ನಮ್ಮ ಹಳೆಯ ಕಾವ್ಯಕೃತಿಗಳಲ್ಲಿ ಬಹಳ ಲೋಕಪ್ರಿಯವಾದದ್ದೆಂದರೆ ಲಕ್ಷ್ಮೀಶನ ‘ಜೈಮಿನಿಭಾರತ’. ಈ ಸಂಗತಿ ಕಾವ್ಯದ ಲೋಕಪ್ರಿಯತೆಯ ಬಗ್ಗೆ ಒಂದಿಷ್ಟು ಯೋಚಿಸು ವಂತೆ ಮಾಡುತ್ತದೆ. ಹರಿಹರ-ಕುಮಾರವ್ಯಾಸ ಸರಳತೆ ಮತ್ತು ನಿರರ್ಗಳತೆ- ಈ ಕಾವ್ಯದಲ್ಲಿ ಕಾಣುವುದಿಲ್ಲ. ಆದರೆ ಈ ಕಾವ್ಯವನ್ನೋದಿ ಅರ್ಥಮಾಡಿಕೊಂಡರೆ ತಿಳುವಳಿಕೆಯನ್ನು ಪಡೆದ ಅನುಭವವುಂಟಾಗುವುದೇ ಈ ಲೋಕಪ್ರಿಯತೆಗೆ ಮುಖ್ಯಕಾರಣವಾಗಿದೆ. ಕಾವ್ಯ ವನ್ನು ಓದಿದವನಿಗೆ ರಸಾನುಭವದ ಜೊತೆಗೆ ಕಾವ್ಯಜ್ಞತೆಯೂ ದೊರಕುವಂತಾದರೆ ಅವನ ಆತ್ಮಗೌರವ ಹೆಚ್ಚಾಗುತ್ತದೆ. ‘ಜೈಮಿನಿ ಭಾರತ’ದ ಲೋಕಪ್ರಿಯತೆಯ ರಹಸ್ಯ ಇದಾಗಿದೆ.

‘ಜೈಮಿನಿ ಭಾರತ’ ಪಾಂಡವರ ಅಶ್ವಮೇಧಮಾಗದ ಸಾಹಸವನ್ನು ಕಥೆ ಮಾಡಿ ಹೇಳುತ್ತದೆ. ಅಶ್ವಮೇದ ಒಂದು ವರ್ಷದವರೆಗೆ ನಡೆಯಬೇಕಾದ ಯಜ್ಞ. ಚೈತ್ರ ಮಾಸದ ಹುಣ್ಣಿಮೆಯ ದಿನ ಅಶ್ವವನ್ನೂ ಪೂಜಿಸಿ ಸಂಚಾರಕ್ಕೆ ಬಿಟ್ಟ ನಂತರ ಅದು ತಿರುಗಿ ಮುಂದಿನ ವರ್ಷದ ಅದೇ ದಿನ ತಿರುಗಿ ಬರಬೇಕು. ಈ ಕಾಲಾವಕಾಶ ಅನೇಕ ಅದ್ಭುತ ವಾದ ಅನುಭವಗಳಿಗೆ ಎಡೆ ಮಾಡಿಕೊಡುತ್ತದೆ. ಭದ್ರಾವತಿಯ ಯೌವನಾಶ್ವನ ಹತ್ತಿರ ಇದ್ದ ಈ ಅಶ್ವವನ್ನು ಪಾಂಡವರು-ಭೀಮ ಮತ್ತು ಮೇಘನಾದ-ಕದ್ದು ತರುತ್ತಾರೆ. ಕುದುರೆ ಯನ್ನು ಕದ್ದವರು ಪಾಂಡವರೆಂದು ತಿಳಿದ ಯೌವನಾಶ್ವ ಕೃಷ್ಣ ಮತ್ತು ಯುಧಿಷ್ಠಿರನ ಬಗ್ಗೆ ಇರುವ ಭಕ್ತಿಯಿಂದ ತಾನೇ ಕುದುರೆಯನ್ನು ಒಪ್ಪಿಸಿಕೊಡುತ್ತಾನೆ. ಈ ಕಥಾಬೀಜದಲ್ಲಿ ರುವ ನೈತಿಕ ಹಾಗೂ ತಾತ್ವಿಕ ಸಂದಿಗ್ಧತೆಯಿಂದಾಗಿ ಮುಂದಿನ ಕತೆಗಳೆಲ್ಲ ಹುಟ್ಟಿಕೊಳ್ಳು ತ್ತವೆ.

ಈ ಸಂದಿಗ್ಧತೆ ಅನೇಕ ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ಪಾಂಡವರಿಗೆ ಈ ಯಜ್ಞದ ಅವಶ್ಯಕತೆ ಇತ್ತೇ? ಗೋತ್ರಹನನದ ಪಾಪವನ್ನು ಕಳೆದುಕೊಳ್ಳಲು ಯುಧಿಷ್ಠಿರ ಈ ಯಜ್ಞಕ್ಕೆ ಮನಸ್ಸು ಮಾಡಿದ. ವ್ಯಾಸನಾಗಲಿ, ಕೃಷ್ಣನಾಗಲಿ ಎಷ್ಟು ಸಮಾಧಾನ ಹೇಳಿದರೂ ಯುಧಿಷ್ಠಿರನ ಮನಸ್ಸು ಸ್ತಿಮಿತಕ್ಕೆ ಬರುವುದಿಲ್ಲ. ಧರ್ಮರಾಜನ ಈ ಮನಸ್ಥಿತಿಯಿಂದಾಗಿ ಈ ಕೃತಿಯಲ್ಲಿ ಎರಡು ಜಾತಿಯ ಪಾತ್ರಗಳು ಹುಟ್ಟಿಕೊಳ್ಳುತ್ತವೆ. ಕೃಷ್ಣ ತಮ್ಮ ಕಡೆಗಿದ್ದರೂ ಅಶ್ವಮೇಧವನ್ನು ಹಮ್ಮಿಕೊಳ್ಳುವ ಪಾಂಡವರು ಒಂದು ಗುಂಪಾಗಿದ್ದರೆ, ಕುದುರೆಯನ್ನು ಕಟ್ಟಿಹಾಕಿ ಪಾಂಡವರನ್ನು ಎದುರಿಸುತ್ತ ಕೃಷ್ಣನಲ್ಲಿ ನಿಶ್ಚಲವಾದ ಭಕ್ತಿಯುಳ್ಳವರು ಇನ್ನೊಂದು ಗುಂಪಾಗುತ್ತಾರೆ. ಪಾಂಡವರು ಮತ್ತೊಮ್ಮೆ ತಮ್ಮನ್ನು ಪರೀಕ್ಷೆಗೆ ಒಡ್ಡಿಕೊಳ್ಳು ತ್ತಾರೆ. ಹಳೆಯ ದ್ವೇಷದ ಬೆಂಕಿ ಇನ್ನು ಆರಿಲ್ಲವೆನ್ನುವುದನ್ನು ತೋರಿಸಲು ಜ್ವಾಲೆ ಮತ್ತು ಬಭ್ರುವಾಹನನ ಪ್ರಸಂಗಗಳು ಬಂದು ಅರ್ಜುನನ ಪ್ರಾಣವನ್ನೇ ಬಲಿ ಕೇಳುತ್ತವೆ. ವೃಷಕೇತು, ಮೇಘನಾದ ಮೊದಲಾದ ಹೊಸ ಪೀಳಿಗೆಯವರು ಕುರುಕ್ಷೇತ್ರದ ನೆನಪಿನಿಂದ ಪಾರಾಗಿ ಹೊಸ ಸ್ನೇಹವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಪಾಂಡವರ ಕಣ್ಣುಗಳು ಹಸ್ತಿನಾಪುರದ ಹೊರಗಿನ ಜಗತ್ತನ್ನು ನೋಡತೊಡಗುತ್ತವೆ.

‘ಜೈಮಿನಿ ಭಾರತ’ ಒಂದು ದೃಷ್ಟಿಯಿಂದ ವೀರಗಾಥೆ. ಪಾಂಡವರನ್ನು ಎದುರಿಸಿದ ವೀರರೆಲ್ಲ ಜೀವದ ಹಂಗುದೊರೆದು ಕಾದಾಡುತ್ತಾರೆ. ಆದರೆ ಈ ವೀರಗಾಥೆಯ ಒಳಗೆ ಕ್ಷಾತ್ರಮೌಲ್ಯಗಳನ್ನು ಎದುರಿಸುವ ಒಂದು ವಿಮರ್ಶೆಯೂ ಇದೆ. ಯೌವನಾಶ್ವ ಸೋಲು ತ್ತಾನೆ, ಆದರೆ ಸೋಲಿನ ಅಂಚಿನಲ್ಲಿ ಇರುವಾಗಲೇ ವೈರಿಗಳ ಉದ್ದೇಶವನ್ನು ತಿಳಿದವನು ಕುದುರೆಯನ್ನು ಒಪ್ಪಿಸಿಕೊಡುತ್ತಾನೆ. ಅಂದರೆ ಅವನಿಗೆ ವೀರವೆನ್ನುವುದು ಕೃಷ್ಣದರ್ಶನ ದಲ್ಲಿ. ಯೌವನಾಶ್ವವನ್ನು ಬಿಟ್ಟರೆ ಉಳಿದೆಲ್ಲ ವೀರರು ಅರ್ಜುನನ್ನು ಯುದ್ಧದಲ್ಲಿ ಸೋಲಿಸುತ್ತಾರೆ. ಹಂಸಧ್ವಜ, ಸುಧನ್ವ, ಸುರಥ, ತಾಮ್ರಧ್ವಜ, ಮಯೂರಧ್ವಜ, ಬಭ್ರು ವಾಹನ ಮೊದಲಾದವರೆಲ್ಲ ಅಂಥ ವೀರರು. ಆದರೆ ಅವರೆಲ್ಲ ಕೃಷ್ಣ ಭಕ್ತರೂ ಹೌದು. ಇಲ್ಲಿಯ ತಾತ್ವಿಕ ಸಮಸ್ಯೆ ಎಂದರೆ ಕೃಷ್ಣನ ಸಹಾಯವಿದ್ದೂ ಪಾಂಡವರು ಅಶ್ವಮೇಧ ಯಜ್ಞಕ್ಕೆ ಮನಸ್ಸು ಮಾಡಿದ್ದೇಕೆ ಎಂಬುದು. ‘ಹರಿ ಸೂವಿಪದೊಳಿರ್ದು ವಾಜಿಮೇಧ ಮೇಕೆ ಅಮೃತಮಿರಲಳೆಗೆಳಸಿದಂತಾಯ್ತು’ ಎಂದು ಸ್ವತಃ ಅಗ್ನಿಯೇ ಅರ್ಜುನನ್ನು ಕೇಳುತ್ತಾನೆ. ಅಶ್ವಮೇಧ ಕೂಡ ಕೃಷ್ಣನ ಆದೇಶವೇ ಎಂದು ಅರ್ಜುನ ಈ ಪ್ರಶ್ನೆಗೆ ಉತ್ತರವೀಯುವುದು ಒಂದು ದೃಷ್ಟಿಯಿಂದ ಸರಿಯಾಗಿದ್ದರೂ ಅರ್ಜುನನಿಗೆ ಕೂಡ ಕೃಷ್ಣನ ಉದ್ದೇಶ ಸ್ಪಷ್ಟವಾಗಿ ತಿಳಿದಿಲ್ಲವೆಂದು ಗೊತ್ತಾಗುತ್ತದೆ. ಕೃಷ್ಣನ ಅನನ್ಯಭಕ್ತನಾದ ಅರ್ಜುನ ಕೃಷ್ಣನನ್ನು ಒಂದು ಗೃಹೀತ ಸತ್ಯವನ್ನಾಗಿ ಸ್ವೀಕರಿಸಿದ್ದಾನೆಯೇ ಹೊರತು ಕೃಷ್ಣನನ್ನು ಹುಡುಕಿಕೊಂಡು ಹೋಗುವುದಿಲ್ಲ. ‘ಜೈಮಿನಿ ಭಾರತ’ದಲ್ಲಿ ಅರ್ಜುನನಿಗೆ ಕೃಷ್ಣನ ಸಾರಥ್ಯವಿಲ್ಲ. ಬಭ್ರುವಾಹನನ ಬಾಣದಿಂದ ಅರ್ಜುನ ಸತ್ತು ಹೋದಾಗ ಅವನನ್ನು ಬದುಕಿಸಲು ಮಾತ್ರ ಕೃಷ್ಣ ಬರುತ್ತಾನೆ. ಕೃಷ್ಣ ‘ಪಾಂಡವ ಸ್ಥಾಪನಾಚಾರ್ಯ’, ಅದು ಅವನ ಜೀವನದ ಉದ್ದೇಶವೂ ಹೌದು. ಆದರೆ ‘ಪಾಂಡವರು ಕೃಷ್ಣನನ್ನು ಪಡೆದಿ ದ್ದಾರೆಯೇ ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ.

ಪಾಂಡವರಿಗೆ ಎದುರಾದ ವೀರರನ್ನು ಈ ಪ್ರಶ್ನೆ ಕಾಡುವುದಿಲ್ಲ. ಅವರದು ಸಂಶಯದ ಗಾಳಿ ಕೂಡ ಸೋಕದ ಕೃಷ್ಣಭಕ್ತಿ. ಯೌವನಾಶ್ವನಿಗೆ ಯಜ್ಞಸ್ವರೂಪನಾದ ಕೃಷ್ಣ ಸಿಕ್ಕರೆ ಯಜ್ಞ ಬೇಕಾಗಿಲ್ಲ. ಅದಕ್ಕಾಗಿ ಕುದುರೆಯನ್ನು ಒಪ್ಪಿಸಿಕೊಡುತ್ತಾನೆ. ಸುಧನ್ವ ನಿಸ್ಸೀಮ ಕೃಷ್ಣ ಭಕ್ತ; ಕಾದು ಎಣ್ಣೆಯ ಕೊಪ್ಪರಿಗೆಯಲ್ಲಿ ಹಾಕಿದರೂ ಅವನು ಸುಡುವುದಿಲ್ಲ. ಆದರೆ ರಣಾಂಗಣದಲ್ಲಿ ಎದುರಾದರೆ ಕೃಷ್ಣನೂ ಅವನೆದುರು ನಿಲ್ಲಲಾರ. ಭಕ್ತಿ ಮತ್ತು ವೀರ ಇವೆರಡರ ಸಂಗಮ ಇಲ್ಲಿ ಅಪೂರ್ವವಾಗಿದೆ. ಕ್ಷಾತ್ರಮೌಲ್ಯಗಳನ್ನಿಟ್ಟುಕೊಂಡವರು ಮಾತ್ರ ಅವುಗಳನ್ನು ಎದುರಿಸಬಲ್ಲರು ಎಂಬ ಧ್ವನಿ ಇಂಥ ಪ್ರಸಂಗಗಳಲ್ಲಿದೆಯೆಂದು ತೋರುತ್ತದೆ. ಯಾವ ಹೊತ್ತಿಗೆ ವೀರವನ್ನು ಪ್ರಕಟಿಸಬೇಕು ಮತ್ತು ಯಾವ ಹೊತ್ತಿಗೆ ವಿನಯದಿಂದ ಇರಬೇಕು ಎನ್ನುವುದನ್ನು ಬಭ್ರುವಾಹನನ ನೇರವಾದ ನಡೆನುಡಿಗಳು ಕನ್ನಡಿಯಂತೆ ಪ್ರತಿಬಿಂಬಿಸುತ್ತವೆ. ಕ್ಷಾತ್ರಧರ್ಮದ ಶ್ರೇಷ್ಠತೆಯೊಂದಿಗೆ ಅದರ ಇತಿಮಿತಿ ಗಳೇನು ಎನ್ನುವುದನ್ನು ಅವನ ನಡೆವಳಿಕೆಯಿಂದ ತಿಳಿಯಬಹುದಾಗಿದೆ. ಕ್ಷಾತ್ರಧರ್ಮವನ್ನು ಕಟ್ಟುನಿಟ್ಟಾಗಿ ಪರಿಪಾಲಿಸಿದರೆ ದುರಂತ ತಪ್ಪಿದ್ದಲ್ಲ ಎನ್ನುವುದಕ್ಕೆ ಬಭ್ರುವಾಹನನ ಕತೆ ಒಂದು ಉದಾಹರಣೆಯಾಗುತ್ತದೆ. ರಣಭೂಮಿಯಲ್ಲಿ ತಂದೆ ತಂದೆಯಲ್ಲ, ಮಗ ಮಗ ನಲ್ಲ, ಬಭ್ರುವಾಹನನಿಗೆ ಅರ್ಜುನನ ಪೂರ್ವೇತಿಹಾಸವೆಲ್ಲ ಗೊತ್ತು. ಇಂದ್ರಕೀಲಪರ್ವತ ದಲ್ಲಿ ಅರ್ಜುನ ಶಿವನನ್ನು ಕುರಿತು ತಪಸ್ಸು ಮಾಡಿ ಅವನಿಂದ ಪಾಶುಪತಾಸ್ತ್ರವನ್ನು ಪಡೆದಿದ್ದ. ಕರ್ಣನನ್ನು ಕೊಂದದ್ದು ಆ ಅಸ್ತ್ರದಿಂದ. ಆದರೆ ಕರ್ಣ ಪ್ರಯೋಗಿಸಿದ್ದ ಅಸ್ತ್ರ ಮರುಹುಟ್ಟನ್ನು ಪಡೆದು ಈಗ ಬಭ್ರುವಾಹನನ ಕೈಗೆ ಬಂದಿದೆ. ಬಭ್ರುವಾಹನ ವೃಷಕೇತು ಮತ್ತು ಅರ್ಜುನರಿಬ್ಬರನ್ನು ಕೊಂದು ಹಳೆಯ ಸೇಡು ತೀರಿಸುತ್ತಾನೆ. ಆದರೆ ಪ್ರತೀಕಾರವೆಂದರೆ ವೈಯಕ್ತಿಕವಲ್ಲ. ಅದು ಒಮ್ಮೆ ಸರ್ವಾಸ್ತ್ರವಾಗಿ, ಇನ್ನೊಮ್ಮೆ ಜ್ವಾಲೆ ಯಾಗಿ, ಶಾಪ ಉಃಶಾಪಗಳಲ್ಲಿ ಸತ್ತು ಬದುಕುತ್ತ, ಒಂದು ಸ್ವತಂತ್ರ ಶಕ್ತಿಯಾಗಿ ಬೆನ್ನಟ್ಟು ತ್ತದೆ. ಅರ್ಜುನ ಬಭ್ರುವಾಹನನನ್ನು ಮಗನೆಂದು ಗುರುತಿಸದಿದ್ದದ್ದಕ್ಕೆ ಕಾರಣವೆಂದರೆ ಈ ಪ್ರತೀಕಾರದ ವ್ಯಕ್ತಿನಿರಪೇಕ್ಷವಾದ ಶಕ್ತಿ.

‘ಜೈಮಿನಿ ಭಾರತ’ದ ಕಥನ ತಂತ್ರಗಳು ಸ್ಪಷ್ಟವಾಗುವುದು ಬಭ್ರುವಾಹನನ ಕತೆಯಲ್ಲಿ. ಈ ತಂತ್ರವೆಂದರೆ ಕತೆ ತನ್ನ ಅನುವಾದವನ್ನು ತಾನೇ ಮಾಡಿಕೊಳ್ಳುವುದು. ಅಶ್ವಮೇಧ ಯಜ್ಞಕ್ಕೆ ಕಾರಣವೆಂದರೆ ಗೋತ್ರಹನನದ ಪಾಪ. ಈ ಪಾಪ ಧರ್ಮರಾಜನ ಮನಸ್ಸಿನಲ್ಲಿಯ ವಿಷಾದಕ್ಕಿಂತ ಹೆಚ್ಚು ಆಳವಾಗಿದೆ. ಈ ಪಾಪದ ಲೆಕ್ಕ ತೀರಬೇಕಾದರೆ ಮಣಿಪುರಕ್ಕೇ ಹೋಗಬೇಕು. ವೃಷಕೇತು ಸತ್ತ ಮೇಲೆ ಅರ್ಜುನ ದುಃಖದಿಂದ ‘ಚಾಪದ ಕೊನೆಗೆ ಮೊಗವನಿಟ್ಟೊರೆಯಾಗಿ’ ನಿಂತಾಗ ಅವನನ್ನು ಕುರಿತು ಬಭ್ರುವಾಹನ ಹೇಳುವ ಮಾತು ಗಳಿವು.

ಎಲೆ ಪಾರ್ಥ ವೈಶ್ಯಸಂಭವರಾವಹೆವು ನಿಮ್ಮ
ಬಲ ಸಮಾಜದೊಳಂಬುಗಳ ಪಸರಮಂ ಬಿಟ್ಟು
ಗೆಲವಿನಗ್ಗದ ಲಾಭಮಂ ಪಡೆದೆವದಟರ ಶಿರಂಗಳಂ ಕೊಂಡೆವರಸಿ |
ಕಲಿಗಳೈತಂದು ಜೀವಕ್ಕೆ ಸಂಚಕಾರಮಂ
ಸಲೆ ಬೇಡಿದೊಡೆ ಕೊಟ್ಟೆವಿಚ್ಛೆಯುಳ್ಳೊಡೆ ನಿನ್ನ
ತಲೆಯ ಬೆಲೆಗಿದೆ ಸಾಹಸದ್ರವ್ಯಮೆನ್ನೊಳಿಂದರ್ಜುನಿ ಪಚಾರಿಸಿದನು ||   (೨೫೩೦)

ವಂಶದ ಪ್ರತೀಕಾರ ಶಕ್ತಿ ಬಭ್ರುವಾಹನನ ಮುಖಾಂತರವಾಗಿ ಅರ್ಜುನನ ತಲೆಯ ಬೆಲೆಯನ್ನು ಕೇಳುತ್ತಿದೆ. ಬಭ್ರುವಾಹನ ಹುಟ್ಟಿನಿಂದ ಕ್ಷತ್ರಿಯ. ಆದರೆ ಚಿತ್ರಾಂಗದೆಗೆ ವೈಶ್ಯನಿಂದ ಹುಟ್ಟಿರಬೇಕು ಎಂದು ಅರ್ಜುನ ಅವನನ್ನು ಅವಮಾನಿಸಿದ್ದರಿಂದ ಕ್ಷತ್ರಿಯನಿದ್ದ ವನು ವೈಶ್ಯನಾಗಿ ರೂಪಾಂತರ ಹೊಂದುತ್ತಾನೆ. ಸಾಹಸದ ದ್ರವ್ಯ ಒಂದಿದ್ದರೆ ಅದನ್ನು ಕೊಟ್ಟು ಏನನ್ನೂ ಪಡೆಯಬಹುದೆಂಬ ಸೊಕ್ಕಿನಿಂದಲೇ ಮಾತಾಡುತ್ತಾನೆ. ಕ್ಷಾತ್ರಧರ್ಮದ ಮೂಲ ಶಕ್ತಿಯಾದ ವೀರ ಕೊಲೆಗಡುಕತನವಾಗಿ ಮತ್ತೆ ವ್ಯಾಪಾರವಾಗಿ ರೂಪಾಂತರ ಗೊಂಡಾಗ ಹಿಂಸೆ ತನ್ನ ಮನುಷ್ಯಸ್ವಭಾವವನ್ನು ಕಳೆದುಕೊಳ್ಳುತ್ತದೆ. ಅರ್ಜುನ ಬಭ್ರು ವಾಹನನ ಹುಟ್ಟನ್ನು ಪ್ರಶ್ನಿಸಿದರೆ ಬಭ್ರುವಾಹನ ಅರ್ಜುನನ ವಂಶವನ್ನೇ ಅಣಕಿಸುತ್ತಾನೆ. ಅರ್ಜುನನನ್ನು ಬದುಕಿಸಲು ಬಭ್ರುವಾಹನ ಪಾತಾಳಲೋಕದ ಮೇಲೆ ದಾಳಿ ಮಾಡಿ ಸಂಜೀವಿನಿ ಮಣಿಯನ್ನು ತಂದ ಮೇಲೆ ಕೂಡ ಧೃತರಾಷ್ಟ್ರನೆಂಬ ಒಂದು ಸರ್ಪ ಅರ್ಜುನನ ತಲೆಯನ್ನು ಕದ್ದುಕೊಂಡು ಹೋಗುತ್ತದೆ. ಈ ಸರ್ಪದ ಹೆಸರು ಧೃತರಾಷ್ಟ್ರ ಎಂದಿರುವುದು ಕೂಡ ಧ್ವನಿಪೂರ್ಣವಾಗಿದೆ. ಖಾಂಡವವನದಲ್ಲಿ ಅರ್ಜುನ ಹುಟ್ಟಿಸಿದ ಬೆಂಕಿ ಇನ್ನು ಅರಿಲ್ಲ. ಬೆಂಕಿ ಮತ್ತು ಹಾವಿನ ಗುಣಗಳೆರಡೂ ಪ್ರತಿಕಾರದಲ್ಲಿವೆ. ಅಗ್ನಿ ಮತ್ತು ಸರ್ಪಗಳ ಸಂಬಂಧದಿಂದ ಅರ್ಜುನನಿಗೆ ಬಿಡುಗಡೆ ಇಲ್ಲ. ಅದಕ್ಕೆ ಕಾರಣವೆಂದರೆ ಭೀಷ್ಮ ಮತ್ತು ಕರ್ಣರು ಅರ್ಜುನನಿಂದ ಸತ್ತವರು. ಬೆಂಕಿ ಮತ್ತು ಹಾವುಗಳು ಸ್ವತಂತ್ರ ಶಕ್ತಿಗಳಾಗಿ ಮಹಾಭಾರತದ ಅನೇಕ ಸಂದರ್ಭದಲ್ಲಿ ಹರಿದಾಡುತ್ತ, ತೋರಿ ಅಡಗುತ್ತವೆ. ಬಭ್ರು ವಾಹನನ ಕತೆ ಕೊನೆ – ಕೊನೆಯ ಪರ್ವದಲ್ಲಿ ಬಂದಿರುವುದರಿಂದ ಅದು ಉಳಿದ ಪ್ರಸಂಗ ಗಳನ್ನು ಅನುವಾದ ಮಾಡಲು ಸಮರ್ಥವಾಗಿದೆ. ಚಿತ್ರಾಂಗದೆ ಉಲೂಪಿಯರು ಮಹಾ ಭಾರತದ ಮುಖ್ಯ ಕತೆಯ ಸಂದರ್ಭದ ಹೊರಗಿದ್ದರೂ ಪಾಂಡವರ ದೈವನಿರ್ಣಯಕ್ಕೆ ಬಾಧ್ಯರಾಗಿದ್ದಾರೆ.

ಒಂದು ಶಬ್ದ ಇನ್ನೊಂದು ಶಬ್ದದ ನಿರ್ವಚನವನ್ನು ಪ್ರಕಟಿಸುವಂತೆ ಒಂದು ಕತೆ ಇನ್ನೊಂದು ಕತೆಯ ಅರ್ಥವನ್ನು ಸ್ಪಷ್ಟಪಡಿಸುತ್ತದೆ. ಬಭ್ರುವಾಹನನ ಕತೆ ಮಹಾಭಾರತ ದಲ್ಲಿ ಅಡಗಿರುವ ಅಂತರ್ಜಲವನ್ನು ಉಕ್ಕಿಸುತ್ತದೆ. ಅರ್ಜುನ ಸಾಯದೆ ಬಭ್ರುವಾಹನ ಮೇಲೆ ಬರಲಾರ. ಅರ್ಜುನ ಸಾಯುವುದೆಂದರೆ ಅರ್ಜುನನ ಅರ್ಥ ಪ್ರಕಟವಾದಂತೆ. ಆದರೆ ಬಭ್ರುವಾಹನ ಪಾತಾಳದಿಂದ ಸಂಜೀವಿನಿಯನ್ನು ತಂದು ತನ್ನ ತಂದೆಯನ್ನು ಬದುಕಿಸುತ್ತಾನೆ. ಅಶ್ವಮೇಧದ ಕುದುರೆ ಮುನ್ನಡೆಯುತ್ತದೆ. ಅಂದರೆ ಬಭ್ರುವಾಹನನ ಕತೆ ಪಾಂಡವರ ಕತೆಯನ್ನು ಮುಖ್ಯವಾಗಿ ಅವರ ಪ್ರತೀಕಾರದ ಕತೆಯನ್ನು ಅರ್ಥವಿಸುವು ದಷ್ಟೇ ಅಲ್ಲದೆ ತನ್ನ ಸ್ವಂತ ಅರ್ಥವನ್ನು ಕಟ್ಟಿಕೊಂಡಿದೆ. ಅರ್ಜುನ ಮತ್ತು ಚಿತ್ರಾಂಗದೆ ಯರ ಪ್ರಣಯದ ಫಲವಾದ ಬಭ್ರುವಾಹನ ಚಿತ್ರವಾಹನನ ವಂಶವನ್ನು ಮುಂದುವರಿಸಿ ದವ. ಚಿತ್ರವಾಹನನ ವಂಶ ಪಾಂಡವರ ವಂಶದೊಂದಿಗೆ  ಸಂಭಾಷಣೆ ನಡೆಸದೇ ಸ್ವತಂತ್ರ ವಾಗಿ ಬದುಕುತ್ತದೆ. ಅರ್ಜುನನ ಪರಾಕ್ರಮದ ಕತೆಗಳನ್ನು ಬಭ್ರುವಾಹನ ಬಲ್ಲ. ಆದರೆ ಅರ್ಜುನನನ್ನು ಕುರಿತ ಅವನ ಪ್ರಶಂಸೆ ತಿರಸ್ಕಾರಗಳೆಲ್ಲ ಅವನ ಸ್ವಂತದ ದೃಷ್ಟಿಕೋನದ ಫಲವಾಗಿವೆ. ಸ್ವಂತವಾಗಿ ಅವನು ಅರ್ಜುನನನ್ನು ಕೊಲ್ಲಬಲ್ಲ, ಬದುಕಿಸಲೂ ಬಲ್ಲ. ಅವನ ಶಕ್ತಿಯ ಮೂಲಸೆಲೆ ಚಿತ್ರಾಂಗದೆಯೇ ಹೊರತು ಅರ್ಜುನನಲ್ಲ. ಬಭ್ರುವಾಹನನ ಈ ಕತೆಯ ಅರ್ಥವೇನೆಂದು ಕೇಳಿದರೆ ಅದಕ್ಕೆ ಉತ್ತರವಾಗಿ ಲಕ್ಷ್ಮೀಶ ರಾಮಾಯಣದ ಕತೆಯೊಂದನ್ನು ಹೇಳುತ್ತಾನೆ.

ರಾಮಾಯಣದ ಕತೆ ‘ಜೈಮಿನಿ ಭಾರತ’ದಲ್ಲಿ ಸಾಕಷ್ಟು ವಿವರವಾಗಿ, ವಿಸ್ತಾರವಾಗಿಯೇ ಬಂದಿದೆ. ಲವಕುಶರು ರಾಮನ ಜೊತೆಗೆ ಯುದ್ಧ ಮಾಡಿದಂತೆ ಬಭ್ರುವಾಹನ ಅರ್ಜುನನ ಜೊತೆಗೆ ಯುದ್ಧ ಮಾಡಿದ ಎಂದಿಷ್ಟೇ ಹೇಳಿದ್ದರೆ ಈ ಎರಡು ಕತೆಗಳ ನಡುವೆ ಉಪಮ ನೋಪಮೇಯ ಸಂಬಂಧವಷ್ಟೇ ಹುಟ್ಟುತ್ತಿತ್ತು. ಆದರೆ ಇಲ್ಲಿ ಈ ಎರಡು ಕತೆಗಳ ನಡುವಿನ ಸಂಬಂಧ ಬಹಳ ವ್ಯಾಪಕವಾಗಿದ್ದು ಆಳವೂ ಆಗಿದೆ. ಬಭ್ರುವಾಹನ ಚಿತ್ರಾಂಗ ದೆಯ ಮಗನಾಗಿರುವಂತೆ ಲವಕುಶರು ಜಾನಕಿಯ ಸುತರು. ರಾಮನ ಚರಿತ್ರೆಯನ್ನು ರಾಮಾಯಣದ ಮೂಲಕ ಬಲ್ಲವರು. ಅವರಿಗೆ ಕ್ಷತ್ರಿಯೋಚಿತವಾದ ವಿದ್ಯೆಯನ್ನು ಕಲಿಸಿದ ಗುರುವೆಂದರೆ ವಾಲ್ಮೀಕಿ. ಸೀತೆ ಚಿತ್ರಾಂಗದೆಯಂತೆ ರಾಮನ ಅವಜ್ಞೆಗೆ ಒಳಗಾದವಳು. ಸೀತೆಯ ಮೇಲಿನ ಜನಾಪದವಾದ ಚಿತ್ರಾಂಗದೆಗೆ ಅರ್ಜುನ ಕೊಟ್ಟ ಅಪವಾದದಲ್ಲಿ ಭಾಷಾಂತರಗೊಂಡಿದೆ. ಅರ್ಜುನ ಉಲೂಪಿಯನ್ನು ಮರೆತಿದ್ದಾನೆ. ಅರಮನೆಯ ತೋಟ ದಲ್ಲಿಯ ಐದು ದಾಳಿಂಬೆಯ ಮರಗಳು ಒಣಗಿದಾಗ ಅರ್ಜುನನ ಸಾವಿನ ಭೀಕರವಾದ ಅರಿವು ಉಲೂಪಿಗೆ ಆಗುತ್ತದೆ. ಕಾಲ ಮತ್ತು ಸ್ಥಳಗಳ ದೀರ್ಘವಾದ ಅವಕಾಶದಿಂದ ಅಗಲಿದಾಗ ಹುಟ್ಟಿದ ಅಪನಂಬಿಕೆ ಅಪವಾದದ ಸಿಡಿಲಾಗಿ ಈ ಹೆಣ್ಣುಗಳ ಮೇಲೆ ಎರಗಿದೆ. ತಾಯಿಗಾದ ಅಪವಾದವನ್ನು, ಅಪಮಾನವನ್ನು ಪರಾಕ್ರಮಿಗಳಾದ ಮಕ್ಕಳು ತೊಳೆದು ಹಾಕುತ್ತಾರೆ. ಲವಕುಶರು ರಾಮನನ್ನು ಸೋಲಿಸಿದರೆ, ಬಭ್ರುವಾಹನ ಅರ್ಜುನನ್ನು ಸೋಲಿಸಿ ಕೊಂದು ಹಾಕುತ್ತಾನೆ. ಆದರೆ ರಾಮ ಸಾಯಲಿಲ್ಲ, ಅದಕ್ಕಾಗಿ ಅರ್ಜುನ ಮತ್ತೆ ಬದುಕಿ ಬರಬೇಕಾಯಿತು. ಎರಡೂ ಕತೆಗಳಲ್ಲಿ ತಡೆದು ನಿಲ್ಲಿಸಿದ ಅಶ್ವಮೇಧದ ಕುದುರೆ ಕಾಯುತ್ತಿದೆ. ಭೂಪ್ರದಕ್ಷಿಣೆ ನಡೆಸುತ್ತಿರುವ ಕುದುರೆ ನಿಲ್ಲಬಾರದು. ವಂಶದ ಮುಂದುವರಿ ಯುವಿಕೆ ನಿಲ್ಲಬಾರದು, ಅದರಂತೆ ಹರಿಗಡಿಯುತ್ತಿರುವ ಕತೆಯೂ ನಿಲ್ಲಬಾರದು. ವೃಷಕೇತು, ಮೇಘನಾದ, ಪ್ರವೀರ, ಸುಧನ್ವ, ಸುರಥ, ಲವಕುಶರು, ಬಭ್ರುವಾಹನ, ಚಂದ್ರಹಾಸನ ಮಕ್ಕಳು – ಹೀಗೆ ಹೊಸ ಪೀಳಿಗೆಯ ಯುವಕರು ತಂತಮ್ಮ ಕತೆಗಳಿಗಾಗಿ ಕಾದಿದ್ದಾರೆ. ಒಳ್ಳೆಯದಕ್ಕೋ, ಕೆಟ್ಟದಕ್ಕೋ ಹಳೆಯ ತಲೆಮಾರಿನವರು ತಮ್ಮ ಹಟದಿಂದ ವ್ರತಗಳಿಂದ, ಸೊಕ್ಕಿನಿಂದ, ವೀರದಿಂದ ಅಥವಾ ಮತ್ತಾವ ಕಾರಣಕ್ಕಾಗಿಯೋ ಜೀವನ ವನ್ನು ತಡೆದು ನಿಲ್ಲಿಸುತ್ತಿದ್ದಾರೆ. ಆದರೆ ಒಂದು ಒಳ್ಳೆಯ ಸಂಗತಿ ಎಂದರೆ ಇವರೆಲ್ಲ ಕೃಷ್ಣದರ್ಶನಕಾತರರು. ಕೃಷ್ಣನನ್ನು ಕಂಡ ಇವರಿಗೆಲ್ಲ ಮುಕ್ತಿ ದೂರವಿಲ್ಲ.

‘ಜೈಮಿನಿ ಭಾರತ’ದಲ್ಲಿ ಕೃಷ್ಣ ಕಾಣಿಸಿಕೊಳ್ಳುವುದೇ ಜೀವಿಗಳ ಬಿಡುಗಡೆಗಾಗಿ. ಯೌವನಾಶ್ವ ‘ಕಂಡನುತ್ಪಲದಲ ಶಾಮಕೊಮಲತರಶರೀರನಂ’, ಮುಂದೆ ಅವನಿಗೆ ಅಶ್ವಮೇಧದ ಗೊಡವೆ ಇಲ್ಲ. ಈ ಸಂಗತಿಯ ತಾತ್ವಿಕವಾದ ಅರ್ಥ ಸ್ಪಷ್ಟವಾಗಿದೆ. ಏಳು ಅಶ್ವಮೇಧಗಳನ್ನು ನಡೆಸಿ ಈಗ ಎಂಟನೆಯ ಅಶ್ವಮೇಧವನ್ನು ನಡೆಸುತ್ತಿರುವ ಮಯೂರಧ್ವಜ, ಕೃಷ್ಣನನ್ನು ಕಂಡ ಕೂಡಲೆ ಅಶ್ವಮೇಧವನ್ನು ಕೈ ಬಿಡುತ್ತಾನೆ. ‘ಚರ್ಮ ಶೃಂಗಮನಾಂತು ಮಖದೀಕ್ಷೆಯಂ ಕೊಂಬ ದುರ್ಮತಿಗಳುಂಟೆ ನಿನ್ನಂ ಕಂಡ ಬಳಿಕ, ಅದರ ಮರ್ಮಮಂ ಬಲ್ಲೆ ನಾನೆಲೆ ದೇವ’ ಎಂದು ಕೃಷ್ಣನಿಗೆ ಹೇಳುತ್ತಾನೆ. ಅಶ್ವಮೇಧದ ಬಗ್ಗೆ ಎಲ್ಲರ ಅಭಿಪ್ರಾಯಗಳೂ ಒಂದೇ ರೀತಿಯವಾಗಿವೆ. ಅಶ್ವಮೇಧದ ಫಲಕ್ಕಿಂತ ಕೃಷ್ಣನನ್ನು ಕಂಡರೆ ಹೆಚ್ಚು ಮಹತ್ವದ ಫಲ ಪ್ರಾಪ್ತವಾಗುತ್ತದೆಂದು ಎಲ್ಲರಿಗೂ ಗೊತ್ತಿದೆ. ಪೂರ್ವ ವೈರವನ್ನು ತೀರಿಸಲೆಂದು ಕೃಷ್ಣನನ್ನು ಬೆನ್ನಟ್ಟಿ ಬಂದ ಅನುಸಾಲ್ವನಿಗೆ ಕೃಷ್ಣನನ್ನು ಕಂಡ ಕೂಡಲೆ ಬುದ್ದಿ ಪಲ್ಲಟಿಸಿ ಹೋಗುತ್ತದೆ. ‘ಈ ಧನಂಜಯನ ತುರಗವನೀಗ ಕಟ್ಟಿ ದೊಡೆ ಮಾಧವಂ ತಾನೆ ಮೈದೋರುವನೆಂದು’ ಹಂಸಧ್ವಜ ಯುಧಿಷ್ಠಿರನ ಯಜ್ಞಾಶ್ವವನ್ನು ಕಟ್ಟಿ ಹಾಕುತ್ತಾನೆ. ಅರ್ಜುನನಿಗೆ ಎದುರಾಗುತ್ತಿರುವ ವೀರರೆಲ್ಲರ ಮನಸ್ಸಿನೊಳಗಿನ ಆಸೆಯೆಂದರೆ ಕೃಷ್ಣನನ್ನು ಕಾಣುವುದು. ಯುಧಿಷ್ಠಿರನ ಅಶ್ವಮೇಧ ಪ್ರಾರಂಭವಾಗುವಾಗ ದ್ವಾರಕೆಯಿಂದ ಹಸ್ತಿನಾಪುರಕ್ಕೆ ಬಂದಿದ್ದ ಕೃಷ್ಣ ಅದು ಪ್ರಾರಂಭವಾದ ಕೂಡಲೆ ದ್ವಾರಕೆಗೆ ಹೋಗಿಬಿಡುತ್ತಾನೆ. ಮುಂದೆ ನಡೆಯುವುದು ಪಾಂಡವರ ಅಶ್ವಮೇಧವೇ ಹೊರತು ಕೃಷ್ಣನ ದಲ್ಲ. ಆದರೆ ಅರ್ಜುನನಿಗೆ ಆಪತ್ತು ಬಂದಾಗ, ತನ್ನ ಭಕ್ತರು ನೆನದಾಗ, ಚಂದ್ರಹಾಸ, ಮಯೂರಧ್ವಜರ ನಿಷ್ಠೆ ಯಾವ ಬಗೆಯದೆಂಬುದನ್ನು ತೋರಿಸುವಾಗ ತಪ್ಪದೆ ಕೃಷ್ಣ ಮೈದೋರುತ್ತಾನೆ.

ಆದರೆ ‘ಜೈಮಿನಿ ಭಾರತ’ದಲ್ಲಿ ಕೃಷ್ಣ ಕಾಣಿಸಿಕೊಳ್ಳುವ ರೀತಿಯೂ ವಿಶಿಷ್ಟವಾದದ್ದು. ಇಲ್ಲಿ ಕೃಷ್ಣನ ನಿಲುವು ಅತ್ಯಂತ ಮೂರ್ತವಾದದ್ದು. ‘ಅತಸೀ ಕುಸುಮಗಾತ್ರನಂ ಕಮಲ ನೇತ್ರನಂ’ ‘ಮಿಸುಪ ಮಕುಟದ ನೊಸಲ ತಿಲಕದಿಂದಲಶದಿಂ’ ‘ವರಸುಪ್ರಸನ್ನ ವದನದ ಕಮಲನೇತ್ರದ ಮಕರ ಕುಂಡಲದ ಲಲಿತ ನಾಸಿಕದ ಪಣೆಯ ಕತ್ತುರಿಯ ತಿಲಕದ  ಮುರಿದ ಪುರ್ಬುಗಳ ಸುಳಿಗುರುಳ ಮಣಿಮುಕುಟದೆಳದೊಳಸಿಯ’ ಇಂಥ ಕೃಷ್ಣನ ವರ್ಣನೆಗಳು ಕಾವ್ಯದಲ್ಲಿ ಎಲ್ಲಿ ಬೇಕಾದರೂ ದೊರೆಯುತ್ತವೆ. ಕೃಷ್ಣನ ಪಾರ್ಥಿವ ಶರೀರದಲ್ಲಿ ಅಪಾರ್ಥಿ ವವಾದ ಅರ್ಥವನ್ನು ಈ ಕಾವ್ಯ ಎತ್ತಿ ತೋರಿಸುತ್ತದೆ. ಆದರೆ ಕೃಷ್ಣನ ದೇಹವಿದ್ದರೂ ಅದಕ್ಕೆ ಚಟುವಟಿಕೆ ಇಲ್ಲದಿರುವುದು ಸ್ವಾರಸ್ಯದ ಮಾತಾಗಿದೆ. ಹಾಗೆಂದು ಕೃಷ್ಣ ಕೇವಲ ಜೀವರಹಿತವಾದ ಮೂರ್ತಿಯೂ ಅಲ್ಲ. ‘ಅಂಸದಿಂ ಜಗುಳ್ದ ಪೀತಾಂಬರವ ಸಾರ್ಚಿ’ ಅವನು ಭಕ್ತರ ಅವಸರಕ್ಕೆ ಓಡಿ ಬರುತ್ತಾನೆ. ಆದರೆ ಎಲ್ಲ ಮಾನುಷ ಚಟುವಟಿಕೆಗಳ ಅಂತ್ಯವೆಂದರೆ ಶ್ರೀಕೃಷ್ಣನ ದರ್ಶನ. ಒಮ್ಮೆ ದರ್ಶನವಾದ ಮೇಲೆ ಸ್ತೋತ್ರವೇ ಹೊರತು ಬೇರೆ ಯಾವ ಕಾರ್ಯಕ್ಕೂ ಅಲ್ಲಿ ಸಮಯವಿರುವುದಿಲ್ಲ. ಸುಧನ್ವ ಕಾದ ಎಣ್ಣೆಯ ಕೊಪ್ಪರಿ ಗೆಯಲ್ಲಿ ನಿಂತುಕೊಂಡು ‘ಜಯ ಜಯ ಜನಾರ್ದನ ಮುಕುಂದ ಮುರಮರ್ದನ ವಿಜಯಮಿತ್ರ’ ಎಂದು ಮುಂತಾಗಿ ಅವನನ್ನು ಪ್ರಾರ್ಥಿಸಿಕೊಂಡಾಗ ಕೊಪ್ಪರಿಗೆಯಲ್ಲಿಯ ಎಣ್ಣೆ ತಣ್ಣಗಾಗಿ ಅವನು ಬದುಕಿ ಬರುತ್ತಾನೆ. ಆದರೆ ಮುಂದೆ ಅವನು ಬಹುಕಾಲ ಜೀವಿಸುವುದಿಲ್ಲ. ಕೃಷ್ಣ ಬಹಳ ವಿಚಿತ್ರವಾದ ರೀತಿಯಲ್ಲಿ ಅವನಿಗೆ ಬಿಡುಗಡೆಯ ದಾರಿ ಯನ್ನು ತೋರುತ್ತಾನೆ. ಹಂಸಧ್ವಜ, ಮಯೂರ ಧ್ವಜ, ಚಂದ್ರಹಾಸ ಮೊದಲಾದವರೆಲ್ಲ ಕೃಷ್ಣನ ದರ್ಶನದಲ್ಲಿಯೇ ತಮ್ಮ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳುತ್ತಾರೆ. ಅವರಿಗಿರುವ ಉದ್ಯೋಗವೆಂದರೆ ಕೃಷ್ಣನ ನಾಮಸ್ಮರಣೆಯೊಂದೇ. ಕೃಷ್ಣನ ನಾಮವನ್ನು ಸಾವಿರ ಸಲ ಉಚ್ಚರಿಸುವುದು, ಅಥವಾ ಅವನ ಬೇರೆ ಬೇರೆ ಹೆಸರುಗಳನ್ನು ಒಂದಾದ  ಮೇಲೊಂದರಂತೆ ಹೇಳುವುದು. ಒಂದು ವಾಕ್ಯದ ಅರ್ಥಪೂರ್ಣತೆ ಈ ನಾಮಸ್ಮರಣೆಗೆ ಇರುವುದಿಲ್ಲ. ಚಟುವಟಿಕೆಗಳು, ಅವನ ವೇಷಭೂಷಣ, ಅವನ ಮೋಹಕವಾದ ಮುಗುಳು ನಗೆ, ಅವನ ಆಯುಧಗಳು, ಅವನ ವಾಹನ, ಅವನ ಪರಿವಾರ – ಇವಾವುದರಲ್ಲಿಯೂ ಬದಲಾವಣೆ ಎನ್ನುವುದಿಲ್ಲ. ಕೃಷ್ಣನೆಂದರೆ ಒಂದು ಅಸ್ತಿತ್ವ, ಅಮೋಘವಾದ ಪ್ರಕ್ರಿಯೆ ಯನ್ನು ಪ್ರಾರಂಭಿಸಿ ಅದನ್ನು ಮತ್ತೆ ಉಪಸಂಹಾರ ಮಾಡುವ ಒಂದು ಅಸ್ತಿತ್ವ.

ಕೃಷ್ಣನ ಇಂಥ ಅದ್ಭುತವಾದ ಸನ್ನಿಧಿಯಿಂದಾಗಿ ಕಾವ್ಯದಲ್ಲಿ ಒಂದು ತಾಂತ್ರಿಕ ಸಮಸ್ಯೆ ಏಳುತ್ತದೆ. ಪಾಂಡವರು ಅಶ್ವಮೇಧವನ್ನು ಮಾಡುತ್ತಿರುವ ಬಗ್ಗೆ ಎಲ್ಲರಿಗೂ ಪ್ರಶ್ನೆಗಳಿವೆ. ಪಾರಿಪ್ಲವ ಕ್ಷೇತ್ರದಲ್ಲಿ ಅಶ್ವಮೇಧದ ಕುದುರೆ ಕಲ್ಲಿನೊಡನೆ ಕಲ್ಲಾಗಿ ನಿಂತಾಗ ಅರ್ಜುನ ದಿಕ್ಕುಗಾಣದೆ ಸೌಭರಿ ಮುನಿಯನ್ನು ಕೇಳಿಕೊಳ್ಳುತ್ತಾನೆ. ಕೃಷ್ಣನ ಸಹಾಯವಿರುವಾಗ ನಿಮಗೆ ಅಶ್ವಮೇಧದ ಅಗತ್ಯವಿದೆಯೇ ಎಂದು ಸೌಭರಿ ಪ್ರಶ್ನೆ ಮಾಡುತ್ತಾನೆ. ಅರ್ಜುನನ ಉತ್ತರವೆಂದರೆ ತಮ್ಮ ಅಶ್ವಮೇಧಕ್ಕೆ ಕೃಷ್ಣನ ಸಮ್ಮತಿ ಇದೆ ಎನ್ನುವುದು. ಇದೇ ರೀತಿ ಮಯೂರಧ್ವಜ, ಬಕದಾಲ್ಭ್ಯ ಮೊದಲಾದವರೂ ಕೇಳುತ್ತಾರೆ. ಅವರೆಲ್ಲರ ಪ್ರಕಾರ ಅಶ್ವಮೇಧದ ಫಲವೆಂದರೆ ಕೃಷ್ಣನ ದರ್ಶನ. ಅಂಥ ಕೃಷ್ಣನನ್ನು ನೆನೆದಾಗ ದರ್ಶನ ದೊರಕುತ್ತಿರುವ ಪಾಂಡವರಿಗೆ ಅಶ್ವಮೇಧದ ಅವಶ್ಯಕತೆಯಾದರೂ ಏನು? ವಿಚಿತ್ರವೆಂದರೆ ಪಾಂಡವರ ಅಶ್ವಮೇಧ ನಿರ್ವಿಘ್ನವಾಗಿ ನಡೆಯಲೆಂದು ಕೃಷ್ಣನೂ ಪ್ರಯತ್ನ ಮಾಡುತ್ತಿ ದ್ದಾನೆ. “ಯಜ್ಞೋ ಯಜ್ಞಪತಿಃ ಯಜ್ವಾ ಯಜ್ಞಾಂಗೋ ಯಜ್ಞವಾಹನಃ” ವಿಷ್ಣು ಸಹಸ್ರ ನಾಮದಲ್ಲಿ ಕೃಷ್ಣನ ವರ್ಣನೆ ಇದಾಗಿದೆ. ಅವನು ಯಜ್ಞಸ್ವರೂಪಿ, ಯಜ್ಞದ ಪೂರ್ಣಫಲ. ಭಕ್ತಿಯುಗದಲ್ಲಿ ಯಜ್ಞದ ಸ್ವರೂಪದಲ್ಲಾದ ಮಾರ್ಪಾಡನ್ನು ಈ ವರ್ಣನೆ ಸೂಚಿಸುತ್ತದೆ.

ಈ ಕಾರಣಕ್ಕಾಗಿ ‘ಜೈಮಿನಿ ಭಾರತ’ದಲ್ಲಿ ಅಶ್ವಮೇಧದ ಅರ್ಥ ಪದರು ಪದರಾಗಿದೆ. ಅಶ್ವಮೇಧಯಾಗ ಒಂದು ವೈದಿಕ ಕ್ರಿಯೆ, ವಿಧಿವತ್ತಾಗಿ ನಡೆಸಿದರೆ ಅದಕ್ಕೆ ಅದರ ಫಲ ಇದ್ದೇ ಇದೆ. ಅಶ್ವಮೇಧದ ಫಲವೆಂದರೆ ಯಜಮಾನನಾದ ರಾಜ ಅಧಿರಾಜನಾಗುವುದು, ಸಾಮ್ರಾಟನಾಗುವುದು. ಪಾಂಡವರಲ್ಲಿ ಸಾಮ್ರಾಟರಾಗುವ ಆಸೆ ಇದ್ದದ್ದರಿಂದ ಅವರು ಈ ಯಜ್ಞವನ್ನು ಮಾಡಿದರು. ಇದು ಅಶ್ವಮೇಧದ ಲೌಕಿಕ ಸ್ವರೂಪ ಮತ್ತು ಪ್ರಯೋಜನ. ವೇದದಲ್ಲಿ ಅದರ ಇನ್ನೊಂದು ಸ್ವರೂಪವೂ ಇದೆ. ಚೈತ್ರ ಮಾಸದಿಂದ ಮುಂದಿನ ಚೈತ್ರಮಾಸದವರೆಗೆ ಭೂಪ್ರದಕ್ಷಿಣೆ ಮಾಡುವ ಕುದುರೆ ವರ್ಷದ ಸಂಕೇತವೂ ಹೌದು. ಲಕ್ಷ್ಮೀಶನ ‘ಜೈಮಿನಿ ಭಾರತ’ದಲ್ಲಿ ಬರುವ ಸುಂದರವಾದ ಋತುವರ್ಣನೆಗಳು ಈ ಮಾತಿಗೆ ಸಾಕ್ಷಿಯಾಗುತ್ತವೆ. ಸಾರಾಂಶವೆಂದರೆ ಅಶ್ವಮೇಧ ಯಜ್ಞ ತಾನಾಗಿಯೇ ಹಲವಾರು ಅರ್ಥಗಳನ್ನು ಪ್ರಕಟಿಸುವ ಒಂದು ಕ್ರಿಯಾವಿಧಿಯಾಗಿದೆ.

‘ಜೈಮಿನಿ ಭಾರತ’ದಲ್ಲಿ ಅಶ್ವಮೇಧ ಯಜ್ಞದ ಪ್ರತಿಮೆ ಇನ್ನೊಂದು ದೃಷ್ಟಿಯಿಂದ ಕೂಡ ಅರ್ಥಪೂರ್ಣವಾಗಿದೆ. ಅಶ್ವಮೇಧದ ಕತೆ ಸ್ವತಂತ್ರವಾಗಿ ಒಂದು ಸಾಹಸದ ಕತೆ ಯಾಗಿದೆ. ಪಾಂಡವರಿಗೆ ಅಶ್ವಮೇಧದ ಕುದುರೆ ದೊರಕಿದ್ದು ಯೌವನಾಶ್ವನ ಹತ್ತಿರ. ಘಟೋತ್ಕಚನ ಮಗನಾದ ಮೇಘನಾದ ಮಾಯಾಯುದ್ಧವನ್ನು ಮಾಡಿ ಕುದುರೆಯನ್ನು ಕದ್ದು ತರುತ್ತಾನೆ. ತನಗೆ ಎದುರಾಗಿ ಯುದ್ಧ ಮಾಡಿದವರನ್ನು ಸೋಲಿಸುತ್ತಾನೆ. ಕುದುರೆ ಯನ್ನು ಸಾಹಸದಿಂದ ತಂದ ಮೇಲೆ ಕೂಡ ಈ ಕತೆ ಮುಗಿಯುವುದಿಲ್ಲ. ಕುದುರೆಯನ್ನು ವಿಧಿವತ್ತಾಗಿ ಪೂಜಿಸಿ ಸಂಚಾರಕ್ಕೆ ಬಿಟ್ಟ ಮೇಲೆ ಹೆಜ್ಜೆ ಹೆಜ್ಜೆಗೆ ವಿಘ್ನಗಳು ಕಾದು ಕುಳಿತಿವೆ. ಕುದುರೆಯನ್ನು ಕಟ್ಟಿ ಹಾಕಿದ ರಾಜರೊಡನೆ ಯುದ್ಧ ಮಾಡಿ ಅದನ್ನು ಬಿಡಿಸಿ ಕೊಂಡು ಮುಂದೆ ಹೋಗುವುದು ಸಾಹಸದ ಕೆಲಸವಾದರೂ ಅದು ಅಷ್ಟೊಂದು ಕಠಿಣ ವಾದದ್ದಲ್ಲ. ಯುದ್ಧ ಮಾಡುವುದು ಕ್ಷತ್ರಿಯರ ಧರ್ಮ. ಆದರೆ ಕುದುರೆ ಕಳೆದು ಹೋಗುವ ಸಂಭವವೂ ಇಲ್ಲದಿಲ್ಲ. ವಿಂಧ್ಯಾರಣ್ಯದಲ್ಲಿ ಕುದುರೆ ಕಲ್ಲಿನಲ್ಲಿ ಸಿಕ್ಕು ಬಿದ್ದು ಕಲ್ಲಾಗಿ ಹೋಗುತ್ತದೆ. ಸೌಭರಿ ಮುನಿ ಚಂಡಿಯ ಕತೆಯನ್ನು ಅರ್ಜುನನಿಗೆ ಹೇಳಿ ಕುದುರೆಯನ್ನು ಬಿಡಿಸಿಕೊಳ್ಳುವ ಉಪಾಯವನ್ನು ಹೇಳಿಕೊಡುತ್ತಾನೆ. ಮುಂದೆ ಹದಿನೈದನೆಯ ಸಂಧಿಯಲ್ಲಿ ಇನ್ನೊಂದು ವಿಚಿತ್ರ ನಡೆಯುತ್ತದೆ. ಆ ಸಂಧಿಯ ಸೂಚನೆಯ ಪದ್ಯ ಹೀಗಿದೆ.

ತಣ್ಗದಿರನನ್ವಯದ ಪಾರ್ಥನ ತುರಂಗಮದು
ಪೆಣ್ಗುದುರೆಯಾಗಿ ಪೆರ್ಬುಲಿಯಾಗಿ ಪಳಿಯಂತೆ
ಕಣ್ಗೊಳಿಸುವಮಲಾಶ್ವಮಾಗಿಯಾಶ್ಚರ್ಯದಿಂದ ಸ್ತ್ರೀರಾಜ್ಯಮಂ ಪೊಕ್ಕುದು

ಪಾರಿಪ್ಲವ ಕ್ಷೇತ್ರದ ಮಹಿಮೆಯಿಂದಾಗಿ ಅಶ್ವಮೇಧದ ಕುದುರೆ ಹೆಣ್ಣಾಯಿತು, ಸರೋವರದಲ್ಲಿ ನೀರು ಕುಡಿದ ಮೇಲೆ ಹೆಬ್ಬುಲಿಯಾಯಿತು. ಅದರಿಂದ ಹೆದರಿದ ಅರ್ಜುನ ಕೃಷ್ಣನನ್ನು ಭಕ್ತಿಯಿಂದ ಸ್ತುತಿಸಲು ಮತ್ತೆ ಮೊದಲಿನಂತೆ ಯಜ್ಞಾಶ್ವವಾಗುತ್ತದೆ. ಈ ವಿಚಿತ್ರವಾದ ಘಟನೆಗೂ ಕಾವ್ಯದ ಕಥಾವಸ್ತುವಿಗೂ ಏನೂ ಸಂಬಂಧವಿಲ್ಲ. ಆದರೆ ಕಾವ್ಯವಸ್ತುವಿನಲ್ಲಿ ಈ ಘಟನೆ ಪ್ರವೇಶ ಮಾಡಿದಾಗ ಹೊಸ ಸಂಬಂಧಗಳು ಹುಟ್ಟಿಕೊಳ್ಳು ತ್ತವೆ. ಸ್ವಲ್ಪ ಹೊತ್ತಿನವರೆಗೆ ನಡೆದ ಕುದುರೆಯ ರೂಪಾಂತರ ಅಶ್ವಮೇಧಯಜ್ಞದ ಸಾರ್ಥಕತೆಯ ಬಗ್ಗೆ ಸಂಶಯ ಹುಟ್ಟಿಸುತ್ತದೆ. ಕೃಷ್ಣನ ಅನುಗ್ರಹದಿಂದ ಸಮಸ್ಯೆ ಪರಿಹಾರ ಗೊಂಡು ಕುದುರೆ ಮತ್ತೆ ಮೊದಲಿನಂತೆ ಸಂಚಾರಕ್ಕೆ ಸಿದ್ಧವಾಗುತ್ತದೆ. ಕೃಷ್ಣನ ಅನುಗ್ರಹದ ಅನಿವಾರ್ಯತೆಯನ್ನು ಸಿದ್ಧಗೊಳಿಸಲು ಈ ಪ್ರಸಂಗವನ್ನು ಕಾವ್ಯ ಉಪಯೋಗಿಸುತ್ತ ದೇನೋ ನಿಜ. ಕೃಷ್ಣನಿಲ್ಲದೆ ಅಶ್ವಮೇಧ ಸಾಂಗವಾಗಿ ನೆರವೇರುವಂತಿಲ್ಲ; ಆದರೆ ಕೃಷ್ಣನ ಅನುಗ್ರಹ ದೊರೆತ ಮೇಲೆ ಅಶ್ವಮೇಧದ ಅಗತ್ಯವೂ ಇಲ್ಲ. ಆದರೂ ಅಶ್ವಮೇಧದ ಕುದುರೆ ತನ್ನ ಭೂಪ್ರದಕ್ಷಿಣೆಯನ್ನು ಮುಗಿಸಿ ಯಜ್ಞ ನೆರವೇರುತ್ತದೆ. ಯಜ್ಞ ಮತ್ತು ಕೃಷ್ಣ ಇವರ ಪಾರಸ್ಪರಿಕ ಪ್ರತಿಕ್ರಿಯೆಗಳಿಂದ ಕಾವ್ಯ ತನ್ನ ಅರ್ಥಪೂರ್ಣತೆಯನ್ನು ಬೆಳೆಸಿ ಕೊಳ್ಳುತ್ತದೆ.

ಅಶ್ವಮೇಧಯಾಗದ ಕತೆಗೆ ತನ್ನದೊಂದು ಸ್ವತಂತ್ರವಾದ ಅರ್ಥವೂ ಇದೆ. ಅದೇ ಮೇಲೆ ಹೇಳಿರುವ ಸಾಹಸ ಕತೆಯಲ್ಲಿದೆ. ಕುದುರೆಯ ರೂಪಾಂತರದ ಕತೆ ಮುಖ್ಯ ಕತೆಯ ಸಂದರ್ಭದಿಂದ ಬೇರ್ಪಡಿಸಿ ನೋಡಿದಾಗ ಅದೊಂದು ಕುತೂಹಲ ಹುಟ್ಟಿಸುವ ಒಡಗತೆ ಯಂತೆ ಕಾಣುತ್ತದೆ. ಪಾರಿಪ್ಲವ ಕ್ಷೇತ್ರದಲ್ಲಿಯ ಸರೋವರದ ತೀರದಲ್ಲಿ ಪಾರ್ವತಿ ಶಿವ ನನ್ನು ಕುರಿತು ತಪಸ್ಸು ಮಾಡಿದಳು. ಅವಳನ್ನು ಕಂಡ ರಾಕ್ಷಸ ಮೋಹಗೊಂಡು ಅವಳ ಮೇಲೆ ಏರಿ ಬಂದಾಗ ಪಾರ್ವತಿ ಅವನನ್ನು ತನ್ನ ಮಹಿಮೆಯಿಂದ ಸುಟ್ಟು ಬೂದಿ ಮಾಡಿದಳು. ಅಲ್ಲಿ ಬಂದ ಪ್ರಾಣಿಗಳೆಲ್ಲ ಹೆಣ್ಣಾಗಲಿ ಎಂದು ಪಾರ್ವತಿ ಶಾಪವನ್ನಿತ್ತದ್ದರಿಂದ ಅಶ್ವಮೇಧದ ಕುದುರೆ ಹೆಣ್ಣಾಗುತ್ತದೆ. ಆ ಸರೋವರದಲ್ಲಿ ಸ್ನಾನ ಮಾಡಲು ಬಂದಿದ್ದ ಬ್ರಾಹ್ಮಣನನ್ನು ಮೊಸಳೆ ಹಿಡಿದುಕೊಂಡಾಗ ಅಲ್ಲಿ ಬರುವ ಪ್ರಾಣಿಗಳು ಹುಲಿಯಾಗಲಿ ಎಂದು ಆ ಬ್ರಾಹ್ಮಣ ಶಾಪ ಕೊಟ್ಟಿದ್ದನಂತೆ. ಅದರ ಫಲವಾಗಿ ಹೆಣ್ಣುಕುದುರೆ ಹುಲಿಯಾ ಗುತ್ತದೆ. ಇಂಥ ರೂಪಾಂತರದ ಅರ್ಥವನ್ನು ಈ ಕತೆಯ ಸಂದರ್ಭದಲ್ಲಿಯೇ ಬಿಡಿಸಿ ನೋಡಬೇಕಾಗುತ್ತದೆ. ರೂಪಾಂತರವೆಂದರೆ ಇದ್ದ ರೂಪವನ್ನು ಕಳೆದುಕೊಂಡು ಮತ್ತೊಂ ದನ್ನು ಪಡೆಯುವುದು. ಯಜ್ಞಾಶ್ವದ ರೂಪಾಂತರ ಈ ಕಾವ್ಯದಲ್ಲಂತೂ ಆಕಸ್ಮಿಕವಲ್ಲ. ಇದಕ್ಕೂ ಮೊದಲು ವಿಂಧ್ಯಾಟವಿಯಲ್ಲಿ ಸೌಭರಿ ಮುನಿಯ ಆಶ್ರಮದ ಹತ್ತಿರ ಅದು ಕಲ್ಲಾಗಿತ್ತು. ಕೊನೆಯಲ್ಲಿ ಅಶ್ವದ ಸಂಹಾರವಾದಾಗ ಅದು ಕರ್ಪೂರದ ರಾಶಿಯಾಗುತ್ತದೆ. ಅದರ ಕಿವಿಯನ್ನು ಕೊಯ್ದಾಗ ರಕ್ತದ ಬದಲು ಹಾಲು ಸುರಿಯುತ್ತದೆ. ಯಜ್ಞಾಶ್ವದ ರೂಪಾಂತರ ಯಜ್ಞದ ರೂಪಾಂತರವೇ ಆಗುತ್ತದೆ. ಋತ್ವಿಜರು ಮಂತ್ರ ಹೇಳಿ ಸ್ವರ್ಗಕ್ಕೆ ಹೋಗು ಎಂದು ಹೇಳಿದಾಗ ಸ್ವರ್ಗ ಬೇಡವೆಂದು ಅದು ತಲೆಯನ್ನು ಕೊಡವುತ್ತದೆ. ಕೃಷ್ಣ ಯಜ್ಞ ಸ್ವರೂಪಿಯಾಗಿ ಯಜ್ಞದ ಉದ್ದೇಶ ಮತ್ತು ಪ್ರಯೋಜನಗಳನ್ನು ಮಾರ್ಪಡಿ ಸುತ್ತಾನೆ. ಅಶ್ವದ ರೂಪಾಂತರಕ್ಕೆ ಕಥೆಯಲ್ಲಿ ಕೆಲವು ಕಾರಣಗಳಿವೆ. ಕತೆ ತನ್ನ ಭಾಷೆಯಲ್ಲಿ ರೂಪಾಂತರದ ರಹಸ್ಯವನ್ನು ಅರ್ಥಮಾಡಿ ಹೇಳುತ್ತದೆ. ಪಾರ್ವತಿಯ ಶಾಪ ಮತ್ತು ಬ್ರಾಹ್ಮಣನ ಶಾಪ ಇದಕ್ಕೆ ಕಾರಣವಾಗಿವೆ. ರಾಕ್ಷಸನ ಕಾಮ ಮತ್ತು ಮೊಸಳೆಯ ಹಿಂಸೆ ಇವು ಮೂಲಭೂತವಾದ ಮನಃಪ್ರವೃತ್ತಿಗಳಾಗಿವೆ. ಇವುಗಳನ್ನು ಶಾಪ ತಾತ್ಕಾಲಿಕವಾಗಿ ನಾಶಗೊಳಿಸುತ್ತದೆ. ಕುದುರೆ ಅವುಗಳನ್ನು ರೂಪಾಂತರದ ಮೂಲಕ ಅಭಿವ್ಯಕ್ತಿಗೊಳಿಸಿ ಬಿಟ್ಟುಕೊಡುತ್ತದೆ. ಪ್ರಾಚೀನ ಕಾಲದ ಆ ಸರೋವರದ ನೀರಿನಲ್ಲಿಯೇ ದುಷ್ಟಭಾವ ಅಡಗಿಬಿಟ್ಟಿದೆ. ಆ ನೀರನ್ನು ಯಾರೂ ಕುಡಿಯಬಾರದೆಂದು ಬ್ರಾಹ್ಮಣ ಅಲ್ಲಿ ಬಂದ ಪ್ರಾಣಿಗಳು ಹುಲಿಯಾಗಲೆಂದು ಶಾಪ ಕೊಟ್ಟ. ಯಜ್ಞಾಶ್ವ ಮತ್ತೆ ಮೊದಲಿನ ರೂಪವನ್ನು ಪಡೆದುಕೊಂಡಾಗ ಅದರ ವರ್ಣನೆ ಹೀಗಿದೆ “ಆಟವಿಕನೊಂದೊಂದು ಬಹುರೂಪಮಂ ತಾಳ್ದು ನಾಟಕವನಾಡಿ ಮುನ್ನಿನ ತನ್ನ ರೂಪಮಂ ನೋಟಕರ ಕಣ್ಗೆ ಕಾಣಿಸುವಂತೆ…. ಘೋಟಕೋತ್ತಮಮಾದುದು.” ನಾಟಕದ ಈ ರೂಪಕ ಚಮತ್ಕಾರದ್ದಾಗಿದೆ. ಜೀವದ ಮೂಲ ಸ್ವರೂಪವನ್ನು ಅರಿತುಕೊಳ್ಳದೆ ಅದರ ಮುಂದಿನ ಬೆಳವಣಿಗೆಯೂ ಸಾಧ್ಯವಿಲ್ಲ ವೆಂದು ಈ ಅಭಿನಯದ ರೂಪಕ ತಿಳಿಸುತ್ತದೆ. ನಟ ತನ್ನ ಮೂಲ ವ್ಯಕ್ತಿತ್ವವನ್ನು ಮರೆ ಯದೆ ಇನ್ನೊಂದು ವ್ಯಕ್ತಿತ್ವವನ್ನು ಪಡೆದು ಮತ್ತೆ ಮೊದಲಿನಂತಾಗುವ ಈ ಪ್ರಕ್ರಿಯೆಯಲ್ಲಿ ವಿಕಾಸದ ಅನೇಕ ಹಂತಗಳು ಅಡಗಿಕೊಂಡಿವೆ.

ಈ ಕೃತಿಯಲ್ಲಿಯ ಉಳಿದ ಭಕ್ತರ ಕತೆಗಳಲ್ಲಿ ಕೂಡ ಹಿಂಸೆ ಅಹಿಂಸೆಗಳು ಸಮಸಮ ವಾಗಿ ಬೆರೆತುಕೊಂಡಿವೆ. ಹಂಸಧ್ವಜನ ಪುರೋಹಿತರಾಗಿದ್ದ ಶಂಖ-ಲಿಖಿತರ ದುರಾಗ್ರಹ ದಿಂದಾಗಿ ಸುಧನ್ವ ಎಣ್ಣೆಯ ಕೊಪ್ಪರಿಗೆಯಲ್ಲಿ ಬೀಳಬೇಕಾಗುತ್ತದೆ. ಕೃಷ್ಣನ ಅನುಗ್ರಹ ದಿಂದ ಪಾರಾಗಿ ಬಂದರೂ ಅರ್ಜುನನ ಕೈಯಿಂದ ಅವನು ಹತನಾಗುತ್ತಾನೆ. ದುಷ್ಟಬುದ್ದಿಯ ಹಿಂಸೆ ಚಂದ್ರಹಾಸನನ್ನು ದುರ್ದೈವದಂತೆ ಬೆನ್ನಟ್ಟಿಕೊಂಡು ಬರುತ್ತದೆ. ಕ್ರೂರವಾದ ಮೊಸಳೆಗಳಿಂದ ತುಂಬಿ ಮೇಲೆ ಗಂಭೀರ ನಿರ್ಮಲ ಜಲದಿಂದ ಕಂಗೊಳಿಸುವ ಸರೋವರ ದಂತೆ ದುಷ್ಟಬುದ್ದಿಯ ಮನಸ್ಸು ಇತ್ತೆಂದು ಕಾವ್ಯ ಬಣ್ಣಿಸುತ್ತದೆ. ಅಂಥ ಬೇರೆ ಎರಡು ಸರೋವರಗಳು ಈ ಕೃತಿಯಲ್ಲಿವೆ. ಪಾರ್ವತಿ ತಪಸ್ಸು ಮಾಡಿದ ಮತ್ತು ಕ್ರತವ್ರಣನಿಂದ ಶಾಪವನ್ನು ಪಡೆದ ಸರೋವರವೂ ಅಂಥದಾಗಿದೆ. ಚಂದ್ರಹಾಸನ ನಗರಕ್ಕೆ ಹೋಗುವ ಮೊದಲು ಅಂಥ ಇನ್ನೊಂದು ಸರೋವರನ್ನು ಅರ್ಜುನನ ಸೈನ್ಯ ದಾಟಿಕೊಂಡು ಬರುತ್ತದೆ. ಜ್ವಾಲೆಯ ಮನಸ್ಸಿನಾಳದಲ್ಲಿ ಬೇರುಬಿಟ್ಟಿದ್ದ ಜನ್ಮಾಂತರದ ದ್ವೇಷ ಅನುಸಾಲ್ವನ ಪೂರ್ವ ವೈರ, ಭೀಷ್ಮನ ಕಾಮ, ಈಶ್ವರಾರ್ಪಿತವೆಂದರೂ ತನ್ನ ದೇಹವನ್ನೇ ಅರ್ಧ ಸೀಳಿ ಕೊಡುವ ಮಯೂರಧ್ವಜನ ವೀರಭಕ್ತಿ ಮತ್ತು ಔದಾರ್ಯಗಳು-ಇಂಥ ಚಿತ್ರಗಳನ್ನು ಕಾವ್ಯ ಕಣ್ಣೆದು ರಿಗೆ ತಂದು ನಿಲ್ಲಿಸುತ್ತದೆ. ಅಶ್ವಮೇಧದ ಕುದುರೆ ಇಂಥ ಜಗತ್ತಿನ ನಡುವೆ ದಾರಿ ಮಾಡಿ ಕೊಂಡು ಹೋಗುತ್ತ ನೇರವಾಗಿ ತನ್ನ ಗುರಿಯನ್ನು ಮುಟ್ಟುತ್ತದೆ. ಆ ಗುರಿ ಎಂದರೆ ಕೃಷ್ಣನ ಅನುಗ್ರಹ. ತಿಳಿನೀರಿನಿಂದ ತುಂಬಿದ ಸರೋವರದ ಮೊಸಳೆಯನ್ನು ಅದರಂತೆಯೆ ಮನುಷ್ಯನಲ್ಲಿ ಅಂತಸ್ಥವಾಗಿರುವ ದುಷ್ಟಭಾವವನ್ನು ಬೇರ್ಪಡಿಸಲು ಪಾರ್ವತಿಯ ತಪಸ್ಸು, ಕೃತವ್ರಣನ ಶಾಪ ಸಮರ್ಥವಾಗಲಿಲ್ಲ. ಪಾರ್ವತಿ ತಪಸ್ಸು ಮಾಡುವವರೆಗೆ ನಿರ್ವೈರವಾಗಿದ್ದ ಆ ಪ್ರದೇಶ ಮತ್ತ ಹಿಂಸೆಯಿಂದ ತುಂಬಿಕೊಂಡಿತು. ಈ ವೈರದ ಉಪಶಮನ ಹೇಗೆ ಅಗಬಲ್ಲವೆಂಬುದನ್ನೇ ಪ್ರತಿಕ್ಷಣಕ್ಕೂ ಲಕ್ಷ್ಮೀಶನ ಕಾವ್ಯ ಚಿಂತಿಸುತ್ತಿದೆ. ಅಗ್ನಿ ನೀಲಧ್ವಜನ ಮನೆಯ ಅಳಿಯನಾಗಿದ್ದರೆ ವೀರವರ್ಮನ ಅಳಿಯ ಯಮ. ಚಂದ್ರಹಾಸನ ಸುತ್ತಮುತ್ತ ದುಷ್ಟಬುದ್ದಿಯ ಕ್ರೌರ್ಯ. ಕೃಷ್ಣನ ಕಾಯುವ ದೃಷ್ಟಿ ಸ್ವಲ್ಪ ತಪ್ಪಿದರೂ ಸಾಕು, ಸೃಷ್ಟಿ ಮಟಮಾಯವಾಗಬಲ್ಲದು. ಅಶ್ವಮೇಧದ ಕುದುರೆ ಯಜ್ಞದ ಸ್ವರೂಪವನ್ನು ಬದಲಾಯಿ ಸುತ್ತ ಕೃಷ್ಣನ ಜಾಡು ಹಿಡಿದು ನಡೆಯುತ್ತ ಜೀವನವನ್ನು ಸಾವಿನಿಂದ, ಒಳ್ಳೆಯದನ್ನು ಕೆಟ್ಟದ್ದರಿಂದ ಬೇರ್ಪಡಿಸುತ್ತದೆ. ಕುದುರೆ ನಡೆದಾಗ ಕತೆ ಮುಂದುವರಿಯುತ್ತದೆ, ಅದು ನಿಂತಾಗ ತಾನೂ ನಿಲ್ಲುತ್ತದೆ.