ಜೈಮಿನಿ ಬಾರತದ ಕಥೆಯನ್ನು ವೈಶಂಪಾಯನನ ಶಿಷ್ಯನಾದ ಜೈಮಿನಿ ಮುನಿಯು ಪಾಂಡವರ ವಂಶೀಯನಾದ ಜನಮೇಜಯ ಮಹಾರಾಜನಿಗೆ ಈ “ಕರ್ಣಾವತಂಸಮೆನೆ ರಂಜಿಸುವ ಸತ್ಕಥೆಯನು” ಹೇಳಿದ್ದಾನೆ.

ಸಹೋದರ ವಧೆಯಿಂದ ಖಿನನ್ನನಾಗಿದ್ದ ಯುಧಿಷ್ಠಿರ ಮಹಾರಾಜನಿಗೆ ವೇದವ್ಯಾಸ ಮಹರ್ಷಿಗಳು ಅಶ್ವಮೇಧಯಾಗವನ್ನು ಮಾಡುವುದರಿಂದ ಮನಶ್ಯಾಂತಿ ಉಂಟಾಗುವುದೆಂದು ಬೋಧಿಸುವರು. ಇದು ವಿಖ್ಯಾತ ಕ್ಷತ್ರಿಯರ ಕರ್ತವ್ಯವೆಂದೂ ಹೇಳುವರು. ಧರ್ಮರಾಜನು ಭರತ, ನಹುಷಾದಿ ರಾಜರಂತೆ ಭೂಮಂಡಲವು ಕೊಂಡಾಡುವಂತೆ ರಾಜ್ಯಭಾರ ನಡೆಸುವನು. ಅವನ ರಾಜ್ಯದಲ್ಲಿ ಕಳವು, ಹುಸಿ, ವೈರ, ಕೊಲೆ ಮೊದಲಾದ ದುಷ್ಕೃತ್ಯಗಳಿಲ್ಲದೆ ದೇಶವು ಸುಭಿಕ್ಷವಾಗಿರುವುದು. ಆದರೂ ಧರ‍್ಮರಾಜನು ಬಂಧು ಬಾಂಧವರ ಸಂಹಾರರಿಂದ ಮನನೊಂದು ದುಃಖಿತನಾಗಿರುವನು. ಆಗ ಗುರುಗಳಾದ ವೇದವ್ಯಾಸರು ಬಂದು ಅವನಿಗೆ ಧರ್ಮೋಪದೇಶವನ್ನು ಮಾಡಿ, ಹಿಂದೆ ಶ್ರೀರಾಮಚಂದ್ರಾದಿಗಳು ನಿರ್ವಹಿಸಿದ ಅಶ್ವಮೇಧಯಾಗಮಾಡೆಂದು ಮಾರ್ಗದರ್ಶನ ಮಾಡಿಸಿದರು. ಆ ಯಾಗದ ವಿಧಾನವನ್ನು ನಿರೂಪಿಸುವರು. ಅದಕ್ಕೆ ಅರ್ಹವಾದ ಕುದುರೆಯು ಭದ್ರಾವತಿಯ ಅರಸನಾದ ಯೌವ್ವನಾಶ್ವನಲ್ಲುಂಟೆಂದು ತಿಳಿಸುವರು.

ಕುದುರೆಯನ್ನು ತರಲು ಭೀಮ ಮತ್ತು ವೃಷಧ್ವಜರು ಸಿದ್ದರಾಗುವರು. ಆಗ ಕೃಷ್ಣನು ಅಶ್ವಮೇಧವು ಕಷ್ಟವೆಂದೂ, ಇಂದಿನ ರಾಜರು ಹಿಂದಣ ರಾಜರಂತೆ ಸಾಮಾನ್ಯರಲ್ಲವೆಂದೂ ಹೇಳುವನು. ಅದಕ್ಕೆ ಪಾಂಡುವರು ಶ್ರೀಕೃಷ್ಣನನ್ನು ಮರೆ ಹೊಕ್ಕು “ ನಿನ್ನ ಕರುಣೆಯಿಂದ ಎಲ್ಲವೂ ಸಾಧ್ಯ” ಎಂದು ಪ್ರಾರ್ಥಿಸುವರು. ಅದಕ್ಕೆ ಶ್ರೀಕೃಷ್ಣನು ಹರ್ಷಿಸಿ ಪಾಂಡವರನ್ನು ಹರಸುವನು. ಹೀಗೆ ಶ್ರೀಕೃಷ್ಣನ ಅಪ್ಪಣೆಯನ್ನು ಪಡೆದು ಭೀಮ ವೃಷಕೇತುಗಳು ಭದ್ರಾವತಿಗೆ ಹೋಗಿ, ಆ ದೇಶದ ಸೌಂದರ್ಯವನ್ನು ಮನಸಾರೆ ಶ್ಲಾಘಿಸಿ, ಯೌವ್ವನಾಶ್ವನನ್ನು ಜಯಿಸಿ, ಯಜ್ಞದ ಕುದುರೆಯನ್ನು ತರುವರು. ಪರಾಜಿತವಾದ ಯೌವನಾಶ್ವನು ಪಾಂಡುವರು ಶ್ರೀಕೃಷ್ಣನ ಮಿತ್ರರೆಂದು ಕೇಳಿ ಕುದುರೆಯನ್ನು ಕೊಟ್ಟು ಹಸ್ತಿನಾವತಿಗೆ ಬಂದು ಧರ್ಮರಾಜನನ್ನು ಕಾಣಿಸಿಕೊಳ್ಳವನು. ಆ ಯಜ್ಞಕ್ಕೆ ಬೇಕಾದ ಧನವನ್ನು ಹಿಮಗಿರಿಯಿಂದ (ಮರುತ್ತರಾಯನು ಅಲ್ಲಿಟ್ಟಿದ್ದ ಅಪಾರ ಧನ) ಹಸ್ತಿನಾವತಿಗೆ ತರಿಸುವರು.

ಯಜ್ಞ ಕಾಲ ಸಮೀಪಿಸಲು ಭೀಮನು ದ್ವಾರಾವತಿಗೆ ಹೋಗಿ ಶ್ರೀಕೃಷ್ಣನನ್ನು ಕರೆತಂದನು. ಈ ಸಂದರ್ಭದಲ್ಲಿ ಅನುಸಾಲ್ವನು ಶ್ರೀಕೃಷ್ಣನ ಪೂರ್ವ ವೈರಿಯಾದುದರಿಂದ ಯಜ್ಞಾಶ್ವವನ್ನು ಅಪಹರಿಸುವನು. ಕಡೆಗೆ ಅವನು ಪಾಂಡವರಿಗೆ ಸೋತು ಯಜ್ಞಾಶ್ವವನ್ನು ಬಿಟ್ಟು ಕೊಟ್ಟು ಪಾಂಡವರನ್ನು ಮರೆಹೋಗುವನು. ಅಸಿಪತ್ರವ್ರತವನ್ನು ಕೈಗೊಂಡ ಧರ್ಮರಾಯನು ಯಜ್ಞದೀಕ್ಷಿತನಾಗಿ ಕುಳಿತುಕೊಳ್ಳುವನು. ಚೈತ್ರ ಹುಣ್ಣಿಮೆಯ ದಿನ ಯಜ್ಞಾಶ್ವವನ್ನು ದೇಶ ಸಂಚಾರಕ್ಕೆ ಬಿಡುವರು. ಕುದುರೆಯ ರಕ್ಷಣೆಗೆ ಅರ್ಜುನ, ವೃಷಕೇತು, ಪ್ರದ್ಯುಮ್ನ, ಸಾತ್ಯಕಿ, ಯೌವ್ವನಾಶ್ವ ಮತ್ತು ಅನುಸಾಲ್ವರು ಹೊರಡುವರು. ಅವರನ್ನು ಶ್ರೀಕೃಷ್ಣ, ಧರ್ಮರಾಯ, ಕುಂತೀದೇವಿಯರು ಹರಸುವರು.

ಕುದುರೆಯು ಮೊದಲು ಮಾಹಿಷ್ಮತೀ ಪಟ್ಟಣಕ್ಕೆ ಬರುವುದು. ಅಲ್ಲಿನ ಅರಸು ನೀಲಧ್ವಜನ ಮಗ ಪ್ರವೀರನು ಕುದುರೆಯನ್ನು ಕಟ್ಟುವನು. ನೀಲಧ್ವಜನಿಗೆ ಅಗ್ನಿಯು ಅಳಿಯನಾದುದರಿಂದ ಯುದ್ಧವು ಭಯಂಕರವೆನಿಸಿತು. ಅರ್ಜುನನು ಅಗ್ನಿಯನ್ನು ಪ್ರಾರ್ಥಿಸಿ ಅವನ ಆಶೀರ‍್ವಾದ ಪಡೆಯುವನು. ಅಗ್ನಿಯ ಸಲಹೆಯಂತೆ ನೀಲಧ್ವಜನು ಯುದ್ಧವನ್ನು ನಿಲ್ಲಿಸಿ ಯಜ್ಞಾಶ್ವವನ್ನು ಬಿಟ್ಟುಕೊಡುವನು. ಆದರೆ, ಅವನ ಹೆಂಡತಿಯಾದ ಜ್ವಾಲೆ ಮತ್ತೆ ಗಂಡನನ್ನು ಹುರಿದುಂಬಿಸಿ ಯುದ್ಧಕ್ಕೆ ಕಳುಹಿಸಲು ಮಗನು ಮಡಿಯುವನು. ಆಗ ಅರಸನು ಜ್ವಾಲೆಯನ್ನು ಬೈದು ಅರ್ಜುನನ ಕೂಡೆ ಗೆಳೆತನಮಾಡಿ ಕುದುರೆಯ ಸಂರಕ್ಷಣೆಗೆ ಹೊರಡುವನು.

ಆಗ ಹಟಮಾರಿಯಾದ ಜ್ವಾಲೆಯು ತನ್ನ ತಮ್ಮನ ಮಗನಾದ ಉನ್ಮುಖನ ಮನೆಗೆ ಹೋಗುವಳು. ಅವನು ಕೃಷ್ಣ ಮಿತ್ರರಾದ ಪಾಂಡವರನ್ನು ಗೆಲ್ಲುವುದು ಕಷ್ಟವೆಂದು ಅವಳ ಮಾತಿಗೆ ಒಪ್ಪಿಕೊಳ್ಳದೆ ಜ್ವಾಲೆಯನ್ನು ಮನೆಯಿಂದ ಹೊರಗೆ ಓಡಿಸುವನು. ಆಗ ಜ್ವಾಲೆ ಗಂಗಾತೀರಕ್ಕೆ ಬಂದು ಗಂಗೆಯನ್ನು ಪ್ರತ್ಯಕ್ಷ ಮಾಡಿಕೊಂಡು ಗಂಗಾಪುತ್ರನಾದ ಭೀಷ್ಮನನ್ನು ಅರ್ಜುನನು ಕೊಂದನೆಂದು ಅವಳ ನೆನಪಿಗೆ ತಂದು ಅರ್ಜುನನು ಮಗನಿಂದಲೇ ಮರಣ ಹೊಂದುವಂತೆ ಗಂಗೆಯಿಂದ ಶಾಪ ಕೊಡಿಸುವಳು. ಕಡೆಗೆ ಜ್ವಾಲೆ ಅಗ್ನಿಪ್ರವೇಶಮಾಡಿ, ಬಭ್ರುವಾಹನನ ಬಳಿ ಬಾಣವಾಗಿ ಸೇರುವಳು.

ಅಲ್ಲಿಂದ ಹೊರಟ ಕುದುರೆಯು ಮುಂದೆ ಸೌಭರಿ ಮುನಿಯ ಆಶ್ರಮಕ್ಕೆ ಬಂದು ಕಲ್ಲಲ್ಲಿ ಕೀಲಿಸಿಕೊಂಡು ನಿಲ್ಲುವುದು. ಅರ್ಜುನನು ಆಶ್ಚರ‍್ಯಪಟ್ಟು ಕುದುರೆಯ ಈ ಅಚಲ ಸ್ಥಿತಿಗೆ ಕಾರಣವನ್ನು ಕೇಳಿ, ಮುನಿಮುಖದಿಂದ ಉದ್ದಾಲಕ ಮುನಿಯ ಪತ್ನಿಯಾದ ಚಂಡಿಯ ಕಥೆಯನ್ನು ಲಾಲಿಸಿ, ಮುಂದೆ ಹಂಸಧ್ವಜನ ಚಂಪಕಾವತಿಗೆ ಬರುವನು. ಹರಿಭಕ್ತನಾದ ಹಂಸಧ್ವಜನು ಕುದುರೆಯನ್ನು ಕಟ್ಟುವನು. ಸುಧನ್ವನು ತಂದೆಯ ಅಪ್ಪಣೆಯಂತೆ ಎಣ್ಣೆ ಕೊಪ್ಪರಿಗೆಯಲ್ಲಿ ಅದೊಂದು ತಪ್ಪಿಗಾಗಿ ಬೇಯುವನು. ಶ್ರೀ ಕೃಷ್ಣನ ನಾಮಸ್ಮರಣೆಯಿಂದ ಅವನು ಪಾರಾಗುವನು. ಮುಂದೆ ಸುಧನ್ವ ಸುರಥರು ಕೃಷ್ಣಾರ್ಜುನರ ಕೂಡೆ ಭಯಂಕರವಾದ ಕಾಳಗವನ್ನು ಮಾಡುವರು. ಯುದ್ಧದ ವರ್ಣನೆಯು ಹನ್ನೆರಡನೆಯ ಅಧ್ಯಾಯದ ತುಂಬ ಭಯಂಕರವೆನಿಸಿದೆ. ಯುದ್ಧವು ಅರ್ಜುನ ವೃಷಕೇತುಗಳ ಕೈಮೀರಿ ಹೋಗುವುದು. ಅರ್ಜುನನು ಶ್ರೀಕೃಷ್ಣನನ್ನು ಬರಮಾಡಿಕೊಳ್ಳುವನು. ಸುಧನ್ವನು ವೀರ ಸ್ವರ್ಗವನ್ನು ಹೊಂದುವನು. ಅವನ ತಲೆಯು ಶಿವನ ರುಂಡಮಾಲೆಯಲ್ಲಿ ಸೇರುವುದು. ಸುರಥನು ಅರ್ಜುನನ ಮೇಲೆ ಬಹಳ ಭಯಂಕರವಾದ ಯುದ್ಧವನ್ನು ಮಾಡುವನು. ಸುರಥನು ಸತ್ತು ಅವನ ತಲೆಯೂ ಶಿವನ ರುಂಡಮಾಲೆಯಲ್ಲಿ ಸೇರುವುದು. ಆಮೇಲೆ ಶ್ರೀಕೃಷ್ಣನು ಹಂಸಧ್ವಜನಿಗೆ ಕ್ಷಾತ್ರ ತಾಮಸವನ್ನು ಬಿಡುವಂತೆ ಹೇಳಿ ಯುಧಿಷ್ಠಿರನ ಅಶ್ವಮೇಧಕ್ಕೆ ಹಂಸಧ್ವಜನು ನೆರವಾಗುವಂತೆ ಮಾಡುವನು. ಅರ್ಜುನನನ್ನು ಮುಂದೆ ಕಳುಹಿಸಿ ಶ್ರೀಕೃಷ್ಣನು ಹಸ್ತಿನಾವತಿಗೆ ತೆರಳುವನು.

ಅನಂತರ ಕುದುರೆಯು ಪಾರ್ವತಿಯ ತಪಸ್ಸಿನ ಪುಣ್ಯ ಭೂಮಿಯನ್ನು ಸೇರಿ ಅಲ್ಲಿರುವ ಕೊಳದ ನೀರನ್ನು ಕುಡಿದು ಹೆಣ್ಣು ಕುದುರೆಯಾಗಿ ಮತ್ತೊಂದು ಕೊಳದ ನೀರನ್ನು ಕುಡಿದು ಹೆಬ್ಬುಲಿಯಾಗುವುದು. ಅರ್ಜುನನು ಈ ಆಕಸ್ಮಿಕ ಆಶ್ಚರ್ಯವನ್ನು ಕಂಡು ಭಯಚಕಿತನಾಗುವನು. ಆಗ ಅರ್ಜುನನು ಶ್ರೀ ಕೃಷ್ಣನಾಮವನ್ನು ಸ್ಮರಿಸಿಕೊಂಡು ಕುದುರೆಯನ್ನು ಮೊದಲಿನಂತೆ ಮಾಡಿ ಕೊಳ್ಳುವನು. ಭಗವಂತನ ಭಕ್ತರಿಗೆ ಬಂದ ಕಷ್ಟಗಳು ಬೇಗನೆ ತೊಲಗುವುವು.

ಮುಂದೆ ಯಜ್ಞಾಶ್ವವು ಸ್ತ್ರೀರಾಜ್ಯವಾದ ಪ್ರಮೀಳೆಯ ದೇಶಕ್ಕೆ ಹೋಗುವುದು. ಆ ಸ್ತ್ರೀರಾಜ್ಯವು ವಿಷಕನ್ಯೆಯರಿಂದ ತುಂಬಿರುವುದು. ಆ ರಾಜ್ಯಕ್ಕೆ ಪ್ರಮೀಳೆಯು ಅಧಿಪತಿ. ಆ ದೇಶದಲ್ಲಿ ತನ್ನ ಸೈನಿಕರು ಸಂಯಮಿಗಳೂ ವಿವೇಕಿಗಳೂ ಆಗಿರಬೇಕೆಂದು ಅರ್ಜುನನು ಎಚ್ಚರಿಸುವನು. ಯಜ್ಞಾಶ್ವವನ್ನು ಪ್ರಮೀಳೆಯು ಕಟ್ಟಲು ಅರ್ಜುನನು ಯುದ್ಧಕ್ಕೆ ಸಿದ್ಧನಾಗುವನು. ಆಗ ಆಕಾಶವಾಣಿಯೊಂದು,*“ಅರ್ಜುನ, ಇವಳ ಮೇಲೆ ಯುದ್ಧ ಮಾಡಬೇಡ, ಇವಳನ್ನು ಮದುವೆಯಾಗು, ಅದರಿಂದ ನಿನಗೆ ಶ್ರೇಯಸ್ಸಾಗುವುದು” ಎಂದು ಹೇಳುವುದು. ಅದರಂತೆ ಅರ್ಜುನನು ಪ್ರಮೀಳೆಯನ್ನು ಮದುವೆಯಾಗಿ ಮುಂದೆ ಶ್ರೀಕೃಷ್ಣನ ದರ್ಶನವಾದನಂತರ ನಿನ್ನನ್ನು ಕೂಡುವೆನೆಂದು ಹೇಳಿ ಪ್ರಮೀಳೆಯನ್ನು ಹಸ್ತಿನಾವತಿಗೆ ಕಳುಹುವನು.

ಅನಂತರ ಕುದುರೆಯು ಕೆಲವು ಆಶ್ಚರ್ಯಕರವಾದ ಪ್ರದೇಶಗಳನ್ನು ಹಾಯ್ದು ಭೀಕರವಾದ ಭೀಷಣನ ರಾಜ್ಯವನ್ನು ಸೇರುವುದು. ರಾಕ್ಷಸನಾದ ಆ ಭಿಷಣನು ಮಾಯಾಜಾಲದಿಂದ ಅರ್ಜುನನನ್ನು ಕಾಡುವನು. ಆದರೆ, ಅರ್ಜುನನ ಬಾಣಗಳು ಅವನ ಮಾಯೆಯನ್ನು ಬಡಿದೋಡಿಸಿ ದೈತ್ಯನನ್ನು ದೆಸೆಗೆಟ್ಟು ಓಡಿಸುವುವು. ರಾಕ್ಷಸನಾದ ಭೀಷಣನು ಶರಣಾಗುವನು.

ಮುಂದೆ ಕುದುರೆಯು ಮಣಿಪುರಕ್ಕೆ ಸಾಗುವುದು. ಮಣಿಪುರದರಸು ಬಭ್ರುವಾಹನನು ಕುದುರೆಯನ್ನು ಕಟ್ಟುವನು. ಅವನ ತಾಯಿ ಚಿತ್ರಾಂಗದೆ ಈ ಸುದ್ಧಿಯನ್ನು ಕೇಳಿ, “ಮಗನೆ, ಅರ್ಜುನನು ನಿನ್ನ ತಂದೆ, ತಂದೆಗೆದುರಾಗಿ ನಿಲ್ಲುವುದು ಮಗನ ಲಕ್ಷಣವಲ್ಲ. ನಿನ್ನ ಸರ‍್ವಸ್ವವನ್ನೂ ಅವನಿಗೆ ಒಪ್ಪಿಸಿ ಶರಣಾಗು” ಎಂದು ಬುದ್ಧಿ ಹೇಳುವಳು. ಅದರಂತೆ ಬಭ್ರುವಾಹನನು ಅರ್ಜುನನ್ನು ಮರೆಹೊಗಲು ಸಿದ್ಧನಾಗಿ ಬರುವನು. ಬಭ್ರುವಾಹನನ ಈ ವಿನಯವನ್ನು ಅರ್ಥಮಾಡಿಕೊಳ್ಳದ ಅರ್ಜುನನು ವಿಧಿವಿಲಾಸದಿಂದಲೋ ಎಂಬಂತೆ ಆ ವೀರ ಬಭ್ರುವಾಹನನ್ನು ಕಟಕಿಯಾದ ಮಾತುಗಳಿಂದ ನಿಂದಿಸಿ “ನೀನು ವೈಶ್ಯ ಸಂಭವನಾಗಿರಬೇಕು, ಕ್ಷತ್ರಿಯ ಪುತ್ರನಲ್ಲ” ಎಂದು ನಿಂದಿಸುವನು. ಈ ಮಾತಿನಿಂದ ಕುಪಿತನಾದ ಬಭ್ರುವಾಹನನು ಕೆರಳಿದ ಕೇಸರಿಯಂತೆ ಆವೇಶಗೊಂಡು ಅರ್ಜುನನ ಕೂಡೆ ಭಯಂಕರವಾದ ಯುದ್ಧ ಮಾಡುವನು. ರಾಮಕುಶಲವರ ಯುದ್ಧದಂತೆ ಇದು ಅತಿ ಭಯಂಕರವೆನಿಸುವುದು. ಆ ಯುದ್ಧವು ದೇವತೆಗಳನ್ನು ತಲೆದೂಗಿಸುವುದು ಇನ್ನು ಮುಂದೆ ಜೈಮಿನಿ ಭಾರತದ ಕಥೆಯಲ್ಲಿ ಸಂಗ್ರಹವಾಗಿ ರಾಮಾಯಣದ ಉತ್ತರ ಕಾಂಡದ ಕಥೆಯು ನಿರೂಪಿತವಾಗುವುದು. ಶ್ರೀರಾಮಚಂದ್ರನು ಅಗಸನ ಮಾತಿಗಾಗಿ ಸೀತಾದೇವಿಯನ್ನು ವನ ವಾಸಕ್ಕೆ ಕಳುಹಿಸಿದುದು, ವಾಲ್ಮೀಕಿಯ ಆಶ್ರದಲ್ಲಿ ಕುಶಲವರು ಜನಿಸಿ ಅಭಿವೃದ್ಧಿಯನ್ನು ಪಡೆದುದು. ಮುಂದೆ ಶ್ರೀರಾಮನು ಅಶ್ವಮೇಧಯಾಗವನ್ನು ಕೈಗೊಂಡುದು, ಕುಶಲವರು ಯಜ್ಞಾಶ್ವವನ್ನು ಕಟ್ಟಿದುದು, ಲಕ್ಷಣ, ಭರತ ಶತ್ರುಘ್ನರು ಕುಶಲವರಿಗೆ ಸೋತುದು, ಅನಂತರ ಶ್ರೀರಾಮಚಂದ್ರನೇ ಬಂದು ಯುದ್ಧ ಮಾಡಿ ಬಾಲಕರ ಬಾಣಗಳಿಂದ ಮೂರ್ಛಿತನಾಗಿ ಭೂಮಿಯನ್ನಾಶ್ರಯಿಸುವುದು, ಆಗ ವಾಲ್ಮೀಕಿ ಮುನಿಯು ಬಂದು ತಂದೆ ಮಕ್ಕಳ ಸಮಾಗಮ ಮಾಡಿಸುವುದು, ಸೀತಾದೇವಿಗೆ ಸಮಾಧಾನ ಹೇಳಿ ಆಕೆಯನ್ನು ಅಯೋಧ್ಯೆಗೆ ಕಳುಹಿಸುವುದು*ಇತ್ಯಾದಿ ಕಥೆಯು ನಿರೂಪಿತವಾಗಿದೆ. ಇತ್ತ ಅರ್ಜುನ, ಬಭ್ರುವಾಹನರ ಕಾಳಗವು ಉಗ್ರ ಸ್ವರೂಪವನ್ನು ತಾಳುವುದು. ಬಭ್ರುವಾಹನನ ಮುಂದೆ ಪಾಂಡವರ ಸೈನ್ಯವು ಮಂಕಾಗುವುದು. ಮೊದಲು ವೃಷಕೇತು ಮಡಿಯುವನು. ಅರ್ಜುನನು ಬಲಹೀನನಾಗುವನು. ಗಂಗೆಯ ಶಾಪ, ಪತಿವ್ರತೆಯಾದ ಚಿತ್ರಾಂಗದೆಯನ್ನು ನಿಂದಿಸಿದ ಪಾಪ, ವೀರ ಬಭ್ರುವಾಹನನ ಪ್ರತಾಪ-ಇವು ಮೂರೂ ಸೇರಿ ಜ್ವಾಲೆಯ ಚಲದ ಪರಿಣಾಮವೋ ಎಂಬಂತೆ ಕಾರ್ತಿಕ ಏಕಾದಶಿಯ ದಿನ ಅರ್ಜುನನ ತಲೆಯು ಕೆಳಗೆ ಬೀಳುವಂತೆ ಮಾಡುವುದು. ಬಭ್ರುವಾಹನನ ಬಾಣದಿಂದ ಅರ್ಜುನನು ಹತನಾಗುವನು. ಬಭ್ರುವಾಹನನು  ಜಯೋತ್ಸಾಹದಿಂದ  ಬೊಬ್ಬಿರಿದಾಗ ಪತಿವ್ರತೆಯಾದ ಆತನ ತಾಯಿ ಚಿತ್ರಾಂಗದೆ ಬಂದು ತನ್ನ ಪತಿಯಾದ ‘ಅರ್ಜುನನು ವಾಸುದೇವನ ಸಖನು ಮಡಿದನೆ’ ಎಂದು ಗೋಳಾಡುವಳು. ಅಷ್ಟು ಹೊತ್ತಿಗೆ ಉಲೂಪಿಯೂ ಬಂದು ದುಃಖದಲ್ಲಿ ಭಾಗಿಯಾಗುವಳು. ಆಗ ಬಭ್ರುವಾಹನನು ಪಿತೃವಧೆಯ ಪಾಪಕ್ಕಾಗಿ ಬೆಂಕಿಗೆ ಸಿದ್ಧನಾಗುವನು. ಆಗ ಶ್ರೀಕೃಷ್ಣನನ್ನು ಬರಮಾಡೆಂದು ತಾಯಿ ಮಗನಿಗೆ ಬುದ್ಧಿವಾದ ಹೇಳುವಳು. ಕೃಷ್ಣಾಗಮನದಿಂದ ಎಲ್ಲರಿಗೂ ಮಂಗಳವಾಗುವುದೆಂಬುದು ಅವಳ ಅಂತರಂಗದ ಆಶೆ.

ಉಲೂಪಿಯ ಸಲಹೆಯಂತೆ ಪಾತಾಳದಿಂದ ಸಂಜೀವಕಮಣಿಯನ್ನು ತಂದು ಅರ್ಜುನನ್ನು ಬದುಕಿಸಲು ಬಭ್ರುವಾಹನನು ಸಂಕಲ್ಪಿಸುವನು. ಸರ‍್ಪರಾಜನು ಆ ಮಣಿಯನ್ನು ಕೊಡಲೊಪ್ಪಿದರೂ ಧೃತರಾಷ್ಟ್ರ ಎಂಬ ಮಂತ್ರಿಯು ಆ ಮಣಿಯನ್ನು ಕೊಡದಂತೆ ಮಾಡುವನು. ಬಭ್ರುವಾಹನನು ಮಂತ್ರಾಸ್ತ್ರಗಳಿಂದ ಸರ್ಪಕುಲವನ್ನು ನರಳಿಸುವನು. ಆಗ ಆದಿಶೇಷನು ಮಣಿಯನ್ನು ತೆಗೆದುಕೊಂಡು ಶ್ರೀಕೃಷ್ಣನ ಸಂದರ್ಶನಾರ್ಥನಾಗಿ ಪಾರ್ಥನ ಕಳೇವರವಿದ್ದೆಡೆಗೆ ಬರುವನು. ಆಗ ಧೃತರಾಷ್ಟ್ರನ ಮಕ್ಕಳು ಪಾರ್ಥನ ತಲೆಯನ್ನಪಹರಿಸುವರು.

ಅತ್ತ ಹಸ್ತಿನಾವತಿಯಲ್ಲಿ ಕುಂತಿಗೆ ದುಃಸ್ವಪ್ನವಾಗಿ, ತಾಯಿಕರುಳಿನ ಫಲವಾಗಿ ಅರ್ಜುನನಿಗೆ ಕೆಡುಕಾಗಿರಬೇಕೆಂದು ಆಕೆ ಚಿಂತಿಸುವಳು. ಕೂಡಲೇ ಶ್ರೀಕೃಷ್ಣನು ಗರುಡನನ್ನೇರಿ ಕುಂತಿ, ಯಶೋದೆ, ಭೀಮ ಮೊದಲಾದವರೊಡನೆ ಮಣಿಪುರಕ್ಕೆ ಬರುವನು. ವೃಷಕೇತು-ಅರ್ಜುನರ ಸ್ಥಿತಿಯನ್ನು ನೋಡಿ ಭೀಮನು ಕನಲುವನು. ಬಭ್ರುವಾಹನನು ಎಲ್ಲರ ಪಾದಗಳ ಮೇಲೆ ಬಿದ್ದು ಪಿತೃದ್ರೋಹಿಯಾದ ತನ್ನನ್ನು ಕೊಲ್ಲುವಂತೆ ಕೇಳಿಕೊಳ್ಳವನು. ಕುಂತಿಯ ಶೋಕವು ಮಿಗಿಲಾಗುವುದು. ಮಣಿಪುರವು ದುಃಖದ ಸಾಗರವಾಗುವುದು.

ಈ ಹೊತ್ತಿಗೆ ಆದಿಶೇಷನು ಸಂಜೀವಕಮಣಿಯೊಡನೆ ಬಂದು ಶ್ರೀಕೃಷ್ಣನನ್ನು ಪ್ರಾರ್ಥಿಸುವನು. ಶ್ರೀಕೃಷ್ಣನು ತನ್ನ ಸಂಕಲ್ಪ ಮಾತ್ರದಿಂದ ಅರ್ಜುನನ ತಲೆಯನ್ನು ಇದ್ದಲ್ಲಿಗೆ ತರಿಸುವನು. ಅಂತೆಯೇ ಸತ್ತ ವೃಷಕೇತು ಮೊದಲಾದವರೆಲ್ಲರನ್ನೂ ಬದುಕಿಸುವರು. ಎಲ್ಲೆಲ್ಲಿಯೂ ಸಂತೋಷವು ಹೊರಸೂಸುವುದು. ಬಭ್ರುವಾಹನನು ಎಲ್ಲರನ್ನೂ ಮಣಿಪುರಕ್ಕೆ ಸ್ವಾಗತಿಸಿ ಸಮಸ್ತ ರಾಜ್ಯ ವೈಭವವನ್ನೂ ಕೃಷ್ಣಾರ್ಜುನರಿಗೆ ಒಪ್ಪಿಸುವನು. ಕೃಷ್ಣನು ‘ಇದೆಲ್ಲವೂ ಗಂಗೆಯ ಶಾಪದ ಫಲ’ ಎಂದು ಅರ್ಜುನನಿಗೆ ತಿಳಿಸುವನು. ಆಗ ಕೃಷ್ಣಾರ್ಜುನರು ಕುದುರೆಯ ಕಾವಲಾಗಿ ಮುಂದೆ ಹೋಗುವರು. ಉಳಿದವರು ಹಸ್ತಿನಾವತಿಗೆ ತೆರಳುವರು.

ಮುಂದೆ ಕುದುರೆಯು ಮಯೂರಧ್ವಜನ ರತ್ನಪುರಕ್ಕೆ ಹೋಗುವುದು. ಅವನು ಏಳು ಆಶ್ವಮೇಧಗಳನ್ನು ಮಾಡಿ ಎಂಟನೆಯದನ್ನು ಸಾಗಿಸಿದ್ದನು. ಯುಧಿಷ್ಠಿರ-ಮಯೂರಧ್ವಜರ ಕುದುರೆಗಳು ಎದುರಾಗುವುವು. ತಾಮ್ರಧ್ವಜನು ಧರ್ಮರಾಜನ ಕುದುರೆಯನ್ನು ಕಟ್ಟುವನು. ತಾಮ್ರಧ್ವಜನಿಗೂ ಕೃಷರ‍್ಣಾರ್ಜುನರಿಗೂ ಭಯಂಕರವಾದ ಯುದ್ಧವಾಗಿ ಕೃಷ್ಣಾರ್ಜುನರು ಮೂರ್ಛಿತರಾಗುವರು. ಈ ಮಾತನ್ನು ಕೇಳಿ ಹರಿಭಕ್ತನಾದ ಮಯೂರಧ್ವಜನು ಶ್ರೀಕೃಷ್ಣನ ಸಂದರ್ಶನಾರ್ಥವಾಗಿ ತನ್ನ ಯಜ್ಞವನ್ನೇ ನಿಲ್ಲಿಸಿ ಕೃಷ್ಣನನ್ನು ಅರಸುವನು. ಮುಂದೆ ಕೃಷ್ಣಾರ್ಜುನರು ಉಪಾಯದಿಂದ ಮಯೂರಧ್ವಜನನ್ನು ವಶಮಾಡಿಕೊಳ್ಳಲು ಬ್ರಾಹ್ಮಣ ವೇಷದಿಂದ ಅವನ ಯಜ್ಞಶಾಲೆಗೆ ಹೋಗಿ, ದಾರಿಯಲ್ಲಿ ಸಿಂಹವೊಂದಕ್ಕೆ ಬಲಿಯಾಗಲಿರುವ ತನ್ನ ಮಗನನ್ನು ಉಳಿಸುವ ಸಲುವಾಗಿ ಮಯೂರಧ್ವಜನು ತನ್ನರ್ಧ ದೇಹವನ್ನು ಕೊಡಬೇಕೆಂದು ಶ್ರೀಕೃಷ್ಣನು ಪ್ರಾರ್ಥಿಸುವನು. ಅದರಂತೆ ಮಯೂರಧ್ವಜನು ಕಪಟ ಬ್ರಾಹ್ಮಣನಿಗೆ ಮಾತುಕೊಟ್ಟು, ತನ್ನ ದೇಹವನ್ನು ಸೀಳಿಸುವನು. ಆಗ ಶ್ರೀಕೃಷ್ಣನು ಮಯೂರಧ್ವಜನ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾಗಿ ಮಯೂರಧ್ವಜ-ತಾಮ್ರಧ್ವಜರ ಭಕ್ತಿಯನ್ನು ಸ್ವೀಕರಿಸುವನು. ಮಯೂರಧ್ವಜನು ಎಲ್ಲವನ್ನೂ ಕೃಷ್ಣಾರ್ಜುನರಿಗೆ ಸಮರ್ಪಿಸುವನು.

ಮುಂದೆ ಕುದುರೆಯು ಸಾರಸ್ವತಪುರಕ್ಕೆ ಬರುವುದು. ಅದರ ಅರಸು ವೀರವರ್ಮ. ಅವನ ಮಗಳು ಮಾಲಿನಿಯನ್ನು ಮೋಹಿಸಿ ಯಮನು ಅವನ ಅಳಿಯನಾಗಿರುವನು. ವೀರವರ್ಮನು ಯಜ್ಞಾಶ್ವವನ್ನು ಕಟ್ಟಲು ಅರ್ಜುನನಿಗೂ ಅವನಿಗೂ ಯುದ್ಧವಾಗುವುದು. ಆಗ ಶ್ರೀಕೃಷ್ಣನು ತನ್ನ ಮಹಿಮೆಯನ್ನು ಪ್ರಕಟಿಸಿ ವೀರವರ್ಮನನ್ನು ವಶಮಾಡಿಕೊಳ್ಳುವನು. ಯಮನು ಮಾವನನ್ನು ಶ್ರೀಕೃಷ್ಣನಿಗೆ ಒಪ್ಪಿಸಿ ತನ್ನೂರಿಗೆ ಪ್ರಯಾಣಮಾಡುವನು.

ಮುಂದೆ ಕುದುರೆಯು ಕುಂತಳನಗರಕ್ಕೆ ಬರುವುದು. ದಿವ್ಯಜ್ಞಾನಿಗಳಾದ ನಾರದರೇ ಭಾಗವತ ಶಿರೋಮಣೀಯಾದ ಚಂದ್ರಹಾಸನ ಆಶ್ಚರ್ಯಕರವಾದ ಕಥೆಯನ್ನು ಅರ್ಜುನನಿಗೆ ಹೇಳುವರು. ಕನ್ನಡ ಜೈಮಿನಿ ಭಾರತದಲ್ಲಿ ಈ ಕಥೆಯು ಕುತೂಹಲ ಜನಕವೆನಿಸಿ ಅತ್ಯಂತ ರಮಣೀಯವಾಗಿದೆ. ಮಂತ್ರಿಯಾದ ದುಷ್ಟಬುದ್ಧಿಯ ಕೆಟ್ಟ ಪ್ರಯತ್ನಗಳು ನಡೆಯದೆ ಭಗವದ್ಭಕ್ತನಾದ ಚಂದ್ರಹಾಸನ ಏಳ್ಗೆಯು ಶತಾಧಿಕವಾಗುವುದೆಂಬುದನ್ನು ಇಲ್ಲಿ ನಾವು ನೋಡ ಬಹುದು. ಭಗದ್ಭಕ್ತರಿಗೆ ಎಂತಹ ಕಷ್ಟಬಂದರೂ ಅವರು ಪಾರಾಗುವರೆಂಬುದು ಇಲ್ಲಿ ನಿರೂಪಿಸಲ್ಪಟ್ಟಿದೆ. ಚಂದ್ರಹಾಸನು ಪುಳಿಂದನ ಮಗನಾಗಿ, ದುಷ್ಟಬುದ್ಧಿಯ ಮಗಳಾದ ವಿಷಯೆಯನ್ನೂ, ಕುಂತಳೇಂದ್ರನ ಮಗಳಾದ ಚಂಪಕಮಾಲಿನಿಯನ್ನೂ ವಿವಾಹವಾಗಿ ಭಾಗವತ ಶಿರೋಮಣಿ ಎನಿಸಿ ಅಭಿವೃದ್ಧಿಗೆ ಬಂದ ಕಥೆ ಇಲ್ಲಿ ನಿರೂಪಿತವಾಗಿದೆ. ಚಂದ್ರಹಾಸನು ಕಡೆಗೆ ಶ್ರೀಕೃಷ್ಣನ ದಾಕ್ಷಿಣ್ಯಕ್ಕಾಗಿ ಅರ್ಜುನನ್ನು ವಂದಿಸಿ ಯುಧಿಷ್ಠಿರನ ಅಶ್ವಮೇಧಕ್ಕೆ ಬೆಂಬಲವಾಗಿ ನಿಲ್ಲುವನು.

ಮುಂದೆ ಯುಧಿಷ್ಠಿರನ ಕುದುರೆಯು ಸಮುದ್ರತೀರವನ್ನು ಸೇರುವುದು. ಹಂಸಧ್ವಜ ಮೊದಲಾದ ವೈಷ್ಣವರು ಅಂಬುಧಿಯನ್ನು ಹೊಗುವರು. ಅಲ್ಲಿ ಮಹಾತ್ಮನಾದ ಬಕದಾಲ್ಭ್ಯನ ದರ್ಶನವಾಗುವುದು. ಆ ಬಕದಾಲ್ಭ್ಯನ ಮುಖದಿಂದ ಅನೇಕ ಬ್ರಹ್ಮರ ಕಥೆಗಳನ್ನು ಕೇಳುವರು. ಭಗವಂತನ ಲೀಲೆಯನ್ನು ಅರಿಯುವರು. ಸಾವಿರ ಮುಖದ ಪರಮೇಷ್ಠಿಗಳನ್ನು ಕಾಣುವರು. ಧರ್ಮರಾಜನ ಯಜ್ಞಕ್ಕಾಗಿ ಶ್ರೀಕೃಷ್ಣನು ಬಕದಾಲ್ಭ್ಯನನ್ನು ಕರೆತರುವನು. ಹೀಗಾದುದು ಪಾಂಡವರ ಅದೃಷ್ಟ ವಿಶೇಷವೇ ಸರಿ !!

ಮುಂದೆ ಯಜ್ಞಾಶ್ವವು ಸಿಂಧೂದೇಶವನ್ನು ಸೇರುವುದು. ದುರ್ಯೋಧನನ ತಂಗಿ ದುಶ್ಯಳೆಯು (ಜಯದ್ರಥನ ಹೆಂಡತಿ)ಕೃಷ್ಣಾರ್ಜುನರನ್ನು ಮರೆಹೊಗುವಳು. ಹಿಂದಿನ ವೈರವನ್ನು ಮರೆತು ತನ್ನ ಮಗನನ್ನು ಅನುಗ್ರಹಿಸುವಂತೆ ಬೇಡುವಳು. ಶ್ರೀಕೃಷ್ಣನು ಅವಳನ್ನು ಅನುಗ್ರಹಿಸಿ, ತಂಗಿಯಂತೆ ಸಂಭಾವಿಸಿ ಯುಧಿಷ್ಠಿರನ ಯಜ್ಞಕ್ಕೆ ಬರುವಂತೆ ಹೇಳಿ ಅವಳನ್ನು ಕರೆತರುವನು.

ವರ್ಷದ ಕಡೆಗೆ ಕುದುರೆಯು ಧರ್ಮರಾಜನಿದ್ದಲ್ಲಿಗೆ ಬರುವುದು. ಧರ್ಮರಾಯನು ದಿಗ್ವಿಜಯವಾರ್ತೆಯನ್ನು ಕೇಳುವನು. ಯಜ್ಞಕ್ಕೆ ಎಲ್ಲ ಏರ್ಪಾಡುಗಳೂ ನಡೆಯುವುವು. ಆಗ ಶ್ರೀಕೃಷ್ಣ ರುಕ್ಮಿಣಿಯರೇ ಮೊದಲಾದ ಅರವತ್ತು ನಾಲ್ಕು ಮಂದಿ ರಾಜದಂಪತಿಗಳು ಗಂಗೋದಕ ತರಲು ಹೊರಡುವರು. ಆಗ ನಾರದರು ಸತ್ಯಭಾಮೆ-ಜಾಂಬುವತಿಯರನ್ನು ರೇಗಿಸಿ ಶ್ರೀಕೃಷ್ಣನ ವಿರಾಡ್ರೂಪ ಮಹಿಮೆಯನ್ನು ಕಂಡು ಬೆರಗಾಗುವರು.

ಯಜ್ಞಶಾಲೆಯಲ್ಲಿ ಮಂತ್ರಪೂತಜಲದಲ್ಲಿ ದ್ರೌಪದೀ-ಧರ‍್ಮರಾಜರು ಸ್ನಾನಮಾಡಿ ಯಜ್ಞವನ್ನು ಸಾಂಗಗೊಳಿಸುವರು. ಆಗ ಯಜ್ಞದ ಕುದುರೆಯನ್ನು ತರಿಸಿ, ವಿದ್ಯುಕ್ತವಾಗಿ ಮಂತ್ರವನ್ನು ಪಠಿಸಿ “ಎಲೈ ಕುದುರೆಯೆ, ಅಶ್ವಲೋಕದಲ್ಲಿ ನೀನು ಅಮರ ಪದವಿ ಪಡೆ ಹೋಗು. ನಿನಗೆ ಉತ್ತಮ ಸ್ವರ್ಗವಾಗಲಿ” ಎಂದು ಹೇಳಲು ಕುದುರೆ ಬೇಡವೆಂದೂ ತಲೆಯಲ್ಲಾಡಿಸುವುದು ಧರ್ಮರಾಯನು ಅಶ್ವದ ಸಂಜ್ಞೆಯ ಅರ್ಥವೇನೆಂದು ಶಾಸ್ತ್ರಜ್ಞನಾದ ನಕುಲನನ್ನು ಕೇಳುವನು. ಆಗ ನಕುಲನು, “ಮೇಲಿನ ಲೋಕದ ಆಶ್ವಪದವಿ ಬೇಡ. ನನಗೆ ಮೋಕ್ಷರೂಪಿ ವಿಷ್ಣುಸಾಯುಜ್ಯ ಬೇಕು. ಶ್ರೀಕೃಷ್ಣನ ಸಾನ್ನಿಧ್ಯವಿರುವ ಈ ಯಜ್ಞದಲ್ಲಿ ನಾನು ಕೃಷ್ಣನಲ್ಲಿಯೇ ಸೇರುವೆನು” ಎಂದು ಕುದುರೆ ಹೇಳುವುದಾಗಿ ತಿಳಿಸಿದನು. ಕುದುರೆಯನ್ನು ಯೂಪಸ್ತಂಭಕ್ಕೆ ಕಟ್ಟುವರು. ಧೌಮ್ಯರು ಆ ಕುದುರೆಯ ಕಿವಿಯನ್ನು ಕತ್ತರಿಸುವರು. ಅದರಲ್ಲಿ ಕ್ಷೀರಧಾರೆ ಹೊರಡುವುದು. ಆಮೇಲೆ ಭೀಮನು ಕುದುರೆಯ ತಲೆಯನ್ನು ಕತ್ತರಿಸಲು ಅದು ಆಕಾಶಕ್ಕೆ ಹಾರಿ ಅಡಗುವುದು. ಆಮೇಲೆ ಕುದುರೆಯ ಹೃದಯದಲ್ಲಿದ್ದ ಪ್ರಾಣವು ಶ್ರೀಕೃಷ್ಣನಲ್ಲಿ ಬಂದು ಸೇರುವುದು. ಕೆಳಗೆ ಬಿದ್ದ ಕುದುರೆಯ ದೇಹವು ಕರ‍್ಪೂರವಾಗುವುದು. ಅದನ್ನೇ ಶಕ್ರನಿಗೆ ಅಹುತಿ ಕೊಡುವರು. ಕೊನೆಗೆ ಹಯಮೇಧ ಫಲವನ್ನು ಧರ್ಮರಾಯನು ಕೃಷ್ಣನಿಗೆ ಅರ್ಪಿಸುವನು. ಹೀಗೆ ಧರ್ಮರಾಜನ ಆಶ್ವಮೇಧಯಾಗವು ಶ್ರೀಕೃಷ್ಣನ ಕೃಪೆಯಿಂದ ಸಮಾಪ್ತಿಗೊಳ್ಳುವುದು.