ಹಳೆಗನ್ನಡ ಹಾಗೂ ನಡುಗನ್ನಡ ಕಾವ್ಯಗಳಲ್ಲಿ ನಮಗೆ ತಪ್ಪದೆ ಎದುರಾಗುವ ಹಲವು ವರ್ಣನೆಗಳಲ್ಲಿ ನಗರ ವರ್ಣನೆಯೂ ಒಂದು. ಕಾವ್ಯ ರಚನೆಯ ಒಂದು ಪ್ರಮುಖ ತತ್ವದಂತೆ ಕವಿಗಳು ಇದನ್ನು ಪಾಲಿಸುತ್ತಾ ಬಂದಿರುವುದಕ್ಕೆ ಸ್ವೀಕೃತ ಶೈಲಿಯೇ ಪ್ರಮುಖ ಕಾರಣವೆಂಬುದು ನಮಗೆಲ್ಲಾ ತಿಳಿದಿದೆ. ಸಂಸ್ಕೃತದಿಂದ ಚಂಪೂಮಾದರಿಯನ್ನು ಸ್ವೀಕರಿಸಿದ ತತ್‌ಕ್ಷಣವೆ ಆ ಮಾದರಿಯಲ್ಲಿ ರಚಿಸಲೇಬೇಕಾದ ಅನಿವಾರ‍್ಯತೆಗೆ ಒಳಗಾಗಿ ಇಂಥಾ ವರ್ಣನೆಗಳು ಬಂದಿವೆ. ಹೀಗೆ ಸ್ವೀಕಾರ ಮಾಡಿದ್ದರಿಂದ ಹಲವು ಸೊಗಸಾದ ವರ್ಣನೆಗಳು ಕನ್ನಡ ಕಾವ್ಯದಂಗಳವನ್ನು ತುಂಬಿವೆ.

ಶೈಲೀಕೃತ ರಚನೆಯೊಂದಿಗೆ ಬಿಡದೆ ತಳಕು ಹಾಕಿಕೊಂಡಿರುವ ಮತ್ತೊಂದು ಪ್ರಕ್ರಿಯೆಂದರೆ ಸಮೀಕರಣ ಪ್ರವೃತ್ತಿ. ಕಾವ್ಯದ ನಾಯಕನೊಂದಿಗೆ ತನ್ನ ಆಶ್ರಿತ ರಾಜನನ್ನು ಸಮೀಕರಣಗೊಳಿಸುವ ಕಾರಣದಿಂದಲೇ ಎಷ್ಟೋ ಕಾವ್ಯಗಳ ರಚನಾ ವಿನ್ಯಾಸವು ಬೇರೆಯಾಗಿದೆ. ಈ ಪ್ರಕ್ರಿಯೆ ಕಾವ್ಯ ರಚನಾಕ್ರಮವನ್ನೆ ನಿಯಂತ್ರಿಸಿದೆ ಎನ್ನಬಹುದು. ಅರ್ಜುನನೊಂದಿಗೆ ಅರಿಕೇಸರಿಯನ್ನು ಸಮೀಕರಣ ಮಾಡಿದ್ದರ ಫಲಿತವನ್ನು ನಾವೀಗಾಗಲೇ ನೋಡಿದ್ದೇವೆ. ಕವಿ ಇಲ್ಲಿ ಪುರಾಣ, ಮಹಾಕಾವ್ಯದ ಮೂಲ ವಸ್ತುವಿನೊಳಗೆ ಹಲವಾರು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗಿ ಬರುತ್ತದೆ; ಎದುರಾಗಬಹುದಾದ ಹಲವು ಸಂದಿಗ್ಧತೆಗಳಿಂದ ಪಾರಾಗುವ ಮಾರ್ಗವನ್ನು ಅವನು ಕಂಡುಕೊಂಡರೂ ಹಲವು ಮುಜುಗರಗಳನ್ನು ಎದರಿಸಬೇಕಾದ ಅನಿವಾರ‍್ಯತೆ ಉಂಟಾಗು ತ್ತದೆ. ಹೀಗೆ ಆಶ್ರಿತ ರಾಜನನ್ನು ಸಂಪ್ರೀತಗೊಳಿಸುವ ದೃಷ್ಟಿಕೋನದ ಅಂಗವಾಗಿಯೆ ಹಲವು ವರ್ಣನೆಗಳು ಅತಿರಂಜಿತ ಮಟ್ಟವನ್ನು ಮುಟ್ಟಿ ಬಿಡುತ್ತವೆ. ಎಲ್ಲ ನಗರಗಳೂ ಅಲಕಾವತಿಯೆ, ಎಲ್ಲ ಆನೆಗಳೂ ಐರಾವತವೆ, ಎಲ್ಲ ಉದ್ಯಾನಗಳು ರಂಭೆ ಊರ್ವಶಿಯರು ನಲಿದಾಡುವ ಇಂದ್ರೋದ್ಯಾನಗಳೆ ಆಗಿಬಿಡುತ್ತವೆ. ತನ್ನ ನಾಯಕನಿರುವ ಒಟ್ಟು ಆವರಣವೆಲ್ಲವೂ ಅವನಿಗಾಗಿಯೆ, ಅವನ ನಿಯಂತ್ರಣದಲ್ಲಿಯೆ. ಪ್ರಭುಕೇಂದ್ರಿತ ಕಾವ್ಯದಲ್ಲಿ ಹೀಗಾದರೆ ದೈವಕೇಂದ್ರಿತ ಕಾವ್ಯ ರಚನೆಗಳಲ್ಲೂ ಇದೇ ರೂಪ ಪುನರಭಿನಯಿಸುತ್ತದೆ.

ನಿಸ್ಸಂಶಯವಾಗಿ ಇಂಥಾ ಸ್ಥಳಾವರಣಕ್ಕೆ ಸಂಸ್ಕೃತದ ದಟ್ಟ ಪ್ರಭಾವವೇ ಕಾರಣವೆನ್ನುತ್ತಾನೆ ಶೆಲ್ಡಾನ್ ಪೋಲಾಕ್. “ಸಂಸ್ಕೃತ ಮತ್ತು ಪ್ರಾಕೃತಗಳೆರಡರ ಪ್ರಯೋಗದ ಲಕ್ಷ್ಯಲಕ್ಷಣಗಳು ಹೇರಳವಾಗಿ ಮೊದಲೇ ಸಿಕ್ಕುವುದರಿಂದ ಅವು ಓರಣವಾದ ಸಾಹಿತ್ಯರಚನೆಗೆ ಇಷ್ಟಾನುಸಾರವಾಗಿ ಲಭ್ಯವಾಗುವವು”- ಎಂದು ಭಾವಿಸಿರುವ ಪೋಲಾಕ್‌ನ ಮಾತಿನಲ್ಲಿ ಪೂರ್ಣ ಸತ್ಯವಿದೆಯೆಂದೇನೂ ಭಾವಿಸಬೇಕಿಲ್ಲ. ಕನ್ನಡ ಜನಪದವನ್ನು ಸಂಪೂರ್ಣವಾಗಿ ಹೊರಗಿರಿಸಿ ವಿಶ್ವಾತ್ಮಕ ಭಾಷೆಯ ಯಥಾನುಸಾರಿಯಾದ ನಕಲೇ ಕನ್ನಡ ಕಾವ್ಯವೇನೂ ಅಲ್ಲ. ಶೈಲಿಗೆ ಸಂಬಂಧಿಸಿದಂತೆ ಆಂಶಿಕವಾಗಿ ಇದು ಸತ್ಯವಾದರೂ, ಧಾತುವಿನ ನಿರ್ವಹಣೆಯಲ್ಲಿ ಕನ್ನಡ ಕಾವ್ಯಗಳೂ ಬೇರೆಯದೇ ಆದ ಅನುಸಂಧಾನವನ್ನು ನಡೆಸಿವೆಯೆಂಬ ಮಾತನ್ನು ನಾವು ಮರೆಯಬಾರದು. ಸಂಘರ್ಷಾತ್ಮಕತೆ ಕನ್ನಡ ಕಾವ್ಯಗಳ ಅಂತಃಸ್ಸತ್ವವೆ ಆಗಿದೆ. ಅಂಥಾ ಚರ್ಚೆಯನ್ನು ಈ ಸಂಕಿರಣದಲ್ಲಿ ಹಲವು ಮಿತ್ರರು ಈಗಾಗಲೇ ಚರ್ಚಿಸಿದ್ದಾರೆ. ಅದರ ಮೇಲೆ ಹೆಚ್ಚು ಒತ್ತು ಬಿದ್ದು ಚರ್ಚಿತವಾಗುವುದು ಸಹಜವೆ. ಈ ನಿಬಂಧದ ಚೌಕಟ್ಟಿನಲ್ಲಿ ಅದರ ಚರ್ಚೆಗೆ ಹೆಚ್ಚು ಆಸ್ಪದವೇನೂ ಇಲ್ಲವೆಂದು ಮೇಲ್ನೋಟಕ್ಕೆ ತೋರಬಹುದಾದರೂ ಸಾಹಿತ್ಯ ವಿಮರ್ಶೆಯು ಈಗ ವೈಚಾರಿಕ ಚಿಂತನೆಯ ಸ್ವರೂಪಕ್ಕೆ ದಾಟಿಕೊಂಡಿರುವುದರಿಂದ ಸಾಹಿತ್ಯ ವಿಮರ್ಶೆಯ ಗಡಿಗಳನ್ನು ನಿರಚನಗೊಳಿಸಿ ಸಾಗಿಕೊಂಡರೂ ಅದೇನು ಅಪ್ರಸ್ತುತವಾಗಲಾರದು.

ಹಿಂದೆ ಮಂಡಿಸಿದ ಪ್ರಮೇಯದಂತೆ ಶೈಲೀಕರಣ ಹಾಗೂ ಸಮೀಕರಣ ಪ್ರಕ್ರಿಯೆಯು ಸಹಜವಾಗಿಯೆ ಪ್ರಭುತ್ವ ಮತ್ತು ನಗರಗಳ ಸಂಬಂಧವನ್ನು ಆಪ್ತವಾಗಿ ಸ್ಥಾಪಿಸಿಬಿಡುತ್ತದೆ. ಅಂತರ್ ಸಂಬಂಧದ ನೇಯ್ಗೆಯನ್ನು ಕವಿ ಎಚ್ಚರ ತಪ್ಪದಂತೆ ಹೆಣೆಯುತ್ತಾನೆ. ಈ ಉಪಕ್ರಮ ವನ್ನು ಸಾಹಿತ್ಯ ಚರ್ಚೆಯಲ್ಲಿ ಒಂದು ಮೌಲ್ಯಾತ್ಮಕವಾಗಿಯೂ ಈವರೆಗೆ ಬಳಸಲಾಗುತ್ತಿದೆ. ಆದರೆ, ಸಾಮಾಜಿಕ ಪ್ರಕ್ರಿಯೆಯೂ ಪೂರಕವಾಗಿಲ್ಲದೆ ಇಂಥ ಸಂಬಂಧಗಳು ಕೇವಲ ಸಾಹಿತ್ಯಕ ಅಲಂಕಾರಗಳಾಗಿಯೇ ಕಾವ್ಯವನ್ನು ಪ್ರವೇಶಿಸಿರುವುದಿಲ್ಲ. ಯುಗಧರ್ಮದ ಪ್ರತಿಬಿಂಬವಾಗಿಯೆ ಇವು ಬಂದು ಹೋಗುತ್ತಿರುತ್ತವೆಂಬುದೂ ಕೂಡ ಮಾನ್ಯ ಮಾಡಬೇಕಾದ ಸಂಗತಿಯೆ. ಸಾಹಿತ್ಯ ಚರಿತ್ರೆಯನ್ನು ರೂಪಿಸುವಾಗ ಈ ಬಗೆಯ ಅಂತರ್ ಸಂಬಂಧದ ಹಿನ್ನಲೆಯಿಂದಲೇ ಹಲವು ವಿಭಾಗಗಳನ್ನಾಗಿ ಮಾಡಲಾಗಿದೆ. ಚರಿತ್ರೆಯೊಂದಿಗೆ ಕಾವ್ಯರಚನೆಯೂ ಬೆಸೆದುಕೊಂಡಿದೆಯೆಂಬ ಗೃಹಿತ ನಿಲುವುಗಳು ಈ ಬಗೆಯ ಅಂತರ್ ಸಂಬಂಧದ ಹೊಂದಾಣಿಕೆಯ ಪ್ರಯತ್ನವನ್ನು ಮಾಡಿದಂತೆ ತೋರಿದ್ದರಿಂದ ಪ್ರಾಚೀನ ಕನ್ನಡ ಕಾವ್ಯವನ್ನು ಪ್ರಭುಕೇಂದ್ರಿತವೆಂದೇ ನಿರ್ವಹಿಸ ಲಾಗಿದೆ. ಕನ್ನಡ ನಾಡಿನಲ್ಲಿ ಅನೇಕ ರಾಜಮನೆತನಗಳು ತಲೆ ಎತ್ತಿ ಪ್ರವರ್ಧಮಾನಕ್ಕೆ ಬರುತ್ತಿ ದ್ದುದೂ, ಸಾಮ್ರಾಜ್ಯಗಳನ್ನು ವಿಸ್ತರಿಸುತ್ತಿದ್ದುದೂ, ಅದಕ್ಕಾಗಿ ದಿನಬೆಳಗಾದರೂ ಯುದ್ಧವೆನ್ನುವ ಸಂಗತಿ ಮನೆವಾರ್ತೆಯಾದ ಸಂದರ್ಭದಲ್ಲಿ ಸಹಜವಾಗಿ ವೀರತ್ವದ ಮೌಲ್ಯಗಳನ್ನು ಮಾನ್ಯಮಾಡಿ ಅವು ಸಾಮಾಜಿಕ ಮೌಲ್ಯವೆನ್ನುವಂತೆ ಸ್ಥಾಪಿಸುತ್ತಿದ್ದ ಕಾಲವಿದು. ಇದರಲ್ಲಿ ಪ್ರಭುತ್ವದ ಪಾಲು ಎಷ್ಟಿತ್ತೋ ಕವಿಗಳ ಹೊಣೆಗಾರಿಕೆಯೂ ಅದಕ್ಕಿಂತ ಹೆಚ್ಚಿತ್ತು. ‘ಜೋಳದಪಾಳಿ’ಯ ಋಣ ಪಾತಕದಿಂದ ಬಿಡುಗಡೆ ಹೊಂದುವಲ್ಲಿ ತುಸು ಅತಿರಂಜತೆಗೆ ಹೋದದ್ದನ್ನು ಮರೆಯ ಬೇಕಿದೆ.

ಪ್ರಭುತ್ವವನ್ನು ಕುರಿತಂತೆ ಎರಕಹೊಯ್ದ ಪಡಿಯಚ್ಚಿನ ಪ್ರತಿರೂಪದ ರೂಪಗಳು ದೊರೆಯುವುದರ ಜೊತೆಗೆ ಕ್ವಚಿತ್ತಾಗಿ ಅದನ್ನು ಕುರಿತ ಭಿನ್ನ ಸ್ವರೂಪಗಳೂ ಪ್ರಕಟವಾಗಿವೆ. ಹೀಗಾಗಿ ಪ್ರಭುತ್ವವನ್ನು ಹಲವು ನೆಲೆಗಳಲ್ಲಿ ವಿಶ್ಲೇಷಿಸುವ ಸಂಭಾವ್ಯತೆಗೂ ಅವಕಾಶವಾಗಿದೆ. ಪ್ರಭುತ್ವವೆಂದರೆ ಪ್ರಭುವಿನ ಆಳ್ವಿಕೆ ಎನ್ನುವುದು ಬೀಸಾದ ಹೇಳಿಕೆಯೆ. ರಾಜನನ್ನು ಒಳಗೊಂಡಂತೆ ಇನ್ನಿತರೆ ವರ್ಗಗಳೂ ಈ ಕಕ್ಷೆಯೊಳಗೆ ಸೇರಿ ‘ಪ್ರಭುತ್ವ’ ವೆನ್ನುವುದು  ವಿಶಾಲ ಅರ್ಥ ಪಡೆಯುತ್ತದೆ. ಉದಾಹರಣೆಗೆ ಪ್ರಾಚೀನ ಕನ್ನಡ ಕಾವ್ಯ ಸಂದರ್ಭದಲ್ಲಿ ಕ್ಷತ್ರಿ ಯರೂ ಹಾಗೂ ಬ್ರಾಹ್ಮಣರು ಕೂಡಿಯೆ ಪ್ರಭುತ್ವವೆಂಬುದು ಪೂರ್ಣವಾಗುತ್ತಿತ್ತು. ಒಂದು ರೂಪಿಸುವ ಹೊಣೆಯನ್ನು ಹೊತ್ತಿದ್ದರೆ, ಇನ್ನೊಂದು ಅನುಷ್ಠಾನದ ಹೊಣೆಯನ್ನು ಹೊರುತಿತ್ತು. ಇವೆರಡೂ ಕೂಡಿಯೆ ಪ್ರಭುತ್ವವಾಗುತ್ತಿತ್ತು. ಪ್ರಭುತ್ವದ ಆಚೆಗೆ ಉಳಿದ ಬಹುಜನರು ನಿರ್ವಾತದಲ್ಲೆ ಇರುತ್ತಿದ್ದರು. ಪ್ರಭುತ್ವದ ಯಾವ ನಿರ್ಧಾರದ ಹಿಂದಾಗಲಿ, ನಿರ್ಮಾಣದ ಹಿಂದಾಗಲಿ, ವಿಸ್ತರಣೆಯ ಕ್ರಿಯೆಯಲ್ಲಾಗಲಿ ಈ ಮೂರನೆಯ ವರ್ಗದ ಪಾತ್ರ ನಗಣ್ಯವೆ. ಆದರೆ, ಇವೆಲ್ಲವೂ ಅವರಿಗಾಗಿಯೇ ಎಂಬಂಥ ಧೋರಣೆ ಮತ್ತು ಹೊಣೆಗಾರಿಕೆಯನ್ನು ಹೊರಿಸಲಾಗುತ್ತಿತ್ತು. ಸಾಮಂತ ಶಾಹಿಯು ಸೈನ್ಯವನ್ನು ಕಟ್ಟಿಬೆಳಸುವುದನ್ನು ಹೇಗೆ ಉತ್ಕಟವಾಗಿ ಮಾಡುತ್ತಿತ್ತೋ ಹಾಗೆಯೆ ತನ್ನ ಅಸ್ತಿತ್ವದ ಕುರುಹುಗಳನ್ನು ಪ್ರತಿಷ್ಠಾಪಿಸಲು ಹವಣಿಸುತ್ತಿತ್ತು. ಎರಡೂ ಕಟ್ಟುವ ಹಾಗೂ ಬೆಳೆಸುವ ಉಮೇದಿನಿಂದಲೇ ಪ್ರಭಾವಿತವಾಗುತ್ತಿದ್ದವು ಮತ್ತು ಇದರ ವಿರುದ್ಧ ದಿಕ್ಕಿನಲ್ಲಿ ಮುರಿಯುವ ಹಾಗೂ ವಿನಾಶಗೈವ ಮಹಾತ್ವಾಕಾಂಕ್ಷೆಗಳನ್ನು ಪ್ರಭುತ್ವ ತನ್ನೊಳಗೆ ಇರಿಸಿಕೊಂಡಿರುತ್ತಿತ್ತು. ಹೀಗಾಗಿ ನಿರ್ಮಾಣ ಮತ್ತು ನಿರ್ನಾಮದ ಎರಡು ಕ್ರಿಯೆಗಳ ನಡುವೆಯೇ ಪ್ರಭುತ್ವ ತನ್ನ ಅಸ್ತಿತ್ವವನ್ನು ರೂಪಿಸಿಕೊಳ್ಳಲು ತೊಡಗುತ್ತಿತ್ತು.

ಅಧಿಕಾರ ಕೇಂದ್ರದ ಪ್ರಭುತ್ವದ ಕಕ್ಷೆಯೊಳಕ್ಕೆ ಇನ್ನೊಂದು ಬಗೆಯ ವರ್ಗ ನಿಧಾನಕ್ಕೆ ಪ್ರವೇಶ ಪಡೆದಿರುವುದನ್ನು ಇನ್ನು ಮುಂದೆ ನಿರ್ವಚಿಸಬಹುದು. ಇದನ್ನು ವಣಿಜ ವರ್ಗವೆಂದು ಕರೆದರೂ ವರ್ಣವ್ಯವಸ್ಥೆಯನ್ನು ಮೀರಿದ ಶ್ರೀಮಂತ ವರ್ಗವೆನ್ನಬಹುದು. ಪ್ರಭುವಿನ ನಿರ್ಮಾಣದ ಕನಸನ್ನು ಪೂರ್ಣಗೊಳಿಸುವಲ್ಲಿ ಈ ವರ್ಗದ ಪಾತ್ರ ಬಹುದೊಡ್ಡದು. (ಈಗ ಬಹುರಾಷ್ಟ್ರೀಯ ಕಂಪೆನಿಗಳಿವೆ) ಮಧ್ಯಕಾಲೀನ ಚರಿತ್ರೆಯಲ್ಲಿ ಇದಕ್ಕೆ ಸಾಕಷ್ಟು ಪುರಾವೆಗಳು ದೊರೆಯುತ್ತವೆ. ಗುಡಿ-ಗುಂಡಾರ, ಅರವಟ್ಟಿಗೆ-ಛತ್ರ, ಅನ್ನಧಾನ-ಭೂಮಿದಾನ-ಈ ಕ್ರಿಯೆ ಗಳಲ್ಲೆಲ್ಲ  ಶ್ರೀಮಂತವರ್ಗದ ಭಾಗಿತ್ವ ಗಣನೀಯವಾಗಿರುತ್ತಿತ್ತು. ದೇವಾಲಯದ ನಿರ್ಮಾಣವು ಬದುಕಿನ ಗಂತವ್ಯವೆಂದು ಭಾವಿಸಿದ ಸಾತ್ವಿಕರೂ ಇದರೊಳಗೆ ಸೇರಿದ್ದರು. ಇಡೀ ಭಾರತದಾದ್ಯಂತ ನಿರ್ಮಾಣಗೊಂಡ ದೇವಾಲಯಗಳಲ್ಲಿ ಪ್ರಭುತ್ವದ ಜೊತೆಗೆ ಈ ವರ್ಗ ಸಾಕಷ್ಟು ಬಾರಿ ಕೈ ಜೋಡಿಸಿದೆ. ಸಾಮಾಜಿಕ ಮನ್ನಣೆಯು ಒಂದು ಕಾರಣವಾದರೆ ರಾಜನನ್ನು ಸಂಪ್ರೀತಗೊಳಿಸುವ ಹುನ್ನಾರವಾಗಿಯೂ ಇದು ಇದ್ದಿರಲೂಬಹುದು. ಸಮಾಜದ ಎಲ್ಲವರ್ಗಗಳಿಗೂ ತೆರೆದುಕೊಳ್ಳದ ದೇವಾಲಯ ನಿರ್ಮಾಣದಂಥ ಕಾರ‍್ಯದಿಂದ ಅಲ್ಪ ಸಂಖ್ಯಾತರು ಮಾತ್ರ ಪ್ರಯೋಜನ ಪಡೆಯುತ್ತಿ ದ್ದರು. ಬಹುಸಂಖ್ಯಾತರು ಮೂಕಸಾಕ್ಷಿಗಳಾಗಿ ಮಾತ್ರ ಉಳಿಯುತ್ತಿದ್ದರು. ಇದು ಪ್ರಭುತ್ವವನ್ನು ನಿಯಂತ್ರಿಸುತ್ತಿದ್ದ ಶಕ್ತಿಗಳ ಅಪಾರ ಜಾಣ್ಮೆಯನ್ನು ವಿದ್ರೋಹಕತೆಯನ್ನು ಪ್ರತಿಬಿಂಬಿಸುವುದು. ಇದನ್ನು ಬಸವಣ್ಣ ‘ಉಳ್ಳವರು ಶಿವಾಲಯ ಮಾಡುವರು…’ ಎಂದು ವ್ಯಂಗ್ಯವಾಡಿ ಪರ‍್ಯಾಯ ಮಾರ್ಗ ತೋರುವುದು ಪ್ರಭುತ್ವಕ್ಕೆ  ಎಸೆದ ಸವಾಲಲ್ಲದೆ ಬೇರೇನೂ ಅಲ್ಲ. ದಾನಶಾಸನ, ದತ್ತಿ ಶಾನಗಳು ಈ ಹಿನ್ನಲೆಯಲ್ಲಿ ಅಧ್ಯಯನ ಯೋಗ್ಯ ಮಾಹಿತಿಗಳನ್ನು ನಮಗೆ ದೊರಸಿ ಕೊಡುತ್ತವೆ.

ಶಾಸನಗಳ ಹಾಗೆಯೇ ನಮ್ಮ ಪ್ರಾಚೀನ ಕೃತಿಯಾದ ‘ಕವಿರಾಜಮಾರ್ಗ’ ಪ್ರಭುತ್ವವು ನಿರ್ವಹಿಸಬೇಕಾಗಿದ್ದ ಹೊಣೆಗಾರಿಕೆಯನ್ನು ಸೂಚಿಸುತ್ತದೆ. ಇದರ ಆಶಯಗಳ ಹಿಂದೆ ಕನ್ನಡನಾಡು ಮತ್ತು ನುಡಿ ಕುರಿತ ಒಂದು ವಿಶಿಷ್ಟ ಸಂಸ್ಕೃತಿ ನಿರ್ಮಾಣದ ಅಪೇಕ್ಷೆಯೂ ಅಂತರ ನಿಹಿತವಾಗಿದೆ. ಪ್ರಾಚೀನ ನಗರಳೆಂದು ಪ್ರಸಿದ್ಧವಾಗಿದ್ದ ಪಟ್ಟದಕಲ್ಲು (ಕಿಸುಪೊಳಲ್) ಕೊಪ್ಪಳ (ಕೊಪಣ) ಲಕ್ಷ್ಮೇಶ್ವರ (ಪುಲಿಗೆರೆ) ಒಕ್ಕುಂದ (ಒಕುಂದ) ಬಾದಾಮಿ ಹಾಗೂ ಐಹೊಳೆ ನಗರಗಳ ನಿರ್ಮಾಣದ ಹಿಂದೆ ಪ್ರಭುತ್ವದ ಹೊಣೆಗಾರಿಕೆ ಏನಿತ್ತು ಎಂಬುದು ಕುತೂಹಲದ ಚರ್ಚೆಯೆ. ಕದಂಬ, ಚಾಲುಕ್ಯ ರಾಷ್ಟ್ರಕೂಟ ಮೊದಲಾದ ರಾಜಮನೆತಗಳು ಆಡಳಿತಾಂಗದ ಜೊತೆ ಜೊತೆಯಲ್ಲಿ ಕಲೆ-ಸಂಸ್ಕೃತಿಯನ್ನು ಬೆಳೆಸುವಲ್ಲೂ ಸಾಕಷ್ಟು ಶ್ರಮವಹಿಸಿವೆ-ಎಂಬುದು ನಿಜವೆ. ಕನ್ನಡ ಭಾಷೆಯನ್ನು ಆಡಳಿತಾತ್ಮಕವಾಗಿ ರೂಪಿಸುವಲ್ಲಿ ಈ ಮನೆತನಗಳು ಪ್ರಯತ್ನಸಿದ್ದು ಶ್ಲಾಘನೀಯ. ಕಾಲಕಾಲಕ್ಕೆ ತುರ್ತು ಅಗತ್ಯಗಳಿಗನುಗುಣವಾದ ಕಟ್ಟುವಿಕೆಯನ್ನು ಪ್ರಭುತ್ವವು ಒಂದು ಸವಾಲನ್ನಾಗಿಯೂ, ನೈತಿಕ ಹೊಣೆಗಾರಿಕೆಯಕನ್ನಾಗಿಯೂ ಸ್ವೀಕರಿಸಿಯೂ, ಅದಕ್ಕೆ ಬದ್ಧವಾಗಿಯೂ ಇದ್ದು ಸೃಜನಶೀಲತೆಯನ್ನು ಮೆರೆದಿವೆ.

ಆರಂಭ ಕಾಲದ ಪ್ರಭುತ್ವಗಳಿಗಿದ್ದ ಸವಾಲುಗಳು ಸಾಂಸ್ಕೃತಿಕ ಸ್ವರೂಪದವುಗಳು. ಸಂಸ್ಕೃತ ಮತ್ತು ಪ್ರಾಕೃತ ಭಾಷೆಗೆ ಎದುರಾಗಿ ಕನ್ನಡವನ್ನು ಮುಖಾಮುಖಿಯಾಗಿಸುವುದು ಅಂಥ ಹೊಣೆಗಾರಿಕೆಯಲ್ಲೊಂದು. ಯಜಮಾನ್ಯ ಭಾಷೆ ಮತ್ತು ಸಂಸ್ಕೃತಿಯ ಎದುರು ತಮ್ಮದೇ ಆದ ಗಂಗ ಕದಂಬರ ಕಾಲದಲ್ಲಿ ಸಾಧ್ಯವಾಗದ ಭಾಷೆಯ ಉನ್ನತೀಕರಣ ರಾಷ್ಟ್ರಕೂಟರ ಕಾಲಕ್ಕೆ ಸಾಧ್ಯವಾದದ್ದು; ಅದಕ್ಕೆ ಪೂರಕವಾದ ಸಂಸ್ಕೃತಿಯೊಂದರ ರೂಪುರೇಷೆಗಳನ್ನೂ ಔನ್ಯತ್ಯ ಕ್ಕೇರಿಸುವ ಹೊಣೆಗಾರಿಕೆಯನ್ನು ಅವು ಸ್ವೀಕರಿಸಿದಂತೆ ಅದಕ್ಕೆ ಪೂರಕವಾದ ರಚನೆಗಳಿಗೆ ಈ ಕಾಲದ ಪ್ರಭುತ್ವಗಳು ಕೈಹಾಕಿದವು. ನಗರ ನಿರ್ಮಾಣದ ಪ್ರಕ್ರಿಯೆಯೊಂದು ಪ್ರಭುತ್ವದೊಂದಿಗೆ ತಳಕು ಹಾಕಿಕೊಳ್ಳಲು ತಮ್ಮ ಅಸ್ತಿತ್ವದ ಕಾರಣದ ಜೊತೆಗೆಯೇ ಅಸ್ಮಿತೆಯೂ ಕಾರಣವಾಯಿತು.

ಇದರ ಮುಂದಿನ ಘಟ್ಟದಲ್ಲಿ ಪ್ರಭುತ್ವಗಳು ಕಲಾವಿದರು, ಕವಿಗಳು, ಶಿಲ್ಪಿಗಳು ಹಾಗೂ ಕುಶಲ ಕರ್ಮಿಗಳನ್ನು ಗುರುತಿಸುವ, ಪ್ರೊತ್ಸಾಹಿಸುವ ಪ್ರಯತ್ನ ಮಾಡಿದವು. ಈ ಕಾಲದಲ್ಲಿ ಅನೇಕ ಸಾಮಂತ ರಾಜರು ಪ್ರಭುಗಳಾಗಿ ಅಧಿಕಾರವನ್ನು ವಿಸ್ತರಿಸಿಕೊಳ್ಳುವ ಪ್ರಯತ್ನಗಳೂ ನಡೆದವು. ಹೀಗೆ ಸ್ವತಂತ್ರ ಅಧಿಕಾರ ಕೇಂದ್ರಿಕರಿಸಿಕೊಂಡ ಪ್ರಭುತ್ವಗಳು ತಮ್ಮ ವಿದ್ರೋಹಕತೆ ಯನ್ನು ಮರೆಮಾಚಲು ಜನಕಲ್ಯಾಣಕಾರ‍್ಯಗಳನ್ನೋ ಅಥವಾ ಅಭಿವೃದ್ದಿ ಕಾರ‍್ಯಗಳನ್ನೋ ಮಾಡಲೇಬೇಕಾಯ್ತು. ಸ್ಥಾನಾಂತರಗೊಳಿಸಿದವನ ಜಾಗದಲ್ಲಿ ಪ್ರತಿಷ್ಠಾಪನೆಗೊಂಡ ಈ ರಾಜರುಗಳು ತಮ್ಮ ಅಸ್ತಿತ್ವದ ಮತ್ತು ಭರವಸೆಯ ಸಾಧ್ಯತೆಯ ಒಂದು ಉಪಾಯ ಮಾರ್ಗ ವನ್ನಾಗಿ ಕೋಟೆ-ಕೊತ್ತಲಗಳನ್ನೊಳಗೊಂಡ ನಗರ ನಿರ್ಮಾಣ ಕ್ರಿಯೆಗಳಿಗೆ ಆದ್ಯತೆ ನೀಡಿದವು. ಒಂದೋ ಅಭಿವೃದ್ದಿಕಾರ‍್ಯ ಇಲ್ಲವೆ ಯುದ್ಧ ಈ ಎರಡೆ ದಾರಿಗಳನ್ನು ಉನ್ನತೀಕರಣಗೊಂಡ ಈ ಸಾಮಂತ ಶಾಹಿಗಳು ಹಿಡಿಯಲೇಬೇಕಾಗಿತ್ತು. ಜನರಿಗೆ ಭಯವನ್ನು ಇಲ್ಲವೆ ವಿಶ್ವಾಸವನ್ನು ಮೂಡಿಸುವುದು ಅವರಿಗೆ ಅನಿವಾರ‍್ಯವಾಗಿತ್ತು. ಹೊಯ್ಸಳರ ಕಾಲದಲ್ಲಿ ಪುರ ನಿರ್ಮಾಣಗಳು ಈ ಹಿನ್ನೆಲೆಯಲ್ಲಿಯೇ ರೂಪುಗೊಂಡವು.

ಮಧ್ಯಕಾಲೀನ ಪ್ರಭುತ್ವಗಳು ಎದುರಿಸಿದ ಸವಾಲುಗಳು ಹಾಗೂ ನಾಡನ್ನು ಕಟ್ಟುವಲ್ಲಿ ಅವುಗಳ ನಿರ್ವಹಿಸಿದ ಪಾತ್ರ ಹಿಂದಿನ ಪ್ರಭುತ್ವಗಳಿಗಿಂತ ತುಂಬಾ ಭಿನ್ನ. ಕೋಟೆ, ಕೊತ್ತಲ, ಕಂದಕಗಳ ನಿರ್ಮಾಣ ಈ ಕಾಲದಲ್ಲಿ ಅನಿವಾರ‍್ಯವಾದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವಂಥ ಸಂಕೀರ್ಣ ಸ್ಥಿತಿಯು ನಿರ್ಮಾಣವಾಯಿತು. ಅನ್ಯರ ಆಕ್ರಮಣಗಳು ಈ ಕಾಲಕ್ಕೆ ಸಾಮಾನ್ಯ ಎನ್ನಿಸುವಂತಾಗಿ ಬಿಟ್ಟಿತು. ತುಂಗಭದ್ರೆಯ ಆಚೆಗಿನ ವಿಜಯನಗರದ ಅರಸರು ಇಂಥಾ ದಾಳಿಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಶಕ್ತರಾಗಿದ್ದರು. ‘ಹಿಂದೂರಾಯ ಸುರತ್ರಾಣ’ರೆಂಬ ಹೊಸಬಿರುದಿಗೆ ಕಾರಣರಾಗಿಯೂ ಇವರು ಖ್ಯಾತರಾಗಿದ್ದರು. ಈ ಅರಸೊತ್ತಿಗೆಗಳು ನಿರ್ವಹಿಸಿದ ಹೊಣೆಗಾರಿಕೆಯ ಜೊತೆಯಲ್ಲಿ ವಾಣಿಜ್ಯ ವ್ಯವಹಾರಗಳಿಗೆ ಹೆಚ್ಚಿನ ಆದ್ಯತೆ ನೀಡಿದವು. ಭಾಷೆ-ಸಂಸ್ಕೃತಿ-ವ್ಯವಹಾರಗಳನ್ನು ನಿರ್ವಹಿಸುವಲ್ಲಿ ಈ ಅರಸರು ಲೋಕ ವಿಖ್ಯಾತರಾದರು. ನಗರ ನಿರ್ಮಾಣದಲ್ಲಿ ಅವರು ತೋರಿದ ಆಸೀಮ ಉತ್ಸಾಹ, ಕರ್ತೃತ್ವ ಶಕ್ತಿ ಉಳಿದವರನ್ನು ಕಣ್ಣು ಕುಕ್ಕುವಂತೆ ಮಾಡಿತು. ವಾಣಿಜ್ಯ ಬೀದಿಗಳು ದೇವಾಲಯಗಳು, ನಾಟ್ಯಮಂದಿರಗಳು, ಸುಂದರ ಶಿಲ್ಪಗಳು, ಕೋಟೆ-ಕೊತ್ತಲ, ಅರಮನೆ, ರಥಬೀದಿ, ಅತ್ಯಾಧುನಿಕವೆನ್ನುವ ಈಜುಕೊಳಗಳು, ಸಾಂಸ್ಕೃತಿಕಾಚರಣೆಯ ಮಹಾಮಂಟಪಗಳು -(ಲಕ್ಷ್ಮೀಶ ವರ್ಣಿಸುವ ದ್ವಾರಕೆಯನ್ನು ಗಮನಿಸಿ) ಸುಂದರ ನಗರ ನಿರ್ಮಾಣದಲ್ಲಿ ಈ ಅರಸರ ಕೊಡುಗೆ ಅಪಾರ. ತಮ್ಮ ಅಧೀನ ಪಾಳೆಪಟ್ಟುಗಳಲ್ಲೂ ಈ ನಿರ್ಮಾಣ ಕಾರ‍್ಯ ಅವ್ಯಾಹತವಾಗಿ ನಡೆಯಿತು. ವಾಣಿಜ್ಯೀಕರಣದಿಂದ ಅನ್ಯದೇಶ ಭಾಷಿಕರ ಸಂಪರ್ಕ ಸಾಧ್ಯ ವಾದದ್ದೂ, ಇದರಿಂದ ಪರಸ್ಪರ ಕೊಡುಕೊಳ್ಳುವಿಕೆಯು ನಗರ ನಿರ್ಮಾಣಕ್ಕೆ ಹೊಸ ಸ್ವರೂಪ, ವಿನ್ಯಾಸಗಳನ್ನು ತಂದುಕೊಟ್ಟವು. ದೇಶವಿದೇಶದ ರಾಯಭಾರಿಗಳೂ ಈ ನಗರವನ್ನು ಸಂದರ್ಶಿ ಸುವಷ್ಟು ಖ್ಯಾತಿಯನ್ನು ಆ ಕಾಲಕ್ಕೆ ಅದು ಪಡೆದಿತ್ತು.

ಸಾಂಸ್ಕೃತಿಕ ಅನನ್ಯತೆಯನ್ನು ಪ್ರತಿಷ್ಠಾಪಿಸುವ ಸಾತ್ವಿಕ ಮೌಲ್ಯದಿಂದ ಹೊರಟ ಪ್ರಭುತ್ವಗಳು ಕೊನೆಕೊನೆಗೆ ರಾಜಸಿಕ ಔನ್ನತ್ಯದ ತುದಿಯನ್ನೇರಿ ತಮ್ಮ ಭೌತಿಕ ಸೌಂದರ‍್ಯ ಹಾಗೂ ಶ್ರೀಮಂತಿಕೆ ಯಿಂದ ಮೆರೆದು ವಿನಾಶಕ್ಕೆ ಆಹ್ವಾನವನ್ನು ನೀಡಿದವು. ಮಧ್ಯಕಾಲೀನ ಇಸ್ಲಾಂ ದಾಳಿಗಳಿಗೆ ಈ ಪ್ರಭುತ್ವಗಳು ತುತ್ತಾಗಿ ಹೋದವು. ನಗರಗಳ ನಾಶದ ಕಥೆ, ಮತಾಂತರದ ಭೀತಿ, ಅನ್ಯಧರ್ಮಿಯ ವಿವಾಹ ಸಂದಿಗ್ಧತೆಗಳು ಇವೆಲ್ಲವುಗಳನ್ನು ಇಸ್ಲಾಂ ದಾಳಿಗಳು ಉಂಟು ಮಾಡಿದವು. ಮೊತ್ತಮೊದಲ ದಾಳಿಕೋರನೆಂಬ ಖ್ಯಾತಿಗೆ ಕಾರಣನಾದ ಗಝನಿಯು ದೇವಾಲಯ ಗಳನ್ನು ನಾಶಮಾಡಿದ್ದನ್ನು ರಾಷ್ಟ್ರೀಯವಾದಿ ಇತಿಹಾಸಕಾರರು ದಾಖಲಿಸಿದ್ದಾರೆ. ಇದರ ಜೊತೆಗೆ ಉಳಿದನಾಶಗಳ ದಾಖಲಾತಿಯ ಬಗ್ಗೆ ಇವರು ಅನಾಸಕ್ತಿಯನ್ನು ತೋರಿರುವುದೇ ಈ ದಾಖಲೆಗಳ ಅವಿಶ್ವಾಸತೆಗೆ ಕಾರಣವಾಗಿದೆ. ಕೇವಲ ದೇವಾಲಯವನ್ನು ಕೇಂದ್ರೀಕರಿಸುವ ಮನಸ್ಥಿತಿಯ ಹಿಂದೆ ಒಂದು ಧರ್ಮದ ದಾಳಿಯ ವಿರುದ್ಧ ಇನ್ನೊಂದು ಧರ್ಮದವರನ್ನು ಪ್ರಚೋದಿಸಿ ಒಗ್ಗೂಡಿಸುವುದು ಕಾರಣವಿದ್ದಿರಬಹುದು. ಒಟ್ಟಾರೆಯಾಗಿ ಪ್ರಭುತ್ವ ಸ್ಥಾಪನೆ, ಅದರ ವಿಸ್ತರಣೆ ಹಾಗೂ ಚಕ್ರಾದಿಪತ್ಯ ಸ್ಥಾಪಿಸಬೇಕೆಂಬ ಪ್ರಕ್ರಿಯೆಯು ಒಂದು ವಿನಾಶದ ಕಥೆಯನ್ನೇ ಸಾರುತ್ತದೆ. ಇಂಥ ಚಕ್ರಾದಿಪತ್ಯ ಸ್ಥಾಪನೆಯನ್ನೆ ವಿರೋಧಿಸುವ ನೆಲೆಯಲ್ಲೇ ‘ಜೈಮಿನಿ ಭಾರತ’ದ ಲಕ್ಷ್ಮೀಶ ಹೊರಟಂತೆ ತೋರುತ್ತದೆ.

ವಿರಚಿಸಿದ ಕುರುವಾಡದಿಕ್ಕೆಲ್ಲದ ನವರತ್ನ |
ಪರಿಖಚಿತ ಕನಕ ತೋರಣ ಮೊಪ್ಪಿದುದು ರಜತ |
ಗಿರಿಶಿಖರಮಂ ಸಾರ್ಧು ಶುಭ್ರಾಭ್ರದೊಳ್ ಮೂಡಿದ ಮರೇಂದ್ರ ಚಾಪದಂತೆ ||
ಪರಿಪರಿಯ ಗುಡಿ ಕಳಸ ಕನ್ನಡಿ ಪತಾಕೆ ಸೀ |
ಗುರಿಚಮರಿಗಳ ಸಾಲ್ಗಳೆಸೆದುವು ಗಗನಮೆಂಬ |
ಕರಿಯ ಸಿಂಗರಿಸಿದರೊ ಪರಿಮಳೋತ್ಸವಕೆ ಪೊರಮಡುವನಿಲರಾಜಂಗೆನೆ || (೧೧)

ದ್ವಾರಕಾ ನಗರದ ರಾಜಬೀದಿಯ ಒಳಗೆ ನಡೆಯುತ್ತ ಭೀಮನ ಕಣ್ಣಿಗೆ ಕಾಣುವ ಅದ್ಭುತ ನಗರದ ವರ್ಣನೆಯಿದು. ದಾರಿಯ ಎರಡೂ ಕಡೆ ಶೋಭಿಸುವ ಕರುಮಾಡಗಳು, ಇವುಗಳನ್ನು ನವರತ್ನಗಳಿಂದ, ಚಿನ್ನದತೋರಣಗಳಿಂದ ಶೃಂಗರಿಸಿದ್ದಾರೆ. ಕಳಸ, ಕನ್ನಡ-ಗುಡಿಗಳಿಂದ ಅವು ಶೃಂಗರಿತಗೊಂಡಿವೆ. ಚಾಮರಗಳ ಸಾಲು ಸಾಲು, ದೊಡ್ಡ ದೊಡ್ಡ ಸೌಧ, ರಾಜಭವನ ಇವುಗಳ ನಡುವೆ ಮಿಂಚಂತೆ ಹೊಳೆವ ಸ್ತ್ರೀಯರು, ಪ್ರಮದಮತ್ತೆಯರು. ದ್ವಾರಕೆಯ ಬೀದಿಯ ಉದ್ದಕ್ಕೂ ಕಾಣುತ್ತಿರುವ ನವರತ್ನದ ವ್ಯಾಪಾರ ಕೇಂದ್ರಗಳು, ಚಂದ್ರಶಾಲೆಗಳು, ತಮ್ಮ ಸೌಂದರ‍್ಯದಿಂದ ಹಾದಿಹೋಕರನ್ನು ತಮ್ಮ ಕಡೆ ಸೆಳೆಯುವ ಬೆಲೆವೆಣ್ಣುಗಳು-ಹೀಗೆ ದ್ವಾರಕಾನಗರ ವನ್ನು ೪೫ ಪದ್ಯಗಳಲ್ಲಿ ವರ್ಣಿಸುವ ಕವಿ ಕೊನೆಗೆ ಸೋತವನಂತಾಗಿ ‘ವಿಸ್ತಾರಮಂ ಬಣ್ಣಿಸುವೊಡೆ ನ್ನಳವೆ…’ ಎಂದು ತನ್ನ ಕವಿತಾ ಶಕ್ತಿಯನ್ನೂ ಮೀರಿದ ಅಪಾರ ಸೌಂದರ‍್ಯದ ಖನಿ ದ್ವಾರಕ ಎನ್ನುತ್ತಾನೆ.

ಜೈಮಿನಿ ಭಾರತದಲ್ಲಿ ಬರುವ ಭದ್ರಾವತಿ ನಗರ, ಚಂಪಾನಗರಿ, ಮಣಿಪುರ, ರತ್ನಪುರ, ಕುಂತಳನಗರ, ಹಸ್ತಿನಾವತಿ ಮೊದಲಾದ ನಗರಗಳ ವರ್ಣನೆಯಲ್ಲಿ ಕವಿಯು ನಗರಗಳ ಶ್ರೀಮಂತಿಕೆ, ವೈಭವಗಳ ಸಮೃದ್ಧತೆಯನ್ನು ಅನೇಕಾನೇಕ ಪದ್ಯಗಳಲ್ಲಿ ವಿವರಿಸುತ್ತಾ ಹೋಗುತ್ತಾನೆ. ಈ ನಗರಗಳೆಲ್ಲವುಗಳಿಗೂ ನಕ್ಷೆ ತಯಾರಿಸಿ-ಇದು ಇಂತಿಥಾ ನಗರವೆಂದು ಹೋಲಿಸಿ-ಗುರುತಿಸಿವ ಪ್ರಯತ್ನವನ್ನೂ ಮಾಡಲಾಗಿದೆ. ಇದನ್ನೇ ಪೊಲಾಕ್ ‘ಸ್ಥಳಸೂಚಕ ಪ್ರತಿಭಾ ವಿಲಾಸ’ವೆಂದು ಕರೆದಿದ್ದಾನೆ… ಆತನ ಪ್ರಕಾರ ಅಶ್ವಮೇದಯಾಗದ ಕುದುರೆಯು ತ್ರಿಗರ್ತದಿಂದ ಹೊರಟು ಪ್ರಾಗ್ಜ್ಯೋತಿಷ್ಯಕ್ಕೆ, ಮುಂದೆ ಮಣಿಪುರ, ಮಗಧ, ವಂಗ, ಚೇದಿ, ಕಾಶಿ, ಕೋಸಲ, ದ್ರಾವಿಡ, ಆಂದ್ರ, ಗೋಕರ್ಣ, ಪ್ರಭಾಸ, ದ್ವಾರಕ, ಪಂಚನದ ಮತ್ತು ಗಾಂಧಾರಕ್ಕೆ-ಮುಟ್ಟುತ್ತದೆಂದು ಸೂಚಿಸುತ್ತಾನೆ. ಜೈಮಿನಿ ಭಾರತದಲ್ಲಿ ಬರುವ ಕುಂತಳ ನಗರವು ‘ಧಾರವಾಡ’ವೆಂದೂ ಗುರುತಿಸಿದ್ದಾರೆ.

ನಗರಗಳ ನಿರ್ಮಾಣದ ಒಂದು ಮಹತ್ಕಾರ‍್ಯದಲ್ಲಿ ಪ್ರಭುತ್ವಗಳೂ ನಿರಂತರವಾಗಿ ತೊಡಗಿ ಕೊಂಡಿದ್ದವೆಂಬುದು ಇಲ್ಲಿಯ ವರ್ಣನೆಗಳಿಂದ ನಮಗೆ ಗೊತ್ತಾಗುತ್ತದೆ. ಈ ನಿರ್ಮಾಣಕ್ಕೆ ಕೊನೆ ಎಂಬುದಿಲ್ಲ. ನಿತ್ಯ ನಿರ್ಮಾಣಗೊಳ್ಳುತ್ತಲೇ ಇರುತ್ತವೆ. ಪ್ರಭುತ್ವವು ಕೈಗೊಳ್ಳುವ ಈ ಬಗೆಯ ನಿಲುವುಗಳಿಂದ ಅನ್ಯಾಯಕ್ಕೆ ಒಳಗಾಗುವ ಮಂದಿಯೂ ಇದ್ದಾರೆ. ಇಂಥವುಗಳ ಬಗೆಗೆ ಕಾವ್ಯ ಮೌನವನ್ನು ವಹಿಸುತ್ತದೆ. ಬಹುಮುಖಿ ನೆಲೆಯ ಕಥಾಗುಚ್ಚುವನ್ನು ಹೊಂದಿರುವ ‘ಜೈಮಿನಿ ಭಾರತ’ವು ಸ್ವೀಕೃತಿ ಶೈಲೀಕರಣ ಹಾಗೂ ವಿಧಿಯೊಂದಿಗೆ ಸಮಿಕರಣವನ್ನು ಮಾಡುವ ಕಾಲದೇಶಾತೀತ ಸಂಕೀರ್ಣಕಥನವನ್ನು ಮಂಡಿಸುತ್ತದೆ. ಪ್ರಭುತ್ವದ ಮಹತ್ವಾಕಾಂಕ್ಷೆಯ ಪರ ಕವಿಯ ನಿಲುವು ನಿಂತಿರುವಂತೆ ತೋರುತ್ತಿದ್ದರೂ ಅದು ತೋರಿಕೆ ಮಾತ್ರವೆಂಬುದು ಕಾವ್ಯವನ್ನು ಪ್ರವೇಶಿಸಿದವರಿಗೆ ಗೋಚರವಾಗುತ್ತದೆ.

ಪ್ರಭುತ್ವದ ವಿಸ್ತರಣೀಕರಣದ ಆತ್ಯಂತಿಕ ಘಟ್ಟವೆಂದರೆ ಸಾಮ್ರಾಟನಾಗುವುದು. ಅದನ್ನು ಸಾಧ್ಯವಾಗಿಸಿಕೊಳ್ಳುವ ಪರಿ ಅಶ್ವಮೇಧಯಾಗದ ಮುಖೇನ, ಈ ಪರ್ಯಟನೆಯಲ್ಲಿ ಹಲವಾರು ನಗರಗಳು, ಆ ನಗರದ ಪ್ರಭುಗಳು, ಅವರ ಶೀಲ ಸ್ವಭಾವಗಳು, ಪರಾಕ್ರಮ, ಶೌರ‍್ಯಗಳು, ತ್ಯಾಗ-ಬಲಿದಾನಗಳು-ಹೀಗೆ ಅನೇಕ ಮುಖಗಳನ್ನು ಪರಿಚಯಿಸುತ್ತ ಅಹಂಕಾರದ ಕತ್ತಲೆಯಿಂದ ಮುಚ್ಚಿಹೋಗಿರುವ ಜ್ಞಾನದ ಕಣ್ಣನ್ನು ತೆರೆಸುವ ಒಂದು ಉಪಾಯವಾಗಿ ಅಶ್ವಮೇಧದ ಕುದುರೆ ಪರ್ಯಟನ ಆರಂಭಿಸುತ್ತದೆ. ಗೆಲುವಿನ ನಂತರ ಸದಾ ಗೆಲುವೇ ಸಾಧ್ಯವಿಲ್ಲ. ಸೋಲು ಗಳೂ ಬೆನ್ನತ್ತಿ ಬರುತ್ತವೆಂಬ-ತಾತ್ವಿಕತೆಯನ್ನು ಲಕ್ಷ್ಮೀಶ ಮಂಡಿಸುವಂತೆ ತೋರುತ್ತಿದ್ದರೂ ಅದನ್ನು ಮೀರಿದ ಪ್ರಭುತ್ವದ ವಿನಾಶಕಾರಿತನವನ್ನು ಅನಾವರಣಗೊಳಿಸಲು ಯತ್ನಿಸುತ್ತಾನೆ.

ಪ್ರಭುತ್ವವೆನ್ನುವುದು ನಗರ ಸಂಸ್ಕೃತಿಯ ಒಂದು ಭಾಗವೇ ಆಗುವುದರಿಂದ ಅದರಾಳದಲ್ಲಿ ಶ್ರೇಷ್ಠತೆಯ ‘ಅಹಂ’ ಕೂಡ ಬೆಳೆದು ಬಂದು ಬಿಡುತ್ತದೆ. ಉಳಿದುದೆಲ್ಲವನ್ನೂ ಕ್ಷುಲ್ಲಕವಾಗಿ ಕಾಣುವ ದುರಹಂಕಾರದ ಪ್ರವೃತ್ತಿ ಪ್ರದರ್ಶನಕ್ಕೆ ಸಾಮಾನ್ಯಾತಿ ಸಾಮಾನ್ಯರಾದ ಸಣ್ಣ ಸಣ್ಣ ರಾಜರು, ಚಂದ್ರಹಾಸ, ಬಬ್ರುವಾಹನರಂತ ಮಕ್ಕಳು, ಲವ-ಕುಶರಂಥ ಆಡುವ ಹುಡುಗರ ಮುಖೇನ ಕಾಣಿಸುವ ಒಂದು ದೊಡ್ಡ ಪ್ರಯತ್ನವನ್ನು ಮಾಡುತ್ತಾನೆ. ನಗರ ಸಂಸ್ಕೃತಿಯನ್ನು ಅಂತರ್ಗತ ಗೊಳಿಸಿಕೊಂಡಿರುವುದರಿಂದ ವಿನಯಕ್ಕೆ ಆಸ್ಪದವೇ ಇಲ್ಲ. ದುರಹಂಕಾರವೇ ಎಲ್ಲೆಲ್ಲೂ ರಾರಾಜಿಸುವ ಕ್ರಮವನ್ನು ಲಕ್ಷ್ಮೀಶ ವಿಡಂಬಿಸುತ್ತಿದ್ದಾನೆ. ಪ್ರಭುಕೇಂದ್ರಿತ ಕಾವ್ಯಗಳ ರಚನೆಯಲ್ಲಿ ನಗರಗಳಿಗೂ ಪ್ರಭುತ್ವಕ್ಕೂ ಇರುವ ಅವಿನಾಭಾವ ಸಂಬಂಧವನ್ನು ವಿಶ್ಲೇಷಿಸುತ್ತಿದ್ದರು. ದೈವಕೇಂದ್ರಿತ ಕಾವ್ಯಗಳ ರಚನೆಯನ್ನು ನಗರ ಸಂಸ್ಕೃತಿಯ ಪ್ರತೀಕದಂತೆ ಪ್ರಭುತ್ವಗಳು ವರ್ತಿಸುವ ಬಗೆಯನ್ನು ನಿರೂಪಿಸುವ ಪ್ರಯತ್ನವನ್ನು ಮಾಡುತ್ತವೆ.

ಲವ-ಕುಶ, ಚಂದ್ರಹಾಸರ ಕಥಾನಕಗಳಲ್ಲಿ ನಗರ ಸಂಸ್ಕೃತಿಯ ವಿನಾಶಕಾರಕ ಗುಣವನ್ನು-ಅವುಗಳ ವಿದ್ರೋಹಾತ್ಮಕತೆಯನ್ನು ಕಾಣಿಸುವ ಮೂಲಕ ಮನುಷ್ಯನ ಅಂತರಾಳವನ್ನು ಕದಡುವ ವಂಚನೆ, ಕ್ರೌರ‍್ಯಗಳ ಜಗತ್ತಿನ ಅನಾವರಣ ಮಾಡುತ್ತಾನೆ. ಹುಟ್ಟಿದ ಮಗುವು ತಮ್ಮ ಸಾವಿಗೆ ಕಾರಣವಾಗುತ್ತದೆನ್ನುವ ಅಪನಂಬಿಕೆಯ ಜಗತ್ತಿನಿಂದ ಪಾರಾಗಿ ಕಾಡಿನಲ್ಲಿ ಕೊಲೆಯಾಗದೆ ಉಳಿವ ಚಂದ್ರಹಾಸ, ‘ಕೊಲೆಗಾರರೆ’ಂದು ನಗರಸಂಸ್ಕೃತಿಯ ವಕ್ತಾರದಿಂದ ಕರೆಯಲ್ಪಡುವ ಕೊಲೆಗಾರರು ಕರುಣಾಳುಗಳಾದರೆ, ದುಷ್ಟ ಬುದ್ದಿವಂತರಿಂದ ಕೊಲೆಯಾಗುವ ಅಪಾಯಕ್ಕೆ ಎದುರಾಗುವ ಚಂದ್ರಹಾಸ ಆದರೂ ಅದರ ಕೈಯಿಂದ ಪಾರಾಗುವ ಕ್ರಮ-ಹೀಗೆ ಮಂಡಿಸುವ ಕಥನವು ನಮಗೆ ಹೇಳುತ್ತಿರುವುದು ನಾಗರೀಕತೆಯೆಂದು ಕರೆಯುವ ಆಧುನಿಕತೆಯ ವಿನಾಶಾ ಪ್ರವೃತ್ತಿಯನ್ನೆ.

ವಸಾಹತು ಶಾಹಿಯ ವಾಣಿಜ್ಯೀಕರಣಗೊಳ್ಳುವ/ಗೊಳಿಸುವ ಅಪೇಕ್ಷೆಯ ಹಿಂದೆಯೂ ಇಂಥದೇ ವಿಸ್ತರಣೀಕರಣ ಮತ್ತು ಆಕ್ರಮಣ ಪ್ರವೃತ್ತಿಯ ಪ್ರಭುತ್ವದ ಇನ್ನೊಂದು ಮುಖವನ್ನು ಅನಾವರಣ ಗೊಳಿಸುತ್ತದೆ. ಇಷ್ಟೊಂದು ಯೋಜನೆಗಳ ಅನುಷ್ಠಾನ, ಅಭಿವೃದ್ದಿಯ ಹೆಸರಿನಲ್ಲಿ ಕೈಗೊಳ್ಳುತ್ತಿರುವ ಅನೇಕ ಯೋಜನೆಗಳಿಂದ ಬುಡಕಟ್ಟು ಮತ್ತು ದೇಶಿಯರಿಗೆ ಆಗುತ್ತಿರುವ ಕಷ್ಟ ನಷ್ಟ, ನಿರ್ವಸಿತರಾಗುವ ಭಯ, ತಲ್ಲಣಗಳು ಅಸಂಖ್ಯ. ಪ್ರಭುತ್ವದ ದೃಷ್ಟಿಯಲ್ಲಿ ಇವು ಸಮಸ್ಯೆಗಳೇ ಅಲ್ಲ. ಕಾಡು ನಾಶವಾಗುವುದೆಂದರೆ, ಭೂರಹಿತವಾಗುವುದೆಂದರೆ-ಅಭಿವೃದ್ದಿ ಮೀಮಾಂಸೆಯಲ್ಲಿ ಇವೆಲ್ಲವೂ ಸಾಮಾನ್ಯವೆ. ಕಾನೂನು, ಸೈನ್ಯವನ್ನು ತನ್ನ ರಕ್ಷಣೆಗೆ ಬಳಸಿ ಕೊಳ್ಳುವ ಪ್ರಭುತ್ವದ ಮುಂದೆ ಬಹುಸಂಖ್ಯಾತರು ನಿರುತ್ತರರಾಗಿದ್ದಾರೆ.

ನಾಗರೀಕತೆಯ ಆಕ್ರಮಣ ಪ್ರವೃತ್ತಿಯ ವಿರುದ್ಧದ ತಣ್ಣನೆ ದನಿಯಂತೆ ಜೈಮಿನಿ ಭಾರತ ಕಾಣುತ್ತದೆ. ಜನ ಇದನ್ನು ಆಸ್ಥೆಯಿಂದ ಆಲಿಸುತ್ತಿದ್ದದ್ದು ಕೇವಲ ದೈವಭಕ್ತಿಗಾಗಿ ಮಾತ್ರವಾಗಿರದೆ ಸಾಮ್ರಾಟರ ವಿರುದ್ಧ ಸ್ಥಳಿಯರು ಸೆಣಸಿ ಗೆಲ್ಲುತ್ತಿದ್ದ ಕಥನಕ್ಕಾಗಿಯೇ ಎಂದರೆ ಆಶ್ಚರ‍್ಯಪಡ ಬೇಕಾಗಿಲ್ಲ. ಪ್ರಭುತ್ವದ ಮನಸ್ಥಿತಿಯ ವಿನಾಶದ ವಿರುದ್ಧದ ಒಂದು ದೊಡ್ಡದನಿ ಲಕ್ಷ್ಮೀಶ.