ರಾವಣ ಸಂಹಾರದ ನಂತರ ಶ್ರೀರಾಮಪಟ್ಟಾಭಿಷೇಕ, ಕುರುಕ್ಷೇತ್ರ ಮಹಾ ರಣರಂಗದ ನಂತರ ಪಾಂಡವ ಪಟ್ಟಾಭಿಷೇಕ, ಈ ಎರಡೂ, ಭಾರತೀಯ ಪರಂಪರೆಯ ಪ್ರಕಾರ ರಾಮಾಯಣ ಮಹಾಭಾರತಗಳಿಗೆ ಸಹಜವಾದ ನಿಲುಗಡೆ. ಆದರೂ ಅಲ್ಲಿಂದ ಮುಂದಕ್ಕೆ ಏನಾಯಿತು ಎಂಬ ಕುತೂಹಲ ರಾಮಾಯಣ ಹಾಗೂ ಮಹಾ ಭಾರತದ ಉತ್ತರ ಭಾಗಗಳ ರಚನೆಗೆ ಕಾರಣವಾಗಿರಬೇಕು. ಈ ಎರಡು ಮಹಾ ಕಾವ್ಯಗಳ ‘ಉತ್ತರ’ ಭಾಗಗಳಲ್ಲಿಯೂ ಸಮಾನವಾಗಿ ಕಂಡುಬರುವ ಸಂಗತಿ ಅಶ್ವಮೇಧ ಪ್ರಸಂಗ.

ಜೈಮಿನಿಭಾರತದ ಕಥೆ ವಾಸ್ತವವಾಗಿ ಅಶ್ವಮೇಧದ ಕಥೆಯೇ.[1] ಸಮಸ್ತ ಕುಲಕ್ಷಯ ಕಾರಣವಾದ ಕುರುಕ್ಷೇತ್ರದ ನಂತರ, ಆ ಶವದಹನ ಧೂಮವಿನ್ನೂ ವಾತಾವರಣದಲ್ಲಿ ಕರಗುತ್ತಿರುವಾಗ, ರಣರಂಗದ ರಕ್ತದ ತೇವವಿನ್ನೂ ಆರದಿರುವಾಗ, ಆ ಸ್ಮಶಾನ ಮೌನದಲ್ಲಿ ಧರ್ಮರಾಜ ಸಿಂಹಾಸನವನ್ನೇರುತ್ತಾನೆ. ಇಂಥ ಒಂದು ಹಿನ್ನೆಲೆಯಲ್ಲಿ ಪಟ್ಟಾಭಿಷಿಕ್ತನಾದ ಧರ್ಮರಾಯನ ಅಂತರಂಗದಲ್ಲಿ, ವಿಜಯದ ಉತ್ಸಾಹದ ಬದಲು, ಈ ರಾಜ್ಯಕ್ಕೋಸ್ಕರವಾಗಿ ಸಹೋದರರನ್ನು ತಾವೇ ಕೈಯಾರೆ ಕೊಂದೆವಲ್ಲಾ ಎನ್ನುವ ಪಶ್ಚಾತ್ತಾಪ ಸಹಜವಾಗಿಯೇ ಕೊರೆಯತೊಡಗುತ್ತದೆ. ಹೀಗಿರುವಾಗ ಒಂದು ದಿನ ವೇದವ್ಯಾಸರು ಆಗಮಿಸಿ ‘ಉರಿವ ಕಡುವೇಸಗೆಯ ಬಿಸಿಲಿಂದ ಬಸವಳಿದ ಕೋಮಲ ರಸಾಲ’ದಂತೆ ಕಂದಿದ ಧರ್ಮರಾಯನನ್ನು  ಕಂಡು, ಕಾರಣವನ್ನು ಬೆಸಗೊಂಡಾಗ ಧರ್ಮರಾಯನು ತನ್ನ ವ್ಯಥೆಯ ಕಥೆಯನ್ನು ತೋಡಿಕೊಂಡು ‘ಬಾಂಧವರನೀಡಾಡಿದೆವು ಬದುಕಲೇಕಿನ್ನಿಳೆಯೊಳು’ ಎಂದು ನಿಡುಸುಯ್ಯುತ್ತಾನೆ. ಆಗ ಮಹರ್ಷಿ ವ್ಯಾಸರು, ಅವನ ಕ್ಷಾತ್ರಧರ್ಮವನ್ನು ನೆನಪಿಗೆ ತಂದು, ರಾಜರಾದವರು ಅಶ್ವಮೇಧವನ್ನು ಕೈಕೊಂಡರೆ ಸಮಸ್ತ ಪಾಪವೂ ಪರಿಹಾರವಾಗುವುದೆಂದೂ, ಹಿಂದೆ ಇಂಥದೇ ಸಂದರ್ಭದಲ್ಲಿ ಶ್ರೀರಾಮನೂ ಅಶ್ವಮೇಧವನ್ನು ಮಾಡಿದನೆಂದೂ ತಿಳಿಯಪಡಿಸಿ, ಅಶ್ವಮೇಧವನ್ನು ಮಾಡುವ ಶಾಸ್ತ್ರೋಕ್ತವಾದ ವಿಧಾನವನ್ನೂ ವಿವರಿಸಿ ಧರ್ಮರಾಯನ ಮನಸ್ಸನ್ನು ಒಪ್ಪಿಸುತ್ತಾರೆ. ಸರಿ, ಅನಂತರ ಹೊರಡುತ್ತದೆ. ಯಜ್ಞದ ಕುದುರೆ.

ಮೂಲತಃ ಈ ಪೀಠಿಕಾ ಪ್ರಕರಣವೇ ವಿವಾದಾಸ್ಪದವಾಗಿದೆ. ಅಶ್ವಮೇಧ ಎಂದರೆ ಇಲ್ಲಿ ಮತ್ತೊಂದು ಕುರುಕ್ಷೇತ್ರಕ್ಕೆ ಪೀಠಿಕೆಯೇ ಸರಿ. ಯಜ್ಞದ ಕುದುರೆ ರಾಜನ ಬಿರುದನ್ನು ಹೊತ್ತು ಮುಂದೆ ನಡೆಯುತ್ತದೆ. ಶಸ್ತ್ರಸಜ್ಜಿತವಾದ ಸೈನ್ಯ ಅದರ ಹಿಂದೆ ನಡೆಯುತ್ತದೆ. ಉದ್ದಕ್ಕೂ ಅದನ್ನು ತಡೆದು ನಿಲ್ಲಿಸಿದ ವೀರರೊಂದಿಗೆ ಯುದ್ಧವಾಗುವುದು ಅನಿವಾರ‍್ಯ. ಜ್ಞಾತಿಗಳ ವಧೆಯ ಪಾಪವನ್ನು ಕಳೆಯಲು, ಮಹರ್ಷಿ ವ್ಯಾಸರು ಸೂಚಿಸಿದ ಈ ಮಾರ್ಗ ಮತ್ತಷ್ಟು ರಕ್ತಪಾತಕ್ಕೆ ಪಾಪಸಂಚಯನಕ್ಕೆ ಕಾರಣವಾಗಿದೆಯಲ್ಲ! ಒಂದು ಮಹಾಯುದ್ಧವನ್ನು ಕಂಡು, ಅದರ ಪರಿಣಾಮದಿಂದ ಪಶ್ಚಾತ್ತಾಪ ಪಡುವ ಧರ್ಮರಾಯನಿಗೆ ಹೇಗೆ ತಾನೆ ಮತ್ತೆ ರಣಕೋಲಾಹಲಕ್ಕೆ ನಾಂದಿಯಾದ ಅಶ್ವಮೇಧಯಾಗದ ಆಸೆ ಹುಟ್ಟಿತೋ! ಕುರುಕ್ಷೇತ್ರದ ನಂತರ ಮತ್ತೊಂದು ಮರಿಕ್ಷೇತ್ರ. ಈ ಸ್ಥಿತಿಯಲ್ಲಿ ಅದೂ ಎಷ್ಟೊಂದು ಅಸಹಜ.

ಅಷ್ಟೇ ಅಲ್ಲ, ಇದಕ್ಕೆ ಹಿಂದಿನ ಕುರುಕ್ಷೇತ್ರ ಸಂದರ್ಭದಲ್ಲಿ ಅರ್ಜುನನಿಗೆ ಒದಗಿದ ವಿಷಾದಯೋಗ, ಇಲ್ಲಿ ಈಗ ಧರ್ಮರಾಯನಿಗೆ ಒದಗಿರುವುದು ಸ್ವಾರಸ್ಯವಾಗಿದೆ. ಅಲ್ಲಿ ಅರ್ಜುನನಿಗೆ ಈ ವಿಷಾದಯೋಗ ಯುದ್ಧಾರಂಭದಲ್ಲಿ ಒದಗಿದರೆ, ಇಲ್ಲಿ ಧರ್ಮರಾಯನಿಗೆ ಅದು ಯುದ್ಧಾಂತ್ಯದಲ್ಲಿ ಬಂದಿದೆ. ‘ಬಂಧುಗಳನ್ನು ಜ್ಞಾತಿಗಳನ್ನು ನಾನು ರಣರಂಗದಲ್ಲಿ ಕೊಲ್ಲುವ ಬದಲು, ಕಾಡಿಗೆ ಹೋಗಿ ಸನ್ಯಾಸಿಯಾಗುತ್ತೇನೆ’ ಎಂದು ಕೃಷ್ಣನನ್ನು ಕುರಿತು ಅಂದು ಅರ್ಜುನನು ಹೇಳಿದರೆ ಇಲ್ಲಿ ಜ್ಞಾತಿಗಳ ವಧೆಗೆ ಪರಿತಪಿಸಿ ‘ನಾಂ ಗೋತ್ರವಧೆಗೈಸಿದೀ ಕಾಯಮಂ ವನವಾಸ ಕೈದಿಸುವೆನ್’ ಎಂದು ಕೃಷ್ಣದ್ವೆ ಪಾಯನರನ್ನು ಕುರಿತು ಇಲ್ಲಿ ಧರ್ಮರಾಯನು ಹೇಳುತ್ತಾನೆ. ಅಲ್ಲಿ, ತಮಗೆ ಇದುವರೆಗೂ ಅನ್ಯಾಯ ಮಾಡಿದ, ಅಧರ್ಮಿಗಳಾದ ಕೌರವರನ್ನು ಕೊಲ್ಲುವುದೇ ಕ್ಷತ್ರಿಯಧರ್ಮವೆಂದು ಹೇಳಿ ಅರ್ಜುನನನ್ನು ಕೃಷ್ಣನು ಕುರುಕ್ಷೇತ್ರ ಯುದ್ಧೋದ್ಯಮಕ್ಕೆ ಪ್ರೇರೇಪಿಸಿದರೆ, ಇಲ್ಲಿ ಗೋತ್ರವಧೆಯ ಪಾತಕ ಹೋಗಬೇಕಾದರೆ ನೀನು ಅಶ್ವಮೇಧಯಾಗವನ್ನು ಮಾಡಬೇಕೆಂದು ಸೂಚಿಸುವುದರ ಮೂಲಕ ವ್ಯಾಸರು ಮತ್ತೊಂದು ಕುರುಕ್ಷೇತ್ರಕ್ಕೆ ಧರ್ಮರಾಯನನ್ನು ಪ್ರೇರೇಪಿಸಿದ್ದಾರೆ.

ಧರ್ಮರಾಯನೇನೋ ಗುರುವಾಕ್ಯಕ್ಕೆ ವಿಧೇಯನಾಗಿ ಒಪ್ಪಿಕೊಂಡ. ಆದರೆ ಒಂದು ಮಹಾಯುದ್ಧದ ನಂತರ, ಅದರ ಪಾಪ ಪರಿಹಾರಕ್ಕೆ ಅಶ್ವಮೇಧ ನಿಮಿತ್ತವಾಗಿ ಮತ್ತೊಂದು ರಣಾಂಗಣಕ್ಕೆ ಪೀಠಿಕೆ ಹಾಕಿದಂತಾಗಲಿಲ್ಲವೆ? ಮಹಾ ಹಿಂಸೆಯೊಂದರ ಪಾಪ ಪರಿಹಾರಕ್ಕೆ ಮತ್ತೆ ಹಿಂಸಾಪರಂಪರೆಗಳ ಪುಣ್ಯ ಸ್ನಾನವೇ? ಅಶ್ವಮೇಧ ಎಂಬುದು ಒಂದು ರೀತಿಯಲ್ಲಿ ನರಮೇಧವಾಗದೆ ನಡೆಯತಕ್ಕದ್ದಲ್ಲ. ಉದ್ದಕ್ಕೂ ನರಮೇಧವಾಗಿ ಧರ್ಮರಾಯನ  ಸೈನ್ಯವೇನೋ ಮಹಾವೀರರ ಬೆಂಬಲದಿಂದ ವಿಜಯಿಯಾಗಿಯೇ ಬರುತ್ತದೆ. ಆದರೆ ಸೋತವರ ಕಣ್ಣೀರು, ನಿಟ್ಟುಸಿರು, ರಕ್ತಗಳನ್ನೂ ಅಂಟಿಸಿಕೊಂಡೇ ಬರುತ್ತದೆ. ಈ ರಕ್ತಸಂಚಯನದಿಂದ ಅನಂತರ ಬರುವ ಶಾಂತಿಯೇನು, ಸಮಾಧಾನವೇನು? ಪುಣ್ಯವೇನು? ಅದೂ ದೊಡ್ಡದೊಂದು ಯುದ್ಧದಿಂದ ರೋಸಿ ವನವಾಸಾಭಿಮುಖವಾದ ವಿರಕ್ತಚೇತನ ಹೇಗೆ ಒಂದಿಷ್ಟೂ ಹೇಸದೆ ಅಶ್ವಮೇಧ ನಿಮಿತ್ತವಾದ ಮತ್ತೊಂದು ರಕ್ತಕೋಲಾಹಲಕ್ಕೆ ಇಷ್ಟು ಬೇಗ ಸನ್ನದ್ಧವಾಯಿತು? ಕುರುಕ್ಷೇತ್ರದಂತಹ ಮಹಾರ್ಣವವನ್ನು ಕಡೆಹಾಯಿಸಿದ, ಧರ್ಮರೂಪಿಯಾದ ಶ್ರೀಕೃಷ್ಣನೇ ಪಾಂಡವರ ಕಡೆ ಇರುವಾಗ ಇವರಿಗೆ ಅಶ್ವಮೇಧದಂತಹ ಯಜ್ಞ ಮಾಡುವ ಅಗತ್ಯವಾದರೂ ಇತ್ತೆ? ಇಂಥ ಒಂದು ತಾಕಲಾಟ ಧರ್ಮರಾಯನಿಗೆ ಬಂದಂತೆ ತೋರದಿದ್ದರೂ, ಕವಿ ಲಕ್ಷ್ಮೀಶನ ಮನಸ್ಸಿನಲ್ಲಿ ಬಾರದೆ ಇಲ್ಲ. ಈ ಒಂದು ಯಜ್ಞ ಅನಗತ್ಯವಲ್ಲವೇ ಎನ್ನುವ ಸಂಶಯವನ್ನು ಪ್ರಶ್ನೆಯ ರೂಪದಲ್ಲಿ ಹಲವರ ಬಾಯಲ್ಲಿ ಕವಿ ಎತ್ತಿದ್ದಾನೆ. ನೀಲಧ್ವಜ ಮೊಟ್ಟಮೊದಲ ಸಮರದಲ್ಲಿಯೇ ಅರ್ಜುನನನ್ನು ಕುರಿತು ‘ಹರಿ ಸಮೀಪದೊಳಿರ್ದು ಮೀವಾಜಿಮೇಧವೇಕೆ? ಅಮೃತಮಿರಲಳೆಗೆಳಸಿದಂತಾಯ್ತು ನಿಮಗೆ’ [೮-೪೩] ಎಂದು ಮೂದಲಿಸುತ್ತಾನೆ. ಸೌಭರಿ ಎಂಬಾತನು ‘ಪ್ರಾಕೃತರ ತೆರದಿಂದೆ, ಹರಿ ಮನೆಯೊಳಿರೆ ಗರ್ದಭಾಕೃತಿಯ ಹರಿಯೊಡನೆ ಬಂದೆ, ಸುರಭೂಜಮಿರೆ ಶಾಲ್ಮಲಿಯನರಸುವಂತೆ’ [೧೦-೧೯] ಎಂದು ಟೀಕಿಸುತ್ತಾನೆ.  ಮಯೂರಧ್ವಜನಂತೂ ಕೃಷ್ಣನನ್ನು ಕಂಡ ಪುಣ್ಯಕ್ಕೆ ಹರ್ಷಪಟ್ಟು ‘ಧರ್ಮಜನೆ ಮಾಡಿ ಬದುಕಲಿ ಮಖಂಗಳನು’ [೨೬-೨೫] ಎನ್ನುತ್ತಾನೆ. ಸಾಕ್ಷಾತ್ ಕೃಷ್ಣನೆ ಇದ್ದರೂ ‘ಸುರನದಿಯ ತೋಯಮಿರೆ ನೀರಡಿಸಿ ಹಿಮಜಲಕೆ ಪರಿವಂತೆ’ [೨೬-೨೬] ಧರ್ಮರಾಜಾದಿಗಳು ಅಶ್ವಮೇಧಾದಿ ಯಾಗಗಳಲ್ಲಿ ಬಳಲಿದರಲ್ಲ, ಎಂದು ಬೆರಗಾಗುತ್ತಾನೆ. ಈ ಎಲ್ಲ ಬೆರಗು ಸಂಶಯ ಪ್ರಶ್ನೆಗಳಿಗೆ ಯಾರೂ ಸಮರ್ಪಕವಾದ ಉತ್ತರವನ್ನೇ ಕೊಡುವುದಿಲ್ಲ. ಉತ್ತರವೇನಿದ್ದರೂ ಕುದುರೆಯ ಪದಧ್ವನಿಯಲ್ಲಿ, ಅಸ್ತ್ರಶಸ್ತ್ರಗಳ ಸಂಘರ್ಷಣೆಯಲ್ಲಿ, ಕಡೆಗೆ ರಣರಂಗದ ರೌದ್ರದಲ್ಲಿ ಮುಳುಗಿ ಹೋಗಿದೆ.

ಇಂಥದೊಂದು ನೆಲೆಗಟ್ಟಿನ ಮೇಲೆ ನಿಂತಿದೆ ಇಡೀ ಅಶ್ವಮೇಧಪರ್ವ. ಧರ್ಮರಾಯನು ಇಂಥದೊಂದು ಅಶ್ವಮೇಧ ಕೈಕೊಂಡದ್ದು ಸರಿಯೇ, ತಪ್ಪೇ ಇತ್ಯಾದಿ ಪ್ರಶ್ನೆಗಳನ್ನೆತ್ತುವುದೇನೋ ಸಹಜ ಹಾಗೂ ಸುಲಭ. ಆದರೆ ಧರ್ಮರಾಯನಿಗಿಂತ ಪ್ರಬಲವಾದದ್ದು ಧರ್ಮಶಾಸ್ತ್ರ. ಅದು ಹೇಳಿದ್ದನ್ನು ಧರ್ಮರಾಯ ಕೇವಲ ಶ್ರದ್ಧೆಯಿಂದ, ನಿರುತ್ತರನಾಗಿ ಕೈಕೊಳ್ಳಬೇಕು. ಆ ಒಂದು ಶಾಸ್ತ್ರವಾಣಿಯ ಪ್ರತಿನಿಧಿಯಾಗಿ ಬರುತ್ತಾರೆ ಇಲ್ಲಿನ ವೇದವ್ಯಾಸರು. ರಾಜಾಧಿರಾಜರು ಆಶ್ವಮೇಧಾದಿಯಾಗಗಳನ್ನು ಮಾಡಬೇಕಾದದ್ದು ಅವರ ರಾಜಧರ‍್ಮದ ಕರ್ತವ್ಯ ಎಂಬುದು ಪರಂಪರಾಗತವಾದ ನಂಬಿಕೆ. “ಅಶ್ವಮೇಧ ಎಂಬುದು ಯಜ್ಞಗಳಲ್ಲೆಲ್ಲಾ ಶ್ರೇಷ್ಠವಾದದ್ದು. ಅದು ಮಹಾಕ್ರತು. ಅದು ಸಮಸ್ತ ಪಾಪಗಳನ್ನೂ ನಿವಾರಿಸುವಂಥಾದ್ದು. ಯಾರ ಚಕ್ರವರ್ತಿತ್ವ ಅಪ್ರತಿಹತವಾದದ್ದೋ ಅಂಥವರು, ದಿಗ್ವಿಜಯಾರಂಭದಲ್ಲೋ, ದಿಗ್ವಿಜಯಾನಂತರದಲ್ಲೋ ಕೈಕೊಳ್ಳಬಹುದಾದ ಮಹಾಕ್ರತು ಅದು… ಋಗ್ವೇದದಲ್ಲೇ ಇದರ ಪ್ರಸ್ತಾಪವಿದೆ; ಶತಪಥ ಬ್ರಾಹ್ಮಣ ಮತ್ತು ತೈತ್ತಿರೀಯ ಬ್ರಾಹ್ಮಣಗಳಲ್ಲಿ, ಯಜ್ಞಕರ‍್ಮಗಳನ್ನು ಕುರಿತ ಶ್ರೌತಸೂತ್ರಗಳಲ್ಲಿ, ಅಪಸ್ತಂಭ, ಅಶ್ವಲಾಯನ, ಸಾಂಖ್ಯಾಯನಗಳಲ್ಲಿ ಇದರ ವರ್ಣನೆ ಬಂದಿದೆ.”[2] ಇಂಥ ಶಾಸ್ತ್ರೋಕ್ತವಾದ ಅಶ್ವಮೇಧವನ್ನು ಕೈಕೊಂಡಾಗ “ಯಜ್ಞದ ಕುದುರೆಯನ್ನು ಶತ್ರುಗಳು ವಶಪಡಿಸಿಕೊಂಡು ಹೋದರೆ ಅದು ಯಜ್ಞದ ನಾಶವೇ ಆಗುತ್ತದೆ; ಆದಕಾರಣ ಅದು ನಿಜವಾಗಿಯೂ ವೀರರಾದವರು ಕೈಕೊಳ್ಳಬೇಕಾದ ಯಜ್ಞ”[3] ಅದ್ದರಿಂದ ಆ ಕುದುರೆಯನ್ನು ಉದ್ದಕ್ಕೂ ರಕ್ಷಿಸುವ, ಅದನ್ನು ಕಟ್ಟಿಹಾಕುವುದರ ಮೂಲಕ ಯಜ್ಞದೀಕ್ಷಿತರಾದ ರಾಜರ ಸರ್ವಾಧಿಕಾರಿತ್ವವನ್ನು ಸೆಣಸುವವರನ್ನು ಶಿಕ್ಷಿಸುವ ಕಾರ‍್ಯ ಒಂದು ರೀತಿಯಲ್ಲಿ ಯುದ್ಧವೇ ಆಗುವುದು ಅನಿವಾರ್ಯ. ಆದಕಾರಣ ಧರ‍್ಮದ ಪ್ರತಿನಿಧಿಗಳಾದ ವ್ಯಾಸರು, ಇಂಥದೊಂದು ಯಾಗವನ್ನು ಕೈಕೊಂಡು, ಪಾಪಕ್ಷಯವನ್ನು ಸಾಧಿಸುವುದು ನಿನ್ನ ಕರ್ತವ್ಯ ಎಂದು ಹೇಳಿದ ಮೇಲೆ, ಪೂರ್ವ ಪರಂಪರೆಯಿಂದ ಅಂಗೀಕೃತವಾದ, ರಾಜನಾದವನು ಕೈಕೊಳ್ಳಲೇಬೇಕಾದ ಇಂಥ ಒಂದು ಮಹಾ ಕ್ರತುವನ್ನು ಮಾಡಲು ಧರ್ಮರಾಯನ ಮನಸ್ಸು ಧರ‍್ಮಶಾಸ್ತ್ರವನ್ನು ಒಪ್ಪಿಕೊಂಡಿತೆಂದು ಭಾವಿಸಿದರೆ, ಅಶ್ವಮೇಧವನ್ನು ಆತ ಕೈಗೊಂಡದ್ದು ಸರಿಯೆ ತಪ್ಪೆ ಎನ್ನುವ ಪ್ರಶ್ನೆಗಳನ್ನು ಪಕ್ಕಕ್ಕೆ ಸರಿಸಿ ಕವಿಯ ಜೊತೆಗೆ ನಾವು ಯಜ್ಞದ ಕುದುರೆಯ ಹಿಂದೆ ಪ್ರಯಾಣ ಮಾಡಬಹುದು.

ಕವಿಯ ದೃಷ್ಟಿಯಿಂದ ನೋಡಿದರೂ, ಈ ಕಥೆಯಲ್ಲಿ ಅಶ್ವಗಮನವೇ ಪ್ರಧಾನ, ಅಶ್ವಮೇಧಕ್ಕಿಂತ.[4] ಅಶ್ವಮೇಧವನ್ನು ಕೈಕೊಳ್ಳುವಂಥ ಪ್ರಸಂಗವನ್ನು ನಿಮಿತ್ತವನ್ನಾಗಿ ಮಾಡಿಕೊಂಡು, ಕವಿಪ್ರತಿಭೆ ಬಿರುದಿನ ಕುದುರೆಯ ಹಿಂದೆ ಪಯಣ ಹೊರಟಿದೆ. ಅದೂ ಎಂಥ ಪಯಣ! ಕುದುರೆಯೂ ಎಂಥ ಕುದುರೆ! ಆ ಕುದುರೆಯದೇ ಒಂದು ಕಥೆ: ಧರ್ಮರಾಯನಿಗೆ ಇಂಥ ಒಂದು ಯಜ್ಞ ಮಾಡಬೇಕೆಂದು ಸಲಹೆ ವ್ಯಾಸರಿಂದ ಬಂದಾಗ ಅವನಿಗೆ ಅಪಾರವಾದ ದಾರಿದ್ರ್ಯ. ಇದ್ದ ದ್ರವ್ಯವೆಲ್ಲಾ ಮಹಾಯುದ್ಧದ ದೆಸೆಯಿಂದ ವೆಚ್ಚವಾಗಿದೆ; ‘ದ್ರವ್ಯಮೆನಗಿಲ್ಲ ಮೇದಿನಿಯೊಳರಸುವೊಡೆ, ಕೌರವ್ಯರಿಂದಿಳೆನೊಂದುದು; ಇನಿತು ಲಕ್ಷಣ ಮುಳ್ಳ ದಿವ್ಯಹಯವಿಲ್ಲ’ [೨-೩೧] ಎಂದು ಧರ್ಮರಾಯ ಕೊರಗುತ್ತಾನೆ. ಹೀಗಿರುವಾಗ ಅಶ್ವಮೇಧದ ಅಗತ್ಯ ಆತನಿಗೆ ಕೇವಲ ಧಾರ್ಮಿಕ ಮಾತ್ರವಲ್ಲದೆ ಆರ್ಥಿಕ ಸಾಧನವೂ ಹೌದು ಎನ್ನಿಸಿತೋ ಏನೋ! ಅಂತೂ ಕುದುರೆಯ ಸಂಪಾದನೆಗೆ ಹೊರಟರು ಭೀಮ, ವೃಷಕೇತು ಮತ್ತು ಮೇಘನಾದ ಇವರು ಭದ್ರಾವತಿಗೆ. ಅಲ್ಲಿ ಕಲಿ ಯೌವನಾಶ್ವನ ಒಂದು ಸೊಗಸಾದ ಕುದುರೆಯನ್ನು ಲಪಟಾಯಿಸುತ್ತಾರೆ. ಅಂತೂ ಅಶ್ವಮೇಧಕ್ಕೆ ಮುನ್ನ ಅಶ್ವಾಪಹರಣ! ಸರಿ, ಅದರ ಕಾರಣದಿಂದ ಶುರುವಾಗುತ್ತದೆ. ಭಯಂಕರ ರಣರಂಗ. ಎಲ್ಲ ಸತ್ತುಬಿದ್ದಮೇಲೆ ಯೌವನಾ ಶ್ವನಿಗೆ ಇದರ ಕಾರಣ ತಿಳಿದು, ಧರ್ಮರಾಯನ ಯಾಗಕ್ಕೆ ಎಂದು ಮೊದಲೇ ಕೇಳಿದ್ದರೆ ಈ ಒಂದು ಕುದುರೆಯನ್ನಲ್ಲ, ನನ್ನ ಸರ್ವಸ್ವವನ್ನೂ ಕೊಡುತ್ತಿದ್ದೆನಲ್ಲಾ- ಎನ್ನುತ್ತಾನೆ [೪-೫೩]. ಹೀಗಾಗಿ ಯುದ್ಧಕ್ಕೆ ಎಲ್ಲರಿಗೂ ಇಲ್ಲಿ ಅನುಚಿತವಾದ ಅವಸರ; ಕಾಲ್ಕೆರೆತ. ಅಶ್ವಮೇಧಕ್ಕೆ ಅಗತ್ಯವಾದ ಅಶ್ವಸಂಪಾದನೆಯೇ ಒಂದು ರಣರಂಗದಿಂದ ಮೊದಲಾದ ಮೇಲೆ, ಇನ್ನು ಈ ಕುದುರೆಯು ದೇಶದೇಶಗಳ ಮೇಲೆ ಸಂಚಾರ ಹೊರಟರೆ ಕೇಳಬೇಕೆ? ಊರಿಂದೂರಿಗೆ ಕುದುರೆ ಮುಂದೆ ಓಡುತ್ತದೆ. ಒಂದೇ ಸಮನೆ ಕುದುರೆಯ ಹೆಜ್ಜೆಯ ಸದ್ದು ಕಿವಿಗೆ ಬೀಳುತ್ತದೆ. ಈ ಕುದುರೆ ಇಲ್ಲಿ ಹೊಕ್ಕು ಅಲ್ಲಿ ಕಾಣಿಸಿಕೊಳ್ಳುವ ರೀತಿ ವಿಸ್ಮಯಕರವಾಗಿದೆ. ಅದರ ನಡಿಗೆಯಲ್ಲಿ ಏನೋ ಬೆಡಗಿದೆ; ಮೋಡಿಯಿದೆ. ಅಲ್ಲೊಂದು ಉದ್ಯಾನ. ನೀಲಧ್ವಜನ ಲಲನೆಯರು ಹೂ ಕೊಯ್ಯುತ್ತಿದ್ದಾರೆ; ತಟಕ್ಕನೆ ಈ ಕುದುರೆ ಅಲ್ಲಿ ಕಾಣಿಸಿಕೊಳ್ಳುತ್ತದೆ. ಒಡನೆಯೇ ಆ ಶೃಂಗಾರದ ಆವರಣ ಸಮರಾಂಗಣದ ಆವರಣವಾಗುತ್ತದೆ. ಕುದುರೆ ಅಲ್ಲೊಂದು ವನವನ್ನು ಪ್ರವೇಶಿಸುತ್ತದೆ. ಕಲ್ಲುಬಂಡೆಯೊಂದರಲ್ಲಿ ಕುದುರೆಯ ಗೊರಸು ಹೂತುಹೋಗುತ್ತದೆ, ಅನಂತರ ಋಷಿಯೊಬ್ಬನ ಕೃಪೆಯಿಂದ ಬಿಡುಗಡೆ ಪಡೆಯುತ್ತದೆ. ಅಲ್ಲೊಂದು ಸರೋವರ, ಆದರ ನೀರನ್ನು ಕುಡಿದೊಡನೆ ಕುದುರೆ ಹುಲಿಯಾಗುತ್ತದೆ! ಹೀಗೆ ಈ ಬಹುಬಗೆಯ ವಿಸ್ಮಯ ರೂಪಾಂತರಗಳಲ್ಲಿ ಕಾಣಿಸಿಕೊಳ್ಳುತ್ತಾ ಕಾಡು ಮೇಡುಗಳ ನಡುವೆ, ಪುಣ್ಯಾಶ್ರಮಗಳ ನಡುವೆ, ಗ್ರಾಮ ನಗರಗಳ ನಡುವೆ, ಈ ಕುದುರೆ ಧೂಳೆರಚುತ್ತಾ ಓಡುತ್ತದೆ. ನಡಿಗೆಯ ಅರ್ಧ ವಿರಾಮದಲ್ಲೆಲ್ಲಾ ಪ್ರಶ್ನೆ ಹಾಗೂ ವಿಸ್ಮಯದ ಚಿಹ್ನೆಗಳೇ ಎದ್ದು ನಿಲ್ಲುತ್ತವೆ. ಕುದುರೆ ಎಲ್ಲೂ ನಿಲ್ಲದೆ ಸಲೀಸಾಗಿ ಸಾಗಿತೋ, ಕವಿಯ ಕಣ್ಣು ಸುತ್ತಣ ನಿಸರ್ಗ ರಮ್ಯತೆಯನ್ನು ವರ್ಣಿಸುತ್ತಾ ಹೋಗುತ್ತದೆ. ಕುದುರೆ ಎಲ್ಲಿಯೋ ನಿಂತಿತು ಎಂದರೆ ಏನೋ ವಿಸ್ಮಯ, ಅನಂತರ ಸಾಹಸ ಕಾದಿದೆಯೆಂದೇ ತಿಳಿಯಬೇಕು. ಅದುವರೆಗೂ ಸುತ್ತಣ ನಿಸರ್ಗ ರಮ್ಯತೆಯ ಕಡೆ ಹೊರಳಿದ ಪಾರ್ಥ ಹಾಗೂ ಆತನ ಸೈನಿಕರು ಕುದುರೆ ನಿಂತೊಡನೆಯೇ ‘ಆರೋಪಿತಚಾಪ’ರಾಗುತ್ತಾರೆ. ಆ ಯಜ್ಞದ ಕುದುರೆ ಈ ಪ್ರಯಾಣದ ಉದ್ದಕ್ಕೂ ಸೋಜಿಗದ ರಥದಲ್ಲಿ ಕುತೂಹಲವನ್ನು ಕೂರಿಸಿಕೊಂಡು ಎಳೆದುಕೊಂಡು ಹೋಗುವ ಹಾಗೆ ತೋರುತ್ತದೆ. ಈ ಕುದುರೆಯ ಹೆಜ್ಜೆ ಬರೆಯುವ ಹಾದಿಯುದ್ದಕ್ಕೂ ತೆರೆಯುವ ದೃಶ್ಯ ಪರಂಪರೆಯೇ ಇಲ್ಲಿ ಕಾಣಿಸುವ ಕಥಾತಂತ್ರ.

ಈ ಬಿರುದಿನ ಕುದುರೆಯ ಹಿಂದೆ ಪಯಣ ಹೊರಟ ನಮಗೆ ಅದೊಂದು  ವಿಸ್ಮಯಾದ್ಭುತಗಳ ದಾರಿಯೇ. ‘ಅರಸ ಕೇಳೈ ಮುಂದಣಾಶ್ಚರ್ಯವನು’ -ಎಂಬುದೇ ಕುದುರೆಯ ಖುರಪುಟಧ್ವನಿಯಲ್ಲಿರುವ ಪಲ್ಲವಿ. ದೃಶ್ಯದಿಂದ ದೃಶ್ಯಕ್ಕೆ, ವಿಸ್ಮಯದಿಂದ ವಿಸ್ಮಯಕ್ಕೆ ಈ ಕುದುರೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಕುದುರೆಯ ಗೊರಸು ಕಲ್ಲುಬಂಡೆಯಲ್ಲಿ ಕೀಲಿಸಿದ್ದು; ಶಿಲಾತಲವನ್ನು ಮೆಟ್ಟಿ ಹೆಣ್ಣಾದದ್ದು; ಕೊಳವೊಂದರ ನೀರು ಕುಡಿದು ಹುಲಿಯಾದದ್ದು; ವಿಚಿತ್ರವಾದ ನಾರೀ ರಾಜ್ಯವಾದ ಪ್ರಮೀಳಾ ಪ್ರಪಂಚವನ್ನು ಕಂಡದ್ದು; ರಕ್ಕಸಿಯರು ತಮ್ಮ ನಿಡುಮೊಲೆಗಳಿಂದ ಅಪ್ಪಳಿಸಿ ಪಾರ್ಥನ ಸೈನ್ಯವನ್ನು ಕೊಂದದ್ದು; ಕುದಿವ ಕೊಪ್ಪರಿಗೆಯಲ್ಲಿ ಸುಧನ್ವನನ್ನು ಹಾಕಿದ್ದು: ಮಯೂರಧ್ವಜ ತನ್ನ ಶರೀರವನ್ನೇ ಎರಡಾಗಿ ಸೀಳಿಕೊಂಡದ್ದು; ಅರ್ಜುನನ ಮರಣದಿಂದ ಬಭ್ರುವಾಹನ ಪಾತಾಳಕ್ಕೆ ಹೋಗಿ ನಾಗಮಣಿ ತಂದದ್ದು; ಬಕದಾಲ್ಭ್ಯಋಷಿಯ ಜೊತೆಗೆ ಯೋಗಮಾರ್ಗದಲ್ಲಿ ಲೋಕ ಲೋಕಗಳ ಸಂದರ್ಶನ ಮಾಡಿದ್ದು- ಹೀಗೆ ಒಂದೇ ಎರಡೇ ಈ ವಿಸ್ಮಯಗಳು! ಈ ವಿಸ್ಮಯದ ನಡುವೆ ಸೀತಾ ಪರಿತ್ಯಾಗದ ಕರುಣ ಕಥೆ; ಚಂದ್ರಹಾಸನ ಅದೃಷ್ಟದ ರೋಮಾಂಚಕಾರಿಯಾದ ಕಥೆ: ಚಿತ್ರಾಂಗದೆಯ ಮಗನ ಸಮರಾದ್ಭುತ,  ಇವುಗಳನ್ನು ಬಿಟ್ಟರೆ ಅತ್ಯಂತ ಅಪೂರ್ವವಾದದ್ದು ಪ್ರಮೀಳಾ ರಾಜ್ಯ. ಅದೊಂದು ವಿಚಿತ್ರಲೋಕ. ಅಲ್ಲಿ ಎಲ್ಲರೂ ಹೆಂಗಸರೇ. ಅಲ್ಲಿಗೆ ಅಕಸ್ಮಾತ್ ಬಂದ ಪುರುಷರನ್ನು ಅವರು ಶೃಂಗಾರದಿಂದ ಸೋಲಿಸುತ್ತಾರೆ. ಅವರಿಗೆ ವಶರಾದ ಪುರುಷರಿಗೆ ಕೇವಲ ಒಂದು ವರ್ಷ ಆಯಸ್ಸು- ಇಂಥ ಶೃಂಗಾರದಲ್ಲೂ ಎಂಥ ದುರಂತ! ಕಡೆಗೆ ಹುಟ್ಟುವುದು ಹೆಣ್ಣು. ಯಾರಿಗೂ ವಿಸ್ಮಯ ಕರುಣೆಗಳನ್ನುಕ್ಕಿಸುವ ಕಥೆ ಇದು. ಪ್ರಮೀಳಾ ರಾಜ್ಯ ಜೈಮಿನಿ ಭಾರತ ತೆರೆದ ಒಂದು ಅಪೂರ್ವ ಸೃಷ್ಟಿ. ಇಂಥ ಒಂದು ಕಥೆ ಗ್ರೀಕ್ ಪುರಾಣಕಥೆಯಾದ ಒಡಿಸ್ಸಿಯಲ್ಲಿಯೂ ಇರುವಂತಿದೆ. ಹಾಗೆ ನೋಡಿದರೆ ಇಡೀ ಜೈಮಿನಿ ಭಾರತದ ರಚನೆ ಒಡಿಸ್ಸಿಯನ್ನು ಹೋಲುತ್ತದೆ. ಟ್ರಾಯ್  ಕದನದ ನಂತರ ಮಹಾವೀರ ಯೂಲಿಸಿಸ್ ತನ್ನ ಸಂಗಡಿಗರೊಂದಿಗೆ ಹಡಗಿನಲ್ಲಿ ಊರಿಗೆ ಬರುವಾಗ ದಾರಿಯಲ್ಲಿ ನಾನಾ ರಮ್ಯಾದ್ಭುತವಾದ ನಾಡುಗಳನ್ನೂ, ಘಟನೆಗಳನ್ನೂ ಕಾಣುತ್ತಾನೆ. ಹಾಗೆಯೇ ಮಹಾಭಾರತದ ಈ ವೀರನಾದ ಅರ್ಜುನ, ಬಿರುದಿನ ಕುದುರೆಯ ಹಿಂದೆ ಹೊರಟು ಅದೇ ಬಗೆಯ ವಿಸ್ಮಯಾದ್ಭುತಗಳನ್ನು ಕಾಣುತ್ತಾನೆ. ಅಲ್ಲಿ ಯೂಲಿಸಿಸ್‌ನ ಹಡಗು ವಿಸ್ಮಯದ ಕಡಲ ನಡುವೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಈ ಎರಡು ದೇಶಗಳ ಕಥೆಯನ್ನು ಕುರಿತ ಸಾಮ್ಯ ಕೇವಲ ತಂತ್ರಕ್ಕೆ ಸಂಬಂಧಪಟ್ಟದ್ದು, ಅಂತರಂಗದ ಸತ್ವಕ್ಕಲ್ಲ.

ಕುದುರೆಯ ಹಿಂದೆ ಹೊರಟ ನಮಗೆ ಮೊದಲು ಎದುರುಗೊಳ್ಳುವುದು ವಿಸ್ಮಯವಾದರೂ, ಅನಂತರ ಅದು ರಣರಂಗದ ವೀರಾದ್ಭುತ ಪ್ರದರ್ಶನದಲ್ಲಿ ಪರ‍್ಯವಸನವಾಗುತ್ತದೆ. ಹಿಂದೆ ನಡೆದ ಕುರುಕ್ಷೇತ್ರ ಹದಿನೆಂಟು ದಿನಗಳಲ್ಲಿ ಒಂದೆಡೆ ಮಡುಗಟ್ಟಿದ ರಣರಂಗವಾದರೆ, ಇದು ಒಂದು ವರ್ಷದ ಪಯಣದ ಉದ್ದಕ್ಕೂ ಹಂಚಿಹೋದ ರಣಾಂಗಣ. ಕುರುಕ್ಷೇತ್ರದಲ್ಲಾದರೆ ಯುದ್ಧವನ್ನು ಯಾರ ಮೇಲೆ ಮಾಡಬೇಕೆನ್ನುವ, ಹೇಗೆ ಮಾಡಬೇಕೆನ್ನುವ ಬಗೆಗೆ ಸಂಶಯ ವಿರುತ್ತಿರಲಿಲ್ಲ. ಆದರೆ ಇಲ್ಲಿ ಅದೇ ಕುರುಕ್ಷೇತ್ರದ ವೀರನಾದ ಅರ್ಜುನನಿಗೆ ದಿನಬೆಳಗಾದರೆ ಯಾರನ್ನು ಎದುರಿಸಬೇಕೆನ್ನುವುದೇ ಅನಿಶ್ಚಿತ. ಹತ್ತಿರಕ್ಕೆ ಬಂದ ಮೇಲೇ ಗೊತ್ತು ಶತ್ರುಗಳು ಯಾರು ಎನ್ನುವುದು. ಆದರೆ ಕುರುಕ್ಷೇತ್ರಕ್ಕೂ ಈ ರಣಪರಂಪರೆಗಳಿಗೂ ಒಂದು ವ್ಯತ್ಯಾಸ. ಕುರುಕ್ಷೇತ್ರದಲ್ಲಿ ಅಂದು ಆ ಯುಗದಲ್ಲಿ ಹೆಸರಾಂತ ವೀರರಿಗೇ ಪ್ರಥಮಾವಕಾಶ; ಆದರೆ ಇಲ್ಲಿ ಕುರುಕ್ಷೇತ್ರದ ಪ್ರಖ್ಯಾತಿಯನ್ನು ಪಡೆದ ವೀರರ ಪುತ್ರರತ್ನಗಳಿಗೆ ಅವಕಾಶ. ಅದು ದೊಡ್ಡವರ ಪಾಳಿ; ಇದು ತರುಣರ ಧಾಳಿ. ಕರ್ಣನ ಮಗ ವೃಷಕೇತು, ಭೀಮನ ಮೊಮ್ಮಗ ಮೇಘನಾದ, ಅರ್ಜುನನ ಮಗ ಬಭ್ರುವಾಹನ ಇವರದೇ ಕೋಲಾಹಲ. ಇವರನ್ನು ಎದುರಿಸಿದ ಸುಧನ್ವ, ಮಯೂರಧ್ವಜ, ನೀಲಧ್ವಜ ಇವರೆಲ್ಲ ಒಂದು ರೀತಿಯಲ್ಲಿ ತರುಣರೇ.[5] ಉಪಕಥೆಯಾದ ‘ಸೀತಾ ಪರಿತ್ಯಾಗ’ದ ಕಥೆಯಲ್ಲಿಯೂ ಲವ-ಕುಶ ಇವರದೇ ಪ್ರತಾಪ. ಹೀಗಾಗಿ ಇದು ತರುಣರಾದ ಉತ್ಸಾಹಿಗಳಾದ ಯುವಕರ ಕ್ಷಾತ್ರವೀರ ಪ್ರದರ್ಶನಕ್ಕೆ ಒಂದು ಅವಕಾಶ. ಆದರೂ ಹಳೆಯ ಹುಲಿಗಳಾದ ಭೀಮಾರ್ಜುನರಿಗೂ ಇಲ್ಲಿ ತಕ್ಕಮಟ್ಟಿಗೆ ಅವಕಾಶವಿಲ್ಲದೆ ಇಲ್ಲ. ಎಷ್ಟಾದರೂ ಈ ತರುಣರಿಗೆ ಬೆಂಬಲವಾಗಿ, ಮಾರ್ಗದರ್ಶಕರಾಗಿ ನಿಂತವರು ಇವರು. ಆದರೂ ಅರ್ಜುನನಂಥಾ ವೀರನಿಗೂ ಇಲ್ಲಿ ಸೋಲುಂಟಾಗಿ ಬಭ್ರುವಾಹನನಂಥ ತರುಣರ ಪ್ರತಾಪವೇ ಮೊರೆಯುತ್ತದೆ. ಒಂದು ವ್ಯತ್ಯಾಸ: ಕುರುಕ್ಷೇತ್ರದಲ್ಲಿ ಕೃಷ್ಣ ಸದಾ ಜೊತೆಯಾಗಿದ್ದ. ಆದರೆ ಇಲ್ಲಿ ಅರ್ಜುನಾದಿಗಳಿಗೆ ಸೋಲುಂಟಾದಾಗ ಅವರಿಗೆ ಕಷ್ಟ ಪ್ರಾಪ್ತವಾದಾಗ ಆತ ಗರುಡಗಮನನಾಗಿ ಧಾವಿಸಿ ಬರುತ್ತಾನೆ. ಅವನು ಬಂದೊಡನೆಯೇ ರಣರಂಗ, ಭಕ್ತಿ ಭಾವ ತರಂಗವಾಗಿ ತುಳುಕುತ್ತದೆ. ಆದರೆ ಹಲವು ವೇಳೆ ಅವನೂ ಕುರುಕ್ಷೇತ್ರದಲ್ಲಿ ತನಗಿಲ್ಲದಿದ್ದ ಅವಕಾಶವನ್ನು ಇಲ್ಲಿ ಪಡೆದು ಸ್ವತಃ ಯುದ್ಧದಲ್ಲಿ ಭಾಗಿಯಾಗುತ್ತಾನೆ. ಅವನೇಕೆ, ಅರ್ಜುನನ ರಥಧ್ವಜಸ್ಥನಾದ ಕಲಿ ಹನುಮನಿಗೂ ಇಲ್ಲಿ ಯುದ್ಧ ಮಾಡುವ ಚಾಪಲ್ಯ! ಅಂತೂ ಕುರುಕ್ಷೇತ್ರದ ಅವಕಾಶ ಸಿಕ್ಕದಿದ್ದವರಿಗೆ ಇದು ಒಂದು ನೂತನಾವಕಾಶ.

ಜೈಮಿನಿ ಭಾರತ ಒಂದು ಕಥೆಯಲ್ಲ, ಅನೇಕ ಕಥೆಗಳ ಒಂದು ಸರಣಿ. ಕಥೆಯೊಳಗೆ ಕಥೆ, ಒಂದು ಕಥೆಯಿಂದ ಮತ್ತೊಂದು ಕಥೆ- ಈ ಒಂದು ಕಥನ ಚಮತ್ಕಾರ ಈ ದೇಶಕ್ಕೆ ಹೊಸತಲ್ಲ. ಇಲ್ಲಿ ಕಥೆಗಳನ್ನು ಹೇಳುವವರಿಗಾಗಲಿ ಕೇಳುವವರಿಗಾಗಲಿ ಆತುರವಿಲ್ಲ; ಬೇಸರವೂ ಇಲ್ಲ. ಓಡುವ ಕುದುರೆ ಕಾರಣಾಂತರದಿಂದ ನಿಂತಿತೋ, ಅಲ್ಲಿ ಕಥನ ಅಥವಾ ಕದನ ಮೊದಲಾಯಿತೆಂದೇ ತಿಳಿಯಬೇಕು. ಪಾರ್ಥನ ಪಡೆಗೆ ಕಥನ ಕುತೂಹಲ, ಇಲ್ಲವೇ ಕದನ ಕುತೂಹಲ. ಏನಾದರೂ ಒಂದು ನೆಪ ಮಾಡಿಕೊಂಡು ಕಥೆ ಮೊದಲಾಗುತ್ತದೆ. ಕದನಕ್ಕಾಗಲೀ ಕಥನಕ್ಕಾಗಲಿ ಅಂಥ ಯಾವ ಪ್ರಬಲವಾದ ಕಾರಣದ ಅಗತ್ಯವೂ ಇಲ್ಲಿ ಬೇಕಾಗಿಲ್ಲ. ‘ಭೂರಮಣ ಕೇಳೈ ಮುಂದೆ ನಡೆದ ಸುಕಥಾ ವಿಸ್ತಾರವನು’- ಎನ್ನುವ ಪೀಠಿಕೆಯಷ್ಟೇ ಸಾಕು ಕಥೆ ಬೆಳೆಯಲು. ಕಥೆ ಹೇಳುವವರು ಒಬ್ಬರಾದರೆ ಕಥೆ ಕೇಳುವುದು ಒಂದು ಸಭೆಗೆ ಸಭೆಯೇ. ಯಜ್ಞದ ಕುದುರೆಯನ್ನು ಸಂಚಾರಕ್ಕೆ ಬಿಡುವ ಮೊದಲೇ ಧರ್ಮರಾಯನು ‘ತುರಗಮಂ ನಿಲಿಸಿ ಬಳಿಕ ಕಾವಲ್ಗೆ ರಥ ಮತ್ತಗಜ ಹಯಪದಾತಿಗಳ ಸಂದೋಹಮಂ ಸುತ್ತಲುಂ ಪರುಠುವಿಸಿ’ [೫-೨೦] ವೇದವ್ಯಾಸರ ಮುಖೇನ ಹಿಂದೆ ನಡೆದ ಮರುತ್ತರಾಯನ ಅಶ್ವಮೇಧದ ಕಥೆಯನ್ನು ಕೇಳುತ್ತಾನೆ. ಮುಂದೆ ಕಥೆ ಕೇಳುತ್ತಾ ಜನಮೇಜಯನಿಗೆ ಸಂಶಯ ಬಂದಾಗ ಕಥೆ, ಅಘಟತ ಘಟನೆಗಳಿಂದ ಚೋದ್ಯಗೊಂಡ ಪಾರ್ಥನ ಕೂತೂಹಲ ನಿವಾರಣೆಗೆ ಕಥೆ, ಮುಂದುವರಿಯುತ್ತದೆ. ಪಾರ್ಥನಿಗೂ ಬಭ್ರುವಾಹನನಿಗೂ ನಡೆಯುವ ಈ ಕಾಳಗ, ಹಿಂದೆ ರಾಮನಿಗೂ ಲವಕುಶರಿಗೂ ನಡೆದ ಕಾಳಗದಂತಿದೆ ಎಂಬ ಮಾತೇ ಸಾಕು, ಪ್ರಸ್ತುತಮತಿಯಾದ ಜನಮೇಜಯನಿಗೆ ತಟಕ್ಕನೆ ರಾಮಾಯಣದ ಆ ಕಥೆಯನ್ನು ಕೇಳುವ ಹಂಬಲ ಮೂಡುತ್ತದೆ. ಹೀಗಾಗಿ ಕಥೆಯಿಂದ ಕಥೆಗೆ ನಡೆದಿದೆ ಪ್ರಯಾಣ. ಚಂಡಿಯ ಕಥೆ- ಸ್ತ್ರೀಯರ ಛಲದ, ಮೊಂಡುತನದ ನಿದರ್ಶನಗಳು. ಬಭ್ರುವಾಹನ ಚಿತ್ರಾಂಗದೆಯ ಕಥೆಗೆ ಈ ಮೂಲ ಕಥೆಯೊಂದಿಗೆ ಇರುವಂಥ ಸಾವಯವ ಸಂಬಂಧ ಉಳಿದಾವ ಕಥೆಗಳಿಗೂ ಇರುವಂತಿಲ್ಲ. ಚಂಡಿಯ ಕಥೆಯ ಮೇಲೆ ರಾಮಾಯಣದ ಅಹಲ್ಯೆಯ ಕಥೆಯ ಪ್ರಭಾವವಿರುವಂತಿದೆ. ಗಂಡನ ಶಾಪದಿಂದ ಚಂಡಿ ಕಲ್ಲಾಗುವುದು, ನಂತರ ಅಶ್ವಮೇಧದ ಕುದುರೆಯ ಪದಸ್ಪರ್ಶದಿಂದ ಕಲ್ತನ ನಿವಾರಿತವಾಗಿ ಆಕೆ ಹೆಣ್ಣಾಗಿ ತಪಸ್ಸಿಗೆ ಹೋಗುವುದು- ಈ ಒಂದು ಅಂಶದಲ್ಲಿ ಅಹಲ್ಯಾ ವೃತ್ತಾಂತದ ಪ್ರಭಾವವಿದೆ; ಆದರೆ ಆ ಘನತೆಯಿಲ್ಲ. ಬಿಡಿಬಿಡಿಯಾಗಿ ನೋಡಿದರೆ ಜೈಮಿನಿ ಭಾರತದ ಪ್ರತಿಯೊಂದು ಕಥೆಗೂ ವಿಶಿಷ್ಟವಾದ ಜೀವವಿದೆ.

ರಣ ಕೋಲಾಹಲ ಹಾಗೂ ವಿಸ್ಮಯಗಳಿಂದ ಕೂಡಿದ ಈ ಕಾವ್ಯವನ್ನು ಕವಿ ‘ಪುಣ್ಯಮಿದು ಕೃಷ್ಣ ಚರಿತಾಮೃತಂ’ ಎನ್ನುತ್ತಾನೆ. “ಯಜ್ಞದ ಕುದುರೆ ಸಂಚಾರಿಯಾದರೆ, ಅದನ್ನು ಅಲ್ಲಲ್ಲಿ ಕಟ್ಟಿಹಾಕಿದ ವೀರರ ಭಕ್ತಿ ಜೈಮಿನಿ ಭಾರತದ ಸ್ಥಾಯಿಯಾಗಿದೆ.”[6] ಕೃಷ್ಣ ಇಲ್ಲಿ ಸಾಕ್ಷಾತ್ ದೇವರು. ಯಜ್ಞ ಸಂಕಲ್ಪಿತವಾದ ಧರ್ಮರಾಯನ ಮನವರಿತು ಅಶ್ವಮೇಧಕ್ಕೆ ‘ಅಸ್ತು’ ಎನ್ನುತ್ತಾನೆ; ಉದ್ದಕ್ಕೂ ಪರೋಕ್ಷವಾಗಿ ಇದ್ದುಕೊಂಡು, ಆಗಾಗ ಪ್ರತ್ಯಕ್ಷನಾಗಿ ಕುದುರೆಯ ಹಾದಿಯನ್ನು ರಕ್ಷಿಸಿದ್ದಾನೆ. ಯಜ್ಞದ ಕುದುರೆಯನ್ನೆದುರಿಸಿದವರಿಗೆಲ್ಲಾ ಗೊತ್ತು, ಕುದುರೆಯನ್ನು ತಡೆದು ಪಾಂಡವ ವೀರರೊಂದಿಗೆ ಯುದ್ಧಮಾಡುವುದು ಕೃಷ್ಣ ದರ್ಶನಕ್ಕೆ ಒಂದು ಸುಲಭದ ದಾರಿ ಎಂದು. ‘ಕೃಷ್ಣನಂ ದ್ವೇಷದಿಂ ಬೈದೊಡಂ ತನ್ನ  ಮನವಾರೆ ಸಂತೋಷದಿಂ ಸ್ತುತಿಗೈದೊಡಂ ಪೋಗದಿರ್ದಪುವೆ ಕೋಟಿ ಜನ್ಮದೊಳೊದವಿದ ದೋಷಂಗಳು’ [೭-೬೫]- ಎನ್ನುವುದು ಎಲ್ಲ ಪಾತ್ರಗಳ ನಂಬಿಕೆ. ಆದ್ದರಿಂದ ಅನುಸಾಲ್ವನಂಥ ದಾನವರೂ ಸಹ ಕೃಷ್ಣನನ್ನು ಅದೇ ಕಂಸ- ಶಿಶುಪಾಲ ಶೈಲಿಯಲ್ಲಿ ಬೈಯುತ್ತಾರೆ; ಕಡೆಗೆ ಕೃಷ್ಣ ದರ್ಶನದಿಂದ ಸಂತುಷ್ಟರಾಗಿ ಸ್ತುತಿಸುತ್ತಾರೆ. ಸುಧನ್ವ, ಮಯೂರ ಧ್ವಜ, ಚಂದ್ರಹಾಸ ಮೊದಲಾದವರು ಮಾಡುವ ಕೃಷ್ಣ ಸ್ತುತಿಯಲ್ಲಿ ಭಾವುಕತೆ, ಅಪೂರ್ವವಾಗಿದೆ. ಪಾಂಡವರ ಪರಾಭವದ ಪ್ರಸಂಗಗಳಲ್ಲೆಲ್ಲಾ ಕೃಷ್ಣನು ಗರುಡವಾಹನನಾಗಿ ಕಾಣಿಸಿಕೊಳ್ಳುತ್ತಾನೆ. ಕೃಷ್ಣನಿಲ್ಲದೆ ಯಾವ ದೊಡ್ಡ ಯುದ್ಧವೂ ಮುಗಿಯುವುದಿಲ್ಲ. ಕೃಷ್ಣನನ್ನು ಯುದ್ಧದಲ್ಲೋ ತಮ್ಮ ಪ್ರಾಣಾಂತಿಕ ಸಂದರ್ಭಗಳಲ್ಲೋ ಕಂಡವರೆಲ್ಲಾ ಬಹುಕಾಲದ ಸಾಧಕರಂತೆ, ಆತನನ್ನು ಕಂಡದ್ದೆ ಬದುಕಿನಲ್ಲಿ ಪರಮ ಗುರಿಯನ್ನು ಸಾಧಿಸಿದಂತೆ ಕೃತಕೃತ್ಯತೆಯ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. “ಎಲ್ಲ ನದಿಗಳೂ ಸಮುದ್ರವನ್ನು ಕೂಡುವಂತೆ ಇಲ್ಲಿಯ ನಾಯಕರಿಗೆ ಕೃಷ್ಣನಲ್ಲಿಯೇ ಕೊನೆಯ ಗತಿಯಾಗುವುದು. ಅಥವಾ ಇಲ್ಲಿಯ ಉಪಾಖ್ಯಾನಗಳಲ್ಲಿ ನಾಯಕರಿಲ್ಲ; ಪ್ರತಿದ್ವಂದ್ವಿಗಳಿದ್ದಾರೆ. ಒಬ್ಬ ಪೌರುಷದ ಪ್ರತೀಕ. ಇನ್ನೊಬ್ಬ ದೈವದ ಪ್ರತಿನಿಧಿ. ಇವರಿಬ್ಬರ ದ್ವಂದ್ವವನ್ನೂ ಮೀರಿ ದ್ವಂದ್ವಾತೀತನಾದ ಶ್ರೀಕೃಷ್ಣನೆ ಇಬ್ಬರಿಗೂ ಸೂತ್ರಧಾರನಾಗುವನು. ದ್ವಂದ್ವನಾಯಕರು ಆ ಪರದೈವತದ ಇಮ್ಮುಖಗಳಾಗುವರು. ಒಂದು ಕಡೆಗೆ ‘ಪಾಂಡವ ಪ್ರತಿಷ್ಠಾಪನಾಚಾರ್ಯ’ನಾಗಿ, ಇನ್ನೊಂದು ಕಡೆಗೆ ಅನೇಕ ಶರಣ್ಯರ ಏಕ ಶರಣ್ಯನಾಗಿ, ಮತ್ತೊಂದು ರೀತಿಯಲ್ಲಿ ವಿವಿಧ ಮಾನವ ಚಾರಿತ್ರ್ಯ ಮಧ್ಯದಲ್ಲಿ, ಲೀಲಾಮಾನವನೂ, ಲೀಲಾನಾಟಕ ಸೂತ್ರಧಾರನೂ ಆಗಿ ಎತ್ತ ನೋಡಿದರೂ ಶ್ರೀಕೃಷ್ಣನೆ ಲಕ್ಷ್ಮೀಶನ ಭಾರತದ ವಸ್ತು ಪ್ರಪಂಚಕ್ಕೂ, ರಸ- ಭಾವ ಪ್ರಪಂಚಕ್ಕೂ ಮಧ್ಯ ಬಿಂದುವಾಗಿಯೂ,  ಮಹತ್ತಮ ಪರಿಘವಾಗಿಯೂ ವಿರಾಜಿಸುವನು. ಈ ಎಲ್ಲ ಕಾವ್ಯದ ವಾಸ್ತು ವೈಭವದಲ್ಲಿ ಕಥಾದ್ರವ್ಯದ ಮುಕ್ಕಾಲು ಬಂಡವಾಳ ಮೂಲ ಜೈಮಿನಿಯದು; ಕಲಾಸೌಂದರ್ಯದ ಮುಕ್ಕಾಲು ಪಾಲು ಗಳಿಕೆ ಬಳಿಕೆ ಲಕ್ಷ್ಮೀಶನದು.”

ಪರಿಶೀಲನ (೧೯೬೭)

* * *


[1] ಈ ಲೇಖನ ಲಕ್ಷ್ಮೀಶನ ಜೈಮಿನಿ ಭಾರತವನ್ನು ಓದಿದ ಅನುಭವದಿಂದ ಬರೆದಿದ್ದರೂ, ಲಕ್ಷ್ಮೀಶನ ಈ ಕೃತಿ ಮೂಲದಿಂದ ಅಷ್ಟಾಗಿ ಬೇರೆಯಲ್ಲವೆಂಬ ವಿದ್ವಾಂಸರ ಅಭಿಪ್ರಾಯವನ್ನು ಅನುಲಕ್ಷಿಸಬೇಕು. ಶ್ರೀ ಮುಗಳಿಯವರು ಇದರ ಬಗ್ಗೆ ಹೀಗೆ ಹೇಳಿದ್ದಾರೆ: “ಲಕ್ಷ್ಮೀಶನ ಕೃತಿ ಸಂಸ್ಕೃತ ಜೈಮಿನಿ ಭಾರತದ ಸಂಗ್ರಹ ರೂಪದ ಅನುವಾದವಾಗಿದೆ- ಸಾಮಾನ್ಯವಾಗಿ ಕನ್ನಡ ಕವಿಗಳ ಪದ್ಧತಿಯಲ್ಲಿ ಮೂಲವನ್ನು ಅವನು ಬಹುಮಟ್ಟಿಗೆ ಅನುವಾದಿಸಿದ್ದಾನೆ. ಎದ್ದು ಕಾಣುವಂಥ ವ್ಯತ್ಯಾಸಗಳನ್ನು ಯಾವಲ್ಲಿಯೂ ಮಾಡಿಕೊಂಡಿಲ್ಲ- ಮೂಲದಲ್ಲಿ ವಿವಿಧ ವೀರಭಕ್ತರ ಮನಸೆಳೆಯುವ ಚರಿತ್ರೆ, ಹೃದಯಸ್ಪರ್ಶಿಯಾದ ಸನ್ನಿವೇಶ ಇವುಗಳಿಗೆ ದೊರೆಯುವ ಶ್ರೇಯಸ್ಸು ಅವನದಲ್ಲ” -ಡಾ. ರಂ.ಶ್ರೀ. ಮುಗಳಿ: ಕನ್ನಡ ಸಾಹಿತ್ಯ ಚರಿತ್ರೆ, ಪು. ೨೭೦.

[2] Encyclopaedia of  Religion and Ethics: Ed. James Hastings. p. 160.

[3] ಜೈಮಿನಿಭಾರತದಲ್ಲಿ ಅಶ್ವಮೇಧಯಾಗ ಕ್ರಮವನ್ನು ಕುರಿತ ಕೊಂಚ ವಿಸ್ತಾರವಾದ ವಿವರಣೆ ಧರ್ಮರಾಯನಿಗೆ ವಿವರಿಸಿದ ವ್ಯಾಸರಿಂದ ಬಂದ ಹಾಗೆ ನಿರೂಪಿತವಾಗಿದ್ದರೂ, ಅದು ಶಾಸ್ತ್ರೋಕ್ತವಾದ  ವಿಧಗಳಿಗಿಂತ ಕೆಲವು ಜನಪ್ರಚಲಿತವಾದ ಅಂಶಗಳ ಕಡೆಗೇ ಗಮನ ಕೊಟ್ಟಂತೆ ತೋರುತ್ತದೆ ಎಂದು ಪಿ.ವಿ. ಕಾಣೆಯವರು ಅಭಿಪ್ರಾಯಪಡುತ್ತಾರೆ.

[4] -History of Dharma Sastra: P.V. Kane, Vol II- Part II. p- 1237.

[5] ಕುರುಕ್ಷೇತ್ರ ಒಂದು ಮಹಾಯುದ್ಧ; ಆಗ ಇವರಲ್ಲರೂ ಯಾಕೆ ಬಂದು ಭಾಗವಹಿಸಿರಲಿಲ್ಲ? ಇವರೆಲ್ಲರಿಗೂ ಕೃಷ್ಣನಾಗಲೀ, ಪಾಂಡವರಾಗಲೀ ಅಪರಿಚಿತರಲ್ಲ. ಹೀಗಿದ್ದರೂ ಇವರ‍್ಯಾರೂ ಕುರುಕ್ಷೇತ್ರ ರಣರಂಗಕ್ಕೆ ಯಾಕೆ ಬರಲಿಲ್ಲವೆಂಬ ಪ್ರಶ್ನೆಗೆ ಉತ್ತರವನ್ನು ಇನ್ನೂ ಹುಡುಕಬೇಕಾಗಿದೆ.

[6] ಡಾ. ರಂ.ಶ್ರೀ. ಮುಗಳಿ : ಕನ್ನಡ ಸಾಹಿತ್ಯ ಚರಿತ್ರೆ, ಪು. ೨೭೨.