ಜೈವಿಕ ಇಂಧನ

ಜೈವಿಕ ಇಂಧನವು ಜೈವಿಕ ಮೂಲಗಳಿಂದ ಅಂದರೆ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ಮೂಲಗಳಿಂದ ಉತ್ಪಾದನೆಯಾಗುವ ಇಂಧನ. ವಿವಿಧ ಎಣ್ಣೆ ಬೀಜಗಳು, ಪ್ರಾಣಿ ಜನ್ಯ ಕೊಬ್ಬು, ಕಬ್ಬು, ಸಿಹಿಜೋಳ, ಗೋವಿನಜೋಳ ಮುಂತಾದ ಸಕ್ಕರೆ ಅಂಶವುಳ್ಳ ಉತ್ಪನ್ನಗಳಿಂದ ಹಾಗೂ ಭವಿಷ್ಯದಲ್ಲಿ ಸಮುದ್ರದ ಹಿನ್ನೀರಿನಲ್ಲಿ, ಅನುಪಯುಕ್ತ ಹಾಗೂ ಮಲೀನ ನೀರಿನ ಮೇಲೆ ಸುಲಭವಾಗಿ ಬೆಳೆಯಬಲ್ಲ ಆಲ್ಗಿ ಬೆಳೆಗಳಿಂದ ಜೈವಿಕ ಇಂಧನವನ್ನು ತಯಾರಿಸಿ, ವಾಹನ ಹಾಗೂ ಇತರೆಡೆ ಬಳಸಬಹುದಾಗಿದೆ.

ಜೈವಿಕ ಡೀಸೆಲ್, ಜೈವಿಕ ಎಥೆನಾಲ್ ಮತ್ತು ಭವಿಷ್ಯದ ಜೈವಿಕ ಇಂಧನ

ಜೈವಿಕ ಡೀಸೆಲ್ ಅನ್ನು ಸಸ್ಯಜನ್ಯ ಎಣ್ಣೆ ಅಥವಾ ಪ್ರಾಣಿಜನ್ಯ ಕೊಬ್ಬಿನಿಂದ ಉತ್ಪಾದಿಸಲಾಗುತ್ತದೆ. ಜೈವಿಕ ಡೀಸೆಲ್ ದೀರ್ಘ ಸರಪಳಿ ಕೊಬ್ಬಿನ ಆಮ್ಲದಿಂದ (Long Chain Fatty Acid) ಉತ್ಪತ್ತಿಂiiiದ ಮೋನೊ ಅಲ್ಕೈಲ್ ಎಸ್ಟರ್ (Mono Alkyl Ester).  ಎಣ್ಣೆ ಅಥವಾ ಕೊಬ್ಬನ್ನು ಮೆಥನಾಲ್ ಅಥವಾ ಎಥನಾಲ್ ಜೊತೆ ಸೇರಿಸಿ NaOH/ KOH ಎಂಬ ಪ್ರತ್ಯಾಮ್ಲ ಪ್ರಚೋದಕದೊಂದಿಗೆ ಟ್ರಾನ್ಸ್‌ಎಸ್ಟರಿಫಿಕೇಷನ್ ಎಂಬ ರಾಸಾಯನಿಕ ಕ್ರಿಯೆಯ ಮೂಲಕ ಜೈವಿಕ ಡೀಸಲ್ ತಯಾರಿಸಲಾಗುತ್ತದೆ.

ಇದನ್ನು ನೇರವಾಗಿ ಅಥವಾ ಡೀಸೆಲ್ ಜೊತೆ ವಿವಿಧ ಪ್ರಮಾಣದಲ್ಲಿ ಮಿಶ್ರಣಮಾಡಿ ಉಪಯೋಗಿಸಬಹುದು. ಉದಾ: B5 ಅಂದರೆ ಶೇ.೫ ರಷ್ಟು ಬಯೋ ಡೀಸೆಲ್‌ನ್ನು ಶೇ.೯೫ ರಷ್ಟು ಪೆಟ್ರೋ-ಡೀಸೆಲ್‌ನೊಂದಿಗೆ ಮಿಶ್ರಣ, B10 ಅಂದರೆ ಶೇ.೧೦ ರಷ್ಟು ಬಯೋ ಡೀಸೆಲ್‌ನ್ನು ಶೇ. ೯೦ ರಷ್ಟು ಪೆಟ್ರೋ-ಡೀಸೆಲ್ ನೊಂದಿಗೆ ಮಿಶ್ರಣ,  B20 ಅಂದರೆ ಶೇ. ೨೦ ರಷ್ಟು ಬಯೋ ಡೀಸೆಲ್ ನ್ನು ಶೇ. ೮೦ ರಷ್ಟು ಪೆಟ್ರೋ-ಡೀಸೆಲ್‌ನೊಂದಿಗೆ ಮಿಶ್ರಣ.   B 100  ಅಂದರೆ ಶೇ.೧೦೦ ರಷ್ಟು ಬಯೋ-ಡೀಸೆಲಿನ ಉಪಯೋಗ.

ಜೈವಿಕ ಎಥೆನಾಲನ್ನು ಕಬ್ಬು, ಸಿಹಿಜೋಳ, ಗೋವಿನಜೋಳ ಮುಂತಾದ ಶರ್ಕಾರಾಂಶಗಳಿಂದ ಉತ್ಪಾದಿಸಲಾಗುತ್ತದೆ. ಕೃಷಿ ತ್ಯಾಜ್ಯಗಳಾದ ಕಬ್ಬಿನ ಸಿಪ್ಪೆ, ಹುಲ್ಲು ಮೊದಲಾದವುಗಳಲ್ಲಿರುವ ಸೆಲ್ಯುಲೋಸ್ ಎಂಬ ಸಂಯುಕ್ತ ಶರ್ಕರಾಂಶದಿಂದಲೂ ಎಥೆನಾಲ್ ಅನ್ನು ಉತ್ಪಾದಿಸಬಹುದಾಗಿದೆ. ಜೊತೆಗೆ, ಅನುಪಯುಕ್ತ ಹಣ್ಣುಗಳನ್ನು ಕೂಡ ಉಪಯೊಗಿಸಿ ಎಥೆನಾಲ್ ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ಮೊದಲಿಗೆ ಸಂಯುಕ್ತಗಳನ್ನು ಸರಳ ಸಕ್ಕರೆಯನ್ನಾಗಿ ಪರಿವರ್ತಿಸಲಾಗುತ್ತದೆ. ನಂತರ ಇದನ್ನು ಸೂಕ್ಷ್ಮಜೀವಿಗಳನ್ನು ಬಳಸಿ ಹುದುಗಿಸಲಾಗುತ್ತದೆ. ಹೀಗೆ ಬರುವ ಎಥನಾಲ್ ಅನ್ನು ಭಟ್ಟಿಇಳಿಸುವಿಕೆಯ ಮುಖಾಂತರ ಜೈವಿಕ ಎಥೆನಾಲ್ ಅನ್ನು ಪಡೆಯಬಹುದು.  ಜೈವಿಕ ಎಥೆನಾಲನ್ನು ಸಾಮಾನ್ಯವಾಗಿ E 100 ಅಂದರೆ ಶೇ. ೧೦೦ ರಷ್ಟು ಎಥೆನಾಲ್, E 85 ಅಂದರೆ ಶೇ. ೮೫ ರಷ್ಟು ಎಥೆನಾಲನ್ನು ಶೇ.೧೫ ರ ಗ್ಯಾಸೋಲಿನ್ ಮಿಶ್ರಣದೊಂದಿಗೆ ಉಪಯೋಗಿಸುವುದು.  ಶೇ.೧೦ ರಷ್ಟು ಎಥೆನಾಲನ್ನು ಶೇ.೯೦ ರಷ್ಟು ಗ್ಯಾಸೋಲಿನ್ ಮಿಶ್ರಣದೊಂದಿಗೆ ಗ್ಯಾಸೋಹಾಲ್ ಎಂಬ ಹೆಸರಿನಿಂದ ವಿವಿಧೆಡೆ ಉಪಯೋಗದಲ್ಲಿದೆ.

ಜೈವಿಕ ಇಂಧನದ ಅನುಕೂಲತೆಗಳು

 

  • ಜೈವಿಕ ಇಂಧನದ ಕಾರ್ಯಕ್ರಮ ಹಲವಾರು ಉದ್ಯೋಗ ಅವಕಾಶಗಳನ್ನು ಒದಗಿಸುವುದರ ಜೊತೆಗೆ, ರೈತರು, ಕೃಷಿಕಾರ್ಮಿಕರು ಬಿಡುವಿನ ವೇಳೆಯಲ್ಲಿ ಬೀಜ ಸಂಗ್ರಹಣೆ ಮತ್ತು ಮಾರಾಟದಿಂದ ಅಧಿಕ ಆರ್ಥಿಕ ಲಾಭ ಗಳಿಸಬಹುದು.
  • ಹಲವು ಸಂಶೋಧನೆಗಳಿಂದ ಜೈವಿಕ ಇಂಧನ ಪೆಟ್ರೋಲಿಯಂ ಇಂಧನಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಆಕ್ಸೈಡ್‌ಗಳನ್ನು ವಾತಾವರಣಕ್ಕೆ ಬಿಡುತ್ತದೆ ಎಂದು ಕಂಡುಬಂದಿದೆ.
  • ಪೆಟ್ರೋಲಿಯಂ ಇಂಧನ ವಾತಾವರಣಕ್ಕೆ ಕಾರ್ಬನ್ ಡೈಆಕ್ಸೈಡ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸುತ್ತಾ ಹೋಗುತ್ತದೆ. ಆದರೆ, ಜೈವಿಕ ಇಂಧನ ಸಸ್ಯಗಳು ವಾತಾವರಣದಲ್ಲಿನ ಕಾರ್ಬನ್ ಡೈಆಕ್ಸೈಡ್‌ನ ಕೆಲವು ಭಾಗವನ್ನು ತಾವೇ ಪುನ: ಬಳಸಿಕೊಳ್ಳುತ್ತವೆ.
  • ಜೈವಿಕ ಇಂಧನವು ಪರಿಸರ ಸ್ನೇಹಿ ಹಾಗೂ ನವೀಕರಿಸಬಹುದಾದ ಇಂಧನ.
  • ಇಂಜಿನ್ ಮಾರ್ಪಾಟಿನ ಅಗತ್ಯವಿಲ್ಲ.
  • ಜೈವಿಕ ಇಂಧನದಲ್ಲಿ ಗಂಧಕದ ಪ್ರಮಾಣ ಅತ್ಯಂತ ಕಡಿಮೆ.
  • ಸುರಕ್ಷಿತ ನಿರ್ವಹಣೆ, ಸಂಗ್ರಹಣೆ ಮತ್ತು ಸಾಗಾಣಿಕೆ.
  • ಇಂಜಿನ್‌ನ ಕಾರ್ಯಕ್ಷಮತೆ ಹೆಚ್ಚಿಸಿ, ಇಂಜಿನ್‌ನ ಬಾಳಿಕೆಯನ್ನು ಹೆಚ್ಚಿಸುತ್ತದೆ.
  • ಹೈಡ್ರೋಕಾರ್ಬನ್, ಸುಡದ ಇಂಗಾಲದ ಕಣಗಳ ಉಗುಳುವಿಕೆಯಲ್ಲಿ ಇಳಿಮುಖ.
  • ಜೈವಿಕ ಇಂಧನದ ಮರಗಳನ್ನು ಬೆಳೆಯುವುದರಿಂದ  ಮಣ್ಣಿನ ಸವಕಳಿಯನ್ನು ತಡೆಯಬಹುದು ಮತ್ತು ಮಣ್ಣಿನ ತೇವಾಂಶ ಕಾಪಾಡುವುದರೊಂದಿಗೆ ಆ ಪ್ರದೇಶವನ್ನು ನಿತ್ಯ ಹಸಿರಾಗಿರಿಸಬಹುದು.

ಜೈವಿಕ ಇಂಧನ ಸಸ್ಯಗಳು ಹಾಗೂ ಅವುಗಳ ಬೆಳೆಸುವಿಕೆ

ಗ್ರಾಮೀಣ ಜನತೆ ಹಲವಾರು ವರ್ಷಗಳಿಂದ ಬೆಳೆಸಿಕೊಂಡು ಬರುತ್ತಿರುವ ಅನೇಕ ಸಸ್ಯಗಳು ಜೈವಿಕ ಇಂಧನಕ್ಕೆ ಮೂಲವಾಗಿವೆ. ಎಣ್ಣೆ ಅಂಶವುಳ್ಳ ಅನೇಕ ಬೀಜಗಳಿಂದ ಎಣ್ಣೆ ತೆಗೆದು ಜೈವಿಕ ಡೀಸಲ್ ಅನ್ನು ಉತ್ಪಾದಿಸಬಹುದಾಗಿದೆ. ಸೂರ್ಯಕಾಂತಿ, ಕಡ್ಲೆಕಾಯಿ ಮುಂತಾದ ಖಾದ್ಯ ತೈಲಗಳಿಂದಲೂ ಜೈವಿಕ ಇಂಧನವನ್ನು ತಯಾರಿಸಬಹುದಾಗಿದೆ. ಆದರೆ ಇವುಗಳನ್ನು ಅಹಾರವಾಗಿ ಬಳಸುವುದರಿಂದ ಆಹಾರ ಭದ್ರತೆಗೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಅಖಾದ್ಯ ತೈಲಗಳಾದ ಹೊಂಗೆ, ಬೇವು, ಸಿಮರುಬಾ, ಹಿಪ್ಪೆ, ಜಟ್ರೋಫ, ಸುರಹೊನ್ನೆ ಮೊದಲಾದ ಸಸ್ಯಗಳನ್ನು ಕೃಷಿ ಯೋಗ್ಯವಲ್ಲದ ಭೂಮಿಯಲ್ಲಿ, ಬದುವಿನ ಮೇಲೆ, ಆಹಾರಧಾನ್ಯ ಬೆಳೆಗಳಿಗೆ ಪೈಪೋಟಿ ಇಲ್ಲದ ರೀತಿ ಮತ್ತು ಅತಿ ಕಡಿಮೆ ಖರ್ಚಿನಲ್ಲಿ ಮಿಶ್ರ ಬೆಳೆಯನ್ನಾಗಿ ಬೆಳೆದರೆ ಪರಿಸರ ಆರೋಗ್ಯಕರವಾಗಿರುತ್ತದೆ. ಅಲ್ಲದೇ ಉತ್ತಮ ಜೈವಿಕ ಇಂಧನ ಸಂಪನ್ಮೂಲವೂ ದೊರೆತಂತಾಗುವುದು.

ಈ ಕೆಳಗೆ ನಮೂದಿಸಿದ ಮರಗಳನ್ನು ಸಾಮಾನ್ಯವಾಗಿ ಕರ್ನಾಟಕ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಬೆಳೆಯಬಹುದಾಗಿದೆ.  ಜೊತೆಗೆ ಹೊಂಗೆ, ಬೇವು, ಹಿಪ್ಪೆ ಮರಗಳನ್ನು ನೂರಾರು ವರ್ಷಗಳಿಂದ ರೈತರು  ತಮ್ಮ ಹೊಲ ಗದ್ದೆಗಳ ಬದುಗಳಲ್ಲಿ, ಬೇಲಿಗುಂಟ ಬೆಳಸಿಕೊಂಡು ಬಂದುದರಿಂದ ಅವುಗಳ ನಿಕಟ ಪರಿಚಯ ಅವರಿಗಿದೆ.

ಜೈವಿಕ ಇಂಧನ ಸಸ್ಯಗಳ ಬೀಜಗಳಿಂದ ತೈಲ ಇಳುವರಿ

ಸಾಮಾನ್ಯ ಹೆಸರು ವೈಜ್ಞಾನಿಕ ಹೆಸರು ತೈಲ ಇಳುವರಿ (%) ಹೂ ಬಿಡುವಿಕೆ ಬೀಜ ಸಂಗ್ರಹಿಸುವ ಸಮಯ
ಹೊಂಗೆ ಪೊಂಗಾಮಿಯ ಪಿನ್ನಾಟ ೩೦-೩೫ ಮಾರ್ಚ್-ಮೇ ಜನವರಿ-ಮೇ
ಸಿಮರೂಬ ಸಿಮರೂಬ ಗ್ಲಾಕ ೪೦-೫೦ ಡಿಸೆಂಬರ್-ಫೆಬ್ರವರಿ ಮಾರ್ಚ್-ಎಪ್ರಿಲ್
ಬೇವು ಅಝಾಡಿರೆಕ್ಟಾ ಇಂಡಿಕಾ ೨೮-೩೫ ಮಾರ್ಚ್-ಮೇ ಜೂನ್-ಆಗಸ್ಟ್
ಹಿಪ್ಪೆ ಮಧುಕ ಇಂಡಿಕಾ ೩೦-೩೫ ಏಪ್ರಿಲ್-ಮೇ ಜುಲೈ-ಆಗಸ್ಟ್
ಜಟ್ರೋಫಾ ಜಟ್ರೋಫಾ ಕುರ್ಕಾಸ್ ೩೦-೩೫ ಮೇ-ಆಗಸ್ಟ್ ಆಗಸ್ಟ್-ಅಕ್ಟೋಬರ್
ನಾಗ ಸಂಪಿಗೆ 
ಸುರಹೊನ್ನೆ
ಪುಂಡಿ
ಔಡಲ

ನಿರಂತರ ಆದಾಯ ಪಡೆಯುವ ದೃಷ್ಟಿಯಲ್ಲಿ ವಿವಿಧ ಜೈವಿಕ ಇಂಧನದ ಮರಗಳನ್ನು ಮಿಶ್ರ ಬೆಳೆಯಾಗಿ ಬೆಳೆಸುವುದು ಸೂಕ್ತ. ಕೆಲವು ಮರಗಳು ೩ನೇ ವರ್ಷದಿಂದ ಆದಾಯ ಕೊಡಲು ಪ್ರಾರಂಭಿಸಿದರೆ ಇನ್ನುಕೆಲವು ಮರಗಳು ೭ ರಿಂದ ೧೦ ವರ್ಷದಿಂದ ಫಲ ಬಿಡಲು ಪ್ರಾರಂಭಿಸಿ ನೂರಾರು ವರ್ಷ ನಿರಂತರ ಆದಾಯ ಕೊಡುತ್ತವೆ.

ಮಧ್ಯದ ಇಂಧನ ಬೆಳೆಗಳು :

ರೈತರು ತಮ್ಮ ಜಮೀನಿನಲ್ಲಿ ಕೃಷಿ ಯೋಗ್ಯವಾದ ಭೂಮಿಯಲ್ಲಿ ಒಂದು ಬೆಳೆ ಬೆಳೆದ ನಂತರ ಅಂದರೆ ಮುಂಗಾರು ಕಟಾವಿನ ನಂತರವೂ ಕೆಲವೊಂದು ಖಾದ್ಯೇತರ ಅಲ್ಪಾವಧಿ ಬೆಳೆಗಳನ್ನು ಹೆಚ್ಚುವರಿಯಾಗಿ ಬೆಳೆಯುವುದು ಸಾದ್ಯ.  ಇಂತಹ ತೈಲ ಬೆಳೆಗಳ ಪೈಕಿ ಪುಂಡಿ, ಹರಳು ಇತ್ಯಾದಿ ಬೆಳೆಗಳು ಪ್ರಮುಖವಾಗಿವೆ.  ಅಲ್ಲದೆ, ಬದುಗುಂಟ, ಬೇಲಿ ಗುಂಟ ಹೊಂಗೆಮರ ನೆಟ್ಟಾಗ ಪ್ರತಿ ಎರಡು ಗಿಡಗಳ ಮಧ್ಯೆ ಎರಡು ಅಥವಾ ಮೂರು ಹರಳು ಅಥವಾ ಪುಂಡಿ ಗಿಡಗಳನ್ನು ಬೆಳೆಯ ಬಹುದಾಗಿದೆ.  ಇದರಿಂದ ಹೆಚ್ಚುವರಿ ಆದಾಯ ರೈತರು ಪಡೆಯಬಹುದು.   ರಾಜ್ಯದಲ್ಲಿ ಉತ್ತರ ಕರ್ನಾಟಕದ ಕಡಿಮೆ ಮಳೆಯಾಗುವ ಮಳೆಯಾಧಾರಿತ ಜಮೀನಿನಲ್ಲಿ ಕಡಲೆಕಾಯಿ (ಶೇಂಗಾ), ಮೆಣಸಿನ ಕಾಯಿ ಹಾಗೂ ಹೊಗೆ ಸೊಪ್ಪಿನ ಕಟಾವಿನ ನಂತರವಾಗಲಿ ಅಥವಾ ಮಧ್ಯದ ಬೆಳೆಯಾಗಿ ಪುಂಡಿ ಮತ್ತು ಹರಳುಗಳಂತಹ ಗಿಡಗಳನ್ನು ಅಂತರ್ ಬೆಳೆಯಾಗಿ ಬೆಳೆಯಬಹುದು.

ಕರ್ನಾಟಕದಲ್ಲಿ ಜೈವಿಕ ಇಂಧನ ಮರಗಳ ಅಭಿವೃದ್ಧಿಯ ಸಲುವಾಗಿ ರಚಿಸಿರುವ ಕ್ರಿಯಾಯೋಜನೆಯಲ್ಲಿ ರೈತರು ಬಂಜರು ಭೂಮಿಯನ್ನು ಬಳಸಿಕೊಂಡು, ಜೈವಿಕ ಇಂಧನ ನೀಡುವ ಹೊಂಗೆ, ಬೇವು, ಹಿಪ್ಪೆ, ಜಟ್ರೋಫ ಮತ್ತು ಸಿಮರೂಬ ಮುಂತಾದ ಮರಗಳನ್ನು ಬೆಳೆಸಿ, ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ.