊಂದು ಕಡೆ, ಅಂಗಡಿಯೊಂದು ಕಡೆ ಇದ್ದರೆ ಗಂಡ ವ್ಯಾಪಾರಕ್ಕಾಗಿ ಪೇಟೆಗೆ ಹೋದರೆ ಆತ ಬರುವದು ರಾತ್ರಿ ಹತ್ತು ಗಂಟೆಗೆ. ಅಲ್ಲಿಯ ವರೆಗೂ ಮಹಿಳೆ ಚಡಪಡಿಸುತ್ತಾ ಟೀವಿ ನೋಡುತ್ತಾ, ಜೈನ ಭಜನೆಗಳನ್ನು ಹಾಡುತ್ತಾ, ಜಪ ಮಾಡುತ್ತ ಕಾಲ ಕಳೆಯುತ್ತಾಳೆ. ಏಕೆಂದರೆ ನಗರಗಳಲ್ಲಿ ಜೈನಕುಟುಂಬಗಳು ಒಂದೇ ಕಡೆಗೆ ಇರುವದಿಲ್ಲ ಮತ್ತು ವ್ಯಾಪಾರದ ದೃಷ್ಟಿಯಿಂದ ಅವರು ಬೇರೆಯವರೊಂದಿಗೆ ಬೆರೆಯುವುದಿಲ್ಲ. ಮಕ್ಕಳ ಲಾಲನೆ ಪಾಲನೆ ಮಾಡುತ್ತ ಮನೆಯ ಒಳಗೆಯೇ ಬಂಧಿಯಂತೆ ಬದುಕುತ್ತಾರೆ. ಆ ಊರಿಗೆ ಸ್ವಾಮಿಗಳು ಬಂದರೆ, ಹಬ್ಬ, ಪರ್ವ, ನೋಂಪಿ ಇತ್ಯಾದಿಗಳು ಬಸದಿಯಲ್ಲಿ ನಡೆದರೆ ಮಹಿಳೆ ಅತ್ಯಂತ ಉತ್ಸಾಹದಿಂದ ಅದರಲ್ಲಿ ಭಾಗಿಯಾಗುತ್ತಾಳೆ. ಹಬ್ಬ, ಪರ್ವಗಳು ಅವಳಿಗೆ ಬಿಡುಗಡೆಯ ದಾರಿಗಳಂತೆ ಕಾಣಿಸುತ್ತವೆ. ಈ ಹೆಣ್ಣುಮಕ್ಕಳ ಮೈ ಮೇಲೆ ಬಂಗಾರ, ಅತ್ಯುತ್ತಮ ರೇಶಿಮೆ ಸೀರೆ ಇದ್ದರೂ ಕೂಡಾ ಆರ್ಥಿಕ ಸ್ವಾತಂತ್ಯ್ರ ಇವರಿಗೂ ಇಲ್ಲ. ಇಲ್ಲಿಯೂ ಕೂಡಾ ಆರ್ಥಿಕ ವ್ಯವಹಾರವನ್ನು ಗಂಡಸೇ ನೋಡಿಕೊಳ್ಳುತ್ತಾನೆ.

ಇನ್ನು ಚತುರ್ಥ ಜೈನ ಮಹಿಳೆಯರು ಒಕ್ಕಲುತನವನ್ನು ತಮ್ಮ ಕಾಯಕ ಮಾಡಿಕೊಂಡಿದ್ದರಿಂದ ಹೊಲ ಇದ್ದವರು ತಮ್ಮ ಹೊಲದಲ್ಲಿಯೇ ಕೆಲಸ ಮಾಡುತ್ತಾರೆ. ಹೊಲ ಇಲ್ಲದವರು ಕೂಲಿ ಮಾಡಲು ಬೇರೆಯವರ ಹೊಲಕ್ಕೆ ಹೋಗುತ್ತಾರೆ. ಜೈನರು ಬಂಗಾರ ವ್ಯಾಪಾರಿಗಳು, ಶ್ರೀಮಂತರು ಎನ್ನುವ ವಿಚಾರವೇ ಬಹಳ ಮಂದಿಗೆ ತಿಳಿದಿದೆ. ಆದರೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಮಹಾರಾಷ್ಟ್ರದಲ್ಲಿ ಕೂಲಿಕಾರ ಜೈನರು ಇದ್ದಾರೆ. ನಿತ್ಯ ದುಡಿದು ಬಂದ ಕೂಲಿಯ ಹಣದಲ್ಲಿಯೇ ಜೀವನ ಸಾಗಿಸುವವರು ಬಹಳ ಇದ್ದಾರೆ. ಇವರಲ್ಲಿ ಬಡತನ ಇದೆ. ಬದುಕಿನ ಹೋರಾಟ ಇದೆ. ಆದರೆ ಸ್ವಾತಂತ್ಯ್ರವಿದೆ. ಗಂಡ-ಹೆಂಡತಿ ಕೂಡಿಯೇ ಬೇರೆಯವರ ಹೊಲಕ್ಕೆ ಕೂಲಿ ಹೋಗಿ ಇದ್ದುದರಲ್ಲಿಯೇ ಬದುಕು ಸಾಗಿಸುತ್ತಾರೆ. ಇಲ್ಲಿ ಮಹಿಳೆ ಹೊರಜಗತ್ತಿನಲ್ಲಿ ಬದುಕು ಮಾಡುತ್ತಿರುವದರಿಂದ ಶ್ರೀಮಂತ ಕುಟುಂಬಗಳಲ್ಲಿ ಇರುವಂತೆ ಉಸಿರುಗಟ್ಟಿಸುವ ವಾತಾವರಣ ಇರುವುದಿಲ್ಲ. ತಾನು ಕೂಲಿಗೆ ಹೋಗಿ ತಂದ ಹಣವನ್ನು ತನಗೆ ಬೇಕಾದಂತೆ ಖರ್ಚು ಮಾಡುವ ಸ್ವಾತಂತ್ಯ್ರ ಇವರಲ್ಲಿ ಇದೆ. ಜೈನರ ಹಬ್ಬಗಳಷ್ಟೇ ಅಲ್ಲದೆ ಅನ್ಯದೇವರುಗಳ ಪೂಜಾವಿಧಿ-ವಿಧಾನಗಳಲ್ಲಿ :ಈ ಮಹಿಳಾ ಗುಂಪು ಭಾಗವಹಿಸುತ್ತದೆ. ಕೂಲಿ ಮಾಡಿ ಬದುಕು ನಿರ್ವಹಿಸುವದರಿಂದ ಜೈನರ ಧಾರ್ಮಿಕ ಪರ್ವಗಳ ಕಡ್ಡಾಯ ಆಚರಣೆ ಇವರಿಗೆ ಅನ್ವಯಿಸುವುದಿಲ್ಲ.

ಉದಾ:- ಜೈನರು ರಾತ್ರಿ ಊಟ ಮಾಡುವಂತಿಲ್ಲ. ಜೈನರು ಪಾಲಿಸಲೆ ಬೇಕಾದ ಅಷ್ಟ ಮೂಲಗುಣ ವ್ರತಗಳಲ್ಲಿ ಈ ರಾತ್ರಿ ಭೋಜನ ತ್ಯಾಗ ಅತ್ಯಂತ ಮಹತ್ವದ್ದಾಗಿದೆ. ಏನಿದ್ದರೂ ಸೂರ್ಯನ ಬೆಳಕಲ್ಲಿಯೇ ಊಟ ಮಾಡಬೇಕು. ಹನ್ನೆರಡು ತಿಂಗಳು ಈ ವ್ರತವನ್ನು ಪಾಲಿಸುವದು ಸಾಧ್ಯವಾಗದಿದ್ದರೆ ಚಾತುರ್ಮಾಸ( ಮಳೆಗಾಲದ ನಾಲ್ಕು ತಿಂಗಳು) ದ ಕಾಲಾವಧಿಯಲ್ಲಿಯಾದರೂ ಕಡ್ಡಾಯವಾಗಿ ಮಾಡಲೇಬೇಕು ಮತ್ತು ಮುಂಜಾನೆ ಬಸದಿಗೆ ಹೋಗಿಯೇ ತನ್ನ ನಿತ್ಯಜೀವನದ ಕಾರ್ಯ-ಕಲಾಪಗಳನ್ನು ಮಾಡಬೇಕು ಎನ್ನುವ ನಿಯಮವಿದೆ ಮತ್ತು ಹಾಗೆ ಮಾಡುವ ಮಹಿಳೆಗೆ ಸಮಾಜದಲ್ಲಿ ಆದರವಿದೆ.

ಆದರೆ ಕೂಲಿ ಹೋಗುವ ಮಹಿಳೆ ಇದೆಲ್ಲವನ್ನೂ ಪಾಲಿಸುವುದಿಲ್ಲ. ಮನೆಯ ಕೆಲಸ ಮಾಡಿ ಇನ್ನೊಬ್ಬರ ಹೊಲಕ್ಕೆ ಕೂಲಿ ಹೋಗಬೇಕಾಗಿರುವುದರಿಂದ ಬಸದಿಗೆ ಹೋಗುವದು ಸಾಧ್ಯವಿಲ್ಲ ಮತ್ತು ಸಂಜೆ ಯಾವಾಗ ಮನೆಗೆ ಬರಬೇಕಾಗುತ್ತದೆಯೋ ತಿಳಿಯದು. ಅದಕ್ಕಾಗಿ ರಾತ್ರಿ ಭೋಜನ ತ್ಯಾಗದ ವ್ರತವನ್ನು ಇವರಿಗೆ ನಡೆಸಿಕೊಡಲು ಸಾಧ್ಯವಿಲ್ಲ. ಹಾಗೆಂದು ಸಮಾಜ ಇವರಿಗೆ ರಿಯಾಯತಿಯನ್ನೇ ನೀಡಿಲ್ಲ. ಸಮಾಜದ ಉಳಿದ ಮನೆತನದ ದೃಷ್ಟಿಯಲ್ಲಿ ಇವರಿಗೆ ಕಡಿಮೆ ಸ್ಥಾನವನ್ನು ಸಾಮಾಜಿಕವಾಗಿ ಜನ ಕೊಟ್ಟಿರುತ್ತಾರೆ. ಇವರ ವೇಷ-ಭೂಷಣಗಳು ಸಾದಾ ಇರುತ್ತವೆ. ಊರಲ್ಲಿಯ ಅನ್ಯ ದೇವರುಗಳಿಗೂ ಇವರು ಭಕ್ತಿಯನ್ನು ಸಲ್ಲಿಸುತ್ತಿರುತ್ತಾರೆ. ಹೊಲದಲ್ಲಿ ಕೂಲಿಮಾಡಿ ಮಧ್ಯಾಹ್ನದಲ್ಲಿ ಎಲ್ಲರೂ ಕುಳಿತು ಊಟ ಮಾಡುವಾಗ ಸರೀಕ ಕೂಲಿಕಾರ ಮಹಿಳೆಯರು ತಂದ ಊಟದ ಜೀನಸುಗಳನ್ನು ಅದಲು ಬದಲು ಮಾಡಿ ತಿನ್ನುತ್ತಾರೆ. ಒಂದು ಅರ್ಥದಲ್ಲಿ ಜಾತ್ಯತೀತವಾಗಿ ಇವರು ಬದುಕುತ್ತಾರೆ. ಜೈನ ಹಬ್ಬಗಳಾದ ಮಹಾವೀರ ಜಯಂತಿ ಇತ್ಯಾದಿಗಳಲ್ಲಿ ಇವರು ಭಾಗವಹಿಸುತ್ತಾರೆಯಾದರೂ ಕೂಡಾ ಅಲ್ಲಿ ಇವರೊಂದಿಗೆ ಉಳಿದ ಜೈನಮಹಿಳೆಯರು ಸರಿಯಾಗಿ ಬೆರೆಯುವುದಿಲ್ಲ. ಈ ತಾರತಮ್ಯವು ಕಣ್ಣಿಗೆ ಕಾಣುವಷ್ಟು ಇರುತ್ತದೆ.