ಮಧ್ಯಕಾಲೀನ ಸಾಹಿತ್ಯದಲ್ಲಿ ಎರಡು ಪ್ರಮುಖ ಚಳುವಳಿಗಳು ಕಾಣಿಸುತ್ತವೆ. ಒಂದು ವಚನ ಸಾಹಿತ್ಯ. ಇನ್ನೊಂದು ದಾಸ ಸಾಹಿತ್ಯ ಚಳುವಳಿಗಳು. ಈ ಸಾಹಿತ್ಯ-ಸಾಂಸ್ಕೃತಿಕ ಚಳುವಳಿಗಳು ಕಾಲಾಂತರದಲ್ಲಿ ಅನೇಕ ಆಯಾಮಗಳನ್ನು ಪಡೆದು ನಿರಂತರವಾಗಿ ಕ್ರಿಯಾಶೀಲ ವಾಗಿ ಬೆಳೆದು ಬಂದವು. ಬೇರೆ ಬೇರೆ ಸಾಹಿತ್ಯ ರೂಪಗಳಲ್ಲಿಯೂ ಈ ಸಾಹಿತ್ಯದ ಧೇಯೋ ಧ್ಯೇಶಗಳು ಕಾಣಿಸಿಕೊಂಡವು. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಚಳುವಳಿಗಳು ಹುಟ್ಟಿ, ಬೆಳೆದು, ರೂಪಾಂತರಗಳನ್ನು ಹೊಂದುತ್ತ ಬಂದಿರುವುದು ಈಗಿನ ಹೈದರಾಬಾದು ಕರ್ನಾಟಕ ಪ್ರಾಂತ್ಯದಲ್ಲಿಯೇ. ನಂತರ ಮತ್ತು ಆಧುನಿಕ ಕಾಲಘಟ್ಟಗಳಲ್ಲಿ ಈ ಪ್ರಾಂತ್ಯವನ್ನು ದಾಟಿ ಹೋಗಿವೆ; ಬೆಳೆದಿವೆ. ಭಾಗವತ ಮತದ ಆಧಾರದಲ್ಲಿ ರಚನೆಗೊಂಡ ಎರಡು ಪ್ರಮುಖ ಪಠ್ಯಗಳೆಂದರೆ, ಒಂದು ‘ಕುಮಾರವ್ಯಾಸ ಭಾರತ’, ಇನ್ನೊಂದು ಲಕ್ಷ್ಮೀಶನ ‘ಜೈಮಿನಿ ಭಾರತ’. ಕೃಷ್ಣನ ಮಹಿಮೆ ಮತ್ತು ಆತನ ಭಕ್ತರ ಭಕ್ತಿಯ ಸ್ವರೂಪವನ್ನು ಹೇಳುವ ಕಾವ್ಯಗಳಿವು. ಕರ್ನಾಟಕದ ಉತ್ತರ ಪ್ರಾಂತ್ಯದಲ್ಲಿ ದಾಸರು ಹುಟ್ಟಿ ಬೆಳೆದು, ಕೀರ್ತನ ಸಾಹಿತ್ಯವನ್ನು ರಚಿಸಿ ದಾರಿಯನ್ನು ನಿರ್ಮಿಸಿದರು. ದಾಸ ಹಾದಿಯಲ್ಲಿಯೇ ಅನೇಕರು ನಡೆದರು. ಕುಮಾರವ್ಯಾಸ, ಲಕ್ಷ್ಮೀಶ ಈ ಪರಂಪರೆಯ ದೊಡ್ಡ ಹೆಸರುಗಳು. ಕರ್ನಾಟಕದ ಉತ್ತರ ಪ್ರಾಂತ್ಯಗಳಲ್ಲಿ ಈ ಕವಿಗಳ ಕಾವ್ಯಗಳಾದ ‘ಗದುಗಿನ ಭಾರತ’ ಮತ್ತು ‘ಜೈಮಿನಿ ಭಾರತ’ ರಚನೆಗೊಂಡಿವೆ. ಭಾಗವತ ಪಂಥದ ಅಧ್ಯಾತ್ಮವನ್ನು ಅನುಸರಿಸುವ ಈ ಕಾವ್ಯಗಳು, ವೈದಿಕ ಸಾಂಸ್ಕೃತಿಕ ವಲಯದಲ್ಲಿ ಪರಿವರ್ತನೆಯನ್ನು ತಂದವು. ವೈದಿಕರಾದ ದಾಸರು ಕನ್ನಡದಲ್ಲಿ ಕೀರ್ತನೆಗಳನ್ನು ಬರೆದರು. ದೇಶೀಯತೆಗೆ ತಮ್ಮನ್ನು ಒಗ್ಗಿಸಿಕೊಂಡರು. ಈ ದೇಶಿ ಪರಂಪರೆಯಲ್ಲೇ ಕುಮಾರ ವ್ಯಾಸ, ಲಕ್ಷ್ಮೀಶರು ಮೂಡಿ ನಿಂತರು. ಮಡಿಮೈಲಿಗೆ ಬಗ್ಗೆ ಮೃದು ಧೋರಣೆ ತಳೆದ ವೈದಿಕ ಸಾಂಸ್ಕೃತಿಕ ವಲಯದಲ್ಲಿ ಇದು ಪರಿವರ್ತನೆಯ ಕಾಲಘಟ್ಟವಾಗಿದೆ. ದಾಸ ಸಾಹಿತ್ಯ ಮತ್ತು ‘ಗದುಗಿನ ಭಾರತ’, ‘ಜೈಮಿನಿ ಭಾರತ’ ಈ ಕಾವ್ಯಗಳು ವೈದಿಕ ಮಠಮಾನ್ಯ ಪರಿಸರದಿಂದ ವೈದಿಕೇತರ ಪರಿಸರಗಳಿಗೆ ವಿಸ್ತಾರಗೊಂಡವು. ಕೃಷ್ಣ ಚರಿತೆಯನ್ನು, ಆತನ ಭಕ್ತರ ಭಕ್ತಿಯ ಮಹಿಮೆಯನ್ನು ಸಾರಿ ಹೇಳುವ ಈ ಕಾವ್ಯಗಳು ಓದುವ ಪಂಡಿತ ವರ್ಗವನ್ನು ಮಾತ್ರ ಅವಲಂಬಿಸದೆ, ಕೇಳುಗ ಸಮುದಾಯಗಳತ್ತ ಚಲಿಸಿದವು. ‘ಗದುಗಿನ ಭಾರತ’ವನ್ನು ಕುಮಾರ ವ್ಯಾಸನು ಓದುಗ ಮತ್ತು ಕೇಳುಗ ವರ್ಗಗಳಿಗೆ ತಲುಪುವಂತೆ ಕಾವ್ಯವನ್ನು ರಚಿಸಿದನು. ಓದುವ ಮನಸ್ಸಿಗಿಂತ, ಕೇಳುವ ಮನಸ್ಸಿಗೆ ಹೆಚ್ಚು ಪ್ರಿಯವಾಗುವಂತೆ, ಅರ್ಥವಾಗುವಂತೆ ಈ ಕಾವ್ಯವನ್ನು ರಚಿಸಿದ್ದಾನೆ. ಮಧ್ಯಕಾಲೀನ ಸಂದರ್ಭವೇ ಮೌಖಿಕ ಸಾಹಿತ್ಯಕ್ಕೆ ಮಹತ್ವ ನೀಡಿತ್ತು. ಓದುವ ಅತ್ಯಲ್ಪ ಸಮುದಾಯಕ್ಕಿಂತ, ದೊಡ್ಡ ಪ್ರಮಾಣದ ಕೇಳುಗ ಸಮುದಾಯವಿತ್ತು. ಈ ಕೇಳುಗ ಸಮುದಾಯವನ್ನು ಪರಿಗಣಿಸಿದ ಕವಿ ಕುಮಾರವ್ಯಾಸ, ಲಕ್ಷ್ಮೀಶರು ಕೃಷ್ಣಭಕ್ತಿಯನ್ನು ಕೇಳುವಂತೆ ಮಾಡಲು ಪ್ರಯತ್ನಿಸಿದ ಫಲವಾಗಿ ‘ಗದುಗಿನ ಭಾರತ’, ‘ಜೈಮಿನಿ ಭಾರತ’ ಕಾವ್ಯಗಳನ್ನು ದೇಶಿ ಛಂದಸ್ಸಿನಲ್ಲಿ, ಮೌಖಿಕ ಶೈಲಿಯಲ್ಲಿ ರಚಿಸಿದರು. ಆದರೂ ಈ ಕಾವ್ಯಗಳು ಓದುವ ಪಂಡಿತ ವರ್ಗವನ್ನು, ಕೇಳುಗ ಸಮುದಾಯವನ್ನು ತಲುಪಿವೆ. ಕನ್ನಡದ ಅನನ್ಯ ಕಾವ್ಯಗಳಾಗಿ ಸ್ಥಾನ ಪಡೆದು ನಿಂತಿವೆ.

‘ಜೈಮಿನಿ ಭಾರತ’ದ ಅನನ್ಯತೆ ಇರುವುದು ಅದರ ಕಥಾವಸ್ತುವಿನಲ್ಲಿ. ಪಾಂಡವರ-ಕೌರವರ ಕಥೆಯನ್ನು ಓದುಗ-ಕೇಳುಗ ಸಮುದಾಯಗಳು ತಿಳಿದಿದ್ದವು. ಕುರುಕ್ಷೇತ್ರ ಯುದ್ಧದ ಆನಂತರ ಮಹಾಭಾರತದ ಕಥೆಯನ್ನು ಅಷ್ಟಾಗಿ ಕೇಳುಗ ಸಮುದಾಯ ತಿಳಿದಿರಲಿಲ್ಲ. ಓದುಗ ವರ್ಗ ಸಂಸ್ಕೃತ ಜೈಮಿನಿ ಭಾರತದ ಕಥೆಯನ್ನು ಓದಿ ತಿಳಿದಿತ್ತು. ಪಾಂಡವರನ್ನು ಯುದ್ಧದಲ್ಲಿ ಸೋಲಿಸುವ ಸಮರ ವೀರರ ಕಥೆಗಳನ್ನು ಕನ್ನಡಕ್ಕೆ ಲಕ್ಷ್ಮೀಶ ಕವಿ ತಂದನು. ಲಕ್ಷ್ಮೀಶನು ತನ್ನ ಕಾವ್ಯವನ್ನು ‘ಕೃಷ್ಣಚರಿತ’ ಎಂದು ಕರೆದುಕೊಂಡಿದ್ದಾನೆ. ಹಾಗೆ ನೋಡಿದರೆ ಈ ಕಾವ್ಯದಲ್ಲಿ ಕೃಷ್ಣನ ವೈಯಕ್ತಿಕ ಚರಿತೆಯೇನೂ ಇಲ್ಲಿ ಬರುವುದಿಲ್ಲ. ಆದರೂ ಆತನ ಭಕ್ತರ ಭಕ್ತಿ ಇಲ್ಲಿ ಒಡೆದು ಕಾಣುತ್ತದೆ. ಆದ್ದರಿಂದ ಇಲ್ಲಿ ನಾಯಕನೇ ಕೃಷ್ಣ. ಕೃಷ್ಣ, ಆತನ ಭಕ್ತರು ಒಂದು ಕಡೆ ಇದ್ದಾರೆ. ಮೂಲತಃ ಲಕ್ಷ್ಮೀಶನೇ ವೈದಿಕ ಪರ ನಿಲುವಿನವನು. ಇದನ್ನು ಎಲ್ಲೂ ಮೀರುವುದಿಲ್ಲ. ಇದು ವೈದಿಕ ಸಮುದಾಯಕ್ಕೆ ಇಷ್ಟವಾಗುವ ವಿಷಯ. ಇಲ್ಲಿ ಕಾಣುವ ಕೃಷ್ಣನ ಭಕ್ತರು ಸಮರ ವೀರರೂ ಆಗಿದ್ದಾರೆ. ಪಾಂಡವರನ್ನು ಗೆಲ್ಲುವವರೂ ಆಗಿದ್ದಾರೆ. ಅಂತಿಮವಾಗಿ ಕೃಷ್ಣನ ಮಧ್ಯ ಪ್ರವೇಶದಿಂದ ಈ ಸಮರ ವೀರರು ಸೋತರೂ ಮನಸ್ಸಿನಲ್ಲಿ ಉಳಿಯುವವರು. ಇದು ವೈದಿಕೇತರರಿಗೆ ಇಷ್ಟವಾಗುವ ಸಂಗತಿಯಾಗಿದೆ. ಕೆಳವರ್ಗದ ಸಮುದಾಯಗಳಿಗೆ ಭಕ್ತಿಗಿಂತ ಸಮರ-ವೀರತನ ಇಷ್ಟವಾಗುತ್ತದೆ. ಈ ವಿಷಯವನ್ನು ಇಲ್ಲಿ ಹೇಳಲು ಕಾರಣವೇನೆಂದರೆ, ‘ಜೈಮಿನಿ ಭಾರತ’ದಲ್ಲಿ ಬರುವ ಉಪಕಥೆಗಳನ್ನು ಆಧರಿಸಿ ನಾಟಕಗಳು ಹುಟ್ಟಿಕೊಂಡಿವೆ. ಯಕ್ಷಗಾನ ನಾಟಕಗಳಲ್ಲಿ ಇದು ಹೆಚ್ಚು ಕಾಣುತ್ತದೆ. ಕರ್ನಾಟಕದ ಉತ್ತರ ಪ್ರಾಂತ್ಯಗಳಲ್ಲೂ ದೊಡ್ಡಾಟ-ಸಣ್ಣಾಟಗಳಲ್ಲಿ ಕಾಣಬಹುದು. ನಾಟಕಗಳು ಊರೊಟ್ಟಿನ ಕಲೆಯಾಗಿ ರೂಪಗೊಳ್ಳುತ್ತವೆ. ಜಾತ್ಯಾತೀತವಾಗಿ ನಡೆಯುತ್ತವೆ. ‘ಜೈಮಿನಿ ಭಾರತ’ ವೈದಿಕ ಕಾವ್ಯವಾದರೂ, ಆ ಕಾವ್ಯದ ಉಪಕಥೆಗಳನ್ನು ಆಧರಿಸಿ ರಚನೆಗೊಳ್ಳುವ ನಾಟಕಗಳಲ್ಲಿ ಸಮರ ವೀರರ ಕಥೆಗಳು ಇರುವುದರಿಂದ ಇಲ್ಲಿ ಭಕ್ತಿಗಿಂತ ವೀರತ್ವ ಪ್ರಧಾನವಾಗುತ್ತದೆ. ನಾಟಕಗಳಲ್ಲಿ ಅಭಿನಯಿಸುವವರು ಸಾಮಾನ್ಯವಾಗಿ ವೈದಿಕೇತರರು ಹೆಚ್ಚಾಗಿರುತ್ತಾರೆ. ‘ಜೈಮಿನಿ ಭಾರತ’ದಲ್ಲಿ ಬರುವ ಯೌವನಾಶ್ವ, ಸಾಲ್ವ-ಅನುಸಾಲ್ವ, ನೀಲಧ್ವಜ, ಹಂಸಧ್ವಜ, ಸುಧನ್ವ, ಸುರಥ, ಬಭ್ರುವಾಹನ, ಮಯೂರ ಧ್ವಜ, ತಾಮ್ರಧ್ವಜ, ವೀರವರ್ಮ ಹಾಗೂ ಚಂದ್ರಸಾಹ ಮುಂತಾದ ವೀರರು ಅರ್ಜುನ-ಕೃಷ್ಣರ ಜತೆ ಹೋರಾಡಿ ಗೆಲ್ಲುವ ಕಥೆಗಳು ವೀರತ್ವವನ್ನು, ಭಕ್ತಿಯನ್ನು ಪ್ರದರ್ಶಿಸಿದರೂ ನಾಟಕಗಳಲ್ಲಿ ವೀರತನ ಹೆಚ್ಚು ರಂಜನೆಗೆ ಒಳಗಾಗುತ್ತದೆ. ಈ ವೀರರ ಪಾತ್ರಗಳನ್ನು ವೈದಿಕೇತರರು ಅದರಲ್ಲೂ ಕೆಳವಗದವರು ಅಭಿನಯಿಸುತ್ತಾರೆ. ಇದರಿಂದ ‘ಜೈಮಿನಿ ಭಾರತ’ ಕಾವ್ಯ ವೈದಿಕ ಪರಿಸರದಿಂದ ವೈದಿಕೇತರ ಪರಿಸರದಲ್ಲಿ ವಿಸ್ತಾರಗೊಳ್ಳುತ್ತದೆ. ಕೇಳುಗ, ನೋಡುಗ ಸಮುದಾಯ ಹೆಚ್ಚಾಗುತ್ತದೆ. ‘ಜೈಮಿನಿ ಭಾರತ’ದ ಅನನ್ಯತೆ ಇರುವುದು ಇಲ್ಲಿ.

ಲಕ್ಷ್ಮೀಶ ಕವಿಯ ‘ಜೈಮಿನಿ ಭಾರತ’ ಕಾವ್ಯವು ಕರ್ನಾಟಕದ ಉತ್ತರ ಪ್ರಾಂತ್ಯಗಳಲ್ಲಿ ಜನಪ್ರಿಯವಾಗಿತ್ತು. ಲಿಂಗಾಯತ ಮಠಮಾನ್ಯಗಳಲ್ಲಿ ಅಂದರೆ ಮಠಗಳ ಶಾಲೆಗಳಲ್ಲಿ ಈ ಕಾವ್ಯವನ್ನು ಬೋಧಿಸಲಾಗುತ್ತಿತ್ತು. ಮುಖ್ಯ ಪಠ್ಯವಾಗಿಯೇ ಇದನ್ನು ಬೋಧಿಸಲಾಗುತ್ತಿತ್ತು. ವಿದ್ಯಾರ್ಥಿಯ ಶೈಕ್ಷಣಿಕ ಅರ್ಹತೆಯನ್ನು ಗುರುತಿಸಲು ‘ಜೈಮಿನಿ ಭಾರತ’ ಮಾನದಂಡವಾಗಿತ್ತು. ಅಂದರೆ ವಿದ್ಯಾರ್ಥಿಯು ಈ ಕಾವ್ಯವನ್ನು ಓದುತ್ತಾನೆ ಎಂದರೆ ಆ ವಿದ್ಯಾರ್ಥಿ ‘ಪದವಿಧರ’ ಎಂಬ ಅರ್ಥದಲ್ಲಿ ಗ್ರಹಿಸಲಾಗುತ್ತಿತ್ತು. ಈ ವೈದಿಕ ಕಾವ್ಯವನ್ನು ಲಿಂಗಾಯತ ಮಠದ ಶಾಲೆ, ಮಠಮಾನ್ಯ ಪರಿಸರದಲ್ಲಿ ಬಳಸಲಾಗುತ್ತಿತ್ತು ಎಂಬುದು ನಿಜ. ಇದಕ್ಕೆ ಕಾರಣಗಳೇನಿರ ಬಹುದು? ಲಿಂಗಾಯತ ಮಠಮಾನ್ಯಗಳು ‘ಶೂನ್ಯ ಸಂಪಾದನೆ’ಗಳನ್ನು ಬೋಧಿಸುತ್ತಿರಲಿಲ್ಲ. ವಚನಗಳನ್ನು ಬೋಧಿಸುತ್ತಿರಲಿಲ್ಲ. ಚಾಮರಸನ ‘ಪ್ರಭುಲಿಂಗ ಲೀಲೆ’, ಭೀಮಕವಿಯ ‘ಬಸವ ಪುರಾಣ’ಗಳನ್ನು ಪಠ್ಯವಾಗಿ ಬೋಧಿಸಲಾಗುತ್ತಿತ್ತು ಎಂಬ ಮಾಹಿತಿ ಇದೆ. ಇವುಗಳಿಗಿಂತ ‘ಜೈಮಿನಿ ಭಾರತ’ವನ್ನು ಪಠ್ಯವಾಗಿ ಬೋಧಿಸಲಾಗುತ್ತಿತ್ತು ಎಂಬುದು ಖಚಿತವಾಗಿದೆ. ರಾಯಚೂರು ಜಿಲ್ಲೆಯಲ್ಲಿ ಅನೇಕ ಹಿರಿಯ ತಲೆಮಾರಿನವರು ಈ ಕಾವ್ಯವನ್ನು ಲಿಂಗಾಯತ ಮಠಗಳ ಶಾಲೆಯಲ್ಲಿ ಓದಿದ್ದನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ. ಸರ್ಕಾರಿ ಶಾಲೆಗಳು ಬರುವ ತನಕ ಸಾಂಪ್ರದಾಯಿಕ ವಿದ್ಯಾಭ್ಯಾಸ ನಡೆಯುತ್ತಿದ್ದ ಮಠಗಳ ಶಾಲೆಯಲ್ಲಿ ಈ ‘ಜೈಮಿನಿ ಭಾರತ’ ಪಠ್ಯವಾಗಿತ್ತು. ವಿದ್ಯಾರ್ಥಿಗಳು ಈ ಪಠ್ಯವನ್ನು ಬಾಯಿ ಪಾಠ ಮಾಡುತ್ತಿದ್ದರು. ೭೦ರ ದಶಕದಲ್ಲಿ ನಾನು ಅನೇಕರ ಮನೆಗಳಲ್ಲಿ ಈ ಕಾವ್ಯವನ್ನು ನೋಡಿದ್ದೇನೆ. ತಮ್ಮ ವಿದ್ಯಾರ್ಥಿ ಕಾಲದಲ್ಲಿ ಪಠ್ಯವಾಗಿ ಓದಿದವರು ವಯಸ್ಸಾಗಿದ್ದರೂ ‘ಜೈಮಿನಿ ಭಾರತ’ವನ್ನು ತಮಗೆ ಬೇಕಾದ ಭಾಗವನ್ನು ಓದಿಕೊಳ್ಳುತ್ತಿದ್ದರು. ಮುದ್ರಣ ಆರಂಭವಾದ ಕಾಲದಲ್ಲಿ ಮೊದಲ ಮುದ್ರಣದ ಪ್ರತಿಗಳನ್ನು (ಕಲ್ಲಚ್ಚಿನ ಪ್ರತಿಗಳು) ಅನೇಕರ ಮನೆಯಲ್ಲಿ ನೋಡಲು ಸಿಗುತ್ತವೆ. ಲಿಂಗಾಯತ ಮಠಮಾನ್ಯಗಳಲ್ಲಿ ವೈದಿಕ ಧರ್ಮದ ಲಕ್ಷ್ಮೀಶ ಕವಿಯ ಈ ಕಾವ್ಯವನ್ನು ಯಾಕೆ ಓದುತ್ತಿದ್ದರು ಎಂಬುದು ಕುತೂಹಲದ ಸಂಗತಿಯಾಗಿದೆ. ವಚನಗಳನ್ನು, ಶೂನ್ಯ ಸಂಪಾದನೆಗಳನ್ನು, ಹರಿಹರನ ರಗಳೆಗಳನ್ನು, ಗಿರಿಜಾಕಲ್ಯಾಣವನ್ನು, ವೀರಶೈವ ಪುರಾಣಗಳನ್ನು ಕಲಿಸುವುದಕ್ಕಿಂತ ‘ಜೈಮಿನಿ ಭಾರತ’ವನ್ನು ತಪ್ಪದೇ ಕಲಿಸುತ್ತಿದ್ದರು. ಲಿಂಗಾಯತ ಪಠ್ಯಗಳು ಒಳಗೊಂಡಿರುವ ವಸ್ತು ಮತ್ತು ಕಥೆಗಳು ಜನಪ್ರಿಯವಾಗಿರಲಿಲ್ಲವೆ? ವ್ಯಾಕರಣ ಬದ್ಧವಾಗಿರ ಲಿಲ್ಲವೇ? ಅಥವಾ ಈ ಪಠ್ಯಗಳನ್ನು ಮುನ್ನೆಲೆಗೆ ತರಲು ಬಿಡದ ಶಕ್ತ ಸಮುದಾಯಗಳಿದ್ದವೆ? ಅಥವಾ ಲಿಂಗಾಯತ ಪಠ್ಯಗಳ ವಿಷಯ, ವಸ್ತು, ವೈಚಾರಿಕತೆ, ಪ್ರತಿಭಟನಾತ್ಮಕ ಅಂಶಗಳು ಜನಪ್ರಿಯವಾಗದೆ ಉಳಿದವೇ? ಇಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಆದರೆ ‘ಜೈಮಿನಿ ಭಾರತ’ ಪಠ್ಯ ಮಧ್ಯಕಾಲೀನ ದೇಶಿ ಛಂದಸ್ಸಿನಲ್ಲಿ ರಚನೆಯಾಗಿದೆ. ಷಟ್ಪದಿ ಕಾವ್ಯ ಪ್ರಕಾರ ನೆನಪಿನಲ್ಲಿ ಉಳಿಯುತ್ತದೆ. ಮುಖ್ಯವಾಗಿ ಮಹಾಭಾರತದ ಕಥೆ. ಅದರಲ್ಲೂ ಪಾಂಡವ-ಕೌರವರ ಕುರುಕ್ಷೇತ್ರ ಯುದ್ಧದ ಆನಂತರದ ಕಥೆಯಾಗಿದ್ದು, ಅದೂ ಸರ್ವವೀರರ ಕಥೆಗಳು ಒಂದಾದ ಮೇಲೆ ಒಂದು ಬರುವುದರಿಂದ ಓದುಗ-ಕೇಳುಗನಿಗೆ ಪ್ರಿಯವಾಗಿರಬೇಕು. ಜೊತೆಗೆ ನಾಟಕಗಳನ್ನು ನೋಡುವ ಮೂಲಕವೂ ಪ್ರಿಯವಾಗಿರಬೇಕು. ಈ ಕಾವ್ಯವನ್ನು ಬೋಧಿಸುವ ಪುರೋಹಿತರು ಕೃಷ್ಣಭಕ್ತಿ, ಎಷ್ಟೇ ವೀರರಾದರೂ ಕೃಷ್ಣನಿಗೆ ತಲೆ ಬಾಗುವ ಅರಸರ ಕಥೆಗಳನ್ನು ಮೆಚ್ಚಿಕೊಂಡಿರಬೇಕು. ಅನೇಕ ಕಾರಣಗಳಿಂದ ಮಧ್ಯಕಾಲೀನ ಸಂದರ್ಭದಲ್ಲಿ ‘ಜೈಮಿನಿ ಭಾರತ’ ಒಂದು ಜನಪ್ರಿಯ ಕಾವ್ಯವಾಗಿ ನಿಂತಿದೆ.

ಲಕ್ಷ್ಮೀಶ ಕವಿಯ ‘ಜೈಮಿನಿ ಭಾರತ’ ಕಾವ್ಯ ಪೂರ್ವ ನಿಯೋಜಿತ ವಿನ್ಯಾಸವನ್ನು ಹೊಂದಿದೆ. ಇದರ ಕಥನಕ್ರಮ ಸರಳವಾದದ್ದು. ಅಶ್ವಮೇಧ ಯಾಗದ ತಯಾರಿಯಿಂದ ಹಿಡಿದು, ಅಶ್ವಮೇಧ ಮುಗಿಯುವ ತನಕ ವರ್ಷದ ಅವಧಿಯೊಳಗೆ ನಡೆಯುವ ಕಥೆಯಿದೆ. ಕುದುರೆಯ ಚಲನೆ, ಅದರ ಹಿಂದೆ ಪಾಂಡವರು, ಕುದುರೆ ಕಟ್ಟುವ  ಅರಸರು, ಅವರ ಯುದ್ಧ, ಕೃಷ್ಣಭಕ್ತರಾದ ಅರಸರು ಯುದ್ಧದಲ್ಲಿ ಗೆದ್ದರೂ ಸೋತು ಕೃಷ್ಣನ ದರ್ಶನದಿಂದ ಮುಕ್ತಿ ಪಡೆದು ಪಾಂಡವರ ಅನುಯಾಯಿಗಳಾಗಿ ಯುದ್ಧದಲ್ಲಿ ಸೇರಿಕೊಳ್ಳುವುದು ಇಷ್ಟು ಕಥೆ- ಉಪಕಥೆಗಳು. ಕಥೆ-ಉಪಕಥೆಗಳಲ್ಲಿ ಎದ್ದು ಕಾಣುವ ಅಂಶಗಳೆಂದರೆ, ಸಮರ ವೀರ ಅರಸರು, ಅವರ ಯುದ್ಧದ ಪ್ರತಿಭೆ, ಕೃಷ್ಣನಿಗೆ ಭಕ್ತಿಯಿಂದ ತಲೆಬಾಗುವುದು. ಕಾವ್ಯದ ಓದುಗನಿಗೆ-ಕೇಳುಗನಿಗೆ ಇಲ್ಲಿ ನಡೆಯುವ ಯುದ್ಧಗಳು, ಹುಸಿ ಯುದ್ಧಗಳು ಅನ್ನಿಸಬಹುದು. ಕಾವ್ಯ ರಚಿಸುವ ಕವಿಗೆ ಸಿದ್ಧಗೊಂಡದ್ದನ್ನು ಕಟ್ಟುವಲ್ಲಿ ಯಾವ ಸಮಸ್ಯೆಗಳು ಎದುರಾಗದಿದ್ದರೆ ಅದರಲ್ಲಿ ಏನು ವಿಶೇಷ? ಎನ್ನುವ ಪ್ರಶ್ನೆ ಏಳುತ್ತದೆ. ಪಾಂಡವರ ತಲೆ ಕಾಯ್ವ ಕೃಷ್ಣನಿದ್ದಾನೆ. ಎದುರಾಳಿಗಳು ಕೃಷ್ಣಭಕ್ತರು. ಎಷ್ಟು ಪ್ರತಿರೋಧ ತೋರಿಸಿ ಗೆದ್ದರೂ ಅಂತಿಮವಾಗಿ ಕೃಷ್ಣ, ಆ ಮೂಲಕ ಪಾಂಡವರಿಗೆ ತಲೆಬಾಗಿ ಸೋಲನ್ನು ಒಪ್ಪಿಕೊಂಡು ನಂತರ ಪಾಂಡವರ ಬೆನ್ನಿಗೆ ನಿಲ್ಲುವುದು. ಇದರಲ್ಲಿ ಚೂರು ಹೆಚ್ಚು ಕಡಿಮೆಯಾಗುವುದಿಲ್ಲ.

ಇಂಥ ಸಿದ್ಧಗೊಂಡ ವಸ್ತುವಿನ ಕಾವ್ಯ ರಚನೆಗೂ ಮತ್ತು ಈ ವಸ್ತುವನ್ನೇ ನಾಟಕಗಳ ಮೂಲಕ ಅಭಿನಯಿಸುವ ರಂಗಭೂಮಿಗೂ ಅಂತರ್‌ಸಂಬಂಧವಿದೆ ಎಂದು ತೋರುತ್ತದೆ. ಕಾವ್ಯ ಮತ್ತು ರಂಗಭೂಮಿ ಒಂದನ್ನೊಂದು ಆಧರಿಸಿ ರಚನೆಗೊಂಡಿವೆ ಮತ್ತು ಬೆಳೆದಿವೆ ಎಂದು ಹೇಳಬಹುದು. ‘ಜೈಮಿನಿ ಭಾರತ’ ಕಾವ್ಯದಲ್ಲಿ ಕಾಣುವ ಉಪಕಥೆಗಳನ್ನು ನಾಟಕಗಳಾಗಿ ರಂಗಭೂಮಿಯಲ್ಲಿ ಅಭಿನಯಿಸಲಾಗುತ್ತಿತ್ತು. ಸಮರ ವೀರರು ತಮ್ಮ ಸೋಲು ನಿಶ್ಚಿತ ಎಂದು ತಿಳಿದಿದ್ದರೂ ರಂಗದ ಮೇಲೆ ತಮ್ಮ ಅಭಿನಯದಲ್ಲಿ ವೀರಾವೇಶದಿಂದ ಹೋರಾಡಿ, ತಮ್ಮ ಸಾಮರ್ಥ್ಯವನ್ನು ತೋರಿಸಿ ಕೊನೆಗೆ ಗೆದ್ದರೂ ಶರಣಾಗುವ ಸ್ಥಿತಿಗೆ ಬರುತ್ತಿದ್ದರು. ಪಾತ್ರದಾರಿ ಸೋಲು ನಿಶ್ಚಿತವೆಂದು ತಿಳಿದು ತನ್ನ ಅಭಿನಯದಲ್ಲಿ ವೀರತನ ತೋರಿಸಲು ಮರೆಯುವುದಿಲ್ಲ. ಹೀಗಾಗಿ  ವಸ್ತು, ಸ್ಥಿತಿ ಸಿದ್ಧಗೊಂಡದ್ದಾದರೂ ಅದು ತನ್ನ ಗತಿಯನ್ನು ಮರೆಯುತ್ತಿರಲಿಲ್ಲ. ಪ್ರದರ್ಶನದ ಎಲ್ಲ ಕಲೆಗಳಿಗೆ ಈ ಗುಣ ಇರುತ್ತದೆ. ಇದರಿಂದ ಸ್ಫೂರ್ತಿ ಗೊಂಡ ಕವಿಗಳು ಸಿದ್ಧ ಮಾದರಿಗಳನ್ನು ರಚಿಸುವಾಗಲೂ ಸೃಜನಶೀಲತೆಯನ್ನು ಉಳಿಸಿಕೊಂಡೇ ಮುನ್ನಡೆಯುತ್ತಿದ್ದರು. ಇಲ್ಲಿ ಕಾವ್ಯ ಮೊದಲೋ ನಾಟಕ ಮೊದಲೋ ಅನ್ನುವ ಪ್ರಶ್ನೆ ಎದುರಾದರೂ, ಅವೆರಡು ಕೊಡುಕೊಳೆಯಿಂದಲೇ ಸೃಷ್ಟಿಯಾಗಿವೆ ಎಂದು ತಿಳಿಯಬೇಕು. ಇದು ಮಧ್ಯಕಾಲೀನ ಅನನ್ಯತೆ ಎಂದು ಕಾಣುತ್ತದೆ.

‘ಜೈಮಿನಿ ಭಾರತ’ ಕಾವ್ಯದಲ್ಲಿ ವೈದಿಕ ನಿಲುವುಗಳಿವೆ. ಕಸುಬು ನಿರತ, ದುಡಿವ ವರ್ಗದ ಮಹಿಳೆಯರನ್ನು ಕವಿ ಒಳ್ಳೆಯ ಮನಸ್ಸಿನಿಂದ ಕಂಡಿಲ್ಲ. ಯುದ್ಧದ ಫಲಿತಾಂಶಗಳು ಏನೆಂದು ಅರಿವಿಗೆ ಬಂದಿದ್ದರೂ ಈ ಕಾವ್ಯದಲ್ಲಿ ಬರುವ ಉಪಕಥೆಗಳು ಸ್ವಾರಸ್ಯವಾಗಿವೆ. ಸುಧನ್ವ-ಪ್ರಭಾವತಿ ಪ್ರಕರಣ ಕುತೂಹಲಕವಾಗಿದೆ. ಚಂದ್ರಹಾಸನ ಕಥೆ ಮನಸ್ಸಿನಲ್ಲಿ ಉಳಿಯುತ್ತದೆ. ಕವಿಯ ಕಾವ್ಯದ ಶೈಲಿ ಮೆಚ್ಚಿಗೆಯಾಗುತ್ತದೆ.

* * *

‘ಜೈಮಿನಿ ಭಾರತ : ಸಾಂಸ್ಕೃತಿಕ ಮುಖಾಮುಖಿ’ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದ ಡಾ. ಶಾಂತಾ ಇಮ್ರಾಪುರ, ಡಾ. ಮೃತ್ಯುಂಜಯ ರುಮಾಲೆ, ಡಾ. ಕೆ. ಕೇಶವ ಶರ್ಮ, ಡಾ. ಕೆ.ವೈ. ನಾರಾಯಣ ಸ್ವಾಮಿ, ಡಾ. ಲೋಕೇಶ್ ಅಗಸನಕಟ್ಟೆ, ಶ್ರೀ ಪೃಥ್ವಿರಾಜ ಕವತ್ತಾರ, ಡಾ. ಮಹಾಲಿಂಗ ಭಟ್, ಡಾ. ಬಿ.ಎ. ತಾರಕೇಶ್ವರ ಅವರು ತಮ್ಮ ಹೊಸ ರೀತಿಯ ಆಲೋಚನೆಗಳಿಂದ ಈ ಕಾವ್ಯವನ್ನು ಅಧ್ಯಯನ ಮಾಡಿರುವುದು ಅವರುಗಳ ಲೇಖನಗಳಲ್ಲಿ ಕಾಣುತ್ತದೆ. ಈ ಪಠ್ಯವನ್ನು ಭಿನ್ನವಾಗಿ ಗ್ರಹಿಸಲು ಸೂಚನೆಗಳನ್ನು ನೀಡಿದ್ದಾರೆ. ಇವರ ಚಿಂತನೆಗಳಿಂದ ಈ ಕಾವ್ಯದ ಓದಿಗೆ ಹೊಸ ಆಯಾಮ ಒದಗಿದಂತಾಗಿದೆ. ಕಾವ್ಯದ ಓದು ಮತ್ತು ತಿಳುವಳಿಕೆ ಈ ‘ಜೈಮಿನಿ ಭಾರತ : ಸಾಂಸ್ಕೃತಿಕ ಮುಖಾಮುಖಿ’ಯಿಂದ ವಿಸ್ತಾರ ಗೊಳ್ಳುತ್ತದೆ.