ಜೈವಿಕ ಅಸ್ತ್ರಗಳಿಂದ ಯುದ್ಧ ಮಾಡುವುದನ್ನು ಜೈವಿಕ ಯುದ್ಧ ಎಂದು ಕರೆಯಲಾಗುತ್ತದೆ. ಜೈವಿಕ ಅಸ್ತ್ರಗಳೆಂದರೇನು?

ಜೀವಿಗಳ ದೇಹದಲ್ಲಿ ರೋಗ ಹರಡಿ ನರಳಿಸುವ ಅಥವಾ ಕೊಲ್ಲುವ ಅಣುಜೀವಿಗಳು ವೈರಸ್‌ಗಳು ಮತ್ತು ಶಿಲೀಂಧ್ರಗಳನ್ನು ಜೈವಿಕ ಅಸ್ತ್ರಗಳು ಎಂದು ಕರೆಯುತ್ತಾರೆ.

ರಾಸಾಯನಿಕ ಅಸ್ತ್ರಗಳು ಸಮೀಪದಲ್ಲಿದ್ದವರನ್ನು ಮಾತ್ರ ಕೊಂದರೆ ಜೈವಿಕ ಅಸ್ತ್ರಗಳು ಸಾಂಕ್ರಾಮಿಕ ರೋಗಗಳನ್ನು ಹರಡಿ ಇಡೀ ಮನುಕುಲವನ್ನೇ ನಾಶಮಾಡುವಂತಹ ಅಸ್ತ್ರಗಳಾಗಿವೆ.  ಆದ್ದರಿಂದಲೇ ಭಯೋತ್ಪಾದಕರ ದೃಷ್ಟಿ ಈ ಜೈವಿಕ ಅಸ್ತ್ರಗಳ ಕಡೆಗೆ ತಿರುಗಿದೆ.

ಅಣ್ವಸ್ತ್ರ ಪ್ರಯೋಗದಿಂದ ಮತ್ತು ರಾಸಾಯನಿಕ ಅಸ್ತ್ರಗಳಿಂದ ಘೋರ ದುರಂತವಾಗಿರುವುದನ್ನು ನಾವು ಈಗಾಗಲೇ ಕೇಳಿದ್ದೇವೆ. ಈ ಎರಡೂ ಅಸ್ತ್ರಗಳಿಗಿಂತಲೂ ಹೆಚ್ಚು ಅಪಾಯಕಾರಿಯಾದ ಮತ್ತು ಬಹಳ ಕಾಲ ಜೀವಿಗಳನ್ನು ನಾಶಮಾಡಬಲ್ಲ ಶಕ್ತಿ ಎಂದರೆ ಜೈವಿಕ ಅಸ್ತ್ರಗಳು.

ಅಮೆರಿಕವು 1945ರ ಆಗಸ್ಟ್ 6ರಂದು ಹಿರೋಷಿಮ ಮತ್ತು 9ರಂದು ನಾಗಸಾಕಿ ನಗರಗಳ ಮೇಲೆ ಹಾಕಿದ ಪರಮಾಣು ಬಾಂಬ್‌ಗಳಿಂದ ಹಲವಾರು ಕಿ.ಮೀ. ವಿಸ್ತೀರ್ಣದ ಪ್ರದೇಶ ನಾಶವಾಗಿ ಸಾವಿರಾರು ಜನ ಅಸು ನೀಗಿದರು. ಅಷ್ಟೇ ಅಲ್ಲದೆ ಅಲ್ಲಿ ಈಗಲೂ ಹುಟ್ಟುವ ಮಕ್ಕಳಲ್ಲಿ ಬುದ್ದಿಮಾಂದ್ಯ, ಅಂಗವಿಕಲತೆ ಮುಂತಾದ ಸಮಸ್ಯೆಗಳು ಕಂಡು ಬಂದಿವೆಯಂತೆ. ಪ್ರಪಂಚ ಕಂಡ ಮೊದಲ ಘೋರ ದುರಂತವಿದು.

ಇರಾಕ್ ದೇಶವು ರಾಸಾಯನಿಕ ಅಸ್ತ್ರಗಳನ್ನು ಬಳಸಿ ಸಾವಿರಾರು ಜನರ ಸಾವಿಗೆ ಕಾರಣವಾಗಿದೆಯೆಂದು ಹೇಳಿಕೆಯಿದೆ. ಜರ್ಮನಿಯ ನಾಜಿಗಳು ಬಳಸಿದ ರಾಸಾಯನಿಕ ಪದಾರ್ಥಗಳಿಂದ ಲಕ್ಷಾಂತರ ಜನ ಸಾವಿಗೀಡಾಗಿದ್ದಾರೆ.

ಈ ಮೇಲಿನ ವಿಷಯಗಳಲ್ಲಿ ಮೊದಲನೆಯದು ಪರಮಾಣು ಬಾಂಬ್ ಪ್ರಯೋಗದಿಂದ ನಡೆದ ಘೋರ ವಿನಾಶವಾದರೆ ಎರಡನೆಯದು ಇರಾಕ್ ಮತ್ತು ನಾಜಿಗಳು ನಡೆಸಿದ ರಾಸಾಯನಿಕ ಯುದ್ದ, ಸಣ್ಣ ಪ್ರಮಾಣದ ಯುದ್ಧವಾಗಿದೆ.

ಮೇಲಿನ ಎರಡು ಯುದ್ಧಗಳಿಗಿಂತ ಹೆಚ್ಚು ಅಪಾಯಕಾರಿಯಾದದ್ದು ಎಂದರೆ ಮುಂದೆ ಬರಲಿರುವ ಅಥವಾ ಈಗಾಗಲೇ ಗುಪ್ತವಾಗಿ ನಡೆಸುತ್ತಿರುವ ಜೈವಿಕ ಯುದ್ಧಗಳಾಗಿವೆ.

ಈಗಾಗಲೇ ಆಫ್‌ಘಾನಿಸ್ತಾನದಲ್ಲಿ ಮತ್ತು ವಿಯೆಟ್ನಾಂನಲ್ಲಿ ಜೈವಿಕ ಅಸ್ತ್ರಗಳನ್ನು ಬಳಸಿದ ಉದಾಹರಣೆಗಳಿವೆ.

ಜೈವಿಕ ಅಸ್ತ್ರಗಳು ಸುಲಭವಾಗಿ ಭಯೋತ್ಪಾದಕರಿಗೆ ದೊರೆಯುವ ಸಾಧ್ಯತೆ ಇರುವುದರಿಂದ ಭಯೋತ್ಪಾದಕರ ದಾಳಿಗೆ ಒಳಗಾಗುತ್ತಿರುವ ರಾಷ್ಟ್ರಗಳಾದ ಪಾಕಿಸ್ತಾನ, ಭಾರತ, ಆಫ್‌ಘಾನಿಸ್ತಾನ, ಅಮೆರಿಕ ಮುಂತಾದ ರಾಷ್ಟ್ರಗಳಿಗೆ ಇದರಿಂದ ಆಗುವ ಅಪಾಯಗಳನ್ನು ತಡೆಗಟ್ಟುವುದು ಕಷ್ಟವಾಗಬಹುದು.

ಈಗಾಗಲೇ ನಮ್ಮ ದೇಶದಲ್ಲಿ ಸೂರತ್‌ನಲ್ಲಿ ಮರುಕಳಿಸಿದ ಪ್ಲೇಗ್ ರೋಗ ಹೀಗೆ ಜೈವಿಕ ಸಮರವೇ ಎಂಬ ಅನುಮಾನವಿದೆ. ಮೆಕ್ಸಿಕೊ, ಮಲೇಷ್ಯ, ಅಮೆರಿಕ, ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ H1N1 (ಹಂದಿಜ್ವರ),ಹಕ್ಕಿಜ್ವರ, ಸಾರಸ್ ಮುಂತಾದ ಸಾಂಕ್ರಾಮಿಕ ರೋಗಗಳ ಹಿಂದೆ ಭಯೋತ್ಪಾದಕರ ಕೈವಾಡ ಇದೆ ಎಂದು ಕೂಡ ಶಂಕಿಸಲಾಗಿದೆ. ಇದು ಜನ ಸಾಮಾನ್ಯರನ್ನೂ ತಲ್ಲಣಗೊಳಿಸಿದೆ. ಅಮಾಯಕ ಜನರ ಮೇಲೆ ರೋಗಕಾರಕ ಜೀವಿಗಳನ್ನು ಅಂದರೆ ವೈರಸ್‌ಗಳನ್ನು, ಬ್ಯಾಕ್ಟೀರಿಯಾಗಳನ್ನು ಸುರಿದರೆ ಇಡೀ ಮಾನವ ಕುಲವೇ ನಾಶವಾಗಬಹುದು.

ಜೈವಿಕ ಯುದ್ಧ ಅತ್ಯಂತ ಪರಿಣಾಮಕಾರಿ. ಸೈನಿಕರಷ್ಟೇ ಅಲ್ಲ, ಜನಸಾಮಾನ್ಯರೂ ಇದಕ್ಕೆ ತುತ್ತಾಗುತ್ತಾರೆ. 1925ರಲ್ಲಿ ನಡೆದ ಜಿನೀವಾ ಶೃಂಗಸಭೆಯಲ್ಲಿ ಈ ಯುದ್ಧವನ್ನು ನಿಷೇಧಿಸಲಾಗಿತ್ತು.  ಮತ್ತೆ 1972ರಲ್ಲಿ ನಡೆದ ಅಂತಾರಾಷ್ಟ್ರೀಯ ಗೋಷ್ಠಿಯಲ್ಲಿ 162 ರಾಷ್ಟ್ರಗಳು ಇದರ ವಿರುದ್ಧ ಒಡಂಬಡಿಕೆಗೆ ಸಹಿ ಹಾಕಿವೆ.