ಮೇಳ :

ತಿರಗತಾನ ಗೌಡ ಹಗಲಿ ರಾತ್ರಿ
ಅಂದಾನ ಅದಕ ಪಿರತಿ
ಕೋಳೀಯ ಬೆನ್ನ ಹತ್ತಿ
ನಿಂಗೀಯ ಬೆನ್ನ ಹತ್ತಿ
ಹಾಕತಾನ ಹತ್ತೆಂಟ ಬಲಿ ಹರದಾವ ಮೂಲಿ ಮೂಲಿ||

ಆರ ತಿಂಗಳ ತಿರಿಗ್ಯಾನ ಹುಂಜ ಆಗಿ
ದಿನಾ ಬೆಳಗ ಕೂಗಿ
ಬಿಟ್ಟಾನ ಹೊಲ ಮನಿ
ಮರತಾನ ನಾಚೀಕಿ
ಕೋಳಿ ಗುರಿವ್ಯಾನ ಬುಟ್ಟಿಯೊಳಗ ಹಾರಿ ಕುಂತಿತ್ತ ಬೆರಿಕಿ||

(ಈ ಹಾಡು ಹೇಳುತ್ತಿರುವಂತೆ ಗೌಡ ನಿಂಗಿಯ ಬೆನ್ನು ಹತ್ತಿ ಓಡಿಸಿಕೊಂಡು ಬರುವುದು, ಅವಳು ತಪ್ಪಿಸಿಕೊಳ್ಳುವುದು, ರಂಗದ ಸುತ್ತ ಓಡಾಡುವುದು ನಡೆದಿರುತ್ತದೆ.)

ಗೌಡ : ಆರ ತಿಂಗಳಾಯ್ತು, ತಪ್ಪಿಸ್ಯಾಡಿ ತಿರಿಗಿದಿ. ನಿನ್ನ ನೋಡಿದ ದಿನಾನs ಮಸಾಲಿ ಕೊಂಡ ಇಟ್ಟೀದೇನು, ಇಂದ ಸಿಗಬಿದ್ದೆ ನನ್ನ ಕೋಳೇ! ಇನ್ನ ಹಟ ಹಿಡೀಬ್ಯಾಡ, ನಡಿ ಹೋಗೋಣು.

ನಿಂಗಿ : ಮಾನಗೇಡಿ, ಮಸಾಲಿ ಒಯ್ದ ನಿನ್ನ ಹೇಂತೀ ಮ್ಯಾಲ ಹಾಕಿ ನೆಕ್ಕೋ ಹೋಗ, ಇದs ಅನ್ನಾಣ ಅಂದಿ; ಇನ್ನೊಮ್ಮಿ ಅಂದರ ಅದs ಮಸಾಲಿ ನಿನಗ ಹಾಕೇನ.

ಗೌಡ : ನಾ ಹೇಳೋದೂ ಅದs ಮತ್ತ. ನನಗ ನೀ ಹಾಕು, ನಿನಗ ನಾ ಹಾಕತೇನು. ಇಂದ ಇಲ್ಲಾ ಜೀವಂತ ನನ್ನ ಅಂಗೈಯಾಗಿರತಿ, ಇಲ್ಲಾ ಸತ್ತ ಗೋರಿಗಿ ಹೋಗಿರತಿ.

ನಿಂಗಿ : ಹೌಂದು? ಅವಯ್ಯಾ ಇವ ಎಂಥ ಶೂರ ಇದ್ದಿದ್ದಾನ? ಶೂರಾ ಮೀಸೀ ತೀಡಕೊಳ್ಲಾ, ಮಂಡಾಗ್ಯಾವ?

ಗೌಡ : ನೀ ನನ್ನ ಅಂಗೈಯಾಗ ಬಂದಮ್ಯಾಲ ನಿನಗ ಆಡಾಕ ಇರಲೆಂತ ಹಾಂಗs ಬಿಟ್ಟೇನ, ಬಾ.

ನಿಂಗಿ : ಅವಯ್ಯಾ! ಇವ ಎಂಥಾ ಧೀರ ಇದ್ದಿದ್ದಾನ! ಧೀರಾ, ಬಸಣ್ಣಾ ಬಂದಾ ದೂರ ಸರಿ.

ಗೌಡ : ಹುಚ್ಚಿ, ಎಷ್ಟಂತ ಚಾಷ್ಟಿ ಮಾಡತಿ? ನಿನಗ ಮೊದಲs ಗೊತ್ತೈತಿ, ನಾ ಮನಸ್ಸ ಇಟ್ಟದ್ದ ಯಾವುದೂ ಬಿಟ್ಟಿಲ್ಲಂತ. ಮತ್ತ ಓಡ್ಯಾಡಸ್ತಿ, ಕಾಣಬಾರದ? ನಿನ್ನ ಸಲುವಾಗಿ ಮನಿಮಾರ ಬಿಟ್ಟ, ಹೊಲಾ ಬಿಟ್ಟ, ನೆಲಾ ಬಿಟ್ಟ, ಲಜ್ಜಿಗೇಡ್ಯಾಗಿ ತಿರಗತೇನು. ಊರ ಹುಡಿಗೇರಿಗೆಲ್ಲಾ ಅದೊಂದು ಬಸಣ್ಯಾನ ಹುಚ್ಚ. ಅವನ ಬೆನ್ನ ಹತ್ತಿ ಏನ ಸುಖ ಸುರಕೊಳ್ತಿ? ತಿನ್ನಾಕ ಕೂಳಿಲ್ಲಾ. ನನ್ನ ಹೊಲಾ ಮಾಡಿಕೊಂಡ ಬಿದ್ದಾನ. ಅವ ಏನ ಕೊಟ್ಟಾನು? ನನ್ನ ಬೆನ್ನ ಹತ್ತಿ ಬಾ. ಏನ ಬೇಕ ಅದನ್ನ ಬೇಡು, ಬೇಕಾದ್ದ ಬ್ಯಾಡಾದ್ದ ಉಡ, ಉಣ್ಣ, ತೊಡ. ಬೇಕಂದರ ತಗೊ ಹಜಾರ ರೂಪಾಯಿ ಸಂಚಕಾರ! ಕಿಣ್‌ಕಿಣ್ ಕೇಳಿಸ್ತು?

ನಿಂಗಿ : ಕೇಳಿಸ್ತು

ಗೌಡ : ಬಾ ಹಂಗಾರ ಬೆನ್ನ ಹತ್ತಿ.

ನಿಂಗಿ : ನಿನ್ನ ಬೆನ್ನ ಹತ್ತಿ ಬಂದರ ನಮ್ಮವ್ವಾ ನಮ್ಮಪ್ಪಾ ಏನಂದಾರು?

ಗೌಡ : ಹೇಳಿ ಕೇಳಿ ಬಡವರು. ಗೌಡನ ಮುಂದ ಏನಂದಾರು? ನನ್ನ ಬೆನ್ನ ಹತ್ತಿ ಬಾ, ದೋ ಮಜಲ ಮನಿ ಕಟ್ಟಿಸಿಕೊಡತೇನ. ತೂಗ ಮಂಚ ಮಾಡಿಸಿ ತೂಗಾಕೊಂದ ತೊತ್ತಾದರೂ ಇಡತೇನ. ಅದೂ ಬ್ಯಾಡಂದರ ಕಾಜಿನ ಕಪಾಟ ಮಾಡಿಸಿ ಅದರಾಗ ಇಡತೇನ. ಬೇಕಂದರ ಒಬ್ಬ ಗಂಡನ್ನ ಮಾಡತೇನ.

ನಿಂಗಿ : ಗಂಡನ್ನ ಮಾಡತಿ? ನಿನ್ನ ಜೋಡಿ ಇದ್ದಮ್ಯಾಲ ನನ್ನ ಯಾರ ಮಾಡಿಕೊಂಡಾರು?

ಗೌಡ : ಯಾಕ ಚಿಂತೀ ಮಾಡತಿ? ನಮ್ಮ ಗುರ್ಯಾ ಇದ್ದಾನ್ನೋಡು, ಅವಗ ನಿನ್ನ ಮದಿವೀ ಮಾಡತೇನ. ಹೆಸರ ಗಂಡಂದಾ, ಮಸರ ನಂದಾ, ಏನಂತಿ?

ನಿಂಗಿ : ಹಂಗಾದರ ಗುರ್ಯಾ ಇಲ್ಲೇ ಇದ್ದಾನ ಕರೀಲಿ? ಗುರ್ಯಾ….

(ಗುರ್ಯಾ ಪ್ರವೇಶಿಸುವನು. ಗೌಡ ಅವನನ್ನು ನೋಡಿ ಹೆದರುವನು)

ಗುರ್ಯಾ : ಸರಣ್ರೀ ಗೌಡಪ್ಪಾ… ನೀವು ಹೀಂಗ ಹೇಳ್ತೀರಂತ ತಿಳಕೊಂಡs ನಾ ಈಕೀನ ಮದಿವ್ಯಾಗಾವಿದ್ದೇನ್ರಿ.

ಗೌಡ : ಏ ಸೂಳೀಮಗನ  ಬಾರೋ ಇಲ್ಲಿ.

ಗುರ್ಯಾ : ಹೌಂದರಿ? ನಾ ನಮ್ಮಪ್ಪಗ ಹುಟ್ಟಿದಾವಂತ ತಿಳಕೊಂಡಿದ್ದೆ, ನಮ್ಮಪ್ಪ ನೀವs ಏನ್ರಿ ಮತ್ತ!

ಗೌಡ : ಯಾಕೋ ಮಗನ?

ಗುರ್ಯಾ : ಹಾ! ನಾ ಹೇಳೆದ್ದಿಲ್ರೆ, ನೀವs ನಮ್ಮಪ್ಪಂತ? ಯಾಕ್ಕರದಿ ಎಪ್ಪ?

ಗೌಡ : ಯಾಕೋ, ನಾಲಿಗೀ ಭಾಳ ಉದ್ದ ಬಿಡತಿ, ಈ ರಂಡಿ ಮುಂದ?

ಗುರ್ಯಾ : ಈಕಿ ರಂಡಿ ಅಲ್ಲರಿ. ನಾನs ಈಕಿ ಗಂಡ. ಇನ್ನs ಮದಿವ್ಯಾಗಿಲ್ಲರಿ. ನಿಶ್ಚಯ ಕಾರ‍್ಯ ಎಲ್ಲಾ ಮುಗದೈತ್ರಿ.

ಗೌಡ : ನಿನಗs ಈ ನಿಂಗಿಗೇ ಮದಿವಿ? ಯಾಕೋ, ಊರಾಗಿನ ಗಂಡಸರು ನಾವೆಲ್ಲಾ ಸತ್ತೀವೇನೊ?

(ನಿಂಗಿ ನಗುವಳು)

ಗುರ್ಯಾ : ಯಾಕ ನಾ ಗಂಡಸಲ್ಲರಿ?

ಗೌಡ : ಏ ಲಫಂಗಾ, ಬಾಯ್ಮುಚ್ಚತೀಯೇನೊ?….

ಗುರ್ಯಾ : ಎಲೀ ಇವರ! ಸುಳ್ಳಲ್ಲರೀ, ತಡೀರಿ, ಏ ಹೇಂತೇ ಇಲ್ಲಿ ಬಾರs. ಗೌಡರಿಗಿ ನಮ್ಮ ಮದಿವ್ಯಾಗಿನ್ನೂ ವಿಶ್ವಾಸಾಗಿಲ್ಲಂತ; ನನ್ನ ಕಾಲಬೀಳು.

(ನಿಂಗಿ ಗುರ್ಯಾನ ಕಾಲು ಬೀಳುವಳು)

ಮನೀತುಂಬ ಮಕ್ಕಳಾ ಹಡದು ನಗುನಗತ ಸಾಯುವಂಥವಳಾಗು-

ಗೌಡ : ನನ್ನ ಅನ್ನಾ ಉಂಡ ನನಗs ಎದರ ಮಾತಾಡೋವಷ್ಟ ಧೈರ್ಯ ಬಂತೇನೋ ನಿನಗ?

ಗುರ್ಯಾ : ಈ ಹೆಣ್ಣ ಭಾಳ ಕೆಟ್ಟರಿ. ಇದರ ಹಂತ್ಯಾಕಿದ್ದರ ಭಲೆ ಕೆಟ್ಟ ಧೈರ್ಯ ಬರತೈತಿ. ಅದಕ್ಕs ಮದಿವ್ಯಾಗತೇನ್ರಿ, ಅಲ್ಲೇನs?

(ಇಬ್ಬರೂ ನಗುವರು)

ಗೌಡ : ನಗಬ್ಯಾಡ, ನಿನ್ನ ಸಿಗದ ಹಾಕತೇನೀಗ.

ಗುರ್ಯಾ : ಏನರೆ ಹೇಳಬೇಕಾದರ ನಾವು ಮಾತಾಡೋದs ಇಲ್ಲರಿ. ಬರೀ ನಗತೇವ. ನಗ್ಯಾಗ ಏನ ಬೇಕಾದ್ದ ತಿಳಸ್ತೇವ. ಈಗ ತೋರಸಲ್ರಿ?

(ಪ್ರಶಾರ್ಥಕವಾಗಿ ನಗುವನು)

ಹೌಂದರಿ? ನಾ ಈಗ ಏನ ಕೇಳಿದೆ ಅಂದರ : ಹೇಂತೇ ಗೌಡರ ಬಂದೂಕ ಹೆಂಗ ಮಾತಾಡತೈತಿ?

(ನಿಂಗಿ ಕುಲುಕುಲು ನಗುವಳು)

ನಿಂಗಿ ಏನಂದಳಂದರ : ಪುಸ್‌ಪುಸ್ ಮಾತಾಡೈತಂತ!

ಗೌಡ : ಮಗನs ನಿಂಗ ಜೀವ ಬ್ಯಾಸರಾಗೇತೇನೊ?

ಗುರ್ಯಾ : ಆಗಿತ್ತರಿ. ನಿಂಗೀನ ಮದಿವ್ಯಾದರ ಬ್ಯಾಸರ ಹೋಗತೈತೇನಂತ ಹೊಲಕ್ಕ ಹೋದೆ. ಹೊಲಕ್ಕ ಅವಳು ಬಂದಿದ್ದಳು. ನಂದೂ ನಶೀಬ ನೋಡ್ರಿ. ನೀವು ಅರ ತಿಂಗಳಿಂದ ಬಂದೂಕ ಹಿಡಕೂಂಡ, ಚಿನ್ನ ಬೆಳ್ಳಿ ಹಿಡಕೊಂಡ ಹುಂಜಧಾಂಗ ಕೂಗೇ ಕೂಗಿದಿರಿ. ಆಕೇನೂ ತಿರಿಗಿ ನೋಡಲಿಲ್ಲ. ನೋಡೋಣಂತ ನಾನೂ ಹುಂಜಧಾಂಗ ಕೂಗಿದೆ. ಕೋಳಿ ಸನೇಕ ಬಂತು. ಗಪ್ಪನ ಹಿಡಕೊಂಡ ಮೈಮ್ಯಾಲ ಕೈಯಾಡಿಸಿದರ ಹೇಳಿ ಬಿಟ್ಟಿತಲ್ಲ; ಮಾವಾ – ಅಂತ. ಅದಕ್ಕs ಮದಿವ್ಯಾಗತೇನ್ರಿ. ನಕ್ಕೋತ ಹೇಳ್ತೀನಂತ ಸುಳ್ಳಂದೀರಿ ಮತ್ತ. ಖರೇನ ನಿಶ್ಚಯ ಆಗೇತ್ರಿ. ಬೇಕಂದರ ಕೇಳ್ರಿ ಬಸಣ್ಯಾನ ಅವನs ಹಿರಿಯಾ ಆಗಿದ್ದ.

ಗೌಡ : ನನಗ ಬಸಣ್ಯಾಂದೂ ಈ ರಂಡೀದೂ ಗೊತ್ತೈತೊ.

ಗುರ್ಯಾ : ಹೌಂದರಿ? ಬಸಣ್ಣಾ ಈಗ ಆರ ತಿಂಗಳಿಂದ ನಿಮ್ಮ ಹೊಲದಾಗs ಮಲಗತಾನ ಗೊತ್ತೈತ್ರಿ?

ಗೌಡ : ನಾಯೀ ಮಗನ;

(ಒದೆಯ ಹೋಗುವನು. ಗುರ್ಯಾ ಅದೇ ಕಾಲು ಹಿಡಿದೆಳೆದಾಗ ಗೌಡ ಬೀಳುವನು)

ಗುರ್ಯಾ : ನಾಯೀ ಮಗಾ ನಾನೋ ನೀನೋ ಲುಚ್ಚಾ?

ನಿಂಗಿ : ಗುಂಡಾ, ಗೌಡರಿಗಿ ಹಿಂಗೆಲ್ಲಾ ಮಾತಾಡಬಾರದು.

ಗುರ್ಯಾ : ಹೌಂದಲ್ಲ! ಗೌಡರ, ಬಸಣ್ಯಾನ ಹಂತ್ಯಾಕೊಂದು ಗಿಣಿ ಇತ್ತ ನೋಡ್ರಿ; ಅದನ್ನ ಗೌಡ್ತಿಗಿ ಕೊಟ್ಟಾನ್ರಿ. ಗೌಡ್ತಿ ಅದನ್ನೇನೋ ನುಂಗಿದಳಂತ, ಈಗ ಮೂರ ತಿಂಗಳಿಂದ ಗೌಡ್ತಿ ಹೊಟ್ಟಿ ಹಿಂಗಾಗೇತೆಂತ! ಅಲ್ಲೇನ ಹೇಂತೆ?

ನಿಂಗಿ : ನೋಡಿದರ ತಿಳೀತೈತಲ್ಲ.

ಗೌಡ : ಮಡಸ ನನ ಮಗನs. ಈ ಸುದ್ದಿ ಖರೇ ಇದ್ದರs ಬರೋಬರಿ. ಇಲ್ಲದಿದ್ದರ ಕಣ್ಣಿರ ಸುರಿಸೇನಂದರೂ ಒಂದ ಕಣ್ಣಿಡಾಣಿಲ್ಲ ನಿನ್ನ ಮುಖದಾಗ! ಮರೀಬ್ಯಾಡ. (ಹೋಗುವನು).

ಗುರ್ಯಾ : ಏ ಇನ್ನs ಚಪ್ಪಾಳಿ ಹೊಡದ ನಗತೇವು: ನಡೀರಿ.

(ಇಬ್ಬರೂ ಚಪ್ಪಾಳೆ ತಟ್ಟಿ ಕುಣಿಯುವರು)

(ಸಂಗೀತ)

* * * *