(ಸೂಳೆ ಹೊಲೇರ ಶಾರಿಯ ಮನೆಯಂಗಳ. ಗೌಡ್ತಿ ಸೀರೆಯ ಸೆರಗಿನಿಂದ ಅಂಗಳ ಗುಡಿಸುತ್ತ ಬರುವಳು)

ಗೌಡ್ತಿ :

ಅವ್ವಾ ಸೂಳೆವ್ವ
ತಾಯೀ ಸೂಳೆವ್ವ
ಅದಿಯೇನ ಮನಿಯಾಗ||

ಬಂಜಿ ಬಂದ ಕರಿಯತೇನ
ಕರುಣಾ ಇಲ್ಲೇಳ ನಿನಗಾ ||

ಉಟ್ಟ ಸೀರೀ ಸೆರಗಿನಿಂದ
ಗುಡಿಸೇನ ನಿನ್ನ ಅಂಗಳಾ ||

ಹೊರಗ ಬಂದ ನೋಡವ್ವ ತಾಯಿ
ನಿಂತೇನ ಬರಯಿಯುಡಿಯೊಡ್ಡಿ ||

ಶಾರಿ : ಅವಯ್ಯಾ? ಸೂಳೀಮನಿ ಅಂಗಳ ಗುಡಿಸುವಂಥಾಕಿ ಈಕಿ ಯಾರಿರಬೇಕ?

ಯಾರವ್ವ ಎಲೆ ಗೆಳತಿ
ಯಾಕವ್ವ ಬಂದಿ
ಅಂಗಳ ಗುಡಿಸುತ್ತಿ ||

ದೊಡ್ಡ ಮನೆತನದಾಕಿ
ಗುಣವಂತಿ
ಕಾಣತಿ ಮಹಾಗರತಿ ||

ಕೀಳ ಸೂಳಿಯ ಮನಿಗಿ
ಯಾಕವ್ವ ಬಂದಿ
ಕಾಣತಿ ಮಹಾಗರತಿ||

ಅವ್ವಾ, ನೋಡೋದಕ್ಕ ಮಹಾಗರತಿ. ಲಕ್ಷಣದಾಕಿ, ನೀ ಯಾರು? ಹೇಳುವಂಥ ವಳಾಗು.

ಗೌಡ್ತಿ : ತಾಯೀ-

ಶಾರಿ : ಕೀಳ ಸೂಳಿಗಿ ನಾಯೀ ಅಂತ ಕರೆಯೋದ ಬಿಟ್ಟ ತಾಯೀ ಅಂತಿ. ಯಾರವ್ವಾ ನೀನು?

ಗೌಡ್ತಿ : ನಾನೂ ನಿನ್ಹಾಂಗ ಒಂದ ಹೆಣ್ಣಂತ ತಿಳಿ, ಸಾಕು.

ಶಾರಿ : ಹಾಂಗ ಹತ್ತಬರೆ ತಿಳದೇನು. ಅಕ್ಕಾ ಅಂದೇನು, ತಂಗೀ ಅಂದೇನು, ಏನಂದರೇನು? ನೋಡಿದರ ಪತಿವರತಿ ಕಾಣತಿ, ಹೆಸರ ಹೇಳು.

ಗೌಡ್ತಿ : ಋತುಮಾನದ ಹಕ್ಕಿ ಬಂದ ನಿನ್ನ ಮನ್ಯಾಗ ಕುಂತೈತಿ. ಅದನ್ನ ಕೊಟ್ಟರ ಹೆಸರ ಹೇಳೇನ್ನೋಡು.

ಶಾರಿ :ಯಾಕವ್ವಾ ಒಡಿಪಿನಾಗಾಡ್ತಿ? ಹೆಸರ ಹೇಳದs ಎಷ್ಟೊಂದ ಓಡಾಡಸ್ತಿ? ಋತುಮಾನದ ಹಕ್ಕಿ ಯಾವುದು, ಎಲ್ಲೈತಿ?

ಗೌಡ್ತಿ : ಮನ್ಯಾಗಿಟ್ಟಕೊಂಡ ಎಲ್ಲೆಂದರ ಏನ ಹೇಳ್ಲಿ?

ಶಾರಿ : ಒಡಪ ಹೇಳಿ ಯಾಕ ಕೊಲ್ಲತಿ? ನಿನ್ನಿಂದ ನನ್ನ ಮನಿ ಧನ್ಯಾಗೇತಿ. ಹೆಸರ್ಹೇಳು, ಬಂದು ಕಾರಣಾ ಹೇಳು.

ಗೌಡ್ತಿ :ಅಮ್ಮಾ ನಿನ್ನ ಮನ್ಯಾಗಿನ ಜೋಕುಮಾರ ಸ್ವಾಮೀನ್ನ ಕೊಟ್ಟರ ಹೆಸರ ಹೇಳೇನ್ನೋಡು.

ಶಾರಿ :

ಯಾವ ಸವತೀನs ನೀನು?
ಯಾವ ಜೋಗತೀನs ನೀನು?

ನನಗ ಸಾಯಂದೇನ?
ಗೋರಿಗಿ ಹೋಗಂದೇನ?

ಒಂದs ಒಂದ ಗಿರಾಕಿಲ್ದs ಕೂಳಿಲ್ದs ನೀರಿಲ್ದs
ಕೂತೇನು.

ಅಂಗಳಾ ಉಡಗೋ ನೆವ ಮಾಡಿ ಬಂದಿ.
ಯಾವ ಜೋಗತೀನs ನೀನು
ಯಾವ ಸವತೀನs ನೀನು?

ಜೋಕುಮಾರಸ್ವಾಮೀ ಪಲ್ಲೆ ಮಾಡಿ
ಊರ ಗಂಡಸರಿಗೆಲ್ಲಾ ನೀಡಿ

ನನ್ನ ಸೆರಗಿನಾಗ ಹೆಡಮುರಿ ಕಟ್ಟಿ,
ನನ್ನ ಬಾಗಲಾಗ ಬಿದ್ದಿರೋ ಹಾಂಗ ಮಾಡೇನಂದರ
ಅಂಗಳಾ ಉಡಗೋ ನೆವ ಮಾಡಿ ಬಂದಿ
ಯಾವ ಸವತೀನs ನೀನು?
ಯಾವ ಜೋಗತೀನs ನೀನು?

ಸೂಳಿಯಾಗಿ ಇಪ್ಪತ್ತ ವರ್ಷಾತು
ಒಂದ ಗಳಿಸಲಿಲ್ಲಾ. ಒಂದ ಉಳಿಸಲಿಲ್ಲಾ,
ಜೋಕುಮಾರಸ್ವಾಮಿ ದಯದಿಂದ
ನೇಣ ಹಾಕಿಕೊಳ್ಳಾಕ ಒಂದ ಹಗ್ಗಾನಾದರೂ
ಗಳಿಸಬೇಕಂದರ
ಅಂಗಳಾ ಉಡಗೋ ನೆವ ಮಾಡಿ ಬಂದಿ
ಯಾವ ಸವತೀನs ನೀನು?
ಯಾವ ಜೋಗತೀನs ನೀನು?

ಅಳೋದಕ್ಕ ಯಾರಿಗಿ ಬರಾಣಿಲ್ಲಾ?
ತತಾ ನಾಲ್ಕ ಕೊಡ. ಹಾ ಅನ್ನೋದರಾಗ
ಕಣ್ಣೀರಿನಿಂದ ತುಂಬಿಸ್ತೇನ.
ಯಾ ಊರ ಸೂಳಿ? ಯಾ ಓಣಿ ಸೂಳಿ?
ಅಂಗಳಾ ಉಡಗೋ ನೆವ ಮಾಡಿ ಬಂದಿ
ಯಾವ ಸವತೀನs ನೀನು?
ಯಾವ ಜೋಗತೀನs ನೀನು?

ಗೌಡ್ತಿ : ತಾಯೀ,

ಉಡಿಯೊಡ್ಡಿ ಬೇಡೇನ
ಹಿಡದೇನ ನಿನ್ನ ಚರಣ
ತೋರಿಸ ದಯ ಕರುಣಾ||

ಶಾರಿ : ಏನ ಹುಚ್ಚಿ! ಕೈಗಿ ಸಿಕ್ಕ ಜೋಕುಮಾರ ಸ್ವಾಮೀನ್ನ ಯಾವ ಹೆಣ ಬಿಟ್ಟಾಳು? ನನಗೂ ವಯಸ್ಸಾಗೈತಿ, ಹೊಟ್ಟೀ ನೆತ್ತಿ ನೋಡಾಕ ನನಗ ನಿನ್ಹಾಂಗ ಯಾರೂ ಹೆಣ್ಣಮಕ್ಕಳಿಲ್ಲ. ಮೊದಲs ನನ್ನ ಮೈ ಉಂಡದ್ದ, ಉಟ್ಟದ್ದ, ಠಸಿ ಉಂಡ ತಿರಗಿದ್ದು. ನಾರೋ ಎಣ್ಣಿಲ್ದ ಮಗ್ಗಲ ಮಿಂಡಿಲ್ಲದs ಮಲಗಿದ್ದಲ್ಲ. ಮಿಂಡರನೆಲ್ಲಾ ಎಳಕೊಂಬರೋ ಮಂತ್ರ ಸಿಕ್ಕೈತಿ, ಹೆಂಗ ಕೊಡ್ಲಿ? ತಗಿ ತಗಿ ಕೊಡಾಣಿಲ್ಲ.

ಗೌಡ್ತಿ :

ಅನ್ನಬ್ಯಾಡ ಇಲ್ಲಂತ
ಉಡಿತುಂಬ ಮಗಳಂತ||

ಉಡಿಯೊಡ್ಡಿ ಬೇಡೇನ
ಹಿಡದೇನ ನಿನ್ನ ಚರಣ
ತೋರೀಸ ದಯ ಕರುಣಾ||

ಶಾರಿ : ಕರತೋ ಕರಳ ಇದ್ದಿದ್ದರ ಸೂಳಿ ಆದೇನು? ಕೈಗಿ ಬಂದ ಸೌಣಾಗ್ಯ ಹಾದೀಲೆ ಹೋಗವರಿಗೆ ಹೆಂಗ ಕೊಟ್ಟೇನು?

ಗೌಡ್ತಿ :

ಮಕ್ಕಳಿಲ್ಲದ ಬಂಜಿ
ಬೇಡೇನ ಸೆರಗೊಡ್ಡಿ||

ಉಡಿಯೊಡ್ಡಿ ಬೇಡೇನ
ಹಿಡದೇನ ನಿನ್ನ ಚರಣ
ತೋರೀಸ ದಯ ಕರುಣಾ||

ಶಾರಿ : ಬಂಜಿ ಅಂದರ ನನಗೂ ಸಂಕಟ ಆಗತೈತಿ ಖರೆ. ಅದಕ್ಕ ನಾ ಏನ್ಮಾಡಲಿ? ಅಂಗೈ ಐಶ್ವರ್ಯ ಹೆಂಗ ಬಿಟ್ಟೇನು? ಹುಚ್ಚಿ, ಸೂಳೀ ಮನೀಗಿ ಬಂದಮ್ಯಾಲಾದರೂ ಹುಚ್ಚತನ ಬಿಡಬೇಕಾಗಿತ್ತ. ಹೋಗಲಿ. ಹೋಗಲಿ, ಯಾರಂತ ಹೆಸರ್ಹೇಳಿ ಹೋಗು.

ಗೌಡ್ತಿ :

ಊರ ಗೌಡನ ಹೆಂಡತಿ
ನಾ ಊರ ಗೌಡತಿ||

ಉಡಿಯೊಡ್ಡಿ ಬೇಡೇನ
ಹಿಡದೇನ ನಿನ್ನ ಚರಣ
ತೋರೀಸ ದಯ ಕರುಣಾ||

ಶಾರಿ : ಊರಗೌಡ್ತಿ? ಏನ ಹುಚಿ ಇದ್ದೀಯs ಎವ್ವ? ಮಾನ ಮರ್ಯಾದಿ ಬಿಟ್ಟ ಸೂಳೀ ಮನೀಗಿ ಬಂಜೀ ಸೆರಗೊಡ್ಡಿ ಬಂದಿ. ಭಾಳದಿನಾ ಆಗಲಿಲ್ಲಾ ನಿನ್ನ ಮದಿವ್ಯಾಗಿ?

ಗೌಡ್ತಿ : ಇಂದಿಗಿ ಹತ್ತ ವರ್ಷ ತುಂಬಿದುವು.

ಶಾರಿ : ಇನ್ನೂ ಗೌಡನ ಹೊಟ್ಯಾಗಿಂದ ತಿಳೀಲಿಲ್ಲ ಎವ್ವ? ಜೋಕುಮಾರ ಸ್ವಾಮೀನ್ನ ಕೊಟ್ಟೇನು, ಆದರ ಗೌಡನಿಂದ ನಿನಗ ಮಕ್ಕಳಾದಾವೇನು?

ಗೌಡ್ತಿ : ಯಾಕಾಗಾಣಿಲ್ಲ? ಎಷ್ಟ ಮಂದಿಗಿ ಆಗ್ಯಾವ!

ಶಾರಿ: ಮಂದಿಗಿ ಆಗ್ಯಾವ ಖರೆ. ಗೌಡನ ಸೊಭಾವೆ ನಿನಗ ಇನ್ನೂ ಗೊತ್ತs ಆಗಿಲ್ಲ, ಲೋಕದಾಗಿದ್ದದ್ದೆಲ್ಲಾ ತಂದs ಆಗಬೇಕನ್ನೋದೊಂದ ಹಂಕಾರ ಬಿಟ್ಟರ ಅವನಲ್ಲಿ ಏನೈತಿ? ನನ್ನs ನೋಡಲ್ಲs ಎವ್ವ. ಇಡೀ ಆಯುಷ್ಯೆಲ್ಲಾ ತೊಗಲ ಬಿಸಿ ಮಾಡಿಕೊಂಡ ಗಂಡಸರ ತೊಗಲಿಗಿ ತಿಕ್ಕೋದರಾಗs ತೀರಿಹೋತ. ಅನುಭವದ ಮಾತ ಹೇಳಲ್ಯಾ ಎವ್ವ? ಬಸಣ್ಯಾನ ನೋಡು. ಅವ ಎಲ್ಲೆಲ್ಲಿ ನೋಡತಾನ ಅಲ್ಲಲ್ಲಿ ಹುಡಿಗೇರಿಗಿ ಬೆವರ ಬರತೈತಿ. ನಿದ್ಯಾಗ ಬಂದ ಮೈ ಒದ್ದೀ ಮಾಡತಾನ! ಗೌಡನ್ನೋಡಿದರ ಹುಡಿಗೇರ ಬಾಯಿಗಿ ಸೆರಗ ಹಾಕ್ಕೊಂಡ ನಗತಾರ. ಅವನಿಂದ ನಿನಗ ಮಕ್ಕಳಾಗತಾವs? ನಾ ಹೆಂಗಸಾದ ಮೊದಲನೇ ದಿನ ತಾನs ಮೀಸಲಾ ಮುರೀತೇನಂತ ಗೌಡ ಬಂದ. ಚೀಲ ಬತ್ತಾ ಕೊಟ್ಟಾ, ಇಳಕಲ್ಲ ಸೀರೀ ಕೊಟ್ಟಾ, ಕುಬಸಾ ಕೊಟ್ಟಾ, ಮ್ಯಾಳ ಐದ ರೂಪಾಯಿ ಕೊಟ್ಟ! ಪೈಲಾ ಗಿರಾಕಿ ಗೌಡ ಬಂದರ ಸೂಳೇರಿಗೆ ಹೆಂಗ ಆಗಬ್ಯಾಡ? ಸೀರೀ ಗಂಟ ಸಡ್ಲ ಮಾಡಿಕೊಂಡ ಸಡಗರ ಮಾಡತಾ ದೇವರ ಕ್ವಾಣಿಗಿ ಹೋದರ, -ಗೌಡ ಕಂಬಳೀ ಹೊತ್ತಕೊಂಡ ಗೊರಿಕೀ ಹೊಡಿತಿದ್ದ! ಕಾಲ ಒತ್ತಿಕೋತ ಕುಂತೆ. ಬೆಳಿಗ್ಗೆದ್ದ ಏನೂ ಆಗದವರ್ಹಾಂಗ ಹೋದ. ಅಂದಿಂದ ಹತ್ತ ಹದಿನೈದ ಮಂದಿ ಸೂಳೇರ ಮೀಸಲಾ ಮುರದ್ದಾನ. “ಹೆಂಗರೇ?” ಅಂತ ಕೇಳಿದರ ಎಲ್ಲಾರೂ ನನ್ಹಾಂಗs ಹೇಳತಾರ! ಹಿಂಗ ಯಾಕ ಮಾಡಿದಾ ಗೊತ್ತೈತಿ ಎವ್ವ?

ಗೌಡ್ತಿ : ಸೂಳೇರ ಮನೀಗಿ ಬಂದದ್ದಕ್ಕ ಕೆಡಕನಿಸಿರಬೇಕು.

ಶಾರಿ : ದಿನಾ ಅವನ ಕಾಲ ತಿಕ್ಕತಿ, ಜಳಕಾ ಮಾಡೋವಾಗ ಬೆನ್ನ ತಿಕ್ಕತಿ. ಅವನ ಹಿಂದ ನೋಡೀದಿ, ಮುಂದ ನೋಡೀದಿ, ಇಷ್ಟೆಲ್ಲಾ ನೋಡಿ ಮತ್ತs ಅವನ್ನ ಪ್ರೀತೀ ಮಾಡೇನಂತಿ,-ನೀನೂ ದೊಡ್ಡ ಗರತಿ ಬಿಡು. ಯಾಕ ಹಾಂಗ ಮಾಡಿದಂದರ-ಕೂಡಲಿ ಬಿಡಲಿ, ಅವ ಮೀಸಲಾ ಮುರದ ಸೂಳೇರ ಮಕ್ಕಳೆಲ್ಲಾ ಅವನ ಮಕ್ಕಳs ಆಗತಾರೇನವಾ. ಹಾಂಗ ತಿಳಕೊಂಡs ಗೌಡ ಊರ ಮಂದಿಗೆಲ್ಲಾ ’ಏ ಮಗನs’ ಅಂತ ಕರೀತಾನ. ಇಂಥಾ ಗೌಡನಿಂದ ನಿನಗ ಮಕ್ಕಳಾಗತಾವು?

ಗೌಡ್ತಿ : ಜೋಕುಮಾರ ಸ್ವಾಮೀ ದಯದಿಂದ ಯಾಕ ಆಗಬಾರದು?

ಶಾರಿ : ಜೋಕುಮಾರ ಸ್ವಾಮೀನಂತೂ ತಗೊಂಡ್ಹೋಗು. ಆದರ ಸೂಳೀ ಹೊಚ್ಚಲಾ ಮೆಟ್ಟೀದಿ ಅಂದಮ್ಯಾಲ ಇನ್ನಾದರೂ ಶಾಣ್ಯಾಳಾಗಿ ಬದುಕು.

ಗೌಡ್ತಿ : ತಾಯೀ, ನಿನ್ನ ಉಪಕಾರ ಹೆಂಗ ತೀರಿಸಲಿ? ನಿನ್ನ ಬಾಯಿಂದ ಒಂದ ಸಲ ಹೇಳು,- ನನಗ ಮಕ್ಕಳಾಗತಾವಂತ.

ಶಾರಿ  : ನಿನಗ ಮಕ್ಕಳಾಗತಾವ ಹೋಗು.

(ಗೌಡ್ತಿಯ ತಲೆಯ ಮೇಲೆ ಜೋಕುಮಾರ ಸ್ವಾಮಿಯ ಬುಟ್ಟಿ ಹೊರಿಸುವಳು. ಗೌಡ್ತಿ ಹೊರಡುವಳು.)

* * *