ಪಠ್ಯಕೇಂದ್ರಿತ ವಿಮರ್ಶೆಯಲ್ಲದ ಪಠ್ಯಕೇಂದ್ರಿತ ವಿಧಾನ : ರಾಚನಿಕ ವಿಧಾನಚಿರಂತನ * ಪ್ರತೀಕ ವಿಮರ್ಶೆ

೧೯೮೭ರಲ್ಲಿ ಪ್ರಕಟವಾದ ಸಿ.ಎನ್. ರಾಮಚಂದ್ರನ್‌ರವರ ಲೇಖನ “ಪರಿಭ್ರಮಣ’ ಮತ್ತು ‘ಶೋಧ’: ಕನ್ನಡ ಜೈಮಿನಿ ಭಾರತದ ಒಂದು ಅಧ್ಯಯನ” ಪಠ್ಯಕೇಂದ್ರಿತ ವಿಧಾನವಾದರೂ ಪಠ್ಯಕೇಂದ್ರಿತ ವಿಮರ್ಶೆಯಲ್ಲ. ಇಲ್ಲಿ ಅವರು ಆರ್ಕಿಟೈಪಲ್ ಕ್ರಿಟಿಸಿಸಂನ ಅನ್ವಯವನ್ನು ಮಾಡುತ್ತಿದ್ದಾರೆ. ಅದು ಕೇವಲ ಅನ್ವಯವಷ್ಟೇ ಅಲ್ಲ ಬದಲಿಗೆ ‘ಪರಿಭ್ರಮಣ’ ಮತ್ತು ‘ಶೋಧ’ ಇವು ಹೇಗೆ ಚಿರಂತನ ಪ್ರತೀಕಗಳಾಗಿವೆ ಸಾಹಿತ್ಯದಲ್ಲಿ ಎಂದು ಸಾಧಿಸಿ ತೋರಿಸುವುದು. ಅವರು ಪಠ್ಯವನ್ನು ಅದರ ಚಾರಿತ್ರಿಕ ಸಂದರ್ಭದಲ್ಲಿ ಇಟ್ಟು ನೋಡುತ್ತಿಲ್ಲ, ಕನ್ನಡ ಸಾಹಿತ್ಯದ ಪರಂಪರೆಯ ಭಾಗವಾಗಿಯೂ ನೋಡುತ್ತಿಲ್ಲ, ಬದಲಿಗೆ ಅದನ್ನು ಅವರು ವಿಶ್ವಸಾಹಿತ್ಯದ ಭಾಗವಾಗಿ ನೋಡುತ್ತಿದ್ದಾರೆ.

ಲೇಖನದ ಮೊದಲಲ್ಲಿ ಅವರು ಚಿರಂತನ ಪ್ರತೀಕ, ಪುರಾಣ (ಮಿಥ್) ಇವುಗಳನ್ನು ವಿವರಿಸುತ್ತಾರೆ. ಏಕೆ ಈ ಪರಿಕರಗಳನ್ನು ಬಳಸಿ ಸಾಹಿತ್ಯವನ್ನು ಅಧ್ಯಯನ ಮಾಡಬೇಕು ಎಂದು ತಿಳಿಸುತ್ತಾರೆ. ಇವುಗಳ ಮೂಲಕ ಒಂದು ಪಠ್ಯ ತನ್ನ ವಿನ್ಯಾಸವನ್ನು ಗಳಿಸಿಕೊಳ್ಳುವ ಬಗೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ, ಇದು ವಿನ್ಯಾಸಕಾರನಿಗೆ (ಕೃತಿಕಾರನಿಗೆ) ಅಂದಿನ ಸಮಾಜದ ಸಂಪೂರ್ಣ ಚಿತ್ರಕೊಡುವುದು ಸಾಧ್ಯಮಾಡುತ್ತದೆ ಎಂಬುದು ಅವರ ನಿಲುವು. ನಂತರ ಪರಿಭ್ರಮಣ ಮತ್ತು ಶೋಧ ಎಂಬ ಚಿರಂತನ ಪ್ರತೀಕಗಳನ್ನು ಬಳಸಿರುವ ಇತರ ಪ್ರಪಂಚಸಾಹಿತ್ಯದ ಪಠ್ಯಗಳನ್ನು ಸ್ಥೂಲವಾಗಿ ವಿವರಿಸುತ್ತಾರೆ. ನಂತರ ಲಕ್ಷ್ಮೀಶನ ಜೈಮಿನಿ ಭಾರತವನ್ನು ವಿಶ್ಲೇಷಣೆಗೆ ತೆಗೆದುಕೊಳ್ಳುತ್ತಾರೆ. ಈ ಎರಡನೆಯ ಭಾಗದ ಮೊದಲಲ್ಲಿ ಲಕ್ಷ್ಮೀಶನನ್ನು ಕುರಿತು ಇದುವರೆಗೆ ಬಂದಿರುವ ವಿಮರ್ಶೆಗಳನ್ನು ಉಲ್ಲೇಖಿಸದೆ ಅವುಗಳ ಬಗೆಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಇವುಗಳಲ್ಲಿ ಅವನ ಕುರಿತ ಪಂಪ ಮತ್ತು ಕುಮಾರವ್ಯಾಸರಿಗೆ ಹೋಲಿಸಿದ ಮೌಲ್ಯಮಾಪನಗಳಿಗೆ ಕಾರಣವೇನಿರಬಹುದು ಎಂದು ಊಹಿಸುತ್ತಾರೆ. ಆದರೆ ಇದರಿಂದಾಗಿ ಕನ್ನಡ ಸಾಹಿತ್ಯದಲ್ಲಿ ಸಂಚಾರ ವಸ್ತುವಾಗುಳ್ಳ ಕಥಾ ನಾಯಕನ ಜೀವನ ಕೇಂದ್ರಿತವಲ್ಲದ ವಸ್ತುಹೊಂದಿರುವ ಮಹಾಕಾವ್ಯ ಎಂಬ ಅಂಶ ಗೌಣ ವಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ವಾಮನಬೇಂದ್ರೆಯವರ ಅಧ್ಯಯನವನ್ನು ಸ್ಥೂಲವಾಗಿ ಉಲ್ಲೇಖಿಸಿ ಇದು ಅನುವಾದವಾದರೂ ಮೂಲದಿಂದ ಹೇಗೆ ಭಿನ್ನವಾಗಿದೆ ಎಂದು ಅವರು ತೋರಿಸಿರುವುದನ್ನು ಅನುಮೋದಿಸಿ, ತಮ್ಮ ಅಧ್ಯಯನದ ಚೌಕಟ್ಟನ್ನು ಸ್ಪಷ್ಟಪಡಿಸುತ್ತಾರೆ. ಅವರ ಚೌಕಟ್ಟು: “ನಾನು ಜೈಮಿನಿ ಭಾರತವನ್ನು ಅದರ ಕಾಲ-ದೇಶಗಳ ವಿಮರ್ಶೆಗೆ ಹೋಗದೆ, ಅದು ಅನುವಾದವೆಂಬುದನ್ನು ಮರೆತು (ಅಂದರೆ ಈ ಕಾವ್ಯದಲ್ಲಿ ಕಂಡುಬರುವ ಘಟನೆಗಳಿಗೆ, ಅರ್ಥ ವೈಶಾಲ್ಯಕ್ಕೆ ಲಕ್ಷ್ಮೀಶನು ಎಷ್ಟು ಹೊಣೆ ಮತ್ತು ಜೈಮಿನಿ ಮುನಿಯ ಕಾಣಿಕೆಯೆಷ್ಟು ಎನ್ನುವ ವಿಮರ್ಶೆಗೆ ಹೋಗದೆ) ಕನ್ನಡ ಜೈಮಿನಿಯನ್ನು ಇಂದು ನಾವು ಓದಿದರೆ ನಮಗೆ ದೊರಕುವ ಅರ್ಥವೇನು-ಕೃತಿ ಪ್ರತಿಪಾದಿಸುವ ಮೌಲ್ಯಗಳೇನು ಎಂಬುದನ್ನು ಮಾತ್ರ ಚರ್ಚಿಸಿ ದ್ದೇನೆ”. ಈ ಎರಡನೆಯ ಭಾಗ ಲಕ್ಷ್ಮೀಶನ ಜೈಮಿನಿ ಭಾರತವನ್ನು ಕುರಿತದ್ದಾದರೂ ಅದರಲ್ಲಿ ಮತ್ತೆ ಚಾಸರ್‌ನ ಕ್ಯಾಂಟರ್‌ಬರಿ ಟೇಲ್ಸ್‌ನೊಂದಿಗೆ ತುಲನಾತ್ಮಕವಾಗಿ ನೋಡುವ ವಿಧಾನವಿದೆ. ಮೂರನೆಯ ಭಾಗದಲ್ಲಿ ತಮ್ಮ ವಿಶ್ಲೇಷಣೆಯನ್ನು ಆಧರಿಸಿದ ಅಭಿಪ್ರಾಯಗಳನ್ನು ಮಂಡಿಸು ತ್ತಾರೆ.

ಪೂರ್ಣಪ್ರಮಾಣದ ಅಧ್ಯಯನಗಳು

ಈ ಭಾಗದಲ್ಲಿ ನಾನು ಮುಖ್ಯವಾಗಿ ಎರಡು ಅಧ್ಯಯನಗಳನ್ನು ಗಮನಿಸುತ್ತಿದ್ದೇನೆ. ಮೊದಲನೆಯದು ವಾಮನ ಬೇಂದ್ರೆಯವರ ಪ್ರಕಟಿತ ಪಿಎಚ್.ಡಿ. ಪ್ರಬಂಧ ‘ಲಕ್ಷ್ಮೀಶನ ಜೈಮಿನಿ ಭಾರತ ಒಂದು ಅಧ್ಯಯನ’ (೧೯೭೯) ಮತ್ತು ಎರಡನೆಯದು ಬಿ.ಎಸ್. ಸಣ್ಣಯ್ಯ ಮತ್ತು ರಾಮೇಗೌಡರು ಸಂಪಾದಿಸಿರುವ ಲಕ್ಷ್ಮೀಶನ ಜೈಮಿನಿ ಭಾರತ (೧೯೯೩)ಕ್ಕೆ  ರಾಮೇ ಗೌಡರು ಬರೆದಿರುವ ೬೯ ಪುಟಗಳ ಸುದೀರ್ಘ “ಪ್ರಸ್ತಾವನೆ”. ಇವೆರಡು ಜೈಮಿನಿ ಭಾರತದ ಮೇಲೆ ಬಂದಿರುವ ಸುದೀರ್ಘ ಅಧ್ಯಯನ ಪ್ರಬಂಧಗಳು. ಇವುಗಳು ಪಠ್ಯದ ಸಂಪೂರ್ಣ, ಅಮೂಲಾಗ್ರ ಪರಿಚಯ/ವಿಮರ್ಶೆ ಮಾಡಿಕೊಡುವ ಉದ್ದೇಶ ಹೊಂದಿರುವುದು ಸ್ಪಷ್ಟವಾಗಿದೆ. ಅವುಗಳ ಸಂದರ್ಭವನ್ನು ಗಮನಿಸಿದಾಗ ಒಂದು ಕೃತಿಕೇಂದ್ರಿತ ಪಿಎಚ್.ಡಿ. ಪ್ರಬಂಧ ಮತ್ತೊಂದು ಅದರ ಸಂಗ್ರಹಕ್ಕೆ ಬರೆದಿರುವ ಪ್ರಸ್ತಾವನೆ. ಆದ್ದರಿಂದ ಈ ಎರಡೂ ಅಧ್ಯಯನ ಗಳಲ್ಲಿ ಇದುವರೆಗಿನ ಆ ಪಠ್ಯ ಕೇಂದ್ರಿತ ಚರ್ಚೆಗಳು, ಅವುಗಳು ಫಲಿತಗಳು ಸಂಗ್ರಹವಾಗಿ ಬರುವುದು, ಅವುಗಳಿಗೆ ಹೊಸ ಅಂಶಗಳನ್ನು ಜೋಡಿಸುವುದು, ಸಾರಾಂಶವನ್ನು ವಿವರವಾಗಿ ನೀಡುವುದು ಇವುಗಳನ್ನು ಗಮನಿಸಬಹುದು.

ಸಂಶೋಧನಾ ಪ್ರಬಂಧ

ವಾಮನ ಬೇಂದ್ರೆಯವರ ಪ್ರಬಂಧವು ಮೂಲತಃ ಪುಣೆ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಪ್ರಬಂಧ. ಪಿಎಚ್.ಡಿ. ಪ್ರಬಂಧದ ಶೀರ್ಷಿಕೆಯು “ಲಕ್ಷ್ಮೀಶನ ಜೈಮಿನಿ ಭಾರತ ಸಂಸ್ಕೃತ ಮೂಲ ಮತ್ತು ಮರಾಠಿ ಆವೃತ್ತಿಗಳೊಡನೆ ತೌಲನಿಕ ಅಧ್ಯಯನ” ಎಂದಾಗಿತ್ತು. ಈ ಪ್ರಬಂಧ ದಲ್ಲಿ ಮುಖ್ಯವಾಗಿ ಎರಡು ಭಾಗಗಳು ಮತ್ತು ಅನುಬಂಧಗಳ ಮತ್ತೊಂದು ಭಾಗವಾಗಿದೆ, ಒಟ್ಟು ೬೪೮ ಪುಟಗಳು. ಮೊದಲನೆಯ ಭಾಗವು ೫ ಅಧ್ಯಾಯನಗಳನ್ನೂ ಎರಡನೆಯ ಭಾಗವು ಎರಡು ಅಧ್ಯಾಯಗಳನ್ನೂ ಅನುಬಂಧದ ಭಾಗದಲ್ಲಿ ಬಹಳ ಉಪಯುಕ್ತವಾದ ದತ್ತಾಂಶಗಳನ್ನು ನೀಡಿದ್ದಾರೆ. ಜೊತೆಗೆ ಒಂದು ಸಂಶೋಧನಾತ್ಮಕ ಪ್ರಬಂಧದಲ್ಲಿ ಇರಬೇಕಾದ ವಿಷಯ ವಿಭಜನಾ ಸೂಚಿ, ಅಭ್ಯಾಸ ಸೂಚಿ, ಕರ್ತೃಸೂಚಿ, ಗ್ರಂಥ ಋಣ ಇವುಗಳಿವೆ.

ಇದೊಂದು ಬಹಳ ಉಪಯುಕ್ತ ಅಧ್ಯಯನ. ಇದರ ಅಧ್ಯಯನ ವಿಧಾನಗಳು ಕುತೂಹಲ ಕಾರಿಯಾಗಿವೆ. ಇದರ ಪರಿವಿಡಿಯನ್ನು ಗಮನಿಸಿದರೆ ನಮಗೆ ಇದರ ವಿಧಾನದ ಸುಳಿಹು ಅಷ್ಟಾಗಿ ಆಗುವುದಿಲ್ಲ. ಮೊದಲನೆಯ ಭಾಗವಂತೂ ಮೊದಲ ನೋಟಕ್ಕೆ ಮೇಲೆ ಉಲ್ಲೇಖಿಸಿದ ೨೦ನೇ ಶತಮಾನದ ಆದಿ ಭಾಗದ ಅಧ್ಯಯನಗಳಾಗಿಯೇ ಕಾಣುತ್ತದೆ. ಇದರಲ್ಲಿ “ಕವಿ ಮತ್ತು ಕಾವ್ಯ”, “ಕಾವ್ಯ ವಸ್ತು”, ‘ಪಾತ್ರ”, “ಕಾವ್ಯ ಸಮೀಕ್ಷೆ” ಮತ್ತು “ಕನ್ನಡ ಕಾವ್ಯಲೋಕ ದಲ್ಲಿ ಕವಿ ಲಕ್ಷ್ಮೀಶನ ಸ್ಥಾನ” ಈ ಅಧ್ಯಾಯಗಳಿವೆ. ಇವೆಲ್ಲವೂ ಈಗಾಗಲೇ ಚರ್ಚಿತವಾಗಿರುವ ವಿಷಯಗಳು. ಮೊದಲನೆಯ ಅಧ್ಯಾಯದಲ್ಲಿ “ಕವಿ ಮತ್ತು ಕಾವ್ಯ”ದಲ್ಲಿ ಕವಿಯ ಜೀವನ ಚರಿತ್ರೆ, ದೇಶ, ಮತ, ಬಿರುದು, ಕಾವ್ಯದ ಕಾಲ ಇತ್ಯಾದಿಗಳನ್ನು ಕುರಿತು ಇದುವರೆಗೆ ನಡೆದಿ ರುವ ಚರ್ಚೆಗಳ ಪರಿಶೀಲನೆ, ಅವುಗಳ ಪುನರ್ವಿಮರ್ಶೆ, ತಮ್ಮ ಅಭಿಮತದ ಮಂಡನೆ ಇತ್ಯಾದಿಗಳಿವೆ. ನಂತರ ಕವಿಯ ಇತರ ಪಠ್ಯಗಳ ಪ್ರಸ್ತಾವವೂ ಇದೆ. ಇವೆಲ್ಲವೂ ಅದುವರೆಗೆ ಅರ್ಧಶತಮಾನ ನಡೆದಿದ್ದ ಚರ್ಚೆಗಳ ಮುಂದುವರಿದ ಭಾಗ. ಆದರೆ ಕುತೂಹಲ ಕೆರಳಿಸುವ ಸಂಗತಿಗಳೆಂದರೆ ಮೊದಲ ಬಾರಿಗೆ

[1] ಇವರು ದೇಶ/ಸ್ಥಳದ ಚರ್ಚೆ ಮಾಡುವಾಗ ನೀಡಿರುವ ಪೂರಕ ಸಾಮಗ್ರಿಗಳು, ಆಧಾರಗಳು. ಇಲ್ಲಿ ಕ್ಷೇತ್ರಕಾರ್ಯದ ವಿಧಾನವನ್ನು ಆಧರಿಸಲಾಗಿದೆ. ಕ್ಷೇತ್ರಕಾರ್ಯದಲ್ಲಿ ವಕ್ತೃಗಳನ್ನು ಭೇಟಿ ಮಾಡಿ ಅವರಿಂದ ಸಂಗ್ರಹಿಸಿದ (ಪರಂಪರಾಗತವಾಗಿ ಬಂದ, ಅಥವಾ ಆಗ ಪ್ರಸ್ತುತದಲ್ಲಿದ್ದ ಅಂಶಗಳು) ಅಂಶಗಳನ್ನು ಬಾಹ್ಯ ಪ್ರಮಾಣಗಳಾಗಿ ಸ್ವೀಕರಿಸಿರುವುದನ್ನು ಕಾಣಬಹುದು. ಆ ಊರಿನ ಜಾತ್ರೆ, ಅಲ್ಲಿ ಸದ್ಯದಲ್ಲಿ ವಾಸವಾಗಿರುವ ಜನಗಳ ಮತಗಳು ದೇವಾಲಯದ ಆಚರಣಾ ವಿಧಾನಗಳನ್ನು ಕವಿಯ ಮತದ ನಿರ್ಣಯಕ್ಕೆ ಪೂರಕವಾಗಿ ಬಳಸಿಕೊಳ್ಳುತ್ತಾರೆ. ದೇವನೂರಿನಲ್ಲಿರುವ, ದೇವಾಲಯಗಳು ಮತ್ತು ದೇವರ ಮನೆಗಳು[2], ಅವುಗಳ ಪರಿಸರ, ಶಾಸನಗಳು, ಶಾಸನಗಳನ್ನು ಕುರಿತ ಪುರಾತತ್ವ ವಿದ್ವಾಂಸರ ಅಭಿಪ್ರಾಯಗಳು, ಜೈಮಿನಿ ಭಾರತದ (ಸಂಸ್ಕೃತ) ಕಾಲವನ್ನು ಕುರಿತ ವಿದ್ವಾಂಸರ ಚರ್ಚೆಗಳ ಸಂಗ್ರಹ, ಇವುಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಅಂದರೆ ಇಂದು ಸಮಾಜಶಾಸ್ತ್ರ ಮತ್ತು ಜಾನಪದ ಅಧ್ಯಯನಗಳಲ್ಲಿ ಬಳಸುವ ಕ್ಷೇತ್ರಕಾರ್ಯದ ವಿಧಾನ ಮತ್ತು ಸಾಹಿತ್ಯ ಪಠ್ಯ ವಿಶ್ಲೇಷಣೆಯ ವಿಧಾನ ಇವುಗಳೆರಡನ್ನೂ ಅನುಸರಿಸಲಾಗಿದೆ.

ಸಾಮಾನ್ಯವಾಗಿ ಕಥಾವಸ್ತು ಎಂದು ಹೇಳಿದಾಗ ಬಹುತೇಕರು ತಮ್ಮ ಓದಿಗೆ ದಕ್ಕಿದ ಅರ್ಥವನ್ನು/ವಾದವನ್ನು ಮಂಡಿಸುತ್ತಾರೆ. ತಮ್ಮ ಅರ್ಥವನ್ನು/ಓದನ್ನು ಸಮರ್ಥಿಸಿಕೊಳ್ಳಲು ಭಾಗಗಳನ್ನು ಉದಾಹರಿಸುತ್ತಾರೆ. ತಮ್ಮ ಓದಿನ ವಿಧಾನವನ್ನು ಕುರಿತು ಪ್ರಜ್ಞಾಪೂರ್ವಕ ವಾಗಿರುವುದಾಗಲಿ, ಅದರಲ್ಲಿ ಪ್ರಯೋಗಗಳನ್ನು ಮಾಡುವುದಾಗಲಿ ಕಡಿಮೆ. ಹೆಚ್ಚೆಂದರೆ ತಮ್ಮ ಕಾವ್ಯ ಕುರಿತ ನಿಲುವನ್ನು ಸಮರ್ಥಿಸಿಕೊಳ್ಳಲು ಕೆಲವು ಮೀಮಾಂಸಕಾರರ ಅಥವಾ ವಿಮರ್ಶಕರ ವ್ಯಾಖ್ಯಾನಗಳನ್ನು (ಕೋಟೆಷನ್) ಉಲ್ಲೇಖಿಸುತ್ತಾರೆ. ಅಂದರೆ ತಮ್ಮ ಓದಿನ ಸೈದ್ಧಾಂತಿಕ ಚೌಕಟ್ಟನ್ನು ಕೆಲಮಟ್ಟಿಗೆ ಬಿಟ್ಟುಕೊಡುತ್ತಾರೆ. ಆದರೆ ವಿಧಾನದ ಬಗೆಗೆ ಪ್ರಜ್ಞಾ ಪೂರ್ವಕವಾಗಿರುವುದಾಗಲಿ ಅಥವಾ ಅದರಲ್ಲಿ ಪ್ರಯೋಗಕ್ಕೆ ಕೈ ಹಾಕುವುದಾಗಲಿ ಕಡಿಮೆ. ವಾಮನ ಬೇಂದ್ರೆಯವರ ಎರಡನೆಯ ಅಧ್ಯಾಯ “ಕಾವ್ಯವಸ್ತು”ವಿನಲ್ಲಿ ಅವರು ತಮ್ಮ ಓದಿನ/ವಾದದ/ಗ್ರಹಿಕೆಯ ಸಮರ್ಥನೆಗೆ ಮೀಮಾಂಸಕಾರರನ್ನು ಕೋಟ್ ಮಾಡಿದರೂ ಅದರಲ್ಲಿ ಒಂದು ಪ್ರಯೋಗ ಅಡಗಿದೆ. ಅವರ ಸಂಶೋಧನೆಯ ಮಾರ್ಗದರ್ಶಕರಾದ ರಂ.ಶ್ರೀ. ಮುಗಳಿಯವರು ತಮ್ಮ ಮುನ್ನುಡಿಯಲ್ಲಿ ಅದನ್ನು ಗುರುತಿಸಿದ್ದಾರೆ: “…ನಾಟಕದ ಸಂಧೀ, ಸಂಧ್ಯಂಗ ಲಕ್ಷಣಗಳನ್ನು ಜೈಮಿನಿ ಭಾರತಕ್ಕೆ ಅನ್ವಯಿಸಿ ತೋರಿಸಿದ್ದಾಗಿದೆ. ಇದನ್ನು ಈವರೆಗೆ ಯಾರೂ ಮಾಡಿರಲಿಲ್ಲ. ಬಹುಶಃ ಮಾಡುವ ಯೋಚನೆಯನ್ನೂ ಯಾರೂ ಮಾಡಲಾರರು” (೩). ಭರತನ ನಾಟ್ಯಶಾಸ್ತ್ರದ ಮೀಮಾಂಸೆಯನ್ನು ಕಾವ್ಯಕ್ಕೆ ಅನ್ವಯಿಸುವ ಮತ್ತು ಅದನ್ನು ಸಮರ್ಥಿಸಿಕೊಳ್ಳುವ ಹಾಗೂ ಸೂಕ್ತವಾಗಿ ಅನ್ವಯಿಸುವ ಕೆಲಸವನ್ನು ವಾಮನ ಬೇಂದ್ರೆಯವರು ಮಾಡಿದ್ದಾರೆ. ನಾಟ್ಯಶಾಸ್ತ್ರದೊಂದಿಗೆ ದಶರೂಪಕ ಮತ್ತಿತರ ಲಾಕ್ಷಣಿಕರನ್ನು ಅವರು ಬಳಸಿ ಕೊಳ್ಳುತ್ತಾರೆ, ಅವುಗಳ ಸಹಾಯದೊಂದಿಗೆ ರೂಪಿಸಿಕೊಂಡ ಚೌಕಟ್ಟಿನಲ್ಲಿ ಜೈಮಿನಿ ಭಾರತದ ಕಥಾವಸ್ತುವಿನ ವಿಶ್ಲೇಷಣೆಯನ್ನು ಮಾಡುತ್ತಾರೆ. ಅಲ್ಲದೆ ಇಂಗ್ಲಿಶ್ ವಿಮರ್ಶಾತತ್ವಗಳಿಂದಲೂ ಕಥಾವಸ್ತುವನ್ನು ವಿಶ್ಲೇಷಿಸುತ್ತಾರೆ. ಇದರಲ್ಲಿ ಪ್ರಮುಖವಾಗಿ ಇ.ಎಂ. ಆಲ್‌ಬ್ರೈಟ್ ಮತ್ತು ಎಲಿಯಟ್ ಬ್ಲಾಕಿಸ್ಟನ್ ಎಂಬುವರ ಕಥಾತಂತ್ರಗಳನ್ನು ಕುರಿತ ಅಂಶಗಳನ್ನು (ಸಣ್ಣಕಥೆಯ ತಂತ್ರಗಳು) ಕಾವ್ಯಕ್ಕೆ ಅನ್ವಯಿಸುತ್ತಾರೆ[3]. ನಂತರ ಕಥಾವಸ್ತುವಿನ ವಿಭಜನಾಕ್ರಮವನ್ನು ೫ ಸಂಧಿಗಳಲ್ಲಿ ವಿಂಗಡಿಸಿ ವಿವರಿಸುತ್ತಾರೆ. ಈ ಕಾವ್ಯದಲ್ಲಿರುವ ೨೫ ಕಥೆಗಳನ್ನು ಗುರುತಿಸಿ, ಪ್ರತಿ ಕಥೆಗೆ ಎಷ್ಟು ಪದ್ಯಗಳು ಬಳಕೆಯಾಗಿದೆ ಎಂಬ ಸಂಖ್ಯೆಯನ್ನು ಕೊಡುತ್ತಾರೆ.

ಇಲ್ಲಿ ವಿಶ್ಲೇಷಣೆಯ ವಿಧಾನದಲ್ಲಿ, ಸೈದ್ಧಾಂತಿಕತೆಯಲ್ಲಿ ನಾವೀನ್ಯತೆ ಅಷ್ಟೇ ಅಲ್ಲ ಬದಲಿಗೆ ಅದನ್ನು ದಾಖಲಿಸುವಲ್ಲಿಯೂ ಅವರು ವಿಶಿಷ್ಟ ಮಾರ್ಗಗಳನ್ನು ಅನುಸರಿಸುತ್ತಾರೆ. ಎರಡನೆಯ ಅಧ್ಯಾಯದ ಮೊದಲಿನಲ್ಲೇ ಕಾವ್ಯದಲ್ಲಿ ಬರುವ ಋತುಗಳನ್ನು ಗುರುತಿಸಿ, ಅವುಗಳಲ್ಲಿ ಬರುವ ಕಥೆಗಳ ಸಂಖ್ಯೆಗಳನ್ನು ಗುರುತಿಸುತ್ತಾರೆ. ಪ್ರತಿ ಕಥೆಗೆ ಎಷ್ಟು ಪದ್ಯಗಳಿವೆ ಎಂಬುದನ್ನು ಗುರುತಿಸುತ್ತಾರೆ. ಇದನ್ನು ಗ್ರಾಫ್‌ಹಾಕಿ ದೃಶ್ಯೀಕರಿಸುತ್ತಾರೆ (Visualize). ಋತುಗಳು, ಕಥೆಗಳು ಮತ್ತು ಪದ್ಯದ ಪ್ರಮಾಣಗಳನ್ನು ಸಂಖ್ಯೀಕರಿಸಿ ಅವುಗಳನ್ನು ರೇಖಾತ್ಮಕವಾಗಿ ತೋರಿಸುವುದು ಕನ್ನಡ ಸಂಶೋಧನೆಯಲ್ಲೇ ಹೊಸ ಪ್ರಯತ್ನ ಇರಬಹುದು. ಅಂದರೆ ಕಾವ್ಯವಸ್ತುವಿನ ಬಂಧವನ್ನು ಸಂಖ್ಯೀಕರಿಸಿ ಅದನ್ನು ರೇಖಾತ್ಮಕವಾಗಿ ತೋರಿಸುವ ಪ್ರಯತ್ನ ನಿಜವಾಗಿಯೂ ಹೊಚ್ಚ ಹೊಸದು. Qualitative ಅದರಲ್ಲೂ literary ಆದಂತಹ ದತ್ತವನ್ನು quantify ಮಾಡಿ graphic ಆಗಿ ತೋರಿಸುತ್ತಾರೆ. ಗುಣಾತ್ಮಕ, ಸಾಹಿತ್ಯಾತ್ಮಕವಾದ ಮಾಹಿತಿಯನ್ನು/ಅಂಶವನ್ನು ಸಂಖ್ಯೀಕರಿಸಿ ರೇಖಾಚಿತ್ರವಾಗಿ ಪ್ರತಿನಿಧಿಸುವ ಈ ವಿಧಾನ ವಿಚಿತ್ರವೂ ಹೌದು; ಹೊಸದೂ ಹೌದು. ಇದೊಂದು ಪ್ರಯೋಗ. ಈ ಪ್ರಯೋಗವನ್ನು ಅವರು ಬೇರೆ ಬೇರೆ ಪಠ್ಯಗಳೊಂದಿಗೆ ಮಾಡಿ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗಿದ್ದರೆ ಅದೊಂದು ಸಾಹಿತ್ಯ ಮೀಮಾಂಸೆಯಲ್ಲಿ ಅತ್ಯುತ್ತಮ ಸಂಶೋಧನೆಯಾಗುತ್ತಿತ್ತು. ಯಾವುದಾದರೂ ಸಿದ್ಧಾಂತಕ್ಕೆ ನಾಂದಿಯಾಗಿರುತ್ತಿತ್ತು. ಈಗ ಅದು ಕೇವಲ ಪ್ರಯೋಗವಾಗಿ ಈ ಅಧ್ಯಯನದಲ್ಲಿ ಉಳಿದುಬಿಡುತ್ತದೆ. ಹೀಗಾಗಲು ಕಾರಣವೇನೆಂದರೆ ಈ ಸಂಶೋಧನೆಯ ಪಠ್ಯಕೇಂದ್ರಿತ ವ್ಯಾಪ್ತಿ. ಅಲ್ಲದೆ ತಾನು ಅಯ್ದುಕೊಂಡ ಪಠ್ಯದ ಹೆಚ್ಚುತನವನ್ನು ತೋರಿಸುವ ಕಡೆಗೆ ಈ ವ್ಯಾಪ್ತಿ ಜಗ್ಗುತ್ತದೆ, ಅತಿ ಹೆಚ್ಚೆಂದರೆ ವಿಮರ್ಶೆಯ ಹಂತದಲ್ಲಿ ನಿಲ್ಲುತ್ತದೆಯೇ ಹೊರತು ಸಂಶೋಧನೆಯ ಹಂತಕ್ಕೆ ಸಾಗುವುದಿಲ್ಲ[4]. ಹಾಗೆಯೇ ಗರ್ಭಸಂಧಿಯನ್ನು ವಿವರಿಸಲು ರೇಖಾಚಿತ್ರ ಬಳಸುತ್ತಾರೆ. ಅಧ್ಯಾಯದ ಕೊನೆಗೆ ಕಥಾವಸ್ತುವಿನ ಏರಿತಳಿತವನ್ನೂ ಪ್ರಮಾಣಪ್ರಜ್ಞೆಯನ್ನು ಗುರುತಿಸಲು ಗ್ರಾಫ್‌ಹಾಕಿ ತೋರಿಸುತ್ತಾರೆ. ಈ ಅಧ್ಯಾಯದಲ್ಲಿ ಅವರ ಮುಖ್ಯ ಉದ್ದೇಶ ಜೈಮಿನಿಯ ಸಂಸ್ಕೃತ ಭಾರತಕ್ಕಿಂತ ಈ ಭಾರತ ಹೇಗೆ ಭಿನ್ನ ಎಂದು ತೋರಿಸುವುದಾಗಿದೆ. ಅಂದರೆ ಅದು ಅನುಕರಣೆಯಾಗಿರದೆ ತನ್ನ ಸ್ವಂತಿಕೆಯನ್ನು ಯಾವ ರೀತಿ ಮೆರೆದಿದೆ ಎಂದು ವಿವರಿಸುವುದು ಅವರ ಮುಖ್ಯ ಉದ್ದೇಶ ವಾಗಿದೆ.

ನಂತರದ ಅಧ್ಯಾಯದಲ್ಲಿ ಪಾತ್ರಗಳ ಚಿತ್ರಣವನ್ನು ವಿವರಿಸುತ್ತಾರೆ. ಮುಖ್ಯವಾಗಿ ಪುರುಷ ಪಾತ್ರಗಳು, ಸ್ತ್ರೀ ಪಾತ್ರಗಳು, ಬಾಲಕ ಪಾತ್ರಗಳು, ಮುನಿಗಳು, ನಾಯಕ ಪಾತ್ರ-ಕೃಷ್ಣ ಎಂದು  ವಿಂಗಡಿಸಿಕೊಂಡು ಇಲ್ಲಿ ವಿವರಗಳನ್ನು ಮಂಡಿಸುತ್ತಾರೆ. ಇಲ್ಲಿಯೂ ಅವರ ಉದ್ದೇಶ ಲಕ್ಷ್ಮೀಶನ ಅನನ್ಯತೆಯನ್ನು (ಜೈಮಿನಿ ಸಂಸ್ಕೃತ ಹೋಲಿಸಿ) ಎತ್ತಿಹಿಡುವುದಾಗಿದೆ. ನಂತರದ ಅಧ್ಯಾಯದಲ್ಲಿ ಅವರು ಛಂದಸ್ಸು, ಲಕ್ಷಣ, ಅಲಂಕಾರ (ಶಬ್ಧ, ರೂಪಕ, ಉತ್ಪ್ರೇಕ್ಷೆ, ಶ್ಲೇಷೆ ಇತ್ಯಾದಿ) ಅಷ್ಟಾ ದಶ ವರ್ಣನೆ, ರಸಚಕ್ರ ಐಕ್ಯತೆ, ಪುರುಷಾರ್ಥ ವಿಚಾರ, ಕಥನ ಕಲೆ, ಶೈಲಿ ಎಂಬ ಪರಿಕಲ್ಪನೆಗಳಡಿ ಯಲ್ಲಿ ಕಾವ್ಯದ ಸಮೀಕ್ಷೆಯನ್ನು ನಡೆಸುತ್ತಾರೆ. ಅನುಬಂಧದಲ್ಲಿ ಅಲಂಕಾರಸೂಚಿಯನ್ನೂ ನೀಡಿದ್ದಾರೆ. ಈ ಸೂಚಿ ಬಹಳ ಉಪಯುಕ್ತವಾಗಿದೆ ಮುಂದಿನ ಅಧ್ಯಯನಗಳಿಗೆ. ಈ ಅಧ್ಯಾಯದಲ್ಲಿಯೂ ಕಾವ್ಯದ ಐಕ್ಯತೆಯ ವಿಚಾರವನ್ನು ಗ್ರಾಫಿಕ್ ಅನ್ನು ಬಳಸಿದ್ದಾರೆ. ನಂತರದ ಮೊದಲ ಭಾಗದ ಕೊನೆಯ ಅಧ್ಯಾಯದಲ್ಲಿ ಕೃತಿಕಾರನ/ಲೇಖಕನ ಮೌಲ್ಯಮಾಪನವಿದೆ. ಇಲ್ಲಿ ಕನ್ನಡ ಕಾವ್ಯಪರಂಪರೆಯಲ್ಲಿನ ಆತನ ಸ್ಥಾನವನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಆದರೆ ನನಗೆ ಬಹಳ ಮುಖ್ಯವಾಗಿರುವುದು ಎರಡನೆಯ ಭಾಗವೇ. ಇದರ ಮೊದಲ ಅಧ್ಯಾಯ ದಲ್ಲಿ ವ್ಯಾಸಭಾರತ ಮತ್ತು ಜೈಮಿನಿ ಭಾರತಗಳಲ್ಲಿನ ಅಶ್ವಮೇಧಿಕ ಪರ್ವದ ತುಲನಾತ್ಮಕ ಅಧ್ಯಯನ, ತಿಮ್ಮಣ್ಣನ ಮತ್ತು ಲಕ್ಷ್ಮೀಶನ ಅಶ್ವಮೇದಿಕ ಪರ್ವದ ತುಲನಾತ್ಮಕ ಅಧ್ಯಯನ, ಸಂಸ್ಕೃತ ಮತ್ತು ಕನ್ನಡ ಜೈಮಿನಿ ಭಾರತಗಳ ಐದು ಹಂತದ ತುಲನಾತ್ಮಕ ಅಧ್ಯಯನ, ಮರಾಠಿ ಜೈಮಿನಿ ಭಾರತದ ವಿಚಾರ, ಸಂಸ್ಕೃತ, ತೆಲುಗು, ಕನ್ನಡ ಮತ್ತು ಮರಾಠಿ ಜೈಮಿನಿ ಭಾರತಗಳಲ್ಲಿಯ ವೀರವರ್ಮನ ಕಥಾನಕದ ತುಲನಾತ್ಮಕ ಅಧ್ಯಯನಗಳಿವೆ. ಇಲ್ಲಿಯೂ ಪಟ್ಟಿಮಾಡಿ ವಿಭಿನ್ನ ಭಾಷಿಕ ಪಠ್ಯಗಳಲ್ಲಿ ಸೇರ್ಪಡಿಕೆ, ಕಳಚುವಿಕೆಗಳನ್ನು ಕೋಷ್ಟಕದ ರೂಪದಲ್ಲಿ ವಿವರಿಸುತ್ತಾರೆ.

ನಂತರದ ಅಧ್ಯಾಯ ಹಸ್ತಪ್ರತಿಗಳ ತುಲನಾತ್ಮಕ ಅಧ್ಯಯನ. ಇಂದು ನಾವು ಯಾವುದನ್ನು ಸಾಂಸ್ಕೃತಿಕ ಅಧ್ಯಯನ ಎಂದು ಕರೆಯುತ್ತೇವೆಯೋ ಅದಕ್ಕೆ ಬೇಕಾದ ಅತ್ಯಮೂಲ್ಯವಾದ ಆಕರಗಳನ್ನು ಒಳಗೊಂಡಿದೆ. ಅನುಬಂಧಗಳೂ ಸಹ ಬಹಳ ಮುಖ್ಯವಾದ ಆಕರಗಳಾಗಬಹುದು ಸಂಸ್ಕೃತಿ ಅಧ್ಯಯನಕಾರರಿಗೆ.

ಸಂಗ್ರಹಕ್ಕೆ ಪ್ರಸ್ತಾವನೆ

ನಾನು ಆಯ್ದುಕೊಂಡಿರುವ ಅಧ್ಯಯನಗಳಲ್ಲೆ ಕಾಲದ ದೃಷ್ಟಿಯಿಂದ ಇತ್ತೀಚಿನದು ಎಂದರೆ  ‘ಲಕ್ಷ್ಮೀಶನ ಜೈಮಿನಿ ಭಾರತ’ ಸಂಪಾದನ ಕೃತಿಗೆ ಬಿ.ಎಸ್. ಸಣ್ಣಯ್ಯ, ಡಾ. ರಾಮೇಗೌಡ ಅವರ ಬರೆದಿರುವ ಪ್ರಸ್ತಾವನೆ. ಈ ಪ್ರಸ್ತಾವನೆ ಲೇಖಕ ಮತ್ತು ಪಠ್ಯದ ಮೌಲ್ಯಮಾಪನದೊಂದಿಗೆ ಆರಂಭವಾಗುತ್ತದೆ. ನಂತರ ಕವಿಯ ವೈಯಕ್ತಿಕ ವಿವರಗಳ ಚರ್ಚೆಯನ್ನು ಕೈಗೆತ್ತಿಕೊಳ್ಳುತ್ತದೆ. ಇದಲ್ಲದೆ ಈ ಆರಂಭ ಭಾಗದಲ್ಲಿ ಕಾವ್ಯದ ಪ್ರಯೋಜನೆಗಳನ್ನು ಕುರಿತು ಪಠ್ಯದ ಅಭಿಪ್ರಾಯದ ಬಗೆಗೆ ಚರ್ಚೆಮಾಡುವ ಅಂಶ ಮತ್ತು ಪಠ್ಯದಲ್ಲಿನ ಸಂಭೋಧನಾ ಪದಗಳ ಆಧಾರದ ಮೇಲೆ ಅದರ ಉದ್ದೇಶಿತ ಓದುಗರನ್ನು ಗುರುತಿಸುವ ಕೆಲಸ ಒಂದು ಪ್ಯಾರಾ ಬಂದು ಹೋಗುತ್ತದೆ. ಇವುಗಳು ವಿಧಾನದ ದೃಷ್ಟಿಯಿಂದ ಬಹಳ ಉಪಯುಕ್ತವಾದ ಅಂಶಗಳು ಆದರೆ ಇದನ್ನು ಬೆಳಸುವ ಕಡೆಗೆ ಲೇಖನ ಹೋಗಿಲ್ಲ.

ಈ ಪ್ರಸ್ತಾವನೆಯ ಎರಡನೆಯ ಭಾಗದಲ್ಲಿ ಕಥೆಯನ್ನು ಕುರಿತ ಚರ್ಚೆ ಇದೆ. ಇದರಲ್ಲಿ ಉದ್ದೇಶ ಪಠ್ಯದ ಉತ್ತಮಿಕೆಯನ್ನು ಋಜುಪಡಿಸುವುದಾಗಿರುವುದರಿಂದ ಆ ಕಡೆಗೆ ಈ ಭಾಗ ಹೋಗುತ್ತದೆ. ಇಲ್ಲಿ ಕಥೆಯ ಸಾರಾಂಶ ಮತ್ತು ವಿಶ್ಲೇಷಣೆ ಬಿಟ್ಟರೆ ಏನಿಲ್ಲ. ಆದರೆ ಒಂದು ಕಡೆ ಕಥೆಯ ಬಗೆಗೆ ಇದ್ದಕ್ಕಿದ್ದಂತೆ ಪರಶುರಾಮನ ಪ್ರಸಂಗದ ಪ್ರಸ್ತಾಪವಾದಾಗ ಈ ಮಾತು ಬರುತ್ತದೆ: “ಸಾಮ್ರಾಜ್ಯಶಾಹಿಯನ್ನು ಪುರೋಹಿತಶಾಹಿ ಹೇಗೆ ತನ್ನ ಹಿಡಿತದಲ್ಲಿಟ್ಟುಕೊಂಡಿ ತ್ತೆಂಬುದು ಇದರಿಂದ ವ್ಯಕ್ತವಾಗುತ್ತದೆ”. ಇಡೀ ಪ್ರಸ್ತಾವನೆಯ ಸೈದ್ಧಾಂತಿಕ ಚೌಕಟ್ಟಿನಲ್ಲಿ (ಅಥವಾ ಪ್ರಾಚೀನ ಪಠ್ಯಗಳ ಸಂಗ್ರಹ/ಸಂಪಾದನೆಯ ಚೌಕಟ್ಟಿನಲ್ಲಿ) ಇದು ಒಂದು ಅಪವಾದ ವಾಗಿ ಕಾಣುತ್ತದೆ. ೭೦-೮೦ ದಶಕದ ಕರ್ನಾಟಕದ ಬೆಳವಣಿಗೆಗಳಾದ ಬಂಡಾಯ, ದಲಿತ ಮತ್ತು ಲೋಹಿಯಾವಾದಿ ವಿಚಾರಧಾರೆಗಳ ಪರಿಕಲ್ಪನೆಗಳ ಬಳಕೆ ಇಲ್ಲಿ ಕಾಣುತ್ತದೆ. ಆದರೆ ಇದು ಕೂಡ ಪಠ್ಯದ ವಿಶ್ಲೇಷಣೆಯ ಒಂದು ಪ್ರಮುಖ ಪರಿಕಲ್ಪನೆಯಾಗಿ ಬಳಕೆಯಾಗುವುದಿಲ್ಲ. ತಾತ್ಫೂರ್ತಿಕ, ಆ ಕ್ಷಣದ ಅಭಿಪ್ರಾಯವಾಗಿ ಬಂದು ಹೋಗುತ್ತದೆ. ಅಂದರೆ ಪಠ್ಯವನ್ನು ಒಂದು ಸಾಮಾಜಿಕ ವಿಮರ್ಶೆಯ ಸಾಧನವಾಗಿ ಬಳಸಿಕೊಳ್ಳುವ ಈ ವಿಧಾನ ೭೦-೮೦ರಲ್ಲಿ ಕರ್ನಾಟಕದಲ್ಲಿ ಪ್ರಬಲವಾಗಿದ್ದ ವಿಚಾರಧಾರೆಗಳ ಪ್ರಭಾವದ್ದು. ಇದು ಸಂಪೂರ್ಣವಾಗಿ ಗ್ರಂಥಸಂಪಾದನೆಯ ವಿಧಾನಕ್ಕೆ ಹೊರತಾದುದು. ಅದು ಇಲ್ಲಿ ಪ್ರಾಸಂಗಿಕವಾಗಿ ಗ್ರಂಥ ಸಂಪಾದನೆಯ ವಿಧಾನದ ಒಳ ಹೊಕ್ಕಿದೆ.

ಮೂರನೆಯ ಭಾಗದಲ್ಲಿ ಸನ್ನಿವೇಶಗಳ ಚಿತ್ರಣದಲ್ಲಿ ಕವಿ ಮೆರೆದಿರುವ ಪ್ರತಿಭೆಯನ್ನು ಗುರುತಿಸುವ ಯತ್ನವಿದೆ. ಇಲ್ಲಿಯೂ ಕೂಡ ಮತ್ತೊಮ್ಮೆ ಸಾಮಾಜಿಕ ವಿಮರ್ಶೆ ಇಣುಕು ಹಾಕುತ್ತದೆ: “ಪುರೋಹಿತ ಲಿಖಿತನಿಂದಲೇ ಇಷ್ಟೆಲ್ಲ ಆಗಿರುವುದರಿಂದ, ಪುರೋಹಿತ ಪ್ರಾಬಲ್ಯ ವನ್ನೇ ಇದು ಹೇಳುತ್ತದೆ. ಕ್ಷಾತ್ರವನ್ನು ಪುರೋಹಿತಶಾಹಿ ಹೇಗೆ ನಿಯಂತ್ರಿಸುತ್ತಿತ್ತೆಂಬುದು ಇದರಿಂದ ಸ್ಪಷ್ಟವಾಗುತ್ತದೆ”. ನಾಲ್ಕನೆಯ ಭಾಗದಲ್ಲಿ ಅದರ ವಸ್ತುವನ್ನು “ಕೃಷ್ಣಚರಿತಾಮೃತ”ದ ಕಥೆಯಾಗಿ ಹಿಡಿಯುವ ಅಂಶವಿದೆ. ಆದರೆ ಇಲ್ಲೆಲ್ಲೂ ಸಾಮಾಜಿಕ ವಿಮರ್ಶೆ ಇಣುಕಿ ಹಾಕುವುದಿಲ್ಲ. ಅಥವಾ ಈ ಹಿಂದೆ ಮಾಡಿದ ಆ ಹೇಳಿಕೆಗಳಿಗೂ ಈ ವಸ್ತುವಿಗೂ ಸಂಬಂಧ ಕಲ್ಪಿಸುವ ಪ್ರಯತ್ನವೂ ಇಲ್ಲ. ಇಲ್ಲಿ ಇದು ಭಕ್ತಿಚಳುವಳಿಗೆ ಸೇರಿದ ಕವಿಯಾದುದರಿಂದ ಈ ರೀತಿಯ ಕಾವ್ಯವಾಗಿದೆ ಎಂದಷ್ಟೇ ಹೇಳಲಾಗಿದೆ. ಐದನೆಯ ಭಾಗದಲ್ಲಿ ಕವಿಯ ವರ್ಣನಾ ಸಾಮರ್ಥ್ಯವನ್ನು ವಿವರಿಸಲಾಗಿದೆ. ಕೊನೆಯ ಮತ್ತು ಆರನೆಯ ಭಾಗದಲ್ಲಿ ‘ವಿಷಯ’ (form) ‘ರೂಪ’(content)ಚರ್ಚೆ ಇದೆ. ಆದರೆ ಇವುಗಳ ಸಂಬಂಧವನ್ನು ಕುರಿತ ಲೇಖಕರ ಸೈದ್ಧಾಂತಿಕ ಚೌಕಟ್ಟು ಮಾತ್ರ ಹಳೆಯದು. ಅಂದರೆ ೧೯೫೦ರ ನಂತರದ ಈ ವಿಷಯ ಕುರಿತ ಚರ್ಚೆಯನ್ನೇನು ಬಳಸಿಲ್ಲ. ಇದರಲ್ಲಿ ಲಕ್ಷ್ಮೀಶನ ಭಾಷೆಯ ಬಳಕೆ, ಅಲಂಕಾರ ಬಳಕೆ ಇತ್ಯಾದಿಗಳ ಚರ್ಚೆ ಇದೆ. ಅಲ್ಲದೆ ಪ್ರಾಸಂಗಿಕವಾಗಿ ಬರುವ ಅಚ್ಚಗನ್ನಡ ಮತ್ತು ಸಂಸ್ಕೃತ ಪದಗಳ ಬಳಕೆಯ ಔಚಿತ್ಯ, ಪಠ್ಯದ ನಾದಮಯತೆಗೆ ಕಾರಣಗಳನ್ನು ಪಠ್ಯದ ಉಗಮದ ಚಾರಿತ್ರಿಕ ಸಂದರ್ಭದಲ್ಲಿ ಇಟ್ಟು ನೋಡುವ ಅಂಶಗಳಿವೆ. ಈ ಭಾಗದ ಕೊನೆಯಲ್ಲಿಯೇ ಸಮಾರೋಪವೂ ಇದೆ.

ಜೈಮಿನಿ ಭಾರತದ ಅಧ್ಯಯನಗಳ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ (ಹಳೆಗನ್ನಡ) ಸಂಶೋಧನೆ

ಈ ಶತಮಾನದ ಮೊದಲ ಭಾಗದಲ್ಲಿನ ಅಧ್ಯಯನಗಳಿಗೆ ಒಂದು ಒಟ್ಟಾರೆ ಉದ್ದೇಶವಿತ್ತು. ಒಂದು ಸಾಮುದಾಯಿಕ ಜರೂರಿತ್ತು. ಕನ್ನಡ ಸಾಹಿತ್ಯ ಚರಿತ್ರೆಯ ರಚನೆಗೆ ಪೂರಕವಾಗಿ ಈ ಅಧ್ಯಯನಗಳು ನಡೆಯುತ್ತಿದ್ದವು. ಒಬ್ಬರು ಆರಂಭ ಮಾಡಿದ ಚರ್ಚೆಯನ್ನು ಮತ್ತೊಬ್ಬರು ಮುಂದುವರಿಸುತ್ತಿದ್ದರು. ಲೇಖಕನ ಕಾಲ, ದೇಶ, ಮತದ ಹುಡುಕಾಟ ಮತ್ತು ಪಠ್ಯದ ಮೌಲ್ಯ ಮಾಪನ ಇಲ್ಲಿ ಕಂಡುಬರುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯ ರಚನೆಯೂ ೧೯ನೇ ಶತಮಾನದ ಕೊನೆಯಭಾಗದಲ್ಲಿ ರೂಪುಗೊಂಡ ಕರ್ನಾಟಕ ಎನ್ನುವ ಗುರುತಿನ ಪ್ರಾಚೀನತೆಯನ್ನು ಭವ್ಯತೆಯನ್ನು ನಿರೂಪಿಸುವ ಒಂದು ಸಾಧನವಾಗಿತ್ತು. ಈ ರಾಜಕಾರಣವು ಎಲ್ಲ ಅಧ್ಯಯನಕಾರ ರಿಗಿದ್ದ ಒಂದು ಸಮಾನ ಅಂಶವಾಗಿದೆ. ಇದರರ್ಥ ಭಿನ್ನ ಧ್ವನಿಗಳಿರಲಿಲ್ಲ ಎಂದಲ್ಲ. ಬದಲಿಗೆ ಈ ಭಿನ್ನ ಧ್ವನಿಗಳು ಅಥವಾ ರಾಜಕಾರಣ ಸಮಾನ ರಾಜಕಾರಣಕ್ಕೆ ಅಡಿಯಾಳಾಗಿದ್ದರಿಂದ ಅವುಗಳ ಗುಪ್ತಗಾಮಿನಿಯಾಗಿದ್ದವು. ಈ ಅಂಶವನ್ನು ಈ ಲೇಖನದಲ್ಲಿ ನಾನು ವಿವರವಾಗಿ ಚರ್ಚಿಸಲು ಹೋಗಿಲ್ಲ.

ಆದರೆ ೧೯೫೦ರ ನಂತರ ಪೂರ್ಣ ಪ್ರಮಾಣದ ಸಾಹಿತ್ಯ ರಚನೆಗಳು ಬಂದ ನಂತರ, ಪಠ್ಯ ಮತ್ತು ಲೇಖಕರ ಮೌಲ್ಯಮಾಪನವೇ ಹೆಚ್ಚಾಗಿ ಕಂಡುಬರುತ್ತದೆ. ಮೌಲ್ಯಮಾಪನಕ್ಕೆ ಬಳಸುವ ವಿಧಾನಗಳು ಬೇರೆ ಇವೆ ಅಷ್ಟೇ. ಇವು ನಂತರದ ಅಧ್ಯಯನಕಾರರಿಗೆ ಒಂದು ಸಮಾನವಾದ ರಾಜಕಾರಣವಿರುವುದು ಕಂಡುಬರುವುದಿಲ್ಲ. ಒಬ್ಬರ ಅಧ್ಯಯನವನ್ನು ಮತ್ತೊಬ್ಬರು ಮುಂದುವರೆಸುವುದು (ಲೇಖಕನ ಕಾಲ, ದೇಶ, ಮತ ಇವುಗಳ ವಿಚಾರವನ್ನು ಹೊರತುಪಡಿಸಿ) ಕಂಡುಬರುವುದಿಲ್ಲ. ಇವುಗಳು ಹೆಚ್ಚಾಗಿ ಇದುವರೆಗೆ ಆ ಪಠ್ಯ ಅಥವಾ ಲೇಖಕನ ಕುರಿತು ಬಂದಿರುವ ವಿಚಾರಗಳ ಸಂಗ್ರಹವಾಗಿರುತ್ತವೆ ಮತ್ತು ಭಿನ್ನ ಲೇಖನಗಳ ವಿಚಾರಗಳಾಗಿರು ವುದರಿಂದ ಆ ಲೇಖನಗಳ ಭಿನ್ನ ಸೈದ್ಧಾಂತಿಕತೆಗಳೂ ಇಲ್ಲಿ ಉಳಿದುಕೊಂಡಿರುತ್ತವೆ. ಇದರಿಂದಾಗಿ ಒಂದು ಸೈದ್ಧಾಂತಿಕ ಚೌಕಟ್ಟು ಕೆಲವೊಮ್ಮೆ ಇರುವುದಿಲ್ಲ. ಇವುಗಳು ಹೆಚ್ಚಾಗಿ ಸಂಗ್ರಹ ಕೇಂದ್ರಿತ ಮತ್ತು ವಿವಿಧ ಸೈದ್ಧಾಂತಿಕ ಚೌಕಟ್ಟುಗಳ ಪದರಿತ (ಲೇಯರ‍್ಡ್) ಅಧ್ಯಯನಗಳಾಗಿವೆ. ಇವುಗಳು ನಮ್ಮ ಇತ್ತೀಚಿನ ಎಂ.ಫಿಲ್. ಮತ್ತು ಪಿಎಚ್.ಡಿ. ಅಧ್ಯಯನಗಳ ಮಾದರಿಯೂ ಹೌದು. ಇವುಗಳು ಕನ್ನಡ ಸಾಹಿತ್ಯ ಅಧ್ಯಯನ ಎಂಬ ಶೈಕ್ಷಣಿಕ ಬೋಧನೆಗೆ ಪೂರಕವಾಗಿಯಷ್ಟೇ ಉಳಿದುಬಿಡುತ್ತವೆ. ಹೊಸ ಜ್ಞಾನದ ಅವಿಷ್ಕಾರ ಬಹಳ ಕಡಿಮೆ.

ಆದರೆ ಕೆಲವೊಮ್ಮೆ ಒಂದು ಸೈದ್ಧಾಂತಿಕತೆಗೆ ಬದ್ಧವಾಗಿ ನಡೆದಿರುವ ಅಧ್ಯಯನಗಳಿವೆ (ರಾಮಚಂದ್ರನ್‌ರವರ ಲೇಖನ). ಇವೆಲ್ಲವೂ ಒಂದು ಶೈಕ್ಷಣಿಕ ಚಟುವಟಿಕೆಯ ಭಾಗವಾಗಿ ಮಾತ್ರ ಮೂಡಿದೆಯೇ ಹೊರತು ಸಾಹಿತ್ಯ ಮೀಮಾಂಸೆ, ಸಂಸ್ಕೃತಿ ಮೀಮಾಂಸೆ, ಸಾಮಾಜಿಕ, ಚಾರಿತ್ರಿಕ ಅಧ್ಯಯನ ಕ್ಷೇತ್ರಗಳ ಜ್ಞಾನದ ಮುಂದುವರಿಕೆಯೋ, ಪ್ರಶ್ನೆಯೋ, ಬದಲಾವಣೆಗೆ ಕಾರಣವಾಗಬಲ್ಲ ಜ್ಞಾನವನ್ನು ಕೊಡಬಲ್ಲ ಅಧ್ಯಯನಗಳಾಗಿಲ್ಲ. ನಾನಿಲ್ಲಿ ಈ ಅಧ್ಯಯನಕಾರ ರನ್ನು ಪ್ರಶ್ನಿಸುತ್ತಿಲ್ಲ, ಬದಲಿಗೆ ಅವುಗಳು ಎತ್ತುವ ಚರ್ಚೆಯನ್ನು ಮುಂದುವರಿಸಿ ಜ್ಞಾನವನ್ನಾಗಿ ಪರಿವರ್ತಿಸಬಲ್ಲ ಸಾಮುದಾಯಿಕ ಪ್ರಯತ್ನವಿಲ್ಲ ಎನ್ನುತ್ತಿದ್ದೇನೆ ಅಷ್ಟೇ. ಅಂದರೆ ಒಂದು ಸಾಂಸ್ಕೃತಿಕ ರಾಜಕಾರಣ ಅಥವಾ ಅಧ್ಯಯನ ಕ್ಷೇತ್ರವನ್ನು ಬೆಳೆಸುವ/ರೂಪಿಸುವ ಸಾಮುದಾಯಿಕ ಜರೂರು ಕಾಣೆಯಾಗಿದೆ ಎಂದಷ್ಟೇ ಹೇಳುತ್ತಿದ್ದೇನೆ. ಕೆಲವು ಉಪಯುಕ್ತ ಅಂಶಗಳು ಈ ಲೇಖನಗಳಲ್ಲಿ ಇವೆ. ಅವುಗಳು ಒಳನೋಟದ ರೂಪದಲ್ಲಿ ಬಂದು ಕಣ್ಮರೆಯಾಗುತ್ತವೆಯೇ ಹೊರತು ಸುದೀರ್ಘ ಅಧ್ಯಯನದ, ಚರ್ಚೆಯ ಫಲಿತಗಳಾಗಿರುವುದಿಲ್ಲ.

ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಅಧ್ಯಯನದ ಗೊತ್ತುಗುರಿಗಳ ಬಗೆಗೆ ನಡೆದುಬಂದ ದಾರಿಯ ಬಗೆಗೆ ಕನ್ನಡ ಸಾಹಿತ್ಯ ಅಧ್ಯಯನ ಎಂಬ ಕ್ಷೇತ್ರ ಸಾಮುದಾಯಿಕವಾಗಿ ಚರ್ಚೆಗೆ ತೊಡಗಿಕೊಳ್ಳುವ ಅಗತ್ಯವಿದೆ.

ಉಲ್ಲೇಖಗಳು

ಬೇಂದ್ರೆ ವಾಮನ. ೧೯೭೯. ಲಕ್ಷ್ಮೀಶನ ಜೈಮಿನಿ ಭಾರತ: ಒಂದು ಅಧ್ಯಯನ, ಗೀತಾ ಬುಕ್ ಹೌಸ್: ಮೈಸೂರು.

ಬೇಂದ್ರೆ, ದ.ರಾ. ೧೯೭೪. ಸಾಹಿತ್ಯದ ವಿರಾಟ್ ಸ್ವರೂಪ, ಸಂ. ವಾಮನ ಬೇಂದ್ರೆ ಸಮಾಜ    ಪುಸ್ತಕಾಲಯ: ಧಾರವಾಡ.

ಸಣ್ಣಯ್ಯ ಬಿ.ಎನ್. ಮತ್ತು ರಾಮೇಗೌಡ ಸಂ. ೧೯೯೩. ಲಕ್ಷ್ಮೀಶನ ಜೈಮಿನಿ ಭಾರತ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ: ಮೈಸೂರು.

ಶಂಕರಭಟ್ಟ, ಕಡಂಗೋಡ್ಲು? (೨೦೦೪). “ಕವಿ ಲಕ್ಷ್ಮೀಶ”, ಪೀಠಿಕೆಗಳು, ಲೇಖನಗಳಲ್ಲಿ ಡಿ.ವಿ.ಕೆ. ಮೂರ್ತಿ: ಮೈಸೂರು. ಮೂಲ ಪ್ರಬುದ್ಧ ಕರ್ಣಾಟಕ, ೧೫(೩).

ರಾಮಚಂದ್ರನ್ ಸಿ.ಎನ್. ೧೯೮೭ ೨೦೦೧. ‘“ಪರಿಭ್ರಮಣ’ ಮತ್ತು ‘ಶೋಧ’: ಕನ್ನಡ ಜೈಮಿನಿ ಭಾರತದ ಒಂದು ಅಧ್ಯಯನ”, ಶತಮಾನದ ಸಾಹಿತ್ಯ ವಿಮರ್ಶೆ, ಸಂ. ಎಚ್.ಎಸ್. ರಾಘವೇಂದ್ರರಾವ್, ಕರ್ನಾಟಕ ಸಾಹಿತ್ಯ ಅಕಾಡೆಮಿ: ಬೆಂಗಳೂರು.

ರಂಗಣ್ಣ ಎಸ್.ವಿ. ೧೯೫೮. “ಲಕ್ಷ್ಮೀಶನ ಶೈಲಿ”, ಶೈಲಿ ಭಾಗ ೨ರಲ್ಲಿ ಕಾವ್ಯಾಲಯ: ಮೈಸೂರು.

ಕುರ್ತಕೋಟಿ, ಕೀರ್ತಿನಾಥ. ೧೯೯೫. ಕನ್ನಡ ಸಾಹಿತ್ಯ ಸಂಗಾತಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ-ಹಂಪಿ ವಿದ್ಯಾರಣ್ಯ.

ಕಡಬದ ನಂಜುಂಡಶಾಸ್ತ್ರಿ ಮತ್ತು ಎನ್. ರಂಗನಾಥಶರ್ಮ ಅನು. ೧೯೭೩ (೧೯೯೯). ಜೈಮಿನಿ ಭಾರತ (ಸಂಸ್ಕೃತ ಜೈಮಿನಿ ಭಾರತದ ಕನ್ನಡ ಅನುವಾದ), ಕನ್ನಡ ಸಾಹಿತ್ಯ ಪರಿಷತ್ತು: ಬೆಂಗಳೂರು.

Tharakeswar V.B. 2004. “Translating Nationalism: Politics of Language and Community” in Journal of Karnataka Studies, 1(1): 1-56.

 [1] ನನಗೆ ತಿಳಿದ ಮಟ್ಟಿಗೆ.

[2] ಈ ದೇವಾಲಯಗಳು ಮತ್ತು ದೇವರ ಮನೆಗಳು ಎಂಬ ವಿಂಗಡನೆ ಬಹಳ ಕುತೂಹಲಕಾರಿ ಯಾಗಿದ್ದು, ಇದನ್ನು ಇಲ್ಲಿ ವ್ಯಾಪ್ತಿಯ ಕಾರಣದಿಂದ ಪರಿಶೀಲಿಸುತ್ತಿಲ್ಲ.

[3] E.M. Albright ಅಂಥಹ ದೊಡ್ಡ ಹೆಸರೇನಲ್ಲ ಇಂಗ್ಲಿಶ್ ವಿಮರ್ಶೆಯಲ್ಲಿ ಹಾಗೆಯೇ Elliott Blackiston ನ ಪುಸ್ತಕ Short Story Writing for profit ಬಹಳ ಜನಪ್ರಿಯ ವಾದ ಪುಸ್ತಕವಾದರೂ ಗೈಡ್‌ಪುಸ್ತಕದ (ಮಾಡಿಕಲಿ ಮಾರ್ಗದರ್ಶಕ ಪುಸ್ತಕ) ರೀತಿಯದು.

[4] ಇದು ವಾಮನ ಬೇಂದ್ರೆಯವರ ಬಗೆಗಷ್ಟೇ ಅಲ್ಲ ವಿಮರ್ಶೆಯನ್ನು ಸಂಶೋಧನೆಯೆಂದು ಭಾವಿಸಿ, ಸಂಶೋಧನೆ ನಡೆಸುವವರಿಗೆಲ್ಲಾ ಅನ್ವಯಿಸುತ್ತದೆ. ವಾಮನ ಬೇಂದ್ರೆಯವರಲ್ಲಿ ಮೀಮಾಂಸೆ ಕಟ್ಟಲು ಬೇಕಾದ (ಅದರಲ್ಲಿ ಯಶಸ್ವಿಯಾಗುತ್ತಿದ್ದರೂ, ವಿಫಲವಾಗುತ್ತಿದ್ದರೋ ಅನ್ನುವುದು ಬೇರೆಯ ಪ್ರಶ್ನೆ) ವಿಧಾನವೊಂದನ್ನು ರೂಪಿಸಿಕೊಂಡು ಮೀಮಾಂಸೆಯ ಹಂತಕ್ಕೆ ಹೋಗದೆ ಉಳಿದುಹೋದಕ್ಕೆ ಕಾರಣ ಹುಡುತ್ತಿದ್ದೇನೆ ಅಷ್ಟೇ.