ಪಾಂಡವರ ಅಶ್ವಮೇಧ ಕುದುರೆಯ ಬಾಲಕ್ಕೆ ಕಟ್ಟಿದ ರಾಶಿ ಕತೆಗಳನ್ನು ಓದಿ, ಕೇಳಿ, ಆಡಿ, ನೋಡಿ ಕನ್ನಡಿಗರು ಬದುಕಿಸಿದ್ದಾರೆ – ಈಗಲೂ ಬದುಕಲು ಬಿಟ್ಟಿದ್ದಾರೆ. ಮೂಲ  ಜೈಮಿನಿಯನ್ನು ಬಿಡಿ, ಕನ್ನಡದ ಲಕ್ಷ್ಮೀಶನನ್ನೂ ನೆನಪಿಸದೆ ಯಕ್ಷಗಾನದೊಳಗೆ ಅವನನ್ನು ಸಮುದಾಯ ಮರುರೂಪಿಸಿದೆ. ಹಾಗಾಗಿ ಇಂತಹ ಜೀವಂತ ಸಂಗತಿಯನ್ನು ಸರಳವಾಗಿ ಗ್ರಹಿಸುವುದು ಸಮುದಾಯ ವಿರೋಧಿ ನಿಲುವೇ.

ಮಹಾಕಾವ್ಯದೊಳಗೆ ಕತೆ – ಉಪಕತೆಗಳು ಇವೆ – ಎಂಬ ಹೇಳಿಕೆಯಲ್ಲಿ ಒಂದು ದೊಡ್ಡ ಧಣಿ ಕತೆಯ ಆಶ್ರಯದಲ್ಲಿ ಹಲವು ಕಿರು ‘ಒಕ್ಕಲು ಕತೆಗಳಿವೆ’ ಎಂಬ ಧೋರಣೆ ಕುಳಿತುಕೊಂಡು ಲಕ್ಷ್ಮೀಶನ ಕಾವ್ಯವನ್ನು ಕತೆಗಳ ಜಟಿಲ ಅಂತರ್‌ಸಂಬಂಧವಾಗಿ ಗ್ರಹಿಸಿದ್ದರೆ ಇಂತಹ ಪ್ರಮಾದವಾಗುತ್ತದೆ. ಕತೆಗಳ ಕರುಳ ಹೆಣಿಗೆಗಳಿಗೆ ಕಾವ್ಯದುದ್ದಕ್ಕೂ ಅಪಾರ ಮಾದರಿಗಳಿವೆ.

ಒಂದು ಮಹಾ ಪಯಣವೇ ಕಾವ್ಯ ಎಂಬುದು ಹೊರ ಭಾಸ. ಯಾಕೆಂದರೆ ಪಯಣ ದೊಳಗಿಂದ ಕತೆಗಳು ಹುಟ್ಟುವುದು ಪಯಣವು ಸ್ಥಗಿತವಾದಾಗ! ಸ್ಥಗಿತ ಕುದುರೆಯಿಂದ ಹುಟ್ಟುವ ಕತೆಗಳು, ಮರಳಿ ಪಯಣವನ್ನು ಚಲಿಸಲು ಬಿಟ್ಟು – ತಾವೂ ಆ ಪಯಣದ ಭಾಗವಾಗುತ್ತವೆ. ಈ ಕತೆಗಳು ವೀರ-ಭಕ್ತಿ; ರೌದ್ರಾವೇಶ-ದಿವ್ಯಶಾಂತಿ; ಅಸಾಧಾರಣ ಪ್ರತಿಭಟನೆ – ಸಂಪೂರ್ಣ ಶರಣಾಗತಿ ಇಂತಹ ಬಾಳಿನ ಅಪೂರ್ವ ಭಂಗಗಳನ್ನು ಜೋಡಿಸಿಕೊಳ್ಳುವುದೇ ಕುತೂಹಲದ ವಿಚಾರ. ಕಾವ್ಯ ಪ್ರಪಂಚದ ಈ ಬಗೆಯ ಮಹತ್ವಾಕಾಂಕ್ಷೆ ಮತ್ತು ಪಡುವ ಪರಿಪಾಟಲು ಅದರಲ್ಲಿ ಸಿದ್ಧತಂತ್ರಗಳೂ, ಪೂರ್ವ ನಿರ್ಧರಿತ ಫಲಿತಗಳೂ ಇವೆಯೇನೋ – ಎಂಬ ಬೀಸು ತೀರ್ಮಾನದ ಭ್ರಮೆಗೆ ಕಾರಣವಾಗಿ ಬಿಡಬಲ್ಲುದು.

ಚಲಿಸುವ ಕುದುರೆ ಮತ್ತದರ ಹಿಂದೆ ಸಾಗುವ ಅರ್ಜುನ ಇಲ್ಲಿ ಎದ್ದು ಕಾಣುವ ಚಿತ್ರ; ಕಾಣದೆ ಆಗಾಗ ಬರುವ ಕೃಷ್ಣ ಅಂತರ್ಜಲದ ಹರಿವು. ಅರ್ಜುನನು ಪಯಣದುದ್ದಕ್ಕೆ ದೇಶ, ಜನ, ಹವೆ, ಮಣ್ಣುಗಳನ್ನು ಭೇಟಿ ಮಾಡುತ್ತಾ ಹೊಂದುವ ವಿಕಾಸಕ್ಕೆ ಕತೆಗಳೊಳಗಿನ ಕರುಳ ಸಂಬಂಧವೇ ಕಾರಣ. ಅರ್ಜುನನ ವಿಕಾಸ ಅವನ ಅಂತಃಕರಣವನ್ನು ಬಲಗೊಳಿಸುತ್ತದೆ; ಕಾವ್ಯವನ್ನು ಗ್ರಹಿಸುವವನಲ್ಲಿ ಕೂಡ ವಿಶ್ವಾತ್ಮದ ಅರಿವಿಗೆ ಕಾರಣವಾಗುತ್ತದೆ. ಆಗಾಗ ಕಾಣುವ ಸರಳ ಕೃಷ್ಣನಿಗಿಂತಲೂ ಹೆಚ್ಚು ಅರ್ಥಪೂರ್ಣವಾದ ಇನ್ನೊಂದು ಅನಂತ ಚೇತನಕ್ಕೆ ಹಂಬಲಿಸುವ ಪಾತ್ರಗಳು ಅರ್ಜುನನ್ನು ಮೀರುತ್ತವೆ. ಸುಧನ್ವ, ಮಯೂರಧ್ವಜ, ಚಂದ್ರಹಾಸ, ಬಭ್ರುವಾಹನ, ಮೊದಲಾದವರೆದುರು ಅರ್ಜುನನನ್ನು ಕೃಷ್ಣನು ಗೆಲ್ಲಿಸುವುದು ಪೂರ್ವನಿರ್ಧರಿತ ವ್ಯವಹಾರದಂತೆ ಭಾಸವಾಗುವುದು ಈ ಕಾರಣಕ್ಕಾಗಿ. ಕಾವ್ಯದ ಜನಪ್ರಿಯತೆ ಇರುವುದು ಯುದ್ಧದ ತೀವ್ರತೆ ಮತ್ತು ಯುದ್ಧದಲ್ಲಿ ಪಾಲ್ಗೊಳ್ಳುವ ಪಾತ್ರಗಳ ಅಪಾರ ವೈವಿಧ್ಯಕ್ಕಾಗಿ. ಆದರೆ ಘರ್ಷಣೆಯ ಆಳದ ಅಂತಃಪ್ರವಾಹ ಅಲೌಕಿಕವಾದ ಶಾಂತವಾಗಿರುವುದರಿಂದಲೇ ಕಾವ್ಯದ ಅಂತ್ಯವು ಕಾಲಾತೀತ ವಿಶ್ವದ ಚೈತನ್ಯವನ್ನು ಬಕದಾಲ್ಭ್ಯನ ಮೂಲಕ ಸಾಧಿಸುತ್ತದೆ.

ಒಂದೇ ಕತೆಗೆ ಇನ್ನೊಂದು ಕತೆ ಹೆಣೆಯುವುದು ಬಂಧದ ಬಿಗಿಯಷ್ಟೇ ಅಲ್ಲ, ಅದೊಂದು ‘ಢೀ’ ಕೂಡಾ. ಈ ಬಗೆಯಲ್ಲಿ ಕತೆಗಳ ಜೋಡಣೆಯ ಹುನ್ನಾರ ಕಾವ್ಯಕ್ಕೆ ವೈವಿಧ್ಯದ ಚೆಲುವನ್ನು ತರುವುದಕ್ಕಾಗಿ ಇದೆಯೆಂದು ಸದಾ ನಂಬಬಾರದು. ಬದುಕಿನ ತಳಮಳ, ಭಕ್ತಿ, ಮೋಹ, ರಾಜಕಾರಣಗಳಾಚೆ ಇನ್ನೊಂದು ಅರಿವು ಇದೆಯೇ? ಎಂಬ ಹುಡುಕಾಟವನ್ನು ಕಾವ್ಯ ಧ್ಯಾನಿಸುವ ವಿಚಿತ್ರ ತಂತ್ರವೇ ಈ ಢಿಕ್ಕಿಯ ಮುಖಾಮುಖಿ.

ಈಗ ಹೇಳಿದ ನಿಲುವುಗಳನ್ನು ಕೊಂಚ ಕತೆಗಳಾಗಿ ಬೆಳೆಸಿಕೊಂಡರೆ ಅದು ಹೀಗಾಗುತ್ತದೆ. ನೀಲಧ್ವಜನ ಸಂದರ್ಭದಲ್ಲಿ ಜ್ವಾಲೆಯ ಸಾವಿನ ಶಾಪವು ಗೆಲುವಿನ ಜೊತೆಗೇ ಇದೆ. ಆದರೆ ಅರ್ಜುನ ಇದರಿಂದ ಅಲುಗಿಲ್ಲ. ಸುಧನ್ವನ ರಣದ ಎಡೆಯಲ್ಲಿ ಘೋರವಾದ ಅಣ್ಣ-ತಮ್ಮಂದಿರ ಕೊಲೆ ನಡೆಯುತ್ತದೆ; ಅದು ಅರ್ಜುನನ ಲಾಲಸೆಯ ವಿಜಯಕ್ಕಾಗಿ ಪ್ರವಿಳೆಯಲ್ಲಿ ಅರ್ಜುನ ಗೆಲ್ಲಲಾರ – ಆಕಾಶದ ಸೂಚನೆಯಂತೆ ಯುದ್ಧ ನಿಂತು, ಕುದುರೆ ಮತ್ತು ಹೆಣ್ಣು ದಕ್ಕುತ್ತವೆ. ಅರ್ಜುನನ ಠೇಂಕಾರ ಅಡಗುವುದು ಬಭ್ರುವಾಹನ ಎದುರಲ್ಲಿಯೇ. ಸತ್ತ ಅರ್ಜುನ ಬದುಕಲು ಚಿತ್ರಾಂಗದೆಗೆ ಮಾಡಿದ ಅನ್ಯಾಯ ಒಪ್ಪಬೇಕಾಯಿತು. ಬಭ್ರವಾಹನನ ಗೆಲುವನ್ನು ಚಿತ್ರಾಂಗ ದೆಯ ನ್ಯಾಯದ ಜೊತೆ ಕೃಷ್ಣನು ಘೋಷಿಸಿದ. ವೀರವರ್ಮನ ಸಂದರ್ಭದಲ್ಲಿ ಅರ್ಜುನನು ತಾನೇ ಮುಂದಾಗಿ ನಿಂತು ಅವನ ತಾಕತ್ತನ್ನು ಎತ್ತಿಹಿಡಿದ ಚಂದ್ರಹಾಸನಲ್ಲಿ ಯುದ್ಧದ ಪ್ರಶ್ನೆಯೇ ಬರಲಿಲ್ಲ. ಬಕದಾಲ್ಭ್ಯನ ಎದುರು ನಿಂತಾಗ ಲೌಕಿಕವೇ ಮರೆಯುವ ಅರಿವು ಅರಳಿ ಬಿಟ್ಟಿದೆ. ಅರಿವು ಬೆಳಗಿದ ಅಂತಃಕರಣ ಅರ್ಜುನನಲ್ಲಿ ದ್ರವಿಸಿದ್ದರಿಂದಲೇ “ತಾಯೆ, ಪಗೆಗೊಂಡು ನಾ ನಿನಿಗಂದು ಮಾಡಿದ ಅನ್ಯಾಯಮಂಸೈರಿಪುದು” ಎಂದು ಕ್ಷಮೆಯ ನೀರು ಅರ್ಜುನನ ಮನೋಭೂಮಿಕೆಯಲ್ಲಿ ಜಿನುಗಿದೆ. ಇಂತಹ ಕರುಳು ಹೆಣ್ಣಿಗೆ ಇರುವ ಕಾರಣಕ್ಕೆ ಕಾವ್ಯವು ಯುದ್ಧ ಪ್ರದರ್ಶನದ ನಟನೆಯನ್ನು ಮಾಡುತ್ತದೆ; ನಿಜವಾಗಿ ಅದು ಯುದ್ಧ ಮತ್ತು ಅಧಿಕಾರದ ಅಮಲಿನಾಚೆ ಬದುಕಿನ ಅರ್ಥವಿದೆಯೇ ಎಂದು ಮತ್ತೆ ಮತ್ತೆ ತೆರೆಯ ಮರೆಯಲ್ಲಿ ಅರಸುತ್ತಿರುತ್ತದೆ. ಹಾಗಾಗಿ ಒಂದು ಸಾಚಾಯುದ್ಧವನ್ನು ಸಾಧಿಸದ ಅಪೂರ್ವ ವೀರ ಕಾವ್ಯ; ಶೌರ‍್ಯವನ್ನು ಹೊರಗಡೆ ಕಾಣುವಂತೆ ವಿಜೃಂಭಿಸಲು ಬಿಟ್ಟು, ಬದುಕಿನ ಪ್ರವಾಹವನ್ನು ಅಮೂರ್ತಗಳಲ್ಲಿ – ಕಂಡರಿಯದ ವಿಸ್ಮಯಗಳಲ್ಲಿ ಲೀನಗೊಳಿಸಿಕೊಂಡ ಕತೆಗಳ ಗೊಂಚಲು – ಎಂಬಂತೆ ಲಕ್ಷ್ಮೀಶನ ಜೈಮಿನಿ ಭಾರತವನ್ನು ಓದಲು ಬರುತ್ತದೆ.

ಜ್ವಾಲೆ-ಚಂಡಿ ಪ್ರಸಂಗಗಳ ಅಹಂ, ಅರ್ಜುನನಲ್ಲೂ ಸ್ವತಃ ಇರುವ ಕೇಡು. ಸುಧನ್ವನ ಯೌವನ, ಪ್ರವಿಳೆಯ ಚೆಲುವು ಕೃಷ್ಣನ ಕಾತರಕ್ಕೂ ಅವರಲ್ಲಿ ಅವಕಾಶ ಕೊಡಬಲ್ಲುದು. ಮಯೂರಧ್ವಜನಿಗೆ ಕೃಷ್ಣ ಸಿಕ್ಕಿಲ್ಲ, ಚಂದ್ರಹಾಸ ಮೂರು ನೂರು ವರ್ಷಗಳಿಂದ ಕೃಷ್ಣನಿಗೆ ಕಾಯುತ್ತಿದ್ದಾನೆ. ಕಾಲಾತೀತ ಮುದುಕ ಬಕದಾಲ್ಭ್ಯ ಇವರೆಲ್ಲರಿಗೆ ತೋರಿಸುವ ಕೃಷ್ಣನೋ ಕೈಕಾಲು ಕಿರೀಟ ಧಾರಿಯಲ್ಲ; ಅದು ಎಲೆಯ ಮೇಲೆ ತನ್ನ ಕಾಲ್ಬೆರಳು ತಾನು ಚೀಪುವ ಮಗು. ಅನುಕೂಲವಾದಾಗ ಇದನ್ನು ಸ್ವತಃ ಸರಳ ಕೃಷ್ಣನೂ ನೋಡಿ ಬಿಡಬಲ್ಲ! ಅಶ್ವಮೇಧದ ಮಹಾಪಯಣಕ್ಕಿರುವ ಈ ವಿಚಿತ್ರ ಅಂತ್ಯವನ್ನು ಲಕ್ಷ್ಮೀಶನ ಕಾವ್ಯದ ಓದಿನಲ್ಲಿ ನಾವು ಗಮನಿಸಿಯೇ ಇಲ್ಲ. ಕಥೆಗಳ ಗೊಂಚಲಲ್ಲಿ, ಒಂದೋ ಎರಡೋ ಕಥೆಗಳನ್ನಷ್ಟೇ ಆರಿಸಿದಾಗ ಅದು ಆ ಕಥೆಯ ಸರಳ ತಾತ್ವಿಕತೆಯನ್ನಷ್ಟೇ ಸ್ಫುರಿಸುತ್ತದೆ; ಲಕ್ಷ್ಮೀಶನ ಕಾವ್ಯವನ್ನು ಕೊಂಚ ಕೊಂಚವಾಗಿ ಓದುವುದೇ ಬೇರೆ – ಒಟ್ಟಾಗಿ ಓದುವುದೇ ಬೇರೆ. ಕತೆಗಳು ಮೂರನೆಯ ಆಯಾಮಕ್ಕೆ ಹೊರಳಲು ಪರಸ್ಪರ qs ಕೊಡಬಲ್ಲವು ಎಂಬುದಕ್ಕೇ ಇನ್ನೂ ಹಲವು ಸೂಚನೆಗಳು ಕಾವ್ಯದಲ್ಲಿವೆ.

ವೈದಿಕ ಕರ್ಮಾಚರಣೆಯ ಜೊತೆ ಭಕ್ತಿಯು ಎದುರಾಳಿಯಾಗಿ ಯುದ್ಧಕ್ಕೆ ತೊಡಗುವುದು ಕಾವ್ಯದಲ್ಲಿ ಸ್ಪಷ್ಟವಿದೆ. ಇದನ್ನು ಕನ್ನಡ ವಿಮರ್ಶೆ ಈಗಾಗಲೇ ಗುರುತಿಸಿದೆ. ಸರ್ಪಮೇಧವು ಮೊದಲ ‘ಕಥನ ಕೌತುಕಕ್ಕೆ’ ಕಾರಣ, ಮರುತ್ತ-ರಾಮ-ಮಯೂರಧ್ವಜರ ಅಶ್ವಮೇದಗಳೂ ನಡೆದಿವೆ. ಭೀಷಣನೆಂಬಾತ ನರಮೇಧವನ್ನೂ ನಡೆಸಿದ್ದಾನೆ. ಆದರೆ ಎಲ್ಲಾ ಮೇದಗಳೂ ಬಕದಾಲ್ಭ್ಯನಿಗೆ ವ್ಯರ್ಥವೆನಿಸಿವೆ. ಎದ್ದು ಕಾಣದ ಬಿಗಿತವಿಲ್ಲದೆ ಸ್ವಚ್ಛಂದವೆಂಬಂತಿರುವ ಕತೆಗಳನ್ನು ಕೊಂಚ ಬಿಗಿಗೊಳಿಸಿದರೆ ಸ್ಫುರಿಸಬಲ್ಲ ಧ್ವನಿ ಇದು. ಇದು ಭಕ್ತಿಪಂಥದ ನಡವಳಿಕೆ ಮಾತ್ರವೇ?

ರಾಮಾಯಣ, ಭಾಗವತಗಳಿಂದಲೂ ಪಡಕೊಳ್ಳುವ ಕಾವ್ಯ, ಯುಗಗಳನ್ನೆಲ್ಲಾ ಆವರಿಸಿ ಕಲಿಯುಗದ ಗಡಿಯವರೆಗೆ ಬರುತ್ತದೆ. ಲೋಕಗಳು ಹಲವನ್ನು ವ್ಯಾಪಿಸಿ ಪ್ರಾಣಿ ಜೀವ-ದೇವಗಳನ್ನೂ ಒಳಗೊಳ್ಳುತ್ತದೆ. ಇದರಿಂದ ಕಾವ್ಯಕ್ಕೆ ಅಪೂರ್ವ ಕಲ್ಪನೆ-ರಂಜನೆಗೆ ಕಣಸಿದ್ದಿಸಿತು. ಯೌವನಾಶ್ವನು ಅಶ್ವಮೇದದ ಕುದುರೆ ಅಪಹರಿಸಿಯೂ ಕರುಣೆ – ಅರ್ಪಣೆಗಳ ಕಡೆ ಮೂಡು ಪುದು; ಅಶ್ವಮೇಧದ ಅರ್ಥದಾಹವು ಯಾಗ ಸಿದ್ಧತೆಗಾಗಿ ಪರರ ಸಂಪತ್ತನ್ನೇ ಅವಲಂಬಿಸಿರುವುದು ಇವೆಲ್ಲಾ ಕೇವಲ ರಂಜನೆಯ ಭಾಗಗಳಲ್ಲ, ಬದಲಾಗಿ ಕತೆಗಳ ಹೆಣೆಗೆಯಲ್ಲಿ ಸ್ಫುರಿಸಿದ ವಿಚಾರ ಜಿನುಗು. ಪೌರೋಹಿತ್ಯದ ಪರಿಶುದ್ಧತೆಯನ್ನೇ ಪ್ರಶ್ನಿಸುವ ಅವಧೂತ ಸಂವರ್ತನು ಕಾವ್ಯದ ಮುಂತುದಿಯಲ್ಲಿದ್ದರೆ, ‘ಫಲಾಪೇಕ್ಷೆಯ ಭಕ್ತಿಗೂ ಬೆಲೆ ಎಲ್ಲಿ?’ ಎಂಬ ಬಕದಾಲ್ಭ್ಯ ಹಿಂತುದಿಯಲ್ಲಿ ಬರುವುದು ಕೇವಲ ಕಥಾ ಕಲ್ಪನೆಯಲ್ಲ.

ಯುದ್ಧದ ಜೊತೆಗೆ ಭಕ್ತಿಯನ್ನು ಘರ್ಷಿಸುವಂತೆಯೇ ಪ್ರೀತಿ-ಸಂಸಾರ-ತಾಯ್ತನ-ನ್ಯಾಯ ನಿಷ್ಠುರತೆಗಳೂ ಯುದ್ಧದ ಶೌರ್ಯದ ಜೊತೆ ಸರಳವಾಗಿ ಮುಖಾಮುಖಿಯಾಗುತ್ತವೆ. ಕಾವ್ಯದ ಬಹುಮುಖಿಯಾದ ತಾತ್ವಿಕತೆಗೆ ಇವೆಲ್ಲ ಪುರಾವೆಗಳು. ಇವು ಸಡಿಲ ಕತೆಗಳಲ್ಲಿ ದೊಡ್ಡದನ್ನು ಸಾಧಿಸ ಹೊರಟ ಸಾಹಸಗಳು.

ಕಾವ್ಯವು ಆವಾಹಿಸಿದ್ದು ಮಹಾಭಾರತದ ವೃದ್ಧಾಪ್ಯ ಮೂಡುವ ಪರ್ವವನ್ನು ಕೃಷ್ಣನು ಇಲ್ಲಿ ಸರಳಗೊಂಡು ಬಿಡುತ್ತಾನೆ; ದ್ವಾಪರದ  ಗಡಿಯಲ್ಲಿ ಅರ್ಜುನನೂ ನಿವೃತ್ತನಾಗಬೇಕಾಗಿದೆ. ಸುಧನ್ವ, ಬಭ್ರುವಾಹನ, ವೃಷಕೇತು, ತಾಮ್ರಧ್ವಜ – ಹೀಗೆ ಹೊಸ ಪೀಳಿಗೆ ಬಕದಾಲ್ಭ್ಯನ ಅಮೂರ್ತವನ್ನು ದಕ್ಕಿಸುವ ಕನಸನ್ನಿಟ್ಟು ತಮ್ಮ ಮೌಲ್ಯಗಳನ್ನು ಸ್ಥಾಪಿಸುವ ಪ್ರಯತ್ನದಲ್ಲಿದ್ದಾರೆ. ಕನ್ನಡದ ವಿಮರ್ಶೆ ಈ ಸೂಕ್ಷ್ಮವನ್ನು ಕಂಡಿದೆ. ಅರ್ಜುನನನ್ನು ಕೃಷ್ಣ ಗೆಲ್ಲಿಸಿದ್ದಾನೆ; ಲಕ್ಷ್ಮೀಶನು ಈ ನರ-ನಾರಾಯಣರ ಸೋಲನ್ನು ತೋರಿಸಿಲ್ಲ – ಎಂಬ ಕಾರಣಕ್ಕಾಗಿ ಪಾತ್ರ ಪ್ರಪಂಚದ ಹೊಸ ಪೀಳಿಗೆಯ ಪುಟಿಯುವಿಕೆಯನ್ನು ನಿರಾಕರಿಸಬೇಕಾಗಿಲ್ಲ. ಜೈಮಿನಿ ಭಾರತದ ಮರುಹುಟ್ಟು ಗಳನ್ನು ಯಕ್ಷಗಾನವು ಅರ್ಪಿಸುವಾಗ ರಾತ್ರೆಯ ಅಂತರಾಳದ ಆಟಗಳಲ್ಲಿ ಪ್ರಧಾನವಾಗಿ ಅರಳುವುದು ಈ ಚಿಗುರು ಪಾತ್ರಗಳ ಧೋರಣೆಗಳು ಎಂಬುದು ಇದಕ್ಕೆ ಜೀವಂತ ಸಾಕ್ಷಿ. ಲಕ್ಷ್ಮೀಶನ ಕಾವ್ಯವನ್ನು ಸಮಕಾಲೀನ ಸಾಮಾಜಿಕ, ರಾಜಕೀಯ ಧೋರಣೆಗಳ ಜೊತೆಗಿಟ್ಟು ಇಲ್ಲಿ ಓದಿಲ್ಲ; ಓದಬೇಕೆಂಬ ಹಟವೂ ಇಲ್ಲ. ಕತೆಗಳ ಗೊಂಚಲುಗಳ ಕರುಳ ಸಂಬಂಧ ಅರಿಯಲು ಓದುವ ದಾರಿಗಳು ಹಲವು ಇವೆ. ಲಕ್ಷ್ಮೀಶನ ಕಾವ್ಯದ ತಾತ್ವಿಕತೆಯು ಸಂಕೀರ್ಣ ವೆನಿಸಿದರೆ ಅದಕ್ಕೆ ಪ್ರಧಾನ ಕಾರಣ ಬಹು ಆತ್ಮಗಳ ಈ ಕತೆಗಳೆಂಬುದೇ ಇಲ್ಲಿ ಮತ್ತೆ ನೆನೆಯಬೇಕಾದ್ದು.