(ರಸ್ತೆ . ಬಸಣ್ಣ ಗುರ್ಯಾ ಭೆಟ್ಟಿಯಾಗುವರು)

ಬಸಣ್ಣ : ಮಿತ್ರಾ ಗುರಣ್ಣಾ, ರಾಮೇರಾಮಪಾ ರಾಮೇರಾಮ.

ಗುರ್ಯಾ : ಮಿತ್ರಾ ಬಸಣ್ಣಾ, ರಾಮೇರಾಮಪಾ ರಾಮೇರಾಮ.

ಬಸಣ್ಣ : ಮಿತ್ರಾ ಗುರಣ್ಣಾ, ನಿನ್ನ ಮುಖಾ ಯಾಕ ಬಾಡೇತಿ? ಹೇಳಬೇಕಾದೀತ ನೋಡು.

ಗುರ್ಯಾ : ಮಿತ್ರಾ ಬಸಣ್ಣಾ, ಏನ್ಹೇಳಲಿ? ಬಡತನ ಶಾಪ ಹೌಂದೋ ಅಲ್ಲೊ, ವರಾ ಅಂತೂ ಅಲ್ಲಪಾ.

ಬಸಣ್ಣ : ಯಾಕೋ ಮಿತ್ರಾ, ಎಂದೂ ಇಷ್ಟ ನೊಂದ ಆಡಿದಾವಲ್ಲ. ಇಂದ ಆಡತಿ ಅಂದಮ್ಯಾಲ ಏನ ಕಾರಣ ಹೇಳು.

ಗುರ್ಯಾ : ಮಾರಾಯಾ, ಇಂದ ಗೌಡನ ಕೈಯಾಗ ಸಿಕ್ಕಿದ್ದೆ! ನಾ ನಿನ್ನ ಹಂತ್ಯಾಕ ಬಂದದ್ದ ಅಧೆಂಗ ಗೊತ್ತಾಗೇತ್ಯೊ! ಒದ್ದ ಬೆನ್ನ ಹಣ್ಣ ಮಾಡಾಕ ಬಂದಿದ್ದ.

ಬಸಣ್ಣ :ಅಂಜಾಕ ನೀ ಇಷ್ಟ ತಯಾರಿದ್ದರ ಯಾರ ಒದ್ಯಾಣಿಲ್ಲ ಹೇಳು? ಹಾಕ್ಯಾನಿಲ್ಲ ನಿನ್ನ ಹೊಲಕ್ಕ ಬಲಿ?

ಗುರ್ಯಾ : ಹಾಕೋದೇನ ಬಂತು? ಆ ಹೊಲ ಈಗ ಅವನ ಹೆಸರಿಗೇ ಆಗೇತಂತ. ಗೌಡಗೊಂದ ದೊಡ್ಡ ಹೊಟ್ಟಿ ಐತೇನಪಾ. ಯಾವತ್ತು ಆ ಹೊಟ್ಯಾಗಿಂದs ಮಾತಾಡತಾನ ಅವ. ನಾವ ಹೇಳಿದ್ದ ಅದಕ್ಕ ಕೇಳಿಸೋದs ಇಲ್ಲ. ಯಾಕಂದರ ಅದಕ್ಕ ಕಿವೀನs ಇಲ್ಲ.

ಬಸಣ್ಣ : ಏನ ಎಬಡೊ! ಕೈಯಾಗಿನ ಹೊಲಾ ಕಾಣಾ ಕಾಣಾ ಕಳಕೊಳ್ತಿಯಲ್ಲೊ? ಹೊಸ ಹೊಸ ಕಾಯ್ದೆ ಕಾನೂನ ಬಂದಾವಂತ ಹೇಳಬೇಕಿಲ್ಲ?

ಗುರ್ಯಾ : ಸಾಲಗಾರರಿಗಿ ಬಾಯಿ ಬರಾಣಿಲ್ಲೋ ಎಪ್ಪಾ!

ಬಸಣ್ಣ : ಹೆದರಬ್ಯಾಡ. ಅಧೆಂಗ ಹೊಲಾ ಕಸೀತಾನ ನಾ ನೋಡತೇನ.

ಗುರ್ಯಾ : ಇಂದೇನ ಮಜಾ ಆಯ್ತೊ ಬಸಣ್ಣಾ! ಗೌಡ ಗುರುಪಾದನ ಮಗಳು ನಿಂಗೀನ ನೋಡಿ ಬಾಯಿ ತಗದಿದ್ದಾ ತಗದಿದ್ದಾ ತಗದಿದ್ದಾ! ನಿಂಗಿ ಏನ ಮಾಡಿದಳಂದಿ?

ಬಸಣ್ಣ : ಮಿತ್ರಾ ಏನ ಮಾಡಿದ್ಲು?

ಗುರ್ಯಾ :ಥೂ ಥೂ ಥೂ ಅಂತ ಮೂರಬರೆ ಉಗಳಿ ಹೋದಳಲ್ಲೊ!

ಬಸಣ್ಣ : ಹಾಂಗಿರಬೇಕ ಇದ್ದರ.

ಗುರ್ಯಾ : ನಿಂಗಿ ಹಂತ್ಯಾಕಿದ್ದರ ಇಷ್ಟ ಧೈರ್ಯ ಬರತೈತಿ ಹುಡುಗಾ!

ಬಸಣ್ಣ : ಮದಿವ್ಯಾಗತೀಯೇನ?

ಮೇಳ :

ಸ್ವಾಮಿ ನಮ್ಮಯ್ ದೇವರೊ
ಢಂ ಢಂ ಇವರ ಹೆಸರೊ||

(ಗೌಡ ತನ್ನ ನಾಲ್ಕು ಜನರ ಪರಿವಾರದೊಂದಿಗೆ ಬರುವನು)

ಗೌಡ : ಯಾಕೋ ಗುರ್ಯಾ, ಇನ್ನೂ ಎಲ್ಲೇ ನಿಂತೀದಿ? ಅಂಧಾಂಗ ಇವ ಯಾರ, ಏನಿವನ ಹೆಸರ? ಎಲ್ಯೊ ನೋಡಿಧಾಂಗಿತ್ತಲ್ಲೊ!

ಬಸಣ್ಣ : ನನ್ನ ಹೆಸರ ಬೇಕ? ಒಡಪ ಹಾಕಿ ಹೇಳಲೊ? ಹಾಂಗs ಹೇಳಲೊ?

ಒಬ್ಬ : ಇವನs ಬಸಣ್ಯಾರೀ.

(ಗೌಡ ಅವನನ್ನು ಸುಮ್ಮನಿರಿಸಿ ಮೂಲೆಯಲ್ಲಿ ನಿಂತಿರಲು ನಾಲ್ವರಿಗೂ ಸೂಚಿಸುತ್ತಾನೆ)

ಗೌಡ : ಓಹೊ ಇವನs ಅಲ್ಲಾ ಬಸಣ್ಣಂದರ? ಗುರ್ಯಾ, ನಾ ಹೇಳಿದ್ದ ಹೇಳಿದೆಯೋ ಇಲ್ಲೊ?

ಗುರ್ಯಾ : ಹೇಳಿಲ್ಲರಿ, ಹೇಳತೇನ್ರಿ. ಬಸಣ್ಣಾ ನಿಮ್ಮಪ್ಪ ದೆವ್ವಿನ ಹೊಲದ ಕೋರ ಪಾಲ ಕೊಟ್ಟಿಲ್ಲಂತ….

ಬಸಣ್ಣ : ಯಾವನ ಹೊಲಾ? ಏನ ಮಾತು? ಹುಸಾಹುಸಾ. ಬೈಲಕಡೆ ಬರೋಬರಿ ಆಗಿಲ್ಲೇನ, ಬಾಯಿಗಿ ಬಂಧಾಂಗ ಆಡತಿ? ಯಾವನು ಉಳತಾನ ಅವನs ಭೂಮಿ ಮಾಲಕ ಅಂತ ಕಾಯ್ದೆ ಬಂದಾವ, ಹೇಳವಗ.

ಗೌಡ : ಎಲ ಎಲಾ?  ಭಾರಿ ವಕೀಲಪಾ! ಗುರ್ಯಾನ ವಕೀಲಕಿ ನೀನs ಹಿಡಿದ್ದೀ ಯಂತಲ್ಲ? ಕೇಸ ಗೆಲ್ಲಸಬೇಕಪಾ ಮತ್ತ.

ಬಸಣ್ಣ : ಅದನ್ನ ನೀ ಹೇಳಬೇಕs ನನಗ?

ಗೌಡ : ಒಂದ ಮಾತ ತಿಳಕೊ, ನಾ ಇದ್ದೀನಂತ ನೀವೆಲ್ಲ ಬದಕೀರಿ. ಹೌಂದಲ್ಲರೊ?

ನಾಲ್ವರೊ : ಹೌಂದ ಹೌಂದರಿ. ಹೌಂದ ಹೌಂದರಿ.

ಬಸಣ್ಣ : ಹೌಂದ ಹೌಂದೋ ನನ್ನ ಪರಮೇಶ್ವರಾ, ನಾವು ಬದಕಿದ್ದs  ನಿನ್ನ ದಯದಿಂದ! ಅಲ್ಲ?

ಗೌಡ : ಯಾರ ದಯದಿಂದ ಬದಕೀರಿ ತೋರಸ್ಲಿ? ಗುರ್ಯಾ,

ಗುರ್ಯಾ : ಓ ಎಪ್ಪಾ

ಗೌಡ : ಸೊಲ್ಪ ಬಗ್ಗಿ ನಿಲ್ಲೊ.

(ಗುರ್ಯಾ ಬಗ್ಗುವನು. ಗೌಡ ಅವನ ಮೇಲೆ ಕೂಡ್ರುವನು)

ನೀ ಯಾರ ದಯದಿಂದ ಬದಕೀಯೋ ಮಗನ?

ಗುರ್ಯಾ : ಎಪ್ಪಾ, ನಿಮ್ಮ ದಯಂದಿಂದರಿ.

ಗೌಡ : ಅದನ್ನವನಿಗೆ ಹೇಳು.

ಗುರ್ಯಾ: ಬಸಣ್ಣಾ. ನಾ ಗೌಡನ ದಯದಿಂದ ಬದಕೀನೋ.

ಬಸಣ್ಣ : ಹೊ ಹೊ ಹೊ ಹೊ! ಹೌಂದ ಹೌಂದೋ ಗೌಡಾ, ಮೊದಮೊದಲ ದೇವರೂ ಹಿಂಗs ಹೇಳತಿದ್ದಾ: ಮಕ್ಕಳ್ರಾ ನೀವೆಲ್ಲ ನನ್ನ ದಯದಿಂದ ಬದಕೀರಿ- ಅಂತ. ಅದರ ಮನ್ನಿ ದೇವಸ್ಥಾನದೊಳಗಿನ ದೇವರs ಕಳವಾಗ್ಯಾವ, ಗೊತ್ತಿಲ್ಲಾ?

ಗೌಡ : ಕದ್ದವರ ಮುಕಳಿ ಕಡೀತಾವ. ಏನ ಮಾಡ್ಯಾರ ಮಕ್ಕಳು?

ಬಸಣ್ಣ : ಛೇ ಛೇ ಹಂಗೇನಿರಾಕಿಲ್ಲ ತಗಿ.

ಗೌಡ : ಹೌಂದು? ತಡಿ ನಿನಗೂ ಖಾತ್ರಿ ಮಾಡತೇನ. ಇಂದಿನಿಂದ ನೀ ಊಳೋ ಹೊಲ ನಂದು. ಇನ್ನ ಅಲ್ಲಿ ಕಾಲಿಟ್ಟರ ಆ ಕಾಲ ನಿನ್ನುವಲ್ಲಂತ ತಿಳಿ.

ಬಸಣ್ಣ  : ಗೌಡಾ ಒಂದ ಮಾತ ಹೇಳಲಿ?

ಗೌಡ : ಏನ ಹೇಳೋದೆಲ್ಲಾ ಈ ಬಂದೂಕಿಗಿ ಹೇಳಿಕೊ. ನಾ ಅದಕ್ಕೂ ಮಾತ ಕಲಿಸೇನಿ. ಬಂದೂಕ ಏನೇನ ಮಾತಾಡತೈತ್ರೊ?

ನಾಲ್ವರೂ : ಢಂಢಂ ಅಂತೈತ್ರಿ.

ಬಸಣ್ಣ : ನನ್ನ ಹಂತ್ಯಾಕೊಂದ ಬಂದೂಕೈತಿ. ಆದರ ನಾ ಗುಂಡು ಹಾಕಿದವರೆಲ್ಲಾ ಸಾಯೋದರ ಬದಲ ಮರಿ ಹಾಕಂತಾರ! ಹಹ್ಹಹ್ಹ-ನಿಂಗಿ ಹೇಳಿತಿದ್ಲು ; ನಿನ್ನ ತಲ್ಯಾಗ ಬಿಳೀ ಕೂದಲ ಬಂದಾವಂತ; ಹೌಂದು ಗೌಡಾ?

ಗೌಡ  : ತೋರಸಲಿ? ತಾರೋ ಬಂದೂಕ.

(ಬಂದೂಕು ಇಸಿದುಕೊಳ್ಳುವನು. ಬಸಣ್ಣ ಬಂದೂಕಿನ ತುದಿಗೆ ಕಿವಿ ಹಚ್ಚಿ)

ಬಸಣ್ಣ : ನೋಡೋಣು, ಏನೇನ ಮಾತಾಡತೈತಿ! ಏನೂ ಕೇಳಸsವೊಲ್ದಲ್ಲ!

(ಬಂದೂಕು ಕಸಿದೆಸೆಯುವನು)

ಹೋಗಲೇ ಬಡಿವರ ಬಸೆಟ್ಟಿ. ಹೊಲದಾಗ ಕಾಲಿಟ್ಟರ ಕಾಲ ಮುರೀತಾನಂತ. ನಿನ್ನ ಕಾಲಿಂದೇನ ಕಾಳಜೀನs ಇಲ್ಲೇನ ನಿನಗ? ರಟ್ಟೀ ಮುರದ, ಹೊಟ್ಟೀ ಕಟ್ಟಿ ನಮ್ಮಪ್ಪನು, ನಾನು ಕಾಡ ಕಡದ್ದೇವ. ಮಂದಿ ದೆವ್ವಿನ ಹೊಲಾ ಅಂತ ಹಗಲಿ ಆಕಡೆ ಹೋಗಾಕ ಹೆದರತ್ತಿದ್ದರು. ಹಗಲಿ ರಾತ್ರಿ ಅಲ್ಲೇ ಬಿದ್ದಿರತಿದ್ದ ನಮ್ಮಪ್ಪ.  ಇಂದ ಬಂದಾನ ಹೊಲಾ ತಂದಂತ.

ಗೌಡ : ಅಜ್ಜಾ ಆರತೆಲಿ, ಮುತ್ಯಾ ಮೂರತೆಲಿ ಗೌಡಿಕಿ ನಮ್ಮದು; ನಿಮ್ಮಪ್ಪ ಬರದ ಬಟ್ಟ ಒತ್ತಿಕೊಟ್ಟಾನ, ಹೊಲ ನಮ್ಮದು; ಇಂದ ಬಂದೀ ಬದಲ ಮಾಡಾಕ! ಬೇಕಾದ್ದ ಕಾಯ್ದೆ ಬರಲಿ, ಕಾನೂನ ಬರಲಿ, ದುಡ್ಡಿದ್ದಾವ ಯಾವತ್ತೂ ದೊಡ್ಡಾವಂತ ತಿಳಕೊ. ಮೂರಲ್ಲ ಆರದುಡ್ಡ ಕೊಟ್ಟರ ನಿನ್ನ ಕಾಯ್ದೆ ಕಾನೂನ ನನ್ನ ಕಿಸೇದಾಗ ಬಿದ್ದಾಡತಾವ. ನಾಕ ರೂಪಾಯಿ ಕೊಡತೇನ ನನ್ನ ಬಂದೂಕ ಹೊರಾಕ ಬರತಿ?

ಬಸಣ್ಣ : ಥೇಟ ಗಂಡಸರ್ಹಾಂಗ ಮಾತಾಡ್ತಿಯಲ್ಲೊ ಗೌಡಾ! ದೊಡ್ಡ ದೊಡ್ಡ ರಾಜರs ಹಜಾಮರಾಗಿ ಮಂದೀನ ಬೋಳಸತಾರ; ನೀ ಇನ್ನs ನಿನ್ನ ಧಿಮಾಕ ಬಿಟ್ಟಿಲ್ಲಲ್ಲ! ತೋರಸಲೇನ ನನ್ನ ಕೈ?

(ಕೈಯೇರಿಸಿ ಗುರ್ಯಾನೆದುರು ಕುಳಿತು)

ಗುರ್ಯಾ, ಏಳಮಗನ ಕಿತ್ತಕೊಂಡ. ಬೇಕಾದ್ದಾಗಲಿ ನಾ ನಿನ್ನ ಬೆನ್ನ ಮ್ಯಾಲಿರತೇನ, ಏಳೊ.

ಗೌಡ : ನಾಯಿಗಿ ತಾ ಯಾರ ಮನಿ ನಾಯಂತ ಗೊತ್ತಿರೋದಿಲ್ಲೇನೋ? ಹೌಂದಲ್ಲರ‍್ಯೊ?

ನಾಲ್ವರು: ಹೌಂದ ಹೌಂದರಿ.

ಒಬ್ಬ : ಒಂದಷ್ಟ ಒರಟ ಜಾತೀ ನಾಯಿಗೆ ಮನಿ ನೆನಪs ಇರಾಣಿಲ್ಲರಿ. ಯಾರ ಕೂಳ ಹಾಕತಾರ ಅವರ ಮನ್ಯಾಗs ಬಿದ್ದಿರತಾವರಿ.

ಬಸಣ್ಣ : ನೋಡೋ, ಅವನ ಮನಿ ನಾಯಾಗಿ ಬೀಳತೀಯೇನೊ? ನಾ ಹುಲಿಯಂಥಾವ ಇದ್ದೇನೇಳೊ ನೋಡಿಕೊಳ್ಳಾಕ.

ಒಬ್ಬ : ನಮ್ಮ ಢಂಢಂ ದೇವರು ಇಲ್ಲೀತನಕ ಒಟ್ಟ ಎಷ್ಟ ಹುಲಿ ಕೊಂದಾರ?

ಇನ್ನೊಬ್ಬ : ಹನ್ನೊಂದ.

ಮತ್ತೊಬ್ಬ : ಇನ್ನs ಒಂದ ಡಜನ್ ಪೂರಾ ಆಗಿಲ್ಲಲ್ಲೊ.

ಬಸಣ್ಣ : ಗುರ್ಯಾ, ಏಳೋ, ನಿಂಗಿಯಂಥಾ ನಿಂಗಿ ಹುಸಾ ಅಂದಳಂತಿ ಗೌಡಗ; ನೀ ಗಂಡಸಾಗಿ ಬಿದ್ದೀಯಲ್ಲೊ? ಏಳೊ.

(ಗುರ್ಯಾ ಕಿತ್ತುಕೊಂಡೇಳುವನು. ಗೌಡ ಬೀಳವನು. ನಾಲ್ವರೂ ಹೌಹಾರಿ ಹಾಡು ಮುಗಿಯುವತನಕ ಇದ್ದ ಭಂಗಿಯಲ್ಲೆ ನಿಶ್ಚಲರಾಗಿರುತ್ತಾರೆ. ಮೇಳ ಹಾಡುತ್ತಿರುವಾಗ ಬರಬರುತ್ತ ಗುರ್ಯಾ ಕುಣಿಯತೊಡಗುವನು)

ಮೇಳ :

ಡೊಳ್ಳ ಹೊಟ್ಟಿ ಉರುಳಿಬಿತ್ತೊ ಭೂಮಿಮ್ಯಾಗ
ತೇಲಗಣ್ಣ ಮೇಲಗಣ್ಣ
ಮೆತ್ತೀಕೊಂಡೀತಪ್ಪ ಮಣ್ಣ ಮೀಸೀ ಒಳಗ||

ಸಲಿಗೀನಾಯಿ ಬೆನ್ನ ಏರಿ ಆಳೇನಂತಿತ್ತೊ
ಭೂಮಿ ಸೀಮಿ ತಂದs ಅಂತಿತ್ತೊ
ಚಿತ್ತಪಟ್ಟ ಧಡಂಧುಡಿಕಿ ಅಂಗಾತ ಬಿತ್ತೊ||

(ಹಾಡು ಮುಗಿದೊಡನೆ ನಾಲ್ವರೂ ಬಂದು ಗೌಡನನ್ನು ಎತ್ತುತ್ತಾರೆ. ಒಬ್ಬ ತಾನೇ ಗುರ್ಯಾನಂತೆ ಬಗ್ಗುತ್ತಾನೆ. ಗೌಡ ಅವನ ಮೇಲೆ ಕೂತಾಗ ಉಳಿದವರು ಗೌಡನನ್ನು ಉಪಚರಿಸುತ್ತಾರೆ.)

ಗೌಡ : ಹಲಕಟ್ಟ ನಾಯಿಗೊಳ್ರಾ. ಬಡವರಂತ ಸಡಲ ಬಿಟ್ಟರ ತಲೀಗಿ ಏರಿ ಬಿಟ್ಟಿರಿ? ಗುರ್ಯಾ; ಈ ಕಡೆ ಬರತೀನೊ?…..

ಬಸಣ್ಣ : ಸುತ್ತಮುತ್ತ ನಾಯಿ ಇದ್ದರ ಗೌಡಗ ಎಷ್ಟ ಧೈರ್ಯ ಬರತೈತಿ ನೋಡೋ….

ಗೌಡ : ಇವನ್ಯಾವ ನೊಣಾನೊ, ನೊರಜನೋ-ಇವನ್ನಷ್ಟ ಮಾತಾಡಸರ್ಯೊ.

ಒಬ್ಬ : ಯಾಕ ಬಸಣ್ಣ, ಇನ್ನೂ ನಿಮ್ಮಪ್ಪನ ಗೋರಿ ಆರಿಲ್ಲಾ, ಇಷ್ಟರಾಗ ಜೀವ ಬ್ಯಾಸರಾಯ್ತು?

ಬಸಣ್ಣ : ಹೂ ಹೂ, ಜೀವ ಬ್ಯಾಸರಾಗಿ ಯಾರಾದರೂ ನಿಮ್ಮಂಥಾ ಶೂರರು ಕೊಂದರ ಸಾಯಬೇಕಂತ ಕುಂತೇನ. ನಾ ಒಬ್ಬs ಏನ, ಊರಾಗಿನ ಬಡವರೆಲ್ಲಾ ಕುಂತಾರ.

ಗೌಡ : ಬಿಡಾಡಿ ನಾಯಿ ತಿರಕೊಂಡ ತಿನ್ನಲೀ ಅಂತ ಬಿಟ್ಟರ ಭಾಳಾಯ್ತಪಾ ನಿನ್ನ ಅದ್ದೂರಿ.

ಬಸಣ್ಣ : ಗೌಡಾ, ಬಾಯಾಗಿನ ಹಲ್ಲ ಮೊದಲ ಎಣಿಸಿಕೊಂಡ ಮಾತಾಡ.

ಗೌಡ : ಇನ್ನs ಎಳಕಿದ್ದೀ, ತಿರಿಗ್ಯಾಡಿ ಸೊಕ್ಕಲೀ ಅಂತ ಕೈಕಾರದ ಭಾಳ ಮಾತಾಡ್ತೀ ಯಲ್ಲೋ, ಲಗಾಸರೋ ಮಗನ್ನ.

(ನಾಲ್ವರೂ ಬಸಣ್ಣನ ಮೇಲೆ ಏರಿ ಹೋಗುವರು. ಗುರ್ಯಾ ಹೆದರಿ ಚೀರುತ್ತ ಓಡುವನು)

ಗುರ್ಯಾ : ಅಯ್ಯೋ ಬರ್ಯೋ, ಗೌಡ ಬಸಣ್ಣನ ಕೊಲ್ಲತಾನ ಬರ್ಯೋ….

(ಹೋಗುವನು)
ಗೌಡ : ಏ ಏ ಮಕ್ಕಳ್ರಾ, ಗುರ್ಯಾ ಮಂದೀನ ಕರಕೊಂಡ ಬರತಾನ ಹಿಂದ ಬರ‍್ರಿ….

(ನಾಲ್ವರೂ ಹಿಂದೆ ಸರಿಯುತ್ತಾರೆ. ಬಸಣ್ಣ ಸೆಡ್ಡು ಹೊಡೆದು)

ಬಸಣ್ಣ : ಖರೇ ಗಂಡಸಿದ್ದರ ನಾಯೀನ ಕಳಸಬ್ಯಾಡ. ನೀ ಬಾ. ಕೈಗಿ ಕೈ ಹತ್ತಿ ಆಮ್ಯಾಲ ನೋಡ ನನ್ನ ಕುವ್ವತ್ತು. ಅದೆಲ್ಲ ನಮ್ಮಪ್ಪನ ಕೊಂಧಾಂಗಂತ ತಿಳದೀಯೇನ?

ಗೌಡ : ಅದ್ಯಾಕೋ ಬರೀ ಗಂಡಸ್ತನದ ಮಾತs ಮಾತಾಡ್ತಿ; ಗಂಡಸರದೊಂದ ಶರ್ತ ಹೇಳಲೇನ?

ಬಸಣ್ಣ : ಹೇಳ.

ಗೌಡ : (ಜೇಬಿನಲ್ಲಿಯ ಎಲೆಯಡಿಕೆ ಕೊಡುತ್ತ)

ಹೊಲಾ ನಂದೋ ನಿಂದೋ ಅನ್ನೋದಿಂದ ಖಾತ್ರಿ ಆಗಿಹೋಗಲಿ. ನನಗೂ ತಿಳೀಲಿ, ಇಂದ ಜೋಕುಮಾರ ಹುಣ್ಣಿವಿ. ಆ ಹೊಲದಾಗ ಬೆಳತನಕ ಯಾರ ಮಲಗತಾರ-ಹೊಲ ಅವರದು.  ತಯಾರಿದ್ದೀಯೇನ? ತಯಾರಿದ್ದರ ಹಿಡಿ ವೀಳ್ಯ.

ಒಬ್ಬ : ನೋಡಪಾ, ಮೊದಲs ಹುಣ್ಣಿವಿ. ದೆವ್ವಾ ಭೂತಾ ಭಾಳ. ನಿಮ್ಮಪ್ಪ ಎಲ್ಲಿ  ಸತ್ತಂತ ನೆನಪ ಮಾಡಿಕೊ, ಹಿಡಿ.

ಇನ್ನೊಬ್ಬ : ಆ ಯೋಳ ಮಕ್ಕಳ ತಾಯಿ ಕತಿ ಗೊತ್ತೈತಿಲ್ಲೊ ಮತ್ತ?

ಬಸಣ್ಣ : ತಾ ಯಾರಿದ್ದೇನ.

(ವೀಳ್ಯ ತಕ್ಕೊಂಡು ಹೋಗುವನು. ಗೌಡ ಒಬ್ಬನನ್ನು ಕರೆದು ಹೇಳುವನು)

ಗೌಡ : ನೀ ನಮ್ಮ ಮನೀಗಿ ಹೋಗು. ಊಟಾ ಕಂಬಳಿ ತಗೊಂಬಾ. ಕೇಳಿದರ ದೆವ್ವಿನ ಹೊಲಕ್ಕ ಮಲಗಾಕ ಹೋಗ್ಯಾರಂತ ಹೇಳು. ಎಲ್ಲಾರೂ ಕೂಡಿ ಹೊಲಕ್ಕ ಮಲಗಾಕ ಹೋಗ್ರಿ; ಕೆಲಸ ಮುಗಸ್ರಿ. ಅದs ಊಟಾ ನೀವು ಮಾಡ್ತಿ; ನಾ ಶಾರೀ ಮನ್ಯಾಗ ಇರತೇನು, ಬಂದ ಹೇಳ್ರಿ, ತಿಳೀತಿಲ್ಲ?

ಒಬ್ಬ : ಹೂನ್ರಿ.

(ಸಂಗೀತ)