ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ‘ಕಟೀಲು’ ನಾಡಿನುದ್ದಗಲದ ಭಾವುಕರನ್ನು ಆಕರ್ಷಿಸಿದ ಕ್ಷೇತ್ರ. ಇಲ್ಲಿನ ದೇವಾಲಯದ ವತಿಯಿಂದ ಪ್ರತಿವರ್ಷ ನಾಲ್ಕು ಯಕ್ಷಗಾನದ ಮೇಳಗಳು ತಿರುಗಾಟ ನಡೆಸುತ್ತಿವೆ. ಮಳೆಗಾಲದ ಬಿಡುವಿನ ಬಳಿಕ, ಅಂದರೆ ದೀಪಾವಳಿಯ ಆನಂತರದ ಒಂದು ದಿನ ಈ ಮೇಳಗಳು ತಿರುಗಾಟಕ್ಕೆ ಹೊರಡುತ್ತವೆ. ‘ದಿಗ್ವಿಜಯಕ್ಕೆ ಹೊರಡುವುದು’ ಎಂಬುದು ಇದಕ್ಕೆ ಬಳಸುವ ಪರಿಭಾಷೆ, ಆ ಮೊದಲ ರಾತ್ರಿ ಕಟೀಲಿನ ಬೀದಿಯಲ್ಲಿ ‘ಪಾಂಡ ವಾಶ್ವಮೇಧ’ ಪ್ರಸಂಗವನ್ನು ಪ್ರದರ್ಶಿಸುವುದು ಸಂಪ್ರದಾಯ.

ಕಟೀಲು ಮೇಳಗಳು ಎಂದೇನು, ತೆಂಕು-ಬಡಗುತಿಟ್ಟುಗಳ ಹೆಚ್ಚಿನ ಮೇಳಗಳು ‘ಪಾಂಡವಾಶ್ವಮೇಧ’ ಪ್ರಸಂಗವನ್ನೇ ತಿರುಗಾಟದ ಮೊದಲ ದಿನ ಪ್ರದರ್ಶಿಸುತ್ತವೆ. ಅಶ್ವಮೇಧದ ಇನ್ನೊಂದು ಆಖ್ಯಾನವಿರುವ ‘ರಾಮಾಶ್ವಮೇಧ’ವನ್ನು ‘ಆಡು’ವುದಿಲ್ಲವೆಂದಲ್ಲ; ಆದರೆ, ಕಥಾವಿನ್ಯಾಸ ಮತ್ತು ಪಾತ್ರ ವೈವಿಧ್ಯದ ದೃಷ್ಟಿಯಲ್ಲಿ ‘ಪಾಂಡವಾಶ್ವಮೇಧ’ವೇ ಹೆಚ್ಚು ಆಕರ್ಷಕ. ತಿರುಗಾಟ ಆರಂಭಿಸಿದ ಬಳಿಕವೂ ಕೆಲವು ರಾತ್ರಿಗಳಲ್ಲಿ ‘ಪಾಂಡವಾಶ್ವಮೇಧ’ ಪ್ರಸಂಗವನ್ನು ಪ್ರದರ್ಶಿಸುವುದೂ ಇದೆ.

ಹೀಗಾಗಿ ಕಟೀಲು ಬೀದಿಯಲ್ಲಿರುವ ಸಾಮಾನ್ಯ ಪ್ರೇಕ್ಷಕನ ಬಳಿ ಕೇಳಿದರೂ ಅವನಿಗೆ, ಯೌವನಾಶ್ವ, ಅನುಸಾಲ್ವ, ಸುಧನ್ವ, ನೀಲಧ್ವಜ, ಪ್ರಮಿಳೆ, ಬಭ್ರುವಾಹನ, ಮಯೂರಧ್ವಜ, ತಾಮ್ರಧ್ವಜ ಮುಂತಾದ ಎಲ್ಲರ ಕತೆಯೂ ಮೇಲ್ನೋಟಕ್ಕೆ ಗೊತ್ತು. ಅವನು ‘ಜೈಮಿನಿ ಭಾರತ’ವನ್ನು ಓದಿಯೇ ಇವನ್ನೆಲ್ಲ ತಿಳಿದುಕೊಂಡದ್ದಲ್ಲ. ಪುರಾಣಕತೆಗಳನ್ನು ತಿಳಿಯಬೇಕಾದರೆ ಅದಕ್ಕೆ ಸಂಬಂಧಿಸಿದ ಗ್ರಂಥವನ್ನು ಓದಲೇಬೇಕಾದ ಅನಿವಾರ್ಯತೆ ಕರಾವಳಿಯ ಯಕ್ಷಗಾನದ ಪ್ರೇಕ್ಷಕನಿಗೆ ಇದ್ದಂತಿಲ್ಲ. ಬಯಲಾಟಗಳನ್ನು ನೋಡಿಯೇ ಅವನು ಈ ಎಲ್ಲ ಕಾಥಾನುಭವ ಗಳನ್ನು ಪಡೆದುಕೊಂಡಿರುತ್ತಾನೆ. ಲಕ್ಷ್ಮೀಶನ ‘ಜೈಮಿನಿ ಭಾರತ’ದ ಕಥೆಗಳು ಕರಾವಳಿಯ ಸಾಮಾನ್ಯವ್ಯಕ್ತಿಗೂ ತಿಳಿದಿರುವುದು ಯಕ್ಷಗಾನದ ಮೂಲಕವೇ. ಜೈಮಿನಿ ಭಾರತವನ್ನು ಸ್ವತಃ ಓದಿದ್ದಾನೋ ಇಲ್ಲವೋ, ಆದರೆ, ಕಲಾವಿದನೊಬ್ಬ ಸುಧನ್ವಾರ್ಜುನ ಕಾಳಗದ ಯಾವುದಾದ ರೊಂದು (ಪದ ಪದ ಎಂದರೆ ಪದ್ಯ. ಯಕ್ಷಗಾನದಲ್ಲಿ ಪದ ಎಂಬುದು ಒಂದು ಪರಿಭಾಷೆ ಉದಾಹರಣೆಗೆ ‘ಸತಿಗೆ ಷೊಡಶದ ಋತುಸಮಯವೇಕಾದಶಿ’ ಎಂಬ ವಾರ್ಧಿಕದ ಸಾಲುಗಳೇ ಇರಲಿ ಅದನ್ನು ರಂಗದಲ್ಲಿ ಅಭಿನಯಿಸಿ ಅರ್ಥ ವ್ಯಾಖ್ಯಾನ ನೀಡುತ್ತಾನೆ. ಅದನ್ನು ನಿರ್ವಹಿ ಸುತ್ತಿರುವ ಅವನಿಗಾಗಲಿ, ಕೇಳುತ್ತಿರುವ ಸಹೃದಯನಿಗಾಗಲಿ ಅದು ಲಕ್ಷ್ಮೀಶನದೇ ಪದ್ಯ ಅಂತ ಅನ್ನಿಸುವುದೇ ಇಲ್ಲ. ಅಷ್ಟರಮಟ್ಟಿಗೆ ‘ಪಾಂಡವಾಶ್ವಮೇಧ’ದ ಎಲ್ಲ ಪ್ರಸಂಗ (ಕಾವ್ಯರೂಪದಲ್ಲಿ ರಚಿಸಿದ ಒಂದೊಂದು ಕಥಾನಕವನ್ನು ಯಕ್ಷಗಾನ ವಲಯದಲ್ಲಿ ಪ್ರಸಂಗವೆಂದು ಕರೆಯುತ್ತಾರೆ. ಪದ, ಪ್ರಸಂಗ ಮುಂತಾದ ಪರಿಭಾಷೆಗಳು ಯಕ್ಷಗಾನದಲ್ಲಿ ಅಲ್ಲದೆ, ಯಕ್ಷಗಾನಕ್ಕೆ ಸಮಾನಾಂತರವಾಗಿರುವ ನಾಡಿನ ಇತರ ಕಲೆಗಳಲ್ಲೂ ಇವೆ.)ಗಳು ಯಕ್ಷಗಾನದ್ದೇ ಆಗಿಬಿಟ್ಟಿವೆ. ಲಕ್ಷ್ಮೀಶನ ಕೃತಿ ಮತ್ತು ಜೈಮಿನಿ ಭಾರತದ ಒಳಸಂಬಂಧ ಎಂಥಾದ್ದೆಂದರೆ, ಕರಾವಳಿಯ ಯಕ್ಷಗಾನ ಕಲಾವಿದನೂ ಸಹೃದಯನೂ ಆ ಮಹಾಕವಿಯನ್ನು ನೋಡಿದ್ದೇ ಈ ಪ್ರಸಂಗಗಳೆಂಬ ಪುಟ್ಟಪುಟ್ಟ ಕಿಟಕಿಗಳ ಮೂಲಕ.

ಆಕರ ಗ್ರಂಥವಾಗಿ ಲಕ್ಷ್ಮೀಶನಜೈಮಿನಿ ಭಾರv’

ಯಕ್ಷಗಾನದ ಪಾಂಡವಾಶ್ವಮೇಧ ಪ್ರಸಂಗವಾಹಿನಿಯಲ್ಲಿ ಬರುವ ಒಂದೆರಡು ಕತೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಜೈಮಿನಿ ಭಾರತದ ಆಧಾರದಲ್ಲಿಯೇ ರಚಿತವಾದವು. ಕಥೆಗಳ ಓಘವೂ ಜೈಮಿನಿಭಾರತದ ಮಾದರಿಯಲ್ಲಿವೆ. ಸುಮಾರು ೩೪ ಸಂಧಿಗಳಲ್ಲಿ ಹರಡಿಕೊಂಡಿರುವ ಜೈಮಿನಿಭಾರತವು ನೂರಾರು ಯಕ್ಷಗಾನ ಪ್ರಸಂಗಗಳಾಗಿ ಮರುನಿರೂಪಣೆ ಗೊಂಡಿವೆ. ಇಲ್ಲಿನ ಪದ್ಯಗಳಲ್ಲಿ ವಾರ್ಧಕ ಷಟ್ಪದಿಗಳ ದಟ್ಟ ಪ್ರಭಾವವಿದೆ. ಕೆಲವು ಪ್ರಸಂಗಗಳಲ್ಲಿ ಲಕ್ಷ್ಮೀಶನದ್ದೇ ಪದ್ಯಗಳನ್ನು ಯಥವತ್ತಾಗಿ ಬಳಸಿಕೊಳ್ಳಲಾಗಿದೆ!

ಮೂಲಜೈಮಿನಿಯ ಸಂಸ್ಕೃತ ಕೃತಿಯು ಲಕ್ಷ್ಮೀಶನ ಮೂಲಕ ಕನ್ನಡದಲ್ಲಿ ‘ದೇಸಿ’ ರೂಪು ದಳೆದು, ಆ ಬಳಿಕ ಯಕ್ಷಗಾನ ಕೃತಿಗಳೆಂಬ ಹಾಡುಗಬ್ಬಗಳ ಮೂಲಕ ಹಾದು ಹೋಗಿ, ಬಯಲಾಟವಾಗಿ ರಂಗಸ್ಥಳದಲ್ಲಿ ಆಕಾರಪಡೆದು ಸಹೃದಯರಿಗೆ ತಲುಪುವ ಪಥವು ಧರ್ಮರಾಯನ ಅಶ್ವಪಥದಷ್ಟೇ ಕುತೂಹಲಕಾರಿಯಾದುದು. ಕೃತಿಯಿಂದ ಕೃತಿಗೆ, ಹಂತ ಹಂತವಾಗಿ ಎಷ್ಟೊಂದು ಬದಲಾವಣೆಗಳಾವೆ! ಲಕ್ಷ್ಮೀಶನು ‘ಚಾರಕರು ಬಂದು ಒರೆದರು’ ಎಂಬ ಒಂದು ವಾಕ್ಯವನ್ನು ಬಳಸಿದ್ದರೆ ಯಕ್ಷಗಾನ ಪ್ರಸಂಗಕರ್ತರು ಚಾರಕನ ಒಂದು ಪಾತ್ರವನ್ನೇ ಸೃಷ್ಟಿಸಿ ಕೃತಿಯನ್ನು ವಿಸ್ತರಿದ್ದಾರೆ! ಜೈಮಿನಿ ಭಾರತವನ್ನು ಆಕರವಾಗಿ ಸ್ವೀಕರಿಸುತ್ತಲೇ ತಾತ್ತ್ವಿಕವಾಗಿ ಅದರಿಂದ ಬೇರೆಯಾಗಿ ನಿಲ್ಲುವ ‘ಪ್ರತಿರೋಧಾತ್ಮಕ’ ಭಾವವೂ ಒಳಗಿದೆ. ಒಂದು ನಾಟಕ ಕೃತಿಯನ್ನು ರಂಗಕ್ಕೇರಿಸುವಾಗ ರಂಗನಿರ್ದೇಶಕ ಅದನ್ನು ಬೇರೊಂದು ಆಯಾಮಕ್ಕೆ ವಿಸ್ತರಿಸುವಂತೆ ಜೈಮಿನಿಭಾರತವೂ ಯಕ್ಷಗಾನದ ‘ದೃಶ್ಯ’ ಆಯಾಮವನ್ನು ಪಡೆದುಕೊಂಡಿದೆ.

ದೀಪಾವಳಿಯ ಬಳಿಕದ ಒಂದು ರಾತ್ರಿ ಕಾರವಾರದಿಂದ ಕಾಸರಗೋಡುವರೆಗೆ ಕಡಲತೀರದ ಗುಂಟ ಸಾಗಿದರೆ ನೂರಾರು ಬಯಲಾಟ ಪ್ರಸಂಗಗಳ ಪ್ರದರ್ಶನಗಳನ್ನು ವೀಕ್ಷಿಸಬಹುದು. ಕೆಲವು ವೃತ್ತಿಪರ ಮೇಳಗಳದ್ದು. ಕೆಲವು ಹವ್ಯಾಸಿ ಸಂಘಟನೆಗಳವು. ಇಂಥ ಯಕ್ಷಗಾನಕ್ಕೆ ಕನಿಷ್ಠ ಮುನ್ನೂರು ವರ್ಷಗಳ ಇತಿಹಾಸವನ್ನು ಕಲ್ಪಿಸುವುದಾದರೂ ಇಲ್ಲಿ ರಚನೆಗೊಂಡ ಪ್ರಸಂಗಗಳು ಎಷ್ಟಿರಬಹುದು? ಒಂದೇ ಕತೆಯಾದರೂ ಅದರ ಸುತ್ತ ಹೆಣೆದ ಪ್ರಸಂಗಗಳು ಅನೇಕ. ಉದಾಹರಣೆಗೆ ‘ಬಭ್ರುವಾಹನ ಕಾಳಗ’. ಸುಮ್ಮನೆ ಲೆಕ್ಕ ಮಾಡಿದರೂ ಮೂರಕ್ಕಿಂತ ಹೆಚ್ಚು ಪ್ರಸಂಗಗಳು ಕೈಗೆ ಸಿಗುತ್ತವೆ. ಪ್ರಸಂಗ ಪ್ರಸ್ತುತಿಯಲ್ಲಿ ಒಬ್ಬ ಭಾಗವತನಂತೆ ಇನ್ನೊಬ್ಬ ರಿಲ್ಲ. ಒಂದು ತಿಟ್ಟಿನ ಪದ್ಯಗಳನ್ನು ಇನ್ನೊಂದು ತಿಟ್ಟಿನವರು ಹಾಡಲು ಸಿದ್ಧರಿಲ್ಲ. ಹಾಗಾಗಿ ಒಂದೇ ಕಥಾನಕದ ಮೇಲೆ ಹತ್ತಾರು ಪ್ರಸಂಗಗಳು ರಚನೆಗೊಂಡವು.

ಜೈಮಿನಿಭಾರತದ ಆಧಾರದಲ್ಲಿ ರಚನೆಗೊಂಡ ಪ್ರಸಂಗಗಳು ನೂರಾರು ಇವೆ. ಒಂದೇ ಪ್ರಸಂಗವನ್ನು ಹಲವು ಕವಿಗಳು ಬರೆದಿದ್ದಾರೆ. ಕೆಲವು ಪ್ರಕಟವಾಗಿದ್ದರೆ ಇನ್ನು ಕೆಲವು ಹಸ್ತಪ್ರತಿಯಲ್ಲಿಯೇ ಉಳಿದಿವೆ. ವಾಸ್ತವವಾಗಿ ಯಕ್ಷಗಾನ ಪ್ರಸಂಗಗಳು ಆಶುಸಾಹಿತ್ಯ ಗಳಾಗಿಯೇ ಜನಪ್ರಿಯವಾಗಿದ್ದವು. ಮುದ್ರಣ ತಂತ್ರಜ್ಞಾನ ಆರಂಭವಾದ ಬಳಿಕ ಆ ಪ್ರಸಂಗಗಳಿಗೂ ಅಚ್ಚಿನ ಮನೆಗೆ ಹೋಗುವ ಅವಕಾಶ ಒದಗಿ ಬಂತು. ಪಾವಂಜೆ ಗುರುರಾವ್ ಆಂಡ್ ಸನ್ಸ್ ಶ್ರೀಮನ್ಮಧ್ವಸಿದ್ಧಾಂತ ಗ್ರಂಥಾಲಯದವರು ಆರಂಭದಲ್ಲಿ ಯಕ್ಷಗಾನ ಪ್ರಸಂಗಗಳನ್ನು ಮುದ್ರಿಸಿದರು.

ಲಕ್ಷ್ಮೀಶನ ಕೃತಿಯು ಯಕ್ಷಗಾನಕಲೆಯನ್ನು ಪ್ರಭಾವಿಸಿದ್ದೇಕೆ?

ಒಂದು ಮಹಾಕೃತಿ ಮುಂದಿನ ಕಾಲದವರ ಸೃಜನಶೀಲ ಪ್ರಜ್ಞೆಯನ್ನು ಪ್ರಭಾವಿಸುವುದು ಸಹಜವಾದ ಸಂಗತಿಯಾಗಿದೆ. ಆ ಕಾಲದ ಪಾಶ್ಚಾತ್ಯ ಬರಹಗಾರರು ಅರಿವಿದ್ದೋ ಅರಿವಿಲ್ಲ ದೆಯೋ ಷೇಕ್ಸ್‌ಪಿಯರ್‌ನ ಪ್ರಭಾವಕ್ಕೊಳಗಾಗುತ್ತಿದ್ದರು. ಷೆಕ್ಸ್‌ಪಿಯರನ ನಾಟಕದ ವಾಕ್ಯಗಳು ಆ ಕಾಲದ ಜನಪದ ಲಾವಣಿಗಳಲ್ಲಿ ಸೇರಿಹೋಗಿದ್ದವು. ಜಾನ್ ಕೀಟ್ಸ್‌ನಂಥ ಕವಿಗಳು ಕೂಡಾ ಷೇಕ್ಸ್‌ಪಿಯರ್‌ನಿಂದ ಪ್ರಭಾವಕ್ಕೊಳಗಾಗಿದ್ದನ್ನು ಸ್ವತಃ ಹೇಳಿಕೊಂಡಿದ್ದರು. ಕೆ.ಎಸ್. ನರಸಿಂಹಸ್ವಾಮಿಯವರ ಹಾಡನ್ನು ಹಾಡುತ್ತಾ ಪುಟ್ಟ ಹುಡುಗಿಯೊಬ್ಬಳು ಪೇಟೆಯಲ್ಲಿ ಸಿಕ್ಕಿದಾಗ ಸ್ವತಃ ಕವಿಗೇ ಬೆರಗಾಯಿತಂತೆ. ಎಲ್ಲ ಕಾಲದ ಕವಿಗಳು ಭೂತಕಾಲದ ಮತ್ತು ಸಮಕಾಲೀನ ಬರಹಗಾರರ ಪ್ರಭಾವಕ್ಕೊಳಗಾಗುವ ದೃಷ್ಟಾಂತಗಳಿರುವಾಗ, ಯಕ್ಷಗಾನ ಕವಿಗಳು ತೊರವೆ ರಾಮಾಯಣ, ಗದುಗಿನ ಭಾರತ, ಜೈಮಿನಿ ಭಾರತ ಮುಂತಾದ ಉತ್ಕೃಷ್ಟಕೃತಿಗಳಿಂದ ಪ್ರಭಾವಿತ ರಾಗಿರುವುದು ಆಶ್ಚರ್ಯದ ಸಂಗತಿಯೇನೂ ಅಲ್ಲ. ಯಕ್ಷಗಾನ ಕವಿಗಳು ಕಥಾವಸ್ತುಗಳಿಗೆ ಆಕರಗಳಾಗಿ ಇಂಥ ಮಹಾನ್ ಕೃತಿಗಳನ್ನು ಬಳಸಿಕೊಂಡರೆ, ನಿರೂಪಣಾಶೈಲಿಗೆ ದಾಸ ಸಾಹಿತ್ಯ ಶೈಲಿಯನ್ನು ಆಧರಿಸಿದರು.

  • ಯಕ್ಷಗಾನವು ವೀರರಸ ಪ್ರಧಾನವಾದ ಒಂದು ಕಲೆ. ಪರಿಣಯವಾಗಲಿ, ಭಕ್ತಿಯಾಗಲಿ, ಸಂಧಾನವಾಗಲಿ ಅದು ಬರುವುದು ಕಾಳಗದ ಪ್ರಸಂಗಗಳಲಿಯೇ. ಮಹಾಕಾವ್ಯಗಳ ಮುಖ್ಯ ಆಶಯ ಭಕ್ತಿ ಮತ್ತು ವೀರ. ಜೈಮಿನಿ ಭಾರತದ ಕತೆಯೂ ಯುದ್ಧದ ಸುತ್ತಲೇ ಹೆಣೆಯಲ್ಪಟ್ಟಿರು ವಾಗ ಯಕ್ಷಗಾನ ಕಾವ್ಯವಾಗಲಿ, ಯಕ್ಷಗಾನ ಕಲೆಯಾಗಲಿ ಈ ಕಾವ್ಯವಸ್ತುವನ್ನು ನೆಚ್ಚಿಕೊಳ್ಳು ವುದು ಸಹಜವೇ ಆಗಿದೆ.
  • ಯಕ್ಷಗಾನ ನಿತ್ಯಪ್ರದರ್ಶನ ಕಲೆಯಾದುದರಿಂದ ಕಥಾವೈವಿಧ್ಯಬೇಕು. ಮಹಾಭಾರತ ಪ್ರಸಂಗಗಳನ್ನು ದಾಟಿ, ಅಶ್ವಮೇಧದ ಪ್ರಸಂಗಗಳನ್ನು ಬರೆಯಹೊರಟಾಗ ಯಕ್ಷಗಾನ ಕವಿಗಳಿಗೆ ಫಕ್ಕನೆ ಆಕರವಾಗಿ ದೊರೆತದ್ದು ಜೈಮಿನಿಭಾರತ. ಜೈಮಿಭಾರತದ ಕಥಾವಿನ್ಯಾಸ, ಲೌಕಿಕತೆ ಪಾರಮಾರ್ಥಿಕತೆಗಳ ನಡುವೆ ತುಯ್ಯುವ ತಾತ್ವಿಕತೆ ಇವೆಲ್ಲವೂ ಯಕ್ಷಗಾನ ಕಲಾ ಆಕೃತಿಗೆ ಹೊಂದಿಕೊಳ್ಳುವಂಥದ್ದಾಗಿರುವುದು ‘ಪಾಂಡವಾಶ್ವಮೇಧ’ ಪ್ರಸಂಗಗಳ ರಚನೆಗೆ ಮುಖ್ಯ ಕಾರಣವಾಗಿರಬಹುದು.
  • ಜೈಮಿನಿಭಾರತವು ವಾಚನದ ಮೂಲಕ ಪ್ರಸಿದ್ದಿಗೊಂಡ ಕಲೆಯಾಗಿದೆ. ಆ ಕಾವ್ಯ ನಿರೂಪಣೆ ಮತ್ತು ವಾಚನದಲ್ಲಿ ಒಂದು ರೀತಿಯ ‘ದೃಶ್ಯ’ ಸತ್ವವಿದೆ. ಲಕ್ಷ್ಮೀಶನ ಕಾವ್ಯದ ಚಿತ್ರಾತ್ಮಕ ನಿರೂಪಣೆಯು ಯಕ್ಷಗಾನದಂಥ ರಂಗಕಲೆಗೆ ಆಕರ್ಷಕವಾಗಿ ಕಂಡಿರಬಹುದು. ಇಂಥಾದ್ದೊಂದು ವಿಶಿಷ್ಟಗುಣ ನಡುಗನ್ನಡದ ಎಲ್ಲ ಕಾವ್ಯಗಳಲ್ಲಿಯೂ ಇದೆ. ಹಾಗಾಗೆಯೇ ಹೆಚ್ಚಿನ ಯಕ್ಷಗಾನ ಕೃತಿಗಳು ಮಧ್ಯಕಾಲೀನ ಕಾವ್ಯಕೃತಿಗಳ ಆಧಾರದಲ್ಲಿ ರಚನೆಗೊಂಡವು. ಹಳೆಗನ್ನಡ ಕಾವ್ಯಕೃತಿಗಳು ಯಕ್ಷಗಾನವನ್ನು ಆಕರ್ಷಿಸದಿರುವುದಕ್ಕೂ ಇಲ್ಲೇ ಕಾರಣ ಹುಡುಕುಬಹುದು.
  • ಇನ್ನೊಂದು ಮುಖ್ಯ ಕಾರಣ, ಕಾವ್ಯ ನಿರೂಪಣೆಯ ತಾಂತ್ರಿಕ ವಿಷಯ. ಜೈಮಿನಿಭಾರತ ವಾರ್ಧಿಕ ಷಟ್ಪದಿಯ ಛಂದೋಬಂಧವನ್ನು ಹೊಂದಿದೆ. ವಾರ್ಧಿಕ, ಭಾಮಿನಿಗಳ ಛಂಧಸ್ಸಿಗೂ ಯಕ್ಷಗಾನ ಮಟ್ಟುಗಳಿಗೂ ಅಂತಃಸಂಬಂಧವಿದೆ. ಭಾಮಿನಿಯ ಪದ್ಯಗಳು ತ್ರಿವುಡೆ ತಾಳಕ್ಕೆ ಸಂಬಂಧಿಸಿದ ಶರೀರಕ್ಕೂ ವಾರ್ಧಿಕದ ಪದ್ಯಗಳು ಝಂಪೆ ತಾಳದ ಶರೀರಕ್ಕೂ ಅನ್ವಯಿಸುವಂಥಾ ದ್ದಾಗಿವೆ. ಇದನ್ನೇ ಸರಳವಾಗಿ ಹೇಳುವುದಿದ್ದರೆ, ಲಕ್ಷ್ಮೀಶನ ಸಾಲುಗಳನ್ನು ಯಕ್ಷಗಾನದ ಝಂಪೆ ತಾಳದ ಮಟ್ಟುವಿನಲ್ಲಿ ಸೊಗಸಾಗಿ ಹಾಡಬಹುದಾಗಿದೆ.

ವಾರ್ಧಿಕದಲ್ಲಿ ೫ ಮಾತ್ರೆಯ ೪ ಗಣಗಳು, ೧, ೨, ೪, ೫ನೆಯ ಪಾದಗಳಲ್ಲಿ ಬರುವುವು. ೩ನೆಯ ಮತ್ತು ೬ನೆಯ ಪಾದಗಳಲ್ಲಿ ೫ ಮಾತ್ರೆಯ ೬ ಗಣಗಳು ಮತ್ತು ಒಂದು ಗುರು ಇರುತ್ತವೆ. ಯಕ್ಷಗಾನ ಪ್ರಸಂಗಗಳಲ್ಲಿರುವ ಝಂಪೆ ತಾಳ ಮಟ್ಟಿನ ಪದ್ಯಗಳಲ್ಲಿಯೂ ಸಾಮಾನ್ಯವಾಗಿ ೫ ಮಾತ್ರೆಯ ಗಣಗಳೇ ಬರುತ್ತವೆ. ತುಜಾವಂತು ಝಂಪೆ, ಕಾಂಭೋಧಿ ಝಂಪೆ, ಭೈರವಿ ಝಂಪೆ ಮುಂತಾದ ಮಟ್ಟುಗಳಲ್ಲಿ ರಚಿತವಾದ ಯಕ್ಷಗಾನ ಪದಗಳು ಪಗಣಾತ್ಮಕ (ಪಂಚಮಾತ್ರಾಗಣ)ವಾಗಿದ್ದು ವಾರ್ಧಿಕದ ಛಂದಸ್ಸಿಗೆ ನಿಕಟವಾಗಿವೆ.

ವಾರ್ಧಿಕ ಮತ್ತು ಭಾಮಿನಿಯ ಪದ್ಯಗಳ ಓಘವು ಯಕ್ಷಗಾನ ಮಟ್ಟುಗಳ ಛಂಧಸ್ಸಿಗೆ ಸಮೀಪವಿದ್ದು ಅಥವಾ ಅವುಗಳ ಮಧ್ಯೆ ಅಂತಃಸಂಬಂಧವಿದ್ದು ಅವು ಒಂದು ರೀತಿಯ ತಾಳಬದ್ಧತೆ ಮತ್ತು ಗೇಯ ಸೌಖ್ಯವನ್ನು ಹೊಂದಿವೆ. ಹಾಗಾಗಿಯೇ ಚ್ಚಿನ ಯಕ್ಷಗಾನ ಪ್ರಸಂಗಗಳಲ್ಲಿ ಲಕ್ಷ್ಮೀಶನ ಪದ್ಯಗಳನ್ನು ಇದ್ದಕ್ಕಿದ್ದಂತೆಯೇ ಸ್ವೀಕರಿಸಲು ಯಕ್ಷಗಾನ ಕವಿಗಳಿಗೆ ಅನುಕೂಲವಾಗಿದೆ.

ವಾಜಿಗ್ರಹಣ, ಯೌವನಾಶ್ವ ಕಾಳಗ

ಯಾವುದೇ ಒಂದು ಪ್ರಸಂಗವನ್ನು ಅದು ಜೈಮಿನಿಭಾರತದ ಆಧಾರದ ಕೃತಿಯೇ ಇರಬಹುದು. ಒಬ್ಬನೇ ಕವಿ ಬರೆದ ಒಂದೂ ಉದಾಹರಣೆಯೂ ಇಲ್ಲ. ಈಗ ಪ್ರದರ್ಶನವೇ ಇಲ್ಲ ಎಂಬಷ್ಟು ಮೆರೆಗೆ ಸೇರಿರುವ ವಾಜಿಗ್ರಹಣ, ಯೌವನಾಶ್ವಕಾಳಗ ಎಂಬ ಕಥಾನಕವನ್ನು ಎತ್ತಿಕೊಂಡರೂ ನಾಲ್ವರು ಕವಿಗಳು ಬರೆದಿರುವ ಕೃತಿಗಳು ಈಗ ನೇರವಾಗಿ ಲಭ್ಯವಾಗುತ್ತವೆ. ಇನ್ನು ಪ್ರಕಟವಾಗದ ಕೃತಿಗಳೆಷ್ಟು ಇರಬಹುದು!

ಜಾನಕೈ ತಿಮ್ಮಪ್ಪ ಹೆಗಡೆ, ಚವರ್ಕಾಡು ಶಂಭು ಜೋಯಿಸ, ಬಡೆಕ್ಕಿಲ ವೆಂಕಟರಮಣ ಭಟ್ಟ, ಶಿರೂರು ಫಣಿಯಪ್ಪಯ್ಯ. ಬಡೆಕ್ಕಿಲ ವೆಂಕಟರಮಣ ಭಟ್ಟರು ಬರೆದ ಪ್ರಸಂಗವು ೧೯೫೭ರಲ್ಲಿ ಅಚ್ಚಾಗಿದೆ. ಈ ಪುಟ್ಟ ಪುಸ್ತಕದ ಆರಂಭದಲ್ಲಿ ಯಕ್ಷಗಾನ ಸಂಶೋಧಕ ಮುಳಿಯ ಮಹಾಬಲ ಭಟ್ಟರು ಕವಿ-ಕಾವ್ಯ ಪರಿಚಯ ನೀಡಿದ್ದಾರೆ. ಅವರದೇ ವಾಕ್ಯಗಳನ್ನು ಉದ್ಧರಿಸು ವುದಿದ್ದರೆ, “ಭೀಮ, ವೃಷಕೇತು, ಮೇಘನಾದರು ಭದ್ರಾವತಿಗೆ ನಡೆದು, ಯಜ್ಞಾಶ್ವವನ್ನು ಬಂಧಿಸಿ, ಇದಿರಿಸಿದ ಅನುಸಾಲ್ವನನ್ನು ಗೆದ್ದು, ಅವನ ಸ್ನೇಹವನ್ನು ಗಳಿಸಿ, ಹಸ್ತಿನಾವತಿಗೆ ಮರಳುವ ಜೈಮಿನಿಭಾರತದ ಕಥಾನಕವೇ ಇಲ್ಲಿ ಪ್ರಸಂಗವಾಗಿ ರೂಪಿತವಾಗಿದೆ”. ಮುಂದುವರಿದು, ಯಕ್ಷಗಾನ ಪ್ರಸಂಗಗಳಲ್ಲಿ ಶುದ್ಧವೂ ಲಲಿತವೂ ಆಗಿ ಸಾಹಿತ್ಯ ಕ್ಷೇತ್ರದಲ್ಲಿ ಕಾಲಿಡುವ ಯೋಗ್ಯತೆಯುಳ್ಳವು ಕಡಿಮೆ. ಆ ಕೊರತೆಯನ್ನು ಈ ಪ್ರಸಂಗವು ಸ್ವಲ್ಪಮಟ್ಟಿಗಾದರೂ ನೀಗಿಸಲು ನೆರವಾಗಿದೆ”.

ಬಡೆಕ್ಕಿಲ ವೆಂಕಟರಮಣ ಭಟ್ಟರ ಒಂದು ವಾರ್ಧಕ ರಚನೆಯನ್ನು ನೋಡಿ :

ಕೇಳಲೆ ಮಹಿಪಾಲ ಕೌರವಾದ್ಯರನೆಲ್ಲ
ಕಾಳಗದಿ ಹರಿಯ ದಯದಿಂ ಗೆಲ್ದು ಧರೆಯನಿದ
ನಾಳುತಿರ್ದಹ ಧರ್ಮನಂದನಂ ಧರ್ಮದಿಂ ತಮ್ಮಂದಿರಿಂದ ಕೂಡಿ

ಜೈಮಿನಿ ಭಾರತದ ವಾಕ್ಯಗಳನ್ನು ನೋಡಿ

ಕೇಳಲೆ ನೃಪಾಲ ಪಾಂಡವರ ಕತೆಯಿದು ಪುಣ್ಯ
ದೇಳಿಗೆಯಲಾ ಸುಯೋಧನ ಮೇದಿನೀಶನಂ
ಕಾಳಗದೊಳುರೆ ಗೆಲ್ದು ಬಳಿಕವರ ಹಸ್ತಿನಾಪುರ ನಿಜ ಸಾಮ್ರಾಜ್ಯದ

ಬಡೆಕ್ಕಿಲರು ಪ್ರಸಂಗದ ಪ್ರದರ್ಶನ ಔಚಿತ್ಯವನ್ನು ಪರಿಗಣಿಸಿ ಧರ್ಮರಾಯ-ಭೀಮರ ಸಂಭಾಷಣೆಯನ್ನು ಬರೆದಿದ್ದಾರೆ. ಉದಾಹರಣೆಗೆ ಪ್ರದರ್ಶನ ಸಂದರ್ಭದಲ್ಲಿ ಭೀಮನೊಬ್ಬನೇ ಮಾತನಾಡಿದರೆ ಮತ್ತು ಉಳಿದ ಪಾಂಡವರು ಸುಮ್ಮನೆ ನಿಂತರೆ ಅದು ಅಭಾಸವಾಗುತ್ತದೆ. ಉಳಿದ ಪಾಂಡವರಿಗೂ ಕೊಂಚ ‘ಕೆಲಸ’ ಕೊಡುವ ಚಾಕಚಕ್ಯತೆ ಭಾಗವತನಲ್ಲಿದ್ದಾಗ ಪ್ರದರ್ಶನ ಯಶಸ್ವಿಯಾಗುತ್ತದೆ. ಮೂಲಕೃತಿ, ಪ್ರಸಂಗಕರ್ತನ ಮೂಲಕ ಭಾಗವತನ ಕೈಸೇರಿ ಪ್ರದರ್ಶನ ಕ್ಕೊಳಪಡುವಾಗ ಕತೆಯಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತವೆ.

ನೀಲಧ್ವಜ ಕಾಳಗದ ಪ್ರಸಂಗದಲ್ಲಿ ಕೆಲವು ಪ್ರಸಂಗಕರ್ತರು ಅನುಸಾಲ್ವ ಗರ್ವಭಂಗವನ್ನೂ ಸೇರಿಸಿ ರಚಿಸಿದ್ದಾರೆ. ಕೆಲವರು, ನೀಲಧ್ವಜನ ಕಥಾನಕವನ್ನು ಮುಂದೆ ಬರುವ ಸುಧನ್ವ ಕಾಳಗ ಪ್ರಸಂಗ ಕೃತಿಯ ಒಂದು ಭಾಗವಾಗಿ ಸೇರಿಸಿದ್ದಾರೆ. ನೀಲಧ್ವಜ ಕಾಳಗ ಪ್ರಸಂಗವನ್ನು ಬರೆದ ಓರ್ವ ಕವಿಯ ಹೆಸರೇ ತಿಳಿದಿಲ್ಲವಾಗಿದ್ದೂ ಉಳಿದಂತೆ ನಾಗಪ್ಪ ಹೆಗಡೆ, ಶೀರೂರು ಫಣಿಯಪ್ಪಯ್ಯ, ಗಂಗಾಧರ ರಾಮಚಂದ್ರಯ್ಯ ಮುಂತಾದವರು ಈ ಪ್ರಸಂಗವನ್ನು ರಚಿಸಿದರೆಂಬ ದಾಖಲೆಯಿದೆ.

ಅನುಸಾಲ್ವ ಗರ್ವಭಂಗ ಮತ್ತು ನೀಲಧ್ವಜನ ಕಾಳಗ ಎಂಬ ಪ್ರಸಂಗವು ಅಜ್ಜನಗದ್ದೆ ಶಂಕರನಾರಾಯಣಯ್ಯ ಎಂಬವರಿಂದ ರಚಿತವಾಗಿದ್ದು ೧೯೫೪ರಲ್ಲಿ ಕಾರ್ಕಳ ವಿಟ್ಟಪ್ಪಶೆಣೈ ಆಂಡ್ ಸನ್ಸ್ ಪುಸ್ತಕ ವ್ಯಾಪಾರಿಗಳು, ಕಾರ್ಕಳ ಇವರಿಂದ ಪ್ರಕಟವಾಗಿದೆ.

ಅಜ್ಜನಗದ್ದೆ ಶಂಕರನಾರಾಯಣಯ್ಯ ಅವರ ಕೆಲವು ಸಾಲುಗಳು

ಭರಿತವಾಗಿರ್ಪ ಬೆಳ್ನೊರೆಗಳಿಂ ತೆರೆಗಳಿಂ |
ತಿರುತಿರುಗುತೇಳ್ವ ಬೊಬ್ಬುಳಿಗಳಿಂ ಸುಳಿಗಳಿಂ |
ಭರದೊಳೆಳೆಕೊಂಬ ನಾನಾ ಪ್ರವಾಹಗಳಿಂ ಚರಿಪ ಜಲಚರಗಳಿಂದ |
ಮಿರುಪ ಶಂಖದ ವಿಮಲಸರಿಗಳಿಂ ಪರಿಪರಿಯ
ಮೆರೆವ ರತ್ನಂಗಳಿಂ ವಿವಿಧವಹ ಧ್ವನಿಗಳಿಂ |
ದಿರದೆ ತುಂತುರಿನ ನೀರ್ವನಿಗಳಿಂ ಗಂಭೀರತನಗಳಿಂ ಕಡಲೆಸೆದುದು |
ಅಜ್ಜನಗದ್ದೆಯವರಿಗೆ ಆಧಾರವಾದ ಲಕ್ಷ್ಮೀಶನ ಸಾಲುಗಳು
ಘಳಿಘಳಿಸುತ್ತೇಳ್ವ ಬೊಬ್ಬುಗಳಿಗಳಿಂ ಸುಳಿಗಳಿಂ |
ಸೆಳೆಸೆಳೆದು ನಡೆದು ಪೆರ್ದೆರೆಗಳಿಂ ನೊರೆಗಳಿಂ |
ತೊಳೆವ ತುಂತುರಿನ ಸೀರ್ಪನಿಗಳಿಂ ಧ್ವನಿಗಳಿಂ ವಿವಿಧ ರತ್ನಗಳಿಂದೆ |
ಒಳಕೊಳ್ವ ನಾನಾ ಪ್ರವಾಹದಿಂ ಗ್ರಾಹದಿಂ |
ದಳತೆಗಳವಡದೆಂಬ ತೆಂಪಿನಿಂ ಗುಂಪಿನಿಂ |
ದಳದ ಪವಳದ ನಿಮಿದರ ಕುಡಿಗಳಿಂತಡಿಗಳಿಂದಾ ಕಡಲ್ ಕಣ್ಗೆಸೆದುದು ||

ಲಕ್ಷ್ಮೀಶನ ಈ ಕೆಳಗಿನ ಸಾಲುಗಳನ್ನು ನೋಡಿ

ದೇವ ನಿಮ್ಮರ್ಜುನನ ಸಲುಗೆ ನಮಗುಂಟೆ ಸಂ |
ಭಾವಿಸುವರಿಲ್ಲೆಮ್ಮನಿಲ್ಲಿ ನಿಲಿಸಿದರೆನಲ್ |

ಇದನ್ನು ಶಂಕರನಾರಾಯಣಯ್ಯ ಮಟ್ಟೆ ತಾಳದ ಮಟ್ಟುವಿಗೆ ಪರಿವರ್ತಿಸಿದ್ದಾರೆ.

ಸರಸಿಜಾಕ್ಷ ನಿನ್ನ ಕೂಡೆ | ನರನ ಸಲುಗೆಯೆನಗೆಯಿರುವುದೆ
ಪುರದ ದ್ವಾರದಲ್ಲಿಯೆನ್ನ | ಬರಿದೆ ತಡೆಸಿದೆ |

ಕೆಲವೊಮ್ಮೆ ಮೂಲಕೃತಿಯಲ್ಲಿ ವಿಸ್ತಾರವಾಗಿರುವ ಕತೆಗಳನ್ನು ಯಕ್ಷಗಾನ ಪ್ರಸಂಗಗಳಲ್ಲಿ ಗೌಣವಾಗಿಸಬೇಕಾಗುತ್ತದೆ. ರೂಢಿಯ ಮಾತಿನಲ್ಲಿ ಇದನ್ನು ‘ಕತೆಯನ್ನು ಹಾರಿಸುವುದು’ ಎಂದು ಹೇಳುತ್ತಾರೆ. ನೀಲಧ್ವಜ-ಸುಧನ್ವಕಾಳಗ ಪ್ರಸಂಗಧಲ್ಲಿ ಕತೆಯನ್ನು ಲಂಬಗೊಳಿಸದೆ ನಿರೂಪಿಸಿದ ಒಂದು ಉದಾಹರಣೆ ನೋಡಿ.

ಪರಿಯೊಳಾ ಜ್ವಾಲೆ ನರಗೆ ಶಾಪವ ಕೊಡಿಸಿ |
ತಾಪದಿಂದನಲನೊಳ್ ಪ್ರಾಣವುಳಿದುಂ ಪೋಗಿ |
ಪರಾಕ್ರಮಿ ಬಭ್ರುವಾಹನನ ಬತ್ತಕೆಯೊಳಗಿರ್ದಳತಿ ವೈರದಿ |
ಭೂಪ ಕೇಳ್ ತರುಣಿಯರ ಛಲವೆಂತೊ ಪೇಳಲರಿ |
ದಾ ಪಾರ್ಥನಶ್ವ ವಿಂಧ್ಯಾಚಲದಿ ಕಾಲ್ಸಿಕ್ಕಿ |
ತಾಪಸೋತ್ತಮ ಸೌಭರಿಯ ದಯದಿ, ಬಿಡಿಸೆ ಹಂಸಧ್ವಜನ ಪುರವ ಹೊಗಲು ||

ಲಕ್ಷ್ಮೀಶನು ಹತ್ತಕ್ಕಿಂತಲೂ ಹೆಚ್ಚಿನ ಷಟ್ಪದಿಗಳಲ್ಲಿ ಹೇಳಿರುವುದನ್ನು ಇಲ್ಲಿ ಒಂದೇ ಷಟ್ಪದಿಯಲ್ಲಿ ಹೇಳಿರುವುದು ಗಮನಾರ್ಹ.

‘ಜೈಮಿನಿಭಾರತದೊಳಗಣ ಯಕ್ಷಗಾನ ನೀಲಧ್ವಜ ಕಾಳಗವು’ ಎಂಬ ಪ್ರಸಂಗವನ್ನು ಉಡುಪಿಯ ಶ್ರೀಮನ್ಮಧ್ವ ಸಿದ್ಧಾಂತ ಗ್ರಂಥಾಲಯವು ೧೯೩೨ರಲ್ಲಿ ಪ್ರಕಟಿಸಿದ್ದು ಇದನ್ನು ಕಡಂದಲೆ ರಾಮರಾಯ ಎಂಬವರು ಬರೆದಿದ್ದಾರೆ. ಈ ಪ್ರಸಂಗದ ಕೆಲವು ಸಾಲುಗಳು ಜನಪದೀಯ ಶೈಲಿಯಲ್ಲಿರುವುದು ಕುತೂಹಲಕರ.

ವಚನ-ಏಕತಾಳ

ಕಾಟಕ ಹುಡುಗರು | ವೋಟಾಗಿ ಬಂದು | ಈಟಾಗಿ ದಿನ್ನೇಮ್ತೇವು
ಭರಾ ಪ್ರವೀ ದೊರೆಯೆ ||
ಕಾಪಿಅಷ್ಟತಾಳ
ಏನ್ಕಾಂತ್ರಿ ನಮ್ಮಮ್ಮ ಈಗಾ | ಬಂದು | ದ್ಯಾನ್ಕಿಲ್ಲ ಹೈಕೆಲ್ಲಿ
ಐಸೇಳಿ ಬೇಗಾ || ಏನ್ಕಾಂತ್ರಿ ||

ಸುಧನ್ವ ಕಾಳಗ

ಇದು ಅತ್ಯಂತ ಜನಪ್ರಿಯ ಯಕ್ಷಗಾನ ಕೃತಿಗಳಲ್ಲೊಂದು. ಕುದ್ರೆಪ್ಪಾಡಿ ಈಶ್ವರಯ್ಯ, ಸುರಕುಂದ ಅಣ್ಣಾಜಿ ರಾವ್, ಬೀಜಾಡಿ ನಾರಾಯಣ ಉಪಾಧ್ಯಾಯ, ಡಾ. ಡಿ. ಸದಾಶಿವ ಭಟ್ಟ, ಶ್ರೀನಿವಾಸ ಅಡಿಗ ಕುಪ್ಪಾರು ಮುಂತಾದವರು ಸುಧನ್ವ ಕಾಳಗ, ಸುಧನ್ವಾವಸಾನ ಮುಂತಾದ ಶೀರ್ಷಿಕೆಗಳಿಂದ ಈ ಪ್ರಸಂಗವನ್ನು ರಚಿಸಿದ್ದಾರೆ. ಡಾ. ಡಿ. ಸದಾಶಿವ ಭಟ್ಟರು ಸುಧನ್ವಾವಸಾನೊ ಎಂಬ ಕೃತಿಯನ್ನು ತುಳುವಿನಲ್ಲಿ ರಚಿಸಿದ್ದು ಅದು ಅಪ್ರಕಟಿತವಾಗಿದೆ. ಇವೆಲ್ಲವೂ ಲಕ್ಷ್ಮೀಶನ ಕೃತಿಯ ಆಧಾರದಲ್ಲಿ ರಚಿತವಾಗಿದ್ದರೂ ಈಗ ಪ್ರಸಂಗಗಳು ವಾಡಿಕೆಯಲ್ಲಿಲ್ಲ. ಈ ತೆಂಕು-ಬಡಗು ಉಭಯ ತಿಟ್ಟುಗಳು ಯಕ್ಷಗಾನಕ್ಕೆ ಮತ್ತು ತಾಳಮದ್ದಲೆಗೆ ಬಳಸುವ ‘ರೂಢಿ’ಯ ಪ್ರಸಂಗಪಠ್ಯವನ್ನು ಯಾರು ಬರೆದದ್ದೆಂದೇ ತಿಳಿಯುವುದಿಲ್ಲ. ಭಕ್ತಿ-ವೀರ ರಸಗಳೆರಡೂ ವಿಜೃಂಭಿಸುವ ಮತ್ತು ಸುಧನ್ವನ ಜೀವನದ ಸವಾಲನ್ನು ಲೌಕಿಕರ ಜೀವನ ಸ್ಥಿತಿಯ ದ್ವಂದ್ವದೊಂದಿಗೆ ಹೋಲಿಸಬಹುದಾದ ಕಾರಣ ಸುಧನ್ವ ಕಾಳಗಪ್ರಸಂಗ ಅತ್ಯಂತ ಜನಪ್ರಿಯವಾಗಿದೆ. ಈ ಪ್ರಸಂಗದಲ್ಲಿ ಕವಿಯು ಕೆಲವು ಸಂಭಾಷಣೆಯ ಭಾಗವನ್ನು ವಿಸ್ತರಿಸಿ ನಾಟಕೀಯ ಸನ್ನಿವೇಶವೊದಗುವಂತೆ ರಚಿಸಿದ್ದಾರೆ. ಇಂಥ ವರ್ಣನೆ ಲಕ್ಷ್ಮೀಶನ ಕೃತಿಯಲ್ಲಿಲ್ಲ. ಉದಾಹರಣೆಗೆ ಸುಧನ್ವ ಕಾಳಗದಲ್ಲಿ ಸುಧನ್ವ-ಪ್ರಭಾವತಿಯರ ಸಂಭಾಷಣೆಗೆ ಭಾರಿ ಮಹತ್ವವಿದೆ.

ಬೇಗಡೆ ತ್ರಿವುಡೆ ಮಟ್ಟು
ಸತಿಶಿರೋಮಣಿ ಪ್ರಭಾವತಿ | ರತಿಯ ಸೊಲಿಪ ರೂಪಿನಲಿ ಸೊಗಸಿನಲಿ |

ಹೀಗೆ ಆರಂಭವಾಗುವ ಪದ್ಯವು ಲಕ್ಷ್ಮೀಶನ ವರ್ಣನೆಗಿಂತ ಭಿನ್ನವಾಗಿರುವುದು ಗಮನಾರ್ಹ.

ಆವಲ್ಲಿಗೆ ಪಯಣವಯ್ಯ ಪ್ರಾಣಕಾಂತ |

ಅಥವಾ

ನಳಿನಾಕ್ಷಿ ಕೇಳೆ ಈಗ | ನರನೊಡನೆ ಕಲಹಕೈದುವೆನು ಬೇಗ ||

ಮುಂತಾದ ಪ್ರಸಿದ್ಧ ಪದ್ಯಗಳು ಪ್ರಸಂಗವನ್ನು ರಂಗತಂತ್ರಕ್ಕೆ ಅಳವಡಿಸಿಕೊಳ್ಳುವ ದೃಷ್ಟಿಯಲ್ಲಿ ರಚನೆಗೊಂಡಂತಿವೆ.

ಆದರೆ ಸತಿಗೆ ಷೋಡಶದ ಋತು ಸಮಯವೇಕಾದಶಿ… ಪದ್ಯವನ್ನು ಪೂರ್ಣ ಜೈಮಿನಿಭಾರತದಲ್ಲಿದ್ದಂತೆಯೇ ಬಳಸಿಕೊಳ್ಳಲಾಗಿದೆ. ಇಡೀ ಪ್ರಸಂಗದಲ್ಲಿ ಅತ್ಯಂತ ಮಹತ್ವದ ಪದ್ಯ ಇದಾಗಿರುವುದರಿಂದ ಯಥಾಪ್ರಕಾರ ಬಳಸಿರುವ ಸಾಧ್ಯತೆಯಿದೆ. ಸುಧನ್ವ ಮೋಕ್ಷವೆಲ್ಲ, ಜೈಮಿನಿಭಾರತದ ಆಧಾರದಿಂದ ರಚಿತವಾದ ಅನೇಕ ಪ್ರಸಂಗಗಳಲ್ಲಿ ಜೈಮಿನಿಭಾರತದ್ದೇ ವಾಕ್ಯಗಳನ್ನು ಇದ್ದಕ್ಕಿದ್ದಂತೆಯೇ ಬಳಸಿದ ಉದಾಹರಣೆಗಳಿವೆ.

ಪ್ರಮೀಳಾರ್ಜುನ ಬಭ್ರುವಾಹನ ಕಾಳಗ

ಪ್ರಮೀಳಾ ಸಂಧಾನ (ಪೆರುವಡಿ ಸಂಕಯ್ಯ ಭಾಗವತ) ಮತ್ತು ಪ್ರಮೀಳಾ ಕಲ್ಯಾಣ (ಅಜ್ಞಾತ ಕವಿ)ವೆಂಬ ಪ್ರಸಂಗಗಳನ್ನು ರಚಿಸಿದ ದಾಖಲೆಯಿದ್ದರೂ ರೂಢಿಯಲ್ಲಿ ಬಭ್ರುವಾಹನ ಕಾಳಗ ಪ್ರಸಂಗದ ಜೊತೆಗಿರುವ ಪ್ರಮೀಳೆಯ ಪ್ರಕರಣದ ಪದ್ಯಗಳನ್ನೇ ಬಳಸಿಕೊಳ್ಳುತ್ತಾರೆ. ಪ್ರಮೀಳಾರ್ಜುನ-ಬಭ್ರುವಾಹನ ಕಾಳಗ ಪ್ರಸಂಗಗಳು ಅವಳಿ ಪ್ರಸಂಗಗಳಾಗಿ ಪ್ರಸಿದ್ಧವಾಗಿವೆ. ದೇವಿದಾಸ, ಪೆರುವಡಿ ಸಂಕಯ್ಯ ಭಾಗವತ, ಹೊಸ್ತೋಟ ಮಂಜುನಾಥ ಭಾಗವತರು, ಕೀರಿಕ್ಕಾಡ್ ಮಾಸ್ತರ್ ವಿಷ್ಣುಭಟ್ಟ ಮುಂತಾದವರು ಈ ಪ್ರಸಂಗವನ್ನು ರಚಿಸಿದ್ದಾರೆಂದು ತಿಳಿದುಬರುತ್ತದೆ.

ಈಗ ಯಕ್ಷಗಾನ ಪ್ರದರ್ಶನಕ್ಕಾಗಿ ಬಳಸುವ ‘ಯಕ್ಷಗಾನ ಬಭ್ರುವಾಹನ ಕಾಳಗ’ವನ್ನು

“ಭಾರತಾಮೃತ ಶರಧಿಯೊಳಗೆ ಪಿರಿದಾಗಿರುವ ಅಶ್ವಮೇಧದ ಕತೆಯನು| ದಾರಿಣಿಯೊಳರಿ ವಂತೆ ಯಕ್ಷಗಾನ ಕ್ರಮದಿ | ಸಾರವಿದ ಪೇಳವೆನು || ಶ್ರುತಿ ತಾಳ ಬಂದಧಿಂ| ವಾರಿಧಿಯ ತಡಿಯಲಿಹ ಉಡುಪಿಯಲಿ ನೆಲಸಿರುವ ಶ್ರೀಕೃಷ್ಣನ ಕಟಾಕ್ಷದಿ”

ರಚಿಸಿದ್ದೇನೆಂದು ಕವಿ ಹೇಳಿಕೊಂಡಿದ್ದಾನೆ. ಕತೆ ಲಕ್ಷ್ಮೀಶನ ಕೃತಿಯ ದಾರಿಯಲ್ಲಿಯೇ ಇದ್ದರೂ ವರ್ಣನೆಯ ಶೈಲಿಯಲ್ಲಿ ಕವಿ ಬೇರೆ ಆಕರಗಳಿಂದ ಪ್ರಭಾವಿತನಾಗಿರುವುದು ಅಥವಾ ಸ್ವಂತಿಕೆಯನ್ನು ಪ್ರಕಟಿಸಿರುವುದು ಸ್ಪಷ್ಟವಾಗಿದೆ.