ಅಂದರೆ ‘ನೈಟ್ಸ್ ಟೇಲ್’ನಲ್ಲಿ ಅತ್ಯಂತ ಗಂಭೀರವಾಗಿ, ಆದರ್ಶದ ನೆಲೆಯಲ್ಲಿ ಚಿತ್ರಿಸಲ್ಪಟ್ಟ ಪ್ರೇಮ ಸಾಹಸ ಮುಂತಾದ ಮೌಲ್ಯಗಳನ್ನು ಕೂಡಲೇ ಛಾಸರ್ ತನ್ನ ಮುಂದಿನ ಕಥೆಯ ಮೂಲಕ ಗೇಲಿಮಾಡುತ್ತಾನೆ. ಪ್ರೇಮವನ್ನು ವ್ಯಭಿಚಾರದ ಮಟ್ಟಕ್ಕೆ ಇಳಿಸಿ, ಸಾಹಸವನ್ನು ಮೋಸವನ್ನಾಗಿ ಮಾರ್ಪಡಿಸಿ ಹಾಸ್ಯದ ವಾತಾವರಣದಲ್ಲಿ ಎಲ್ಲಾ ಆದರ್ಶಗಳಿಗೂ ಮತ್ತೊಂದು ರೂಪವೂ ಇರುತ್ತದೆ ಎನ್ನುವ ಸತ್ಯವನ್ನು ತೋರಿಸುತ್ತಾನೆ. ಹೀಗೆಯೇ ಒಂದೈದಾರು ಕಥೆಗಳಲ್ಲಿ ಮತ ಧರ್ಮಗಳ ವಿವಿಧ ರೂಪಗಳನ್ನೂ ಮತ್ತು ಕೆಲವು ಕಥೆಗಳಲ್ಲಿ ದಾಂಪತ್ಯ ಜೀವನವನ್ನು ವಿವಿಧ ದೃಷ್ಟಿಕೋನಗಳಿಂದ ನೋಡಿ ಯಾವುದಕ್ಕೂ ತನ್ನ ಸಂಪೂರ್ಣ ಒಪ್ಪಿಗೆ ಸೂಚಿಸದೆ ಎಲ್ಲ ಮುಖಗಳನ್ನೂ ಒಂದು ಮಟ್ಟದಲ್ಲಿ ಅಂಗೀಕರಿಸಿ ಒಂದು ಅಪೂರ್ವ ಜೀವನ ದೃಷ್ಟಿ ಯನ್ನೂ ಅನುಭವವನ್ನೂ ಛಾಸರ್ ತನ್ನ ಕಾವ್ಯದ ಮೂಲಕ ಕೊಡುತ್ತಾನೆ. ಒಬ್ಬನ ಮುಖಾಂತರ ಒಂದು ವಿಚಾರವನ್ನು ಗಂಭೀರವಾಗಿ ಮಂಡಿಸಿ, ಮತ್ತೊಬ್ಬನ ಮೂಲಕ ಆ ವಿಚಾರವನ್ನು ಅಲ್ಲಗಳೆದು, ಇನ್ನೊಬ್ಬನ ಮೂಲಕ ಆ ಅಲ್ಲಗಳೆಯುವಿಕೆಯನ್ನು ಅಲ್ಲಗಳೆದು- ಹೀಗೆ ಸಾಗುತ್ತದೆ ಛಾಸರ್‌ನ ಕ್ಯಾಂಟರ್‌ಬರಿಯ ಯಾತ್ರೆ.

ಜೈಮಿನೀ ಭಾರತದಲ್ಲಿನ ಕಥಾ ಜೋಡಣೆ ಇಷ್ಟು ವೈವಿಧ್ಯಮಯವಾಗಿಲ್ಲದಿದ್ದರೂ (ಏಕೆಂದರೆ ಅವನ ಕಾವ್ಯದಲ್ಲಿ ಬರುವ ಹೆಚ್ಚು ಕಮ್ಮಿ ಎಲ್ಲಾ ಪಾತ್ರಗಳೂ ಒಂದೇ ವರ್ಗಕ್ಕೆ ಸೇರಿದವರು. ಉತ್ತಮ ಕ್ಷತ್ರಿಯ ಕುಲ ಸಂಜಾತರು ಮತ್ತು ವೀರರೂ ಆದ್ದರಿಂದ) ಮೂಲತಃ ಇದೇ ಪ್ರಕಾರಕ್ಕೆ ಸೇರಿದುದೆ. ಜೈಮಿನಿ ಭಾರತವೂ ಮೊದಲು ಅಪ್ರತಿಮ ವೀರ ಮತ್ತು ಯಜ್ಞೇಶ್ವರನಿಗೆ ಹೆಣ್ಣು ಕೊಟ್ಟ ನೀಲಧ್ವಜನ ಕಥೆಯಿಂದ ಪ್ರಾರಂಭವಾಗಿ ಎಲ್ಲವನ್ನೂ ತ್ಯಜಿಸಿ ಪರಮಹಂಸನಾದ ಬಕದಾಲ್ಭ್ಯನ ಕಥೆಗೆ ಕೊನೆಗೊಳ್ಳುತ್ತದೆ (ಕಾವ್ಯದ ಅಶ್ವಮೇಧ ಯಾಗದ ಚೌಕಟ್ಟನ್ನು ಬಿಟ್ಟು ಹೇಳುವುದಾದರೆ). ಅಂದರೆ ಇಲ್ಲಿಯೂ ಕಥೆಯ ಗತಿ ಇಹದಿಂದ ಪರದ ಕಡೆಗೆ ಇದೆ. ಅಲ್ಲದೇ ಈ ಕಥಾನಾಯಕರೂ ಕೂಡ ತಮ್ಮ ‘ಸಂತತೆ’ (Saint liness) ಯ ದೃಷ್ಟಿಯಿಂದ ನೀಲಧ್ವಜನಿಂದ ಪ್ರಾರಂಭಿಸಿ ಚಂದ್ರಹಾಸ ಮತ್ತು ಬಕದಾಲ್ಭ್ಯನವರೆಗೆ ಹೆಚ್ಚು ಹೆಚ್ಚು ಜ್ಞಾನಿಗಳಾಗುತ್ತಾ ಹೋಗುತ್ತಾರೆ. ಅಲ್ಲದೆ, ‘ಕ್ಯಾಂಟರ್‌ಬರಿ ಟೇಲ್ಸ್’ನಲ್ಲಿಯಂತೆ ಇಲ್ಲಿಯೂ ಒಂದು ಕಥೆಯ ಕೇಂದ್ರವನ್ನು ಮತ್ತೊಂದು ಕಥೆ ಹಾಸ್ಯದ ಮೂಲಕ ತಿರಸ್ಕರಿಸುತ್ತದೆ. ನಿದರ್ಶನವಾಗಿ ಒಂದೆರಡು ಕಥೆಗಳನ್ನು ನೋಡೋಣ.

ಕಾವ್ಯದ ಚೌಕಟ್ಟಿನಲ್ಲಿ ಬರುವ ಮೊದಲ ಕಥೆ ಯೌವನಾಶ್ವನ ಕಥೆ. ಭದ್ರಾವತಿಯ ರಾಜ ಯೌವನಾಶ್ವ ಶೂರ, ಪರಾಕ್ರಮಿ ಮತ್ತು ಧರ್ಮಿಷ್ಠ. ಅವನಿಗೆ ಸೇರಿದ ಕುದುರೆಯನ್ನು ಭೀಮ ಮತ್ತು ವೃಷಕೇತು ಕದ್ದೊಯ್ಯಲು ಪ್ರಯತ್ನಿಸಿದಾಗ ತನ್ನ ಕ್ಷಾತ್ರಧರ್ಮಕ್ಕನುಗುಣವಾಗಿ ಯುದ್ಧ ಮಾಡಿ, ತನ್ನ ಪರಾಕ್ರಮವನ್ನು ಮೆರೆದ ಮೇಲೆ ಧರ್ಮರಾಯನ ಸ್ನೇಹಿತನಾಗಿ ಯಾಗಕ್ಕೆ ಸಹಾಯಮಾಡಲು ಒಪ್ಪಿಕೊಳ್ಳುತ್ತಾನೆ. ಈ ಪ್ರಕರಣ ಎತ್ತಿ ತೋರಿಸುವ ಮುಖ್ಯ ವಿಷಯಗಳೆಂದರೆ ಯಜ್ಞಕ್ರಿಯೆಯ ಮತ್ತು ಯಜ್ಞಾಶ್ವದ ಮಹತ್ವ, ರಾಜಧರ್ಮ ಮತ್ತು ಔದಾರ್ಯ. ಆದರೆ ಈ ಕಥೆಯಾದ ಕೂಡಲೆ ಬರುತ್ತದೆ ವ್ಯಾಸನಿಂದ ಧರ್ಮರಾಯನಿಗೆ ಹೇಳಲ್ಪಟ್ಟ ಮರುತ್ತರಾಯನ ಕಥೆ. ಈ ಕಥೆಯಲ್ಲಿ ಮರುತ್ತರಾಜನು ಅಶ್ವಮೇಧ ಯಾಗವನ್ನು ಮಾಡಲು ಯೋಚಿಸಿ ಬೃಹಸ್ಪತಿ ಹೋಗಬಾರದೆಂದು ಇಂದ್ರ ತಡೆಯುತ್ತಾನೆ. ಕೊನೆಗೆ ನಾರದನ ಸೂಚನೆಯ ಮೇರೆಗೆ ಬೃಹಸ್ಪತಿಯ ದಾಯಾದಿ ಸಂವರ್ತನನ್ನು ಮರುತ್ತನು ಕೇಳಿಕೊಳ್ಳುತ್ತಾನೆ. ಸಂವರ್ತನು ಒಪ್ಪಿಕೊಂಡು ಯಾಗವನ್ನು ಪ್ರಾರಂಭ ಮಾಡಿಸಿದಾಗ ಬೃಹಸ್ಪತಿಗೆ ತುಂಬಾ ಮಾತ್ಸರ್ಯವುಂಟಾಗುತ್ತದೆ, ಈ ಯಾಗದಿಂದ ತನ್ನ ತಮ್ಮನಿಗೆ ತುಂಬಾ ಹಣ ಸಿಕ್ಕುತ್ತದಲ್ಲಾ ಎಂಬ ವಿಚಾರದಿಂದ. ಆದ್ದರಿಂದ ಬೃಹಸ್ಪತಿ ಇಂದ್ರನ ಬಳಿಗೆ ಬಂದು ಮರುತ್ತನ ಯಾಗಕ್ಕೆ ವಿಘ್ನವನ್ನುಂಟು ಮಾಡಲು ಪ್ರಾರ್ಥಿಸಿಕೊಳ್ಳುತ್ತಾನೆ. ಹೀಗೆ ಕಥೆ ಮುಂದುವರಿಯುತ್ತದೆ.

ಅಂದರೆ, ಮರುತ್ತನ ಕಥೆ ಇಲ್ಲಿಯತನಕ ಕಾವ್ಯವು ಗಂಭೀರವಾಗಿ ಚಿತ್ರಿಸಿಕೊಂಡು ಬಂದಿರುವ ವಿಚಾರಗಳನ್ನು ಧರ್ಮರಾಜನ ಶೋಕ, ಅಶ್ವಮೇಧ ಯಾಗದ ಶ್ರೇಷ್ಠತೆ, ಆ ಯಾಗದ ಪಶುವಿಗಾಗಿ ಭೀಮ-ವೃಷಕೇತು ಇವರುಗಳು ಮಾಡುವ ಸಾಹಸ, ಯೌವನಾಶ್ವನ ಪರಾಕ್ರಮ- ಮತ್ತು ಔದಾರ್ಯ-ಈ ಎಲ್ಲಾ ವಿಷಯಗಳನ್ನೂ ಲಘುವಾಗಿ ಚಿತ್ರಿಸುವುದರ ಮೂಲಕ ಅವು ಗಳನ್ನು ಆದರ್ಶಲೋಕದಿಂದ ಕೆಳಗೆಳೆಯುತ್ತದೆ. ಯಜ್ಞಕ್ಕೆ ಅತಿ ಮುಖ್ಯನಾದವನೇ ಪುರೋಹಿತ. ಮರುತ್ತನ ಕಥೆಯಲ್ಲಿ ಬರುವ ಒಬ್ಬ ಪುರೋಹಿತ ಬೃಹಸ್ಪತಿ ತನ್ನೊಡೆಯನ ಮಾತಿನಂತೆ ನಡೆಯುವ ಬೆನ್ನೆಲುಬಿಲ್ಲದಿರುವ ಮತ್ತು ತಮ್ಮನ ಏಳಿಗೆಯನ್ನು ತಾಳಲಾರದೇ ಕರುಬುವಂತಹ ಹೀನ ಮನುಷ್ಯ. ಇನ್ನೊಬ್ಬ ಪುರೋಹಿತನಾದ ಸಂವರ್ತನೂ ದಾಯಾದಿ ಮತ್ಸರದಿಂದ ಬೇಯುತ್ತಿರುವ ಮತ್ತು ಧನಲೋಭವಿರುವ ಸಾಮಾನ್ಯ ವ್ಯಕ್ತಿ. ಅಲ್ಲದೆ ಯಜ್ಞದಲ್ಲಿ ಬಂದು ಹವಿಸ್ಸನ್ನು ಸ್ವೀಕರಿಸುವ ದೇವತೆಗಳ ರಾಜ ಇಂದ್ರ. ಅವನು ಈ ಕಥೆಯಲ್ಲಿ ಮಾನವರ ಏಳ್ಗೆ ಯನ್ನು ಸಹಿಸಲಾರದ, ಸೇಡು ತೀರಿಸಲು ಏನು ಮಾಡಲೂ ಹೇಸದ ಕ್ರೂರಿ ಮತ್ತು ಸ್ವಾರ್ಥಿ. ಪುರೋಹಿತರು ಮತ್ತು ದೇವ ದೇವತೆಗಳೆ ಹೀಗಿರುವಾಗ ಅವರುಗಳನ್ನೊಳಗೊಂಡ ಯಜ್ಞಕ್ಕೆ ಯಾವ ಬೆಲೆಯಿದೆ? ಈ ಕಥೆಯಲ್ಲಿ ಶೌರ್ಯಕ್ಕೆ ವಿರುದ್ಧವಾಗಿ ಮೋಸ, ಔದಾರ್ಯಕ್ಕೆ ವಿರುದ್ಧವಾಗಿ ಸ್ವಾರ್ಥ ತುಂಬಿವೆ. ಅಂದರೆ ಕಾವ್ಯ ಯೌವನಾಶ್ವನ ಕಥೆಯಲ್ಲಿ ಪ್ರತಿಪಾದಿಸಿದ ಗುಣಗಳನ್ನು ಮರುತ್ತನ ಕಥೆಯಲ್ಲಿ ಪುರೋಹಿತರನ್ನೂ ದೇವದೇವತೆಗಳನ್ನೂ ಅಪಹಾಸ್ಯ ಮಾಡುವುದರ ಮೂಲಕ ಅಲ್ಲಗಳೆಯುತ್ತದೆ.

ಇದೇ ರೀತಿ ನೀಲಧ್ವಜನ ಕಥೆ ಜ್ವಾಲೆಯ ಪಾತ್ರದ ಮುಖಾಂತರ ಸ್ತ್ರೀಯ ಛಲ ಮತ್ತು ಅಭಿಮಾನಗಳನ್ನು ಗಂಭೀರವಾಗಿ ಚಿತ್ರಿಸಿದರೆ ಅದಾದ ಕೂಡಲೇ ಬರುವ ಚಂಡಿಯ ಕಥೆಯಲ್ಲಿ ಸ್ತ್ರೀಯ ಹಠಮಾರಿತನವನ್ನು (ಅದು ಛಲದ ಮತ್ತೊಂದು ರೂಪವೇ) ಲಘು ದಾಟಿಯಲ್ಲಿ ಚಿತ್ರಿಸಿ ಒಂದು ದೃಷ್ಟಿಯಲ್ಲಿ ಜ್ವಾಲೆಗೂ, ಚಂಡಿಗೂ ಏನು ವ್ಯತ್ಯಾಸವಿಲ್ಲವೆಂದು ತೋರಿಸುತ್ತದೆ. ಚಂಡಿ ಕಥೆಯ ನಂತರ ಬರುವ ವೃತ್ತಾಂತಗಳಲ್ಲಿ ಪತಿ ಸಮಾಗಮನವನ್ನು ಬಯಸುವ ಪ್ರಭಾ ವತಿ, ಪಾರ್ವತಿ ಮತ್ತು ಪ್ರಮೀಳೆಯರನ್ನು ಕವಿ ಚಿತ್ರಿಸುತ್ತಾನೆ. ಸುರತ ಸುಖಕ್ಕಾಗಿ ಮೇಲೆ ಬೀಳುವ ಪ್ರಭಾವತಿ ಕೀಳು; ತಪಸ್ಸು ಮಾಡಿ ಶಿವನನ್ನು ಒಲಿಸಿ ವರಿಸುವ ಪಾರ್ವತಿ ಮೇಲು; ಮತ್ತು ಸ್ತ್ರೀ ರಾಜ್ಯದ ರಾಣಿಯಾಗಿ ಅರ್ಜುನನ ಸಂಗಕ್ಕೆ ಕಾತರಿಸುವ ಪ್ರಮೀಳೆ ಇವರಿಬ್ಬರಿ ಗಿಂತಲೂ ಭಿನ್ನ-ಎಂದೂ ನಮಗೆ ತೋರುವುದು ಸರಿಯೆ? ಇವರುಗಳಲ್ಲಿ ಕಂಡುಬರುವ ವ್ಯತ್ಯಾಸಗಳು ಕೇವಲ ದೃಷ್ಟಿಕೋನದ ವ್ಯತ್ಯಾಸವಲ್ಲವೆ? ಎಂದೆಲ್ಲಾ ಮೂಲಭೂತ ಪ್ರಶ್ನೆಗಳನ್ನು ಕಾವ್ಯ ಎತ್ತುತ್ತದೆ.

ಆದರೆ ಎಲ್ಲಾ ಕಥೆಗಳ ಜೋಡಣೆಯೂ ಕೇವಲ ಪರಸ್ಪರ ವಿರುದ್ಧವಾಗಿಯೇ ಇವೆಯೆಂದಲ್ಲ. ಹಾಗಿದ್ದರೆ ಆ ಜೋಡಣೆಯೂ ಯಾಂತ್ರಿಕವಾಗುತ್ತದೆ. ಕೆಲವು ಕಡೆ ಒಂದು ಕಥೆ ಇನ್ನೊಂದು ಕಥೆಯ ಸಮಾನಾಂತರ ರೂಪವಾಗಿ ಆ ಮೊದಲಿನ ಕಥೆಯ ಅರ್ಥವನ್ನು ಹೆಚ್ಚಿಸುತ್ತದೆ. ಅರ್ಜುನ-ಬಭ್ರುವಾಹನ ಮತ್ತು ರಾಮ-ಲವಕುಶರ ಕಥೆಗಳು ಈ ರೀತಿಯವು. ತನ್ನ ಅಹಂಭಾವ ದಿಂದ ಮತ್ತು ತೋಳ್ಬಲದ ಗರ್ವದಿಂದ ತನ್ನ ಪತ್ನಿ ಪುತ್ರರನ್ನು ನಿರಾಕರಿಸುವ ಅರ್ಜುನನಿಗೆ ತನ್ನ ಮಗನ ಕೈಯಿಂದಲೇ ಆಗುವ ಸೋಲು ಮತ್ತು ಸಾವು ಕೇವಲ ಆಕಸ್ಮಿಕವಲ್ಲ, ಆ ವಿಧದ ಅಪರಾಧಕ್ಕೆ ಅದೇ ವಿಧದ ಶಿಕ್ಷೆ ಯಾವಾಗಲೂ ಆಗುವುದೇ ಎಂಬ ಒಂದು ವೈಯಕ್ತಿಕ ಅನುಭವವನ್ನು ಸಾರ್ವಜನಿಕ ಸತ್ಯವನ್ನಾಗಿ ತೋರಿಸಲು ಬಭ್ರುವಾಹನ ಕಥೆಯ ಮಧ್ಯದಲ್ಲಿಯೇ ಕವಿ ರಾಮನ ಕಥೆಯನ್ನು ತರುತ್ತಾನೆ. ತ್ರೇತಾಯುಗದ ಯುಗಪುರುಷ ಲೋಕೋತ್ತರ ರಾಮನಿಗೆ ತನ್ನ ಪತ್ನಿಯನ್ನು ವಿನಾಕಾರಣ ತ್ಯಜಿಸಿದುದಕ್ಕೆ ತನ್ನ ಮಕ್ಕಳ ಕೈಯಲ್ಲಿ ಸೋಲುಂಟಾದರೆ, ದ್ವಾಪರಯುಗದ ಅರ್ಜುನನಿಗೆ ಹಾಗಾಗುವುದರಲ್ಲಿ ಆಶ್ಚರ್ಯವೇನಿದೆ? ಈ ಎರಡೂ ಕಥೆಗಳ ಮೂಲಕ ಕವಿ ರಾಜತ್ವ ಮತ್ತು ಕ್ಷಾತ್ರಧರ್ಮವನ್ನು ನಿರಾಕರಿಸಿ ದಾಂಪತ್ಯಧರ್ಮವನ್ನು ಮತ್ತು ಸಂಸಾರದಲ್ಲಿ ಸ್ತ್ರೀಗೆ ಇರಬೇಕಾದ ಸ್ಥಾನವನ್ನೂ ಒಪ್ಪಿಕೊಳ್ಳುತ್ತಾನೆ. ರಾಜಮಹಾರಾಜರೇ ನಾಯಕರಾಗಿರುವ ಕಾವ್ಯದಲ್ಲಿ ಕವಿಯ ಈ ಒಲವು ವಿಶೇಷವೆ ಸರಿ.

ಕನ್ನಡ ಜೈಮಿನಿ ಭಾರತದ ನಾಯಕ ಕೃಷ್ಣನೆಂದು ಎಲ್ಲರೂ ಒಪ್ಪುವ ಮಾತೆ. ಕಾವ್ಯದ ಮುಖ್ಯ ಪಾತ್ರಗಳೆಲ್ಲರೂ ಕೃಷ್ಣಭಕ್ತಿಯಿಂದ ಪುನೀತರಾಗಿರುವವರೇ; ಮತ್ತು ಕೃಷ್ಣಸ್ತುತಿಯಲ್ಲಿ ಕವಿ ಅನೇಕ ಕಡೆ ಭಕ್ತಿಪರವಶನಾಗಿ ತನ್ನನ್ನೇ ತಾನು ಮರೆಯುತ್ತಾನೆ. ಇದು ಕಾವ್ಯದ ಒಂದು ಪಾತಳಿಯಲ್ಲಿ. ಆದರೆ ಮತ್ತೊಂದು ಪಾತಳಿಯಲ್ಲಿ ಕಾವ್ಯ ಕೃಷ್ಣನ ಪಾತ್ರವನ್ನು ಸಂಕುಚಿತ ಗೊಳಿಸುತ್ತದೆ ಮತ್ತು ಕೃಷ್ಣನನ್ನು ಕುರಿತೂ ಕೂಡ ಕೆಲವು ಕಡೆ ದ್ವಂದ್ವ ಭಾವವನ್ನು ತೋರುತ್ತದೆ ಎಂಬ ವಿಚಾರವನ್ನು ವಿಮರ್ಶಕರು ಗಮನಿಸಿದಂತೆ ತೋರುವುದಿಲ್ಲ. ನನ್ನ ದೃಷ್ಟಿಯಲ್ಲಿ ಕೃಷ್ಣನ ಪಾತ್ರವನ್ನು ಕವಿಯು ನೇರವಾಗಿಯೂ ಮತ್ತು ಧ್ವನಿಯ ಮೂಲಕವೂ ಬಹಳಷ್ಟು ಕುಗ್ಗಿಸುತ್ತಾನೆ.

ನೇರವಾಗಿ ಕೃಷ್ಣನ ಪಾತ್ರವನ್ನು ಸಂಕೋಚಗೊಳಿಸಿ ಅವನನ್ನು humanise ಮಾಡಿರುವುದನ್ನು ನಾವು ಅವನಿಗೆ ಯಾತ್ರೆಯ ಸಂದರ್ಭದಲ್ಲಿ ಬರುವ ಸೋಲುಗಳನ್ನು ಕಾಣಬಹುದು. ಕಾವ್ಯದ ಪ್ರಾರಂಭದಲ್ಲಿಯೇ ಅದ್ವಿತೀಯ ವೀರನಾದ ಕೃಷ್ಣ ಅನುಸಾಲ್ವನೊಡನೆ ಆದ ಯುದ್ಧದಲ್ಲಿ ಸೋತು ಹಿಂದಿರುಗಿದಾಗ ಸತ್ಯಭಾಮೆ ಅವನನ್ನು ಹಂಗಿಸುತ್ತಾಳೆ : ‘ದಾನವನಿಗೆ ಇದಿರಾಗಿ ಕಾದಿ ಪ್ರಾಣದಾನವನ್ನು ಪಡೆದು ಹಿಂತಿರುಗಿರುವ ನಿನ್ನ ಶೌರ್ಯವನ್ನು ನಾನು ಹೇಗೆ ತಾನೇ ವರ್ಣಿಸಲಿ?’ ಎನ್ನುತ್ತಾಳೆ. ಕೃಷ್ಣನೇ ಸೋಲಿಸಲಾಗದ ಅನುಸಾಲ್ವನನ್ನು ವೃಷಕೇತು ಸೋಲಿಸು ತ್ತಾನೆ. ಮುಂದೆ ತಾಮ್ರಧ್ವಜನೊಡನೆ ಆ ಯುದ್ಧದಲ್ಲಿ ಮತ್ತೆ ಸೋಲುತ್ತಾನೆ. ಸೋತ ನಂತರ ‘ಚೋರ ಬುದ್ದಿಯ ವಿಪ್ರವೇಷವನ್ನು ಧರಿಸಿ ಮಯೂರಧ್ವಜನನ್ನು ಪರೀಕ್ಷಿಸಿದಂತೆ ಮಾಡಿ ಸೋಲನ್ನು ಮುಚ್ಚುತ್ತಾನೆ. ಅಂದರೆ ಭಾಗವತದ ಸರ್ವಶಕ್ತ ಕೃಷ್ಣನಿಗೆ ಮಹಾಭಾರತದ ಆಪದ್ಭಾಂಧವ ಕೃಷ್ಣನಿಗೆ ಮತ್ತು ಜೈಮಿನಿಯ ಕೃಷ್ಣನಿಗೆ ಬಹಳಷ್ಟು ವ್ಯತ್ಯಾಸವಿದೆ.

ಅಷ್ಟೇ ಅಲ್ಲದೆ ಸೂಚ್ಯವಾಗಿಯೂ ಕವಿ ಕೃಷ್ಣನ ಪಾತ್ರವನ್ನು ಕುಗ್ಗಿಸಿದ್ದಾನೆ. ನಗರ ವರ್ಣನೆ, ವೇಶ್ಯಾ ವರ್ಣನೆ, ದ್ಯೂತ ವರ್ಣನೆ ಇವುಗಳು ಪರಂಪರಾಗತವಾದ ಮಹಾಕಾವ್ಯದ ಲಕ್ಷಣಗಳು. ಆದರೆ ಲಕ್ಷ್ಮೀಶನು ಅವನ್ನು ಅದೆಷ್ಟು ಸಮರ್ಥವಾಗಿ ಉಪಯೋಗಿಸಿಕೊಂಡಿದ್ದಾ ನೆಂಬುದನ್ನು ನೋಡಿದರೆ ನಮಗೆ ಆಶ್ಚರ್ಯವಾಗುತ್ತದೆ. ಜೈಮಿನಿ ಭಾರತದಲ್ಲಿ ವರ್ಣಿಸಲ್ಪಟ್ಟಿ ರುವ ಪ್ರಮುಖ ನಗರಗಳು ಆರು. ಹಸ್ತಿನಾಪುರ, ಭದ್ರಾವತಿ, ದ್ವಾರಕೆ, ಮಣಿಪುರ, ರತ್ನಪುರ ಮತ್ತು ಕುಂತಳ ದೇಶ. ಇವುಗಳಲ್ಲಿ  ಹಸ್ತಿನಾಪುರ ವರ್ಣನೆಯಲ್ಲಿ ಕವಿ ಕೇವಲ ಪ್ರಜ್ಞೆಗಳ ಋಜು ಜೀವನದ ಮೇಲೆ, ಅವರ ಸಾಮಾಜಿಕ ಮೌಲ್ಯಗಳ ಮೇಲೆ ಬೆಳಕು ಚೆಲ್ಲುತ್ತಾನೆ. ‘ಕಳವು, ಕೊಲೆ ಪಾದರಂ, ಪುಸಿ, ವೈರ….’ ಇತ್ಯಾದಿ ಯಾವುವೂ ಆ ರಾಜ್ಯದಲ್ಲಿರಲಿಲ್ಲ, ‘ಕೊಡೆ, ಪೊಡೆ, ಕಡಿ, ಜಡಿ’ ಇವುಗಳೆಲ್ಲಾ ಕೇವಲ ಸಂಕುಚಿತಾರ್ಥದಲ್ಲಿ ಅಲ್ಲಿ ಉಪಯೋಗಿ ಸಲ್ಪಡುತ್ತಿದ್ದುವು, ಇತ್ಯಾದಿ. ಹಾಗೆಯೇ ಕುಂತಳ ದೇಶವನ್ನು ಬಿಟ್ಟು ಬೇರೆಲ್ಲಾ ನಗರಗಳನ್ನು ವರ್ಣಿಸುವಾಗಲೂ ಆ ನಗರಗಳ ಸಂಪತ್ತು, ವೈಭವ ಮತ್ತೆ ಅಲ್ಲಿಯ ಭೋಗ ಜೀವನಗಳನ್ನು ವರ್ಣಿಸುತ್ತಾನೆ. ಅಂದರೆ ನಗರಗಳಲ್ಲಿ ಧರ್ಮರಾಜನ ಹಸ್ತಿನಾಪುರ ಮತ್ತು ಚಂದ್ರಹಾಸನ ಕುಂತಳದೇಶ ಇವುಗಳು ಒಂದು ಗುಂಪಾದರೆ ಬೇರೆಲ್ಲಾ ನಗರಗಳು ಮತ್ತೊಂದು ಗುಂಪಾಗುತ್ತವೆ ಮತ್ತು ಆ ಎರಡನೆಯ ವರ್ಗದಲ್ಲಿ ಅತಿಮುಖ್ಯವಾದುದು ಕೃಷ್ಣನ ರಾಜಧಾನಿ ದ್ವಾರಕೆ.

ದ್ವಾರಕೆಯನ್ನು ಪ್ರವೇಶಿಸುವ ಮೊದಲೇ ನಮಗೆ ಕವಿ ತೋರಿಸುವುದು ಸಮುದ್ರದ ರೌದ್ರವನ್ನು-‘ಕ್ರೂರ ಕರ್ಕಟಕ ಕಟಕಂ ಕಮಠಮಠ ಮಿಡಿದ…’ ಘಳಿಗಳಿಸುತೇಳ್ವ ಬೊಬ್ಬುಳಿಗಳಿಂ ಸುಳಿಗಳಿಂ… ಘರ‍್ಜಿಸುತ್ತಿರುವ ಕ್ರೂರ-ಕರ್ಕಶ ಸಮುದ್ರಣವನ್ನು. ಅನಂತರ ಕಣ್ಣಿಗೆ ಬೀಳುವುದು ನವರತ್ನ ಪರಿ ಖಚಿತ, ಹರ್ಮ್ಯಗಳು-ಅಂದರೆ ಭೋಗ ಮತ್ತು ಸಂಪತ್ತು. ಅಲ್ಲಿಂದ ಮುಂದೆ ವಿಸ್ತಾರವಾಗಿ ೨೪ ಷಟ್ಪದಿಗಳಲ್ಲಿ ಬೇರೆ ಯಾವ ನಗರ ವರ‍್ಣನೆಯೂ ಇಷ್ಟು ವಿಸ್ತಾರವಾಗಿಲ್ಲ- ವಿಟರನ್ನು ಸವಿ ಮಾತುಗಳಿಂದ ಬಲೆಗೆ ಬೀಳಿಸುವ ಮಾತುಗಾರ್ತಿಯರು, ‘ಘನ ಕುಚದ್ವಯದ’ ವೇಶ್ಯೆಯರು ಮತ್ತು ಅವರ ವಿಟರು, ಅವರುಗಳ ದ್ಯೂತ ‘ಪೊನ್ನಿಲ್ಲದಾತನ’ ಸ್ನೇಹ ಇನ್ನು ಸಾಕೆಂದು ಉಪದೇಶಿಸುವ ಸೂಳೆಯರ ಸಖಿಯರು, ಇವರುಗಳ ವರ್ಣನೆ ಬರುತ್ತದೆ. ಮತ್ತು ಕೋಳಿಕಾಳಗ, ‘ಕರಿ ತುರಗದೇರಾಟ’, ಮುಂತಾದ ಬಗೆಬಗೆಯ ಜೂಜುಗಳ ವರ್ಣನೆಯಿದೆ. ಈ ವರ್ಣನೆಗಳು ದ್ವಾರಕೆಯನ್ನು ಯಾವುದೇ ಒಂದು ಸಂಪದ್ಭರಿತ ಹಾಗೂ ಭೋಗ ಜೀವನ ತುಂಬಿದ ಪಟ್ಟಣವನ್ನಾಗಿಸುತ್ತವೆಯೇ ಹೊರತು ದೇವಪುರುಷ ಕೃಷ್ಣನ ರಾಜಧಾನಿಯೆಂದೆನಿಸು ವುದಿಲ್ಲ. ಕೃಷ್ಣನ ರಾಜಧಾನಿಯಲ್ಲಿ ಮತ್ತು ಅವನ ಪ್ರಜೆಗಳಲ್ಲಿ ಕೃಷ್ಣನ ದೈವತ್ವದ ಪ್ರಭಾವ ಸ್ವಲ್ಪವಾದರೂ ಕಾಣಿಸಬೇಡವೇ? ಈ ಪ್ರಶ್ನೆ ಉಚಿತ ಹಾಗೂ ಯೋಗ್ಯ ಎನ್ನುವುದು ಕವಿ ಹಸ್ತಿನಾಪುರ ಮತ್ತು ಕುಂತಳ ದೇಶಗಳನ್ನು ಚಿತ್ರಿಸುವಾಗ ನಮಗೆ ಗೊತ್ತಾಗುತ್ತದೆ. ಧರ್ಮರಾಜನ ಹಸ್ತಿನಾಪುರ ‘ಧರ್ಮ ಸಾಮ್ರಾಜ್ಯ’ವಾಗಿದೆ. ಚಂದ್ರಹಾಸನ ವೈಷ್ಣಭಕ್ತಿಯ ಪ್ರಭಾವ ಕುಂತಳಪುರದ ಪ್ರಜೆಗಳ ಮೇಲೂ ಆಗಿದೆ ಮತ್ತು ಅವರುಗಳೂ ಏಕಾದಶೀ ವ್ರತವನ್ನು ಆಚರಿಸುತ್ತಾ ವಿಷ್ಣು ಭಕ್ತರಾಗಿರುತ್ತಾರೆ. ಅಂದರೆ ಜೈಮಿನಿ ಭಾರತದಲ್ಲಿ ದ್ವಾರಕೆ ರಾಜ ಕೃಷ್ಣನೂ ಒಬ್ಬ ಸಾಮಾನ್ಯ ರಾಜನೇ ಆಗಿದ್ದಾನೆ.

ಆದರೆ ರಾಜತ್ವವನ್ನು, ಕ್ಷಾತ್ರಧರ್ಮವನ್ನು ಮತ್ತು ಧೈರ್ಯ ಸಾಹಸ ಮುಂತಾದ ಯುದ್ಧ ಭೂಮಿಯ ಮೌಲ್ಯಗಳನ್ನು ಕವಿ ಸಂಪೂರ್ಣ ನಿರಾಕರಿಸುವುದು ಅರ್ಜುನನ ಪಾತ್ರದ ಮೂಲಕ. ‘ಇಲಿಯಡ್’ ಕಾವ್ಯದಲ್ಲಿ ಅಪ್ರತಿಮ ವೀರನಾಗಿ ಮೆರೆಯುವ ಯೂಲಿಸಿಸ್ ‘ಒಡಿಸ್ಸಿ’ಯಲ್ಲಿ ಅನಾಥನಾಗಿ ಸೋಲಿನ ಮೇಲೆ ಸೋಲನ್ನು ಅಪ್ಪುವಂತೆ ‘ಮಹಾಭಾರತ’ದ ಅಸಮಾನ ಶೂರ ಅರ್ಜುನ ‘ಜೈಮಿನಿ ಭಾರತ’ದಲ್ಲಿ ಬರೀ ಸೋಲನ್ನೇ ಕಾಣುತ್ತಾನೆ. ಕೇವಲ ತನ್ನ ಶೌರ್ಯದಿಂದ ಭೀಷಣನನ್ನೊಬ್ಬನನ್ನು ಬಿಟ್ಟು ಮತ್ತಾರನ್ನೂ ಅವನು ಗೆಲ್ಲುವುದಿಲ್ಲ. ಸುಧನ್ವ, ತಾಮ್ರಧ್ವಜರ ಜೊತೆ ಸಂಪೂರ್ಣ ಸೋಲುವುದೇ ಅಲ್ಲದೆ ಬಭ್ರುವಾಹನನೊಡನೆ ಆಗುವ ಯುದ್ಧದಲ್ಲಿ ಸೋತು ಮಡಿಯುತ್ತಾನೆ ಕೂಡಾ. ಅರ್ಜುನನ ಈ ಸಾವಿನ ಸಂದರ್ಭದಲ್ಲಿ ಕವಿ ತಿಥಿ ವಾರ ನಕ್ಷತ್ರಗಳನ್ನೂ ಸ್ಪಷ್ಟಪಡಿಸುವುದರಿಂದ, ಕಾವ್ಯದ ಶಿಖರವಿದೆಂದು-ಅಂದರೆ ಈ ಘಟನೆ ಕವಿಯ ದೃಷ್ಟಿಯಲ್ಲಿ ಅತ್ಯಂತ ಅರ್ಥಪೂರ್ಣವಾದುದೆಂದು ನಮಗೆ ಅರಿವಾಗುತ್ತದೆ.

ಅರ್ಜುನನು ಪದೇ ಪದೇ ಏಕೆ ಸೋಲುತ್ತಾನೆ? ಅರ್ಜುನನ ಸೋಲು ಮತ್ತು ಸಾವು ಕ್ಷಾತ್ರಧರ್ಮದ, ಅಹಂಕಾರದ ಮೇಲೆ ಕುಲಭಿಮಾನದ ಸೋಲು. ಹಂಸಧ್ವಜನೊಡನಾಗುವ ಯುದ್ಧಕ್ಕೆ ಮೊದಲೇ-ಅಂದರೆ ಯಜ್ಞದ ಕುದುರೆ ತನ್ನ ಒಂದು ವರ್ಷದ ಯಾತ್ರೆಯನ್ನು ಪ್ರಾರಂಭಿಸಿದ ಕೂಡಲೇ-ಸೌಭರಿ ಮುನಿಯು ಅರ್ಜುನನಿಗೆ ಗೀತೋಪದೇಶದಿಂದ ಏನೂ ಪ್ರಯೋಜನವಾಗಿಲ್ಲವೆಂದೂ ಬುದ್ದಿ ಹೇಳುತ್ತಾನೆ. ‘\ಳುಹಿದಂ ಪಿಂತೆ ಭಾರತ ಯುದ್ಧ ಮಧ್ಯದೊಳ್ ನಳಿನನಾಭಂ ನಿನಗೆ ಮತ್ತೆಯುಮಹಂಕಾರ ವಳಿದುದಿಲ್ಲಕಟ ಜಗದೊಳ್ ಕೊಲ್ವರಾರ್ ಕಾವರಾರ್ ಬಲ್ಲೊಡುಸಿರೆಂದನು’ ನಿನಗಿನ್ನೂ ಹುಟ್ಟಿಲ್ಲವೆ ಅರಿವು? ಎಂದು ಕೇಳುತ್ತಾನೆ. ‘ಒಡಿಸ್ಸಿ’ಯಲ್ಲಿ ಸರ್ಸಿಯು “Rash man ! Is thy heart still set on acts of war and trouble” ಎಂದು ಯೂಲಿಸಿಸ್‌ನನ್ನು ಕೇಳುವಂತೆ. ಆದರೂ ಅರ್ಜುನನ ಅಹಂಕಾರ ಮತ್ತು ತನ್ನ ಭುಜಬಲದ ಮೇಲಿರುವ ದುರಭಿಮಾನ ಕಮ್ಮಿಯಾಗುವುದಿಲ್ಲ. ಆದ್ದರಿಂದಲೇ ತನ್ನ ಕಾಲಿಗೆ ಬಿದ್ದ ಮಗ ಬಭ್ರುವಾಹನನ್ನು ತಿರಸ್ಕಾರದಿಂದ ಒದೆದು ತನ್ನ ಪತ್ನಿ ಚಿತ್ರಾಂಗದೆಯ ನಡತೆಯ ಬಗ್ಗೆಯೂ ಕುತ್ಸಿತ ಮಾತುಗಳನ್ನಾಡುತ್ತಾನೆ. ದಾಂಪತ್ಯ ಧರ್ಮವನ್ನು ಮತ್ತು ಮಾತೃತ್ವವನ್ನು ಅವಹೇಳನ ಮಾಡುವುದು ಕವಿಯ ದೃಷ್ಟಿಯಲ್ಲಿ ಅತ್ಯಂತ ಘೋರ ಅಪರಾಧ ಮತ್ತು ಈ ಅಪರಾಧಕ್ಕೆ ಅರ್ಜುನ ತಲೆದಂಡವನ್ನು ಕೊಡಲೇಬೇಕಾ ಗುತ್ತದೆ. ಬಹು ಮಾರ್ಮಿಕವಾಗಿ ಕವಿ ಈ ಸಮಯದಲ್ಲಿ ಹೇಳುತ್ತಾನೆ. ‘ತಲೆ ಪೋಪುದಕೆ ತನ್ನ ಕಾಲ್ಪೊಣಿ’ ಎಂದು. ತನಗಾದ ಅವಮಾನಕ್ಕಿಂತ ಹೆಚ್ಚಾಗಿ ಬಭ್ರುವಾಹನನನ್ನು ನೋಯಿಸಿ ದುದು ತನ್ನ ತಾಯಿಗಾದ ಅಪಮಾನ : ‘ಪಳಿದೆಲಾ ಮಾತೆಯಂ’ ಇನ್ನು ನಿನ್ನ ತಲೆಗೆಡಹದೆ ಇರುವುದಿಲ್ಲ’ ಎಂದು ಪ್ರತಿಜ್ಞೆ ಮಾಡುತ್ತಾನೆ.

ಈ ವಿಚಾರವನ್ನೇ, ಎಂದರೆ ಅರ್ಜುನನ ಕುಲಾಭಿಮಾನದ ಅರ್ಥಹೀನತೆಯನ್ನು ಕವಿ ಈ ಕಥೆಗೆ ಸಮಾನಾಂತರವಾಗಿ ಬರುವ ಲವಕುಶರ ಕಥೆಯಲ್ಲಿಯೂ ಒತ್ತಿ ಹೇಳುತ್ತಾನೆ. ರಾಮನು ಯುದ್ಧಕ್ಕೆ ಸಿದ್ಧವಾಗಿ ಬಂದು ಕುಶನನ್ನು “ನಿನ್ನ ತಂದೆ ತಾಯಿಯರು ಯಾರು?” ಎಂದು ಕೇಳಿದಾಗ ಕುಶನು ಹೇಳುತ್ತಾನೆ. ‘ಅಪ್ರಯೋಜಕದ ಮಾತಿದೇತಕೆ ನಿರುಪಮ ಕ್ಷಾತ್ರ ಪೌರುಷವನುಳಿದು ಬರಿದೆ ಸೋಜಿಗದೊಳೆಮ್ಮ ಜನನ ಸ್ಥಿತಿಗಳಂ ಕೇಳ್ದೊಡೀ ಜಗಂ ಮೆಚ್ಚದು’ ಎಂದು. ಮತ್ತೊಂದು ಸಂದರ್ಭದಲ್ಲಿ ವೃಷಕೇತು ‘ಯಾರಿಂದ ಜನ್ಮವಾದರೇನು’ ಎಂದು ತನ್ನ ಎದುರಾಳಿಯನ್ನು ಹಂಗಿಸುತ್ತಾನೆ. ಒಟ್ಟಿನಲ್ಲಿ ಬಭ್ರುವಾಹನನ ಕೈಯಲ್ಲಿ ಸೋತು ಸಾಯುವ ತನಕ ಅರ್ಜುನನು ಅಹಂಕಾರದಿಂದ ಮದಿಸಿದ ‘ಯುದ್ಧರಂಗದ’ ಮೌಲ್ಯಗಳ ಸಂಕೇತವಾಗುತ್ತಾನೆ. ಈ ಮೌಲ್ಯಗಳು ಎಷ್ಟು ಅಮಾನವೀಯ ಮತ್ತು ಅನೈಸರ್ಗಿಕ ಎನ್ನುವ ವಿಚಾರವನ್ನು ಕವಿ ಋತು ವರ್ಣನೆಗಳ ಜೋಡಣೆಯಲ್ಲಿಯೂ ಅದ್ಭುತವಾಗಿ ಸಾಧಿಸಿದ್ದಾನೆ.

ಯಜ್ಞ ಪ್ರಾರಂಭದಲ್ಲಿ ಬರುವ ವಸಂತ ಋತುವಿನ ವರ್ಣನೆ ಮನೋಜ್ಞವಾಗಿದೆ. ಮರಿ ಕೋಗಿಲೆಗಳ ಸೆರೆಯನ್ನು ಬಿಡಿಸಿ ಮಂದಮಾರುತನೊಡನೆ ಆಹ್ಲಾದಕಾರಿಯಾಗಿ, ಬಣ್ಣಬಣ್ಣದ ಶ್ರೀಮಂತಿಕೆಯಲ್ಲಿ, ಹೂವು-ಹೊಸ ತಳಿರುಗಳ ಸಿರಿಯಲ್ಲಿ, ‘ಪಾತಕಕ್ಷಯ’ದಂತೆ ಚೈತ್ರಮಾಸ ಶೋಭಿಸುತ್ತದೆ ಮತ್ತು ‘ಪಾತಕಕ್ಷಯ’ದ ಅಂಶವಾಗಿ ಈ ಋತುವಿನಲ್ಲಿಯೇ ಜ್ವಾಲೆಯ ಕಾರಣದಿಂದ ಅರ್ಜುನನ ಸಾವಿನ ಬೀಜಾಂಕುರವಾಗುತ್ತದೆ. ಅಂದರೆ ಎಲ್ಲೆಡೆಯಲ್ಲಿಯೂ ಬದುಕಿನ ಪ್ರಾರಂಭವಾದರೆ ಅರ್ಜುನನ ಸಾವಿನ ಪ್ರಾರಂಭವಾಗುತ್ತದೆ. ಏಕೆಂದರೆ ಅವನ ಮೌಲ್ಯಗಳು ಜೀವನ ವಿಮುಖವಾದ್ದರಿಂದ. ಅರ್ಜುನನ ಈ ಜೀವನ ವಿಮುಖಗತಿ ಮುಂದು ವರಿದು ವರ್ಷಋತುವಿನಲ್ಲಿ ಅಂದರೆ ಎಲ್ಲೆಲ್ಲಿಯೂ ‘ಜೀವನ’ (ಬದುಕು ಮತ್ತು ನೀರು) ತುಂಬಿರುವಾಗ ಅರ್ಜುನನ ಜೀವ ಕಳೆದುಕೊಳ್ಳುತ್ತಾನೆ. ಅವನಿಗೆ ಪುನರ್ಜನ್ಮ ಬಂದಾಗ ಅವನು ಬೇರೆಯೆ ಅರ್ಜುನನಾಗಿರುತ್ತಾನೆ. ‘ಕಾರ್ಗಾಲ’ ಕಳೆದು, ‘ಮೈಸಿರಿಯ ಮಾಂಗಲ್ಯದಿಂದ ಭೂದೇವಿ ಶೋಭಿಸುವಂತೆ’ ಇರುವ ಶರದೃತುವಿನ ಆಗಮನವಾಗುತ್ತದೆ.

ಪುನರ್ಜನ್ಮವನ್ನು ದೈಹಿಕವಾಗಿಯೂ ಮಾನಸಿಕವಾಗಿಯೂ ಪಡೆಯುವ ಅರ್ಜನನು ಎಷ್ಟು ಬದಲಾಗಿದ್ದಾನೆಂದರೆ, ಕುಂತಳಪುರವನ್ನು ಪ್ರವೇಶಿಸಿದಾಗ ಅಲ್ಲಿನ ರಾಜನ ವಿಷಯವನ್ನು ತಿಳಿಯಲು ನಾರದ ಮಹರ್ಷಿಯನ್ನು ವಿಚಾರಿಸಿದರೆ, ನಾರದನು “ಇದು ನಿನಗೆ ಕಥೆ ಕೇಳಲು ಸಮಯವಿಲ್ಲ. ನಿನ್ನ ಕುದುರೆಯನ್ನು ಕಟ್ಟಿಹಾಕಿದ್ದಾರೆ ಮತ್ತು ಹಸ್ತಿನಾಪುರದಲ್ಲಿ ಧರ್ಮರಾಜನು ಯೋಜನೆ ಮಾಡುತ್ತಿದ್ದಾನೆ” ಎನ್ನುತ್ತಾನೆ. ಆಗ ಅರ್ಜುನನು ‘ನರರ ಬಾಳ್ ಚಿರಕಾಲಮಿಪ್ಪು ದಿಲ್ಲ, ಭ್ರಮೆಯಿಂದ ಕೇಳದಿರಬಹುದೆ ವೈಷ್ಣವ ಕಥೆಯ’ ಎಂದು ಚಂದ್ರಹಾಸನ ‘ವೈಷ್ಣವ ಕಥೆ’ಯನ್ನು ಭಕ್ತಿಯಿಂದ ಕೇಳುತ್ತಾನೆ. ‘ನರರ ಬಾಳ್ ಚಿರಕಾಲಮಿಪ್ಪುದಿಲ್ಲ’ ಎಂಬ ಅರ್ಜುನನ ಅರಿವನ್ನು ಅವನಂತೆಯೇ ಅಹಂಕಾರದಿಂದ ನರಳಿ ಕೊನೆಗೆ ತನ್ನನ್ನು ತಾನು ಅರಿತುಕೊಂಡಿರುವ ‘ಒಡಿಸ್ಸಿ’ಯ ಯೂಲಿಸಿಸ್‌ನ ಉದ್ಗಾರಕ್ಕೆ ಹೋಲಿಸಬಹುದು. ‘ಒಡಿಸ್ಸಿ’ ಕಾವ್ಯದ ಕೊನೆಯಲ್ಲಿ ಯೂಲಿಸಿಸ್ ಅತ್ಯಂತ ಗಂಭೀರವಾಗಿ ಹೇಳುತ್ತಾನೆ. “ಈ ಭೂಮಿಯ ಮೇಲೆ ಉಸಿರಾಡುವ, ಓಡಾಡುವ ಜೀವಿಗಳಲ್ಲೆಲ್ಲಾ ಮಾನವನಷ್ಟು ದುರ್ಬಲರಾದವರು ಯಾರೂ ಇಲ್ಲ”. ಈ ಜೀವನ ಯಾತ್ರೆಯಲ್ಲಿ-ಅದು ಅರ್ಜುನನದಾಗಿರಲಿ ಅಥವಾ ಯೂಲಿಸಿಸ್‌ನ ಮತ್ತು ಕ್ಯಾಂಟರ್ ಬರಿ ಯಾತ್ರಿಕರದಾಗಿರಲಿ-ನಾವು ಅರಿಯುವ ಸತ್ಯ ಒಂದೇ : ‘ನರರ ಬಾಳ್ ಚಿರಕಾಲಮಿಪ್ಪು ದಿಲ್ಲ’.

ಛಾಸರ್ ಕವಿಯ ‘ಕ್ಯಾಂಟರ್‌ಬರಿ ಟೇಲ್ಸ್’ ನೈಟ್‌ನಿಂದ ಪ್ರಾರಂಭವಾಗಿ ಪಾರ್ಸನ್ ಹೇಳುವ ಕಥೆಯಲ್ಲಿ ಮುಗಿಯುವಂತೆ ಅವನದೇ ಮತ್ತೊಂದು ಕಾವ್ಯ ‘ಟ್ರಾಯ್‌ಲಸ್ ಅಂಡ್ ಕ್ರಿಸೀಡೆ’ ಈ ಮರ್ತ್ಯಲೋಕದಲ್ಲಿ ಪ್ರಾರಂಭವಾಗಿ ಕೊನೆಯಲ್ಲಿ ತಾರಾಲೋಕದಿಂದ ಟ್ರಾಯ್ ಲಸ್, ಈ ಭೂಲೋಕವನ್ನು ನೋಡುತ್ತಾ ಅದರ ಕ್ಷುದ್ರತೆಗೆ ನಗುತ್ತಿರುವಾಗ ಮುಕ್ತಾಯವಾಗು ವಂತೆ, ಜೈಮಿನಿ ಭಾರತವೂ ರಾಜ ಮಹಾರಾಜರ ಅಟ್ಟಹಾಸ ಜಯಾಪಜಯಗಳಿಂದ ಮುಂದುವರಿದು, ಯುದ್ಧವನ್ನೇ ಮಾಡದ ಸಾತ್ವಿಕ ಚಂದ್ರಹಾಸನತ್ತ ಸಾಗಿ ಕೊನೆಗೆ ದಿಗ್ಭ್ರಮೆ ಯಿಂದ ತಲೆತಿರುಗಿಸುವಂತಾಗುವ ಬಕದಾಲ್ಭ್ಯಮುನಿಯ ‘ವಿಶ್ವ ದೃಷ್ಟಿ’ (Cosmic vision) ಯಿಂದ ಕೊನೆಗೊಳ್ಳುತ್ತದೆ. ಇಪ್ಪತ್ತು ಚತುರ್ಮುಖ ಬ್ರಹ್ಮ ಕಾಲದಲ್ಲಿ ಕಂಡ ಬಕದಾಲ್ಭ್ಯನು ಅವರೊಡನೆ ಕ್ರಮವಾಗಿ ಅಷ್ಟಮುಖ ಬ್ರಹ್ಮರನ್ನು, ಶೋಡಷ ಮುಖದ ಬ್ರಹ್ಮರನ್ನು ಮತ್ತೆ ಮೂವತ್ತೆರಡು ಮುಖದ ಬ್ರಹ್ಮ, ಅರವತ್ತು ನಾಲ್ಕು ಮುಖದ ಬ್ರಹ್ಮ, ಕೊನೆಗೆ ಸಹಸ್ರಮುಖ ಬ್ರಹ್ಮ ಇವರುಗಳನ್ನು ಕಾಣುತ್ತಾನೆ. ಸಹಸ್ರಮುಖ ಬ್ರಹ್ಮನ ತುಲನೆಯಲ್ಲಿ ಚತುರ್ಮುಖ ಬ್ರಹ್ಮನ ವಿಶ್ವವೆಲ್ಲಿ? ಆ ವಿಶ್ವದಲ್ಲಿ ಈ ಒಂದು ಭೂಲೋಕದಲ್ಲಿ ಎಲ್ಲೋ ಒಂದು ಕಡೆ ಹುಟ್ಟಿ ಸಾಯುವ ರಾಜಾಧಿರಾಜರುಗಳೆಲ್ಲಿ? ಈ ಅದ್ಭುತ ಅನುಭವ ಎಷ್ಟು ಅನಿರ್ವಚನೀಯ ವಾಗಿದೆಯೆಂದರೆ ಎಲ್ಲ ಲೋಕಗಳೂ, ಅದರಲ್ಲಿ ನಡೆಯುವುದೆಲ್ಲವೂ ಕನಸಿನಾಟದಂತೆ ಕಾಣುತ್ತದೆ. ‘ಹೆಮ್ಮೆಗಳನುಳಿದು ವಿಸ್ಮಿತರಾದವರನ್ನೆಗಂ ಮೊದಲದೆಂತಿರುತಿರ್ದರಂತೆ ಕನಸೆನಲ್ ತೋರ್ಪ ತಮ್ಮ ಲೋಕಂಗಳಿಗೆ ಬಂದಿರ್ದರು’. ಈ ದರ್ಶನದ ಉತ್ಕಟತೆಯಲ್ಲಿ ಬಕದಾಲ್ಭ್ಯ ‘ಕೋವಿದರ್ ಗರ್ವಮಂ ಮಾಡಲಾಗದು ಪಾರ್ಥ’ ಎಂದಷ್ಟೇ ಅನ್ನುತ್ತಾನೆ. ಮತ್ತೇನು ಹೇಳಲು ಸಾಧ್ಯ?

ಇಲ್ಲಿಯತನಕ ನಾನು ತೋರಿಸಲು ಪ್ರಯತ್ನಿಸಿರುವುದು ‘ಜೈಮಿನಿ ಭಾರತ’ ಒಂದು ಸರಳ, ಪರಂಪರಾಗತ ಮಾರ್ಗದ, ಸಾಹಸ ಪ್ರಧಾನ ಕೃತಿಯಾಗಿರದೆ ಎಷ್ಟು ಸಂಕೀರ್ಣವಾಗಿದೆ, ಕಾವ್ಯದ ವಿವಿಧ ವಸ್ತು ಮತ್ತು ಶಿಲ್ಪವಿನ್ಯಾಸಗಳು ಹೇಗೆ ಒಂದನ್ನೊಂದು ಘರ್ಷಿಸಿ ಒಂದು ಅಪೂರ್ವ ಜೀವನಾನುಭವವನ್ನು ಕೊಡುತ್ತವೆ ಎನ್ನುವುದನ್ನು ‘ಜೈಮಿನಿ ಭಾರತ’ದ ಸಂಕೀರ್ಣತೆಗೆ ಮುಖ್ಯ ಸಾಧನವಾಗಿರುವುದು ಕೃತಿಯುದ್ಧಕ್ಕೂ ಹಾಸುಹೊಕ್ಕಾಗಿರುವ ‘ಪರಿಭ್ರಮಣ’ದ ಚಿರಂತನ ಪ್ರತೀಕ ಮತ್ತು ಅದಕ್ಕೆ ಪುಷ್ಟಿಯಾಗಿ ಬರುವ ‘ಶೋಧ’ದ ಮತ್ತು ‘ಸಾವು ಪುನರ್ಜನ್ಮ’ದ ಪ್ರತೀಕಗಳು.

ಮತ್ತೊಮ್ಮೆ ಸಂಕ್ಷೇಪವಾಗಿ ಹೇಳಬೇಕೆಂದರೆ, ‘ಜೈಮಿನಿ ಭಾರತ’ ಕಾವ್ಯದ ಗತಿ ಪರಸ್ಪರ ವಿರುದ್ಧವಾದ ಇಬ್ಬಗೆಯ ಗತಿಯಾಗಿದೆ. ಒಂದು ಪಾತಳಿಯಲ್ಲಿ ಕಾವ್ಯ, ಪರಂಪರಾಗತ ಮೌಲ್ಯಗಳು (ವ್ಯಾಸ ಮಹರ್ಷಿಯು ಧರ್ಮರಾಯನಿಗೆ ಉಪದೇಶಿಸುವ ‘ಧರ್ಮಸಾರ’ವು ಅತ್ಯಂತ ಕನ್ಸರ್ವೇಟಿವ್ ಮತ್ತು ಸಮೀತವಾಗಿದೆ (೫ನೇ ಸಂಧಿ : ೪೮-೬೨), ಕ್ಷಾತ್ರಧರ್ಮ ಮತ್ತು ಯುದ್ಧಭೂಮಿಯ ಮೌಲ್ಯಗಳು-ಇದನ್ನು ಆದರ್ಶವನ್ನಾಗಿ ಎತ್ತಿಹಿಡಿದರೆ, ಮತ್ತೊಂದು ಪಾತಳಿಯಲ್ಲಿ ಈ ಎಲ್ಲಾ ಮೌಲ್ಯಗಳ ನಿರರ್ಥಕತೆಯನ್ನು ಸೂಚಿಸುತ್ತಾ, ತ್ಯಾಗ-ಭಕ್ತಿ ಇವು ಗಳನ್ನು ಎತ್ತಿಹಿಡಿಯುತ್ತದೆ. ಈ ಇಬ್ಬಗೆಯ ಗತಿಯಿಂದುದ್ಭವಿಸುವ ಘರ್ಷಣೆಯಲ್ಲಿ ನಮಗೆ ಕಾವ್ಯದ ಅಂತರಾಳದಲ್ಲಿ ಗೋಚರಿಸುವ ಮೌಲ್ಯಗಳು ಮಾನವೀಯತೆಯ, ದಾಂಪತ್ಯ ಜೀವನದ, ‘ಮನೆ’ಯ ಮೌಲ್ಯಗಳು. ಒಂದು ದೃಷ್ಟಿಯಿಂದ ಬಕದಾಲ್ಭ್ಯ ಮುನಿಯ ‘ವಿರಾಟ್ ದರ್ಶನ’ ಮನದಟ್ಟು ಮಾಡುವಂತೆ ಈ ಕ್ಷುದ್ರ ಜಗತ್ತಿನಲ್ಲಿ ಆಗುವ ಆಗಲಾರದ ಯಾವುದಕ್ಕೂ ಅರ್ಥವಿಲ್ಲ. ಎಲ್ಲವೂ ಕನಸಿನಂತೆ. ಆದರೆ ಅದರರ್ಥ ಈ ಜಗತ್ತನ್ನು ತ್ಯಜಿಸಬೇಕೆಂದೇನೂ ಅಲ್ಲ. ಈ ಭೂಮಿಯಲ್ಲಿ ಇರುವ ತನಕ ನಮ್ಮ ನಮ್ಮ ಬದುಕನ್ನು ನಾವು ನಡೆಸಲೇಬೇಕಲ್ಲ. ಆ ಬದುಕಿನ ಮೌಲ್ಯಗಳು ಕವಿಯ ದೃಷ್ಟಿಯಲ್ಲಿ ದಾಂಪತ್ಯ ಜೀವನದ ಮೌಲ್ಯಗಳು. ಅದಕ್ಕೆಂದೇ ಕವಿ ಕೃಷ್ಣನ ಸಂಸಾರ ಚಿತ್ರವನ್ನೂ, ಆ ಸಂಸಾರದಲ್ಲಿನ ಅತ್ತೆ ಸೊಸೆಯರ ಕಲಹವನ್ನೂ (ಕಲಹ ವಿನೋದಕ್ಕಾಗಿ ಇದ್ದರೂ ಕೂಡಾ) ಚಿತ್ರಿಸುತ್ತಾನೆ. ಅಲ್ಲದೆ ಸಾತ್ವಿಕ ಶಿರೋಮಣಿ ಚಂದ್ರಹಾಸನ ವಿವಾಹವನ್ನೂ ಮತ್ತು ವಿಷಯೆಯ ಭೋಗಾನುಭವವನ್ನೂ ಚಿತ್ರಿಸುತ್ತಾನೆ. ಎಲ್ಲದಕ್ಕಿಂತ ಹೆಚ್ಚಾಗಿ ಕಾವ್ಯ ಮಾನವಧರ್ಮವನ್ನು, ದೈವತ್ವಕ್ಕಿಂತ ಹೆಚ್ಚಾಗಿ ಮಾನವತ್ವವನ್ನು ಮೆರೆಯುವುದು ಸುಧನ್ವ ಪ್ರಭಾವತಿ ಇವರ ಸುರತ ವರ್ಣನೆಯಲ್ಲಿ.

ಯುದ್ಧವು ಕರೆಯುತ್ತಿರುವಾಗ ರಾಜಾಜ್ಞೆ ಮತ್ತು ರಣೋತ್ಸಾಹ ಇವೆರಡನ್ನೂ ಮೀರಿ, ಒಬ್ಬ ಶೂರ ತರುಣ ಧರ್ಮವಿದೆಂದು ತನ್ನ ಪತ್ನಿಯೊಡನೆ ಯಾವುದೇ ಭೀತಿ ಅಥವಾ ಪಶ್ಚಾತ್ತಾಪವಿಲ್ಲದೆ ಕೂಡುವುದನ್ನು ಅಷ್ಟೇ ಧೈರ್ಯದಿಂದ ವಿಸ್ತಾರವಾಗಿ ವರ್ಣಿಸುವ ಕಾವ್ಯ ಕನ್ನಡ ಜೈಮಿನಿ ಭಾರತವನ್ನು ಬಿಟ್ಟರೆ ಪ್ರಾಯಶಃ ಇತರ ಸಾಹಿತ್ಯಗಳಲ್ಲಿ ನಮಗೆ ಕ್ವಚಿತ್ತಾಗಿ ಕಾಣಿಸುತ್ತದೆ. ಸುಧನ್ವ ಪ್ರಭಾವತಿಯರ ಸಂಭೋಗ, ಮನೋವೈಜ್ಞಾನಿಕ ದೃಷ್ಟಿಯಿಂದ ಎಷ್ಟು ಸಹಜವಾಗಿದೆಯೋ ಅಷ್ಟೇ ಮಾನವಧರ್ಮದ ದೃಷ್ಟಿಯಿಂದ ಮೌಲಿಕವಾಗಿದೆ. ಹೋಮರ್‌ನ ‘ಒಡಿಸ್ಸಿ’ಯಂತೆ ‘ಜೈಮಿನಿ ಭಾರತ’, ‘ಮನೆ’ಯನ್ನೂ, ‘ಮನೆ’ಯ ಮೌಲ್ಯಗಳನ್ನೂ ಎತ್ತಿಹಿಡಿ ಯುತ್ತದೆ. ಕಾವ್ಯದಲ್ಲಿ ಸದಾ ನೆನಪಿನಲ್ಲಿ ಉಳಿಯುವ ದೃಶ್ಯಗಳು ಬಾರಿಬಾರಿಗೂ ಬರುವ ಯುದ್ಧಗಳಲ್ಲ, ಕೃಷ್ಣನು ತನ್ನ ತಾಯಿ, ಹೆಂಡತಿಯರು ಮತ್ತು ಮಕ್ಕಳೊಡನೆ ವಿನೋದದಿಂದ ಭೋಜನ ಮಾಡುವುದು, ಸುಧನ್ವ ಪ್ರಭಾವತಿಯರ ಸಮಾಗಮ, ಮಕ್ಕಳಿಲ್ಲದ ಸೀತೆ ಶೀಶುಲೀಲೆಯನ್ನು ಕಲ್ಪಿಸಿಕೊಂಡು ಮರುಗುವುದು, ದಾದಿ ಅನಾಥ ಬಾಲಕ ಚಂದ್ರಹಾಸನನ್ನು ಬೆಳೆಸುವುದು, ಚಂದ್ರಹಾಸ ವಿಷಯೆಯರ ತುಂಬು ದಾಂಪತ್ಯಜೀವನ ಈ ದೃಶ್ಯಗಳು. ಈ ದೃಷ್ಟಿಯಿಂದ ಸ್ತ್ರೀ ರಾಜ್ಯದ ರಾಣಿ ಪ್ರಮೀಳೆಯನ್ನು ಅರ್ಜುನನು ವಿವಾಹವಾಗುವಂತೆ ಅಶರೀರ ವಾಣಿಯಾಗುವುದು ಮತ್ತು ಅದರಂತೆ ಅರ್ಜುನನು ಪ್ರಮೀಳೆಯನ್ನು ವರಿಸುವುದು ಅರ್ಥ ವತ್ತಾಗಿವೆ (‘ಒಡಿಸ್ಸಿ’ಯಲ್ಲಿ ಯೂಲಿಸಿಸ್ ‘ಸರ್ಸಿ’ಯನ್ನು ಸ್ವೀಕರಿಸುವಂತೆ).

ರುಜುವಾತು-೨೭; ೧೯೮೭