(ಅದೇ ಗುಂಡಿನ ಸಪ್ಪಳ. ಜಯಘೋಷ. ಮಳೆ ಶುರುವಾಗಿ ಜೋರಾಗುತ್ತದೆ. ದೂರದಿಂದ ಸಿದನಾಯ್ಕನ್ನನ್ನು ಹೊತ್ತ  ಕ್ರಾಂತಿಕಾರಿಗಳ ಗುಂಪು ಜಯಕಾರ ಹೇಳುತ್ತ ಮುಂದೆ ಬರುತ್ತದೆ. ಮಳೆಯಿಂದ, ನೆತ್ತರಿಂದ, ಅವರೆಲ್ಲ ತೊಯ್ದಿದ್ದಾರೆ)

ಎಲ್ಲರು : ಜೈ ಸಿದನಾಯ್ಕಾ!
(ಸಿದನಾಯ್ಕ ಎತ್ತರದ ಸ್ಥಳದಲ್ಲಿ ನಿಂತು)

ಸಿದನಾಯ್ಕ : ಸಂಗಡಿಗರೆ, ಗೆಳೆಯರೇ,-

ಎಲ್ಲರು : ಜೈ ಸಿದನಾಯ್ಕಾ

ಸಿದನಾಯ್ಕ : ಶಾಂತರಾಗಬೇಕು, ಗೆಳೆಯರೇ……

ಎಲ್ಲರು : ಜೈ ಸಿದನಾಯ್ಕಾ!

ಉರಿನಿಂಗ : ಸುಮ್ಮಕಿರ್ರೇ‍ಪಾ ಸಿದನಾಯ್ಕ ಮಾತಾಡತಾರ.

ಎಲ್ಲರು : ಜೈ ಸಿದನಾಯ್ಕಾ

ಕಲ್ಲ : ಸುಮ್ಮಕಿರ್ರೊ‍ ಏs. ಬಾಯಿ ಮಾಡಬ್ಯಾಡ್ರಿ ಅಂದ್ರೂ ಜೈ ಸಿದನಾಯ್ಕ ಅಂತ! (ಎಲ್ಲರೂ ಸುಮ್ಮನಾಗುವರು)

ಉರಿನಿಂಗ : ಮಾತಾಡರಿ.

ಸಿದನಾಯ್ಕ : ಸಂಗಡಿಗರೆ, ಗೆಳೆಯರೇ
ಜಯ ನನ್ನೊಬ್ಬನದಲ್ಲ, ನಿಮ್ಮೆಲ್ಲರದು. ಉರಿನಿಂಗನದು, ಕಲ್ಲನದು, ಕೆಂಚನದು, ದಬಕನದು-ಪ್ರತಿಯೊಬ್ಬರದು. ನೀವು ಪಟ್ಟಪಾಡಿಗೆ, ನೊಂದ ನೋವಿಗೆ ಜಯ! ಸತ್ಯಕ್ಕೆ ಜಯ, ನ್ಯಾಯಕ್ಕೆ ಜಯ! ಒಂಕಾರಿ ನಮ್ಮ ಹೃದಯದಲ್ಲಿ ಬಿತ್ತಿದ ಸುಂದರ ಕನಸುಗಳಿಗೆ ಜಯ! ದೇಸಾಯರ ಸಾವಿನೊಂದಿಗೆ ನಿಮಗೆ ಜಯ ಸಿಕ್ಕಿದೆ! ನಿಮ್ಮ ಜಯದೊಂದಿಗೆ ಊರಿಗೆ ಮಳೆ ಬಂದಿದೆ!

ಎಲ್ಲರು : ಜೈ ಸಿದನಾಯ್ಕಾ

ಸಿದನಾಯ್ಕ : ಶಾಂತರಾಗಬೇಕು, ಸಂಗಡಿಗರೇ,

ನನಗೆ ಗೊತ್ತಿತ್ತು : ಮನುಷ್ಯನ ಎದೆಯಲ್ಲಿ ಅಪಾರ ಸೌಂದರ್ಯವಿದೆ. ಹಸಿದು ಕುರುಡರಾಗಿ ನಾವದನ್ನ ನೋಡೋದಿಲ್ಲ.  ಒಮ್ಮೆ ಅದು  ಕಂಡರೆ ಸಾಕು, ಜನ ತಮ್ಮ ಬಗ್ಗೆ ತಾವೇ ಆಶ್ಚರ್ಯಪಡುತ್ತಾರೆ! ರೋಮಾಂಚಿತರಾಗುತ್ತಾಋಎ! ಹಾಗೆ ನಾವೆಲ್ಲ ರೋಮಾಚಿತರಾಗುವ ದಿನ ಆ ದಿನ, ಬಂದೇ ಬರ್ತದೆ ಅಂತ ನನಗ್ಗೊತ್ತಿತ್ತು! ಆಗ ನೀವು ಎಲ್ಲಿ ನೋಡಿದಲ್ಲಿ ಸ್ವತಂತ್ರ ಜನ, ಸ್ವಾತಂತ್ಯ್ರದಿಂದ ಎದೆಯುಬ್ಬಿದ ಜನ ಸಿಕ್ಕುತ್ತಾರೆ! ಎಲ್ಲರ ಎದೆ ಬಾಗಿಲು ತೆರೆದಿರುತ್ತವೆ! ಎದೆಯಿಂದ ಎದೆಗೆ ನೇರವಾದ ದಾರಿ ಇರುತ್ತವೆ! ಯಾವ ಎದೆಯಲ್ಲೂ ಅಸಮಾಧಾನವಿಲ್ಲ! ಹೊಟ್ಟೆಕಿಚ್ಚಿನಿಂದ ಯಾವದೆಯೂಫ ಕಪ್ಪಾಗಿಲ್ಲ. ಇವರು ಚೆಲುವರು! ಈ ಚೆಲುವರು ಎತ್ತರವಾಗಿರುತ್ತಾರೆ. ಆದ್ದರಿಂದ ಇವರಿಗೆ ನಿಲುಕದ ಎತ್ತರ ಯಾವುದೂ ಇರುವುದಿಲ್ಲ. ಇವರು ಆಕಾಶದೆತ್ತರ ಬೆಳೆಯುತ್ತಾರೆ! ಆಕಾಶದ ಚಂದ್ರನನ್ನು  ಹಿಡಿಯುತ್ತಾರೆ! ಅಥವಾ ……
ಅಥವಾ, ನನ್ನ ಬಾಂಧವರೇ, ಇನ್ನು ಏನು ಹೇಳಲಿ? ಹೇಗೆ ಹೇಳಲಿ? ನನ್ನ ಭಾವನೆಗಳನ್ನ ಹೇಗೆ ಹೇಳಬೇಕೆಂದು ಗೊತ್ತಿದ್ದರೆ, ನನ್ನ ಭಾವನೆಗಳು ಏನು ಅನ್ನೋದನ್ನ ಹೇಳ್ತಿದ್ದೆ. ಅಥವಾ……ಅಥವಾ……ನಿಮಗೇನನಿಸುತ್ತದೆ?

ಎಲ್ಲರು : ಜೈ ಸಿದನಾಯ್ಕಾ!

ಸಿದನಾಯ್ಕ : ಸಡಗರ ಮಾಡೋದಕ್ಕೆ ಇನ್ನೂ ಸಮಯವಿದೆ. ಈ ಹಳ್ಳಿ ಆದರ್ಶ ಹಳ್ಳಿಯಾಗ ಬೇಕು. ಇನ್ನು ಮೇಲೆ ಇಲ್ಲಿ ಬಡವರಿರೋದಿಲ್ಲ.
ಶ್ರೀಮಂತರಿರೋದಿಲ್ಲ.
ಪ್ರೀತಿ, ಸ್ನೇಹ ಬಿಟ್ಟು ಬೇರೆ ಕಾನೂನಿಲ್ಲ.
ಎಲ್ಲರೂ ಪ್ರಭುಗಳು.
ಎಲ್ಲರೂ ಪ್ರಜೆಗಳು.
ಎಲ್ಲರೂ ಎಲ್ಲರಿಗಾಗಿ ಬದುಕೋಣ.
ಇದೀಗ ನಿಜವಾದ ಪ್ರಜಾಪ್ರಭುತ್ವ!

ಎಲ್ಲರು : ಜೈ ಸಿದನಾಯ್ಕಾ.
ಸಿದನಾಯ್ಕ : ಅಥವಾ ಹೆಚ್ಚು ವ್ಯಾವಹಾರಿಕವಾಗಿ ಮಾತಾಡೋಣ : ನಿಮ್ಮ ಪ್ರತಿನಿಧಿಗಳಾಗಿ, ಸೇವಕರಾಗಿ ಐದು ಜನ ಹಿರಿಯತನ ವಹಿಸುತ್ತಾರೆ. ಈಗ ಹೇಳ್ರಿ : ನಿಮ್ಮ ಆಸೆ ಆಕಾಂಕ್ಷೆಗಳನ್ನ ಈಡೇರಿಸಬಲ್ಲವರು ಯಾರು? ಅಂಥ ಐದು ಜನರ ಹೆಸರು ಹೇಳಿರಿ-ಕೆಲವರು : ಜೈ ಸಿದನಾಯ್ಕಾ!
ಕಲ್ಲ : ಏ ಏ ಐದಮಂದಿ ಪಂಚರ ಹೆಸರ ಹೇಳರೆಂದರ……

ಜನ : ಸಿದನಾಯ್ಕ.

ಸಿದನಾಯ್ಕ : (ಕೈ ಮುಗಿದು)
ನಾನು ನಿಮ್ಮ ನಮ್ರ ಸೇವಕ. ಮತ್ತೆ-

ಜನ : ಉರಿನಿಂಗ

ಸಿದನಾಯ್ಕ : ಉರಿನಿಂಗ-

ಜನ : ಕೆಂಚ

ಸಿದನಾಯ್ಕ : ಕೆಂಚ-
ಜನ : ಕಲ್ಲ.

ಸಿದನಾಯ್ಕ : ಕಲ್ಲ.
(ಉರಿನಿಂಗ, ಕೆಂಚ, ಕಲ್ಲ, ತಂತಮ್ಮ ಹೆಸರು ಬಂದೊಡನೆ ಎದ್ದು ಜನರಿಗೆ ಕೈಮುಗಿಯುವರು)
ಇನ್ನೊಂದು ಹೆಸರು ಬೇಕು.

ಕೆಂಚ : ಗುರುವಯ್ಯನವರು.

ಸಿದನಾಯ್ಕ : ಯಾರವರು?

ಕಲ್ಲ : ನಮಗ ಬಂದೂಕ ಕೊಟ್ಟವರು.

ಸಿದನಾಯ್ಕ : ಆಗಲಿ. ಐದಾಯ್ತು. ಸಂಗಡಿಗರೆ, ಗೆಳೆಯರೇ,
ನೀವು ಆರಿಸಿದ ನಮ್ಮೆಲ್ಲರ ಪರವಾಗಿ ಪ್ರಮಾಣ ಮಾಡಿ ಹೇಳುತ್ತೇನೆ. ನಾವು ಈ ಹಳ್ಳಿಯ ಹಿತಕ್ಕಾಗಿ ದುಡಿಯುತ್ತೇವೆ, ನಿಮ್ಮ ಸೇವೆ ಮಾಡುತ್ತೇವೆ. ಪ್ರತಿವಾರ ನಮ್ಮ ಸಭೆ ಸೇರಿ ನಿಮ್ಮೆಲ್ಲರ ಹಿತಚಿಂತನೆ ಮಾಡುತ್ತೇವೆ. ಈಗಿನ ಮೊದಲನೆ ಕೆಲಸ-ವಾಡೇದಲ್ಲಿ ಸಾಕಷ್ಟು ಧಾನ್ಯ ಇದೆ, ಕಾಳಿದೆ. ಉರಿನಿಂಗ, ಕಲ್ಲ, ಕೆಂಚ ಮೂವರೂ ಅದನ್ನ ಈ ಹಳ್ಳಿಯ ಪ್ರತಿಯೊಬ್ಬರಿಗೆ ಹಂಚುತ್ತಾರೆ. ಧಾನ್ಯ ತಕ್ಕೊಂಡು ಎಲ್ಲರೂ ಈದಿನ ಹಬ್ಬ ಆಚರಿಸಲಿ. ಊರಿನ ಮೂಲೆ ಮೂಲೆಗಳೆಲ್ಲ ಬೆಳಕಿನಿಂದ ತುಳುಕಾಡಲಿ. ನಾಳೆಯಿಂದ ನಿಮ್ಮ ನಿಮ್ಮ ಹೊಲಗಳಿಗೆ ಹೋಗಬೇಕು. ಜಮೀನನ್ನ ಕಾಯ್ದೆಶೀರ ಹಂಚುವ ಕೆಲಸ ಇಷ್ಟರಲ್ಲೇ ಸುರು ಮಾಡುತ್ತೇವೆ. ಈಗ ಹೊರಡಿರಿ. ಮಾಡಬೇಕಾದ ಕೆಲಸ ಬೇಕಾದಷ್ಟಿದೆ.

ಉರಿನಿಂಗ : ಜೈ ಸಿದನಾಯ್ಕಾ!
ಎಲ್ಲರು : ಜೈ ಸಿದನಾಯ್ಕಾ!

(ಜಯಘೋಷ ಮಾಡುತ್ತ ಚಿದುರುತ್ತಾಋಎ)