(ಸಾಯಂಕಾಲ, ಸಾಮಾನ್ಯ ಮನೆ, ಮುದುಕಿ, ಚಿನ್ನಿ ಮಾತಾಡುತ್ತಿದ್ದಾರೆ)

ಮುದುಕಿ : ಬಾಗಲಾಗ ನಿಂತ ಬಂದನೋ, ಇಲ್ಲೋ-ನೋಡs, ಇನ್ನs ಏನೇನ ನೋಡಬೇಕಂತ ದೇವರ ನನ್ನ ಹಣ್ಯಾಗ ಬರದ್ಹಾನೊ!

ಚಿನ್ನಿ : (ಹೋಗಿ ಬಂದು)
ಯಾರೂ ಕಣ್ಸಾಣಿಲ್ಲಬೇ.

ಮುದುಕಿ : ಎಲ್ಲಿ ಹೋದನೊ! ಹರ್ಯಾಗಿಂದ ಹಣಿಕಿ ಹಾಕಿಲ್ಲ. ಊಟಕ್ಕಾದರೂ ಬಂದಿದ್ನೋ ಇಲ್ಲೊ?

ಚಿನ್ನಿ : ಇಲ್ಲ.

ಮುದುಕಿ : ಮನೀಕಡೆ ನಿಗಾ ಇದ್ದರಲ್ಲೇನು ಅವ ಬರೋದು? ಚೆಂದುಳ್ಳ ಸೊಸಿ ನಡ್ಯಾಕ ಬಂದಳಂತ ಸಡಗರಾ ಮಾಡಾಕೂ ಹಳಹಳ ಈ ಊರಾಗ. ಈ ಬರಗಾಲ ದಾಗs ಹರೇಕ ಬರಬೇಕs ನೀ ಬ್ಯಾರಿ! ಬಾಡ್ಯಾಗ ಕಡ್ಡೀಮುರದ ಹೇಳಿದೆ : ಬ್ಯಾಡೋ  ಈವರ್ಷ; ಮುಂದಿನ ವರ್ಷ ಕರಕೊಂಬರೋಣು ಸೊಸೀನs- ಅಂತ. ಮೈಯಾಗ ಹೊಸ ರಗತ ಹರೀತೈತಲ್ಲ,-ಸೊಂಟ ಭಾರ ಆಗೇತಿ, ಇದs ವರ್ಷ ಕರತಾರಬೇ-ಅಂತ ಹಲುಬಿದ. ದೇವರ ಮುಂದ ದೀಪಾನಾದರು ಹಚ್ಚಿ ಬಾ ಹೋಗು.

ಚಿನ್ನಿ : ಅಂಜಿಕಿ ಬರತೈತಬೇ .
ಮುದುಕಿ : ಮನಿ ಯಾವುದೋ, ಸುಡುಗಾಡ ಯಾವುದೊ! ಏನ ಆಗಾಣಿಲ್ಲ ಹೋಗು, ನಾ ಇಲ್ಲಾ?

ಚಿನ್ನಿ : ಕಡ್ಡೀಪೆಟಿಗಿ ಎಲ್ಲೇತಿ?

ಮುದುಕಿ : ನೀ ಏನ ಹೊಸ ಸೊಸಿ ಗಂಟ ಬಿದ್ದೇ ನನಗ? ಅಲ್ಲೇ ಒಲೀ ತೋಳಮ್ಯಾಲ ಇದ್ದೀತ ನೋಡಬಾರದ?
(ದೂರದಿಂದ ಅಳುವ ದನಿ ಕೇಳಿಸುತ್ತದೆ)
ಈ ಮಂದಿ ಹಗಲೀ ಯಾಕ ಗುಳೇ ಹೋಗಬಾರದು?

ಓಂಕಾರಿ : (ಒಳ ಬರುತ್ತ)
ಹಗಲಿ ಈ ಊರ ಬಿಡಾಕಾಗಾಣಿಲ್ಲಬೇ.

ಮುದುಕಿ : ಅಯ್‌ ಬೇಬರಿಸಿ, ನೀನ? ಯಾಕಲಾ  ಈ ಕಡೆ ಬಂದಿ?

ಒಂಕಾರಿ : ನಾನೂ ಊರ ಬಿಟ್ಟ ಹೊಂಟ ನಿಂತೇನಬೇ, ಹೇಳಿ ಹೋಗಬೇಕಂತ ಬಂದೆ. ಯಾರರೆ ಮುಂದ ಬಂದು ‘ಅಪಾ ಒಂಕಾರಿ, ನೀ ಹೋಗಬ್ಯಾಡಂದರ ಸಾಕು, ಹೋಗಾಣಿಲ್ಲ. ಆದರ ಎಮ್ಮಾ, ಬೆಳಿಗ್ಗೆದ್ದಾಗಿನಿಂದ ಸಿಕ್ಕಸಿಕ್ಕವರಿಗೆಲ್ಲಾ ಹೇಳಿ ನೋಡಿದೆ. ಒಬ್ಬರೂ ‘ಹೋಗಬ್ಯಾಡ’ ಅನಲಿಲ್ಲ. ನೀ ಅಂತೀ ಏನಬೇ?- ಇಲ್ಲೇ ನಿಂತ ಬಿಡತೀನಿ.
(ದೂರದಿಂದ ಹತ್ತೆಂಟು ಅಳುವ ದನಿ, ಒಮ್ಮೆಲೆ ಕೇಳಿಸುತ್ತದೆ)

ಮುದುಕಿ : ಯಾರೋ ಅಳತಾರಲ್ಲ?

ಒಂಕಾರಿ : ಬಸ್ಯಾ ಇರಲಿಲ್ಲಾ?-ಮನೀ ಮಂದೆಲ್ಲಾ ಗುಳೇ ಹೊಂಟ ನಿಂತಿದ್ದರು. ಅವನ ಹೇಂತಿ ಹೊಚ್ಚಲಾ ದಾಟೋವಾಗ ಎಡವಿಬಿದ್ದ ಅಲ್ಲೇ ಸತ್ತಳು. ಹೆಣ ಎತ್ತಿದರೋ ಏನೋ-ಅದಕ್ಕs ಅಳತಿರಬೇಕು.

ಮುದುಕಿ : ಮ್ಯಾಲ ಮಳಿರಾಜನ ಸಿಟ್ಟ, ಕೆಳಗ ದೇಸಾಯರ ಸಿಟ್ಟ; ಎತ್ತಂತ ಬದಿಕ್ಯಾರ ಮಂದಿ!

ಒಂಕಾರಿ : ಎಮ್ಮಾ , ಒಂದ ಲಪದಾ ಹಾಡಲೇನಬೆ?

ಮುದುಕಿ : ಅಯ್‌ ಮೂಳಾ, ಇಂಥಾ ಯಾಳೇದಾಗ ಹಾಡೋ ಹುರುಪ ಬಂತ ನಿನಗ? ಭಕ್ಕರಿ ತಿಂದ ಬಂದೇನೊ, ಯಾರದೋ ಮನ್ಯಾಗ!

ಒಂಕಾರಿ : ಈ ಊರಾಗಿನ ಧರಮ ಆರಿ ಹೋಗೇತಬೆ. ನನ್ನಂಥ ಹುಚ್ಚರಿಗೆ ಯಾರ ಅನ್ನಾ ಹಾಕತಾರ? ಮೊದಲು ಕರಕರದ ಪದಾ ಹಾಡಿಸಿ ಊಟಾ ಹಾಕತಿದ್ದರು. ಈಗ ನಾನs `ತುತ್ತ ಅನ್ನಾ ಹಾಕರ‍್ಯೋ’ ಅಂದರ ತುಟಿ ಕಚ್ಚಿ ನಿಟ್ಟುಸರ ಬಿಡತಾರ……ನಿನ್ನಿ ನನಗೊಂದ ಕೆಟ್ಟ ಕನಸ ಬಿದ್ದಿತ್ತಬೆ!

ಮುದುಕಿ : ತಗೊ ಸುರು ಮಾಡಿದ. ಲಾಟಾನ ಗಲಾಸ ಒರಸs.
(ಚಿನ್ನಿ ಲಾಟೀನಿನ ಗ್ಲಾಸು ತೆಗೆದು ಒರೆಸತೊಡಗುವಳು)

ಒಂಕಾರಿ : ಕನಸಿನಾಗ ಉರಿನಿಂಗ ಬಂದಿದ್ದಬೇ! ಅದನ್ನ ಹೇಳಿ ಹೋಗೋಣಂತ ಬಂದೆ-

ಮುದುಕಿ : ಸಾಕಪಾ ಒಂಕಾರಿ, ಹೋಗಿ ಉರಿನಿಂಗನ್ನ ಕರತರತೀಯೇನು?

ಒಂಕಾರಿ : ಈಗ ಬಂದಾನ ತಾಳಬೇ. ಅವನ್ನೋಡಿ ಹೋಗಬೇಕಂತ ಬಂದೀನಿ, ಅದಕ್ಕs ಅವ ಬರೋತನಕ ಒಂದ ಪದಾ ಹಾಡಲೇನಂದರ?

ಮುದುಕಿ : ಬ್ಯಾಡ ನಮ್ಮಪ್ಪಾ.

ಒಂಕಾರಿ : ನಿನ್ನ ಸೊಸಿ ಹೆದರತಾಳ, ಪಾಪ, ಒಂದ ಕತೀ ಹೇಳಲಿ?

ಮುದುಕಿ : ಊರೆಲ್ಲಾ ಹಾಯ್‌ ಹಾಯಂದರ ಇವ ಕತಿ ಹೇಳೇನಂತಾನಲ್ಲS!

ಒಂಕಾರಿ : ಎಮ್ಮಾ ಹಾಯ್‌ ಹಾಯಂದೆಲ್ಲ, ನನ್ನ ಕನಸಿನಾಗ-ಸುಡುಗಾಡದಾಗಿನ ಹೆಣ ಎದ್ದ, ಮುಗಿಲ ಕಡೆ ಕೈ ಮಾಡಿ ಹಾಯ್‌ ಹಾಯನ್ನತಾ ಕುಣೀತಿದ್ದುವು! ದೇಸಾಯೀ ಗೇಣೀ ಕೊಟ್ಟಿರೇನಬೇ?

ಮುದುಕಿ : ತಿನ್ನಾಕ ಅನ್ನs ಇಲ್ಲ, ಇನ್ನ ಗೇಣೀ ಎಲ್ಲಿಂದ ತರೋಣಪ?

ಒಂಕಾರಿ : ಹಂಗಾದರ ನಿಮ್ಮ ಮನೀನೂ ಜಪ್ತಿ ಮಾಡತಾರನ್ನು. ನನ್ನ ಕನಸ ಸುಳ್ಳಾಗಾಣಿಲ್ಲ; ನಿಮ್ಮ ಮನೀ ಮ್ಯಾಲೊಂದ ಹದ್ದ ಹಾರ್ಯಾಡತಿತ್ತಬೇ!

ಮುದುಕಿ : ನಿನ್ನ ಮಣ್ಣಾಗ ಹಾಕಲಿ; ಬಾಯಿ ಮುಚ್ಚತೀಯಿಲ್ಲ?

ಒಂಕಾರಿ : ಬಾಯಿ ಮುಚ್ಚಿ ಹೆಂಗ ಮಾತಾಡೋದಬೇ?

ಮುದುಕಿ : ಮಾತಾಡಬ್ಯಾಡ.

ಒಂಕಾರಿ : ಹಾಂಗ ಹೇಳಲ್ಲ. ನಾ ಎಷ್ಟ ಸಲ ನೋಡೇನಿ, ಬಾಯಿ ಮುಚ್ಚಿ ಮಾತಾಡಾಕ ಬರೋದs ಇಲ್ಲ. ಅದಕ್ಕs ನಾ ಬಾಯಿ ತೆರೆದs ನಿದ್ದೀ ಮಾಡತೀನಿ. ಅಂಧಾಂಗ ನಾ ಕನಸಿನಾಗೂ ಮಾತಾಡತೇನಬೇ.
(ದೂರಾದಿಂದ ಅಳುವ ಒಂಟಿ ದನಿ ಕೇಳಿಸುತ್ತದೆ)

ಮುದುಕಿ : ಮತ್ತ ಯಾರ ಎದ್ದರೊ! ಗಲಾಸ ಒರಸೋದ ಮುಗೀತೀಲ್ಲ? ದೀಪಾ ಹಚ್ಚಬಾರದ?
(ಚಿನ್ನಿ ಒಳಗೆ ಹೋಗುವಳಲು)

ಒಂಕರಿ : ಊರಂತೂರೆಲ್ಲಾ ಗುಳೇ ಎದ್ದ ಹಾಳ ಸುರೀತೈತಿ.  ಹಗಲಿ ಸೈತ ಹಾದಾಡಾಕ ಅಂಜಿಕಿ ಬರತೈತಿ. ಮಣ್ಣಗಾಣದ ಹೆಣ ಯಾರ್ಯಾರ ಮನ್ಯಾಗ ಎಷ್ಟೆಷ್ಟ ಬಿದ್ದಾವೋ ದೇವರs ಬಲ್ಲ! ಅದಕ್ಕs ನಾ ದೇವರಿಗೆ ಬೇಡಿಕೋತೀನಿ : ದೇವರs ಈ ಮಂದಿಗೆಲ್ಲಾ ಮಣ್ಣ ತಿಂದ ಬದಕೋ ಶಕ್ತಿಕೊಡು-ಅಂತ. ಬರೋಬರಿ ಏನಬೆ?

(ಒಳಗೆ ಚಿನ್ನಿ ಕಿಟಾರನೆ ಕಿರುಚುವಳು)

ಮುದುಕಿ : ಯಾಕ, ಯಾಕs ಚಿನ್ನವ್ವಾ, ಚಿನ್ನವ್ವಾ……
(ಇಬ್ಬರೂ ಗಡಬಡಿಸಿ ಒಳನಡೆದಾಗ, ಚಿನ್ನಿಯ ಬಾಯಿ ಹಿಡಿದುಕೊಂಡು ಉರಿನಿಂಗ ಬರುವನು)
ಯಾರ, ಯಾರವರಾ?

ಉರಿನಿಂಗ : ನಾನsಬೆ, ಯಾ ಕ ಚೀರತಿ?
ಒಂಕಾರಿ : ನಿನಾಪ್ಪನಾ! ನಿನ್ನ ಮನ್ಯಾಗ ನೀನs ಕಳ್ಳತನ ಮಾಡತೀಯೇನೊ?

ಮುದುಕಿ : ಮೂಳಾ, ಮುಂಚೀ ಬಾಗಲಿರಲಿಲ್ಲಾ ಬರಾಕ?

ಉರಿನಿಂಗ : ಸಾವಕಾಶ ಮಾತಾಡು. ಕಾರಭಾರಿ ಬಂದೂಕಿನವರನ್ನ ಕರಕೊಂಡ ನಮ್ಮ ಮನೀ ಜಪ್ತಿಗಿ ಬರತಾನ. ಅವ ಬರೋದರಳಗs ಮನೀ ಬಿಡಬೇಕು. ಕೈಗಿ ಸಿಕ್ಕಿದ್ದ ತಗೊಂಡ ಏಳ್ರಿ ಮೊದಲು.

ಮುದುಕಿ : ಮನೀ ಜಪ್ತಿಗಿ! ಅಯ್ಯೋ ಶಿವನ!
(ಕೈ ಹೊತ್ತು ಕೂರುವಳು)

ಉರಿನಿಂಗ : ಕೈ ಹೊತ್ತ ಕುಂದರಾಕ ಯಾಳೇ ಇಲ್ಲ.

ಮುದುಕಿ : ಗೇಣೀ ಮುಂದಿನ ವರ್ಷ ಕೊಡತೇವಂತ ಹೇಳಲಿಲ್ಲಾ?

ಉರಿನಿಂಗ : ನೀ ಬರತೀಯೋ ಇಲ್ಲೇ ಇರತೀಯೊ?
(ಸಾಮಾನು ಕಟ್ಟತೊಡಗುವನು)

ಒಂಕಾರಿ : ಏನೋನೋ ಭಾಳ ಹಾಕ್ಯಾಡಿಬೇಕು, ಏಳಬೇ ಎಮ್ಮಾ.

ಮುದುಕಿ : ನಾ ಇದs ಮನ್ಯಾಗ ಸಾಯವಾಕಿ.

ಉರಿನಿಂಗ : ಓಂಕಾರೀ, ನೀ ಚಿನ್ನೀನ ಕರಕೊಂಡ ಮುಂದ ಹೋಗಿ ಮಂದ್ಯಾಗ ನಿಂತಿರು. ನಾ ಅವ್ವನ್ನ ಕರಕೊಂಬರ್ತೀನಿ.

ಚಿನ್ನಿ : ಎವ್ವಾಬೇ……
(ಅಳುವಳು)

ಮುದುಕಿ : ಉರಿನಿಂಗಾ, ನಾ ಒಮ್ಮಿ ದೇಸಾಯರ ಕಾಲ ಹಿಡದ ಬರಲೇನೊ?

ಉರಿನಿಂಗ : ದೇಸಾಯೀ ಕಣ್ಣ ನೆತ್ಯಾಗ ಅದಾವ. ಕೆಳಗೆ ನೀ ಕಾಲ ಹಿಡಿದರ ಅವಗ ಕಾಣಿಸೋದs ಇಲ್ಲ. ಒಂಕಾರೀ, ಮುಗೀತಿಲ್ಲೊ? ಚಿನ್ನೀ, ಹೊತ್ತುಕೊ ಇದನ್ನ.

ಮುದುಕಿ : ನೀವs ಹೊಂಟ ಮ್ಯಾಲ ನಂದೇನೈತಿ?
(ನಾಲ್ವರು ಒಂದೊಂದು ಗಂಟು ಕಟ್ಟಿ ತಲೆಯ ಮೇಲೆ ಹೊರುವರು. ಕಾಲ್ಮರಿಸದ್ದು ಕೇಳಿಸುವುದು.)

ಒಂಕಾರಿ : ಬಂದೂಕಿನವರು ಬಂದರೋ ಹುಡುಗಾ!
(ಬಾಗಿಲು ಬಡಿದ ಸದ್ದು. ನಾಲ್ವರೂ ಮೂಲೆಯಲ್ಲಿ ಕುಸಿಯುವರುಹೊರಗೆ ಧ್ವನಿಗಳು ಮಾತಾಡುತ್ತವೆ.)

ಧ್ವನಿ ೧ : ಉರಿನಿಂಗಾ, ಏ ಉರಿನಿಂಗಾ……

ಧ್ವನಿ ೨ : ಗುಳೆ ಹೋದರೋ ಏನೊ!

ಧ್ವನಿ ೧ : ಏ, ಗುಳೇ ಎದ್ದ ಮಂದಿ ಊರ ಮುಂದಿನ ಗುಡ್ಯಾಗ ಕೂಡ್ಯಾರಂತಲ್ಲ, ಅಲ್ಲಿಗಿ ಹೋಗು; ಉರಿನಿಂಗ, ಅವರವ್ವ ಇದ್ದರ ನಿಲ್ಲಸು. ದೇಸಾಯರು ಕರೀತಾರಂತ ಹೇಳು.

(ಕಾಲ್ಮರಿ ಸದ್ದು ದೂರ ಹೋಗುತ್ತದೆ. ನಾಲ್ವರೂ ಮತ್ತೆ ಗಂಟು ಹೊರುವರು. ಉರಿನಿಂಗ ಬಾಗಿಲು ತೆರೆಯುವನು. ಲಾಟೀನು ಹಿಡಿದುಕೊಂಡು ನಗುತ್ತ ಕಾರಭಾರಿ, ಇಬ್ಬರು ಬಂದೂಕಿನವರು ಬರುವರು.)

ಕಾರಭಾರಿ : ಕೈ ಕೊಟ್ಟ ಹೊಂಟಿದ್ದಿರಿ ಹೌಂದಲ್ಲ? ಏನS ಮುದುಕವ್ವಾ. ಉರಿನಿಂಗ ಬುದ್ದಿಗೇಡಿ ಅಂದರ ನೀನೂ ಹಾಂಗs? ಇಳಸರಿ ಸಾಕಿನ್ನ.

ಒಂಕಾರಿ : ಬುದ್ದೀ ತೂಗಿ ಅಳೀತೀರಿ? ಮೊದಲ ಬಂದ ಕೆಲಸ ಹೇಳರೆಪಾ,-

ಕಾರಭಾರಿ : ಎಲಾ ಇವನಾಪ್ಪನ! ನೀನೂ ಬಂದೀಯೇನೋ) ಇಲ್ಲೇ? ಚಂದರಾಮ ಚಂದರಾಮ ಅಂತ್ಹೇಳಿ ದೇಸಾಯರ ಹಂತ್ಯಾಕಿಂದ ಬೆಳ್ಳೀ ರೂಪಾಯಿ ತಂದಿದ್ದೆಲ್ಲ, ನಡೀತೇನ?

ಒಂಕಾರಿ : ನಡದೀತೇನಂತ ಸಿಕ್ಕಸಿಕ್ಕಲ್ಲಿ ಅಡ್ಡಾಡಿದೆ. ಹೋದ ಹೋದಲ್ಲೆಲ್ಲ ಹೆಣಾನS ಬಿದ್ದಾವರಿ ನಿಮ್ಮ ಪುಣ್ಯೇದಿಂದ.

ಕಾರಭಾರಿ : ದೇಸಾಯರೇನೋ ನೀ ಅಂದ ಮಾತಿಗೆಲ್ಲಾ ನಗತಿದ್ದಾರು. ಒದರಿ ಒದರಿ ಬಾಯಿ ಹುಣ್ಣಾಗೇತಿ, ನನಗೆ ನಗಾಕ ಆಗಾಣಿಲ್ಲ. ನಮ್ಮ ನಮ್ಮ ವ್ಯವಹಾರ ಮಾತಾಡತೀವು, ಬೇಕಂದರ ಬಾಯ್ಮುಚ್ಚಿಕೊಂಡ ಬಿದ್ದಕೊ, ಸಾಕಂದರ ಎದ್ದ ಹೋಗು. ಖರೇ ಹೇಳತೀನಿ : ನನ್ನ ಹತ್ತರ ಚಿಲ್ಲರ ಇಲ್ಲ. ಬೇಕಂದರೆ ಒಂದಸಲ ಬಿಕ್ಕಲೇನು?

ಮುದುಕಿ : ಅವನ ಮಾತ ಯಾವ ಲೆಕ್ಕಕ್ಕೆ ಬಿಡರಿ; ಏನ ಹೇಳೋದ ನನ್ನ ಮುಂದ ಹೇಳ್ರಿ.

ಕಾರಭಾರಿ : ಹೇಳತೇನಬೇ, ಹೇಳಾಕs ಬಂದೀನಿ. ದಿನಾ ಬೆಳಗಾದರ ಒಬ್ಬರ ಮೋತಿ ಒಬ್ಬರ ನೋಡವರು. ನೀವು ನಗನಗತ ಇದ್ದರ, ನಾವೂ ನಗನಗತs ಇರತೀವು.

ಒಂಕಾರಿ : ಮಾತಿಗೊಮ್ಮಿ ನಗೋ ಮುಂದೀನ ಹೆಂಗ ನಂಬಬೇಕರಿ ?

ಕಾರಭಾರಿ : ಆಯ್ತಪಾ, ಮುದುಕವ್ವಾ, ನಾ ನಿಮ್ಮ ವೈರಿ ಅಲ್ಲ ಅಂತೀನಿ. ಉರಿನಿಂಗಾ ಈ ಮಾತ ನೀ ನಂಬತೀಯಿಲ್ಲೊ?

ಒಂಕಾರಿ : ವೈರಿ ಅಲ್ಲ ಅಂತೀರಿ, ಬಂದೂಕಿನವರನ್ನ ಕರಕೊಂಬಂದೀರಿ……

ಕಾರಭಾರಿ : ನೀ ಏನ ಗಂಟ ಬಿದ್ಯೊ ನನಗ? ಬಂದೂಕಿನವರನ್ನ ಹೊರಗ ಕಳಸ ಅಂತೀಯೇನು? ಆದರ ಒಂದ ಕರಾರು.

ಒಂಕಾರಿ : ಅದೇನಪಾ?

ಕಾರಭಾರಿ : ನೀನೂ ಹೊರಗ ಹೋಗಬೇಕು.

ಒಂಕಾರಿ : ಕಳಸ ಹಂಗಾದರ, ನಾನೂ ಗುಳೇ ಎದ್ದ ಮಂದೀನ್ನ ಕಳಿಸಿ ಬರತೀನಿ.

ಕಾರಭಾರಿ : ನಡೀರೆಪಾ, ಹೊರಗ ನಿಂತಿರ‍್ರಿ, ಗರ್ಜ ಬಿದ್ದರ ಕರೀತೀನಿ, ಬರೀರೆಂತ.
(ಒಂಕಾರಿ ಬಂದೂಕಿನವರು ಹೊರಗೆ ಹೋಗುವರು)
ಮುದುಕಮ್ಮಾ, ರಾತೋ ರಾತ್ರಿ ಹಿಂಗ ಊರ ಬಿಟ್ಟ ಹೊಂಟೀದಿ. ದೇಸಾಯರಿಗೆ ಇದ ಗೊತ್ತಾದರ ಏನ ಮಾಡ್ಯಾರು? ಇಂಥಾ ಸಣ್ಣ ಮಾತ ನಾನೂ ಹೇಳೋ ದಿಲ್ಲಂತ ಇಟಕಾ.

ಉರಿನಿಂಗ : ಅದೇನ ಹೇಳೋದ ಹೇಳಿ ಬಿಡರೆಪಾ.

ಕಾರಭಾರಿ : ನೋಡಬೇ; ಇವೆಲ್ಲಾ ನನ್ನ ಮಾತಲ್ಲ, ದೇಸಾಯರ ಮಾತು. ನಾನs ದೇಸಾಯಿ ಆಗಿದ್ದರ ಈ ಮಾತ ಅಂತಿರಲಿಲ್ಲಂತ ಇಟಕಾ.

ಉರಿನಿಂಗ : ಬರೋಬರಿ, ನೀವು ದೇಸಾಯರಲ್ಲವಲ್ಲ, ಮುಂದ ಹೇಳ್ರ ಈ.

ಕಾರಭಾರಿ : ನಾ ಅಂದರ, ದೇಸಾಯರು ಹೇಳೋದಿಷ್ಟು : ಈಗೀ ನೀವು ನಾ ಹೇಳಿಧಾಂಗ ಕೇಳಿದರ ಇಲ್ಲೇ ಸುಕದಿಂದರಭೌದು.

ಮುದುಕಿ : ಅದೇನ ಬಿಡಿಸಿ ಹೇಳ್ರೀಯಪ್ಪ.

ಕಾರಭಾರಿ : (ಪುಸ್ತಕ ಹಿರಿಯುತ್ತ)

ನೀವು ದೇಸಾಯರಿಗೆ ಕೊಡಬೇಕಾದ್ದು ಎಂಟನೂರ ರೂಪಾಯಿ.

ಉರಿನಿಂಗ : ಎಂಟನೂರಾ? ಅಧೆಂಗರಿ? ನಾನೂರ ಅಲ್ಲೇನ್ರಿ ಗೇಣಿ?

ಕಾರಭಾರಿ : ಓದೇ ಬಿಡತೀನಿ, ತಡಿ :
(ಓದುತ್ತ.)

ರಾ| ರಾ| ಉರಿನಿಂಗ ಕಡೀಮನಿ, ಸಾಖಳೀನ ಶಿವಾಪುರ ಗ್ರಾಮದ ರೈತನಿಗೆ, ಶ್ರೀಮಂತ ಸರದೇಸಾಯರ ಹುಜೂರಿಂದ ಅಪ್ಪಣೆಯಾಗುವ ಹುಕುಂ ಏನೆಂದರೆ-ನೀನು ಸದರಿ ಶಿವಾಪುರ ಗ್ರಾಮದ ಹಳೇರೈತನಿದ್ದು, ವರ್ಷಂಪ್ರತಿ ತೆರಬೇಕಾದ ಗೇಣಿ ಹಣ ಚಾರಸೇ ರೂಪಾಯಿ, ಈ ಉಗಾದಿಗೆ ಹುಜೂರ ಪಾದಕ್ಕೆ ತೆರಬೇಕಾಗಿತ್ತು ಆದರೆ ನಾಕು ತಿಂಗಳಾದರೂ ಕೊಟ್ಟಿಲ್ಲ. ಸದರೀ ನಾಕು ತಿಂಗಳ ಅಸಲು ಬಡ್ಡಿ ಕೂಡಿ ಈಗ ಸದ್ದೇ ಕೊಟ್ಟರೆ ಪಾಚಸೇ ರೂಪಾಯಿ…

ಮುದುಕಿ : ಏನಂದಿರಿ?

ಕಾರಭಾರಿ : (ಮುದುಕಿಯ ಕಡೆಗೆ ಮುಖಮಾಡಿ)

ಮುದುಕಮ್ಮ ಕೋಂ ಶಿವಲಿಂಗಪ್ಪಾ ಕಡೀಮನಿ, ಸಾಕೀನ ಶಿವಾಪುರ-ನೀನು ಮಗನ ಮದುವೆಯನ್ನು ಅಗ್ಗದೀ ಅದ್ದೂರಿಯಿಂದ ಮಾಡಿದಿ. ಈ ವರ್ಷ ಕಾರಹುಣಿವಿ ಮೂರ್ತಕ್ಕ ಸೊಸೆಯನ್ನು ನಡ್ಯಾಕ ಕರಕೊಂಬಂದಿ. ಆದರೆ ದೇಸಗತಿಗೆ ಸಲ್ಲಿಸಬೇಕಾದ ಮಾನಮರ್ಯಾದೆ ವಗೈರೆಗಳನ್ನು ಹುಜೂರ ಪಾದಕ್ಕೆ ಸಲ್ಲಿಸಿಲ್ಲ. ಉದಾರರಾದ ಹುಜೂರರು ಈ ಬಾಬತ್ತಿನಲ್ಲಿ ನಿನಗೆ ಬರೇ ದೋನಸೇ ರೂಪಾಯಿ ದಂಡ ಹಾಕಿದ್ದಾರೆ.

ಮುದುಕಿ : ಇಂಥಾ ಬರಗಾಲವಾದಾಗ ಮಾನ ಮರ್ವಾದಿ ಹೆಂಗ ಮಾಡೋಣರಿ?

ಕಾರಭಾರಿ : ಊರಮಂದಿ ಹೆಂಗ ಮಾಡತಾರ, ಹಾಂಗ ಮಾಡಬೇಕು. ನಾ ಹೇಳಿಧಾಂಗ ಕೇಳಿದರ ಶಂಬೋರಿ ರೂಪಾಯ್ದೊಳಗ ಮುಗಸ್ತೀನಿ, ತಯಾರಿದ್ದೀಯೇನು?

ಮುದುಕಿ : ಎಪ್ಪಾ, ಕುಡುಗೋಲೂ ನಿಂದs, ಕುಂಬಳಕಾಯೀನೂ ನಿಂದs. ಹೆಂಗ ಹೆಂಚತೀ ಹೆಂಚು.

ಕಾರಭಾರಿ : ಉರಿನಿಂಗಾ, ನೀ ಹೊರಗ ನಡಿ.

ಉರಿನಿಂಗ : ನಾ ಯಾಕ ಹೊರಗ ಹೋಗ್ಲಿ?

ಕಾರಭಾರಿ : ನಿನ್ನ ಹಿತಕ್ಕಾಗಿ ಹೇಳತೀನಿ ಮಾರಾಯಾ, -ತಾಕತ್ತ ಇಲ್ಲದವ, ಇದ್ದವನ ಕಾಲ ಹಿಡೀಬೇಕಂತ ನೇಮ  ಐತಿ. ನನ್ನS ನೋಡಲ್ಲ,-ಇನ್ನೂತನಕ ದೇಸಾಯರ ರುಂಬಾಲ ನೋಡಿಲ್ಲ. ಕಾಲ್ಮರಿ ಹೇಳು, ಥಟ್ಟನ ಗುರುತ ಹಿಡೀತೀನಿ. ಏನS ಮುದುಕವ್ವಾ?

ಮುದುಕಿ : ಅದೇನ ಹೇಳತಾರ ಹೇಳಲಿ, ಹೊರಗ ನಡಿಯಲಾ ಉರಿನಿಂಗಾ.

ಉರಿನಿಂಗ : ಹೋಗೋದಿಲ್ಲ.

ಕಾರಭಾರಿ : ನಾಯಿ ಮರಿ ಬಲಯೋ ಮುನ್ನ ಬಗಳಬಾರದಪಾ.

ಉರಿನಿಂಗ : ಬಗಳಿದರ?

ಮುದುಕಿ : ಸೆಗಣಿ ತಿನ್ನಬೇಕಾಗತೈತಿ.

ಕಾರಭಾರಿ : ಇಲ್ಲಿ ನನ್ನ ಅಂಬೋಣ ಬ್ಯಾರೇ ಐತಿ; ಸೆಗಣೀ ಅಲ್ಲ, ಗುಂಡ ತಿನ್ನಬೇಕಾಗತೈತಿ. (ಚಪ್ಪಾಳೆ ತಟ್ಟುವನು. ಬಂದೂಕಿನವರು. ಸನ್ನೆ ಮಾಡಿದೊಡನೆ ಉರಿನಿಂಗನ ಕಡೆಗೆ ಹೊರಡುತ್ತಾರೆ.)

ಮುದುಕಿ : ಏನ್ರೀ ಎಪ್ಪಾ, ನೀವೂ ಹಿಂಗs ಮಾಡಬೇಕ? ನೀವು ಯಾರು, ಉರಿನಿಂಗ ಯಾರು?
(ಉರಿನಿಂಗನಿಗೆ)

ಏ ಭಾಡ್ಯಾ, ಸುಮ್ಮನ ಹೊರಬೀಳ್ತಿಯೋ, ಇಲ್ಲೊ? ಕಾರಭಾರಿ ಹೇಳತಾರ, ನಾ ಕೇಳತೀನಿ, ನೀ ಹೊರಬೀಳು.

ಉರಿನಿಂಗ : ಕಾರಭಾರೀ ಕಣ್ಣ ಏನ ಹುಡುಕತಾವಂತ ನನಗೆ ಗೊತ್ತಬೇ. ನಾ ಚಿನ್ನೀನ ಕರಕೊಂಡ ಹೋಗತೀನಿ ಹಂಗಾದರ.

ಕಾರಭಾರಿ : ನಾ ಯೋಳನೇ ತಿಂಗಳ ಹುಟ್ಟಿಲ್ಲ. ಕೇಳಬೇ ಎಮ್ಮಾ, ಈಗಿಂದೀಗ ನಿನ್ನ ಸೊಸೀನ ದೇಸಾಯರ ಪಾದಾ ಪಡಕೊಳ್ಳಾಕ ಕಳಿಸಿಕೊಡು; ಅಂದರs ಬಚಾವಾಗತೀರಿ, ಇಲ್ಲದಿದ್ದರ ಇಲ್ಲ.

ಉರಿನಿಂಗ : ಕೇಳಿದೇನಬೇ?

ಮುದುಕಿ : ಏನಂದಿರಿ?

ಚಿನ್ನಿ : ಪಾದಾಪಡಕೊಳ್ಳಾಕಂಧರ?

ಕಾರಭಾರಿ : ಎಲ್ಲಾ ಕೂಡಿ ಅರ್ದಾ ತಾಸಿನ ಕೆಲಸ.

ಚಿನ್ನಿ : ಅಂದರ?

ಉರಿನಿಂಗ : ಬರೋಬರಿ ಹೇಳ್ರಿ. ನಾಯಿಯಂಥಾ ನಾಯಿಗಿ ಹೆಸರಿಡತಾರ ದೇಸಾಯರು, ಇದಕ್ಕಿಟ್ಟಿಲ್ಲೇನೊ?. ಇದರ ಹೆಸರೇನಂದರ : ಹಾದರ.

ಕಾರಭಾರಿ : ಇಷ್ಟ ಮಾತಾಡಂತ ದೇಸಾಯರು ನನಗೆ ಹೇಳಿದ್ದಿಲ್ಲ. ಇನ್ನ ನೀವುಂಟು, ಬಂದುಕಿ ನವರುಂಟು, ರೂಪಾಯಿ ಎಣಿಸೋದಿದ್ದರ ನನಗ ಹೇಳ್ರಿ.

ಉರಿನಿಂಗ : ನನ್ನ ಹಂತ್ಯಾಕೀಗ ಹಣಾನೂ ಇಲ್ಲ. ಚಿನ್ನೀನ ಕಳಿಸೋದೂ ಇಲ್ಲ, ಹಿಂಗಂತ ದೇಸಾಯರಿಗೆ ಹೇಳಿರಿ.

ಕಾರಭಾರಿ : ಇದs ಮಾತಾದರ ಬಂದೂಕಿನವರಿಗೆ ಹೇಳಿಕೊ. ನಾ ಬರತೀನಿ.
(ಚಿನ್ನಿ ಮುದುಕಿಯನ್ನು ತಬ್ಬಿಕೊಳ್ಳುವಳು)

ಮುದುಕಿ : ಎಪ್ಪಾ ಕಾರಭಾರೀ, ನಿಮ್ಮ ಕಾಲ ಬೀಳತೇನ್ರಿ. ಇದು ನಿಮ್ಮ ಮಗಳಂತ ತಿಳಕೊಂಡ ಕಾಪಾಡರಿ.(ಚಿನ್ನಿಗೆ)
ಕಾಲಿಗಿ ಬೀಳs.

ಕಾರಭಾರಿ : ನನ್ನ ಕಾಲಿಗಿ ಬಿದ್ದರ ಏನೂ ಆಗೋದಿಲ್ಲಬೇ. ಇದ ಗೊತ್ತಾಗಿ ನನ್ನ ಹೇಂತಿ ಸೈತ ನನ್ನ ಕಾಲ ಬೀಳೋದಿಲ್ಲ.
(ಒಂಕಾರಿ ಉತ್ಸಾಹದಿಂದ ಓಡಿಬರುವನು)
ಒಂಕಾರಿ : ಉರಿನಿಂಗಾ , ಉರಿನಿಂಗ! ಎಲಾ! ಕಾರಭಾರಿ ಇನ್ನs ಇಲ್ಲೇ ಇದಾನಲ್ಲ. ನಾ ನಿಮ್ಮನ್ನ ಹುಡುಕಿಕೊಂಡs ಬಂದೆ, ಇನ್ನ ಯಾರೂ ಊರ ಬಿಡಾಣಿಲ್ಲ. ಗುಳೇ ಎದ್ದವರೆಲ್ಲಾ ತಿರಿಗಿ ಬರಾಕ ಹತ್ಯಾರ! ಅಲ್ಲಿ ನೋಡರಿ, ಗ್ಯಾಸ ಹಚ್ಚಿಕೊಂಡ ಮಂದಿ ಇತ್ತs ಬರಾಕ ಹತ್ಯಾರ! ದೇವರS ದೇವರ! ಊರ ಬದುಕಿಸಿದೊ ನಮ್ಮಪ್ಪಾ!

ಕಾರಭಾರಿ : ಏನೋ ಏನೋ ಅದು?

ಒಂಕಾರಿ : ಅಲ್ಲಿ ನೋಡಪಾ!
(ಎಲ್ಲರೂ ನೋಡುವರು. ಅವರ ಮುಖದ ಮೇಲೆ ಪೆಟ್ರೊಮ್ಯಾಕ್ಸ್ಬೆಳಕು ದೂರದಿಂದ ಬೀಳುವುದು, ಅಡಗುವುದುಹೀಗೆ. ಗುಂಪಿನ ದನಿ ಬರಬರುತ್ತ ಸ್ಪಷ್ಟವಾಗುತ್ತದೆ.)

ಉರಿನಿಂಗ : ಏನೇನಾಯ್ತ ಹೇಳೋ ಒಂಕಾರಿ.

ಒಂಕಾರಿ : ಅಪನಾಯ್ಕನ ಮಗ ಸಿದನಾಯ್ಕನ್ನ ನೋಡಿಲ್ಲೇನೋ?

ಮುದುಕಿ : ಬೆಳಗಾವಿಗಿ ಸಾಲೀ ಬರ್ಯಾಕ ಹೋಗಿದ್ನಲ್ಲ?

ಒಂಕಾರಿ : ಅವ ಬಂದು ಗುಳೇ ಎದ್ದ ಮಂದೀನೆಲ್ಲಾ ತರಿಬಿ, ಇದು ನಿಮ್ಮ ಊರು, ನಿಮ್ಮ ಹೊಲಾ ಅಂತ ಏನೇನೋ ಹೇಳಿ, ಹೋಗೋ ಮಂದೀನೆಲ್ಲಾ ನಿಲಿಸಿದ. ನಿಮ್ಮ ಮನೀಗಿ ಕಾರಭಾರಿ ಬಂದಾನಂತ ಹೇಳಿದೆ. ಎಲ್ಲಾರೂ ಇತ್ತs ಬರಾಕ ಹತ್ಯಾರ. ಎಷ್ಟ ಚಂದ ಮಾತಾಡತಾನಬೇ ಹುಡುಗ! ನಾ ಏನೇನ ಹೇಳಿದ್ದೆ-ಅದನೆಲ್ಲಾ ಅವನೂ ಹೇಳಿದ. ಆದರ ಅವ ಭಾಳ ಚಂದ ಹೇಳಿದ.

ಉರಿನಿಂಗ : ಎಲ್ಲಾರು ಬಂದರೇನೋ?

ಒಂಕಾರಿ : ಕಾ ಹೌಂದ? ಬಂದರ ಬಂದರು……!
(ಹಿಂಡು ಜನ ನುಗ್ಗುವರು. ಅವರಲ್ಲಿ ಸಿದನಾಯ್ಕನೂ ಇದ್ದಾನೆ.)

ಸಿದನಾಯ್ಕ : ಏನು ಕಾರಭಾರಿಗಳು, ಇಲ್ಲೀತನಕ ಪಾದ ಬೆಳೆಸಿದರಿ?

ಕಾರಭಾರಿ : ಅದs, ಗೇಣೀ ವಸೂಲಿಗೆ.

ಸಿದನಾಯ್ಕ : ಏನಾದರೂ ಹೇಳಿದರೋ? ಅಥವಾ ನಾನs ಹೇಳಲೋ? ಉರಿನಿಂಗಾ-

ಕಾರಭಾರಿ : ಅವನೇನೂ ಹೇಳಲಿಲ್ಲ.

ಸಿದನಾಯ್ಕ : ಹಂಗಾದರ ನಾನs ಹೇಳತೀನಿ : ಗೇಣೀ ಕೊಡೋದಕ್ಕ ಈಗ ಆಗೋದಲ್ಲವಂತ ದೇಸಾಯರಿಗೆ ಹೇಳ್ರಿ.

ಕಾರಭಾರಿ : ಹಣ ಎಣಿಸೋದಿದ್ದರ ನನ್ನ ಮುಂದ ಹೇಳ್ರಿ. ಒಣ ಮಾತಿದ್ದರ ಬಂದೂಕಿನವರಿಗಿ ಹೇಳ್ರಿ.

ಉರಿನಿಂಗ : ಅವರ ಕೈಯಾಗ ಬಂದೂಕ ಇದ್ದರ ನಮ್ಮ ಕೈಯಾಗ ಕಾಲ್ಮರಿ ಬರತಾವ!

ಸಿದನಾಯ್ಕ : ಇವರಾದರೂ ನಮ್ಮ ಮ್ಯಾಲ ಯಾಕ ಕೈಎತ್ತಬೇಕಲು?-ಇವರೂ ನಮ್ಹಾಂಗ ಮನಶೇರಂತ ಹೇಳತೀವಿ-ಅದಕ್ಕ? ಏನ್ರೆಪಾ ನಮ್ಮ ಮ್ಯಾಲ ಗುಂಡ ಹಾರಸ್ತೀರಿ? ಹಾರಸರಿ. ಗೇಣಿ ಕೊಡೋದಿಲ್ಲ.(ಅವರ ಎದುರು ನಿಲ್ಲುವನು)

ಕಾರಭಾರಿ : ಹು ಹುಳಗೊಳ ಜೀವ ಪಣಕ್ಕ ಹಚ್ಚಿ ದೇಸಾಯರ ಜೋಡಿ ಇಸಪೇಟ ಆಟ ಆಡೇನಂತೀಯಲ್ಲಾ, ಏನ ಹೇಳಲಿ! ಇಂದೇನೋ ಹಿಂದಿರಿಗಿ ಹೋದ್ವಿ ಅಂತಿಟ್ಟಕಾ; ನಾಳಿ ದೇಸಾಯಿ ಬಿಡತಾರು? ಒಂದಕ್ಕ ಹತ್ತ ಕಕ್ಕಸ್ತಾರ. ನೀ ಇಂತಾ ಆಟ ಆಡಭೌದು; ಯಾಕಂದರೆ ಇದರಾಗ ನೀ ಏನೂ ಕಳಕೊಳ್ಳೋದಿಲ್ಲ ನೋಡು.
(ಜನರಿಗೆ)

ಯಾಕ್ರಪಾ, ಬಂದೂಕಿನ ಜೋಡಿ ಆಟಾ ಆಡೋ ವಯಸ್ಸೇನ್ರೊ ನಿಮ್ಮದು?

ಸಿದನಾಯ್ಕ : ಈ ಊರ ಭುಜದ ಮ್ಯಾಲ ಹೊತ್ತವರು ಇವರು. ನಿಮ್ಮ ಕಣ್ಣಿಒಗಿ ಹುಳಧಾಂಗ ಕಂಡರೇನ್ರಿ?

ಕಾರಭಾರಿ : ಸಿಟ್ಟಿಗೆ, ಸೆಡವಿಗೆ ಬಾಳೇ ಕಾಣ್ಸಾಣಿಲ್ಲಪಾ. ಖರೆ ಹೇಳತೀನಿ : ಈ ಊರಾಗ ಒಂದು ಗುಬ್ಬಿ ಐತಿ; ಸಾವಿರ ಹುಳಾ ಅದಾವ. ಗುಬ್ಬಿ ಹುಳ ತಿನ್ನತೈತಿ; ತಿಂದs ಬದುಕತೈತಿ. ಹುಳ, ಗುಬ್ಬಿ ಎರಡೂ ಸಮ ಅಂತೀಯೇನು?

ಸಿದನಾಯ್ಕ : ಎಲ್ಲೀತನಕ ನಾವು ಹುಳ ಅಂದಕೊಳ್ಳತೀವೋ ಅಲ್ಲೀತನಕ ತಿನ್ನೋ ಗುಬ್ಬಿ ಇರತದ. ಈಗ ನಮಗೆಲ್ಲಾ ಖಾತ್ರಿ ಆಗ್ಯsದ-ನಾವು ಹುಳ ಅಲ್ಲ, ಮನಶೇರು-ಅಂತ.

ಕಾರಭಾರಿ : ಇವರೆಲ್ಲಾ ಮಣಕಾಲ ಊರಿಕೊಂಡ ಹುಟ್ಟಿದವರು, ಬೆಳೆದವರು, ಇವರ್ಯಾರಿಗು ಒಂದ ಭೂಮಿಲ್ಲಾ, ಸೀಮಿಲ್ಲಾ……

ಸಿದನಾಯ್ಕ : ಅಡಿವ್ಯಾಗಿನ ಭೂಮೆಲ್ಲಾ ಯಾರದರಿ? ಕಾರಭಾರಿಗಳ, ನಿಮಗ ಈ ವಯಸ್ಸಿನಾಗ ಇಂಥಾ ಮಾತ ತಿಳಿತಾವೋ ಇಲ್ಲೊ.-ಭೂಮಿ ಅಂದರ ಹುಡುಗೀ ಹಾಂಗ ಏನ್ರೆಪಾ! ಒರಟ ಹುಡುಗಿ. ಜೋರಾಗಿ ಮೆತ್ತಗ ಮಾಡಿದವಗs ಆಕಿ ಒಳಗಾಗೋದು-ಹೆಸರಿದ್ದವಗಲ್ಲ; ಹೇಳ್ರಿ ದೇಸಾಯರಿಗಿ.

ಕಾರಭಾರಿ : ಏನ್ರೆಪಾ, ಈ ಮಾತಿಗಿ ನಿಮ್ಮದೆಲ್ಲಾ ಕಬೂಲಿ ಐತಿ ಹೌಂದಲ್ಲ? ಯಾಕಂದ್ರ ನಾಳಿ ಜೀವಾ ಕೊಡಾವರು ನೀವು, ಇವ ಅಲ್ಲ.

ಒಂಕಾರಿ : ಇಲ್ಲೀತನಕ ಈ ಹುಡುಗ ಮಾತಾಡಿದ್ನಲ್ಲ, ಅವೆಲ್ಲಾ ಯಾರ ಮಾತಂದಿ?

ಕಾರಭಾರಿ : ಬಾಯಿ ಹಾಕಿದಿ ಹೌಂದಲ್ಲ? ಕಬೂಲಿದ್ದರ ಹೇಳಲಿ. ಏನೊ ಉರಿನಿಂಗಾ?

ಉರಿನಿಂಗ : (ಕಾಲ್ಮರಿ ಕೈಯಲ್ಲಿ ಹಿಡಿದು ತೋರಿಸುತ್ತ)
ನನ್ನ ಜವಾಬ ಇದs ನೋಡ್ರಿ.

ಕಾರಭಾರಿ : ಹೌದು? ಲಗಾಸರ‍್ಯೊ.
(ಬಂದೂಕಿನವರು ಮುಂದೆ ಬಂದು, ಗುರಿಹಿಡಿದು ಉರಿನಿಂಗನ ಎದುರಿಗೆ ನಿಲ್ಲುವರು. ಸಿದನಾಯ್ಕ ತಾನೇ ಬಂದು ಉರಿನಿಂಗನನ್ನು ಹಿಂದೆ ಸರಿಸಿ, ಬಂದೂಕಿನವರ ಎದುರಿಗೆ ನಿಲ್ಲುವನು.)

ಸಿದನಾಯ್ಕ : ಹಾರಸರಿ, ತಾಕತ್ತಿದ್ದರ.

ಒಂಕಾರಿ : ಭಲೇ ಮಗನ!
(ಇದೇ ಸಮಯವೆಂದು ಹೊಂಚಿ ಜನ ಅವರ ಮೇಲೆ ಬಿದ್ದು ಬಂದೂಕು ಕಸಿಯುವರು)

ಸಿದನಾಯ್ಕ : ಏನಂತೀರಿ ಕಾರಭಾರಿಗಳ?

ಕಾರಭಾರಿ : ಹೋಗಿ ಹೇಳತೇನ್ರಿ.

ಸಿದನಾಯ್ಕ : ಇಂಥಾ ರಾತ್ಯ್ರಾಗೂ ಮಂದೆಲ್ಲಾ ಎಚ್ಚತ್ತಾರಂತ ಹೇಳ್ರಿ.
(ಕಾರಭಾರಿ, ಬಂದೂಕಿನವರು ಅವಮಾನಿತರಾಗಿ ಹೋಗುವರು)

ಒಂಕಾರಿ : ಜೈ ಸಿದನಾಯ್ಕ!

ಮುದುಕಿ : ಎಪ್ಪಾ, ಬಂದ ನಮ್ಮ ಜೀವಾ ಉಳಿಸಿದ.
ಮಾನಾ ಮರ್ವಾದಿ ಉಳಿಸಿದಿ.
ಊರಾಗ ಮಾನವಂತರು ಬಾಳಧಾಂಗ ಆಗೇತಿ.
ಹೆಂಗಸಿನ ಶೀಲಂದರ ದುಡ್ಡಿಗಿ ನಾಕಾಗೇತಿ.
ಮ್ಯಾಲ ಮಳಿರಾಯಗ ಕರುಣಾ ಇಲ್ಲ.
ಕೆಳಗೆ ದೇಸಾಯಗ ಕರುಣಾ ಇಲ್ಲ.
ಏನ ಹೇಳೋಣೋ ಎಪ್ಪಾ,
ದೇಸಾಯಿ ಮನ್ಯಾಗ ಹಣಾ ತುಂಬೇತಿ.
ರೈತರ ಮನ್ಯಾಗ ಹೆಣಾ ತುಂಬ್ಯಾವು!

ಒಂಕಾರಿ : ಭಲೆ ಭಲೆ, ಹೇಳ್ರೊ ಮಕ್ಕಳ್ರಾ,
ದೇಸಾಯಿ ವಾಡೇದಾಗ ಹಣಾ ಹಣಾ.
ರೈತರ ಮನ್ಯಾಗ ಹೆಣಾ ಹೆಣಾ.

ಕೆಲವರು : ದೇಸಾಯಿ ವಾಡೇದಾಗ ಹಣಾ ಹಣಾ.
ರೈತರ ಮನ್ಯಾಗ ಹೆಣಾ ಹೆಣಾ.

ಒಂಕಾರಿ : ಊರಾಗೊಂದ ತೋಳ ಐತೊ.
ಅದಕ್ಕ ಇಷ್ಟ ದೊಡ್ಡದೊಂದ ಹೊಟ್ಟಿ ಐತಿ.
ನಾವೆಲ್ಲಾ ಬ್ಯಾ ಅಂದರ ಬಾಯಿ ತಗೀತೈತಿ.
ಕುರಿಗೋಳಪ್ಪಾ ನಾವೆಲ್ಲಾ, ಕಾಯೋವಂಥಾ ಕುರುಬಿಲ್ಲ.
ಮಾತಿಲ್ಲ, ಕತಿಯಿಲ್ಲಾ, ಆಡೋದಕ್ಕ, ನಾಲಿಗಿಲ್ಲಾ.
ಕದ್ದ ಹೇಳಓ ಶಾಪದಿಂದ, ಬೈಗಳದಿಂದ, ನಿಟ್ಟುಸರದಿಂದ,
ಇಡೀ ಊರು ಒಳಗೊಳಗs ಉರೀತೈತಿ ಸಂತಾಪದಿಂದ.
ಸಣ್ಣ ನೆವ ಸಿಕ್ಕರ ಸಾಕು ಹೊಮ್ಮತೈತಿ ಹೊರಗುಕ್ಕಿ.
ಮಾತಿನ ಹಿಂದ ಆಡಿಗ್ಯಾವಪ್ಪಾ ಕಣ್ಣೀರ ಕೆರಿ.
ಹುಟ್ಟೋ ಹಸುರು ಹೆಸರಿಲ್ಲದ ಗಟ್ಟಿಯಾಗಿ ಕುಂತೈತಣ್ಣ.
ಹೆಸರಗೊಂಡ ಒಮ್ಮಿ ಅದನ ಕರಿ ಕರಿ!

ಕುರಿಗೋಳಪ್ಪಾ ಸಿದನಾಯ್ಕ, ಬ್ಯಾ ಅಂದವರು .
ನೊಂದೂ ಬೆಂದೂ  ದಣದವರಪ್ಪ ಕಾದೂ ಕಾದೂ.
ಹಗಲಿ ರಾತ್ರಿ ಕೇಳಸತಾವೊ ಬಂದೂಕಿನ ಹೆಜ್ಜಿ,
ಹೊಲಾಮನಿಯೆಲ್ಲಾ ಸಮ ಆದಾವೊ ಜಜ್ಜಿ ಜಜ್ಜಿ.
ಕುಡಗೋಲ ಬಂದ ಪಿಸಗುಡತಾವೊ ಓಣಿ ಓಣಿ
ಜುರುಕಿ ಮೆಟ್ಟ ಮೆಟ್ಯಾಡತಾವೊ ಮನೀ ಮನೀ.
ಕಣ್ಣ ಬಿಟ್ಟ ನಿಂತಾವಣ್ಣ ಗುಂಡಿನ ಬಾಯಿ.
ಬಾಯಿ ತೆರೆದ ನಿಂತಾವಣ್ಣಾ ಹಸದ ಹದ್ದಾ ಕಾಗಿ.
ಕರೀತೇವು ಕಾಪಾಡಣ್ಣಾ ಬಾರೊ ಶರಣಾ.
ಕಂಗಾಲಾಗಿ ನಿಂಗೀದೇವೊ ಕುರುಬರಣ್ಣಾ

ಹೇಳ್ರೊ ಏ-

ಎಲ್ಲರೂ : ಕರೀತೇವೊ ಕಾಪಾಡಣ್ಣಾ ಬಾರೊ ಶರಣಾ.
ಕಂಗಾಲಾಗಿ ನಿಂತೀದೇವೊ ಕುರುಬರಣ್ಣಾ||

ಒಂಕಾರಿ : ನನ್ನ ಕನಸ ಸುಳ್ಳ ಹೇಳೋದಿಲ್ಲ,
ಆದರ ಈ ಮಂದಿ ನಂಬೋದಿಲ್ಲ,-
ಬರತೈತಿ, ಬಂದs  ಬರತೈತಿ ಒಂದ ದಿನಾ,
ಆ ದಿನಾ,
ಕತ್ತೀ ಚೆಲ್ಲಿ ಕೈ ಕೈ ಕೂಡತಾವ,
ತುಳದ ಕಾಲ ನೆಲದ ಮ್ಯಾಲ ನಡೀತಾವ,
ತುಳಿಸಿಕೊಂಡ ಮುದ್ದಿಮೈ ಸೆಟದ ನಿಲ್ಲತಾವ!
ಆಳಾವಿಲ್ಲ, ಆಳಿಸಿಕೊಂಬಾವಿಲ್ಲ.
ಹೊಟ್ಯಾಗ ಕಿಚ್ಚಿಲ್ಲ. ನಾ ನೀ ಸಮಾನರೆಲ್ಲಾ.
ಬೆನ್ನಿಗಿ ಬೆನ್ನ ಆಧಾರ ಆಗತಾವ.
ದರವೊಂದ ಬೆನ್ನ ಹುರೀಗೆ, ಕೈಗೆ
ತನ್ನ ಮೈ, ತನ್ನ ನಂಬಿದ ಮೈ ಕಾಪಆಡೋ
ತಾಕತ್ತ ಇರತೈತಿ! ಹಕ್ಕ ಇರತೈತಿ!
ಸಲಿಗಿ ಇರತೈತಿ, ಸುಲಿಗಿ ಇರೋದಿಲ್ಲ.
ಸವಲತ್ತ ಇರತೈತಿ!
ಒಬ್ಬೊಬ್ಬಗು ಅಮೃತದಾಗ ಪಾಲ ಸಿಗತೈತಿ!
ದೇವರಾಣಿ,
ಯಾರೂ ಯಾರ ಕಡೆ ಬೆರಳ ತೋರಸೋದಿಲ್ಲ.
ಕದ್ದ ಶಾಪ ಹಾಕೋದಿಲ್ಲ.
ನಿಟ್ಟುಸಿರ ಬಿಡೋದಿಲ್ಲ. ತುಟಿ ಕಚ್ಚಿ ಅಳೋದಿಲ್ಲ.
ಅಂಥಾ ದಿನ,
ಒಂದ ದಿನ ಬರತೈತಿ!
ಬಂದs ಬರತೈತಿ!
ಕಾ, ಅಕಾ-

ಮೂಡಲದಾಗ ಎಳೀಬೆಳಕ ಒಡದಾವಣ್ಣಾ,
ಜಂಗ ತಿಂದ ಕಣ್ಣಿನಾಗ ಬಣ್ಣs ಬಣ್ಣಾ||

ಎಲ್ಲರು : ಮೂಡಲದಾಗ ಎಳೀಬೆಳಕ ಒಡದಾವಣ್ಣಾ.
ಜಂಗ ತಿಂದ ಕಣ್ಣಿನಾಗ ಬಣ್ಣs ಬಣ್ಣಾ||

ಒಂಕಾರಿ : ಏ ಕುರಿಗೋಳ್ರಾ, ಈಗs ಹೇಳಿರತೀನಿ :

ತೋಳ ಊಟಾ ಮಾಡೋ ಯಾಳೇ ಇದು.

ಕುರ್ಚೀ ಮ್ಯಾಲ ಬ್ಯಾಟೀ ಕಾಯತಾ ಕುಂತಿರತೈತಿ.

ಬರಿಗೈಲೆ ಬಂದೂಕಿನವರು ಬರತಾರ.
ತೋಳ ಕುರ್ಚೀ ತಿಕ್ಕತೈತಿ, ಹೂಂಕರಿಸತೈತಿ.
ಕೈ ಕೈ ಹೊಸೀತೈತಿ, ಕೇಳತೈತಿ :

‘ಯಾಕ್ರೆಲೇ ಬರಿಗೈಲಿ ಬಂದಿರಿ?

‘ಎಪ್ಪಾ ಕುರುಬ ಬಂದಾನ, ಬ್ಯಾಟಿ ತಪ್ಪಿತು/’

‘ಮಕ್ಕಳ್ರಾ, ನನ್ನ ಎದರ ನಿಲ್ಲೊವಂಥಾ ಕುರುಬ
ಯಾವಿದ್ದಾನೋ? ಹಾss’ ಅಂತೈತಿ.

ಜಿಗೀತೈತಿ. ಬರತೈತಿ.
ಏನ ಹೇಳ್ತೀರಿ? ಏನ ಹೇಳ್ತೀರಿ?
(ಎನ್ನುತ್ತ ಬಾಗಿಲ ಬಳಿಯ ಕಟ್ಟೆಯನ್ನೇರಿ ತಾನೇ ತೋಳ ಎಂಬಂತೆ ಅಭಿನಯಿಸ ತೊಡಗುವನು.)

ಏನ ಹೇಳ್ತೀರಿ?

ಉರಿನಿಂಗ : ಉತ್ತರ ಬೇಕ? ತಗೊ ಹಂಗಾದರ-
(ಎಂದು ಆಗಷ್ಟೆ ಕಸಿದ ಬಂದೂಕನ್ನು ಒಂಕಾರಿಯ ಕಡೆಗೆ ಎಸೆಯುತ್ತಾನೆ. ಅದು ತಪ್ಪಿ ಬಾಗಿಲಿಂದ ಹೊರಗೆ ಬೀಳುತ್ತದೆ. ಹೊರಗಿನಿಂದ ದೇಸಾಯಿ, ಕಾರಭಾರಿ ಮತ್ತು ಆರೆಂಟು ಜನ ಬಂದೂಕಿನವರೊಂದಿಗೆ ಬರುತ್ತಾನೆ)

ದೇಸಾಯಿ : ಯಾವ ಮಗಾನೊ ಅವನು?
(ತಕ್ಷಣವೆ ಒಂಕಾರಿ, ಸಿದನಾಯ್ಕರಿಬ್ಬರನ್ನು ಬಿಟ್ಟು ಉಳಿದವರೆಲ್ಲ ಮೊಳಕಾಲನ್ನೂರಿ ಬಾಗುವರು)

ಕಾರಭಾರಿ : ದೇವರೂ, ಸಿದನಾಯ್ಕಂದರ ಇವನs ರಿ.

ದೇಸಾಯಿ : ಬಂದೂಕ ಕಸದವರ್ಯಾರು? ಮೊದಲ ಹೇಳು.
(ಕಾರಭಾರಿ ಇಬ್ಬರನ್ನು ತೋರಿಸುತ್ತಾನೆ. ದೇಸಾಯಿ ಕಾಲ್ಮರಿ ಕಳೆದು ಒಬ್ಬ ಬಂದೂಕಿನವನನ್ನು ಕರೆದು)
ಇವನ್ನ ತಗೊಂಡ ಅವರಿಬ್ಬರ ಬೆನ್ನ ಮ್ಯಾಲೊಂದೊಂದ ಇಡು. ವಾಡೇತನಕ ಇವು ಬೀಳಧಾಂಗ ನಡಿಸಿಕೊಂಡು ಹೋಗು. ಅಪ್ಪಿತಪ್ಪಿ ಬೆನ್ನ ಮ್ಯಾಲಿಂದ ಬಿದ್ದರ, ಬಿದ್ದ ಜಾಗಾದಾಗs ಮುಗಸು .

(ಅವನು ಹಾಗೇ ಮಾಡುವನು, ಮೂವರೂ ಹೋಗುವರು)
ಏ ಕಾರಭಾರೀ ಬ್ಯಾಟಿ ಯಾವುದೋ ಅದು?

ಕಾರಭಾರಿ : (ಮುದುಡಿ ಮೂಲೆಯಲ್ಲಿ ನಿಂತ ಚಿನ್ನಿಯನ್ನು ತೋರಿಸುತ್ತ) ಇವಳsರಿ.

ದೇಶಾಯಿ : ಅವಳ್ನ ಹೊತ್ತಕೊಂಡ ನಡೀರ‍್ಯೊ.

ಸಿದನಾಯ್ಕ : ಇದ ಸಾಧ್ಯವಿಲ್ಲಾ ಅಂದೆ. ನನ್ನ ಹೆಣಾ ಬೀಳಬೇಕು, ನೀವು ಆಕೀನ್ನ ಒಯ್ಯಬೇಕು.

ದೇಸಾಯಿ : ಇಂಥಾ ಸಣ್ಣ ಮಾತಿಗೆಲ್ಲಾ ಹೆಣಾ ಯಾಕೊ?
(ಇಬ್ಬರು ಬಂದೂಕಿನವರು ಸಿದನಾಯ್ಕನನ್ನು ಸುತ್ತುವರಿಯುವರು. ಇನ್ನಿಬ್ಬರು ಚಿನ್ನಿಯ ಕಡೆಗೆ ಹೊರಡುವರು. ಉರಿನಿಂಗ ಚಿನ್ನಿಯ ಮುಂದೆ ನಿಂತು)

ಉರಿನಿಂಗ : ಬರ್ರಿ‍ ಯಾ ಮಗಾ ಬರತೀರಿ. ಆಕೀನ್ನ ಮುಟ್ಟಿದರ ಕಯ ಮುರೀತೀನಿ.

ದೇಸಾಯಿ : ಅವನ ಕೈ ಮುರೀರ‍್ಯೋ.
(ಇಬ್ಬರೂ ಬಂದೂಕಿನವರು ಉರಿನಿಂಗನ ಮೇಲೆ ಬಿದ್ದು ಕೈ ಹಿಂಗಟ್ಟು ಕಟ್ಟಿ ಹಿಡಿಯುವರು. ಮುದುಕಿಅಯ್ಯೋ ಶಿವನs’ ಎಂದು ಚೀರಿ ಮೂರ್ಛೆ ಹೋಗುವಳು. ಚಿನ್ನಿ ಅವಳೊಂದಿಗೆ ಕುಸಿಯುವಳು)

ಸಿದನಾಯ್ಕ : ದೇಸಾಯರs ನಿಮ್ಮ ಕಣ್ಣನೆತ್ತೀಮ್ಯಾಲಿರೋದರಿಂದ ನಿಮಗಿದು ಕಾಣತಿರಲಿಕ್ಕಿಲ್ಲ. ಆದರ ಈ ಮಂದಿಗಿ ಎಲ್ಲಾ ಕಾಣತದ.

ದೇಸಾಯಿ : ಅಬಬಬ! ಇವನs ಏನ ಸಿದನಾಯ್ಕ! ನೀ ನಾಯಕ. ಇವರೆಲ್ಲಾ ನಿನ್ನ ಹಿಂಬಾಲಕರು! ನನ್ನ ವಿರುದ್ಧ ಬಂಡೇಳತೀರಿ. ವಾಡೇದ ಮ್ಯಾಲ ಏರಿ ಬರತೀರಿ. ಆಗ ನಾ ಹಿಂಗ ನಿಂತಿರತೀನಿ. ನೀ ಬರತಿ, ಬಂದ ‘ಹೊಡೀರೆಲೇ’ ಅಂತಿ. ಅವರು ಹೊಡೀತಾರ.ನಾ ಸಾಯತೀನಿ. ಇದs ಹೌಂದಲ್ಲ? ಏನ ಚಂದ ಐತೆಪಾ ಕತಿ ಇದು! ಪುಸ್ತಕದಾಗ ಹಿಂಗ , ಇರತಾವಲ್ಲ?

ಸಿದನಾಯ್ಕ : ಹೌದು, ನೀವು ಹಾದೀ ತಪ್ಪಿದರ ಇದು ಅದರ‍್ಹಾಂಗs ಆಗತದ.

ದೇಸಾಯಿ : ಆಗತಿತ್ತು,-ನನ್ನ ಹಂತ್ಯಾಕ ಬಂದೂಕ ಇಲ್ಲದಿದ್ದರ. ಆದರ ಏನ ಮಾಡೋದು! ನಾ ಸತ್ತಿನೇನೋ ಅಂತ ನೋಡಿದರ ನಿನ್ನ ಹೆಣ ಬಿದ್ದಿರತೈತಿ! ಏನ ನೋಡತೀರೋ? ಈ ಹೆಂಗಸಿನ ಬಾಯಿ ಕಟ್ಟಿ ಹೊತ್ತಕೊಂಡ ನಡೀರಿ.
(ಚಿನ್ನಿ ಚೀರುತ್ತಿರುವಂತೆ, ಅವಳ ಬಾಯಿ ಕಟ್ಟಿ ಹೊರುವರು. ಅವರೊಂದಿಗೆ ದೇಸಾಯಿ ಹೊರಡುವನು. ಒಂಕಾರಿ ಅಡ್ಡಗಟ್ಟುತ್ತಾನೆ)

ಒಂಕಾರಿ : ದೇಸಾಯಿ, ಖರೆ ಹೇಳ್ತೀನೋ, ನನಗ ಭಾಳಕೆಟ್ಟ ಕನಸ ಬಿದ್ದsತಿ

ದೇಸಾಯಿ : ಮೊದಲ ಹಾದೀ ಬಿಡ.
(ದೇಸಾಯಿ ಒಂಕಾರಿಯನ್ನು ನೂಕಿ, ಚಿನ್ನಿಯ ಸೆರಗು ಹರಿದು ಉರಿನಿಂಗನ ಮೇಲೆ ಎಸೆದು ಹೊರಡುತ್ತಾನೆ. ಬಂದೂಕಿನವರು ಬೆನ್ನು ಹತ್ತುತ್ತಾರೆ).