(ಮಠದಲ್ಲಿ ಗುರುವಯ್ಯ ಪೀಠಸ್ಥನಾಗಿದ್ದಾನೆ. ಉರಿನಿಂಗ ಕಲ್ಲ, ಕೆಂಚ, ಕಾರಭಾರಿ ಒಬ್ಬೊಬ್ಬರೇ ಬಂದು ನಮಸ್ಕರಿಸಿ ಕೂರುವರು)

ಉರಿನಿಂಗ : ಸಿದನಾಯ್ಕ ಬರಲಿಲ್ಲೇನ್ರಿ?

ಗುರುವಯ್ಯ : ಬರೋದಿಲ್ಲ; ನೀವು ಠರಾವು ಮಾಡಿದ್ದಕ್ಕ ತಮ್ಮ ಕಬೂಲ ಅದ ಅಂತ ಹೇಳ್ಯಾರ.

ಕಲ್ಲ : ನನಗಂತೂ ಯಾವ ದಾರೀನೂ ಕಾಣವೊಲ್ದು. ಊರಮಂದೀ ಮೋತಿ ನೋಡಧಾಂಗ ಆಗೇತಿ, ಹೊಲಕ್ಕ ಹೋದರ ಊರಾಗ ಪೋಲೀಸರು ಬಂದಾರೇನಂತ ಕೇಳತಾರ. ಊರಿಗಿ ಬಂದರ ಊರ ಹೊರಗ ಪೋಲೀಸರ ಸುಳುವು ಕಂಡಿರೇನಂತ ಕೇಳತಾರ.

ಉರಿನಿಂಗ : ನಾವೇನೂ ತಪ್ಪ ಮಾಡಿಲ್ಲ. ಪೋಲೀಸರ ಬಂದರ ಯಾಕ ಹೆದರಬೇಕು?
ಊರೆಲ್ಲಾ ಒಟ್ಟಾಗಿ ಒಂದ ಜವಾಬ ಹೇಳಿದರ ಅವರೇನ ಮಾಡತಾರ?

ಗುರುವಯ್ಯ : ಹೌದಪಾ, ಅವರಿಗೇನ ಹೇಳ್ತಿ? ನಾವು ಕೊಂದಿಲ್ಲಂತ. ಹಾಂಗಾದರ ದೇಸಾಯಿ ಹೆಂಗ ಸತ್ತ? ನಮಗ ಗೊತ್ತಿಲ್ಲಂತಿ?

ಉರಿನಿಂಗ : ಅಲ್ಲರೀ, ದೇಸಾಯೀನ್ನ ಕೊಲ್ಲಬೇಕಂತ ನಾವೇನೂ ಹೋದವರಲ್ಲ. ಕಾಳ ಕೊಡ್ರಿ ಅಂತ ಹೋದಿವಿ. ಕೈಕೈ ಹತ್ತಿ ಸತ್ತ. ಇಷ್ಟಾಗಿ ನಾವೇನೂ ಅವನ ವಾಡೆ ಲೂಟಿ ಮಾಡಲಿಲ್ಲ. ನಮ್ಮ ಹಕ್ಕಿಂದೇನೈತಿ, ಅಷ್ಟ ಪಡದಿವಿ.

ಗುರುವಯ್ಯ : ನಾ ಹೇಳೋದು ಕಾಯ್ದೆ ಕಾನೂನಿ ಮಾತಪಾ.

ಕಲ್ಲ : ಗುರುವಯ್ಯನವರs ನೀವs ಒಂದ ಹಾದಿ ಹೇಳ್ರಿ. ನೀವು ಹೇಳಿದ್ದಕ್ಕ ನಮ್ಮ ಕಬೂಲ ಐತಿ. ಯಾಕೋ ಉರಿನಿಂಗಾ?

ಉರಿನಿಂಗ : ಅದೇನ ಹೇಳ್ಲಿ, ವಿಚಾರ ಮಾಡೋಣು.

ಗುರುವಯ್ಯ : ಊರಿನ ಪಂಚರು, ದೊಡ್ಡವರು ಕೂಡೀರಿ, ನೀವೀಗ ಸ್ವಲ್ಪ ಎಡವಿದರೂ,ಒಕ್ಕಟ್ಟ ಮುರದರೂ ಊರಿಗೂರs ಹಾಳಾಗತದ ಅಂತ ನೆಪ್ಪಿರಲಿ. ನಾ ಹೇಳೋದಿಷ್ಟ : ಕಾರಭಾರಿ ಇನ್ನೂ ಜೀವಂತ ಇದ್ದಾನ. ಥೇಟ್‌ ದೇಸಾಯರ ಹಾಂಗs ಸಹಿ ಹಾಕತಾನ. ದೇಸಾಯರು ಸಾಯೋಮುಂಚೆ ಸಿದನಾಯ್ಕನ್ನ ದತ್ತಕ ತಗೊಂಡಿದ್ದರಂತ ತಿಳಕೊಳ್ರಿ, ಆಮ್ಯಾಲ ಪತ್ರದ ಪ್ರಕಾರ ಯಾರೋ ನಕ್ಸಲೈಟ್‌ ಮಂದಿ ಬಂದು ದೇಸಾಯರನ್ನ ಕೊಂದರು. ಈಗ ಅವರ ದತ್ತಕ ಪುತ್ರ ಸಿದನಾಯ್ಕ ದೇಸಗತಿ ಆಳತಾನಂತ ಮಾಡಿದರ ಹೆಂಗ?

ಕಲ್ಲ : ಅಂದರ……ದೇಸಾಯರ ಜಮೀನೆಲ್ಲಾ ಸಿದನಾಯ್ಕನ ಹೆಸರಿಗೇ ಮಾಡೋಣು ಅಂತ ಹೇಳಿದಾಂಗಾತು.

ಗುರುವಯ್ಯ : ಹೌದು. ಹೆಂಗೂ ದೇಸಾಯರ ಸಹಿ ಕಾರಭಾರಿ ಹಾಕತಾನ. ನೀವು ಪಂಚರಿದ್ದೀರಿ. ನೀವೂ ನಿಮ್ಮ ನಿಮ್ಮ ಸಹಿ ಹಾಕತೀರಿ. ಪೋಲೀಸರು ಬಂದ ಹೋದ ಮ್ಯಾಲ ರೈತರಿಗೆಲ್ಲ ಜಮೀನ ಹಂಚಿದರಾಯ್ತು, ಏನಂತೀರಿ?

ಕಲ್ಲ : ಅಷ್ಟೂ ಜಮೀನು ಒಬ್ಬನ ಹೆಸರಿಗೇ ಮಾಡೋದು…ಯಾಕಪಾ ಕೆಂಚ?

ಕೆಂಚ : ಅದೂ ಅಲ್ಲದ ಕಾರಭಾರಿ ಏನೂ ತಗೊಳ್ದ ಇಷ್ಟ ಮಾಡ್ತಾನಂದರ……

ಕಲ್ಲ : ಮಾಡಿದಂತ ಇಟಗೊಳ್ರಿ, ಒಮ್ಮಿಲ್ಲೊಮ್ಮಿ ಬಾಯಿ ಬಿಟ್ಟರ ನಮಗೂ ಉಳಿಗಾಲಿಲ್ಲ, ನಿಮಗೂ ಇಲ್ಲ. ಮೋತೀ ಮುಂದs ಮಾತಾಡ್ತೇನಂತ ಸಿಟ್ಟಿಗೇಳಬ್ಯಾಡ್ರಿ.

ಕೆಂಚ : ನೀವು ದೇವರ ಸಮ ಅಂತ ಹೇಳ್ತೀನ್ರಿ : ಸಿದನಾಯ್ಕಂದರ ನನ್ನ ಖಾಸ ತಮ್ಮ ಇದ್ಧಾಂಗ. ನಿನ್ನಿ ಅದೇನೋ ಚಿನ್ನಿ ಸಿದನಾಯ್ಕನ ಮನ್ಯಾಗ ಮಲಗಿದ್ದಳಂತ; ಮಂದಿ ಗುಜುಗುಜು ಮಾತಾಡೋದ ಕೇಳಿ ಹೊಟ್ಯಾಗ ಖಾರ ಕಲಸಿಧಂಗಾತು.

ಗುರುವಯ್ಯ : ಅದನ್ನ ಆಮ್ಯಾಲ ಬಗಿಹರಸೋಣಂತ; ಈಗಿಂದೇನು, ಅದನ್ನ ಹೇಳು.

ಕೆಂಚ : ಅದನ್ನs ಹೇಳಿದ್ನೆಲ್ಲರೀ. ದೇಸಗತಿ ಸಿದನಾಯ್ಕನ ಹೆಸರಿಗಿದ್ದರೂ ಒಂದs, ನನ್ನ ಹೆಸರಿಗಿದ್ದರೂ ಒಂದs. ಆದರ ದೇಸಗತಿ ಒಮ್ಮಿ ಕೈಗಿ ಸಿಕ್ಕಿತಂದರ ನರಮನಿಶ್ಯಾ ಹಾಂಗs ಹಿಂಗs ಬದಲಾದಾನಂತ ಹೇಳಾಕಾಗಾಣಿಲ್ಲರೀ.

ಕಲ್ಲ : ಗುರುಯ್ಯನವರs, ಭಿಡೇ ಬಿಟ್ಟ ಯಾಕ ಮಾತಾಡಬಾರದು? ದೇಸಗತಿ ಅಂದರ ಸಣ್ಣ ಬಾಬತ್ತಲ್ಲ. ಹಿಂಗಂದರ ನಮಗ್ಯಾರಿಗೂ ಸಿದನಾಯ್ಕಂದರ ಹೊಟ್ಟೀಕಿಚ್ಚ ಐತೆಂತ ತಿಳೀಬ್ಯಾಡ್ರಿ. ನಮ್ಮನ್ನೆಲ್ಲಾ ಹೊಳೀ ದಾಟಿಸಿದಾ. ಈ ಊರ ಮಂದಿ ದಿನಾ ಅವನ ಹೆಸರ ಹೇಳಿ ದೀಪಾ ಹಚ್ಚಬೇಕಲು. ಇಷ್ಟಾದರೂ ನನಗ ಅನಸೋದೇನಂದರ ನಾವ್ಯಾರೂ ಸಂತರಲ್ಲ! ಯಾಕ್ರೆಪಾ?

ಉರಿನಿಂಗ : ಹಜಾರ ಮಂದಿ ಪೋಲೀಸರ ಮಾತ ಬಿಟ್ಟ ಇದೇನ ತಗದಿರಯ್ಯೋ?

ಕಲ್ಲು : ಅದನ್ನs ಆಡತೀವಲ್ಲೊ, ಊರಗಾರಿಕಿ ಬಡ್ಡೀಬೇರಿಗಿ ನೀರಿಲ್ಲಂತ ತಿಳಿ; ಬೆವರ ಹನಿಸಾಕಾದರೂ ಯಾರ ಮುಂದ ಬರಬೇಕು? ನಾವs. ಹೌಂದಂತಿ, ಅಲ್ಲಂತಿ?

ಉರಿನಿಂಗ : ಅಲ್ಲಂತೀನಿ.

ಕೆಂಚ : ಮತ್ತ ಯಾರು, ನೀ ಒಬ್ಬನs ಏನ?

ಗುರುವಯ್ಯ : ಯಾಕ್ರೆಪಾ ಬಾಯಿಬಿಟ್ಟ ಹೇಳಬಾರದುಇ?
ಉರಿನಿಂಗ : ಹೇಳ್ರೆಲ್ಲ, ನಿಮಗೂ ದೇಸಗತಿ ಒಳಗ ಪಾಲ ಬೇಕಂತ.

ಕಲ್ಲ : ಕೊಟ್ಟರ ನೀ ಬ್ಯಾಡಂತಿಯೇನು?

ಉರಿನಿಂಗ : ನಂದ ನನಗ ಬಂದರ ಸಾಕು.

ಕೆಂಚ : ಅದನs ಹೇಳ್ತೀವೊ ನಾವೂ. ನಮ್ಮ ನಮ್ಮ ಪಾಲ ನಮಗ ಬಂದರ ಸಾಕು. ನನಗಾಗಲಿ, ನಿನಗಾಗಲಿ ಬೇಕಾದ್ದೇನು? ಊರಿನ ಹಿತ.

ಉರಿನಿಂಗ : ಊರಿನ ಹಿತ ಅಂದೆಲ್ಲಾ-ಹೇಳಲೇನ ಹೆಂಗಂತ?

ಕಾರಭಾರಿ : ಹೇಳಪಾ.

ಉರಿನಿಂಗ : ಸಿದನಾಯ್ಕನ ಹೆಸರಿಗೆ ದೇಸಗತಿ ಮಾಡೋಣು. ಪೋಲೀಸರು ಬಂದ ಹೋದ ಮ್ಯಾಲ, ಯಾರ್ಯಾರ ಜಮೀನ ಉಳತಿದ್ದರೋ ಅವರs ತಂತಮ್ಮ ಜಮೀನಿಗಿ ಮಾಲಕರಾಗಲಿ. ಸಿದನಾಯ್ಕನ ಮ್ಯಾಲ ಅಷ್ಟ ವಿಶ್ವಾಸ ನಮಗೈತಿ.

ಕೆಂಚ : ಅಲ್ಲೋ, ಇಷ್ಟ ಮಂದಿ ಹಿರೇರು, ಪಂಚರು ಸೈ ಅಂದರ ಕಿಮ್ಮತ್ತಿಲ್ಲೇನು?

ಉರಿನಿಂಗ : ನಿನ್ನ ಕಿಮ್ಮತ್ತೆಷ್ಟ ಹೇಳಿ? ಮುನ್ನೂರ ಎಕರೆ!
ಕೆಂಚ : ಅಷ್ಟಕ್ಕ ಬಂದರ ಹೇಳೇಬಿಡತೀನ್ತಗೊ. ಸಿದನಾಯ್ಕನೊಬ್ಬನ ಹೆಸರಿಗೇ ದೇಸಗತಿ ಜಮೀನೆಲ್ಲಾ ಮಾಡೋದು ನಮಗ ಸರಿಬರಾಣಿಲ್ಲ. ನೀ ಕೇಳಿದಿ ಅಂತ ಹೇಳತೀನಿ; ಇಲ್ಲದಿದ್ದರ ನನಗೇನೂ ದೇಸಗತಿ ಮ್ಯಾಲ ಆಸೇ ಇರಲಿಲ್ಲ. ನೋಡ್ರಿ ಗುರುವಯ್ಯ ನವರs, ನನಗ ಮುನ್ನೂರ ಎಕರೆ ಬೇಕು. ಅಂದರ ಸೈ ಹಾಕೋದು, ಇಲ್ಲದಿದ್ದರ ಇಲ್ಲ.

ಕಲ್ಲ : ನಂದೂ ಅಷ್ಟs ನೋಡ್ರಿ.

ಉರಿನಿಂಗ : ಈಗ ಬರೋಬರಿ ಕಾಣಸಾಕ ಹತ್ತಿದಿರ ನೋಡ್ರೆಲೇ!

ಕೆಂಚ : ಭಿಡೇ ಬಿಟ್ಟ ಖರೇ ಮಾತಾಡಿದ್ದಕ್ಕ ಭೇಶ್‌ ಅನ್ನಬೇಕ ನೀ! ಬೇಕಂದರ ಬಣ್ಣಾ ಅಳಿಸಿ ನೀನೂ ಹೊರಗ ಬಾ. ಮುನ್ನೂರ ಎಕರೆ ಬರೇ ನನಗಂತ ಹೇಳಲಿಲ್ಲ. ಇಲ್ಲಿದ್ದವರಿಗೆಲ್ಲಾ ಅಷ್ಟಷ್ಟ ಬರಲಿ ಅಂತ ನನ್ನ ಅಂಬೋಣ , ಯಾಕ್ರೆಪಾ?

ಉರಿನಿಂಗ : ನನಗ ತನಗಂತ ಹಿಂಘ ಕಚ್ಯಾಡಿ ತಗೊಂಡ್ರಿ. ಮುಂದ ಪೋಲೀಸರ ಬಂದ ಹೋದ ಮ್ಯಾಲ ಮಂದಿಗಿ ಏನ ಹಂಚತೀರಿ?

ಕೆಂಚ : ಅವರೊಮ್ಮಿ ಬಂದ ಹೋಗಲಿ, ಅಷ್ಟರಾಗ ನಾವೇನ ಸಾಯತೀವೇನೊ?
ಆಮ್ಯಾಲ ಸಿದನಾಯ್ಕ ಹಂಚೋಣಪಾ ಅಂದರ ಹಂಚೋಣಂತ.

ಉರಿನಿಂಗ : ಹಂಚೋದs ಖರೆ ಆದರ ಸಿದನಾಯ್ಕನ ಹೆಸರಿಗೇ ಇರಲಿ.

ಕಲ್ಲ : ಅದ್ಯಾಕ ಹಿಂಗ ಸಿದನಾಯ್ಕ ಸಿದನಾಯ್ಕಂತ ಬಡಕೊಳ್ತೀಯೊ?
ಗುರುವಯ್ಯಾ : ಇವೆಲ್ಲಾ ಗುರಿಮುಟ್ಟೋ ಮಾತಲ್ಲಪಾ. ನಿಮ್ಮದೆಲ್ಲಾ ತಿಳಧಾಂಗಾಯ್ತು. ಇಲ್ಲಿ ಇದ್ದವರಿಗೆಲ್ಲಾ ಒಬ್ಬೊಬ್ಬಗ ಮುನ್ನೂರ ಎಕರೆ ಇರಲಿ.  ಸಿದನಾಯ್ಕ ಭಾಳ ದುಡದಾನ, ಅವನ ಹೆಸರಗಿ ಐನೂರ ಎಕರೆ ಇರಲಿ. ವಾಡೆ, ದೇಸಗತಿ ಅವನ ಹೆಸರಿಗೇ ಇರಲಿ, ಏನಂತೀರಿ?

ಕಲ್ಲ : ಆತ ಬಿಡರಿ. ನೀವು ಬ್ಯಾರೇ ಅಲ್ಲ, ದೇವರು ಬ್ಯಾರೇ ಅಲ್ಲ.

ಉರಿನಿಂಗ : ಇದಕ್ಕ ನನ್ನ ಕಬೂಲಿಲ್ಲ.

ಕೆಂಚ : ಮತ್ತೇನ ಎಲ್ಲಾರಿಗು ಸಮ ಹಂಚೋಣಂದಿ?

ಕಲ್ಲ : ನಿನಗೊಂದಷ್ಟು  ಹೆಚ್ಚ ಬೇಕಂದೇನ?

ಕಾರಭಾರಿ : ಇನ್ನೇನ ದೇಸಗತಿ ನಿನ್ನ ಹೆಸರಿಗೇ ಮಾಡೋಣೇನು?
ಉರಿನಿಂಗ : ಬಾಯಿತೊಳಕೊಂಡ ಮಾತಾಡಲೇ, ನಾ ನಿಮ್ಹಾಂಗ ಕಳ್ಳಲ್ಲ.

ಕೆಂಚ : ಹೌಂದಪಾ ನಾವೆಲ್ಲಾ ಕಳ್ಳರು. ನೀ ಒಬ್ಬs  ಸಂತ!

ಕಲ್ಲ : ಏನ ಮಾಡೋಣಪಾ, ಬಾಳೇವ ನಮ್ಮನೆಲ್ಲಾ ಕಳ್ಳರ್ನ ಮಾಡೇತಿ, ನಿನಗಾದರ ಬಾಳೇವs ಇಲ್ಲ. ಇದ್ದೊಂದ ಹೇಂತೀ ಸೆರಗ ಹರಕೊಂಡ ಕುಂತಿ. ಬಲ್ಲಿನೋ ನಿನ್ನ ಬಡ್ಡಿಬೇರ. ಇದ್ದ ಪಂಚರೊಳಗ ನಾಕ ಮಂದಿ ಹೌದಂತಾರ, ನೀವೊಬ್ಬ ಅಲ್ಲಂತಿ. ಬೇಕಂದರ ಬಂದದ್ದಕ್ಕ ಬಾಯಿ ಮುಚ್ಚಿಕೊಂಡ ಕೈಯೊಡ್ಡು, ಸಾಕಂದರ ಎದ್ದುಹೋಗು.

ಉರಿನಿಂಗ : ಎದ್ದಹೋಗಾಕ ಇಲ್ಲೇನ ಮಾನಗೆಟ್ಟ ಬಂದಿಲ್ಲ. ಮಂದಿ ಆರಿಸ್ಯಾರಂತ ಬಂದೀನಿ.

ಕೆಂಚ : ಅಂದರ ನಾವು ಮಾನಗೆಟ್ಟ ಹಂಗs ಬಂದೀವಂತ ತಿಳದ್ದೇನ?

ಉರಿನಿಂಗ : ನಿಮಗ್ಯಾಕ್ರೋ ಮಾನ ಮರ್ಯಾದಿ? ಮಸಡೀ ನೋಡಿಕೊಳ್ರಿ, ದೇಸಾಯೀ ದೆವ್ವಿನ್ಹಾಂಗ ಕಾಣತೀರಿ. ಏನ್ರಿ ಗುರುವಯ್ಯನವರs,  ಮೊದಲ ಹೇಳ್ರಿ ನಿಮಗೆಲ್ಲಾರಿಗು ಲುಚ್ಚೇರಂತ ಯಾಕನ್ನಬಾರದು?

ಗುರುವಯ್ಯ : ಹೆಚ್ಚ ಮಾತಾಡಬ್ಯಾಡ. ಮುನ್ನೂರ ಎಕರೆ ಸಾಲದಿದ್ದರ ಹೇಳು, ಇನ್ನ ಐವತ್ತ ಕೊಡಿಸೇನು. ಇಲ್ಲಾ ನೀ ಬೆಳಿಯೋದಕ್ಕ ಇನ್ನೊಂದ ನೆಲ ಹುಡುಕು. ಇಲ್ಲಿ ಆಗೋದಿಲ್ಲ.

ಕಲ್ಲ : ಪಾಪ, ಎಷ್ಟಂದರೂ ಹೇಂತೀನ ಕಳಕೊಂಡಾನ; ಅವಗಷ್ಟ ಹೆಚ್ಚ ಕೊಡರಿ!

ಕೆಂಚ : ಎಲ್ಲಾ ಸಿದನಾಯ್ಕನ ಹೆಸರಿಗೇ ಮಾಡಂತ ನೀ ಯಾಕ ಹೇಳ್ತಿ, ಗೊತ್ತೈತೋ ನನಗ.  ಚಿನ್ನೀನ ಸಿದನಾಯ್ಕನ ಮನ್ಯಾಗ ಬಿಟ್ಟೀಯಲ್ಲ : ಇನ್ನ ದೇಸಗತಿ ಸಿದನಾಯ್ಕನ ಹೆಸರಿಗಿದ್ದರೂ ಅಷ್ಟ , ನಿನ್ನ ಹೆಸರಿಗಿದ್ದರೂ ಅಷ್ಟ. ಇಡೀ ದೇಸಗತಿ ಸಿಗೋವಾಗ ಸಣ್ಣ ಪಾಲ ಯಾ ಮೂಲಿಕಗಾದೀತು?

ಉರಿನಿಂಗ : ಬಾಯಿಗಿ ಬಂದಾಂಘ ಒದರ್ಯಾಡಬ್ಯಾಡ.

ಕಲ್ಲ : ಚಂದ ಹೇಂತಿದ್ದರ-ಬಂಘಾರದ ತತ್ತೀಯಿಡೊ ಕೋಳಿ ಇದ್ಧಾಂಗೇನಪಾ.

ಉರಿನಿಂಗ : ಏನಂದ್ಯೋ ಮಗನs?
(ಕಲ್ಲನ ಮೇಲೆ ಹಾರುವನು. ಕೆಂಚ ಕಾರಭಾರಿ ಬೇರ್ಪಡಿಸುವರು. ಉರಿನಿಂಗ ಹಲ್ಲು ಕಡಿಯುತ್ತ ಬಾಯಿಗ ಬಂದದ್ದನ್ನು ಬಯ್ಯುತ್ತ ನಿಂತಿದ್ದಾಣೆ)

ಕಲ್ಲ : ಖರೇ ಮಾತಾಡಿದ್ರ ಯಾಕ  ಸಿಟ್ಟಿಗೇಳ್ತೀಯೊ?

ಕಾರಭಾರಿ : ಮರೀಬ್ಯಾಡ, ಬಂದುಕಿನವರಿನ್ನೂ ಸ್ವಾಮೀ ಕೈಯಾಗಿದ್ದಾರ.

ಉರಿನಿಂಗ : ಈಗಿಂದೀಗ ಹೋಗಿ ನೀವು ಮಾಡ್ತಿರೋದನ್ನೆಲ್ಲಾ ಮಂದಿಗಿ ಹೇಳ್ತೀನಿ. ಅವರs ನಿಮ್ಮ ಬಣ್ಣಾ ತೋರಸ್ತರ.

ಗುರುವಯ್ಯ : ಅಂದರ ನೀ ಈಗ ಹೊರಗ ಹೋದರ, ಹೌದಲ್ಲ?
(ಚಪ್ಪಾಳೆ ತಟ್ಟುವನು. ಇಬ್ಬರು ಬಂದೂಕಿನವರು ಬಂದೊಡನೆ ಸನ್ನೆ ಮಾಡುವನು. ಉರಿನಿಂಗನನ್ನು ಕೈ ಕಟ್ಟಿ ಬಂಧಿಸುವರು. ಇದೆಲ್ಲ ಒಂದೆರಡು ಕ್ಷಣಗಳಲ್ಲೇ ನಡೆಯುತ್ತದೆ. ಉಳಿದವರೆಲ್ಲ ಗೆಲುವಾಗುತ್ತಾರೆ. ಉರಿನಿಂಗ ಒದ್ದಾಡುತ್ತಿದ್ದಾನೆ.)

ಕೆಂಚ : ಹೋಗಪಾ ಹೋಗು. ಮಂದೀನ ಕರಿ, ನಮ್ಮದೆಲ್ಲಾ ಸಂಚ ಹೇಳು, ಪಂಚರೆಲ್ಲಾ ಕೂಡಿ ನನ್ನ ಹೇಂತೀ ಮ್ಯಾಲ ಬಿದ್ದಾರ, ಬರ್ರಿ‍ ಅನ್ನು. ಕುಡಗೋಲ, ಕೊಡ್ಲಿ ತಗೊಂಡ ಬರತಾರ, ನೋಡತಾರ : ನಿನ್ನ ಹೆಣದ ಮ್ಯಾಲ ಗುರುವಯ್ಯನವರು! ನಮ್ಮ ತೊಡೀಮ್ಯಾಲ ಚಿನ್ನಿ!

ಕಲ್ಲ : ನಿನ್ನಿ ರಾತ್ರಿ  ಊರಮಂದೆಲ್ಲಾ ನಿದ್ದೀ ಬಿಟ್ಟ ನಗಾಕ ಹತ್ತಿದ್ದರು. ಯಾಕಂತ ಹೊರಗ ಹೋದರ ಸಿದನಾಯ್ಕನ ಮನೀ ಗ್ವಾಡಿಗಿ ಎಲ್ಲಾರು ಕಿವೀ ಹಚ್ಚಿ ನಿಂತಾರಲಾ! ಯಾಕ್ರೊ ಅಂದರ ಕೇಳಬರ್ರಿ‍ ಅಂದ್ರು. ಹೋಗಿ ನಾನೂ ಕಿವೀ ಹಚ್ಚಿ ಕೇಳತೀನಿ; ಚಿನ್ನಿ ನೆಳ್ಳಾಕ ಹತ್ಯಾಳಲ್ಲ!
(ಉರಿನಿಂಗಬಿಡರ್ರೋ ಅವರ್ನ ಹುಗೀತೀನಿಎಂದು ಚೀರಾಡುತ್ತ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಗುರುವನ್ನು ಬಂದೂಕಿನವರಿಗೆ ಸನ್ನೆ ಮಾಡುತ್ತಾನೆ. ಉರಿನಿಂಗನನ್ನ ಹಿಡದಹಾಕಿ ಬದಕ್ತೀರೇನ್ರೊಮುಂತಾಗಿ ಒದರಾಡುತ್ತಿರುವಾಗ ಒಳಗೆ ಎಳೆದೊಯ್ಯುತ್ತಾರೆ)

ಗುರುವಯ್ಯ : ಕಾರಭಾರಿ, ಕಾಗದಪತ್ರ ಮಾಡು. ಮೊದಲು ಎಲ್ಲಾ ದೇಸಗತಿ ಸಿದನಾಯ್ಕನ ಹೆಸರಿಗೇ ಇರಲಿ. ಸಿದನಾಯ್ಕ ಇನಾಮಾಗಿ ಇವರಿಗೆಲ್ಲಾ ತಲಾ ಮುನ್ನೂರ ಎಕರೆ ಬರಕೊಟ್ಹಾಂಗ ಬ್ಯಾರೇ ಕಾಗದ ಮಾಡು. ನಾವೆಲ್ಲಾ ಸಹಿ ಹಾಕತೀವಿ. ಆಮ್ಯಾಲ ಸಿದನಾಯ್ಕನ ಹತ್ತರ ತಗೊಂಡ್ಹೋಗು. ಮೊದಲ ಎಲ್ಲಾರ ಕಾಗದಕ್ಕ ಸಹಿ ಹಾಕಿದರs ಅವನ ಕಾಗದಕ್ಕೂ ಸಹಿ ಹಾಕಸು.

ಕೆಂಚ : ಹಾಂಗs ಚಿನ್ನೀನ ಕರಕೊಂಬಾ!
(ಎಲ್ಲರೂ ನಗುತ್ತಿರುವಂತೆ ಗುರುವಯ್ಯ ಹೋಗುವನು)