ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು, ಕಳೆದ ಹತ್ತು ವರ್ಷಗಳಿಂದ ‘ಸಾಹಿತ್ಯ ಪಠ್ಯಗಳ ಸಾಂಸ್ಕೃತಿಕ ಮುಖಾಮುಖಿ’ ಎಂಬ ಯೋಜನೆಯನ್ನು ರೂಪಿಸಿ, ಅದನ್ನು ಕ್ರಿಯಾಶೀಲ ವಾಗಿ ನಡೆಸಿಕೊಂಡು ಬರುತ್ತಿದೆ. ಇದು ಸರಣಿ ಯೋಜನೆಯಾಗಿ ಬೆಳೆದಿದೆ. ವಿಭಾಗವು ಒಂದು ಮುಖ್ಯಪಠ್ಯವನ್ನು ಎತ್ತಿಕೊಂಡು, ಆ ಪಠ್ಯದ ಮೇಲಿನ ಇದುವರೆಗಿನ ತಿಳುವಳಿಕೆಯನ್ನು ಗಮನಿಸಿ, ಆ ಪಠ್ಯವನ್ನು ಈ ಹೊತ್ತಿನ ತಿಳುವಳಿಕೆಯ ನೆಲೆಯಿಂದ ಹೇಗೆ ಗ್ರಹಿಸಬೇಕು ಮತ್ತು ಆ ಪಠ್ಯವನ್ನು ಹೇಗೆ ಸಮಕಾಲೀನಗೊಳಿಸಬೇಕು ಎಂಬ ಆಶಯದೊಂದಿಗೆ ಪ್ರಸ್ತಾವನೆ ಯನ್ನು ರೂಪಿಸಲಾಗುತ್ತದೆ. ವಿಭಾಗದ ಸದಸ್ಯರು, ನಾಡಿನ ಸಮಾನಾಸಕ್ತ ವಿದ್ವಾಂಸರನ್ನು ಕೂಡಿಕೊಂಡು ಸಂವಾದ ನಡೆಸಲಾಗುತ್ತದೆ. ವಿಭಾಗದ ಆಶಯವೇ ಅಂತಿಮವಲ್ಲ. ಅದನ್ನು ವಿಸ್ತರಿಸುವ ಜವಾಬ್ದಾರಿಯನ್ನು ಸಂವಾದಕರು ಮಾಡುತ್ತ ಬಂದಿದ್ದಾರೆ. ಒಟ್ಟಿನಲ್ಲಿ, ಒಂದು ಪಠ್ಯದ ನಮ್ಮ ಕಾಲದ ಓದನ್ನು ದಾಖಲಿಸುವುದು ಈ ಯೋಜನೆಯ ಗುರಿಯಾಗಿದೆ. ಇದರ ಫಲವಾಗಿ ‘ಜೈಮಿನಿ ಭಾರತ : ಸಾಂಸ್ಕೃತಿಕ ಮುಖಾಮುಖಿ’ ಕೃತಿ ಈಗ ಪ್ರಕಟವಾಗುತ್ತಿದೆ.

ಈ ಕೃತಿಯಲ್ಲಿರುವ ಲೇಖನಗಳು ‘ಜೈಮಿನಿ ಭಾರತ’ ಕಾವ್ಯವನ್ನು ಕುರಿತು ಹೊಸ ತಿಳುವಳಿಕೆಯನ್ನು ನೀಡುತ್ತಿವೆ. ಈ ಪಠ್ಯವನ್ನು ತಮ್ಮದೇ ಆದ ಸೈದ್ಧಾಂತಿಕ ನೆಲೆಯಲ್ಲಿ ವಿದ್ವಾಂಸರು ಗ್ರಹಿಸಿದ್ದಾರೆ. ಇದು ಈ ಪಠ್ಯದ ಇದುವರೆಗಿನ ಓದನ್ನು ಅನುಲಕ್ಷಿಸಿ, ಪಠ್ಯದಿಂದ ಹೊಸ ತಿಳುವಳಿಕೆಯನ್ನು ಕಟ್ಟಿಕೊಡಲಾಗಿದೆ. ಪಠ್ಯದ ತಿಳುವಳಿಕೆ ಎಂದರೆ ಅದು ಓದುಗನ ತಿಳುವಳಿಕೆ ಎಂದೇ ಅರ್ಥ. ಈ ಪಠ್ಯ ಕನ್ನಡ ಸಾಂಸ್ಕೃತಿಕ ವಲಯದಲ್ಲಿ ಉಂಟುಮಾಡಿದ ಪರಿಣಾಮಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ‘ಜೈಮಿನಿ ಭಾರತ’ ಕಾವ್ಯ ಮತ್ತು ಯಕ್ಷಗಾನದ ಅಂತರ್ ಸಂಬಂಧವನ್ನು ಅಧ್ಯಯನಕ್ಕೆ ಒಳಪಡಿಸಿದಂತೆ, ಆಧುನಿಕ ಕವಿಗಳಾದ ಬೇಂದ್ರೆ, ಕುವೆಂಪು ಅವರ ಮೇಲೆ ಈ ಪಠ್ಯ ಮಾಡಿದ ಪ್ರಭಾವವನ್ನು ಅಧ್ಯಯನಕ್ಕೆ ಒಳಗು ಮಾಡಿದೆ. ಪಶ್ಚಿಮದ ಮಹಾಕಾವ್ಯದ ಜತೆ ಈ ಕಾವ್ಯವನ್ನು ಜತೆಗಿರಿಸಿ ಮಾಡಿದ ಅಧ್ಯಯನ ಕುತೂಹಲಕರವಾಗಿದೆ. ಒಟ್ಟಿನಲ್ಲಿ ‘ಜೈಮಿನಿ ಭಾರತ’ ಕಾವ್ಯವನ್ನು ಹೊಸ ದೃಷ್ಟಿಕೋನದಿಂದ ಅಥವಾ ಭಿನ್ನ ಆಯಾಮಗಳಲ್ಲಿ ಗ್ರಹಿಸಿದ ವಿಧಾನವನ್ನು ಇಲ್ಲಿ ಕಾಣುತ್ತೇವೆ. ಓದುಗರಿಗೆ ಇದು ಅನುಕೂಲವಾದರೆ ಈ ಯೋಜನೆ ಫಲಕಾರಿಯಾದಂತೆ ಸರಿ.

ಈ ‘ಜೈಮಿನಿ ಭಾರತ : ಸಾಂಸ್ಕೃತಿಕ ಮುಖಾಮುಖಿ’ ಸಂವಾದ ಕಾರ್ಯಕ್ರಮವು ದಿನಾಂಕ ೨೫ ಮತ್ತು ೨೬ ಆಗಸ್ಟ್, ೨೦೦೭ರಂದು ಕೊಪ್ಪಳದಲ್ಲಿ ನಡೆಯಿತು. ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಮತ್ತು ಶ್ರೀ ಗವಿಸಿದ್ದೇಶ್ವರ ಕಾಲೇಜು, ಕೊಪ್ಪಳ ಸಹಯೋಗದೊಂದಿಗೆ ಈ ವಿಚಾರ ಸಂಕಿರಣವು ಅರ್ಥಪೂರ್ಣವಾಗಿ ನಡೆಯಿತು. ಈ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲು ಡಾ. ಶಾಂತಾ ಇಮ್ರಾಪುರ, ಡಾ. ಮೃತ್ಯುಂಜಯ ರುಮಾಲೆ, ಡಾ. ಕೆ. ಕೇಶವಶರ್ಮ, ಡಾ. ವೈ.ಕೆ. ನಾರಾಯಣ ಸ್ವಾಮಿ, ಡಾ. ಲೋಕೇಶ ಅಗಸನಕಟ್ಟೆ, ಶ್ರೀ ಪೃಥ್ವಿರಾಜ ಕವತ್ತಾರು, ಡಾ. ಮಹಾಲಿಂಗ ಭಟ್, ಡಾ. ಬಿ.ಎ. ತಾರಕೇಶ್ವರ ಈ ವಿದ್ವಾಂಸರು ಕೊಪ್ಪಳಕ್ಕೆ ಬಂದಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಮತ್ತು ನಾಡಿನ ಕವಿ, ಹೋರಾಟಗಾರ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಅವರು ಈ ವಿಚಾರ ಸಂಕಿರಣವನ್ನು ತಮ್ಮ ಅಧ್ಯಾಪಕ ಮಿತ್ರರೊಂದಿಗೆ ನಿಂತು ನಡೆಸಿಕೊಟ್ಟರು. ವಿದ್ಯಾರ್ಥಿಗಳು ಪ್ರಯೋಜನ ಪಡೆಯುವಂತೆ ಮಾಡಿದರು. ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ಛೇರ್ಮನ್ ಶ್ರೀ ಫಕೀರಪ್ಪ ಗಡ್ಡಿ, ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಚಂಪಾಲಾಲ್ ಜಿ. ಮೆಹತಾ ಮತ್ತು ಶ್ರೀ ಬಸವರಾಜ ಪೂಜಾರ, ಡಾ. ಪಾರ್ವತಿ ಪೂಜಾರ, ಶ್ರೀ ನಾಗವರ್ಮ ಜಿ.ಎಚ್., ಶ್ರೀ ಪ್ರಕಾಶ ಬಳ್ಳಾರಿ, ಡಾ. ಸಿದ್ಲಿಂಗಪ್ಪ ಕೊಟ್ನಿಕಲ್ ಇವರನ್ನೆಲ್ಲ ವಿಭಾಗ ಸ್ಮರಿಸುತ್ತದೆ.

ಈ ಸಂಪಾದನ ಕೃತಿಯಲ್ಲಿ ತಮ್ಮ ಮೌಲಿಕ ಲೇಖನ ಸೇರಿಸಿಕೊಳ್ಳಲು ಅನುಮತಿ ನೀಡಿದ ಡಾ. ಸಿ.ಎನ್. ರಾಮಚಂದ್ರನ್ ಹಾಗೂ ದಿ. ಕೀರ್ತಿನಾಥ ಕುರ್ತಕೋಟಿ ಅವರ ಸಂಬಂಧಿಕರಿಗೆ ವಿಶೇಷ ಕೃತಜ್ಞತೆಗಳು.

ವಿಭಾಗದ ಅಧ್ಯಾಪಕರಾದ ಡಾ. ರಹಮತ್ ತರೀಕೆರೆ, ಡಾ. ಬಿ.ಎಂ. ಪುಟ್ಟಯ್ಯ ಅವರು  ಬೌದ್ದಿಕ ನೆರವನ್ನು ನೀಡಿದ್ದಾರೆ. ಸಂಶೋಧನ ವಿದ್ಯಾರ್ಥಿಗಳಾದ ಡಾ. ಶೈಲಜಾ ಪವಾಡ ಶೆಟ್ರು, ಶ್ರೀ ತುಕಾರಾಮ್ ನಾಯ್ಕ, ಶಿವಪ್ಪ ಕೋಳೂರು ಅವರಿಗೆ ಕೃತಜ್ಞತೆಗಳು.

ಸಾಹಿತ್ಯ ಅಧ್ಯಯನ ವಿಭಾಗದ ಈ ಸರಣಿ ಯೋಜನೆಯನ್ನು ಮುಂದುವರೆಸಿಕೊಂಡು ಹೋಗಲು ಪ್ರೋತ್ಸಾಹಿಸಿದ ಕುಲಪತಿ ಡಾ. ಎ. ಮುರಿಗೆಪ್ಪ ಅವರನ್ನು, ಅಧ್ಯಯನಾಂಗದ ನಿರ್ದೇಶಕರಾದ ಡಾ. ಪಾಂಡುರಂಗಬಾಬು ಅವರನ್ನು, ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ನೆನೆಯುತ್ತೇನೆ.

ಎಂದಿನಂತೆ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ, ಕಲಾವಿದ ಶ್ರೀ ಕೆ.ಕೆ. ಮಕಾಳಿ, ಅಕ್ಷರ ಸಂಯೋಜನೆ ಮಾಡಿದ ಶ್ರೀ ಜೆ. ಶಿವಕುಮಾರ ಅವರನ್ನೆಲ್ಲ ಮರೆಯಲು ಆಗದು.

‘ಜೈಮಿನಿ ಭಾರತ  : ಸಾಂಸ್ಕೃತಿಕ ಮುಖಾಮುಖಿ’ ಕೃತಿ ಓದುಗರಿಗೆ ಪ್ರಯೋಜನವಾಗಲೆಂದು ಆಶಿಸುತ್ತೇನೆ.

ಅಮರೇಶ ನುಗಡೋಣಿ