ನಮ್ಮ ದೇಶದಲ್ಲಿ ಬೇಸಾದ ಬೆಳೆಗಳಲ್ಲಿ ರೋಗ ಬಾಧೆಯನ್ನು ತಪ್ಪಿಸಲು ರಾಸಾಯನಿಕ ಕೀಟನಾಶಕಗಳಿಗಾಗಿ ವರ್ಷಕ್ಕೆ ೬೦೦೦ ಕೋಟಿ ರೂಪಾಯಿಗಳು ವೆಚ್ಚವಾಗುತ್ತಿದೆ. ಇವುಗಳಿಂದ ಆಗುವ ಪರಿಸರ ಮಾಲಿನ್ಯ ಹಣದ ಖರ್ಚು ಮಾನವ ಮತ್ತು ಪ್ರಾಣಿಗಳಲ್ಲಾಗುವ ದುಷ್ಪರಿಣಾಮಗಳನ್ನು ಅವಲೋಕಿಸಿದರೆ ಜೈವಿಕ ಕೀಟನಾಶಕಗಳಿಗೇ ಮೊರೆಹೋಗುವುದು ಹೆಚ್ಚು ಸೂಕ್ತವೆಂಬುದು ಅರಿವಾಗುತ್ತದೆ

ನಮ್ಮ ದೇಶದಲ್ಲಿ ಸುಮಾರು ಶೇಕಡಾ ೬೦ ಬೇಸಾಯ ಆಧಾರಿತ ಕುಟುಂಬಗಳಿವೆ; ಪ್ರಪಂಚದಲ್ಲಿನ ರೈತರಲ್ಲಿ ಶೇಕಡ ೨೫ ರಷ್ಟು. ೧೯೬೦ ದಶಕದ ನಂತರ ಆಹಾರ ಬೆಳೆಯುವ ಗತಿಯೇ ಬದಲಾಗಿದೆ. ಕಡಿಮೆ ಕಾಲದಲ್ಲಿ ಹೆಚ್ಚು ಬೆಳೆ ಬೆಳೆಯುವ ಅಪ್ರಾಕೃತಿಕ ಕ್ರಿಯೆಯಿಂದಾಗಿ, ಪರಿಸರದ ಸಮತೋಲನ ಏರುಪೇರಾಗಿ ಇವು ತಂದೊಡ್ಡಿರುವ ಸಮಸ್ಯೆಗಳು ಹತ್ತಾರು. ಬೇಸಾಯದಲ್ಲಿ ನೀರಿನ ಸೂಕ್ತ ಬಳಕೆಯಾಗದೆ ಫಲವತ್ತು ಭೂಮಿಯ ಮೇಲ್ಪದರ ಕಳಚಿಕೊಂಡು ಸವಕಳಿ ಉಂಟಾಗುತ್ತಿದೆ. ಇದರ ಜೊತೆಗೆ ರಾಸಾಯನಿಕ ಗೊಬ್ಬರಗಳು, ರಾಸಾಯನಿಕ ಕ್ರಿಮಿನಾಶಕಗಳು ಯಥೇಚ್ಛವಾಗಿ ಬಳಕೆಯಾಗಿ ಪರಿಸರ ಮಲಿನವಾಗುತ್ತಿದೆ. ಈ ರಾಸಾಯನಿಕ ಕ್ರಿಮಿನಾಶಕಗಳು ಆಹಾರದ ಸರಪಳಿಯನ್ನು ಸೇರುತ್ತವೆ. ಆಹಾರ ಸರಪಳಿಯಲ್ಲಿ ಸಹಜವಾಗಿ ಒಂದು ಜೀವಿ ಇನ್ನೊಂದು ಜೀವಿಯ ಆಹಾರವಾಗುತ್ತದೆ. ಆಹಾರ ಸರಪಳಿಯ ಕೊನೆಯ ಹಂತದಲ್ಲಿರುವ ಜೀವಿ ಅಥವಾ ಮನುಷ್ಯನಲ್ಲಿ ರೋಗನಾಶಕಗಳು ಶೇಖರವಾಗಿ ರೋಗವನ್ನುಂಟುಮಾಡುತ್ತವೆ.

ಇಂತಹ ವಿಷಮ ಪರಿಸ್ಥಿತಿಯಲ್ಲಿ ನಮ್ಮ ಭಾರತದಲ್ಲಿ ಎರಡನೇ ಹಸಿರು ಕ್ರಾಂತಿಯ ರೂಪುರೇಷೆಗಳು ತಯಾರಿಯಾಗಬೇಕಾಗಿದೆ. ಹೆಚ್ಚು ಬೆಳೆಯುವುದರ ಜೊತೆಗೆ ಪರಿಸರ ಮಾಲಿನ್ಯ ತಡೆಯಲು ರಾಸಾಯನಿಕ ಕೀಟನಾಶಕಗಳ ಬದಲಿ ವ್ಯವಸ್ಥೆ ಮಾಡುವುದು ಇಂದಿನ ಜರೂರು.

ರಾಸಾಯನಿಕ ಕ್ರಿಮಿನಾಶಕಗಳು:

ಬೇಸಾಯದ ಬೆಳೆಗಳಲ್ಲಿ ಕೀಟ, ಬ್ಯಾಕ್ಟೀರಿಯಾ, ಬೂಷ್ಟು, ವೈರಸ್ ಮತ್ತು ನೆಮಟೋಡುಗಳು ರೋಗಗಳುಂಟುಮಾಡುತ್ತವೆ.

ಈ ರೋಗಕಾರಕಗಳನ್ನು ಹತೋಟಿಯಲ್ಲಿಡಲು ಇಲ್ಲಿಯವರೆಗೆ ರಾಸಾಯನಿಕ ರೋಗನಾಶಕಗಳನ್ನು ಬಳಸಲಾಗುತ್ತಿದೆ. ಈ ರಾಸಾಯನಿಕ ರೋಗನಾಶಕಗಳನ್ನು ಒಟ್ಟು ಐದು ಗುಂಪುಗಳನ್ನಾಗಿ ವಿಂಗಡಿಸಬಹುದು.

೧) ಆರ‍್ಗೆನೋಕ್ಲೋರೈಡ್ಗಳು-ಬಿಹೆಚ್‌ಸಿ, ಡಿಡಿಟಿ, ಡೈಎಲ್ಡ್ರಿನ್, ಎಂಡೋಸಲ್ಫಾನ್ (BHC, DDT, Dieldrin, Endosulfan).

೨) ಆರ‍್ಗೆನೋಫಾಸ್ಫೇಟ್‌ಗಳು-ಮ್ಯಾಲಥಿಯಾನ್ (Malthion), ಮುಂತಾದವುಗಳು.

೩) ಕಾರ‍್ಬಮೇಟ್ಸಗಳು- ಕಾರ್‌ಬ್ಯಾರಿಲ್, ಕಾರ‍್ಬೋ ಫ್ಯೂರಾನ್ (Carbarril, Carbofuran ), ಮುಂತಾದವು.

೪) ಪೈರಿಥ್ರಾಯಿಡ್‌ಗಳು-ಪೈರಿಥ್ರಿನ್(Pyrithrin)

೫) ಟ್ರೈ ಅಜೈನ್ಸ್- ಸಿಮಜೈನ್, ಅಟ್ರಜೈನ್ (Simazin, Atrizin) ಮುಂತಾದುವು.

ಕ್ಲೋರಿನೇಟೆಡ್ ಹೈಡ್ರೋಕಾರ್ಬೋನೇಟ್‌ಗಳ ಗುಂಪಿಗೆ ಸೇರಿದ (ಅಥವಾ ಆರ‍್ಗೆನೋ ಕ್ಲೋರೈಡ್‌ಗಳು) ಡಿ.ಡಿ.ಟಿ.ಯನ್ನು ೧೯೪೦ರ ಸರಿಸುಮಾರಿಗೆ ಪಾಲ್ ಮಿಲ್ಲರ್ ಎಂಬ ರಸಾಯನಿಕ ವಿಜ್ಞಾನಿ ಮೊದಲ ಬಾರಿಗೆ ಸಂಯೋಜಿಸಿದ. ಈ ಡಿ.ಡಿ.ಟಿ.ಗೆ ಎಲ್ಲಾ ವಿಧದ ಕೀಟಗಳನ್ನು ನಾಶಗೊಳಿಸುವ ಶಕ್ತಿಯಿರುವುದರಿಂದ ಬಳಸಲಾಯಿತು. ಪರಿಣಾಮ ? ಇದು, ಹಾಲು, ಮಾಂಸ, ನೀರು ಮುಂತಾದವುಗಳಲ್ಲಿ ಉಳಿದು ಕೊನೆಗೆ ಮನುಷ್ಯನಲ್ಲಿ ಶೇಖರಣೆಯಾಗಿ ರೋಗವನ್ನುಂಟುಮಾಡಿತು. ಈಗ ಎಚ್ಚೆತ್ತುಕೊಳ್ಳಬೇಕಾಯಿತು. ಡಿಡಿಟಿಯನ್ನು ಅಮೇರಿಕಾ, ಸ್ವೀಡನ್, ಇಂಗ್ಲೆಂಡ್ ಹೀಗೆ ಹಲವಾರು ಪಾಶ್ಚಾತ್ಯ ದೇಶಗಳಲ್ಲಿ ನಿಷೇಧಿಸಲಾಗಿದೆ. ನಮ್ಮ ದೇಶದಲ್ಲಿಯೂ ಸಹ ಭಾಗಶಃ ನಿಷೇಧ ಇದೆ. ಆದರೂ ಎಲ್ಲ ಮನೆಗಳಲ್ಲಿ ಇರುವೆಗಳನ್ನು ಹತೋಟಿಯಲ್ಲಿಡಲು ಈಗಲೂ ಡಿ.ಡಿ.ಟಿ.ಗೆ ಮೊರೆಹೋಗುತ್ತಿದ್ದೇವೆ. ಈಗ ಡಿ.ಡಿ.ಟಿಯನ್ನು ಹೆಚ್ಚು ಬಳಸಿದ ಕಾರಣದಿಂದಾಗಿ ಹಲವಾರು ಕೀಟಗಳು ಡಿ.ಡಿ.ಟಿ ನಿರೋಧಕ ಶಕ್ತಿಯನ್ನು ಪಡೆದುಕೊಂಡಿವೆ. ಭಾರತದಲ್ಲಿ ಸುಮಾರು ೧೯೬೦ ರಿಂದ ೭೦ರ ವರೆಗೆ ಡಿ.ಡಿ.ಟಿ ಸಿಂಪಡಿಸಿ ಮಲೇರಿಯಾ ರೋಗಕಾರಕ ಸೊಳ್ಳೆಗಳನ್ನು ನಿಯಂತ್ರಿಸುತ್ತಿದ್ದರು. ಈಗ ಅನಾಫಿಲಿಸ್ ಸೊಳ್ಳೆಗಳು ಡಿ.ಡಿ.ಟಿ ಯ ಜತೆಗೆ ಬಿ.ಹೆಚ್.ಸಿ, ಮ್ಯಾಲಥಿಯಾನ್, ಮತ್ತು ಫೆನಿಟ್ರೊಥಿಯಾನ್‌ಗಳಿಗೂ ರೋಗನಿರೋಧಕ ಶಕ್ತಿಯನ್ನು ಪಡೆದುಕೊಂಡಿವೆ. ಕೀಟಗಳು ನಿರೋಧಕ ಶಕ್ತಿಯನ್ನು ಗಳಿಸಿಕೊಂಡದ್ದರಿಂದ, ರೈತರು ಹೆಚ್ಚು ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸಬೇಕಾಗಿದೆ.

ಕೀಟನಾಶಕಗಳನ್ನು ಅವುಗಳ ಪರಿಸರದಲ್ಲಿ ಕೊಳೆಯದೇ ಉಳಿಯುವ ಗುಣಗಳಿಗೆ ಅನುಗುಣವಾಗಿ ೩ ಗುಂಪುಗಳಾಗಿ ವಿಂಗಡಿಸಲಾಗುತ್ತದೆ.

೧) ಕೊಳೆಯಲು ಒಂದರಿಂದ ಒಂದೂವರೆ ವರ್ಷಕಾಲ ಬೇಕಾಗುವ ಕೀಟನಾಶಕಗಳು-೨,೪-ಡಿ ಮತ್ತು ಅಟ್ರಿಜೈನ್ ಮುಂತಾದವು; ೨,೪-ಡಿಯನ್ನು ಕಳೆನಾಶಕವಾಗಿ ಬಳಸುತ್ತಾರೆ.

೨) ಕೊಳೆಯಲು ೨೦-ವರ್ಷಗಳಿಗೂ ಮೇಲ್ಪಟ್ಟು ಕಾಲ ಬೇಕಾಗುವ ಕೀಟನಾಶಕಗಳು-ಡಿ.ಡಿ.ಟಿ, ಆಲ್ಡ್ರಿನ್, ಡೈಎಲ್ಡ್ರಿನ್, ಎಂಡ್ರಿನ್, ಹೆಪ್ಟಕ್ಲೋರ್, ಎಂಡೋಸಲ್ಫಾನ್, ಟಾಕ್ಸೋಫೀನ್ ಮುಂತಾದವು.

೩) ಯಾವ ಬದಲಾವಣೆಯು ಆಗದೆ ಇರುವ ಕೀಟನಾಶಕಗಳು: ಲೆಡ್(ಸೀಸ), ಮರ್‌ಕ್ಯುರಿ(ಪಾದರಸ), ಆರ್‌ಸೆನಿಕ್ ಮುಂತಾದವು.

ಈ ಕೀಟನಾಶಕಗಳನ್ನು ಎರಡು ದೃಷ್ಠಿಯಿಂದ ನೋಡಬಹುದು. ಒಂದು, ಬೇಸಾಯದ ಬೆಳೆಗಳ ರೋಗಗಳನ್ನು ನಿಯಂತ್ರಿಸಿ ಹೆಚ್ಚು ಬೆಳೆಯಲು ಅನುಕೂಲವಾಗುತ್ತದೆ. ಇನ್ನೊಂದು, ಕೀಟನಾಶಕಗಳು ವಿಷಗಳು; ನಿಧಾನವಾಗಿ ನಮ್ಮ ಪರಿಸರ ವ್ಯವಸ್ಥೆಯನ್ನು ನಾಶಗೊಳಿಸುತ್ತವೆ. ಹಾಗಿದ್ದಲ್ಲಿ ಅವು ಎಷ್ಟು ಸುರಕ್ಷಿತ ? ಗಂಭೀರ ಸಮಸ್ಯೆಯೆಂದರೆ ಎಲ್ಲಾ ಆರ‍್ಗೆನೋ ಕ್ಲೊರೀನ್ ರೋಗನಾಶಕಗಳು ಪ್ರಾಣಿಗಳ ಕೊಬ್ಬಿನಲ್ಲಿ ಶೇಖರವಾಗುವುದು.

ಹಾಲು, ಮಾಂಸ, ಹಣ್ಣು ತರಕಾರಿಗಳಲ್ಲಿ ಶೇಖರವಾಗಿ ಕೊನೆಗೆ ಇವುಗಳನ್ನು ಉಪಯೋಗಿಸುವ ಮಾನವರಲ್ಲಿ ಶೇಖರವಾಗುತ್ತವೆ. ಪರಿಣಾಮ? ಯಕೃತ್ ಮತ್ತು ಮೂತ್ರಜನಕಾಂಗದ ಕಾಯಿಲೆಗಳು ತಲೆದೋರುತ್ತವೆ. ಡಿ.ಡಿ.ಟಿ ಯು ನೀರಿನಲ್ಲಿರುವುದಕ್ಕಿಂತ ೧,೦೦೦,೦೦೦ ಪಟ್ಟು ಮೀನಿನಲ್ಲಿ ಶೇಖರವಾಗಿರುತ್ತದೆ. ಇಂತಹ ಮೀನುಗಳನ್ನು ತಂದು ಬದುಕುವ ಪಕ್ಷಿಗಳ ಮೊಟ್ಟೆಗಳು ವೀರ್ಯಾಣುವಿನ ಜೊತೆ ನಿಷೇಚನವಾಗುವುದಕ್ಕೆ ಮೊದಲೇ ನಾಶವಾಗುತ್ತವೆ. ಈ ಕಾರಣದಿಂದಾಗಿ ಜುಟ್ಟಿಲ್ಲದ ಹದ್ದುಗಳ ಸಂಖ್ಯೆ ಅಮೇರಿಕಾ ದೇಶದಲ್ಲಿ ಕಡಿಮೆಯಾಯಿತೆಂದು ಅಧ್ಯಯನಗಳು ತಿಳಿಸುತ್ತವೆ.

ಇವಲ್ಲದೆ ಕೀಟನಾಶಕಗಳು ಡಿಎನ್‌ಎ  ಎಂಬ ಜೀವರಸಾಯನಿಕ ವಸ್ತುವಿನಲ್ಲಿ ವಿಕೃತಿ ಉಂಟುಮಾಡುತ್ತವೆ. ಡಿಎನ್‌ಎ ಜೀವರಸಾಯನವು ಅನುವಂಶೀಯ ಗುಣಗಳನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವ ಕೆಲಸ ನಿರ್ವಹಿಸುತ್ತದೆ. ಇದು ದೇಹದ ಪ್ರತಿಯೊಂದು ಜೀವಕೋಶದ ನ್ಯೂಕ್ಲಿಯಸ್‌ನಲ್ಲಿರುತ್ತದೆ. ಹತ್ತಾರು ವರ್ಷಗಳ ಕಾಲ ಗೋಡಂಬಿ ಬೆಳೆಯಲ್ಲಿ ಕೀಟಗಳ ಬಾಧೆಯನ್ನು  ತಪ್ಪಿಸಲು ಎಂಡೋಸಲ್ಫಾನ್ ಬಳಸಿದ ಕಾರಣದಿಂದ ಕೇರಳ ಮತ್ತು ಕರ್ನಾಟಕದ ಗಡಿಯ ಕಾಸರಗೋಡಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನೂರಾರು ಮಕ್ಕಳಲ್ಲಿ ಅನುವಂಶೀಯ ತೊಂದರೆಗಳಾಗಿವೆ. ಈ ಮಕ್ಕಳು ಇಡೀ ಜೀವಿತಾವಧಿಯಲ್ಲಿ ಬೇರೆಯವರನ್ನು ಆಶ್ರಯಿಸಬೇಕಾದ ಪರಿಸ್ಥಿತಿ. (ನೋಡಿ: ಅಕ್ಟೋಬರ್ ತಿಂಗಳ ವಿಜ್ಞಾನ ಸಂಗಾತಿ)

ಜೈವಿಕ ನಿಯಂತ್ರಣೆ:

ರೋಗಕಾರಕ ಜೀವಿಗಳನ್ನು ಇತರ ಪ್ರಕೃತಿ ಸಹಜ ಜೀವಿಗಳಿಂದ ನಿಯಂತ್ರಿಸುವುದಕ್ಕೆ ’ಜೈವಿಕ ನಿಯಂತ್ರಣೆ’ ಎಂದು ಕರೆಯುತ್ತಾರೆ. ಹೀಗೆ ನಿಯಂತ್ರಿಸಲು ಬಳಸುವ ಜೀವಿಗಳು, ಪರೋಪಜೀವಿಗಳಾಗಿತ್ತವೆ ಅಥವಾ ರೋಗಕಾರಕ ಜೀವಿಗಳಲ್ಲಿ ರೋಗವನ್ನುಂಟುಮಾಡುತ್ತವೆ. ಕ್ರಿ.ಪೂ. ೭೦೦೦ ದಲ್ಲಿಯೇ ಕೃಷಿಯಲ್ಲಿ ಜೈವಿಕ ರೋಗನಾಶಕಗಳ ಬಳಕೆ ಇತ್ತೆಂದು ತಿಳಿಯುತ್ತದೆ. ಅಂದು ರೈತರು ಸಸ್ಯಗಳ ವಿವಿಧ ಪ್ರಬೇಧಗಳನ್ನು ಬಳಸಿ ಕೀಟಗಳನ್ನು ನಿಯಂತ್ರಿಸುತ್ತಿದ್ದರೆಂದು ತಿಳಿದುಬರುತ್ತದೆ.

ಜೈವಿಕ ಕೀಟನಾಶಕಗಳಾಗಿ ಸಸ್ಯಗಳ ಬಳಕೆ:

ಸುಮಾರು ಆರುನೂರಕ್ಕೂ ಹೆಚ್ಚು ಸಸ್ಯಪ್ರಬೇಧಗಳನ್ನು ಬಳಸಿ ರೋಗಕಾರಕ ಜೀವಿಗಳನ್ನು ನಿಯಂತ್ರಣದಲ್ಲಿಡಬಹುದು. ಇಂತಹ ಜೈವಿಕ ಕ್ರಿಮಿನಾಶಕಗಳಲ್ಲಿ ಬೇವಿನ ಸಸ್ಯಕ್ಕೆ ಅಗ್ರಸ್ಥಾನ: ಇದೊಂದು ಪರಿಸರ ಸ್ನೇಹಿ. ಬೇವಿನ ಸಸ್ಯದಿಂದ ಅನೇಕ ಕೀಟನಾಶಕಗಳನ್ನು ಈಗಾಗಲೇ ತಯಾರಿಸಲಾಗುತ್ತಿದೆ. ಅವುಗಳಲ್ಲಿ ಅಜೆಡೆರಿಕ್ಟಿನ್ (Azaderichtin) ಕೂಡ ಒಂದು. ಇತರ ರಾಸಾಯನಿಕ ವಸ್ತುಗಳೆಂದರೆ ನಿಂಬಿನ್, ಸಲಾನಿನ್ ಮತ್ತು ಮೆಯಂಟ್ರಿಯಾಲ್ (Nimbin, Salanin, Meyentrial) ಮುಂತಾದವುಗಳು. ಬೇವಿನ ಸಸ್ಯದಿಂದ ಸುಮಾರು ಇನ್ನೂರಕ್ಕೂ ಹೆಚ್ಚು ಬೇಸಾಯ ಬೆಳೆಗಳಲ್ಲಿನ ರೋಗಗಳನ್ನು ನಿಯಂತ್ರಿಸಬಹುದಾಗಿದೆ. ಅವುಗಳಲ್ಲಿ ಕಡಲೆಕಾಯಿಯ ಬೇರು ಕೊಳೆಯುವ ರೋಗ, ಸೆಣಬಿನ ಕಾಂಡ ಕೊಳೆಯುವ ರೋಗ, ಬದನೆಯ ಬೇರು ಕೊಳೆಯುವ ರೋಗ, ಈರುಳ್ಳಿ ಕೊಳೆಯುವ ರೋಗ, ಮೆಣಸಿನಕಾಯಿ ಮತ್ತು ಟೊಮ್ಯಾಟೋಗಳ ಎಲೆಸುತ್ತು ರೋಗಗಳನ್ನು ಸಂಪೂರ್ಣವಾಗಿ ಹತೋಟಿಯಲ್ಲಿಡಬಹುದೆಂದು ಈಗಾಗಲೇ ಸಾಬೀತಾಗಿದೆ. ನಮ್ಮ ದೇಶದಲ್ಲಿ ಸುಮಾರು ೧೬ ದಶಲಕ್ಷ  ಬೇವಿನ ಮರಗಳಿವೆಯೆಂದು ಅಂದಾಜು; ಬೇವಿನ ಎಲೆ, ಬೀಜ, ತೊಗಟೆಯನ್ನು ಕೀಟನಾಶಕಗಳನ್ನಾಗಿ ಬಳಸಲಾಗುತ್ತಿದೆ.

ಚಂಡುಮಲ್ಲಿಗೆ ಸಸ್ಯಗಳು ಅನೇಕ ಕೀಟಗಳನ್ನು ದೂರವಿಡುತ್ತವೆ. ಬೇಸಾಯದ ಬೆಳೆಗಳ ಜತೆಯಲ್ಲಿ ಚಂಡುಮಲ್ಲಿಗೆ ಬೆಳೆದು ಬೇಸಾಯದ ಬೆಳೆಗೆ ಬರುವ ರೋಗಗಳನ್ನು ನಿವಾರಿಸಬಹುದು. ಬಟಾಣಿ,ಆಲೂಗಡ್ಡೆ ಮತ್ತು ಟೊಮ್ಯಾಟೋಗಳಲ್ಲಿನ ಎಲೆಸುತ್ತು ಕಂದು ಬೂದು ರೋಗವನ್ನು, ಬೆಂಡೆಕಾಯಿ, ಪಪಾಯ, ದತ್ತುರ, ಕಣಗಿಲೆ, ಪುದೀನ, ಮತ್ತು ಮುಳ್ಳಿನದಂಟು ಎಲೆಗಳ ರಸದಿಂದ ಹತೋಟಿಯಲ್ಲಿಡಬಹುದು. ಭತ್ತಕ್ಕೆ ಬರುವ ಕಂದುಚುಕ್ಕೆ ರೋಗವನ್ನು ಸಾಸಿವೆ ಗಿಡ, ಕ್ರೊಟನ್ ಗಿಡ ಮತ್ತು ಗೆಣಸು ಎಲೆಗಳ ರಸವನ್ನು ಬಳಸಿ ನಿವಾರಿಸಬಹುದು. ತುಳಸಿ ಎಲೆಯ ರಸದಿಂದ ಟೊಮ್ಯಾಟೋ ಮತ್ತು ಹಸಿಮೆಣಸಿನಕಾಯಿ  ಗಿಡದ ರೋಗವನ್ನು ನಿಯಂತ್ರಿಸಬಹುದೆಂದು ಕೃಷಿ ತಜ್ಞರ ಸಂಶೋಧನೆಗಳು ದೃಢಪಡಿಸಿವೆ.

ತೆಂಗಿನ ಎಲೆಯ ರಸದಿಂದ ಬಾಳೆ ಎಲೆಸುತ್ತು ರೋಗವನ್ನು ಮತ್ತು ನುಗ್ಗೆ, ಮಧುಕ ಇಂಡಿಕ(Madhuka indica), ವಿಂಕಾ ರೋಜಿಯಾ (Vinca rose), ಸಿಟ್ರೋನೆಲ್ಲಾ (Citronella) ಹುಲ್ಲು, ಹೊಗೆಸೊಪ್ಪು ಎಲೆಗಳ ರಸದಿಂದ ಅನೇಕ ಹಣ್ಣು ಮತ್ತು ತರಕಾರಿ ಸಸ್ಯಗಳ ರೋಗಗಳನ್ನು ತಹಬಂದಿಗೆ ತರಬಹುದಾಗಿದೆ. ಜೋಳ ಮತ್ತು ಹತ್ತಿ ಬೆಳೆಯ ಎರಡು ಸಾಲುಗಳ ಮಧ್ಯೆ ಗೆಣಸನ್ನು ಬೆಳೆಯುವುದರಿಂದ ಗೆಣಸು ಕೀಟಗಳನ್ನು ಆಕರ್ಷಿಸಿ ಜೋಳ ಮತ್ತು ಹತ್ತಿಗೆ ಯಾವ ರೋಗಗಳೂ ಬರದಂತೆ ಕಾಪಾಡುತ್ತವೆ.

ಸೂಕ್ಷ್ಮಜೀವಿಗಳಿಂದ ರೋಗನಿಯಂತ್ರಣೆ:

ಸುಮಾರು ೧೧,೦೦೦ ವಿವಿಧ ಪ್ರಬೇಧದ ಕೀಟ, ವೈರಸ್ಸು, ಬ್ಯಾಕ್ಟೀರಿಯಾ, ಬೂಷ್ಟು, ಪ್ರೊಟೋಜೀವಿ, ರಿಕೇಟ್ಸಿಯಾ (ಒಂದು ವಿಧದ ಬ್ಯಾಕ್ಟೀರಿಯಾ) ಮತ್ತು ನೆಮಟೋಡುಗಳು ರೋಗ ನಿಯಂತ್ರಣೆ ಕಾರ್ಯದಲ್ಲಿ ನೆರವಿಗೆ ಬರುತ್ತವೆ. ಇವು ಸಾಮಾನ್ಯವಾಗಿ ಪರಾವಲಂಬಿಗಳು. ಕಪ್ಪೆ ಮತ್ತು ಜೇಡಗಳು ಸಹ ಕೀಟ ನಿಯಂತ್ರಣೆಯಲ್ಲಿ ಮುಖ್ಯಪಾತ್ರವನ್ನು ವಹಿಸುತ್ತವೆ. ಈ ಜೇಡಗಳಿಗೆ ಸುಮಾರು ೯೦ರಷ್ಟು ರೋಗಕಾರಕ ಕೀಟಗಳನ್ನು ನಿಯಂತ್ರಿಸುವ ಶಕ್ತಿಯಿದೆಯೆಂದು ಹೇಳುತ್ತಾರೆ. ಜೇಡಗಳನ್ನು ಬೇಸಾಯ ಭೂಮಿಯಲ್ಲಿ ಸಣ್ಣ ಸಣ್ಣ ಹಳ್ಳಗಳನ್ನು ಮಾಡಿ ವೃದ್ಧಿಸಬಹುದು. ಈ ಜೇಡಗಳನ್ನು ಬಳಸಿ ಹತ್ತಿ ಬೆಳೆಯಲ್ಲಿ ಕೀಟಗಳನ್ನು ನಿಯಂತ್ರಿಸಲಾಗುತ್ತಿದೆ. ಇದರಿಂದ ರಾಸಾಯನಿಕ ಕೀಟನಾಶಕಗಳ ಬಳಕೆಯಲ್ಲಿ ಶೇಕಡ ೬೦ರಷ್ಟು ಉಳಿಸಲು ಸಾಧ್ಯವೆಂದು ಕಂಡುಬಂದಿದೆ. ಒಂದು ತೋಳ ಜೇಡವು ಒಮ್ಮೆಗೆ ೧೦ ರಿಂದ ೧೨ ಕಂದು ಬಣ್ಣದ ಜಿಗಿಯುವ ಕೀಟಗಳನ್ನು ತಿಂದು ಜೀರ್ಣಿಸಿಕೊಳ್ಳುತ್ತದೆ. ಈ ಕಂದು ಬಣ್ಣದ ಜಿಗಿಯುವ ಕೀಟಗಳು ಏಷ್ಯಾದ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.

ಹತ್ತಿ, ಮೆಕ್ಕೆಜೋಳ, ಸೇಬು ಮತ್ತು ಅವೋಕಾಡೋ(Avocado) ಸಸ್ಯಗಳಲ್ಲಿನ ಮಿಡತೆಗಳನ್ನು ಹತೋಟಿಯಲ್ಲಿಡಲು ಟ್ರೈಕೋಗಾಮ (Trichogama) ಎಂಬ ಕಣಜಹುಳುವಿನ ಪ್ರಬೇಧವನ್ನು ಬಳಸುತ್ತಾರೆ. ಟ್ರೈಕೋಗಾಮ ಕಿಲೋನಿನ್ (Trichogama kilonin) ಎಂಬ ಪ್ರಬೇಧವನ್ನು ಕಬ್ಬನ್ನು ಕೊರೆಯುವ ಕೀಟವನ್ನು ನಿಯಂತ್ರಿಸಲು ಬಳಸುತ್ತಾರೆ. ಹತ್ತಿ ಹಣ್ಣು ಮತ್ತು ಬಾದಾಮಿಗಳನ್ನು ತಿಂದು ನಾಶಗೊಳಿಸುವ ಕಾರ್ಪೆಂಟರ್ ನೊಣಗಳನ್ನು ನಿಯಂತ್ರಿಸಲು ನ್ಯೂಪ್ಲೇಟಿನಾ ಕಾರ್ಪೊಕ್ಯಾಪ್ಸೆ (Neoplatina carbocaps) ಕೀಟವನ್ನು ಬಳಸಬಹುದಾಗಿದೆ. ಈ ನ್ಯೂಪ್ಲೇಟಿನಾ ಕೀಟವು ಕಾರ್ಪೆಂಟರ್ ನೊಣದ ಮೇಲೆ ಪರಾವಲಂಬಿಯಾಗಿ ಬದುಕುತ್ತದೆ.

ಸ್ಟನೆರ್‌ನಿಮಾ ಮತ್ತು ಹೆಟಿರೋರಾಬ್ಡೈಟಿಸ್ (Sinernema, Heterorabhditis ) ಎಂಬ ನೆಮಟೋಡುಗಳ ಕರುಳಿನಲ್ಲಿ, ಅನೇಕ ರೋಗ ಉಂಟು ಮಾಡುವ ಬ್ಯಾಕ್ಟೀರಿಯಾಗಳು ಸಹಜವಾಗಿ ಮನೆ ಮಾಡಿಕೊಂಡಿರುತ್ತವೆ. ಅನೇಕ ಕೀಟಗಳು ನೆಮಟೋಡುಗಳನ್ನು ತಿಂದು ಜೀರ್ಣಿಸಿಕೊಳ್ಳುತ್ತವೆ. ಹೀಗೆ ನೆಮಟೋಡುಗಳನ್ನು ತಿಂದ ಕೀಟಗಳು ಕೂಡಲೇ ಸಾಯುತ್ತವೆ. ಇದಕ್ಕೆ ಕಾರಣ ನೆಮಟೋಡುಗಳಲ್ಲಿನ ಬ್ಯಾಕ್ಟೀಯಾಗಳು, ಕೀಟಗಳಲ್ಲಿ ರೋಗವನ್ನುಂಟು ಮಾಡುತ್ತವೆ.

ಮತ್ತೊಂದು ಪರಿಣಾಮಕಾರಿ ವಿಧಾನವೆಂದರೆ, ಗಾಮಾಕಿಣಗಳನ್ನು ಬಳಸಿ ರೋಗಕಾರಕ ಗಂಡು ಕೀಟಗಳನ್ನು ನಿರ್ವೀರ್ಯಗಳನ್ನಾಗಿ ಮಾಡಿ ಅವುಗಳ ಸಂಖ್ಯೆಯನ್ನು ನಿಯಂತ್ರಿಸುವುದು.

ಜೈವಿಕ ತಂತ್ರಜ್ಞಾನದಿಂದ ಕೀಟ ನಿಯಂತ್ರಣೆ:

ಅನೇಕ ಸೂಕ್ಷ್ಮಜೀವಿಗಳು ನಿರ್ದಿಷ್ಟ ಕೀಟಗಳನ್ನು ಮಾತ್ರ ಕೊಲ್ಲುತ್ತವೆ. ಇಂತಹ ಸೂಕ್ಷ್ಮಜೀವಿಗಳನ್ನು ಜೈವಿಕ ತಂತ್ರಜ್ಞಾನದಿಂದ ವೃದ್ಧಿಸಿ, ಶೇಖರಿಸಿಟ್ಟು, ಬೇಕಾದಾಗ ಬಳಸಬಹುದು. ಹಲವಾರು ಬ್ಯಾಕ್ಟೀರಿಯಾ, ವೈರಸ್ಸು ಮತ್ತು ಬೂಷ್ಟುಗಳನ್ನು ಜೈವಿಕ ನಿಯಂತ್ರಕಗಳಾಗಿ ಬಳಸುತ್ತಾರೆ. ಬ್ಯಾಸಿಲಸ್ ಥುರಿಂಜಿಯೆನ್ಸಿಸ್ (Bacillus thuringiensis) ಎಂಬ ಬ್ಯಾಕ್ಟೀರಿಯಾ ಒಂದು ವಿಷಕಾರಕ ಪ್ರೊಟೀನನ್ನು ಅದರ ಕೋಶದಲ್ಲಿ ತಯಾರಿಸುತ್ತದೆ. ಇಂತಹ ವಿಷವುಳ್ಳ ಕೋಶಗಳನ್ನು ತಿಂದ ಕೀಟವು ಸಾಯುತ್ತದೆ. ಇದನ್ನು ಸಾಮಾನ್ಯವಾಗಿ ಬಿಟಿಯೆಂದು (Bt) ಕರೆಯುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿ ಈ ಬಿಟಿಯನ್ನು ಹಲವಾರು ದಶಕಗಳಿಂದಲೇ ಬಳಸುತ್ತಾ ಬಂದಿದ್ದಾರೆ. ಈ ಬಿಟಿಗಳನ್ನು ರೇಷ್ಮೆ ಬೆಳೆಗೆ ತೊಂದರೆ ಕೊಡಬಹುದೆಂದು ೧೯೯೧ರವರೆಗೆ ಕೀಟನಾಶವಾಗಿ ಬಳಸಲು ಅನುಮತಿ ಕೊಟ್ಟಿರಲಿಲ್ಲ. ನಮ್ಮ ದೇಶದಲ್ಲಿ ಈ ಬಿಟಿಯ ಅನೇಕ ತಳಿಗಳನ್ನು ತಯಾರಿಸಿದ್ದಾರೆ. ಇದನ್ನು ವ್ಯಾವಹಾರಿಕವಾಗಿ ಥುರಿಸೈಡ್ ಹೆಚ್ ಪಿ, ಬಯೋಟ್ರಾಲ್ ಬಿಟಿಬಿ (Thuricide HP, Biotrol, BTB), ಎಂಬ ವಿವಿಧ ಹೆಸರುಗಳಲ್ಲಿ ಕರೆಯುತ್ತಾರೆ.

ಆಸ್ಪರ್ ಜಿಲ್ಲಸ್ ನೈಜ಼ರ್ (Aspergillus niger)(ಎಎನ್-೨೭) ಎಂಬ ಬೂಷ್ಟನ್ನು ಬಳಸಿ ಕುಂಬಳ ಸಸ್ಯದ ಎಲೆಸೊರಗು ರೋಗವನ್ನು ಹತೋಟಿಯಲ್ಲಿಡಬಹುದೆಂದು ತೋರಿಸಿದ್ದಾರೆ. ಈ ಎಲೆಸೊರಗು ರೋಗವು ಸಾಮಾನ್ಯವಾಗಿ ಕಂಡುಬರುವ ಒಂದು ದೊಡ್ಡ ಸಮಸ್ಯೆಯೆಂದು ಪರಿಗಣಿಸಲಾಗಿದೆ.

ಬ್ಯಾಕ್ಯುಲೋ (Bacculo) ವೈರಸ್ಸುಗಳನ್ನು ಜೈವಿಕ ಕೀಟನಾಶಕಗಳಾಗಿ ಬಳಸುತ್ತಾರೆ. ಈ ವೈರಸ್ಸುಗಳನ್ನು ಒಂದು ಅರಳಿನಂತಿರುವ ವಸ್ತುವಿನಲ್ಲಿ ಸೇರಿಸಿ ಅವುಗಳ ಜೈವಿಕ ಗುಣಗಳನ್ನು ಕಾಪಾಡಬಹುದಾಗಿದೆ. ಇವುಗಳನ್ನು ಮಾರುಕಟ್ಟೆಯಲ್ಲಿ ವ್ಯಾವಹಾರಿಕವಾಗಿ ಜೈನಾಬ್-ಟಿ, ಮತ್ತು ಪಿಜಿ-ಸಸ್ಪೆನ್‌ಷನ್ ಎಂದು ಕರೆಯುತ್ತಾರೆ. ಇದನ್ನು ಸ್ಯಾನ್ಡೋಜ್ ಕಂಪೆನಿಯು ಎಲ್ಕಾರ್ ಎಂಬ ಹೆಸರಿನಲ್ಲಿ ೧೯೭೫ರಿಂದಲೇ ಮಾರಾಟ ಮಾಡುತ್ತಿದೆ. ಎನ್‌ಪಿವಿ (NPV) ನ್ಯೂಕ್ಲಿಯಾರ್ ಪಾಲಿ ಹೆಡ್ರೋಸಿಸ್ ವೈರಸ್, ಮತ್ತು (ಉಗಿ) ಗ್ರಾನ್ಯುಲೋಸಿಸ್ ವೈರಸ್‌ಗಳು ಇತರೆ ಮುಖ್ಯವಾದ ಕೀಟನಿಯಂತ್ರಕ ವೈರಸ್‌ಗಳು.

ಬಾವೇರಿಯಾ ಬೆಸಿಯಾನ, ವರ‍್ಟಿಸಿಲಿಯಮ್ ಲೆಕನೈ ಮತ್ತು ಹಿರ್‌ಸುಟಿಲ್ಲಾ ಥಾಮ್ಸೋನಿಯೈ (Bavaria bassiana, Verticilius lechani, Hirsutilla thamsonii)ಎಂಬ ಬೂಸ್ಟಗಳನ್ನು ಜೈವಿಕ ತಂತ್ರಜ್ಞಾನದಿಂದ ವೃದ್ಧಿಸಬಹುದಾಗಿದೆ. ಇವುಗಳನ್ನು ಸಹ ಕೀಟನಿಯಂತ್ರಣೆಯಲ್ಲಿ ಬಳಸಲಾಗುತ್ತಿದೆ. ಈ ಬೂಸ್ಟಗಳು ಮಾರುಕಟ್ಟೆಯಲ್ಲಿ ಬಾವೇರಿಯನ್ ಮತ್ತು ಮೆಟಾಕ್ವಿನೋ ಎಂಬ ಮಾರಾಟದ ಹೆಸರಿನಲ್ಲಿ ಸಿಗುತ್ತವೆ. ಇವಲ್ಲದೆ ಇತರೆ ಕೀಟ ನಿಯಂತ್ರಕ ಬೂಸ್ಟ್‌ಗಳೆಂದರೆ, ಟ್ರೈಕೋದರ್ಮ್ ಹರ‍್ಜಿಯಾನಮ್ ಮತ್ತು ಗ್ಲಿಯೋಕಾಡಿಯಮ್ ವಿವೆನ್ಸ್ ಇವುಗಳನ್ನು ಸಹ ಜೈವೆಕ ತಂತ್ರಜ್ಞಾನದಿಂದ ವೃದ್ಧಿಸುವ ಪ್ರಯತ್ನಗಳು ನಡೆದಿವೆ.

ಜೆನಿಟಿಕ್ ತಂತ್ರಜ್ಞಾನದಿಂದ ಜೈವಿಕ ನಿಯಂತ್ರಣೆ:

ಒಂದು ಜೀವಿಯಲ್ಲಿನ ಜೀನನ್ನು ಇನ್ನೊಂದು ಜೀವಿಗೆ ವರ್ಗಮಾಡಿದರೆ ಅದಕ್ಕೆ ಕುಲಾಂತರಿ ಅಥವಾ ಟ್ರಾನ್ಸ್‌ಜೆನಿಕ್ ಜೀವಿ ಎಂದು ಕರೆಯುತ್ತಾರೆ. ಜೀನ್ ಎಂಬುದು ವರ್ಣತಂತುವಿನಲ್ಲಿನ ಒಂದು ಭಾಗ. ಇದು ಜೀವಿಯಲ್ಲಿ ಒಂದು ನಿರ್ದಿಷ್ಟ ಗುಣವನ್ನು ರೂಪಿಸುತ್ತದೆ. ಇಂತಹ ಜೀನ್‌ಗಳನ್ನು ಬ್ಯಾಕ್ಟೀರಿಯಾದಿಂದ ಸಸ್ಯ, ಪ್ರಾಣಿ, ಅಥವಾ ಸಸ್ಯದಿಂದ ಪ್ರಾಣಿ, ಬ್ಯಾಕ್ಟೀರಿಯಾಗಳಿಗೆ, ಅಥವಾ ಪ್ರಾಣಿಗಳಿಂದ ಇತರ ಪ್ರಾಣಿ, ಸಸ್ಯ ಅಥವಾ ಬ್ಯಾಕ್ಟೀರಿಯಾಗಳಿಗೆ ವರ್ಗ ಮಾಡಬಹುದಾಗಿದೆ. ಹೀಗೆ ಕೀಟನಾಶಕ ಗುಣವನ್ನು ಸಸ್ಯಗಳಿಗೆ ಅಳವಡಿಸುವುದು ಸಾಧ್ಯ ಮತ್ತು ಕೀಟನಾಶಕ ಪ್ರೋಟೀನನ್ನು ಸೃಷ್ಟಿಸುವ ಬ್ಯಾಕ್ಟೀರಿಯಾದ ಜೀನನ್ನು ಬೇರ್ಪಡಿಸಿ ಸಸ್ಯಕ್ಕೆ ವರ್ಗ ಮಾಡಬಹುದಾಗಿದೆ.ಇಂತಹ ಕುಲಾಂತರಿ ಸಸ್ಯದ ಎಲೆ ಅಥವಾ ಇತರ ಸಸ್ಯ ಭಗಗಳನ್ನು ತಿಂದ ಕೀಟವು ಸಾಯುತ್ತದೆ.ಇಲ್ಲಿ ಬ್ಯಾಕ್ಟೀರಿಯಾ ಮೂಲದ ಪ್ರೋಟೀನ್, ಸಸ್ಯ ಕೋಶಗಳಲ್ಲಿ ಸೃಷ್ಟಿಯಾಗುತ್ತದೆ. ಹೀಗೆ ಸಸ್ಯಗಳಲ್ಲಿ ಕೀಟ ನಿರೋಧಕ ಶಕ್ತಿಯನ್ನು ಅಳವಡಿಸಬಹುದು. ಇದೇ ರೀತಿಯಲ್ಲಿ ಸಸ್ಯಗಳಲ್ಲಿ ಹೆಚ್ಚು ಸಾರವುಳ್ಳ, ರುಚಿಕರವಾದ ಆಹಾರ ಧಾನ್ಯಗಳನ್ನು ತಯಾರಿಸುವ ಜೀನ್‌ಗಳನ್ನು ಅಳವಡಿಸಬಹುದಾಗಿದೆ. ಇದೇ ವಿಧಾನವನ್ನು ಅನುಸರಿಸಿ ಸಸ್ಯಗಳನ್ನು ಬೆಳೆಯಲಾಗುತ್ತಿದೆ. ವಿವಿಧ ಪ್ರಭೇದಗಳ ಸಸ್ಯಗಳ ಕೋಶಗಳನ್ನು ಜತೆಗೂಡಿಸಿ ಸೊಮ್ಯಾಟಿಕ್ ಹೈಬ್ರಿಡ್ ಮಾಡುತ್ತಿದ್ದಾರೆ. ಈ ಸೊಮ್ಯಾಟಿಕ್ ಹೈಬ್ರಿಡ್ (Somatic hybrid)ಗಳಲ್ಲಿ ಎರಡು ವಿವಿಧ ಸಸ್ಯಗಳ ಜೀನುಗಳನ್ನು ಒಂದು ಕಡೆ ಸೇರಿಸಬಹುದಾಗಿದೆ. ಎಲ್ಲಾ ಸಸ್ಯ, ಪ್ರಾಣಿ ಮತ್ತು ಬ್ಯಾಕ್ಟೀರಿಯಾಗಳಲ್ಲಿ ಈ ಹೈಬ್ರಿಡ್‌ಗಳನ್ನು ಮಾಡಬಹುದಾಗಿದೆ. ಇಂತಹ ಹೈಬ್ರಿಡ್‌ಗಳು ಕೀಟನಿರೋಧಕ ಶಕ್ತಿ, ಹೆಚ್ಚು ಸಾರವುಳ್ಳ ಮತ್ತು ಹೆಚ್ಚು ಬೆಳೆಯುವ ಶಕ್ತಿಯನ್ನು ಗಳಿಸಿಕೊಂಡಿರುತ್ತವೆ.

ಬಿಟಿ ಕಾಟನ್ ಒಂದು ಕುಲಾಂತರಿ ಹತ್ತಿ ಸಸ್ಯ. ಈ ಹತ್ತಿ ಸಸ್ಯದಲ್ಲಿ ಬ್ಯಾಸಿಲಸ್ ಥುರಿಂಜಿಯೆನ್ಸಿಸ್(Bacillus thuringiensis ,ಬಿಟಿ) ಎಂಬ ಬ್ಯಾಕ್ಟೀರಿಯಾದಿಂದ ಬೇರ್ಪಡಿಸಿದ ಕೀಟ ನಿರೋಧಕ ಪ್ರೊಟೀನನ್ನು ತಯಾರಿಸುವ ಜೀನನ್ನು ಅಳವಡಿಸಲಾಗಿದೆ. ಇಂತಹ ಹತಿ ಗಿಡ ಬಿಟಿ ಪ್ರೊಟೀನನ್ನು ತಯಾರಿಸುವ ಸಾರ್ಮಥ್ಯವನ್ನು ಪಡೆದಿರುತ್ತದೆ. ಹತ್ತಿ ಬೆಳೆಯಲ್ಲಿ ಕಾಟನ್ ಬಾಲ್‌ವರ್ಮ್ (Cotton bollworm) ಎಂಬ ಹುಳು ಹತ್ತಿಯ ಚೆಂಡು ತಯಾರಾಗುವಾಗ ಅದನ್ನು ತಿಂದು ಹತ್ತಿ ಬೆಳೆಯನ್ನು ನಾಶಗೊಳಿಸುತ್ತದೆ. ಇದೀಗ ಬಿಟಿ ಕಾಟನನ್ನು ಬೆಳೆಸಿ ಕಾಟನ್ ಬಾಲ್‌ವರ್ಮ್ ಕಾಟವನ್ನು ತಪ್ಪಿಸಬಹುದಾಗಿದೆ. ಇಂತಹ ಬಿಟಿ ಹತ್ತಿಯನ್ನು ಕರ್ನಾಟಕದ ೧೪ ವಿವಿಧ ಕೇಂದ್ರಗಳಲ್ಲಿ ಬೆಳೆಯಲು ಸರ್ಕಾರವು ಇತ್ತೀಚೆಗೆ ಅನುಮತಿ ನೀಡಿದೆ. ಇದೇ ರೀತಿಯಲ್ಲಿ ಬಿಟಿ ಜೀನ್‌ನ್ನು ಹೊಗೆಸೊಪ್ಪಿನ ಸಸ್ಯದಲ್ಲಿ ಅಳವಡಿಸಲಾಗಿದೆ. ಇದು ಸಹ ರೋಗ ನಿರೋಧಕ ಶಕ್ತಿಯನ್ನು ಪಡೆದುಕೊಂಡಿದೆ. ಸಾಸಿವೆ ಗಿಡಗಳು ಬ್ಲೈಟ್ ಎಂಬ ರೋಗಕ್ಕೆ ತುತ್ತಾಗುತ್ತವೆ. ಬ್ಲೈಟ್ ರೋಗವು ಆಲ್ಟರ್‌ನೇರಿಯಾ ಎಂಬ ಬೂಷ್ಟಿನಿಂದ ಉಂಟಾಗುತ್ತದೆ. ಈ ರೋಗವನ್ನು ನಿಯಂತ್ರಿಸಲು ಅಗ್ರೋ ಬ್ಯಾಕ್ಟೀರಿಯಮ್ ಟ್ಯುಮಿಪೇಸಿಯನ್ಸ್ ಎಂಬ ಬ್ಯಾಕ್ಟೀರಿಯಾದ ಟಿ-ಡಿಎನ್‌ಎ ಯನ್ನು ಸಾಸಿವೆ ಗಿಡದಲ್ಲಿ ಅಳವಡಿಸಲಾಗಿದೆ.

ಜೈವಿಕ ಕೀಟನಾಶಕಗಳ ಮಹತ್ವ ?

ನಮ್ಮ ದೇಶದಲ್ಲಿ ಬೇಸಾಯದ ಬೆಳೆಗಳಲ್ಲಿ ರೋಗ ಬಾಧೆಯನ್ನು ತಪ್ಪಿಸಲು ರಾಸಾಯನಿಕ ಕೀಟನಾಶಕಗಳಿಗಾಗಿ ವರ್ಷಕ್ಕೆ ೬೦೦೦ ಕೋಟಿ ರೂಪಾಯಿಗಳು ವೆಚ್ಚವಾಗುತ್ತಿದೆ. ಇವುಗಳಿಂದ ಆಗುವ ಪರಿಸರ ಮಾಲಿನ್ಯ, ಹಣದ ಖರ್ಚು, ಮಾನವ ಮತ್ತು ಪ್ರಾಣಿಗಳಲ್ಲಾಗುವ ದುಷ್ಪರಿಣಾಮಗಳನ್ನು ಅವಲೋಕಿಸಿದರೆ ಜೈವಿಕ ಕೀಟನಾಶಕಗಳಿಗೇ ಮೊರೆಹೋಗುವುದು ಹೆಚ್ಚು ಸೂಕ್ತವೆಂಬುದು ಅರಿವಾಗುತ್ತದೆ.

ರಾಸಾಯನಿಕ ಕೀಟನಾಶಕಗಳನ್ನು ಸಂಯೋಜಿಸಿ, ಪರೀಕ್ಷೆಗೆ ಒಳಪಡಿಸಿ ಬಳಕೆಗೆ ಬಿಡುಗಡೆ ಮಾಡಲು ಸುಮಾರು ೮ರಿಂದ ೧೨ ವರ್ಷಗಳು ಬೇಕಾಗುತ್ತದೆ. ಆದರೆ ಜೈವಿಕ ಕೀಟನಾಶಕಗಳ ತಯಾರಿ ಮತ್ತು ಬಳಕೆಗೆ ಮೂರು ವರ್ಷಗಳು ಸಾಕು. ಈ ರಾಸಾಯನಿಕ ಕೀಟನಾಶಕಗಳ ಪರಿಣಾಮ ಕಡಿಮೆಯಾಗಿ ಮತ್ತೆ ಮತ್ತೆ ಬಳಸಬೇಕಾಗುತ್ತದೆ. ಆದರೆ ಜೈವಿಕ ಕೀಟನಾಶಕಗಳು ಒಮ್ಮೆ ಸಿಂಪಡಿಸಿದರೆ ಸಾಕು ಮತ್ತೊಮ್ಮೆ ಬಳಸುವ ಅಗತ್ಯವಿರುವುದಿಲ್ಲ.

ಅಂತರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರ, ಫಿಲಿಫೈನ್ಸ್‌ನಿಂದ ಹೊರಡಿಸಿದ ಕಿರು ಪ್ರಕಟಣೆಯ ಪ್ರಕಾರ ಸುಮಾರು ೮೦೦ ವಿವಿಧ ಪ್ರಭೇದದ ಸ್ನೇಹಮಯಿ ಕೀಟಗಳನ್ನು ಭತ್ತ ಬೆಳೆಯುವ ಭೂಮಿಯಲ್ಲಿ ಅಳವಡಿಸಬಹುದು. ಅಂತರಾಷ್ಟ್ರೀಯ ಆಹಾರ ಮತ್ತು ವ್ಯವಹಾರ ಸಂಸ್ಥೆಯ(FAO) ಪ್ರಕಟಣೆಯ ಪ್ರಕಾರ ಸುಮಾರು ೫೦೪ ವಿವಿಧ ಕೀಟ ಪ್ರಭೇದಗಳು ರಾಸಾಯನಿಕ ಕೀಟನಾಶಕಗಳಿಗೆ ನಿರೋಧಕ ಶಕ್ತಿಯನ್ನು ಪಡೆದುಕೊಂಡಿವೆ. ರೋಗಬಾಧೆಗಳನ್ನು ತಪ್ಪಿಸಲು ಸೂಕ್ತವಾದ ಎರಡು ಅಥವಾ ಮೂರು ವಿಧಾನಗಳನ್ನು ಬಳಸುವುದು ಒಳ್ಳೆಯದೆಂದು ರೈತರಲ್ಲಿ ಮನವರಿಕೆ ಮಾಡಬೇಕಾಗಿದೆ.