(ಹೊಲ. ರಾತ್ರಿ. ಚಿನ್ನಿ ಅಳುತ್ತ ಕೂತಿದ್ದಾಳೆ. ಒಂಕಾರಿ ಸೆರೆ ಕುಡಿಯುತ್ತ ಪಕ್ಕದಲ್ಲಿಯೇ ಕುಳಿತಿದ್ದಾನೆ)

ಒಂಕಾರಿ : ಸನಮಂತ ಮಾಡಿಕೊ ಚಿನ್ನವ್ವಾ. ಇದಕ್ಕಿಂತ ಹೆಚ್ಚಿಂದ ಇನ್ನೇನ ಬಂದೀತು?

ಚಿನ್ನಿ : ಏನ ಗಂಟ ಬಿದ್ದೀಯೋ, ನಿರಂಬಳ ಸಾಯಬೇಕಂದರ ಬಿಡವೊಲ್ಲಿ.

ಒಂಕಾರಿ : ನಾನೂ ಸಾಯತೀನಿ.

ಚಿನ್ನಿ : ನೀ ಯಾಕ ಸಾಯ್ತಿ?

ಒಂಕಾರಿ : ನೀ ಸಾಯ್ತಿಯಲ್ಲ, ಅದಕ್ಕ. ಸಾಯೋದಕ್ಕ ನೋಡು-ಸಾವಿರ ಹಾದಿ ಅದಾವ.
ಅದರಾಗs ಸನೇದ್ದೊಂದ ಆರಿಸಿಕೊಳ್ಳೋಣು, ಸಾಯೋಣು.

ಚಿನ್ನಿ : ಇದೇನ ಶನಿ ಗಂಟ ಬಿತ್ತ ನಮ್ಮವ್ವಾ!

ಒಂಕಾರಿ : ಶನಿ ಅಲ್ಲಬೇ ನನ್ನ ಹೆಸರ ಒಂಕಾರಿ.

ಚಿನ್ನಿ : ಹೋಗಲಿ, ಬಾಯ್ಮುಚ್ಚತಿ?

ಒಂಕಾರಿ : ಅದೊಂದ ನನ್ನಿಂದಾಗಾಣಿಲ್ಲ, ತಗಿ.

ಚಿನ್ನಿ : ಮಾತಾಡ ಹಂಗಾದರ.

ಒಂಕಾರಿ : ಏನ ಮಾತಾಡ್ಲಿ?

ಚಿನ್ನಿ : ಯಾಕ ನನ್ನ ಬೆನ್ನ ಹತ್ತೀಯೊ?

ಒಂಕಾರಿ : ಯಾಕಂದರ ಸಿದನಾಯ್ಕಗ ಮಾತ ಕೊಟ್ಟೇನಿ, ನಿನ್ನ ಕರಕೊಂಬರ್ತ್ತೀನಂತ-

ಚಿನ್ನಿ : ನಿನ್ನ ಸಿದನಾಯ್ಕನ ನೀರ ತಿಳದೈತಿ, ಸುಮ್ಮನ ಹೋಗು. ಅವನ ಬೆನ್ನ ಹತ್ತಿದ್ದಕs ಅಲ್ಲೇನ ನಮಗ ಈ ಗತಿ ಬಂತ? ನನ್ನ ಗಂಡನ್ನ ಹಾಡಾ ಹಗಲಿ ಹಿಡದ ಹಾಕಿದರು; ಏನ ಮಾಡಿದ? ಪಂಚರೆಲ್ಲಾ ನನ್ನ ಮೈಮ್ಯಾಲ ಕೈ ಮಾಡಾಕ ಬಂದರು; ಏನ ಮಾಡಿದ? ‘ಹೋಗಿ ಕರತಾ’ ಅಂದಂತ; ಇವ ಬಾಯಿ ತೆರಕೊಂಡ ಬಂದ. ಹೋಗ್ಹೋಗು ಬರಾಣಿಲ್ಲ. ಹೇಳವಗ. ದೇಸಾಯಿ ಕಾಳಕ್ಕ ತೋಳಿನಂಥಾ ತೋಳಿಗಿ ಒಂದ ಚೂರ ಎಲುವ ಹಾಕಿದರ ಸಾಕಿತ್ತು. ಈಗ ಇವನ ಕಾಲದಾಗ ಇಡೀ ಮನಿಶ್ಯಾಗ ಉಪ್ಪ ಹಚ್ಚಿ ಹುರದಕೊಟ್ಟರೂ ಒಂದ ನಾಯಿಗಿ ಸಾಲೋದಿಲ್ಲ.

ಒಂಕಾರಿ : ನಿನಗ ಬರೀ ಒಬ್ಬ ಸಿದನಾಯ್ಕನ ನೀರ ಗೊತ್ತಾಗಿ ಸಾಯಾಕ ನಿಂತಿ; ನನಗ ಈ ಊರ ಮಂದೀ ನೀರೆಲ್ಲಾ ತಿಳದೈತಿ! ನಾ ಹೆಂಗ ಬದುಕಬೇಕಬೆ?

ಚಿನ್ನಿ : ತಗೊ ಸುರುಮಾಡಿದ.

ಒಂಕಾರಿ : ನಿನಗೂ ನನ್ನ ಮಾತ ಬ್ಯಾಡಾತ?

ಚಿನ್ನಿ : ನಮ್ಮಪ್ಪಾ ನಂದs ನನಗ ತಗ್ಗ ತಗದ ಮುಚ್ಚಿಕೊಳ್ಳೋವಷ್ಟ ಐತಿ; ನಿಂದೆಲ್ಲಿ ಕೇಳಲಿ?

ಒಂಕಾರಿ : ಈ ಊರಿಗಿ ಬ್ಯಾಡಾದವ ನಾ ಒಬ್ಬನs ನೋಡಬೆ. ದೇಸಾಯರಿದ್ದಾಗ, ‘ಸಾಯತೇನ್ರಿ, ಒಂದ ಗೋರಿ ತೋಡಿಕೊಡರಿ’-ಅಂದೆ. ತೋಡಿಕೊಟ್ಟರು. ಆದರ ಗೋರ್ಯಾಗ ನಾ ಹಿಡಿಸಿದೆ, ನನ್ನ ಕನಸ ಹಿಡಿಸಲಿಲ್ಲ. ಸಿದನಾಯ್ಕಗ ಹೇಳತೀನಿ : ದೊಡ್ಡ ಗೋರಿ ತೋಡಿಕೊಡಪಾ ಅಂತ.  ಇನ್ನೇನ್ಮಾಡಲಲಿ?

ಚಿನ್ನಿ : ಬಾಯ್ಮುಚ್ಚಿಕೊಂಡ ಕುಂತಕಾ.

ಒಂಕರಿ : ಸಾಯತೀನಿ ‘ಪಾಪ!’ ಅನ್ನೋದ ಬಿಟ್ಟ ‘ಬಾಯ್ಮುಚ್ಚಿಕೊಂಡ ಕುಂತಕಾ’ ಅಂತೀಯಲ್ಲಬೆ? ಕುಂತಕೋದಿಲ್ಲ, ನಿಂತಕೋತೀನಿ.
(ನಿಲ್ಲುವನು)

ಚಿನ್ನಿ : ನಿಂತಕಾ.

ಒಂಕರಿ : ಕುಂತಕೋತೀನಿ.
(ಕೂರುವನು)

ಚಿನ್ನಿ : ನನ್ನ ಕರ್ಮ.

ಒಂಕಾರಿ : ಅದ್ಯಾಕ ಈ ಮಂದಿಗಿ ನನ್ನ ಕಂಡರ ಆಗಾಣಿಲ್ಲ? ನಮ್ಮಪ್ಪನ ಪಾದಾ ಹಿಡಕೊಂಡ ಕೇಳಿದೆ : ಎಪಾ ಹೆಂಗ ಬದಕಲಿ?- ಅಂತ. ಹೇಳಿದ : ನಿನ್ನ ನೋಡಿದರ ಮನಿಶ್ಯಾ ಹೆಂಗ ಬದುಕಬಾರದೂ ಅಂತ ಎಲ್ಲಾರಿಗು ತಿಳಿದಿರಬೇಕಲು, ಹಾಂಗಿರು-ಅಂದ. ಹಾಂಗಿದೀನಿ, ನಂದೇನ ತಪ್ಪ ಐತಿ? ಈ ಊರಾಗಿನ ಎಷ್ಟ ಮಂದಿ ನನ್ನ ನೋಡಿ ಬುದ್ಧಿವಂತರಾಗ್ಯಾರ! ಅದಕ್ಕs ಯಾರಿಗೂ ನನ್ನ ಕನಸ ಬೀಳಾಣಿಲ್ಲ. ಅಂಧಾಂಗ ಚಿನ್ನೀ ನಿನ್ನಿ ನನಗೊಂದ ಕನಸ ಬಿದ್ದಿತ್ತು. ನೀ ಇದನ್ನ ಕೇಳಾಕs ಬೇಕು.-
ನಿನ್ನ ಕಣ್ಣಾಗೊಂದ ಹುಣ್ಣಾಗಿತ್ತು. ವಾs ಅಂತ
ಹಲಬತಿದ್ದಿ. ಬೆಳ್ಳಗ ಥಳ ಥಳ ಹೊಳೆಯೋ
ಹುಡುಗ ಬಂದ.
ಹುಣ್ಣ  ಮಾದಾಂಗಾತು. ಅವನ್ನ ನೋಡಿ ನೀ
ನಾಚಿದಿ. ನಿನ್ನ ಕಣ್ಣ ಕೆಂಪಗಾಗಿ, ರೆಪ್ಪೀಗುಂಟ
ನುಣ್ಣಗ ಸಣ್ಣಗ, ಎಳಿ ಎಳೀ ಕನಸ
ಹರದಾಡತಿದ್ದುವು!
ಕಣ್ಣಂಚಿಗಿ ಕಣ್ಣೀರ ತುಂಬಿ, ಕಣ್ಣೀರಾಗ-
ನನ್ನಾಣಿ ಖರೇ ಹೇಳತೀನಿ, ಚಿನ್ನೀ-
ಚಂದ್ರ ಹೊಳೀತಿದ್ದ!
ನಾ ಹೇಳತಿದ್ದೆ :
ಚಿನ್ನೀ-ರೆಪ್ಪಿ ಹೊಡೀಬ್ಯಾಡ! ತುಳಕೀತು-ಅಂತ.
ನೀ ಕೇಳಬೇಕಲ್ಲ. ಕಣ್ಣರೆಪ್ಪಿ ಹೊಡದಿ.

ಚಿನ್ನಿ : ಇಷ್ಟನಾ?

ಒಂಕಾರಿ : ನಿನಗೇನೋ ಇಷ್ಟs ಆಗಿದ್ದೀತು. ನನ್ನ ಸಂಕಟ ನಿನಗೇನ ಗೊತ್ತಾ?
ರೆಪ್ಪಿ ಹೊಡದಿ!
ಕಣ್ಣ ತುಳಕಿತು!
ಕಣ್ಣಾಗ ಚಂದ್ರನ ಹೆಣಾ ತೇಲತಿತ್ತು!
ಸನೇಕ ಬಂದ ನೋಡಿದೆ!
ಚಂದ್ರ ಅಲ್ಲ, ಚಿನ್ನೀ,
ಸಿದನಯ್ಕನ ಹೆಣ!!

ಚಿಟ್ಟನ ಚೀರಿದೆ :
ಸಿದನಾಯ್ಕಾssss……

ಸಿದನಾಯ್ಕಾ :  (ಬರುತತ)
ಒಂಕಾರೀ……

ಚಿನ್ನಿ : ಸಿದನಾಯ್ಕ ಬಂದ.

ಒಂಕಾರಿ : ಅಡ! ಇನ್ನs ಜೀವಂತ ಇದ್ದಾನಲ್ಲಾ!
(ಸಿದನಾಯ್ಕ ಬರುವನು. ಒಂಕಾರಿ ನಿಜವಾಗಿಯೂ ಗಾಬರಿಯಿಂದ ಸಿದನಾಯ್ಕನನ್ನು ನೋಡುತ್ತಿರುತ್ತಾನೆ. ಮುಂದೆ ಚಿನ್ನಿ ಸಿದನಾಯ್ಕ ಮಾತಾಡತೊಡಗುತ್ತಲೂ ಕ್ರಮೇಣ ತೇಲುಗಣ್ಣಾಗಿ ನಿದ್ರಿಸತೊಡಗುವನು)

ಸಿದನಾಯ್ಕ : ಕರಕೊಂಬಾ ಅಂದರ ಇಲ್ಲಿ ಬಂದ ಕುಂತೇನೀ? ಚಿನ್ನೀ, ಏಳ ಹೋಗೋಣ.

ಚಿನ್ನಿ : ಬರಾಣಿಲ್ಲ.

ಸಿದನಾಯ್ಕ : ಮರೀಬ್ಯಾಡ, ಊರ ನಶೀಬ ನಿನ್ನ ಕೈಯಾಗ, ಉರಿನಿಂಗನ ಕೈಯಾಗದ.

ಚಿನ್ನಿ : ಅಂಥಾ ದೊಡ್ಡ ಜಿದ್ದ ಕಟ್ಟಾಕ ನಾವೇನ ಹೇಳಿರಲಿಲ್ಲ.

ಸಿದನಾಯ್ಕ : ದೊಡ್ಡದೋ ಸಣ್ಣದೋ, ಗೆಲ್ಲೋದ ಮುಖ್ಯ.

ಚಿನ್ನಿ : ಸೋತರ ಏನ ಮಾಡತಿ?

ಸಿದನಾಯ್ಕ : ಯಾಕ ಸೋಲಬೇಕು? ಅಥವಾ ಸೋಲಬಹುದಂತಿ?

ಚಿನ್ನಿ : ಸೋತರೂ ಗೆದ್ದರೂ ನನಗಷ್ಟ.

ಸಿದನಾಯ್ಕ : ಯಾಕ?

ಚಿನ್ನಿ : ನೀ ಗೆದ್ದರ ಉರಿನಿಂಗ ನನ್ನ ಕರಕೋಬೇಕು. ಅವ ಕರಕೊಳ್ಳೋದಿಲ್ಲ. ನೀ ಸೋತರ-ಅದs ಖಾತ್ರಿ-ನಿನ್ನ ಮುಗಸ್ತಾರ. ಇನ್ನೊಬ್ಬ ದೇಸಾಯಿ ಬರತಾನ. ನಾ ಅವನ ಸೂಳಿ ಆಗಬೇಕು.

ಸಿದನಾಯ್ಕ : ನನ್ನ ಗೆಲುವಿನಾಗ ನಿನಗೂ ನಂಬಿಕಿ ಇಲ್ಲ?

ಚಿನ್ನಿ : ಮೊದಲ ನಿನಗs ಇಲ್ಲ!

ಸಿದನಾಯ್ಕ : ಈ ಊರ ಉಳೀಬೇಕಾದರ, ನಮ್ಮ ಕ್ರಾಂತಿಗಿ ಜಯ ಸಿಗಬೇಕಾದರ, ನಾ ಗೆಲ್ಲಾಕs ಬೇಕು.

ಚಿನ್ನಿ : ನೀ ಗೆಲ್ಲದಿದ್ದರ ಊರ ಹಾಳಾಗೋದಿಲ್ಲ.

ಸಿದನಾಯ್ಕ : ನನ್ನ ಕನಸು, ಒಂಕಾರೀ ಕನಸು……

ಚಿನ್ನಿ : ಅದೇನಂಬೂದs ನನಗ ತಿಳದಿಲ್ಲ, ಮಂದಿಗಿ ತಿಳದಿಲ್ಲ. ಗುರುವಯ್ಯ ಹೇಳೋ ಅಂಜಿಕಿ ಖರೆ ಅನಸ್ತೈತಿ, ನೀ ಹೇಳೋ ಕನಸ ಖರೇ ಅನಸೋದಿಲ್ಲ.

ಸಿದನಾಯ್ಕ : ಗುರುವಯ್ಯನ ಹಾದಿ ಬರೋಬರಿ ಅಂತಿಯೇನು?

ಚಿನ್ನಿ : ಅವ ನೂರ ವರ್ಷದ ಹಿಂದಿಂದ ಹೇಳತಾನ, ನೀ ನೂರ ವರ್ಷ ಮುಂದಿಂದ ಹೇಳತಿ. ಇಂದ ನನ್ನ ಗತಿಯೇನು? ಅದನ್ನ ಹೇಳು.

ಸಿದನಾಯ್ಕ : ನನ್ನ ಮ್ಯಾಲ ನಿನಗ ಭರೋಸ ಇಲ್ಲ, ಉರಿನಿಂಗಗಿಲ್ಲ, ಊರ ಮಂದಿಗಿಲ್ಲ, ತಿರಿಗಿ ಕೇಳಿದರ ಒಂಕಾರಿಗಿಲ್ಲ-
(ಕೂಗುತ್ತಾ)
ಮತ್ತ ಇದನೆಲ್ಲಾ ಯಾರಿಗಾಗಿ ಮಾಡತಿದೀನಿ? ಯಾಕ ಮಾಡತಿದೀನಿ?

ಚಿನ್ನಿ : ಅದಕ್ಕ ನಾ ಏನ ಹೇಳಲಿ? ಜವಾಬ ಇದ್ದದ್ದs ಆದರ ನಿನ್ನ ಹಂತ್ಯಾಕಿರಬೇಕು.

ಸಿದನಾಯ್ಕ : ಖರೆ. ಈ ಹಾಳಜೀವನ ಸಾಕ ನನಗ. ಈ ಮಂದಿ ನನಗ ಬೇಕಿಲ್ಲ. ಕಣ್ಣಿನ ಮ್ಯಾಲ ರುಂಬಾಲ ಸುತ್ತಿಗೊಂಡ ಇವರಿಗೆಲ್ಲಾ ಡಿಕ್ಕಿ ಹೊಡೀಬೇಕನ್ನಸ್ತದ. ಪಿಳಿ ಪಿಳಿ ಕಣ್ಣ ಬಿಟ್ಟಕೊಂಡ ಬದಿಕೇ ಬದಕ್ತಾರ. ಯಾಕ ಬದಿಕ್ಯಾರ? ಅವರಿಗೇನ ಬೇಕು?-ಒಂದೂ ತಿಳಿಯೋದಿಲ್ಲ! ದೊಡ್ಡದೊಂದ ಬಂಡೀಮ್ಯಾಲ ನಿಂತ- ‘ಅಪಾ, ನಿಮ್ಹಾಂಗ ನನಗ ಬದಕೋದಕ್ಕ ಆಗೋದಿಲ್ಲರ್ಯೊ’-ಅಂತ ಚೀರ ಬೇಕನ್ನಸ್ತದ. ಆದರ ನನ್ನ ಮಾತ ಅವರಿಗಿ ಕೇಳಸೋದs ಅವರ್ನ ಮುಟ್ಟೋದಕ್ಕ ಸಮೀಪದ ಹಾದಿ ಯಾವುದೋ ಗೊತ್ತs ಇಲ್ಲ! ಅಥವಾ……

ಚಿನ್ನೀ,

ಸಣ್ಣಂದಿರತ, ಒಮ್ಮಿ ಹಿಂಗಾಯ್ತು;

ಹತ್ತ ವರ್ಷಾದಾವಿದ್ದೆ, ಚಂದ್ರನ್ನ ಹಿಡೀಬೇಕಂತ
ಆಸೇ ಆಯ್ತು. ಒಳಗಿಂದ ಕದ್ದ, ಅವ್ವಗ ಹೇಳದs
ಕನ್ನಡಿ ತಂದೆ.

ಚಂದ್ರನ ಮುಂದ ಹಿಡದೆ.
ಚಂದ್ರ ಸಿಕ್ಕಾ ಅಂತ ಸಡಗರ ಮಾಡೋವಾಗ
ಕೈಜಾರಿ ಕನ್ನಡಿ ಒಡೀತು.
ಅವ್ವ ಬಂದ ಹೊಡದಳು.

ಆಮ್ಯಾಲ ಹಿತ್ತಲಾಗ ನೋಡಿದರ
ಬಚ್ಚಲ ಹರಿ ನೀರಾಗ ಚಂದ್ರ ಮೂಡಿದ್ದ!
ಸಿಟ್ಟಿಗೆದ್ದ ಕಚಪಚ ತುಳಿದೆ!
ಮೈತುಂಬ ಕೆಸರಾಯ್ತು.
ಅವ್ವ ಇನ್ನೊಮ್ಮಿ ಹೊಡದಳು.
‘ನನಗೇನೂ ನೋವಾಗಿಲ್ಲ ದs’ ಅಂತ
ಚಂದ್ರನ ಕಡೆ ಮುಖ ಮಾಡಿ
ಅಣಕಿಸಿದೆ!
ಆಗ ನನ್ನ ಕೈಯಿಂದ ಸಾಧ್ಯವಾದದ್ದು, ಅಷ್ಟs.
ಆದರ,
ಹಾಂಗ ಹೇಳಿದ್ದರಿಂದ ಸಮಾಧಾನ ಆಯ್ತು.
ನನ್ನ ಪಾಲಿಗುಳದದ್ದು-ಈಗಲೂ ಅಷ್ಟs ಅಂತ ಕಾಣತದ.
ಚಿನ್ನೀ,
ಚಂದ್ರಗ ಹಾಂಗ ಹೇಳಿದ ಮ್ಯಾಲ ಏನ ಮಾಡಿದೆ ಗೊತ್ತ?
ಚಿನ್ನಿ : ಏನು?
ಸಿದನಾಯ್ಕ : ಚಪ್ಪಾಳಿ ತಟ್ಟಿ ನಕ್ಕೆ-
(ವೇದನೆಯಿಂದ ಗಹಗಹಿಸಿ ನಗುವನು. ಗಕ್ಕನೆ ನಗು ನಿಲ್ಲಿಸಿ.)
ಚಿನ್ನೀ, ನೀ ಈಗೇನ ಚಂದ ಕಾಣತಿ ಗೊತ್ತಾ? ಒಂಕಾರೀನ ಕೊಂದ ಹಾಕಲಿ?

ಚಿನ್ನಿ : ಅವೇನ ಮಾಡ್ಯಾನ? ಊರ ಮಂದೀನ ಎಷ್ಟ ಚಂದ ನಗಸ್ತಾನವ.

ಸಿದನಾಯ್ಕ : ಈಗ ನಾನೂ ನಿನ್ನ ನಗಸಲಿ?
(ಗಪ್ಪನೆ ಮಲಗಿದ್ದ ಒಂಕಾರಿಯು ಕತ್ತು ಹಿಡಿಯುವನು. ಒಂಕರಿ ಕಿತ್ತುಕೊಂಡೇಳುವನು. ಸಿದನಾಯ್ಕ ಅವನನ್ನೆದುರಿಸಲಾರದೆ ಅಪ್ರತಿಭನಾಗುವನು)

ಒಂಕಾರಿ : ಅಯ್ಯೋ ಎಪ್ಪಾ ಅಯ್ಯೋ ಅಯ್ಯೋ… ನನ್ನ ಚಂದರಾಮ! ಚಂದರಾಮರ್ಯ್ಯೋ!

ಸಿದನಾಯ್ಕ : ಏಏ ಒಂಕಾರಿ ಒಂಕಾರಿ……

ಒಂಕಾರಿ : ಕೊಡ ಮೊದಲ. ಕೊಡ್ತಿ ಏನಂತಿ?
(ಹೇಳ ಹೇಳುತ್ತ ಸಿದನಾಯ್ಕನ ಮೇಲೆ ಹಾರುವನು. ಸಿದನಾಯ್ಕ ಅವನನ್ನು ನಿವಾರಿಸುತ್ತ ಹಿಂದೆ ಸರಿಯುವನು. ಹೀಗೇ ರಂಗದ ತುಂಬ ಸುತ್ತಾಡುವರು.)

ಸಿದನಾಯ್ಕ : ಏ ಒಂಕಾರೀ ಎಚ್ಚರಾಗೋ ಏ……

ಒಂಕಾರಿ : ಎಲ ಎಲಾ! ಮತ್ತ ನಾನs ಎಚ್ಚರಾಗಬೇಕs?
(ಏನು ಮಾಡಬೇಕೆಂದು ತಿಳಿಯದೆ ಸಿದನಾಯ್ಕ ಕಿಸೆಯಲ್ಲಿಂದ ಒಂದು ನಾಣ್ಯ ಎಸೆಯುವನು. ‘ಹಿಂಗ ಬಾ ಹಾದಿಗೆಎನ್ನುತ್ತ ನಾಣ್ಯ ತಕ್ಕೊಂಡು ಎರಡೂ ಕೈಯಿಂದ ಭದ್ರವಾಗಿ ಹಿಡಿದುಕೊಂಡುಬಾರೋ ಮಾಮಾ ಚಂದಮಾಮಾ ಎನ್ನುತ್ತ ಒಂಕಾರಿ ಮಲಗುವನು.)

ಚಿನ್ನಿ : ಹೌಂದ? ನಿನ್ನ ಕೈಲೆ ಇದೂ ಆಗಲಿಲ್ಲ.

ಸಿದನಾಯ್ಕ : ಹೌದು. ನನ್ನ ಕೈಯಿಂದೇನೂ ಆಗೋದಿಲ್ಲ, ಏನೇನೂ. ನಿಮ್ಮನ್ನೆಲ್ಲಾ ನೋಡಿದರ ನಾ ಎಂಥಾ ಮೂರ್ಖ ಅನಸ್ತದ. ನಿಮ್ಮ ಕೈಯಾಗಿನ ಕುಡಗೋಲಧಾಂಗ ಉಪಯೋಗಿಸಿದಿರಿ. ದೇಸಾಯೀನ್ನ ಕೊಂದಿರಿ. ಕ್ರಾಂತಿ ಮಾಡಿದೆ ಅಂತ ನಾ ತಿಳಕೊಂಡೆ. ಈಗ ನನಗೆ ಅನಸ್ತದ : ನಿಮ್ಮ ಜೋತ ಮುಖವಾಡದ ಹಿಂದೊಂದ ಖರೇ ಮುಖ ಅದ. ಮುಖವಾಡದ ಜೊತೆ ಮಾತಾಡ್ತ ಆ ಮುಖ ಹೇಳತದ : ನಗಬ್ಯಾಡ ಆ ಹುಡುಗ್ಗ ಹುಚ್ಚಹತ್ಯದ ಅಂತ. ಏನ ಮಾಡಲಿ? ಆ ಕಡೆ ಹುಳೀ ಅಲ್ಲ ಈ ಕಡೆ ಉಪ್ಪಲ್ಲ; ಕೆಳಗೆ ಜನಾ ಸಿಗಲಿಲ್ಲ, ಮ್ಯಾಲ ಚಂದ್ರ ಸಿಗಲಿಲ್ಲಾ, ನಡುವs ಅಂತರದಾಗ ಅತಂತ್ರ ಆಗಿ ತೂಗ್ಯಾಡತೀನಿ! ಅಥವಾ ……(ಗಪ್ಪನೆ ಚಿನ್ನಿಯ ಕೈ ಹಿಡಿದುಕೊಂಡು)

ಚಿನ್ನೀ ಚಂದ್ರ ಸಿಗೋದಿಲ್ಲ! ಬೆನ್ನಹುರಿ ಮುರಿಯೋತನಕ ಹುಡುಕಿದರೂ ಇಲ್ಲ! ಸಿಕ್ಕಿತು ಅಂತಂದಾಗ ಅದೊಂದು ಹಳೀ ಕಾಲದ ನಾಣ್ಯ ಆಗಿರತದ! ಚಿನ್ನೀ ಚಂದ್ರ ಇಲ್ಲ!!
(ಬಿಡುಗಡೆ ಹೊಂದಿದಂತೆ)
ಚಿನ್ನಿ, ನಡಿ ಹೋಗೋಣು.

ಚಿನ್ನಿ : ಎಲ್ಲಿಗೆ?

ಸಿದನಾಯ್ಕ : ನನ್ನ ಹಾಸಿಗ್ಗೆ.

ಚಿನ್ನಿ : ಏನಂದಿ?
ಸಿದನಾಯ್ಕ : ಪಾಪ ಮಾಡೋದಕ್ಕ! ಇನ್ನ ಉಳಿಗಾಲಿಲ್ಲ.

ಚಿನ್ನಿ : ನಾ ಅಂದರ ಹಗರ ಹೆಂಗಸಂತ ತಿಳೀಬ್ಯಾಡ. ಎಚ್ಚರಲೆ ಮಾತಾಡ.

ಸಿದನಾಯ್ಕ : ಬರತೀಯೋ? ಸೊಂಟ ಬಾರಸಂತೀಯೊ?

ಚಿನ್ನಿ : (ಗಾಬರಿಯಿಂದ)

ಒಂಕಾರಿ ಒಂಕಾರೀ……

ಸಿದನಾಯ್ಕ : ನಗೋದಕ್ಕ ವ್ಯಾಳ್ಯೆ ಇಲ್ಲ. ನಾಳಿ ಮುಂಜಾನೆ ಜನ ಕಾದಿರತಾರ. ಅವರಿಗಿ ತೋರಿಸೋದಕ್ಕ ನನ್ನ ಕೈ ಹೊಲಸ ಮಾಡಿಕೋ ಬೇಕು. ಬರ್ತಿಯೋ, ಓದಿ ಅಂತಿಯೊ?
(ಚಿನ್ನಿಅಯ್ಯೋ ಒಂಕಾರೀ ಒಂಕಾರೀಎಂದು ಕಿರುಚುತ್ತ ರಂಗದ ಸುತ್ತ ಓಡಾಡುವಳು ಸಿದನಾಯ್ಕ ಅಟ್ಟಿಸಿಕೊಂಡು ಹೋಗಿ ಅವಳನ್ನು ಹಿಡಿದುಕೊಂಡು ಹೊರುವನು. ಗದ್ದಲಕ್ಕೆ ಒಂಕಾರಿಗೆ ಎಚ್ಚರವಾಗಿ ತೂಗಾಡುತ್ತ ಸಿದನಾಯ್ಕನ ಎದುರಿಗೆ ಬಂದು ಅಡ್ಡಗಟ್ಟುವನು. ಸಿದನಾಯ್ಕ ಅವನನ್ನು ದೂಡಿ ಕಿರುಚುತ್ತಿರುವ ಚಿನ್ನಿಯನ್ನು ಹೊತ್ತೊಯ್ಯುವನು. ಒಂಕಾರಿ ಬಿಡುಗಣ್ಣಿನಿಂದ ನಿಂತಿದ್ದಾನೆ.)