(ಗೌಡನ ಮನೆ, ಬಸ್ಸಿ, ಶಿವಿ, ನೀಲಿ, ನೀಲಿ ಗೌಡ್ತಿಗಾಗಿ ಕಾಯುತ್ತಿದ್ದಾರೆ. ಅಷ್ಟರಲ್ಲಿ ಗೌಡ್ತಿ ಜೋಕುಮಾರ ಸ್ವಾಮಿಯ ಬುಟ್ಟಿಯೊಂದಿಗೆ ಪ್ರವೇಶಿಸುವಳು)
ಗೌಡ್ತಿ : ಬಸ್ಸಿ, ನೋಡ, ಎಷ್ಟ ಅಂಜಿಸಿದಿರಿ! ನಾ ಸೊಲ್ಪ ದೂರ ಹೋಗೋದಕ್ಕೂ ಹೊಲೇರ ಶಾರಿ ತಾನs ಜೋಕುಮಾರ ಸ್ವಾಮೀನ ತರೋದಕ್ಕೂ ಸಮ ಆಯ್ತು. ನನಗ ಬೇಕಂತ ಯಾರೋ ಹೇಳಿದ್ದರಂತ, ತಗೋ ಎವ್ವಾ ಅಂದ್ಲು. ಲಗು ಪೂಜಿ ಸುರು ಮಾಡ್ರಿ.
ಬಸ್ಸಿ : ಎಲ್ಲಾ ತಯಾರs ಐತಿ.
(ಬಸ್ಸಿ, ಶಿವಿ, ನೀಲಿ ಹಾಡತೊಡಗುವರು. ಆಗ ಜೋಕುಮಾರ ಸ್ವಾಮಿಗೆ, ಅಂದರೆ ಪಡುವಲ ಕಾಯಿಗೆ ಕಣ್ಣು ಮೀಸೆ ಬರೆದು ರುಮಾಲು ಸುತ್ತುತ್ತಾರೆ. ಆಮೇಲೆ ಅದನ್ನು ತಗೊಂಡು ಗೌಡ್ತಿ ಹಾಡಿನ ಭಾಗಗಳನ್ನು ಅಭಿನಯಿಸುತ್ತಾಳೆ. ಆಗ ಅವಳೊಂದಿಗೆ ಉಳಿದವರೂ ನರ್ತಿಸುತ್ತಾರೆ)
ಬಸ್ಸಿ
ಶಿವಿ
ನೀಲಿ :
ಚೆಂದಾನ ಹಸರಂಗಿ ದೋತರ ಜರತಾರಿ
ವಾರಿ ರುಂಬಾಲ ಚೆಲುವಾ
ಜೋಕುಮಾರ ಸ್ವಾಮಿನ ನೋಡಿಕೊಂಡ ಗೆಳತೆವ್ವ
ಪೂಜಿ ಮಾಡೋಣು ನಡಿಯೇ||
ಮೀಸ್ಯಾಗ ನಗಿಯೇನ, ಕೆನ್ನಿಯ ಹೊಳಪೇನ
ಹುಬ್ಬ ಕುಣಿಸುವ ತುಂಟಾ
ಬಿಂಕದ ಬಾಲೇರ ಟೊಂಕದಮ್ಯಾಲ ಕಣ್ಣ
ಇವ ಜೋಕುಮಾರ ಏನ? ||
ಹವ್ವಲ್ಲೆ ಅಂದರ ಹೌಹಾರಿ ನಿಂತಾನ
ನಾವಲ್ಲೋ ಕರದವರಾ
ಬಂಜೇರ ನಿಂತಾರೊ ಹುಬ್ಬಿಗಿ ಕೈ ಹಚ್ಚಿ
ದಯಮಾಡೊ ಸ್ವಾಮೀ ನೀನಾ||
ಎದಿಯಾಗ ಹುದುಗ್ಯಾರು ಹೂವಿನಾಗ ಮುಚ್ಯಾರು
ಫಲಕೊಡೊ ಮಾದೇವಾ
ಮೇಲಾದ ದೇವರು ಜೋಕುಮಾರ ಸ್ವಾಮಿಯ
ಪೂಜೆ ಮಾಡೇವೊ ನಾವಾ||
ಬಸ್ಸಿ : ಇನ್ನ ಲಗು ಸ್ವಾಮೀನ ಪಲ್ಲೆ ಮಾಡ ಎವ್ವಾ.
ಗೌಡ್ತಿ : ಇನ್ನೇನೂ ಮಾಡೋದ ಉಳಿದಿಲ್ಲ. ಹೌಂದಲ್ಲ?
ಬಸ್ಸಿ : ಇಲ್ಲರಿ.
ಗೌಡ್ತಿ : ತಾ ಹಂಗಾದರ.
(ಮತ್ತೆ ಮೂವರೂ ಹಾಡುವರು. ಗೌಡ್ತಿ ಹಾಡಿನಮತೆ ಅಭಿನಯಿಸುತ್ತ ಪಲ್ಲೆ ಮಾಡುವಳು)
ಬಸ್ಸಿ
ಶಿವಿ
ನೀಲಿ :
ರನ್ನದ ಮಣಿಮ್ಯಾಗ ಚಿನ್ನದ ಕುಡಗೋಲ
ಹೆಂಗ ಹೆರಚಲೆ ಸ್ವಾಮಿ
ಅಡ್ಡಡ್ಡ ಹೆರಚಲೆ ಉದ್ದುದ್ದ ಹೆರಚಲೆ
ಹೋಳ ಮಾಡೇನ ಸ್ವಾಮಿ||
ರನ್ನದ ಒಲಿಮ್ಯಾಗ ಚಿನ್ನದ ಗಡಿಗ್ಯಾಗ
ಕುದಿಯಲಿಟ್ಟೇನ ಸ್ವಾಮಿ
ಕುದಿಸಿ ಬೋನವ ಮಾಡಿ ಅಟ್ಟ ಅಡಗಿಯ ಮಾಡಿ
ಪಲ್ಲೆ ಮಾಡೇನ ಸ್ವಾಮಿ||
ಬಾ ಎನ್ನ ರುಚಿಗಾರ ಬಾ ಎನ್ನ ಸವಿಗಾರ
ಮಣಿ ಹಾಕಿ ಕಾದೇನೊ
ಜೋಕುಮಾರ ಸ್ವಾಮೀನ ಮೇಲಾದ ದೇವರ
ಪೂಜಿ ಮಾಡೇವ ನಾವಾ||
ಗೌಡ್ತಿ : ಬಸ್ಸೀ, ಗೌಡ ಬಂದ್ನೇನ್ನೋಡು.
ಬಸ್ಸಿ : (ನೋಡಿ ಬಂದು)
ಯಾರೋ ಇತ್ತs ಬರೋಹಾಂಗ ಕಾಣತೈತಿ, ಗೌಡನs ಏನೋ.
ಶಿವಿ : ನಾ ಇನ್ನ ಬರತೇನ್ರವ್ವಾ.
ನೀಲಿ : ನಾನೂ ಬರತೇನ್ರವ್ವಾ.
ಗೌಡ್ತಿ : ಇಲ್ಲೆ ಊಟಾ ಮಾಡಿಕೊಂಡ ಹೋಗೀರಂತ ಕೂಡ್ರೇ.
ಶಿವಿ : ಬ್ಯಾಡs ಎವ್ವಾ ಮಕ್ಕಳ ಹಸದಿರಬೇಕು.
(ಇಬ್ಬರೂ ಹೋಗುವರು. ಒಬ್ಬ ಪ್ರವೇಶಿಸುವನು.)
ಒಬ್ಬ : ಅಮ್ಮಾವ್ರs
ಗೌಡ್ತಿ : ಗೌಡ ಬರಲಿಲ್ಲೇನೋ?
ಒಬ್ಬ : ಇಲ್ಲರಿ.
ಗೌಡ್ತಿ : ಎಲ್ಲಿ ಹೋದರು?
ಒಬ್ಬ ಹೊಲಕ್ಕ ಮಲಗಾಕ ಹೋಗ್ಯಾರ್ರಿ.
ಗೌಡ್ತಿ : ಹೊಲಕ್ಕ?
ಒಬ್ಬ : ಆ ದೆವ್ವಿನ ಹೊಲಾ ಇಲ್ಲರಿ?
ಗೌಡ್ತಿ : ದಿನಾ ಬಿಟ್ಟ ಇಂದs ಯಾಕ ಹೋದ?
ಒಬ್ಬ : ಬಸಣ್ಣನ ಜೋಡಿ ಜಗಳಾಡಿ, ಹೊಲಾ ನಂದು ನಾ ಮಲಗಾವಂತ ಹೋದರ್ರಿ. ಹೋಗಿ ಕಂಬಳಿ, ಊಟಾ ತಗೊಂಬಾ ಅಂದರು.
ಗೌಡ್ತಿ : ಹೂ ನನ್ನ ನಶೀಬ! ಕಂಬಳಿ ತಗೊಂಡ್ಹೋಗು.
ಒಬ್ಬ : ಊಟಾನೂ ಕೊಡಂದಾರ್ರಿ.
ಗೌಡ್ತಿ : ಕಂಬಳಿ ಒಯ್ಯಿ.
(ಕಂಬಳಿ ಕೊಡುವಳು. ತೆಗೆದುಕೊಂಡು ಹೋಗುವನು)
ಬಸ್ಸಿ : ಇನ್ನ ಮಲಗರಿ ಎವ್ವ; ಹರ್ಯಾಗಿಂದ ಮಾಡಿದ್ದೆಲ್ಲಾ ನೀರಾಗ ಹುಣಸೀ ಹಣ್ಣ ತೊಳಧಾಂಗಾಯ್ತು.
ಗೌಡ್ತಿ : ನೀ ಮಲಗನಡಿ. ನನ್ನ ದೈವ ನೀಯಾಕ ಅನುಭವಿಸಬೇಕು?
ಬಸ್ಸಿ : ಮತ್ತ ನೀ ಏನ್ಮಾಡ್ತಿ?
ಗೌಡ್ತಿ : ಇನ್ನೇನ ಮಾಡ್ಲಿ? ಎದೀಮ್ಯಾಲ ಕೈ ಇಟಗೊಂಡ ಮನೀ ಜಂತಿ ಎಣಿಸಿಕೋತ ಮಲಗತೇನ!
ಬಸ್ಸಿ : ಗೌಡಗ ತಿಳೀಬೇಕ್ರೆವಾ.
ಗೌಡ್ತಿ : (ಅಳುತ್ತ, ಹಗಲುಗನಸು ಕಾಣುತ್ತ)
ಗೌಡಗ ಇನ್ಹೆಂಗ ಹೇಳಲಿ – ನಾ ಹೆಣ್ಣಂತ? ದೂರದ ಹಕ್ಕಿ ಹಾರಿ ಬರತೈತಿ! ಗೂಡಿನಾಗ ಕೂರತೈತಿ! ಆ ನಾಡಿನ ಹಾಡೆಲ್ಲಾ ಹಾಡತೈತಿ! ಹಾಡ ಕೇಲಿ ಮಣ್ಣಿಗಿ ಕಿವಿ ಮೂಡತಾವು! ಕಿವಿಗುಂಟ ಮುಖ, ಕೈ, ಕಾಲ ಮೂಡತಾವು! ಹಸರ ಒಡಮುರದ ಹಬ್ಬತೈತಿ!
(ನಿಟ್ಟುಸಿರು ಬಿಟ್ಟು)
ಚಂದ್ರನ ಹಿಂದಿನ ರಾಕ್ಷಸ ಎಲ್ಲಿ ಬಿಡತಾನ! ಕಣ್ಣುಗುರಿ ಹಿಡಿದ ಹಾಡೋ ಹಕ್ಕಿ ಹಿಡಿಕೊಂಡ! ಇದs ಈಗ ಮೂಡಿದ ಹಸರ, ಹೂವ, ಚಿಗುರೆಲ್ಲಾ ಮಟಾಮಾಯ! ಅದs ಬೀಳನೆಲ! ಅದs ಎಲೆ ಉದುರಿಸಿಕೊಂಡ ಗಿಡ! ಗಿಡದಾಗ ಬರೀ ಗೂಡ ತೂಗ್ಯಾಡತಾವ; ಆ ಕಡೆ ಈ ಕಡೆ…
(ಈ ಮಾತು ಹೇಳುತ್ತಿರುವಾಗಲೇ ಬಸ್ಸಿ ಹೋಗಿ ಬಿಟ್ಟಿರುತ್ತಾಳೆ. ಗೌಡ್ತಿ ನಿಧಾನವಾಗಿ ಹಾಡುತ್ತಾಳೆ.)
ದೂರ ನಾಡಿನ ಹಕ್ಕಿ ಹಾರಿ ಬಾ ಗೂಡಿಗೆ
ಗೂಡು ತೂಗ್ಯಾವ ಗಾಳಿಗೆ
ಸುವ್ವೀ ಸುವ್ವಾಲಿ ಸುವ್ವಿ||
ಬೀಸುವ ಬಿರುಗಾಳಿ ಸುಳಿಯೊ ಸುಂಟರಗಾಳಿ
ನುಸುಳಿ ನೀ ಹಾರಿ ಬಾರಯ್ಯಾ
ಸುವ್ವೀ ಸುವ್ವಾಲಿ ಸುವ್ವಿ||
ಕಾವಲ ಸೈತಾನ ಗುರಿಯಿಟ್ಟ ಮುದಿಗಣ್ಣ
ತಪ್ಪೀಸಿ ಹಾರಿ ಬಾರಯ್ಯಾ
ಸುವ್ವೀ ಸುವ್ವಾಲಿ ಸುವ್ವಿ||
ಟೊಂಗಿ ಟೊಂಗಿಯ ಮ್ಯಾಲ ಕುಂತ ರೋಮಾಂಚನ
ಚಿಗುರು ಮೂಡಿಸ ಬಾರಯ್ಯಾ
ಸುವ್ವೀ ಸುವ್ವಾಲಿ ಸುವ್ವಿ||
(ಏನನ್ನೋ ಜ್ಞಾಪಿಸಿಕೊಂಡು ಥಟ್ಟನೇ ಎದ್ದು, ಮಾಡಿದ ಅಡಿಗೆಯನ್ನು ಗಂಟು ಕಟ್ಟಿಕೊಂಡು, ಒಂದು ನೀರಿನ ಚರಿಗೆ ತಗೊಂಡು, ಗಂಟುತಲೆ ಮೇಲಿಟ್ಟುಕೊಂಡು ಹೊರಡುವಳು.)
Leave A Comment