(ಮಠದಲ್ಲಿ ಜನ ಚಿಂತಾಮಗ್ನರಾಗಿ ಕೂತಿದ್ದಾರೆ. ದೂರದಲ್ಲಿ ಕಾಗೆ ಕೂಗುತ್ತಿರುವ ಸದ್ದು, ಯಾರೂ ಮಾತಾಡುತ್ತಿಲ್ಲ. ಒಂಕಾರಿ ಹಲಗೆ ಹಿಡಿದುಕೊಂಡು ಅವಮಾನಿತನಾದಂತೆ ಬರುತ್ತಾನೆ. ಅವನ ಹಿಂದೆ ಚಿನ್ನಿ ಇದ್ದಾಳೆ)

ಒಂಕಾರಿ : ಎಲೀ ಇವರಾಪ್ಪನ್ನ! ಏನ ಮಂದಿ ಇದಾ? ನೀವೆಲ್ಲಾ ಹಾರ್ಯಾಡಿ ಕುಣೀತಿರಬೇಕಂತ,-ನೋಡ್ರಿಲ್ಲೆ ಬಾರಸಾಕ ಹಲಗಿ ತಗೊಂಬಂದೆ. ಏನಾಗೇತಿ, ಏಳ್ರೋ ಏ-
(ಎಲ್ಲರೂ ಸುಮ್ಮನಿರುವರು)
ಎಲೀ ಇವರ! ಏ ಸೀಪ್ಯಾ ನಾ ಇಂದ ಮುಂಜಾನೆ ಆಸ್ಪತ್ರಿಂದ ಬಂದೆ,
‘ಯಾವಾಗ ಬಂದಿ’ ಅಂತ ಯಾರೂ ಕೇಳವೊಲ್ರಿ.

ಸೀಪು : (ಎದ್ದು ಒಂಕಾರಿಯ ಹತ್ತಿರ ಹೋಗಿ)
ಒಂಕಾರಿ, ಆಸ್ಪತ್ರಿಂದ ಯಾವಾಗ ಬಂದಿ?

ಒಂಕಾರಿ : ಮುಂಜಾನೆ ಬಂದೆ.

ಸೀಪು : ಹೌಂದು?
(ಹೋಗಿ ಸ್ವಸ್ಥಾನದಲ್ಲಿ ಸುಮ್ ಮನೆ ಕೂರುವನು)

ಒಂಕಾರಿ : ಮತ್ತ ಗಪ್ಪಾದರಲ್ಲೋ! ಮಕ್ಕಳ್ರಾ, ಸಿದನಾಯ್ಕ ಇಂದ ಎಲ್ಲಾರಿಗು ಭೂಮೀ ಹಂಚತಗಾನ, ಕುಣದಾಡಿ ಹಬ್ಬಾ ಮಾಡೋದ ಬಿಟ್ಟೀರಿ, ಅರ್ಧಾ ಸುಟ್ಟ ಹೆಣಧಾಂಗ ಕುಂತೀರಿ! ಏಳೊ ಏ ಪಕೀರಾ…..

ಪಕೀರ : ದೇವರ ನಮ್ಮ ಹಣ್ಯಾಗ ಹೊಲ ಬರದಿಲ್ಲಪಾ.

ಒಂಕಾರಿ : ಮಕಗನ, ಸಿದನಾಯ್ಕ ಆಡಿದ್ದ ಮಾಡತಾನ, ಮಾಡಿದ್ದ ಆಡತಾನ. ನಿಮತ್ಯಾಕ ಒಣ ಚಿಂತಿ ಏಳ್ರೆಲೇ-

ಗಿರಮಲ್ಲ : ಅವ ಕುಡದ್ದಾನ, ಯಾಕ ತಡವತೀಯೋ?

ಒಂಕಾರಿ : ಯಾರ ಕುಡದ್ದಾರಲೇ ಮಗನ?

ಗಿರಮಲ್ಲ : ಕುಡದವಗ ಕುಡದ್ದೀ ಅಂದರ ಭಲೆ ಸಿಟ್ಟ ಬರತೈತ್ರೆಪಾ,
(ಒಂಕಾರಿಗೆ)

ಹೌಂದೋ ಒಂಕಾರಿ, ನೀ ಅಲ್ಲ, ನಾವs ಕುಡದ್ದೀವಾತ?

ಒಂಕಾರಿ : ಎಲೀ ಇವನಾಪ್ಪನ! ನಾ ಕುಡದಿಲ್ಲಂದರ ನೀವು ಕುಡಧಾಂಗೇನ್ರೊ?

ಇರಪ : ಯಾರರೆ ಒಬ್ಬರ ಕುಡದ್ದಾರಂದರ ಆತ ಬಿಡ್ರೊ.

ಒಂಕಾರಿ : ನಾನs ಕುಡದ್ದೇನಾತ? ಈ ನನ್ನ ಮಕ್ಕಳಿಗೇನಾಗೇತಿ, ಏನಾಗೇತಿ? ತಿಳಕೋ ಬೇಕಂತೀನಿ ಯಾರ ತಿಳಸ್ತೀರಿ?
ಯಾರ ತಿಳಸ್ತೀರಿ?

ಪಕೀರ : ಒಂಕಾರೀ ನೀ ಇಷ್ಟ ದಿನ ಆಸ್ಪತ್ಯ್ರಾಗ ಇದ್ದಿ, ನೀ ಬರೂದರಾಗ ಈ ಊರಾಗ ಏನೇನೋ ಆಗೇತಿ, ನಿನಗೊಂದೂ ಗೊತ್ತಿಲ್ಲ. ಎಲ್ಲಾ ಬಲ್ಲವರ್ರ‍ಹಾಂಗ ಯಾಕೆ ಬಾಯಿಬಿಡತಿ ? ಕುಂದರಬಾರದs ನಮ್ಹಾಂಗ ಹಲ್ಲಾಗ ನಾಲಿಗಿ ಇಟಗೊಂಡ?

ಸೀಪು : ನಾ ಹೇಳ್ತೇನೆ ತಗೀರೊ, ಪಾಪ ಇಂದs ಬಂದಾನವ. ಒಂಕಾರಿ ನೀ ಸಾಕ್ಷಿ ಹೇಳೊ : ದೇಸಾಯೀನ್‌ನ ಯಾರ ಕೊಂದರೊ?

ಒಂಕಲಾರಿ : ಎಲ್ಲಾರು ಕೊಂದಿರಿ.

ಇರಪ : ಹೌಂದ? ಇವನೂ ಹಾಂಗs ಹೇಳತಾನ!

ಗಿರಮಲ್ಲ : ನೀನೂ ನಮ್ಮ ವೈರಿ ಹಾಂಗ ಆಡತೀಯಲ್ಲೊ!

ಒಂಕಾರಿ : ಅವ್ಯಾರಪಾ ನಿಮ್ಮ ವೈರಿ?

ಪಕೀರ : ನೀನs.

ಒಂಕಾರಿ : ಯಾಕ?

ಪಕೀರ : ದೇಸಾಯೀನ ನೀನs ಕೊಂದಿ ಅಂತ ಪೋಲೀಸರ ಮುಂದ ಜವಾಬ ಹೇಳ್ತೀಯೇನ? ಹೇಳದಿದ್ದರ ನಮ್ಮ ವೈರಿ.

ಒಂಕಾರಿ : ಪೋಲೀಸರಾ? ಅವರ್ಯಾಕ ಬರತಾರ?

ಸೀಪು : ಏ ಒಂಕಾರಿ, ಸಾಯೋ ಮೊದಲ ದೇಸಾಯಿ ಸರಕಾರಕ್ಕ ಒಂದ ಕಾಗದ ಬರದಿದ್ದಂತ ಖರೇನೊ? ಸುಳ್ಳೊ?

ಒಂಕಾರಿ : ಬರದಿದ್ದ ಹೌಂದು.

ಸೀಪು : ಏನೇನ ಬರದಿದ್ದಾ?

ಒಂಕಾರಿ : ಊರಾಗ ನಕ್ಸಲೈಟ ಮಂದಿ ಬಂದಾರ; ಹಜಾರ ಮಂದಿ ಪೋಲೀಸರ್ನ ಕಳಸ್ರಿ ಅಂತ ಬರದಿದ್ದ.

ಸೀಪು : ಹಜಾರ ಮಂದಿ ಪೋಲೀಸರ ಬರತಾರ. ನಾನs ಪೋಲೀಸ ಇನ್‌ಸ್ಪೆಕ್ಟರಂತಗ ತಿಳಕೊ, ಕೇಳತೀನಿ : ದೇಸಾಯೀನ ಯರ ಕೊಂದರೊ ಒಂಕಾರಿ?

ಒಂಕರಿ : ಎಲ್ಲಾರು ಕೊಂದಿವಿ-

ಸೀಪು : ‘ಹಂಗಾದರ ಊರಾಗಿನ ಎಲ್ಲಾರಿಗು ಬೇಡಿ ಹಾಕರಿ. ಒದ್ದ ತುರಂಗದಾಗ ಒಗೀರಿ’ ಅಂತಾನ, ಒಗೀತಾರ. ನಿನ್ನ ಕನಸ ಕೇಳಾಕ ಊರಾಗ ಯಾರೂ ಉಳಿಯೋದಿಲ್ಲ, ಅಮ್ಯಾಲ!

ಒಂಕಾರಿ : ಹೌಂದರ್ಯೋ; ನೀವೇನ ತಪ್ಪ ಮಾಡೀರೆಂತ ಪೋಲೀಸರ ಬರತಾರ?

ಗಿರಮಲ್ಲ : ಏ ಹುಚ್ಚಾ, ಅದೆಂಥಾದೋ ಕ್ರಾಂತಿ ಅಂತೀರಲ್ಲ, ಅದೆಂದಾದರು ಕಾಯ್ದೆಶೀರ ಇರತೈತೇನೊ?

ಒಂಕಾರಿ : ಇಷ್ಟೆಲ್ಲಾ ಸಿದನಾಯ್ಕಗೆ ಗೊತ್ತಿಲ್ಲಂದಿ?

ಪಕೀರ : ಹಾಂಗಂತ ಯಾವ ಬಾಯ್ಲೆ ಹೇಳೋಣಪಾ? ನಿಮ್ಮ ನಿಮ್ಮ ಹೊಲಾ ಅಂತ ಎಲ್ಲಾರಿಗು ಸ್ಟಾಂಪ್‌ ಹಚ್ಚಿ ಕಾಗದಾ ಕೊಡತಾರ. ಸೈ ಮಾಡರಿ ಅಂತಾರ. ಬುದ್ದಿಗೇಡಿ ಮಂದಿ ಸೈ ಹಾಕತೀವಿ, ಪೋಲೀಸರ ಬಂದಾಗ ಅವನೆಲ್ಲಾ ಕೊಇಟ್ಟ ‘ಇಷ್ಟು ಮಂದಿ ಕೊಂದಾರ ನೋಡ್ರಿ’ ಅಂತ ಹೇಳತಾರ ಅಷ್ಟs.

ಒಂಕಾರಿ : ಏನ ತಲೀ ಓಡಿಸೀಯೋ ಪಕೀರಾ? ಆ ಕಾಗದ್ದಾಗ ಏನ ಬರದೈತಂತ ನೀ ಓದು, ಅವ ಓದಲಿ, ಬರಿ ಬಲ್ಲವರು ಓದಿ ಹೇಳ್ರಿ.

ಇರಪ : ಹೌಂದೊ, ಇಷ್ಟಮಂದಿ ಭೂಮೀ ಹಂಚಿಕೊಂಡಾರಂದ ಮ್ಯಾಲ ಇವರs ಕೊಂದವರಂತ ಬ್ಯಾರೇ ಸಾಕ್ಷಿ ಬೇಕ?

ಒಂಕರಿ : ಅಲ್ರೊ, ಸಂಕಟದಾಗಿದ್ದಿರಿ, ಸಿದನಾಯ್ಕ ಬೇಕಾದ. ದೇಸಾಯಿ ಸತ್ತ; ತಿನ್ನಾಕ ಕಾಳ ಸಿಕ್ತು, ಇನ್ನೇನ ಚೆಲೋ ದಿನ ಬಂದಾವಂದರ-ಈಗ ನಿಮ್ಮ ಮಾತ ನೀವs ಕೇಳವೊಲ್ಲಿರಿ. ಸಿದನಾಯ್ಕನೂ ಕಾಯ್ದೆ ಕಾನೂನ ಓದ್ಯಾನ. ಅವಗೂ ಗೊತ್ತಾಗಲಿಲ್ಲಂತ ತಿಳಿ; ಎಲ್ಲಾರು ಕೂಡಿ ಹಾದಿ ಹುಡಕರಿ.

ಪಕೀರ : ಆಗಲೇ ಹುಡಿಕೀವಪಾ.

ಒಂಕಾರಿ : ಅದೇನಪಾ?

ಪಕೀರ : ಆ ಭೂಮಿ ನಮ್ಮ ಹೆಸರಿಗಿ ಬ್ಯಾಡಪಾ.

ಒಂಕಾರಿ : ಆ ಉರಿನಿಂಗ ಚಿನ್ನೀನ ಕರಕೊಳ್ಳೋದಿಲ್ಲಂತಾನ, ನೀವ ಭೂಮಿ ಬ್ಯಾಡ ಅಂತೀರಿ. ಏನ್ರೊ ಇದು ? ಅಲ್ರೊ, ಇಂಥವರು ದೇಸಾಯಿನ್ನ ಯಾಕ ಕೊಂದಿರಿ?

ಸೀಪು : (ಮುಂದೆ ಬಂದು)

ನಾ ಹೇಳ್ತೀನಿ ತಡೀರೋ : ಈ ಮಾತಿಗಿ ಎರಡ ಜವಾಬ ಅದಾನೇನಪಾ. ಒಂದ ನಿನಗ ಹೇಳೋದು, ಇನ್ನೊಂದ ಪೋಲೀಸರಿಗಿ ಹೇಳೋದು. ನಿನಗ ಹೇಳಲೇನು? : ಅಪಾಲ, ಹೌಂದ. ದೇಸಾಯೀನ್ನ ನಾವs ಕೊಂದಿವಿ, ತಪ್ಪಾತು, ಕಾಲ ಹಿಡಿಯೋಣೇನು? ಪೋಲೀಸರಿಗಿ ಹೇಳೋ ಜವಾಬ ಹೇಳಿ? ದೇಸಾಯೀನ್ನ ನಾವ ಕೊಂದಿಲ್ಲ, ಯಾರೋ ಕೊಲ್ಲಿಸಿದರು!

ಒಂಕರಿ : (ಆಘಾತಹೊಂದಿ ಜೋರಾಗಿ ಎಲ್ಲರಿಗೂ ಕೇಳಿಸುವಂತೆ)

ಏನ್ರೆಪಾ, ಈ ಮಾತಿಗಿ ನಿಮ್ಮದೆಲ್ಲಾ ಕಬೂಲಿ ಐತಿ? ಒಳಗೊಳಗs ದುಸಮುಸಿ ಬ್ಯಾಡ. ಏನಂಬೂದ ಭಿಡೇ ಬಿಟ್ಟ ಹೇಳ್ರಿ……

ಸೀಪು : ಇವನಾಪ್ಪನ೧ ನಾ ಇವರ ವೈರಿ ಅಂಬವರ್ಹಾಂಗ ಆಡತೀಯಲ್ಲೊ! ಸಿದನಾಯ್ಕನ್ನ ಬಿಟ್ಟ ನೀವೆಲ್ಲಾ ನನ್ನ ಬೆನ್ನ ಹತ್ತರೆಂತ ಹೇಳಿದ್ನೇನು? ಕಾಯ್ದೆಶೀಋ ಹಿಂಗಿಂಗ ಆಗತೈತಿ, ಏನಾರ ಹಾದೀ ಹುಡಕರಿ ಅಂತ ಹೇಳಿದೆ-ಅಷ್ಟ. ಸಿದನಾಯ್ಕಂದರ ನಿಮ್ಮಷ್ಟs ನನಗೂ ಭಕ್ತಿ ಐತಿ! ಅಷ್ಟಾಗಿ ನನಗ ಹಿಂಗ ತಿಳೀತಪಾ, ನಾ ಭೂಮೀ ಒಲ್ಲೆ. ನಿಮಗ ಬೇಕಿದ್ದರ ತಗೋರೆಲ್ಲ. ಕಾ, ನಾ ಹೋಗತೀನಾತ : (ಹೋಗುವನು)

ಇರಪ : ಏ ಏ, ತಡೀಯೋ ಸೀಪು…..
(ಇವನೂ ಬೆನ್ನು ಹತ್ತಿ ಹೋಗುವನು)

ಒಂಕಾರಿ : ಏ ಏ…ಯಾಕ್ರೊ ಯಾಕ್ರೊ? ಏ……

ಪಕೀರ : ಯಾಕ ಹೇಳಲಿ? ಉರಿನಿಂಗ ಚಿನ್ನೀನ ಯಾಕ ಕರಕೋಲಿಲ್ಲ?

ಒಂಕಾರಿ : ಯಾಕಂದರ?

ಪಕೀರ : ಅದಕ್ಕ,
(ಹೋಗುವನು. ಅವನ ಬೆನ್ನು ಹತ್ತಿ ಎಲ್ಲರೂ ಹೋಗುವರು. ಒಂಕಾರಿ ಹೋಗುತ್ತಿರುವ ಪ್ರತಿಯೊಬ್ಬನಿಗೆಅಲ್ಲೊ ನನ್ನ ಮಾತ ಕೇಳಿಲ್ಲೆಎಂದು ಹೇಳಿ ತಡೆಯಲು ಪ್ರಯತ್ನಿಸುವನು. ಯಾರೂ ನಿಲ್ಲುವುದಿಲ್ಲ. ಒಂಕಾರಿ ಖಿನ್ನನಾಗುವನು. ಚಿನ್ನಿ ವಿಷಣ್ಣಳಾಗಿ ಒಂದು ಮೂಲೆಗೆ ಕೂರುವಳುಲ. ಸಿದನಾಯ್ಕ, ಅವನ ಹಿಂದಿನಿಂದ ಗುರುವಯ್ಯ ಬರುವರು. ಎಲ್ಲರೂ ಹೋದುದನ್ನು ನೋಡಿ ಸಿದನಾಯ್ಕ ಚಕಿತನಾಗುವನು)

ಸಿದನಾಯ್ಕ : ಏನ್ರೀ ಗುರುವಯ್ಯನವರs ಇದು! ನನ್ನ ನೋಡಿದ ಕೂಡ್ಲೆ ಜನ ಎದ್ದಹೋದರಲ್ಲ!
ಪಂಚರ್ಯಾಕ ಬಂದಿಲ್ಲ! ಕೆಂಚ ಬಂದಿಲ್ಲ, ಕಲ್ಲ ಬಂದಿಲ್ಲ, ಉರಿನಿಂಗಿಲ್ಲ, ಒಂಕಾರೀ,-

ಒಂಕರಿ : ಈ ಮುಂದೀನ ಒಂದ ಕಡೆ ಕೂಡಸೋದ ಹೆಂಗಸಿನಿಂದಲೂ ಶಕ್ಯಿಲ್ಲ

ಸಿದನಾಯ್ಕ : ಒಂಕಾರೀ ಹೋಗಿ ಪಂಚಿರನೆಲ್ಲಾ ಕರಕೊಂಬಾ ಹೋಗು, ಲಗು.

ಒಂಕಾರಿ : ಕರತಂದೇನು, ಮೊದಲ ಈ ಚಿನ್ನೀದೊಂದನ್ನ ಬಗೀಹರಸಪಾ.

ಸಿದನಾಯ್ಕ : ಬಗೀಹರಸಾಕ ಚಿನ್ನೀದೇನ ಜಗಳ ಬಂದೈತೀಗ?
ಒಂಕಾರಿ : ಇನ್ನs ಮನಿ ಸೇರಿಲ್ಲ. ಆಸ್ಪತ್ರಿಂದ ಬಂದ ಮನೀಗಿ ಹೋಗಬೇಕಂದರ ಉರಿನಿಂಗ ಕರಕೋಲಿಲ್ಲ. ಮನೀ ಇಲ್ಲ, ಮರಿಲ್ಲ, ನನ್ನಂಗ ಬೇಕಾಬಿಟ್ಟಿ ಅಡ್ಡಾಡಂದಿ?

ಸಿದನಾಯ್ಕ : ಅದ್ಯಾವ ದೊಡ್ಡ ಮಾತೊ? ನಾ ಉರಿನಿಂಗಗೆಲ್ಲಾ ಹೇಳತೀನಿ. ನೀ ಹೋಗಿ ಮೊದಲ ಪಂಚರ‍್ನ ಕರತಾ ಹೋಗು.
(ಒಂಕಾರಿ ಏನು ಮಾಡಬೇಕೆಂದು ತೋಚದೆ ಹೋಗುವನು)

ಗುರುವಯ್ಯ : ಸಣ್ಣ ಮಾತಲ್ಲಪಾ ಇದು. ಇದ ಬಗೀಹರದರ ಉಳದದ್ದೆಲ್ಲಾ ಬಗೀಹರಧಾಂಗ, ಯಾಕಂದರ ಜನಾನೊ, ದನಾನೊ! ಇಂಥಾ ಮುಂದೀನ ಮುಂದಿಟ್ಟಕೊಮಡ ಏನ ಮಾಡಾಕೂ ಆಗೋಣಿಲ್ಲ.

ಸಿದನಾಯ್ಕ : ನೀವೇನ ಹೇಳತೀರಿ, ತಿಳೀವೊಲ್ದು. ಜನ ಜನ ಅಂತೀರಿ. ನನಗ ತಿಳೀದ ಜನ ನಿಮಗೆಷ್ಟ ತಿಳಿದಾರು?

ಗುರುವಯ್ಯಾ : ನಾನೂ ಅದನ್ನs ಕೇಳಬೇಕಂತಿದ್ದೆ; ಜನ ನಿನಗೆಷ್ಟ ತಿಳ್ದಾರ? ಕ್ರಾಂತಿ ಮಾಡಿದಿ, ದೇಸಾಯಿನ್ನಾ ಕೊಂದಿ. ಈ ಮಂದಿಗೆಲ್ಲಾ ಖುಶಿ ಆಗೋ ಬದಲು ಗಾಬರಿ ಆಗ್ಯದ ಅಂತ ನಿನಗ ತಿಳದsದ ಏನು? ತಿಳೀದಿದ್ದರ ಈ ಮಂದೀನ್ನ ನೀ ಎಷ್ಟ ತಿಳಕೊಂಡಿ?

ಸಿದನಾಯ್ಕ : ಗಾಬರಿ? ಯಾರು, ಯಾರಿಗೆ, ಯಾಕ ಗಾಬರಿ ಆಗಬೇಕುಕ?

ಗುರುವಯ್ಯ : ಯಾಕಂದರ ಹಳೀ ಮುಳ್ಳ ಹಾಂಗs ಉಳದsದ ಅದಕ್ಕ. ಯಾರಿಗಂದರ ಸರಕಾರಕ್ಕ. ಯಾರು ಗಾಬರಿ ಆಗಬೇಕಂದರ ನೀನು ಮತ್ತು ನಿನ್ನ ಜನ.

ಸಿದನಾಯ್ಕ : ಬರೋಬರಿ ಹೇಳ್ರಿ, ನಾನು ನನ್ನ ಜನ ಸರಕಾರಕ್ಕ ಯಾಕ ಹೆದರಬೇಕು?

ಗುರುವಯ್ಯ : ಮರತಿರಬಹುದು; ದೇಸಾಯಿ ಸಾಯೋ ಮುಂಚಿನ ದಿನ ನಿನಗ ಭೇಟಿ ಆಗಿದ್ದ,

ಹೌದ?

ಸಿದನಾಯ್ಕ : ಹೌದು.

ಗುರುವಯ್ಯ : ನೀ ಅಲ್ಲಿದ್ದಾಗs ಸೈ ಮಾಡಿ ಕಾರಭಾರಿಗಿ ಒಂದ ಕಾಗದ ಕೊಟ್ಟ, ಹೌದ?

ಸಿದನಾಯ್ಕ : ಹೌದು.

ಗುರುವಯ್ಯ : ಅಷ್ಟ.

ಸಿದನಾಯ್ಕ : ಏನ ಹಾಂಗಂದರ?

ಗುರುವಯ್ಯ : ಊರಾಗ ನಕ್ಸಲೈಟ ಮಂದಿ ಬಂದಾರ; ಹಜಾರ ಮಂದಿ ಪೋಲೀಸರನ್ನ ಕಳಸರಿ ಅಂತ ಸರಕಾರಕ್ಕೆ ಪತ್ರ ಬರದಿದ್ದ, ಅದು ಹೋಗಿ ಬೆಳಗಾವಿಗಿ ಮುಟ್ಯದ. ಅವರು ಯಾವಾಗ ಬರ್ತಾರೋ ಗೊತ್ತಿಲ್ಲ. ಬಂದರ ನೀ ಏನ ಜವಾಬ ಕೊಡ್ತಿ? ನಿನ್ನ ಜನ ಏನ ಜವಾಬ ಕೊಡತಾರ?

ಸಿದನಾಯ್ಕ : ನಿಮಗೂ ಗೊತ್ತದ ನಾವು ನ್ಯಾಯಕ್ಕಾಗಿ ಹೋರಾಡಿದಿವಿ-ಅಂತ.

ಗುರುವಯ್ಯ : ಅಲ್ಲಂದ್ನೇನು?

ಸಿದನಾಯ್ಕ : ಮತ್ತ ಯಾಕ ಸರಕಾರಕ್ಕ ಹೆದರಬೇಕು?

ಗುರುವಯ್ಯ : ಯಾಕಂದರ ಅವರ ಕಾನೂನು, ನಿನ್ನ ನ್ಯಾಯ ಒಂದ ಕಡೆ ಕೂಡೋದಿಲ್ಲ,
ಅದಕ್ಕ.

ಸಿದನಾಯ್ಕ : ಸರಕಾರದ ಹೆಸರ ಹೇಳಿ ಹೆದರಸ್ತಿರೇನ್ರಿ?

ಗುರುವಯ್ಯ : ಹೆದರದಿದ್ದರ ಅದು ನಿನ್ನ ದುರ್ದೈವ, ಈ ಮಂದಿ ದುರ್ದೈವ,

ಸಿದನಾಯ್ಕ : (ನಗುತ್ತ)

ಅಂದರ ನಿಮ್ಮ ತಲ್ಯಾಗಷ್ಟs ಬುದ್ಧಿ ಐತೆಂತ ತಿಳಕೊಬೇಕೇನು?

ಗುರುವಯ್ಯ : ಹೌದು, ನಿನ್ನ ತಲಿ ಬರೋಬರಿ ಇದ್ದರ.

ಸಿದನಾಯ್ಕ : ಖರೆ ಹೇಳ್ರಿ-ನಿಮಗೇನಾಗಬೇಕು?

ಗುರುವಯ್ಯ : ರೈತರಿಗೆ ಭೂಮಿ ಹಂಚ ಬ್ಯಾಡ.

ಸಿದನಾಯ್ಕ : ಹಂಚಿದರ?

ಗುರುವಯ್ಯ : ಸಿಗಬೀಳ್ತಿ ಅಷ್ಟ. ನಾ ನಿನ್ನ ವೈರಿ ಅಲ್ಲ. ಖರೇ ಹೇಳತೀನಿ : ನಾ ಮಾಡೋದೆಲ್ಲಾ ನಿನ್ನ ಹಿತಕ್ಕಾಗಿ. ಸಾರಾಸಾರ ಯಾಕ ವಿಚಾರ ಮಾಡವೊಲ್ಲಿ? ಭೂಮೀ ಹಂಚೋದಕ್ಕ ನಿನಗೇನ ಹಕ್ಕ ಆದ? ಸರಕಾರೀ ಕಾಗದ ಪ್ರಕಾರ ಭೂಮಿ ನಿನ್ನ ಹೆಸರಿಗಿಲ್ಲ. ಹಂಚೋ ಅಧಿಕಾರ ಇರೋದು ದೇಸಾಯಿಗೆ. ಅವ ಏನೂ ಹೇಳದs ಸತ್ತ. ಮಕ್ಕಳಿರಲಿಲ್ಲ. ಈಗ ಆ ಭೂಮಿ ಸರಕಾರದ್ದು. ಹಂಚೋದಕ್ಕ ನೀ ಯಾರ ಹೇಳು? ಹಜಾರ ಮಂದಿ ಪೋಲೀಸರು ಬರತಾರ. ಸರಕಾರಕ್ಕ ಬರೀತಾರ. ಸರಕಾರ ಬರತೈತಿ, ಭೂಮಿ ಹಂಚತೈತಿ.

ಸಿದನಾಯ್ಕ : ಸರಕಾರ ಹಂಚೋದಾದರ ಹಂಚಲಿ.

ಗುರುವಯ್ಯ : ಸರಕಾರ ಮಾತಾಡಿದರ ಬಡವರಿಗೊಂದ ತಿಳೀತದ, ಶ್ರೀಮಂತರಿಗೊಂದ ತಿಳೀತದ. ಸರಕಾರs

ಭೂಮಿ ಹಂಚಿದರ ನಿನ್ನ ಒಬ್ಬ ರೈತಗೂ ಒಂದ ಗೇಣ ನೆಲಾ ಸಿಗೋಣಿಲ್ಲ. ಇನ್ನೊಬ್ಬ ದೇಸಾಯ ಬರತಾನಷ್ಟ. ಬರಲಿ, ಅನ್ನೋಣ; ನಿನ್ನ ಮ್ಯಾಲ ಮರ್ಡರ ಕೇಸ ಹಾಕಿದರ ಏನ ಮಾಡತಿ? ಆಗ ಈ ಜನ ನಿನ್ನ ಬೆನ್ನ ಕಟ್ಟೋದಿಲ್ಲ. ಈಗ ನೀ ಕನ್ನಡೀ ಮುಂದ ನಿಂತ ಕೇಳಿಕೊಳ್ತಿ. ಕ್ರಾಂತಿ ಯಾಕ ಮಾಡಿದೆ?-ಅಂತ.

ಸಿದನಾಯ್ಕ : ಯಾಕ ಮಾಡಿದೆ?

ಗುರುವಯ್ಯ : ಇನ್ನೊಬ್ಬ ದೇಸಾಯಿ ಆಗೋದಕ್ಕ.

ಸಿದನಾಯ್ಕ : ಏನಂದಿರಿ?

ಗುರುವಯ್ಯ : ವ್ಯವಹಾರದ ಮಾತ ಹೇಳ್ತೀನಪಾ ,-ಭೂಮೀ ಎಲ್ಲಾ ಈ ಕೂಡ್ಲೆ ನಿನ್ನ ಹೆಸರಿಗಿ ಮಾಡಿಕೋ.

ಸಿದನಾಯ್ಕ : ಛೇ ಛೇ-ಅಧೆಂಗ ಸಾಧ್ಯ?

ಗುರುವಯ್ಯ : ಯಾಕಿಲ್ಲ? ದೇಸಾಯಿಗಿ ಹೆಂಗೂ ಮಕ್ಕಳಿರಲಿಲ್ಲ. ನಿನ್ನ ದತ್ತಕ ತಗೊಂಡಿದ್ದ ಅಂತ ನಾ ಮಾಡಸಬಲ್ಲೆ.

ಸಿದನಾಯ್ಕ : ಛೇ ಛೇ-ಅಧೆಂಗ ಸಾಧ್ಯ?

ಗುರುವಯ್ಯ : ಹಿಂಗ : ಕಾರಭಾರಿ ಇನ್ನೂ ಜೀವಂತ ಇದ್ದಾನ. ಅವ ಏನೇನೂ ಗುರುತ ಸಿಗಧಾಂಗ ದೇಸಾಯೀ ಸಹಿ ಹಾಕಬಲ್ಲ. ಇಂದಿಗಿ ಒಂದ ತಿಂಗಳ ಹಿಂದಿನ ದಿನ-ಶುಕ್ರವಾರ ಅನ್ನೋಣೇನು?-ಆಯ್ತು,-ಹೋದ ತಿಂಗಳು ಶುಕ್ರವಾರ ನಕ್ಸಲೈಟ್‌ ಮಂದಿ ಬರತಾರಂತ ಪತ್ರ ಬರತೈತಿ, ಅದನ್ನೋದಿ ದೇಸಾಯಿಗಿ ಇದ್ದಕಿದ್ದಾಂಗ ಮಕ್ಕಳಿಲ್ಲದ ನೆನಪಾಗತದ. ಏನ ಮಾಡೋದು? ಊರ ಹಿರೇರು ಕೆಂಚ, ಕಲ್ಲ, ಉರಿನಿಂಗ-ಇವರ್ರೇ‍ನೆಲ್ಲಾ ಕರಿಸಿ-ಅಂತಾನ : ಏನ್ರೆಪಾ ದೇಸಗತಿಗಿ ಮಕ್ಕಳಿಲ್ಲ. ನನಗಂತೂ ಅಂತ್ಯಕಾಲ ಬಂತು. ದತ್ತಕ ತಗೊಳ್ಳೋಣಂತ ಮನಸ ಮಾಡೇನಿ, ಏನಂತೀರಿ? ಇವರೆಲ್ಲಾ ಹೌದಂತಾರ.
‘ದತ್ತಕ ಯಾರನ್ನ ತಗೊಳ್ಳೋಣ?’
‘ಸಿದನಾಯ್ಕನ್ನ ತಗೊಳ್ಳೋಣ’
ಎಲ್ಲರೂ ಆಗಲೆಂಥಾರ. ಸಹಿ ಹಾಕತಾರ. ದೇಸಾಯೀ ಸಹಿ ಕಾರಭಾರಿ ಹಾಕತಾನ. ದೇಸಾಯಿ ಪಂಚರ ಸಮೇತ ನಮ್ಮ ಹತ್ತರ ಬಂದು ‘ಆಶೀರ್ವಾದ ಮಾಡರಿ’ ಅಂತಾನ. ನಾವು ಆಶೀರ್ವಾದ ಮಾಡತೀವಿ. ಬರೋಬ್ಬರಿ ಒಂದ ತಿಂಗಳಾದ ಮ್ಯಾಲ ನಕ್ಸಲೈಟ್‌ ಮಂದಿ ಬರತಾರ, ದೇಸಾಯಿನ್ನ ಕೊಲ್ಲತಾರ. ಸಿದನಾಯ್ಕ ಅವನ್ರೆಲ್‌ಆ ಓಡಿಸಿ ಸರಕಾರಕ್ಕ ಇನ್ನೊಂದ ಕಾಗ ಬರೀತಾನ : ನಾನು, ದೇಸಾಯರ ದತ್ತಕ ಪುತ್ರ ಸಿದನಾಯ್ಕ ಬರೆಯೋದೇನಂದರೆ-

ಸಿದನಾಯ್ಕ : (ಚೀರಿ)
ಸಾಕ ಮಾಡರಿ ಗುರುವಯ್ಯನವರ.

ಗುರುವಯ್ಯ : ಸಾಕಮಾಡಿದರ ಬಗಿಹರಿಯೋದಿಲ್ಲೋ ಹುಚ್ಚಾ, ಊರ ಉಳಸಬೇಕಂದರ, ನಿನ್ನ ಕ್ರಾಂತಿಗಿ ಜಯ ಸಿಗಬೇಕಂದರ ಇದೊಂದs ಹಾದಿ. ಪೋಲೀಸರು ಬಂದ ಹೋದ ಮ್ಯಾಲ ನೀ ಬೇಕಾಧಾಂಗ ಎಲ್ಲಾರಿಗು ಭೂಮಿ ಹಂಚು. ಆಗ ನಿನಗ ಅಧಿಕಾರ ಇರತದ.

ಸಿದನಾಯ್ಕ : ಸಾಯೋ ಮುನ್ನ ಮಕ್ಕಳಿಲ್ಲದ್ದಕ್ಕ ದೇಸಾಯಿ ರೈತರಿಗೆಲ್ಲಾ ಭೂಮೀ ಹಂಚಿದ್ದಾ ಅಂದರ?

ಗುರುವಯ್ಯ : ಪೋಲೀಸರು ನಂಬತಾರೇನು? ಭೂಮೀ ಹಂಚೋನು ನಕ್ಸಲೈಟ್‌ ಮಂದಿಗಿ ಯಾಕ ಹೆದರಬೇಕು? ಹೆದರಿ ಸರಕಾರಕ್ಕ  ಪತ್ರ ಯಾಕ ಬರೀಬೇಕು?

ಸಿದನಾಯ್ಕ : (ಹತಾಶನಾಗಿ)
ಇದಕ್ಕಾಗಿ ಕ್ರಾಂತಿ ಮಾಡಿದೇನು-ಅಂತ ಒಂಕಾರಿ ಕೇಳಿದರ, ಉರಿನಿಂಗ ಕೇಳಿದರ, ಜನ ಕೇಳಿದರ ಏನ ಜವಾಬ ಕೊಡಲಿ? ನನಗ ನಾನs ಏನ ಹೇಳಿಕೊಳ್ಲಿ?

ಗುರುವಯ್ಯ : ತಿಳುವಳಿಕಿ ಮಾತಿದ್ದರ ಮತ್ತ ಮತ್ತ ಹೇಳೋದಕ್ಕ ನನಗೇನೂ ಬ್ಯಾಸರ ಬರೋಣಿಲ್ಲಪ, ಕೇಳು : ಪೋಲೀಸರು ಬಂದು ಹೋಗೋ ತನಕ ಈ ನಾಟಕ ಮಾಡೋಣು.

ಸಿದನಾಯ್ಕ : ನಾವು ಮಾಡತಿರೋದು ನಾಟಕ ಅಂತ ಈ ಮಂದಿಗಿ ಹೆಂಗ ಖಾತ್ರಿ ಮಾಡೋಣು?

ಗುರುವಯ್ಯ : ಸ್ವಲ್ಪ ಬಣ್ಣ ಬಳಕೋಬೇಕು, ಪ್ರಸಂಗ ಬಂದರ ಮುಖವಾಡ ಹಾಕ್ಕೋಬೇಕು. ಅದು ಮುಖಕ್ಕ ಹೊಂದಿಕ್ಯಾಗದ ಜೋತ ಬೀಳಬಹುದು; ಮೊದಲಮೊದಲಷ್ಟ;
ಆಮ್ಯಾಲ ಜೋಲಮುಖ ರೂಢಿ ಆಗತದ. ಅಥವಾ ಮುಖ ಮುಚ್ಚೋಹಾಂಗ ರುಂಬಾಲ ಸುತ್ತಿದರಾಯ್ತು.

ಸಿದನಾಯ್ಕ : ಆ ರುಂಬಾಲs ನಾ ಅಂಥ ಜನ ನಂಬಿದರ ಹೆಂಗ ಮಾಡಲಿ?

ಗುರುವಯ್ಯ : ಜನರ ವಿಚಾರ ಬಿಡಪಾ, ನಿಂದ ನೋಡಿಕೊ.

ಸಿದನಾಯ್ಕ : ಎಲ್ಲಿಂದ ಹೊಂಟ ಎಲ್ಲಿಗಿ ಬಂಧಿವಿ!
(ಉರಿನಿಂಗ, ಒಂಕಾರಿ ಬರುವರು)

ಉರಿನಿಂಗ : ಗುರುವಯ್ಯನವರು ಬರಬ್ಯಾಡಂದರು, ಅದಕ್ಕ ನಾವ್ಯಾರು ಬರಲಿಲ್ಲ.

ಸಿದನಾಯ್ಕ : ಅದಿರ್ಲಿ ಉರಿನಿಂಗಾ, ಅದನ್ನ ಆಮ್ಯಾಲ ಮಾತಾಡೋಣಂತ, ಹಿಂದ ಆದದ್ದೆಲ್ಲಾ ಮರತ ಚಿನ್ನೀನ ಕರಕೊಂಡ ಹೋಗಪಾ.

ಉರಿನಿಂಗ : ಇದನ್ನ ಹೇಳಾಕs ಕರಸಿದಿರೇನ?
(ಸರ್ರನೇ ಹೋಗುವನು)

ಒಂಕಾರಿ : ಏಏ ಉರಿನಿಂಗಾ ತಡಿಯೋ  ಏ……
(ಅವನೂ ಹೋಗುವನು. ಸಿದನಾಯ್ಕ ದಿಗ್ಭ್ರಾಂತನಾಗಿದ್ದಾನೆ)

ಸಿದನಾಯ್ಕ : ಒಂದೊಂದ ಸಣ್ಣ ಮಾತ ಕೂಡ ನನ್ನ ಕೈಮೀರಿಧಾಂಗ ಅನಸ್ತದಲ್ಲ, ಗುರುವಯ್ಯನವರs……

ಗುರುವಯ್ಯ : ಚಿನ್ನೀ, ಇದೊಂದ ದಿನ ನೀ ಸಿದನಾಯ್ಕನ ಮನ್ಯಾಗಿರು. ನಾಳಿ ಮತ್ತ ಉರಿನಿಂಗಗ ಹೇಳೋಣಂತ.
(ಗುರುವಯ್ಯ ಹೋಗುವನು. ಸಿದನಾಯ್ಕ ಇನ್ನೂ ಚಕಿತನಾಗಿದ್ದಾನೆ. ಚಿನ್ನಿ ಮುಖಕ್ಕೆ ಸೆರಗು ಹಾಕಿಕೊಂಡು ಅಳುತ್ತಿದ್ದಾಳೆ)