ನಿಸರ್ಗದಲ್ಲಿ ಧಾರಾಳವಾಗಿ ದೊರೆಯುವ ‘ಕಪ್ಪು ಚಿನ್ನ’ಎಂದು ಕರೆಯಲ್ಪಡುವ ಪೆಟ್ರೋಲಿಯಂ ಕ್ರಮೇಣ ಕಡಿಮೆಯಾಗುತ್ತ ಬಂದು ಮುಂದೊಂದು ದಿನ ಅದು ದೊರೆಯದೇ ಹೋಗಬಹುದೆನ್ನುವ ಶಂಕೆ ವಿಶ್ವದೆಲ್ಲೆಡೆ ಇದೆ. ಈಗ ಇದು ಬಳಸಲು ದುಬಾರಿಯಲ್ಲದೆ ಇದರ ಬಳಕೆಯಿಂದ ಹೊರ ಬರುವ ಕಾರ್ಬನ್ ಪ್ರಮಾಣ ವಾತಾವರಣವನ್ನು ಹೆಚ್ಚು ಮಲಿನಗೊಳಿಸುತ್ತಿದೆ. ಆದ್ದರಿಂದ ಬದಲಿ ಇಂಧನ ಅಥವಾ ಇದರೊಂದಿಗೆ ಬೆರೆಸಿ ಬಳಕೆ ಮಾಡಬಹುದಾದ ಅನೇಕ ರೀತಿಯ ಇಂಧನಗಳ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ.

ಕೆಲವು ಪರ್ಯಾಯ ಇಂಧನಗಳು

ಈ ರೀತಿಯ ಬದಲಿ ಇಂಧನಗಳು ವಾತಾವರಣದಲ್ಲಿನ ಮಾಲಿನ್ಯವನ್ನು ಕಡಿಮೆ ಮಾಡಬೇಕು ಮತ್ತು ಮರುಬಳಕೆಗೂ ಸಹಕಾರಿಯಾಗುವಂತೆ ಇರಬೇಕೆಂಬುದು ಅವುಗಳ ಸಂಶೋಧಕರ ಆಶಯ. ಜೈವಿಕ ಇಂಧನಗಳ ತಯಾರಿಕೆಗೆ ಸಾಮಾನ್ಯವಾಗಿ ಬಳಕೆ ಮಾಡುವುದು ಸಸ್ಯಗಳು ಅಥವಾ ಪ್ರಾಣಿಗಳಲ್ಲಿ ಮೇದಸ್ಸಿನಿಂದ ದೊರೆಯುವ ತೈಲ. ಅನೇಕ ರೀತಿಯ ಸಸ್ಯಳಿಂದ ಇಂತಹ ಉತ್ಪನ್ನ ದೊರೆಯುತ್ತದೆ.

ಜಟ್ರೋಪ, ಹೊಂಗೆ, ತಾಳೆ ಈ ಸಸ್ಯಗಳಲ್ಲಿ ಇಂಧನ ತೈಲ ದೊರೆಯುತ್ತಿದ್ದು ಇವುಗಳನ್ನು ಸುಲಭವಾಗಿ ಮೋಟಾರ್ ವಾಹನಗಳಲ್ಲಿ ಬಳಸಬಹುದಾಗಿದೆ.  ಎಥೆನಾಲ್ ಎಂಬ ಇನ್ನೊಂದು ಜೈವಿಕ ಇಂಧನವನ್ನು ಕಬ್ಬಿನ ಜೊಂಡು, ಸಿಪ್ಪೆ, ಮುಸುಕಿನ ಜೋಳದ ಸಿಪ್ಪೆ, ಸಾರಗಾಸಮ್ ಎಂಬ ಶೈವಲ ಇಂತಹವುಗಳಿಂದ ಪಡೆಯಬಹುದಾಗಿದೆ. ಸದ್ಯದಲ್ಲಿ ಅಮೆರಿಕದಲ್ಲಿ ಎಥೆನಾಲ್ ಅನ್ನು ಡೀಸೆಲ್‌ನೊಂದಿಗೆ ವಿವಿಧ ಪ್ರಮಾಣಗಳಲ್ಲಿ ಬಳಸುತ್ತಿದ್ದಾರೆ. ಇದರಲ್ಲಿರುವ ಸೆಲ್ಯುಲೋಸಿಕ್ ಎಥೆನಾಲ್ ಅಂದರೆ ಲಿಜಿನೊ ಸೆಲ್ಯುಲೋಸ್‌ನಲ್ಲಿ ಸಸ್ಯಗಳ ಮುದ್ದೆ, ಒಣಗಿದ ಮುಸುಕಿನ ಜೋಳದ ಕಾಂಡಗಳ ಎಲೆ, ಸ್ವಿಚ್ ಗ್ರಾಸ್ ಎಂದು ಕರೆಯುವ ಮರದ ಸಿಪ್ಪೆಗಳು ಹೀಗೆ ಅನೇಕವು ಬಳಕೆಯಾಗುತ್ತವೆ.  ಇದರಲ್ಲಿ ಸ್ವಿಚ್ ಗ್ರಾಸ್ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿದ್ದು ಅದು ಸಫಲವಾದಲ್ಲಿ ಅದರಿಂದ ಒಂದು ಉತ್ತಮ ಜೈವಿಕ ಇಂಧನ ದೊರೆಯುತ್ತದೆ. ಅಲ್ಲದೆ ಆಹಾರ ಸಸ್ಯಗಳನ್ನು ಬಳಸುವ ಮತ್ತು ಅವುಗಳನ್ನು ಬೆಳೆಯುವ ಪ್ರದೇಶಗಳನ್ನು ಇದಕ್ಕೆ ಉಪಯೋಗ ಮಾಡಿಕೊಳ್ಳಬೇಕಾಗಿಲ್ಲ. ನಮ್ಮಲ್ಲಿಯೂ ಎಥೆನಾಲ್ ಅಥವಾ ಹೊಂಗೆ ಎಣ್ಣೆಯನ್ನು ಡೀಸೆಲ್‌ನೊಂದಿಗೆ ಕೆಲ ಪ್ರಮಾಣದೊಂದಿಗೆ ಬೆರೆಸಿ ರಸ್ತೆ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಬಳಕೆಯಾಗುತ್ತಿದೆ.

ಆಲ್ಗ ಇಂಧನ ಹೇಗೆ ಅತಿಯುಕ್ತ

ಇಂದು ಆಲ್ಗ ತೈಲ (ಶೈವಲ/ಪಾಚಿ)ಜೈವಿಕ ಇಂಧನದ ಮೂಲವಾಗಿದ್ದು ಜೈವಿಕ ಇಂಧನ ತಯಾರಿಕೆಗೆ, ಸಂಶೋಧಕರಿಗೆ ಆಸಕ್ತಿಯ ವಸ್ತುವಾಗಿದೆ. ಇದನ್ನು ಒಂದು ಪರಿಪೂರ್ಣ ಹಸಿರು ಇಂಧನವೆಂದೂ ಕರೆಯುತ್ತಾರೆ. ಇಂಧನಕ್ಕೆ ಬಳಕೆಯಾಗುವುದು ಟ್ರೈಗ್ಲಿಸೆರಾಲ್ ಎಂಬ ಕೊಬ್ಬಿನಂಶ ಇರುವಂತಹ ಮೈಕ್ರೋ ಆಲ್ಗೆ ಮಾತ್ರವೇ ಹೊರತು ಸಮುದ್ರದಲ್ಲಿ ಎಲ್ಲೆಂದರಲ್ಲಿ ದೊರೆಯುವ ಶೈವಲಗಳಲ್ಲ. ಕೆಲವರು ಇದನ್ನು ‘ಆಯಿಲ್ ಗೇ’ಎಂದೂ ಕರೆಯುತ್ತಾರೆ. ಇದು ಪೆಟ್ರೋಲಿಯಂ ಇಂಧನಗಳಿಗೆ ಯುಕ್ತವಾದ ಬದಲಿ ಜೈವಿಕ ಇಂಧನವಾಗಬಹುದು. ಇತರ ಆಹಾರ ಸಸ್ಯಗಳಿಗೆ ಬೇಕಾದ ಹೆಚ್ಚಿನ ನೀರು, ಗೊಬ್ಬರ, ಬೆಳೆಯುವ ಭೂಮಿ ಇದ್ಯಾವುದೂ ಇದಕ್ಕೆ ಬೇಕಾಗಿರುವುದಿಲ್ಲ. ಇದನ್ನು ಇಂಧನವಾಗಿ ಬಳಕೆ ಮಾಡುವುದರಿಂದ ಬೇರೆ ಯಾವುದೇ ಆಹಾರ ಸಸ್ಯಗಳ ಬೆಳೆ ಕುಂಠಿತವಾಗುವುದಿಲ್ಲ. ಇದೊಂದು ಪ್ರಾಚೀನ ಸಸ್ಯ ಕೂಡ. ಇದರಿಂದ ಸುಲಭವಾಗಿ ಜೈವಿಕ ತೈಲವನ್ನು ಪಡೆಯಬಹುದು. ಇದರ ಬಳಕೆಯಿಂದ ವಾತಾವರಣದಲ್ಲಿ ಅತ್ಯಂತ ಕಡಿಮೆ ಕಾರ್ಬನ್ ಹೆಜ್ಜೆ ಗುರುತು (ಕಾರ್ಬನ್ ಫುಟ್ ಪ್ರಿಂಟ್)ಉಂಟಾಗಬಹುದು. ಜಾಗತಿಕ ತಾಪಮಾನಕ್ಕೆ ಹೆಚ್ಚು ಕಾರಣೀಭೂತವಾಗಿರುವ ಕಾರ್ಬನ್ ಡೈ ಅಕ್ಸೈಡ್ ಇಲ್ಲಿ ಆಲ್ಗೆಯನ್ನು ಪೋಷಿಸುತ್ತದೆ ಮತ್ತು ಇತರ ಜೈವಿಕ ಇಂಧನಗಳೊಂದಿಗೆ ಹೋಲಿಸಿದಲ್ಲಿ ಇದು ಹೆಚ್ಚು ಸತ್ವಯುತವಾಗಿರುತ್ತದೆ. ಜಟ್ರೋಪ, ರೇಪ್ ಬೀಜ ಇಂತಹವುಗಳಿಂದ ದೊರೆಯುವ ತೈಲದ ಪ್ರಮಾಣ ಇದರ ಮುಂದೆ ಬಹಳ ಕಡಿಮೆ ಮತ್ತು ಕಡಿಮೆ ಸತ್ವವುಳ್ಳದ್ದು ಎನ್ನುತ್ತಾರೆ ಸಂಶೋಧಕರು. ಇದನ್ನು ವಿಮಾನದ ಬಳಕೆಗೂ ಉಪಯೋಗ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ.

ಅಲ್ಗೆಯನ್ನು ಬೆಳೆಸಿ ಅದನ್ನು ಹಿಂಡುವುದರಿಂದ ತೈಲವನ್ನು ತೆಗೆಯುತ್ತಾರೆ. ಅದರಿಂದ ಉಳಿಯುವ ಚರಟವನ್ನು ಪ್ರಾಣಿ, ಪಕ್ಷಿಗಳಿಗೆ ಆಹಾರವಾಗಿ ಕೊಡಬಹುದು. ಹೀಗೆ ಜೈವಿಕ ಇಂಧನವನ್ನು ತಯಾರಿಸಲು ಆಲ್ಗೆ ತೈಲವನ್ನು ಸೋಡಿಯಂ ಎಥೆನೊಲೆಟ್ ಮತ್ತು ಎಥೆನಾಲ್ ಜೊತೆ ಬೆರೆಸಿ ಸಂಸ್ಕರಿಸುವ ಕ್ರಿಯೆಯನ್ನು ‘ಟ್ರಾನ್ಸ್‌ಎಸ್ಟರಿಫಿಕೇಷನ್’ಎಂದು ಕರೆಯುತ್ತಾರೆ. ಅಮೆರಿಕದಲ್ಲಿ ಈ ಬಗ್ಗೆ 1978ರಷ್ಟು ಹಿಂದಿನಿಂದಲೇ ಪ್ರಯತ್ನಗಳು ನಡೆದಿವೆ. ಈ ರೀತಿಯ ಶೈವಲಗಳ ವಿವಿಧ ಪ್ರಭೇದಗಳು ನಮಗೆ ಪ್ರಕೃತಿಯಲ್ಲಿ ಸಿಗುತ್ತವೆ. ಕೊಳಗಳಲ್ಲಿ ತೇಲುತ್ತಿರುವ ಅತ್ಯಂತ ಚಿಕ್ಕದಾದ ಸಸ್ಯಗಳಿಂದ ಮೊದಲುಗೊಂಡು ದೊಡ್ಡ ಸಮುದ್ರ ಪಾಚಿ, ಹುಲ್ಲಿನಂತಿರುವ ಪಾಚಿ, ಬಂಡೆಗಳ ಮೇಲೆ ಬೆಳೆಯುವಂತಹವು – ಇವೆಲ್ಲ ಒಂದೇ ಗುಂಪಿನವು. ಇವು ಸಾಮಾನ್ಯವಾಗಿ ಹಸಿರು, ಕೆಂಪು ಮತ್ತು ಕಂದು ಬಣ್ಣಗಳಲ್ಲಿರುತ್ತವೆ. ಇವಕ್ಕೆ ಅಗತ್ಯವಾಗಿರುವುದು ಪ್ರಕೃತಿಯಲ್ಲಿ ಹೇರಳವಾಗಿ ದೊರೆಯುವ ನೀರು, ಸೂರ್ಯನ ಬೆಳಕು ಮತ್ತು ಕಾರ್ಬನ್ ಡೈ ಅಕ್ಸೈಡ್.

ಕೊಳಗಳ ಮೇಲೆ ತೇಲುವ ಆಲ್ಗ ಈ ಇಂಧನ ತಯಾರಿಕೆಗೆ ಸೂಕ್ತವಾಗಿದೆ. ತೈಲ ತಯಾರಿಕೆಯಲ್ಲಿ ದ್ಯುತಿ ಸಂಶ್ಲೇಷಣೆ (ಫೋಟೋಸಿಂಥೆಸಿಸ್)ಕ್ರಿಯೆಯಿಂದ  ಕಾರ್ಬನ್ ಡೈ ಆಕ್ಸೈಡನ್ನು ಗಾಳಿಯಿಂದ ಹೀರಿಕೊಂಡು ಬರಿಯ ಆಕ್ಸಿಜನ್ ಅನ್ನು ಹೊರಕ್ಕೆ ಬಿಡುತ್ತದೆ. ಈ ಒಂದು ಗುಣವೇ ಈ ಜೈವಿಕ ಇಂಧನದ ಬಗ್ಗೆ ಪರಿಸರವಾದಿಗಳು ಮತ್ತು ಸಂಶೋಧಕರು ಹೆಚ್ಚಿನ ಆಸಕ್ತಿ ವಹಿಸಲು ಕಾರಣವಾಗಿದೆ. ಕೆಲವು ಅಂದಾಜಿನಂತೆ ಒಂದು ಎಕರೆ ಪ್ರದೇಶದಲ್ಲಿ ಬೆಳೆಯುವ ಈ ಆಲ್ಗೆಯಿಂದ ಸಾವಿರಾರು  ಗ್ಯಾಲನ್‌ಗಳಷ್ಟು ತೈಲ ತಯಾರಿಸಬಹುದಾಗಿದೆ. ಅದೇ ರೀತಿ, ಪ್ರತಿ ವರ್ಷ 140ಬಿಲಿಯನ್ ಗ್ಯಾಲನ್‌ಗಳ ಆಲ್ಗೆ ಜೈವಿಕ ಇಂಧನ ತೈಲ ದೊರೆತಲ್ಲಿ ಈಗ ಬಳಕೆಯಾಗುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳಿಗೆ ಅದು ಬದಲಿಯಾಗಲು ಸಾಧ್ಯ ಎನ್ನುತ್ತಾರೆ. ಇದಕ್ಕಾಗಿ ಸುಮಾರು 65ಮಿಲಿಯನ್ ಎಕರೆಯಷ್ಟು ಜಾಗದ ಅವಶ್ಯಕತೆ ಇದೆಯಂತೆ. ಇದನ್ನು ಒಳಾವರಣದಲ್ಲೂ ಬೆಳೆಯಬಹುದು.

ತೈಲ ತೆಗೆಯುವ ವಿಧಾನ

ಆಲ್ಗ ಅಥವಾ ಪಾಚಿ ತೈಲ ತೆಗೆಯುವ ವಿಧಾನ ಹಣ್ಣಿನ ರಸ ತೆಗೆದಷ್ಟೇ ಸುಲಭ. ಎಣ್ಣೆ ಹಿಂಡುವ ವಿಧಾನದಲ್ಲಿ ಸೇಕಡ 75ರಷ್ಟು ತೈಲವನ್ನು ತೆಗೆಯಬಹುದು. ಅನಂತರ ಇದನ್ನು ಹೆಕ್ಟೇನ್ ನೊಂದಿಗೆ ಬೆರೆಸಿ, ಯಾವುದೇ ರೀತಿಯ ರಾಸಾಯನಿಕ ಇರದಂತೆ ಶುಚಿಗೊಳಿಸುತ್ತಾರೆ. ಇನ್ನೊಂದು ವಿಧಾನವನ್ನು ಸೂಪರ್ ಕ್ರಿಟಿಕಲ್ ಲಿಕ್ವಿಡ್ ವಿಧಾನವೆನ್ನುತ್ತಾರೆ. ಇದರಿಂದ ಸೇಕಡಾ100ರಷ್ಟು ತೈಲ ತೆಗೆಯಬಹುದು. ಇಲ್ಲಿ ಕಾರ್ಬನ್ ಡೈ ಆಕ್ಸೈಡ್ ಅನ್ನು ಸೂಪರ್ ಕ್ರಿಟಿಕಲ್ ಲಿಕ್ವಿಡ್ ಆಗಿ ಬಳಕೆ ಮಾಡುತ್ತಾರೆ. ಯಾವುದೇ ವಸ್ತುವನ್ನು ಒತ್ತಡದಲ್ಲಿ ಬಿಸಿ ಮಾಡಿದಾಗ ಅದು ದ್ರವ ಮತ್ತು ಆವಿಯಾಗಿ ಪರಿವರ್ತನೆಗೊಳ್ಳುತ್ತದೆ. ಇಲ್ಲಿ ನಡೆಯುವುದೂ ಕೂಡ ಇದೇ ಪ್ರಕ್ರಿಯೆ. ಇಲ್ಲಿ ಆಲ್ಗೇ ಬಹುಪಾಲು ತೈಲವಾಗಿ ಹೊರ ಬರುತ್ತದೆ. ಆ ನಂತರ ಇದನ್ನು ಮೇದಸ್ಸಿನ ಸರಪಳಿ (ಫ್ಯಾಟ್ ಚೈನ್)ಪದ್ಧತಿಯಲ್ಲಿ ಶೋಧಿಸುತ್ತಾರೆ. ಈ ಕ್ರಿಯೆಗೆ ‘ಟ್ರಾನ್ಸ್ ಎಸ್ಟರಿಫಿಕೇಷನ್’ಎನ್ನುತ್ತಾರೆ. ಈ ತೈಲಕ್ಕೆ ಆಲ್ಕೊಹಾಲ್ (ಮೆಥನಾಲ್)ಅನ್ನು ಬೆರೆಸಿ ಜೊತೆಯಲ್ಲಿ ಸೋಡಿಯಂ ಹೈಡ್ರಾಕ್ಸೈಡ್‌ನಂತಹ ವಸ್ತುವನ್ನು ಶೋಧಕವಾಗಿ ಬಳಸಿದಾಗ ಅದು ಗ್ಲಿಸೆರಾಲ್ ಮತ್ತು ಜೈವಿಕ ಇಂಧನವಾಗಿ ಮಾರ್ಪಡುತ್ತದೆ. ಇದನ್ನು ಮತ್ತೆ ಶೋಧಿಸುವುದರಿಂದ ಅದರಲ್ಲಿನ ಗ್ಲಿಸೆರಾಲ್ ಸಂಪೂರ್ಣ ಇಲ್ಲವಾಗಿ ಶುದ್ಧ ಜೈವಿಕ ಇಂಧನ ತೈಲ ದೊರೆಯುತ್ತದೆ.

ಹೀಗೆ ಮೈಕ್ರೋ ಅಲ್ಗೆ (ಶೈವಲ)ಎನ್ನುವ ಅತಿ ಸಾಧಾರಣ ಪ್ರಕೃತಿದತ್ತವಾದ ಸಸ್ಯದಿಂದ ಅತ್ಯಂತ ಶಕ್ತಿಯುತವಾದ ಜೈವಿಕ ತೈಲವನ್ನು ತಯಾರಿಸಬಹುದು. ಇದು ವಾತಾವರಣದಿಂದ ಕಾರ್ಬನ್ ಡೈ ಅಕ್ಸೈಡ್ ಅನ್ನು ಸೆಳೆದುಕೊಂಡು ಆಕ್ಸಿಜನ್ ಹೊರ ಹಾಕುವುದರಿಂದ ಈಗಿನ ‘ವಾತಾವರಣದ ಬಿಸಿ’ಯನ್ನೂ ಸೀಮಿತಗೊಳಿಸಬಹುದು. ಆದರೆ ಇದು ಹೊರ ಹಾಕುವ ಆಕ್ಸಿಜನ್ ಯಾವ ಮಟ್ಟದಲ್ಲಿರುತ್ತದೆ ಮತ್ತು ಅದರಿಂದ ಏನಾದರೂ ಅಡ್ಡ ಪರಿಣಾಮಗಳು ಇವೆಯೇ ಎಂಬುದು ತಿಳಿಯಬೇಕಾಗಿದೆ. ಈ ತೈಲ ತಯಾರಿಕೆಯಲ್ಲಿ ಉಳಿಕೆಯಾಗುವ ಚರಟ ಕೂಡ ಬೇರೆ ರೀತಿಯಲ್ಲಿ ಮರುಬಳಕೆ ಯಾಗುವುದರಿಂದ ವಾತಾವರಣಕ್ಕೆ ಯಾವುದೇ ಮಾಲಿನ್ಯ ಸೇರುವ ಸಾಧ್ಯತೆ ಇರುವುದಿಲ್ಲ. ಬೇರೆ ಜೈವಿಕ ಇಂಧನ ತಯಾರಿಕೆಗೆ ಬಳಕೆಯಾಗುವ  ಆಧಾರ ವಸ್ತುಗಳು ಮತ್ತು ಅದನ್ನು ಬೆಳೆಯುವ ಪ್ರದೇಶಗಳಿಂದ ಇದು ಬೇರೆಯಾಗಿರುವುದರಿಂದ ಇದನ್ನು ಎಲ್ಲ ರೀತಿಯಲ್ಲೂ ‘ಪರಿಸರ ಸ್ನೇಹಿ’ಜೈವಿಕ ಇಂಧನ ತೈಲವೆನ್ನಬಹುದು.