ಹಳೆಗನ್ನಡ ಕಾವ್ಯಗಳ ಆಧುನಿಕ ಓದಿನ ಕುರಿತು ಕೆಲ ವಿಚಾರಗಳು

ಕಳೆದ ಸಹಸ್ರಮಾನದಲ್ಲಿ ಕನ್ನಡದಲ್ಲಿ ಕೆಲ ಕಾವ್ಯಗಳು ಅವು ರಚನೆಗೊಂಡ ಕಾಲದಿಂದ ಹದಿನೆಂಟನೆಯ ಶತಮಾನದವರೆಗೆ ಓದಿಗೆ ಒಳಪಟ್ಟಿದ್ದಕ್ಕಿಂತ ನಂತರ ಅವುಗಳು ಓದಿಗೆ ಒಳಪಟ್ಟಿರುವುದೇ ಹೆಚ್ಚು. ಉದಾಹರಣೆಗೆ ಪಂಪನ ಮಹಾಭಾರತದ ಹಸ್ತಪ್ರತಿಗಳನ್ನು ಅಂದಾಜು ಲೆಕ್ಕ ಹಾಕಿದರೆ (ಸಿಕ್ಕಿರಲಾರದವು ಸೇರಿ) ಅವುಗಳು ಹೆಚ್ಚೆಂದರೆ ೫೦ನ್ನೂ ಮೀರಲಾರವು. ಒಂದು ಹಸ್ತಪ್ರತಿಯನ್ನು ಸರಾಸರಿ ೧೦೦ ಜನ ಓದಿದ್ದಾರೆ ಎಂದು ಲೆಕ್ಕ ಹಾಕಿದರೂ ಅದರ ಓದುಗರ ಸಂಖ್ಯೆ ೫,೦೦೦ವನ್ನು ಮೀರಲಾರದು. ಆದರೆ ೧೯ನೇ ಶತಮಾನದ ಕೊನೆಯ ಭಾಗದಿಂದ ಅದು ಪ್ರಥಮವಾಗಿ ಮುದ್ರಣ ರೂಪವನ್ನು ಕಂಡಾಗಿನಿಂದ ಅದನ್ನು ಎಷ್ಟು ಬಾರಿ ಮರುಮುದ್ರಿಸಲಾಗಿದೆ. ಅದನ್ನು ಎಷ್ಟು ಬಾರಿ ಪಠ್ಯವಾಗಿ ಇಡಲಾಗಿದೆ ಎಂದು ನೋಡಿದರೆ ಅದರ ಓದು ಕಳೆದ ಶತಮಾನದಲ್ಲೇ ಅಧಿಕವಾಗಿ ಆಗಿದೆ. ಈ ರೀತಿಯಾಗಿ ನೋಡುವುದಾದರೆ ಹಳೆಗನ್ನಡ ಪಠ್ಯಗಳ ಓದು ಮತ್ತು ಅವುಗಳ ಸಂಚಲನೆ ಕಳೆದ ಶತಮಾನದಲ್ಲೇ ಅಧಿಕ. ವಿಭಿನ್ನ ಕಾಲ, ದೇಶಗಳಲ್ಲಿ ರಚಿತವಾದ ಹಳೆಗನ್ನಡ ಪಠ್ಯಗಳು ಒಂದು ಪರಂಪರೆಯಾಗಿ ರೂಪುಗೊಂಡದ್ದು ಮತ್ತು ಅದು ನಮ್ಮನ್ನೆಲ್ಲಾ ಒಟ್ಟಾಗಿ (ಅವುಗಳಲ್ಲಿನ ಧಾರ್ಮಿಕ ಅಂಶಗಳನ್ನು ಹೊರತುಪಡಿಸಿ) ಪ್ರಭಾವಿಸಲಿಕ್ಕೆ ಆರಂಭವಾದದ್ದು ಸಹ ಕಳೆದ ಶತಮಾನದಲ್ಲೆ.

ಮುದ್ರಣ ಯಂತ್ರದ ಆಗಮನದೊಂದಿಗೆ ಅವುಗಳಿಗೆ ಸಹಾಯಕವಾಗಿ ದುಡಿದ ಕೆಲವು ಅಂಶಗಳೂ ಈ ಹಳಗನ್ನಡ ಪಠ್ಯಗಳ ಪರಂಪರೆಯ ನಿರ್ಮಾಣ ಮತ್ತು ಅವುಗಳು ಮತ್ತೆ ಕನ್ನಡ ಸಂಸ್ಕೃತಿಯ ಭಾಗವಾಗುವುದಕ್ಕೆ ಕಾರಣವಾಗಿವೆ. ಅವುಗಳಲ್ಲಿ ಮುಖ್ಯವಾಗಿ ನಾವು ಇಲ್ಲಿ ಕ್ರೈಸ್ತ ಮಿಶನರಿಗಳು ಮತ್ತು ವಸಾಹತು ಆಡಳಿತಗಾರರನ್ನು ನೆನೆಯಬೇಕಾಗುತ್ತದೆ. ಇವರಿಗೆ ಸಹಾಯಕರಾಗಿ ದುಡಿದ ದೇಶಿಯರನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಇದೇ ಸಂದರ್ಭದಲ್ಲಿ ಇಂಗ್ಲಿಶ್ ಶಿಕ್ಷಣ ಪಡೆದ ಈ ದೇಶಿಯರು, ೧೯ನೇ ಶತಮಾನದ ಕೊನೆಯ ಭಾಗದಲ್ಲಿ ರೂಪುಗೊಳ್ಳುತ್ತಿದ್ದ “ಕನ್ನಡ ಗುರುತಿನ” ಭಾಗವಾಗಿ ತಮ್ಮ ಸಾಹಿತ್ಯಕಾರ್ಯವನ್ನು ನಡೆಸಿದರು. ಕವಿ-ಕಾವ್ಯ-ಚರಿತೆ ಇದರಲ್ಲಿ ಬಹಳ ಮುಖ್ಯವಾದ ಘಟ್ಟ. ಕವಿಚರಿತೆಗೆ ಮುಂಚೆ ಮಿಶನರಿಗಳೇ ತಾವು ಆರಂಭಿಸಿದ ಶಾಲೆಗಳಲ್ಲಿ ಕನ್ನಡ ಕಲಿಸಲು, ವಸಾಹತುಶಾಹಿ ಇಂಗ್ಲೆಂಡಿನಿಂದ ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಬರೆದು ಪಾಸಾಗಿ ಬಂದ ಅಧಿಕಾರಿಗಳಿಗೆ ತಮ್ಮಿಂದ ಆಳಿಸಿಕೊಳ್ಳುತ್ತಿದ್ದವರ ಭಾಷೆಯಲ್ಲಿ ತರಬೇತಿ ನೀಡುವ ಸಲುವಾಗಿ, ಮಿಶನರಿಗಳು ದೇಶಿಯ ಭಾಷೆಗಳಲ್ಲಿ ಕ್ರೈಸ್ತಸಾಹಿತ್ಯ (ಬೈಬಲ್ ಭಾಷಾಂತರವೂ ಸೇರಿ) ರಚನೆಗೆ ಮಾದರಿಗಳನ್ನು ಹುಡುಕಾಡುತ್ತಿದ್ದ ಸಂದರ್ಭದಲ್ಲಿಯೇ ಕನ್ನಡದಲ್ಲಿ ಲಭ್ಯವಿದ್ದ ಲಿಖಿತ ಪಠ್ಯಗಳನ್ನು (ಹಸ್ತಪ್ರತಿ ಗಳನ್ನು) ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದರು. ಅವುಗಳನ್ನು ಸಂಗ್ರಹಿಸಿ ಹರ್ಮನ್ ಮೊಗ್ಲಿಂಗ್ ಬಿಬ್ಲಿಯೊಥಿಕಾ ಕರ್ನಾಟಕದ ಹೆಸರಿನಲ್ಲಿ ಪ್ರಕಟಿಸಲು ಆರಂಭಿಸಿದರು. ಈ ಪಠ್ಯ ಗಳಂತೆಯೇ ಭಾಷೆಯನ್ನು ಕಲಿಯಲು ಅವರಿಗೆ ಮುಖ್ಯವಾಗಿದ್ದು ವ್ಯಾಕರಣ ಗ್ರಂಥಗಳು. ಅವುಗಳ ರಚನೆ ಮತ್ತು ಹಳೆಯ ವ್ಯಾಕರಣ ಹಾಗೂ ಛಂದಸ್ಸಿನ ಗ್ರಂಥಗಳ ಮುದ್ರಣದಲ್ಲೂ ಅವರು ತೊಡಗಿದರು. ಈ ಸಂಗ್ರಹಗಳು ಕನ್ನಡ ವಾಙ್ಮಯವನ್ನು ಏಕೀಕೃತ ಘಟಕವಾಗಿ ಮತ್ತು ಒಂದು ಪರಂಪರೆಯಾಗಿ ನೋಡಲು ಸಾಧ್ಯ ಮಾಡಿತು. ಇವುಗಳ ಮುನ್ನುಡಿಗಳೇ ಈ ಏಕೀಕೃತ ಘಟಕದ ಮತ್ತು ಪರಂಪರೆಯ ಚರಿತ್ರೆಯನ್ನು ರಚಿಸುವ ಮೊದಲ ಪ್ರಯತ್ನಗಳಾಯಿತು. ಕವಿಚರಿತೆ ಈ ಪ್ರಯತ್ನದ ದೇಶಿ ತಿರುವಿನ ಘಟ್ಟ. ಅದಕ್ಕೆ ಮೊದಲು ವೀರಶೈವ ಕನ್ನಡ ಸಾಹಿತಿಗಳ ಪಟ್ಟಿಯ ರಚನೆಯ ಯತ್ನಗಳೂ ನಡೆದಿವೆ.

[1]

ಜೈಮಿನಿ ಭಾರತದ ಜನಪ್ರಿಯತೆ ಶೋತೃವರ್ಗ

ಆದರೆ ಕೆಲವು ಪಠ್ಯಗಳು ಹಸ್ತಪ್ರತಿಗಳಿಗಿಂತ ಮೌಖಿಕವಾಗಿಯೇ ಹೆಚ್ಚು ಪ್ರಚಲಿತವಾಗಿದ್ದವು. ಅವುಗಳಲ್ಲಿ ಲಕ್ಷ್ಮೀಶನ ಜೈಮಿನಿ ಭಾರತವು ಒಂದು. ಇವುಗಳನ್ನು ವಾಚನ ಮಾಡುವ ಒಂದು ಪರಂಪರೆ ಇತ್ತು. ವಾಚನ ಮಾಡುವವರು ಹಸ್ತಪ್ರತಿಗಳನ್ನು ಹೊಂದಿದ್ದಾರೆ, ಶೋತೃಗಳು ಅನೇಕ ಮಂದಿ ಇರುತ್ತಿದ್ದರು. ಅಲ್ಲದೆ ಈ ಪಠ್ಯವು ಅನೇಕ ಯಕ್ಷಗಾನ ಪ್ರಸಂಗಗಳಿಗೆ ಆಕರ ವಾಗಿರುವುದನ್ನೂ ನಾವು ನೋಡುತ್ತೇವೆ. ಇದು ಇಷ್ಟು ಜನಪ್ರಿಯಪಠ್ಯವಾಗಿದ್ದರಿಂದಲೇ ಮಿಶನರಿಗಳ ಕಣ್ಣು ಇದರ ಮೇಲೆ ಬಿದ್ದದ್ದನ್ನು ನಾವು ಕಾಣಬಹುದು. ಈ ಮೊದಲು ಉಲ್ಲೇಖಿಸಿದ ಬಿಬ್ಲಿಯೊಥಿಕಾ ಕರ್ನಾಟಕ ಮಾಲೆಯಲ್ಲಿ ಈ ಪಠ್ಯವು ೧೯ನೇ ಶತಮಾನದ ಮಧ್ಯಭಾಗದಲ್ಲಿ ಪ್ರಕಟವಾಯಿತು. ಅದೆ ಸಂದರ್ಭದಲ್ಲಿಯೇ ಮೊಗ್ಲಿಂಗ್ ಇದರ ಎರಡು ಅಧ್ಯಾಯಗಳನ್ನು ಜರ್ಮನ್ ಭಾಷೆಗೆ ಭಾಷಾಂತರಿಸಿದರು. ಇಂಗ್ಲಿಶ್ ಭಾಷೆಗೂ ಈ ಪಠ್ಯ ಭಾಷಾಂತರವಾಯಿತು. ಡೇನಿಯಲ್ ಸ್ಯಾಂಡರ್‌ಸನ್ ಎಂಬಾತ ೧೮೫೨ರಲ್ಲಿಯೇ ಈ ಪಠ್ಯವನ್ನು ಇಂಗ್ಲಿಶ್‌ಗೆ ಭಾಷಾಂತರಿಸಿದ[2]. ಜೈಮಿನಿ ಭಾರತದ ಸುಮಾರು ೪೬ ಪ್ರತಿಗಳು ಸಿಕ್ಕಿವೆ. ಇವುಗಳಲ್ಲಿ ಕನ್ನಡ ಲಿಪಿಯನ್ನು ಬಳಸಿರುವುದಲ್ಲದೆ ದೇವನಾಗರಿ ಲಿಪಿಯನ್ನು ಬಳಸಿರುವವು ಇವೆ. ಇವುಗಳು ಇಂದಿನ ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳಲ್ಲೂ ದೊರಕಿವೆ[3].

ಶೈವ ಮತ್ತು ವೈಷ್ಣವ ಎರಡೂ ಗುಂಪುಗಳು ಇವುಗಳನ್ನು ಬಳಸಿರುವುದನ್ನು ನಾವು ಕಾಣ ಬಹುದು. ಈ ಕಾರಣಕ್ಕಾಗಿ ಮತ್ತು ಪಠ್ಯದ ಒಳಗಡೆ ಇದು ಕೃಷ್ಣ ಭಕ್ತಿಯ ಕಥೆಯಾಗಿದ್ದರೂ ಶೈವದ ಅಂಶಗಳನ್ನು ಕಾಣಬಹುದೆಂಬ ಅಂಶವು ಕರ್ತೃವಿನ ಕಾಲ, ದೇಶ ಮತ್ತು ಮತವನ್ನು ಹುಡುಕುವಂತಹ, ನಿರ್ದಿಷ್ಟಗೊಳಿಸುವ ಅಧ್ಯಯನಗಳಲ್ಲಿನ ಚರ್ಚೆಗಳಿಗೆ ದಾರಿ ಮಾಡಿದೆ.

ಆಯ್ದ ಅಧ್ಯಯನಗಳ ವಿಶ್ಲೇಷಣೆ

ಅಧ್ಯಯನಗಳ ಆಯ್ಕೆಯು ಯಾವುದೇ ನಿರ್ದಿಷ್ಟ ಶೈಕ್ಷಣಿಕ ಮಾನದಂಡಗಳಿಗಿಂತ ಮುಖ್ಯ ವಾಗಿ ನನಗೆ ಲಭ್ಯವಾದ ಆಕರಗಳನ್ನು ಅವಲಂಬಿಸಿದೆ. ಆದರೆ ನನಗೆ ಲಭ್ಯವಾದವುಗಳಲ್ಲಿ ನಾನು ಆಯ್ಕೆ ಮಾಡಿಕೊಳ್ಳಲು ಶೈಕ್ಷಣಿಕ ಮಾನದಂಡ (ವಿಧಾನ, ಶಿಸ್ತು) ಬಳಸಿಕೊಂಡಿದ್ದೇನೆ. ಆಯ್ಕೆಗಳು ಪ್ರಾತಿನಿಧಿಕವಾಗಿವೆ. ಇಲ್ಲಿ ನಾನು ಎರಡು ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕು ವುದಕ್ಕೆ ಈ ಅಭ್ಯಾಸವನ್ನು ಮಾಡಿದ್ದೇನೆ. ಮೊದಲನೆಯದು, ಕನ್ನಡದಲ್ಲಿ ಪ್ರಚಲಿತವಾಗಿದ್ದ ಸಿದ್ಧಾಂತಗಳು, ವಿಧಾನಗಳು ಯಾವುವು ಎನ್ನುವುದು ಮತ್ತು ಎರಡನೆಯದು, ಕನ್ನಡದಲ್ಲಿ ಇಂದು ಸಂಶೋಧನೆಯೆನ್ನುವುದರ ಸ್ವರೂಪ ಯಾವುದು ಎಂದು.

ಕನ್ನಡ ಸಾಹಿತ್ಯ ಆರಂಭಗೊಳ್ಳುವುದಕ್ಕೆ ಮುಂಚೆ ಅಗತ್ಯವಾಗಿದ್ದ ಮಾಹಿತಿಗಳನ್ನು ಕಲೆಹಾಕುವ ಕೆಲಸ ಜರೂರಾಗಿ ಆಗಬೇಕಾಗಿದ್ದರಿಂದ ಪಠ್ಯ ಮತ್ತು ಅದರ ಲೇಖಕರ ಮಾಹಿತಿಗಳನ್ನು ಕಲೆಹಾಕುವ ಕೆಲಸ ನಡೆಯಿತು. ಅದಕ್ಕಾಗಿಯೇ ಮೊದಲಿಗೆ ಬಂದದ್ದು ಸಾಹಿತ್ಯ ಚರಿತ್ರೆಯಲ್ಲ ಬದಲಿಗೆ ಕವಿ ಚರಿತೆ, ಸಮಗ್ರ ಕೃತಿಗಳನ್ನು ಉಲ್ಲೇಖಿಸುತ್ತಾ ಅದರ ಲೇಖಕರ ವಿವರವನ್ನು ನೀಡುವುದು ಇದರ ಉದ್ದೇಶ. ಈ ರೀತಿಯ ಕೆಲಸದ ಹಿನ್ನೆಲೆಯೇ ಆಗಿನ ಬಹುತೇಕ ಸಂಶೋಧನಾ ಲೇಖನಗಳಲ್ಲಿ ಕಾಣುತ್ತದೆ. ಇವುಗಳು ಮುಖ್ಯವಾಗಿ ಪ್ರಬುದ್ಧ ಕರ್ಣಾಟಕ ಮತ್ತು ಕರ್ಣಾಟಕ ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರಲಿಲ್ಲ ಎಂದಲ್ಲ, ಬದಲಿಗೆ ಇವುಗಳು ಆಗಿನ ವಿದ್ವತ್ ಪತ್ರಿಕೆಗಳಾಗಿದ್ದವು.

ಕರ್ತೃವಿನ ಹುಟ್ಟು, ಮತ, ಕಾಲ, ದೇಶ, ರಾಜಾಶ್ರಯ ಇವುಗಳ ಅಧ್ಯಯನಕವಿ ಕೇಂದ್ರಿತ ಅಧ್ಯಯನ

ಇಲ್ಲಿ ಕವಿ ಕೇಂದ್ರಿತ ಅಧ್ಯಯನದ ಮಾದರಿಗಾಗಿ ನಾವು ಎರಡು ಲೇಖನಗಳನ್ನು ಗಮನಿಸಬಹುದು. ಇದರಲ್ಲಿ ಡಿ.ಎಲ್. ನರಸಿಂಹಾಚಾರ್‌ರವರ ಲೇಖನ “ಲಕ್ಷ್ಮೀಶನ ಕಾಲ” (೧೯೩೪) ಪ್ರಬುದ್ಧ ಕರ್ಣಾಟಕದಲ್ಲಿ ಪ್ರಕಟವಾಗಿತ್ತು. ಟಿ.ಎಸ್. ವೆಂಕಣ್ಣಯ್ಯನವರ ಲೇಖನ “ಲಕ್ಷ್ಮೀಶ” (೧೯೨೧) ಪರಿಷತ್ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ಟಿ.ಎಸ್. ವೆಂಕಣ್ಣಯ್ಯನವರು ತಮ್ಮ ಲೇಖನದಲ್ಲಿ ಕವಿಯ ಕಾಲ, ದೇಶ ಮತ್ತು ಮತಗಳ ವಿಷಯವಾಗಿ ಅವರಿಗಿದ್ದ ಸಂಶಯಗಳನ್ನು ಈ ಲೇಖನದಲ್ಲಿ ವಿವರಿಸುತ್ತಾರೆ. ಇದು ವೈಯಕ್ತಿಕ ಸಂಶಯಕ್ಕಿಂತ ಹೆಚ್ಚಾಗಿ, ಅದುವರೆವಿಗೆ ಲಕ್ಷ್ಮೀಶನ ಕಾಲ, ದೇಶ ಮತ್ತು ಮತಗಳನ್ನು ಕುರಿತಂತೆ ನಡೆದಿದ್ದ ಚರ್ಚೆಗಳ (ಇ.ಪಿ. ರೈಸ್, ಆರ್. ನರಸಿಂಹಾಚಾರ್ ಇತ್ಯಾದಿ) ಕುರಿತಿದ್ದ ಸಂಶಯ. ಅವರೇ ಹೇಳುವಂತೆ ಅವರ ಸಂಶಯಗಳು ಕವಿಚರಿತೆಯ ಎರಡನೆಯ ಭಾಗದ ಪ್ರಕಟಣೆಯಲ್ಲೂ ತೀರದ್ದರಿಂದ ಆ ಚರ್ಚೆಯನ್ನು ಮುಂದುವರೆಸುವ ಸಲುವಾಗಿ ಅವರು ಇತರ ವಿದ್ವಾಂಸರ ಮುಂದೆ ತಮ್ಮ ಅನುಮಾನಗಳನ್ನು ಇಡುತ್ತಿದ್ದಾರೆ. ಈ ಲೇಖನದಲ್ಲಿ ಅವರು ಕವಿಯ ಕಾಲ, ದೇಶ ಮತ್ತು ಮತಗಳನ್ನು ಅರಿಯಲು ಮುಖ್ಯವಾಗಿ ಕಾವ್ಯದ ಆಂತರಿಕ ಹೇಳಿಕೆಗಳನ್ನು, ಇತರ ಕವಿಗಳ ಪಠ್ಯಗಳಲ್ಲಿನ ಉಲ್ಲೇಖಗಳು, ಶಾಸನಗಳಲ್ಲಿನ ಉಲ್ಲೇಖಗಳನ್ನು ತಮ್ಮ ಚರ್ಚೆಗೆ ಆಧಾರವಾಗಿ ತೆಗೆದುಕೊಳ್ಳುತ್ತಾರೆ. ಇವುಗಳ ಆಧಾರದಿಂದ ಕವಿಯ ಕಾಲವನ್ನು ಕುರಿತು ಇದಕ್ಕೆ ಮುಂಚೆ ಇರಲಾರ ಮತ್ತು ಇದಕ್ಕೆ ನಂತರವಲ್ಲ ಎಂದು ಒಂದು ಕಾಲದ ಗಡಿಗಳನ್ನು ನಿರ್ಣಯಿಸುವ ಕೆಲಸ ಮಾಡುತ್ತಾರೆ. ಹಾಗೆಯೇ ಕಾವ್ಯದ ಆಂತರಿಕ ಪ್ರಮಾಣಗಳು (ವಸ್ತು, ಕಥೆ ಅವುಗಳ ನಿರ್ವಹಣೆ) ಅವರಿಗೆ ಕವಿಯ ಮತವನ್ನು ಕುರಿತು ನಿರ್ಣಯಿಸಲು ಅಥವಾ ಈಗಿರುವ ನಿರ್ಣಯವನ್ನು ಸಂಶಯಿಸಲು ಸಹಾಯಕವಾಗುತ್ತವೆ. ವೆಂಕಣ್ಣಯ್ಯನವರಿಗೆ ಸ್ಥಳಪುರಾಣಗಳು ನಂಬಲರ್ಹವಾದ ಆಧಾರಗಳು, ಪ್ರಮಾಣಗಳು ಅಲ್ಲ.

ನರಸಿಂಹಾಚಾರ್‌ರವರ ಲೇಖನವು ಚಿಕ್ಕಮಗಳೂರಿನ ಕರ್ಣಾಟಕ ಸಂಘದವರು ಪ್ರಕಟಿಸಿದ ಕವಿ ಲಕ್ಷ್ಮೀಶ ಎಂಬ ಪುಸ್ತಕದಲ್ಲಿನ ಅವರ ಲೇಖನವನ್ನು ಕುರಿತು ಆ ಪುಸ್ತಕದ ವಿಮರ್ಶೆ ಮಾಡುವ ಸಂದರ್ಭದಲ್ಲಿ ಹೇಳಿದ ಮಾತುಗಳಿಗೆ ಪ್ರತಿಕ್ರಿಯೆ. ಒಟ್ಟು ಎಂ.ಆರ್.ಶ್ರೀ.ಯವರ ಮೂರು ಅಭಿಪ್ರಾಯಗಳನ್ನು ಕುರಿತು ಇದರಲ್ಲಿ ಚರ್ಚೆಮಾಡುತ್ತಾರೆ. ಮೊದಲನೆಯದು, ಇತರ ಕವಿಗಳ ಉಲ್ಲೇಖಗಳನ್ನು ಆಧರಿಸಿ ಕಾಲ, ಮತ ನಿರ್ಣಯಮಾಡುವ ವಿಧಾನವನ್ನು ಕುರಿತಾಗಿದೆ. ಏಕೆಂದರೆ ಇತರ ಕವಿಗಳ ಕಾಲ, ಮತವೇ ಇನ್ನೂ ಸಂಶಯಕ್ಕೆ ಆಸ್ಪದವಿಲ್ಲದಂತೆ ನಿರ್ಣಯವಾಗಿಲ್ಲದಿರುವಾಗ ಅವುಗಳನ್ನು ಪ್ರಮಾಣವಾಗಿ ಬಳಸಿಕೊಳ್ಳುವ ಪ್ರಶ್ನೆ ಇಲ್ಲಿ ಚರ್ಚಿತವಾಗಿದೆ. ಒಂದೇ ಹೆಸರುಳ್ಳ ಕವಿಗಳು, ಸಾಮ್ಯತೆಯನ್ನು ಹೊಂದಿರುವ ಹೆಸರನ್ನು ಉಳ್ಳ ಕವಿಗಳ ಪಠ್ಯಗಳು ಅದಲುಬದಲಾಗಿ ಉಲ್ಲೇಖಿತವಾಗುವ ಚರ್ಚೆಯೂ ಇಲ್ಲಿದೆ. ಎರಡನೆಯ ಅಭಿಪ್ರಾಯವು ಕನ್ನಡದಲ್ಲಿ ಶಾಸನ ಕವಿಗಳ ಪ್ರಶ್ನೆಗೆ ದಾರಿಮಾಡಿಕೊಡುತ್ತದೆ. ಕೆಲವು ಕವಿಗಳ ಹೆಸರು ಮಾತ್ರ ಬೇರೆ ಪಠ್ಯಗಳಲ್ಲಿ ಉಲ್ಲೇಖಿತವಾಗಿದ್ದು ದೊರಕಿದ್ದು ಅವರ ಪಠ್ಯಗಳು (ಹಸ್ತಪ್ರತಿಗಳು ಅಥವಾ ಶಾಸನಗಳು) ಎಲ್ಲೂ ಉಳಿದಿಲ್ಲದಿರುವುದರ ಬಗೆಗಿನ ಚರ್ಚೆ. ಮೂರನೆಯ ಅಭಿಪ್ರಾಯ ಒಂದೇ ಹೆಸರಿನ ಕವಿಗಳನ್ನು ಕುರಿತು ನಡೆಯುವ ಚರ್ಚೆ ಯಾಗಿದ್ದರೂ ಇಲ್ಲಿ ಅವರು ಪಠ್ಯದ ಶೈಲಿಯನ್ನು ಪ್ರಮಾಣವಾಗಿ ಬಳಸುತ್ತಾರೆ. ಕಾಲ ನಿರ್ಣಯಕ್ಕೂ ಮತ್ತು ಒಬ್ಬ ಕವಿಯ ಮೇಲೆ ಅಘೋಷಿತವಾಗಿ (ಕಾವ್ಯದಲ್ಲೇ ಇತರ ಕವಿಯ ಹೆಸರು ಉಲ್ಲೇಖಿತವಾಗಿದ್ದರೆ ಅದು ಘೋಷಿತ ಪ್ರಭಾವ) ಆಗಿರಬಹುದಾದ ಸಾಧ್ಯತೆಗಳನ್ನು ಶೈಲಿಯ ಆಧಾರದ ಮೇಲೆ ನಿರ್ಣಯಿಸುವ ವಿಧಾನ ಇಲ್ಲಿ ಕಂಡುಬರುತ್ತದೆ.

ದ.ರಾ. ಬೇಂದ್ರೆಯವರು ತಮ್ಮ ಲೇಖನ “ಲಕ್ಷ್ಮೀಶನ ‘ಜೈಮಿನಿ ಭಾರತ”’ (ಮೊದಲ ಪ್ರಕಟಣೆ?, ೧೯೭೪)ದಲ್ಲಿ ಪ್ರಮುಖವಾಗಿ ಕವಿಯ ಹೆಸರು, ಸ್ಥಳ, ಕಾಲ, ಮತಗಳನ್ನು ಚರ್ಚೆ ಮಾಡುತ್ತಾರೆ. ಈ ವಿಷಯಗಳ ಚರ್ಚೆಯಲ್ಲಿ ಇವರೂ ಪಠ್ಯದ ಆಂತರಿಕ ಪ್ರಮಾಣಗಳು, ಶಾಸನಗಳನ್ನು ಆಧರಿಸುತ್ತಾರೆ. ಆದರೆ ಇವರಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಪಠ್ಯದಲ್ಲಿ ಒಂದು ವಸ್ತುವಿನ ಉಲ್ಲೇಖವನ್ನು ಚಾರಿತ್ರಿಕವಾಗಿ ಆ ವಸ್ತು ಯಾವ ಕಾಲದಲ್ಲಿ ಬಳಕೆಗೆ ಬಂತು ಎಂದು ವಿಶ್ಲೇಷಿಸಿ ಕಾಲ ನಿರ್ಣಯ ಮಾಡುವುದು. ‘ಸಿಡಿಗುಂಡಿ’ನ ಮಾತು ಪಠ್ಯದಲ್ಲಿ ಬರುವುದರಿಂದ ಸಿಡಿಗುಂಡು ಕರ್ನಾಟಕದಲ್ಲಿ ಯಾವಾಗ ಬಳಕೆಯಾಯಿತು ಎಂಬ ಅಂಶದ ಹಿನ್ನಲೆಯಲ್ಲಿ ಪಠ್ಯದ, ಲೇಖಕನ ಕಾಲ ನಿರ್ಣಯ ಮಾಡುತ್ತಾರೆ. ಇಲ್ಲಿ ಪಠ್ಯದ ಆಂತರಿಕ ವಸ್ತು, ಬಾಹ್ಯ ಪ್ರಮಾಣಗಳೊಂದಿಗೆ ತುಲನಾತ್ಮಕವಾಗಿ ನೋಡಿದಾಗ ಪ್ರಮಾಣವಾಗಿ ಪರಿವರ್ತನೆಗೊಳ್ಳುತ್ತದೆ. ಮತ್ತೊಂದು ಗಮನಿಸಬೇಕಾದ ವಿಧಾನವೆಂದರೆ ಒಂದು ಪ್ರತಿಯನ್ನು ಇಟ್ಟುಕೊಂಡು ನಿರ್ಣಯಿಸುವವರ ವಿಚಾರವನ್ನು ಬೇರೆ ಪ್ರತಿಗಳನ್ನೂ ಗಮನಿಸಿ ವಿಶ್ಲೇಷಿಸುವ ವಿಧಾನ, ಇದರಿಂದ ಪ್ರಕ್ಷೇಪಗಳನ್ನು ಆಧಾರವಾಗಿಸಿಕೊಂಡು ನಿರ್ಣಯ ತಲುಪುವುದನ್ನು ಅವರು ನಿರಾಕರಿಸುತ್ತಾರೆ. ಪ್ರತಿಗಳ ತುಲನಾತ್ಮಕ ಅಧ್ಯಯನವು ಇಲ್ಲಿ ಕಂಡುಬರುತ್ತದೆ. ‘ಮೂಲಪಠ್ಯ’ವನ್ನು ನಿರ್ಣಯಿಸಲು ಸಂಪಾದಕರು ಪ್ರತಿಗಳನ್ನು ತುಲನಾತ್ಮಕವಾಗಿ ಗಮನಿಸು ವುದು ಬೇರೆ, ಕಾಲ, ದೇಶ, ಮತಗಳ ನಿರ್ಣಯಕ್ಕೆ ಅದನ್ನು ಬಳಸುವುದು ಬೇರೆ. ಇದಲ್ಲದೆ ಬೇಂದ್ರೆಯವರಿಗೆ ಸ್ಥಳಪುರಾಣಗಳು ಅನುಷಂಗಿಕ ಆಧಾರಗಳಾಗುತ್ತವೆ. ಅಂದರೆ ಈಗಾಗಲೇ ಒಂದು ಆಧಾರದ ಮೇಲೆ ತಲುಪಿರುವ ಪ್ರಮೇಯವನ್ನು ಸಮರ್ಥಿಸುವ ಆಧಾರ.

ಈ ಕವಿ ಕೇಂದ್ರಿತ ಅಧ್ಯಯನ ಇಲ್ಲಿಗೇ ಮುಗಿಯುವುದಿಲ್ಲ. ಅದು ನಿರಂತರವಾಗಿ ಚರ್ಚೆಗೆ ಒಳಗೊಳ್ಳುತ್ತಿರುತ್ತದೆ. ಪ್ರತಿ ಬಾರಿ ಹೊಸದಾಗಿ ಪಠ್ಯವು ಸಂಪಾದನೆಗೊಳಪಡುವಾಗಲೂ ಅದರ ಮುನ್ನುಡಿಯಲ್ಲಿ ಅಲ್ಲಿಯವರೆಗಿನ ಚರ್ಚೆಗಳು ಕಂಡುಬರುತ್ತವೆ. ಅದೇ ರೀತಿ ಲೇಖಕ ಕೇಂದ್ರಿತ ಮತ್ತು ಪಠ್ಯ ಕೇಂದ್ರಿತ ಸಂಶೋಧನಾ ಪದವಿಗಳಿಗಾಗಿ ನಡೆಯುವ ಅಧ್ಯಯನದಲ್ಲೂ ಈ ವಿಷಯಗಳು ಚರ್ಚೆಗೆ ಒಳಗೊಳ್ಳುತ್ತವೆ. ಇದಕ್ಕೆ ಮಾದರಿಗಳಾಗಿ ನಾವು ಬಿ.ಎಸ್. ಸಣ್ಣಯ್ಯ ಮತ್ತು ರಾಮೇಗೌಡರು ಸಂಪಾದಿಸಿದ ಲಕ್ಷ್ಮೀಶನ ಜೈಮಿನಿ ಭಾರತ (೧೯೯೩)ಕ್ಕೆ ರಾಮೇಗೌಡರು ಬರೆದಿರುವ “ಪ್ರಸ್ತಾವನೆ”ಯನ್ನು ಗಮನಿಸಬಹುದು. ಅದೇ ರೀತಿಯಾಗಿ ಸಂಶೋಧನಾ ಪದವಿಗಾಗಿ ನಡೆದಿರುವ ಪಠ್ಯಕೇಂದ್ರಿತ ಅಧ್ಯಯನ ‘ಲಕ್ಷ್ಮೀಶನ ಜೈಮಿನಿ ಭಾರತ : ಒಂದು ಅಧ್ಯಯನ’ (೧೯೭೯) ಎಂಬ ವಾಮನ ಬೇಂದ್ರೆಯವರ ಪುಸ್ತಕವನ್ನು ಗಮನಿಸಬಹುದು.

ಪಠ್ಯಕೇಂದ್ರಿತ ಅಧ್ಯಯನಗಳು : ಶೈಲಿ, ಭಾಷೆ, ಕಥಾವಸ್ತು, ಪಾತ್ರಚಿತ್ರಣ, ಕೃತಿಯ ಮೌಲ್ಯಮಾಪನ ಇತ್ಯಾದಿ.

ನಮ್ಮಲ್ಲಿ ಬಹಳ ಪ್ರಚಲಿತವಾಗಿರುವ ಸಾಹಿತ್ಯ ಅಧ್ಯಯನವೆಂದರೆ ಪಠ್ಯ ಕೇಂದ್ರಿತವಾದದ್ದೆ. ಪಠ್ಯಕೇಂದ್ರಿತ ಅಧ್ಯಯನವನ್ನು ನಾವು ಸಾಮಾನ್ಯವಾಗಿ ನವ್ಯವಿಮರ್ಶಾ ಪಂಥದೊಂದಿಗೆ ಸಮೀಕರಿಸುತ್ತೇವೆ. ಅದು ಸರಿಯಾದದ್ದೂ ಹೌದು. ನವ್ಯ ವಿಮರ್ಶೆ ಪಠ್ಯದ ವಿಶ್ಲೇಷಣೆ ಮತ್ತು ಆ ಮೂಲಕ ಅದರ ಮೌಲ್ಯಮಾಪನವನ್ನು ಮಾಡುತ್ತದೆ. ಇತರ ಅಂಶಗಳನ್ನು ಗೌಣ ಎಂದು ಭಾವಿಸುತ್ತದೆ. ಆದರೆ ಇತರ ವಿಮರ್ಶಾ ಪಂಥಗಳೂ ಪಠ್ಯಕೇಂದ್ರಿತ ವಿಶ್ಲೇಷಣೆ ಮಾಡುತ್ತದೆ. ಇತರ ಅಂಶಗಳನ್ನು ಗೌಣ ಎಂದು ಭಾವಿಸುವುದಿಲ್ಲ. ಇಲ್ಲಿ ನಾನು ಭಾವಿಸುತ್ತದೆ, ಭಾವಿಸುವುದಿಲ್ಲ ಎಂದು ಹೇಳುತ್ತಿದ್ದೇನೆಯೇ ಹೊರತು, ಗೌಣವಾಗಿಸುತ್ತೆ, ಗಮನಿಸುತ್ತದೆ ಎನ್ನುತ್ತಿಲ್ಲ. ಮೌಲ್ಯನಿರಪೇಕ್ಷ ನವ್ಯವಿಮರ್ಶೆಯ ಹಿಂದಿರುವ/ಹುದುಗಿರುವ ಮೌಲ್ಯಗಳನ್ನು ನಾವು ಗುರುತಿಸಲು ಸಾಧ್ಯ. ಯಾವುದನ್ನು ಆ ವಿಮರ್ಶೆ, ದತ್ತ ಎಂದೂ ಸಹಜ ಎಂದೂ ಭಾವಿಸುತ್ತದೆಯೋ ಅದು ಅದಕ್ಕೆ ಕಾಣುವುದಿಲ್ಲ ಅಷ್ಟೆ. ಆದರೆ ಒಂದು ಮೌಲ್ಯವಾಗಿ ನವ್ಯ ವಿಮರ್ಶೆ ಮೌಲ್ಯನಿರಪೇಕ್ಷ ಮೌಲ್ಯಮಾಪನವನ್ನು ಪ್ರತಿಪಾದಿಸುತ್ತದೆ.

ಇದಕ್ಕೆ ಉದಾಹರಣೆಯಾಗಿ ನಾವು ಕುರ್ತಕೋಟಿಯವರನ್ನು ಗಮನಿಸಬಹುದು. ಮೌಲ್ಯ ನಿರಪೇಕ್ಷ ನವ್ಯವಿಮರ್ಶಕರಾಗಿದ್ದೂ ಮೌಲ್ಯಯುತ ವಿಮರ್ಶೆಯನ್ನು ಅವರು ಕೈಗೊಳ್ಳುತ್ತಾರೆ[4]. ಅವರ ‘ಕನ್ನಡ ಸಾಹಿತ್ಯ ಸಂಗಾತಿ’ ಪುಸ್ತಕದಲ್ಲಿ ಎರಡು ಲೇಖನಗಳು ಜೈಮಿನಿ ಭಾರತಕ್ಕೆ ಸಂಬಂಧಿಸಿದಂತೆ ಇವೆ. ಇವುಗಳು ಪ್ರಕಟವಾದದ್ದು ೧೯೯೫ರಲ್ಲಿ. ಅಷ್ಟರಲ್ಲಾಗಲೇ ನವ್ಯವು ಒಂದು ಸಾಹಿತ್ಯಪಂಥವಾಗಿ ತನ್ನ ಜೀವಿತಾವಧಿಯನ್ನು ಮುಗಿಸಿತ್ತು. ನವ್ಯ ಲೇಖಕರೆಂದು ಕೊಂಡವರೇ ನವ್ಯಕ್ಕೆ ವಿಮುಖವಾಗಿ ಬರೆಯಲಾರಂಭಿಸಿದ್ದರು. ಬಂಡಾಯ, ದಲಿತ, ದೇಶಿ, ನವ್ರೋವಸಾಹತೋತ್ತರ ಇವುಗಳು ಚಲಾವಣೆಯಲ್ಲಿದ್ದವು. ಕುರ್ತಕೋಟಿಯವರೂ ಸಹ ವಿಮರ್ಶೆಯ ದಾರಿಯಲ್ಲಿ ಬೇರೆ ಬೇರೆ ದಿಕ್ಕಿನ ಸಿದ್ಧಾಂತಗಳನ್ನು ಅರಗಿಸಿ ತಮ್ಮದೇ ಪಾಕದಲ್ಲಿ ಅದ್ದಿ ತೆಗೆಯುವ ದಾರಿ ಹಿಡಿದಿದ್ದರು. ಆದರೂ ಈ ಲೇಖನಗಳು ನವ್ಯವಿಮರ್ಶೆಯ ಪ್ರಮುಖ ವಿಧಾನಗಳನ್ನು ಉಳಿಸಿಕೊಂಡಿವೆ.

ಅವರ ಮೊದಲ ಲೇಖನ “ಜೈಮಿನಿ ಭಾರತ” (ಕ್ರಿ.ಶ. ೧೫೫೦) ಎಂದು. ಇದರಲ್ಲಿ ಅವರು ಲೇಖಕನ ವಿಷಯಗಳಿಗೆ ಹೋಗುವುದಿಲ್ಲ.  ಆ ಕಾಲದ ಸಂದರ್ಭದಲ್ಲಿ ಅದನ್ನು ಇಟ್ಟು ನೋಡಲು ಹೋಗುವುದಿಲ್ಲ. ನೇರವಾಗಿ ಪಠ್ಯದ ವಿಮರ್ಶೆಗೆ ಕೈ ಹಾಕುತ್ತಾರೆ. ಮೊದಲನೇ ಪ್ಯಾರಾದಲ್ಲಿ ಮಾತ್ರ ರಸಾನುಭವ, ತಿಳುವಳಿಕೆ, ಕಾವ್ಯಜ್ಞತೆ ಇತ್ಯಾದಿ ಸಂಸ್ಕೃತ ಕಾವ್ಯ ಮೀಮಾಂಸೆಯ ಮಾತುಗಳಿದ್ದರೂ, ಜೈಮಿನಿ ಭಾರತದ ಲೋಕಪ್ರಿಯತೆಯ ರಹಸ್ಯ ಏನು ಎಂದು ತಿಳಿಸುವುದಾದರೂ, ಅದರ ನಂತರವೆಲ್ಲಾ ಪಠ್ಯಕೇಂದ್ರಿತ ವಿಮರ್ಶೆಯೇ. ಓದುಗರು, ತಿಳುವಳಿಕೆ ಇತ್ಯಾದಿ ಎಲ್ಲಾ ಮಾಯ! ಮೊದಲಿಗೆ ಕಥಾಬೀಜವನ್ನು ಗುರುತಿಸುತ್ತಾರೆ, ಆ ಕಥಾ ಬೀಜದಲ್ಲಿನ ನೈತಿಕ ಮತ್ತು ತಾತ್ವಿಕ ಸಂದಿಗ್ಧತೆ ಹೇಗೆ ಉಪಕಥೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಪಠ್ಯದಲ್ಲಿಯೇ ಅದರ ಆಕೃತಿಗೆ ಕಾರಣ ಗುರುಸುತ್ತಾರೆ. ಅದನ್ನು ವೀರಗಾಥೆಯ ಪ್ರಕಾರದಲ್ಲಿನ ಪಠ್ಯವಾಗಿ ಭಾವಿಸಿ ವಿಶ್ಲೇಷಣೆಗೆ ತೊಡಗುತ್ತಾರೆ. ಅಶ್ವಮೇಧವನ್ನು ಒಂದು ಪ್ರತಿಮೆಯಾಗಿ ಭಾವಿಸಿ ಪಠ್ಯವನ್ನು ವಿಶ್ಲೇಷಣೆಗೆ ಗುರಿಮಾಡುತ್ತಾರೆ. ಕುದುರೆಯ ಓಟವನ್ನು ಕಥೆಯ ಓಟದ ಸಂಕೇತವಾಗಿ ಭಾವಿಸಿ, ಕುದುರೆ ನಿಂತಾಗ ಕಥೆ ನಿಲ್ಲುತ್ತದೆ ಎಂದು ಹೇಳಿ ತಮ್ಮ ವಿಮರ್ಶೆಗೆ ವಿರಾಮ ನೀಡುತ್ತಾರೆ. ನವ್ಯ ವಿಮರ್ಶೆಯ ಎಲ್ಲಾ ಲಕ್ಷಣಗಳು ನನಗೆ ಇಲ್ಲಿ ಕಂಡುಬರುತ್ತವೆ. ಪಠ್ಯದ ಒಳಗಿನಿಂದಲೇ ಎಲ್ಲವನ್ನೂ ನೋಡುವ ವಿಧಾನ ಈ ಲೇಖನದಲ್ಲಿ ಕಂಡುಬರುತ್ತದೆ. ಆದರೆ ಅವರು ಗುರುತಿಸುವ ‘ನೈತಿಕ ಮತ್ತು ತಾತ್ವಿಕ ಸಂದಿಗ್ಧತೆ’ ಯಲ್ಲಿ ಅವರ (ಅಥವಾ ನವ್ಯ ವಿಮರ್ಶೆಯ) ‘ಮೌಲ್ಯ ನಿರಪೇಕ್ಷ’ ಮೌಲ್ಯ ಅಡಗಿದೆ.

ಬಹುತೇಕರು ಲಕ್ಷ್ಮೀಶನಲ್ಲಿ ಉಪಮಾನಗಳನ್ನು ಗುರುತಿಸಿದರೆ ಕುರ್ತಕೋಟಿಯವರು ತಮ್ಮ ಲೇಖನ “ಲಕ್ಷ್ಮೀಶನ ಶೈಲಿ”ಯಲ್ಲಿ ಆ ಉಪಮಾನಗಳನ್ನು ಪ್ರತಿಮೆಗಳಾಗಿ ಪರಿಭಾವಿಸಿ ತಮ್ಮ ವಿಶ್ಲೇಷಣೆ ನಡೆಸುತ್ತಾರೆ. ಶೈಲಿಯನ್ನು ಕಥಾವಸ್ತುವಿನೊಂದಿಗೆ ಇಟ್ಟು ವಿಶ್ಲೇಷಣೆ ಮಾಡುತ್ತಾರೆ, ಫಾರ‍್ಮ್ ಅಂಡ್ ಕಂಟೆಟ್ (ಆಕೃತಿ-ಆಶಯ, ವಸ್ತು-ತಂತ್ರ) ವಿಶ್ಲೇಷಣೆಯ ವಿಧಾನ ಇದು. ಕೊನೆಯಲ್ಲಿ ಪಠ್ಯದಲ್ಲಿನ ಪ್ರತಿಯೊಂದು ಹೆಸರಿನ ಶಬ್ದಗಳು ಹೇಗೆ ವಾಚ್ಯಾರ್ಥ ವಲ್ಲದ ಮತ್ತೊಂದನ್ನು ಧ್ವನಿಸುತ್ತದೆ ಎಂದು ಹೇಳುತ್ತಾ ಭಕ್ತಿಕಾವ್ಯದಲ್ಲಿ ಪ್ರತಿಯೊಂದು ಶಬ್ದ ದೇವವಾಚಕವಾಗುವ ಕ್ರಿಯೆ ಲಕ್ಷ್ಮೀಶನ ಶೈಲಿಯಲ್ಲಿದೆ. ಲಕ್ಷ್ಮೀಶನಿಗೆ ಅಲಂಕಾರಿಕತೆ ಕೂಡ ಭಕ್ತಿಯ ಇನ್ನೊಂದು ಸ್ವರೂಪ ಎಂದು ತೀರ್ಮಾನಿಸುವಲ್ಲಿ ಲೇಖನ ಮುಗಿಯುತ್ತದೆ.

ಪಠ್ಯಪ್ರಧಾನ ಆದರೆ ಅವ್ಯಕ್ತ ತೌಲನಿಕ ವಿಧಾನದ ಮೂಲಕ ಲೇಖಕನ ಮೌಲ್ಯ ಮಾಪನ

ಈ ಭಾಗದಲ್ಲಿ ಕಾಲಾನುಕ್ರಮಣಿಕೆಯನ್ನು ಮುರಿದು ನಾನು ಆಯ್ದುಕೊಂಡ ಅಧ್ಯಯನಗಳಲ್ಲಿ ಕಾಲದ ದೃಷ್ಟಿಯಿಂದ ಕೊನೆಯದಾದ ಕುರ್ತಕೋಟಿಯವರ ಲೇಖನದಿಂದ ಆರಂಭ ಮಾಡಿದೆ. ಈಗ ಶೈಲಿಯನ್ನು ಪೂರ್ಣಪ್ರಮಾಣದಲ್ಲಿ ಅಧ್ಯಯನ ಮಾಡಿದ ಎಸ್.ವಿ. ರಂಗಣ್ಣನವರ ಲೇಖನ “ಲಕ್ಷ್ಮೀಶನ ಶೈಲಿ” (೧೯೫೮)ಯನ್ನು ನೋಡಬಹುದು. ರಂಗಣ್ಣನವರ ಈ ಲೇಖನ ಶೈಲಿಶಾಸ್ತ್ರದ (ಭಾಷಾವಿಜ್ಞಾನದ ಉಪಶಾಖೆ) ಆನ್ವಯಿಕ ಲೇಖನವಲ್ಲ. ಆದರೆ ರೆಟೊರಿಕ್‌ನ (ಕನ್ನಡದಲ್ಲಿ ಹೆಚ್ಚಿಗೆ ಭಾಷಣಶಾಸ್ತ್ರ ಎಂದೇ ಪ್ರಚುರವಾಗಿದೆ, ಆದರೆ ಭಾಷಾಬಳಕೆಯ ಶಾಸ್ತ್ರ ಎಂದಾಗಬೇಕು) ಅಧ್ಯಯನವೆಂದಾಗಿದೆ. ಇದರಲ್ಲಿ ಅವರು ಲಕ್ಷ್ಮೀಶನ ಭಾಷಾಬಳಕೆ ಯನ್ನು ಪರಿಶೀಲಿಸುತ್ತಾರೆ. ನವೋದಯ ವಿಮರ್ಶಕರು ಕಾವ್ಯಮೀಮಾಂಸೆಯ ಒಳಗೆಯೇ ನಿಂತು ಶೈಲಿಯನ್ನು ಅಧ್ಯಯನ ಮಾಡುತ್ತಿದ್ದರು ಅದರ ಮೂಲಕ ಪಠ್ಯದ, ಲೇಖಕನ ಮೌಲ್ಯ ಮಾಪನ ಮಾಡುತ್ತಿದ್ದರು.

ಲೇಖನದ ಆರಂಭದಲ್ಲಿಯೇ ಲೇಖಕನ ಮೌಲ್ಯಮಾಪನವನ್ನು ಕುರಿತು ರಂಗಣ್ಣನವರು ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸುತ್ತಾರೆ. ಲೇಖನದ ಮುಂದಿನ ಭಾಗದಲ್ಲಿ ತಮ್ಮ ಅಭಿಪ್ರಾಯವನ್ನು ಸಮರ್ಥಿಸುತ್ತಾ ಹೋಗುತ್ತಾರೆ. ಲಕ್ಷ್ಮೀಶನ ಮತ್ತು ಅವನ ಪಠ್ಯದ ‘ಲೋಕಪ್ರಿಯತೆ’ಯ ಬಗೆಗಿನ ಅವರ ಧೋರಣೆ ಮೊದಲ ವಾಕ್ಯದಲ್ಲೇ ವ್ಯಕ್ತವಾಗುತ್ತದೆ. ಲೋಕಪ್ರಿಯತೆಯಲ್ಲೂ ಅವನು ಮೊದಲಿಗನಲ್ಲ ಎರಡನೆಯವನು ಎಂದು ಘೋಷಿಸುವುದ ರೊಂದಿಗೆ ಲೇಖನ ಆರಂಭವಾಗುತ್ತದೆ. ಮೊದಲನೆಯವನು ಅವರ ಪ್ರಕಾರ ಕುಮಾರವ್ಯಾಸ. ಇದಕ್ಕೆ ಅವರು ಎರಡು ವಿವರಣೆಯನ್ನು ಮುಂದಿನ ಒಂದೇ ವಾಕ್ಯದಲ್ಲಿ ನೀಡುತ್ತಾರೆ: ೧. ವಾರ್ಧಕ ಷಟ್ಪದಿಗೆ ಭಾಮಿನಿ ಷಟ್ಪದಿಗಿಂತ ಪಠನ ಸೌಲಭ್ಯ ಸ್ವಾಭಾವಿಕವಾಗಿಯೇ ಕಡಿಮೆ (ಅಂದರೆ ಪಠನ ನೀಡುವುದು ಲಕ್ಷ್ಮೀಶನ ಉದ್ದೇಶವಾಗಿದ್ದರೆ ಅದಕ್ಕೆ ಸೂಕ್ತವಾದ ಆಕೃತಿಯನ್ನು/ಛಂದಸ್ಸನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಅವನು ವಿಫಲವಾಗಿದ್ದಾನೆ); ೨. ಕಥಾನಿರೂಪಣೆ, ಪಾತ್ರಸೃಷ್ಟಿ, ಪ್ರಸಂಗವಿವರಣೆ, ಪ್ರತಿಭೆ ರೀತಿ, ಭಾಷಾ ವೈಭವ ಎಲ್ಲದರಲ್ಲಿಯೂ ಕುಮಾರವ್ಯಾಸ ಲಕ್ಷ್ಮೀಶನಿಗಿಂತ “ಘನಾಧಿಕ್ಯ”). ರಂಗಣ್ಣನವರ ಲೇಖನದುದ್ದಕ್ಕೂ ವ್ಯಂಗ್ಯ, ಚಾಟು, ಉಪಮೇಯಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಸುಲಲಿತವಾಗಿಯೇ ಹರಿಯುತ್ತವೆ. ಲಕ್ಷ್ಮೀಶ ಉಪಮಾಲೋಲನಾದರೆ ನಾನೇನೂ ಕಡಿಮೆಯಲ್ಲ, ಅದೇನೂ ಹೆಚ್ಚುಗಾರಿಕೆಯಲ್ಲ ಎನ್ನುವಂತೆ ಅವರ ಲೇಖನದ ಶೈಲಿಯ ಧೋರಣೆ ಇದ್ದಂತಿದೆ. ಈ ಕೆಳಗಿನ ಭಾಷಾ ಪ್ರಯೋಗಗಳನ್ನು ನೋಡಿ: ಅವರಿಗೆ ಕುಮಾರವ್ಯಾಸ ‘ಸುರಲೋಕದ ಮಂದಾರ’, ಲಕ್ಷ್ಮೀಶ ‘ಈ ಲೋಕದ ಪಾರಿಜಾತ’; ‘ಅತಿಶುಷ್ಕ ಪ್ರಾಕೃತನೀತಿಯ ಬೇವಿನಹೂವನ್ನು ನಮ್ಮ ಗಂಟಲಿನೊಳಕ್ಕೆ ಗಿಡುಕುವ ಕವಿತಾವಿವೇಚನೆ’; ‘ಕಥೆಗಾರಿಕೆಯ ಗೋಡೆಯನ್ನು ಒರಗಿ ಕೊಂಡು ಕುಳಿತಿಲ್ಲ ಅವನ ಪ್ರಖ್ಯಾತಿ; ಕುಳಿತಿದ್ದರೆ ಆ ಗೋಡೆ ಹಸಿಮಣ್ಣಿನ ಗೋಡೆ; ಪದಪರ್ಣ ಯಥೇಷ್ಟ, ಸೂಕ್ತಿ ಪುಷ್ಪ ಅತ್ಯಲ್ಪ’; ‘ಮತ್ಸರದ ಗ್ರಹಗಳ ವಕ್ರದೃಷ್ಟಿಯನ್ನು ಮಸುಳಿಸುವ ಕರಿಯಬೊಟ್ಟು’; ‘ವಿಪರೀತಪ್ರಾಸ ಬೇಕಿಲ್ಲದ ಪ್ರಾಸ ಅಪಹಾಸ್ಯಪ್ರಾಸ ಮೊದಲಾದ ಅನ್ಯಾಯ ಪ್ರಾಸ ಇಲ್ಲದಿಲ್ಲ’; ‘ಇವನ್ನು ಬರೆದವ ಕವಿಚೂತವನಚೈತ್ರ ಲಕ್ಷ್ಮೀಧರನಲ್ಲ, ಕಂಠಪೂರ್ತಿ ಉಂಡು ಮಲಗಿ ಎದ್ದು ಹಲಗೆಯಮೇಲೆ ಬಳಪವನ್ನು ಕಿರ್ರೆನ್ನುವಂತೆ ಒತ್ತಿ ನೂಕಿದ ಲಕುಮಿಪತಿ ಪಂಡಿತ’; ‘ಕೆಲಕೆಲವುಕಡೆಗಳಲ್ಲಿ ಮಾತ್ರ ಕವಿಯ ಕಲಾಭಿಜ್ಞತೆ ಅತಿಶಯದ ಗದ್ದಲವನ್ನು ಗೆದ್ದು ತಲೆ ಎತ್ತುತ್ತದೆ’; ‘ಮಿಕ್ಕೆಡೆಗಳಲ್ಲಿ ಲೇಖನದ ಜಾಗಟೆ ರಮಡೋಲುಗಳಿಂದ ಅದಕ್ಕೆ ಹೀನ ಸೋಲು’; ‘ವಿಕಟಾಭಿಪ್ರಾಯದ ಅತಿ ವಿಕಾರ’; ‘ಇದೆಲ್ಲ ಅಮರಕೋಶದ ಅಟ್ಟಹಾಸ, ಮೊರಟು ಹಸ್ತ ಚಮತ್ಕಾರ, ಒರಟು ವಾಚಾಳತ್ವ’; ‘ಕವಿಯನ್ನು ಇಲ್ಲಿ ಆಳುವುದು ನೈಜಕವಿತ್ವ ಸೃಷ್ಟಿಯ ಸಹಜೋದ್ದೇಶವಲ್ಲ, ಷಟ್ಪದಿ ತಯಾರಿಕೆಯ ನೀರಸ ಕಟ್ಟಾಸೆ’; ‘ವಿಪುಳ ಧಾನ್ಯ ರಾಶಿಯಲ್ಲಿ ಜಳ್ಳು ಹೆಚ್ಚು, ಕಾಳು ಕಡಿಮೆ‘; ‘ಕಾವ್ಯಕ್ಕೆ ಕೃತಕತೆಯ ಮುಸುಕು, ಗ್ರಾಂಥಿಕತೆಯ ಸಪ್ಪೆತನ’; ‘ಹಸೆಮಣೆಯಲ್ಲಿ ಕುಳ್ಳಿರಿಸಿದ ಬಲಾತ್ಕಾರದ ಲೇಖನವಾಯತೇ ಹೊರತು ಋಜುಕವಿತೆ ಯಾಗಲಿಲ್ಲ’ ಇತ್ಯಾದಿ…

ಅವರ ವಿಶ್ಲೇಷಣೆಯನ್ನು ಆಧರಿಸಿ ಲೇಖನದ ಓದುಗರು ತಮ್ಮ ಅಭಿಪ್ರಾಯವನ್ನು ರೂಢಿಸಿಕೊಳ್ಳುವುದಕ್ಕೆ ಮುಂಚೆಯೇ ತಮ್ಮ ಮೌಲ್ಯಮಾಪನವನ್ನು ತಮ್ಮ ಭಾಷಾಬಳಕೆಯಿಂದಾಗಿ ಓದುಗರ ಮುಂದಿಟ್ಟುಬಿಡುತ್ತಾರೆ. ಲೇಖನದ ಮೊದಲಭಾಗದಲ್ಲಿ ಲಕ್ಷ್ಮೀಶನ ಕಥೆಗಾರಿಕೆ, ಪಾತ್ರಸೃಷ್ಟಿ, ಪ್ರಸಂಗಸೃಷ್ಟಿ/ನಿರ್ವಹಣೆಗಳಲ್ಲಿ ಸಮಸ್ಯೆಗಳನ್ನು ಎತ್ತಿತೋರಿಸಿ ನಂತರ ಭಾಷಾ ಬಳಕೆಯ ಕಡೆಗೆ ಲೇಖನ ಹೋಗುತ್ತದೆ. ಇಲ್ಲಿ ಭಾವಾರ್ಥ-ಶಬ್ದಾಮೋದ, ಭಾವ ಭಾವನೆಯ ಪ್ರತಿಪಾದನೆ, ಪ್ರಾಸದ ಬಳಕೆ/ವಿತರಣೆ (ಅಂತ್ಯಪ್ರಾಸ, ಆದಿಪ್ರಾಸ, ಅನುಪ್ರಾಸ, ಶ್ಲೇಷಾಲಂಕಾರ ಇತ್ಯಾದಿ), ರಾಗೋತ್ಕರ್ಷಭ್ರಾಂತಿ (Pathetic fallacy) ಪರಿಕರಗಳನ್ನು ಬಳಸಿ ಪಠ್ಯದ ಭಾಗಗಳನ್ನು ವಿಶ್ಲೇಷಣೆ ಮಾಡುತ್ತ ಸಾಗುತ್ತದೆ ಈ ಲೇಖನ. ಕೆಲವು ಭಾಗಗಳನ್ನು ಉದಾಹರಿಸಿ ಇವುಗಳು ಅಪವಾದ (exception) ಎಂದು ಉತ್ತಮ ಭಾಗಗಳನ್ನು ಗುರುತಿಸುತ್ತಾರೆ. ಒಂದೆಡೆ ಯಂತು ಅವರು ಉತ್ತಮ ಭಾಗ ಎಂದು ಭಾವಿಸಿರುವುದನ್ನು ಉದಾಹರಿಸಿ ಹೀಗೆ ಹೇಳುತ್ತಾರೆ “ಲಕ್ಷ್ಮೀಶನ ಸ್ವಂತ ನಿರ್ಮಾಣವೋ ಎಂಬ ಸುಂದರ ಶಂಕೆಯನ್ನು ಎಬ್ಬಿಸುವ ಉಜ್ವಲ ನುಡಿಗಳೂ ಉಂಟು”.

ಪಠ್ಯಪ್ರಧಾನ ಆದರೆ ವ್ಯಕ್ತ ತೌಲನಿಕವಿಧಾನ, ಮೌಲ್ಯಮಾಪನಶ್ರೇಣೀಕರಣವಿಮರ್ಶೆಗಿಂತ ವಿಂಗಡಣೆ, ವಿವರಣೆಗೆ ಆದ್ಯತೆ

ಈ ರೀತಿಯ ಲಕ್ಷ್ಮೀಶನ ಮೇಲಿನ all out attackಗೆ ಪ್ರತಿಕ್ರಿಯೆಯೋ ಎಂಬಂತೆ ಕಡೆಂಗೋಡ್ಲು ಶಂಕರಭಟ್ಟರ ಲೇಖನ “ಕವಿ ಲಕ್ಷ್ಮೀಶ” (ಮೊದಲನೆಯ ಪ್ರಕಟಣೆ?,೨೦೦೪) ಇದೆ. ಈ ಲೇಖನದಲ್ಲಿ ಶಂಕರಭಟ್ಟರು ಕಾವ್ಯದಲ್ಲಿ ಎರಡು ವಿಧ ಎಂದು ಉದ್ಧರಿಸಿ ಅವುಗಳ ಮೂಲಕ ಕುಮಾರವ್ಯಾಸ ಮತ್ತು ಲಕ್ಷ್ಮೀಶನ ಕಾವ್ಯಗಳ ವಿಮರ್ಶೆಗೆ ಹೋಗುತ್ತಾರೆ. ಯಾವುದೇ ದೇಶದ ಕಾವ್ಯಸಮುದಾಯದಲ್ಲಿ ಜ್ಞಾನಪ್ರಧಾನವಾದುದು (Intellectual), ಭಾವಪ್ರಧಾನ ವಾದುದು (Emotiona) ಎಂಬೆರೆಡು” ಪದ್ಧತಿಗಳಿವೆ. ಈ ಪದ್ಧತಿಗಳನ್ನು ವಿವರಿಸಿ ಅವರು ನಂತರ ಅವುಗಳ ಬಗೆಗಿನ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸುತ್ತಾರೆ. ಈ ಭಿನ್ನತೆಗೆ ಕಾರಣವೆಂದರೆ ಕವಿಪ್ರವೃತ್ತಿಭೇದವೇ ಹೊರತು ಕವಿಕರ್ಮದ ದೋಷವಲ್ಲ ಎಂದು ಅವರು ಲೇಖಕನ ಮೌಲ್ಯಮಾಪನದ ಅಂಶವನ್ನು ಪಕ್ಕಕ್ಕಿಡುತ್ತಾರೆ. ಇವುಗಳನ್ನು ಭಿನ್ನವೆಂದು ಭಾವಿಸಬೇಕೆ ಹೊರತು ಅವುಗಳಲ್ಲಿ ತರತಮ ಸೃಷ್ಟಿಮಾಡುವುದು ತರವಲ್ಲ ಎಂದು ಅವರ ಅಭಿಪ್ರಾಯ. ಎರಡಕ್ಕೂ ಅದರದ್ದೇ ಆದ ಗುಣಗಳಿವೆ ಎಂಬುದು ಅವರ ನಿಲುವು. ಇವುಗಳನ್ನು ಒಂದೇ ಕೋಲಿನಿಂದ ಅಳೆಯಲು ಸಾಧ್ಯವಿಲ್ಲ. ಆಯಾ ಲಕ್ಷಣಗಳನ್ನು ಆಧರಿಸಿ ಮಾಡಬೇಕು ಎಂದು ಅವರು ಪಠ್ಯ-ಪ್ರಕಾರ ವಿಮರ್ಶೆಯ ಕಡೆಗೆ ಸಾಗುತ್ತಾರೆ.

ಲೇಖನದ ಮೊದಲಲ್ಲೇ ಅವರು ಎರಡು ಪಠ್ಯಗಳ ತುಲನೆ ಇದಲ್ಲ ಎನ್ನುತ್ತಾರೆ. ಅಂದರೆ ಮೌಲ್ಯಮಾಪನ ವಿಧಾನವಲ್ಲ ಎಂಬುದು ಅವರ ನಿಲುವು. ಆದರೆ ತುಲನಾವಿಧಾನವನ್ನು ಅವರು ಅಳವಡಿಸಿಕೊಳ್ಳುತ್ತಾರೆ. ಅದರ ಉದ್ದೇಶ ಈ ಎರಡು ವಿಭಿನ್ನ ಪದ್ಧತಿಗಳ ಲಕ್ಷಣಗಳನ್ನು ಪಠ್ಯಗಳ ಮೂಲಕ ನಿರೂಪಿಸುವುದಾಗಿದೆ. ವಿಚಿತ್ರವೆಂದು ಕಾವ್ಯದಲ್ಲಿ ತೋರುವುದು ಅವರಿಗೆ ದೋಷವಲ್ಲ. ಬದಲಿಗೆ ಬ್ರಹ್ಮ ಸೃಷ್ಟಿಯಂತೆಯೇ ಕವಿಸೃಷ್ಟಿಯೂ ವಿಚಿತ್ರ ಅಷ್ಟೇ. ಕೆಲವರು ಲಕ್ಷ್ಮೀಶನ ಭಾಷಾಬಳಕೆಯಲ್ಲಿ ದೋಷ ಹುಡುಕುವುದನ್ನು ಅವರನ್ನು ಹೆಸರಿಸದೆ ಉಲ್ಲೇಖಿಸಿ ಹೀಗೆ ಹೇಳುತ್ತಾ: “ಕೆಲವರು ಇದನ್ನು ದೋಷವೆನ್ನಲೂಬಹುದು. ಆದರೆ ಹಾಗೆನ್ನುವುದಕ್ಕೆ ಕಾರಣವಿಲ್ಲ. ಕೆಲವರಿಗೆ ಅವನಲ್ಲಿ ಕಾಣಬಹುದಾದ ‘ದೋಷ’ವೆಂದರೆ ಸಂಪ್ರದಾಯಪ್ರಿಯತೆ; ನನಗದು ದೋಷವಾಗಿ ತೋರುವುದಿಲ್ಲ. ಸಂಪ್ರದಾಯವೆಂಬುದು ತಾನಾಗಿ ಬರುತ್ತದೆ. ಒಮ್ಮೆಮ್ಮೆ ಕವಿಗಳ ಉದ್ದೇಶವು ಸಂಪ್ರದಾಯಭಂಜನವೆಂದು ತೋರಿದರೂ, ಅದರೊಳಗೂ ಒಂದು ‘ಸಮಯವು’ ಮೂಡಿಬರುವುದು”.

ಲೇಖನದಲ್ಲಿ ಪಠ್ಯಕೇಂದ್ರಿತ ವಿಶ್ಲೇಷಣೆ ಇದೆ, ಆದರೆ ಇದೂ ಕೂಡ ಇತರ ವಿಮರ್ಶೆ ಯಂತೆಯೇ (ಅದರ ಘೋಷಿತ ಉದ್ದೇಶದ ಹೊರತಾಗಿಯೂ) ಲೇಖಕನ ಮೌಲ್ಯಮಾಪನ ಕೆಲಸವನ್ನು ಮಾಡುತ್ತದೆ. ಇಲ್ಲಿಯ ಉದ್ದೇಶ ಲಕ್ಷ್ಮೀಶನ ಪ್ರತಿಭೆಯನ್ನು ವಾಙ್ಮಯದಲ್ಲಿ ಅವನ ಸ್ಥಾನ ಎಷ್ಟು ಉನ್ನತವಾದುದ್ದು ಎಂದು ತೋರಿಸುವುದು. ಇಲ್ಲಿ, ನವೋದಯದ ಲಕ್ಷಣವೆಂದು ಗುರುತಿಸಲಾಗಿರುವ ಕವಿಯ ಗುಣಗಳನ್ನು (ಅವಗುಣಗಳಲ್ಲ) ಆಧರಿಸಿ ಆತನ ಸ್ಥಾನ ನಿರ್ಧರಿಸುವ ಕೆಲಸ ನಡೆಯುತ್ತದೆ. ಆದರೆ ಸಂಪ್ರದಾಯ, ಅದರ ಭಂಜನ, ಹೊಸ ಸಂಪ್ರದಾಯದ ಉಗಮ ಇವುಗಳನ್ನು ಕುರಿತ ಅವರ ನಿಲುವು ಪಾಶ್ಚಾತ್ಯ ನವ್ಯಕವಿ ವಿಮರ್ಶಕ ಟಿ.ಎಸ್. ಎಲಿಯಟ್‌ನ “Tradition and Individual Talent” ಅನ್ನು ನೆನಪಿಸುತ್ತದೆ.

ರಂಗಣ್ಣನವರ ತೀವ್ರ ಟೀಕೆಗೆ ಪ್ರತಿಕ್ರಿಯೆಯೋ ಎಂಬಂತೆ ಹಲವಾರು ಬರಹಗಳು ನಮಗೆ ಕಾಣುತ್ತವೆ. ಅವುಗಳು ಅವರ ಲೇಖನದಿಂದ ಆಗಿರುವ ಡ್ಯಾಮೇಜ್ ಕಂಟೋಲ್ ಮಾಡಬೇಕು ಅಥವಾ ಸರಿಪಡಿಸಬೇಕು ಎಂಬಂತೆ ಬರೆದಿರಬಹುದೆಂಬ ಅನುಮಾನ ಕಾಡುತ್ತದೆ. ಇವುಗಳು ಹಲವಿರುವುದರಿಂದ ನಾನು ಅವುಗಳನ್ನು ಉಲ್ಲೇಖಿಸುವುದಿಲ್ಲ. ಏಕೆಂದರೆ ಕುರ್ತಕೋಟಿಯವರ ಪುಸ್ತಕ ಮೂಲತಃ ಒಂದು ಪಠ್ಯಕ್ಕೆ ಒಂದು ಲೇಖನದಂತೆ ವಿನ್ಯಾಸಗೊಂಡಿದೆ. ಅದನ್ನು ಅವರು ಮೀರುವುದಿಲ್ಲ ಎಂದಲ್ಲ ಮೀರುತ್ತಾರೆ. ಕನ್ನಡ ಸಾಹಿತ್ಯ ಪರಂಪರೆಯನ್ನು ರೇಖಿಸುವ ಅಗತ್ಯವೂ ಅದಕ್ಕೆ ಇರುವುದರಿಂದ ಹಲ್ಮಿಡಿ ಶಾಸನದಿಂದ ಆರಂಭಗೊಂಡರೂ, ಪಠ್ಯಕೇಂದ್ರಿತವಲ್ಲದ “ಮಾರ್ಗ ಮತ್ತು ದೇಶಿ”, “ಅನುವಾದ ಮತ್ತು ಪುನರ್ಲೇಖ”, “ರಗಳೆ ಮತ್ತು ಷಟ್ಪದಿ”, “ರಾಜಾಶ್ರಯ ಮತ್ತು ಸಾಹಿತ್ಯ” ಎಂಬ ಲೇಖನಗಳು ಅಪವಾದಗಳಾಗಿವೆ. ಅದರಲ್ಲಿ ಒಂದು “ಲಕ್ಷ್ಮೀಶನ ಶೈಲಿ” ಸಹ ಒಂದು (೫೯ ಲೇಖನಗಳಲ್ಲಿ ಇವು ಅಪವಾದಗಳು). ಲಕ್ಷ್ಮೀಶನ ಶೈಲಿ ಹೆಸರಿನ ಲೇಖನಗಳು ಹೆಚ್ಚಾಗಿ ಬಂದಿರುವುದು ರಂಗಣ್ಣನವರಿಗೆ ಪ್ರತಿಕ್ರಿಯೆಯಾಗಿಯೇ ಇರಬಹುದು.[1] ಈ ಕುರಿತು ಹೆಚ್ಚಿನ ವಿವರಗಳಿಗೆ ನೋಡಿ Thatakeshwar (2004).

[2] ಜರ್ಮನ್ ಭಾಷಾಂತರವನ್ನು ನಾನು ಸ್ವತಃ ನೋಡಿಲ್ಲ. ಆದರೆ ಇಂಗ್ಲಿಶ್ ಭಾಷಾಂತರದ ಪ್ರತಿಯನ್ನು ನೋಡಲಾಗಿದೆ.

[3] ಈ ವಿವರಗಳನ್ನು ವಾಮನ ಬೇಂದ್ರೆ (೧೯೭೯)ರ ಆಧಾರದ ಮೇಲೆ ರೂಪಿಸಲಾಗಿದೆ.

[4] ಕುರ್ತಕೋಟಿಯವರನ್ನು ನವ್ಯವಿಮರ್ಶಕರೆಂದು ನಾನು ಕರೆದರೆ ಒಪ್ಪಿಕೊಳ್ಳದ ಇತರ ನವ್ಯವಿಮರ್ಶಕರು, ಸಾಹಿತಿಗಳಿದ್ದಾರೆ. ಅವರು ನನ್ನೊಂದಿಗೆ ಸಹಮತ ವ್ಯಕ್ತಪಡಿಸಲಾರರು, ತಲೆಯನ್ನು ಅಡ್ಡಡ್ಡ ಅಲ್ಲಾಡಿಸುತ್ತಾರೆ ಎಂದು ಗೊತ್ತಿದ್ದೂ ನಾನು ಅವರನ್ನು ನವ್ಯ ವಿಮರ್ಶಕರೆಂದೇ ಭಾವಿಸುತ್ತೇನೆ.