‘ಆರ್ಕಿಟೈಪ್’ ಶಬ್ದವನ್ನು ಮೊತ್ತಮೊದಲಿಗೆ ಚಲಾವಣೆಗೆ ತಂದು, ಅದರ ಅರ್ಥ ವ್ಯಾಪ್ತಿ ಇವುಗಳನ್ನು ವಿವರಿಸಿ, ಪ್ರಮುಖ ‘ಆರ್ಕಿಟೈಪ್’ಗಳನ್ನು ವಿಶ್ಲೇಷಿಸಿ ಕೇವಲ ಸಾಹಿತ್ಯ ವಿಮರ್ಶೆಗೇ ಅಲ್ಲದೆ ಮನೋವಿಜ್ಞಾನ ಮತ್ತು ಮಾನವಿಕ ಶಾಸ್ತ್ರವೇ ಮುಂತಾದ ಶಿಸ್ತುಗಳಿಗೆ ಒಂದು ನೂತನ ರಚನಾತ್ಮಕ ತಿರುವನ್ನು ಕೊಟ್ಟವನು ಮಹಾನ್ ಮನೋವಿಜ್ಞಾನಿ ಕಾರ್ಲ್ ಯೂಂಗ್. ಇವನ ಶಬ್ದಗಳಲ್ಲಿಯೇ ಹೇಳುವುದಾದರೆ :

“In reality they belong to the realm of activities of the instincts and in that sense they represent inherited forms of psychic behaviour”.

ಯಾವ ಒಂದು ಪ್ರತಿಮೆ, ಒಂದ ಆಶಯ (Motif) ಅಥವಾ ಕಥಾ-ವಿನ್ಯಾಸ (Thematic pattern)ಇತಿಹಾಸದಲ್ಲಿ, ಸಾಹಿತ್ಯದಲ್ಲಿ, ಮತ ಧರ್ಮಾಚರಣೆಗಳಲ್ಲಿ ಹಾಗೂ ಜಾನಪದದಲ್ಲಿ ಮಾನವನ ಆದಿಮ ಕಾಲದಿಂದ ಪದೇ ಪದೇ ಕಂಡುಬಂದು, ಆ ಕಾರಣದಿಂದ ಒಂದು ವಿಧದ ಕಲಾತೀತ ಸಾಂಕೇತಿಕತೆಯನ್ನು ಪಡೆದಿದೆಯೋ ಅದನ್ನು ‘ಆರ್ಕಿಟೈಪ್’ ಅಥವಾ ‘ಚಿರಂತನ ಪ್ರತೀಕ’ವೆಂದು ಕರೆಯಬಹುದು. ಚಿಂತರನ ಪ್ರತೀಕಗಳು ಮಾನವನಿಗೆ ಆನುವಂಶಿಕ ವಾಗಿ ಬಂದ ಮಾನಸಿಕ ವರ್ತನೆಯ ರೂಪಗಳು. ಇವುಗಳ ಪ್ರಮುಖ ಉದಾಹರಣೆಗಳೆಂದರೆ ‘ಸಾವು ಮತ್ತು ಪುನರ್ಜನ್ಮ’, ‘ಪರಿಭ್ರಮಣ ಮತ್ತು ಶೋಧ’, ‘ಅಂತರಿಕ್ಷ ತಂದೆ-ಭೂ ತಾಯಿ’, ‘ಕತ್ತಲೆ ಬೆಳಕುಗಳ ದ್ವಂದ್ವ’ ಇತ್ಯಾದಿ.

ಸಾಹಿತ್ಯ ಕೃತಿಗಳನ್ನು ಪುರಾಣ ಮತ್ತು ಚಿರಂತನ ಪ್ರತೀಕ ಇವುಗಳ ವಿಶ್ಲೇಷಣೆಯ ಮೂಲಕ ಅಭ್ಯಸಿಸಿದರೆ ಆಗುವ ಪ್ರಯೋಜನಗಳು ಅನೇಕ. ಪ್ರಪ್ರಥಮ ಪ್ರಯೋಜನವೆಂದರೆ ಬೇರೆ ಬೇರೆ ಸಮಾಜಗಳಲ್ಲಿ ಹಾಗೂ ಭಾಷೆಗಳಲ್ಲಿ ರಚಿಸಲ್ಪಟ್ಟ ಸಾಹಿತ್ಯ ಕೃತಿಗಳಲ್ಲಿರುವ ಸಮಾನತೆ ಮತ್ತು ಸಮಾನ ಚಿಂತನೆಯ ಅರಿವು, ಮತ್ತೆ ಈ ವಿಧದ ವಿಮರ್ಶೆ ಒಂದು ಕೃತಿಯ ಆಳಕ್ಕೆ ಹೋಗಿ ಭಿನ್ನ ಭಿನ್ನ ವಿವರಗಳ ಅಡಿಯಲ್ಲಿ ಹುದುಗಿರತಕ್ಕ ಅದರ ರೂಪ-ವಿನ್ಯಾಸಗಳನ್ನು ಗುರುತಿಸಿ, ಆ ಮೂಲಕ ಕೃತಿಕಾರನು ಮೂಲ ವಿನ್ಯಾಸಗಳಿಗೆ ಏನು ಬದಲಾವಣೆಗಳನ್ನು ಮಾಡಿ ಕೊಂಡಿದ್ದಾನೆ?- ಮತ್ತು ಈ ಬದಲಾವಣೆಗಳು ಆ ವಿಶಿಷ್ಟ ಸಾಹಿತ್ಯಕ ಮತ್ತು ಸಾಮಾಜಿಕ ಪರಿಸರದ ಮೇಲೆ ಏನು ಬೆಳಕು ಚೆಲ್ಲುತ್ತವೆ?- ಎಂದು ಚರ್ಚಿಸಲು ಸಮರ್ಥವಾಗುತ್ತದೆ.

ವಿಶ್ವ ಸಾಹಿತ್ಯದಲ್ಲಿ ಯಾವಾಗಲೂ ಅತ್ಯಂತ ಪ್ರಮುಖವಾಗಿ ಕಂಡುಬರುವ ಚಿರಂತನ ಪ್ರತೀಕಗಳಲ್ಲಿ ಅತಿಮುಖ್ಯವಾದುವು ‘ಪರಿಭ್ರಮಣ’ ಮತ್ತು ‘ಶೋಧ’. ಈ ಪ್ರತೀಕಗಳು ಜನಪದ ಸಾಹಿತ್ಯದಿಂದ ಹಿಡಿದು ‘ಅದ್ಭುತ-ರಮ್ಯ’ ಕಥೆಗಳಲ್ಲಿಯೂ, ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ಹೋಮರ್ ಮಹಾಕವಿಯ ‘ಒಡಿಸ್ಸಿ’ಯಿಂದ ಎಲಿಯಟ್‌ನ ‘ವೇಸ್ಟ್‌ಲ್ಯಾಂಡ್’ವರೆಗೂ ಎಲ್ಲಾ ಪ್ರಮುಖ ಸಾಹಿತ್ಯ ಕೃತಿಗಳಲ್ಲಿಯೂ ಹಾಸುಹೊಕ್ಕಾಗಿವೆ. ಈ ದೃಷ್ಟಿಯಲ್ಲಿ ಇತ್ತೀಚಿಗಿನ ಪ್ರಮುಖ ಅಮೆರಿಕನ್ ವಿಮರ್ಶಕ ನಾರ್ತ್ರೋಪ್ ಫ್ರಾಯ್ ಹೇಳುವ ಮಾತುಗಳು ಉತ್ಪ್ರೇಕ್ಷೆ ಎಂದೇನೂ ಅನ್ನಿಸುವುದಿಲ್ಲ. “Of all fictions, the marvellous journey is the one formula that in never exhausted”.

‘ಪರಿಭ್ರಮಣ’ ಪ್ರತೀಕವು ಕೇಂದ್ರವಾಗಿರುವ ಒಂದು ಕಾಲ್ಪನಿಕ ರಚನೆಯನ್ನು ಅಭ್ಯಸಿಸಿದರೆ ವಸ್ತುವಿನ ಮತ್ತು ಶಿಲ್ಪದ ದೃಷ್ಟಿಯಿಂದ ನಮಗೆ ಕಂಡುಬರುವ ಸಾಧ್ಯತೆಗಳೇನು? ಮೊದಲು ವಸ್ತುವನ್ನು ತೆಗೆದುಕೊಳ್ಳೋಣ. ಕೃತಿಯಲ್ಲಿ ‘ಪರಿಭ್ರಮಣ’ದ ಉದ್ದೇಶ ಯಾವುದಾದರೂ ಮಹದ್ವಸ್ತು ಪ್ರಾಪ್ತಿಗಾಗಿರಬಹುದು. ಜಾನಪದ ಕಥೆಗಳಲ್ಲಿ ಹಾಗೂ ಸಾಹಸ ಪ್ರಣಯ ಕಥೆ ಗಳಲ್ಲಿ ಸಾಮಾನ್ಯವಾಗಿ ಕಂಡುಬರುವ, ಅಪೂರ್ವ ವಸ್ತುವನ್ನು ಶೋಧಿಸುತ್ತಾ (ಮಣಿ, ಹೂವು, ಆಯುಧ ಇತ್ಯಾದಿ) ಕಾಡು-ಮೇಡು ಅಲೆದು ಕೊನೆಗೆ ಆ ವಸ್ತುವಿನ ಪ್ರಾಪ್ತಿಯಿಂದ ಯಶಸ್ಸುಗಳಿಸುವ ಅಂದರೆ ರಾಜಕುಮಾರಿಯ ಕೈಹಿಡಿವ ಅಥವಾ/ಮತ್ತು ರಾಜ್ಯ ಗಳಿಸುವ -ಕಥಾನಾಯಕರ  ವಸ್ತು ಈ ವರ್ಗಕ್ಕೆ ಸೇರಿದುದು. ಈ ವಿಧದ ಕಥಾನಕಗಳಿಂದ ಸ್ವಲ್ಪ ಮೇಲಿರುವ ಸಾಹಿತ್ಯ ಕೃತಿಗಳಲ್ಲಿ ಸಂಚಾರದ ಉದ್ದೇಶ ‘ವಸ್ತುಪ್ರಾಪ್ತಿ’ಯೇ ಆಗಿದ್ದರೂ ನಿರೂಪಣೆಯಲ್ಲಿ ಒತ್ತು ‘ಸಂಚಾರ’ದ ಮೇಲೇ ವಿನಹ ‘ಸಿದ್ದಿ’ಯಲ್ಲಲ್ಲ. ಪಾಶ್ಚಾತ್ಯ ಸಾಹಿತ್ಯದಲ್ಲಿ ೧೬ನೇ ಶತಮಾನದಲ್ಲಿ ಪ್ರಾರಂಭವಾಗಿ ೧೮ನೇ ಶತಮಾನದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ‘ಪಿಕರೆಸ್ಕ್’ ಕಾದಂಬರಿಗಳು ಈ ವರ್ಗಕ್ಕೆ ನಿದರ್ಶನವಾಗುತ್ತವೆ. ‘ಡಾನ್ ಕ್ವಿಕ್ಸಟ್’, ‘ಟಾಮ್ ಜೋನ್ಸ್’, ‘ಹಂಫ್ರಿ ಕ್ಲಿಂಕರ್’ ಇತ್ಯಾದಿ. ಈ ವಿಧದ ಕಾದಂಬರಿಗಳಲ್ಲಿ ‘ಸಂಚಾರ’ ಒಂದು ಸಾಹಿತ್ಯಕ ತಂತ್ರವಾಗಿ ಪಾತ್ರಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸದಾ ಚಲಿಸುತ್ತಿರು ವುದರಿಂದ, ವಿವಿಧ ವ್ಯಕ್ತಿಗಳ, ನಗರಗಳ, ಒಟ್ಟಿನಲ್ಲಿ ಅಂದಿನ ಸಮಾಜದ ಸಂಪೂರ್ಣ ಚಿತ್ರ ವನ್ನು ಕೊಡುವುದು ಈ ಮೂಲಕ ಕೃತಿಕಾರನಿಗೆ ಸಾಧ್ಯವಾಗುತ್ತದೆ.

ಈ ಎರಡೂ ವಿಧದ ಸಾಹಿತ್ಯ ಪ್ರಕಾರಗಳಲ್ಲಿ-ಅಂದರೆ ಅದ್ಭುತ ರಮ್ಯ ಸಾಹಸ ಕಥೆಗಳಲ್ಲಿ ಮತ್ತು ಪಿಕರೆಸ್ಕ್ ಕಾದಂಬರಿಗಳಲ್ಲಿ ಕಥನ ಕ್ರಿಯೆ ಶಾಬ್ದಿಕ ಪಾತಾಳಿಯಲ್ಲಿಯೇ ನಡೆಯುತ್ತದೆ. ಅಲ್ಲಲ್ಲಿ ಸಂಕೇತಾರ್ಥ ಕಂಡುಬಂದರೂ ಅದು ಗೌಣ. ಆದರೆ ಸಂಚಾರವನ್ನೇ ಕಥೆಯ ಕೇಂದ್ರ ವಾಗಿರಿಸಿಕೊಂಡರೂ ಕಥನಕ್ರಿಯೆ ಸಂಪೂರ್ಣ ಸಾಂಕೇತಿಕವಾಗುತ್ತದೆ, ಮತ್ತು ಈ ಸಾಂಕೇತಿಕಾರ್ಥ ಧಾರ್ಮಿಕ, ಮತೀಯ, ರಾಜಕೀಯ ಯಾವುದಾದರೂ ಆಗಿರಬಹುದು ಅಥವಾ ಇವೆಲ್ಲವನ್ನೂ ಒಳಗೊಂಡಿರಬಹುದು. ಈ ವರ್ಗದ ಕೃತಿಗಳನ್ನು ‘ಅಲಿಗರಿ’ಗಳೆಂದು ಕರೆಯಬಹುದು. ಜಾನ್‌ಬನ್‌ಯನ್‌ನ ‘ದ ಪಿಲ್‌ಗ್ರೀಮ್ಸ್ ಪ್ರೋಗ್ರೆಸ್’ ಧಾರ್ಮಿಕ, ಮತೀಯ ಅಲಿಗರಿಯಾದರೆ, ಡಾಂಟೆ ಮಹಾಕವಿಯ ‘ಡಿವೈನ್ ಕಾಮೆಡಿ’ ಎಂಬ ಕೃತಿಯಾದರೋ ಅತ್ಯಂತ ಗಹನವಾದ ಧಾರ್ಮಿಕ ನೈತಿಕ ಅಲಿಗರಿಯಾಗಿದೆ. ರಾಜಕೀಯ ಧಾರ್ಮಿಕ ಹಾಗೂ ನೈತಿಕ ಈ ಮೂರೂ ಪಾತಳಿಗಳಲ್ಲಿ ಕೆಲಸ ಮಾಡುವ, ಹಾಗೂ ಶಾಬ್ದಿಕ ಪಾತಳಿಯಲ್ಲಿಯೂ ಒಂದು ಅದ್ಭುತ ರಮ್ಯ ಕಥೆಯನ್ನು ಹೇಳುವ ಮಹತ್ವಾಕಾಂಕ್ಷೆಯ ಕೃತಿಯೆಂದರೆ ಸ್ಫೆನ್ಸರ್ ಕವಿಯ ‘ದ ಫೇರೀ ಕ್ವೀನ್’. ಆದರೆ, ಇದು ಅಪೂರ್ಣ ಕೃತಿ ಮತ್ತು ಒಂದು ಪ್ರಯತ್ನ ಅಷ್ಟೆ.

ವಸ್ತುವಿನ ದೃಷ್ಟಿಯಿಂದಲೇ ಇರುವ ಮತ್ತೊಂದು ಸಾಧ್ಯತೆ ಏನೆಂದರೆ, ಒಂದು ಕೃತಿ  ಶಾಬ್ದಿಕ ನೆಲೆಯಲ್ಲಿಯೇ ಮುಂದುವರಿಯುತ್ತಾ ಸಾಂಕೇತಿಕ ಅರ್ಥವನ್ನು ಸಫಲವಾಗಿ ಉದ್ದಕ್ಕೂ ಧ್ವನಿಸುವುದು. ‘ಸಂಚಾರ’ವನ್ನು ವಸ್ತುವನ್ನಾಗುಳ್ಳ ವಿಶ್ವದ ಎಲ್ಲಾ ಮಹಾಕೃತಿಗಳೂ ಅವು ಮಹಾಕಾವ್ಯಗಳಾಗಿರಲಿ ಅಥವಾ ಕಾದಂಬರಿಗಳಾಗಿರಲಿ ಈ ವರ್ಗಕ್ಕೆ ಸೇರುತ್ತವೆ. ರೊಮಿಲಾ ಥಾಪರ್ ಅವರು ತಮ್ಮ ‘ಎಕ್ಸೈಲ್ ಅಂಡ್ ಕಿಂಗ್‌ಡಮ್’ ಗ್ರಂಥದಲ್ಲಿ ನಮ್ಮ ಮುಂದಿಡುವ ವಾದವನ್ನು ನಾವು ಒಪ್ಪುವುದಾದರೆ, ಅಂದರೆ ವಾಲ್ಮೀಕಿ ರಾಮಾಯಣದಲ್ಲಿ ಮೂಲತಃ ಬೇರೆ ಬೇರೆಯಾದ ಎರಡು ಕಥೆಗಳು-‘ರಾಮನ ವನವಾಸ’ ಮತ್ತು ‘ದಶರಥ ರಾಜನ ರಾಜ್ಯದ ಕಥೆಗಳು’-ಒಂದುಗೂಡಿವೆ-ಎಂಬ ವಾದವನ್ನು ಒಪ್ಪುವುದಾದರೆ, ಭಾರತೀಯ ಸಾಹಿತ್ಯದಲ್ಲಿ ರಾಮಾಯಣದ ಉತ್ತರಾರ್ಧ ಮತ್ತು ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ಹೋಮರ್ ಕವಿಯ ‘ಒಡಿಸ್ಸಿ’ ಈ ವರ್ಗದ ಅತ್ಯಂತ ಮಹತ್ವದ ಆದಿಮ ಕೃತಿಗಳೆಂದು (Prototypes) ಹೇಳ ಬಹುದು. ಈ ವರ್ಗಕ್ಕೆ ಸೇರುವ ಅಪೂರ್ವ ಕೃತಿಗಳಲ್ಲಿ ವಸ್ತು ವಿನ್ಯಾಸ ಎಷ್ಟು ವಿಶಾಲ ಹಾಗೂ ಜಟಿಲವಾಗಿರುತ್ತದೆಂದರೆ ಆ ಕೃತಿಗಳು ಶಾಬ್ದಿಕ ನೆಲೆಯಲ್ಲಿ ಮಾನವ ಜೀವನವನ್ನು ಅರ್ಥೈಸುವ ಅತ್ಯಂತ ಸಮರ್ಥ ಸಾಹಿತ್ಯಕ ಕೃತಿಗಳಾಗಿಯೂ ವಿಶ್ವಾಸಾರ್ಹ ಸಾಮಾಜಿಕ ಇತಿಹಾಸ ಗಳಾಗಿಯೂ ಮತ್ತು ಸಾಂಕೇತಿಕ ನೆಲೆಯಲ್ಲಿ ಮಾನವೀಯ ಮೌಲ್ಯಗಳ ತುಲನಾತ್ಮಕ ಅಧ್ಯಯನ ಗಳೂ ಆಗುತ್ತವೆ. ಈ ಅಂಶಗಳನ್ನು ಸ್ಪಷ್ಟಪಡಿಸಲು ‘ಪರಿಭ್ರಮಣ’ ಸಾಹಿತ್ಯದಲ್ಲಿಯೇ ವಿಶಿಷ್ಟವಾದ, ವಿಶ್ವಸಾಹಿತ್ಯದಲ್ಲಿ ತನ್ನದೇ ಆದ ಅಪೂರ್ವ ಸ್ಥಾನವನ್ನು ಹೊಂದಿರುವ, ಪಾಶ್ಚಾತ್ಯ ಸಾಹಿತ್ಯದಲ್ಲಿ ತನ್ನ ನಂತರ ಬಂದ ಈ ವಿಧದ ಯಾವುದೇ ಸಾಹಿತ್ಯ ಪ್ರಕಾರದ ಮೇಲೂ ತನ್ನ ಪ್ರಭಾವವನ್ನು ಬೀರಿರುವ ‘ಒಡಿಸ್ಸಿ’ಯನ್ನು ಈಗ ನಾವು ಸ್ವಲ್ಪ ವಿವರವಾಗಿ ನೋಡೋಣ.

ಹತ್ತು ವರ್ಷಗಳ ತನಕ ನಡೆದ ಟ್ರಾಯ್ ಯುದ್ಧದ ನಂತರ ಇಥಾಕಾ ರಾಜ್ಯದ ರಾಜ ಯೂಲಿಸಿಸ್ (ಗ್ರೀಕ್ ಭಾಷೆಯಲ್ಲಿ ಒಡೆಸ್ಸೂಸ್) ತನ್ನ ರಾಜ್ಯಕ್ಕೆ ಹಿಂತಿರುಗುವಾಗ ಬಿರುಗಾಳಿ ಯಿಂದ ಸಾಗರದಲ್ಲಿ ದಾರಿ ತಪ್ಪಿ, ಮತ್ತು ಹತ್ತು ವರ್ಷಗಳು ಎಲ್ಲೆಲ್ಲಿಯೋ ಅಲೆದು, ಕೊನೆಗೆ ಇಥಾಕಾಕ್ಕೆ ಹಿಂದಿರುಗಿ, ತಾನಿಲ್ಲದಿರುವಾಗ ತನ್ನ ಹೆಂಡತಿಯನ್ನು ಕಾಡಿಸುತ್ತಿದ್ದ ಇತರ ರಾಜರನ್ನು ಸೋಲಿಸಿ ಮತ್ತೆ ತನ್ನ ಹೆಂಡತಿ ಪೆನಲಪಿ ಮತ್ತು ಮಗ ಟೆಲೆಮಾಕಸ್ ಇವರುಗಳನ್ನು ಒಂದು ಗೂಡುವುದು, ಸ್ಥೂಲವಾಗಿ ‘ಒಡಿಸ್ಸಿ’ಯ ಕಥಾವಸ್ತು. ಶಾಬ್ದಿಕ ಪಾತಳಿಯಲ್ಲಿ ‘ಒಡಿಸ್ಸಿ’ ಒಂದು ಸಾಹಸ ಪ್ರಧಾನ, ಅದ್ಭುತ-ರಮ್ಯ ಕಥೆಯಾಗಿಯೂ ಸಾರ್ಥಕ ಕೃತಿಯಾಗಿದೆ. ಯೂಲಿಸಿಸ್ ಟ್ರಾಯ್ ನಗರದಿಂದ ತನ್ನ ಸೈನಿಕರೊಡನೆ ಹಿಂದಿರುಗಿ ಬರುತ್ತಿರುವಾಗ ವಾಯು ದೇವತೆ ಪೊಸೈಡನ್‌ಗೆ ಕೋಪವುಂಟು ಮಾಡುತ್ತಾನೆ. ಅದರ ಕಾರಣ ಆ ದೇವರ ಕೋಪದಿಂದ ಬಿರುಗಾಳಿ ಯೆದ್ದು ಅವನ ಹಡಗುಗಳು ಸಾಗರದಲ್ಲಿ ದಿಕ್ಕಾಪಾಲಾಗುತ್ತವೆ. ಅನಂತರದ ಅವನ ದಿಕ್ಕುದೆಸೆ ಯಿಲ್ಲದ ಅಲೆದಾಟದಲ್ಲಿ ಅನೇಕ ಅದ್ಭುತ ಘಟನೆಗಳು ನಡೆಯುತ್ತವೆ. ಒಕ್ಕಣ್ಣಿನ ದೈತ್ಯ ಪಾಲಿಫಿಮಸ್‌ನೊಡನೆ ಹೋರಾಟ, ಅಲ್ಲಿ ಬೆಳೆವ ಹಣ್ಣು ತಿಂದೊಡನೆಯೇ ಮನಸ್ಸಿಗೆ ಮಂಕು ಕವಿದು ಯಾವುದೇ ಕೆಲಸ ಮಾಡಲು ಅಸಮರ್ಥರನ್ನಾಗಿಸುವ ‘ಲೋಟಸ್’ ಪ್ರದೇಶದಿಂದ ತಪ್ಪಿಸಿಕೊಳ್ಳುವುದು, ತನ್ನ ಮಂತ್ರಶಕ್ತಿಯಿಂದ ತನ್ನ ರಾಜ್ಯಕ್ಕೆ ಎಲ್ಲಾ ಮಾನವರನ್ನೂ ಆಕರ್ಷಿಸಿ ಕೆಲವು ದಿನಗಳ ನಂತರ ಅವರನ್ನು ಹಂದಿಗಳನ್ನಾಗಿ ಪರಿವರ್ತಿಸುತ್ತಿದ್ದ ‘ಸರ್ಸೀ’ ಮಾಯಾವಿನಿ ಯನ್ನು ಗೆಲ್ಲುವುದು, ಪಾತಾಳ ಪ್ರವೇಶ, ಇತ್ಯಾದಿ. ಈ ಎಲ್ಲಾ ಸಾಹಸಗಳಲ್ಲಿಯೂ ನಮಗೆ ಕಂಡುಬರುವುದು ಯೂಲಿಸಿಸ್‌ನ ಕುಂದದ ಧೈರ್ಯ, ಚಾತುರ‍್ಯ ಮತ್ತು ತೀಕ್ಷ್ಣಬುದ್ದಿ.

ಆದರೆ ಈ ಮೇಲ್ಮೈಯ ಘಟನೆಗಳು-ವಿವರಗಳನ್ನು ಬದಿಗಿಟ್ಟು, ಅವುಗಳ ಆಳಕ್ಕಿಳಿದು ನೋಡಿದರೆ ನಮಗೆ ಬೇರೆಯೇ ಆದ, ಸಾರ್ವಕಾಲಿಕ ಸಮವಾದ ನೈತಿಕ ಮೌಲ್ಯಗಳ ವಿನ್ಯಾಸ ಕಂಡುಬರುತ್ತದೆ. ವಾಯುದೇವತೆಯ ಶಾಪವನ್ನು ನಾವು ಬದಿಗಿಟ್ಟರೆ, ನಮಗೆ ಸ್ಪಷ್ಟವಾಗುವುದೇ ನೆಂದರೆ, ಯೂಲಿಸಿಸ್‌ನ ಕಷ್ಟ-ನಷ್ಟಗಳು ಮತ್ತು ಅವನ ಸಾಗರದಲ್ಲಿನ ಅಲೆದಾಟ ಶುರುವಾಗು ವುದು ಒಂದು ಮುಖ್ಯಘಟನೆಯಿಂದ. ಯೂಲಿಸಿಸ್ ವಿನಾಕಾರಣ ‘ಅಸ್ಮರಸ್’ (Ismaras) ರಾಜ್ಯವನ್ನು ಲೂಟಿ ಮಾಡಿ ಅಲ್ಲಿಯ ಜನರ ಸಂಪತ್ತನ್ನು ಕೊಳ್ಳೆಹೊಡೆಯುವುದರ ಮೂಲಕ. ಅಂದರೆ ಯೂಲಿಸಿಸ್‌ನ ಅನೈತಿಕ-ಅಮಾನವೀಯ ಕೃತ್ಯದಿಂದ. ಇಲ್ಲಿಯ ತನಕವೂ ಅವನು ‘ಚತುರ ಸೇನಾನಿ’ ಮತ್ತು ‘ನಗರಗಳನ್ನು ಲೂಟಿಮಾಡುವವ’ ಮಾತ್ರ ಆಗಿದ್ದಾನೆ. ಆದರೆ ಇನ್ನು ಮುಂದೆ ಅವನು ತನ್ನ ಹತ್ತು ವರ್ಷಗಳ ಅಲೆದಾಟದಲ್ಲಿ, ಅನುಭವಿಸುವ ಕಷ್ಟನಷ್ಟಗಳ ಮೂಲಕ ಜೀವನ ಮೌಲ್ಯಗಳನ್ನು ಅರಿತುಕೊಳ್ಳುತ್ತಾ, ಮುಖ್ಯವಾಗಿ ತನ್ನನ್ನೇ ತಾನು ಅರಿತು ಕೊಳ್ಳುತ್ತಾ ಹೋಗುತ್ತಾನೆ. ಅಂದರೆ ಯೂಲಿಸಿಸ್‌ನ ಅಲೆದಾಟ ಆತನು ಆತ್ಮಜ್ಞಾನ ಮತ್ತು ಜೀವನ ಮೌಲ್ಯಗಳಿಗಾಗಿ ನಡೆಸಿದ ದೀರ್ಘ ಶೋಧ.

ಯೂಲಿಸಿಸ್‌ನ ಸಾಹಸಗಳು ಒಟ್ಟು ಹತ್ತಿವೆ. ಅವು ಯಾವುವೆಂದರೆ (೧.) ಲೋಟಸ್ ಈಟರ್ಸ್ (೨.) ಸೈಕ್ಲಪ್ಸ್ (೩.) ಲೆಸ್ಟ್ರಿಗೋನಿಯನ್ಸ್ (೪.) ಸರ್ಸೀ ೫. ಹೇಡೀಜ್ (೬.) ಸೈರನ್ಸ್ (೭.) ಸಿಲ್ಲ ಮತ್ತು ಕರಿಬ್‌ಡಿಸ್ (೮.) ಆಕ್ಸನ್ ಆಫ್ ದ ಸನ್ (೯.) ಕಲಿಪ್ಸೊ (೧೦.) ನಾಸಿಕಾ.

ಈ ಸಾಹಸಗಳನ್ನು ಸ್ಥೂಲವಾಗಿ ಎರಡು ಭಾಗಗಳಲ್ಲಿ ವಿಂಗಡಿಸಬಹುದು; ಪ್ರಲೋಭನೆ ಗಳು ಮತ್ತು ಆಪತ್ತುಗಳೆಂದು (Threats and temptations). ಲೋಟಸ್ ರಾಜ್ಯ, ಸರ್ಸೀ, ಸೈರನ್ಸ್ ಇವುಗಳ ಪ್ರಲೋಭನೆಗಳಾದರೆ ಸೈಕ್ಲಪ್ಸ್, ಸಿಲ್ಲ ಮತ್ತು ಕರಿಬ್‌ಡಿಸ್ ಮುಂತಾದುವುಗಳು ಆಪತ್ತುಗಳು. ಈ ವಿಧದ ಪ್ರಲೋಭನೆಗಳು ಮತ್ತು ಆಪತ್ತುಗಳು ಯೂಲಿಸಿಸ್‌ನ ವ್ಯಕ್ತಿತ್ವವನ್ನು ಒರೆಗೆ ಹಚ್ಚಿ ಅವನಲ್ಲಿನ ಅಹಂಕಾರ, ಕ್ರೌರ್ಯ ಮುಂತಾದ ಕಶ್ಮಲಗಳನ್ನು ಹೋಗಲಾಡಿಸಿ ಅವನನ್ನು ಉತ್ತಮ ಮಾನವನನ್ನಾಗಿ ಮಾಡುತ್ತವೆ. ನಿದರ್ಶನವಾಗಿ ಒಂದೆರಡು ಘಟನೆಗಳನ್ನು ನೋಡೋಣ. ಲೋಟಸ್ ಪ್ರಾಂತ್ಯವನ್ನು ಪ್ರವೇಶಿಸಿದ ಯೂಲಿಸಿಸ್‌ನ ಸೈನಿಕರು ಆ ಹಣ್ಣುಗಳನ್ನು ತಿಂದು, ತಮ್ಮ ಪ್ರಾಪಂಚಿಕ ಕರ್ತವ್ಯ- ವಸ್ತುಸ್ಥಿತಿ ಇವುಗಳನ್ನು ಮರೆತು, ಯಾವಾಗಲೂ ಏನನ್ನೂ ಮಾಡದೆ ಜಡರಂತೆ ಅಲ್ಲಿಯೇ ಇರಲು ಅಪೇಕ್ಷಿಸುತ್ತಾರೆ. “They forget their homeward journey”,-ಅಂದರೆ ತಮ್ಮ ಮನೆಗೆ ಮರಳಬೇಕೆನ್ನುವ ಅರಿವನ್ನೇ ಕಳೆದುಕೊಳ್ಳು ತ್ತಾರೆ. ಮಾನಸಿಕವಾಗಿ ಇದೊಂದು ವಿಧದ ‘ಶೈಶವಾವಸ್ಥೆಗೆ ಮರಳುವ’ ಸ್ಥಿತಿ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಪ್ರೌಢಾವಸ್ಥೆಯನ್ನು ತಲುಪಿದ ಮನುಷ್ಯ ಈ ವಿಧದ ಜಡ ಅಸ್ತಿತ್ವದ ಶೈಶವಾವಸ್ಥೆಯ ಪ್ರಲೋಭನೆಯನ್ನು ಗೆದ್ದು ಜಗತ್ತಿನ ಕಷ್ಟ ಕಾರ್ಪಣ್ಯಗಳನ್ನು ಎದುರಿಸುವ ಸ್ಥೈರ್ಯವನ್ನು ಪಡೆಯಲೇಬೇಕು.

ಶೈಶವಾವಸ್ಥೆಯ ಪ್ರಲೋಭನೆ ಎಷ್ಟು ತೀವ್ರವೋ, ಅಷ್ಟೇ ತೀವ್ರ ಸಾವಿನ ಪ್ರಲೋಭನೆ- ಸತ್ತು ಈ ಸಂಸಾರದ ತನ್ನೆಲ್ಲಾ ಜವಾಬ್ದಾರಿಗಳಿಂದ, ಸೋಲು-ನೋವುಗಳಿಂದ ಪಾರಾಗುವ ಪ್ರಲೋಭನೆ. ಯೂಲಿಸಿಸ್ ‘ಹೇಡೀಸ್’ಗೆ ಅಂದರೆ ಸತ್ತವರ ಆತ್ಮಗಳಿರುವ ಪಾತಾಳ ಲೋಕಕ್ಕೆ ಇಳಿದಾಗ ತನ್ನಲ್ಲೆ ಹುದುಗಿರುವ ಈ ಪ್ರಲೋಭನೆಯನ್ನು ಅರಿತುಕೊಳ್ಳುತ್ತಾನೆ. ಎಷ್ಟೋ ಸಲ ದಿಕ್ಕು-ದಿವಾಣವಿಲ್ಲದ ಅಲೆದಾಟಕ್ಕಿಂತ ಸಾವೇ ವಾಸಿ ಎಂದು ಯೋಚಿಸುತ್ತಿದ್ದ ಯೂಲಿಸಿಸ್ ಅಕಿಲೀಸ್ ಮುಂತಾದವರ ಮೂಲಕ ಎಷ್ಟೇ ನಿಷ್ಠುರ ಜೀವನವಾದರೂ ಸಾವಿಗಿಂತ ಮೇಲೆಂದು ತಿಳಿದುಕೊಳ್ಳುತ್ತಾನೆ. ಬದುಕು ಮತ್ತು ಆ ತಿಳುವಳಿಕೆಯ ಮೂಲಕ ತನ್ನ ಬದುಕಿನ ಬಗ್ಗೆ ಇದ್ದ ಜಿಗುಪ್ಸೆಯನ್ನು ದೂರಮಾಡಿ ಬದುಕಿನ ಪಾವಿತ್ರ್ಯವನ್ನು ಮನಗಾಣುತ್ತಾನೆ.

ಸರ್ಸೀ ಪ್ರಕರಣ ಅತ್ಯಂತ ಸಂಕೀರ್ಣವಾಗಿದೆ. ತನ್ನ ಬಳಿಗೆ ಬಂದ ಮನುಷ್ಯರನ್ನೆಲ್ಲಾ ಮೃಗಗಳನ್ನಾಗಿ ಪರಿವರ್ತಿಸುತ್ತಿದ್ದ ಮಾಯಾವಿನಿ ಸರ್ಸೀ ಸ್ತ್ರೀತ್ವದ ಒಳ್ಳೆಯ ಮತ್ತು ಕೆಟ್ಟ ಗುಣಗಳನ್ನು ಪ್ರತಿನಿಧಿಸುತ್ತಾಳೆ. ಸ್ತ್ರೀಯ ಲೈಂಗಿಕ ಆಕರ್ಷಣೆಯಲ್ಲಿ-ಅಂದರೆ, ಕಾಮಸುಖದಲ್ಲಿ -ತನ್ನ ಅಸ್ತಿತ್ವವನ್ನೇ ಮರೆಯುವ ವಿಷಯಾಸಕ್ತರು ಮೃಗಗಳು ತಾನೆ; ಆದರೆ ಲೈಂಗಿಕ ಆಕರ್ಷಣೆ ಯನ್ನು, ಕಾಮವನ್ನು ಸಂಪೂರ್ಣ ನಿರಾಕರಿಸಿದರೂ ಅಂತಹ ನಿರಾಕರಣೆ ಅನೈಸರ್ಗಿಕವಾದದ್ದ ರಿಂದ, ಮಾನವನಿಗೆ ವಿನಾಶಕಾರಕ. ಸರ್ಸೀ ಪ್ರಕರಣದಲ್ಲಿ ಈ ಅರಿವನ್ನು ಪಡೆಯುವ ಯೂಲಿಸಿಸ್ ಮೊದಲು ಅವಳ ಮಾಯೆಯನ್ನು ಎದುರಿಸಿ ಗೆದ್ದು, ಅವಳ ಮಾಯೆಯ ವಶ ವಾಗಿದ್ದ ಎಲ್ಲರನ್ನೂ ಬಿಡುಗಡೆ ಮಾಡಿ, ಕೊನೆಗೆ ಅತ್ಯಂತ ದೈನ್ಯಳಾಗಿ ತನ್ನನ್ನೇ ಅರ್ಪಿಸಿಕೊಂಡ ಸರ್ಸೀಯನ್ನು ಸ್ವೀಕರಿಸುತ್ತಾನೆ. ಸ್ತ್ರೀ ದೇವಿಯೂ ಹೌದು-ಮಾಯೆಯೂ ಹೌದು.

ಈ ರೀತಿ ಸಾಗರದಲ್ಲಿ ಗಾಳಿ ಬೀಸಿದ ದಿಕ್ಕಿನಲ್ಲಿ ಅಲೆಯುತ್ತಾ, ತನ್ನ ಅನೇಕ ಅನುಭವಗಳ ಮೂಲಕ ನೂತನ ಜ್ಞಾನವನ್ನೂ ವ್ಯಕ್ತಿತ್ವವನ್ನೂ ಪಡೆಯುವ ಯೂಲಿಸಿಸ್ ಹತ್ತು ವರ್ಷಗಳ ಅನಂತರ ತನ್ನ ರಾಜ್ಯಕ್ಕೆ ಹಿಂದಿರುಗುತ್ತಾನೆ. ಅದೂ ಹೇಗೆ? ತನ್ನೆಲ್ಲಾ ಸೈನಿಕರು ಸ್ನೇಹಿತರುಗಳನ್ನು ಕಳೆದುಕಂಡು, ಕೊನೆಗೆ ತನ್ನ ಮೈಮೇಲಿನ ಬಟ್ಟೆಯನ್ನೂ ಕಳೆದುಕೊಂಡು, ಅನಾಥ ಶಿಶುವಿನಂತೆ ರಾತ್ರಿಯ ಕತ್ತಲೆಯಲ್ಲಿ ತನ್ನ ರಾಜ್ಯದ ಸಾಗರ ತೀರದಲ್ಲಿ ಅಲೆಗಳಿಂದ ಎಸೆಯಲ್ಪಡುತ್ತಾನೆ. ಇಲ್ಲಿಗೆ ಅವನ ಹಿಂದಿನ ವ್ಯಕ್ತಿತ್ವದ ಸಾವು ಪೂರ್ಣವಾಗಿ ಪುನರ್ಜನ್ಮವು ಪ್ರಾರಂಭವಾಗುತ್ತದೆ. ಆ ರಾತ್ರಿ ಅಲ್ಲಿಯೇ ಹತ್ತಿರದಲ್ಲಿದ್ದ ಕುರುಬನ ಗೊರಗಿನಿಂದ ಮೈಮುಚ್ಚಿಕೊಂಡು ಆ ಕುರುಬನ ಹಟ್ಟಿಯಲ್ಲಿಯೇ ರಾತ್ರಿ ಕಳೆಯುತ್ತಾನೆ. ಹಿಂದೆ ನಗರಗಳನ್ನು ಕೊಳ್ಳೆ ಹೊಡೆಯುವವನಾಗಿದ್ದ ಕ್ರೂರಿ ಮತ್ತು ಗರ್ವಿಷ್ಟ ಯೂಲಿಸಿಸ್ ಈಗ ತನ್ನ ಪತ್ನಿಯ ಆರಾಧಕರಿಗೆ (ಸೂಟರ್ಸ್) ಹೀಗೆ ಹೇಳುತ್ತಾನೆ :

“Of all things that breathe and move on the face of the earth, there is none feebler than Man…. Therefore let no man be ever alwless, but let him keep silenty whatever gifts the gods give”. (ಈ ಭೂಮಿಯ ಮೇಲೆ ಉಸಿರಾಡುವ ಮತ್ತು ಚಲಿಸುವ ಸಮಸ್ತ ಜೀವಿಗಳಲ್ಲಿ ಮಾನವನಷ್ಟು ದುರ್ಬಲ ಮತ್ತು ಅಸಹಾಯಕ ಬೇರೆ ಯಾರೂ ಇಲ್ಲ. ಆದ್ದರಿಂದ ಯಾರೂ ನೈತಿಕ ಮತ್ತು ನೈಸರ್ಗಿಕ ಮಿತಿಗಳನ್ನು ಕಟ್ಟುಪಾಡು ಗಳನ್ನು ಮೀರದಿರಲಿ ಮತ್ತು ದೇವರು ತಮಗೆ ಏನನ್ನು ಕೊಟ್ಟಿದ್ದಾನೋ ಅದರಿಂದ ತೃಪ್ತಿ ಹೊಂದಿರಲಿ). ಈ ಮಾತಿನ ಮಹತ್ವ ತನ್ನ ಪ್ರತಿಯೊಂದು ಸಾಹಸದಲ್ಲಿಯೂ ಕೇವಲ ದೇವ ದೇವತೆಗಳ ಸಹಾಯದಿಂದ ಜಯಶೀಲನಾದ, ಕಲಿಪ್ಸೊ ರಾಜ್ಯದಲ್ಲಿ ಏಳು ವರ್ಷಗಳ ಕಾಲ ಅಸಹಾಯಕನಾಗಿ ಕಳೆದ, ಕೊನೆಗೆ ತನ್ನವರೆನ್ನುವ ಯಾರೂ ತನ್ನ ಜನತೆಯಲ್ಲಿಲ್ಲದೆ, ಬೆತ್ತಲೆ ಯಾಗಿ ತನ್ನ ರಾಜ್ಯಕ್ಕೆ ಬಂದು ಬಿದ್ದ ಯೂಲಿಸಿಸ್‌ಗೆ-ಈ ಮಾತಿನ ಅರ್ಥ ಸಂಪೂರ್ಣ ಗೊತ್ತು.

ಯೂಲಿಸಿಸ್ ಹೋಮರ್‌ನ ಎರಡೂ ಮಹಾಕಾವ್ಯಗಳಲ್ಲಿ ಒಂದು ಮುಖ್ಯಪಾತ್ರವಾಗಿ ಬರುವುದರಿಂದ, ಸಂಕ್ಷೇಪವಾಗಿ ಎರಡೂ ಮಹಾಕಾವ್ಯಗಳ ಹರಹನ್ನು, ಮೌಲ್ಯ ಪ್ರಣಾಲಿಯನ್ನು ಹೋಲಿಸಿದರೆ ‘ಒಡಿಸ್ಸಿ’ಯಲ್ಲಿ ತನ್ನ ಅಲೆದಾಟದಲ್ಲಿ ಯೂಲಿಸಿಸ್ ಅರಿತುಕೊಂಡಿದ್ದೇನೆಂಬುದು ಸ್ಪಷ್ಟವಾಗುತ್ತದೆ (ಮತ್ತು ‘ಮಹಾಭಾರತ’ ಹಾಗೂ ‘ಜೈಮಿನಿ ಭಾರತ’ಗಳ ತುಲನಾತ್ಮಕ ಅಭ್ಯಾಸಕ್ಕೆ ಮುನ್ಸೂಚಿಯನ್ನು ಒದಗಿಸುತ್ತದೆ).

‘ಇಲಿಯಡ್’ನಲ್ಲಿ ಯುದ್ಧ ಭೂಮಿಯಲ್ಲಿ ದೊರಕುವ ಯಶಸ್ಸಿಗೆ ಮಹತ್ವವಿದ್ದರೆ ‘ಒಡಿಸ್ಸಿ’ಯಲ್ಲಿ ಶಾಂತಿಕಾಲದಲ್ಲಿ ಪ್ರತ್ಯೇಕ ವ್ಯಕ್ತಿಗಳ ಸಂಗದಲ್ಲಿ ದೊರಕುವ ಜ್ಞಾನಕ್ಕೆ ಮಹತ್ವ ವಿದೆ. ‘ಇಲಿಯಡ್’ನ ಯೂಲಿಸಿಸ್ ಅಪಜಯವನ್ನೇ  ಕಾಣದ, ತನ್ನ ಧೈರ್ಯ ಚಾತುರ್ಯಗಳ ಮೂಲಕ ಟ್ರಾಯ್ ನಗರವನ್ನೇ ಸುಟ್ಟು ನಾಶಮಾಡಿದ ಯೋಧನಾದರೆ, ‘ಒಡಿಸ್ಸಿ’ಯಲ್ಲಿ ಬರುವ ಪರಿಭ್ರಮಣ ಮಾನವನು ಮೃಗತ್ವದಿಂದ ಮಾನವತೆಗೆ, ಯುದ್ಧ ಭೂಮಿಯಿಂದ ಮನೆಗೆ ಮತ್ತು ಹಿಂಸೆಯಿಂದ ಶಾಂತಿಗೆ ಮರಳಲು ಸದಾ ಯತ್ನಿಸುತ್ತಿರುವುದರ ಚಿರಂತನ ಪ್ರತೀಕ.

ಲಕ್ಷ್ಮೀಶನ ‘ಜೈಮಿನಿ ಭಾರತ’ಕ್ಕೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಂದು ಮುಖ್ಯ ಸ್ಥಾನವನ್ನು ಕೊಟ್ಟರೂ, ವಿಮರ್ಶಕರು ಲಕ್ಷ್ಮೀಶನನ್ನು ಪಂಪ ಕುಮಾರವ್ಯಾಸ ಇವರುಗಳ ಎತ್ತರಕ್ಕೆ ನಿಲ್ಲಿಸುವುದಿಲ್ಲ. ಈ ಮೌಲ್ಯಮಾಪನೆಗೆ ಪ್ರಾಯಶಃ ಎರಡು ಕಾರಣಗಳಿವೆ : ಒಂದು, ಅದು ಸಂಸ್ಕೃತ ಜೈಮಿನಿ ಭಾರತದ ಅನುವಾದವೆಂಬ ಕಾರಣದಿಂದ. ಎರಡನೆಯದು, ಈ ಕಾವ್ಯದಲ್ಲಿ ಲಕ್ಷ್ಮೀಶನು ತನ್ನ ವಿದ್ವತ್ತನ್ನು ಪ್ರದರ್ಶಿಸಲು ಕಾರಣವಿರಲಿ ಇಲ್ಲದಿರಲಿ, ಅಲ್ಲಲ್ಲಿ ಅಷ್ಟಾದಶ ಮಹಾವರ್ಣನೆಗಳನ್ನು ಎಳೆದು ತಂದಿದ್ದಾನೆಂಬ ಭಾವನೆಯಿರುವುದರಿಂದ. ಈ ಕಾರಣಗಳಿಂದಾಗಿ ಕನ್ನಡ ಜೈಮಿನಿ ಭಾರತದ ಒಂದು ಅತಿಮುಖ್ಯ ಗುಣ ಬೆಳಕಿಗೆ ಬಂದಿಲ್ಲ-ಅದೆಂದರೆ ಪಂಪನಿಂದ ಇಂದಿನವರೆಗೂ ಬೆಳೆದು ಬಂದಿರುವ ಕನ್ನಡ ಕಾವ್ಯ ಮಹಾಕಾವ್ಯಗಳಲ್ಲೆಲ್ಲಾ ಕಥಾನಾಯಕನೇ ಇಲ್ಲದ, ಕಥಾನಾಯಕನ ಜನನದಿಂದ ಪ್ರಾರಂಭಿಸಿ ಅವನ ಮರಣದ ತನಕ ಅಥವಾ ಅವನ ಮಹತ್ಸಾಧನೆಯ ತನಕ ಕಾಲಾನುಕ್ರಮವಾಗಿ ಕಥೆ ಹೇಳದ, ಕೇವಲ ‘ಸಂಚಾರ’ವನ್ನೇ ವಸ್ತುವಾಗುಳ್ಳ ಮಹಾಕಾವ್ಯ ಕನ್ನಡ ಜೈಮಿನಿ ಒಂದೇ ಎಂಬುದು. ಆ ಕೃತಿ ಅನುವಾದವೇ ಇದ್ದರೂ ಬೇರೆಲ್ಲವನ್ನೂ ಬಿಟ್ಟು ‘ಅಲೆದಾಟ’ವನ್ನೇ ಕೇಂದ್ರವನ್ನಾಗಿಸಿಕೊಂಡ ಸಂಸ್ಕೃತ ಜೈಮಿನಿ ಯನ್ನೇ ಲಕ್ಷ್ಮೀಶ ಆರಿಸಿಕೊಂಡುದು ಅವನ ಕಾವ್ಯ ಮಾರ್ಗದ ಮೇಲೆ ವ್ಯಾಖ್ಯಾನವಾಗುತ್ತದೆ ಯಲ್ಲವೆ? ಏಕೆಂದರೆ ಕೃತಿಯ ವಸ್ತುವಿನ ‘ಆಯ್ಕೆ’ ಕೃತಿಕಾರನು ಎತ್ತಿಹಿಡಿಯುವ ಮೌಲ್ಯಗಳ ದಾಖಲೆ ತಾನೆ?

ಕನ್ನಡ ಜೈಮಿನಿ ಭಾರತವನ್ನು ಕುರಿತು ಅನೇಕ ವ್ಯಾಖ್ಯಾನಗಳು, ವಿಮರ್ಶೆಗಳು ಬಂದಿದ್ದರೂ ಅವುಗಳಲ್ಲಿ ಅತ್ಯಂತ ಮೌಲಿಕವಾದ ಅಧ್ಯಯನವೆಂದರೆ ಡಾ. ವಾಮನ ಬೇಂದ್ರೆಯವರ ‘ಲಕ್ಷ್ಮೀಶನ ಜೈಮಿನಿ ಭಾರತ : ಒಂದು ಅಧ್ಯಯನ’. ತಮ್ಮ ಮಹದ್ಗ್ರಂಥದಲ್ಲಿ ವಾಮನ ಬೇಂದ್ರೆಯವರು (೧.) ಲಕ್ಷ್ಮೀಶನು ಹೇಗೆ ಸಂಸ್ಕೃತದಿಂದ ಕನ್ನಡಕ್ಕೆ ಯಾಂತ್ರಿಕವಾಗಿ ಅನುವಾದ ಮಾಡಿಲ್ಲವೆಂದೂ, (೨.) ಅನೇಕ ಕಥೆ ಉಪಕಥೆಗಳಿಂದ ಕೂಡಿದ್ದರೂ ಕನ್ನಡ ಜೈಮಿನಿಯಲ್ಲಿ ಹೇಗೆ ಒಂದು ವಿಶಿಷ್ಟ ಶಿಲ್ಪವಿನ್ಯಾಸದಿಂದ ಕಾವ್ಯಕ್ಕೆ ಭಾವೈಕ್ಯತೆ ದೊರಕಿದೆಯೆಂದೂ, (೩.) ಎಲ್ಲದಕ್ಕಿಂತ ಮುಖ್ಯವಾಗಿ (ಇದು ವಾಮನ ಬೇಂದ್ರೆಯವರ ಅತ್ಯಂತ ಮೌಲಿಕ ವಿಚಾರವೆಂದು ನನಗೆ ತೋರುತ್ತದೆ) ಸಂಸ್ಕೃತ ಮೂಲದಲ್ಲಿಲ್ಲದ ಋತುವರ್ಣನೆಗಳ ಮೂಲಕ ಅಂದರೆ ಕಾವ್ಯ ವಸಂತ ಋತುವಿನಲ್ಲಿ ಶುರುವಾಗಿ, ಇತರ ಋತುಗಳಲ್ಲಿ ಮುಂದುವರಿದು, ಶಿಶಿರ ಋತುವಿನಲ್ಲಿ ಮುಗಿಯುವುದರ ಮೂಲಕ ಲಕ್ಷ್ಮೀಶನು ತನ್ನ ಕಾವ್ಯಕ್ಕೆ ಎಂತಹ ಬಂಧವನ್ನು ಕೊಟ್ಟಿದ್ದಾನೆಂದೂ, ಎಲ್ಲರೂ ಒಪ್ಪುವ ರೀತಿಯಲ್ಲಿ ಮಂಡಿಸಿದ್ದಾರೆ. ನನ್ನ ಲೇಖನ ಅವರ ಅನೇಕ ವಿಚಾರಗಳ ಪ್ರಯೋಜನವನ್ನು ಪಡೆದುಕೊಂಡ ಅವರ ಗ್ರಂಥದ ಒಂದು ಅನುಬಂಧ ವೆಂದೂ ಹೇಳಬಹುದು. ನಾನು ಕನ್ನಡ ಜೈಮಿನಿ ಭಾರತವನ್ನು ಅದರ ಕಾಲ ದೇಶಗಳ ವಿಮರ್ಶೆಗೆ ಹೋಗದೆ, ಅದು ಅನುವಾದವೆಂಬುದನ್ನು ಮರೆತು (ಅಂದರೆ ಈ ಕಾವ್ಯದಲ್ಲಿ ಕಂಡುಬರುವ ಘಟನೆಗಳಗೆ, ಅರ್ಥ ವೈಶಾಲ್ಯಕ್ಕೆ ಲಕ್ಷ್ಮೀಶನು ಎಷ್ಟು ಹೊಣೆ ಮತ್ತು ಜೈಮಿನಿ ಮುನಿಯ ಕಾಣಿಕೆಯೆಷ್ಟು ಎನ್ನುವ ವಿಮರ್ಶೆಗೆ ಹೋಗದೆ) ಕನ್ನಡ ಜೈಮಿನಿಯನ್ನು ಇಂದು ನಾವು ಓದಿದರೆ ನಮಗೆ ದೊರಕುವ ಅರ್ಥವೇನು-ಕೃತಿ ಪ್ರತಿಪಾದಿಸುವ ಮೌಲ್ಯಗಳೇನು ಎಂಬುದನ್ನು ಮಾತ್ರ ಚರ್ಚಿಸಿದ್ದೇನೆ.

ಮೇಲುನೋಟಕ್ಕೆ ಕನ್ನಡ ಜೈಮಿನಿಯು ಷಟ್ಪದಿಗಳ ಝೆಂಕಾರವನ್ನು ಬಿಟ್ಟರೆ, ಯಮಕ ಶ್ಲೇಷಾಲಂಕಾರಗಳನ್ನುಳ್ಳ ಮತ್ತು ಪರಂಪರಾಗತ ಅಷ್ಟಾದಶ ವರ್ಣನೆಗಳನ್ನುಳ್ಳ ಭಕ್ತ ಪಂಥದ- ಇತರ ಅನೇಕ ಕೃತಿಗಳಂತೆಯೇ ಇದೂ ಒಂದು ಕೃತಿ-ಇದರಲ್ಲಿ ವಿಶೇಷವೇನೂ ಇಲ್ಲವೆಂದು ಕಾಣುತ್ತದೆ. ಮೊದಲಿನಿಂದ ಕೊನೆಯ ತನಕ ಕೃಷ್ಣಭಕ್ತಿಯನ್ನು ಉಪದೇಶಿಸುವ, ಶಬ್ದಾಡಂಬರದ ಕಾವ್ಯವೆಂದು ತೋರುತ್ತದೆ. ಆದರೆ ಒಂದು ಕೃತಿಯ ಅರ್ಥ ಅದರಲ್ಲಿರುವ ವಿವಿಧ ಆಕೃತಿ ವಿನ್ಯಾಸಗಳಲ್ಲಿದೆ; ಈ ವಿನ್ಯಾಸಗಳು ಉತ್ತಮ ಕಾವ್ಯದಲ್ಲಿ ಒಂದನ್ನೊಂದು ತಾಗಿ, ಘರ್ಷಿಸಿ, ಜತೆಗೂಡಿ, ಒಂದು ಅಪೂರ್ವ ಪಾಕವನ್ನು ಸಿದ್ಧಗೊಳಿಸುತ್ತವೆ; ಮತ್ತು ೧೧ನೇ ಶತಮಾನದ ಸಂಸ್ಕೃತದ ಮಹಾವಿಮರ್ಶಕ ಕುಂತಕ ಹೇಳುವಂತೆ ‘ಎಲ್ಲಿ ಶಬ್ದ-ಅರ್ಥಗಳು ಮತ್ತು ಕೃತಿಯ ಅನೇಕ ಭಾಗಗಳು, ಒಂದಕ್ಕೊಂದು ‘ಸ್ಪರ್ಧೆ’ಯಲ್ಲಿರುತ್ತವೆಯೋ ಅದು ಸಾಹಿತ್ಯ’ ಎಂಬ ಅರಿವಿನಿಂದ ನಾವು ಕನ್ನಡ ಜೈಮಿನಿಯನ್ನು ಪರಿಶೀಲಿಸಿದರೆ ಅದೊಂದು ಅತ್ಯಂತ ಗಹನ ಹಾಗೂ ಸಂಕೀರ್ಣ ಕೃತಿ ಎಂದು ಗೊತ್ತಾಗುತ್ತದೆ.

ಮೊದಲಿಗೆ ನಾವು ಕವಿ ‘ಯಜ್ಞ’ದ ವಿಷಯನ್ನು ಬೆಳೆಸಿರುವ ರೀತಿ, ಅಲ್ಲಲ್ಲಿ ಬರುವ ಕಥೆ ಉಪಕಥೆಗಳ ಜೋಡಣೇ, ಕೃಷ್ಣಾರ್ಜುನರ ಪಾತ್ರ ಪೋಷಣೆ, ಇವನ್ನು ಪರೀಕ್ಷಿಸೋಣ. ‘ಯಜ್ಞ’ ಜೈಮಿನಿ ಭಾರತದ ಕೇಂದ್ರ ವಿಷಯವಾಗಿರುವುದರಿಂದ (ಏಕೆಂದರೆ ಕಾವ್ಯವು ಪೂರ್ತಾ ಅಶ್ವಮೇಧ ಯಾಗದ ಬಗ್ಗೆ ತಾನೇ) ಗ್ರಂಥದ  ಪ್ರಾರಂಭದಲ್ಲಿಯೇ ನಮಗೆ ಗೊಂದಲ ಉಂಟಾಗುತ್ತದೆ. ಆರ್ಯಾವರ್ತದ ಚಕ್ರಾಧಿಪತಿ, ಪಾಂಡವ ಪ್ರಮುಖ ಧರ್ಮರಾಯನು ಮಾಡಲು ತೊಡಗಿರುವ ಅಶ್ವಮೇಧಯಾಗದಲ್ಲಿ ಉಪಯೋಗಿಸುವ ಹಣ ಇತರರದು (ಮರುತ್ತ ರಾಯನ ಯಜ್ಞದಲ್ಲಿ ಬ್ರಾಹ್ಮಣರು ಹೊರಲಾರದೆ ಬಿಟ್ಟುಹೋದ ಹಣ), ಮತ್ತು ಅದಕ್ಕೆ ಬೇಕಾದ ಕುದುರೆ ಯೌವನಾಶ್ವನದು. ಇಷ್ಟೇ ಅಲ್ಲದೆ ಮುಖ್ಯ ಕಥಾವಸ್ತುವಾದ ಯಜ್ಞ ವಿಚಾರವನ್ನೇ ಉದ್ದಕ್ಕೂ ರಾಜರ್ಷಿಗಳು ಮತ್ತು ಜ್ಞಾನಿಗಳು ತೆಗಳುತ್ತಾರೆ. ಉದಾಹರಣೆಗಾಗಿ, ಅಗ್ನಿ ಅರ್ಜುನನೊಡನೆ ‘ನಿಮಗೆ ಹರಿ ಸಮೀಪದೊಳಿರ್ದುಮೀ ವಾಜಿ ಮೇದಮೇಕೆ ಅಮೃತ ಮಿರಲಳೆಗೆಳಸಿದಂತಾಯ್ತು’ ಎನ್ನುತ್ತಾನೆ. ಮುಂದೆ ಸೌಭರಿ ಮುನಿಯು “ಸದಾ ಕೃಪಾನಿಧಿಯ ಸಾನ್ನಿಧ್ಯಮಿರುತಿರಲಾಗಿ ವಾಜಿಮೇಧಂ ಬೇಹುದೆ” ಎಂದು ಅರ್ಜುನನನ್ನು ಜರಿಯುತ್ತಾನೆ. ಅಷ್ಟೇ ಅಲ್ಲದೆ “ಹರಿ ಮನೆಯೊಳಿರೆ ಗರ್ದಾಭಾಕೃತಿಯ ಹರಿಯೊಡನೆ ಬಂದೆ” ಎಂದು ಹೀಗಳೆಯುತ್ತಾನೆ. ಇನ್ನೂ ಮುಂದೆ ಮಯೂರಧ್ವಜ “ಸ್ವಕರಸ್ಥನಾದ ಹರಿಯಂ ಬಿಟ್ಟು ಕಟ್ಟಿದಂ ಗರ್ದಭಾಕೃತಿ ಹರಿಯನು” ಎಂದು ತನ್ನ ಮಗನನ್ನು ಬಯ್ಯುತ್ತಾನೆ.

ಹಾಗಾದರೆ ಇಲ್ಲಿ ಕವಿ ಭಕ್ತ ಪಂಥದವನಾದುದರಿಂದ ಕೃಷ್ಣಭಕ್ತಿಯನ್ನು ತನ್ನ ಕಾವ್ಯದಲ್ಲಿ ಎತ್ತಿ ಹಿಡಿದು ಕರ್ಮನಿಷ್ಠವಾದ ವೈದಿಕಮಾರ್ಗವನ್ನು ಅಲ್ಲಗಳೆಯುತ್ತಾನೆಂದು ಹೇಳಬಹುದಲ್ಲಾ ಅಂದರೆ ಅದೂ ಅಷ್ಟು ಸುಲಭವಾಗುವುದಿಲ್ಲ. “ಅಮೃತಮಿರಲಳೆಗೆಣಿಸಿದಂತಾಯ್ತು” ಎಂದು ಉಪದೇಶ ಮಾಡುವ ಅಗ್ನಿಯೇ ನೀಲಧ್ವಜನ ಮಗಳನ್ನು ಮದುವೆಯಾಗಿ, ಅದು ಕಾರಣ ತನ್ನ ಮಾವನ ರಾಜ್ಯವನ್ನು ಸದಾ ಕಾಯುವ ಸಾಧಾರಣ ಮರ್ತ್ಯಧರ್ಮಕ್ಕೆ ಕಟ್ಟುಬಿದ್ದಿರುವವನು. ಆತನ ಮಾತನ್ನು ಏನೂ ಪ್ರಶ್ನೆಯಿಲ್ಲದೆ ಒಪ್ಪಿಕೊಳ್ಳಬಹುದೆ? ಹಾಗೆಯೇ “ಮನೆಯಲ್ಲಿ ಹರಿಯೇ ಇರುವಾಗ ನೀನೇಕೆ ಕತ್ತೆಯಂತಿರುವ ಕುದುರೆಯನ್ನು ತಂದೆ” ಎಂದು ಮಗನನ್ನು ಜರಿಯುವ ಮಯೂರಧ್ವಜನೂ ಈ ಸಂಸಾರದ ಕರ್ಮಮಾರ್ಗದಲ್ಲಿ ಬಿದ್ದು ತೊಳಲಾಡು ವವನೇ-ಅವನೇ ಆರು ಸಲ ಅಶ್ವಮೇಧ ಯಾಗವನ್ನು ಮಾಡಿ ಮತ್ತೆಯೂ ಮಾಡಲು ಉದ್ಯುಕ್ತನಾದವನು. ಮತ್ತೆ ಯಾಗವನ್ನು ಕುರಿತ ಇವನ ಮಾತುಗಳು ಎಷ್ಟು ಗ್ರಾಹ್ಯ?

ಇದೇ ವಿಧದ ಸಂಕೀರ್ಣ ದ್ವಂದ್ವ ಭಾವವನ್ನು (Complex ambience) ನಾವು ಕಾವ್ಯದ ಕಥೆ ಉಪಕಥೆಗಳ ಜೋಡಣೆಯಲ್ಲಿಯೂ ಕಾಣಬಹುದು. ಒಂದು ಕೃತಿಯಲ್ಲಿ ಅನೇಕ ಕಥೆ- ಉಪಕಥೆಗಳಿದ್ದರೆ (ಸಾಮಾನ್ಯವಾಗಿ ‘ಪರಿಭ್ರಮಣ’ವನ್ನು ಪ್ರತೀಕವಾಗಿ ಉಪಯೋಗಿಸುವ ಕೃತಿಗಳಲ್ಲಿ ಅನೇಕ ಕಥೆಗಳಿರುತ್ತವೆ), ಕೃತಿಕಾರ ಅವುಗಳ ಜೋಡಣೆಯಲ್ಲಿ ಅತ್ಯಂತ ಕೌಶಲ್ಯವನ್ನು ತೋರಿಸಿ, ಆ ಜೋಡಣೆಯ ಮೂಲಕವೇ ಒಂದು ಪಾತಳಿಯಲ್ಲಿ ಕೃತಿಯ ಅರ್ಥವನ್ನು ಹೊರಹೊಮ್ಮಿಸಬಹುದು. ಈ ದೃಷ್ಟಿಯಲ್ಲಿ ಒಂದು ಅತ್ಯುತ್ತಮ ಮಹಾಕಾವ್ಯವೆಂದರೆ ಮಧ್ಯಕಾಲೀನ ಇಂಗ್ಲಿಷ್ ಭಾಷೆಯಲ್ಲಿ ಛಾಸರ್ ಮಹಾಕವಿ ರಚಿಸಿರುವ ‘ಕ್ಯಾಂಟರ್‌ಬರಿ ಟೇಲ್ಸ್’. ಈ ಕಾವ್ಯದ ಚೌಕಟ್ಟು ಧಾರ್ಮಿಕ ಸಂತ ಥಾಮಸ್‌ನ ಚರ್ಚ್ ಇರುವ ಕ್ಯಾಂಟರ್‌ಬರಿಗೆ ಯಾತ್ರೆಮಾಡುವ ೨೭ ಯಾತ್ರಿಕರ ಕಥೆಗಳು. ದಾರಿಯಲ್ಲಿ ಪ್ರತಿಯೊಬ್ಬ ಯಾತ್ರಿಕನೂ ಮತ್ತು ಯಾತ್ರಿಕಳೂ ಒಂದೊಂದು ಕಥೆಯನ್ನು ಹೇಳುತ್ತಾನೆ/ಳೆ. ಇದೇ ‘ಕ್ಯಾಂಟರ್‌ಬರಿ ಕಥೆಗಳು’.

‘ಕ್ಯಾಂಟರ್‌ಬರಿ ಟೇಲ್ಸ್’ನಲ್ಲಿ ಕಂಡುಬರುವ ಜೋಡಣೆ-ಶಿಲ್ಪ ವಿನ್ಯಾಸ-ಅಪೂರ್ವ. ಪ್ರತಿ ಯೊಂದು ಕಥೆಯಲ್ಲಿಯೂ, ಕಥೆಗೂ ಆ ಕಥೆಯನ್ನು ಹೇಳುವ ‘ಕಥೆಗಾರ’ನಿಗೂ ನಿಕಟ ಸಂಬಂಧವಿದೆ; ಮತ್ತು ಈ ಸಂಬಂಧ ಮುಖ್ಯತಃ ಮನೋವೈಜ್ಞಾನಿಕ ಪಾತಳಿಯದು. ಇಷ್ಟೇ ಅಲ್ಲದೆ ಕಥೆಗಳ ಜೋಡಣೆಯೂ ತುಂಬ ಅರ್ಥವತ್ತಾಗಿದೆ. ಮೊಟ್ಟಮೊದಲನೆಯ ಕಥೆಗಾರ ‘ನೈಟ್’ ಅಂದರೆ ಪ್ರಾಪಂಚಿಕ ವ್ಯವಹಾರದಲ್ಲಿ ಸಮಾಜದ ಅತ್ಯುಚ್ಚ ವರ್ಗಕ್ಕೆ ಸೇರಿದ, ಕೀರ್ತಿ ಅಧಿಕಾರ ಸಾಹಸ ಇವುಗಳನ್ನು ಪ್ರತಿನಿಧಿಸುವವನಾದರೆ ಕಾವ್ಯದ ಕೊನೆಯ ‘ಕತೆಗಾರ’ ಆಧ್ಯಾತ್ಮಿಕ ವ್ಯವಹಾರದಲ್ಲಿ ಸಮಾಜದಲ್ಲಿ ಪೂಜ್ಯಸ್ಥಾನದಲ್ಲಿರುವವನು-ಪಾರ್ಸನ್ (ಪಾದ್ರಿ). ಇವರಿಬ್ಬರ ಮಧ್ಯೆ ಸಮಾಜದ ಎಲ್ಲಾ ವರ್ಗಗಳನ್ನೂ ಪ್ರತಿನಿಧಿಸುವ ಇತರರು-ವೈದ್ಯ, ಕಮ್ಮಾರ, ಬಡಗಿ, ವರ್ತಕ ಇತ್ಯಾದಿ ಬರುತ್ತಾರೆ. ಎಂದರೆ ಕಾವ್ಯದ ಒಟ್ಟು ಗತಿ ಪ್ರಾಪಂಚಿಕತೆಯಿಂದ ಆಧ್ಯಾತ್ಮಿಕತೆಗೆ, ಇಹದಿಂದ ಪರದ ಕಡೆಗೆ, ಭೋಗದಿಂದ ತ್ಯಾಗದ ಕಡೆಗೆ ಇದೆ. ಇಷ್ಟೇ ಅಲ್ಲದೆ ಒಂದು ಕಥೆ ಎತ್ತಿ ಹಿಡಿಯುವ ಮೌಲ್ಯಗಳನ್ನು ಮತ್ತು ಜೀವನ ದೃಷ್ಟಿಯನ್ನು ಮತ್ತೊಂದು ಕಥೆ ಟೀಕಿಸುತ್ತದೆ; ಗೇಲಿ ಮಾಡುತ್ತದೆ. ಹೀಗೆ ಮಂಡನೆ ಮತ್ತು ಖಂಡನೆ, ಮತ್ತು ಪುನರ್ಮಂಡನೆ, ಈ ರೀತಿಯಲ್ಲಿ ಛಾಸರನ ಜೀವನ ದೃಷ್ಟಿ ಅವನ ಕಾವ್ಯದಲ್ಲಿ ನಿರೂಪಿತವಾಗಿದೆ. ಈ ಮಾತಿನ ಸಮರ್ಥನೆಗೆ ನಾವು ಕಾವ್ಯದ ಮೊದಲು ಬರುವ ‘ನೈಟ್ಸ್ ಟೇಲ್’ ಮತ್ತು ‘ಮಿಲರ್ಸ್ ಟೇಲ್’ ಇವುಗಳನ್ನು ನೋಡಬಹುದು.

‘ನೈಟ್ಸ್ ಟೇಲ್’ ಪ್ರಣಯ-ಸಾಹಸಗಳ ಕಥೆ (Heroic tale). ಇದರಲ್ಲಿ ಆರ್ಸಿಟಿ ಮತ್ತು ಪಲಮನ್ ಎಂಬ ಇಬ್ಬರು ಯುವಕರು ಎಮಿಲಿಯೆಂಬ ರಾಜಕುಮಾರಿಯನ್ನು ಪ್ರೀತಿಸುತ್ತಾರೆ. ಈ ಪ್ರಣಯ ತ್ರಿಕೋನವನ್ನು ಜಟಿಲಗೊಳಿಸುವ ಸಂಗತಿಯೆಂದರೆ ಎಮಿಲಿಯನ್ನು ಕುರಿತು ಇರುವ ಇಬ್ಬರೂ ಯುವಕರ ಸಮಾನ ಪ್ರೇಮ ಮತ್ತು ಸಮಾನ ಧೈರ‍್ಯ-ಸಾಹಸಗಳು. ಅಲ್ಲದೆ ಎಮಿಲಿಯೂ ಇಬ್ಬರನ್ನೂ ಸಮನಾಗಿ ಕಾಣುತ್ತಾಳೆ. ಈ ಸಂದರ್ಭದಲ್ಲಿ ಎಮಿಲಿ ಯಾರಿಗೆ ಸೇರಬೇಕು? ನಿರ್ಧರಿಸಲು ನಡೆಯುವ ಯುದ್ಧದಲ್ಲಿ ಆರ್ಸಿಟಿ ವಿಜಯಿಯಾದರೂ ವಿವಾಹ ಪೂರ್ವವೇ ಮರಣಹೊಂದುತ್ತಾನೆ, ಮತ್ತು ಕೊನೆಗೆ ಎಮಿಲಿ-ಪಲಮನ್ ಇವರ ವಿವಾಹವಾಗು ತ್ತದೆ. ಒಟ್ಟಿನಲ್ಲಿ ಕಥೆ ಪ್ರೇಮ ಮತ್ತು ಸಾಹಸ ಈ ಎರಡು ಗುಣಗಳನ್ನು ಆದರ್ಶಗಳನ್ನಾಗಿ ಎತ್ತಿ ಹಿಡಿಯುತ್ತದೆ.

ಈ ಕತೆಯಾದ ಕೂಡಲೇ ಬರುತ್ತದೆ ‘ಮಿಲರ್ಸ್ ಟೇಲ್’. ಇದು ಒಂದು ಫಾಬ್ಲಿಯೋ’  (fablian) ಅಂದರೆ ಜನಸಾಮಾನ್ಯರು ಸಮಾಜದ ಮೇಲುವರ್ಗದ ಜನರನ್ನು ಗೇಲಿಮಾಡಲು ರಚಿಸುವ ಕಥಾಪ್ರಕಾರ. ಇದರಲ್ಲಿಯೂ ಒಂದು ಪ್ರಣಯ ತ್ರಿಕೋನವಿದೆ. ಊರಿನ ಮೂರ್ಖ ಬಡಗಿಯ ಹೆಂಡತಿಯನ್ನು ನಿಕಲಸ್ ಮತ್ತು ಅಬ್ಸಲಾಮ್ ಎಂಬ ಇಬ್ಬರು ಉಡಾಳ ತರುಣರು ಕಾಮಿಸುತ್ತಾರೆ. ನಿಕಲಸ್ ಆ ಬಡಿಗಿಗೆ ಒಂದು ದಿನ ಜಲಪ್ರಳಯವಾಗುತ್ತದೆಂದೂ, ಅದರಿಂದ ಪಾರಾಗಲು ರಾತ್ರಿಯೆಲ್ಲಾ ಮನೆಯ ಸೂರಿನಿಂದ ಇಳಿಬಿದ್ದ ದೊಡ್ಡ ಟಬ್‌ನಲ್ಲಿ ಕುಳಿತು ದೇವರ ಪ್ರಾರ್ಥನೆ ನಡೆಸಬೇಕೆಂತಲೂ ಹೇಳುತ್ತಾನೆ. ಇವನ ಮಾತನ್ನು ನಂಬಿದ ಬಡಗಿ ಅಂತೆಯೇ ರಾತ್ರಿ ಮಹಡಿ ಏರಿ ಟಬ್‌ನಲ್ಲಿ ಕುಳಿತು ಪ್ರಾರ್ಥಿಸುತ್ತಿರುವಾಗ ಕೆಳಗೆ ನಿಕಲಸ್ ಅವನ ಹೆಂಡತಿಯೊಡನೆ ರಮಿಸಲುದ್ಯುಕ್ತನಾಗುತ್ತಾನೆ. ಆದರೆ ಅದೇ ಸಮಯಕ್ಕೆ ಬಂದ ಅಬ್ಸಲಾಮ್ ಆ ಬಡಗಿಯ ಹೆಂಡತಿಯನ್ನು ತನಗೊಂದು ಮುತ್ತು ಕೊಡೆಂದು ಪೀಡಿಸುತ್ತಾನೆ; ಮತ್ತು ಕತ್ತಲೆಯಲ್ಲಿ ಕಿಟಕಿಯಿಂದ ಹೊರಚಾಚಿದ ನಿಕಲಸ್‌ನ ಪೃಷ್ಠಭಾಗಕ್ಕೆ ಮುತ್ತು ಕೊಡುತ್ತಾನೆ. ನಿಕಲಸ್‌ನ ಮೋಸ ತಿಳಿದು ಅನಂತರ ಅವನು ತನ್ನ ಮನೆಗೆ ಹೋಗಿ ಕೆಂಪಗೆ ಕಾಯಿಸಿದ ಕಬ್ಬಿಣದ ಸಲಾಕಿಯಿಂದ ನಿಕಲಸ್‌ಗೆ ಬರೆಯಿಡುತ್ತಾನೆ. ಉರಿ ತಡೆಯಲಾಗದೆ ನಿಕಲಸ್ ‘ನೀರು, ನೀರು’ ಎಂದು ಕಿರುಚಿದುದನ್ನು ಕೇಳಿದ ಆ ಬಡಗಿ ಜಲಪ್ರಳಯವಾಯಿತೆಂದು ಹೆದರಿಕೆಯಿಂದ ಹಗ್ಗವನ್ನು ಕತ್ತರಿಸಿ ಕೆಳಗೆ ಬೀಳುತ್ತಾನೆ.