(ವಾಡೆ. ರಾತ್ರಿ ಸಮಯ. ದೇಸಾಯಿ ಚಿಂತೆಯಿಂದ ಕುಡಿಯುತ್ತಿದ್ದಾನೆ ಒಳಗಡೆಯಿಂದ ಆಗಾಗ ಅಳುವ, ಶಪಿಸುವ ಚಿನ್ನಿಯ ದನಿ ಕೇಳಿಸುತ್ತದೆ)

ದೇಸಾಯಿ : ಕಾರಭಾರೀ,

ಕಾರಭಾರಿ : (ಬಂದು ಬಗ್ಗಿ ನಿಂತು)
ದೇವರೂ-

ದೇಸಾಯಿ : ಆಕೀನ ಕರತಾರಪಾ. ಈ ದರಿದ್ರ ಊರಾಗ ನೋಡೇನಂದರ ಒಂದ ಚೆಂದ ಚೀಜ ಇಲ್ಲ.

ಕಾರಭಾರಿ : ಸಿದನಾಯ್ಕ ಹೊರಗ ಬಂದ ನಿಂತಾನ್ರಿ.

ದೇಸಾಯಿ : ಸಿದನಾಯ್ಕ?

ಕಾರಭಾರಿ : ಹೂನ್ರಿ. ಮಂದೀನೆಲ್ಲ ಗೋರಸ್ತಾನದೊಳಗ ಕೂಡಿಸಿದ್ದನಂತ……

ದೇಸಾಯಿ : ಗೋರಸ್ತಾನದೊಳಗ?

ಕಾರಭಾರಿ : ಉರಿನಿಂಗ್ಯಾನ ತಾಯಿ ಸತ್ತಳಂತ, ಹುಗ್ಯಾಕ ಹೋಗಿ ಅಲ್ಲೇ ಸಭಾ ಮಾಡಿದ್ದ ರಂತರಿ.

ದೇಸಾಯಿ : ಈಗ್ಯಾಕ ಬಂದಾನ?

ಕಾರಭಾರಿ : ನಿಮಗ ಭೇಟಿ ಆಗಬೇಕಂತಾನ್ರಿ.

ದೇಸಾಯಿ : ಈಗ ಆಗಾಕಿಲ್ಲಂತ ಹೇಳು.

ಕಾರಭಾರಿ : ಕೇಳವೊಲ್ಲ.

ದೇಸಾಯಿ : (ಸ್ವಲ್ಪ ಹೊತ್ತು ಸುಮ್ಮನಿದ್ದು ಸೆರೆ ಕುಡಿಯುವನು)
ಬಂದೂಕಿನವರಿಗೆ ತಯಾರಾಗಿರಂತ ಹೇಳು. ಕರ ತಾ.
(ಕಾರಭಾರಿ ಹೊರಗೆ ಹೋಗಿ ಸಿದನಾಯ್ಕನ ಜೊಲತೆ ಒಳಬರುವನು. ಬೆನ್ನು ಹತ್ತಿ ಒಂಕಾರಿಯೂ ಬರುವನು)

ಒಂಕಾರಿ : ಜೈ ಸಿದನಾಯ್ಕ.
(ದೇಸಾಯಿ ಬಂದವರ ಬಗ್ಗೆ ನಿರ್ಲಕ್ಷತನದಿಂದ ಇರುವನು. ಒಂಕಾರಿ ಸೆರೆಯ ಬಾಟ್ಲಿಗಳ ಸುತ್ತ ಸುತ್ತಾಡತೊಡಗುವನು)

ಸಿದನಾಯ್ಕ : ದೇಸಾಯರಿಗೆ ನಮಸ್ಕಾರ.

ದೇಸಾಯಿ : ಕಾರಭಾರಿ, ನಮ್ಮ ವಾಡೇದ ಪದ್ಧತಿ ಹೇಳಿಕೊಡೊ ಅವಗ.

ಕಾರಭಾರಿ : ಮಸದ ಕತ್ತೀಹಾಂಗ ಸೆಟದ ನಿಂತರಾಗಲಿಲ್ಲಪಾ……ಹಿಂಗ ಬಗ್ಗಿ ಸಲಾಮ ಹೊಡಿ.

ಸಿದನಾಯ್ಕ : ಸಲಾಮ ಹೊಡಿಸಿಕೋಬೇಕಂದರ ಹಾಂಗಂತ ಊರಾಗ ಡಂಗರಾ ಸಾರತಾರ; ನೀ ಬಾಯ್ಮುಚ್ಚು.

ದೇಸಾಯಿ : ಹೌಂದಲ್ಲ! ಏನ ಕಾಲಪಾ ಇದು! ನಾ ಅಲ್ಲ, ನನ್ನ ಕುದುರಿ ಊರಾಗ ಹೋದರ ಅಡ್ಡಿಬಿದ್ದ ಗಲ್ಲ ಗಲ್ಲ ಬಡಕೋತಿದ್ದರು ಈ ಊರ ಮಂದಿ! ಇದs ಊರಾಗ ನೀನೂ ಹುಟ್ಟೀದಿ.  ಆಯ್ತು. ಬೆಳಗಾವೀ ಸಾಲೀ ಬರದಿ; ಶಾಣ್ಯಾ ಆದಿ. ಪುಸ್ತಕದ ಮಾತ ಕೇಳವನು ನನ್ನ ಮಾತ ಹೆಂಗ ಕೇಳತಿ? ಕಾರಭಾರೀ-

ಕಾರಿಭಾರಿ : ದೇವರೂ……

ದೇಸಾಯಿ : ಸರಕಾರಕ್ಕೆ ತಾಬಡ ತೋಬಡ ಒಂದ ಪತ್ರ ಬರಿ. ಊರಿಗೆ ನಕ್ಸಲೈಟ್‌ ಮಂದಿ ಬಂದಾರ; ಹಜಾರ ಮಂದಿ ಪೋಲೀಸರನ್ನ ಕಳಿಸಬೇಕಂತ ಬರಿ. ಮುದ್ದಾಂ ಒಬ್ಬನ್ನ ಬೆಳಗಾವಿಗೆ ಓಡಸು.

ಕಾರಭಾರಿ : ಆಗಲ್ರೆಪ.
(ಕೂತು ಬರೆಯತೊಡಗುವನು)

ದೇಸಾಯಿ : ಏನೊ ಒಂಕರಿ, ಮತ್ತೇನೇನ ಕನಸ ಕಂಡ್ಯೊ?

ಒಂಕರಿ : ನಿನ್ನ ವಾಡೇಕ ಬೆಮಕಿ ಬಿದ್ದಂಗಾಗಿತ್ತು.

ದೇಸಾಯಿ : ನಿನ್ನ ಕಣ್ಣ ಕಾಣಿಸೋದಿಲ್ಲ. ಬಣ್ಣದ ಸುದ್ದಿ ಯಾಕ ಹೇಳತೀಯೋ?

ಒಂಕಾರಿ : ಯಾಕ ಕಾಣ್ಸಾಣಿಲ್ಲ? ಹೇಳಲಿ? ನನ್ನ ಕನಸಿನಾಗ ನೀ ಆಗಲೆ ಒದ್ದಾಡಕ ಹತ್ತೀದಿ, ಗೊತ್ತೈತಿ?

ದೇಸಾಯಿ : ಯಾರು ಯಾರ ಕನಸಿನಾಗ ಒದ್ದಾಡತಾರಂತ ಆಮ್ಯಾಲ ನೋಡೋಣು. ಈಗ ಯಾಕ ಬಂದಿ?

ಒಂಕಾರಿ : ಯಾಕಂದರ-ಸಿದನಾಯ್ಕಗ ಜೈ ಅನ್ನಾಕ.

ದೇಸಾಯಿ : ಅದನ್ನ ಆಮ್ಯಾಲ ಕೇಳತೀನೋ,ನೀ ಏನ ತಕರಾರ ತಂದಿ?

ಒಂಕಾರಿ : ಏನಂದರ ಚಿನ್ನೀನ ಎಳಕೊಂಬಂದೆಲ್ಲಾ-ಅದು ತಪ್ಪಂತ ಹೇಳಾಕ ಬಂದೆ.

ದೇಸಾಯಿ : ಹೌಂದು? ಮತ್ತ ಯಾವುದಪಾ ತಪ್ಪು?

ಒಂಕಾರಿ : ಈ ಊರ ಮಂದೀನ ಸುಲದ ಸುಲದ ಸಾವ್ಕಾರ ಆಗೀಯಲ್ಲ, ಅದೂ ತಪ್ಪು.

ದೇಸಾಯಿ : ಹೌಂದು? ಬರೋಬರಿ ಯಾವ್ದು?

ಒಂಕಾರಿ : ಯಾವ್ದಂದರ, ಇರೋ ಐಸಿರಿ ಎಲ್ಲಾರು ಹಂಚಿಕೋಬೇಕು.

ದೇಸಾಯಿ : ಹಾಂಗಿದ್ದರ ಈ ಸೆರೆ ಮೊದಲ ಹಂಚಕೊಳ್ಳೋಣು?

ಒಂಕಾರಿ ನಾ ಚಿನ್ನೀನ ಕರಕೊಂಡ ಹೋಗತೀನಿ.

ದೇಸಾಯಿ : ಆಕೀನ ಆಮ್ಯಾಲ ಹಂಚಿಕೊಳ್ಳೋಣು : ಮೊದಲ ಸೆರೆ ಕುಡಿಯಪಾ …… (ಹೇಳುತ್ತ ಸಿದನಾಯ್ಕನ ಕಡೆಗೆ ತಿರುಗುವನು. ಒಂಕಾರಿ ಏನು ಮಾಡಬೇಕೆಂದು ತೋಚದೆ ಸೆರೆಯ ಬಾಟ್ಲಿ ತಗೊಂಡು ಮೂಲೆಗೆ ಹೋಗಿ ಕುಡಿಯಲಾರಂಭಿಸುವನು)

ನೀ ಯಾಕಪಾ ಬಂದಿ?

ಸಿದನಾಯ್ಕ : ನ್ಯಾಯ ಕೇಳೋದಕ್ಕ.

ದೇಸಾಯಿ : ಹಂಗಾದರ ತಡಿ, ನಾನೂ ಕೇಳಬೇಕಾಗೇತಿ. ಏನೊ ಒಂಕಾರಿ, ನಾವಿಬ್ರೂ ಪಾಟೀಸವಾಲ ಮಾಡತೀವು, ಜಜ್‌ ಆಗತೀಯೇನೊ?

ಒಂಕಾರಿ : ನನ್ನ ರುಂಬಾಲ ಹರದೈತಂತ ಸಿಕ್ಕಸಿಕ್ಹಾಂಗ ಮಾತಾಡಬ್ಯಾಡ; ನನಗ ಸಿಟ್ಟ ಬರತೈತಿ ಮತ್ತ.

ದೇಸಾಯಿ : ಇಲ್ಲಿ ಕುಂತಕಾಬಾರೊ. ಬೇಕಾದರ ಬಾಟ್ಲಿ ತಗೊಂಡs ಬಾ.
(ಹೋಗಿ ಒಂಕಾರಿಯನ್ನು ಎಳೆತಂದು ಮಧ್ಯದಲ್ಲಿ ಕೂಡಿಸುವನು. ತಗೊ ಎಂದು ಇನ್ನೊಂದು ಬಾಟ್ಲಿ ಇಡುವನು. ಸಿದನಾಯ್ಕನತ್ತ ತಿರುಗಿ)

ಸಿದನಾಯ್ಕ : ದೇಸಾಯರs , ಚಿನ್ನೀನ ಬಿಡಿಸಿಕೊಂಡ ಹೋಗಾಕ ಬಂದೀನಿ; ಚಾಷ್ಟೀ ಮಾಡಾಕ ಬಂದಿಲ್ಲ.

ದೇಸಾಯಿ : ನನಗೂ ಯಾಳೆ ಇಲ್ಲ. ಒಂಕಾರಿ ಜಜ್‌ ಆಗತಾನ. ಅಷ್ಟಾಗಿ ಅವ ನಿಮ್ಮ ಪೈಕಿ ಅಂದಮ್ಯಾಲ ಯಾಕ ಕಾಳಜೀ ಮಾಡತಿ? ನಿಂದೇನೈತಿ ನೀ ಹೇಳು. ನಂದ ನಾ ಹೇಳತೀನಿ. ಗೆದ್ದರ ಚಿನ್ನೀನ ಕರಕೊಂಡ ಹೋಗು, ಸೋತರ ಬಿಟ್ಟು ಹೋಗು. ಸುರು ಮಾಡಲಿ? ಏನ್ರಿ ಜಜ್‌ ಸಾಹೆಬರs, ಊರಾಗ ಹುಚ್ಚನಾಯಿ ಬಂದರ ಏನ ಮಾಡಬೇಕು ?

ಸಿದನಾಯ್ಕ : ಹುಚ್ಚನಾಯಿಗೂ ನನಗೂ ಏನ ಸಂಬಂಧ?

ದೇಸಾಯಿ : ಏನಂದರ, ಮಂದೀನೆಲ್ಲ ಸೇರಿಸಿ ನೀ ಅದೇನೋ ಹುಚ್ಚನಾಯೀ ಹಾಂಗ ಬಾಷ್ಣಾ ಬೊಗಳ್ತೀಯಂತ; ಸಭಾ ಮಾಡ್ತೀಯಂತ!

ಒಂಕಾರಿ : ಮೊದಲಿನ್ಹಾಂಗ ಬೇಕಾಬಿಟ್ಟಿ ಹುಚ್ಚನಾಯಿ ಕೊಲ್ಲಾಕ ಆಗಾಣಿಲ್ಲಪಾ ಈಗ. ಯಾಕಂದರೆ ನಾಯಿ ಬ್ಯಾರೇ, ಕುರಿ ಬ್ಯಾರೆ. ಕುರಿ ಅದರ ಒಂದರ‍್ಹಾಂಗ ಒಂದ ಒದರತಾವ, ಆದರ ಒಂದೊಂದ ನಾಯೀನೂ ತನ್ನ ಮನಸ್ಸಿಗಿ ಬಂಧಾಂಗ ಬೊಗಳತೈತಿ.

ದೇಸಾಯಿ : ತಡಿ; ನಿನ್ನ ರುಂಬಾಲ ಹರದೈತಂದೆಲ್ಲ?……

(ತನ್ನ ರುಂಬಾಲು ತೆಗೆದು ಒಂಕಾರಿಕಯ ತಲೆಗೆ ಹಾಕಿ ಸರಿಪಡಿಸತೊಡಗುವನು)

ಒಂಕಾರಿ : ಏ ಏ…… ನಿನ್ನ ರುಂಬಾಲ ನನಗ್ಯಾಕ ಹಾಕತೀಯೊ?

ದೇಸಾಯಿ : ಜಜ್‌ ಅಂದರ ಹಾಂಗs ಏನು? ಹರಕ ರುಂಬಾಲಿದ್ದರ ತಲೀಗಿ ಖರೆ ಖೊಟ್ಟಿ ತಿಳಿಯಾಣಿಲ್ಲಪಾ.

ಒಂಕಾರಿ : ಏನ ಭಾರ ಐತ್ಯೋ ಇದು!

(ಮುಟ್ಟಿ ಮುಟ್ಟಿ ನೆತ್ತಿಗಣ್ಣಾಗಿ ನೋಡಿಕೊಳ್ಳುತ್ತಿರುವನು. ಇದನ್ನು ಕಂಡು ದೇಸಾಯಿ ನಗುತ್ತ)

ದೇಸಾಯಿ : ನೋಡೊ ಹೆಂಗ ಕಾಣತಿ!
(ಸಿದನಾಯ್ಕನಿಗೆ)

ನಾವಿಬ್ಬರೂ ವಾರಿಗಿ; ಇಬ್ಬರೂ ಒಂದs ಅಂದಕೊ ಬೇಕಾದರ. ಆದರ ನಾ ಬೆಳದ ದೊಡ್ಡಾವಾದೆ. ಇವ ಇನ್ನs ಹಾಸಿಗ್ಯಾಗs ಬೆರಳ ಸೀಪಿಕೊಂಡ ಕನಸ ಕಾಣತಾನ. ಕನಸೆಲ್ಲ ಹಾಡಮಾಡಿ ಅಳತಾನ. ಸುಳ್ಳಲ್ಲ, ಇದ್ದಕ್ಕಿದ್ದಾಂಗ ಒಮ್ಮೊಮ್ಮಿ ರಾತ್ರಿ ಎದ್ದ ತಿಪ್ಪೀಮ್ಯಾಲ ಚಂದ್ರಾಮನ್ನ ಹುಡಕತಾನ, ಏನ ಮಾಡತಿ? ಆಗ ನೀ ಸಿಕ್ಕರ ನಿನ್ನ ಕತಿ ಮುಗೀತು! ಒಮ್ಮೊಮ್ಮಿ ರಾತ್ರೆಲ್ಲಾ ಹಿಂಗs ಹುಡಕತಾನ. ಹುಡಿಕಿ, ಹುಡಿಕಿ ಬೆನ್ನಹುರಿ ಮುರೀತಾವ. ಸಿಕ್ಕಿತು ಅಂತ ಅನ್ನಿಸಿದಾಗ ಅದು ಬರೇ ಹಳೇ ಕಾಲದ ನಾಣ್ಯ ಆಗಿರತೈತಿ! ನಮ್ಮ ಒಂಕಾರೀ ಕಿಸೇ ತುಂಬ ಅಂಥ ನಾಣ್ಯ ತುಂಬ್ಯಾವ. ನಾನs ನಾಲ್ಕೈದ ಕೊಟ್ಟೀನಿ, ಕೇಳ ಬೇಕಾದರ. ಯಾಕಲೇ ಒಂಕಾರೀ, ಚಂದರಾಮ ಕಾಣಿಸ್ತಾನೇನೊ?

ಒಂಕಾರಿ : ಬರೀ ರುಂಬಾಲ ಕಾಣತೈತಿ!

ಸಿದನಾಯ್ಕ : (ತಾಳ್ಮೆಗೆಟ್ಟು)

ದೇಸಾಯರ……

ದೇಸಾಯಿ : ಕಾರಭಾರೀ, ಹೇಳವಗ ಅವನ ಮ್ಯಾಲ ಏನೇನ ತಕರಾರದಾವಂತ.

ಕಾರಭಾರಿ : (ಓದುತ್ತ)

ರಾ| ರಾ| ಸಿದನಾಯ್ಕ ಸಾಕೀನ ಶಿವಾಪುರ ಈತನಿಗೆ=ಶ್ರೀಮಂತ ಸರದೇಸಾಯರ ಹುಜೂರಿನಿಂದ ಅಪ್ಪಣೆಯಾಗುವ ಹುಕುಂ ಏನೆಂದರೆ : ನೀನು ಸದರಿ ಶಿವಾಪುರದ ರೈತರನ್ನೆಲ್ಲ ದೇಸಗತಿ ವಿರುದ್ಧ ಎತ್ತಿಕಟ್ಟಿದ ನಕ್ಸಲೈಟ್‌ ಆಗಿರುವಿ. ರೈತರು ವರ್ಷಂಪ್ರತಿ ತೆರಬೇಕಾದ ಗೇಣಿ ಕಂದಾಯವನ್ನು ಹುಜೂರ ಸದರಿಗೆ ಸಲ್ಲದ ಹಾಗೆ ಮಾಡಿದ್ದೀ……

ದೇಸಾಯಿ : ಏನ್ಹೇಳ್ತಿ?

ಸಿದನಾಯ್ಕ : ದೇಸಾಯರs ನೀವs ನೋಡತೀರಿ, ಬರ ಬಿದ್ದsದ.
ಹುಡಿಕೇನಂದರ ಹೆಸರಿಲ್ಲ; ದನ ಹೋಗಲಿ,
ಮನುಷ್ಯರಿಗೇ ತಿಂದೇನಂದರ ತುತ್ತ ಕೂಳಿಲ್ಲ.
ಮಕ್ಕಳಾ ಮಾರಿ ಹೊಟ್ಟೀ ಹೊರೀಬೇಕಂದರ ಕೊಳ್ಳವರಿಲ್ಲ.
ನಿಮ್ಮ ದನೀನಂಥಾ ದನಿಗೆ ದಿನಕ್ಕ ಮೂರಬರೆ
ಕನಿಕಿ ಹಾಕತೀರಿ.
ನಾವು ಇಂದ್ಹೆಂಗೋ ನಾಳಿ ಹೆಂಗೋ ಅಂತ ಕೂತೀವಿ.
ಗೇಣಿ ಕಂದಾಯಂದರ ಎಲ್ಲಿಂದ ತರೋಣು?

ದೇಸಾಯಿ : ಪುಸ್ತಕಧಾಂಗ ಮಾತಾಡಿ ಖರೇ ಮುಚ್ಚಬ್ಯಾಡೊ ಹುಡುಗಾ.
ವಾಡೇಕ ದಿನಾ ಬಂದ ಬಮದ ಇದs ಊರ ಮಂದಿ
ಉಡಿ ತುಂಬಕೊಂಡ ಕಾಳ ಒಯ್ತಾರ. ಹೋಗಲಿ
ಉಪವಾಸ ಇದ್ದಿದ್ದರ ಇಷ್ಟ ಜೋರಿನಿಂದ
ಮಾತಾಡಕ ಆಗತಿತ್ತs ನಿನಗ?

ಸಿದನಾಯ್ಕ : ಒಯ್ತಾರ ಹೌದು. ಆದರ ಎಷ್ಟ ಮಂದಿ ನೀವು ಕೇಳೋ ದರ ಕೊಟ್ಟ ಒಯ್ತಾರ? ಅದನ್ನ ಹೇಳ್ರಿ.

ಅದೂ ಸರಕಾರ ‘ಬರಗಾಲ ಪೀಡಿತರಿಗೆ’ ಅಂತ ಕೊಟ್ಟ ಕಾಳು.

ದೇಸಾಯಿ : ಪುಕ್ಕಟ ಹಂಚರಿ ಅಂತ ಸರಕಾರ ನನಗೆ ಕಾಳ ಕೊಡಲಿಲ್ಲ.

ಸಿದನಾಯ್ಕ : ಆದರ,

ದೇವಾರಾಣಿ ದುಪ್ಪಟ್ಟ ತಿಪ್ಪಟ್ಟ ದರ ಹಚ್ಚಿ
ಮಾರರಿ ಅಂತ ಹೇಳಿರಾಕಿಲ್ಲ.
(ಒಳಗಿನಿಂದ ಚಿನ್ನಿಯ ಆಳುವ ದನಿ. ಒಂಕಾರಿ ನಿಶೆಯೇರಿ ತೊದಲತೊಡಗುವನು)

ಒಂಕಾರಿ : ಈ ಆಳೋ ನನ್ನ ಮಕ್ಕಳಿಗೆ ಏನಾಗೇತಿ?
ಏನಾಗೇತಿ?

ತಿಳಕೋಬೇಕಂತೀನಿ ಯಾರ ತಿಳಸ್ತೀರಿ?
ಯಾರ ತಿಳಸ್ತೀರಿ?

ದೇಸಾಯಿ : ಈ ಊರಿನ ರಕ್ತ ಕಟ್ಟೈತಪಾ!
ಇಲ್ಲದಿದ್ದರ, ನಿನ್ನಂಥಾವ ನನ್ನ ಎದರ ನಿಂತ
ನನ್ನ ಲೆಕ್ಕಪತ್ರಾ ಕೇಳಾಕ ಆಗತಿತ್ತ?
ನನ್ನ ಕೇಳಾಕ ಸರಕಾರ ಬೆಳಗಾವ್ಯಾಗ ದೊಡ್ಡ
ಕಚೇರಿ ತಗದ್ದಾರ. ಅವರ ಮುಂದ
ಜವಾಬ ಹೇಳೇನಂತ.
ಏ ಕಾರಭಾರಿ ಮುಂದ ಓದೊ-

ಕಾರಭಾರಿ : ನೀನು ರೈತರಿಗೆಲ್ಲಾ ಅವರು ಉಳುವ ಹೊಲ ಅವರದೇ ಅಂತ ದುರ್ಭೋಧಾ ತುಂಬಿ ದೇಸಗತಿಗೆ ಘಾತ ಮಾಡುತ್ತಿರುವಿ.

ಸಿದನಾಯ್ಕ : ಇದರೊಳಗೇನ ತಪ್ಪ ಅದsನೋ ನನಗ ತಿಳೀಲಿಲ್ಲ.

ದೇಸಾಯಿ : ತಪ್ಪ ಯಾವಾಗ ಆಗತದ ಅಂದರ-
ನಿನ್ನ ಕಲಿಕಿ ಮಾತ ಕೇಳಿ,
ರೈತರೆಲ್ಲಾ-
ಹೊಲ ತಮದs ಅಂತ ನಂಬಿದಾ.

ಸಿದನಾಯ್ಕ : ಹಾಂಗ ನಂಬಿದರ ತಪ್ಪೇನು?

ದೇಸಾಯಿ : ನನ್ನ ಮಾಲ್ಕಿ ಭೂಮಿ; ನಾ ಕಸೀತೀನಿ
ಇಲ್ಲಾ
ಕೊಡತೀನಿ. ನೀ ಯಾರು? ಮ್ಯಾಲ ನಿನ್ನ ನಾಯಿಗೋಳ
ಯಾರು ಕೇಳೋದಕ್ಕ?

ಸಿದನಾಯ್ಕ : ದೇಸಾಯರs ಕಾಲ ಬದಲಾಗ್ಯದ.

ದೇಸಾಯಿ : ಯಾವ ಕಾಲದರೇನೋ, ಮಾಲ್ಕಿ ಸುಳ್ಳಾಗತದೇನು?

ಒಂಕಾರಿ : ಅವರ ತಲೀಮ್ಯಾಲೊಂದ ರುಂಬಾಲೈತಿ!
ರುಂಬಾಲೈತಿ!
ಆದರ ಆ ರುಂಬಾಲ ಭಾಳ ಚೆಂದ ಐತಿ
ಭಾಳ ಚಂದ ಐತಿ :

ಸಿದನಾಯ್ಕ : ನಿಮ್ಮ ಮಾಲ್ಕಿ ಹೊಲಾ ಅಂದರ : ನಿಮ್ಮ ಕಮತ-

ಎಷ್ಟ ಅದ ಅಷ್ಟು. ಅದನ್ನ ಬೇಕಾದರ ಕಸೀರಿ,

ಕೊಡರಿ. ಯಾ ಮಗಾ ಬ್ಯಾಡಂತಾನ?
ನಾವು ಇಷ್ಟ ದಿನ ಉಳಕೊಂಡಿದ್ದ ಭೂಮೀಮ್ಯಾಗ
ಕಾಲಿಡಬ್ಯಾಡರಿ, ಅಷ್ಟ.

ದೇಸಾಯಿ : (ನಗುತ್ತ)
ಏ ಹುಚ್ಚ, ಭೂಮಿ ಹೆಂಗ ತಿರಗತೈತಿ
ಗೊತ್ತೈತಿ?

ಸಿದನಾಯ್ಕ : ಅದೆಲ್ಲಾ ನಮಗೇನ ಗೊತ್ತಾ?
ಅದನ್ನ ಹೆಂಗ ಹಂಚೀರಿ : ಹೆಂಗ
ಕಸದೀರಿ,-ಅನ್ನೋದೊಂದs ಗೊತ್ತ ನಮಗ.
ಕಾಯ್ದೆ ನಮಗ ಹೇಳೋದೂ ಅಷ್ಟ.

ದೇಸಾಯಿ : ನನ್ನ ಭೂಮಿ ಮ್ಯಾಗ
ನಾ ಕಾಲಿಡಬಾರದಂತ ಹೇಳಿತೇನ ನಿನ್ನ ಕಾಯ್ದೆ?
ಏನೊ ಒಂಕಾರಿ?

ಒಂಕಾರಿ : ಕಾಯ್ದೆ ಬರಲಿ ಕಾನೂನ ಬರಲಿ
ನನ್ನ ರುಂಬಾಲ ನನಗೆ ಶಾಶ್ವತ ಇರಲಿ
ಶಾಶ್ವತ ಇರಲಿ

ಸಿದನಾಯ್ಕ : ಯಾವುದೋ ತಪ್ಪಿನಿಂದ ಭೂಮಿ ನಿಮ್ಮ
ಹೆಸರಿನಾಗಿರಬಹುದು. ಈಗ ಅದೆಲ್ಲಾ
ನಮ್ಮ ಕರೀ ಮನಸಿಗಿ ತಿಳೀತದ ದೇಸಾಯರs.

ದೇಸಾಯಿ : ನನಗ ಮಾತಂದರ ಆಗೋದಿಲ್ಲಪಾ. ಸ್ವಲ್ಪದರಾಗ ಹೇಳಿಬಿಡು. ನಿನ್ನ ತಕರಾರ ಏನು?

ಸಿದನಾಯ್ಕ : ಇದು – ಹಳಿ ವ್ಯವಸ್ಥಾ ಕಾಟ ಹೊಡೀರಿ. ಭೂಮಿ ಇನ್ನೊಮ್ಮಿ ಸಮನಾಗಿ ಹಂಚಿಕೊಳ್ಳೋಣು. ಇದಕ್ಕಾಗಿ ನಮ್ಮ ಕ್ರಾಂತಿ!
(ದೇಸಾಯಿ ಕ್ರಾಂತಿ ಕ್ರಾಂತಿ ಎಂದು ತಂತಾನೇ ಹೇಳಿಕೊಳ್ಳುತ್ತ ನಗತೊಡಗುವನು)

ಒಂಕಾರಿ : ಕ್ರಾಂತಿ ಮಾಡರಿ, ಸಂಕ್ರಾಂತಿ ಮಾಡರಿ
ನನ್ನ ರುಂಬಾಲ ಸುದ್ದಿಗಿ ಬರಬ್ಯಾಡ್ರಿ
ರುಂಬಾಲ ಸುದ್ದಿಗಿ ಬರಬ್ಯಾಡ್ರಿ.

ದೇಸಾಯಿ : ಇಷ್ಟ ಮೊದಲs ಹೇಳಬಾರದs ನಮ್ಮಪ್ಪ!

ಹಿಂಗಾದರ ತಕರಾರ ಯಾವನಿಗಿಲ್ಲ?

ಒಬ್ಬನ ಕಾಲ್ಮರಿ ಚುಚ್ಚತಾವ.
ಇನ್ನೊಬ್ಬನವು ಬರೋಬರಿ ಅದಾವ;
ಅವನಿಗೂ ಅಂಥಾ ಕಾಲ್ಮರಿ ಬೇಕು.
ಇವನ ಹೇಂತಿ ಹಾಸಿಗ್ಯಾಗ ಭಾಳ ಮಾತಾಡತಾಳ;
ಅದಕ್ಕ ಬಾಯ್ಮುಚ್ಚಿಕೊಂಡಿರೋ ಹೇಂತಿ ಬೇಕು.

ಮತ್ತೊಬ್ಬನ ಕೈಯಗ ರೊಟ್ಟಿ ಐತಿ,
ಪಲ್ಯಬೇಕು.

ಒಬ್ಬ ಹಾಡಾವನ ತಾಕತ್ತ ನಿಂತಿತು.

ಇನ್ನೊಬ್ಬ ಹಾಡತಿದ್ದರ ಬೈಯಾಕ ಸುರುಮಾಡತಾನ!
ನೀ ಅದೇನೋ ಕ್ರಾಂತಿ ಅಂದೆಲ್ಲ-ಅದರಿಂದ ಇವರಿಗೆಲ್ಲಾ-
ಕಾಲ್ಮರಿ
ಹೇಂತಿ
ಪಲ್ಯೆ
ಹಾಡು
ಸಿಗತಾವೇನು?
ನಿನಗಿನ್ನೂ ಮಜಾ ಹೇಳಿರತೀನಿ-
ಅವಗ ಬರೋಬರಿ ಕಾಲ್ಮರಿ ಕೊಟ್ಯೆಂತ ತಿಳಿ;
ಆಮ್ಯಾಲ ಸುಮ್ಮಕಿರತಾನಂದಿ? ಹಿಂಗ ಮೆಟ್ಟಿ ನಿಂತ-
ಇಂಥಲ್ಲಿ ಒಯ್ಯಂದರ ಅಂಥಲ್ಲಿ ಒಯ್ಯಬೇಕು-ಅಂಥಾ
ಕಾಲ್ಮರಿ ಬೇಕು ಅಂತಾನ.

ಇವನ ಹೇಂತಿ ಬಾಯ್ಮುಚ್ಚಿಕೊಂಡ ಬಿದ್ದಳಂತ ತಿಳಿ;
ಸೊಂಟ ಕುಣಿಸಿದ್ದರ ಚೆಲೋ ಇತ್ತು ಅಂತಾನ.
ಮತ್ತೊಬ್ಬನ ರೊಟ್ಟೀಮ್ಯಾಲ ಪಲ್ಯ ಸಿಕ್ಕರ
ಲಾಡು ಬುಂದೆ ಯಾಕಿಲ್ಲ?-ಅಂತಾನ.

ಇವನ ಹಾಡೋ ತಾಕತ್ತ ಬಂತಂತ ತಿಳಲಿ;
ನನ್ನ ಮುಂದ ಯಾ ಮಗ-ಅಂತಾನ೧
ಅದಕ್ಕ-

ಅವಗ ಚುಚ್ಚೋ ಕಾಲ್ಮರಿ ಸಮ
ಇವಗ ಮಾತಾಡೊ ಹೇಂತಿ ಸಮ
ಮತ್ತೊಬ್ಬಗ ಬರೀ ರೊಟ್ಟಿ ಸಮ
ಇವಗ ಹಾಡೋ ತಾಕತ್ತಿಲ್ಲದs ಸಮ!

ನಾಳಿ ಮಕ್ಕಳು ಮೊಮ್ಮಕ್ಕಳು ಹುಟ್ಟತಾವಲ್ಲ-
ಅವರಿಗೆಲ್ಲಾ ಇದನ್ನ ಕಲಿಸಿಕೊಡಬೇಕಪ್ಪಾ-

ಸಿದನಾಯ್ಕ : ಹಂಗಿದ್ದರ ನಾವು ಬದಕೋದು ನ್ಯಾಯಲ್ಲ ಅಂತೀರೇನು? ಬದಕೋದಕ್ಕ ನಮಗೆ ಹಕ್ಕಿಲ್ಲ ಅಂತಿರೇನು?

ಒಂಕಾರಿ : (ತೊದಲುತ್ತ)

ಬದಕಪಾ ಯಾರ ಬ್ಯಾಡಂತಾರ?
ನಾಯೀಯಂಥಾ ನಾಯಿಗಿ ಪರವಾನಿಗಿ ಕೊಟ್ಟೇನಿ,.
ನಿನಗ ಕೊಡೋದಿಲ್ಲಾ? ಹೋಗಲಿ,

ನಾಯೀಕಿಂತ ಕಡೀ ಆಗಿ ಬದಕತೇನಂದರ
ಬ್ಯಾಡಂತೇನ?
ಆದರ,
ನನ್ನ ರುಂಬಾಲ ಸುದ್ದಿಗಿ ಬರಬ್ಯಾಡ.

ದೇಸಾಯಿ : ಹಕ್ಕ, ನ್ಯಾಯ-ಬರೋಬರಿ.

ಇವೆಲ್ಲಾ ಖರೆಖರೇನ ಈ ಭೂಮೀಮ್ಯಾಗ ಬರತಾವಂತ
ಈ ಮಂದಿಗಿ ಸುಳ್ಳಸುಳ್ಳ ಯಾಕ್ಹೇಳತೀಯೊ?
ಸಮತಾ ಬರೋದ ಸಾಧ್ಯ ಇದ್ದಿದ್ದರ
ಕಾಲ್ಮರಿ ಕಾಲಾಗ ಯಾಕ ಹಾಕೋಬೇಕು? ನೆತ್ತಿಗಿಡು.
ಆಗೋದಿಲ್ಲ, ಯಾಕ?
ಯಾಕಂದರ : ಕಾಲು, ನೆತ್ತಿ ಸಮ ಅಲ್ಲ,
ಬರೋಬರಿ ಹೌಂದಲ್ಲ?
ಪುಸ್ತಕದಾಗ ಓದಿಲ್ಲ-ಸಂತರs ಬ್ಯಾರೇ
ಜಾತಿ ಎಷ್ಟ ಮಂದೀನ್ನ ಕೊಲ್ಲಿಸ್ಯಾರಂತ? ಹೋಗಲಿ,
ಇಬ್ಬರು ಸಂತರನ್ನ ಇಲ್ಲಿ ಕೂಡಸು,-
ಜಗಳಾಡಿ ಸಂತೀ ಮಾಡತಾರ. ಇಲ್ಲಾ
ಒಬ್ಬರೊಬ್ಬರನ್ನ ಕೊಂಡ ಹಾಕತಾರ!
ಯಾಕ ಹೇಳು?-

ನನ್ನ ನಂಬಿಕಿ ಹೆಚ್ಚಿಂದು. ನಿಂದ ಕಡಿಮೀದು ಅಂತ.
ನಿನ್ನ ನಗಸಾಕ ಹೇಳ್ತೇನಂತ ತಿಳೀಬ್ಯಾಡ-
ಮನಶೇರೆಲ್ಲಾ ಒಂದs ಅಂತ ಇಬ್ಬರೂ ಹಾರ್ಯಾಡತಾರ!
ಹೋಗಲಿ, ಕೊಲೆ ಖೂನಿ ಮಾಡಸದ ದೇವರು
ಯಾವಿದ್ದಾನ ಹೇಳು-
(ಚಿನ್ನಿಯ ಅಳು ಕೇಳಿಸುತ್ತದೆ)

ಸಿದನಾಯ್ಕ : ದೇವರ ಸುದ್ದಿ ಬ್ಯಾಡ್ರಿ. ಉಪ್ಪ ಹುಳಿ ಕಾರ ತಿನ್ನೋ ಮಂದೀದ ಹೇಳ್ರಿ.

ದೇಸಾಯಿ : ಅದನ್ನs ಹೇಳ್ತೀನಪಾ : ನಾವು ಕೊಟ್ಟ ನೈವೇದ್ಯ ತಿಂದs ದೇವರ ಇಷ್ಟ ಖೂನಿ ಮಾಡಸ್ತಾನ. ಇನ್ನ ಖುದ್ದ ಉಪ್ಪಾ ಹುಳಿ ಖಾರ ತಿಂಬವರಲ್ಲಿ ಹೇರಪೇರಿಲ್ಲದs ಹೆಂಗ ನಡದೀತು?

ಸಿದನಾಯ್ಕ : ಯಾಕಿರಬೇಕೋ ನನಗಿನ್ನೂ ತಿಳೀಲಿಲ್ಲ.

ದೇಸಾಯಿ : ತಿಳೀಲಿಲ್ಲಂದರ ಹೆಂಗ? ಕ್ರಾಂತಿ ಮಾಡವನು ಇದನೆಲ್ಲಾ ತಿಳಕೊಂಡಿರಬೇಕಪಾ.

ಒಂಕಾರಿ : ತಿಳೀಬಾರದ್ದ ಇದರಾಗೇನೈತಿ? ದೇವರು ಖೂನಿ ಮಾಡಿದರ ‘ಯಾಕ ಮಾಡಿದಿ?’ ಅಂತ ಯಾರಾದರೂ ಕೇಳಿದರೇನು? ಇಲ್ಲ. ಅದಕ್ಕ ನಾ ಖೂನಿ ಮಾಡಿದರೂ ಕೇಳಬ್ಯಾಡ. ಯಾಕಂದರ : ನನ್ನ ತಲೀಮ್ಯಾಲ ರುಂಬಾಲೈತಿ : ಯಾಕಪಾ ದೇಸಾಯಿ……?

ದೇಸಾಯಿ : (ವ್ಯಂಗ್ಯದಿಂದ ನೋವಾಗಿ)

ಮಂಗ್ಯಾ, ಮನಿಶ್ಯಾ ಸಮ ಅಂದರ,
ಆಗೋದs ಹಿಂಗ :

ಒಂದ ಮಂಗ್ಯಾನ ಕಟ್ಟಬಿಚ್ಚಿ, ರುಂಬಾಲ ಸುತ್ತಿದೆಮತ ತಿಳಿ :

ಅದು ಮೊದಲ ಮಾಡೋ ಕೆಲಸೇನ ಗೊತ್ತೈತಿ?-

ತನ್ನ ತಲೀಗಿಂತ ಎತ್ತರ ಹಾರೋದು.

ಆಗ ತಾವೊಬ್ಬ ಕ್ರಾಂತಿಕಾರ; ಜಿಗದರ ತನಗ
ಆಕಾಸ್ದಾಗಿನ ಚಂದ್ರಾಮ ಸಿಗತಾನ ಅಂತ ತಿಳಕೊಂಡ
ಉಬ್ಬತೈತಿ, ಹಾರ್ಯಾಡತೈತಿ, ಲಾಗಾ ಹೊಡೀತೈತಿ
ಗರ್ದೀಗಮ್ಮತ್ತ ಆಮ್ಯಾಲ ಸುರು.

ಒಂದ ಯಾಡ ದಿನ ಹಿಂಗ ಗಾಳೀ ತುಂಬಿಕೊಂಡ

ಉಬ್ಬರಿತೈತಲ್ಲ, ಅಷ್ಟರಾಗ ಅದಕ್ಕ ತಿಳೀತೈತಿ :

ಎಲ್ಲೋ ಗಾಳಿ ತನ್ನೊಳಗಿಂದ ಹೊರಗ ಹೊಂಟೈತಿ-ಅಂತ

ಒಂಕಾರೀನ ಟುಸ್‌ ಅನಸಲೇನೀಗ?

(ರುಂಬಾಲು ನೋಡಿಕೊಳ್ಳುತ್ತ ಸಡಗರ ಮಾಡಿಕೊಂಡು ಅತ್ತಿತ್ತ ಒಲೆದಾಡುತ್ತಿರುವ ಒಂಕಾರಿಯ ಸಮೀಪ ಹೋಗಿ ದೇಸಾಯಿ ಅವನ ರುಂಬಾಲು ತೆಗೆಯ ಹೋಗುತ್ತಾನೆ. ಒಂಕಾರಿ ಗಟ್ಟಿಯಾಗಿ ಹಿಡಿದುಕೊಂಡು ಒದರಾಡತೊಡಗುವನು)

ಒಂಕಾರಿ : ಏ ಏಲ್ಲ್ಯಾ, ಏ ತಿಪ್ಯಾ, ಏ ಕಾರಭಾರಿ-ಈ ಮಗನ್ನ ಬಂದೂಕ ಹಾರ್ಸಿಕೊಂದು ಒಗೀರ್ರೊ‍! ಹಿಡಕೊಳ್ರಿ……ಮಗಾ ನನ್ನ ರುಂಬಾಲಿಗಿ ಕೈ ಹಾಕತಾನ!

(ದೇಸಾಯಿ, ಕಾರಭಾರಿ ಇಬ್ಬರೂ ನಗುತ್ತಿದ್ದಾರೆ. ಸಿದನಾಯ್ಕ ತಾಳ್ಮೆಗೆಟ್ಟು)

ಸಿದನಾಯ್ಕ : ಜನ ಹಸದು ಬಾಯಿ ಬಾಯಿ ಬಡಕೋತಾರ ದೇಸಯರs……

ದೇಸಾಯಿ : ಬಾಯಿ ಬಾಯಿ ಬಡಕೊಂಡರ ಬಾಯಿಗಿನ ಹಲ್ಲ ಮುರೀಬೇಕಂತ ನನ್ನ ಅಂಬೋಣ, ನೀ ಏನಂತಿ? ಕಾರಭಾರಿ.

ಕಾರಭಾರಿ : ದೇವರೂ…

ದೇಸಾಯಿ : ನಾಳಿ ಮುಂಜಾನೆ ಊರಾಗ ಡಂಗರಾ ಸಾರಸು : ಯಾರೂ ತಮ್ಮಲ್ಲಿ ಕುಡಗೋಲ, ಕೊಡ್ಲಿ ಇಟ್ಟಕೋಬಾರದು. ವಾಡೇಕ ತಂದು ಒಪ್ಪಿಸಿ ಹೋಗ ಬೇಕು. ಅಪ್ಪಿತಪ್ಪಿ ಇಟಗೊಂಡರ ಅಂಥವರ ಹಲ್ಲ ಮುರೀತಾರಂತ ಹೇಳು.

ಕಾರಭಾರಿ : (ಕಾಗದ ಚಾಚುತ್ತ )

ಹಾಂಗs ಇದಕೊಂದ ಸೈ ಹಾಕರಿ.

ದೇಸಾಯಿ : ನನ್ನ ಸೈ ನೀನs ಹಾಕಿದ್ದರಾಗತಿರಲಿಲ್ಲೇನು?

ಕಾರಭಾರಿ : ಇದು ಸರಕಾರಕ್ಕ ಹೋಗೊ ಪತ್ರ .

ದೇಸಾಯಿ : ತತಾ.

(ಸಹಿ ಹಾಕಿ)

ಈಗಿಂದೀಗ ಬೆಳಗಾವಿಗೆ ಯಾರನ್ನಾದರೂ ಓಡಸು.

ಕಾರಭಾರಿ : ಆಗಲ್ರೆಪ.

ಸಿದನಾಯ್ಕ : ನಾ ಹೇಳೋ ಕಡೀ ಮಾತಿದು. ಇದನ್ನ ನಾ ಸರಿಯಾಗಿ ಹೇಳಿರಲಿಕ್ಕಿಲ್ಲ. ಆದರ ಇದು ಸುಳ್ಳಲ್ಲ. ನೀವು ನಮ್ಮ ಕಳವಳಕ್ಕ ಕಿವಿಗೊಡಬೇಕಂತ ನಮ್ಮ ಆಸೆ. ಕಿವಿಗೊಡದಿದ್ದರ ಅದು ಕೇಳಿಸೋತನಕ ಗದ್ದಲ ಮಾಡತೀವಿ. ನಿಮ್ಮ ಬಂದೂಕನಿಂದ ನಮ್ಮ ಬಾಯಿ ಮುಚ್ಚೋದ ಸಾಧ್ಯವಿಲ್ಲಾ, ಅಂದೆ.

ದೇಸಾಯಿ : ಯಾಕಿಲ್ಲ? ನಂಗೊತ್ತಿಲ್ಲಂದೇನು : ಕೆಳಗ ಹೊಟ್ಟಿಗಿ ಹೊಡದರ ಮ್ಯಾಲ ಬಾಯಿ ಮುಚ್ಚತಾವ!

ಸಿದನಾಯ್ಕ : ಆದರ ಒಂದ ಹೊಟ್ಟಿಗಿ ಹೊಡದರ ನೂರ ತಲಿ ತಿರಗತಾವ!

ದೇಸಾಯಿ : ನನ್ನ ಬಂದೋಬಸ್ತಿಗಿ ಬಂದೂಕ ಅವ ಏನಪಾ! ಅದರ ಗುರಿ ಯಾವಾಗ ಬೇಕ ಆವಾಗ ನಿನ್ನ ಕಡೆ ತಿರಗತಾವ! ತಿಳಕೊ! ಹುಡುಗ ವಯಸ್ಸ ಐತೆಲ್ಲಾ, ಅದಕ್ಕs ಹಿಂಗಾಗತೈತಿ. ನಿನ್ನ ಹೊಲಾ ಹೌಂದಲ್ಲೊ? ಅದನ್ನೊಂದ ನಿನಗs ಬಿಡತೀನಿ; ಇಟ್ಟಕೊ. ಈ ಊರಮಂದೀ ಉಸಾಬರಿ ನಿನಗ ಯಾಕ ಬೇಕು! ಸುಮ್ಮನ ಆರಾಮಾಗಿ ಇರು. ನಿನಗಿನ್ನೂ ಏನ ಬೇಕ ಹೇಳ.
(ಅವನ ಹೆಗಲ ಮೇಲೆ ಕೈಹಾಕುತ್ತಾ)
ಇನ್ನs ಮದಿವ್ಯಾಗಿಲ್ಲ ಹೌಂದಲ್ಲ?
(ಸಿದನಾಯ್ಕ ಸುಮ್ಮನಿರುವನು)

ಹೌಂದ? ಅದ್ಯಾಕಪಾ ಈ ಹುಡುಗ ಹಿಂಗಿದ್ದಾನ ಅಂತೀನಿ? ಮನ್ಯಾಗ ಕೂಡಿ ಮಲಗಾಕ ಒಂದ ಹೆಣ್ಣಿದ್ದರ ಹರೇದ ಹುಡುಗರು ಒಳ್ಳೆ ಆರೋಗ್ಯದಿಂದ ಇರ್ತಾರಪಾ- ಗೊಬ್ಬರದಾಗಿನ ಗಿಡಧಾಂಗ. ಬೇಕಂದರ ಇದೊಂದ ರಾತ್ರಿ ಚಿನ್ನೀನ ಕೊಡಲೇನ?
(ಒಂಕರಿ ಗಹಗಹಿಸಿ ನಗುವನು)

ಸಿದನಾಯ್ಕ : ತಲೀ ಕಾಲ ಸಮ ಅಲ್ಲಂತೀರಿ, ಹೊಲಾ ಕೊಟ್ಟ ಖರೇ ಮುಚ್ಚಬೇಕಂತೀರಿ. ಏಕಕಾಲಕ್ಕ ಎರಡೆರಡ ಆಟಾ ಆಡತೀರಿ; ದೇಸಾಯರs, ನನ್ನ ಹಕ್ಕಿನ ಹೊಲಾ ಹಿತ್ತಲಬಾಗಿಲದಿಂದ ತಗೊಳ್ಳೋದಿಲ್ಲ ನಾನು. ಎಲ್ಲಾರ ಜೋಡಿ ಮುಖಾಮುಖಿ ನಿಮ್ಮನ್ನ ಎದುರಿಸಿ ತಗೊಳ್ತೀನಿ. ಈಗೇನ ಚಿನ್ನೀನ ಬಿಟ್ಟ ಕೊಡ್ತೀರೋ? ಇಲ್ಲೋ?

ದೇಸಾಯಿ : ಜಜ್‌ಮೆಂಟ್‌ ಕೇಳೋಣು, ಅವ ಹೇಳಿದರ ಕರಕೊಂಡಹೋಗು
(ಇನ್ನೊಂದು ಬಾಟ್ಲಿ ಒಯ್ದು ಒಂಕಾರಿಯ ಎದುರಿಗಿಟ್ಟು)
ಏನ್ರೀ ಜಜ್‌ಸಾಹೇಬರ, ಯಾರ ಗೆದ್ದರು?

ಸಿದನಾಯ್ಕ : ಬಡವರ ಜೋಡಿ ಇಂಆ ಆಡಾಕ ಯಾರಿಗಾದರೂ ನಾಚಿಕಿ ಬರಬೇಕ, ದೇಸಾಯರs.

ದೇಸಾಯಿ : ಯಾಕ ತಲೀ ಸಮ ಇಲ್ಲೇನು?

ಕಾರಭಾರಿ : ಹೆದರಸ್ತಿಯೇನಪಾ?

ಸಿದನಾಯ್ಕ : ನೀ ಸುಮ್ಮಕಿರೊ.

ದೇಸಾಯಿ : ನಿನಗಿದ್ಧಾಂಗ ನನಗ ಎರಡ ನಾಲಿಗಿಲ್ಲ. ಒಮ್ಮಿ ಒಬ್ಬನ್ನ ಜಜ್‌ ಅಂತ ಮಾಡಿದ ಮ್ಯಾಲ ಮುಗೀತು. ಅವ ಏನs ಹೇಳಲಿ ಬಾಯ್ಮುಚ್ಚಿಕೊಂಡ ಕೇಳಬೇಕು.
ಒಂಕಾರೀ-
(ಒಂಕರಿ ತೂಕಡಿಸುತ್ತಿದ್ದಾನೆ. ಗದ್ದ ಹಿಡಿದು ಎಚ್ಚರಿಸುತ್ತ)
ಜಜ್‌ ಸಾಹೇಬರs, ಯಾರ ಗೆದ್ದರು?

ಒಂಕಾರಿ : ನೀನs ಗೆದ್ದಿ.

ದೇಸಾಯಿ : ಕೇಳಿದೇನಪಾ?
(ಸಿದನಾಯ್ಕ ಇದನ್ನು ಕೇಳಿ ಥಟ್ಟನೆ ಹೋಗುವನು. ಕೂಡಲೇ ದೇಸಾಯಿ ಚಪ್ಪಾಳೆ ತಟ್ಟುವನು. ಬಂದೂಕಿನವರು ಬರುವರು)
ಓಡಿಹೋಗಿ ಹಿಡೀರಿ, ಹಿಡೀರಿ ಆ ಮಗನ್ನ! ಇದ್ದವರನೆಲ್ಲಾ ಕರಕೊಂಡು ಹೋಗರಿ. ಸಿದನಾಯ್ಕನ್ನ, ನಾಳಿ ಬೆಳೆಗಾಗೋದರೊಳಗಾಗಿ ಇಲ್ಲಾ ಜೀವಂತ ಹಿಡಕೊಂಬ್ರಿ, ಇಲ್ಲಾ ಹೆಣಾ ತರ್ರಿ‍. ಓಡ್ರಿ.
(ಅವರೆಲ್ಲ ಓಡುವರು. ಚಿನ್ನಿಯ ಅಳು ಜೋರಾಗುತ್ತ ಹೋಗುತ್ತದೆ)