(ಮಠ, ಒಂಕಾರಿ ಮೂಲೆಯೊಂದರಲ್ಲಿ ವಿಷಣ್ಣನಾಗಿ ಕೂತಿದ್ದಾನೆ, ಅವನ ಮಾತು ನಡೆದಿದ್ದಂತೆ ಜನ ಅವನನ್ನು ಗಮನಿಸದೆ ಬಂದು ಸೇರತೊಡಗುತ್ತಾರೆ.)

ಒಂಕಾರಿ : ಈ ಆಳೋ ನನ್ನ ಮಕ್ಕಳಿಗಿ ಏನಾಗೇತಿ?
ಏನಾಗೇತಿ?
ತಿಳಕೊ ಬೇಕಂತೀನಿ ಯಾರ ತಿಳಸ್ತೀರಿ?
ಯಾರ ತಿಳಸ್ತೀರಿ?
ಅವರ ತಲೀಮ್ಯಾಲೊಂದ ರುಂಬಾಲೈತಿ
ರುಂಬಾಲೈತಿ.
ಅದನ್ನ ಕಂಡರ ನನಗಾಗಾಣಿಲ್ಲ ತಗಿ
ಆಗಾಣಿಲ್ಲ ತಗಿ
ಅದನ್ನ ಎಲ್ಲರೂ ನೋಡಲೆಂತ ತಲೀಕಡೆ ನೋಡತಾರ
ತಲೀಕಡೆ ನೋಡತಾರ!
ಮುಂದ ಇದ್ದವರಿಗಿ ಡಿಕ್ಕೀ ಹೊಡೀತಾರ
ಡಿಕ್ಕೀ ಹೊಡೀತಾರ!
ಸುಳ್ಳಲ್ಲ ರುಂಬಾಲ ಚಂದ ಐತಿ ಖರೆ
ಚಂದ ಐತಿ ಖರೆ!
ಆದರ ಕಂಡ ಕಂಡವರಿಗೆಲ್ಲಾ ಡಿಕ್ಕೀ ಯಾಕ ಹೊಡೀಬೇಕು?
ಡಿಕ್ಕೀ ಯಾಕ ಹೊಡೀಬೇಕು?
ಹೊಡಿಸಿಕೊಂಡಿವಿ ಹೊಡಿಸಿಕೊಂಡಿವಿ
ಅಥವಾ ಇನ್ನs ಏನ ಹೊಡಿಸಿಕೋಬೇಕಂತ ನಿಂತಿವಿ?
ತಿಳೀಧಾಂಗಾಗೇತಿ ಯಾರ ತಿಳಸ್ತೀರಿ?
ಯಾರ ತಿಳಸ್ತೀರಿ?

ಗುರುವಯ್ಯ : ಬರೋ ಮಂದೆಲ್ಲಾ ಬಂದರೇನಪಾ? ಸಿದನಾಯ್ಕರು ಬರಲಿಲ್ಲ?
ಕೆಂಚ : ಅಕಾ ಬಂದರು.

ಗುರುವಯ್ಯ : ಜೈಸಿದನಾಯ್ಕ
(ಸಿದನಾಯ್ಕ ಬರುವನು. ಸಪ್ಪಗಿದ್ದಾನೆ)

ಗುರುವಯ್ಯ : ಸುರು ಮಾಡೋಣೇನ್ರಿ?
(ಸಿದನಾಯ್ಕ ಕಲೈ ಸನ್ನೆಯಿಂದ ಸುರು ಮಾಡಲು ಸೂಚಿಸುವನು)

ಗುರುವಯ್ಯ : ಊರಾಗಿನ ಹಿರೇರು, ಕಿರೇರು, ಎಲ್ಲಾರು ಕೂಡೀರಿ. ನಾವು ಈ ಹೊತ್ತಿನ ದಿವಸ ಅಗ್ಗದೀ ಮಹತ್ವದ ಯಾಳೇದಾಗ ಕೂಡೀವಿ ಅಂಬೋದನ್ನ ಯಾರೂ ಮರೀಬ್ಯಾಡ್ರಿ. ಇಲ್ಲೀತನಕ ಮಾಡಿದ್ದ ಒಂದಾದರ ಈಗ ಮಾಡೋದು ಇನ್ನೊಂದ ಮೈಲೀಕಲ್ಲು. ನಿಮಗ್ಯಾರಿಗೂ ತಿಳದಿಲ್ಲ, ನಾವೇನ ಮಾಡೀವಿ ಅಂತ. ನಾವು ಸಾಮಾನ್ಯರಲ್ಲ. ಪುಸ್ತಕದಾಗ ಹೇಳತಾರಲ್ಲ ಕ್ರಾಂತಿ ಕ್ರಾಂತಿ ಅಂತ-ಅಂಥಾದ್ದ ಮಾಡೀವಿ. ಅಷ್ಟs ಅಲ್ಲ; ಪುಸ್ತಕದಾಗ ಇದ್ದದ್ದಕಿಂತ ಒಂದ ಮೊಳ ಹೆಚ್ಚ ಮಾಡೀವಿ. ಹಿಂಗೆಲ್ಲಾ ಯಾರಿಂದಾಯ್ತು?-ಅಂತ ನಾವು ವಿಚಾರ ಮಾಡಬೇಕು. ಯಾರಿಂದ? ಸಿದನಾಯ್ಕರಿಂದ!

ಸಿದನಾಯ್ಕ : (ಬೇಸರದಿಂದ)
ಗುರುವಯ್ಯನವರs ಸ್ವಲ್ಪದರೊಳಗ ಮುಗಸರಿ.

ಗುರುವಯ್ಯ : ಹಾಯ್ತು. ಊರೊಳಗ ಏನೇನೋ ಆಯ್ತು. ಕ್ರಾಂತಿ ಮಾಡಿದಿವಿ. ಇಡೀ ಜಗತ್ತಿಗೆ ಒಂದ ಮಾದರಿ ಹಾಕಿದಿವಿ. ಅಧಿಕಾರಶಾಹೀ ಸಾಮ್ರಾಜ್ಯಶಾಹೀ-ಅಂತ ಪೇಪರದಾಗ ಬರತಾವಲ್ಲ-ಅದನ್ನ ಕೊಂದ ಹಾಕಿದಿವಿ. ಆದರ ಸಾಯೋ ಮುಂಚೆ ಅದು ಹಾಂಗs ಸಾಯಲಿಲ್ಲ. ನಮ್ಮ ಮ್ಯಾಲ ಹಿಡಿ ಮಣ್ಣ ತೂರಿ ಶಾಪ ಹಾಕಿ ಹೋಯ್ತು. ‘ನಕ್ಸಲೈಟ್‌’ ಮಂದಿ ಬಂದಾರ ಹಜಾರ ಮಂದಿ ಪೋಲೀಸರ್ನ ಕಳಸ್ರಿ ಅಂತ ಸರಕಾರಕ್ಕ ಬರದು ಸತ್ತ ಹೋಯ್ತು. ನಾವೆಲ್ಲಾ ಹೆದರಿದಿವಿ. ಏನಪಾ ಜೇಲಿಗಿ ಹೋಗಬೇಕಾಯ್ತು?-ಅಂದುಕೊಂಡಿವಿ. ಆದರ……ಆದರ… (ಧ್ವನಿ ನಡುಗಿಸುತ್ತ)
ಎಂಥಾ ಸಂಕಟ ಬಂದರೂ ನಮಗೆಲ್ಲಾ ಹಾದೀ ತೋರಿಸೋವಂಥಾ ಬೆಳಕ ಸಿದನಾಯ್ಕರ ಕಣ್ಣಾಗ ಅದs ಅಂತೀನ್ನಾನು. ನೀವೇನಂತೀರಿ?

ದಬಕ : ಅದಕ್ಯಾರ ಅಲ್ಲಂತಾರ ಬಿಡರಿ.

ಗುರುವಯ್ಯ : ಒಬ್ಬನs ಹೇಳಿ೮ದರ ಆಗಲಿಲ್ಲ. ಎಲ್ಲಾರು ಹಸನ ಮನಸಿನಿಂದ ಹೇಳಬೇಕು.

ಕೆಂಚ : ಇದರಾಗೇನೂ ಬೇಸೂರ ಇಲ್ಲ ಹೇಳ್ರಿ.

ಗುರುವಯ್ಯ : ಹಾಂಗಂಥ ನಂಬಿಕೊಂಡು ನಾವು ಪಂಚರು-ಅಂದರ ನೀವ
ಆರಿಸಿದ ಪಂಚರೆಲ್ಲಾ ಒಂದ ಠರಾವ ಪಾಸ ಮಾಡೀವಿ.

ಉರಿನಿಂಗ : ಅವರೇನ ಹೇಳ್ತಾರ ಅದಕ್ಕ ನನ್ನ ಕಬೂಲಿ ಇಲ್ಲರೆಪಾ ಮತ್ತ.

ಗುರುವಯ್ಯ : ನೀ ಪಂಚರೊಳಗ ಇಲ್ಲ ಅಂಬವರ್ಹಾಂಗ ಮಾತಾಡ್ತೀಯಲ್ಲೋ ಉರಿನಿಂಗಾ.

ಉರಿನಿಂಗ : ನಿನ್ನೆ ಒಂದs ದಿನದಾಗ ಅಷ್ಟೂ ಮಂದಿ ಪಂಚರ್ನ ಕಂಡೀನಿ. ಏನ ಮಾತಾಡಿದರೂ ನನ್ನ ಬಿಟ್ಟ ಮಾತಾಡರಿ ಅಷ್ಟ.

ಸಿದನಾಯ್ಕ : ಉರಿನಿಂಗಾ-

ಗುರುವಯ್ಯ : ಮಾತಾಡ್ತಿ ಬಿಡರಿ ಸಿದನಾಯ್ಕರ. ಈ ಮಂದಿಗಿ ನಾವ್ಯಾರೂ ಹೊಸಬರಲ್ಲ.

ಗಿರಿಮಲ್ಲ : ಇದೇನ್ರಿ? ಪಂಚಪಂಚರೊಳಗs ದೋಪಾರ್ಟಿ ಇದ್ಧಾಂಗ ಹಾಕ್ಯಾಡತೀರಿ ?

ಕಲ್ಲ :  (ಎದ್ದು ಜನರಿಗೆ ಕೈ ಮುಗಿದು)
ನೋಡ್ರೆಪಾ ನಾವು ಸಿದನಾಯ್ಕರ ಅಪ್ಪಣಿ ಪ್ರಕಾರ ನಡದಿವಿ, ನಡೀತೀವಿ. ನಮ್ಮದೇನಾದರೂ ತಪ್ಪಿದ್ದರ ದೇವರ ಸಮಾ ಗುರುವಯ್ಯನವರಿದ್ದಾರ; ದೈವಸಮ ನೀವಿದ್ದೀರಿ. ನೀವs ತೂಗಿ ನೋಡ್ರಿ.

ಕೆಂಚ :  (ಎದ್ದು ಕೈ ಮುಗಿದು)
ನೋಡ್ರೆಪಾ, ಉರಿಯೋ ಬೆಂಕ್ಯಾಗ ಕಸರಿದ್ದೀತು, ನಮ್ಮಲ್ಲಿಲ್ಲ. ಇಷ್ಟಾಗಿ ನಾವು ಮಾಡಿದ್ದೇನು? ಸಿದನಾಯ್ಕರ ಬೆನ್ನಿಗಿ ಬಿದ್ದಿವಿ. ಅವರು ಎಕ್ಕಡದಿಂದ ತೋರಿಸಿದರು; ತಲೀ ಮ್ಯಾಲ ಹೊತ್ತ ನಿಂತಿವಿ. ಬೆಳಕಿನ ಬೆನ್ನ ಹತ್ತಬಾರದಂತ ನೀವನ್ನೋದಾದರ, ದೇವರಾಣಿಪಾ, ನಂದ ತಕರಾರ ಇಲ್ಲ.

ಉರಿನಿಂಗ : ಥೂ!

ಸೀಪು : ಹಿಂಗ ನೀವು ನೀವs ಒಡಪಾಡಿದರ ನಮಗೇನ ತಿಳೀಬೇಕು? ಯಾಕೋ ಉರಿನಿಂಗಾ?

ಉರಿನಿಂಗ : ನಾ ಹೇಳ್ತೀನಿ ಕೇಳ್ರೊ ಇಲ್ಲೆ. ಈಗಿಂದೀಗ ಪಂಚರ ಕಿಸೆ ತಪಾಸ ಮಾಡ್ರಿ. .ಏನ ಸಿಗತೈತಿ? ಹಿಡಿ ಹಿಡಿ ಮಣ್ಣ! ಮಣ್ಣ ಯಾಕ ತಂದಾರಂದ್ರಿ? ಹಾಡಾ ಹಗಲಿ ನಿಮ್ಮ ಕಣ್ಣಾಗ ಎರಚಾಕ! ಮಣ್ಣ ಯಾಕ ಎರಚತಾರಂತ ಕೇಳಬ್ಯಾಡ್ರ ಈ ಮತ್ತ-ಇಲ್ಲಾ ಅದನಷ್ಟ ಬಿಡಿಸಿ ಹೇಳಲೇನು?-ಪಂಚರೆಲ್ಲಾ ದೇಸಗತಿ ಹಂಚಿಕೋ ಬೇಕಂತ ಮಸಲತ್ತ ಮಾಡ್ಯಾರ!

ಗುರುವಯ್ಯ : ನೋಡ್ರಪಾ, ಹಜಾರ ಮಂದಿ ಪೋಲೀಸರು ಯಾವಾಗ ಬರತಾರ ಎಂದ ಬರತಾರ-ಹೇಳಾಕಾಗೋದಿಲ್ಲ. ಇಂದs ಬಂದಾರು, ಈಗs ಬಂದಾರು. ಅವರು ಬಂದ ಹೋಗೋತನಕ ಜಮೀನ ಹಂಚೋದ ಬ್ಯಾಡ. ಅಲ್ಲೀತನಕ ದೇಸಗತಿ ಸಿದನಾಯ್ಕನ ಹೆಸರಿಗೇ ಇರಲಿ-ಅಂತೀವು. ನೀವೇನಂತೀರಿ?

ಪಕೀರ : ಬರೋಬರಿ ಅಂತೀನ್ನಾನು. ಮಳ್ಳ ಮಂದಿ , ಪೋಲೀಸರು ಬಂದರ ತಲೀ ಗೊಂದೊಂದ ಸಾಕ್ಷಿ ಹೇಳಿ ಎಪರಾ ತಪರಾ ಆದೀತು. ಅದರ ಬದಲಿ, ನಮ್ಮ ಪೈಕಿ ಒಬ್ಬಾವ ಮುಂದ ನಿಂತ ನಿಭಾಯಿಸೋ ಹಾಂಗಿದ್ದರ ಯಾಕ ಬ್ಯಾಡ? ಯಾಕ್ರೆಪಾ?

ಒಂಕಾರಿ : ಯಾಕ ಸುಳ್ಳಸುಳ್ಳ ಹುಜಾರಮಂದೀ ಸುದ್ದೀ ಹೇಳತೀರೊ?

ದಬಕ : ಏ ಒಂಕಾರೀ, ನಿನಗೇನ ತಿಳೀತೈತಿ ಸುಮ್ಮಕಿರೊ.

ಒಂಕಾರಿ : ಅಲ್ರೊ……

ಸಿದನಾಯ್ಕ : ಒಂಕಾರೀ…

ಉರಿನಿಂಗ : ಏನ್ರೆಪಾ. ಸಿದನಾಯ್ಕನ ಹೆಸರಿಗಿ ಮಾಡಂದರ ನಾವs ಹಂಚಿ ಕೊಂಡ್ಹಾಂಗತ? ಹಜಾರ ಮಂದಿ ಬರೋದ ಸಿದನಾಯ್ಕರಿಗೇನ ಗೊತ್ತಿಲ್ಲ?

ಗಿರಮಲ್ಲ : ಏ ಉರಿನಿಂಗಾ, ನಿಂದಲ್ಲ ತಗಿ, ಸಿದನಾಯ್ಕನ ಮ್ಯಾಲ ಸಂಶ ಬಂತೇನೊ ನಿನಗ?

ಸೀಪು : ಉರಿನಿಂಗಾ, ನಿಂದಲ್ಲ ಬಿಡು,  ಏನ ಮಾತಿದು?

ಉರಿನಿಂಗ : ಎಲ ಎಲಾ!

ದಬಕ : ಕುಂತಕೊಳ್ಳೋ ಏ ಉರಿನಿಂಗಾ…

ಒಂಕಾರಿ : ಅಲ್ರೆಪಾ ಪಂಚರs…

ಸಿದನಾಯ್ಕ : ಗುರುವಯ್ಯನವರs-

ಗುರುವಯ್ಯ : (ಎದೆ ಬಡಿದುಕೊಳ್ಳುತ್ತ)
ಈ ಎದಿ ಇನ್ನೂ ಹಸನ ಅದsನೋ ಉರಿನಿಂಗಾ. ಏನೇನೂ ತಕರಾರಿಲ್ಲದs ಯಾವಾಗ ಬೇಕಾದಾಗ ನಾ ಸಾಯಬಲ್ಲೆ. ಮಂದಿಗಿ ಉಪಕಾರ ಮಾಡೋ ಹುರುಪಿನಾಗ ದೇವರು ಸಿಟ್ಟಾಗೋ ಹಾಂಗೂ ಮಾಡಿರಬಹುದು. ಆದರ ದೇವರಿಗಿ ಗೊತ್ತದ ಈ ಘಟದ ಅಸಲ ಕಿಮ್ಮತ್ತು!

ದಬಕ : ಅದನ್ಯಾಕಷ್ಟ ಮನಸಿಗಿ ಹಚ್ಚಿಕೊಳ್ತೀರಿ ಬಿಡರಿ, ಗುರುವಯ್ಯನವರs-

ಕೆಂಚ : ಉರಿನಿಂಗ ಎಷ್ಟಂಧರೂ ಹೇಂತೀನ ಕಳಕೊಂಡಾನ! ಕಳವಳದಾಗ ಆಡಿದ ಮಾತು.

ಉರಿನಿಂಗ : ನನ್ನ ಉಸಾಬರಿ ಬಿಡರಿ. ವ್ಯವಹಾರ ಮಾತಾಡ್ರಿ.

ಸೀಪು : ಸುಮ್ಮಕಿರೋ ಏ ಉರಿನಿಂಗಾ. ಹೊಟ್ಟೀಕಿಚ್ಚ ತೋರಸಾಕ ಹಾಳೆ, ಹೊತ್ತಾ ಇಲ್ಲಾ?

ಉರಿನಿಂಗ : ಎಲ ಈ ಇವರಾಪ್ಪರ್ನ! ನನ್ನ ಮ್ಯಾಲ ನಂಬಿಕಿಲ್ಲೇನ್ರೋ ನಿಮಗ?

ಪಕೀರ : ನಂಬೋದೇನ ಬಂತೊ? ನೀ ಸುಮ್ಮಕಿರು. ಅವರ ಹೇಳ್ತಾರ, ನಾವ ಕೇಳ್ತೀವಿ. ಗುರುವಯ್ಯನವರss ಮಾತಾಡ್ರಿ-ಉರಿನಿಂಗ : ನಿಮ್ಮ ಕಣ್ಣಾಗ ಇವರs ದೊಡ್ಡವರಾದರ ಹೌಂದಲ್ಲ?

ಗುರುವಯ್ಯ : ನೀನs ದೊಡ್ಡಾವಾಗಪಾ, ನಾವು ಸಣ್ಣವರು. ನಿನಗೊಂದ ಸವಾಲ ಹಾಕತೀನಿ; ಜವಾಬ ಕೊಟ್ಟ ನೀ ಎಂಥಾವನ್ನೋದ ತೋರಸು.

ಉರಿನಿಂಗ : ಅದೇನಪಾ

ಕೆಂಚ : ; ಅದೇನ ಕೇಳಬಿಡರಿ.

ಕಲ್ಲ : ಗುರುವಯ್ಯನವರು ಹೇಳಿಧಾಂಗ ಕೇಳತೇನಂತ ಉರಿನಿಂಗ ಮಾತ ಕೊಡಲಿ.

ಸೀಪು : ಕೇಳದೇನ ಮಾಡತಾನ ತಗೊಳ್ರಿ.

ಉರಿನಿಂಗ : ಮಾತಿನ್ನೂ ನಾಲಿಗಿ ಬಿಟ್ಟ ಹೊರಬಿದ್ದಿಲ್ಲಾ, ಹೆಂಗ ಹೇಳಲಿ?

ದಬಕ : ಉರಿನಿಂಗಾ, ನೀ ಸುಮ್ಮನ ಕೂರತೀಯೋ ಇಲ್ಲೋ? ಹೇಳ್ರಿ-

ಗುರುವಯ್ಯ : ಉರಿನಿಂಗಾ, ಇವು ನನ್ನ ಮಾತಲ್ಲ; ಸಿದನಾಯ್ಕರ ಮಾತಂತ ತಿಳಕೊ. ನಾವೆಲ್ಲಾ ಕ್ರಾಂಥಿ ಮಾಡಿದಿವಿ. ಏನೇನೋ ಆಯ್ತು. ಆದರ ಒಬ್ಬರಿಗೆ ಭಾಳ ಘಾತ ಆಗ್ಯsದ, ಆ ನೋವ ಮಾಯಬೇಕಾದರ ನೀ ದೊಡ್ಡ ಮನಸ ಮಾಡಬೇಕು.

ಉರಿನಿಂಗ : ನನ್ನ ದೊಡ್ಡ ಮನಸಿಗೆ, ನಿಮ್ಮ ದೇಸಗತಿಗೆ ಸಂಬಂಧ ಇಲ್ಲರಿ,

ಒಂಕಾರಿ : (ಓಡಿಬಂದು)
ಐತೆಪಾ ಸಂಬಂಧ! ಉರಿನಿಂಗಾ ಇಲ್ಲನ್ನಬ್ಯಾಡ.

ಗುರುವಯ್ಯ : ಉರಿನಿಂಗಾ.-

ಸಿದನಾಯ್ಕ : (ಅವಸರದಿಂದ ನಡುವೇ ತಡೆದು)
ತಡೀರಿ ನಾನs ಕೇಳತೀನಿ. ಉರಿನಿಂಗಾ, ಕ್ರಾಂತಿ ಆದಾಗಿಂದ ಚಿನ್ನಿ ಪರದೇಶಿ ಆಗ್ಯಾಳ. ನೀ ಆಕೀನ್ನ ತಿರಿಗಿ ಕರಕೋಬೇಕು.

ಉರಿನಿಂಗ : ಇದs ದೊಡ್ಡ ಮಾತ?

ಸಿದನಾಯ್ಕ : ದೊಡ್ಡ ಮಾತ ಆಗಿರಲಿಕ್ಕಿಲ್ಲ. ಆದರ ಮಹತ್ವದ ಮಾತ ಹೌದು. ನೀ ಒಪ್ಪಿಕೋ ಬೇಕು.

ಉರಿನಿಂಗ : ಒಪ್ಪದಿದ್ದರ?

ಗಿರಮಲ್ಲ : (ಗೊಣಗುತ್ತ)
ನಾಯಿ ಮುಟ್ಟಿದ ಗಡಿಗಿ……

ಒಂಕಾರಿ : ಯಾರಲೇ ನಾಯಿ ಮುಟ್ಟಿದ ಗಡಿಗಿ? ಮಕ್ಕಳ್ರಾ, ನಿಮ್ಮದೆಲ್ಲಾ ಗೊತ್ತೈತ್ರೋ ನನಗ. ಹೇಳಲಿ?

ಉರಿನಿಂಗ : ಹಾಕಿದ ಬಲಿ ನನ್ನ ಕಣ್ಣಿಗೂ ಕಾಣತೈತಿ, ಒಂಕರಿ, ನೀ ಯಾಕ ಒದರ್ಯಾಡ್ತಿ?

ಒಂಕಾರಿ : ನಿನಗಲ್ಲೊ, ಬಲಿ ಊರಿಗಿ ಬಿದ್ದೈತಿ, ಮಗನs,- ಹಾಸಿಗ್ಯಾಗಿನ ಹೇಂತೀನ ತಿಳೀಲಿಲ್ಲ, ಇನ್ನ ಸುತ್ತಿದ ಬಲಿ ಏನ ತಿಳಕೊಂಡಿ?

ಸಿದನಾಯ್ಕ : ಒಂಕಾರೀ ಬಾಯ್ಮುಚ್ಚತಿ? ಹೇಳೊ ಉರಿನಿಂಗಾ, ಏನಂತಿ?

ಉರಿನಿಂಗ : ಚೆಲೋ ಹೇಳ್ತೀಯಪಾ! ದೇಸಾಯಿ ಸೆರಗ ಹರದ ಹೊತ್ತಕೊಂಡ ಹೋದಾ. ಪಂಚರೆಲ್ಲಾ ನನ್ನ ಸಮಕ್ಷಮ ಎಳದಾಡಿದರು. ಅಂಥಾಕೀನ ತಿರಿಗಿ ಕರಕೊ ಅಂತ ಹೇಳಾಕ  ನೀ ಬಂದಿ! ಸೇಡ ತೀರಿಸಿಕೊಳ್ಳೊ ತಾಕತ್ತ ಈಗ ಇರಲಿಕ್ಕಿಲ್ಲ. ಆದರ ನಾ ಇನ್ನೂ ಮೀಸ ಈ ಬೋಳಿಸಿಲ್ಲ.

ಒಂಕಾರಿ : ಸುಟ್ಟಿತು ನಿನ್ನ ಮೀಸಿ. ಖರೆ ಹೇಳತೇನ ನನ್ನ ಮಾತ ನಂಬೊ ಉರಿನಿಂಗಾ. ಇನ್ನೂ ಎಂತೆಂಥಾ ಭಯಂಕರ ಕನಸ ಕಂಡೀನ್ನಾನು, ಇಷ್ಟ ದಿನ ಕಣ್ಣ ಮುಚ್ಚಿಕೊಂಡ ಕನಸ ಕಾಣತಿದ್ದೆ. ನಿನ್ನಿ ಕಣ್ಣ ತೆರಕೊಂಡs ಕಂಡೀನಿ……

ಸಿದನಾಯ್ಕ : ಒಂಕಾರೀ ಬಾಯ್ಮುಚ್ಚತೀ?

ಒಂಕಾರಿ : ಮುಚ್ಚತಿದ್ದೆ.  ಆದರ ಇದs ಕಣ್ಣಿಂದ ನಿನ್ನ ಎಚ್ಚರಿದ್ದಾಗs ನೋಡೇನಪಾ! ಇಷ್ಟದಿನ ಮಂದೆಲ್ಲಾ ನಾ ಚಂದರಾಮಂತ ಅಂದಾಗೆಲ್ಲಾ ಖೊಟ್ಟಿ ನಾರ್ಣಯ ಕೊಡತಿದ್ದರು. ಆದರ ನಿನ್ನಿ ಒಬ್ಬಾವ ಖರೇ ಖರೇ ನಡಿಯೋ ನಾಣ್ಯ ಕೊಟ್ಟಾನ! ದs ತೋರಸ್ತೀನಿ ತಡಿ….

ಸಿದನಾಯ್ಕ : ಸಕಾಲಕ್ಕೆ ಬಾಯಿ ಮುಚ್ಚದಿದ್ದರ ನಾಲಿಗಿ ಕೀಳತೀನಿ.

ಒಂಕಾರಿ : ಯಾಕ? ಖರೇ ಹೇಳಿದ್ದಕ?

ಉರಿನಿಂಗ : ಅವನ ಮ್ಯಾಲ್ಯಾಕ ಹರಿಹಾಯ್ತಿ? ಇಲ್ಲಿ ನನ್ನ ಕೇಳಲ್ಲ. ಗಂಡ ಹೇಂತೀ ಜಗಳ ತೀರಸರಿ ಅಂತ ನಾ ನಿಮ್ಮ ಹತ್ತರ ಬರಲಿಲ್ಲ. ನೀವಾಗಿ ಮ್ಯಾಲ ಬಿದ್ದ ಯಾಕಿದನೆಲ್ಲಾ ತಗೀಬೇಕು? ನೀ ಹೇಳಿದರೂ ಆತು, ಬಿಟ್ಟರೂ ಆತು. ಮೊದಲs ಹೇಳಿರತೀನಿ : ನಾಯಿ ಮುಟ್ಟಿದ ಗಡಿಗ್ಯಾಗ ಉಣ್ಣೋವಷ್ಟ ದುರ್ಗತಿ ನನಗಿನ್ನೂ ಬಂದಿಲ್ಲ-ನಿಮ್ಮ ದೇಸಗತಿ ಬಂದರೂ,-

ಒಂಕಾರಿ : ಆದರ ಖರೇ ಕಟ್ಟಿಹಾಕಾಕ ಯಾ ಮಗನಿಂದಲೂ ಆಗಾಣಿಲ್ಲ

ಸಿದನಾಯ್ಕ : ನೀ ಬಾಯ್ಮುಚ್ಚತೀಯೋ ಇಲ್ಲೊ?

ಒಂಕಾರಿ : ಇಲ್ಲ.

ಗುರುವಯ್ಯ : ಏ ಒಂಕಾರಿ, ಯಾಕೊ ಇಂದ ಹಿಂಗ ಹಟ ಹಿಡೀತಿ? ಅವ ಗಂಡ, ಆಕಿ ಹೇಂತಿ ನಡುವ ನಾವಿದ್ದೀವಿ. ಈ ವ್ಯವಹಾರದೊಳಗ ಇನ್ನೇನೈತಿ?

ಒಂಕರಿ : ಖರೆ ಹೇಳ್ರಿ ಗುರುವಯ್ಯನವರs ದಿನಾ ಪೂಜಿ ಮಾಡತೀರಲ್ಲ, ಆ ದೇವರ ಆಣೀ ಮಾಡಿ ಹೇಳ್ರಿ : ಇದರಾಗ ಖರೇನs ಏನೂ ಇಲ್ಲ?

ಕೆಂಚ : ಈ ಹುಚ್ಚನ ಮಾತ ಕೇಳಿ ಹಲಮಾಲಿ ಹೇಂತೀನ ಯಾವ ಕರಕೋಬೇಕಪಾ!

ಒಂಕಾರಿ : ನಿಮ್ಮ ನಿಮ್ಮ ಹೆಂಡರ ಸೆರಗ ಸರಿಸಿ ಮಾರೀ ನೋಡಿ ಮಾತಾಡರ್ಯ್ಯೋ. ಆಗ ನಿಮ್ಮ ಮೀಸೀ ಬಣ್ಣ ತಿಳೀತಾವ! ನಿನಗ ಇವರs ಖರೆ, ನಾ ಸುಳ್ಳಾದಿನೇನೋ ಉರಿನಿಂಗಾ?

ಉರಿನಿಂಗ : ಖರೆ ಸುಳ್ಳ ನೀ ಯಾಕ ಆಗಬೇಕೊ? ನಿನ್ನ ಮಾತಕೇಳಿ ಎಲ್ಲಿ ಕರಕೊಳ್ತೀನೋ ಅಂತ ಪಂಚರಿಗೆಲ್ಲಾ ಕಸವಿಸಿ ಆಗಾಕ ಹತ್ತೇತಿ. ನೋಡರಿ : ಒಂಕಾರಿ ಹೇಳಿದರೂ ನಾ ಕರಕೊಳ್ಳೋದಿಲ್ಲ.

ಗುರುವಯ್ಯ : ಅವಳು ಶುದ್ಧ ಹೆಂಗಸಂತ ಬೇಕಾದರ ಪ್ರಮಾಣ ಮಾಡಿ ಹೇಳಬಲ್ಲೆ ನಾನು.

ಉರಿನಿಂಗ : ನಿಮ್ಮ ಹೆಂಡರಿಗಿ ಹಿಂಗಾಗಿದ್ದರ ನೀವೆಲ್ಲಾ ತಿರಿಗಿ ಕರಕೊಳ್ಳತಿದ್ದಿರೋ ಏನೊ? ಸಿದನಾಯ್ಕ, ನೀ ಹೇಳು-ಚಿನ್ನಿಗಿ ಗರತಿ ಗಂಗವ್ವಮತ-ಹೇಳ್ತೀಯೇನಪಾ ನೀನು?
(ಸಿದನಾಯ್ಕ ಸುಮ್ಮನಿರುವನು)

ಸಿದನಾಯ್ಕ ಹೇಳಲಿ, ಕರಕೊಳ್ತೀನಿ.

ಗುರುವಯ್ಯ : ಸಿದನಾಯ್ಕ ಹೇಳಿದರೇನು? ನಾವು ಹೇಳಿದರೇನು?

ಉರಿನಿಂಗ : ಹಾಂಗಿದ್ದರ ಅವನs ಹೇಳಲಿ. ಹೇಳೋದಿಲ್ಲ. ಯಾಕಂದರ-

ಒಂಕಾರಿ : ಕೈ ಹೊಲಸ ಮಾಡಿಕೊಂಡಾನ!

ಸಿದನಾಯ್ಕ : ಯಾಕೊ? ಸಲಗಿ ಕೊಟ್ಟರ ನಾಲಗಿ ಭಾಳ ಉದ್ದ ಬಿಡತಿ?

ಒಂಕಾರಿ : ಯಾಕಂದರ ನಾಲಿಗ್ಯಾಗ ಖರೇ ಹಿಡಸವೊಲ್ದು, ಅದಕ್ಕ.

ಸಿದನಾಯ್ಕ : ಹೆಚ್ಚ ಮಾತಾಡಿದರ ಹುಗೀತೇನೀಗ.

ಒಂಕಾರಿ : ಖರೇ ಹುಗ್ಯಾಕಾಗಾಣಿಲ್ಲ, ಮರೀಬ್ಯಾಡ, ಕೇಳ್ರೆಪೋ ……

ಸಿದನಾಯ್ಕ : ನಾಯೀಮಗನ-
(ಹಾರಿ ಒಂಕಾರಿಯನ್ನು ಹಿಡಿಯ ಹೋಗುವನು. ಕಲ್ಲ ಕೆಂಚ ಮುಂದೆ ಬಂದು ಬೇರ್ಪಡಿಸಿ ಒಂಕಾರಿಯನ್ನು ಹಿಡಿಯುವರು)

ಗುರುವಯ್ಯ : ಬಾಯಿ ಮುಚ್ಚಲೇ ಒಂಕಾರಿ. ಕುಡುಕ ಇದ್ದೀ. ನಿನ್ನ ಕಣ್ಣಿಗೂ ಖರೆ ಖಂಡಿತ?

ಒಂಕಾರಿ : ಕಂಡೈತೋ ಇಲ್ಲೋ ಕೇಳ್ರಿ ಸಿದನಾಯ್ಕನ್ನ.

ಉರಿನಿಂಗ : ಅಲ್ಲ, ಯಾಕ, ಯಾಕಂತೀನಿ. ಕುಡುಕ ಅಂತೀರಿ, ಖರೆ ಕಾಣ್ಸಾಣಿಲ್ಲ ಅಂತೀರಿ, ಮತ್ತ ಯಾಕ ಅವನ್ನ ತಡೀತೀರಿ? ಅವ ಕಂಡದ್ದ ಆಡಲಿ. ಯಾಕ ಬಿಡಬಾರದು?

ಗುರುವಯ್ಯ : ಇಷ್ಟ ನಾಲಿಗಿಂದ ಗುಡ್ಡ ನೆಕ್ಕೇನಂದರ ಹೆಂಗೊ ಹುಡುಗಾ?

ಉರಿನಿಂಗ : ಈಗ ನಮಗ ಖರೇ ಸಂಶೆ ಬರತೈತಿ. ಅದೇನ ಮಸಲತ್ತ ಐತಿ ಬಿಚ್ಚಿದಿರೀ ಬರೋಬರಿ. ಒಂಕಾರೀ ಹೇಳೋ ಅದೇನ ಕಂಡಿ?

ದಬಕ : ಹುಚ್ಚನ ಮಾತಿಗೆ ಅದೇನ ಖರೆ ದಕ್ಕೀತು? ನೀವ್ಯಾಕ ಗಾಬರಿ ಆಗತೀರಿ ಬಿಡ್ರೆಪಾ.

ಒಂಕಾರಿ : (ಬಿಡಿಸಿಕೊಂಡು)

ಕೇಳ್ರೆಪೋ ಕೇಳ್ರಿ-
(ಸಿದನಾಯ್ಕ ಓಡಿಬಂದು ಒಂಕಾರಿಯ ಕತ್ತು ಹಿಡಿಯುವನು)

ಸಿದನಾಯ್ಕ : ಹೇಳಮಗನ ಖರೆ.
(ಒಂಕಾರಿ ಒದ್ದಾಡತೊಡಗುವನಿ)

ಉರಿನಿಂಗ : ಭಲೇ ಜನನಾಯಕ! ಈ ಹುಚ್ಚನ ಒಂದ ಚಿಲ್ಲರ ಮಾತ ತಾಳಿಕೊಳ್ಳಾಕ ಆಗವೊಲ್ದ?
(ಸಿಟ್ಟಿನಿಂದ)

ಸಿದನಾಯ್ಕ, ಈಗs ಹೇಳಿರತೀನಿ, ಬಿಡ ಒಂಕಾರೀನ.

ಸಿದನಾಯ್ಕ : ಹೇಳ ಹಂಗಾದರ ಚಿನ್ನೀನ ಕರಕೊಳ್ತೀಯೊ ಇಲ್ಲೊ?

ಉರಿನಿಂಗ : ಅದಕ್ಕ ಇದಕ್ಕ ಏನ ಸಂಬಂಧ?

ಸಿದನಾಯ್ಕ : ಕರಕೊಳ್ತೀಯೋ ಇಲ್ಲೊ?

ಗುರುವಯ್ಯ : ಹೇಳು ಉರಿನಿಂಗಾ.

ಸಿದನಾಯ್ಕ : ಕರಕೊಳ್ತೀಯೋ ಇಲ್ಲೊ?

ಉರಿನಿಂಗ : ಹೇಳೋತನಕ ಒಂಕಾರೀನ ಬಿಡೋದಿಲ್ಲಾ?

ಸಿದನಾಯ್ಕ : ಇಲ್ಲ.

ಉರಿನಿಂಗ : ಹಾಂಗಾದರ ನಾ ಕರಕೊಳ್ಳೋದಿಲ್ಲ.

ಸಿದನಾಯ್ಕ : ತಗೊ ಹಂಗಾದರ-
(ಒಂಕಾರಿಯ ಕತ್ತು ಹಿಸುಕುವನು. ಒಂಕರಿ ಸಂಕಟಪಡುತ್ತ ಬಿದ್ದು ಸಾಯುತ್ತಾನೆ. ಜನರೆಲ್ಲ ಗಾಬರಿಯಾಗಿ ಗುಂಪಾಗುತ್ತಾರೆ. ಒಂದು ಕಡೆ ಪಂಚರಾಗುತ್ತಾರೆ. ಉರಿನಿಂಗ ಕಾಲ್ಮರಿ ಕೈಯಲ್ಲಿ ಹಿಡಿದು ಸಿದನಾಯ್ಕನತ್ತ ಧಾವಿಸುತ್ತಾನೆ. ಕೂಡಲೇ ಬಂದೂಕಿನವರು ಮಧ್ಯೆ ಬರುತ್ತಾರೆ. ನೀರವ)

ಉರಿನಿಂಗ : ಇದರಾಗೇನೋ ಮಸಲತ್ತ ಐತಿ! ನಾ ಚಿನ್ನೀನ ಕರಕೊಳ್ತೀನಿ!

ಸಿದನಾಯ್ಕ : ಭಾಳ ತಡ ಮಾಡಿದಿ.
(ಚೀರುತ್ತ)

ಎಲ್ಲಿ ಬಂದೂಕಿನವರು? ಈ ನಾಯಿ ಉರಿನಿಂಗ್ಯಾನ ಈ ಊರಾಗಿನ ಅಗ್ಗದಿ ಎತ್ತರ ಮರಕ್ಕ ತೂಗ ಹಾಕಿ ಗುಂಡ ಹಾರಸರಿ.
(ತಕ್ಷಣವೇ ಉರಿನಿಂಗ ತಪ್ಪಿಸಿಕೊಂಡು ಓಡುವನು. ಸಿದನಾಯ್ಕನಿಗಾಗಲಿ, ಅಲ್ಲಿದ್ದವರಿಗಾಗಲಿ ಯಾರಿಗೂ ಇದು ಗೊತ್ತಿಲ್ಲ.)
ಯಾರಾದರೂ ಹಿಂಗ್ಯಾಕಂದರ ಅವರನ್ನೂ ಕೊಲ್ಲರಿ. ನನ್ನ ಹೆಸರಿಗೆ ಜೈ ಅನ್ನದವರನ್ನ ಗುಂಡ ಹಾಕರಿ, ಚಿನ್ನಿ ಎಲ್ಲಿದ್ದರೂ ಹಿಡಕೊಂಬಂದು ವಾಡೇದೊಳಗ ಇಡ್ರಿ.
(ಬಂದೂಕಿನವರು ಜನ ಮೈಮೇಲೆ ಏರಿ ಹೋಗುತ್ತಿದ್ದಾರೆ. ಜನ ಕಿರುಚುತ್ತ ದಿಕ್ಕಾಪಾಲಾಗಿ ಓಡತೊಡಗುತ್ತಾರೆ. ಒಂದೆರಡು ಸಲ ಗುಂಡಿನ ಸಪ್ಪಳವೂ ಕೇಳಿಸುತ್ತದೆ. ಜನ ಎಲ್ಲ ಹೋದ ಮೇಲೆ ಪಂಚರು ಮಾತ್ರ ಉಳಿದಿದ್ದಾರೆ)
ಗುರುವಯ್ಯನವರs ಕಾಗದ ತಯಾರ ಮಾಡ್ರಿ
(ಪಂಚರು ನಿಧಾನವಾಗಿ ಸರಿಯುತ್ತಾರೆ. ಸಿದನಾಯ್ಕ ಒಬ್ಬನೇ ರಂಗದ ಮೇಲೆ ಉಳಿಯುತ್ತಾನೆ. ಒಂಕಾರಿಯ ಹೆಣ ನೋಡುತ್ತ ಅಲ್ಲೇ ಕುಸಿಯುತ್ತಾನೆ)
(ಮುಗಿಯಿತು)