ಜೋಕಾಲಿ ಆಡೋಣ ಬನ್ನಿರೋ- ನಾವೆಲ್ಲ
ಜೋಕಾಲಿ ಆಡೋಣ ಬನ್ನಿರೋ-

ವರುಷ ವರುಷಕ್ಕೊಮ್ಮೆ ಬಂತು ಉಗಾದಿ
ಹರುಷದ ಜೊತೆಯೊಳು ತಂತು ತಗಾದಿ
ಹಬ್ಬಗಳೇರ‍್ಯಾವು ಇಳಿದಾವು ಗಾದಿ
ಆದರು ನಮಗೆಲ್ಲ ಒಂದೇ ಹಾದಿ-
ಜೋಕಾಲಿ ಆಡೋಣ ಬನ್ನಿರೋ- ನಾವೆಲ್ಲ
ಜೋಕಾಲಿ ಆಡೋಣ ಬನ್ನಿರೋ.

ದಿನ ದಿನ ಬೆಳಗುಂಟು, ಸಂಜೆಯು ಉಂಟು ;
ಇರುಳ ಕತ್ತಲುಂಟು, ಚಂದ್ರಾಮನುಂಟು,
ಮಳೆಗಾಳಿಬೆಳೆಯುಂಟು, ಹುಟ್ಟುಸಾವುಂಟು
ಇದ್ದದ್ದೆ ನಮಗೆಲ್ಲ ಬಿಡದಂಥ ಗಂಟು-
ಜೋಕಾಲಿ ಆಡೋಣ ಬನ್ನಿರೋ- ನಾವೆಲ್ಲ
ಜೋಕಾಲಿ ಆಡೋಣ ಬನ್ನಿರೋ.

ಸುಗಿಯು ತೇರೇರಿ ಎಲ್ಲೆಲ್ಲು ನಿಂತು
ಹಸುರಿನ ಜಾತ್ರೆಯ ಮೇಳವ ತಂತು.
ಜನುಮದ ಸಾಲಕ್ಕೆ ಕೆಲಸದ ಕಂತು
ತಪ್ಪದೆ ಕಟ್ಟೋಣ ಅಂತೂ ಇಂತು-
ಜೋಕಾಲಿ ಆಡೋಣ ಬನ್ನಿರೋ- ನಾವೆಲ್ಲ
ಜೋಕಾಲಿ ಆಡೋಣ ಬನ್ನಿರೋ.

ಮದುವೆ ಸುಗ್ಗೀ ಒಳಗೆ ಹೊಸಮದುವೆ ಹೆಣ್ಣು
ಹೊಸಮದುವೆಗಂಡಿಗೆ ರಸಬಾಳೆ ಹಣ್ಣು !
ಹಿರಿಯರ ಕಿರಿಯರ ಪ್ರೀತಿಯ ಕಣ್ಣು
ಸುರಿದಾವೊ ಮಲ್ಲಿಗೆ ಶುಭಮಸ್ತು ಎನ್ನು-
ಜೋಕಾಲಿ ಆಡೋಣ ಬನ್ನಿರೋ- ನಾವೆಲ್ಲ
ಜೋಕಾಲಿ ಆಡೋಣ ಬನ್ನಿರೋ.

ಬಂದಾಳೊ ಗೌರಮ್ಮ ತಂದಾಳೊ ಗಣಪ
ತೌರು ತೌರೂರಿಗು ಮನೆ ಮನೆ ದೀಪ.
ತೂಗು ತೊಟ್ಟಿಲ ತುಂಬ ಬಂಗಾರು ಪಾಪ
ಮನೆ ತುಂಬ ಹರಡೀತೊ ಸಾಮ್ರಾಣಿ ಧೂಪ-
ಜೋಕಾಲಿ ಆಡೋಣ ಬನ್ನಿರೋ- ನಾವೆಲ್ಲ
ಜೋಕಾಲಿ ಆಡೋಣ ಬನ್ನಿರೋ.

ಬಿತ್ತೀದ ಹೊಲದಲ್ಲಿ ಮೊಳೆತಾವು ಬೀಜ
ಕಣ್ಣ ತೆರೆದಾವಣ್ಣ ಹಸುರಿನ ತೇಜ
ಹೊಲದ ಅಟ್ಟಣೆಯಲ್ಲಿ ನಾನೇ ರಾಜ
ಬಲ್ಲರು ಯಾರಣ್ಣ ಈ ಎಲ್ಲ ಮೋಜ ?-
ಜೋಕಾಲಿ ಆಡೋಣ ಬನ್ನಿರೋ- ನಾವೆಲ್ಲ
ಜೋಕಾಲಿ ಆಡೋಣ ಬನ್ನಿರೋ.

ರಾಜ್ಯಗಳೆದ್ದವೊ ಬಿದ್ದವೊ ಅಣ್ಣ
ಹತ್ತೀದ ಹಣತೆಗಳಾರ‍್ಯಾವೊ ಅಣ್ಣ
ಬೆಳಕೋ ಕತ್ತಲೊ ನಮಗೆ ಈ ಮಣ್ಣ
ತಾಯಿಯ ಸೆರಗೊಂದೆ ಶಾಶ್ವತವಣ್ಣ-
ಜೋಕಾಲಿ ಆಡೋಣ ಬನ್ನಿರೋ- ನಾವೆಲ್ಲ
ಜೋಕಾಲಿ ಆಡೋಣ ಬನ್ನಿರೋ.

ಗಾಳಿಗೆ ಗದ್ದೆಯು ತಲೆದೂಗುವಂತೆ
ಕೆರೆಯಲ್ಲಿ ಹೊಸ ನೀರು ಭೋರಾಡುವಂತೆ
ಮುಗಿಲಲ್ಲಿ ಪಾರಿವಾಳ ಹಾರಾಡುವಂತೆ
ಆಡುವ ಜೋಲಿಗೆ ಏನೈತೊ ಚಿಂತೆ ?-
ಜೋಕಾಲಿ ಆಡೋಣ ಬನ್ನಿರೋ- ನಾವೆಲ್ಲ
ಜೋಕಾಲಿ ಆಡೋಣ ಬನ್ನಿರೋ.

ಹತ್ತ ಬನ್ನಿರಣ್ಣ ನಮ್ಮ ಜೋಕಾಲಿ
ಮುರಿಯದ ಕೊಂಬೆಗೆ ಕಟ್ಟಿದ ಜೋಲಿ
ಬೇರೆಲ್ಲ ಹಾದಿಗು ಬರಿಯ ಒಗ್ಗಾಲಿ
ಇಲ್ಲೆಲ್ಲ ಮೈತುಂಬ ತಣ್ಣನೆ ಗಾಳಿ-
ಜೋಕಾಲಿ ಆಡೋಣ ಬನ್ನಿರೋ -ನಾವೆಲ್ಲ
ಜೋಕಾಲಿ ಆಡೋಣ ಬನ್ನಿರೋ.

ಹಕ್ಕಿಪಕ್ಕಿಗೆಲ್ಲ ಹಸುರಿನ ಜೋಲಿ
ಗುಡಿಯ ದೇವರ ಸುತ್ತ ದೀಪದ ಜೋಲಿ.
ಚಿಕ್ಕೆ ಚಂದ್ರಾಮಗೆ ನೀಲಿಯ ಜೋಲಿ
ನಮ್ಮ ಹಿಗ್ಗಿಗೆ ಜಗವೆಲ್ಲ ಜೋಲಿ-
ಜೋಕಾಲಿ ಆಡೋಣ ಬನ್ನಿರೋ- ನಾವೆಲ್ಲ
ಜೋಕಾಲಿ ಆಡೋಣ ಬನ್ನಿರೋ.