ಮೇಳ :

ಒಂದ ಊರಾಗಿದ್ದಾನ್ರಿ ಒಬ್ಬ ಗೌಡ
ಊರಾಗ ದೊಡ್ಡ ಪುಂಡಾ
ಅವನ ಹೊಟ್ಟಿ ಗುಂಡಾ
ತಿರಗತಾನ ಯಾವತ್ತು ಬಂದೂಕ ಹಿಡಕೊಂಡಾ ||

ಊರ ಭೂಮಿ ಸೀಮಿಯಾ ಯಜಮಾನ
ಬಂಗಾರ ಬೆಳ್ಳಿ ಚಿನ್ನ
ಚೆಂದುಳ್ಳ ನಿವಳ ಹೆಣ್ಣಾ
ಎಲ್ಲಾನು ತನ್ನದಂತ ಹೇಳ್ಯಾನ್ರಿ ಹೈವಾನ ||

ಅವನಿಗಿದ್ದಾಳ್ರಿ ಒಬ್ಬ ಶ್ರೀಮತಿ
ಕರೆಯೋಣ ಗೌಡತಿ
ಚೆಂದ ಆಕೃತಿ
ಬಾಯಿ ತೆರದ ನೋಡತಾಳ್ರಿ ಹಾರ್ಯಾಡುವ ಹಕ್ಕಿ ||

(ಹಾಡು ಮುಗಿಯುತ್ತಿದ್ದಂತೆ ಗೌಡ ನಾಲ್ಕು ಜನರ ಮೇಲೆ ಬಂದೂಕು ಹೊರಿಸಿಕೊಂಡು ವೈಭವದಿಂದ, ಪ್ರೇಕ್ಷಕರ ಮಧ್ಯದಿಂದ ಬರುತ್ತಾನೆ. ಬಂದೂಕು ಹೊತ್ತವರು, ಸ್ವಾಮಿ ನಮ್ಮಯ್ ದೇವರೊ! ಢಂಢಂ ಇವರ ಹೆಸರೊ||” ಎಂದು ಹಾಡಿಕೊಂಡು, ನರ್ತಿಸಿಕೊಂಡು ಬರುತ್ತಾರೆ)

ಸೂತ್ರಧಾರ : ಅಪ್ಪಾ, ಸುತ್ತ ಪರಿವಾರದೊಂದಿಗೆ ಬಂದಿರತಕ್ಕಂಥಾ ಧೀರಾ, ನೀನು ಧಾರು? ನಿನ್ನ ನಾಮಾಂಕಿತವೇನು? ಚೆಂದದಿಂದ ಹೇಳುವಂಥವನಾಗು.

(ಗೌಡ ನಾಲ್ಕು ಜನರ ಕಡೆಗೆ ನೋಡಿ, ಸೂತ್ರಧಾರನಿಗೆ ಉತ್ತರಿಸಲು ಸೂಚಿಸಿ ಮಂಚದ ಮೇಲೆ ಕೂರುತ್ತಾನೆ. ನಾಲ್ವರೂ ಬಂದೂಕು ತಂದು ಸೂತ್ರಧಾರನ ಮುಂದೆ ನಿಲ್ಲಿಸಿ ಅದರ ತುದಿಗೊಂದು ರುಂಬಾಲನ್ನಿಟ್ಟು ಪರಸ್ಪರ ನಗುತ್ತಾರೆ.)

ಒಬ್ಬ : ಇವರು ಯಾರಂದರ…..

ಎಲ್ಲರೂ :

ಸ್ವಾಮಿ ನಮ್ಮಯ್ ದೇವರೊ
ಢಂಢಂ ಇವರ ಹೆರೊ||

ಸೂತ್ರಧಾರ : ಇವರ ಹೆಸರ ಢಂಢಂ? ಕೂತಂಥಾ ಸಭಿಕರು ಕಾತರರಾಗಿದ್ದಾರೆ. ಇವರ್ಯಾರು? ಇವರೇನ ಮಾಡತಾರ? ಸವಿಸ್ತಾರ ಕಥನಾ ಮಾಡಿ ತಿಳಸುವಂಥವನಾಗು.

ಒಬ್ಬ : ಇವರಿಗೆ ಒಂದ ಕುದರಿ ಐತಿ. ಅದರ ಹಿಂದೊಂದ ಬೋಲ್ಟ ಐತಿ. ಗುರಿ ಹಿಡದ ಕುದರಿ ಎಳದರ ಸಾಕು, -ಎದುರಿಗೇನಿದ್ದರೂ ಢಂ ಅಂತ ಒಮ್ಮಿ ಕುಣೀತಾರ; ಮುಗೀತು! ಇಂಥಾ ಮಹಾಸ್ವಾಮಿ ನಮ್ಮ ದೇವರು!

ಎಲ್ಲರೂ :

ಸ್ವಾಮಿ ನಮ್ಮಯ್ ದೇವರೊ
ಢಂಢಂ ಇವರ ಹೆಸರೊ||

ಇನ್ನೊಬ್ಬ : ಯುದ್ದದೊಳಗ ಸೈನಿಕರು ಬರೀ ಹೆಣದ ಮ್ಯಾಲ ಹಾರಸ್ತಾರಂತ, ನಮ್ಮ ದೇವರು-ಊಹೂ! ಗಟ್ಟಿಮುಟ್ಟ ಬಾಳೇವಂತರs ಆಗಬೇಕು. ಒಂದ ದಿವಸ ಒಬ್ಬ ರೋಗಿಷ್ಟನ ಮ್ಯಾಲ ಹಾರಿದರು-ಅದೆಲ್ಲೋ?

ಮತ್ತೊಬ್ಬ : ಅದs? ಆ ದೆವ್ವಿನ ಹೊಲದಾಗೊ!

ಇನ್ನೊಬ್ಬ : ಹೂ. ಆ ದೆವ್ವಿನ ಹೊಲದಾಗ ಹಾರಿದರು. ರೋಗಿಷ್ಟನ ಮ್ಯಾಲ ಹಾರೋವಾಗ ನಮ್ಮ ಸ್ವಾಮಿ ಕುಣೀಲಿಲ್ಲ, ಹಾಡಲಿಲ್ಲ, ಢಂ ಅನ್ನಲಿಲ್ಲ, ಮೂರ ದಿನಾ ಮಾತಾಡಲಿಲ್ಲ. ಹೋಗಲಿ ಅಂತ ಒಂದ ದಿನಾ ಹಾಡಾ ಹಗಲಿ ಹೊಲದಾಗ ಕೆಲಸಾ ಮಾಡೋ ಡಜನ್ ಹೊಲೇರನ್ನ ಸಾಲಾಗಿ ನಿಲ್ಲಿಸಿ ಹಾರಿದರು. ಸ್ವಾಮಿ ಕುಣಿದಾಡಿ ಒಮ್ಮೆ ಢಂ ಅಂದರ ಏನುಳೀತ ಹೇಳ್ನೋಡೋಣು?

ಸೂತ್ರಧಾರ : ಒಂದ ಡಜನ್ ಹೆಣಾ!

ಇನ್ನೊಬ್ಬ : ಊಹೂ! ಬ್ಯಾರೇದವರು ಹಾರಿದರ ಹೆಣ ಬೀಳತಾವ. ನಮ್ಮ ಢಂ ಢಂ ಸ್ವಾಮಿ ಹಾರಿದರ ಇಷ್ಟ ಬೂದಿ; ತಟಕ್ ಹೊಗಿ! ನಮ್ಮ ಸ್ವಾಮೀ ಮಹಿಮಾ ಏನ್ಹೇಳೋಣು!

ಎಲ್ಲರೂ :

ಸ್ವಾಮಿ ನಮ್ಮಯ್ ದೇವರೊ
ಢಂ ಢಂ ಇವರ ಹೆಸರೊ||

ಸೂತ್ರಧಾರ : ಇದೆಲ್ಲಾ ಹೌಂದಪಾ, ನಿಮ್ಮ ಸ್ವಾಮೀ ಸ್ವರೂಪ ಏನು?

ಮಗದೊಬ್ಬ : ನಮ್ಮ ಸ್ವಾಮಿ ಢಂ ಢಂ ದೇವರಂದರ ಒಂದ ದೊಡ್ಡ ಹೊಟ್ಟಿ. ಏನ ತಿಂದರೂ ಅರಗಸ್ತಾರ. ನಿಮ್ಮಂಥವರಿಗೆ ಎರಡು, ಬ್ಯಾಡಾ ನಾಕ ರೊಟ್ಟಿ ಕೊಟ್ಟರ ಅಜೀರ್ಣ ಆಗತೈತಿ. ನಮ್ಮ ಸ್ವಾಮಿ ಮನಶೇರ ಮಾಂಸ ತಿಂದ ಅರಗಿಸಿ ಕೊಳ್ತಾರ!  ಕೋಳಿ ಸಿಕ್ಕರಂತೂ ಹಬ್ಬಾ ಮಾಡತಾರ! ಅಂಥಾ ನಮ್ಮ ಸ್ವಾಮಿ-

ಎಲ್ಲರೂ :

ಸ್ವಾಮಿ ನಮ್ಮಯ್ ದೇವರೊ
ಢಂ ಢಂ ಇವರ ಹೆಸರೊ||

ಗೌಡ : ಏನಪಾ ಸೂತ್ರಧಾರ ನಾ ಯಾರಂತ ಈಗಲಾದರು ತಿಳೀತೋ?

ಸೂತ್ರಧಾರ : ಸ್ವಾಮೀ, ತಾವು ಯಾರಂತ ನನಗಾದರು ತಿಳೀತು, ಕೂತಂಥಾ ಸಮಾಜವಾದಿ ಗಳಿಗಾದರು ತಿಳಿದಬಂತು.

(ನಿಧಾನವಾಗಿ ಬಂದ ಬಸಣ್ಯಾನನ್ನು ತೋರಿಸಿ)

ಈತ ಯಾರು? ಅದ್ಯಾಕ ಹಿಂಗ ನಿಂತಾ?

ಒಬ್ಬ : ಇದು ನಮ್ಮ ಢಂಢಂ ದೇವರು ತಿನ್ನೋ ರೊಟ್ಟಿ.

ಇನ್ನೊಬ್ಬ : ಅಲ್ಲಲ್ಲ. ನಮ್ಮ ಢಂಢಂ ದೇವರಿಗೆ ಹರಕೆ ಬಿಟ್ಟ ಕುರಿ

ಮತ್ತೊಬ್ಬ : ಅಲ್ಲ, ನಮ್ಮ ದೇವರಿಗೆ ಹಾಲ ಕೊಡೊ ಹಸು.

ಗೌಡ್ತಿ : (ಒಳಗಿನಿಂದ ಬಂದು)

ಕೇಳಿದೇನ?

ಗೌಡ : ನಿಂದೇನ ಈ ಮಂದ್ಯಾಗ? ಆಮ್ಯಾಲ ಕೇಳತೀನಂತ ಹೋಗು.

ಮಗದೊಬ್ಬ : (ಗೌಡ್ತಿಯನ್ನು ತೋರಿಸುತ್ತ)

ಅದು ನಮ್ಮ ಢಂಢಂ ದೇವರ ಹೊಲಾ!

(ಗೌಡ್ತಿ ಒಳಹೋಗುವಳು)

ಸೂತ್ರಧಾರ : ಈತನಿಗೇನೂ ಹೆಸರs ಇಲ್ಲೇನು?

ಒಬ್ಬ : ಹೆಸರ? ಇವನ ಹೆಸರೇನೊ?

ಬಸಣ್ಣ : ಬಸಣ್ಣ.

(ಗೌಡ ತಕ್ಷಣ ಏಳುವನು)

ಗೌಡ : ಬಸಣ್ಣ? ಬಾರೋ ಬಸಣ್ಣಾ… ಏ ಹೋಗ್ರೊ ಹೋಗ್ರೊ ಆಮ್ಯಾಲ ಬರ್ತೀರಂತ ಹೋಗ್ರಿ. ಬಾರೊ ಬಸಣ್ಣಾ ಬಂದ ಹೊರಗs ನಿಂತೀಯಲ್ಲೊ? ಬಾ ಬಾ ಒಳಗ ಕೂರ ಬಾ. ಬೀಡಿ ಸೇದತಿಯೇನ?

(ನಾಲ್ವರೂ ರಂಗದ ಒಂದು ಬದಿಗೆ ಸರಿಯುವರು. ಸೂತ್ರಧಾರ ಮೇಳದೊಡನೆ ಒಂದಾಗುವನು)

ನಿಮ್ಮಪ್ಪ ಸತ್ತದ್ದ ಭಾಳ ಮನಸಿಗಿ ಹಚ್ಚಿಕೊಂಡೀಯೊ ಏನೊ! ನಿಮ್ಮಪ್ಪ ಹೋದದ್ದಕ್ಕ ನನಗ ಹಳಹಳಿ ಆಗಿಲ್ಲಂತ ತಿಳೀಬ್ಯಾಡಪಾ ಮತ್ತ. ಏನ ಮುದುಕ ಏನ ಮುದುಕ ನಿಮ್ಮಪ್ಪ! ದಿನ ಬೆಳಗಾದರ ಗೌಡರs ಅಂತ ಬರತಿದ್ದಾ. ಬೀಡಿ ಇಸಕೊಂಡ ಸೇದತಿದ್ದಾ. ಆದರ ಏನ ಮಾಡೋದು, ಮುದುಕ ಭಾರೀ ಹಟಮಾರಿ. ಒಬ್ಬರಮಾತ ಕೇಳಾವಲ್ಲ. ಗಿಣೀಗಿ ಹೇಳಿಧಾಂಗ ಹೇಳಿದೆ: ಮುದುಕಾ ಆ ಹೊಲದಾಗ ಮಲಗಬ್ಯಾಡೊ; ಅಲ್ಲಿ ದೆವ್ವ ಐತಿ. ಪಿಶಾಚಿ ಐತಿ, ಏಳ ಮಕ್ಕಳ ತಾಯಿ ಐತಿ-ಅಂತ. ಕೇಳಿದನs ನನ್ನ ಮಾತ? ಊಹೂ! ದೆವ್ವಾ, ಪಿಶಾಚಿ ಮನಶೇರಷ್ಟ ಕೆಟ್ಟ ಇರಾಣಿಲ್ಲೊ ಹುಡುಗಾ ಅಂದ. ಹೋದ. ಬೆಳಿಗ್ಗೆದ್ದ ಮಾತಾಡಿಸಬೇಕಂತ ಹೋದರ ನಿಮ್ಮಪ್ಪ ಅಲ್ಲೆಲ್ಲಿರತಾನ! ಕೂತ ಕೊಳ್ಳೋ, ಹಾಂಗs ನಿಂತs ಇದ್ದೀಯಲ್ಲ. ನೀ ಅಷ್ಟೇನೂ ಚಿಂತೀ ಮಾಡಬ್ಯಾಡ. ನಮ್ಮ ಮನ್ಯಾಗ ಇದ್ದೀಯಂತ ಬಿಡು.

ಬಸಣ್ಣ : ನಮ್ಮಪ್ಪ ಹೆಂಗ ಸತ್ತಂತ ನನಗ ಗೊತ್ತ ಐತಿ.

ಗೌಡ : ನಿನಗಷ್ಟs ಏನ, ಊರಿಗೂರs ತಿಳದೈತಿ. ಆ ಹೊಲದ ನೆಲ ಭಾಳ ಬಿರಸೈತಿ ಅಂತ ಯಾರಿಗಿ ಗೊತ್ತಿಲ್ಲ? ನಿನ್ನ ಗುರ್ಯಾನ ಎರಡ ಕುರಿ ಹೋದವಂತ ಕೇಳೀಯೇನ?

ಬಸಣ್ಣ : ನಮ್ಮಪ್ಪ ಹೆಂಗ ಸತ್ತಂತ ನನಗ ಗೊತ್ತೈತಿ.

ಗೌಡ : ಯಾಕೋ ಹುಚ್ಚಾ, ನನ್ನ ಮ್ಯಾಲs ಸಂಶೆ ಇದ್ಧಾಂಗ ಮಾತಾಡ್ತಿ? ಮನಸಿಗೆ ಭಾಳ ಹಚ್ಚಿಕೊಂಡೀಯಲ್ಲ, ಅದಕ್ಕs ಹಿಂಗಾಗತೈತಿ. ಬಾಬಾ, ಒಂದ ಬೀಡೀ ಸೇದ ಬಾ. ಬರೋಬರಿ ಬುದ್ಧಿ ಬರತೈತಿ.

ಬಸಣ್ಣ : ಒಂದ ಗಟ್ಟಿಮುಟ್ಟ ಮಾತ ಹೇಳತೇನ ಕೇಳ ಗೌಡಾ:
ನಮ್ಮಪ್ಪ ಹೆಂಗ ಸತ್ತಂತ ನನಗ ಗೊತ್ತೈತಿ; ಕಾಡ ಕಡದ ಹೆಂಗ ಹೊಲಾ ಮಾಡಿದಾಂತ ಹೊತ್ತೈತಿ; ಆ ಹೊಲಾ ನಾ ಬಿಡಾಣಿಲ್ಲಂತ ನನಗ ಗೊತ್ತೈತಿ.

ಗೌಡ : ಇಷ್ಟ ಗೊತ್ತಿದ್ದಾವ ನಿಮ್ಮಪ್ಪ ಸಾಲಾ ಒಯ್ದಿದ್ದ, ಗೊತ್ತೈತಿಲ್ಲೊ?

ಬಸಣ್ಣ : ತಿರಗಾಮುರಗಾ ಎರಡನೂರ ರೂಪಾಯಿ ಸಾಲ; ಇಪ್ಪತ್ತ ವರ್ಷ ಅರ್ಧಾ ರಾಶಿ ಅಳದ ಕೊಟ್ಟಾ. ಇನ್ನs ತೀರಿಲ್ಲ ನಿನ್ನ ಸಾಲ?

ಗೌಡ : ಹೋಗಲಿ, ಆ ಹೊಲಾ ಯಾರ ಹೆಸರಿಗಿ ಐತೆಂತ ಹೊತ್ತೈತಿ?

ಬಸಣ್ಣ : ಅದೆಲ್ಲಾ ನಂಗೊತ್ತಿಲ್ಲ. ಹೊಲಾ ನಂದು, ನಾ ಉಳತೇನ. ಇನ್ನೇಣ ಬಾಕಿ ಉಳದಿದ್ದರೂ ನನ್ನ ಬೆನ್ನಿಗಿ ಹೇಳ.

ಗೌಡ : ಹಾಂಗಿದ್ದರ ನೀ ಹೇಳೋದೂ ನನಗ್ಗೊತ್ತಿಲ್ಲಾ. ಏಣ ಹೇಳೋದೆಲ್ಲಾ ಈ ಬಂದೂಕಿಗೆ ಹೇಳ.

(ಬಸಣ್ಣ ಬಂದೂಕನ್ನೊದ್ದು ಹೋಗುವನು. ಗೌಡ್ತಿ ಸಮಯಕ್ಕೆ ಸರಿಯಾಗಿ ಬಂದು ನೋಡಿ ಬಸಣ್ಣ ಹೋದ ಮೇಲೆ ಮಾತನಾಡುವಳು)

ಗೌಡ್ತಿ : ಕೇಳಿದೇನ?

(ದೂರದಲ್ಲಿ ಗುರ್ಯಾ ಬರುವುದನ್ನು ನೋಡಿ ಒಬ್ಬ ಮತ್ತೊಬ್ಬ ಇನ್ನೊಬ್ಬ ಮಗದೊಬ್ಬ ಎದ್ದು ಬರುವರು. ಗೌಡ್ತಿ ಕೂಡಲೇ ಒಳಗೆ ಹೋಗುವಳು)

ಒಬ್ಬ : ದೇವರೂ, ಹೊರಗ ಗುರ್ಯಾ ಬಂದ ನಿಂತಾನ್ರಿ.

ಗೌಡ : ಕರಕೊಂಬಾ ಒಳಗ.

(ಗುರ್ಯಾ ಹೆದರುತ್ತ ಒಳಗಬರುತ್ತಾನೆ)

ಬಾರೊ ಗುರ್ಯಾ, ಏ ಏ ಕುರಿ ಹೆದರತೈತಿ ಹೋಗ್ರೊ

(ನಾಲ್ವರೂ ಹಿಂದೆ ಸರಿಯುವರು)

ಗುರ್ಯಾ : ದೇವರೂ ನಿನ್ನಿ ನನ್ನ ಎರಡ ಕುರಿ, ಆಳಮಕ್ಕಳು ತಿಂದರಂತ.

ಗೌಡ : ಯಾರ ಆಳಮಕ್ಕಳೋ ಮಗನ?

ಗುರ್ಯಾ : ನಿಮ್ಮ ಆಳಮಕ್ಕಳು, ಅಲ್ಲಿದ್ದಾರಲ್ಲರಿ, ಅವರs

ಗೌಡ : ಯಾಕಲಾ ಮಗನ, ನಾಲಿಗಿ ಭಾಳ ಉದ್ದ ಬಿಡತಿ? ನಿನ್ನ ಕುರಿ ಯಾಕಡೆ ಮೇಯಾಕ ಬಿಟ್ಟಿದ್ದಿ? ಆ ದೆವ್ವಿನ ಹೊದ ಕಡೆ ಬಿಟ್ಟಿದ್ದಿಲ್ಲಾ?

ಗುರ್ಯಾ : ಹೂನ್ರಿ.

ಗೌಡ : ಅಲ್ಲಿ ಮೇಯಾಕ ಬಿಟ್ಟಿ; ದೆವ್ವ ಬಂದ ಕುರೀ ಮುರೀತು; ನಿಮ್ಮ ಆಳಗೊಳ ಮುರದ ತಿಂದರಂತ ಹೇಳಾಕ ಬಂದಿ, ಹೌಂದಲ್ಲ? ಮಗನs, ಬಸಣ್ಯಾನ ಅಪ್ಪನಂಥ ಅಪ್ಪನs ದೆವ್ವ ಮುರೀತು. ನಿನ್ನ ಕುರೀ ಬಿಟ್ಟೀತ? ಮತ್ತ ಊರ ತುಂಬೆಲ್ಲಾ ಸುದ್ಧಿ! ಊರಾಗ ಏನ ಸತ್ತರೂ ಇಲ್ಲಾ ಗೌಡ ಕೊಂದಿರಬೇಕು, ಇಲ್ಲಾ ಅವನ ಆಳ ಕೊಂದಿರಬೇಕು. ಮಕ್ಕಳ್ರಾ ಊರ ಗೌಡಂದರ ಕಿಮ್ಮತ್ತಿಲ್ಲಾ? ತಡಿ ನಿನಗ ಹೇಳತೇನ, -ಯಾರ ಕೊಂದರಂತ-

(ಬಂದೂಕು ತೆಗೆದುಕೊಳ್ಳುವನು)

ಗುರ್ಯಾ : ನಾ ಅಲ್ಲರಿ; ಹಾಂಗಂತ ಬಸಣ್ಯಾ ಹೇಳಿದ.

ಗೌಡ : ಬಸಣ್ಯಾ ಹೇಳಿದ? ಖರೆ ಹೇಳ ಮಗನ ಯಾಕ ಬಂದಿದ್ದಿ?

(ಏನು ಹೇಳುವುದಕ್ಕೂ ತೋಚದೆ)

ಯಾಕಿಲ್ಲರಿ, ಯಾಕಂದರ ನಿಮ್ಮ ಕಾಲ ತಿಕ್ಕಾಕ ಬಂದಿದ್ದೆ.

ಗೌಡ : ಹೌಂದು? ಬಾ ತಿಕ್ಕಬಾ ಹಂಗಾದರ.

(ಗುರ್ಯಾ ಹೆದರುತ್ತ ಗೌಡನ ಕಾಲು ತಿಕ್ಕುವನು)

ಗುರ್ಯಾ, ಏ ಮಗನs ನಾ ಯಾರೋ?

ಗುರ್ಯಾ : ಊರ ಗೌಡರು.

ಗೌಡ : ನೀ ಯಾರೊ?

ಗುರ್ಯಾ : ನಿಮ್ಮ ಆಳರಿ.

ಗೌಡ : ಹೆದರಿದಿ?

ಗುರ್ಯಾ : ಇಲ್ಲರಿ.

ಗೌಡ : ಮಗನ, ಊರ ಗೌಡ ನನಗs ಹೆದರಾಣಿಲ್ಲಾ? ಆ ಬಸಣ್ಯಾಗ ಹೆದರ್ತಿ ಹೌಂದಲ್ಲ?

ಗುರ್ಯಾ : ಇಲ್ಲರಿ.

ಗೌಡ : ನನಗೂ ಹೆದರಾಣಿಲ್ಲ, ಬಸಣ್ಯಾಗೂ ಹೆದರಾಣಿಲ್ಲ, ಅಷ್ಟ ಪುಡಾರಿ ಆಗಿಬಿಟ್ಟ?

ಗುರ್ಯಾ : ನಿಮಗs ಹೆದರತೇನ್ರಿ.

ಗೌಡ : ನನಗ ಹೆದರಿದರ ಬಸಣ್ಯಾನ ಹಂತ್ಯಾಕ ಯಾಕ ಹೋಗಿದ್ದಿ? ಬೊಗಳತೀಯಿಲ್ಲ?

ಗುರ್ಯಾ : ಬೊಗಳತೇನ್ರಿ.

ಗೌಡ : ಬಸಣ್ಯಾನ ಹಂತ್ಯಾಕ ಯಾಕ ಹೋಗಿದ್ದಿ?

ಗುರ್ಯಾ : ನಾ ಹೋಗಿದ್ದಿಲ್ಲರಿ.

ಗೌಡ : ಅವನs ನಿನ್ನ ಹಂತ್ಯಾಕ ಬಂದಿದ್ದಾ?

ಗುರ್ಯಾ : ಹೂನ್ರಿ.

ಗೌಡ : ನೀ ಏನಂದಿ? ಅವ ಏನಂದ? ಒಂದೂ ಬಿಡದ ಹೇಳಿದಿ, ಬರೋಬರಿ. ಇಲ್ಲದಿದ್ದರ ಮಗನs ನಿನ್ನ ಚರ್ಮಾ  ಸುಲೀತೇನ.

ಗುರ್ಯಾ : ಬಸಣ್ಯಾ ಅಂದ: ಯಾಕೊ ಗುರ್ಯಾ ಗೌಡಗ ಹೊಲಾ ಮಾರಿದೆಂತಲ್ಲೊ? ನಾ ಅಂದೆ: ಇಲ್ಲಪಾ, ಗೌಡರು ಸಾಲಾ ಕೊಟ್ಟಿದ್ದರು. ಸಾಲದಾಗ ಹೊಲ ಮುರಕೊಂಡರು.

ಬಸಣ್ಯಾ ಅಂದ :ಎಷ್ಟ ಸಾಲಿತ್ತು?
ನಾ ಅಂದೆ :ಮುನ್ನೂರ ರೂಪಾಯಿ ಇತ್ತು.
ಅವ ಅಂದ : ಮುನ್ನೂರ ರೂಪಾಯಿ ಸಾಲದಾಗ
ಐದ ಎಕರೆ ಜಮೀನ ಹೆಂಗ ಮಾರಿದಿ?
ನಾ ಅಂದೆ: ನನಗ ಗೊತ್ತಿಲ್ಲಪಾ.

ಗೌಡ : ನಾಯಿ ಮಗನ, ನಿನಗ ಗೊತ್ತಿಲ್ಲಾ? ಮುನ್ನೂರ ರೂಪಾಯಿ ಕೊಟ್ಟ ಎಷ್ಟ ದಿನಾ ಆಯ್ತು?

ಗುರ್ಯಾ : ಮೂರ ನಾಕ ವರ್ಷಾಯ್ತರಿ.

ಗೌಡ : ಮೂರ ನಾಕ ವರ್ಷಾ? ತರಸಲಿ ಕಾಗದ ಪತ್ರಾ? ಹತ್ತ ವರ್ಷಾತ ಹತ್ತ!

ಗುರ್ಯಾ : ನಾ ಆಗಿನ್ನೂ ಸಣ್ಣಾವಿದ್ದೆ.

ಗೌಡ : ಸಣ್ಣಾವಿದ್ದರೆ ಹೊಟ್ಟಿಗಿ ಅನ್ನಾ ಉಣ್ಣತಿದ್ಯೊ, ಶೆಗಣಿ ತಿನ್ನತಿದ್ಯೊ? ಬರದ ಕಾಗದ ಪತ್ರಾ ಸುಳ್ಳ ಹೇಳತಾವು? ನಿನ್ ಹೆಬ್ಬಟ್ಟಿನ ಗುರುತ ಸುಳ್ಳ ಹೇಳತೈತಿ? ದುರಗವ್ವನ ಜಾತ್ರಿ ಅಮಾಸಿಗಿ ಒಯ್ಯಲಿಲ್ಲಾ ಹಣ?

ಗುರ್ಯಾ : ಹೌಂದ, ಅಂದ ಅಮಾಸಿ ಇತ್ತರಿ.

(ಹಿಂದೆ ಕುಳಿತ ನಾಲ್ವರೂ ಏಳುವರು)

ಗೌಡ :  ಆ ಅಮಾಸಿ ಆಗಿ ಎಷ್ಟು ವರ್ಷಾದುವೋ ಮಗನ?

ಗುರ್ಯಾ : ಹತ್ತ ವರ್ಷಾದುವರಿ.

ಗೌಡ : ಹತ್ತ ವರ್ಷದ ಅಸಲಾ ಬಡ್ಡಿ ಎಷ್ಟ ಆಯ್ತು?

ಗುರ್ಯಾ : ಐದ ಎಕರೆ ಆಯ್ತರಿ.

(ಮತ್ತೆ ನಾಲ್ವರೂ ಹಿಂದೆ ಹೋಗಿ ಕೂರುವರು)

ಗೌಡ : ಹತ್ತ ಎಕರೆ ಆಗತ್ತಿತ್ತ, ಸೂಳಿಮಗನs, ಬಡವ ನಮ್ಮ ಮನ್ಯಾಗ ದುಡಕೊಂಡಿರ್ಲೀ ಅಂತ ಬಿಟ್ಟೇನ ಬಾ. ಭೂಮೀ ಸೀಮಿ ಆಳೋ ಗೌಡಂದರ ಕಿಮ್ಮತ್ತಿಲ್ಲಾ? ನಾನs ಮನಸ್ಸ ಮಾಡಿದರ ನೀ ಅಲ್ಲ, ಬಸಣ್ಯಾ ಸೈತ ಮಣ್ಣ ಮುಕ್ಕಿ ಹೋಗತಾನ, ತಿಳೀತಿಲ್ಲ?

ಗುರ್ಯಾ : ತಿಳೀತ್ರಿ.

ಗೌಡ : ಏನ ತಿಳೀತ?

ಗುರ್ಯಾ : ಮಣ್ಣ ಮುಕ್ಕತಾನ್ರಿ.

ಗೌಡ : ಹೋಗಿ ಬಸಣ್ಯಾಗ ಹೇಳು : ಹೋದ ವರ್ಷದ ಕೋರಪಾಲ ನಿಮ್ಮಪ್ಪ ಕೊಟ್ಟಿಲ್ಲಾ. ಕೊಡದಿದ್ದರ ಹೊಲದಾಗ ಕಾಲ ಇಡಬ್ಯಾಡಂತ ಹೇಳು.

ಗುರ್ಯಾ : ಹೂನ್ರಿ.

ಗೌಡ : ಯಾವಾಗ ಹೋಗ್ತಿ?

ಗುರ್ಯಾ : ಈಗ ಹೋಗತೇನ್ರಿ.

ಗೌಡ : ಕಾಲ ತಿಕ್ಕಿ ಹೋಗ.

(ಶಿವಿ, ಬಸ್ಸಿ ಬಂದು ಗೌಡನನ್ನು ನೋಡಿದೊಡನೆ ಮುದುಡಿಕೊಂಡು ಒಳಗೆ ಹೋಗುವರು. ಆಮೇಲೆ ನಿಂಗಿ ಬಂದು ಚಪ್ಪಲಿ ಕಳೆಯುತ್ತಿರುವಳು)

ಗೌಡ : ಯಾರದೋ ಗುರ್ಯಾ ಈ ಕೋಳಿ? ಏ ಹುಡುಗಿ ನಿಲ್ಲು.

(ನಿಂಗಿ ಸೆರಗು ಮರೆಮಾಡಿ ನಿಲ್ಲುವಳು)

ಯಾರ ಮಗಳs ನೀ?

ಗುರ್ಯಾ : ಈಕಿ ಗುರುಪಾದನ ಮಗಳ್ರಿ.

ಗೌಡ : ಭರ್ತಿ ವಯಸ್ಸಿಗಿ ಬಂದಾಳಲ್ಲೊ, ನೋಡು ಎಷ್ಟ ತುಳಕ್ಯಾಡತಾಳೊ? ಮದಿವ್ಯಾಗಿಲ್ಲೇನ ಇನ್ನೂ?

ಗುರ್ಯಾ : ಇನ್ನೂ ಇಲ್ಲರಿ.

ಗೌಡ : ಏನs ಹುಡಿಗಿ ನಿನ್ನ ಹೆಸರ?

ಗುರ್ಯಾ : ಗೌಡರ ಕೇಳತಾರ ಹೇಳಲ್ಲ; ಊರ ಗೌಡ ಹೆಸರ ಕೇಳೋದ ಹೆಚ್ಚೊ? ನೀ ಹೇಳೋದ ಹೆಚ್ಚೊ?

ಗೌಡ : ಹೆದರತಾಳೋ ಏನೋ! ಅಂತೂ ನೋಡಿದವರ ಬಾಯಾಗ ನೀರ ಬರೋ ಹಾಂಗ ಮಸ್ತ ತುಂಬಿಕೊಂಡಾಳ ಬಿಡು. ಹೆದರಿದಿ ಏನs?

ನಿಂಗಿ : (ಸೆರಗು ಚೆಲ್ಲಿ)

ಹೆದರಾಕ ನೀ ಏನ ಹುಲಿ ಅಲ್ಲ, ಕರಡಿ ಅಲ್ಲ. ಊರ ಗೌಡ ಹೆಸರ ಕೇಳ್ಯಾನಂತ ನನ್ನ ಬಾಯಾಗೇನೂ ಜೊಲ್ಲ ಬಂದಿಲ್ಲ ದs ಆs…..

(ಬಾಯಿ ತೆರೆದು ಅಣಕಿಸುವಳು)

ಗೌಡ : ಏ ಹುಚ್ಚಹುಡಿಗೀ, ಯಾರ ಜೋಡಿ ಮಾತಾಡ್ತಿ, ಕಣ್ಣ ಬರೋಬರಿ ಕಣ್ತಾವಿಲ್ಲ?

ನಿಂಗಿ : ಕಾಣದೇನ? ಹೊರಗ ಸೂರ್ಯನ ಬೆಳಕ ಐತಿ, ನನಗೂ ಎರಡ ಕಣ್ಣಾದವು; ಹೇಳಲಿ? ಇದ ಊರಗೌಡನ ಮಸಡಿ, ಇವು ನನ್ನ ಚಪ್ಪಲಿ.

(ಹೊರಡಲನುವಾಗುವಳು)

ಗೌಡ : ತಡಿ ಏ ಹುಡಿಗಿ, ನಿಮ್ಮಪ್ಪಗ ಹೇಳು. ಈ ಊರಾಗಿನ ಎರೀನೆಲ ಯಾವುದೂ ನಾ ಬಿಟ್ಟಿಲ್ಲಂತ ಹೇಳು.

ನಿಂಗಿ : ಸೂರ್ಯನಂಥಾ ಸೂರ್ಯ ಮುಟ್ಟದ ಭೂಮಿ ಇದs ಊರಾಗ ಬೇಕಾದಷ್ಟ ಬಿದ್ದೈತಿ, ತಿಳಕೊ.

(ಸರ‍್ರನೇ ಹೊರಗೇ ಹೋಗುವಳು)

ಗೌಡ : ನಮ್ಮ ಮನೀಗಿ ಬಂದ ನನಗs ಇಷ್ಟ ಧಿಮಾಕ ತೋರಿಸಿ ಹಾರಿ ಹೋಯ್ತಲ್ಲೊ ಕೋಳಿ! ಗುರ್ಯಾ-

ಗುರ್ಯಾ : ಎಪ್ಪಾ,

ಗೌಡ : ಈಕೀನ ಮದಿವ್ಯಾಗತೀಯೇನೊ?

ಗುರ್ಯಾ : ಎಪ್ಪಾ……

ಗೌಡ : ಈಕೀನ ಮದಿವ್ಯಾಗತೀಯೇನೊ?

ಗುರ್ಯಾ : ಹೆ ಹೆ ಹೆ……

ಗೌಡ : ಮೂರು ರೂಪಾಯಿಗಿ ಈಕೀನ್ನ ಮಾರತೇನ, ತಗೊಳ್ತಿ?

ಗುರ್ಯಾ : ಹೆ ಹೆ ಹೆ…….

ಗೌಡ : ಹೋಗು, ಮಸಾಲಿ ಹಾಕು. ಹಲ್ಲಿಗಿ ರುಚಿ ಹತ್ತೋಹಾಂಗ ಪಲ್ಲೆ ಮಾಡು. ನನ್ನ ಹೆಸರ್ಹೇಳಿ ತಿನ್ಹೋಗ, ತಿನ್ನಾಕ ಆಗದಿದ್ದರ ನನಗ ಕೊಡ, ಏನಂತಿ?

ಗುರ್ಯಾ : ಹೆ ಹೆ ಹೆ…….

ಗೌಡ : ಬಾಯ್ ಮುಚ್ಚೊ ಸೂಳಿಮಗನ. ಹಲ್ಲ ಕಿಸದರ ಹೆಣ್ಣ ಒಲೀತಾವು? ನಿನ್ನಂಥಾ ನಾಯೀನ್ನೋಡಿ ಯಾವಾಕಿ ಬೆನ್ನ ಹತ್ಯಾಳೊ! ಬೆಳದ ನಿಂತೀ ಮಗನs ನಿನ್ನ ವಯಸ್ಸೆಷ್ಟ?

ಗುರ್ಯಾ : ಪಂಚವೀಸರಿ.

ಗೌಡ : ಹೆಂಗಸಿನ ಮಣಕಾಲ ನೋಡೀಯೇನ?

ಗುರ್ಯಾ : ಇಲ್ಲರಿ.

ಗೌಡ : ನಿನ್ನಂಥವಗ ಏನ ತಿಳದೀತೋ? ಗುರ್ಯಾ, ಈ ಕಾಡಕೋಳಿ ಹಿಡೀಬೇಕಲ್ಲೊ.

ಗುರ್ಯಾ : ಕಾಡಕೋಳಿ ಹೆಂಗ ಹಿಡೀಬೇಕನ್ನೋದ ನನಗ ಗೊತ್ತೈತ್ರಿ!

ಗೌಡ : ಹೌಂದು? ಹೆಂಗ ಹೇಳು?

ಗುರ್ಯಾ : ಪಂಜರದಾಗೊಂದ ಹುಂಜಿನ ಗೊಂಬಿ ಇಟ್ಟಕೋಬೇಕ್ರಿ. ಇಟ್ಟಕೊಂಡ ಅಡಿವಿಗಿ ಹೋಗಬೇಕ್ರಿ. ಹೋಗಿ ಅಡವಿ ನಡುವ ಪಂಜರ ತೂಗಹಾಕಬೇಕ್ರಿ. ತೂಗಹಾಕಿ ಹುಂಜಧಾಂಗ ಕು ಕೂ ಕೂ ಅಂತ ಕ್ಯಾಕಿ ಹಾಕಬೇಕ್ರಿ. ಕ್ಯಾಕಿ ಹಾಕಿದರ ಕಾಡಕೋಳಿ ಬರತಾವರಿ. ಬಂದ ಕೂಡ್ಲೆ ಗಪ್ಪನ ಹಿಡಕೋಬೇಕ್ರಿ!

ಗೌಡ : ಇಷ್ಟಾದರೂ ತಿಳಕೊಂಡೀಯಲ್ಲ.

ಗುರ್ಯಾ : ಆದರ ನಿಮ್ಮಂಥಾ ಖರೆ ಖರೆ ಹುಂಜ ಕೂಗಿದರೂ ಕೋಳಿ ಹುಸಾ ಅಂದ ಹೋಯ್ತಲ್ರಿ!

ಗೌಡ : ಬಾಯ್ಮುಚ್ಚ, ಏ ಮಗನs ಬಾಯಿಲ್ಲಿ, ಕಿವಿ ಹಿಡಕೊ.

(ಗೌಡ ಹೇಳಿದಂತೇ ಗುರ್ಯಾ ಮಾಡುವನು)

ಕೂಡ್ರು, ಏಳ, ಕೂರ, ಏಳ……ಕಾಲ ತಿಕ್ಕ.

(ಗುರ್ಯಾ ಗೌಡನ ಕಾಲು ತಿಕ್ಕತೊಡಗುವನು)

ಗುರ್ಯಾ ಈ ಊರಾಗಿನ ಮಂದಿ ಯಾರಿಗಿ ಹೆಚ್ಚ ಕಿಮ್ಮತ್ತು ಕೊಡತಾರೊ? ನನಗೂ? ಬಸಣ್ಯಾಗೊ?

ಗುರ್ಯಾ : ನಿಮಗsರಿ.

ಗೌಡ : ಯಾರಿಗಿ ಹೆಚ್ಚ ಹೆದರತಾರೊ?

ಗುರ್ಯಾ : ನಿಮಗsರಿ.

ಗೌಡ : ಖರೆ ಹೇಳ.

ಗುರ್ಯಾ : ಗಂಡಸರ ನಿಮಗ ಹೆದರತಾರ‍್ರಿ. ಹೆಂಗಸರ ಬಸಣ್ಯಾಗ ಹೆದರತಾರ‍್ರಿ.

ಗೌಡ : ಹೌಂದು? ಬಸಣ್ಯಾ ಮುಟ್ಟದ ಹೆಣ್ಣ ಯಾವುದ ಹೇಳು?

ಗುರ್ಯಾ : ಆಗಳೆ ಹೋದಳಲ್ಲರಿ.

ಗೌಡ : ಹೌಂದು? ಬಸಣ್ಯಾಗ ಏನಂತಾಳ ಆಕಿ?

ಗುರ್ಯಾ : ಅಣ್ಣಾ ಅಂತಾಳ್ರಿ.

ಗೌಡ : ಹೌಂದು? ನನಗ ಮಾಮಾ ಅಂತಾಳ ಹೋಗು. ಗುರುಪಾದ್ಯಾಗ ಹೇಳು-

ಗುರ್ಯಾ : ಹೂನ್ರಿ.

ಗೌಡ : ಏನ್ಹೇಳ್ತಿ?

ಗುರ್ಯಾ : ಗೌಡರ ನಾಲಿಗಿ ಹೊಲಸಾಗೇತಿ. ತಿನ್ನಾಕ ನಿನ್ನ ಕೋಳೀ ಕೊಡಂತ ಹೇಳತೇನ್ರಿ,

ಗೌಡ : ನಾನೂ ಹಿಂದಿಂದ ಬರತೇನ್ನಡಿ.

(ಗುರ್ಯಾ ಹೋಗುವನು. ಗೌಡ ಬಂದೂಕು ತೆಗೆದುಕೊಳ್ಳುತ್ತಿರುವಾಗ ಗೌಡ್ತಿ ಬರುವಳು)

ಗೌಡ್ತಿ : ಯಾಕ, ಇಂದ ಎಲ್ಲಿಗಾದರು ಹೋಗ್ತಿಯೇಣ?

ಗೌಡ : ಹಾಕಿದಿ ಹೌಂದಲ್ಲ ಅಡ್ಡಬಾಯಿ? ಹೇಳಿಲ್ಲಾ ಹೊರಗ ಹೊಂಟಾಗ ಎಲ್ಲಿ, ಯಾಕ ಕೇಳಬಾರದಂತ?

ಗೌಡ್ತಿ : ಇಂದ ರಾತ್ರೀನಾದರೂ ಮನೀಗಿ ಬರ್ತೀಯಲ್ಲ?

ಗೌಡ : ಎಲೀ ಇವಳ, ಏನ ಕರಳ ಹರದ ಬೀಳವರ್ಹಾಂಗ ಕಾಳಜೀ ಮಾಡತಾಳೊ! ಒಂದ ಬೀಡೀ ಸೇದೋದರೊಳಗ ನಿಂದೆಲ್ಲ ಮುಗೀಬೇಕ ನೋಡ; ಕೇಳತೇನ.

(ಬೀಡಿ ಹೊತ್ತಿಸುವನು)

ಗೌಡ್ತಿ : ಇಂದ ಜೋಕುಮಾರ ಹುಣ್ಣಿವಿ, ಇಂದಿಗಿ ನಮ್ಮ ಮದಿವ್ಯಾಗಿ ಹತ್ತ ವರ್ಷ ತುಂಬಿದುವು.

ಗೌಡ : ತುಂಬಲಿ.

ಗೌಡ್ತಿ : ಅಂದ ಹುಣ್ಣಿವೀ ದಿನ ಇಷ್ಟ ದೊಡ್ಡ ಚಂದ್ರ ಮೂಡಿದ್ದಾ.

ಗೌಡ : ಮೂಡಿದ್ದಾ.

ಗೌಡ್ತಿ : ಅಂದ ನಮ್ಮವ್ವ-ಮುಂದಿನ ಜೋಕುಮಾರ ಹುಣ್ಣಿವಿಗೆಂದರ ಈ ಮನ್ಯಾ ಗೊಂದ ಗಂಡ ಮಗಾ ಆಡತಿರಬೇಕಪಾ ಅಳಿಯಾ-ಅಂದಿದ್ಲು.

ಗೌಡ : ಹೌಂದು? ನನಗೆ ನೆನಪs ಇಲ್ಲ.

ಗೌಡ್ತಿ : ನಿನ್ನಿ ರಾತ್ರಿ ನನಗೊಂದು ಕನಸ ಬಿದ್ದಿತ್ತು.

ಗೌಡ : ಹೌಂದು? ಮತ್ತೇನ ಕನಸ ಕಂಡಿ?

ಗೌಡ್ತಿ : ಹುಣ್ಣಿವಿ ಚಂದ್ರ ಮೂಡಿದ್ದಾ. ನಮ್ಮ ಹೊಲದಾಗಿನ ಗಿಡದಾಗೊಂದ ಪಂಚರಂಗಿ ಗಿಣೀ ಕುಂತಿತ್ತು. ಬೆಳದಿಂಗಳದಾಗ ಸೈತ ಅದರ ಬಣ್ಣ ಥಳ ಥಳಾ ಹೊಳೀತಿತ್ತು. ಅಷ್ಟರಾಗ ಯಾಕೋ ಏನೋ ಎಲ್ಲಾ ಮಂದಿ ನಗಾಕ ಸುರು ಮಾಡಿದರು. ಮ್ಯಾಲ ನೋಡಿದರ ನಮ್ಮ ಚಂದ್ರ ಸಣ್ಣ ಸಣ್ಣಾವಾಗಿ ಸವಕಳಿ ಪಾವಲಿಯಷ್ಟs ಕಾಣತಿದ್ದ. ನನ್ನ ನೀ ಇಷ್ಟೊಂದು ಯಾಕ ಮರತಿ?

ಗೌಡ : ಎರಡರೊಳಗ ಒಂದಂತೂ ಖರೆ : ಇಲ್ಲಾ ನಿನಗಿನ್ನೂ ಎಚ್ಚರವಾಗಿಲ್ಲಾ. ಇಲ್ಲಾ ನಿನಗಜ್ವರ ಬಂದಿರಬೇಕು. ನಾ ನಿನಗ ಹೇಳೇನಿ, ಹೆಚ್ಚ ವಿಚಾರ ಮಾಡಬ್ಯಾಡ, ಅಂತ. ನಿನ್ನಷ್ಟ ವಿಚಾರ ಮಾಡಿದರ ನನ್ನ ತಲ್ಯಾಗಿಷ್ಟ ಕೂದಲ ಉಳದಾವು?

ಗೌಡ್ತಿ : ನಿನಗ ಹೆಂಗಸಿನ ತಳಮಳ ಹೆಂಗ ತಿಳೀಬೇಕು?

ಗೌಡ : ಏನ ತಿಳಿಸಿಹೇಳಲ್ಲ. ತಗೊ ಇನ್ನೊಂದ ಬೀಡೀ ಹೊತ್ತಸ್ತೇನ-ಹೇಳು.

ಗೌಡ್ತಿ : ನನ್ನ ಮಾತ ನೀ ನಡಿಸಿಕೊಡೋದ ಅಷ್ಟರಾಗs ಐತಿ ಬಿಡ. ಪಾವಲಿ ಚಂದ್ರನ ಹಿಂದೊಬ್ಬ ಮುದುಕ ಚೂರೀಯಂಥಾ ಕಣ್ಣ ತಕ್ಕೊಂಡ ಗಿಣೀಗೇ ಗುರಿ ಹಿಡಕೊಂಡ ಕುಂತಿದ್ದ.

ಗೌಡ : ನೀ ಇನ್ನs ಕನಸಿನಾಗಿಂದ ಎಚ್ಚರs ಆಗಿಲ್ಲ. ಏ ಎಚ್ಚರಾಗ ಏಳ-

ಗೌಡ್ತಿ : ಗೊತ್ತೈತಿ ಬಿಡ. ಮದಿವ್ಯಾಗಿ ಹತ್ತ ವರ್ಷಾಯ್ತು, ಏನಾದರು ನಡಿಸಿ ಕೊಡಂತ ಕೇಳೇನೇನ ಹೇಳು?

ಗೌಡ : ನಿನಗೇನ ಕಡಿಮಿ ಆಗೇತಿ, ಅದನಾದರೂ ಹೇಳ.

ಗೌಡ್ತಿ : ಎಲ್ಲಾ ಎಲ್ಲಾ ಐತಿ! ಹೊಟ್ಟಿ ತುಂಬ ಊಟಾ, ಮೈ ತುಂಬ ಬಟ್ಟಿ! ಗುರಪಾದನ ಮಗಳು ಏನಂದಳು ಗೊತ್ತೈತಿ?

ಗೌಡ : ಏನಂದಳು?

ಗೌಡ್ತಿ : ಅಡವಿ ತುಂಬ ಹೊಲಾ, ಊರ ತುಂಬ ಮನೀ ಇದ್ದ, ಮನ್ಯಾಗೊಂದ ಕೂಸಿಲ್ಲಾ ಕುನ್ನಿಲ್ಲಾ……

ಗೌಡ : ಅಂದ್ಲು? ಅದಕ್ಕೇನಾದರು ವ್ಯವಸ್ಥಾ ಮಾಡೋಣಲ್ಲ.

ಗೌಡ್ತಿ : ನನ್ನ ಮದಿವ್ಯಾಗೂವಾಗ್ಲೂ ಹಿಂಗs ಅಂದಿದ್ದಿ!

ಗೌಡ : ಹೌಂದು? ನನಗ ನೆನಪs ಇಲ್ಲ, ಈ ಸಲ ಮರೆಯೋದಿಲ್ಲಂತ ಆಕಿಗಿ ಹೇಳು.

ಗೌಡ್ತಿ : ಇಂದ ಜೋಕುಮಾರನ ಹುಣ್ಣಿವಿ, ಚೆಲೋ ದಿನ. ಪೂಜೆ ಮಾಡಿ ಜೋಕುಮಾರ ಸ್ವಾಮೀನ ಪಲ್ಯ ಮಾಡಿ ತಿಂದ್ರ ಮಕ್ಕಳಾಗತಾವಂತ. ಅದಕ್ಕ ಊಟಕ್ಕ ಮನಿಗೇ ಬರಾಕಬೇಕ ಮತ್ತ.

ಗೌಡ : ಓಹೋ! ಅದಕ್ಕs ಹೆಂಗಸರ ಬಂದಾರೇನ ಮನೀಗಿ?

ಗೌಡ್ತಿ : ಹೂ.

ಗೌಡ : ಗುರುಪಾದನ ಮಗಳ ಅದಕ್ಕs ಬಂದಿದ್ದಳೇನ?

ಗೌಡ್ತಿ : ಹೂ. ನೀ ಏನೋ ಅಂದೆಂತ. ಹೋದಳಂತಲ್ಲ ತಿರಿಗಿ?

ಗೌಡ : ಹೂ, ಆಕಿ ಹೆಸರೇನಂದಿ?

ಗೌಡ್ತಿ : ನಿಂಗಿ.

ಗೌಡ : ಹೂ ಆಗಲಿ, ಸಂಜೀ ಊಟಕ್ಕ ಮನೀಗೆ ಬರ್ತೇನಾಯ್ತ?

ಗೌಡ್ತಿ : ಹಾಂಗs ಒಂದ ಗಿಣಿ ಸಿಕ್ಕರ ನೋಡತೀಯೇನ?

ಗೌಡ : ಒಂದ ಕೆಲಸಾ ಮಾಡತಿ?

ಗೌಡ್ತಿ : ಒಂದ್ಯಾಕ ಹತ್ತ ಹೇಲಲ್ಲ.

ಗೌಡ : ಹತ್ತ ಬ್ಯಾಡ, ಒಂದs ಸಾಕ. ಮಾಡ್ತಿ.

ಗೌಡ್ತಿ : ಏನ ಹೇಳಲ್ಲ.

ಗೌಡ : ಬಾಯ್ಮುಚ್ಚಿಕೊಂಡ ಒಳಗ ಹೋಗ್ತಿ?

(ಹೊರಡುವನು. ಮೇಳದವರು ಸ್ವಾಮಿ ನಮ್ಮಯ್ ದೇವರೊ! ಢಂಢಂ ಇವರ ಹೆಸರೊ|| ಎಂದು ಹಾಡುವರು)

ಸಂಗೀತ.