ಪೀಠಿಕೆ

ಸ್ವಾತಂತ್ರ್ಯಾ ನಂತರ (೧೯೫೦-೫೧ರಲ್ಲಿ) ರಾಷ್ಟ್ರದಲ್ಲಿ ೩.೫ ದಶಲಕ್ಷ ಮೆಟ್ರಿಕ್ ಟನ್ ಬಳಕೆಯಾಗುತ್ತಿದ್ದ ಕಚ್ಚಾ ತೈಲ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಪ್ರಸ್ತುತ ೧೭೫ ದಶಲಕ್ಷ ಮೆಟ್ರಿಕ್ ಟನ್ ನಷ್ಟು ಬಳಕೆಯಾಗುತ್ತಿದೆ. ಇಂದು ವಿಶ್ವದಲ್ಲಿ  ಅತಿ ಹೆಚ್ಚು ಕಚ್ಚಾ ತೈಲ ಬಳಸುವ ರಾಷ್ಟ್ರಗಳಾದ ಅಮೇರಿಕಾ, ಚೈನಾ, ರಷ್ಯಾ, ಜಪಾನ್ ದೇಶಗಳ ನಂತರ ೫ನೇ ಸ್ಥಾನದಲ್ಲಿ ಭಾರತವೂ ಸೇರಿದೆ. ನಮ್ಮ ಇಂದಿನ ಬೇಡಿಕೆಯ ಶೇ. ೮೦ ರಷ್ಟು ವಿದೇಶದಿಂದ ಪೂರೈಸಿಕೊಳ್ಳಬೇಕಿರುವ ಅನಿವಾರ್ಯತೆಯಿದೆ.  ೧೯೯೭-೯೮ ನೇ ಸಾಲಿನಲ್ಲಿ ಆಮದು ಮಾಡಿಕೊಳ್ಳಬೇಕಿದ್ದ ಕಚ್ಚಾ ತೈಲ ಶೇ.೬೫ ರಷ್ಟಿದ್ದು, ಪ್ರಸ್ತುತ ಆಮದಿನ ಪ್ರಮಾಣ ಶೇ.೮೦ ಮೀರಿರುವುದು ಯೋಚನೆಗೀಡು ಮಾಡಿದೆ. ಈ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಿರುವುದು ಶೇ. ೨೦ರಷ್ಟು ಮಾತ್ರ. ಶೇ. ೮೦ರಷ್ಟು ಪರಾವಲಂಬನೆಯಾಗಿರುವುದು ರಾಷ್ಟ್ರದ ಅಭಿವೃದ್ಧಿ ದೃಷ್ಟಿಯಿಂದ ಶುಭ ಸೂಚಕವಲ್ಲ. ಈ ನಿಟ್ಟಿನಲ್ಲಿ ಸ್ವತಂತ್ರವಾಗಿ ಅಭಿವೃದ್ಧಿ ಹೊಂದುವ ಮಾರ್ಗ ಕಂಡುಕೊಳ್ಳಲೇಬೇಕು.  ಜೊತೆಗೆ ವಿಶ್ವದ ಕಚ್ಚಾ ತೈಲದ ನಿಕ್ಷೇಪ ಮುಂಬರುವ ೩೦ ವರ್ಷಗಳಲ್ಲಿ ಬರಿದಾಗುವ ಸೂಚನೆಯನ್ನು  ನಮ್ಮ ವಿಜ್ಞಾನಿಗಳು ನೀಡಿದ್ದಾರೆ. ಭಾರತದ ತೈಲ ನಿಕ್ಷೇಪ ಕೇವಲ ೧೦ ವರ್ಷಗಳಿಗಾಗುವಷ್ಟು ಮಾತ್ರ ಲಭ್ಯವಿರುವದಾಗಿ ಊಹಿಸಿದ್ದಾರೆ. ಆದ್ದರಿಂದ ಪರ್ಯಾಯ ಇಂಧನ ಸಂಪನ್ಮೂಲಗಳ ಅನ್ವೇಷಣೆ ಅತ್ಯಗತ್ಯವಾಗಿರುತ್ತದೆ. ಕಚ್ಚಾ ತೈಲಕ್ಕೆ ಪರ್ಯಾಯವಾಗಿ ಜೈವಿಕ ಇಂಧನ ರಾಷ್ಟ್ರದ ಇಂಧನ ಸಮಸ್ಯೆ ಬಗೆಹರಿಸಬಲ್ಲ ಏಕೈಕ ಆಶಾಕಿರಣವಾಗಿದೆ.

ವಿವಿಧ ಚಟುವಟಿಕೆಗಳಿಗೆ ರಾಷ್ಟ್ರದಲ್ಲಿ ಬಳಕೆಯಾಗುತ್ತಿರುವ ಕಚ್ಚಾ  ತೈಲದ ಶೇಕಡಾವಾರು ಪ್ರಮಾಣ.

ಶೇ. ೮೦ ರಷ್ಟು ರಾಷ್ಟ್ರದ ಬೇಡಿಕೆಯ ತೈಲ ಪೂರೈಕೆ  ಕೊಲ್ಲಿ ರಾಷ್ಟ್ರಗಳಾದ ಇರಾನ್, ಇರಾಕ್, ದುಬೈ, ಕಟರ್ ನಂತಹ ಓ.ಪಿ.ಇ.ಸಿ. (OPEC) ರಾಷ್ಟ್ರಗಳಿಂದ ಆಗುತ್ತಿದೆ. ಇದರಿಂದ ರಾಷ್ಟ್ರ ಎರಡು ವಿಧದ ಅಪಾಯಕ್ಕೆ ಸಿಲುಕಬಹುದಾಗಿದೆ. ಮೊದಲನೆಯದು ಅಪಾರ ಬೇಡಿಕೆಯನ್ನು ಪೂರೈಸಲು ತೆರಬೇಕಿರುವ ವಿದೇಶಿ ವಿನಿಮಯವಾದರೆ, ಎರಡನೆಯದು ಎಷ್ಟೇ ಹಣ ಕೊಟ್ಟರೂ ಸಹ ಓಪಿಇಸಿ ರಾಷ್ಟ್ರಗಳು ನಮ್ಮ ರಾಷ್ಟ್ರಕ್ಕೆ ರಪ್ತು ಮಾಡಲು ಒಪ್ಪದಿದ್ದಲ್ಲಿ ರಾಷ್ಟ್ರದ ಕೈಗಾರಿಕೆಯ ಮೇಲೆ ಹಾಗೂ ಸಾರಿಗೆ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಉಂಟಾಗುವುದು. ಕೈಗಾರಿಕೆಗಳು ತಟಸ್ಥವಾಗಬಲ್ಲವು.  ಪರಿಣಾಮ ಕೈಗಾರಿಕೆಗಳಿಂದ ರಫ್ತು ನಿಲ್ಲಬಹುದು. ನಿರುದ್ಯೋಗ ಬೆಳೆಯಬಹುದು. ಇದರಿಂದಾಗಿ ಮುಂದೊಮ್ಮೆ ನಾವು ಆರ್ಥಿಕ ದಿವಾಳಿತನಕ್ಕೆ ಸಿಲುಕಬಹುದಲ್ಲವೆ? ಒಮ್ಮೆ ಯೋಚಿಸಿ ನೋಡಿ. ಈ ಸಂಕಷ್ಟದ ದಿನಗಳನ್ನು ಸಮರ್ಥವಾಗಿ ಎದುರಿಸಬಲ್ಲ ಸಾಮರ್ಥ್ಯ ನಮ್ಮ ರಾಷ್ಟ್ರಕ್ಕಿದೆ, ಆ ಸಾಮರ್ಥ್ಯ ರಾಜ್ಯದ ರೈತರಿಗಿದೆ. ಆ ಸಮಯ ಎದುರಿಸಲು ಸನ್ನದ್ಧರಾಗಬೇಕಿದೆ. ಅದುವೇ ಜೈವಿಕ ಇಂಧನ ಕೃಷಿ.

ಹೊಂಗೆ, ಬೇವು, ಹಿಪ್ಪೆ, ಸೀಮಾರೂಬಾ, ಕಾಡುಹರಳುಗಳಂತಹ ಅನೇಕ ಮರಗಿಡಗಳ ಬೀಜಗಳಿಂದ ತೈಲ ಪಡೆದು ಈ ಜೈವಿಕ ಇಂಧನವನ್ನು  ಕಚ್ಚಾ ತೈಲಕ್ಕೆ ಪರ್ಯಾಯ ಇಂಧನವಾಗಿ ಬಳಸಬಹುದಾಗಿದೆ. ಇದರ ಜೊತೆಗೆ ದೊರಕುವ ಹಿಂಡಿ ಉತ್ತಮ ಸಾವಯವ ಗೊಬ್ಬರ. ಮರಗಳ ಎಲೆಯನ್ನು ಹಸಿರೆಲೆ ಗೊಬ್ಬರವಾಗಿಯೂ ಉಪಯೋಗಿಸಬಹುದಾಗಿದೆ. ಎಣ್ಣೆಯಿಂದ ಬಸ್ಸು, ಲಾರಿ, ಟ್ರಾಕ್ಟರ್, ಕಾರು, ಜೀಪುಗಳಂತಹ ವಾಹನಗಳ ಇಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡದೆ ಓಡಿಸಬಹುದು.  ಕಾರ್ಖಾನೆಗಳ ಯಂತ್ರಗಳಲ್ಲಿ ಡೀಸೆಲ್‌ಗೆ ಪರ್ಯಾಯವಾಗಿ ಈ ಜೈವಿಕ ಇಂಧನ ಬಳಸಬಹುದು. ರೈಲುಗಳನ್ನು ಸಹ ಓಡಿಸಲು ಸಾಧ್ಯವಿದೆ. ರಾಜ್ಯದ ಕೃಷಿ ವಿಶ್ವ ವಿದ್ಯಾಲಯ (ಯು.ಎ.ಎಸ್,) ಭಾರತೀಯ ವಿದ್ಯಾ ಮಂದಿರ (ಐ.ಐ.ಎಸ್.ಸಿ) ಗಳು ಇಂತಹ ಸಂಶೋಧನೆಯಲ್ಲಿ ತೊಡಗಿವೆ.  ಈಗಾಗಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆ.ಎಸ್.ಆರ್.ಟಿ.ಸಿ.) ೫೦೦ ಬಸ್ಸುಗಳನ್ನು ಓಡಿಸುತ್ತಿದೆ. ಹಂತಹಂತವಾಗಿ ಮುಂಬರುವ ದಿನಗಳಲ್ಲಿ ೫೫೦೦ ಬಸ್ಸುಗಳು ಪರಿಸರ ಸ್ನೇಹಿಯಾದ ಬಯೋ ಡೀಸಲ್‌ನಿಂದ ಓಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕ್ರಮ ಪರಿಸರ ಸ್ನೇಹಿ.  ಈ ಕಾರ್ಯ ಕೆ.ಎಸ್.ಆರ್.ಟಿ.ಸಿ. ಗಳಂತಹ ಸಾರಿಗೆ ಸಂಸ್ಥೆಗಳಿಗೆ ಹಾಗೂ ಜೈವಿಕ ಇಂಧನ ಉತ್ಪಾದನೆ ಕಾರ್ಖಾನೆಗಳಿಗೆ ಲಾಭ ದೊರಕಿಸುವುದಲ್ಲದೇ, ವಿದೇಶೀ ವಿನಿಮಯ ಉಳಿಕೆ ಆಗಿ ಹಾಗೂ ಪರಾವಲಂಬನೆ ಕಡಿಮೆಗೊಳಿಸಿ ಸ್ವಾವಲಂಬನೆಗೆ ಹಂತ ಹಂತವಾಗಿ ದಾರಿ ಮಾಡಿಕೊಟ್ಟಂತಾಗುತ್ತದೆ.

ವಿವಿಧ ರೀತಿಯ ಮೌಲ್ಯವರ್ಧನೆ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶದಲ್ಲೇ ಮಾಡಬಹುದಾಗಿದ್ದು, ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಠಿಯ ಅವಕಾಶಗಳನ್ನು ಹೆಚ್ಚಿಸುವುದಲ್ಲದೇ, ರೈತರಿಗೆ ಹೆಚ್ಚುವರಿ ಆದಾಯ ತರಬಲ್ಲದು. ಗ್ರಾಮೀಣ ಪ್ರದೇಶದ ಇಂಧನದ ಅವಶ್ಯಕತೆಯನ್ನು ಅಲ್ಲೇ ತಯಾರಾದ ಇಂಧನಗಳಿಂದ ಪೂರೈಸಿ, ಹೆಚ್ಚುವರಿ ಇಂಧನವನ್ನು ಮಾರಾಟ ಮಾಡಬಹುದಾಗಿದೆ.

ಜೈವಿಕ ಇಂಧನ ಸಸಿಗಳನ್ನು ಕೃಷಿಗೆ ಯೋಗ್ಯವಾಗಿರದ ರಾಜ್ಯದ ೧೩.೫ ಲಕ್ಷ ಹೆ. ಬರಡು, ಬಂಜರು ಭೂ ಪ್ರದೇಶಗಳಲ್ಲಿ, ನದಿ, ಕಾಲುವೆ, ಹಾಗೂ ರೈತರ ಜಮೀನುಗಳ ಬೇಲಿ, ಬದುಗುಂಟ, ಸರ್ಕಾರಿ ಹಾಗೂ ಖಾಸಗಿ ಜಮೀನುಗಳಲ್ಲಿ ಳೆಸಬಹುದಾಗಿದೆ.  ಬಯಲು ಸೀಮೆ ಹಾಗೂ ಕಡಿಮೆ ಮಳೆಯಾಗುವ ಭೂ ಪ್ರದೇಶಗಳಲ್ಲಿ ಜೈವಿಕ ಇಂಧನ ಸಸಿಗಳನ್ನು ಸುಲಭವಾಗಿ ಬೆಳೆಸಬಹುದಾಗಿದೆ. ಅರಣ್ಯೀಕರಣದ ಜೊತೆಗೆ ಪರಿಸರ ಮಾಲಿನ್ಯ ತಡೆಗಟ್ಟಬಹುದಾಗಿದೆ. ಉತ್ತಮ ಸಾವಯವ ಗೊಬ್ಬರದ ಜೊತೆಗೆ ರಾಷ್ಟ್ರದ ಇಂಧನ ಸುರಕ್ಷತೆಗೆ ಭದ್ರ ಬುನಾದಿ ಹಾಕಬಹುದಾಗಿದೆ.

ರಾಷ್ಟ್ರದಲ್ಲಿ ಜೈವಿಕ ಇಂಧನ ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯ ಪ್ರವೃತ್ತವಾಗಿರುವ ಕೆಲವೇ ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ.  ಜೈವಿಕ ಇಂಧನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ದಿನಾಂಕ ೧೨.೦೯.೨೦೦೮ ರಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಕಾರ್ಯಪಡೆಯನ್ನು  ಸರ್ಕಾರ ರಚಿಸಿದೆ.  ಈ ಕಾರ್ಯಪಡೆಯು ಜೈವಿಕ ಇಂಧನ ನೀತಿ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ರೂಪಿಸುತ್ತಿದೆ.

 

ಜೈವಿಕ ಇಂಧನ ಕಾರ್ಯಪಡೆ, ಕರ್ನಾಟಕ

ಜೈವಿಕ ಇಂಧನ ಕಾರ್ಯಪಡೆಯ ಧ್ಯೇಯೋದ್ದೇಶಗಳು

 • ಜೈವಿಕ ಇಂಧನ ಅಭಿವೃದ್ಧಿ ಕಾರ್ಯಕ್ರಮ ರೂಪಿಸುವುದು.
 • ಜೈವಿಕ ಇಂಧನ ನೀತಿ ಮತ್ತು ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮಾರ್ಗದರ್ಶನ/ಶಿಫಾರಸ್ಸು ನೀಡುವುದು.
 • ಜೈವಿಕ ಇಂಧನ ಸಸ್ಯಗಳನ್ನು ಬೆಳೆಸಲು ಯೋಗ್ಯವಾದ ಕೃಷಿಯೇತರ ಭೂಮಿಯನ್ನು ಗುರುತಿಸುವುದು.
 • ವಿವಿಧ ಪ್ರದೇಶಗಳಿಗೆ ಯೋಗ್ಯವಾದ ಜೈವಿಕ ಇಂಧನ ಸಸ್ಯಗಳನ್ನು ಗುರುತಿಸುವುದು.
 • ಗ್ರಾಮ ಅರಣ್ಯ ಸಮಿತಿಗಳ ಮೂಲಕ ಜೈವಿಕ ಇಂಧನ ಸಸ್ಯಗಳನ್ನು ಬೆಳೆಸುವ ಕಾರ್ಯಕ್ರಮ ರೂಪಿಸುವುದು.
 • ರೈತರಿಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಜೈವಿಕ ಇಂಧನ ಸಸ್ಯಗಳನ್ನು ಬೆಳೆಸಲು ಪ್ರೋತ್ಸಾಹಿಸುವುದು
 • ಎಥನಾಲ್ ಉತ್ಪಾದನೆಗಾಗಿ ಪ್ರೋತ್ಸಾಹ ನೀಡುವುದು.
 • ಸಕ್ಕರೆ ಕಾರ್ಖಾನೆಗಳಲ್ಲಿ ಎಥನಾಲ್ ಉತ್ಪಾದನೆಗಾಗಿ ಉತ್ತೇಜನ ನೀಡುವುದು.
 • ಜೈವಿಕ ಎಥನಾಲ್ ಉತ್ಪಾದನೆಗಾಗಿ ಕಬ್ಬು, ಬೀಟ್‌ರೂಟ್, ಗೋವಿನ ಜೋಳ ಮುಂತಾದ ಬೆಳೆಗಳ ಬೇಸಾಯವನ್ನು ಪ್ರೋತ್ಸಾಹಿಸುವುದು.
 • ಜೈವಿಕ ಇಂಧನ ಉತ್ಪಾದನಾ ಘಟಕಗಳ ಸ್ಥಾಪನೆಗಾಗಿ ಪ್ರೋತ್ಸಾಹ ನೀಡುವುದು.
 • ಜೈವಿಕ ಇಂಧನಕ್ಕಾಗಿ ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸುವುದು.

ಕರ್ನಾಟಕದಲ್ಲಿ ಅರಣ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆ ಮತ್ತು ಕೃಷಿ ಇಲಾಖೆಗಳನ್ನು ಸಕ್ರಿಯವಾಗಿ ಜೈವಿಕ ಇಂಧನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗಿದೆ.  ೨೦೦೯-೧೦ನೇ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಅನುದಾನದಿಂದ ಅರಣ್ಯ ಇಲಾಖೆ, ಸರ್ಕಾರಿ ಬರಡು ಭೂಮಿ ಹಾಗು ಪಾಳು (degraded) ಅರಣ್ಯ ಪ್ರದೇಶದ ೫,೦೦೦ ಹೆ. ಭೂ ಪ್ರದೇಶದಲ್ಲಿ  ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಜೈವಿಕ ಇಂಧನ ಸಸಿಗಳನ್ನು ಬರಡು ಬಂಗಾರ ಕಾರ್ಯಕ್ರಮದಡಿ ಬೆಳೆಸಲಾಗಿದೆ.

ಜೈವಿಕ ಇಂಧನ ಕಾರ್ಯಪಡೆ ರಾಜ್ಯದ ಜೈವಿಕ ಇಂಧನ ನೀತಿ ರೂಪಿಸಿ, ದಿನಾಂಕ. ೦೯.೦೩.೨೦೦೯ ರಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ನೀತಿ ಜಾರಿಗೊಳಿಸಿದೆ.  ೨೦೧೦-೧೧ನೇ ಸಾಲಿಗೆ ರಾಜ್ಯದ ೨೫,೦೦೦ ಹೆಕ್ಟೇರ್ ಸರ್ಕಾರಿ ಭೂಮಿಯಲ್ಲೂ ಹಾಗೂ ರೈತರ ಹೊಲದ ಬದುಗಳಲ್ಲಿ ಒಟ್ಟು ೩ ಕೋಟಿ ಸಸಿಗಳನ್ನು ಹಾಗೂ ೩೦.೦೦ ಲಕ್ಷ ಕಸಿ ಮಾಡಿದ ಉತ್ತಮ ತಳಿಯ ಮತ್ತು ೩ ವರ್ಷಕ್ಕೇ ಅಧಿಕ ಇಳುವರಿ ನೀಡುವ ಹೊಂಗೆ ಮತ್ತು ಇತರ ಜೈವಿಕ ಇಂಧನ ಸಸಿಗಳನ್ನು ನೆಡಲು ಕ್ರಮ ಕೈಗೊಳ್ಳಲಾಗುತ್ತಿದೆ.  ರೈತರುಗಳ ಜಮೀನಿನ ಬದುಗುಂಟ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ವಿನಿಯೋಗಿಸಿ, ಜೈವಿಕ ಇಂಧನ ಸಸಿ ನೆಡುವ ಬೃಹತ್ ಯೋಜನೆ ಹಸಿರು ಹೊನ್ನು ಕಾರ್ಯಕ್ರಮ ಜಾರಿಗೊಳಿಸಿದೆ.

. ವಿವಿಧ ಸಾಲುಗಳಲ್ಲಿ ಕೈಗೊಳ್ಳಬೇಕಿರುವ ಕಾರ್ಯಕ್ರಮದ ಗುರಿ.

ಕ್ರ
ಸಂ

ವರ್ಷ

ಗುರಿ

ಕಾರ್ಯದ ವಿವರ

ಭೂಮಿ (ಹೆ.ಗಳಲ್ಲಿ)

ಸಸಿ (ಲಕ್ಷಗಳಲ್ಲಿ)

೨೦೦೯-೧೦

೬,೦೦೦ ಹೆ.

೩೦ ಲಕ್ಷ

ಸರ್ಕಾರಿ ಪಾಳು ಭೂಮಿ, ಬರಡು ಹಾಗೂ ಮಂಜುರು ಭೂ ಪ್ರದೇಶದಲ್ಲಿ ಜೈವಿಕ ಇಂಧನ ಸಸಿ ನೆಡುವುದು. ಗ್ರಾಮ ಅರಣ್ಯ ಸಮಿತಿಗಳನ್ನು ಸಕ್ರಿಯವಾಗಿ ತೊಡಗಿಸುವುದು.

೨೦೧೦-೧೧

೨೫,೦೦೦ ಹೆ.

೧೫೦

೧.೫ ಕೋಟಿ ಸಸಿಗಳನ್ನು ಸರ್ಕಾರಿ ಪಾಳು ಹಾಗೂ ಬರಡು, ಬಂಜರು ಭೂ ಪ್ರದೇಶದಲ್ಲಿ ಜೈವಿಕ ಇಂಧನ ಸಸಿನೆಡುವುದು. ಗ್ರಾಮ ಅರಣ್ಯ ಸಮಿಗಳನ್ನು ಸಕ್ರಿಯವಾಗಿ ತೊಡಗಿಸುವುದು.

 

 

– –

೧೫೦

೧.೫ ಕೋಟಿ ಸಸಿಗಳನ್ನು ಹಸಿರು ಹೊನ್ನು ಕಾರ್ಯಕ್ರಮದಡಿ ರೈತರುಗಳ ಜಮೀನಿನ ಬದು, ಬೇಲಿಗಳು.   ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖತರಿ ಯೋಜನೆಯಡಿ ನೆಡುವುದು.ಸ್ವಯಂ ಸೇವಾ ಸಂಸ್ಥೆಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು.

 

 

೩೦

ಕಸಿ ಮಾಡಿದ ಹೊಂಗೆ ಸಸಿಗಳನ್ನು ಸಿದ್ಧಪಡಿಸುವುದು. ಸಂಶೋಧನಾ ಸಂಸ್ಥೆ, ಪ್ರತಿಷ್ಟಿತ ಸ್ವಯಂ ಸೇವಾ ಸಂಸ್ಥೆಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು.

೨೦೧೧-೧೨

೩೫,೦೦೦ ಹೆ.

೨೦೦

೨೦೦

೩೦

೫೦

೧) ಬಿ.ಬಿ.೨) ಹೆಚ್.ಹೆಚ್.೩) ಗ್ರಾಫೈಡ್ಎಸಿ ಮಾಡಿದ ಹೊಂಗೆ ಸಸಿ ಬೆಳೆಸುವುದು.

೨೦೧೦-೧೩

೪೦,೦೦೦

೨೨೫

೨೦೦

೫೦

೫೦

ಕಸಿ ಮಾಡಿದ ಹೊಂಗೆ ಸಸಿ ಬೆಳೆಯುವುದು.

ಮುಂಬರುವ ವರ್ಷಗಳಲ್ಲಿ ೧ ಲಕ್ಷ ಹೆ. ಭೂ ಪ್ರದೇಶದಲ್ಲಿ ಹಾಗೂ ೧೦ ಕೋಟಿ ಸಸಿಗಳನ್ನು ರೈತರ ಹೊಲದ ಬದುಗಳಲ್ಲಿ ಸಮರೋಪಾದಿಯಲ್ಲಿ ಜೈವಿಕ ಇಂಧನ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ.

 

ಜೈವಿಕ ಇಂಧನ ಸಂಪನ್ಮೂಲಗಳು  ಮತ್ತು ಅನುಕೂಲತೆಗಳು

ಜೈವಿಕ ಇಂಧನ

ಜೈವಿಕ ಇಂಧನವು ಜೈವಿಕ ಮೂಲಗಳಿಂದ ಅಂದರೆ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ಮೂಲಗಳಿಂದ ಉತ್ಪಾದನೆಯಾಗುವ ಇಂಧನ. ವಿವಿಧ ಎಣ್ಣೆ ಬೀಜಗಳು, ಪ್ರಾಣಿ ಜನ್ಯ ಕೊಬ್ಬು, ಕಬ್ಬು, ಸಿಹಿಜೋಳ, ಗೋವಿನಜೋಳ ಮುಂತಾದ ಸಕ್ಕರೆ ಅಂಶವುಳ್ಳ ಉತ್ಪನ್ನಗಳಿಂದ ಹಾಗೂ ಭವಿಷ್ಯದಲ್ಲಿ ಸಮುದ್ರದ ಹಿನ್ನೀರಿನಲ್ಲಿ, ಅನುಪಯುಕ್ತ ಹಾಗೂ ಮಲೀನ ನೀರಿನ ಮೇಲೆ ಸುಲಭವಾಗಿ ಬೆಳೆಯಬಲ್ಲ ಆಲ್ಗಿ ಬೆಳೆಗಳಿಂದ ಜೈವಿಕ ಇಂಧನವನ್ನು ತಯಾರಿಸಿ, ವಾಹನ ಹಾಗೂ ಇತರೆಡೆ ಬಳಸಬಹುದಾಗಿದೆ.

ಜೈವಿಕ ಡೀಸೆಲ್, ಜೈವಿಕ ಎಥೆನಾಲ್ ಮತ್ತು ಭವಿಷ್ಯದ ಜೈವಿಕ ಇಂಧನ

ಜೈವಿಕ ಡೀಸೆಲ್ ಅನ್ನು ಸಸ್ಯಜನ್ಯ ಎಣ್ಣೆ ಅಥವಾ ಪ್ರಾಣಿಜನ್ಯ ಕೊಬ್ಬಿನಿಂದ ಉತ್ಪಾದಿಸಲಾಗುತ್ತದೆ. ಜೈವಿಕ ಡೀಸೆಲ್ ದೀರ್ಘ ಸರಪಳಿ ಕೊಬ್ಬಿನ ಆಮ್ಲದಿಂದ (Long Chain Fatty Acid) ಉತ್ಪತ್ತಿಂiiiದ ಮೋನೊ ಅಲ್ಕೈಲ್ ಎಸ್ಟರ್ (Mono Alkyl Ester).  ಎಣ್ಣೆ ಅಥವಾ ಕೊಬ್ಬನ್ನು ಮೆಥನಾಲ್ ಅಥವಾ ಎಥನಾಲ್ ಜೊತೆ ಸೇರಿಸಿ NaOH/ KOH ಎಂಬ ಪ್ರತ್ಯಾಮ್ಲ ಪ್ರಚೋದಕದೊಂದಿಗೆ ಟ್ರಾನ್ಸ್‌ಎಸ್ಟರಿಫಿಕೇಷನ್ ಎಂಬ ರಾಸಾಯನಿಕ ಕ್ರಿಯೆಯ ಮೂಲಕ ಜೈವಿಕ ಡೀಸಲ್ ತಯಾರಿಸಲಾಗುತ್ತದೆ.

ಇದನ್ನು ನೇರವಾಗಿ ಅಥವಾ ಡೀಸೆಲ್ ಜೊತೆ ವಿವಿಧ ಪ್ರಮಾಣದಲ್ಲಿ ಮಿಶ್ರಣಮಾಡಿ ಉಪಯೋಗಿಸಬಹುದು. ಉದಾ: B5 ಅಂದರೆ ಶೇ.೫ ರಷ್ಟು ಬಯೋ ಡೀಸೆಲ್‌ನ್ನು ಶೇ.೯೫ ರಷ್ಟು ಪೆಟ್ರೋ-ಡೀಸೆಲ್‌ನೊಂದಿಗೆ ಮಿಶ್ರಣ, B10 ಅಂದರೆ ಶೇ.೧೦ ರಷ್ಟು ಬಯೋ ಡೀಸೆಲ್‌ನ್ನು ಶೇ. ೯೦ ರಷ್ಟು ಪೆಟ್ರೋ-ಡೀಸೆಲ್ ನೊಂದಿಗೆ ಮಿಶ್ರಣ,  B20 ಅಂದರೆ ಶೇ. ೨೦ ರಷ್ಟು ಬಯೋ ಡೀಸೆಲ್ ನ್ನು ಶೇ. ೮೦ ರಷ್ಟು ಪೆಟ್ರೋ-ಡೀಸೆಲ್‌ನೊಂದಿಗೆ ಮಿಶ್ರಣ.   B 100  ಅಂದರೆ ಶೇ.೧೦೦ ರಷ್ಟು ಬಯೋ-ಡೀಸೆಲಿನ ಉಪಯೋಗ.

ಜೈವಿಕ ಎಥೆನಾಲನ್ನು ಕಬ್ಬು, ಸಿಹಿಜೋಳ, ಗೋವಿನಜೋಳ ಮುಂತಾದ ಶರ್ಕಾರಾಂಶಗಳಿಂದ ಉತ್ಪಾದಿಸಲಾಗುತ್ತದೆ. ಕೃಷಿ ತ್ಯಾಜ್ಯಗಳಾದ ಕಬ್ಬಿನ ಸಿಪ್ಪೆ, ಹುಲ್ಲು ಮೊದಲಾದವುಗಳಲ್ಲಿರುವ ಸೆಲ್ಯುಲೋಸ್ ಎಂಬ ಸಂಯುಕ್ತ ಶರ್ಕರಾಂಶದಿಂದಲೂ ಎಥೆನಾಲ್ ಅನ್ನು ಉತ್ಪಾದಿಸಬಹುದಾಗಿದೆ. ಜೊತೆಗೆ, ಅನುಪಯುಕ್ತ ಹಣ್ಣುಗಳನ್ನು ಕೂಡ ಉಪಯೊಗಿಸಿ ಎಥೆನಾಲ್ ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ಮೊದಲಿಗೆ ಸಂಯುಕ್ತಗಳನ್ನು ಸರಳ ಸಕ್ಕರೆಯನ್ನಾಗಿ ಪರಿವರ್ತಿಸಲಾಗುತ್ತದೆ. ನಂತರ ಇದನ್ನು ಸೂಕ್ಷ್ಮಜೀವಿಗಳನ್ನು ಬಳಸಿ ಹುದುಗಿಸಲಾಗುತ್ತದೆ. ಹೀಗೆ ಬರುವ ಎಥನಾಲ್ ಅನ್ನು ಭಟ್ಟಿಇಳಿಸುವಿಕೆಯ ಮುಖಾಂತರ ಜೈವಿಕ ಎಥೆನಾಲ್ ಅನ್ನು ಪಡೆಯಬಹುದು.  ಜೈವಿಕ ಎಥೆನಾಲನ್ನು ಸಾಮಾನ್ಯವಾಗಿ E 100 ಅಂದರೆ ಶೇ. ೧೦೦ ರಷ್ಟು ಎಥೆನಾಲ್, E 85 ಅಂದರೆ ಶೇ. ೮೫ ರಷ್ಟು ಎಥೆನಾಲನ್ನು ಶೇ.೧೫ ರ ಗ್ಯಾಸೋಲಿನ್ ಮಿಶ್ರಣದೊಂದಿಗೆ ಉಪಯೋಗಿಸುವುದು.  ಶೇ.೧೦ ರಷ್ಟು ಎಥೆನಾಲನ್ನು ಶೇ.೯೦ ರಷ್ಟು ಗ್ಯಾಸೋಲಿನ್ ಮಿಶ್ರಣದೊಂದಿಗೆ ಗ್ಯಾಸೋಹಾಲ್ ಎಂಬ ಹೆಸರಿನಿಂದ ವಿವಿಧೆಡೆ ಉಪಯೋಗದಲ್ಲಿದೆ.

ಜೈವಿಕ ಇಂಧನದ ಅನುಕೂಲತೆಗಳು

 • ಜೈವಿಕ ಇಂಧನದ ಕಾರ್ಯಕ್ರಮ ಹಲವಾರು ಉದ್ಯೋಗ ಅವಕಾಶಗಳನ್ನು ಒದಗಿಸುವುದರ ಜೊತೆಗೆ, ರೈತರು, ಕೃಷಿಕಾರ್ಮಿಕರು ಬಿಡುವಿನ ವೇಳೆಯಲ್ಲಿ ಬೀಜ ಸಂಗ್ರಹಣೆ ಮತ್ತು ಮಾರಾಟದಿಂದ ಅಧಿಕ ಆರ್ಥಿಕ ಲಾಭ ಗಳಿಸಬಹುದು.
 • ಹಲವು ಸಂಶೋಧನೆಗಳಿಂದ ಜೈವಿಕ ಇಂಧನ ಪೆಟ್ರೋಲಿಯಂ ಇಂಧನಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಆಕ್ಸೈಡ್‌ಗಳನ್ನು ವಾತಾವರಣಕ್ಕೆ ಬಿಡುತ್ತದೆ ಎಂದು ಕಂಡುಬಂದಿದೆ.
 • ಪೆಟ್ರೋಲಿಯಂ ಇಂಧನ ವಾತಾವರಣಕ್ಕೆ ಕಾರ್ಬನ್ ಡೈಆಕ್ಸೈಡ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸುತ್ತಾ ಹೋಗುತ್ತದೆ. ಆದರೆ, ಜೈವಿಕ ಇಂಧನ ಸಸ್ಯಗಳು ವಾತಾವರಣದಲ್ಲಿನ ಕಾರ್ಬನ್ ಡೈಆಕ್ಸೈಡ್‌ನ ಕೆಲವು ಭಾಗವನ್ನು ತಾವೇ ಪುನ: ಬಳಸಿಕೊಳ್ಳುತ್ತವೆ.
 • ಜೈವಿಕ ಇಂಧನವು ಪರಿಸರ ಸ್ನೇಹಿ ಹಾಗೂ ನವೀಕರಿಸಬಹುದಾದ ಇಂಧನ.
 • ಇಂಜಿನ್ ಮಾರ್ಪಾಟಿನ ಅಗತ್ಯವಿಲ್ಲ.
 • ಜೈವಿಕ ಇಂಧನದಲ್ಲಿ ಗಂಧಕದ ಪ್ರಮಾಣ ಅತ್ಯಂತ ಕಡಿಮೆ.
 • ಸುರಕ್ಷಿತ ನಿರ್ವಹಣೆ, ಸಂಗ್ರಹಣೆ ಮತ್ತು ಸಾಗಾಣಿಕೆ.
 • ಇಂಜಿನ್‌ನ ಕಾರ್ಯಕ್ಷಮತೆ ಹೆಚ್ಚಿಸಿ, ಇಂಜಿನ್‌ನ ಬಾಳಿಕೆಯನ್ನು ಹೆಚ್ಚಿಸುತ್ತದೆ.
 • ಹೈಡ್ರೋಕಾರ್ಬನ್, ಸುಡದ ಇಂಗಾಲದ ಕಣಗಳ ಉಗುಳುವಿಕೆಯಲ್ಲಿ ಇಳಿಮುಖ.
 • ಜೈವಿಕ ಇಂಧನದ ಮರಗಳನ್ನು ಬೆಳೆಯುವುದರಿಂದ  ಮಣ್ಣಿನ ಸವಕಳಿಯನ್ನು ತಡೆಯಬಹುದು ಮತ್ತು ಮಣ್ಣಿನ ತೇವಾಂಶ ಕಾಪಾಡುವುದರೊಂದಿಗೆ ಆ ಪ್ರದೇಶವನ್ನು ನಿತ್ಯ ಹಸಿರಾಗಿರಿಸಬಹುದು.

 

ಜೈವಿಕ ಇಂಧನ ಮರಗಳ ಕಿರು ಪರಿಚಯ

ಜೈವಿಕ ಇಂಧನ ಸಸ್ಯಗಳು ಹಾಗೂ ಅವುಗಳ ಬೆಳೆಸುವಿಕೆ

ಗ್ರಾಮೀಣ ಜನತೆ ಹಲವಾರು ವರ್ಷಗಳಿಂದ ಬೆಳೆಸಿಕೊಂಡು ಬರುತ್ತಿರುವ ಅನೇಕ ಸಸ್ಯಗಳು ಜೈವಿಕ ಇಂಧನಕ್ಕೆ ಮೂಲವಾಗಿವೆ. ಎಣ್ಣೆ ಅಂಶವುಳ್ಳ ಅನೇಕ ಬೀಜಗಳಿಂದ ಎಣ್ಣೆ ತೆಗೆದು ಜೈವಿಕ ಡೀಸಲ್ ಅನ್ನು ಉತ್ಪಾದಿಸಬಹುದಾಗಿದೆ. ಸೂರ್ಯಕಾಂತಿ, ಕಡ್ಲೆಕಾಯಿ ಮುಂತಾದ ಖಾದ್ಯ ತೈಲಗಳಿಂದಲೂ ಜೈವಿಕ ಇಂಧನವನ್ನು ತಯಾರಿಸಬಹುದಾಗಿದೆ. ಆದರೆ ಇವುಗಳನ್ನು ಅಹಾರವಾಗಿ ಬಳಸುವುದರಿಂದ ಆಹಾರ ಭದ್ರತೆಗೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಅಖಾದ್ಯ ತೈಲಗಳಾದ ಹೊಂಗೆ, ಬೇವು, ಸಿಮರುಬಾ, ಹಿಪ್ಪೆ, ಜಟ್ರೋಫ, ಸುರಹೊನ್ನೆ ಮೊದಲಾದ ಸಸ್ಯಗಳನ್ನು ಕೃಷಿ ಯೋಗ್ಯವಲ್ಲದ ಭೂಮಿಯಲ್ಲಿ, ಬದುವಿನ ಮೇಲೆ, ಆಹಾರಧಾನ್ಯ ಬೆಳೆಗಳಿಗೆ ಪೈಪೋಟಿ ಇಲ್ಲದ ರೀತಿ ಮತ್ತು ಅತಿ ಕಡಿಮೆ ಖರ್ಚಿನಲ್ಲಿ ಮಿಶ್ರ ಬೆಳೆಯನ್ನಾಗಿ ಬೆಳೆದರೆ ಪರಿಸರ ಆರೋಗ್ಯಕರವಾಗಿರುತ್ತದೆ. ಅಲ್ಲದೇ ಉತ್ತಮ ಜೈವಿಕ ಇಂಧನ ಸಂಪನ್ಮೂಲವೂ ದೊರೆತಂತಾಗುವುದು.

ಈ ಕೆಳಗೆ ನಮೂದಿಸಿದ ಮರಗಳನ್ನು ಸಾಮಾನ್ಯವಾಗಿ ಕರ್ನಾಟಕ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಬೆಳೆಯಬಹುದಾಗಿದೆ.  ಜೊತೆಗೆ ಹೊಂಗೆ, ಬೇವು, ಹಿಪ್ಪೆ ಮರಗಳನ್ನು ನೂರಾರು ವರ್ಷಗಳಿಂದ ರೈತರು  ತಮ್ಮ ಹೊಲ ಗದ್ದೆಗಳ ಬದುಗಳಲ್ಲಿ, ಬೇಲಿಗುಂಟ ಬೆಳಸಿಕೊಂಡು ಬಂದುದರಿಂದ ಅವುಗಳ ನಿಕಟ ಪರಿಚಯ ಅವರಿಗಿದೆ.

ಜೈವಿಕ ಇಂಧನ ಸಸ್ಯಗಳ ಬೀಜಗಳಿಂದ ತೈಲ ಇಳುವರಿ

ಸಾಮಾನ್ಯ ಹೆಸರು ವೈಜ್ಞಾನಿಕ ಹೆಸರು ತೈಲ ಇಳುವರಿ (%) ಹೂ ಬಿಡುವಿಕೆ ಬೀಜ ಸಂಗ್ರಹಿಸುವ ಸಮಯ
ಹೊಂಗೆ ಪೊಂಗಾಮಿಯ ಪಿನ್ನಾಟ ೩೦-೩೫ ಮಾರ್ಚ್-ಮೇ ಜನವರಿ-ಮೇ
ಹಿಪ್ಪೆ ಮಧುಕ ಇಂಡಿಕಾ ೩೦-೩೫ ಏಪ್ರಿಲ್-ಮೇ ಜುಲೈ-ಆಗಸ್ಟ್
ಬೇವು ಅಝಾಡಿರೆಕ್ಟಾ ಇಂಡಿಕಾ ೨೮-೩೫ ಮಾರ್ಚ್-ಮೇ ಜೂನ್-ಆಗಸ್ಟ್
ಜಟ್ರೋಫಾ ಜಟ್ರೋಫಾ ಕುರ್ಕಾಸ್ ೩೦-೩೫ ಮೇ-ಆಗಸ್ಟ್ ಆಗಸ್ಟ್-ಅಕ್ಟೋಬರ್
ಸಿಮರೂಬ ಸಿಮರೂಬ ಗ್ಲಾಕ ೪೦-೫೦ ಡಿಸೆಂಬರ್-ಫೆಬ್ರವರಿ ಮಾರ್ಚ್-ಎಪ್ರಿಲ್
ಸುರಹೊನ್ನೆ ಕ್ಯಾಲೋಫೈಲಂ ಇನೋಫೈಲಂ   ೩೦-೩೫ ಮಾರ್ಚ್  ಮೇ ಜೂನ್- ಆಗಸ್ಟ್
ಪುಂಡಿ ಹೈಬಿಸಕಸ್ ಸಬ್ಡರಿಸ್ಸ ೩೦೩೫ ಆಗಸ್ಟ್ಸೆಪ್ಟೆಂಬರ್   ಅಕ್ಟೋಬರ್ನವೆಂಬರ್
ಔಡಲ ರಿಸಿನಸ್ ಕಮ್ಯೂನಿಸ್  ೩೫-೫೫ ಸೆಪ್ಟೆಂಬರ್ – ಅಕ್ಟೋಬರ್  ನವೆಂಬರ್-ಡಿಸೆಂಬರ್

ನಿರಂತರ ಆದಾಯ ಪಡೆಯುವ ದೃಷ್ಟಿಯಲ್ಲಿ ವಿವಿಧ ಜೈವಿಕ ಇಂಧನದ ಮರಗಳನ್ನು ಮಿಶ್ರ ಬೆಳೆಯಾಗಿ ಬೆಳೆಸುವುದು ಸೂಕ್ತ. ಕೆಲವು ಮರಗಳು ೩ನೇ ವರ್ಷದಿಂದ ಆದಾಯ ಕೊಡಲು ಪ್ರಾರಂಭಿಸಿದರೆ ಇನ್ನುಕೆಲವು ಮರಗಳು ೭ ರಿಂದ ೧೦ ವರ್ಷದಿಂದ ಫಲ ಬಿಡಲು ಪ್ರಾರಂಭಿಸಿ ನೂರಾರು ವರ್ಷ ನಿರಂತರ ಆದಾಯ ಕೊಡುತ್ತವೆ.

ಅಂತರ್ ಬೆಳೆಯಾಗಿ  ಇಂಧನ ಬೆಳೆಗಳು :

ರೈತರು ತಮ್ಮ ಜಮೀನಿನಲ್ಲಿ ಕೃಷಿ ಯೋಗ್ಯವಾದ ಭೂಮಿಯಲ್ಲಿ ಒಂದು ಬೆಳೆ ಬೆಳೆದ ನಂತರ ಅಂದರೆ ಮುಂಗಾರು ಕಟಾವಿನ ನಂತರವೂ ಕೆಲವೊಂದು ಖಾದ್ಯೇತರ ಅಲ್ಪಾವಧಿ ಬೆಳೆಗಳನ್ನು ಹೆಚ್ಚುವರಿಯಾಗಿ ಬೆಳೆಯುವುದು ಸಾದ್ಯ.  ಇಂತಹ ತೈಲ ಬೆಳೆಗಳ ಪೈಕಿ ಪುಂಡಿ, ಹರಳು ಇತ್ಯಾದಿ ಬೆಳೆಗಳು ಪ್ರಮುಖವಾಗಿವೆ.  ಅಲ್ಲದೆ, ಬದುಗುಂಟ, ಬೇಲಿ ಗುಂಟ ಹೊಂಗೆಮರ ನೆಟ್ಟಾಗ ಪ್ರತಿ ಎರಡು ಗಿಡಗಳ ಮಧ್ಯೆ ಎರಡು ಅಥವಾ ಮೂರು ಹರಳು ಅಥವಾ ಪುಂಡಿ ಗಿಡಗಳನ್ನು ಬೆಳೆಯ ಬಹುದಾಗಿದೆ.  ಇದರಿಂದ ಹೆಚ್ಚುವರಿ ಆದಾಯ ರೈತರು ಪಡೆಯಬಹುದು.   ರಾಜ್ಯದಲ್ಲಿ ಉತ್ತರ ಕರ್ನಾಟಕದ ಕಡಿಮೆ ಮಳೆಯಾಗುವ ಮಳೆಯಾಧಾರಿತ ಜಮೀನಿನಲ್ಲಿ ಕಡಲೆಕಾಯಿ (ಶೇಂಗಾ), ಮೆಣಸಿನ ಕಾಯಿ ಹಾಗೂ ಹೊಗೆ ಸೊಪ್ಪಿನ ಕಟಾವಿನ ನಂತರವಾಗಲಿ ಅಥವಾ ಮಧ್ಯದ ಬೆಳೆಯಾಗಿ ಪುಂಡಿ ಮತ್ತು ಹರಳುಗಳಂತಹ ಗಿಡಗಳನ್ನು ಅಂತರ್ ಬೆಳೆಯಾಗಿ ಬೆಳೆಯಬಹುದು.

 

ರೈತರ ಪಾಲ್ಗೊಳ್ಳುವಿಕೆ ಮತ್ತು ಅದರಿಂದ ಅವರಿಗಾಗುವ ಲಾಭಗಳು

ನೈಸರ್ಗಿಕವಾಗಿ ಬೆಳೆಯುವ ಮರಗಿಡಗಳಿಂದ ದೊರೆಯುವ ಬೀಜಗಳಿಂದ ಬರುವ ಎಣ್ಣೆಯನ್ನು ಜೈವಿಕ ಇಂಧನ ತಯಾರಿಕೆಯಲ್ಲಿ ಬಳಸಬಹುದಾಗಿದೆ. ನಮ್ಮ ದೇಶದಲ್ಲಿ ೧೦೦ಕ್ಕಿಂತಲೂ ಹೆಚ್ಚು ಮರಗಳಿಂದ ದೊರೆಯುವ ಎಣ್ಣೆ ಬೀಜವನ್ನು ಜೈವಿಕ ಇಂಧನವಾಗಿ ಬಳಸಬಹುದಾಗಿದೆ. ಪ್ರಮುಖವಾಗಿ ಹೊಂಗೆ, ಜಟ್ರೋಫ, ಬೇವು, ಹಿಪ್ಪೆ ಸಿಮರೂಬ ಇನ್ನಿತರ ಸಸ್ಯಗಳನ್ನು ಬೆಳೆದು ಬಯೋಡೀಸಲ್ ಉತ್ಪಾದನೆಗಾಗಿ ಬಳಸಿಕೊಳ್ಳಬಹುದಾಗಿದೆ.

ಕಬ್ಬಿನಿಂದ ಸಕ್ಕರೆ ತಯಾರಿಸಿದ ನಂತರದಲ್ಲಿ ಉಳಿಯುವ ಕಾಕಂಬಿ (Molaces) ನಿಂದ, ಕೃಷಿ ತ್ಯಾಜ್ಯ ವಸ್ತುಗಳಿಂದ, ಗೋವಿನ ಜೋಳ ಮತ್ತು ಇತರೆ ನಾರಿನಂಶ ಜಾಸ್ತಿ ಇರುವ ವಸ್ತುಗಳಿಂದ ಎಥೆನಾಲ್ ತಯಾರಿಸಬಹುದಾಗಿದೆ. ಅಲ್ಲದೇ ಮಳೆಯಾಧಾರಿತ ಕೃಷಿ ಕ್ಷೇತ್ರಗಳಲ್ಲಿ ಹರಳು, ಪುಂಡಿಯಂತಹ ಕಡಿಮೆ ಅವಧಿಯಲ್ಲಿ ಬೆಳೆಯಬಹುದಾದ ಎಣ್ಣೆ ಕಾಳುಗಳನ್ನು ಸಹ ಜೈವಿಕ ಇಂಧನ ತಯಾರಿಕೆಯಲ್ಲಿ ಬಳಸಬಹುದು.

ಜೈವಿಕ ಇಂಧನ ಉತ್ಪಾದನೆಗಾಗಿ ಬೇಕಾಗಿರುವ ಕಚ್ಚಾ ವಸ್ತುಗಳಿಗೆ ಕೃಷಿಯೇ ಮೂಲವಾಗಿದೆ. ಆದ್ದರಿಂದ ರೈತರ ಪಾಲ್ಗೊಳ್ಳುವಿಕೆ ಅತ್ಯಗತ್ಯ. ರೈತರು ತಮ್ಮ ಜಮೀನಿನ ಬದುಗಳಲ್ಲಿ, ಹಿತ್ತಲು, ಬಂಜರು ಭೂಮಿಗಳಲ್ಲಿ ಈ ಮರಗಳನ್ನು ಬೆಳೆಸಬಹುದಾಗಿದೆ. ಇದರಿಂದ ಬೆಳೆಗಳಿಗೆ ಬೇಕಾದ ನೆರಳು ದೊರೆಯುವುದು, ಹಸಿರೆಲೆ ಗೊಬ್ಬರ ಜೊತೆಗೆ ಎಣ್ಣೆ ತೆಗೆದು ಬರುವ ಹಿಂಡಿಯನ್ನು ತಮ್ಮ ಭೂಮಿಗೆ ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದಲ್ಲದೇ, ನೈಸರ್ಗಿಕ ಸಮತೋಲನವನ್ನೂ ಕಾಪಾಡಬಹುದು. ಇದರಿಂದ ರೈತರು ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ. ರೈತರು ತಮ್ಮ ಬಿಡುವಿನ ವೇಳೆಯಲ್ಲಿ ಎಣ್ಣೆ ತೆಗೆದು ಮಾರುವುದರಿಂದಲೂ ಹೆಚ್ಚುವರಿ ಆದಾಯಗಳಿಸಬಹುದು, ಜೊತೆಗೆ ಉದ್ಯೋಗವೂ ದೊರೆತಂತಾಗುವುದು.  ಸಣ್ಣ, ಅತಿಸಣ್ಣ ರೈತರು ತಮ್ಮ ಹೊಲದ ಬದುಗಳ ಮೇಲೆ, ಬೇಲಿಯ ಸುತ್ತ ಮತ್ತು ಮನೆಯ ಹಿತ್ತಲಿನಲ್ಲಿ ಕೆಲವು ಗಿಡಗಳನ್ನು ಬೆಳೆಯಬಹುದು.  ದೊಡ್ಡ ರೈತರು ತಮ್ಮ ಜಮೀನಿನ ಬಂಜರು, ಕೊರಕಲು, ವ್ಯವಸಾಯ ಮಾಡದೇ ಇರುವ ಜಾಗದಲ್ಲಿ ಜೈವಿಕ ಇಂಧನ ಮರಗಳನ್ನು ಮಿಶ್ರತೋಪನ್ನಾಗಿ ಬೆಳೆಯಬಹುದು.

ಇಂತಹ ಕಾರ್ಯಯೋಜನೆಯಿಂದ ಪ್ರತಿ ರೈತ ತಿಂಗಳಿಗೆ ರೂ. ೨೦೦ ರಿಂದ ರೂ. ೨೦೦೦ ದಷ್ಟು ಹೆಚ್ಚುವರಿ ಆದಾಯವನ್ನು ಗಳಿಸಬಹುದಾಗಿದೆ. ಈ ಕಾರ್ಯಕ್ರಮದಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ೧೫ ರಿಂದ ೩೦ ದಿನಗಳ ಉದ್ಯೋಗವನ್ನು ದೊರಕಿಸಬಹುದು.

ಕೃಷಿ ಅಭಿವೃದ್ಧಿಗಾಗಿ ರೈತರಿಗೆ ಅಗತ್ಯವಿರುವ ಪ್ರಮುಖವಾದ ವಸ್ತುಗಳಲ್ಲಿ ಗೊಬ್ಬರವೂ ಒಂದಾಗಿದೆ.  ಪ್ರಸ್ತುತ ಅಧಿಕ ರಾಸಾಯನಿಕ ಬಳಕೆಯಿಂದ ಮಣ್ಣಿನ ಗುಣಮಟ್ಟ ಕಡಿಮೆಯಾಗುತ್ತಿದ್ದು ಅಧಿಕ ಕ್ಷಾರತೆ ಹೊಂದುತ್ತಿದೆ.  ಇದೇ ರೀತಿ ಮುಂದಿವರಿದಿದ್ದಲ್ಲಿ ಮುಂಬರುವ ದಿನಗಳಲ್ಲಿ  ಮಣ್ಣಿನ ಗುಣಮಟ್ಟ ಸಂಪೂರ್ಣ ಹಾಳಾಗಿ ಮುಂದೊಂದು ದಿನ ಕೃಷಿಗೆ ಯೋಗ್ಯವಾಗಿರದೆ ಬಂಜರು ಭೂಮಿಯಾಗುವ ದಿನ ಎದುರಿಸಬೇಕಾಗುತ್ತದೆ.  ಆದುದರಿಂದ ರೈತ ಸಾವಯವ ಕೃಷಿ ಕಡೆ ಹೆಚ್ಚಿನ ಒಲವು ತೋರಿಸಬೇಕಾಗಿದೆ.  ಜೈವಿಕ ಇಂಧನ ಕೃಷಿಯಲ್ಲಿ ತೊಡಗುವ ರೈತರುಗಳಿಗೆ ಮುಖ್ಯವಾಗಿ ಕೃಷಿಗೆ ಅಗತ್ಯವಿರುವ ಸಾವಯವ ಗೊಬ್ಬರ ಲಭಿಸಿದಂತಾಗುತ್ತದೆ.  ರಾಸಾಯನಿಕ ಗೊಬ್ಬರಕ್ಕಾಗಿ ಸಾಲ ಮಾಡಿ ಗೊಬ್ಬರ ಖರೀದಿಸದೆ ಹಾಗೂ ಅದರ ಮೇಲೆ ಅವಲಂಭಿಸದೆ ಜೈವಿಕ ಇಂಧನ ಕೃಷಿಯೊಂದಿಗೆ ಸಾವಯವ ಗೊಬ್ಬರವೂ ಪುಕ್ಕಟೆಯಾಗಿ ಪಡೆಯಬಹುದಾಗಿದೆ.   ಪ್ರತಿ ೧ ಕೆ.ಜಿ. ಎಣ್ಣೆ ಉತ್ಪಾದಿಸುವುದರೊಂದಿಗೆ ರೈತನಿಗೆ ೨ ಕೆ.ಜಿ. ಹಿಂಡಿ ಸಾವಯವ ಗೊಬ್ಬರವಾಗಿ ಪಡೆಯುತ್ತಾನೆ.  ಇದರಿಂದ ರಾಸಾಯನಿಕ ಗೊಬ್ಬರಕ್ಕಾಗಿ ಖರ್ಚು ಮಾಡಬೇಕಿರುವ ಹಣ ಉಳಿತಾಯ ಮಾಡುವುದರೊಂದಿಗೆ ತಲೆತಲಾಂತರದಿಂದ ಪಡೆದ ಭೂಮಿಯ ಮಣ್ಣಿನ ಸಾರಾಂಶವನ್ನು ಸಹ ಸಾವಯವ ಗೊಬ್ಬರದಿಂದ ಪಡೆದಂತಾಗುತ್ತದೆ.

ಜೈವಿಕ ಇಂಧನ ಯೋಜನೆಯ ಅನುಷ್ಟಾನದಿಂದಾಗುವ ಲಾಭಗಳು

೧. ಎಣ್ಣೆಬೀಜಗಳ ಮಾರಾಟದಿಂದ ರೈತರಿಗೆ ನೇರ ಆರ್ಥಿಕ ಲಾಭ

೨. ಗೃಹ-ಪ್ರಮಾಣದ ಎಣ್ಣೆ-ಉತ್ಪಾದನಾ ಘಟಕದ ಬಳಕೆಯಿಂದ ರೈತರಿಗೆ ಹೆಚ್ಚುವರಿ ಆದಾಯ – ಮಾರಾಟಕ್ಕೆ ಯೋಗ್ಯವಾದ ಗುಣಮಟ್ಟದ ಎಣ್ಣೆ ಹಾಗೂ ಹಿಂಡಿಯ ಬಳಕೆಯಿಂದ ಮಣ್ಣಿನ ಫಲವತ್ತತೆಯಲ್ಲಿ ಹೆಚ್ಚಳ

೩. ಗ್ರಾಮೀಣ ಮಟ್ಟದಲ್ಲಿ ಜನರಿಗೆ ಉದ್ಯೋಗಾವಕಾಶಗಳ ನಿರ್ಮಾಣ

೪. ಗ್ರಾಮೀಣ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆ ಮಾಡಬಹುದು

೫. ಅರಣ್ಯ ವಿಸ್ತೀರ್ಣದ ಹೆಚ್ಚಳದಿಂದ ಸುಸ್ಥಿರ ಪರಿಸರದ ನಿರ್ಮಾಣವಾಗುವುದು

೬. ಹಳ್ಳಿಗಳಲ್ಲಿ ಜೈವಿಕ ಇಂಧನವನ್ನು ತಮ್ಮ ಟ್ರಾಕ್ಟರ್, ನೀರೆತ್ತುವ ಪಂಪುಗಳು, ಜನರೇಟರ್‌ಗಳಲ್ಲಿ ಬಳಸಬಹುದು.

೭. ಮಣ್ಣು ಮತ್ತು ನೀರಿನ ಸಂರಕ್ಷಣೆಯಲ್ಲಿ ಗಣನೀಯವಾದ ಪಾತ್ರ ವಹಿಸುವುದು

೮. ವಾಯು ಮಾಲಿನ್ಯ, ಪರಿಸರ ಮಾಲಿನ್ಯ ಹಾಗೂ ವಾತಾವರಣದ ತಾಪಮಾನದಲ್ಲಿ ಇಳಿಮುಖ

೯. ಪೆಟ್ರೋಲಿಯಂ ಇಂಧನದ ಬಳಕೆಯಲ್ಲಿ ಉಳಿತಾಯ ಮತ್ತು ಆಮದು ಮಾಡಿಕೊಳ್ಳಲು ತಗಲುವ ವಿದೇಶಿ ವಿನಿಮಯದಲ್ಲಿ ಗಮನಾರ್ಹ ಉಳಿತಾಯ

 

ಮಾರುಕಟ್ಟೆ ವ್ಯವಸ್ಥೆ

ಜೈವಿಕ ಇಂಧನ ಬೀಜಗಳಿಗೆ ಪ್ರಸ್ತುತ ನಿಗದಿತ ಬೆಲೆ ಇಲ್ಲ. ಮಾರುಕಟ್ಟೆಯಲ್ಲಿ ಬೀಜಗಳ ಬೆಲೆಯನ್ನು ಪೂರೈಕೆ ಹಾಗು ಬೇಡಿಕೆಯ ಆದಾರದ ಮೇಲೆ ನಿಗದಿ ಪಡಿಸಲಾಗುವುದು. ಆದರೆ, ಮುಂದಿನ ದಿನಗಳಲ್ಲಿ ಎಣ್ಣೆ ಬೀಜಗಳಿಗೆ, ಜೈವಿಕ ಇಂಧನ ಮತ್ತು ಜೈವಿಕ ಇಂಧನ ಉಪ-ಉತ್ಪನ್ನಗಳಿಗೆ ನಿಶ್ಚಿತವಾದ ಮಾರುಕಟ್ಟೆ ನಿರ್ಮಾಣವಾಗುವುದರಲ್ಲಿ  ಯಾವ ಸಂಶಯವೂ ಇಲ್ಲ.

ಆದುದರಿಂದ ಈ ನಿಟ್ಟಿನಲ್ಲಿ ಸಂಘಟಿತವಾದ ಬೀಜಸಂಗ್ರಹಣಾ ಜಾಲ ಹಳ್ಳಿಗಳಲ್ಲಿ ಪ್ರಾರಂಭವಾಗಬೇಕಾಗಿದೆ. ಈ ಸಂಗ್ರಹಣಾ ಜಾಲವು ಈಗ ಪ್ರಚಲಿತದಲ್ಲಿರುವ ಹಾಲು ಒಕ್ಕೂಟದ ಮಾದರಿಯಲ್ಲಿ ಕೆಲಸ ಮಾಡಬಹುದು. ಹೀಗೆ ಸಂಗ್ರಹಿಸಿದ ಜೈವಿಕ ಇಂಧನದ ಬೀಜಗಳನ್ನು ಹೋಬಳಿ ಮಟ್ಟದಲ್ಲಿ ಅಥವಾ ತಾಲ್ಲೂಕು ಮಟ್ಟದಲ್ಲಿ ಎಣ್ಣೆ ತೆಗೆಯುವ ಯಂತ್ರವನ್ನು ಸ್ಥಾಪಿಸಿ, ತೆಗೆದಂತಹ ಎಣ್ಣೆಯನ್ನು ಮತ್ತು ಹಿಂಡಿಯನ್ನು ಪುನಃ ಇದೇ ಸಹಕಾರ ಸಂಘದ ಸದಸ್ಯರುಗಳಿಗೆ ಮೊದಲು ಕೊಡುವ ವ್ಯವಸ್ಥೆ ಮಾಡಬಹುದು. ಈ ಎಣ್ಣೆಯನ್ನು ರೈತರು ಡೀಸಲ್ ಜೊತೆ ಶೇ. ೧೦ ರಿಂದ ೨೦ ರವರೆಗೆ ಮಿಶ್ರಣಮಾಡಿ ಟ್ರ್ಯಾಕ್ಟರ್, ಟಿಲ್ಲರ್ ಮತ್ತು ಪಂಪ್‌ಸೆಟ್‌ಗಳಿಗೆ ಬಳಸಬಹುದು. ನಂತರ ಉಳಿದ ಹೆಚ್ಚಿನ ಎಣ್ಣೆಯನ್ನು ಜೈವಿಕ ಡೀಸಲ್ ಉತ್ಪಾದಿಸಲು ಕಾರ್ಖಾನೆಗಳಿಗೆ ಕಳುಹಿಸಬಹುದು.  ಸಣ್ಣ ಪ್ರಮಾಣದಲ್ಲಿ ಜೈವಿಕ ಇಂಧನ ಉತ್ಪಾದಿಸುವ ಯಂತ್ರಗಳನ್ನು ಕೃಷಿ ವಿಶ್ವ ವಿದ್ಯಾಲಯದಿಂದ ಅಭಿವೃದ್ಧಿ ಪಡಿಸಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಜನೆ ಹಾಗೂ ಆದಾಯ ತರಬಲ್ಲ ಚಟುವಟಿಕೆಗಳನ್ನು ಕೈಗೊಳ್ಳಲು ಉದ್ದೇಶಿಸಿದೆ.

ಸಹಕಾರ ಸಂಘದ ಮಾದರಿಯಲ್ಲಿ ಜೈವಿಕ ಇಂಧನ ಮರಗಳ ಬೀಜಗಳನ್ನು ಸಂಗ್ರಹಿಸುವುದರಿಂದ ರೈತರಿಗೆ ಅನುಕೂಲವಾಗಿ ಮಧ್ಯವರ್ತಿಗಳನ್ನು ದೂರಮಾಡಬಹುದು. ಇದರಿಂದ ನಿಗದಿತ ಬೆಲೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಬೀಜಗಳನ್ನು ಶೇಖರಣೆ ಮಾಡಲು ಸಹಾಯಕವಾಗುತ್ತದೆ. ಈ ರೀತಿಯಲ್ಲಿ ಸಂಗ್ರಹಿಸಿದ ಜೈವಿಕ ಇಂಧನದ ಬೀಜಗಳನ್ನು ಸಂಸ್ಕರಿಸಲು ಈ ಕೆಳಗಿನ ವಿಧದಲ್ಲಿ ಯೋಜನೆ ಹಾಕಬಹುದು;

 • ಸಂಗ್ರಹಿಸಿದ ಬೀಜಗಳನ್ನು ಕಾರ್ಖಾನೆಗೆ ಮಾರುವುದು.
 • ಗ್ರಾಮೀಣ ಮಟ್ಟದಲ್ಲಿಯೇ ಎಣ್ಣೆ ತೆಗೆಯುವ ಘಟಕಗಳನ್ನು ಸ್ಥಾಪಿಸುವುದು.
 • ಎಣ್ಣೆಯನ್ನು ಮತ್ತು ಹಿಂಡಿಯನ್ನು ಆ ಹಳ್ಳಿಯ ಸಂಘದ ಸದಸ್ಯರು ಖರೀದಿಸಿ ಉಪಯೋಗಿಸಬಹುದು.
 • ಹೆಚ್ಚಿಗೆ ಉಳಿದ ಎಣ್ಣೆಯನ್ನು ಶುದ್ಧೀಕರಿಸಿ ಜೈವಿಕ ಡೀಸಲ್ ಮಾಡಲು ವ್ಯವಸ್ಥಿತ ಕಾರ್ಖಾನೆಗೆ ಮಾರಾಟ ಮಾಡುವುದು.

 

ಮಾರುಕಟ್ಟೆ ವ್ಯವಸ್ಥೆಯ ಸ್ಥಾಪನೆ

 • ರೈತರಿಂದ ಉತ್ಪನ್ನಗಳನ್ನು ಶೇಖರಿಸಿ ಗ್ರಾಮಮಟ್ಟದಲ್ಲಿ ವಿಲೇವಾರಿ ಮಾಡುವ ವ್ಯವಸ್ಥೆ.
 • ಖಚಿತ ಮತ್ತು ನಿಗದಿತ ಬೆಲೆಯನ್ನು ಒದಗಿಸುವ ವ್ಯವಸ್ಥೆ.
 • ಹಾಲು ಉತ್ಪಾದನಾ ಸಂಘಗಳ ಮಾದರಿಯಲ್ಲಿ ಮಾರುಕಟ್ಟೆ ಜಾಲವನ್ನು ಸ್ಥಾಪಿಸುವುದು.

ಉತ್ಪಾದನಾ ಘಟಕಗಳ ಸ್ಥಾಪನೆ

 • ಗೃಹ ಮಟ್ಟದಲ್ಲ್ಲಿ ಬೀಜಗಳಿಂದ ಎಣ್ಣೆಯನ್ನು ಹೊರತೆಗೆಯುವ ಯಂತ್ರಗಳ ಬಳಕೆ.
 • ಗ್ರಾಮ, ಹೋಬಳಿ ಹಾಗೂ ತಾಲ್ಲೂಕುಮಟ್ಟದಲ್ಲಿ ಗುಣಮಟ್ಟದ ಎಣ್ಣೆಗಾಣಗಳನ್ನು ಸ್ಥಾಪಿಸುವುದು.
 • ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಜೈವಿಕ ಇಂಧನವನ್ನು ಉತ್ಪತ್ತಿಮಾಡುವ ಘಟಕಗಳ ನಿರ್ಮಾಣ.

ಜೈವಿಕ ಇಂಧನಗಳನ್ನು ಖರೀದಿ ಮಾಡುವ ಸಂಸ್ಥೆಗಳು

 • ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ.
 • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ.
 • ದಕ್ಷಿಣ ರೈಲು ಸಂಸ್ಥೆ.
 • ಭಾರತೀಯ ತೈಲ ನಿಗಮ.   ಕೃಷಿ ವಿಜ್ಞಾನ ಕೇಂದ್ರಗಳು

ಜೈವಿಕ ಇಂಧನ ಬೀಜ ಉತ್ಪಾದನ/ಸಂಗ್ರಹಗಾರರ ಸಂಘ

ಇತ್ತೀಚಿನ ವರ್ಷಗಳಲ್ಲಿ ಜೈವಿಕ ಇಂಧನ ತಯಾರಿಕೆಗಾಗಿ ಗ್ರಾಮೀಣ ಪ್ರದೇಶದಲ್ಲಿ ಬೆಳೆಯುತ್ತಿರುವ ಹೊಂಗೆ, ಬೇವು, ಬೇಲಿಹರಳು (ಜಟ್ರೋಪ), ಹಿಪ್ಪೆ ಹಾಗೂ ಇತರೆ ತತ್ಸಂಬಂಧ ಗಿಡಗಳಿಂದ ಬರುವ ಬೀಜ ಸಂಗ್ರಹಣೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ.  ಈ ಗಿಡಗಳ ಬೀಜ ಮಾರಾಟದಿಂದ ರೈತರಿಗೆ ಅನುಕೂಲ ಹಾಗೂ ಉತ್ತಮ ಆದಾಯ ತರುವ ಸಾಧ್ಯತೆಗಳು ಹೆಚ್ಚಾಗಿವೆ.  ಆದಕಾರಣ ಗ್ರಾಮಮಟ್ಟದಲ್ಲಿ ಆಸಕ್ತ ರೈತರ/ರೈತ ಕುಟುಂಬಗಳ ಸಂಘಟನೆಯ ಮೂಲಕ ಜೈವಿಕ ಇಂಧನ ಗಿಡಗಳಿಂದ ಎಣ್ಣೆ ಬೀಜಸಂಗ್ರಹಣೆ ಮಾಡಿ ಮಾರಾಟ ಮಾಡುವ ವ್ಯವಸ್ಥೆ ಅವಶ್ಯಕವಾಗಿದೆ.

ಇತ್ತೀಚಿನ ದಿನದವರೆಗೆ ಈ ಬೀಜ ಸಂಗ್ರಹಣೆ ಹಾಗೂ ಮಾರಾಟ ವ್ಯಕ್ತಿಗತ ಕಾರ್ಯಕ್ರಮವಾಗಿದ್ದು ಇದೀಗ ಸಾಮೂಹಿಕವಾಗಿ ಬೀಜ ಸಂಗ್ರಹಿಸಿ ಮಾರಾಟ ಮಾಡುವ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಕಂಡು ಬಂದಿದೆ.

ಈ ವ್ಯವಸ್ಥೆಯಿಂದ ರೈತರಿಗೆ ಒಳ್ಳೆಯ ನಿಶ್ಚಿತ ಬೆಲೆ, ಗ್ರಾಮದಲ್ಲಿ ಬೀಜಗಳ ವಿಲೇವಾರಿ ಹಾಗೂ ಎಲ್ಲಾ ಉತ್ಪನ್ನಗಳನ್ನು ಸಂಪೂರ್ಣವಾಗಿ ಮಾರಾಟ ಮಾಡುವ ಅನುಕೂಲತೆಗಳು ಹೆಚ್ಚಾಗಿವೆ.

ಈ ನಿಟ್ಟಿನಲ್ಲಿ ಒಂದು ವ್ಯವಸ್ಥಿತ ಮಾರುಕಟ್ಟೆಯನ್ನು ರೂಪಿಸಲು ಹಾಗೂ ಹೆಚ್ಚು ಬೇಡಿಕೆಯುಳ್ಳ ಎಣ್ಣೆ ಬೀಜಗಳನ್ನು ಸಮೀಪದಲ್ಲೆ ಸ್ಥಾಪಿಸಲಾಗುವ ಎಣ್ಣೆ ತೆಗೆಯುವ / ಜೈವಿಕ ಡೀಸೆಲ್ ತಯಾರಿಸುವ ಕೇಂದ್ರಕ್ಕೆ ಒದಗಿಸುವ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ.

ಪ್ರಸ್ತುತದಲ್ಲಿ ಉತ್ಪಾದನೆಯ ಪ್ರಮಾಣಕ್ಕೆ ಅನುಗುಣವಾಗಿ ಎಣ್ಣೆ ಗಿರಣಿಗಳನ್ನು ಸ್ಥಾಪಿಸಲಾಗುತ್ತದೆ.  ಹಾಗೂ ಮಾರುಕಟ್ಟೆ ವ್ಯವಸ್ಥೆಗಾಗಿ ಸಾರ್ವಜನಿಕ ವಲಯದ ಉದ್ದಿಮೆಗಳಾದ ರೈಲ್ವೆ ಇಲಾಖೆ, ಸಾರಿಗೆ ಸಂಸ್ಥೆ ಇತರೆ ಸಾರ್ವಜನಿಕ ಉದ್ದಿಮೆಗಳು ಇತ್ಯಾದಿಗಳ ಜೊತೆ ಸೂಕ್ತ ಒಪ್ಪಂದಗಳನ್ನು ಮಾಡಲಾಗುತ್ತದೆ.

ರೈತರ ಸಹಕಾರ ಸಂಘ, ಖಾಸಗಿ ಉದ್ದಿಮೆದಾರರು ಇತರೆ ಸಂಘ ಸಂಸ್ಥೆಗಳು ಜೈವಿಕ ಇಂಧನ ತಯಾರಿಸಲು ಮುಂದೆ ಬರುತ್ತಿದ್ದಾರೆ.  ಇವುಗಳಿಗೆ ವ್ಯವಸ್ಥಿತವಾಗಿ ಬೀಜಗಳ ಪೂರೈಕೆ ಆಗಬೇಕಾಗಿದೆ, ಹಾಗೂ ಮುಂಬರುವ ದಿವಸಗಳಲ್ಲಿ ಉತ್ಪಾದನೆ ಹೆಚ್ಚಾಗುವಲ್ಲಿ ರೈತರ ಪಾತ್ರ ಗಣನೀಯವಾಗಿರುವುದು.

 

ಕೊನೆಯ ಮಾತು

ಜೈವಿಕ ಇಂಧನ ಇಡೀ ವಿಶ್ವದಲ್ಲೇ ಚರ್ಚೆಗೆ ಗ್ರಾಸವಾದ ವಿಷಯ.  ಮಿಲಿಯಾಂತರ ವರ್ಷಗಳಲ್ಲಿ ಶೇಖರಣೆಗೊಂಡ ಖನಿಜ ತೈಲಗಳನ್ನು ಹಲವೇ ದಶಕಗಳಲ್ಲಿ ಬಂದು  ಮಾಡುವತ್ತ ದಾಪುಗಾಲು ಹಾಕಿದ್ದೇವೆ.  ಇನ್ನು ೨-೩ ದಶಕಗಳಲ್ಲಿ ಇಡೀ ವಿಶ್ವದಲ್ಲಿರುವ ಎಲ್ಲಾ ಕಚ್ಛಾತೈಲ ನಿಕ್ಷೇಪಗಳು ಖಾಲಿಯಾಗುವ ಬಗ್ಗೆ ವಿಜ್ಞಾನಿಗಳು ಎಚ್ಚರಿಕೆಯ ಘಂಟೆ ಬಾರಿಸಿದ್ದಾರೆ.  ಅಷ್ಟೇ ಅಲ್ಲ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಯಂತಹ ಖನಿಜ ತೈಲಗಳನ್ನು ಇಂಜಿನುಗಳಲ್ಲಿ ಹಾಕಿ ಸುಡುವಾಗ ಹೊರ ಬರುವ ಇಂಗಾಲಾಮ್ಲಗಳು, ಗಂಧಕದ ಆಮ್ಲಗಳು, ಇಂಗಾಲದ ಸೂಕ್ಷ್ಮ ಕಣಗಳು ವಾತಾವರಣದ ಪ್ರದೂಷಣೆಯನ್ನು ಹೆಚ್ಚಿಸಿವೆ.  ಅಭಿವೃದ್ಧಿಯ ಹೆಸರಿನಲ್ಲಿ ಈ ಎಲ್ಲಾ ಕಲ್ಮಶವನ್ನು ಹೀರಿ ಹವೆಯನ್ನು ಶುದ್ಧಗೊಳಿಸುವ ಅರಣ್ಯ ನಾಶ ಅವ್ಯಾಹಿತವಾಗಿ ನಡೆದಿದೆ.  ಹಸಿರು ಮನೆ ಅನಿಲಗಳ ಅತಿಯಾದ ಹೊರ ಸೂಸುವಿಕೆಯಿಂದ ಭೂಮಿಯ ತಾಪಮಾನ ಹೆಚ್ಚಿದೆ. ಇದರಿಂದುಟಾದ ವಾತಾವರಣದ ವೈಪರೀತ್ಯಗಳಿಂದ ಕೃಷಿಯ ಮೇಲಾಗಿರುವ ದುಷ್ಪರಿಣಾಮಗಳು ಸರ್ವವಿದಿತ.  ಅಕಾಲ ಮಳೆ, ಕೆಲವೊಮ್ಮೆ ಪ್ರವಾಹ ಬರುವಂತಹ ಮಳೆ, ಜೊತೆ ಜೊತೆಗೆ ಬರಗಾಲ ರೈತನನ್ನು ಕಂಗಾಲಾಗಿಸಿದೆ.  ಕೃಷಿ ಚಟುವಟಿಕೆಗಳಿಂದ ಅನಿಶ್ಚತೆ, ಕಳಪೆ ಗುಣ ಮಟ್ಟದ ಬಿತ್ತನೆ ಬೀಜ, ದುಬಾರಿ ರಸಗೊಬ್ಬರಗಳ ಅತಿಯಾದ ಬಳಕೆ, ಕೃಷಿ ಉತ್ಪನ್ನಗಳಿಗೆ ನ್ಯಾಯ ಬೆಲೆ ಸಿಗದ ಮಾರುಕಟ್ಟೆ ವ್ಯವಸ್ಥೆ, ಕೃಷಿ ಅಸಾಧ್ಯ ಎನ್ನುವ ಹಂತಕ್ಕೆ ರೈತ ತಲುಪಿದ್ದಾನೆ.  ೬೦೦೦ ವರ್ಷಗಳ ಕೃಷಿ ಇತಿಹಾಸವಿರುವ ಭಾರತದಲ್ಲಿ ರೈತ ಮೊದಲ ಬಾರಿಗೆ ಸೋತಿದ್ದಾನೆ. ಹಾಗೂ ಅತ್ಮಹತ್ಯೆಗೆ ಶರಣಾಗಿದ್ದಾನೆ. ಬರಿದಾಗುತ್ತಿರುವ ಖನಿಜ ತೈಲಗಳಿಗೆ ಬದಲೀ ಇಂಧನವನ್ನು ಹುಡುಕಬೇಕು.  ಈ ಬದಲೀ ಇಂಧನಗಳು ನಿರಂತರವಾಗಿ ಲಭ್ಯವಿರಬೇಕು.  ಪರಿಸರದಲ್ಲಿನ ಸಮತೋಲನವನ್ನು ಕಾಯ್ದುಕೊಳ್ಳಬೇಕು.  ಜೊತೆಗೆ ಕೃಷಿಗೆ ಪೂರಕವಾಗಿರಬೇಕು. ನಮ್ಮ ಮುಂದಿರುವ ಈ ಎಲ್ಲಾ ಸವಾಲುಗಳಿಗೆ ಪರಿಹಾರವಾಗಬಲ್ಲ ಜೈವಿಕ ಇಂಧನ ಕಾರ್ಯಕ್ರಮ ಆಶಾದಾಯಕ ವಾತಾವರಣ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.

ಪಾಶ್ಚಿಮಾತ್ಯ ದೇಶಗಳ ಜೈವಿಕ ಇಂಧನ ಕಾರ್ಯಕ್ರಮ ಹೊಸ ಸಮಸ್ಯೆಯನ್ನೇ ಹುಟ್ಟುಹಾಕಿದೆ.  ಜೈವಿಕ ಇಂಧನಕ್ಕಾಗಿ ಆಹಾರ ಬೆಳೆಗಳ ಬಳಕೆ ಅಲ್ಲದೇ ಈ ಕಾರ್ಯಕ್ರಮಕ್ಕೆ  ಕೃಷಿ ಭೂಮಿಯ ಬಳಕೆ, ಆಹಾರ ಧಾನ್ಯಗಳ ಅಭಾವ ಮತ್ತು ಬೆಲೆ ಏರಿಕೆ ಬಿಸಿ ಈಗಾಗಲೇ ಮುಟ್ಟಿಸಿವೆ.   ಇಡೀ ವಿಶ್ವದಲ್ಲಿ ಆಹಾರ ಭದ್ರತೆಯೋ ಅಥವಾ ಇಂಧನ ಭದ್ರತೆಯೋ ಎಂಬುದು ಚರ್ಚೆಯ ವಿಷಯವಾಗಿದೆ.

ಇಡೀ ರಾಜ್ಯದಲ್ಲಿ ಪಾಳುಬಿದ್ದ ಅರಣ್ಯ ಅಥವಾ ಯಾವುದೇ ಸರ್ಕಾರಿ ಭೂಮಿ, ಬರಡುಬಿದ್ದ ಕೃಷಿ ಭೂಮಿ, ರೈತನ ಹೊಲಗದ್ದೆಗಳ ಬದು ಹಾಗೂ ಬೇಲಿಗುಂಟ, ರಸ್ತೆ, ರೈಲು ದಾರಿ, ಕಾಲುವೆ, ನಾಲೆಗಳ ಇಕ್ಕೆಲಗಳಲ್ಲಿ, ಕೊರಕಲು, ಖರಾಬು ಭೂಮಿಯಲ್ಲಿ ಈ ಜೈವಿಕ ಇಂಧನ ಬೆಳೆಗಳನ್ನು ಬೆಳೆಯಬಹುದಾಗಿದೆ.  ರಾಜ್ಯದ ನೆಲ, ಜಲ, ಇತರೆ ಸಂಪನ್ಮೂಲಗಳ ಸಧ್ಬಳಕೆ, ರೈತ ಸಮುದಾಯದ ಸಂಪೂರ್ಣ ತೊಡಗಿಸುವಿಕೆಯ ಮೂಲಕ ಆಹಾರ ಭದ್ರತೆಯ ಜೊತೆಗೆ ಇಂಧನ ಭದ್ರತೆಯನ್ನು ಸಾಧಿಸಬಹುದಾಗಿದೆ.

ಸ್ವಾತಂತ್ರ ನಂತರದಲ್ಲಿ ಭಾರತ ಎರಡು ಕ್ರಾಂತಿಯನ್ನು ನಡೆಸಿದೆ.  ಆಹಾರ ಧಾನ್ಯಗಳ ವಿಚಾರದಲ್ಲಿ ಸ್ವಾವಲಂಬನೆಯನ್ನು ಸಾಧಿಸಿದ ಹಸಿರು ಕ್ರಾಂತಿ, ಹಾಲಿನ ಉತ್ಪಾದನೆಯಲ್ಲಿ ಇಡೀ ವಿಶ್ವದಲ್ಲೇ ಮೊದಲನೇ ಸ್ಥಾನಕ್ಕೆ ಏರಿಸಿದ ಕ್ಷೀರ ಕ್ರಾಂತಿ.  ಈ ಎರಡೂ ಕ್ರಾಂತಿಯ ಹರಿಕಾರ ರೈತ ಆದರೂ ಇವೆರಡೂ ಕ್ರಾಂತಿಯ ಸಂಪೂರ್ಣ ಲಾಭ ಅವನಿಗೆ ದೊರೆತಿಲ್ಲ.  ಜೈವಿಕ ಇಂಧನ ಕ್ರಾಂತಿಯ ಹೊಸ್ತಿಲಲ್ಲಿ ನಿಂತಿರುವ ಇಂದು, ರೈತನ ಸ್ಮರಣೆ ಮತ್ತೊಮ್ಮೆ ಮಾಡಬೇಕಾಗಿದೆ.

ಇಡೀ ಜೈವಿಕ ಇಂಧನ ಕಾರ್ಯಕ್ರಮದ ಮೌಲ್ವಿಕ ಸರಪಳಿ (Value chain)ಯ ಎಲ್ಲಾ ಚಟುವಟಿಕೆಗಳಲ್ಲಿ ಸಮುದಾಯದ ತೊಡಗಿಸುವಿಕೆ ಅತೀ ಮುಖ್ಯವಾಗಿದೆ.  ವಿಕೇಂದ್ರಿಕೃತ ಮೌಲ್ಯ ವರ್ಧನೆಯ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ, ಹೆಚ್ಚುವರಿ ಆದಾಯ ಮೂಲಗಳ ಸೃಷ್ಟಿ, ಸ್ಥಳೀಯ ಆರ್ಥಿಕ ಬಲವರ್ಧನೆಗೆ ಅವಕಾಶವಿದೆ.  ಸಮಾಜದ ಎಲ್ಲಾ ವರ್ಗಗಳಿಗೆ ಲಾಭಸಿಗುವ ರೀತಿಯಲ್ಲಿ, ಪರಿಸರಕ್ಕೂ ಹಾಗೂ ಕೃಷಿಗೆ ಪೂರಕವಾಗಿ ಜೈವಿಕ ಇಂಧನ ಕಾರ್ಯಕ್ರಮವನ್ನು ರೂಪಿಸುವ ಪ್ರಯತ್ನ ಕಾರ್ಯಪಡೆಯದು.  ಇದೊಂದು ರಾಷ್ಟ್ರ ಯಜ್ಞ ಎಂದು ನಂಬಿದ್ದೇವೆ.  ಇದರ ಯಶಸ್ಸಿಗೆ ನಿಮ್ಮ ಹೆಗಲು, ಹೆಜ್ಜೆ ನಮ್ಮೊಂದಿಗೆ ಜೋಡಿಸಿ.  ನಿಮ್ಮ ಸಂಪೂರ್ಣ ಪಾಲ್ಗೊಳ್ಳುವಿಕೆಯ ಮೂಲಕ ಕಾರ್ಯಪಡೆಯನ್ನು ಗ್ರಾಮ ಗ್ರಾಮದ ಮೂಲೆ ಮೂಲೆಗೂ ವಿಸ್ತರಿಸೋಣ.

ಜೈ ಭಾರತ್,
ಜೈ ಕರ್ನಾಟಕ.

 

ವೈ.ಬಿ. ರಾಮಕೃಷ್ಣ
ಅಧ್ಯಕ್ಷರು,
ಕರ್ನಾಟಕ ಸರ್ಕಾರ, ಜೈವಿಕ ಇಂಧನ ಕಾರ್ಯಪಡೆ,
ಬೆಂಗಳೂರು