ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ಕನ್ನಡದ ಮಹತ್ವದ ಕೃತಿಗಳ ಬಗ್ಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸಿ, ಅಲ್ಲಿ ಮಂಡಿತವಾದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತ ಬಂದಿದೆ. ಕಳೆದ ೧೦ ವರುಷಗಳಿಂದ ಈ ಸರಣಿ ಸಾಗಿ ಬಂದಿದೆ. ಪ್ರಸ್ತುತ ಈ ಸಂಕಲನ ಕೊಪ್ಪಳದಲ್ಲಿ ಲಕ್ಷ್ಮೀಶನ ‘ಜೈಮಿನಿ ಭಾರತ’ದ ಮೇಲೆ ನಡೆಸಿದ ಸಂವಾದ ಕಾರ್ಯ ಕ್ರಮದ ಫಲ.

ಸಾಹಿತ್ಯ ಅಧ್ಯಯನಗಳು ಹೇಗೆ ನಡೆದಿವೆ, ಹೇಗೆ ನಡೆಯುತ್ತಿವೆ ಮತ್ತು ಹೇಗೆ ನಡೆಯಬಹುದು ಎಂಬುದನ್ನು ಪರಿಶೀಲಿಸಲು ಈ ಯೋಜನೆ ಅತ್ಯಂತ ಉಪಯುಕ್ತವಾದುದು. ಈ ಬಗೆಯ ಅಧ್ಯಯನವನ್ನು ವ್ಯಕ್ತಿಕೇಂದ್ರಿತ ಪ್ರಯತ್ನಗಳೂ ನಡೆಸಬಹುದು. ಇದಲ್ಲದೆ ಇದನ್ನು ಒಂದು ಸಾಮೂಹಿಕ ಹಾಗೂ ಸಾಂಘಿಕ ಪ್ರಯತ್ನದ ಭಾಗವಾಗಿಯೂ ನಡೆಸಬಹುದು. ಇಡಿಯಾಗಿ ಕೃತಿ ಸಮೂಹವನ್ನು ಕೇಂದ್ರೀಕರಿಸಿ ಅಧ್ಯಯನ ಮಾಡುವುದು ಒಂದು ಸಾಧ್ಯತೆಯಾದರೆ, ಸ್ವತಂತ್ರವಾಗಿ ಮತ್ತು ನಿರ್ದಿಷ್ಟವಾಗಿ ಒಂದೊಂದು ಕೃತಿಯನ್ನು ಅಧ್ಯಯನ ಮಾಡುವುದು ಮತ್ತೊಂದು ಸಾಧ್ಯತೆ. ಈ ಎರಡನೇ ದಾರಿಯನ್ನೆ ಈ ಮಾಲಿಕೆಯಲ್ಲಿ ಆಯ್ಕೆ ಮಾಡಿಕೊಳ್ಳ ಲಾಗಿದೆ. ಇದು ನಮ್ಮ ವಿಭಾಗದ ಸಾಂಸ್ಥಿಕ ಜವಾಬ್ದಾರಿಯೂ ಹೌದು. ಈ ಜವಾಬ್ದಾರಿಯನ್ನು ಕಳೆದ ೧೦ ವರುಷಗಳಿಂದ ನಿರ್ವಹಿಸುತ್ತ ಬಂದಿದ್ದೇವೆ.

ಸಾಹಿತ್ಯ ಅಧ್ಯಯನವು ಎದುರಿಸುತ್ತಿರುವ ಸಮಸ್ಯೆಯ ಸ್ವರೂಪವನ್ನು ವಿವರಿಸಿಕೊಳ್ಳುವುದು ಮತ್ತು ಅದಕ್ಕೆ ಹೊಸ ದಾರಿಗಳನ್ನು ಕಂಡುಕೊಳ್ಳುವುದು ಈ ಮಾಲಿಕೆಯ ಮಹತ್ವದ ಆಶಯ ವಾಗಿದೆ. ಈ ಸ್ವರೂಪ ತಿಳಿಯಬೇಕಾದರೆ ಕೇವಲ ಸಾಹಿತ್ಯ ಶಿಸ್ತಿನವರು ಮಾತ್ರ ಇದರಲ್ಲಿ ತೊಡಗುವುದು ಏಕಮುಖಿ ಪ್ರಯತ್ನವಾಗುತ್ತದೆ ಎಂಬುದು ನಮ್ಮ ಸಾಮಾನ್ಯ ನಂಬಿಕೆ. ಹಾಗಾಗಿ ಇಡೀ ಮಾಲಿಕೆಯಲ್ಲಿ ವೃತ್ತಿಪರ ಸಾಹಿತ್ಯ ಅಧ್ಯಯನಕಾರರನ್ನು ಮಾತ್ರ ತೊಡಗಿಸಿ ಕೊಳ್ಳದೆ, ಅವರ ಜೊತೆಗೆ ಬೇರೆ ಬೇರೆ ಜ್ಞಾನಶಿಸ್ತಿನವರನ್ನು ತೊಡಗಿಸಿಕೊಳ್ಳಲಾಗಿದೆ. ಇವರೆಲ್ಲ ಒಂದು ನಿರ್ದಿಷ್ಟ ಸಾಹಿತ್ಯ ಕೃತಿಯನ್ನು ವಿವಿಧ ಕೋನಗಳಿಂದ ಮತ್ತು ಅವರವರ ಜ್ಞಾನಶಿಸ್ತುಗಳಿಂದ ಅಧ್ಯಯನ ಮಾಡುವುದೆ ಆಸಕ್ತಿದಾಯಕ ಕೆಲಸವಾಗಿ ಕಾಣುತ್ತಿದೆ.

ಇವತ್ತು ಸಾಹಿತ್ಯ ಅಧ್ಯಯನ ಎಂಬುದು ಕೇವಲ ‘ಶುದ್ಧ ಸಾಹಿತ್ಯಕ ಮಾನದಂಡ’ಗಳ ಮೂಲಕ ನಡೆಯುತ್ತಿಲ್ಲ. ಸಾಹಿತ್ಯದ ರಚನೆ, ಅದರ ಸಂವಹನ, ಅದರ ಓದು, ಅದರ ಪ್ರಕಾರ ಪಲ್ಲಟ, ಹಾಗೂ ಅಧ್ಯಯನ ಬಹಳ ವಿಸ್ತಾರವಾಗಿದೆ ಮತ್ತು ಸಂಕೀರ್ಣವಾಗಿದೆ. ಈ ವಿಸ್ತಾರ ಮತ್ತು ಸಂಕೀರ್ಣತೆಯ ಸ್ವರೂಪವನ್ನು ಸಮಾಜದ ವಿವಿಧ ವರ್ಗ ಹಿತಾಸಕ್ತಿಗಳು ತಮ್ಮ ದೃಷ್ಟಿಧೋರಣೆಗೆ ಅನುಗುಣವಾಗಿ ಬಳಸಿಕೊಳ್ಳುತ್ತಿವೆ ಹಾಗೂ ವ್ಯಾಖ್ಯಾನಿಸುತ್ತಿವೆ. ಕಳೆದ ಶತಮಾನದ ೯೦ರ ದಶಕದ ನಂತರ ಶುರುವಾದ ಈ ಪ್ರಕ್ರಿಯೆ ಸಾಹಿತ್ಯ ಅಧ್ಯಯನಗಳ ಮುಂದೆ ಬಲವಾದ ತಾತ್ವಿಕ ಸವಾಲುಗಳನ್ನು ನಿರ್ಮಾಣ ಮಾಡಿದೆ. ಈ ಸೂಕ್ಷ್ಮವಾದ ಎಚ್ಚರಿಕೆಯೇ ಈ ಮಾಲಿಕೆಯನ್ನು ಆರಂಭಿಸಲು ನಮಗೆ ಪರೋಕ್ಷ ಪ್ರೇರಣೆಯಾಗಿದೆ.

ಸಾಹಿತ್ಯವನ್ನು ಆಸ್ವಾದನೆಗಾಗಿ ಅಧ್ಯಯನ ಮಾಡುವ ಮತ್ತು ನೈತಿಕ ಮೌಲ್ಯಗಳ ಕೈಪಿಡಿ ಎಂದು ತೀರ್ಮಾನಿಸುವ ಅಧ್ಯಯನಗಳು ಸಾಹಿತ್ಯ ಅಧ್ಯಯನಕಾರರಿಗೆ ಪ್ರಯೋಜನಕಾರಿಯಾಗಿ ಕಾಣುತ್ತಿಲ್ಲ. ಸಾಹಿತ್ಯ ಅಧ್ಯಯನ ಎಂಬುದು ಸಾಮಾಜಿಕ ಅಧ್ಯಯನದ ಒಂದು ಭಾಗ ಎಂಬುದು ಒಂದು ಬಗೆಯಲ್ಲಿ ಇವತ್ತು ಒಪ್ಪಿತ ವಿಧಾನವಾಗಿದೆ. ಸಾಮಾಜಿಕ ಒತ್ತಡಗಳು ಹಾಗೂ ಸಾಹಿತ್ಯ ಅಧ್ಯಯನದ ಸಾಮಾಜಿಕ ಹೊಣೆಗಾರಿಕೆಯ ಅಘೋಷಿತ ಪ್ರಶ್ನೆಗಳು ಈ ವಿಧಾನದ ಹಿಂದೆ ಬಲವಾಗಿ ಕೆಲಸ ಮಾಡಿವೆ. ಪರಿಣಾಮವಾಗಿ ಸಾಹಿತ್ಯದ ನಿರೂಪಣೆಯ ಚರ್ಚೆಯನ್ನು ಸ್ವಲ್ಪಮಟ್ಟಿಗೆ ಹಿಂದೆ ಸರಿಸಿ, ಅದರ ಜಾಗದಲ್ಲಿ ಸಾಹಿತ್ಯದ ಆಶಯದ ಪ್ರಶ್ನೆಗಳನ್ನು ಮುಂಚೂಣಿಗೆ ತರಲಾಗಿದೆ. ಈ ಪ್ರಶ್ನೆಗಳನ್ನು ಬೇರೆ ಪದಗಳಲ್ಲಿ ‘ಸಾಂಸ್ಕೃತಿಕ ಪ್ರಶ್ನೆಗಳು’ ಎಂಬುದಾಗಿ ವಿವರಿಸಿಕೊಳ್ಳಲಾಗಿದೆ. ಈ ಬಗೆಯ ಪ್ರಯತ್ನಗಳು ಒಂದು ಕಡೆ ಸಾಹಿತ್ಯ ಪಠ್ಯವನ್ನು ಅಧ್ಯಯನದ ಸಂದರ್ಭದಲ್ಲಿ ವಿಸ್ತರಿಸಿವೆ ಹಾಗೂ ಸಂಕೀರ್ಣಗೊಳಿಸಿವೆ. ಸಾಹಿತ್ಯವನ್ನು ಅಧ್ಯಯನ ಮಾಡುವಾಗ ಕೇಳಲೇಬೇಕಾಗಿದ್ದ ಮತ್ತು ಹತ್ತಿಕ್ಕಲ್ಪಟ್ಟಿದ್ದ ಮುಖ್ಯ ಸಾಮಾಜಿಕ ಪ್ರಶ್ನೆಗಳನ್ನು ಮುಂಚೂಣಿಗೆ ತಂದಿವೆ. ಆದರೆ ಮತ್ತೊಂದು ಕಡೆ ಸಾಹಿತ್ಯ ಅಧ್ಯಯನ ವಿಧಾನವನ್ನು ಸ್ಥೂಲ, ಸರಳ ಮತ್ತು ನೇರಗೊಳಿಸಿವೆ. ಪರಿಣಾಮವಾಗಿ ‘ಸಾಹಿತ್ಯಕ ವಾಸ್ತವವು ಲೋಕ ವಾಸ್ತವದ ಯಥಾವತ್ ದಾಖಲೆ’ ಎಂದು ಯಾಂತ್ರಿಕವಾಗಿ ನಂಬಲಾಗುತ್ತಿದೆ. ಈ ಬಗೆಯ ಗ್ರಹಿಕೆಯು ‘ಸಾಹಿತ್ಯಕ ವಾಸ್ತವ ಮತ್ತು ಲೋಕ ವಾಸ್ತವ’ಗಳ ನಡುವಿನ ದ್ವಂದ್ವಾತ್ಮಕ ಸಂಬಂಧವನ್ನು ಅರಿಯದಂತೆ ಮಾಡಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಸಾಹಿತ್ಯವನ್ನು ಒಂದು ಪ್ರಕ್ರಿಯೆ ಎಂದು ನೋಡಬೇಕಾಗಿದ್ದ ಗ್ರಹಿಕೆಗೆ ಸಿಗಬೇಕಾದ ಮಹತ್ವ ಸಿಗದೇ ಹೋಗಿದೆ.

ಈ ಮಾಲಿಕೆಯಲ್ಲಿ ಮೇಲೆ ಚರ್ಚಿಸಿದ ಪ್ರಶ್ನೆಗಳು ಒಂದಿಲ್ಲ ಒಂದು ಬಗೆಯಲ್ಲಿ ನಮಗೆ ಎದುರಾಗುತ್ತಲೆ ಬಂದಿವೆ. ಈ ಪ್ರಶ್ನೆಗಳು ಮೇಲಿಂದ ಮೇಲೆ ಎದುರಾಗುತ್ತಿರುವುದು ಹಾಗೂ ಈ ಮಾಲಿಕೆಯಲ್ಲಿ ಬೇರೆ ಬೇರೆ ಜ್ಞಾನಶಿಸ್ತಿನವರು ತೊಡಗಿರುವುದು – ಈ ಕಾರಣಗಳಿಂದ ಈ ಸರಣಿ ಸಾಹಿತ್ಯ ಅಧ್ಯಯನವನ್ನು ಜಡಗೊಳಿಸಲಿಲ್ಲ. ಪಠ್ಯದಿಂದ ಪಠ್ಯಕ್ಕೆ ಈ ಮಾಲಿಕೆಯ ಅಧ್ಯಯನ, ಚರ್ಚೆ ಹಾಗೂ ಸಂವಾದಗಳು ಸಾಹಿತ್ಯ ಅಧ್ಯಯನದ ಹಲವು ಸಾಧ್ಯತೆಗಳನ್ನು, ವಿಭಿನ್ನ ದಾರಿಗಳನ್ನು ತೋರಿಸುತ್ತಲೆ ಸಾಗಿವೆ. ಇದು ಈ ಮಾಲಿಕೆಯ ಸಕಾರಾತ್ಮಕ ಆಯಾಮ ವಾಗಿದೆ. ಹಾಗಾಗಿಯೇ ಈ ಸರಣಿಗೆ ಕನ್ನಡದ ಬೌದ್ದಿಕ ವಲಯದಲ್ಲಿ ಮಹತ್ವದ ಬೇಡಿಕೆ ಬಂದಿದೆ.

ಪ್ರಸ್ತುತ ಲಕ್ಷ್ಮೀಶನ ‘ಜೈಮಿನಿ ಭಾರತ’ವು ಅದರ ನಿರ್ಮಾಣ, ವಸ್ತು, ನಿರೂಪಣ ಕ್ರಮ, ಸಂವಹನ, ಅದರ ಓದು, ಅದರ ಪ್ರಕಾರ ಪಲ್ಲಟ, ಅದರ ಶೋತೃವರ್ಗ ಹಾಗೂ ಅದರ ವಿವಿಧ ಅಧ್ಯಯನಗಳು ಇವೆಲ್ಲವೂ ಈ ಸಂವಾದದಲ್ಲಿ ಮಹತ್ವದ ಚರ್ಚೆಗೆ ಒಳಗಾಗಿವೆ. ಏಕಾಂಗಿಯಾಗಿ ಓದಿಕೊಳ್ಳಬೇಕಾದ ಸಾಹಿತ್ಯ ಪಠ್ಯವೊಂದು ಶೋತೃ ಸಮುದಾಯದಲ್ಲಿ ಕೇಳಿಸಿ ಕೊಳ್ಳಬೇಕಾದ ಬದಲಾವಣೆಗೆ ಯಾಕೆ ಒಳಗಾಗುತ್ತದೆ ಎಂಬುದು ಬಹಳ ಮುಖ್ಯವಾದ ಪ್ರಶ್ನೆ. ಈ ಹಿಂದಿನ ಪಂಪ, ರನ್ನರ ಕೃತಿಗಳಾಗಲಿ ಇಲ್ಲವೆ ವಚನಗಳೇ ಆಗಲಿ ಈ ಮಾದರಿಯಲ್ಲಿ ಗುಂಪಿನಲ್ಲಿ ಕೇಳಿಸಿಕೊಳ್ಳಬೇಕಾದ ಅವಕಾಶಕ್ಕೆ ಯಾಕೆ ತೆರೆದುಕೊಳ್ಳಲಿಲ್ಲ ಎಂಬ ಪ್ರಶ್ನೆ ಮುಖ್ಯವಾದುದು. ಇದು ‘ಜೈಮಿನಿ ಭಾರತ’ ಕೃತಿಯ ವಸ್ತುವಿನಲ್ಲಿದೆಯೊ, ಕೃತಿಯ ಆಶಯ ದಲ್ಲಿದೆಯೊ ಅಥವಾ ನಿರೂಪಣೆಯ ಕ್ರಮದಲ್ಲಿದೆಯೊ ಎಂಬ ಪ್ರಶ್ನೆಯನ್ನು ಎತ್ತಬೇಕಾಗಿದೆ. ಜೊತೆಗೆ ಜೈಮಿನಿ ಭಾರತವು ಯಾಕೆ ಬಹಳಷ್ಟು ಯಕ್ಷಗಾನ ಕೃತಿಗಳಿಗೆ ಆಕರವಾಯಿತು ಎಂಬುದೂ ಕೂಡ ಮುಖ್ಯ ಪ್ರಶ್ನೆಯೆ. ಕೇಳಿಸಿಕೊಳ್ಳುವ ಕೃತಿಯೊಂದನ್ನು ಏಕಾಂಗಿಯಾಗಿ ಓದಿಕೊಂಡಾಗ ಓದುಗರು/ಅಧ್ಯಯನಕಾರರು ಕಳೆದುಕೊಳ್ಳುವುದೇನು ಹಾಗೂ ಪಡೆದು ಕೊಳ್ಳುವುದೇನು ಎಂಬುದೂ ಕೂಡ ಮುಖ್ಯವಾದ ಪ್ರಶ್ನೆಯೇ. ಪ್ರಸ್ತುತ ಸಂಕಲನದ ಪ್ರಬಂಧ ಕಾರರು ಈ ಎಲ್ಲ ಪ್ರಶ್ನೆಗಳನ್ನು ವಿವರಿಸಿಕೊಂಡಿರುವ ಕ್ರಮ ಹಾಗೂ ಅವುಗಳ ಜೊತೆಯಲ್ಲಿ ವೈಚಾರಿಕವಾಗಿ ಆಲೋಚಿಸಿರುವ ವಿಧಾನ ಗಮನ ಸೆಳೆಯುವಂತಿದೆ.

ಈ ಸಂವಾದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ, ನಂತರ ಈ ಲೇಖನಗಳನ್ನು ಕಷ್ಟಪಟ್ಟು ಸಂಕಲಿಸಿರುವ ಗೆಳೆಯ ಡಾ. ಅಮರೇಶ ನುಗಡೋಣಿ ಅವರಿಗೆ, ವಿಭಾಗದ ಎಲ್ಲ ಸದಸ್ಯರಿಗೆ, ವಿಭಾಗದಲ್ಲಿ ಆಡಳಿತ ಸಿಬ್ಬಂದಿಯಾಗಿದ್ದ ಶ್ರೀ ಶಿವಪ್ಪ ಕೋಳೂರು ಅವರಿಗೆ, ವಿಭಾಗದ ಸಂಶೋಧನ ವಿದ್ಯಾರ್ಥಿಗಳಿಗೆ ವಂದನೆಗಳು.

ಡಾ. ಬಿ.ಎಂ. ಪುಟ್ಟಯ್ಯ
ಮುಖ್ಯಸ್ಥರು