(ಸಿದನಾಯ್ಕ ಸಿಡುಕಿನಿಂದ ಅತ್ತಿತ್ತ ಅಡ್ಡಾಡುತ್ತಿದ್ದಾನೆ. ಒಂಕಾರಿ ಖಿನ್ನನಾಗಿ ಮೊಳಕಾಲಲ್ಲಿ ತಲೆಹುದುಗಿ ಕೂತಿದ್ದಾನೆ. ಕಾರಭಾರಿಯ ಕೈಯಲ್ಲಿ ಕಾಗದಗಳಿವೆ)

ಸಿದನಾಯ್ಕ : ನನಗೊಂದೂ ತಿಳೀಧಾಂಗ ಏನೇನೆಲ್ಲಾ ಆಗತದಲ್ಲ ಈ ಊರೊಳಗೆ! ಗುರುವಯ್ಯನವರು ನನ್ನ ಮುಂದ ಹೇಳಿದ್ದೇನು, ಅಲ್ಲಿ ಮಾಡಿದ್ದೇನು? ಅಥವಾ……

ಕಾರಭಾರಿ : ಉರಿನಿಂಗನ್ನಂತೂ ನೀವು ಬರೋಬರಿ ನೋಡಿಲ್ಲ ಬಿಡರಿ.

ಸಿದನಾಯ್ಕ : ಯಾಕ?

ಕಾರಭಾರಿ : ಸಭಾದಾಗ ಇದರ ನಿಂತ ಬೇಕಬೇಕಾಧಾಂಗ ಮಾತಾಡಿದ.

ಸಿದನಾಯ್ಕ : ಅಂದರ?

ಕಾರಭಾರಿ : ಮಂದೀನ ಸುಲಿಯೋದಕ್ಕ ನಿಮಗ ಬ್ಯಾರೇ ಹಾದಿ ಸಿಗಲಿಲ್ಲೇನು? ಅಂದ.

ಸಿದನಾಯ್ಕ : ಅಂದ?
ಕಾರಭಾರಿ : ನಮ್ಮ ಮಾತ ಬ್ಯಾಡಪಾ, ಸಿದನಾಯ್ಕನಂಥಾ ಸತ್ಯವಮತನ ಮಾತ ನಂಬು ಅಂದ್ವಿ.

ಸಿದನಾಯ್ಕ : ಏನಂದ?
ಕಾರಭಾರಿ : ನಿಮ್ಮ ಮಸಲತ್ತಿಗಿ ನನ್ನ ಕಬೂಲಿಲ್ಲ ಅಂದ. ಸಹಿ ಹಾಕೋದಿಲ್ಲಾ ಅಂದ.

ಸಿದನಾಯ್ಕ : ಭೇಶ್‌! ಒಬ್ಬನಾದರೂ ಸಿಕ್ಕನಲ್ಲ. ಹೋಗು ನಾನೂ ಸಹಿ ಹಾಕೋದ ಇಲ್ಲ. ಆಮ್ಯಾಲ ಗುರುವಯ್ಯನವರ್ರ‍ನ ನೋಡತೇನಂತ ಹೇಳು. ಈಗ ಉರಿನಿಂಗ ಎಲ್ಲಿದ್ದಾನ?

ಕಾರಭಾರಿ : ನನಗ್ಗೊತ್ತಿಲ್ಲರಿ.

ಒಂಕರಿ : ಗೊತ್ತಿಲ್ಲಂತ ಯಾಕ ಹೇಳ್ತಿಯೋ? ಹಿಡದ ಕಟ್ಟಿ ಹಾಕ್ಯಾರಂತ ಹೇಳು.

ಸಿದನಾಯ್ಕ : (ಚಕಿತನಾಗಿ)

ಏನಂದಿ? ಯಾರು ಹಿಡದ ಹಾಕಿದರು?

ಕಾರಭಾರಿ : ನಿಮ್ಮನ್ನ ಬಾಯಿಗಿ ಬಂಧಾಂಗ ಬೈದರಿ ಅವ.

ಸಿದನಾಯ್ಕ : (ಚೀರುತ್ತ)
ಬಾಯ್ಮುಚ್ಚಲೇ, ನನ್ನ ಬೈಯೋ ಹಕ್ಕದ ಅವಗ. ಅವನ್ನ ಹಿಡದ ಹಾಕೋ ಹಕ್ಕ ನಿಮಗೇನದ? ಈಗಿಂದೀಗ ಗುರುವಯ್ಯನವರ ಹತ್ತರ ಹೋಗು. ನನ್ನ ಹೆಸರ ಹೇಳಿ ಉರಿನಿಂಗನ್ನ ಬಿಡಿಸಿ ಕರತಾ ಹೋಗು.

ಕಾರಭಾರಿ : ಆದರ…..

ಸಿದನಾಯ್ಕ : ಹೆಚ್ಚ ಮಾತಾಡಬ್ಯಾಡ.
(ಬಾಗಿಲವರೆಗೆ ಕಾರಭಾರಿ ಹೋಗಿ ನಿಲ್ಲುವನು. ಸಿದನಾಯ್ಕ ಅದನ್ನು ಗಮನಿಸಿ.) ಇದು ಸಾಧ್ಯವಿಲ್ಲಾ ಅಂದೆ. ಉರಿನಿಂಗನ್ನ ಇವರೆಲ್ಲಾ ಯಾಕ ಹಿಡೀಬೇಕು? ಖರೇ ಹೇಳತಾನ ಅದಕ್ಕ? ನಾ ಇನ್ನs ಜೀವಂತ ಇದ್ದೀನಿ. ಈಗಲೂ ನೀವು ಮಾಡೋ ರಾಡಿ ತೊ ಳೀಬಲ್ಲೆ. ಮತ್ತ ರಾಡೀ ಮಾಡಿದರ ಒದೀ ಬಲ್ಲೆ. ಹೇಳ ಗುರುವಯ್ಯನವರಿಗೆ. ಹೋಗತೀಯೊ ಏನಂತಿ?
(ಗುರವಯ್ಯ ಬರುವನು)

ಗುರುವಯ್ಯ : ಜೈ ಸಿದನಾಯ್ಕ!

ಸಿದನಾಯ್ಕ : ಇಂಥಾ ಮಾತ ಸಾಕ್ರಿ. ಮೊದಲ ಹೇಳ್ರಿ ಉರಿನಿಂಗನ್ನ ಹಿಡದ ಹಾಕಿದಿರಂತಲ್ಲ, ಯಾಕ, ಏನಿದೆಲ್ಲಾ?

ಗುರುವಯ್ಯ : ಸಮಾಧಾನ ಸಿದನಾಯ್ಕ! ಹಂಗೆಲ್ಲಾ ಹಗರಾಗಿ ನಮ್ಮ ತೂಕ ಮಾಡಬ್ಯಾಡ. ಪದರಿಗಿ ಗಂಟ ಹಾಕ್ಕೊ : ನಾ ಎಂದೂ ನಿನ್ನ ವೈರಿ ಅಲ್ಲ. ಚಿನ್ನೀನ ಕರಕೊಳ್ಳೋದಿಲ್ಲ. ಅಂದ. ಊರ ಸೂಳಿ ಅಂತ ಬೈದ. ನಿನ್ನಿ ನಿನ್ನ ಮನ್ಯಾಗ ಮಲಗಿದ್ದಕ್ಕ ಸಂಶೆ ತಗೊಂಡ. ಇದಕ್ಕೆಲ್ಲಾ ಇನ್ನೇನ ಬಹುಮಾನ ಕೊಡಬೇಕಂತಿ? ನಮ್ಮ ಮುಂದ ಎರಡ ಜಿಡಪ ಅವ ಏನಪಾ; ಯಾವುದಕ್ಕ ಕೈ ಹಾಕಿದರೂ ಇನ್ನೊಂದು ಬಂದ ತೊಡರತೈತಿ. ಈಗ ಭೂಮೀದs ತಗೊಳ್ಳಲ್ಲಾ-

ಸಿದನಾಯ್ಕ : ಆದರ ನೀವೀಗ ಮಾಡಿದ್ದು ಮೊದಲ ನೀವು ನನಗ ಹೇಳಿಧಾಂಗಿಲ್ಲ.

ಗುರುವಯ್ಯ : ಸ್ವಲ್ಪ ಫರ್ಕ್ ಆಗಿರಬಹುದು.

ಸಿದನಾಯ್ಕ : ಗುರುವಯ್ಯನವರ, ನೀವು ಈ ಊರಿಗಿ ತಂದಿ ಇದ್ಧಾಂಗ, ನಾವು ನಿಮ್ಮ ಮಕ್ಕಳಿದ್ಧಾಂಗ. ಇಬ್ಬರೂ ಸಂಶೇದಿಂಧ ಒಬ್ಬರನೊಬ್ಬರು ನೋಡೋದ ಬ್ಯಾಡ. ನೀವು ಹೇಳಿದ್ದಕ್ಕೂ ಈಗ ಮಾಡಿದ್ದಕ್ಕೂ ಅಸಮಾನ ಫರ್ಕ್ ಆಗ್ಯsದ. ನನ್ನೊಬ್ಬನ ಹೆಸರಿಗೇ ದೇಸಗತಿ ಮಾಡೋಣ ಅಂದಿರಿ. ಈಗ ನೋಡಿದರ ಕೆಂಚ, ಕಲ್ಲ, ಕಾರಭಾರಿ ಒಬ್ಬೊಬ್ಬನೂ ಒಬ್ಬೊಬ್ಬ ದೇಸಾಯಿ ಆಗ್ಯಾನ. ದೇಸಾಯೀ ಬ್ಯಾಡಂತ ಕ್ರಾಂತಿ ಮಾಡಿದಿವಿ. ಈಗ ನೋಡಿದರ ಅವನಂಆ ಹತ್ತ ಮಂದಿ ಕುಂತಾರ!

ಗುರುವಯ್ಯ : ದೇಸಗತಿ ಎಲ್ಲಾ ನಿನ್ನ ಹೆಸರಿಗೇ ಮಾಡಿದರ ಅವರಿಗೆ ಸಂಶೇ ಬರತದ. ಹಾಂಗ ಸಂಶೆ ತಗೊಂಡರ ಅದ ತಪ್ಪಂತ ಯಾವ ಬಾಯ್ಲೆ ಹೇಳ್ಲಿ?

ಸಿದನಾಯ್ಕ : ನಿಮಗೂ ಸಂಶೆ ಅದs ಏನು?

ಗುರುವಯ್ಯ : ನನ್ನ ನಿನ್ನ ವ್ಯವಹಾರ ಆಗಿದ್ದರ ನಡುವ ಸಂಶೆ ಯಾಕ ಬರಬೇಕು? ನಮ್ಮ ಸುತ್ತ ನಮ್ಮಿಬ್ಬರ ಮುಖ ನೋಡಿ ಕಳೆ ಕಟ್ಟೋ ಮಂದಿ ಇದ್ದಾರ, ಅವರಿಂದ ತಪ್ಪಿಸಿಕೊಳ್ಳಾಕ ಆಗೋಣಿಲ್ಲಪಾ/

ಸಿದನಾಯ್ಕ : ಸಂಶೆ ಬರೋ ಹಾಂಗ ನಾ ಏನ ಮಾಡ್ದೆ?

ಗುರುವಯ್ಯ : ಈ ಮಂದೆಲ್ಲಾ ಮನುಷ್ಯರು; ದೇವರಲ್ಲ. ಸಡ್ಲ ಬಿಟ್ಟರ ದೇವರನ್ನs ಸಂಶೇದಿಂದ ನೋಡೋ ಜನ. ಅಷ್ಟs ಅಲ್ಲ, ನೀನೂ ದೇವರಲ್ಲಂತ ಅವರಿಗಿ ಗೊತ್ತದ. ಈಗ ನಾನs ಕೇಳ್ತೀನಿ ಹೇಳು : ದೇಸಗತಿ ನಿನ್ನ ಹೆಸರಿಗಿ ಮಾಡಿಕೊಳ್ತಿ. ಆಮ್ಯಾಲ ಹಂಚತೀ ಅಂತ ಖಾತ್ರಿ ಏನು?

ಸಿದನಾಯ್ಕ : ನನ್ನ ನಂಬದಿದ್ದರ ಬ್ಯಾಡ. ಪೋಲೀಸರು ಬಂದ ಹೋಗೋತನಕ ಯಾರಾದಾದರೂ ಅಂದರ ಉರಿನಿಂಗನ ಹೆಸರಿಗಿ ಮಾಡರಿ.

ಗುರುವಯ್ಯ : ನೀ ಹತ್ತರ ಬಂದರ ಈ ಮಂದಿ ನಿನ್ನ ಮುಖ ನೋಡೋದಿಲ್ಲಪಾ; ನಿನ್ನ ಮೈ ವಾಸನಾ ನೋಡತಾರ. ಹೋಗಿ ಮುಂದ ನಿಂತರ ಸಾಕು-ಚಿನ್ನೀ ಹಾಸಿಗಿಂದ ಎದ್ದ ಬಂದಾನ್ನೋಡ ಅಂತಾರ! ಅಂದರ, ತಿಳೀತಲ್ಲ, ನೀ ಯಾಕ ಉರಿನಿಂಗನ ಹೆಸರಿಗಿ ಮಾಡೋಣಂತೀ ಅಂತ?

ಸಿದನಾಯ್ಕ :  (ಚಕಿತನಾಗಿ )
ನೀವೇನ ಮಾತಾಡತೀರಿ? ಕೇಲಿದೇನೋ ಒಂಕರಿ?

ಗುರುವಯ್ಯ : ಮರೀಬ್ಯಾಡ; ನಿನ್ನಿ ರಾತ್ರಿ ಚಿನ್ನಿ ನಿನ್ನ ಮನ್ಯಾಗಿದ್ದಳು. ಇದೆಲ್ಲಾ ಮಂದೀ ಮಾತಂತ ತಿಳಿ. ಬ್ಯಾಡ, ನನ್ನ ಹೆಸಿಗಿ ಮಾಡಿದೆಂತ ತಿಳಿ,-ನಿನ್ನ ನಂಬದ ಜನ, ನನ್ನ ನಂಬ್ಯಾರಂತೇನು? ಅದಕ್ಕ ದೊಡ್ಡ ದೊಡ್ಡ ಬಾಯಿಗೆಲ್ಲಾ ಒದರ್ಯಾಡಧಾಂಗ ಏನಾದರೂ ತುರಕಬೇಕಾಗತದ.

ಸಿದನಾಯ್ಕ : ಆದರ ಎಷ್ಟಂದರೂ ಹಂಗಾಮೀ ವ್ಯವಸ್ಥಾ ಇದು.

ಗುರುವಯ್ಯ : ಖಾಯಂ ಅಂತ ನಾ ಎಲ್ಲಿ ಹೇಳಿದೆ?

ಸಿದನಾಯ್ಕ : ಹಿಂಗ ಹಂಚಿಕೊಂಡರ ಮುಂದ ರೈತರಿಗಿ ಹಂಚ್ಯಾರಂತೇನ ಖಾತ್ರಿ?

ಗುರುವಯ್ಯ : ನೀ ಹೇಳಿದ್ದ ಖಾತ್ರಿ ಆಗೋದಾದರ ಇದ್ಯಾಕಲ್ಲ? ಅಥವಾ ಎರಡೂ ಸುಳ್ಳಾಗಬಹುದು.

ಸಿದನಾಯ್ಕ : ನಮ್ಮ ಕ್ರಾಂತಿ ಸುಳ್ಳಂದಿರೇನು?

ಗುರುವಯ್ಯ : ಸುಳ್ಳಂತಲ್ಲ. ಬರೋಬರಿ ಹೊಂದಿಕೆ ಆಗಿಲ್ಲ. ಮಂದಿ ಉಪವಾಸ ಸಾಯುತ್ತಿದ್ದರು. ಜೋಳ ಬೇಕಿತ್ತು. ದೇಸಾಯೀ ವಾಡೇದಾಗ ಜೋಳ ಅದ; ಅದೂ ಸರಕಾರ ಕೊಟ್ಟದ್ದಂತ ನೀ ಹೇಳಿದಿ. ಜನ ಬೆನ್ನ ಹತ್ತಿದರು. ನೀ ತಿಳಕೊಂಡಿ-ನಿನ್ನ ಕನಸಿನ ಬೆನ್ನ ಹತ್ಯಾರಂತ. ಆಯ್ತು. ನುಗ್ಗಿದಿರಿ. ದೇಸಾಯೀನ್ನ ಕೊಂದಿರಿ. ಕ್ರಾಂತಿಗಿ ಜಯ ಅಂತ ನೀ ತಿಳಕೊಂಡಿ. ಜೋಳ ಸಿಕ್ಕಿತು, ಇನ್ನಷ್ಟು ದಿನ ಬದುಕಬಹುದಂತ ಮಂದಿ ತಿಳಕೊಂಡರು. ನಿಮ್ಮಿಬ್ಬರ ನಡುವ ಬರೋಬರಿ ಹೊಂದಿಕಿ ಆಗಿಲ್ಲಾ ಅಂದೆ.

ಸಿದನಯ್ಕ : ಇಷ್ಟs ಆದರ ದೇಸಾಯೀನ್ನ ಯಾಕ ಕೊಂದಿವಿ?

ಗುರುವಯ್ಯ : ಜನ ಬದುಕಿಗಿ ಕಿಮ್ಮತ್ತ ಕೊಟ್ಟಷ್ಟು ನನ್ನ ದೇವರಿಗೆ, ನಿನ್ನ ಕ್ರಾಂತಿಗೆ ಕೊಡೋದಿಲ್ಲಪ! ಬದುಕಿಗಿ ಎದರ ನಿಂತವರೆಲ್ಲಾ ರಾಕ್ಷಸರರ್ಹಾಂಗ ಕಾಣತಾರ. ರಾಕ್ಷಸರೆಂದೂ ತಾವಾಗಿ ಸಾಯೋದಿಲ್ಲ. ಯಾರೋ ಬರಬೇಕು. ನೀ ಬಂದಿ, ನಿನ್ನ ಮುಖಾಂತರ ಕೊಂದರು. ಅದಕ್ಕ ನೀ ಕ್ರಾಂತಿ ಅಂದಕೊಳ್ಳೋದಾದರ ಅಂದಕೊ. ನಂದೇನೂ ತಕರಾರಿಲ್ಲ.

ಸಿದನಾಯ್ಕ : ಗುರುವಯ್ಯನವರs ವಾದ ಮಾಡಿ ಏನೂ ಮುಚ್ಚಬಹುದು-ಖರೆ ಕೂಡ. ನಿಮ್ಮ ವಾದ ಬರೋಬರಿ ಇರಬಹುದು. ಯಾಕಂದರ ಕಾಲೇಜಿನ ಚರ್ಚಾಕೂಟದೊಳಗ ನಾ ಯಾವತ್ತೂ ಸೋಲತಿದ್ದೆ. ನನಗ ಬೇಕಾದ್ದು-ನಾವು ಮಾಡಿದ್ದು ಕ್ರಾಂತಿಯೋ ಜಗಳವೋ ಅಂತ ಚರ್ಚಾ ಅಲ್ಲ. ನಮ್ಮ ಹೋರಾಟದ ಸತ್ಫಲ. ಉರಿನಿಂಗನ ಜೋಡಿ ಮಾತಾಡತೀನಿ. ಬೆಳಗಾವ್ಯಾಗ ನನಗೂ ಗೊತ್ತಿದ್ದವರಿದ್ದಾರ. ಕರಸ್ತೀನಿ, ಈಗ ಉರಿನಿಂಗನ್ನ ಕಳಸರಿ.

ಗುರುವಯ್ಯ : ಬರೀ ನಿನ್ನ ಮೂಗ ನೋಡಿಕೊಳ್ತೀಯಲ್ಲ, ಅದಕ್ಕ ನಾವೆಲ್ಲ ಎರಡೆರಡ ಕಾಣಸ್ತೀವಪಾ ನಿನಗ. ಎಂತೆಂಥಾ ಶಿಷ್ಯರ್ನ ಕಂಡೀನಿ. ನನ್ನ ಮಾತ ಕೇಳಿ ನಿಶೆ ಆಗೋ ಶಿಷ್ಯರಿದ್ದಾರ. ನಿಶೆ ಆದವರರ್ಹಾಂಗ ಹಗಣಾ ಮಾಡೋ ಶಿಷ್ಯರೂ ಇದ್ದಾರ. ಆದರ ನಾ ಹೆದರೋದು ಹಗಣಾ ಮಾಡತಾರಲ್ಲಾ-ಅವರಿಗೆ. ಭಿಡೇ ಬಿಟ್ಟ ಮಾತಾಡ್ತೀನಂತ ಸಿಟ್ಟಾಗಬ್ಯಾಡ. ಇಂಥಾವರಿಂದ ನಿನ್ನ ಜೀವಕ್ಕ ಹಾನಿ ಅದ. ಸುಮ್ಮನ ಸಹಿ ಹಾಕು. ಕಾರಭಾರಿ…

ಕಾರಭಾರಿ : ಎಪ್ಪಾ.

ಸಿದನಾಯ್ಕ : ಗುರುವಯ್ಯನವರs, ಖರೆ ಹೇಳ್ರಿ; ಹಜಾರ ಮಂದಿ ಪೋಲೀಸರು ಬರೋದು ಖಾತ್ರಿ ಏನು?

ಗುರುವಯ್ಯ : ಅದ್ಯಾಕ ಬೇಕೀಗ?

ಸಿದನಾಯ್ಕ : ಯಾಕಂದರ……
(ಗಪ್ಪನೆ ಕಾಗದ ಸಮೇತ ತನ್ನ ಬಳಿ ಬಂದ ಕಾರಭಾರಿಯ ಮೇಲೆ ಹಾರಿ ಕತ್ತು ಹಿಸುಕುತ್ತ)
ಖರೆ ಹೇಳ ಮಗನ, ದೇಸಾಯಿ ಸರಕಾರಕ್ಕ ಬರದ ಕಾಗದ ಬೆಳಗಾವಿಗಿ ಕಳಿಸಿದಿ?

ಕಾರಭಾರಿ : ಹೇಳ್‌……ಹೇಳ್‌…..ಎಪ್ಪಾ. ……

ಸಿದ್ದನಾಯ್ಕ : ಖರೆ ಬೊಗಳ.

ಕಾರಭಾರಿ : ಹೇಳ್‌ ಹೇಳತೀನೋ ಎಪ್ಪಾ.

ಸಿದನಾಯ್ಕ : ಸುಳ್ಳ ಹೇಳಿದರ ನಿನ್ನ ಮುಗಸ್ತೀನೀಗ-

ಕಾರಭಾರಿ : ಹೇಳತೀನೋ ಎಪ್ಪಾ…ಕಳಿಸಿಲ್ಲ. ಗುರುವಯ್ಯನವರು ಬ್ಯಾಡಾ ಅಂದ್ರು.(ಸಿದನಾಯ್ಕ ಕಾರಭಾರಿಯನ್ನು ಬಿಡುವನು. ಒಂಕಾರಿ ಕಣ್ನರಳಿಸಿಕೊಂಡು ಏಳುತ್ತಾನೆ. ಗುರುವಯ್ಯ ಕುರ್ಚಿಯಲ್ಲಿ ಕೂತು ವಿನೋದದಿಂದ ಇದನ್ನೆಲ್ಲಾ ಗಮನಿಸುತ್ತಿರುವನು, ಸಿದನಾಯ್ಕ ಗೆಲುವಾಗುತ್ತಾನೆ.)

ಸಿದನಾಯ್ಕ : ಈಗೇನಂತೀರಿ ಗುರುವಯ್ಯನವರ?

ಗುರುವಯ್ಯ : ಇಷ್ಟ ತಿಳಿಯೋದಕ್ಕ ಇಷ್ಟೊಂದ ಯಾಕ ತ್ರಾಸ ತಗೊಂಡಿ? ಕೇಳಿದ್ದರ ನಾನs ಹೇಳತಿದ್ದೆ.

ಸಿದನಾಯ್ಕ : ನೀವು ಹೇಳಿದ್ದರ ಮಾತಿನ ಸುತ್ತ ಕಸೂತಿ ತಗದು ಖರೆ ಮುಚ್ಚತಿದ್ದಿರಿ. ನನಗ ಸರಳ ಖರೆ ಬೇಕಿತ್ತು, ಸಿಕ್ಕಿತು. ಹಜಾರ ಮಂದಿ ಪೋಲೀಸರಂತ ನನ್ನ ಹೆದರಿಸಿದಿರಿ. ಮಂದೀನ ಹೆದರಿಸಿದರಿ. ಈಗ ಹೇಳ್ರಿ : ಖರೆ ಹಾದಿ ನಂದೋ? ನಿಮ್ಮದೋ? ಒಂಕಾರೀ.

ಒಂಕಾರಿ : ಆ?

ಸಿದನಾಯ್ಕ : ನಾಳಿ ಮುಂಜಾನೆ ಮಠದಾಗ ಮಂದೆಲ್ಲಾ ಕೂಡಬೇಕಂತ ಡಂಗರಾ ಸಾರಸು, ಈಗಿಂದೀಗ, ಓಡು.
(ಒಂಕಾರಿ ಓಡುವನು)

ಗುರುವಯ್ಯ : ಕಾರಭಾರೀ ಕಾಗದ ಕೊಡೊ.
(ಸಿದನಾಯ್ಕನಿಗೆ)
ಸಹಿ ಹಾಕು-

ಸಿದನಾಯ್ಕ : ನಿಮ್ಮ ಹರಿಕತಿ ಕೇಳಿ ನನಗ ನಿಶೇನೂ ಆಗೋದಿಲ್ಲ. ಆದವರರ್ಹಾಂಗ ಹಗಣಾ ಮಾಡೋದಕ್ಕೂ ಬರೋದಿಲ್ಲ. ದಯಾಮಾಡಿ ಉರಿನಿಂಗನ್ನ ಕಳಸರಿ.

ಗುರುವಯ್ಯ : ನಾ ಏನಂತ ನಿನಗಿನ್ನೂ ತಿಳದಿಲ್ಲಪಾ. ಸ್ವಾರ್ಥಕ್ಕಾಗಿ ಈ ಆಟ ಹೂಡಿದ್ದರ ನಾವೆಲ್ಲಾ ತಲಾ ಮುನ್ನೂರ ಎಕರೆ ತಗೊಂಡ ನಿನ್ನ ಹೆಸರಿಗೆ ಐನೂರ ಎಕರೆ ಯಾಕ ಬರಸ್ತಿದ್ದೆ? ಮ್ಯಾಲ ದೇಸಗತಿ ಯಾಕ ನಿನ್ನ ಪಾಲಿಗಿಡತಿದ್ದೆ?

ಸಿದನಾಯ್ಕ : ಯಾಕಂಧರ ಮಂದೀ ಕಣ್ಣಿಗಿ ಮಣ್ಣೆರಚಾಕ. ಜನ ನನ್ನ ಕೈಯಾಗಿದ್ದಾರಲ್ಲ, ಅದಕ್ಕ. ಗುರುವಯ್ಯನವರ ನೀವೀಗ ಏನ ಹೇಳಿದರೂ-ಖರೆ ಕೂಡ-ನನಗ ಸಂಶೆ ಬರತದ. ನೋಡ್ರೆಲ್ಲ; ಒಂದs ಒಂದ ಸಣ್ಣ ಸುಳ್ಳ ನನ್ನಿಂದ ಈ ಮಂದೀನ್ನ ಎಷ್ಟ ದೂರ ಇಟ್ಟಿತ್ತು! ಈಗ ಹೋಗಿ ಹಾದ್ಯಾಗಿದ್ದವರನ್ನೆಲ್ಲಾ ತಬ್ಬಿಕೊಳ್ಳೋಣ ಅಂತ ಅನಸ್ತದ. ಈ ಹೊತ್ತ ಚಂದ್ರ ಮೂಡಲಿ, ಬಿಡಲಿ ಹುಣಿವಿ ಆಚರಿಸೋಣ ಅಂತ ಅನಸ್ತsದ, ಏ ತಿಪ್ಯಾ, ಏ ಕರ್ಯಾ……

(ಇಬ್ಬರು ಬಂದೂಕಿನವರು ಬರುವರು)

ಈ ಕೂಡ್ಲೆ ಹೋಗಿ ಉರಿನಿಂಗನ್ನ ಕರಕೊಂಬ್ರಿ, ಗುರುವಯ್ಯನವರs ಉರಿನಿಂಗನ್ನ ಎಲ್ಲಿಟ್ಟೀರಿ? ಲಗು ಹೇಳ್ರಿ.

ಗುರುವಯ್ಯ : ಮಠದಾಗ.

ಸಿದನಾಯ್ಕ : ಮಠಕ್ಕ ಹೋಗಿ ಕರಕೊಂಬರ್ರಿ‍.
(ಅವರು ಸುಮನೆ ನಿಲ್ಲುವರು)
ಲಗು ಹೋಗ್ರಿ.
(ಇನ್ನೂ ಸುಮ್ಮನೇ ನಿಂತಿರುವರು)
ಹೋಗರೆಂತ ಹೇಳಲಿಲ್ಲಾ?
(ಅವರು ಇನ್ನೂ ಸುಮ್ಮನೆ ನಿಂತುದನ್ನು ಕಂಡು ಸಿದನಾಯ್ಕ ತಾಳ್ಮೆ ಗೆಡುತ್ತಿದ್ದಾಗಲೇ ಕೆಂಚ ಕಲ್ಲ ಇಬ್ಬರೂ ಕುಡುಗೋಲು ಹಿಡಿದುಕೊಂಡು ಮಾತಾಡದೆ ಸಿದನಾಯ್ಕನತ್ತ ಬರತೊಡಗುತ್ತಾರೆ. ಸಿದನಾಯ್ಕ ದಿಗ್ಭ್ರಾಂತನಾಗಿ ಗಾಬರಿಯಾಗುತ್ತಾನೆ. ಮಾತಿಲ್ಲದೆ ಹಿಂಜರಿಯತೊಡಗುತ್ತಾನೆ.)
ಏನಿದು ಗುರುವಯ್ಯನವರs?

ಗುರುವಯ್ಯ : ಜನ ಬಂದಾರ ಎದುರ್ಗೊಳ್ಳಪಾ! ಕಾರಭಾರೀ ಕಾಗದ ಕೊಡೊ

ಸಿದನಾಯ್ಕ : (ಚೀರಿ)
ಇದು ಸಾಧ್ಯವಿಲ್ಲಾ ಅಂದೆ!

ಗುರುವಯ್ಯ : ಸಂತರಂದರ ಈ ಮಂದಿಗಿ ಆಗೋದಿಲ್ಲಪಾ. ಹೇಳಿಕೇಳಿ ನರಮನುಷ್ಯರು. ಇಲ್ಲಾ ಈ ಪಾಪ ಮಾಡತಾರ, ಇಲ್ಲಾ ಆ ಪಾಪ ಮಾಡತಾರ. ಒಬ್ಬ ಪಾಪ ಮಾಡಿದಂದರ ಈ ಮಂದಿ ಸಿಟ್ಟಿಗೇಳ್ತಾರಂದೀ, ನೋಡಿ ನಗತಾರ. ಯಾಕಂದರ ಅವನ ಪಾಪದೊಳಗ ಇವರದೂ ಪಾಲ ಲಿರತದ. ಯಾಕಂದರ ಪಾಪದ ತುದೀಗಿ ಖರೆ ಇರತದಂತ ಇವರಿಗ್ಗೊತ್ತದ. ಅದs ನಿನ್ನೋಡು : ಪಾಪ ಮಾಡೋದ ಬಂತಂದರ ದೂರ ಓಡೇನಂತಿ. ಅದಕ್ಕ ಈ ಜನ ನಿನ್ನ ನಂಬೋದಿಲ್ಲ. ಪಾಪ ಮಾಡಿ ಕೈ ಹೊಲಸಾಗತದಲ್ಲ ಕಲೈ ತೋರಸು-ನನ್ನ ನಂಬತಾರ ಹೊಗಳತಾರ, ಬಯ್ಯತಾರ, ಪ್ರೀತಿಸ್ತರ, ಬೆನ್ನ ಹತ್ತತಾರ. ಇಲ್ಲದಿದ್ದರ ಕೆಂಚಗ, ಕಲ್ಲಗ ನಿನ್ನ ಮ್ಯಾಲ ಸಂಶೆ ಯಾಕೆ ಬರಬೇಕ್ಹೇಳು.

ಸಿದನಾಯ್ಕ : ಜನ ಅಂಧರ ಕೆಂಚ, ಕಲ್ಲ ಇಬ್ಬರs ಉರಿನಿಂಗನೂ ಇದ್ದಾನ.

ಗುರುವಯ್ಯ : ಇದs ನಿನ್ನ ಕಡೀ ಮಾತೇನು?

ಸಿದನಾಯ್ಕ : ಹೌದು.

ಗುರುವಯ್ಯ : ಉರಿನಿಂಗನ್ನ ನಂಬತಿ, ನನ್ನ ನಂಬೋದಿಲ್ಲಲ್ಲ? ಹೇಳು ನಮ್ಮಿಬ್ಬರೊಳಗ ನಿನಗ ಯಾರ ಬೇಕು?

ಸಿದನಾಯ್ಕ : ಆರಿಸಿಕೊಳ್ಳೋ ಮಾತs ಇಲ್ಲ. ಖರೇತನದಿಂದ ನಡೆಯೋದಷ್ಟs ನಮಗುಳದ ಹಾದಿ.

ಗುರುವಯ್ಯ : ಅಂದರ ನಾ ಹೇಳಿದ್ದ ಖೊಟ್ಟಿ ಹೌದಲ್ಲ?

ಸಿದನಾಯ್ಕ : ನಿಮಗ ನೋವಾದರ ಕ್ಷಮಿಸಬೇಕು; ಹೌದು.

ಗುರುವಯ್ಯ : ಕಡೀಮಾತಿದು; ನಿನ್ನ ಹಾದಿ, ಅಂದರ ಉರಿನಿಂಗನ ಹಾದಿ ಖರೇತನದ್ದಂತ ತೋರಸ್ತೀಯೇನು?

ಸಿದನಾಯ್ಕ : ತೋರಸಬಲ್ಲೆ.

ಗುರುವಯ್ಯ : ಹಾಮಗಿದ್ದರ ನೋಡ; ನಾಳಿ ಮುಂಜಾನೆ ಹೆಂಗೂ ಸಭಾ ಕರದ್ದೀಯಲ್ಲ; ಚಿನ್ನಿ ಎಂಥಾ ಶುದ್ಧ ಹೆಂಗಸಂತ ನಿನಗ ಗೊತ್ತದ. ದೇಸಾಯಿಗಿ ಒಳಗಾಗಿಲ್ಲ. ನಿನ್ನ ಮುಟ್ಟಿಲ್ಲ. ಹಾಂಗs ಉರಿನಿಂಗ ಏನಂತ ಗೊತ್ತದ. ಗೊತ್ತಿರಾಕಲs ಬೇಕು, ಯಾಕೆಂದರೆ ನೀವಿಬ್ಬರೂ ಸಂತರ ತಳಿಯವರು. ಉರಿನಿಂಗ ಚಿನ್ನೀನ ತಿರಿಗಿ ಕರಕೊಂಡ ಮೊದಲಿನ್ಹಾಂಗ ಬಾಳ್ವೆ ಮಾಡಲಿ.ನೀ ಹೇಳಿಧಾಂಗ ಕೇಳ್ತೀವಿ. ಇಲ್ಲದಿದ್ದರ ನಾವ ಹೇಳಿಧಾಂಗ ನೀ ಕೇಳಬೇಕು. ತಯಾರಿದ್ದೀಯೇನು?

ಸಿದನಾಯ್ಕ : ಏನ ಮಾತಿದು?

ಗುರುವಯ್ಯ : ಯಾಕ, ಚಿನ್ನಿ ಶುದ್ಧ ಹೆಂಗಸಲ್ಲಂತೀಯೇನು?

ಸಿದನಾಯ್ಕ : ಶುದ್ಧ ಹೆಂಗಸ ಹೌದು.

ಗುರುವಯ್ಯ : ಹಾಂಗಾದರ ಉರಿನಿಂಗನ್ನ ಒಪ್ಪಸು. ಒಂದ ಚೆಲೋ ಕೆಲಸ ಆಗಲಿ. ಇಲ್ಲದಿದ್ದರ ಈ ಮಂದೀನ್ನ ಹಿಡಿಯೋದ ಕಷ್ಟ. ನಿನ್ನ ಕ್ರಾಂತಿ ಹಣ್ಣಾಗಬೇಕಾದರ ಒಪ್ಪಸು, ಇಲ್ಲಾ ಜೀವಾಕೊಡು.
(ಕೆಂಚ, ಕ್ಲಲ, ಈಗ ಅವರ ಹಿಂದೆ ಬಂದೂಕಿನವರು ಸಿದನಾಯ್ಕನತ್ತ ಮುಂದುವರಿಯತೊಡಗುತ್ತಾರೆ. ಸಿದನಾಯ್ಕ ಹಿಂಜರಿಯುತ್ತ ಮೂಲೆಗೊರಗುತ್ತಾನೆ. ಅವರೆಲ್ಲ ಇನ್ನೇನು ತೀರ ಸಮೀಪ ಬಂದಾಗ-)

ಸಿದನಾಯ್ಕ : ಒಪ್ಪಸ್ತೀನಿ.
(ಎಲ್ಲರೂ ಹಿಂದೆ ಸರಿಯುವರು. ಗುರುವಯ್ಯ ಜೈ ಸಿದನಾಯ್ಕ ಎಂದು ಹೇಳಿ ಹೊರಡುತ್ತಾನೆ. ಎಲ್ಲರೂ ಬೆನ್ನು ಹತ್ತುತ್ತಾರೆ. ಸಿದನಾಯ್ಕ ಎಲ್ಲ ಘಟನೆಗಳಿಂದ ಬೆಚ್ಚಿ ಅಲ್ಲಿಯೇ ನಿಂತಿದ್ದಾನೆ. ಒಂಕಾರಿ ಖಿನ್ನನ್ಆಗಿ ನಿಧಾನವಾಗಿ ಬರುತ್ತಾನೆ.)

ಒಂಕಾರಿ : ನಾ ಊರ ಬಿಟ್ಟ ಹೊಗತೀನಿ.

ಸಿದನಾಯ್ಕ : ಚಿನ್ನೀನ ಹುಡಿಕ್ಕೊಂಡ ಬಾ ಹೋಗು.

ಒಂಕಾರಿ : ನಾ ಒಲ್ಲೆ.

ಸಿದನಾಯ್ಕ : (ಚೀರುತ್ತ)
ಹಾಂಗಿದ್ದರ ನನ್ನ ಹೆಣಕ್ಕ ಮಣ್ಣ ಕೊಟ್ಡ ಹೋಗು.

ಒಂಕಾರಿ : (ಅಳುತ್ತ)
ನಿಂದ್ಯಾಕ, ನನ್ನ ಹೆಣಕ್ಕ ಮಣ್ಣ ಕೊಡು.
(ಹೊರಡುವನು)

ಸಿದನಾಯ್ಕ : ಎಲ್ಲಿ ಹೊಂಟಿ?

ಒಂಕಾರಿ : ಚಿನ್ನೀನ ಕರಕೊಂಬರತೀನಿ.
(ಹೋಗುವನು, ಸಿದನಾಯ್ಕ ಹಾಗೇ ನಿಂತಿದ್ದಾನೆ)