. ಸೂತಕಗಳು:

ಮದುವೆ ಹಾಗೂ ಮನೆಯಲ್ಲಿ ಮಗಳು ಋತುಮತಿಯಾದಾಗ ಮಾಡುವ ಕಾರ್ಯಕ್ರಮಗಳು ಹಾಗು ಸೀಮಂತ ಕಾರ್ಯಗಳು ಹೆಚ್ಚೂ ಕಡಿಮೆ ಗ್ರಾಮೀಣ ಪ್ರದೇಶದಲ್ಲಿ ಬೇರೆ ಬೇರೆ ಸಮಾಜಕ್ಕಿಂತ ಭಿನ್ನವಾಗೇನೂ ನಡೆಯುವುದಿಲ್ಲ. ಇತ್ತೀಚೆಗೆ ಕೆಲಸದ ಒತ್ತಡದಿಂದ ಮನೆಯಲ್ಲಿ ಕನ್ನೆ ಋತುಮತಿಯಾದಾಗ ಸಾಂಪ್ರದಾಯಿಕವಾಗಿ ಮಾಡುವ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿದೆ. ಇಲ್ಲವಾದರೆ ಋತುಮತಿಯಾದ ಹುಡುಗಿಯನ್ನು ಮಂಚದ ಮೇಲೆ ಕೂಡ್ರಿಸಿ ಮೂರು ದಿನ ಇಲ್ಲವೆ ಏಳು ದಿನಗಳವರೆಗೆ ಹಾಡುವ, ಉಡಿ ತುಂಬ ಕಾರ್ಯಗಳು ನಡೆಯುತ್ತಿದ್ದವು. ಇದೊಂದು ತೀರ ಹೆಣ್ಣು ಮಕ್ಕಳ ಖಾಸಗಿ ಕಾರ್ಯಕ್ರಮದಂತೆ ನಡೆಯುತ್ತಿತ್ತು.

ಋತುಮತಿಯಾದ ಹುಡುಗಿಯನ್ನು ಒಂಬತ್ತು ದಿನ ಸೂತಕದ ಮನೆಯಲ್ಲಿ ಇಡಲಾಗುತ್ತದೆ. ಈ ಸೂತಕಗಳಲ್ಲಿ ಎರಡು ವಿಧಗಳಿವೆ.

೧. ವೃದ್ಧಿ ಸೂತಕ

೨. ಮೃತ್ಯು ಸೂತಕ

ವೃದ್ಧಿ ಸೂತಕವು ಶುಭವನ್ನು ಸೂಚಿಸುವಂತಾಗಿರುತ್ತದೆ. ಅಂದರೆ ಮನೆಯಲ್ಲಿ ಹುಡುಗಿ ಋತುಮತಿಯಾದರೆ ಅಥವಾ ಮನೆಯಲ್ಲಿ ಮಕ್ಕಳು ಹುಟ್ಟಿದರೆ ಆ ಮನೆಗೆ ವೃದ್ಧಿಸೂತಕ ಬರುತ್ತದೆ. (ಬಾಣಂತಿ ಮಲಗುವ ಕೋಣೆಯನ್ನು ಹದಿಮೂರು ದಿನಗಳವರೆಗೆ ಹೊಲೆ ಮನೆ ಎಂದೇ ಕರೆಯಲಾಗುತ್ತದೆ.) ವೃದ್ಧಿಸೂತಕ ಬಂದ ಮನೆಯವರು ಏಳುದಿನಗಳವರೆಗೆ ಬಸದಿಗೆ ಹೋಗುವ ಹಾಗಿಲ್ಲ. ಕೂಸು ಹುಟ್ಟಿ ಸೂತಕ ಬಂದರೆ ಕೂಸಿನ ನಾಮಕರಣವಾಗುವವರೆಗೂ ವೃದ್ಧಿಸೂತಕವನ್ನು ಆಚರಿಸಲಾಗುತ್ತದೆ. ಅಂಥವರ ಮನೆಗೆ ಆ ದಿನಗಳಲ್ಲಿ ಪುರೋಹಿತ (ಪಂಡಿತ) ಹೋಗುವದಿಲ್ಲ. ಊರಲ್ಲಿಯ ಅಥವಾ ಬಸದಿಯಲ್ಲಿಯ ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಆ ಮನೆಯವರು ಭಾಗವಹಿಸುವಂತಿಲ್ಲ.

ಇನ್ನು ಯಾರಾದರೂ ಮನೆಯಲ್ಲಿ ಸಾವು ಸಂಭವಿಸಿದ್ದರೆ ಆ ಮನೆಗೆ ಮೃತ್ಯು ಸೂತಕ ಬರುತ್ತದೆ. ಅದು ಹದಿಮೂರು ದಿನಗಳವರೆಗೂ ಇರುತ್ತದೆ. ಈ ಸಂದರ್ಭದಲ್ಲಿ ಕೇವಲ ಬಸದಿಯ ಕಾರ್ಯಕ್ರಮಗಳಷೆ ಅಲ್ಲ, ಊರಲ್ಲಿ ಜಿನ ಮುನಿಗಳು ಬಂದರೆ ಈ ಮನೆಯವರು ಸ್ವಾಮಿಗಳಿಗೆ ಆಹಾರ ಕೊಡುವಂತಿಲ್ಲ. ಮಹಿಳೆ ಮತ್ತು ಪುರುಷ ಇಬ್ಬರಿಗೂ ಈ ಸೂತಕ ಇರುತ್ತದೆ. ಹದಿಮೂರು ದಿನಗಳಾದ ಮೇಲೆ ಗಂಡಸರೆಲ್ಲಾ ತಲೆ ಬೋಳಿಸಿಕೊಂಡು ಬಸದಿಗೆ ಹೋಗಿ ಶಾಂತಿಕಪೂಜೆಯನ್ನು ಮಾಡಿಸುತ್ತಾರೆ. ಆಗ ಪಂಡಿತ ಅಂಥವರ ಮನೆಗೆ ಬಂದು ಮನೆಯಲ್ಲಿ ಜಿನ ಗಂಧೋದಕವನ್ನು ಸಿಂಪಡಿಸಿದ ಮೇಲೆ ಅವರು ಶುದ್ಧವಾಗುತ್ತಾರೆ.

ಒಂದು ವೇಳೆ ಈ ವೃದ್ಧಿ ಅಥವಾ ಮೃತ್ಯುಸೂತಕ ಬರುವದಕ್ಕಿಂತ ಮೊದಲೆ ಆ ಮನೆಯವರು ಬಸದಿಯಲ್ಲಿ ಹತ್ತು ಹದಿನಾರು ದಿನಗಳ ನೋಂಪಿಕಾರ್ಯದಲ್ಲಿ ತೊಡಿಗಿದ್ದರೆ ಆ ದಿನಗಳಲ್ಲಿ ಇಂತಹ ಸೂತಕಗಳು ಬಂದರೆ ಅಂತವರಿಗೆ ಬಸದಿಯಲ್ಲಿ ಕಂಕಣ ಕಟ್ಟಲಾಗುತ್ತದೆ. ಹಾಗೆ ಕಂಕಣ ಕಟ್ಟಿಕೊಂಡವರು ತಮ್ಮ ಸ್ವಂತ ಮನೆಗೆ ಹೋಗದೆ ಊರಲ್ಲಿಯ ಧರ್ಮಬಂಧುಗಳ ಮನೆಯಲ್ಲಿ ಉಳಿದುಕೊಂಡು ಆ ಧಾರ್ಮಿಕ ಕಾರ್ಯಕ್ರಮದ ವಿಧಿ-ವಿಧಾನಗಳನ್ನು ಮುಗಿಸುವ ಅವಕಾಶ ಇದೆ. ಇದು ಕೂಡಾ ಧರ್ಮಸಮ್ಮತವಾಗಿಯೇ ನಡೆಯುತ್ತದೆ. ಆ ಕಂಕಣವು ಮನೆಯಲ್ಲಿ ಉಂಟಾಗಿರುವ ಯಾವುದೇ ಬಗೆಯ ಸೂತಕವನ್ನು ತಡೆಯುತ್ತದೆ.

ಋತುಮತಿಯಾದರೆ ಅದು ವೃದ್ಧಿಸೂತಕವಾಗಿರುತ್ತದೆ. ಋತುಮತಿಯಾದ ಹುಡುಗಿಗೆ ಸಾಮೂಹಿಕವಾಗಿಯೇ ಸ್ನಾನ ಮಾಡಿಸುವದು, ಅರಿಷಿಣ ಹಚ್ಚುವುದು, ಸೀರೆ ಉಡಿಸುವದು ಇಂಥವೇ ಹೆಂಗಸರ ಕಾರ್ಯಕ್ರಮಗಳು ನಡೆಯುತ್ತವೆ. ಆ ಸಂಭ್ರಮವನ್ನು ಹಂಚಿಕೊಳ್ಳುವ ಸಲುವಾಗಿ ಊರವರು ಆ ಮನೆಗೆ ಸಿಹಿ ಸಿಹಿಯಾದ ಅಡುಗೆ ಮಾಡಿ ಹಾಗೆ ಋತುಮತಿಯಾದ ಹುಡುಗಿಗೆ ತನ್ನಲು ತಂದುಕೊಡುತ್ತಾರೆ. ಮತ್ತು ಸ್ವತಃ ತಿನ್ನಿಸಿ ಹೋಗುತ್ತಾರೆ. ಅದರೊಂದಿಗೆ ಯಥಾಶಕ್ತಿಯಾಗಿ ಆ ಹುಡುಗಿಗೆ ಉಡುಗೊರೆಯನ್ನು ತಂದುಕೊಡುತ್ತಾರೆ. ಉಡುಗೊರೆ ಹೆಚ್ಚಾಗಿ ಖಣ, ಸೀರೆ, ಹೀಗೆ ವಸ್ತ್ರರೂಪದಲ್ಲಿ ಇರುತ್ತದೆ. ಹಾಗೆ ಮಾಡುವ ಮೂಲಕ ಅವಳಿಗೆ ಸಮಾಜದಲ್ಲಿ ದಕ್ಕಬೇಕಾದ ನಾಗರೀತ್ವವನ್ನು ಸಾಮೀತುಪಡಿಸುತ್ತಾರೆ. ಜೈನರು ಅಡುಗೆ ಮಾಡಿ ತಂದು ಕೊಟ್ಟರೆ ಇತರ ಜಾತಿಯ ಜನ ‘ಸೀದಾ’ ಅಂದರೆ ರವೆ, ಅಕ್ಕಿ, ಬೇಳೆ, ಬೆಲ್ಲ, ಹೀಗೆ ಅಡುಗೆಗೆ ಬೇಕಾದ ಸಾಮಾನುಗಳನ್ನು ತಂದುಕೊಡುತ್ತಾರೆ. ಇದರೊಂದಿಗೆ ಉಡುಗೊರೆ ಕೂಡಾ ಇರುತ್ತದೆ. ಜೈನೇತರರು ತಂದುಕೊಟ್ಟ ಅಂತಹ ಸಾಮಾನುಗಳನ್ನು ಪಡೆದುಕೊಂಡ ಮನೆಯವರು ಅದನ್ನು ಅಡುಗೆ ಮಾಡಿ ಜೈನರು ಅಥವಾ ಬೇರೆ ಜಾತಿಯವರು ಎನ್ನದೆ ಎಲ್ಲರಿಗೂ ಊಟಕ್ಕೆ ಹೇಳುತ್ತಾರೆ. ಇದೊಂದು ಸಾಮಾಜಿಕ ರೂಢಿಗತ ನಡವಳಿಕೆಯಾಗಿರುವದರಿಂದ ನಮ್ಮ ಅಡುಗೆ ತಿನ್ನದ ಜೈನರಿಗೆ ನಾವೇಕೆ ಸೀದಾ ಕೊಡಬೇಕು? ಮತ್ತು ನಾವೇಕೆ ಅವರ ಅಡುಗೆಯನ್ನು ಊಟ ಮಾಡಿ ಬರಬೇಕು? ಎನ್ನುವ ಹಂಗು ಮಾಡಿಕೊಳ್ಳುವದಿಲ್ಲ. ಈವರೆಗೂ ಇದನ್ನು ಎಲ್ಲರೂ ಒಪ್ಪಿಕೊಂಡು ಬಂದಿದ್ದಾರೆ.

ಋತುಮತಿಯಾದ ಹುಡುಗಿಯ ಸೋದರಸಂಬಂಧಿಗಳು, ಮುಖ್ಯವಾಗಿ ಸೋದರ ಮಾವ ಇದ್ದರೆ ಅವರೇ ಮೊದಲು ಎಡೆ ತರಬೇಕು. ಎಡೆಯೊಂದಿಗೆ ಹೊಸ ಸೀರೆ ಮತ್ತು ಇನ್ನಿತರ ಉಡುಗೊರೆಗಳು-ಬಂಗಾರದ ದಾಗೀಣುಗಳು ಇತ್ಯಾದಿ-ಇರುತ್ತವೆ. ದೇಹದಲ್ಲಿ ಉಂಟಾಗುವ ನಿಸರ್ಗನಿಯಮಗಳು ತಂದಿರುವ ಈ ಬಗೆಯ ಪರಿಣಾಮದಿಂದ ಸಹಜವಾಗಿಯೇ ಬಾಲಕಿ ಹೆದರಿರುತ್ತಾಳೆ. ಅವಳ ಆ ಹೆದರಿಕೆಯನ್ನು ಒಂದು ಸಾಮಾಜಿಕ ಒಪ್ಪಿಗೆಯಾಗಿ ರೂಪಾಂತರಿಸಿ ಆ ಬಾಲಕಿಯನ್ನು ಈ ಮಹಿಳಾ ಗುಂಪು ತಮ್ಮ ಸಂಸ್ಕಾರದ ಮೂಲಕ ಮುಖ್ಯವಾಹಿನಿಗೆ ಎಳೆದು ತರುತ್ತಾರೆ. ಕಾರ್ಯಕ್ರಮ ಮುಗಿದ ಮೇಲೆ ಆ ಬಾಲಕಿ ಮಹಿಳೆಯಾಗಿ ರೂಪಾಂತರ ಹೊಂದುತ್ತಾಳೆ. ಅಲ್ಲಿಂದಾಚೆ ಅವಳು ತಪ್ಪದೇ ಸೀರೆ ಉಡಲು ಪ್ರಾರಂಭಿಸುತ್ತಾಳೆ. ಅವಳು ಗಂಡು ಮಕ್ಕಳೊಂದಿಗೆ ಬೆರೆಯವದು, ಆಡುವದು, ಏಕಾಂತವಾಗಿ ಭೇಟಿಯಾಗುವದನ್ನು ಈ ಮಹಿಳಾ ಗುಂಪುನಿಯಂತ್ರಿಸುತ್ತದೆ. ಒಂದು ಅರ್ಥದಲ್ಲಿ ಆ ಕಾರ್ಯಕ್ರಮದ ನಂತರ ಬಾಲಿಕೆಯಾಗಿದ್ದವಳು ಮಹಿಳೆಯಾಗಿ ಅಧಿಕೃತವಾಗಿ ಮಹಿಳಾಗುಂಪಿಗೆ ಸೇರ್ಪಡೆಯಾಗುತ್ತಾಳೆ. ಅವಳ ಮುಖದಲ್ಲಿ ಹೊಸ ಕಾಂತಿ ಹೇಗೋ ಹಾಗೆಯೇ ಅವಳ ನಡೆ-ನುಡಿಯಲ್ಲಿ ಗಂಭೀರತೆ ಬಂದು ಬಿಡುತ್ತದೆ. ಅಲ್ಲಿಯವರೆಗೂ ಅಪ್ಪನ ತೊಡೆಯ ಮೇಲೆ ಜಿಗಿದುಕೂಡ್ರುತ್ತಿದ್ದ ಬಾಲಕಿ ಅಲ್ಲಿಂದಾಚೆ ಅಪ್ಪನ ಸ್ಪರ್ಶದಿಂದ ವಂಚಿತಳಾಗುತ್ತಾಳೆ. ಇದೆಲ್ಲವನ್ನೂ ಆ ಹುಡುಗಿಯ ತಾಯಿ ಅವಳಿಗೆ ಕಲಿಸುತ್ತ ಅವಳಿಗೆ ಮಹಿಳಾಸಂಸ್ಕಾರದ ದೀಕ್ಷೆ ಕೊಡುತ್ತಾಳೆ.

ಗಂಡಸರು ಇಲ್ಲದಾಗ ಪಡಸಾಲೆಯಲ್ಲಿ ಗಂಪುಗೂಡಿ ಜಗತ್ತಿನ ಎಲ್ಲ ಸಂಗತಿಗಳ ಬಗ್ಗೆ, ವಿಶೇಷವಾಗಿ ಗಂಡಸರ ನಡವಳಿಕೆಗಳ ಬಗ್ಗೆ ಸರಟೆ ಕೊಚ್ಚುವ ಮಹಿಳೆಯರು ಋತುಮತಿಯಾಗದ ಹುಡಗಿಯರನ್ನು ತಮ್ಮ ಮಾತಿನ ಗುಂಪಿನಲ್ಲಿ ಕರೆದುಕೊಳ್ಳುವದಿಲ್ಲ. ಆದರೆ ಆ ಸಂಸ್ಕಾರ ಆದಮೇಲೆ ಆ ಹುಡಗಿಗೆ ಅಂತಹ ಅಂತಃಪುರದ ಮಾತುಗಳ ಆ ಮಹಿಳಾಸಾಮ್ರಾಜ್ಯದಲ್ಲಿ ಅಧಿಕೃತವಾಗಿ ಪ್ರವೇಶ ಸಿಗುತ್ತದೆ. ಅವಳಿಗೆ ಗೊತ್ತಿಲ್ಲದೆಯೇ ಪುರುಷಲೋಕದಿಂದ ಬಹಿಷ್ಕೃತಳಾಗಿ ಹೋಗುತ್ತಾಳೆ. ಅಲ್ಲಿಂದಾಚೆ ಅವಳಿಗೆ ಅಡುಗೆ ಮಾಡುವದನ್ನು ಮತ್ತು ಊಟ ಬಡಿಸುವ ಕ್ರಮವನ್ನು ಕಲಿಸಲಾಗುತ್ತದೆ. ಮನೆಯ ಒಂದೊಂದೇ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೇರಿ, ಗಂಡನ ಮನೆಯಲ್ಲಿ ಮಾಡಬೇಕಾದ ಕೆಲಸಗಳ ಪ್ರಾಥಮಿಕ ಕಲಿಕೆಯನ್ನು ಇಲ್ಲಿಯೇ ಮಾಡಿಸಲಾಗುತ್ತದೆ.

. ಮಂತ್ರಗಳು:

ಇದೇ ಸಂದರ್ಭದಲ್ಲಿಯೇ ಅವಳಿಗೆ ಬಸದಿಗೆ ಹೋಗುವ, ಜಿನದರ್ಶನ, ಜಿನಪೂಜೆ, ಜಿನಶಾಸನಗಳ ಪಾರಾಯಣ ಮತ್ತು ಪಠನಗಳ ಅಭ್ಯಾಸವನ್ನು ಮಾಡಿಸಲಾಗುತ್ತದೆ. ಹೆಣ್ಣು-ಗಂಡು ಕೊಡುಕೊಳ್ಳುವ ಸಂದರ್ಭದಲ್ಲಿ ಎಲ್ಲ ಜೈನಮಹಿಳೆಯರು ಕಡ್ಡಾಯವಾಗಿ ಹೇಳಲೇಬೇಕಾದ ಣಮೋಕಾರ ಮಂತ್ರ, ದರ್ಶನ ಪಾಠ ಹಾಗೂ ಭಕ್ತಾಮರ ಸೊತ್ರ ಸಾಹಿತ್ಯಗಳು ಬಾಯಿಪಾಠ ಇವೆಯೋ ಇಲ್ಲವೋ ಎನ್ನುವದು ಕೂಡಾ ಪರೀಕ್ಷೆಯಾಗುವ ಕಾಲವೊಂದು ಜೈನಸಮಾಜದಲ್ಲಿ ಇತ್ತು. ಇಂದು ಹೆಣ್ಣಿನ ಸಂತತಿ ಕಡಿಮೆ ಇದ್ದ ಮೂಲಕ ಯಾರೂ ಈ ಮಂತ್ರಗಳ ಬಗ್ಗೆ ಕೇಳುವ ಗೋಜಿಗೆ ಹೋಗುವದಿಲ್ಲವಾದರೂ ಕೂಡಾ ರೂಢಿಗತವಾಗಿ ಮಹಿಳೆಯರಿಗೆ ಇದನ್ನು ಕಂಠಪಾಠ ಮಾಡಿಸಲಾಗುತ್ತದೆ. ಆದ್ದರಿಂದ ಹುಡುಗಿಯರಿಗೆ ಸಾಂಪ್ರಾದಾಯಿಕವಾದ ಶಿಕ್ಷಣ ಇಲ್ಲವಾಗಿದ್ದರೂ ಕೂಡಾ ಸಂಸ್ಕೃತಮಯವಾದ ಈ ಮಂತ್ರಗಳನ್ನು ಅವಳು ಕಲಿತಿರಲೇಬೇಕು ಎನ್ನುವ ಒಂದು ಅಲಿಖಿತ ನಿಯಮ ಜಾರಿಯಲ್ಲಿದೆ.

ಅಧ್ಯಯನದ ದೃಷ್ಟಿಯಿದ ಮಾದರಿಗಾಗಿ ಇಲ್ಲ ಕೆಲವು ಮಂತ್ರಗಳನ್ನು ಉಲ್ಲೇಖಿಸಿದ್ದೇನೆ. ಈ ಮಂತ್ರಗಳನ್ನು ಜೋರಾಗಿಯೂ ಮತ್ತು ಸಾಮೂಹಿಕವಾಗಿಯೂ ಹೇಳುತ್ತಾರೆ. ಬಹಳಷ್ಟು ಸಲ ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಭಕ್ತಾಮರ ಸ್ತ್ರೋತ್ರವನ್ನು ಪ್ರತಿ ಶುಕ್ರವಾರ ಅಲ್ಲಿಯ ಮಹಿಳೆಯರು ಕೂಡಿಕೊಂಡು, ಬಸದಿಗೆ ಹೋಗಿ ಸಾಮೂಹಿಕವಾಗಿ ಪಠನ ಮಾಡುವ ಪರಿಪಾಠ ಪ್ರಾರಂಭವಾಗಿದೆ. ಈ ಮಂತ್ರಗಳೊಂದಿಗೆ ಸಾಮಾಯಿಕ ಪಾಠ ಮಂತ್ರ, ಕೂಡಾ ಬಹಳ ಮಹತ್ವದ್ದಾಗಿದೆ. ಸಾಮಾಯಿಕ ಎಂದರೆ ಶ್ರಾವಕ ದೇವರ ಮುಂದೆ ಕುಳಿತು ಧ್ಯಾನ ಮಾಡುವಾಗ ಮನಸ್ಸಿನಲ್ಲಿಯೇ ಹೇಳುವ ಮಂತ್ರವಾಗಿದೆ.

. ಪಂಚಣಮೋಕಾರ ಮಹಾ ಮಂತ್ರ

ಓಂ ಣಮೋ ಅರಿಹಂತಾಣಂ
ಓಂ ಣಮೋ ಸಿದ್ಧಾಣಂ
ಓಂ ಣಮೋ ಆಇರಿಯಾಣಂ
ಓಂ ಣಮೋ ಉವಜ್ಝಾಯಾಣಂ
ಓಂ ಣಮೋ ಲೋಯೇ ಸಸ್ವ ಸಾಹೂಣಂ

ಅನುವಾದ:

ಅರಹಂತ ಭಗವಾನರಿಗೆ ನಮಸ್ಕಾರಗಳು
ಸಿದ್ಧಭಗವಾನರಿಗೆ ನಮಸ್ಕಾರಗಳು
ಆಚಾರ್ಯ ಭಗವಾನರಿಗೆ ನಮಸ್ಕಾರಗಳು
ಉಪಾಧ್ಯಾಯ ಭಗವಾನರಿಗೆ ನಮಸ್ಕಾರಗಳು
ಲೋಕದಲ್ಲಿಯ ಎಲ್ಲ ಸಾಧುಗಳಿಗೆ ನಮಸ್ಕಾರಗಳು

(ಜೈನರು ಮಹಿಳೆ ಮತ್ತು ಪುರುಷ (ಶ್ರಾವಕ-ಶ್ರಾವಕಿ) ನಿತ್ಯ ೧೦೮ ಸಲ ಹೇಳಿ ಜಪ ಮಾಡುವ ಮಂತ್ರ ಇದಾಗಿದೆ. ಎಲ್ಲರ ಮನೆಯಲ್ಲಿಯೂ ಈ ಮಂತ್ರವನ್ನು ಬರೆದ ಒಂದು ಪೋಟೋ ಇದ್ದೇ ಇರುತ್ತದೆ. ಆ ಪೊಟೋವನ್ನು ಕೂಡಾ ಪೂಜೆ ಮಾಡಲಾಗುತ್ತದೆ).

. ದರ್ಶನ ಸ್ತುತಿ ಮಂತ್ರ:

೧.         ದರ್ಶನಂ ದೇವದೇವಸ್ಯ, ದರ್ಶನಂ ಪಾಪನಾಶನಮ್ |
ದರ್ಶನಂ ಸ್ವರ್ಗಸೋಪಾನಂ, ದರ್ಶನಂ ಮೋಕ್ಷಾಸಾಧನಮ್ ||

೨.         ದರ್ಶನೇನ ಜಿನೇಂದ್ರಾಣಾಂ, ಸಾಧೂನಾಂ ವಂದನೇನ ಚ|
ನ ಚಿರಂ ತಿಷ್ಠತೇ ಪಾಪಂ ಛಿದ್ರಹಸ್ತೇ ಯಥೋದಕಮ್ ||

೩.         ವೀತರಾಗಮುಖಂ ದೃಷ್ಟ್ವಾ ಪದ್ಮರಾಗ ಸಮಪ್ರಭ |
ನೈಕ ಜನ್ಮ ಕೃತಂ ಪಾಪಂ ದರ್ಶನೇನ ವಿನಶ್ಯತಿ ||

೪.        ದರ್ಶನೇನ ಜಿನಸೂರ್ಯಸ್ಯ ಸಂಸಾರಧ್ವಾಂತನಾಶನಮ್
ಬೋಧನಂ ಚಿತ್ತಪದ್ಮಸ್ಯ ಸಮಸ್ತಾರ್ಥ ಪ್ರಕಾಶನಮ್ ||

. ಭಕ್ತಾಮರ ಸ್ತೋತ್ರ:

ಭಕ್ತಾಮರಪ್ರಣತಮೌಲಿಮಣಿಪ್ರಭಾಣಾಂ |
ಉದ್ಯೋತಕಂ ದಲಿತಪಾಪತಮೋ ವಿತಾನಂ ||
ಸಮ್ಯಕ್ ಪ್ರಣಮ್ಯ ಜಿನಪಾಯುಗಂ |
ವಾಲಂಬನಂ ಭವಜಲೇ ಪತತಾಂ ಜನಾನಾಂ ||

ಅನುವಾದ:

ಚತುರ್ಥಕಾಲದ ಆದಿಯಲ್ಲಿ ದೇವತೆಗಳು ಭಕ್ತಿಯಿಂದ ನಮಸ್ಕರಿಸುವಾಗ ಅವರ ಕಿರೀಟಗಳನ್ನು ಕಾಂತಿಯಿಂದ ಹೊಳೆಯುವಂತೆ ಮಾಡುವ, ಪಾಪವೆಂಬ ಕತ್ತಲೆಯನ್ನು ನಾಶಪಡಿಸುವ, ಸಂಸಾರಸಾಗರದಲ್ಲಿ ಬಿದ್ದಿರುವ ಜನರಿಗೆ ಆಧಾರಭೂತನಾದ ಜಿನೇಶ್ವರನ ಪಾದಗಳಿಗೆ ಭಕ್ತಿಯಿಂದ ನಮಸ್ಕರಿಸುವೆನು.

ಯಸ್ಸಂಸ್ತುತಃ ಸಕಲ ವಾಂಗ್ಮಯ ತತ್ವಭೋದಾತ್ |
ಉದ್ಭತ ಬುದ್ಧಿಪಟುಭಿಃ ಸುರಲೋಕನಾಥೈಃ ||
ಸೊತ್ರೈಃ ಜಗತ್ರಿತಯಚಿತ್ತಹರೈರುದಾರೈಃ |
ಸೊಘ್ಯೇ ಕಿಲಾಹಮಪಿ ತಂ ಪ್ರಥಮಂ ಜಿನೇಂದ್ರಂ ||
(ಹೀಗೆ ಒಟ್ಟು ೪೮ ಪದ್ಯಗಳಿವೆ)

ಅನುವಾದ:

ಸಕಲ ತತ್ವ, ಜ್ಞಾನಗಳ ಬುದ್ಧಿಸಾಮರ್ಥ್ಯವುಳ್ಳ ದೇವೇಂದ್ರ ಮೊದಲಾದ ದೇವಲೋಕದ ಒಡೆಯರು ಯಾರನ್ನು ಚೆನ್ನಾಗಿ ಸ್ತುತಿಸುತ್ತಾರೋ ಅಂತಹ ಪ್ರಥಮ ಜಿನೇಂದ್ರರಾದ ವೃಷಭಸ್ವಾಮಿಯನ್ನು ನಾನೂ ಕೂಡಾ ಸ್ತೋತ್ರ ಮಾಡುತ್ತೇನೆ.

. ಸಾಮಾಯಿಕ ಪಾಠ:

೧.         ಸತ್ವೇಷು ಮೈತ್ರೀಂ ಗುಣಿಷು ಭ್ರಮೋದಂ|
ಕ್ಲಿಷ್ಟೇಷು ಜೀವೇಷು ಕೃಪಾಪರತ್ವಂ ||
ಮಾಧ್ಯಸ್ಥಭಾವಂ ವಿಪರೀತವೃತ್ತೌ |
ಸದಾ ಮಮತ್ಮಾ ವಿಧದಾತು ದೇವ ||

೨.         ದುಃಖೇ ಸುಖೇ ವೈರಿಣಿ ಬಂಧುವರ್ಗೇ |
ಯೋಗೇ ವಿಯೋಗೇ ಭುವನೇ ವನೇ ವಾ ||
ನಿರಾಕೃತಾ ಶೇಷ ಮಾಮತ್ವಬುದ್ಧೇಃ |
ಸಮಂ ಮನೋ ಮೇಸ್ತು ಸದಾಪಿ ನಾಥಾ ||
(ಹೀಗೆ ಒಟ್ಟು ೩೩ ಪದ್ಯಗಳಿವೆ)

ಅನುವಾದ:

೧.         ಹೇ ಪ್ರಭು! ನನ್ನ ಆತ್ಮನು ಯವಾಆಗಲೂ ಜೀವಿಗಳಲ್ಲಿ ಮಿತ್ರಭಾವ, ಗುಣವಂತರಲ್ಲಿ ಪ್ರೀತಿ, ದುಃಖಿತ ಜೀವಿಗಳಲ್ಲಿ ದಯಾಭಾವ, ದುಷ್ಟರಲ್ಲಿ ಮಾಧ್ಯಸ್ಥ (ತಟಸ್ಥ) ಭಾವವನ್ನು ಹೊಂದಿರಲಿ.

೨.         ಸಮಸ್ತ ಮಮತಾ ಬುದ್ಧಿಯನ್ನು ತೊರೆದ ನನ್ನ ಮನಸ್ಸು ಸುಖ-ದುಃಖಗಳಲ್ಲಿಯೂ, ಶತ್ರುವಿನಲ್ಲಿಯೂ, ಬಂಧುಗಳಲ್ಲಿಯೂ, ಇಷ್ಟವಸ್ತುವಿನ ಸಂಯೋಗದಲ್ಲಿಯೂ, ಮನೆಯಲ್ಲಿಯೂ, ವನದಲ್ಲಿಯೂ ಸದಾ ಸಮತ್ವದಿಂದ ಇರಲಿ.

ಇಂತಹ ಕಠಿಣವಾದ ಪದ್ಯಗಳನ್ನು ಜೈನಮಹಿಳೆಯರಿಗೆ ಬಾಲ್ಯದಿಂದಲೇ ಕಂಠಪಾಠ ಮಾಡಿಸಲಾಗುತ್ತದೆ. ಆಶ್ಚರ್ಯವೆಂದರೆ ಮಹಿಳೆಯರು ಕೂಡಾ ಈ ಪದ್ಯಗಳನ್ನು ಬಹಳ ಭಕ್ತಿ ಮತ್ತು ಅತೀ ಆಸಕ್ತಿಯಿಂದ ಕಂಠಪಾಠ ಮಾಡುತ್ತಾರೆ. ಮತ್ತು ಹಾಗೆ ಕಂಠ ಪಾಠ ಮಾಡಿದ ಮಹಿಳೆ ಸಮಾಜದಲ್ಲಿ ಗರ್ವಿತಳಾಗಿರುತ್ತಾಳೆ. ಮುನಿ ಸಂಘಗಳು ಬಂದಾಗ ಹಾಗೆ ಕಂಠಪಾಠ ಮಾಡಿ ಸ್ಪಷ್ಟವಾದ ಉಚ್ಚಾರದಿಂದ ಮಂತ್ರ ಹೇಳುವ ಮಹಿಳೆಯನ್ನು ಸಮಾಜದ ಸಭೆಗಳಲ್ಲಿ ಮತ್ತು ಮುನಿಗಳ ಸಮ್ಮುಖದಲ್ಲಿ ಪ್ರಶಂಸಿಸಲಾಗುತ್ತದೆ. ಅಂತಹ ಪ್ರಶಂಸೆಗೆ ಪಾತ್ರವಾಗಲು ಜೈನಮಹಿಳೆ ಯಾವಾಗಲೂ ಉತ್ಸುಕಳಾಗಿರುತ್ತಾಳೆ, ಒಂದು ನೂರು ಜನ ಜೈನರಿಗೆ ಭಕ್ತಾಮರ ಸ್ತೋತ್ರ ಕಂಠಪಾಠವಾಗಿದ್ದರೆ ಅದರಲ್ಲಿ ಶೇಕಡಾ ೯೫ರಷ್ಟು ಮಹಿಳೆಯೇ ಇರುತ್ತಾರೆ. ಹೀಗೆ ಸಮಾಜವು ಮಹಿಳೆಯನ್ನು ಇಂತಹ ಮಂತ್ರಗಳ ಮೂಲಕ ಕಟ್ಟಿ ಹಾಕುವ ಕಾರ್ಯ ಮಾಡುತ್ತದೆ. ವಸ್ತುಸ್ಥಿತಿ ಏನೆಂದರೆ ಹೀಗೆ ಕಂಠಪಾಠ ಒಪ್ಪಿಸುವ ಬಹುತೇಕ ಮಹಿಳೆಯರಿಗೆ ಮಂತ್ರಗಳ ಅರ್ಥ ಗೊತ್ತಿಲ್ಲ. ಅದರ ಅವಶ್ಯಕತೆಯೂ ಅವರಿಗಿಲ್ಲ. ರೂಢಿಗತವಾಗಿ ಅವರು ಕಂಠಪಾಠ ಮಾಡಿರುತ್ತಾರೆ.

ಜೈನಧರ್ಮದಲ್ಲಿ ಬಹಳಷ್ಟು ಮಂತ್ರಗಳಿದ್ದಾಗಲೂ ಕೂಡಾ ಭಕ್ತಾಮರ ಸ್ತೋತ್ರದ ಮೇಲೆ ಜೈನಸಮಾಜದಲ್ಲಿ ಬಹಳ ಮಮಕಾರವಿದೆ. ವೈದಿಕರಿಗೆ ಗಾಯತ್ರಿ ಮಂತ್ರ ಇದ್ದಂತೆ ಜೈನರಿಗೆ ಈ ಭಕ್ತಾಮರ ಸೊತ್ರ ಇದೆ. ‘ಭಕ್ತಾಮರ ಸ್ತೋತ್ರದ ಹೆಸರನ್ನು ಕೇಳುತ್ತಿದ್ದಂತೆಯೇ ಪ್ರತಿಯೊಬ್ಬ ಜೈನ ಧರ್ಮೀಯನು ಭಕ್ತಿಯಿಂದ ಪುಲಕಿತನಾಗುತ್ತಾನೆ. ಭಾರತದ ಯಾವುದೇ ಭಾಗದ ಪ್ರದೇಶಕ್ಕೆ ಹೋಗಲಿ ಭಕ್ತಾಮರ ಸ್ತೋತ್ರವು ಕಂಠಪಾಠ ಬರುವದಿಲ್ಲ ಎಂದರೆ ಅವನು/ಅವಳು ಜೈನ ಅಲ್ಲ ಎಂದು ನಿರ್ಧರಿಸುತ್ತಾರೆ.’

ಮೇಲೆ ಬರೆದಿರುವ ಈ ವಾಕ್ಯಸರಣಿಗಳು ಭಕ್ತಾಮರ ಪುಸ್ತಕದ ಮೇಲೆ ಬರೆದವುಗಳಾಗಿವೆ. ಆದರೆ ಭಕ್ತಾಮರ ಸ್ತೋತ್ರವನ್ನು ಹೆಚ್ಚಾಗಿ ಹಾಡುವವರುರ ಜೈನ ಮಹಿಳೆಯರೆ ಎನ್ನುವದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಹೀಗೆ ಬರೆಯುವ ಮೂಲಕ ಜೈನ ಸಮಾಜದಲ್ಲಿ ಜೈನತ್ವವನ್ನು ಉಳಿಸಿಕೊಳ್ಳಲಾಗುತ್ತದೆ. ಅದು ಜೈನ ಸಮಾಜಕ್ಕೆ ಅನಿವಾರ್ಯ ಕೂಡಾ ಆಗಿದೆ. ಏಕೆಂದರೆ ಇಂದಿನ ಜಾಗತೀಕರಣದ ಏರಿಕೆಯ ಕಾಲದಲ್ಲಿ ಎಲ್ಲವೂ ವೇಗವಾಗಿ ಬದಲಾಗುತ್ತ ಸಾಗುವ ಹಂತದಲ್ಲಿ ಮಂತ್ರಗಳ ಮೂಲಕ, ಮುನಿಸಂಘಗಳ ಮೂಲಕ, ಶಾಸ್ತ್ರಗಳ ಮೂಲಕ, ಜೈನ ಸಮಾಜವನ್ನು ಜಿನಮಂದಿರದ ಕಡೆಗೆ ಎಳೆದು ತರುವದು ಬಹಳ ಕಠಿಣವಾದ ಕಾರ್ಯವಾಗಿದೆ; ಅದಕ್ಕಾಗಿಯೇ ಜೈಸಮಾಜದ ಮಹಿಳೆಯರನ್ನು ಇದಕ್ಕೆ ಮುಂದು ಮಾಡಿದೆ. ಕುಟುಂಬದ ಪ್ರೀತಿಯ ಮಗಳಾಗಿ, ಸೊಸೆಯಾಗಿ, ಮನೆಯ ಯಜಮಾನಿಯಾಗಿ ಇರುವ ಮಹಿಳೆ ಧರ್ಮದ ಕಡೆಗೆ ಮುಖ ಮಾಡಿದಾಗ ಆ ಕುಟುಂಬದಲ್ಲಿ ಸ್ವಲ್ದಾರೂ ಜೈನತ್ವದ ಒಲವು ಉಂಟಾಗುತ್ತದೆ ಎನ್ನುವುದು ಸಮಾಜಕ್ಕೆ ತಿಳಿದಿದೆ. ಆದ್ದರಿಂದ ಜೈನ ಸಮಾಜದಲ್ಲಿ ಮಹಿಳೆ ಧರ್ಮವನ್ನು ಮುನ್ನೆಡೆಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿಯನ್ನು ತಾನಾಗಿಯೇ ಹೊತ್ತುಕೊಂಡಿದ್ದಾಳೆ.

ಪಂಚ ಣಮೋಕಾರ ಮಂತ್ರ, ದರ್ಶನ ಪಾಠಗಳೊಂದಿಗೆ ಹೆಣ್ಣುಮಕ್ಕಳಿಗೆ ಇಂತಹವೇ ಅನೇಕ ಧಾರ್ಮಿಕ ಪುಸ್ತಕಗಳನ್ನು ಓದಿಸಲಾಗುತ್ತದೆ. ಅವರು ಶಾಲೆ ಕಲಿತಿರದಿದ್ದರೆ – ಈಗ ಜೈನಸಮಾಜದಲ್ಲಿ ಅನಕ್ಷರಸ್ಥ ಹೆಣ್ಣು ಮಕ್ಕಳು ಇಲ್ಲವೇ ಇಲ್ಲ ಎನ್ವುಷ್ಟು ಅವರಿಗೆ ಶಿಕ್ಷಣವನ್ನು ಕೊಡಲಾಗುತ್ತಿದೆ – ರೂಢಿಗತವಾಗಿ ಇಂತಹ ಮಂತ್ರಗಳನ್ನು ಬಾಯಿಪಾಠ ಮಾಡಿಸಲಾಗುತ್ತದೆ. ಅವುಗಳಲ್ಲಿ

೧)        ಸದ್ಗೃಹಿಣಿ ಪೂಜಾವಿಧಿ

೨)         ದಶಲಕ್ಷಣ ಪರ್ವ

೩)         ಷೋಡಶಕಾರಣ ಪೂಜೆ

೪)        ಅಹಾರದಾನ ವಿಧಿ

ಇಂಥವೇ ಪುಸ್ತಕಗಳನ್ನು ಅವಳಿಗೆ ಓದಿಸುವ ಮೂಲಕ ಅವಳನ್ನು ಧಾರ್ಮಿಕವಾಗಿ ಇಡಲಾಗುತ್ತಿದೆ.

ಊರಲ್ಲಿ ಮುನಿಸಂಘಗಳು ಬಂದರೆ ಈ ಗೃಹಿಣಿಯರು ಅವರ ಸೇವೆಗೆ ನಿಂತು ಬಿಡುತ್ತಾರೆ. ಬಾಲ್ಯದಲ್ಲಿಯೇ ನಿರ್ಗ್ರಂಥ ಮುನಿಗಳನ್ನು ನೋಡಿ ಬೆಳೆದಿರುವದರಿಂದ ನಿರ್ಗ್ರಂಥ ಮುನಿ (ನಿರ್ವಾಣ ಸ್ವಾಮಿ)ಗಳನ್ನು ಮಕ್ಕಳನ್ನು ನೋಡಿದಂತೆ ನೋಡುವ ಒಂದು ದೃಷ್ಟಿ, ಸಂಸ್ಕಾರ ಹೆಣ್ಣುಮಕ್ಕಳಿಗೆ ಪ್ರಾಪ್ತವಾಗಿರುತ್ತದೆ. ಹಾಗಾಗಿ ಅವರಿಗೆ ಆಹಾರವನ್ನು ಕೊಡುವಾಗ ತಮ್ಮ ಸ್ವಂತ ಮಕ್ಕಳಿಗೆ – ಅದೂ ತೀರ ಕೂಸಿಗೆ – ಕೊಡುವ ರೀತಿಯಲ್ಲಿಯೇ ಅವರು ಆಹಾರವನ್ನು ಕೊಡುತ್ತಾರೆ. ಮತ್ತು ಆರ್ಯಿಕೆ (ಮಹಿಳಾ ಸನ್ಯಾಸಿನಿಯರು)ಯರನ್ನು ತಾಯಿರೂಪದಲ್ಲಿ ನೋಡುವ ಸಂಸ್ಕಾರ ಕೂಡಾ ಆಗಿರುತ್ತದೆ. ಹೀಗಾಗಿ ಸ್ವಾಮಿಗಳಿಗೆ ಆಹಾರ ತಯಾರಿಸುವ ಕಾರ್ಯದಲ್ಲಿ ಶ್ರದ್ಧೇ, ಭಕ್ತಿ ಮತ್ತು ಪೂರ್ಣ ಧ್ಯಾನವನ್ನು ಕೇಂದ್ರೀಕರಿಸಲಾಗುತ್ತದೆ. ಮುನಿಗಳಿಗೆ ಬೇಕಾದ ಸಾತ್ವಿಕ ಆಹಾರ (Bland diet)ವನ್ನು ತಯಾರಿಸುವ ಪೂರ್ಣ ಹೊಣೆಗಾರಿಕೆ ಮಹಿಳೆಯರದ್ದಾಗಿದ್ದರಿಂದ ಅದರಲ್ಲಿ ಪರಿಣತಿಯನ್ನು ಸಾಧಿಸುವ ಸಲುವಾಗಿ ಚಿಕ್ಕ ಮಕ್ಕಳನ್ನು, ಅಂದರೆ ಸುಮಾರು ಹನ್ನೆರಡು ವರ್ಷದ ಮೇಲ್ಪಟ್ಟವರನ್ನು ಅದರಲ್ಲಿ ತೊಡಗಿಸುತ್ತಾರೆ. (ಫೋಟೋ ನೋಡಿರಿ) ಇದರಿಂದ ಬಾಲ್ಯದಿಂದಲೇ ಜೈನಮಹಿಳೆಯರಿಗೆ ಸ್ವಾಮಿಗಳ ಒಡನಾಟದಿಂದ ಜೈನಸಂಸ್ಕಾರವು ಪರಿಪೂರ್ಣವಾಗಿ ಆಗುತ್ತದೆ. ಅಲ್ಲದೆ ಅದು ತ್ಯಾಗಿಗಳಿಗೆ ಆಹಾರ ಬಡಿಸುವ ಕಾರ್ಯವಾಗಿದ್ದರಿಂದ ಮತ್ತು ಆ ತ್ಯಾಗಿಗಳು ದಿನಕ್ಕೆ ಒಮ್ಮೆ ಮಾತ್ರ ಆಹಾರವನ್ನು ಸ್ವೀಕರಿಸುವದರಿಂದ ಅಲ್ಲಿ ಧಾರ್ಮಿಕ ಮಮಕಾರ ಬೆಳೆಯುತ್ತದೆ.

) ಮುನಿಗಳ ಆಹಾರ ಕೊಡುವ ಜವಾಬ್ದಾರಿ:

ಜೈನಮುನಿಗಳು ಆಹಾರ ತೆಗದುಕೊಳ್ಳುವದರಲ್ಲಿ ಬಹಳ ಕಟ್ಟು ಪಾಡುಗಳನ್ನು ಅನುಸರಿಸುತ್ತಾರೆ. ಮಹಿಳೆಯರಿಗೆ ಮುನಿಗಳಿಗೆ ಬೇಕಾದ ಆಹಾರವನ್ನು ತಯಾರಿಸುವ ಕಾರ್ಯವಷ್ಟೇ ಅಲ್ಲದೆ, ಅವರನ್ನು ಮನೆಗೆ ಸ್ವಾಗತಿಸುವ ಮತ್ತು ನಿಯಮಾನುಸಾರವಾಗಿ ಆಹಾರವನ್ನು ಕೊಟ್ಟು ಅವರು ತಿರುಗಿ ಬಸದಿಯನ್ನು ಮುಟ್ಟವವರೆಗಿನ ನಿಯಮಾವಳಿಗಳನ್ನು ಪಾಲಿಸುವ ಜವಾಬ್ದಾರಿ ಕೂಡಾ ಇರುತ್ತದೆ. ಜೈನಮುನಿಗಳು ಬಸದಿಯಿಂದ ಆಹಾರಕ್ಕಾಗಿ ಊರಲ್ಲಿ ಬರುತ್ತಾರೆ. ಹಾಗೆ ಬರುವಾಗ ಅವರು ಮೌನವಾಗಿರುತ್ತಾರೆ. ಮತ್ತು ನಿರ್ದಿಷ್ಟ ಸಂಕೇತ ಇರುವ ಮನೆಯಲ್ಲಿ ಮಾತ್ರ ಆಹಾರವನ್ನು ಪಡೆಯಬೇಕು ಎನ್ನುವ ನಿಯವನ್ನು ಮನಸ್ಸಿನಲ್ಲಿಯೇ ಸಂಕಲ್ಪವನ್ನು ಮಾಡಿಕೊಂಡು ಬಂದಿರುತ್ತಾರೆ. ಇದರಿಂದಾಗಿ ಅವರು ತಾವು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡ ಸಂಕೇತ ಇರುವ ಮನೆಯನ್ನು ಹುಡುಕುತ್ತಾ ಸಾಗುತ್ತಾರೆ. ಕೇವಲ ಒಂದು ಸಲ ಮಾತ್ರ ನೋಡುತ್ತ ಹೋಗುತ್ತಾರೆ. ಆ ದಿನ ಅಂತಹ ಸಂಕೇತದ ಮನೆ ಸಿಗದಿದ್ದರೆ ಆಹಾರವನ್ನು ಪಡೆಯದೆ ಅವರು ಬಸದಿಗೆ ಮರಳಿ ಹೋಗುತ್ತಾರೆ. ಆದ್ದರಿಂದ ಅವರಿಗೆ ಆಹಾರವನ್ನು ಕೊಡುವ ಕಾರ್ಯ ಬಹಳ ಗುರುತರವಾದ ಕಾರ್ಯ ಎನಿಸಿಕೊಳ್ಳುತ್ತದೆ. ಇದಕ್ಕಾಗಿ ಊರ ಜನ ಎಲ್ಲರೂ ಸ್ವಾಮಿಗಳ ಆಹಾರ ಯಾರ ಮನೆಯಲ್ಲಿ ಆಯಿತು ಎಂದು ನೋಡಲು ಅಲ್ಲಿ ಸೇರುತ್ತಾರೆ. ಒಂದು ವೇಳೆ ಅವರಿಗೆ ಆಹಾರವನ್ನು ಕೊಡುವಾಗ (ಅವರು ಪ್ಲೇಟ್ ಇಲ್ಲದೆ ಕೇವಲ ತಮ್ಮ ಬೊಗಸೆಯಲ್ಲಿ ಆಹಾರವನ್ನು ಹಾಕಿಸಿಕೊಂಡು ಉಣ್ಣುತ್ತಾರೆ.) ಹೆಚ್ಚೂ ಕಡಿಮೆಯಾದರೆ ಜೈನಮುನಿಗಳು ಆಹಾರವನ್ನು ಬಿಟ್ಟು ಕೈ ತೊಳೆದುಕೊಂಡು ನೀರು ಕೂಡಾ ಕುಡಿಯದೆ ಬಸದಿಗೆ ಮರಳುತ್ತಾರೆ. ಹಾಗೆ ಆದರೆ ಎಲ್ಲ ತಪ್ಪುಗಳು ಮಹಿಳೆಯ ಮೇಲೆ ಬರುತ್ತದೆ. ಸಮಾಜ ಅಂತಹ ಮಹಿಳೆಗೆ ಛೀಮಾರಿ ಹಾಕುತ್ತದೆ.

ಮುನಿಗಳು ತಮ್ಮ ಮನಸ್ಸಿನಲ್ಲಿ ಸಂಕಲ್ಪಿಸಿಕೊಂಡು ಬಂದ ಸಂಕೇತ (ಬಾಳೆ ಹಣ್ಣು ಹಿಡಿದು ನಿಂತ ಮಹಿಳೆ, ತುಂಬಿದ ಕುಂಭ ಹಿಡಿದು ನಿಂತ ಮಹಿಳೆ, ತೆಂಗು ಹಿಡಿದ ನಿಂತ ತಾಯಿ ಮಗಳು ಅಥವಾ ಆರತಿಯನ್ನು ಹಿಡಿದು ನಿಂತ ಮಹಿಳೆ, ಹೀಗೆ ಯಾವುದಾದರೂ ಇರಬಹುದು) ಯಾವುದಾದರೂ ಮನೆಯ ಮುಂದೆ ಕಂಡು ಬಂದರೆ ಅಲ್ಲಿ ಅವರು ನಿಂತುಕೊಳ್ಳುತ್ತಾರೆ. ಆಗ ಮಹಿಳೆ – ಅವಳೊಂದಿಗೆ ಪುರುಷನೂ ಇರಬಹುದು – ನಮೋಸ್ತು ಮಹಾರಾಜ ನಮೋಸ್ತು…. ನಮೋಸ್ತು ಹಾರಾಜ ನಮೋಸ್ತು…. ಎಂದು ಸಂಬೋಧಿಸಿ ಮುನಿಯ ಗಮನವನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಾರೆ. ಭೂಮಿಗೆ ನೀರನ್ನು ಚಿಮುಕಿಸಿ ಭೂಮಿಶುದ್ಧಿಯನ್ನು ಮಾಡಿ ಮುನಿಯನ್ನು ಮೂರು ಸುತ್ತ ಪ್ರದಕ್ಷಿಣೆ ಹಾಕಿ ಕೈ ಮುಗಿದು ನಿಂತು ಮುನಿಗಳಿಗೆ ಕೆಳಗಿನಂತೆ ಹೇಳುತ್ತಾಳೆ:

ಮಹಾರಾಜ ಅನ್ನ-ನೀರು-ಶುದ್ಧ ಇದೆ
ಮಿಥ್ಯಾ ದೇವರ ಪೂಜೆ ಬಿಟ್ಟಿದ್ದೇನೆ
ನವಧಾ ಭಕ್ತಿಯಿಂದ ಆಹಾರ ಕೊಡುತ್ತೇನೆ, ಬನ್ನಿ

ಎಂದು ಹೇಳುತ್ತಾಳೆ. ಮುನಿ ಸಮ್ಮತಿಸಿ ಕಾಲು ಶುದ್ಧ ಮಾಡಿಕೊಂಡು ಮನೆಯಲ್ಲಿ ಪ್ರವೇಶ ಮಾಡಿದ ಮೇಲೆ ಅಲ್ಲಿ ಸಣ್ಣ ಅಷ್ಟಕ ಪೂಜೆ ಆದ ಮೇಲೆ ಆಹಾರವನ್ನು ಕೊಡುವ ಕ್ರಿಯೆ ಪ್ರಾರಂಭವಾಗುತ್ತದೆ. ಇಂತಹ ಸಂದರ್ಭದಲ್ಲಿ ಮಹಿಳೆ ಅಪಾರವಾದ ಒತ್ತಡದಲ್ಲಿ ಕೆಲಸ ಮಾಡುತ್ತಾಳೆ. ಮುನಿಯ ಅಂಗೈಯಲ್ಲಿ ತುತ್ತು ಮಾಡಿ ನುಚ್ಚು, ರೊಟ್ಟಿ ಹೀಗೆ ಆಹಾರವನ್ನು ಹಾಕುವಾಗ ಅವರು ಅದನ್ನು ಪರಿಶೀಲಿಸಿ ತಿನ್ನುತ್ತಾ ಹೋಗುತ್ತಾರೆ. ಆಗ ಮಹಿಳಾ ಗುಂಪು ಪರಮ ಧನ್ಯತೆಯನ್ನು ಅನುಭವಿಸುತ್ತದೆ. ಮುನಿಗಳಿಗೆ ಆಹಾರವನ್ನು ಕೊಡುವ ಸಂದರ್ಭದಲ್ಲಿ ಜೈನ ಒಳಪಂಗಡಗಳು ಗಮನಕ್ಕೆ ಬರುವದಿಲ್ಲ. ಅಲ್ಲಿಯ ಇಡೀ ವಾತಾವರಣವು ಜೈನವಾಗಿರುತ್ತದೆ.

೧೦. ಮದುವೆ:

ಇಂದಿನ ಆಧುನಿಕ ಯುಗದಲ್ಲಿ ಮದುವೆ ಸಂಪ್ರದಾಯ ಕರ್ನಾಟಕದ ಉದ್ದಕ್ಕೂ ಎಲ್ಲ ಜಾತಿ, ಜನಾಂಗಗಳಲ್ಲಿ ಒಂದೇ ರೀತಿಯಾಗಿ ನಡೆಯುತ್ತಿದೆ ಎನ್ನಿಸಿದರೂ ಕೂಡಾ ಜೈನಮದುವೆಗಳಲ್ಲಿ ಅಂತರಿಕ ವ್ಯತ್ಯಾಸಗಳಿವೆ. ಸಾಂಪ್ರದಾಯಿಕ ಮದುವೆಗಳು ಮತ್ತು ಆಧುನಿಕ ಮದುವೆಗಳು ಎಂದು ಇವನ್ನು ವಿಭಾಗಿಸಿ ನೋಡಬೇಕಾಗುತ್ತದೆ. ಇತ್ತೀಚೆಗೆ ಕೆಲಸದ ಒತ್ತಡ ಮತ್ತು ಇನ್ನಿತರ ಕಾರಣಗಳಿಂದ ಸಾಂಪ್ರದಾಯಿಕ ಮದುವೆಗಳಲ್ಲಿ ಒಲವು ಇಟ್ಟುಕೊಂಡಿದ್ದಾರೆ. ಸಾಂಪ್ರದಾಯಿಕ ಮದುವೆಗಳಲ್ಲಿ ಖರ್ಚು ಹೆಚ್ಚು ಮತ್ತು ಅಪಾರವಾದ ಶ್ರಮ, ವೈಭವ ಮತ್ತು ಸಮಾಜದ ಎಲ್ಲ ಜನರ ವಿಶ್ವಾಸ ಬೇಕಾಗುತ್ತದೆ. ವಾದ್ಯಗೋಷ್ಟಿ ಆಡಂಬರ ಹಾಗೂ ಎಲ್ಲ ಬಗೆಯ ಸಂಪ್ರದಾಯ ಆಚರಣೆಗಳನ್ನು ನಿಭಾಯಿಸುವಿಕೆ ಇಲ್ಲಿ ಇರುತ್ತದೆ. ಅದಕ್ಕಾಗಿ ಬಹಳ ಜನ ಇತ್ತೀಚೆಗೆ ಇಂತಹ ಮದುವೆಗೆ ಹಿಂದೇಟು ಹಾಕುತ್ತಿದ್ದಾರೆ.

೧೦.. ಸಾಂಪ್ರದಾಯಿಕ ಮದುವೆಗಳು:

ಈ ಮದುವೆಗಳು ಹೆಚ್ಚಾಗಿ ಗಂಡಿನ ಮನೆಯಲ್ಲಿಯೇ ನಡೆಯುತ್ತವೆ. ಮದುವೆ ತಯಾರಿಯಲ್ಲಿ ಪ್ರಧಾನವಾಗಿ ಹಂದರ ಹಾಕುವದು, ಊಟದ ವ್ಯವಸ್ಥೆ, ವಸತಿ ವ್ಯವಸ್ಥೆ ಇತ್ಯಾದಿಗಳನ್ನು ಗಂಡಸರು ನೋಡಿಕೊಳ್ಳುತ್ತಾರೆ. ವಧುವಿನ ಅಲಂಕಾರ, ಮನೆಯ ಒಳ ಅಲಂಕರಾರ, ಪೂಜಾ ವಿಧಿ-ವಿಧಾನಗಳನ್ನು ಹೆಂಗಸರು ನೋಡಿಕೊಳ್ಳುತ್ತಾರೆ.

ಮದುವೆ ನಿಶ್ಚಯವಾದ ಮೇಲೆ ಒರಳ್ಳು-ಕಲ್ಲು ಪೂಜೆ ಕಡ್ಡಾಯವಾಗಿ ನಡೆಯುತ್ತದೆ. ಗ್ರಾಮಜಗತ್ತಿನಲ್ಲಿ ಕಟ್ಟುವ ಒಳ್ಳು ಮತ್ತು ಬೀಸುವ ಕಲ್ಲು ದೇವರಾಗಿ ರೂಪಾಂತರಗೊಂಡಿವೆ. ಮುನಿಗಳಿಗೆ ಆಹಾರವನ್ನು ಕೊಡುವಾಗ ಮಿಥ್ಯಾ ದೇವರ ಪೂಜೆ ಬಿಟ್ಟಿದ್ದೇನೆ, ಜಿನ ದೇವರ ಹೊರತಾಗಿ ಇನ್ನಾವದೇವರನ್ನೂ ಪೂಜಿಸುವದಿಲ್ಲ ಎಂದು ಸಂಭ್ರಮಿಸುತ್ತಾಳೆ! ಇದು ಕೇವಲ ಹೆಂಗಸರೇ ಮಾಡುವ ಪೂಜಾವಿಧಿಯಾಗಿದೆ. ಆ ದಿನ ತಮ್ಮ ಓಣಿಯಲ್ಲಿಯ ಮುತ್ತೈದೆಯರನ್ನು ಮನೆಗೆ ಕರೆಯುತ್ತಾರೆ. ಆ ಓಣಿಯಲ್ಲಿರುವ ಎಲ್ಲ ಜಾತಿಯ ಮುತ್ತೈದೆಯರನ್ನು ಕರೆಯಲಾಗುತ್ತದೆ. ಮುತ್ತೈದೆಯ ಸಂಬಂಧಕ್ಕೆ ಜಾತಿ ಅಡ್ಡ ಬರುವದಿಲ್ಲ. ಒಳ್ಳು ಮತ್ತು ಬೀಸುವ ಕಲ್ಲುಗಳನ್ನು ತೊಳೆದು ಸಂಬಂಧಕ್ಕೆ ಜಾತಿ ಅಡ್ಡ ಬರುವದಿಲ್ಲ. ಒಳ್ಳು ಮತ್ತು ಬೀಸುವ ಕಲ್ಲುಗಳನ್ನು ತೊಳೆದು ಸುಣ್ಣ ಮತ್ತು ಅರಿಷಿಣದಿಂದ ಅಲಂಕರಿಸುತ್ತಾರೆ. ಒನಕೆಯನ್ನು ತೊಳೆದು ಅದಕ್ಕೆ ಹೂ ಇತ್ಯಾದಿಯನ್ನು ಕಟ್ಟಿ ಒಳ್ಳಿನ ಹತ್ತಿರ ಇಡುತ್ತಾರೆ. ಅಡಿಕೆ ಮತ್ತು ಅರಿಷಿಣ ಬೇರುಗಳನ್ನು ಒಂದು ಹೊಸ ಬಟ್ಟೆಯ ತುಂಡಿನಲ್ಲಿ ಗಂಟು ಹಾಕಿ ಒನಕೆಗೆ ಕಟ್ಟುತ್ತಾರೆ. ಮುತ್ತೈದೆಯರೆಲ್ಲ ಅದರ ಸುತ್ತ ಕುಳಿತು ಶೊಭಾನ ಹಾಡನ್ನು ಹಾಡಿ, ಉಡಿ ತುಂಬಿಸಿಕೊಂಡು ತಮ್ಮ ತಮ್ಮ ಮನೆಗೆ ಹೋಗುತ್ತಾರೆ. (ಇಲ್ಲಿ ಶೋಭಾನ ಹಾಡನ್ನು ಹಾಡುವವರು ಜೈನ ಮಹಿಳೆಯೇ ಇರಬೇಕೆಂದು ಕಡ್ಡಾಯ ಏನೂ ಇಲ್ಲ. ಬಹುತೇಕ ಬೇರೆ ಜಾತಿಯ ಹೆಣ್ಣು ಮಕ್ಕಳೇ ಹಾಡುತ್ತಾರೆ).

ಮದುವೆ ನಿಶ್ಚಯವಾದ ಮೇಲೆ ಊರವರೆಲ್ಲಾ ಮದುವೆ ನಡೆಯುವ ಮನೆಯವರಿಗೆ ಬಾಳೆಹಣ್ಣುಗಳನ್ನು ಕೊಟ್ಟು ಶುಭಾಶಯವನ್ನು ಹೇಳುವ ಪದ್ಧತಿ ಇದೆ. ಹಾಗೆ ಮನೆಗೆ ಬಂದ ಬಾಳೆಹಣ್ಣುಗಳನ್ನು ಮನೆಗೆ ಎರಡರಂತೆ ಊರ ತುಂಬ ಬೀರುತ್ತಾ ಮದುವೆಯ ಆಮಂತ್ರಣದ ಮುನ್ಸೂಚನೆ ಕೊಡುತ್ತಾರೆ. ಅಲ್ಲಿಂದಾಚೆ ಎಲ್ಲರೂ ಆ ಮದುವೆಯ ತಯಾರಿಯ ಸಂಭ್ರಮದಲ್ಲಿ ಏಕವಾಗಿ ಹೋಗುತ್ತಾರೆ.

ಒಳ್ಳುಕಲ್ಲು ಪೂಜೆ ಆದ ಮೇಲೆ ಮದುವೆಯ ಮುನ್ನಾದಿನ ದೇವಕರಿ (ದೇವಕಾರ್ಯ) ನಡೆಯುತ್ತದೆ. ಈಗ ಕೂಡ ಜೈನರು ಊರಲ್ಲಿಯ ಎಲ್ಲ ದೇವರುಗಳಿಗೆ ಪೂಜೆ ಮಾಡಿ ನೈವೇದ್ಯ ಮಾಡುತ್ತಾರೆ. ಸುತ್ತಿನ ದೇವರುಗಳಭ್ನು ಮಾತ್ರ ಪೂಜಿಸುತ್ತೇವೆ ಎಂದು ಹಠವನ್ನು ಹಿಟಿಯುವದಿಲ್ಲ. ಜಲಮೂಲಗಳು ಮತ್ತು ಊರದೇವತೆಗಳೆಲ್ಲಾ ಹೊಸದಾಗಿ ಮದುವೆಯಾಗಿ ಆ ಊರಲ್ಲಿ ಸಂಸಾರ ಹೂಡಲಿರುವ ಆ ದಂಪತಿಗಳಿಗೆ ಸುಖಶಾಂತಿಯನ್ನು ಕೊಡಲಿ ಎನ್ನುವ ಭಾವ ಮಾತ್ರ ಕೆಲಸ ಮಾಡುತ್ತದೆ. ಈ ಎಲ್ಲ ಪೂಜೆಯ ಕೈಂಕರ್ಯವನ್ನು ಮಹಿಳೆಯೇ ನಿಭಾಯಿಸುತ್ತಾಳೆ. ಇಲ್ಲಿ ಗಂಡಸರಿಗೆ ಕೆಲಸವೇ ಇಲ್ಲ ಎಂದರೂ ನಡೆಯುತ್ತದೆ.

) ಮದುವೆಯ ದಿನ:

ನಿರ್ದಿಷ್ಟವೇಳೆಗೆ ದಿಬ್ಬಣ ಹೊರಟು ಮದುವೆ ನಡೆಯುವ ಸ್ಥಳವನ್ನು ತಲುಪಿದಾಗ ಅಲ್ಲಿ ಎದುರುಗೊಳ್ಳುವ ಕಾರ್ಯಕ್ರಮ ನಡೆಯುತ್ತದೆ. ಬೀಗ-ಬೀಗಿತಿಯರು ಪರಸ್ಪರ ಬಾಯಲ್ಲಿ ಸಕ್ಕರೆಯನ್ನು ಹಾಕಿ ಉಚಿತ ಉಡುಗೋರೆಗಳನ್ನು ಕೊಟ್ಟು ಸ್ವಾಗತಿಸುತ್ತಾರೆ. ಅಲ್ಲಿಂದಾಚೆ ಪ್ರತಿಯೊಂದು ಕಾರ್ಯಕ್ರಮಗಳು ದಂಪತಿಸಮೇತ ನಡೆಯುತ್ತವೆ. ಯಾವುದೇ ಕಾರಣಕ್ಕಾಗಿ ಹೆಂಡತಿಯೊಂದಿಗೆ ಜಗಳಾಗಿ ಅವಳನ್ನು ತವರು ಮನೆಯಲ್ಲಿ ಬಿಟ್ಟಿದ್ದರೂ ಕೂಡಾ ಮದುವೆಯ ಹಿಂದಿನ ದಿನ ಹಿರಿಯರೆಲ್ಲ ಕೂಡಿ ಅವಳನ್ನು ಕರೆದು ತಂದು ಅವಳ ಸೆರಗಿನ ತುದಿಗೆ ಇವನ ಉಪ್ಪರಣೆಯನ್ನು ಗಂಟು ಹಾಕಿ ಕಾರ್ಯವನ್ನು ಮುಗಿಸಲಾಗುತ್ತದೆ. ಅಲ್ಲಿ ಸಂಪ್ರದಾಯದಂತೆ ಗಂಡನಾದವನು ಹೆಂಡತಿಯ ಹೆಸರನ್ನೂ ಮತ್ತು ಹೆಂಡಿಯಾದವಳಿಂದ ಗಂಡನ ಹೆಸರನ್ನೂ ಹೇಳಿಸಲಾಗುತ್ತದೆ. ಆ ಮೂಲಕ ತಪ್ಪಿ ಹೋಗಲಿರುವ ಗಂಡ-ಹೆಂಡಿತಿಯ ಸಂಬಂಧವನ್ನು ಬೆಸೆಯುವ ಪ್ರಯತ್ನವನ್ನು ಮಾಡಲಾಗುತ್ತದೆ.

) ಆಲಗಂಬ ತರುವದು:

ಮದುವೆಯ ಮಂಟಪದ ಎರಡೂ ಬದಿಗೆ ಆಲ ಮತ್ತು ಬನ್ನಿ ಗಿಡದ ತೊಪ್ಪಲನ್ನು ಕಡಿದು ತಂದು ಕಟ್ಟಲಾಗುತ್ತದೆ. ಹೊಲದಿಂದ ಕಡಿದುತಂದ ಆ ಕಂಟಿಗಳನ್ನು ಹನುಮಂತದೇವರ ಗುಡಿಯಲ್ಲಿ ಇಟ್ಟಿರುತ್ತಾರೆ. ಒಬ್ಬ ಮುತ್ತೈದೆ ಹೆಂಗಸು ತನ್ನ ಗಂಡನೊಂದಿಗೆ ಸಕಲ ವಾದ್ಯಗಳೊಂದಿಗೆ ಅಲ್ಲಿಗೆ ಹೋಗಿ ಅವನ್ನು ಮೆರವಣಿಗೆಯಲ್ಲಿ ತಂದ ಬಳಿಕವೇ ಮದುವೆ ಮಂಟಪ ತಯಾರಾಗುತ್ತದೆ. ವನದೇವತೆಯ ಸಮ್ಮುಖದಲ್ಲಿ ಮದುವೆ ಆಗುವ ಈ ಸಂಪ್ರದಾಯ ಜೈನರಲ್ಲಿ ಹೇಗೆ ಬಂದಿದೆಯೋ ತಿಳಿಯದು! ನಗರವಾಸಿ ಪಂಚಮ ಜೈನ ಸಮಾಜದಲ್ಲಿ ಈ ಆಲಗಂಬ ತರುವ ಸಂಪ್ರದಾಯ ಇಲ್ಲದಿರುವದು ಮತ್ತು ಒಕ್ಕಲುತನ ಮಾಡುವ ಚತುರ್ಥ ಜೈನ ಸಮಾಜದಲ್ಲಿ ಈ ರಿವಾಜು ತಪ್ಪದೇ ಜಾರಿಯಲ್ಲಿರುವದು ಕೃಷಿಸಂಸ್ಕೃತಿಯ ಸ್ಪಷ್ಟ ನಿದರ್ಶನವಾಗಿದೆ. ಆಲಗಂಬವನ್ನು ವರನ ಅಥವಾ ವಧುವಿನ ಸೋದರಸಂಬಂಧಿ ದಂಪತಿಗಳು ತರುತ್ತಾರೆ. ಮದುವೆ ಯಾರ ಮನೆಯಲ್ಲಿ ನಡೆಯುತ್ತದೆಯೋ ಆ ಮನೆಯ ಸೋದರಸಂಬಂಧಿಗಳಿಗೆ ಆದ್ಯತೆ. ಇದೊಂದು ಅತ್ಯಂತ ಮಹತ್ವದ ರಿಚುವೆಲ್‌ಆಗಿ ಇಂದಿಗೂ ಜಾರಿಯಲ್ಲಿದೆ.

ಕ) ಐರಾಣಿ ತರುವದು:

ಮದುವೆ ಮಂಟಪದಲ್ಲಿ ಕಂಬಲಿಯನ್ನು ಹಾಸಿ ಅದರ ಮೇಲೆ ‘ಶಾಸಕ್ಕಿ’ ಹೊಯ್ಯುತ್ತಾರೆ. ಮದುಮಕ್ಕಳು ಆ ಶಾಸಕ್ಕಿಯ ಮೇಲೆಯೇ ಕುಳಿತು ಮದುವೆ ಆಗಬೇಕು. ಹೀಗೆ ಶಾಸಕ್ಕಿಯನ್ನು ಹೊಯ್ಯಲು ಕೂಡಾ ಒಬ್ಬ ಮುತ್ತೈದೆಯೇ ಬೇಕು. ಅದನ್ನು ಐದಾರು ಜನ ಮಹಿಳೆಯರು ಕೂಡಿ ಮಾಡುತ್ತಾರೆ. ಹೊಸ ಕಂಬಳಿ-ಕರಿ ಕಂಬಳಿಯೇ ಆಗಬೇಕು – ಹಾಸಿ ಅದರ ಮೇಲೆ ಅಕ್ಕಿಯ ಕಾಳಿನಿಂದ ಸ್ವಸ್ತಿಕ ಚಿಹ್ನೆಯನ್ನು ಬರೆದ ಮೇಲೆ ಅದರ ಮುಂದೆ ಕುಂಬಾರರ ಮನೆಯಿಂದ ಮುತ್ತೈದೆಯೊಬ್ಬಳು ಪತಿ ಯೊಂದಿಗೆ ಹೋಗಿ ತಂದ ಹೊಸ ಮಣ್ಣಿನ ಕುಂಭವನ್ನು ಇಡುತ್ತಾರೆ. ಇದು ಐರಾಣಿಗೆ.

ಐರಾಣಿಗೆಗೆ ಹೊಸ ಮಣ್ಣಿನ ಕುಂಭಗಳನ್ನೆ ತರುತ್ತಾರೆ. ಅದನ್ನು ಸುಣ್ಣ, ಬಣ್ಣದಿಂದ ಅಲಂಕರಿಸಿ ಅದರಲ್ಲಿ ಕೆಲವರು ಧಾನ್ಯವನ್ನು ತುಂಬಿ ಇಡುತ್ತಾರೆ. ಇನ್ನು ಕೆಲವರು ಅದರಲ್ಲಿ ನೀರು ತುಂಬಿ ಇಡುತ್ತಾರೆ ಸಮೃದ್ಧಿ ಮತ್ತು ಶುಭದಾಯಕ ಸಂಗತಿಗಳು ಈ ದಂತಿಗಳ ಭವಿಷ್ಯದ ಜೀವನದಲ್ಲಿ ಸದಾ ಘಟಿಸುತ್ತ ಇರಲಿ ಎನ್ನುವ ಅಶಯ ಈ ಆಚರಣೆಯ ಹಿಂದೆ ಕೆಲಸ ಮಾಡಿದೆ. ಈ ಎಲ್ಲ ಕಾರ್ಯಗಳಲ್ಲಿ ಸುಮಂಗಲಿಯರ ಓಡಾಟವೇ ಪ್ರಮುಖವಾಗಿರುತ್ತದೆ. ಇದೇ ಸಂದರ್ಭದಲ್ಲಿ ಶೂದ್ರದೇವತೆಗಳೆಂದೇ ಪ್ರಸಿದ್ಧವಾಗಿರುವ ದುರ್ಗವ್ವ, ದ್ಯಾಮವ್ವ, ಲಕ್ಕವ್ವ, ಹನುಮಂತ, ಕಲಮೇಶ್ವರ, ಹೀಗೆ ಊರಲ್ಲಿಯ ಮುಸ್ಲಿಮರ ಮಲ್ಲಿಕಸಾಬ್‌ಮತ್ತು ವೈದಿಕರ ವೇಣು ಗೋಪಾಲಕೃಷ್ಣನನ್ನು ಹೊರತು ಪಡಿಸಿ ಎಲ್ಲ ದೇವರು ಪೂಜೆಗೊಳ್ಳುತ್ತವೆ.

ದೇವಕಾರ್ಯದ ದಿನ ಆ ಮನೆಯಲ್ಲಿ ಸಿಹಿ ಊಟ ಇರುತ್ತದೆ. ಆ ದಿನ ತಪ್ಪದೇ ಊದುತ್ತ, ಬಾರಿಸುತ್ತ ಆರತಿಯನ್ನು ಹಿಡಿದು ಹೆಣ್ಣು ಮಕ್ಕಳೆಲ್ಲ ಕೂಡಿ ಗಂಗಾ ಮಾತಾ (ನದಿ) ಪೂಜೆ ಮಾಡಿ ಬರುತ್ತಾರೆ. ಊರಲ್ಲಿ ನದಿ ಇರದಿದ್ದರೆ ಕೆರೆ, ಬಾವಿ ಅಥವಾ ಯಾವದಾದರೂ ಜಲಮೂಲಗಳನ್ನು ಪೂಜಿಸುತ್ತಾರೆ. ಇಲ್ಲಿ ಯಾರೂ “ನಾವು ಜೈನರು ನಾವು ಜಿನದೇವರನ್ನು ಬಿಟ್ಟು ಬೇರೆ ದೇವರನ್ನು ಪೂಜಿಸುವುದಿಲ್ಲ” ಎನ್ನುವುದಿಲ್ಲ. ಗ್ರಾಮ ಜಗತ್ತಿನಲ್ಲಿ ಭಕ್ತಿಯ ಏಕಮುಖತೆಯನ್ನು ಸಾಧಿಸುವುದು ಸಾಧ್ಯವಿಲ್ಲ. ಬದುಕು ಕೊಡುಕೊಳ್ಳುವಿಕೆಯನ್ನು ಬಯಸುತ೬ತದೆ. ಅಂತಹ ಕೊಡುಕೊಳ್ಳುವಿಕೆಯ ದೀರ್ಘಕಾಲದ ಆಚರಣೆಯಿಂದಾಗಿ ಶ್ರದ್ಧೆ ಮನೆಮಾಡುತ್ತದೆ. ಗ್ರಾಮೀಣ ಜೈನಸಮಾಜವು ಕೂಡಾ ಇಂತಹ ಶ್ರದ್ಧೆಯನ್ನು ಹೊಂದಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಇಲ್ಲಿಯ ಪ್ರತಿಯೊಂದು ಕಾರ್ಯದಲ್ಲಿ ಮುತ್ತೈದೆಯೇ ಮುಂದಾಗುತ್ತಾಳೆ ಎನ್ನುವ ಸಂಗತಿ ಬಹಳ ಮಯಹತ್ವದ್ದಾಗಿದೆ.