(ಹೊಲ, ಗುಡಿಸಲ, ಬಸಣ್ಯಾ ಕೂತಿದ್ದಾನೆ. ಗೌಡ್ತಿ ಓಡುತ್ತ ಬರುತ್ತಾಳೆ.)
ಬಸಣ್ಣ : ಬಾ ಬಾರs ನನ ಗೆಣತಿ, ಎಷ್ಟ ಹೊತ್ತ ಹಾದಿ ನೋಡಿದೆ…
ಗೌಡ್ತಿ : ಬಸಣ್ಯಾ-
ಬಸಣ್ಣ : ಯಾಕ?
ಗೌಡ್ತಿ : ಗೌಡಗ ನಮ್ಮ ಸುದ್ದಿ ಎಲ್ಲಾ ಗೊತ್ತಾಗೇತಿ.
ಬಸಣ್ಣ : ಆದರ ಆಗಲೇಳು, ಅದಕ್ಯಾಕ ಚಿಂತೀ ಮಾಡತಿ? ಬಂದ ನನ್ನ ಮನ್ಯಾಗಿದ್ದೀಯಂತ.
ಗೌಡ್ತಿ : ಗೌಡ ನಿನ್ನ ಬಿಟ್ಟಾನು?
ಬಸಣ್ಣ : ಹುಚ್ಚೀ, ಹಾದ್ಯಾನ ನಾಯಿ ಬೊಗಳಿದರ, ಹಾರ್ಯಾಡೋ ನೊಣದ ರೆಕ್ಕಿ ಬಡದರ, ಸಾಯತೇನಂತ ತಿಳದ್ದೀಯೇನ? ಗೊತ್ತಾದರ ಆಗಲಿ, ನಿನ್ನ ಗಂಡನ ಪುಂಡತನ ನನಗ ಗೊತ್ತಿಲ್ಲಾ? ಒಂದs ಗುಟರ್ ಹಾಕಿದರ ಬಂದೂಕ ಚೆಲ್ಲಿ ಓಡಿ ಹೋಗತಾನ.
ಗೌಡ್ತಿ : ನಿನ್ನಿ ನನಗ ಕನಸೇನ ಬಿದ್ದಿತ್ತ ಗೊತ್ತೈತಿ?
ಬಸಣ್ಣ : ಏನ ಬಿದ್ದಿತ್ತು?
ಗೌಡ್ತಿ : ಕನಸಿನಾಗೊಂದ ಅಡಿವ್ಯಾಗಿತ್ತು. ಅಡಿವ್ಯಾಗೊಂದ ಗವೀ ಇತ್ತು. ನಿನ್ನ ಬಿರಸ ಎದಿ ನನ್ನ ಮತ್ತಾನ ಎದ್ಯಾಗ ಮೂಡಿಧಾಂಗ, ಮಿರಗ ಮೋಡದೊಳಗ ಮಿಮಚ ಹರದಾಡಿಧಾಂಗ, ಬಿದರಿನೊಳಗ ಬಿರಗಾಳಿ ತುಂಬಿಧಾಂಗ ಅನ್ನಿಸಿ, ಗವ್ಯಾಗಿಂದ ನೀ ’ಏ ಹುಡಿಗೀ’ ಅಂತ ಕರಧಾಂಗಾಯ್ತು. ಅಷ್ಟರಾಗ ಒಂದ ಒಣ ಒಡಕ ಬಿದರ ಗೂಗೀ ಹಾಂಗ ಸಿಳ್ಳ ಹಾಕಿದ್ದ ಕೇಳಿಸ್ತು. ಎಚ್ಚರಾದಾಗ ಗೌಡ ಸಿಳ್ಳ ಹಾಕ್ಕೊಂಡ ಹೊರಗ ಅಡ್ಡಾಡತಿದ್ದಾ. ಬಸಣ್ಯಾ, ಇದs ನಮ್ಮ ಕಡೀ ಭೇಟಿ ಆಯ್ತಲ್ಲೊ!
ಬಸಣ್ಣ : ಛೇ ಛೇ, ನೀ ಭಾರಿ ಹೆದರವಾಕಿ ಬಿಡ.
ಗೌಡ್ತಿ : ದಿನಾ ನಾ ಹೇಳಿದ್ದ ಎಷ್ಟ ಚಂದ ಕೇಳತಿದ್ದಿ. ಇಂದ್ಯಾಕ ನನ್ನ ನಂಬವೊಲ್ಲಿ? ದಿನಾ ರಾತ್ರಿ ಬೆಳಗಿ ಬೆಳಗಿ ಈ ಮಣ್ಣ ಸೇರಿ ಬೆಳಗಿದಿ. ಕಾಣಾ ಕಾಣಾ ಇಂದ ನನ್ನ ಕಣ್ಣಿದಿರಿಗೇ ನೀ ಮುಣಗೋದನ್ನ ಹೆಂಗ ನೋಡಲಿ? ಅವರೆಲ್ಲಾ ಇಂದ ನಿನ್ನ ಕೊಲ್ಲಬೇಕಂತ ಮಲಸತ್ತ ಮಾಡ್ಯಾರ. ಐನೂರ ಮಂದಿ ಚಂಡಾಲರನ್ನ ಕೂಡಿಕೊಂಡ ಗೌಡ ಇಂದ ಕಡ್ಯಾಕ ಬರತಾನು. ಲಗು ತಪ್ಪಿಸಿಕೊಂಡ ಓಡೇಳು.
ಬಸಣ್ಣ : ಅಯ್ಯಯ್ಯಯ್ಯ! ಐನೂರ ಮಂದಿ ಚಂಡಾಲರ? ಬರಲಿ ಬಿಡ. ಅವರಷ್ಟs ಏನೂ ತಾಯೀ ಹಾಲ ಕುಡದವರಲ್ಲಾ, ನಾ ಏನೂ ನಾಯೀ ಹಾಲ ಕುಡದ ಬೆಳದಿಲ್ಲಾ. ನೀ ಹಾ ಅನ್ನೋದರಾಗ ಅವರ ಮೀಸಿಗೆಲ್ಲಾ ಮಣ್ಣ ಹಚ್ಚಿ ಕಳಸ್ತೇನ.
ಗೌಡ್ತಿ : ಅಯ್ಯೋ! ನೀ ಕೆಡಿಸಿದ ಗರತೇರ ಗಂಡರೆಲ್ಲಾ ಕೂಡಿ, ರಂಡೇರ ಮಿಂಡರೆಲ್ಲಾ ಕೂಡಿ ಬರತಾರಂತ ಏಳೊ, ನನ್ನ ಮಾತ ಕೇಳೊ.
ಬಸಣ್ಣ : ಬರಲಿ, ಬರಲಿ, ಅವರ ಹೆಂಡರೆಲ್ಲಾ ನನ್ನ ಮೈ ರುಚಿ ನೋಡ್ಯಾರ. ಇವರು ನನ್ನ ಕೈ ರುಚೀನಾದರೂ ನೋಡಲಿ.
ಗೌಡ್ತಿ : ಬಸಣ್ಯಾ, ದೂರ ಕೊಳ್ಳೀ ಬೆಳಕ ಕಂಡ್ಹಾಂಗಾತು ಲಗು ಏಳು.
ಬಸಣ್ಣ : ಅದs? ಕೊಳ್ಳೀದೆವ್ವ ಬಿಡ. ದಿನಾ ಈ ಹುಣಿಸೀ ಮರಕ್ಕ ಆರತೀ ಬೆಳಗಾಕ ಬರತಾವ.
ಗೌಡ್ತಿ : ಅಯ್ಯೋ, ನಾ ಹೆಂಗ ಹೇಳಿದರ ನನ್ನ ಮಾತ ನಂಬೀಯೋ? ಬಸಣ್ಣಾ ಇದು ವಾದ ಮಾಡೋ ಯಾಳೇ ಅಲ್ಲ.
ಬಸಣ್ಣ : ಅವರಿಲ್ಲಿ ಬಂದರೂ ನಾ ಇಲ್ಲೇ ಇರಾವ. ಧೈರ್ಯ ಆಗದಿದ್ದರ ನಿ ನಡಿ.
ಗೌಡ್ತಿ : ಅಯ್ಯೋ ಬಸಣ್ಯಾ ! ಮಾಡಲ್ಹೆಂಗಾ
ಮಾಡಲ್ಹೆಂಗಾ ಗೌಡಾ ಕಡಿಯ ಬಂದಾ||
ಪುಂಡ ಚೆಂಡಾಲರ ಕೈಯಾಗ ಕುಡಗೋಲ
ಕಡದ ಬಿಡತೇವಂತ ಮಾಡ್ಯಾರ ಹುಯ್ಯಾಲಾ
ಮಾಡಲ್ಹೆಂಗಾ| ಗೌಡಾ ಕಡಿಯ ಬಂದಾ||
ಅಡವಿ ಆರ್ಯಾಣದಾಗ ಅತ್ತ ಕರಿಯವರಿಲ್ಲಾ
ಬಾಳsಗೊಡಸದ ಮಂದಿ ಬುದ್ಧಿ ಹೇಳವರಿಲ್ಲಾ
ಮಾಡಲ್ಹೆಂಗಾ| ಗೌಡಾ ಕಡಿಯ ಬಂದಾ||
(ದೂರದಿಂದ ಕಿರುಚುವಿಕೆ ಕೇಳಿಸುತ್ತದೆ)
ಬಸಣ್ಯಾ, ಕಣ್ಣ ತೆರೆದ ನೋಡೋ, ಕೊಳ್ಳಿದೆವ್ವಲ್ಲ, ಕೊಲೆಗಡುಕರೋ ಅವರು! ಹೆಂಗ ಬೋರ್ಯಡತಾರ ನೋಡೊ! ಅವರು ಐನೂರ ಮಂದಿ, ನೀ ಒಬ್ಬ ಎದಕ್ಕ ಈಡಾದಿ?
ಬಸಣ್ಣ : ಹೌಂದಲ್ಲ. ನೋಡು, ಈ ಕಡೆ ಕೊಳ್ಳಿ ಕಾಣಸೋದಿಲ್ಲ. ಓಡು-
ಗೌಡ್ತಿ : ನಿನ್ನ ಬಿಟ್ಟ ಹೆಂಗ ಹೋಗಲಿ?
ಬಸಣ್ಣ : ಮಾತಾಡೊ ಗಿಣಿ ಇದ್ದಲ್ಲಿ ನಾ ಮತ್ತ ಬಂದs ಬರತೇನ ಓಡಿಹೋಗು.
ಗೌಡ್ತಿ : ಓಡಿದರ ಇಬ್ಬರೂ ಕೂಡಿ ಓಡೋಣು. ಹೋದರ ನನ್ನ ಜೀವಾನೂ ನಿನ್ನ ಜೋಡಿ ಹೋಗಲಿ
ಬಸಣ್ಣ : ನಮ್ಮಿಬ್ಬರ ಜೀವಕ್ಕಿಂತ ಗಿಣೀ ಜೀವ ದೊಡ್ಡದಲ್ಲೇನ? ಓಡಿ ಗಿಣೀ ಜೀವಾ ಉಳಿಸೋದ ಬಿಟ್ಟೀದಿ, ಏನೇನೋ ವಾದ ಮಾಡ್ತಿ. ಗಿಣಿ ಇದ್ದಲ್ಲಿ ನಾ ಇದ್ದs ಇರತೇನ.
ಗೌಡ್ತಿ : ಓಡಂದಿ?
ಬಸಣ್ಣ : ಲಗು.
ಗೌಡ್ತಿ : ನೀ?
ಬಸಣ್ಣ : ಮತ್ತದs ಹಾಡ್ತಿ.
ಗೌಡ್ತಿ : ಓಡಲಿ?
ಬಸಣ್ಣ : ಲಗು ಓಡು.
(ಗೌಡ್ತಿ ಓಡುವಳು. ಅವಳು ಹೋದ ದಿಕ್ಕನ್ನೇ ತುಸು ಹೊತ್ತು ನೋಡಿ)
ಹುಚ್ಚ ಹುಡುಗಿ, ನನ್ನ ಹೊಟ್ಯಾಗಿನ ನನ್ನs ಮರತಾಳ!
(ಸುತ್ತ ನೋಡಿ ಗಿಡಕ್ಕೆ ತೂಗು ಹಾಕಿದ್ದ ಕುಡಗೋಲು ತೆಗೆದುಕೊಳ್ಳುವನು. ಧೈರ್ಯದಿಂದ ಮುನ್ನುಗ್ಗುವಷ್ಟರಲ್ಲಿ ಅವನು ನುಗ್ಗಿದಲ್ಲೆಲ್ಲಕೊಳ್ಳಿ, ಕುಡಗೋಲು ಹಿಡಿದವರು ಕಾಣಿಸಿಕೊಳ್ಳುತ್ತಾರೆ. ಬಂದೂಕು ಹಿಡಿದ ಗೌಡ ಕಾಣಿಸಿಕೊಳ್ಳುತ್ತಾನೆ. ಬಸಣ್ಣ ಗಾಬರಿಯಾಗಿದ್ದರೂ ಧೈರ್ಯ ತಂದುಕೊಂಡು ಮಾತನಾಡುತ್ತಾನೆ.)
ಏನ ಗೌಡರು, ಹೊಲದ ಕಡೆ ಬಂದಿರಿ?
(ಎಂದು ಹೇಳುತ್ತಿರುವಂತೆಯೇ ಒಬ್ಬ ಹಿಂದಿನಿಂದ ಬಂದು ಗೌಡನ ಸೂಚನೆಯಂತೆ ಏಟು ಹಾಕುತ್ತಾನೆ. ಬಸಣ್ಯಾ ಮೂರ್ಛೆ ಬೀಲುತ್ತಾನೆ. ಎಲ್ಲರೂ ಕಿರುಚುತ್ತ ಕೊರಡಿನಂತೆ ಅವನನ್ನು ಹೊತ್ತು ಹಾಡುತ್ತ ನರ್ತಿಸುತ್ತಾರೆ.)
ಎಲ್ಲರು :
ಊರ ಪುಂಡ ಮಿಂಡನ ಮಗನ ಕಡಿ ಕಡಿ
ಹಿಂಗ ಗೌಡ್ತಿ ಕರದಾಳೊ ಬಸಣ್ಯಾ ನಡಿ ನಡಿ||
ಮಾತಾಡೊ ಗಿಣಿ ತೋರಿ
ಹುಡಿಗೇರನೆಳೆದವನ||
ಮಲಗಿದ್ದ ಹೊಲ ಎಲ್ಲ
ತಂದಂತ ಅಂದವನ||
ಒಂದs ಏಟಿಗೆ ಇವನ
ನಾಕೆಂಟ ಮಾಡೋಣ||
ಹದ್ದೀಗಿ ಹಾಕೋಣ
ಕೆಸರ ಮಣ್ಣ ಮಾಡೋಣ||
(ಹಾಡು ಮುಗಿದ ಮೇಲೆ ಹಾಗೇ ಕೆಳಕ್ಕೆ ಚೆಲ್ಲಿ, ಬಂದೂಕಿನಿಂದ ಗೌಡ ಬಸಣ್ಯಾನನ್ನು ಇರಿಯುತ್ತಾನೆ. ಬಸಣ್ಣಾ ’ಆs’ ಎಂದು ಕಿರುಚಿದಾಗ ರಂಗವೆಲ್ಲ ಸ್ತಬ್ಧವಾಗುತ್ತದೆ. ಸ್ವಲ್ಪ ಹೊತ್ತಾದ ಮೇಲೆ ಸ್ತಬ್ಧತೆಯೊಳಗಿಂದ ಸೂತ್ರಧಾರನ ಧ್ವನಿ ಕೇಳಿಬರುತ್ತದೆ.)
ಮೇಳ :
ಎಣಿಸಿ ಐನೂರ್ಮಂದಿ ಅವರಿಗಿ ಸಾವಿರ ಕೈಗಳು
ಹಿಡದ ಕಡದಾರೊ ಎಳೀದೇವರನ್ನಾ||
ಸಾವಿರ ಕೈಗಳು ಕೈಗೊಂದ ಕೊಡಲಿ ಕುಡುಗೋಲು
ಹೊಡದ ಕೊಂದಾರೊ ಎಳೀದೇವರನ್ನಾ||
ಕೊಂದಾರೆ ಒಗೆದಾರೊ ಸ್ವಾಮಿನ ಕಡದಾರೆ ಒಗೆದಾರೊ
ನೆತ್ತರ ಹರದಾವೊ ಹೊಳಿ ಹಳ್ಳ ತುಂಬಿ||
ನೆತ್ತರ ಬಿದ್ದಲ್ಲಿ ಆಹಾ ಬೆಳಿಗಳು ಎದ್ದಾವೊ
ಮಣ್ಣು ಮಣ್ಣೆಲ್ಲಾ ಹಸಿಹಸರ ತುಂಬಿ||
ಒಳ್ಳೆಯ ಸರಕಾರ ನಮ್ಮ ದೇಶಾವನಾಳಲಿ
ಮನಿ ಮನಿ ತುಂಬಲಿ ಆಡೋ ಮಕ್ಕಳಿಂದ||
ಹೊಲ ಊಳೋ ರೈತ ಅವನೆ ಹೊಲದೊಡೆಯನಾಗಲಿ
ದೇಶ ತುಂಬಲಿ ಧನಧಾನ್ಯದಿಂದ||
ಸುವ್ವೀ ಬಾ ಸುಂದರಾ ಸ್ವಾಮೀ
ಸುವ್ವೀ ಬಾ ಚಂದಿರಾ
ಸುವ್ವೀ ಬಾರಯ್ಯಾ ಜೋಕುಮಾರ ಸ್ವಾಮಿ||
ಮಂಗಲಂ
Leave A Comment