ಹಿನ್ನೆಲೆ:

ಭಾರತೀಯ ಸಂಸ್ಕೃತಿಯಲ್ಲಿ ಮೇಲುನೋಟದಲ್ಲಿ ವೈವಿಧ್ಯತೆ ಕಂಡು ಬಂದರೂ ಕೂಡಾ ಮಹಿಳಾನೆಲೆಯಲ್ಲಿ ನೋಡಿದರೆ ಇಡೀ ಭಾರತದ ಮಹಿಳೆಯರೆಲ್ಲಾ ಒಂದೇ ಸಂಸ್ಕೃತಿಯನ್ನು ಬದುಕುತ್ತಿದ್ದಾರೆ ಎನಿಸುತ್ತದೆ. ಅದು ತಾಯಿ ಸಂಸ್ಕೃತಿಯಾಗಿದೆ. ವಿಭಿನ್ನ ಧರ್ಮ, ಜಾತಿ, ಪಂಗಡ, ಅಂತಸ್ತು ಹೀಗೆ ಯಾವುದೇ ನೆಲೆಯಲ್ಲಿ ಈ ಮಹಿಳೆಯರು ತಮ್ಮ ಬದುಕನ್ನು ಸಾಗಿಸುತ್ತಿದ್ದರೂ ಕೂಡಾ ಮಾತೃತ್ವದ ಮಹಾ ಕೊಂಡಿಯೊಂದು ಅವರೆಲ್ಲರನ್ನು ಒಂದೇ ನೆಲೆಯಲ್ಲಿ ತಂದು ನಿಲ್ಲಿಸುತ್ತದೆ. ಭಿನ್ನ ಭಾಷೆ ಮಾತಾಡುತ್ತ, ಭಿನ್ನ ವೇಷ ತೊಟ್ಟಿರುವ ಈ ಮಹಿಳೆಯರು ತಾಯಿಯಾಗಿ ನಿಂತಾಗ ಮಾತ್ರ ಒಂದೇಯಾಗಿ ಕಾಣಿಸುತ್ತಾರೆ. ಅದಕ್ಕೆ ಪೂರಕವೆಂಬಂತೆ ಮಗುವಿನ ಲಾಲನೆ-ಪಾಲನೆಯಲ್ಲಿಯ ಅನೇಕ ಸಂಗತಿಗಳು ಇಡೀ ದೇಶದಲ್ಲೆಲ್ಲಾ ಒಂದೇಯಾಗಿವೆ. ಕರ್ನಾಟಕದ ಮಟ್ಟಿಗಂತೂ ಈ ಮಾತು ಸತ್ಯವಾಗಿದೆ.

ಆದರೆ ಭಿನ್ನ ವಿಚಾರಗಳ, ಧಾರ್ಮಿಕ, ಭೌಗೋಳಿಕ, ಸಾಮಾಜಿಕ, ಆರ್ಥಿಕ ಹೀಗೆ ವಿವಿಧ ಆಯಾಮಗಳಲ್ಲಿ ಬದುಕುತ್ತಿರುವ ಮಹಿಳೆಯನ್ನು ಅಧ್ಯಯನದ ದೃಷ್ಟಿಯಿಂದ ಒಡೆದು ನೋಡಿದಾಗ ನಮಗೆ ಆಗಾಧವಾದ ವ್ಯತ್ಯಾಸಗಳು ಮತ್ತು ಸಾಮ್ಯಗಳು ಕಾಣಿಸುತ್ತವೆ. ಈ ವ್ಯತ್ಯಾಸಗಳೇನೂ ಸಾಂಸ್ಕೃತಿಕ ಬಿರುಕುಗಳಲ್ಲ. ಬದಲಾಗಿ ಮಹಿಳೆ ಬದುಕುತ್ತಿರುವ ಪರಿಸರದಿಂದ ಉಂಟಾದ ಭಿನ್ನತೆಗಳಷ್ಟೇ; ಆ ದೃಷ್ಟಿಯಿಂದ ಜೈನಮಹಿಳೆಯನ್ನು ನೋಡಿದರೆ ಅನೇಕ ಕುತೂಹಲಕಾರಕ ಸಂಗತಿಗಳು ನಮಗೆ ಕಾಣಿಸುತ್ತವೆ. ಜನರೂಢಿಯಲ್ಲಿ ಜೈನರು ಅಂದಾಗ ಬಂಗಾರ ವ್ಯಾಪಾರಿಗಳು, ಶ್ರೀಮಂತರು, ವಿದ್ಯಾವಂತರು ಹಾಗೂ ಹೆಚ್ಚು ಸುಸಂಸ್ಕೃತ ಬದುಕನ್ನು ಬಾಳುವವರು ಎನ್ನುವ ಒಂದು ಹುಸಿ ನಂಬಿಕೆ ನಮ್ಮಲ್ಲಿದೆ. ಆದರೆ ಗ್ರಾಮ ಜಗತ್ತಿನಲ್ಲಿ ಕೃಷಿಯನ್ನೇ ನಮ್ಮ ಆದಾಯದ ಮೂಲವನ್ನಾಗಿ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಜೈನ ಮಹಿಳೆಯರು ಶೂದ್ರರಂತೆ ಬದುಕುತ್ತಿರುವ ಜಗತ್ತೊಂದು ಇದೆ. ಈ ಲೇಖನ ಅಂತಹ ಅನೇಕ ಮಾಹಿತಿಯನ್ನು ಹೊಂದಿದೆ.

. ಭಾರತದಲ್ಲಿ ಜೈನರು:

ಭಾರತ ಒಂದು ಕಾಲದಲ್ಲಿ ಹಿಂದುಸ್ತಾನ ಎಂದು ಕರೆಸಿಕೊಳ್ಳುತ್ತಿತ್ತು. ಅಂದರೆ ಹಿಂದುಗಳು ವಾಸಿಸುವ ದೇಶ ಎನ್ನುವ ಅಭಿಧಾನವನ್ನು ಭಾರತ ಪಡೆದಿತ್ತು. ಆದರೆ ಭಾರತದಲ್ಲಿ ಹಿಂದುಗಳೊಂದಿಗೆ ಹಿಂದುಗಳಲ್ಲದ ಕ್ರೈಸ್ತರು, ಮುಸ್ಲಿಮರು, ಸಿಖ್ಖರು, ಪಾರ್ಸಿಗಳು, ಬೌದ್ಧರು ಹೇಗೋ ಹಾಗೆಯೇ ಜೈನರೂ ಕೂಡಾ ಸೌಹಾರ್ದ ಬದುಕನ್ನು ಬಾಳುತ್ತಿದ್ದಾರೆ. ೨೦೦೧ನೆಯ ಜನಗಣತಿಯ ಪ್ರಕಾರ ಭಾರತದಲ್ಲಿ ೧.೫ ಕೋಟಿ ಜೈನರಿದ್ದಾರೆ. ಅವರೆಲ್ಲ ಭಾರತದ ವಿವಿಧ ನಗರ-ಪಟ್ಟಣಗಳಲ್ಲಿ ಮತ್ತು ಬಹಳಷ್ಟು ಹಳ್ಳಿಗಳಲ್ಲಿ ಬದಕಿ, ಜಿಲ್ಲೆಯ ಜನಜೀವನದ ಜೀವನಾಡಿಯಲ್ಲಿ ಒಂದಾಗಿ ಬದುಕು ಸಾಗಿಸುತ್ತಿದ್ದಾರೆ. ಭಾರತದಲ್ಲಿ ಜೈನರಿಗೆ ಒಂದು ವಿಶೇಷವಾದ ಮಹತ್ವವಿದೆ. ಅವರು ಅಹಂಸಾವಾದಿಗಳಾಗಿರುವದು ಮತ್ತು ಪ್ರಮುಖ ವ್ಯಾಪರಿಗಳಾಗಿರುವದು ಇದಕ್ಕೆ ಕಾರಣವಾಗಿದೆ. ಆದರೆ ಈವರೆಗೂ ಭಾರತದಲ್ಲಿ ಜೈನರು ಯಾವತ್ತೂ ಒಂದು ವೋಟ್ ಬ್ಯಾಂಕ್ ಆಗಿ ರೂಪುಗೊಂಡಿಲ್ಲ. ಇದಕ್ಕೆ ಕಾರಣ ಅವರು ಒಂದೇ ಭೌಗೋಳಿಕ ನೆಲೆಯಲ್ಲಿ ವಿಪುಲವಾಗಿ ನೆಲೆಗೊಳ್ಳದಿರುವುದೇ ಆಗಿದೆ.

. ಕರ್ನಾಟಕದಲ್ಲಿ ಜೈನರು:

ಕರ್ನಾಟಕದಲ್ಲಿ ಜೈನಧರ್ಮ ಯಾವ ಕಾಲದಿಂದ ಇತ್ತೆಂದು ಆಧಾರಸಹಿತವಾಗಿ ಹೇಳುವದು ಕಷ್ಟ. ಈ ಬಗ್ಗೆ ಯಾವ ಇತಿಹಾಸವೂ ರಚಿತವಾಗಿಲ್ಲ. ಶ್ರವಣ ಬೆಳಗೊಳದ ಚಂದ್ರಗಿರಿ (ಚಿಕ್ಕ ಬೆಟ್ಟ)ಯ ಮೇಲಿರುವ ಪಾರ್ಶ್ವನಾಥಸ್ವಾಮಿಯ ಬಸದಿಯ ದಕ್ಷಿಣ ಬಂಡೆಯ ಮೇಲಿರುವ ಶಿಲಾಲೇಖವು ಕರ್ನಾಟಕದಲ್ಲಿ ಜೈನಧರ್ಮವು ಕ್ರಿ.ಶ.  ಪೂರ್ವ ೩ನೆಯ ಶತಮಾನದಿಂದ ಅಸ್ತಿತ್ವದಲ್ಲಿ ಇತ್ತೆಂದು ಹೇಳಲು ಆಧಾರವಾಗಿದೆ. ಶ್ರವಣಬೆಳಗೊಳದಲ್ಲಿ ದೊರೆತ ಶಿಲಾಲೇಖಗಳು ಗಂಗೆ, ರಾಷ್ಟ್ರಕೂಟ, ಹೊಯ್ಸಳ, ಚಾಲುಕ್ಯ ವಿಜಯನಗರ ಮತ್ತು ಮೈಸೂರು ಅರಸರಿಂದ ಬರೆಯಲ್ಪಟ್ಟಿವೆ. ಇನ್ನೂ ಕೆಲವು ಕದಂಬ, ಚೋಳ ಮತ್ತು ಚೆಂಗಾಳ್ವ ಮನೆತನದವರಿಂದ ಬರೆಸಲ್ಪಟ್ಟಿದೆ. ಅಂದರೆ ಆಗಿನಿಂದಲೂ ಜೈನಧರ್ಮ ಕನ್ನಡದ ನೆಲದಲ್ಲಿ ರಾಜಾಶ್ರಯವನ್ನು ಪಡೆದುಕೊಂಡು ಬೆಳೆಯುತ್ತ ಇಲ್ಲಿಯ ಸಂಸ್ಕೃತಿಯಲ್ಲಿ ಮಿಳಿತವಾಗಿ ಬಂದಿದೆ.

ಮೌರ್ಯರು ಜೈನಧರ್ಮಕ್ಕೆ ಕೊಟ್ಟ ರಾಜಾಶ್ರಯದಿಂದ ಕರ್ನಾಟಕದಲ್ಲಿ ಜೈನಧರ್ಮ ಬೆಳೆಯಿತು. ರಾಷ್ಟ್ರಕೂಟರ ಕಾಲದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಿತು. ೧೧ನೆಯ ಶತಮಾನದ ಕೊನೆಯ ಘಟ್ಟದಲ್ಲಿ ಜೈನಧರ್ಮ ಅನೇಕ ಬಿಕ್ಕಟ್ಟುಗಳನ್ನು ಎದುರುಕೊಂಡಿತು. ಅದಕ್ಕಿದ್ದ ಅನೇಕ ರಾಜಾಶ್ರಯಗಳು ತಪ್ಪಿ ಹೋದವು. ಕನ್ನಡದ ನೆಲದಲ್ಲಿ ಅದರ ಅವನತಿ ನಿಧಾನವಾಗಿ ಪ್ರಾರಂಭವಾಯಿತು. ಅವನತಿಯ ಅನೇಕ ಕಾರಣಗಳಲ್ಲಿ ಐದು ಕಾರಣಗಳು ಅತ್ಯಂತ ಮಹತ್ವದ್ದಾಗಿವೆ:

೧. ದಕ್ಷಿಣದ ಪ್ರಬಲ ರಾಜಮನೆತನಗಳಾದ ರಾಷ್ಟ್ರಕೂಟ ಮತ್ತು ಗಂಗರ ಪತನ.

೨. ಬಸವೇಶ್ವರರ ಶರಣ ಚಳುವಳಿಯ ನಂತರ ಚೆಂಗಾಳ್ವರು, ಕಾರ್ಕಳದ ಭೈರವ ಒಡೆಯರು (ಕಾರ್ಕಳದಲ್ಲಿ ಗೊಮ್ಮಟ ಮೂರ್ತಿಯನ್ನು ನಿಲ್ಲಿಸಿದವರು) ಮತ್ತು ಕೊಡಗಿನ ಅರಸರು ವೀರಶೈವರಾದುದು.

೩. ಜೈನ ವೀರ ಬಣಜಿಗ ಎಂಬ ವ್ಯಾಪಾರಿ ಸಮಾಜವನ್ನು ವೀರಶೈವ ಮಾಡಿದ್ದು.

೪. ಶಾಂತಲೆಯ ಗಂಡ ಬಿಟ್ಟಿದೇವ ರಾಮಾನುಚಾರ್ಯರ ಪ್ರಭಾವದಿಂದ ಮತಾಂತರಗೊಂಡದ್ದು. (ಶಾಂತಲೆ ಮಾತ್ರ ಜೈನಳಾಗಿಯೇ ಉಳಿದಳು.)

೫. ಪುಲಿಗೆರೆಯ ಅವಯ್ಯ ಮತ್ತು ಅಣ್ಣಿಗೆರೆಯ ವೀರಗೊಗ್ಗಿದೇವ ಜೈನ ಧರ್ಮದ ಇನ್ನೊಂದು ಶಾಖೆಯಾದ ಯಾಪನೀಯ ಜೈನಧರ್ಮವನ್ನು ನಿರ್ನಾಮ ಮಾಡಿದ್ದು (ಗೊಗ್ಗಿದೇವ ಜೈನ ಕುಲಕುಠಾರ ಎಂಬ ಬಿರುದನ್ನು ಪಡೆದಿದ್ದ.)

ಮೇಲೆ ಹೇಳಿದ ಈ ಐತಿಹಾಸಿಕ ಕಾರಣಗಳು ಜೈನಧರ್ಮ ಕನ್ನಡದ ನೆಲದಲ್ಲಿ ಸದೃಢವಾಗಿ ಬೇರೂರುತ್ತಿರುವ ಸಂದರ್ಭದಲ್ಲಿಯೇ ಘಟಿಸಿದ್ದರಿಂದ ಅದರ ಬೆಳವಣಿಗೆ ಕುಂಠಿತವಾಗಲು ಕಾರಣವಾಯಿತು. ಆದರೂ ಹನ್ನೆರಡನೆಯ ಶತಮಾನದಿಂದ ಈ ಇಪ್ಪತ್ತನೆಯ ಶತಮಾನದ ಕಾಲಾವಧಿಯ ಹಂತದಲ್ಲಿ ಜೈನಧರ್ಮ ಎಳು-ಬೀಳುಗಳನ್ನು ದಾಟುತ್ತಲೇ ಇಂದಿಗೂ ತನ್ನ ಜಿಗುಡತನ ಮತ್ತು ಸಹನೆಯಿಂದ ಉಳಿದು ಬಂದಿದೆ. ಇಂದು ಕರ್ನಾಟಕದಲ್ಲಿ ಜೈನಸಮಾಜ ತನ್ನದೇ ಆದ ಮಹತ್ವವನ್ನು ಪಡೆದುಕೊಂಡು ಇಲ್ಲಿಯ ಮುಕ್ಯವಾಹಿನಿಯಲ್ಲಿ ಮತ್ತೊಮ್ಮೆ ತನ್ನ ಇರುವಿಕೆಯನ್ನು ತೋರ್ಪಡಿಸಿಬಾಳುತ್ತಿದೆ.

ಆದರೆ ಜೈನಸಮಾಜದಲ್ಲಿ ಎಲ್ಲವೂ ಮೇಲೆ ಕಾಣಿಸುವಂತೆ ಸರಳ ಮತ್ತು ನಿರುಂಬಳವಾಗಿಲ್ಲ. ಸಮಾಜದಲ್ಲಿ ಪ್ರತಿಷ್ಠೆ ಅಹಂ ಮತ್ತು ಅಂತಸ್ತಿನ ಪ್ರಶ್ನೆಯನ್ನು ಎದುರು ಮಾಡಿಕೊಂಡು ತನ್ನ ಸಮಾಜದಲ್ಲಿಯೇ ಅನೇಕ ಬಿರುಕಗಳನ್ನು ಪಡೆಯುತ್ತ ಒಳಪಂಗಡಗಳನ್ನು ಹುಟ್ಟ ಹಾಕಿಕೊಂಡು ನಡೆಯುತ್ತಿದೆ. ಜೈನಧರ್ಮದಲ್ಲಿ ಒಳಪಂಗಡಗಳು ಭೌಗೋಳಿಕ ಕಾರಣಗಳು, ಕುಲಪ್ರತಿಷ್ಠೆಗಳು, ಅಂತಸ್ತು, ಮಠಮಾನ್ಯಗಳಲ್ಲಿ ಭಿನ್ನತೆ, ಮಹಿಳೆಯ ನಡವಳಿಕೆ ಇತ್ಯಾದಿಗಳು ಗಣನೆಗೆ ಬರುತ್ತವೆ.

. ಜೈನಧರ್ಮದ ಒಳಪಂಗಡಗಳು:

“ಆಯಾ ಧರ್ಮಗಳು ಒಳ ಸಂಘರ್ಷಗಳಿಲ್ಲದ, ಒಳಪಂಗಡಳಿಲ್ಲದ ಏಕರೂಪಿ ಬಂಡೆಗಳಂತೆ ಕಲ್ಪಿಸಿಕೊಳ್ಳುತ್ತವೆ. ಆ ಧರ್ಮಗಳ ಯಜಮಾನಿ ತತ್ತ್ವಗಳನ್ನು ಎದುರಿಸುತ್ತ ಹುಟ್ಟಿಕೊಂಡಿರುವ ಪ್ರತಿ ತತ್ವಗಳನ್ನಲ್ಲ”. (ರಹಮತ್ ತರೀಕೆರೆ) ಇದಕ್ಕೆ ಜೈನಧರ್ಮ ಕೂಡಾ ಹೊರತಾದುದಲ್ಲ. ಜೈನಧರ್ಮ ತನ್ನ ಈ ಬಹಕಾಲದ ಯಾತ್ರೆಯಲ್ಲಿ ತನ್ನದೇ ಯಜಮಾನಿ ತತ್ವಗಳನ್ನು ಪ್ರಶ್ನಿಸಿ, ಬಂಡಾಯ ಸಾರಿ ಅದರ ಒಳಗೆಯೇ ಪ್ರತ್ಯೇಕ ಗುಂಪಾಗಿ, ಕವಲಾಗಿ, ಒಡೆದುಕೊಂಡು ಕುಳಿತಿದೆ. ಆದರೆ ಹೊರ ಜಗತ್ತಿಗೆ ಕಾಣಿಸುವದು ಅದರ ವೈದಿಕ ವಿರೋಧಿ ನಿಲುವು ಮಾತ್ರ. ಧರ್ಮದ ಮೂಲ ಸಿದ್ಧಾಂತದಲ್ಲಿಯೇ ಹೀಗೆ ಪಂಗಡಗಳಾದಾಗ ಅದನ್ನು ಅನುಸರಿಸಿ ಬಾಳುತ್ತಿರುವ ಜೈನಸಮಾಜದಲ್ಲಿಯೂ ಸಹಜವಾಗಿ ಪಂಗಡಗಳು ಉಂಟಾದವು.

ಭಗವಾನ್ ಮಹಾವೀರರ ತರುವಾಯ ಜೈನಧರ್ಮದಲ್ಲಿ ಅನೇಕ ಬಿರುಕುಗಳು ಮೂಡಿಕೊಂಡವು. ಶೃತಿ ಕೇವಲಿ ಭದ್ರಬಾಹುವಿನ ಕಾಲದಲ್ಲಿ ಉತ್ತರಭಾರತದಲ್ಲಿ ೧೨ ವರ್ಷಗಳ ವರೆಗೆ ಬಿದ್ದ ಬರಗಾಲದಿಂದಾಗಿ ಭದ್ರಬಾಹುವಿನ ನೇತೃತ್ವದಲ್ಲಿ ಅನೇಕ ಜೈನಯತಿಗಳು ದಕ್ಷಿಣಕ್ಕೆ ಬಂದರು. ಸ್ಥೂಲ ಭದ್ರ ಆಚಾರ್ಯರ ನೇತೃತ್ವದಲ್ಲಿ ಕೆಲವು ಯತಿಗಳು ಉತ್ತರ ಭಾರತದಲ್ಲಿಯೇ ಉಳಿದರು. ಅವರು ಅಲ್ಲಿಯ ಪರಿಸಿಗೆ ಅನುಗುಣವಾಗಿ ವಸ್ತ್ರ, ಪಾತ್ರ ಮತ್ತು ದಂಡವನ್ನು ಸ್ವೀಕರಿಸಿದರು. ದಕ್ಷಿಣಕ್ಕೆ ಬಂದವರು ವಸ್ತ್ರಹೀನ (ನಿರ್ಗ್ರಂಥ)ರಾಗಿಯೇ ಉಳಿದುಕೊಂಡರು. ಮುಂದೆ ಪರಿಸ್ಥಿತಿ ಸುಧಾರಿಸಿದ ಮೇಲೆ ದಕ್ಷಿಣದವರು ತಿರುಗಿ ಉತ್ತರಕ್ಕೆ ಹೋದಾಗ ಮಗಧ ದೇಶದಲ್ಲಿ ವಸ್ತ್ರ ಧರಿಸಿದ ಜೈನ ಯತಿಗಳನ್ನು ಕಂಡು ಅವನ್ನು ತ್ಯಜಿಸಲಿಕ್ಕೆ ಹೇಳಿದರು. ಆದರೆ ಅವರು ವಸ್ತ್ರವನ್ನು ಧರಿಸಿಯೇ ಉಳಿದರು. ಹೀಗೆ ಸ್ಪಷ್ಟವಾದ ಎರಡು ಕವಲುಗಳು ಜೈನಧರ್ಮದಲ್ಲಿ ಉಳಿದುಕೊಂಡವು. ಅವೇ ಶ್ವೇತಾಂಬರ ಮತ್ತು ದಿಗಂಬರ ಪಂಗಡಳಾಗಿವೆ.

ಕರ್ನಾಟಕದ ಮಟ್ಟಿಗೆ ಹೇಳುವದಾದರೆ ಇಲ್ಲಿ ದಿಗಂಬರಪಂಥದ ಜೈನರದೇ ಪ್ರಾಧಾನ್ಯ. ಕ್ರಿ.ಶ. ೫ನೆಯ ಶತಮಾನದ ಮೃಗೇಶವರ್ಮನ ರಾಜ್ಯದಲ್ಲಿ ಸ್ವೇತಪಟಮಹಾಶ್ರಮಣ ಸಂಘ (ಶ್ವೇತಾಂಬರ) ಮತ್ತು ನಿರ್ಗ್ರಂಥ ಮಹಾ ಶ್ರಮಣ ಸಂಘ (ದಿಗಂಬರ) ಯತಿಗಳ ಸಂಘಗಳು ಇದ್ದವೆಂದು ತಿಳಿಯುತ್ತದೆ. ಆದರೆ ಇಂದು ಕರ್ನಾಟಕದಲ್ಲಿ ದಿಗಂಬರ ಪಂಥದವರೇ ಹೆಚ್ಚಾಗಿದ್ದಾರೆ. ಉತ್ತರ ಭಾರತದಿಂದ ಬಂದಿರುವ ಶ್ವೇತಾಂಬರ ಪಂಥದವರೂ ಕೂಡಾ ಇಲ್ಲಿ ವ್ಯಾಪಾರವನ್ನು ಮಾಡುತ್ತ, ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೂ ಕೂಡಾ ಅವರು ಕರ್ನಾಟಕದ ಸಂಸ್ಕೃತಿಯಲ್ಲಿ ಮಿಳಿತವಾಗದೇ ಇದ್ದಾರೆ. ಅಷ್ಟೇ ಅಲ್ಲ ಅವರ ಹೆಣ್ಣು ಮಕ್ಕಳು ಕೂಡಾ ಇಪ್ಪತ್ತು ಮೂವತ್ತು ವರ್ಷಗಳಿಂದ ಕನ್ನಡದ ನೆಲದಲ್ಲಿ ವಾಸಿಸುತ್ತಿದ್ದರೂ ಕೂಡಾ ಕನ್ನಡವನ್ನು ಮಾತಾಡಲು ಕಲಿತಿಲ್ಲ. ಏಕೆಂದರೆ ಇಲ್ಲಿ ವ್ಯಾಪಾರವನ್ನು ಮಾಡುವವರು ಗಂಡಸರಾಗಿದ್ದು, ಮಹಿಳೆಯರು ತಮ್ಮ ಗೃಹಕೃತ್ಯದ ಸಂಗತಿಗಳನ್ನು ಮಾತ್ರ ನೋಡಿಕೊಂಡು ಇರುತ್ತಾರೆ. ತಮ್ಮದೇ ಆದ ಪ್ರತ್ಯೇಕವಾದ ಜೈನಬಸದಿಗಳನ್ನು ಕಟ್ಟಿಕೊಂಡು ಪೂಜೆಗಾಗಿ ಅಲ್ಲಿಯೇ ಹೋಗುತ್ತಾರೆ. ಹೀಗಾಗಿ ಆ ನೆಪದಿಂದಲಾದರೂ ಇಲ್ಲಿಯ ಕನ್ನಡದ ಜೈನ ಮಹಿಳೆಯರೊಂದಿಗೆ ಕೂಡಿ ಮಾತಾಡುವ ಸಂದರ್ಭದಿಂದ ಅವರು ಹೊರಗುಳಿದಿದ್ದಾರೆ. ಇಲ್ಲಿಯ ಸಾರ್ವಜನಿಕರೊಂದಿಗೂ ಕೂಡಾ ಅವರು ಹೆಚ್ಚಾಗಿ ಬೆರೆತುಕೊಳ್ಳುವದಿಲ್ಲ. ಹೀಗಾಗಿ ಲಗ್ನ, ಮುಂಜಿ, ಸಾವು, ನೋವು ಇತ್ಯಾದಿ ಸಾಮಾಜಿಕ ಕಾರ್ಯಗಳಲ್ಲಿ ಕೂಡಿಕೊಳ್ಳುವ ಸಂದರ್ಭದಲ್ಲಿ ಕೂಡಾ ಈ ಮಹಿಳಾಗುಂಪು ನಮಗೆ ಕಾಣಸಿಗುವದಿಲ್ಲ. ಇದಕ್ಕೆ ಎರಡು ಕಾರಣಗಳನ್ನು ನಾನು ಕಂಡುಕೊಂಡಿದ್ದೇನೆ.

೧) ಶ್ವೇತಾಂಬರ ಪಂಥದವರು ನೂರಾರು ವರ್ಷ ಇಲ್ಲಿಯೇ ಬಾಳುತ್ತಿದ್ದರೂ ಕೂಡಾ ಅವರು ತಮ್ಮ ಮಕ್ಕಳಿಗೆ ಮದುವೆ ಮಾಡುವ ಕನ್ಯೆಯನ್ನು ರಾಜಸ್ಥಾನ ಮತ್ತು ಗುಜರಾತಗಳಿಂದಲೇ ತರುತ್ತಾರೆ. ಇಲ್ಲಿಯ ಜೈನ ಕನ್ಯೆಯನ್ನು ಅವರು ತಂದುಕೊಳ್ಳುವದಿಲ್ಲ ಮತ್ತು ಇಲ್ಲಿಯ ಜೈನ ವರಗಳಿಗೆ ತಮ್ಮ ಕನ್ನೆಯನ್ನು ಕೊಡುವದೂ ಇಲ್ಲ. ತಮ್ಮ ಹೆಣ್ಣು ಮಕ್ಕಳನ್ನು ದೂರದ ಗುಜರಾತ ಮತ್ತು ರಾಜಸ್ಥಾನದ ಹುಡುಗನಿಗೆ ಕೊಟ್ಟು ಮದುವೆ ಮಾಡುತ್ತಾರೆ. ಇದರಿಂದ ಹಾಗೆ ಮದುವೆ ಆಗಿ ಬಂದ ಸೊಸೆ ಕನ್ನಡದ ಸೊಸೆಯಾಗಿ ಬಂದಿರುವದಿಲ್ಲ. ಏನಿದ್ದರೂ ಇದು ತಾವು ವ್ಯಾಪರಕ್ಕಾಗಿ ಬಂದ ನೆಲ, ಎನ್ನುವ ಭಾವನೆಯೇ ಅವರಲ್ಲಿ ಇಂದಿಗೂ ಬೇರೂರಿ ಬಿಟ್ಟಿದೆ. ಆದ್ದರಿಂದ ಇಲ್ಲಿಯ ಭಾಷೆಯನ್ನು ಅವರು ಕಲಿಯಲಿಕ್ಕೆ ಹೋಗುವದಿಲ್ಲ. ಮತ್ತು ಇಲ್ಲಿಯ ಸಂಸ್ಕೃತಿಯಲ್ಲಿ ಮಿಳಿತವಾಗಲೂ ಹೋಗುವದಿಲ್ಲ.

೨) ತಮ್ಮ ಧಾರ್ಮಿಕ ಆಚರಣೆಗಳಿಗಾಗಿ ಅವರು ಉತ್ತರಭಾರತದಿಂದ ಬರುವ ಶ್ವೇತಾಂಬರ ಜೈನಯತಿಗಳ ಆಗಮನವನ್ನೇ ಕಾಣುತ್ತಾರೆ. ಇಲ್ಲಿ ಬರುವ ನಿರ್ಗ್ರಂಥ ಯತಿಗಳ ದರ್ಶನಕ್ಕೂ ಬರುವದಿಲ್ಲ. ಏಕೆಂದರೆ ಮೊದಲೇ ಧರ್ಮದಲ್ಲಿ ಅಭಿಪ್ರಾಯ ಭೇದ ಇರುವದರಿಂದ ಇಲ್ಲಿಯ ಜೈನರಿಗೆ ಅದೇನೂ ಹೊಸದಾದದ್ದು ಎನಿಸುವದಿಲ್ಲ.

ಒಂದು ಅರ್ಥದಲ್ಲಿ ಶ್ವೇತಾಂಬರ ಜೈನ ಪಂಥವು ಕರ್ನಾಟಕದ ಸಂಸ್ಕೃತಿಯಲ್ಲಿ ಮಿಳಿತವಾಗದ ಮಸಿಳಾ ಗುಂಪಾಗಿದೆ. ಅವರ ಮೂಲಬೇರುಗಳು ರಾಜಸ್ಥಾನ ಮತ್ತು ಗುಜರಾತಗಳೇ ವಿನಃ ಕರ್ನಾಟಕದ ನೆಲವಲ್ಲ. ವ್ಯಾಪಾರ ಅವರ ಮೂಲ ಉದ್ದೇಶವಾಗಿದ್ದರಿಂದ ಮತ್ತು ಕರ್ನಾಟಕದ ನೆಲ ಅವರಿಗೆ ಸದಾ ಅನುಕೂಲಕರವಾಗಿದ್ದರಿಂದ ಅವರು ಇಲ್ಲಿ ಇದ್ದಾರೆ. ಹಾಗಾಗಿ ದಿಗಂಬರ ಪಂಥದ ಜೈನ ಮಹಿಳೆ ಮಾತ್ರ ಇಲ್ಲಿಯ ಅಧ್ಯಯನಕ್ಕೆ ಒಳಪಟ್ಟಿದ್ದಾಳೆ.

ಶ್ವೇತಾಂಬರ ಜೈನ ಸಮಾಜದಲ್ಲಿಯೂ ಕೂಡಾ ಒಳಪಂಗಡಗಳಿವೆ. ಅಲ್ಲಿಯೂ ತಾರತಮ್ಯಗಳಿವೆ. ಅವೆಲ್ಲವೂ ಮದುವೆ ಮುಂತಾದ ಕೊಡುಕೊಳ್ಳುವ ಸಂದರ್ಭದಲ್ಲಿ ತಪ್ಪದೇ ಗಣನೆಗೆ ಬರುತ್ತವೆ. ಅವೆಲ್ಲವನ್ನು ಅವರು ಅವರದೇ ಆದ ಸಾಮಾಜಿಕ ನ್ಯಾಯ  ವಿಧಾನದಿಂದ ಬಗೆಹರಿಸಿಕೊಳ್ಳುತ್ತಾರೆ. ಜೈನಧರ್ಮದಲ್ಲಿ ಮುಖ್ಯವಾಗಿ ಒಡೆದು ಕಾಣಿಸುವ ಕವಲುಗಳು ಮೇಲುನೋಟಕ್ಕೆ ಎರಡೇ ಆಗಿದ್ದರೂ ಕೂಡಾ ದಿಗಂಬರ ಪಂಥದಲ್ಲಿಯೇ ಹಲವಾರು ಪಂಗಡಗಳು ಚಾಲ್ತಿಯಲ್ಲಿವೆ.

ದಿಗಂಬರ ಜೈನ ಒಳಪಂಗಡಗಳು

ಚತುರ್ಥ

ಪಂಚಮ

ಒಕ್ಕಲುತನ ಮಾಡುವವರು

ವ್ಯಾಪಾರಿಗಳು

ಬಳೆಗಾರ

ಕಾಸಾರ

ಬೋಗಾರ

ಗೌಡರು ಬೇರೆಯವರಿಂದ ಒಕ್ಕಲುತನ ಮಾಡಿಸುವವರು

ಸಾಮಾನ್ಯರು ಸ್ವತಃ ಒಕ್ಕಲುತನ ಮಾಡುವವರು

 

ಮೇಲೆ ತಿಳಿಸಿದ ಇಷ್ಟು ಒಳಪಂಗಡಗಳೊಂದಿಗೆ ದಿಗಂಬರ ಪಂಥದಲ್ಲಿ ಹೆಚ್ಚಾಗಿ ಬೆಳಗಾಂವಿ, ವಿಜಾಪುರ, ಬಾಗಲಕೋಟ, ಗುಲ್ಬರ್ಗಾ ಮತ್ತು ದಕ್ಷಿಣ ಮಹಾರಾಷ್ಟ್ರದ ಜಿಲ್ಲೆಗಳಾದ ಸಾಂಗಲಿ, ಕೊಲ್ಹಾಪುರ, ಸಾತಾರಾ, ಸೊಲ್ಲಾಪುರ ಇತ್ಯಾದಿಗಳಲ್ಲಿ ಹೀನ ಕುಲ ಮತ್ತು ಮೇಲು ಕುಲ ಎಂಬ ಹೆಚ್ಚು ಪ್ರಚಾರದಲ್ಲಿ ಇರದ ಮತ್ತು ಹೆಣ್ಣು, ಗಂಡು ಕೊಡುಕೊಳ್ಳುವ ಸಂದರ್ಭದಲ್ಲಿ ತಪ್ಪದೇ ಗಣನೆಗೆ ಬರುವ ಎರಡು ವಿಭಾಗಗಳಿವೆ. ಪಂಚಮ ಜೈನರಲ್ಲಿ ಬರುವ ಕಾಸಾರ, ಕಂಚಗಾರ, ಬಳೆಗಾರ ಇತ್ಯಾದಿ ಉಪಪಂಗಡಗಳು ಅವರು ಕಾಲಾಂತರದಲ್ಲಿ ಮಾಡಿಕೊಂಡು ಬಂದ ಉದೊಗಗಳ ಮೇಲಿಂದ ಬಂದಿವೆ. ಆದರೆ ಚತುರ್ಥದಲ್ಲಿ ಇರುವ ಮೇಲು ಕುಲ ಮತ್ತು ಹೀನ ಕುಲ ಎಂಬ ಪಂಗಡಗಳು ಮಹಿಳಾ ಚಾರಿತ್ರ್ಯಕ್ಕೆ ಸಂಬಂಧಪಟ್ಟವುಗಳಾಗಿವೆ.

. ಹೀನಕುಲ:

ಜೈನರಲ್ಲಿ ಹೀನ ಕುಲ ಎಂದರೇನು? ಜೈನಧರ್ಮ ಗಂಡ ಸತ್ತ ವಿಧವಾ ಮಹಿಳೆಗೆ ಪುನರ್ ವಿವಾಹದ ಅವಕಾಶವನ್ನು ಕೊಟ್ಟು, ಅವಳನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸಿಕೊಳ್ಳುವ, ಎಲ್ಲ ಮಹಿಳೆಯರಂತೆ ಧಾರ್ಮಿಕ ಆಚರಣೆಯಲ್ಲಿ ಯಾವುದೇ ಭೇದ ಭಾವ ಇಲ್ಲದೆ ಕೂಡಿಕೊಳ್ಳುವ ಕ್ರಾಂತಿಕಾರಕ ಧೋರಣೆಯನ್ನು ತಳೆದಿದೆ. ಆದರೆ ಹೆಣ್ಣಿನ ದೃಷ್ಟಿಯಲ್ಲಿ ಎಲ್ಲ ಧರ್ಮದ ಜನರಂತೆ ಜೈನರೂ ಕೂಡಾ ಅಷ್ಟೇನು ಉದಾರಿಗಳಲ್ಲ.

ಜೈನಧರ್ಮದ ತತ್ವ ಪ್ರಣಾಳಿಕೆಗಳು ವೈದಿಕ ವಿರೋಧಿ ನೆಲೆಯಲ್ಲಿ ಕೆಲಸ ಮಾಡುತ್ತವೆ. ಗಂಡ ಸತ್ತ ವೈದಿಕ ಮಹಿಳೆ ಸಮಾಜದ ಮುಖ್ಯವಾಹಿನಿಯಿಂದ ವಿಮುಖಳಾಗಿ ಮನೆಯ ಮೂಲೆಯಲ್ಲಿ ಕುಳಿತರೆ, ಜೈನ ಧರ್ಮ ಅವಳಿಗೆ ಪುನರ್ ವಿವಾಹದ ಅವಕಾಶವನ್ನು ನೀಡಿದೆ. ಇದು ಧರ್ಮ ಸಮ್ಮತವಾಗಿದೆ. ಆದರೂ ಕೂಡಾ ವಾಸ್ತವದಲ್ಲಿ ಇದುವರೆಗೂ ಒಂದು ಪುನರ್ ವಿವಾಹ ಆಗಿಲ್ಲವೆಂದರೆ ಏನರ್ಥ? ಗಂಡ ಸತ್ತ ಮಹಿಳೆಯನ್ನು ಹೆಂತಿ ಸತ್ತ ವಿಧುರರು ಈಗಲೂ ಅಲ್ಲಲ್ಲಿ ಮದುವೆ ಆಗುತ್ತಾರೆ. ಹೆಚ್ಚಾಗಿ ಉತ್ತರಕರ್ನಾಟಕದಲ್ಲಿ ಜೈನ ಚತುರ್ಥ ಪಂಗಡದಲ್ಲಿ ಇಂತಸ ಮದುವೆಗಳು ನಡೆಯುತ್ತವೆ. ಶಾಂತಿನಾಥ ದೇಸಾಯಿಯವರ ಓಂ ಣಮೋ ಕಾದಂಬರಿಯಲ್ಲಿ ಈ ಮದುವೆಯನ್ನು ಒಂದು ರೀತಿಯ ಗೇಲಿಗೆ ಒಳಗು ಮಾಡಿ ಚಿತ್ರಿಸಲಾಗಿದೆ. ತುಂಬ ಪ್ರಗತಿಪರರಾಗಿದ್ದ ದೇಸಾಯಿಯವರಿಗೂ ಈ ಬಗೆಯ ಮದುವೆ ಒಂದು ಗೇಲಿಯ ಸಂಗತಿಯಾಗಿತ್ತು ಅಂದರೆ ಸಮಾಜದ ಸಾಮಾನ್ಯ ಜನರ ಮನೋಸ್ಥಿತಿ ಹೇಗಿರಬೇಡ?

ಹೀಗೆ ವಿಧುರ ಮತ್ತು ವಿಧವೆಯರ ಈ ಬಗೆಯ ಮದುವೆಯನ್ನು ಪುನರ್ ವಿವಾಹವೆಂದು ಕರೆಯದೆ, ಜೈನ ಸಮಾಜ ಅದನ್ನು ಉಡುಕಿ (ಕೂಡಿಕೆ) ಎಂದು ಕರೆದು ಧಾರ್ಮಿಕ ವಿಧಿ-ವಿಧಾನದಲ್ಲಿ ಅಂಥ ಮಹಿಳೆಯನ್ನು ದೂರ ಇಡುತ್ತಿದೆ. ಹೀಗೆ ಉಡಕಿಯಾದ ಮಹಿಳೆ ಸಮಾಜದಲ್ಲಿ ಎರಡನೆಯ ದರ್ಜೆಯ ಸ್ಥಾನವನ್ನು ಪಡೆದು ಜೀವಿಸಬೇಕಾಗಿದೆ. ತನ್ನದೇ ಧರ್ಮದ ಪ್ರಣಾಳಿಕೆಯ ವಿರುದ್ಧವೇ ಮಹಿಳೆಯರ ಬಗ್ಗೆ ಜೈನ ಸಮಾಜ ನಡೆದುಕೊಳ್ಳುತ್ತಿದೆ. ಇದೊಂದು ವಿಪರ್ಯಾಸವೇ ಆಗಿದೆ ಎಂದು ಹೇಳಬೇಕಾಗಿದೆ.

ಹಾಗೆ ಉಡಕಿಯಾದ ಮಹಿಳೆಯ ಗಂಡ ದುರ್ದೈವದಿಂದ ಸತ್ತು ಹೋದರೆ, ಪರಿಸ್ಥಿತಿಯ ಒತ್ತಡದಿಂದ ಆ ಮಹಿಳೆ ಮತ್ತೊಂದು ಮದುವೆಯಾದರೆ (ಉಡಕಿ) ಅಂದರೆ ಮೂರನೆಯ ಮದುವೆಯಾದರೆ ಅಲ್ಲಿ ಹುಟ್ಟು ಮಕ್ಕಳೆಲ್ಲಾ ಹೀನಕುಲ ಜೈನರೆನಿಸಿಕೊಳ್ಳುತ್ತಾರೆ. ಯಾವ ಅರ್ಥದಲಿಲ ಅವರು ಹೀನರು? ಅದರಲ್ಲಿ ಮಹಿಳೆಯ ತಪ್ಪು ಏನು? ಇದಾವುದನ್ನೂ ಸಮಾಜ ನೋಡುವದಿಲ್ಲ. ಹಾಗೆ ಹೀನಕುಲ ಎನಿಸಿಕೊಂಡ ಆ ಮನೆತನವು ಮೊಮ್ಮಕ್ಕಳು, ಮರಿಮಕ್ಕಳನ್ನು ಕಂಡರೂ ಕೂಡಾ ಉಚ್ಚಕುಲ ಆಗುವದಿಲ್ಲ ಎನ್ನುವ ಸಂಗತಿ ವಿಪರ್ಯಾಸವಾಗಿದೆ. ಮುಂದೆ ಹೆಣ್ಣು, ಗಂಡು ಕೂಡುಕಳ್ಳುವ ಸಂದರ್ಭದಲ್ಲಿ ಈ ಹೀನ ಕುಲ ತಪ್ಪದೇ ಗಣನೆಗೆ ಬರುತ್ತದೆ. ಗಂಡಸು ಎಷೊ ಮದುವೆ ಆದರೂ ಕೂಡ ಅವನು ಹೆತ್ತ ಮಕ್ಕಳು ಹೀನ ಕುಲ ಎನಿಸಿಕೊಳ್ಳುವದಿಲ್ಲ. ಆದರೆ ಹೆಣ್ಣಿಗೆ ಮಾತ್ರ. ಈ ಕುಲಕಳಂಕತೆಯನ್ನು ಆರೋಪಿಸುವದು ಜೈನಧರ್ಮವವಂತೂ ಅಲ್ಲ. ಅದು ಜೈನಸಮಾಜ ಹೆಣ್ಣು ಪಾವಿತ್ರ್ಯದ ವೈದಿಕ ನಂಬಿಕೆಯನ್ನೇ ಮನಸಾರೆ ಒಪ್ಪಿಕೊಂಡ ಮನೋಸ್ಥಿತಿಯಾಗಿದೆ.

ಐವತ್ತು ಅರವತ್ತು ವರ್ಷಗಳ ಹಿಂದೆ ಜೈನಸಮಾಜದಲ್ಲಿ ಹೆಣ್ಣು ಸಂತತಿ ಕಡಿಮೆ ಇತ್ತು. ಕನಿಷ್ಠ ಉತ್ತರ ಕರ್ನಾಟಕದ ಒಕ್ಕಲುತನ ಮಾಡುವ ಕೃಷಿಕ ಜೈನರಲ್ಲಿ ಹಾಗೆ ಇತ್ತು. ಕನಿಷ್ಟ ಉತ್ತರ ಕರ್ನಾಟಕದ ಒಕ್ಕಲುತನ ಮಾಡುವ ಕೃಷಿಕ ಜೈನರಲ್ಲಿ ಹಾಗೆ ಇತ್ತು. (ಆ ಪರಿಸ್ಥಿತಿ ಈಗ ಮತ್ತೆ ಬಂದಿದೆ. ಅದನ್ನು ಮುಂದೆ ಚರ್ಚಿಸುತ್ತೇನೆ.) ಸಂಸಾರ ನಿರ್ವಹಣೆಗಾಗಿ ಹೀಗೆ ಗಂಡ ಸತ್ತ ಮಹಿಳೆಯನ್ನು ಉಡಕಿಯಾಗುವ ಸಂಪ್ರದಾಯ ಆಗ ಇತ್ತು. (ಈಗ ಅದು ಇಲ್ಲಾ ಅಥವಾ ಬಹಳ ಕಡಿಮೆಯಾಗಿದೆ.) ಮಿರ್ಜಿ ಅಣ್ಣಾರಾಯರ ನಿಸರ್ಗ ಕಾದಂಬರಿಯಲ್ಲಿ ತಾರಾಳನ್ನು ತೇರದಾಳದ ಅಪ್ಪಣ್ಣನಿಗೆ ಉಡಕಿ ಮಾಡಿಕೊಟ್ಟಿರುವದನ್ನು ಅತ್ಯಂತ ಹೃಯಂಗಮವಾಗಿ ಲೇಖಕರು ಬರೆದಿದ್ದಾರೆ. ಅಣ್ಣಾರಾಯರು ಆಗಿನ ಜೈನ ಸಮಾಜದ ಚಿತ್ರಣವನ್ನೇ ಆ ಕಾದಂಬರಿಯಲ್ಲಿ ಪ್ರಾಮಾಣೀಕವಾಗಿ ಮಾಡಿದ್ದಾರೆ.

ಹೀಗೆ ಎಂದೋ ಒಂದು ಕಾಲದಲ್ಲಿ ಪರಿಸ್ಥಿತಿಯ ಒತ್ತಡದಿಂದ ಮದುವೆ – ಮರು ಮದುವೆ ಆಗಿ ಮಕ್ಕಳನ್ನು ಹೆತ್ತು  ಹೋಗಿ ಅದೆಷ್ಟೋ ವರ್ಷಗಳಾದರೂ ಕೂಡ ಇಂದಿಗೂ ಅವರು ಜೈನಸಮಾಜದಲ್ಲಿ ಹೀನಕುಲವಾಗಿ ಬದುಕುತ್ತಿರುವದು ಜೈನ ಸಮಾಜದ ಅಧಾರ್ಮಿಕತೆಯನ್ನೇ ಸೂಚಿಸುತ್ತದೆ. ಇದರೊಂದಿಗೆ ಜೀವನದಲ್ಲಿ ಒಂದು ಸಲ ಮಾತ್ರ ಮದುವೆಯಾಗಿ ಮಕ್ಕಳನ್ನು ಹೆತ್ತು ಹೋದವಳ ಮಕ್ಕಳೆಲ್ಲ ಸಮಾಜದಲ್ಲಿ ಉಚ್ಚಕುಲ ಎನಿಸಿಕಳ್ಳುತ್ತಾರೆ.

ಜೈ ಮಹಿಳೆ: ಸಂಸ್ಕಾರಆಚರಣೆಗಳು ಇತ್ಯಾದಿ

. ಬಾಲ್ಯ ಸಂಸ್ಕಾರಗಳು:

ಜೈನಸಮಾಜದಲ್ಲಿ ಗಂಡುಮಕ್ಕಳಿಗೆ ಬಾಲ್ಯದಲ್ಲಿ ಕೊಡುವ ಸಂಸ್ಕಾರಗಳು ಬಹಳ ಕಡಿಮೆ. ಆದರೆ ಅದೇ ಸಮಾಜ ತಮ್ಮ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗುವಿಗೆ ಬಹಳಷ್ಟು ಸಂಸ್ಕಾರಗಳನ್ನು, ವಿಧಿ-ವಿಧಾನಗಳನ್ನು, ಬದುಕು ರೂಪಿಸಿಕೊಳ್ಳುವ ನೀತಿ ನಿಯಮಗಳನ್ನು ಧಾರ್ಮಿಕ ರೂಪದಲ್ಲಿ ಕೊಡಲು ಪ್ರಯತ್ನಿಸುತ್ತದೆ. ಗಂಡು ಮಗುವಿಗೆ ಅದು ಹತ್ತು ವರ್ಷದವನಾದ ಮೇಲೆ ಮೌಂಜಿಬಂಧನವನ್ನು ಮಾಡಿಸಲಾಗುತ್ತದೆ. (ಈ ಆಚರಣೆಯು ಕೂಡಾ ವೈದಿಕರಿಂದ ಅನುಕರಣೆಯಾದ ಆಚರಣೆಯಾಗಿದೆ) ಅದಾದ ನಂತರ ಆ ಗಂಡುಮಗು ಮೂರಳೆಯ ಜನಿವಾರವನ್ನು ಹಾಕಿಕೊಳ್ಳಲು ಯೋಗ್ಯವಾಗುತ್ತದೆ. ಆದರೆ ಮೌಂಜಿ ಬಂಧನದ ಕಾರ್ಯಕ್ರಮದ ಸಂದರ್ಭದಲ್ಲಿ ಮಗು ನಡೆಸಿಕೊಂಡು ಹೋಗಬೇಕಾದ ಧಾರ್ಮಿಕ ವಿಧಿ-ವಿಧಾನಗಳನ್ನು ಅದು ನಡೆಸಿಕೊಂಡು ಹೋಗುತ್ತದೆಯೇ ಅಥವಾ ಇಲ್ಲವೋ ಎನ್ನುವದನ್ನು ಸಮಾಜ ಅಷ್ಟಾಗಿ ಗಮನಿಸುವದಿಲ್ಲ. ಅಥವಾ ಸಮಾಜಕ್ಕೆ ಅದು ಬೇಕಾಗಿಲ್ಲ. ಆದರೆ ಹೆಣ್ಣು ಮಕ್ಕಳ ವಿಷಯದಲ್ಲಿ ಮಹಿಳೆ, ಪುರುಷ ಎನ್ನುವ ಭೇದವಿಲ್ಲದೆ ಎಲ್ಲರೂ ನಿಷ್ಟುರರಾಗಿ ನಡೆದುಕೊಳ್ಳುತ್ತಾರೆ.

ಬಾಲ್ಯದಿಂದಲೆ ಹೆಣ್ಣುಮಗು ಧಾರ್ಮಿಕವಾಗಿ ತನ್ನ ಭವಿಷ್ಯದ ಬದಕನ್ನು ರೂಪಿಸಿಕೊಳ್ಳಬೇಕು ಎಂದು ಎಲ್ಲರೂ ಹಠ ಹಿಡಿಯುತ್ತಾರೆ. ಇತ್ತೀಚೆಗೆ ಹೆಣ್ಣು ಮಕ್ಕಳಿಗೆ ಉಚ್ಛಶಿಕ್ಷಣವನ್ನು ಕೊಡಲಾಗುತ್ತಿದೆಯಾದರೂ ಕೂಡ ಬಾಲ್ಯದ ಅವಳ ಧಾರ್ಮಿಕ ವೃತಾಚರಣೆಗಳನ್ನು ಮಾತ್ರ ಆ ಹೆಣ್ಣು ಮಾಡಲೇಬೇಕಾಗುತ್ತದೆ.

ಪುರುಷಪ್ರಧಾನ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿರುವ ಭಾರತದಲ್ಲಿ ಪಾರಂಪರಿಕವಾಗಿ ತಂದೆಯ ಆಸ್ತಿಯು ಗಂಡುಮಗುವಿಗೆ ಹೋಗುವದರಿಂದ ಜೈನ ಸಮಾಜದಲ್ಲಿ ಹೆಣ್ಣು ಹುಟ್ಟಿದರೆ ಅಷ್ಟೇನು ಸಂತೋಷವಾಗುವದಿಲ್ಲ. ಅದಕ್ಕೆ ಕಾರಣಗಳು ಹಲವಾರು ಇವೆ. ಹೆಣ್ಣು ಮಗುವನ್ನು ಬೆಳೆಸಿ, ಶಿಕ್ಷಣವನ್ನು ಕೂಡಿಸಿ ಅವಳನ್ನು ತಯಾರುಮಾಡಿದ ಮೇಲೂ ವರದಕ್ಷಿಣೆ, ವರೋಪಚಾರ, ಮದುವೆ ಇತ್ಯಾದಿಗಳಿಗಾಗಿ ಹಣ ಖರ್ಚು ಮಾಡಬೇಕಗುತ್ತದೆ. ಇಷ್ಟಾಗಿಯೂ ಅವಳಿಗೆ ತನ್ನ ಗಂಡನ ಮನೆಯಲ್ಲಿ ತನಗೊಂದು ಗಂಡು ಮಗು (ಆಸ್ತಿಯ ವಾರಸುದಾರ) ಹುಟ್ಟವವರೆಗೂ ಅವಳ ಸ್ಥಿತಿ ಅಲ್ಲಿ ಅತಂತ್ರವಾಗಿರುತ್ತದೆ. ಹಾಗಾಗಿಯೇ ಹೆಣ್ಣುಕೂಸಿಗೆ ಜೈನ ಸಮಾಜದಲ್ಲಿ ಅಷ್ಟೇನು ಸಂತೋಷದ ಸ್ವಾಗತವಿಲ್ಲ. ಆದರೆ ಈಗ ವಾತಾವರಣ ಬದಲಾಗುತ್ತಿದೆ. ಅದನ್ನು ಮುಂದೆ ವಿವರಿಸುತ್ತೇನೆ.

ಹೆಣ್ಣು ಕೂಸೇ ಇರಲಿ, ಗಂಡು ಕೂಸೇ ಇರಲಿ, ಆ ಕೂಸು ಹುಟ್ಟಿ ಒಂದು ತಿಂಗಳಾದ ಮೇಲೆ ಅದರ ನೆತ್ತಿಗೆ ಮಾಸ ಮೀಸಲು ಇರುವ ಜೈನಕುಟುಂಬದ ಮಹಿಳೆಯಿಂದ ಎಣ್ಣೆ ಹಾಕಿಸಿಕೊಂಡು ಬರುವ ಒಂದು ಅಪರೂಪದ ಕಾರ್ಯಕ್ರಮ ನಡೆಯುತ್ತದೆ.

. ಮಾಸ ಮೀಸಲು:

ಮಾಸ ಮೀಸಲು ಎಂದರೇನು? ತನಗೆ ಹುಟ್ಟಿದ ಯಾವುದೇ ಕೂಸು ಸಾಯದೆ ಇದ್ದು ಗಂಡ ಬದುಕಿದ್ದರೆ ಆ ಮಹಿಳೆಯ ಮನೆ ಮಾಸ ವೀಸಲು ಇರುವ ಮನೆಯಾಗುತ್ತದೆ. ಅಂತಹ ಮಹಿಳೆಯಿಂದ ಹುಟ್ಟಿದ ಕೂಸಿಗೆ ಎಣ್ಣೆಯನ್ನು ಉಣ್ಣಿಸಿಕೊಂಡು ಬಂದರೆ ಆ ಮಗುವಿಗೆ ಸಾವು ಬರುವದಿಲ್ಲ ಎನ್ನುವ ನಂಬಿಕೆ ಇದೆ. ಹಾಗೆ ಕೂಸಿಗೆ ಮಾಸ ಮೀಸಲು ಎಣ್ಣೆ ಉಣ್ಣಿಸುವ ಅರ್ಹ ಮಹಿಳೆಯ ಮನೆಗೆ ಎಣ್ಣೆ ಉಣ್ಣಿಸಿಕೊಳ್ಳಲು ಬೇರೆ ಜಾತಿಯ ಕೂಸುಗಳು ಬರಬಹುದು. ಆದರೆ ಜೈನಕೂಸುಗಳನ್ನು ಬೇರೆ ಜಾತಿಯಲ್ಲಿಯ ಅಂತಹ ಮಾಸ ಮೀಸಲು ಇರುವ ಮಹಿಳೆಯ ಹತ್ತಿರ ಕರೆದುಕೊಂಡು ಹೋಗುವದಿಲ್ಲ. ಬಹುಶಃ ಮಾಸ ಮೀಸಲು ಕಾರ್ಯಕ್ರಮದ ಹಿಂದೆ ಸಾವಿಲ್ಲದವರ ಮನೆಯ ಎಣ್ಣೆಯನ್ನು ತನ್ನ ಕೂಸಿನ ಜಡೆ ಇರುವ ನೆತ್ತಿಗೆ ಉಣ್ಣಿಸಿದರೆ ತನ್ನ ಮಗು ಕೂಡಾ ಚಿರಂಜೀವಿ ಆಗುತ್ತದೆ ಎನ್ನುವ ನಂಬಿಕೆ ಇರಬೇಕು. ಹಾಗೆ ನೋಡಿದರೆ ಜೈನಧರ್ಮದಲ್ಲಿ ಇದರ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಇದೊಂದು ಸರಳ, ಸಾದಾ ಜಾನಪದ ನಂಬಿಕೆಯಾಗಿದ್ದು ಗ್ರಾಮೀಣ ಜೈನ ಸಮಾಜದಲ್ಲಿ ಮಾತ್ರ ಪ್ರಚಾರದಲ್ಲಿ ಇದೆ. ನಗರವಲಯದ ಜೈನ ಕುಟುಂಬಗಳು, ಇದನ್ನು ಆಚರಿಸುವದಿಲ್ಲ. ಗ್ರಾಮೀಣ ಪ್ರದೇಶದ ಜೈನ ಕುಟುಂಬಗಳು ಬಹುಶಃ ಬೇರೆ ಜಾತಿಗಳಲ್ಲಿ ಇರುವ ಈ ನಂಬಿಕೆಯ ಆಚರಣೆಯನ್ನು ಯಾವುದೋ ಕಾಲದಲ್ಲಿ ತಮ್ಮದಾಗಿಸಿಕೊಂಡಿರಬಹುದು ಎಂದು ಕಾಣಿಸುತ್ತದೆ. ಗ್ರಾಮಜಗತ್ತಿನ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಸಮಾಜಗಳಲ್ಲಿ ಇಂತಹ ಸಾಂಸ್ಕೃತಿಕ ನಡವಳಿಕೆಗಳ ಆದಾನ ಪ್ರಧಾನ ಸದ್ದಿಲ್ಲದೆ ನಡದೇ ಇರುತ್ತದೆ.

ಮಾಸ ಮೀಸಲು ಎಣ್ಣೆ ಹಾಕಿದ ಮನೆಯ ಮುತ್ತೈದೆಗೆ ಉಡೆಕ್ಕಿ (ಉಡಿಯ ಅಕ್ಕಿ) ಹಾಕಿ ಬಾಗೀನ ಕೊಟ್ಟು ಬರುತ್ತಾರೆ. ಮಾಸ ಮೀಸಲು ಇರುವ ಮನೆಯ ಯಜಮಾನತಿ ಎಷ್ಟೇ ಶ್ರೀಮಂತಳಿರಲಿ, ಹೀಗೆ ಬಂದ ಉಡೆಕ್ಕಿಯನ್ನು ಅತ್ಯಂತ ಸಂತೋಷ ಮತ್ತು ಭಕ್ತಿ, ಗೌರವಗಳಿಂದ ಸ್ವೀಕರಿಸುತ್ತಾಳೆ. ಅಂತಹ ಮಹಿಳೆಗೆ ಊರಲ್ಲಿ ಒಂದು ಬಗೆಯ ಗೌರವದ ಮಾನ-ಸಮ್ಮಾನಗಳು ಸಲ್ಲುತ್ತಿರುತ್ತವೆ. ಅದಕ್ಕಾಗಿಯೇ ಅಂತಹ ಮಹಿಳೆಯ ಮನೆಯಲ್ಲಿ ಯಾವುದಾದರೂ ಮಗು ತೀರಿಕೊಂಡರೆ ಊರವರೆಲ್ಲಾ ಆಕೆಯ ಮಾಸ ಮೀಸಲು ಹೋದದ್ದರ ಬಗ್ಗೆಯೇ ಅಧಿಕವಾಗಿ ಮಾತಾಡುತ್ತಾರೆ. ಮಗುವಿನ ಸಾವಿಗಿಂತ ಅಂತಹ ಚಾಜ ಹೋದ ಬಗ್ಗೆ ವಿಷಾದ ಎಲ್ಲರ ಮನಸ್ಸಿನಲ್ಲಿ ತುಂಬಿಕೊಂಡಿರುತ್ತದೆ. ಇದೊಂದು ಹೆಣ್ಣು ಮಕ್ಕಳ ಅತ್ಯಂತ ಹೆಮ್ಮೆಯ ಮತ್ತು ಖಾಸಗಿಯ ವಿಷಯವಾಗಿದ್ದು ಆ ಮನೆಯ ಗಂಡಸರು ಇದರಲ್ಲಿ ಭಾಗವಹಿಸುವದಿಲ್ಲ. ಅವರೇನಿದ್ದರೂ ಅಂತಹ ಮಗು ಮನೆಗೆ ಬರುತ್ತದೆ ಎಂದು ಗೊತ್ತಾದ ಬಳಿಕ ಮನೆಯಲ್ಲಿ ಎಣ್ಣೆಯನ್ನು ತಂದು ಇಡುವ ಕೆಲಸ ಮಾತ್ರವಾಗಿರುತ್ತದೆ. ಮಾಸ ಮೀಸಲು ಇರುವ ಮಹಿಳೆ ಬಡವಳಾಗಿದ್ದು, ಕೂಲಿ ಮಾಡಿ ಬದಕನ್ನು ದಾಟಿಸುವವಳಾಗಿದ್ದರೂ ಕೂಡಾ ಅವಳು ಆ ದಿನ ಕೂಲಿಗೆ ಹೋಗದೆ ಮನೆಯಲ್ಲಿಯೇ ಇರುತ್ತಾಳೆ. ಅಲ್ಲದೆ ತನ್ನ ಒಂದು ದಿನದ ಕೂಲಿ ಹಣವನ್ನು ವೆಚ್ಚ ಮಾಡಿ ಅಂಗಡಿಯಿಂದ ಎಣ್ಣೆಯನ್ನು ಕೊಂಡು ತಂದಿರುತ್ತಾಳೆ.

ಮೂಗು ಚುಚ್ಚುವದು:

ಗಂಡು ಕೂಸಿಗೆ ಕೇವಲ ಕಿವಿ ಚುಚ್ಚಿ ಕರಿದಾರ ಪೋಣಿಸಿದರೆ, ಹೆಣ್ಣು ಕೂಸಿಗೆ ನಾಲ್ಕೈದು ಕಡೆಗೆ ಚುಚ್ಚುತ್ತಾರೆ.  ಮೂಗು (ಮೂಗಬಟ್ಟು ಹಾಕಲು) ಕಿವಿಯ ಕೆಳಗಿನ ಭಾಗ (ಹಜುರು ಹಾಕಲು) ಕವಿಯ ಮೇಲಿನ ಭಾಗ (ಬುಗುಡಿ ಹಾಕಲು) ಕಿವಿಯ ನಡುವಿನ ಭಾಗ (ಅಲಕಾ ಹಾಕಲು) ಹೀಗೆ ನಾಲ್ಕ ಕಡೆ ಚುಚ್ಚುತ್ತಾರೆ. ಈಗ ಬುಗುಡಿ ಮತ್ತು ಅಲಕಾಗಳನ್ನು ಯಾರೂ ಹಾಕಿಕೊಳ್ಳುವುದಿಲ್ಲ ಎನ್ನುವ ಕಾರಣಕ್ಕಾಗಿ ಕೇವಲ ಎರಡು ಕಡೆಗೆ ಚುಚ್ಚುತ್ತಾರೆ. ಜಾನಪದರಲ್ಲಿ ಒಂದು ಗಾದೆ ಮಾತು ಇದೆ. ಅದೆಂದರೆ

ನೆಗಡಿ ಜಡ್ಡಲ್ಲ
ಬುಗಡಿ ವಸ್ತ ಅಲ್ಲ.

ಎನ್ನುವದೇ ಆಗಿದೆ. ಅಲ್ಲದೆ ಜೈನರಲ್ಲಿ ಬುಗುಡಿ ಹಾಕಿಕೊಳ್ಳುವದು ಅದು ಹೇಗೋ ಶೂದ್ರ ಅಲಂಕಾರ ಎನ್ನುವ ಮಾತು ಚಾಲ್ತಿಯಲ್ಲಿ ಇದೆ. ಹಾಗೆ ಇನ್ನೂ ಬುಗುಡಿಯನ್ನು ಕಿವಿಗೆ ಹಾಕಿಕೊಂಡಿರುವ ಮಹಿಳೆಯರು ಈಗಲೂ ಸಿಗುತ್ತಾರೆ. ಆದರೆ ಎಲ್ಲ ಸಮಾಜದವರಲ್ಲಿಯವರಂತೆ ಜೈನ ಗ್ರಾಮೀಣ ಸಮಾಜದಲ್ಲಿಯೂ ಕೂಡಾ ಸರಳ ಅಲಂಕಾರ ಫ್ಯಾಶನ್ ಆಗಿರುವದು ವಸ್ತ್ರಗಳ ಬಳಕೆಯಲ್ಲಿ ನಾವೀನ್ಯತೆ ಬರತೊಡಗಿದೆ. ಈಗ ಮೂವತ್ತು ನಲವತ್ತು ವರ್ಷಗಳ ಹಿಂದೆ ಹೆಣ್ಣುಮಕ್ಕಳು ಕಾಲಿಗೆ ಭಾರವಾದ ಬೆಳ್ಳಿಯ ರುಳಿಗಳನ್ನು, ನಡಕ್ಕೆ ಬೆಳ್ಳಿಯ ಡಾಬನ್ನು ಮತ್ತು ಹೆಣೋಲಿಗೆ ಬೆಳ್ಳಿಯ ಗೊಂಡಿ ಇರುವ ಕುಚ್ಚನ್ನು ಹಾಕಿಕೊಳ್ಳುತ್ತಿದ್ದರು. ಪ್ರತಿ ವರ್ಷ ಪಂಚಮಿಯ ಹಬ್ಬಕ್ಕೆ ಆ ಹೆಣ್ಣು ಮಗುವಿನ ಸೋದರ ಮಾವ ತಪ್ಪದೇ ಖೊಬ್ಬರಿ, ಖಣ ಮತ್ತು ಉಂಡಿಗಳೊಂದಿಗೆ ಅವಳ ಅಲಂಕಾರವಾಗಿ ಬೆಳ್ಳಿಯ ಗೊಂಡಿಯನ್ನು ತರುವ ವಾಡಿಕೆ ಇತ್ತು. ಅಲ್ಲದೆ ಆ ಮಗು ಮೈನೆರೆಯುವದಕ್ಕಿಂತ ಮೊದಲೇ ಪುಲಕಾ ಉಡುವದನ್ನು ಬಿಟ್ಟು ಸೀರೆಯನ್ನು ಉಡಬೇಕಾಗಿತ್ತು. ಹಾಗೆ ಉಡುವ ಮೊದಲ ಸೀರೆಯನ್ನು ಹುಟ್ಟಕಿರಣಗಿ ಎಂದು ಆ ಹುಡುಗಿಯ ಸೋದರಮಾವನೇ ತರುವ ರಿವಾಜು ಇತ್ತು. ಅಕಸ್ಮಾತ್ ಆ ಹುಡುಗಿ ಸೀರೆ ಉಡದೆ ಪುಲಕಾದಲ್ಲಿಯೇ ಋತುಮತಿಯಾದರೆ ಅದನ್ನೊಂದು ಕಲಂಕ ಎಂದು ಭಾವಿಸಲಾಗುತ್ತಿತ್ತು. ಈಗ ಅದೆಲ್ಲ ಇಲ್ಲವಾಗಿದೆ. ಕಾಲ ಬದಲಾದಂತೆ ಜನರ ಆಸಕ್ತಿಗಳೂ ಬದಲಾಗುತ್ತವೆ. ಅದಕ್ಕೆ ಜೈನ ಸಮಾಜವೂ ಹೊರತಾಗಿಲ್ಲ.

. ಹಂಚಿ ಬಟ್ಟು (ಹಚ್ಚಿ ಹಾಕುವದು):

ಮಹಿಳೆಯ ಹಣೆಯ ಮೇಲೆ ಹಚ್ಚಿ ಬಟ್ಟು ಅನಿವಾರ್ಯ ಎನ್ನುವಷ್ಟು ಈ ಪದ್ಧತಿ ಸಾಂಪ್ರದಾಯಿಕವಾಗಿದೆ. ಮುಸ್ಲಿಂ ಮತ್ತು ಕ್ರೈಸ್ತ ಮಹಿಳೆಯರನ್ನು ಬಿಟ್ಟರೆ ಭಾರತದಲ್ಲಿ ಬಹುತೇಕ ಎಲ್ಲ ಮಹಿಳೆಯರು ಹಚ್ಚಿ ಬಟ್ಟನ್ನು ಹಾಕಿಕೊಳ್ಳುತ್ತಾರೆ. ಈಗ ಐವತ್ತು ವರ್ಷಗಳ ಕೆಳಗೆ ಗ್ರಾಮೀಣ ಚತುರ್ಥ ಜೈನ ಮಹಿಳೆಯರು ಕೂಡಾ ಹಣೆ, ಗಲ್ಲ, ಮೆಲಕು ಮತ್ತು ಮುಂಗೈ ತುಂಬ ಹಚ್ಚೆ ಹಾಕಿಸಿಕೊಳ್ಳುತ್ತಿದ್ದರು. ಮುಂಗೈ ಮೇಲೆ ತೇರು, ಆಂಜನೇಯ ಇತ್ಯಾದಿ ದೇವರು, ಇಲ್ಲವೆ ಚಂದದ ಚಿತ್ರವನ್ನು ಹಾಕಿಸಿಕೊಳ್ಳುತ್ತಿದ್ದರು. ಈಗ ಕಾಲ ಬದಲಾಗಿದೆ. ಫ್ಯಾಶನ್ ಎನ್ನುವದು ಬಂದ ಮೇಲೆ ಮತ್ತು ಸರಳತೆಯೇ ಫ್ಯಾಶನ್ ಆಗಿ ರೂಪಾಂತರಗೊಂಡ ಮೇಲೆ ಹಣೆಯ ಮೇಲೆ ಸಣ್ಣ ಚುಕ್ಕಿಯ ಗಾತ್ರದಷ್ಟು ಮಾತ್ರ ಹಚ್ಚಿ ಬಟ್ಟನ್ನು ಹಾಕಿಕೊಳ್ಳುತ್ತಿದ್ದಾರೆ. ಇತಿಚೆಗಂತು ಹಣೆಯ ಮೇಲೆ ಅಗಲವಾದ ಹಚ್ಚಿಬಟ್ಟು ಕೇವಲ ದಲಿತ ಮಹಿಳೆಯರಿಗೆ ಮಾತ್ರ ಎನ್ನುವ ನಂಬಿಕೆ ಸದ್ದಿಲ್ಲದೆ ರೂಢಿಗತವಾಗತೊಡಗಿದೆ. ಇದರಿಂದಾಗಿ ಜೈನ ಹುಡುಗಿಯರಿಗೆ ಹಣೆಯ ಮೇಲೆ ಕುಂಕುಮ ಹಚ್ಚುವ ಜಾಗದಲ್ಲಿ ಸಣ್ಣ ಚುಕ್ಕೆಯನ್ನು ಚುಚ್ಚಲಾಗುವದು. ಇಂದಿನ ಬಹುತೇಕ ಜೈನ ಹುಡುಗಿಯರು ಬಿಂದಿ ಅಥವಾ ಟಿಕಳಿಯನ್ನೆ ಹಚ್ಚುವದರಿಂದ ಮತ್ತು ಬಿಂದಿಗಳು ಚಿಕ್ಕ ಗಾತ್ರದಲ್ಲಿ ಇರುವದರಿಂದ ಹಚ್ಚಿ ಬಟ್ಟು ಕೂಡಾ ಅದೇ ಗಾತ್ರಕ್ಕೆ ಇಳಿದಿದೆ. ಇತ್ತೀಚೆಗೆ ನಗರವಲಯದಲ್ಲಿ ನೌಕರಿ ಮಾಡುತ್ತಿರುವ ಜೈನ ಕುಟುಂಬಗಳು ತಮ್ಮ ಹೆಣ್ಣು ಮಕ್ಕಳಿಗೆ ಇಷ್ಟು ಚಿಕ್ಕ ಗಾತ್ರದ ಹಚ್ಚಿ ಬಟ್ಟನ್ನು ಕೂಡಾ ಚುಚ್ಚುವದಿಲ್ಲ. ಆದಿಲ್ಲದೆಯೇ ಬಿಂದಿಯನ್ನು ಹಚ್ಚಿಕೊಳ್ಳುವ ಪರಿಪಾಠ ಬೆಳೆದಿದೆ. ಅಲ್ಲದೆ ಅದನ್ನು ಈಗ ಯಾರೂ ಕೇಳುವ ಗೋಜಿಗೆ ಹೋಗುವದಿಲ್ಲವಾಗಿ ಹಚ್ಚಿಬಟ್ಟು ಚುಚ್ಚಿಕೊಳ್ಳುವ ಪರಂಪರೆ ನಿಂತುಬಿಟ್ಟಿದೆ.

. ಕುಂಕುಮ ಹಚ್ಚುವದು:

ಹಣೆಗೆ ಹಚ್ಚುವ ಬಿಂದಿಗಳು ಹಾಗು ಕುಂಕುಮದ ಪೇಸ್ಟ (ಗಂಧ) ಬರುವದಕ್ಕಿಂತ ಮುಂಚೆ ಎಲ್ಲ ಜೈನಮಹಿಳೆಯರು ಕುಂಕುಮವನ್ನೇ ಹಚ್ಚಿಕೊಳ್ಳುತ್ತಿದ್ದರು. ಕುಂಕುಮ ಹುಡಿ ಪದಾರ್ಥವಾಗಿದ್ದರಿಂದ ಮೊದಲು ಹಣೆಗೆ ಜೇನುಮೇಣವನ್ನು ಸವರಿ ಅದಕ್ಕೆ ಕುಂಕುಮ ಇಡುತ್ತಿದ್ದರು. ಜೇನು ಬಿಡಿಸುವದು ಜೈನಧರ್ಮಕ್ಕೆ ವಿರುದ್ಧವಾದ ಸಂಗತಿಯಾಗಿದೆ. ಆದರೂ ಕೂಡಾ ಆಗಿನ ಕಾಲದಲ್ಲಿ ಜೇನುಮೇಣ ಎಲ್ಲ ಜೈನರ ಮನೆಯಲ್ಲಿ ಇರುತ್ತಿತ್ತು. ಬಹುತೇಕ ಒಕ್ಕಲುತನ ಮಾಡುವ ಜೈನ ಕುಟುಂಬಗಳಲ್ಲಿ ಈ ಮೇಣದ ಬಳಕೆ ಇರುತ್ತಿತ್ತು.

ಜೈನಮಹಿಳೆಯರು ತಮ್ಮ ಹಣೆಯ ಮೇಲೆ ಹಚ್ಚುವ ಕುಂಕುಮ ಕೇವಲ ಗೋಲಕಾರದಲ್ಲಿ ಮಾತ್ರ ಇರಬೇಕು. ಅಕ್ಕಸಾಲಿ ಮತ್ತು ಬಡಿಗೇರ ಹೆಣ್ಣು ಮಕ್ಕಳು ಹಚ್ಚುವಂತೆ ಅಡ್ಡ ಕುಂಕುಮವಾಗಲಿ ಇಲ್ಲವೆ ನಾಮದಂತೆ ಉದ್ದವಾಗಿ ಹಚ್ಚುವದಾಗಲಿ ನಿಷೇಧ ಇತ್ತು. ಏಕೆಂದರೆ ಜೈನಧರ್ಮದಲ್ಲಿ ಮಹಿಳೆಯರಿಗೆ ಅದೇ ಜನ್ಮದಲ್ಲಿ ಮೋಕ್ಷವಿಲ್ಲ. ಆದ್ದರಿಂದ ಅವರ ಜನ್ಮ ಸ್ಥಗಿತ ಜನ್ಮವಾಗಿದೆ. ಹಾಗಾಗಿಯೇ ಹಣೆಯ ಮೇಲೆ ಅದರ ಸಂಕೇತವಾಗಿ ಬಿಂದು ಮಾದರಿಯಲ್ಲಿ ಗೋಲಾಕಾರದ ಕುಂಕುಮವನ್ನು ಹಚ್ಚಿಕೊಳ್ಳುತ್ತಾರೆ. ಆದರೆ ಗಂಡಸರಿಗೆ ಕುಂಕುಮ ಹಚ್ಚಿಕೊಳ್ಳುವ ಸಂದರ್ಭ ಬಂದರೆ ಅವರಿಗೆ ಉದ್ದನಾಮವನ್ನು ಬಳಿಯುತ್ತಾರೆ. ಏಕೆಂದರೆ ಗಂಡುಜೀವ ಊರ್ಧ್ವಗಾಮಿಯಾಗಿ ಮೇಲಕ್ಕೆ ಎತ್ತರೆತ್ತರ ಏರಬಲ್ಲದು ಎನ್ನುವುದು ಅದರ ಸಂಕೇತವಾಗಿದೆ. ಇಷ್ಟಾಗಿಯೂ ಕೂಡ ಕೆಲವು ಬಂಡಾಯ ಮನೋಭಾವದ ಹೆಣ್ಣುಮಕ್ಕಳು ತಮ್ಮ ಹಣೆಯ ಮೇಲೆ ಉದ್ದವಾಗಿ ನಾಮದಂತೆ ಕುಂಕುಮವನ್ನು ಹಚ್ಚಿಕೊಳ್ಳುತ್ತಾರೆ. ಆದರೆ ಯಾವತ್ತಿಗೂ ಅಡ್ಡಲಾಗಿ ಹಚ್ಚಿಕೊಳ್ಳುವದಿಲ್ಲ.

ಗಂಡ ಸತ್ತ ಮೇಲೆ ಕುಂಕುಮವನ್ನು ಅಳಿಸಿಹಾಕುವುದು ಮತ್ತು ಬಳೆ ಒಡೆದು ಮಹಿಳೆಯನ್ನು ವಿಕಾರಗೊಳಿಸುವದು ಜೈನಧರ್ಮದ ತತ್ವಕ್ಕೆ ವಿರುದ್ಧವಾದುದು. ಆದರೆ ಇಂದು ವಿಧವೆಯಾದ ಎಲ್ಲ ಜೈನಮಹಿಳೆಯರು ಹಣೆಯ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳುವದಿಲ್ಲ. ಧರ್ಮದ ಪ್ರಣಾಳಿಕೆಯನ್ನು ಕಟ್ಟು ನಿಟ್ಟಾಗಿ ಆಚರಿಸುವ ಜೈನರು ತಮ್ಮದೇ ಧರ್ಮದ ಇಂತಹ ಒಳ್ಳೆಯ ಸಂಗತಿಗಳನ್ನು ಬೇಕೆಂದೇ ಮರೆತವರಂತೆ ಇದ್ದು ಬಿಡುತ್ತಾರೆ. ಹರೆಯದ ಕಾಲದಲ್ಲಿಯೇ ವಿಧವೆಯರಾದ ಮಹಿಳೆಯರು ಹಣೆಯ ಮೇಲೆ ಬುಕೀಟ (ಕಪ್ಪು ಕುಂಕುಮ) ಹಚ್ಚಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಆಧುನಿಕ ಶಿಕ್ಷಣದ ಪರಿಣಾಮವಾಗಿ ಅಂತಹ ಹರೆಯದ ವಿಧವೆಯರೂ ಕೂಡಾ ಬಿಂದಿ ಹಚ್ಚಿಕೊಳ್ಳುತ್ತಿದ್ದಾರೆ. ಈಗ ಅದನ್ನು ಯಾರೂ ಪ್ರಶ್ನಿಸುವದಿಲ್ಲ.

. ಕುಂಕುಮ ನೋಂಪಿ:

ಜೈಸಮಾಜ ಮಹಿಳೆಯರಿಗೆ ಬಾಲ್ಯದಲ್ಲಿಯೇ ಕೊಡುವ ಸಂಸ್ಕಾರಗಳಲ್ಲಿ ಮಹತ್ವದ್ದೆಂದರೆ ಕುಂಕುಮ ನೋಂಪಿಯಾಗಿದೆ. ಪರ್ವ, ನೋಂಪಿ, ಆರಾಧನೆ, ಪರ್ಯಾಯಗಳು ಜೈನಧರ್ಮದ ಅನುಯಾಯಿಗಳಿಗೆ ಸಮಾಜವನ್ನು ಧರ್ಮ ಮುಖಿಯಾಗಿಸುವ ಸುಲಭ ಮಾರ್ಗಗಳಾಗಿವೆ. ಶ್ರಾವಕ, ಶ್ರಾವಕಿಯರಿಗಾಗಿ ದಶಲಕ್ಷಣ ಪರ್ವ, ಸೋಳಾಕಾರ ನೋಂಪಿ, ಅನಂತನೋಂಪಿ, ಶುಕ್ರವಾರ ನೋಂಪಿ, ಹುಣ್ಣಿವೆ ನೋಂಪಿ, ಹೀಗೆ ವರ್ಷವಿಡೀ ಮಾಡಬಹುದಾದ ವ್ರತಾಚರಣೆಗಳಿವೆ. ಇಂತಹ ದೊಡ್ಡ ದೊಡ್ಡ ವ್ರತಾಚರಣೆಗಳಿಗೆ ಮನಸ್ಸನ್ನು ಅಭಿಮುಖಗೊಳಿಸುವಲ್ಲಿ ಜೈನಸಮಾಜದ ಹತ್ತು ವರ್ಷದ ಹೆಣ್ಣುಮಕ್ಕಳಿಗೆ ಕುಂಕುಮ ನೋಂಪಿಯ ವ್ರತವನ್ನು ಆಚರಿಸಲು ಅನುವು ಮಾಡಿಕೊಟ್ಟಿದೆ. ಕುಂಕುಮ ನೋಂಪಿ ಬಹಳ ಸಾದಾ ಮತ್ತು ಅತ್ಯಂತ ಸರಳವಾದ ವ್ರತಾಚರಣೆಯಾಗಿದೆ. ಹಾಗೆ ವ್ರತ ಹಿಡಿದ ಬಾಲಿಕೆ ನಿತ್ಯ ಸ್ನಾನ ಮಾಡಿದ ಕೂಡಲೆ ಬಸದಿಗೆ ಹೋಗಿ ಅಲ್ಲಿಯ ಪದ್ಮಾವತಿಗೆ ಕುಂಕುಮ ಹಚ್ಚಿ ಬರುವ ಸರಳವಾದ ಆಚರಣೆಯೇ ಕುಂಕುಮ ನೋಂಪಿ ವ್ರತವಾಗಿದೆ. ಚಾತುರ್ಮಾಸ (ಮಳೆಗಾಲದ ನಾಲ್ಕು ತಿಂಗಳು) ಕಾಲದಲ್ಲಿ ಈ ವಿಧಿ-ವಿಧಾನವನ್ನು ಆ ಬಾಲಕಿ ಪೂರೈಸಬೇಕು. ಕುಂಕುಮ ನೋಂಪಿ ಎಲ್ಲ ಜೈನಬಾಲಕಿಯರಿಗೆ ಕಡ್ಡಾಯವಾದ ನೋಂಪಿಯಾಗಿದೆ.

ಈ ನೋಂಪಿಯಿಂದ ಅವಳಿಗೆ ನಿತ್ಯ ಜಿನಮಂದಿರಕ್ಕೆ ಹೋಗುವ ಸಂಸ್ಕಾರವಾಗುತ್ತದೆ. ಅಲ್ಲದೆ ಅದರ ನೆಪದಿಂದ ಜೈನರು ಕಡ್ಡಾಯವಾಗಿ ಹೇಳಲು ಕಲಿಯಲೇಬೇಕಾದ ದರ್ಶನ ಪಾಠ ಮತ್ತು ಸಾಮಾಯಿಕ ಪಾಠ ಹಾಗೂ ಭಕ್ತಾಮರ ಸ್ತೋತ್ರಗಳು ಕಂಠಪಾಠವಾಗುತ್ತವೆ. ಅದು ಅವಳ ಮುಂದಿನ ಬದುಕಿನಲ್ಲಿ ಜೈನ ಸಂಸ್ಕಾರವಾಗಿ ರೂಪತಳೆಯುತ್ತದೆ. ಹೀಗೆ ಬಾಲ್ಯದಲ್ಲಿಯೇ ಅವಳನ್ನು ಜೈನ ಧರ್ಮಕ್ಕೆ ಎಳೆದು ತರಲಾಗುತ್ತದೆ.