(ಎಡಬಲಕ್ಕೆ ಇಬ್ಬರು ಬಂದೂಕಿನವರೊಂದಿಗೆ ಡಂಗುರದವನು ಬರುತ್ತಾನೆ)

ಡಂಗುರದವ : ಕೇಳ್ರೆಪೋ ಕೇಳ್ರಿ, ಕೇಳಸಲಿಲ್ಲಂದೀರಿ, ತಿಳೀಲಿಲ್ಲಂದೀರಿ,-
ಕೇಳ್ರೆಪೋ ಕೇಳ್ರಿ, ಕೇಳ್ರೆಪೋ ಕೇಳ್ರಿ……
(ಹೀಗೆಯೇ ನಾಲ್ಕೂ ದಿಕ್ಕಿಗೆ ಹೋಗಿ ಕಿರುಚುವನು : ಕರಿಯ, ಕಲ್ಲ, ದಬಕ, ಇರಪ, ದುರುಗ, ಗಿರಮಲ್ಲ, ಎಬರೇಸಿಹೀಗೆ ಒಬ್ಬೊಬ್ಬರೇ ಕಂಬಳಿ ಹೊತ್ತುಕೊಂಡು ಬರುತ್ತಾರೆ. ಅವರಲ್ಲಿ ಉರಿನಿಂಗನೂ ಇದ್ದಾನೆ)

ದಬಕ : ಏನಪಾ ನಿನ್ನ ಡಂಗರ?

ಇರಪ : ಬೆಳಿಗ್ಗೆದ್ದ ಸೂರ್ಯಾನ ಮೋತಿ ನೋಡೋಣಂತ ಬಂದರ ನೀ ಎದರಿಗಿ ಬರಬೇಕ? ಅದೇನಪಾ ನಿನ ಡಂಗುರ?

ಡಂಗುರದವ : ಹಂಗೆಲ್ಲಾ ಹೇಳಬ್ಯಾಡ; ಇದ ಭಾಳ ಜರೂರೀ ಡಂಗುರ.

ಕಲ್ಲ : ಡಂಗುರ ಯಾವತ್ತೂ ಜರೂರ ಇರತಾವಪಾ. ಬಂದೂಕ ಬೆನ್ನ ಹಚ್ಚಿಕೊಂಡ ಬಂದೀ ಅಂದಮ್ಯಾಲ ಇನ್ನೂ ಜರೂರ ಇರಬೇಕು. ಅದೇನ ಹೇಳು.

ಗಿರಮಲ್ಲ : ಇಷ್ಟ ಮಂದಿ ಸಾಕೋ?

ಕೆಂಚ : ಮತ್ತೇನಪಾ? ಊರಾಗಿನ ಹೆಂಗಸರನೆಲ್ಲಾ ತಂದ ವಾಡೇದಾಗ ಬಿಡಬೇಕಂತ?
(ಬಂದೂಕಿನವನೊಬ್ಬ ಚಪ್ಪನೆ ಬಂದೂಕಿಗೆ ಏಟುಕೊಟ್ಟು ಹಿಡಿದುಕೊಳ್ಳುವನು)

ಇರಪ : ಎಲೀ ಇವನ : ಅಲ್ಲಂದರ ಹಾಂಗs ಹೇಳಲ್ಲ. ಅದಕ್ಕ ಯಾಕ ತ್ರಾಸ ಕೊಲಡತಿ?

ದುರುಗ : ಅದೇನ ಡಂಗರಾ ಹೊಡೀತಾನ ಕೇಳೋಣು, ತಡೀರ‍್ಯೋ.

ಕಲ್ಲ : ಹೌಂದಪಾ, ಕೇಳಾಕs ಬಂದೀವಿ. ಆದರ ಡಂಗರಾ ಹೊಡ್ಯಾಕೊಂದ ರೀತಿ, ರಿವಾಜ ಇಲ್ಲೇನು? ಏಕದಂ ಬಂದುಕಿನವರನ್ನ ಎಡಬಲ ಕರಕೊಂಬಂದರ ? ನಾವೇನ ಡಂಗರಾ ಹರದ ತಿಂತೀವ?

ದಬಕ : ಹೊಟ್ಟಿಗೇನಾದರು ಆಧಾರದ ಸುದ್ದಿ ಇದ್ದರ ಹೇಳಲಿ ಬಿಡರ‍್ಯೋ. ಹೊಡೀಯಪಾ ಹೊಡಿ.

ಡಂಗುರದವ : ಕೇಳ್ರಪೋ ಕೇಳ್ರಿ……

ಎಬರೇಸಿ : ಕೇಳತೀವಪಾ, ಅದರ ಈ ಬಂದೂಕಿನವರನ್ನ ಆ ಕಡೆ ಕಳಸ್ತೀಯೇನು?

ಡಂಗುರದವ : ಇಲ್ಲ.

ಎಬರೇಸಿ : ಹಾಂಗಿದ್ದರ ಸುದ್ದಿ ಭಯಂಕರ ಇದ್ಧಾಂಗತು.

ಇರಪ : ಕೆಟ್ಟ ಸುದ್ದೀ ಕೇಳಿ ಕೆಡೋದ್ಯಾಕ? ಇಲ್ಲಿ ಬ್ಯಾಡ, ಬ್ಯಾರೇ ಕಡೆ ಹೋಗಿ ಡಂಗುರಾ ಹೊಡೀಯಪಾ ನೀನು.

ಡಂಗುರದವ : ಮಂದಿ ಇದ್ದಲ್ಲಿ ಡಂಗುರಾ ಹೊಡೀತಾರೊ. ಇಲ್ಲದಲ್ಲಿ ಹೊಡೀತಾರೊ?
ಕೇಳ್ರೆಪೋ ಕೇಳ್ರಿ……
(ಡಮಗುರದವನೊಂದಿಗೆ ಎಬರೇಸಿ ss ಎಂದು ಕೂಗಿ ಅವನ ದನಿ ಕೇಳಿಸದ ಹಾಗೆ ಮಾಡುವನು. ಡಂಗುರದವ ನಿಲ್ಲಿಸುವನು)

ದುರುಗ : ಯಾಕಿಷ್ಟ ಗಾಬರಿ ಬೀಳತೀರೊ. ಇಷ್ಟೆಲ್ಲ ಕಂಡೀವಿ, ಕೇಳೀವಿ, ಇದಕ್ಕಿಂತ ಹೆಚ್ಚಿಂದ ಇನ್ನೇನಿದ್ದೀತು? ಅದೇನ ಹೊಡಿಯೋದ ಹೊಡದ ಹೋಗಲಿ ಬಿಡರತ್ತ.

ಕರಿಯ : ನಾ ಒಂದ ಹೇಳಲೇನು?

ಗಿರಿಮಲ್ಲ : ಅದೇನಪಾ?

ಕರಿಯ : ಹೇಳಲೇನು?

ಇರಪ : ಡಂಗರ ಸುದ್ದಿ ಅಲ್ಲದಿದ್ದರ ಅದೇನ ಹೇಳೊ.

ಕರಿಯ : ನಾವೆಲ್ಲಾರು ಕಿವ್ಯಾಗ ಬಟ್ಟ ಹಾಕಿಕೊಳ್ಳೋಣು. ಅವ ಏನ ಹೇಳೋದ ಹೇಳಿ ಗಂಟಲ ನರಾ ಹರಕೊಂಡ ಹೋಗ್ಲಿ!

ದಬಕ : ಸುಮ್ಮನ ಯಾಕ್ರೆಪಾ? ಡಂಗರಾ ಕೇಳ್ರಿ, ಬಿಡ್ರಿ, ದೇಸಾಯರ ಹಾಕೋ ಪೇಚ ಹಾಕೇ ಹಾಕತಾರ. ಸುಮ್ಮನ ಅದೇನ ಹೊಡಿಯೋದ ಹೊಡದ ಹೋಗ್ಲಿ ಬಿಡ್ರಿ.

ಇರಪ : ಖರೆ. ಹಾಸಿಗ್ಯಾಗಿನ ಹೇಂತೀನ ಒಯ್ದರs ‘ಯಾಕರೀ ದೇಸಾಯರs’ ಅಂತ ಕೇಳೋವಷ್ಟ ಧೈರೆ ಇಲ್ಲ ನಮಗ. ನಮ್ಮಿಂದೇನಾದೀತು?

ಎಬರೇಸಿ : ಹಂಗಾದರ ಹಿಂಗ ಮಾಡಲಿ : ನೀ ಹೋಗಿ ಸಿದನಾಯಕ್ನ ಮುಂದ ಡಂಗರಾ ಹೊಡಿ. ಅವ ಬಂದ ಏನೇನಂತ ನಮಗೆಲ್ಲಾ ತಿಳಿಸಿ ಹೇಳತಾನ. ಯಾಕ್ರೆಪಾ?

ಕರಿಯ : ಹೌಂದ ಹೌಂದ. ಸಿದನಾಯ್ಕ ಹೇಳಿದರ ಅಷ್ಟ ಗಾಬರಿ ಆಗಾಣಿಲ್ಲ ನಮಗ. ನೀನೂ ಅಷಟs, ನಿಮ್ಮ ದೇಸಾಯರೂ ಅಷ್ಟ.ಏನ ಹೇಳಿದರೂ ಗಾಬರಿ ಆಗತೀವಿ.

ಗಿರಮಲ್ಲ : ಇನ್ನೆಲ್ಲಿ ಸಿದನಾಯ್ಕ ಬರತಾನಪಾ? ನಿನ್ನಿ ದೇಸಾಯರ ಭೇಟಿಗಿ ಹ್ವಾದಾಗ ಅಲ್ಲೇ ಹಿಡದ ಹಾಕ್ಯಾರಂತ.

ಉರಿನಿಂಗ : ಸಿದನಾಯ್ಕ ತಪ್ಪಿಸಿಕೊಂಡ ಬಂದಾನ ಸುಮ್ಮಕಿರ್ಲೇ.

ಡಂಗುರದವ : ಏನಂದಿ?

ಇನ್ನೇನಿಲ್ಲ. ನಮಗ ಡಂಗರ ಸುದ್ದಿ ಯಾಕ ಬೇಕು? ಹೆಂಗೂ ನಾವಿಂ ಊರ ಬಿಟ್ಟ ಹೋಗತೀವಿ; ಹೋದಮ್ಯಾಲ ಬೇಕಾಧಾಂಗ ಡಂಗರಾ ಹೊಡದೀಯಂತ.

ಡಂಗುರದವ : ಇಲ್ಲೇ ಈಗಿಂದೀಗ ಡಂಗರಾ ಹೊಡೀಯಂತ ದೇಸಾಯರ ಅಪ್ಪಣಿ ಆಗೇತಿ.

ಎಬರೇಸಿ : ಹೊಡೀಯಪಾ, ಡಂಗರಾ ಹೊಡಿ. ಆದರ ಆ ಸುದ್ದಿ ಹೇಳಬ್ಯಾಡ.
(ಸಿದನಾಯ್ಕ ಬರುವನು)

ಸಿದನಾಯ್ಕ : ಏನ ನಡದದ ಇಲ್ಲೆ?
(ಕೂಡಲೇ ಉರಿನಿಂಗ ಅವನ ಮೇಲೆ ಹಾರಿ ಅವನನ್ನು ಕಂಬಳಿಯಿಂದ ಮುಚ್ಚುವನು. ಜನ ಒಮ್ಮೆಲೆ ಸಿದನಾಯ್ಕನನ್ನು ಸುತ್ತುವರೆದು ಮರೆಮಾಡುವರು. ಬಂದೂಕಿನವರು ಗುರಿ ಹಿಡಿದು ಆಗಲೇ ಸಿದ್ಧರಾಗಿದ್ದಾರೆ)

ಕೆಂಚ : ಅಪಾ, ಡಂಗರ ಹೊಡೀಬೇಕಂತ ಬಂದೀರಿ, ಡಂಗರಾ ಹೊಡದ ಹೋಗ್ತಿ. ನೀವೇನ ಸಿದನಾಯ್ಕನ್ನ ಹಿಡ್ಯಾಕ ಬಂದಿಲ್ಲ.
(ಹೇಳುತ್ತಾ ಬಂದೂಕಿನವರತ್ತ ಹೆಜ್ಜೆಯಿಡುವನು. ಅವನೊಂದಿಗೆ ಇಡೀ ಗುಂಪು ಸರಿಯುತ್ತದೆ)

ಸಿದನಾಯ್ಕ : ಅಧೆಂಗ ಕೊಲ್ಲತಾರೊ ನೋಡೋಣು ತಗೀರೆಪಾ.

ಕಲ್ಲ : ನೀ ಸುಮ್ಮಕಿರಪಾ. ಅಪಾ ಹೊಡಿ ಡಂಗರಾ, ಏನ್ನೋಡ್ತಿ?

ದಬಕ : ಹೊಡೀಯಲ್ಲ.

ಡಂಗುರದವ : (ಏನು ಮಾಡಬೇಕೆಂದು ತೋಚದೆ ಗಾಬರಿಯಾಗಿ)

ಕೇಳ್ರೆಪೋ ಕೇಳ್ರಿ, ಯಾರೂ ಕುಡಗೋಲ ಕೊಡ್ಲಿ ತಮ್ಮ ಹಂತ್ಯಾಕ ಇಟ್ಟಕೋಬಾರದು. ವಾಡೇಕ ತಂದ ಒಪ್ಪಿಸಿ ಹೋಗಬೇಕ್ರೆಪೋ…

ಉರಿನಿಂಗ : ಒಪ್ಪಿಸಿ ಹೋಗದಿದ್ದರ?

ಡಂಗುರದವ : ಅಂಥವರ ಹಲ್ಲ ಮುರೀತಾರ್ರೆ‍ಪೋ-

ಉರಿನಿಂಗ : ಕುಡಗೋಲ, ಕೊಡ್ಲಿ ಇಲ್ಲ. ಕಾಲ್ಮರಿ ಅದಾವ. ಅವನ್ನ ಒಪ್ಪಿಸಬೇಕೇನ?

ಡಂಗುರದವ : ಒಪ್ಪಸಪಾ ಹಂಗಾದರ……
(ಉರಿನಿಂಗ ಕಾಲ್ಮರಿ ಕಳೆದು ಕೊಡಹೋಗುವನು. ಜನ ಗಾಬರಿ ಬರುವಂತೆ ತಮ್ಮ ಕಡೆ ನುಗ್ಗುವುದನ್ನು ಕಂಡ ಬಂದೂಕಿನವರು ಹಿಂದೆ ಸರಿಯುತ್ತ ಓಡಿ ಹೋಗುವರು. ಡಂಗುರದವ ಸಿಕ್ಕಿಬೀಳುವನು. ಉರಿನಿಂಗ ಅವನ ಡಂಗರ ಕಸಿಯುವನು)

ಉರಿನಿಂಗ : ಕೇಳ್ರೆಪೋ ಕೇಳ್ರಿ, ಈ ಊರಾಗಿನ ಗಂಡಸರೆಲ್ಲಾ ತಂತಮ್ಮ ಕಾಲ್ಮರಿ ದೇಸಾಯರಿಗಿ ಕಳಸಿಕೊಡಬೇಕ್ರೆಪೋ……

(ಕಾಲ್ಮರಿಯಿಂದ ಡಂಗುರ ಬಾರಿಸುವನು. ಎಲ್ಲರೂ ಉದ್ರಿಕ್ತರಾಗಿ ಕೈಗೆ ಸಿಕ್ಕದ್ದರಿಂದ ಕಾಲ್ಮರಿಯಾದರೆ ಕಾಲ್ಮರಿ, ಕಲ್ಲಾದರೆ ಕಲ್ಲಿನಿಂದ ನೆಲ ಬಾರಿಸುತ್ತ ಡಂಗುರದವನನ್ನು ಛೇಡಿಸುತ್ತಾರೆ. ರಂಗದ ಸುತ್ತ ಓಡಾಡಿಸುತ್ತಾರೆ. ಕೊನೆಗೆ ಒಬ್ಬ ಹೋಗಿ ಚೀಲ ತಂದು ಎಲ್ಲ ಕಾಲ್ಮರಿಗಳನ್ನು ಅದರಲ್ಲಿ ತುಂಬಿ ಡಂಗುರದವನಿಗೆ ಹೊರಿಸಿ ದೇಸಾಯರಿಗೆ ಕೊಡೆಂದು ಹೇಳಿ ಒದೆಯುತ್ತಾನೆ. ಅವನು ಓಡುತ್ತಿರುವಾಗ ಎಲ್ಲರೂ ಕಾಡು ಕೂಗು ಕೇಕೆ ಹಾಕುತ್ತಾರೆ.)

ಉರಿನಿಂಗ : ಜೈ ಸಿದನಾಯ್ಕಾ!

ಎಲ್ಲರು : ಜೈ ಸಿದನಾಯ್ಕಾ!

ಸಿದನಾಯ್ಕ : ಈ ನಾಯಿಗಳಿಗೆ ಬುದ್ಧಿ ಕಲಿಸಿದ್ದು ಒಳ್ಳೇದಾಯ್ತು.

ನೋಡ್ರೆಪಾ,

ನಿನ್ನೆ ನೀವು ಹೇಳಿಧಾಂಗ ದೇಸಾಯರಿಗೆ ಭೇಟಿ ಆದೆ. ಚಿನ್ನೀನ ಬಿಡರಿ ಅಂದೆ. ನೀವು ಮಾಡತಿರೋದು ತಪ್ಪು ಅಂದೆ. ಸರಕಾರ ಕೊಟ್ಟ ಕಾಳು ರೈತರಗಿ ಹಂಚರಿ ಅಂದೆ. ಹೊಲಾ ರೈತರದು ಅಂದೆ-ಏನೇನೂ ನಾಟಲಿಲ್ಲ. ನಮ್ಮ ಮಾತ ಅವರಿಗೆ ತಿಳಿಯೋದ ಸಾಧ್ಯ ಇಲ್ಲ. ಬೇಕಂದರ ನಿನ್ನ ಹೊಲಾ ನಿನಗ ಬಿಡತೀನಿ, ಮಂದೀ ಉಸಾಬರಿ ಬಿಡು ಅಂದ್ರು. ಆಗೋದಿಲ್ಲಂತ ಬಂದೆ.

ಉರಿನಿಂಗ : ಮುಂದಿಂದ ಗೊತ್ತs ಐತಿ. ಹಿಡ್ಯಾಕ ಬಂದೂಕಿನವರನ್ನ ಕಳಿಸಿದ್ದಾ; ನಾವು ಹೋಗಿ ಸಿದನಾಯ್ಕನ್ನ ಬಿಡಿಸಿಕೊಂಡ ಬಂದಿವಿ.

ಕೆಂಚ : ಹಾಂಗಿದ್ದರ ಮತ್ತ ಯಾಕ ಕಾಯೋದಾ? ನಾವೀಗ ಏನ ಮಾಡಬೇಕಂತ ಹೇಳಿಬಿಡು.

ಕಲ್ಲ : ವಾಡೇಕ ಬೆಂಕೀ ಹಚ್ಚಂದೇನು? ಸಣ್ಣಂದಿರತ ಒಂಕಾರಿಗಿ ಇಂಥಾ ಕನಸ ಬೀಳತಿದ್ದುವಂತ.

ಸಿದನಾಯ್ಕ : ಪ್ರಸಂಗ ಬಂದರ ಅದನ್ನೂ ಮಾಡಬೇಕಾದೀತು.

ದಬಕ : ಅವ ಬಗ್ಗೋದಿಲ್ಲಪಾ.

ಸಿದನಾಯ್ಕ : ಬಗ್ಗದಿದ್ದರ ಬಗ್ಗಸಬೇಕು. ಮುಖ್ಯ ನಮ್ಮಲ್ಲಿ ಆತ್ಮವಿಶ್ವಾಸ ಬೇಕಕು. ನೀವೆಷ್ಟ ತುಳದರೂ ಹುಲ್ಲಿನ್ಹಾಂಗ ಮಣೀತೀವಂದರ ಯಾರು ತುಳಿಯೋದಿಲ್ಲ? ಕಾಲ್ಮರಿ-ಗಾಲಿನಿಂದ ತುಳೀತಾರ!

ದಬಕ : ಖರೆ. ದೇಸಾಯರು ದೊಡ್ಡ ತಪ್ಪ ಮಾಡಲಿಕ್ಹತ್ಯಾರ!

ಸಿದನಾಯ್ಕ : ತಪ್ಪಂತ ಹೇಳಿ ಕೂತರ ಆಗಲಿಲ್ಲ. ತಪ್ಪ ಬರೋಬರಿ ಮಾಡಬೇಕು. ಅದೂ ಕಂತಿನ ಪ್ರಕಾರ ಆಗಷ್ಟು ಈಗಷ್ಟು ಅಲ್ಲ. ಈಗಿಂದೀಗ ಇಡೀಯಾಗಿ ಬರೋಬರಿ ಮಾಡಬೇಕು. ತಪ್ಪ ತಪ್ಪಂತ ಸುಮ್ಮನ ಕೂತರ ಕೆಳಗ ಹಾಕಿ, ನಿನ್ನ ಚರ್ಮದಾಗ ಮೆಟ್ಟ ಮಾಡಿಸಿಕೊಂಡ ದಾಟಿ ಹೋಗತಾರ. ಹೋಗಂದೇನು?

ದಬಕ : ಸೊಲ್ಪ ವಿಚಾರ ಮಾಡ್ರೆಪಾ. ಅವರ ಹಂತ್ಯಾಕ ನೂರ ಬಂದೂಕದಾವ. ಸೆಟದ ನಿಂತೇವಂದರ ಸೊಂಟದಾಗ ಶಕ್ತಿ ಇಲ್ಲ ನಮಗ, ನಮ್ಮಂಥವರ್ನ ಕಟ್ಟಿಕೊಂಡ ಅದೇನ ಕ್ರಾಂತಿ ಮಾಡ್ತೀ ನೀನು?

ಕೆಂಚ : ಥೀ! ನಿನ್ನ ನಾಡೀ ಒಳಗ ಬಚ್ಚಲ ನೀರ ಹರೀತಾವ, ರಗತಲ್ಲ. ನಿನ್ನ ಚರ್ಮಾ ಸುಲದ ಮ್ಯಾಲ ಉಪ್ಪ ಹಾಕಬೇಕ. ಆಗಾದರೂ ಒಂದಷ್ಟು ಒದ್ದಾಡ್ತೀಯೋ ಏನೊ.

ದಬಕ : ಆತಪಾ; ಸಿಟ್ಟ ಮಾಡತೀವು, ಕರಕರ ಹಲ್ಲ ಕಡೀತೀವು ಬಂತೇನು? ದವಡಿ ಹಲ್ಲ ಮುರೀತಾವ , ಅಷ್ಟ.

ಸಿದನಾಯ್ಕ : ನೀನs ಹೇಳಿದಿ, ದೇಸಾಯರ ದೊಡ್ಡ ತಪ್ಪ ಮಾಡಾಕಹತ್ಯಾರಂತ?

ದಬಕ : ನನ್ನ ಮಾತ ಪೂರಾ ಕೇಳ್ರೆಪಾ, ದೇಸಗತಿ ಎಷ್ಟೆಂದರೂ ಅವರ ಹಕ್ಕು, ಹೋಗಿ ಇನ್ನೊಮ್ಮಿ ಎಲ್ಲಾರು ಅವರ ಕಾಲ ಯಾಕ ಹಿಡೀಬಾರ್ದು?

ಉರಿನಿಂಗ : ಮಂದೀನ್ನ ಸುಲ್ಯಾಕ, ಕೊಲ್ಲಾಕ ಅವಗ ಹಕ್ಕ ಐತಿ; ಸುಮ್ಮನ ಬಿದ್ದಕೊಳ್ಳೋದs ನನ್ನ ಹಕ್ಕಂದೇನು? ನನಗೀಗ ಬ್ಯಾರೇ ಹಾದೀನs ಇಲ್ಲ. ನಾನೂ ಒಮ್ಮೊಮ್ಮಿ ಅವನ ಬಂದೂಕ ಹಿಡೀತೀನಿ; ತಪ್ಪೇನು? ಇಷ್ಟಾಗಿ ಭೂಮೀಮ್ಯಾಗ ಅವನ ರಗತ ಬಿದ್ದಲ್ಲಿ ಏನೂ ಬೆಳೀಲಿಕ್ಕಿಲ್ಲ. ಆದರ ನಮ್ಮ ರಗತ ಬಿದ್ದಲ್ಲಿ, ಖರೆ ಹೇಳ್ತೀನಿ-ಹಸರ ಹುಟ್ಟತೈತಿ! ಇಷ್ಟ ಯಾಕೋ?-ನಾ ಕೊಂದರ ನಿಮಗ್ಯಾರಿಗು ಪಾಪ ಬರೋದಿಲ್ಲ. ನನ್ನ ಜೋಡಿ ನನ್ನ ಪಾಪನೂ ಸಾಯತೈತಿ.

ಕಲ್ಲ : ಅವನೊಬ್ಬನ್ನ ಬಿಟ್ಟ ನಡೀರೆಪಾ. ಏ ದಬಕ, ನಿನಗ ತಾಕತ್ತ ಇಲ್ಲದಿದ್ದರ ದೇಸಾಯೀ ಕಾಲ್ಮರಿ ನೆಕ್ಕೋಂತ ಬಿದ್ದಕಾ, ಸಿದನಾಯ್ಕಾ ಈಗೇನ ಮಾಡೋಣು ಹೇಳು, ಏನ್ರೆಪಾ, ಸಿದನಾಯ್ಕನ ಮಾತಿನಾಗ ವಿಶ್ವಾಸ ಐತ್ಯೋ? ಇಲ್ಲೋ? ಇಲ್ಲದಿದ್ದರ ಹಾಂಗs ಹೇಳ್ರಿ.

ಉರಿನಿಂಗ : ಈಗs ಹೇಳ್ರಿ. ನೀವು ಗಂಡಸರೋ? ಹೆಂಗಸರೊ? ಹೆಂಗಸಾದರ ಕೈಯಾಗ ಬಳಿ ಇಡರಿ, ಹೋಗರಿ. ಗಂಡಸಾದರ ಬೆನ್ನ ಹತ್ತರಿ, ಯಾಕೋ ಕಲ್ಲ?

ಕಲ್ಲ : ನಂದಿಷ್ಟs ನೋಡ್ರೆಪಾ : ಜೈ ಸಿದನಾಯ್ಕಾ!

ಎಲ್ಲರು : ಜೈ ಸಿದನಾಯ್ಕಾ!

ಸಿದನಾಯ್ಕ : (ಭಾಷಣದ ಧಾಟಿಯಲ್ಲಿ)

ಬಾಂಧವರೇ,

ಈ ದಿನ ನಮ್ಮನ್ನ ಎಲ್ಲಿಗೋ ಮುಟ್ಟಸ್ತದ. ನಾವೆಲ್ಲಾ ಒಂದು ಹೊಸ ದೇವರ ಹೆಸರಿನಾಗ ದರ್ಮಯುದ್ಧ ಹೂಡೀದೀವಿ. ನಮ್ಮ ಗುರಿ ಭಾಳ ದೂರ. ಹೆಜ್ಜೆ ಹೆಜ್ಜಿಗಿ ಕಲ್ಲ ಮುಳ್ಳ ತುಳೀಬೇಕು, ತಾಳಬೇಕು, ಆದರೆ ಜಯ ಖಂಡಿತ. ನಮ್ಮ ಜಯದಾಗ ಯಾರಿಗಾದರೂ ಅಪನಂಬಿಕಿದ್ದರ ಅಂಥವರು ಬದಿಗಿ ಸರೀಲಿ. ನಮ್ಮ ಕನಸು ಕಾಣದವರಿಗೆ ನಮ್ಮ ಜೋಡಿ ಬರೋ ಹಕ್ಕಿಲ್ಲ. ಏನಂತೀರಿ?

ಎಲ್ಲರು : ಜೈ ಸಿದನಾಯ್ಕಾ!

ಸಿದನಾಯ್ಕಾ : ನಮ್ಮ ಮುಂದಿನ ಬೇಡಿಕೆ ಇವು :
(ಸಿದನಾಯ್ಕ ಒಮ್ಮೆಲೆ ಘೋಷಣೆ ಕೂಗುವಂತೆ ಒದರಿ ಮಾತಾನಾಡುತ್ತಾನೆ.)

ನಮ್ಮ ಚಿನ್ನೀನ ನಮಗ ಬಿಟ್ಟಕೊಡರಿ.

ಉರಿನಿಂಗ : ಇಲ್ಲದಿದ್ದರ ಕಾಲ್ಮರಿ ಪೆಟ್ಟ ತಿನ್ನರಿ.

ಸಿದನಾಯ್ಕ : ಹಸಿದ ಹೊಟ್ಟಿಗಿ ಕಾಳ ಕೊಡರಿ.

ಕಲ್ಲ : ಇಲ್ಲದಿದ್ದರ ಕಾಲ್ಮರಿ ಪೆಟ್ಟ ತಿನ್ನರಿ.

ಸಿದನಾಯ್ಕ : ಕೊಟ್ಟರ ಸೈ.

ಉರಿನಿಂಗ : ಕೊಡದಿದ್ದರ ಲೂಟಿ!

ಸಿದನಾಯ್ಕ : ಮುಂದ ಮಳೀ ಆದಾಗ ಹೊಲಾ ಹಿಡಕೊಳ್ಳೋದು. ಏನಂತೀರಿ?

ಎಲ್ಲರು : ಜೈ ಸಿದನಾಯ್ಕಾ೧

ಸಿದನಾಯ್ಕ : ನಡೀರಿ.

ಕಲ್ಲ : ನಮ್ಮ ಚಿನ್ನೀನ ನಮಗ ಬಿಟ್ಟಕೊಡರಿ.

ಎಲ್ಲರು : ಇಲ್ಲದಿದ್ದರ ಕಾಲ್ಮರಿ ಪೆಟ್ಟ ತಿನ್ನರಿ.

ಉರಿನಿಂಗ : ಹಸಿದ ಹೊಟ್ಟಿಗಿ ಕಾಳ ಕೊಡರಿ.

ಎಲ್ಲರು : ಇಲ್ಲದಿದ್ದರ ಕಾಲ್ಮರಿ ಪೆಟ್ಟ ತಿನ್ನರಿ.

ಉರಿನಿಂಗ : ಕೊಟ್ಟರ ಸೈ.

ಎಲ್ಲರು : ಕೊಡದಿದ್ದರ ಲೂಟಿ!
(ಹೀಗೇ ಕಿರುಚುತ್ತ ವಾಡೇದ ಸಮೀಪಕ್ಕೆ ಬರುತ್ತಾರೆ)

ಕೆಂಚ : ವಾಡೇದ ಬಾಗಲ ತಗ್ಯಾಕ ಹತ್ತೇತಿ. ಯಾರೂ ಬಂದೂಕಿನವರು ಇದ್ಧಾಂಗಿಲ್ಲ.

ಕಲ್ಲ : ಹೌಂದ, ಯಾರೂ ಇಲ್ಲ!

ದಬಕ : ವಾಡೇದ ಬಾಗಲ ತಗೀತು. ದೇಸಾಯಿ ಬಂದ! ದೇಸಾಯಿ ಬಂದ! ಜೈ ಸಿದನಾಯ್ಕಾ.

ಎಲ್ಲರು : ಜೈ ಸಿದನಾಯ್ಕಾ೧
(ಕಿರುಚುತ್ತ, ಏನು ಮಾಡುತ್ತಿದ್ದೇವೆಂಬ ಅರಿವಿಲ್ಲದೆ ವಾಡೆಯತ್ತ ಕಲ್ಲೆಸೆಯ ತೊಡಗುತ್ತಾರೆಸಿದನಾಯ್ಕಎಂದು ಎಷ್ಟು ಕಿರುಚಿದರೂ ಪ್ರಯೋಜನವಾಗುವುದಿಲ್ಲ)

ಸಿದನಾಯ್ಕ : ತಡೀರಿ, ತಡೀರಿಲ್ಲೆ, ಏs……

ಎಲ್ಲರು : ಜೈ ಸಿದನಾಯ್ಕಾ!
(ಎಲ್ಲರು ಕಿರುಚುತ್ತ ಕೈಗೆ ಸಿಕ್ಕುದನ್ನು ಎಸೆಯುತ್ತಿರುವಾಗಲೇ ಎಲ್ಲ ಕಿರುಚಾಟ ಭೇದಿಸಿ ಒಂಕಾರಿಯುಕಾಪಾಡ್ರೋ ಎಪ್ಪಾಎಂದು ಧ್ವನಿ ಕೇಳಿಸುತ್ತದೆ. ಎಲ್ಲರು ತಣ್ಣಾಗಾಗುತ್ತಾರೆ)

ಸಿದನಾಯ್ಕ : ಏನ ಮಾಡತಿದ್ದೀರಿ, ಕಾಣಬಾರಾದ? ಕೆಂಚಾ, ದಬಕಾ-ಹೋಗಿ ಒಂಕಾರೀನ ಹೊತ್ತಕೊಂಬ್ರಿ! ಓಡ್ರಿ.
(ಇಬ್ಬರೂ ಹೋಗುವರು)
ಅವಸರದೊಳಗ ಏನೇನ ಮಾಡಿಬಿಟ್ಟಿವಿ!

ಕಲ್ಲ : ಛೀ ಛೀ! ರುಂಬಾಲ ನೋಡಿ ಹುಯ್ಯಂತ ನುಗ್ಗಿದಿವಲ್ಲ! ಯಾರು, ಏನು- ನೋಡsಲಿಲ್ಲ!

ಸಿದನಾಯ್ಕ : ಒಂಕಾರೀ, ಒಂಕಾರೀ, ಯಾಕಾದರು ದೇಸಾಯೀ ರುಂಬಾಲ ಹಾಕ್ಕೊಂಡಿಯೊ! (ಚಿನ್ನಿ ಓಡಿ ಓಡಿ ಬರುವಳು)

ಇರಪ : ಚಿನ್ನಿ ಬಂದ್ಳು!

ಚಿನ್ನಿ : ಸಿದನಾಯ್ಕಾ, ಸಿದನಾಯ್ಕಾ! ಈಗ ಹೋಗಬ್ಯಾಡ್ರಿ, ಈಗ ಹೋಗಬ್ಯಾಡ್ರಿ, ವಾಡೇದ ತುಂಬ ಬಂದೂಕಿನವರ ತುಂಬ್ಯಾರ. ಹೋಗಬ್ಯಾಡ್ರೀಗ! ನಿಮ್ಮ ಕೂಗ್ಯಾಟ ಕೇಳಿ ದೇಸಾಯನs ಒಂಕಾರೀನ ಮುಂದ ಮಾಡಿ ಕಳಿಸಿದ!
(ಹೋದವರಿಬ್ಬರು ಒಂಕಾರಿಯನ್ನು ಹೊತ್ತು ತರುವರು. ರಕ್ತ ಸೋರುತ್ತಿದೆ. ಮೂರ್ಛಿತನಾಗಿದ್ದಾನೆ)
ಸಿದನಾಯ್ಕ : ಏ ದಬಕ, ಇಲ್ಲೆಲ್ಲಿ ಡಾಕ್ಟರಿಲ್ಲೇನೊ?

ದಬಕ : ಪಕ್ಕದ ಹಳ್ಳಿಗಿ ಹೋಗಬೇಕು.

ಸಿದನಾಯ್ಕ : ಇಬ್ಬರೂ ಒಂಕಾರೀನ ಹೊತ್ತಕೊಂಡ ಆಸ್ಪತ್ರಿಗಿ ಹೋಗ್ರಿ. ಚಿನ್ನಿ, ನೀನೂ ಇವರ ಜೋಡಿ ಹೋಗು, ಕೂಡಲೆ ಔಷಧ ಕೊಡಸರಿ. ತಗೊಳ್ರಿ ರೊಕ್ಕ.
(ಕೊಡುವನು. ದಬಕ ಒಂಕಾರಿಯನ್ನು ಹೊರುವನು. ಅವನೊಂದಿಗೆ ಇರಪ, ಚಿನ್ನಿ ಹೊರಡುವರು)
ನೆನಪಿನಾಗಿಡಿರಿ, ಒಂಕಾರೀ ಜೀವಾ ನಿಮ್ಮ ಕೈಯಾಗಿಟ್ಟೀನಿ.(ಹೋಗುವರು. ಸಿದನಾಯ್ಕ ಖಿನ್ನನಾಗುವನು)
ಛೇ, ಯಾರಿಗಾಗಿ ನಾವೆಲ್ಲಾ ಹೊಡೆದಾಡಬೇಕು? ಒಂಕಾರಿ ಇಲ್ಲದಿದ್ದರ ನಮ್ಮ ಜಯ ಎಂಥಾದ್ದು? ಎಂಥೆಂಥಾ ಕನಸಗಳನ್ನ ಕಾಣತಿತ್ತ ಅವನ ಆತ್ಮ!

ಕೆಂಚ : ತಪ್ಪಾತಪಾ, ಗೊತ್ತs ಆಗಲಿಲ್ಲ ನಮಗ.

ಸಿದನಾಯ್ಕ : ತಪ್ಪ ನಂದು. ದೇಸಾಯೀ ಮೋಸ ಗೊತ್ತಾಗದs ನುಗ್ಗರಿ ಅಂದದ್ದ ನನ್ನ ತಪ್ಪು. ಈಗೇನ ಮಾಡಲಿ? ವಾಡೇದ ಬಾಗಲ ಮುಚ್ಯಾವ. ಕಿಂಡಿ ಕಿಂಡ ಈ ಒಳಗ ಬಂದೂಕಿನ ಲಳಿಗಿ ನಿಂತಾವ!

ಉರಿನಿಂಗ : ಹೆಂಗೂ ಸಾಯತೀವಿ, ಹೊಡದಾಡಿ ಸಾಯೋಣು.

ಸಿದನಾಯ್ಕ : ಛೇ, ಒಂಕಾರಿಗಿ ಇದ ಗೊತ್ತಾಗಿದ್ದರ ‘ಛೀ ಅಂತಿದ್ದ.

ಕೆಂಚ : ಅಂತಿದ್ದಾ, ಆದರ ನೀ ಹೀಂಗ ಧೈರೆ ಕಳಕೊಂಡದ್ದ ನೋಡಿ ನಗತಿದ್ದಾ.

ಉರಿನಿಂಗ : ಒಂಕಾರಿ ಸತ್ತಿಲ್ರೆಪಾ, ಅವನೂ ನೀನೂ ಸೇರಿ ನಮ್ಮ ಎದಿ ಹೊತ್ತಿಸೀರಿ, ಅವ ಯಾಕ ಸಾಯತಾನ? ನಿನ್ನ ನಂಬಿ ಇಷ್ಟ ಮಂದಿ ಬೆನ್ನ ಹತ್ತೀವಿ, ನಡುನೀರಾಗ ಕೈ ಬಿಡಬ್ಯಾಡ, ಅಷ್ಟ.

ಸಿದನಾಯ್ಕ : ನನ್ನ ಸಂಕಟಾ ನಿಮಗೆಲ್ಲಾ ಹೆಂಗ ಹೇಳಲಿ? ನಮ್ಮ ಉತ್ತರ ಇರೋದು ವಾಡೇದಾಗ. ಆದರ ವಾಡೇ ತುಂಬ ಬಂದೂಕವ.

ಉರಿನಿಂಗ : ಚೂರಿಗಿ ಚೂರೀ ಉತ್ತರ; ಅವನ ಬಂದೂಕಿಗಿ ನಮ್ಮ ಎದಿ ಉತ್ತರ!

ಸಿದನಾಯ್ಕ : ಜೀವ ಕಳಕೊಂಡರ ಏನ ಸಾಧಿಸಿಧಂಗಾಯ್ತು? ಬಂದೂಕಿಗಿ ಎದೀ ಉತ್ತರಲ್ಲಪಾ ಬಂದೂಕಿನುತ್ತರಾ ಕೊಡಬೇಕು.
(ನೇಪಥ್ಯದಿಂದ ಗಡುಸಾದ ಧ್ವನಿ ಕೇಳಿಸುತ್ತದೆ)

ಧ್ವನಿ : ಅದು ಸಿಕ್ಕತಂತ ತಿಳಕೊ.
(ಎಲ್ಲರೂ ಹಿಂದೆ ತಿರುಗಿ ನೋಡುತ್ತಾರೆ. ಒಬ್ಬಸ್ವಾಮಿ ಕಾವಿಯನ್ನುಟ್ಟು ತೊಟ್ಟು ಠೀವಿಯಿಂದ ಬರುತ್ತಾನೆ. ಜನರೆಲ್ಲಗುರುವಯ್ಯನವರು! ‘ಗುರುವಯ್ಯನರು!’ ಎಂದು ಗುಜುಗುಜು ಮಾತಾಡಿಕೊಳ್ಳುತ್ತಾರೆ)

ಸಿದನಾಯ್ಕ : ನೀವು ಯಾರಂತ ಗೊತ್ತಾಗಲಿಲ್ಲ.

ಕೆಂಚ : ನಮ್ಮ ಸ್ವಾಮಿಗಳಲು, ಗುರುವಯ್ಯನವರಪಾ.

ಗುರುವಯ್ಯ : ಈಗ ಗೊತ್ತಾಗೋ ಗರ್ಜಿಲ್ಲ. ನಿನಗ ಬಂದೂಕ ಬೇಕು, ಬಂದೂಕಿನ ಜನ ಬೇಕಲು. ತಗೊ. ಎಲ್ರೆಪಾ……?
(ಹಿಂತಿರುಗಿ ನೋಡುವನು. ಹಿಂಡುಜನ ಬಂದೂಕಿನವರು ಬರುವರು)

ಹೊಸಾ ಗೆಳಿತಾನಂತ ತಬ್ಬಿಕೊಂಡು ಕುಣಿದಾಡೋದ ಬ್ಯಾಡ. ಬಂದೂಕವ, ಎದರಿಗಿ ನಿಮ್ಮ ಗುರಿ ಅದ. ನಮ್ಮ ನಿಮ್ಮ ಭೇಟಿ ನಿಮಗ ಜಯ ಸಿಕ್ಕಮ್ಯಾಲ. ನೆಪ್ಪಿರಲಿ, ಅಂತಿಮ ಜಯ ಸತ್ಯಕ್ಕೆ, ನ್ಯಾಯಕ್ಕೆ. ಜಯ ಸಿದನಾಯ್ಕಾ!

ಎಲ್ಲರು : ಜೈ ಸಿದನಾಯ್ಕಾ!
(ಗುರುವಯ್ಯ ಮರೆಯಾಗುತ್ತಾನೆ. ಅವನ ಕಡೆ ನೋಡುತ್ತ ಇನ್ನೊಮ್ಮೆ ಜೈಕಾರ ಹಾಕುತ್ತಾರೆ. ಸಿದನಾಯ್ಕ ಯೋಚಿಸುತ್ತ ನಿಂತಿದ್ದಾಗ ಬಂದುಕಿನವರು ಅವಸರ ಮಾಡುತ್ತಾರೆ)

ಕೆಂಚ : ಇನ್ನೇನ ಕಾಯಕೋತ ನಿಂತಿವಿ!
ಎಲ್ಲರು : ಜಯು ಸಿದನಾಯ್ಕಾ!

ಸಿದನಾಯ್ಕ : ನುಗ್ಗರಿನ್ನ.
(ಉತ್ಸಾಹದಿಂದ ನುಗ್ಗುತ್ತಾರೆ. ಜಯಘೋಷ, ಕಿರುಚಾಟ, ಗುಂಡಿನ ಧ್ವನಿ, ಬಹಳ ಹೊತ್ತಿನತನಕ ನಡೆಯುತ್ತದೆ. ದೂರದಲ್ಲಿ ಬೆಂಕಿ ಗೋಚರಿಸುತ್ತದೆ. ಆಗಾಗ ಜನ ರಂಗದ ಮೇಲೆ ಓಡಾಡಿ ಮಾಯವಾಗುತ್ತಾರೆ. ಬರಬರುತ್ತ ಗುಡುಗು ಮಿಂಚುಗಳು ಗುಂಡಿನ ಸಪ್ಪಳದೊಂದಿಗೆ ಬೆರೆಯುತ್ತವೆ)