ಜೈಲಿನ ದಾರಿಯಲ್ಲಿ :
ಕೈಕಾಲುಗಳ ಬಿಗಿದು ಸಾಗಿಸುತ್ತಿದ್ದಾರೆ ಇವರು ನನ್ನನ್ನು ದೂರದ ಜೈಲಿಗೆ
ದಾರಿ ಬದಿ ಗುಡ್ಡಗಳಲ್ಲಿ ಹಕ್ಕಿ ಹಾಡುತ್ತಿವೆ ಅರಳಿವೆ ಹೂವು ಘಮ್ಮಗೆ
ಹಿಡಿದು ತಡೆಯಬಹುದೇ ಹೇಳಿ ನನ್ನ ಮನಸ್ಸನ್ನು ಈ ಎಲ್ಲ ಸೊಗಸಿಗೆ?
ಬೇಸರದ ಪಯಣ ಹಗುರಾಗಿ, ಅನಿಸುತ್ತದೆ : ಆತ್ಮೀಯರಿದ್ದಾರೆ ಜತೆಗೆ.

ಬದುಕಿನ ದಾರಿ ಸುಗಮ :
ಬೆಟ್ಟದೆತ್ತರದಲ್ಲಿ ಕಣಿವೆಗಳ ತಳದಲ್ಲಿ ಸಂಚರಿಸಿ ಬಂದ ನನಗೆ
ಬಟ್ಟ ಬಯಲಲ್ಲಿಂಥ ಕಷ್ಟವೊದಗೀತೆಂದು ತಿಳಿದೀತು ಹೇಗೆ ?
ಹುಲಿ ಅಡ್ಡ ಬಂದರೂ ಆ ಬೆಟ್ಟದಲ್ಲಿ, ತೊಂದರೆಯಾಗಲಿಲ್ಲ ನನಗೆ
ಬಯಲಲ್ಲಿ ಎದುರು ಹಾಕಿಕೊಂಡೆ ಈ ಜನವ ; ತಳ್ಳಿದರು ಜೈಲಿಗೆ.

ಜೆಂಗ್ಸಿ ಜೈಲನ್ನು ಪ್ರವೇಶಿಸಿದಾಗ :
ಹಳೆಯ ಖೈದಿಗಳು ಸ್ವಾಗತಿಸುತ್ತಾರೆ, ಜೈಲಿಗೆ ಬರುವ ಹೊಸಬರನ್ನು
ಆಕಾಶದಲ್ಲಿ ಕಪ್ಪು-ಬಿಳಿ ಮೋಡಗಳು ಆಡುತಿವೆ ಜೂಟಾಟವನ್ನು
ಈಗ ಮೇಲಿನ ನೀಲಿಯಲ್ಲಿ ಎಲ್ಲವೂ ತೇಲಿ ಹೋಗಿವೆ ದೂರದೂರಕ್ಕೆ
ಭೂಮಿಯ ಮೇಲೆ ಸ್ವತಂತ್ರವಾಗಿರಬೇಕಾದ ನಾನು ಬಿದ್ದಿದ್ದೇನೆ ಬಂಧನಕ್ಕೆ.

ಬೆಳಗಿನ ನೋಟ :
ಪ್ರತಿ ದಿನವು ಮೂಡಿ ಬರುತ್ತಾನೆ ಸೂರ್ಯ ಆ ಬೆಟ್ಟಗಳ ಹಿಂದಿನಿಂದ.
ಹಬ್ಬಿಕೊಳ್ಳುತ್ತದೆ ಚೆಂಗುಲಾಬಿಯ ಬೆಳಕು ನಾಡಿನ ತುಂಬ ಚೆಲುವಿನಿಂದ.
ಕತ್ತಲೆಯೆ ಗುತ್ತಿಗೆ ಹಿಡಿದು ಕೂತಂತಿರುವ ಈ ಜೈಲಿನೊಳಗೆ
ಒಂದಾದರೂ ಸೂರ್ಯನ ಕಿರಣ ಬರುವುದಾದರು ಹೇಗೆ ನಮ್ಮ ಬಳಿಗೆ ?

ಬೆಳಕುಗಳ ರಾತ್ರಿ :
ಎಷ್ಟೊಂದು ಸುಂದರ ರಾತ್ರಿ ! ಈ ಹಾಳು ಜೈಲಿನ ಒಳಗೆ
ಹೂವೂ ಇಲ್ಲ, ಮಧುವೂ ಇಲ್ಲ ; ಹೇಳಿ ಏನು ಮಾಡೋಣ ?
ಕಿಟಕಿ ಕಂಬಿಯ ಬದಿಗೆ ನಿಂತು ನೋಡುತ್ತೇನೆ ಸುಮ್ಮನೆ ಹೊರಗೆ.
ಚಂದ್ರನೂ ನೋಡುತಿದ್ದಾನೆ ನನ್ನನ್ನು, ಚೆಲ್ಲುತ್ತ ಬೆಳ್ಳಿ ಕಿರಣ.

ಶರತ್ಕಾಲದ ಹಬ್ಬದ ದಿನ :
ದುಂಡನೆಯ ಕನ್ನಡಿಯಂಥ ಹುಣ್ಣಿಮೆ ಚಂದ್ರ ಶರತ್ಕಾಲದಾಕಾಶದಲ್ಲಿ
ಥಳ ಥಳ ಹೊಳೆದು ಮುಳುಗಿಸಿದ್ದಾನೆ ನೆಲವನ್ನೆಲ್ಲ ಬೆಳ್ದಿಂಗಳಲ್ಲಿ.
ಹಬ್ಬದುತ್ಸವದೊಳಗೆ ಮನೆಮನೆಯಲ್ಲಿ ನಲಿಯುತ್ತಿರುವೆನ್ನ ಬಂಧುಗಳೆ
ಇಲ್ಲಿ ಈ ಜೈಲಿನಲ್ಲಿರುವ ನಮ್ಮ ಕೊರಗೇನೆಂದು ತಿಳಿದೀತೆ ನಿಮಗೆ ?

ಚಳಿಯಿರುಳು :
ಶರದೃತು : ತಣ್ಣಗೆ ಕೊರೆವ ರಾತ್ರಿ, ಹಾಸಲಿಲ್ಲ, ಹೊದೆಯಲೂ ಇಲ್ಲ ;
ಮುದುರಿ ಮಲಗಿದ್ದೇನೆ ನನ್ನ ಕಾವಿಗೆ ನಾನೆ ; ನಿದ್ರೆಯಿಲ್ಲ.
ಬಾಳೆ ತೋಟದ ಮೇಲೆ ಬೆಳ್ದಿಂಗಳಿಳಿದು, ಇನ್ನೂ ಛಳಿ.
ಕಿಟಕಿ ಕಂಬಿಗಳಾಚೆ ನೋಡುತ್ತೇನೆ, ಆಕಾಶದಲ್ಲಿ ಕೃತ್ತಿಕೆಯ ಥಳಿ !

ಜೈಲಿನಲ್ಲಿ ತನ್ನ ಗಂಡನನ್ನು ಭೆಟ್ಟಿಯಾದಾಗ :
ಅತ್ತ ಕಡೆ ಅವನು, ಇತ್ತ ಕಡೆ ಇವಳು
ಇಬ್ಬರ ನಡುವೆ ಸೆರೆಮನೆಯ ಕಬ್ಬಿಣದ ಸರಳು ;
ವ್ಯತ್ಯಾಸವೋ ಕೆಲವೇ ಕೆಲವು ಅಂಗುಲ
ಆದರೂ ಭೂಮಿ ಆಕಾಶಗಳ ಅಗಲ !

ತುಟಿಗೆ ಬಾರದ್ದನ್ನು ಕಣ್ಣು ಹೇಳುವ ತವಕ ;
ಆದರೂ ಮಾತಿಲ್ಲ, ಬರಿಯ ಮೌನ. ತುಟಿತನಕ
ಬಂದ ಮಾತೆಲ್ಲವೂ ಬರಿಯ ಕಣ್ಣೀರು,
ಇವರ ಪಾಡನು ನೋಡಿ ಮರುಗದವರಾರು?

ನಿದ್ರೆಯಿಲ್ಲದ ರಾತ್ರಿಗಳಲ್ಲಿ :
ನಿದ್ರೆಯಿರದ ಸುದೀರ್ಘ ರಾತ್ರಿಗಳ ಈ ಸೆರೆಮನೆಯ ವಾಸದೊಳಗೆ
ತೋಡಿಕೊಂಡಿದ್ದೇನೆ ನನ್ನ ಪಾಡನು ಕುರಿತು ನೂರಾರು ಕವಿತೆಯೊಳಗೆ.
ಒಂದೊಂದು ಚೌಪದಿಯ ಕೊನೆಗೂ ಬರೆಹವ ನಿಲಿಸಿ, ನೋಡಿದ್ದೇನೆ ಹೊರಗೆ
ಕಿಟಕಿ ಕಂಬಿಗಳಾಚೆ, ಸ್ವಾತಂತ್ರ್ಯದಂತಿರುವ ಸುವಿಶಾಲ ಗಗನದೆಡೆಗೆ.

– ಹೋಚಿಮಿನ್ (ವಿಯತ್ನಾಂ)