(ರಂಗದ ಮಧ್ಯದಲ್ಲಿ ತರಕಾರಿ ತುಂಬಿದ ಒಂದು ಬುಟ್ಟಿ, ಅದರ ಮಧ್ಯದಲ್ಲಿ ಒಂದು ಪಡವಲ ಕಾಯನ್ನು ಲಂಬವಾಗಿ ನೆಟ್ಟಿದೆ.)

ಸೂತ್ರಧಾರ : ಕೂತ ನಿಂತಂಥಾ ಬುದ್ದಿವಂತರಿಗೆಲ್ಲಾ ಶರಣು. ಈ ನಮ್ಮ ಹೊಸಾ ದೇವರು-ಕಾಣಸ್ತಾನಲ್ಲ, -ಹೆಸರ ಜೋಕುಮಾರಸ್ವಾಮಿ ಅಂತ. ಜೋಕುಮಾರನ ಸುದ್ದಿ ನಿಮಗೇನೂ ಹೊಸದಲ್ಲ. ಆದರ ಬ್ಯಾರೆ ದೇವರಿಗೂ ಈ ದೇವರಿಗೂ ಒಂದ ಫರಕ ಐತಿ. ಉಳಿದ ದೇವರು ಸ್ವಲ್ಪ ಮುಖಸ್ತುತಿ ಮಾಡಿದರ ಸಾಕು, ಬಾಯಿತುಂಬ ವರ ಕೊಡತಾವ. ಆದರ ಯಾಕೋ ಏನೋ ಒಂದ ವರಾನೂ ಖರೆ ಬಾಣಿಲ್ಲ. ಅವೂ ನಮ್ಮ ಮಂತ್ರಿಗಳ ಮಾತಿನ್ಹಾಂಗ ಹುಸಿಹೋಗತಾವಷ್ಟ. ಆದರ ಈ ನಮ್ಮ ದೇವರು ನೈವೇದ್ಯ ನೀಡಿದರ ಮಾತಾಡ್ಯಾನು ಅಂದೀರಿ, ಪೂಜಿ ಮಾಡಿ ಮ್ಯಾಲ ತೋಳ ತೆಕ್ಯಾಗ ಹಿಡಕೊಂಡರ, ಕೆಳಗ ಉಡೀತುಂಬ ಮಕ್ಕಳಾ ಕೊಟ್ಟಿರತಾನ! ಇಂಥಾ ವಿಪರೀತ ದೇವರ ಕಥೀನs ಇಂದಿನ ಆಟ. ಎಲ್ಲಿ? ಅಪೂ ಹಿಮ್ಯಾಳ್ಯಾ-

ಹಿಮ್ಮೇಳ : ಯಾಕ್ಕರದಿ ? ಯಾಕ್ಕರದಿ?

ಸೂತ್ರಧಾರ : ಆಟದ ಆರಂಭಕ್ಕೆ ಜೋಕುಮಾರಸ್ವಾಮಿ ಪೂಜೆ ಮಾಡಬೇಕು. ಸಾಮಗ್ರಿ ಸಮೇತ ಬಂದು, ಶಾಸ್ತ್ರದ ಪ್ರಕಾರ ಈ ದೇವರನ್ನ ಪೂಜಿಸುವಂಥವನಾಗು.

ಹಿಮ್ಮೇಳ : ದೇವರು ಎಲ್ಲಿ ಐತೆಂದಿ?

ಸೂತ್ರಧಾರ : ಇಲ್ಲಿ ಕಾಣ್ಸಾಣಿಲ್ಲಾ?

ಹಿಮ್ಮೇಳ : ಈ ದೇವರ?

ಸೂತ್ರಧಾರ : ಯಾಕ ಈ ದೇವರಿಗೇನಾಗೇತಿ?

ಹಿಮ್ಮೇಳ : ಆಟದ ಆರಂಭಕ್ಕ ಗಣೇಶನ್ನ ಪೂಜೀ ಮಾಡೋದ ಬಿಟ್ಟ, ಇಂಥಾ ದೇವರ ಪೂಜಿ ಮಾಡಂತಿ; ತಿಳೀಬಾರದ? ನಾಕ ಮಂದಿ ಬುದ್ದಿವಂತರೇನಂದಾರು?

ಸೂತ್ರಧಾರ : ಹುಚ್ಚಾ, ಎಲ್ಲಾ ದೇವರೂ ಒಂದs ಅಂದಮ್ಯಾಲ ಯಾವ ದೇವರ ಪೂಜಿ ಮಾಡಿದರೇನಾ? ಹಾಂಗ ನೋಡಿದರ ಈ ಜೋಕುಮಾರ ಸ್ವಾಮಿ ಗಣೇಶಗ ಖಾಸ ತಮ್ಮಂದಿರಾಗಬೇಕು. ಇಂದಿನ ಆಟದ ಕಥೀನೂ ಈ ದೇವರ್ದs. ಮೂಲ ದೇವರನ್ನ ಹಾಂಗೆಲ್ಲಾ ಮರೀಬಾರದಪಾ.

ಹಿಮ್ಮೇಳ : ಅಂಥಾದ್ದೇನಪಾ ಇವನ ಮಹಿಮಾ?

ಸೂತ್ರಧಾರ : ಈ ಹೊತ್ತಿನ ಶುಭಮುಹೂರ್ತದಲ್ಲಿ, ಮಕ್ಕಳಿಲ್ಲದ ಬಂಜೇರು ಬಂದು, ಪೂಜಾ ಮಾಡಿ, ಸ್ವಾಮೀನ ಪಲ್ಯಾ ಮಾಡಿ ಗಂಡಗ ತಿನ್ನಿಸಿದರ, ಅಪಾ ಹತ್ತೆಂಟ ಮಕ್ಕಳು ಹಾ ಅನ್ನೂದರೊಳಗ ಹುಟ್ಟತಾವ!

ಹಿಮ್ಮೇಳ : ಬರೋಬರಿ. ಅದಕ್ಕs ಹೆಂಗಸರ್ಯಾರೂ ಬಂದಿಲ್ಲ. ಫೆಮಿಲಿ ಪ್ಲಾನಿಂಗ್ ಸಮಾಚಾರ ನಿನಗ ಗೊತ್ತs ಇಲ್ಲೇನ?

ಸೂತ್ರಧಾರ : ಅಪೂ ಹಿಮ್ಯಾಳ್ಯಾ. ಗಂಡಂದಿರ ಪ್ರೀತಿ ಕಳಕೊಂಡಂಥಾ ಬಾಲೇರು ಬಂದು, ಸ್ವಾಮೀನ್ನ ಪಲ್ಯಾಮಾಡಿ ತಿನ್ನಿಸಿದರ ಗಂಡಂದಿರೆಲ್ಲಾ ಹಳೇ ನಾಯೀಹಾಂಗ ಮನ್ಯಾಗ ಬಿದ್ದಿರತಾರ!

ಹಿಮ್ಮೇಳ : ಹಾಂಗಿದ್ದರೆ ಇದು ಭಾಳಮಂದಿ ಹೆಂಗಸರಿಗೆ ಗೊತ್ತಿಲ್ಲ ಬಿಡು.

ಸೂತ್ರಧಾರ : ಇಂಥಾ ದೇವರಿಗೆ ಏನೇನೂ ಅನ್ನಬಾರದು. ಪೂಜಾ ಸಾಮಗ್ರಿ ತಗೊಂಬಾ.

ಹಿಮ್ಮೇಳ : ತಾ ಅಂದರ ತಂದೇನಪಾ, ಆದರ ಮಂದಿ ಬೈದರ ಆ ಬೈಗಳ್ನೆಲ್ಲಾ ನಿನ್ನ ಹೆಸರಿಗೇ ಜಮಾ ಮಾಡಾವ ನಾನು, ತಾ ಅಂದಿ?

ಸೂತ್ರಧಾರ : ತಗೊಂಬರುವಂಥವನಾಗು.

ಹಿಮ್ಮೇಳ : ಘನ ಲಜ್ಜಿಗೇಡಿ ನೀನೂ! ಏನೇನ ತರಲಿ?

ಸೂತ್ರಧಾರ : ಕರಿಕಿ, ಪತ್ರಿ.

ಹಿಮ್ಮೇಳ : ಕರಿಕಿ ಪತ್ರಿ? ನಿಮ್ಮ ದೇವರು, ಯಾವದಾದರು ದನದ ಜಾತಿ ಇದ್ದಿರಬೇಕೇನ? ಹಾಂಗಿದ್ದರ ಹೊಲದಕಡೆ ಹೊದಡ ಬಿಡಲ್ಲ. ಮೇದ ಬರಲಿ.

ಸೂತ್ರಧಾರ : ಹುಚ್ಚಾ ಬೆಂಕಿಯಂಥಾ ದೇವರಿಗೆ ಚೇಷ್ಟಾ ಮಾಡಬಾರದು. ಶುಚಿರ್ಭೂತನಾಗಿ ಕರಿಕಿ ಪತ್ರಿ ತರುವಂಥವನಾಗು.

ಹಿಮ್ಮೇಳ : ಹಾಂಗs ಆಗಲಿ, ಸೂತ್ರಧಾರ ನಾನಾದರು ಕರಿಕಿ ಪತ್ರಿ ತಂದೇನ್ನೋಡು.

ಸೂತ್ರಧಾರ : ಇನ್ನು ಮೇಲೆ ಪನ್ನೀರು ತರುವಂಥವನಾಗು.

ಹಿಮ್ಮೇಳ : ಕಣ್ಣೀರಾ?

ಸೂತ್ರಧಾರ : ಪನ್ನೀರು, ಪನ್ನೀರು.

ಹಿಮ್ಮೇಳ : ತಿಳೀತ ಬಿಡು.

ಸೂತ್ರಧಾರ : ಏನ ತಿಳೀತು?

ಹಿಮ್ಮೇಳ : ಹಜಾಮರ ಬಟ್ಟಲದಾಗಿರತಾವ, ಅದs ನೀರ ಹೌಂದಲ್ಲ?

ಸೂತ್ರಧಾರ : ಹುಚ್ಚಾ, ಪರಿಶುದ್ಧವಾದ ನೀರಿಗೆ ಪನ್ನೀರು ಪನ್ನೀರು ಅಂತಾರ. ಅಂಥಾ ಪನ್ನೀರು ತಗೊಂಬರುವಂಥವನಾಗು.

ಹಿಮ್ಮೇಳ : ಸೂತ್ರಧಾರ, ಅವನ್ನಾದರು ತಂದಿದ್ದೇನ್ನೋಡು.

ಸೂತ್ರಧಾರ : ಇನ್ನುಮೇಲೆ, ಫಲಪುಷ್ಪ ತಗೊಂಡು, ಪೂಜಾ ಮಾಡಲಿಕ್ಕೆ ಒಬ್ಬ ಗರತೀನ ಕರಕೊಂಡು ಬರುವಂಥವನಾಗು.

ಹಿಮ್ಮೇಳ : ನಿಮ್ಮ ದೇವರ ಭಾರೀ ತುಟ್ಟೀದಪಾ! ಫಲ ತಂದೇನು, ಪುಷ್ಪ ತಂದೇನು. ಗರತಿ ಬೇಕಂತಿ ಎಲ್ಲಿಂದ ತರಲಿ? ಶುದ್ಧ ಗರತೀನs ಬೇಕಂದಿ?

ಸೂತ್ರಧಾರ : ಹೌಂದ್ಹೌಂದು, ಶುದ್ಧ ಗರತೀನs ಆಗಬೇಕು.

ಹಿಮ್ಮೇಳ : ಅದರಾಗ ಸೊಲ್ಪ ಬೆರಕಿಯಿದ್ದರ?

ಸೂತ್ರಧಾರ : ಛೇ ಛೇ ಹಾಂಗೆಲ್ಲಾ ಹೇಳಬಾರದು.

ಹಿಮ್ಮೇಳ : ಸೂತ್ರಧಾರ, ಫಲಪುಷ್ಪ ತಂದೇನ್ನೋಡು. ಗರತಿ ಸಮಾಚಾರ ನನ್ನಿಂದ ಆಗಾಣಿಲ್ಲ ತಗಿ. ಬೇಕಂದರ ಈಗs ಯಾರೂ ಇಲ್ಲ. ನಾನs ಹೆಂಗಸಂತ ತಿಳಕೊಂಡ ಸಾಗಸೋ ಹಾಂಗಿದ್ದರ ಸಾಗಸು.

ಸೂತ್ರಧಾರ : ಅಪಾ, ಹಿಂಗ್ಯಾಕಂತೀಯೋ?

ಹಿಮ್ಮೇಳ : ಹೇಂಗೇನ? ಇಂಥಾ ದೇವರ ಪೂಜಿಗಿ ಮಾನ ಮರ್ಯಾದಿ ಇದ್ದವರು ಯಾರ ಬಂದಾರ ಹೇಳು? ಇದ್ದ ಮಾತ ಹೇಳಬೇಕಂದರ ಈ ಊರಾಗ ಖರೆ ಗರತೇರ ಯಾರಾದರು ಇದ್ದರ ಅದು ನಮ್ಮಂಥಾ ನಾಕೈದ ಮಂದಿ ಹುಡಗೋ ರಂತs ತಿಳಿ ಮತ್ತ! ಅಲ್ಲಾ, ನಿಮ್ಮ ದೇವರಿಗಿ ಅದ್ಯಾಕಿಷ್ಟ ಹೆಂಗಸರ ಖಯಾಲಿ?

ಸೂತ್ರಧಾರ : ಹಾಂಗs ಆಗಲಿ, ನೀನs ಪೂಜೀಮಾಡು.

(ಸೂತ್ರಧಾರ ಮೇಳದೊಂದಿಗೆ ಹಾಡುತ್ತಾನೆ. ಹಾಡಿನೊಂದಿಗೆ ಹಿಮ್ಮೇಳದವನು ಪೂಜಿ ಮಾಡುತ್ತಾನೆ.)

ಮೇಳ :

ಸುವ್ವೀ ಬಾ ಸುಂದರಾ| ಸ್ವಾಮಿ
ಸುವ್ವೀ ಬಾ ಚಂದಿರಾ
ಸುವ್ವೀ ಬಾರಯ್ಯಾ ಜೋಕುಮಾರ ಸ್ವಾಮಿ ||

ಸೊಪ್ಪಿನ ದೇವರೊ ಬೈಗಳ ಮಂಗಳಾರತಿಯವನೊ
ಉಪ್ಪು ಹುಳಿ ಖಾರ ನೈವೇದ್ಯದವನೊ ||

ಮಳೆಯಾಗಿ ಬಿದ್ದವನೆ ಸ್ವಾಮಿ ಬೆಳೆಯಾಗಿ ಎದ್ದವನೆ
ಎಳಿನಗಿ ನಕ್ಕವನೆ ಬೇಲೀ ಹೂವಿನೊಳಗೆ ||

ಹುಟ್ಟಿದೆರಡ ದಿನಕ ಪಟ್ಟದ ಹುಡಿಗೇರನೆಳೆದವನೆ
ಮಂದಿ ಬಂದಾರೊ ಕುಡುಗೋಲ ಹಿಡದಾ ||

ಹಿಮ್ಮೇಳ : ಇಂಥಾ ಹಲ್ಕಾ ದೇವರನ್ನ, ಅದೂ ಇಂಥಾ ಸಾರ್ವಜನಿಕ ಸ್ಥಳದೊಳಗ ಹೆಂಗ ಪೂಜೀ ಮಾಡಂತಿಯೋ?

ಸೂತ್ರಧಾರ : ಅದೆಲ್ಲಾ ಮನುಷ್ಯರೊಳಗೆ ಇರತದೇನಪಾ, ದೇವರೊಳಗ ಸಾಚಾ ದೇವರು, ಹಲ್ಕಾ ದೇವರು ಇರೋದಿಲ್ಲಾ.

ಹಿಮ್ಮೇಳ : ನೀ ಈ ಹೊತ್ತ ಏನ ಮರತ ಬಂದೀದಿ ತಿಳೀತ ನನಗ.

ಸೂತ್ರಧಾರ : ಅದೇನಪಾ?

ಹಿಮ್ಮೇಳ : ನಾಚಿಕಿ ಬಿಟ್ಟ ಬಂದೀದಿ, ಹೌಂದಲ್ಲ?

ಸೂತ್ರಧಾರ : ನಾಚಿಕೀ ಹಿಡಿದರ ನಮ್ಮ ದೇವರು ಸಿಟ್ಟಾಗತಾನ. ಸುಮ್ಮನ ಪೂಜಿ ಮಾಡುವಂಥವನಾಗು.

ಹಿಮ್ಮೇಳ : ಹೂ ಹೊಡಿ.

ಮೇಳ :

ಹುಟ್ಟಿದ್ಮೂರನೆ ದಿನಕ ಮುಟ್ಟಾದ ಹುಡಿಗೇರನೆಳೆದವನೆ
ಮಾವರು ಬಂದಾರೊ ಕೋಲ ಕೊಡಲಿ ಹಿಡದಾ||

ನಾಕನೆ ದಿನದೊಳಗ ಸ್ವಾಮಿ ಮುದಿಕೇರನೆಳೆದವನೆ
ಮುದುಕರು ಬಂದಾರೊ ಗುಂಡಕಲ್ಲಾ ಹಿಡದಾ||

ಹುಟ್ಟಿದೈದನೆ ದಿನಕ ಸ್ವಾಮಿ ಐದೇರನೆಳೆದವನೆ
ಹೈದರು ಬಂದಾರೊ ಹಗ್ಗ ಬಲಿಯ ಹಿಡದಾ||

ಹುಟ್ಟಿದಾರನೆ ದಿನಕ ಸ್ವಾಮಿ ನಾರೇರನೆಳೆದವನೆ
ಕರದ ತಂದಾರೊ ಐದನೂರ ಮಂದಿ||

ಹಿಮ್ಮೇಳ : ಸಡ್ಲ ಬಿಟ್ಟರ ನೀನೂ ಭಾರಿ ಹಾಡವಪಾ! ಹಾಡಾಕ ಯಾರಿಗಿ ಬರಾಣಿಲ್ಲಾ? ಹಾಡ್ಲಿ?-
ಮೋಟರದಾಗ ಇದ್ದವನೆ ಥೇಟರದಾಗ ಬಿದ್ದವನೆ
ಮನೆಯಿಲ್ಲೇನಯ್ಯಾ ಮಲಗಲಿಕ್ಕೆ?||

ಸೂತ್ರಧಾರ : ಯಾಕ? ನಾ ಚಂದದಿಂದ ಹಾಡಲಿಲ್ಲೇನು?

ಹಿಮ್ಮೇಳ : ಓಹೊ! ಭಾಳ ಚಂದದಿಂದ ಹಾಡಿದಿ. ಆದರ ಸೊಲ್ಪ ಕಡಿಮಿ ಚಂದದಿಂದ ಹಾಡು ಅಂತ. ಇಲ್ಲದಿದ್ದರ ಕೂತ ಮಂದಿಗಿ ಹಾಡಿನರ್ಥ ತಿಳದರ ಏನ ಮಾಡತಿ? ಇಂಥಾ ಮಾತ ತಿಳೀಧಾಂಗ ಹೇಳಬೇಕಪಾ!

ಸೂತ್ರಧಾರ : ಅಪಾ, ಈ ಯಾವ ಮಹಾದೇವರ ಮಹಿಮೆಯನ್ನು ನಾನು ಗದ್ಯದಲ್ಲಿ ವರ್ಣನೆ ಮಾಡಬೇಕೇನು?

ಹಿಮ್ಮೇಳ : ಇಲ್ಲದಿದ್ದರ ಇದು ಭಾಳ ರಿಸ್ಕೀ ದೇವರೋ ಹುಚ್ಚಾ.

ಸೂತ್ರಧಾರ : ಹಾಂಗಿದ್ದರ ಕೇಳುವಂಥವನಾಗು. ಈ ಯಾವ ನಮ್ಮ ಮಹಾದೇವರು, ಸೊಪ್ಪಿನ ದೇವರು, ಮಳೆ ದೇವರು ಬೆಳೆ ದೇವರು, ಬೈಗಳ ದೇವರು ಜೋಕುಮಾರ ಸ್ವಾಮಿ,

ಹಿಮ್ಮೇಳ : ಓಹೋ!

ಸೂತ್ರಧಾರ : ಹುಟ್ಟಿದೆರಡೇ ದಿನದಲ್ಲಿ ಪಟ್ಟಣದ ಹುಡಿಗೇರನ್ನ,

ಹಿಮ್ಮೇಳ : ಆಹಾ!

ಸೂತ್ರಧಾರ : ಎಳೆದಾ-

ಹಿಮ್ಮೇಳ : ಇಲ್ಲಿ ತಪ್ಪಿದಿ.

ಸೂತ್ರಧಾರ : ಯಾಕ?

ಹಿಮ್ಮೇಳ : ಎಂಥಾ ಅಪರೂಪ ದೇವರ ಬೆನ್ನ ಹತ್ತೀದಿಯೋ? ಮನಶೇರಿಗೊಂದ ಬ್ಯಾರೇ ಉದ್ಯೋಗಿಲ್ಲಾ ಎಳೀತಾರ. ನಿಮ್ಮ ದೇವರೂ ಎಳೆಯೋದಂದರ! ಹುಡಿಗೇರ್ನ ಎಳದಾ, ಮುದಿಕೇರ್ನ ಎಳದಾ! ಹೋಗಲಿ, ಅದನ್ನಷ್ಟ ಮುಚ್ಚಿ ಹೇಳಾಕ ಆಗಾಣಿಲ್ಲೇನ?

ಸೂತ್ರಧಾರ : ಎದನ್ನ?

ಹಿಮ್ಮೇಳ : ಎಳದಾ ಎಳದಾ ಅನ್ನೋದನ್ನ? ಇಂಥಾ ಮಾತಿಗಿ ಈ ಕಡೆ ಅಶ್ಲೀಲ ಅಂತಾರಪಾ. ನೋಡಿಲ್ಲ ಯಾರ‍್ಯಾರ ಕುಂತಾರ……. ಇಂಥಾ ಮಾನವಂತರ ಸಭಾದೊಳಗ ಅಶ್ಲೀಲ ಅನ್ನಬಾರದು. ಅದಕ್ಕೊಂದ ಉಪಾಯ ಹೇಳಲಿ? ಎಳದಾ ಎಳದಾ ಬಂದಲ್ಲೆಲ್ಲಾ ಲವ್ ಮಾಡಿದಾ ಲವ್ ಮಾಡಿದಾ ಅನ್ನು.

ಸೂತ್ರಧಾರ : ಹಾಂಗs ಆಗಲಿ. ಈ ಯಾವ ನಮ್ಮ ಮಹಾದೇವರು…..

ಹಿಮ್ಮೇಳ : ಸೊಪ್ಪಿನದೇವರು ಆ ದೇವರು ಈ ದೇವರು ಇತ್ಯಾದಿ ದೇವರು-ಮುಂದ?

ಸೂತ್ರಧಾರ : ಹುಟ್ಟಿದ ಮೂರನೇ ದಿನದಲ್ಲಿ ಏನು ಮಾಡಿದಾ?

ಹಿಮ್ಮೇಳ : ಏನು ಮಾಡಿದಾ?

ಸೂತ್ರಧಾರ : ಮುಟ್ಟಾದಂಥಾ……….

ಹಿಮ್ಮೇಳ : ಮತ್ತ ಅಶ್ಲೀಲ! ಆ ಪದ ತಗದು ಗಟ್ಟೀ ಹುಡಿಗೇರು ಅನ್ನು.

ಸೂತ್ರಧಾರ : ಹುಟ್ಟಿದ ಮೂರನೇ ದಿನದಲ್ಲಿ ಗಟ್ಟಿ ಹುಡಿಗೇರನ್ನ,

ಹಿಮ್ಮೇಳ : ಲವ್ ಮಾಡಿದಾ.

ಸೂತ್ರಧಾರ : ನಾಕನೇ ದಿನದಲ್ಲಿ ಮುದಿಕೇರನ್ನ,

ಹಿಮ್ಮೇಳ : ಲವ್ ಮಾಡಿದಾ.

ಸೂತ್ರಧಾರ : ಐದನೇ ದಿನದಲ್ಲಿ ಐದೇರನ್ನ,

ಹಿಮ್ಮೇಳ : ಲವ್ ಮಾಡಿದಾ.

ಸೂತ್ರಧಾರ : ಆರನೇ ದಿನದಲ್ಲಿ ನಾರೇರನ್ನ,

ಹಿಮ್ಮೇಳ : ಲವ್ ಮಾಡಿದ. ಅಪ್ಪಾ ಸೂತ್ರಧಾರ, ನಿಮ್ಮ ದೇವರು ಪ್ರಾಸಕ್ಕಾಗಿ ಅವರೆನ್ನೆಲ್ಲಾ ಲವ್ ಮಾಡಿದ್ನೊ? ಅಥವಾ ನೀನs ಹೊಂದಿಸೀಯೊ? ಇರಲಿ, ಮುಂದೇ ನಾಯ್ತು?

ಸೂತ್ರಧಾರ : ಆವಾಗ ಏಳನೇ ದಿನ-ಹೆಂಡಂದಿರ ಗಂಡರು ಕೊಡಲಿ ಹಿಡಿಕೊಂಡ ಬಂದರು. ಮುದಕೇರ ಮುದುಕರು ಗುಂಡಕಲ್ಲ ಹಿಡಕೊಂಬಂದರು. ಐದೇರ ಹೈದರು ಹಗ್ಗದ ಬಲಿ ಹಿಡಕೊಂಬಂದರು. ಹಿಂಗ ಎಲ್ಲರೂ ಎಣಿಸಿ ಐನೂರ ಜನಾ ಆಗಿ ಎಲ್ಲಿ ಬಂದರು?

ಹಿಮ್ಮೇಳ : ಜೋಕುಮಾರಸ್ವಾಮೀ ಹತ್ತರ ಬಂದರು.

ಸೂತ್ರಧಾರ : ಬಂದೇನ ಮಾಡಿದರು?

ಹಿಮ್ಮೇಳ : ಅದಿರ್ಲಿ, ಮುಂದಿಂದ ನೀ ಹಾಡಿನಾಗs ಹೇಳೋದು ಒಳ್ಳೇದೇನಪಾ, ಯಾಕಂದರ ನಿನ್ನ ಗದ್ಯ ಸೊಲ್ಪ ಡೇಂಜರಸ್ ಕಾಣತದ.

ಸೂತ್ರಧಾರ : ಹಾಂಗಿದ್ದರ ಕೇಳುವಂಥವನಾಗು. ಆ ಐನೂರ್ಮಂದಿ ಜೋಕುಮಾರ ಸ್ವಾಮೀ ಹತ್ತಿರ ಬಂದೇನ ಮಾಡಿದರು?

ಹಿಮ್ಮೇಳ : ಏನ ಮಾಡಿದರು?

ಮೇಳ :

ಎಣಿಸಿ ಐನೂರ್ಮಂದಿ ಅವರಿಗಿ ಸಾವಿರ ಕೈಗಳು
ಹಿಡದ ಕಡದಾರೋ ಎಳೀ ದೇವರನ್ನಾ||

ಸಾವಿರ ಕೈಗಳು ಕೈಗೊಂದ ಕೊಡಲಿ ಕುಡಗೋಲು
ಹೊಡದ ಕೊಂದಾರೊ ಎಳೀ ದೇವರನ್ನಾ||

ಕೊಂದಾರೆ ಒಗೆದಾರೋ ಸ್ವಾಮಿನ ಕಡದಾರೆ ಒಗೆದಾರೊ
ನೆತ್ತರ ಹರಿದಾವೊ ಹೊಳಿಹಳ್ಳ ತುಂಬಿ||

ನೆತ್ತರ ಬಿದ್ದಲ್ಲಿ ಆಹಾ ಬೆಳಿಗಳು ಎದ್ದಾವೊ
ಮಣ್ಣು ಮಣ್ಣೆಲ್ಲಾ ಹಸೀಹಸರ ತುಂಬಿ ||

(ಅಷ್ಟರಲ್ಲಿ ಹೊಲೇರ ಶಾರಿ ನರ್ತಿಸುತ್ತ ಬಂದು ದೇವರಿಗೆ ನಮಸ್ಕರಿಸಿ ದೇವರ ಬುಟ್ಟಿ ಹೊರಬೇಕೆನ್ನುವಾಗ ಹಿಮ್ಮೇಳದವನು ಗಮನಿಸುವನು)

ಹಿಮ್ಮೇಳ : ನಿಮ್ಮ ದೇವರೂ ಅಡ್ಡಿಯಿಲ್ಲಪಾ! ಖರೇ ಗಿರಾಕೀನ್ನs ಹಿಡಕೊಂಡ ಬಂದಾ ನ್ನೋಡು.

(ಅವಳ ಬಳಿಗೆ ಓಡಿಹೋಗಿ)

ಅಂದವಾದ ಮಂದಿರವನ್ನು ಬಿಟ್ಟು
ಸುಂದರವಾದ ಈ ಸಭಾಂಗಣಕ್ಕೆ ಬಂದು
ಬಂಧುರವಾದ ಈ ದೇವರನ್ನು ಹೊತ್ತು ಒಯ್ಯುವ
ಸುಂದರೀ ನೀನು ಯಾರು? ನಿನ್ನ ನಾಮಾಂಕಿತವೇನೂ?
ಹೇಳುವಂಥವಳಾಗು-

ಶಾರಿ : ಇದ್ಯಾವದ? ಪುಸ್ತಕಧಾಂಗ ಮಾತಾಡತೈತಿ!

ಹಿಮ್ಮೇಳ : ಸೂತ್ರಧಾರ, ನೀನs ಬಾರಪಾ. ನಮಗಿದು ಬಗಿಹರಿವೊಲ್ದು!

ಸೂತ್ರಧಾರ : ಅಮ್ಮಾ, ಬಂದಂಥವಳು ನೀನು ಧಾರು? ನಿನ್ನ ನಾಮಾಂಕಿತವೇನು? ಚಂದದಿಂದ ತಿಳಿಸುವಂಥವಳಾಗು.

ಶಾರಿ : ಸೂತ್ರಧಾರ, ತಿಳಿಸಾಕs ಬೇಕ?

ಸೂತ್ರಧಾರ : ಹೌಂದು, ತಿಳಿಸಾಕs ಬೇಕು.

ಶಾರಿ : ಸೂತ್ರಧಾರ, ಮುದುಕರು ಬಂದು ನನಗ ಏ ಪೋರೀ ಏ ಪೋರೀ ಅಂತಾರ. ಸಣ್ಣ ಹುಡುಗರು ಬಂದು ಏ ಮುದುಕೀ ಏ ಮುದಿಕೀ ಅಂತಾರ. ಎರಡೂ ಅಲ್ಲದ ಇಂಥಾ ಸಭ್ಯರು ಬಂದು ಹೊಲೇರ ಸೂಳಿ ಶಾರೀ ಶಾರೀ ಅಂತಾರ ನೋಡು.

ಸೂತ್ರಧಾರ : ಅಮ್ಮಾ ನೀ ಶಾರವ್ವಂತ ನಮಗಾದರು ತಿಳೀತು. ಕೂತಂಥಾ ರಸಿಕರಿಗಾದರೂ ತಿಳೀತು. ಆದರ ನೀ ಇಲ್ಲಿಗ್ಯಾಕ ಬಂದಿ? ಜೋಕುಮಾರ ಸ್ವಾಮೀನ್ನ ಯಾಕ ಒಯ್ತಿ? ಅದನ್ನಾದರು ತಿಳಿಸುವಂಥವಳಾಗು.

ಶಾರಿ : ಅಪ್ಪಾ ಸೂತ್ರಧಾರ, ಜೋಕುಮಾರಸ್ವಾಮಿ ದೊಡ್ಡ ದೇವರು. ಬಂಜೇರಿಗೆ ಮಕ್ಕಳಾ ಕೊಡೋ ದೇವರು. ಗಂಡ ಇಲ್ಲದವರಿಗೆ ಗಂಡನ್ನ ಕೊಡೋ ದೇವರು.

ಹಿಮ್ಮೇಳ : ಹೌಂದು, ನಿನಗ ಮಿಂಡನ್ನ ಕೊಡೋ ದೇವರು.

ಶೌರಿ : ಯಾರಾದರು ಮಕ್ಕಳಿಲ್ಲದ ಬಂಜೇರು ಬಂದು ಒಯ್ದಾರಂತ ಕಾದ ನೋಡಿದೆ, ಯಾರೂ ಬರಲಿಲ್ಲ. ನಾನಾದರೂ ಒಯ್ತೇನಿ. ನನಗೂ ವಯಸ್ಸಾಗಿ ಗಿರಾಕಿ ಕಡಿಮಿ ಆಗ್ಯಾವ, ಈ ಸ್ವಾಮೀನನ್ನ ಪಲ್ಲೆ ಮಾಡಿ ನೀಡಿದರ ಇದ್ದ ಗಿರಾಕಿ ಆದರೂ ನನ್ನ ಮನೀ ಮುಂದ ಬಿದ್ದಿರತಾವ!

ಹಿಮ್ಮೇಳ : ಅಂತೂ ಈ ದೇವರ ಉಪಯೋಗ ಐತಿ ಅಂಧಾಂಗಾಯ್ತು.

ಸೂತ್ರಧಾರ : ಶಾರವ್ವ, ಹಾಂಗಿದ್ದರ ನೀನಾದರು ಸ್ವಾಮೀನ್ನ ಒಯ್ಯುವಂಥವಳಾಗು.

(ಶಾರಿ ಬುಟ್ಟಿ ಹೊರುವಳು)

ಹಿಮ್ಮೇಳ : ಏ ತಡಿ ತಡಿ,

(ಓಡಿ ಹೋಗಿ ಅವಳ ಹಿಂದೆ ಆಶೀರ್ವಾದ ಮಾಡುವ ಭಂಗಿಯಲ್ಲಿ ನಿಂತುಕೊಂಡು)

ಮಗನೇ ಸೂತ್ರಧಾರ, ನಿನ್ನ ಪೂಜೆಯಿಂದ ನನಗೆ ಪ್ರೀತಿ ಆಗಿದೆ. ನಿನ್ನ ಆಟ ಸಾಧ್ಯವಾದರೆ ಸುಸೂತ್ರ ಸಾಗಲಿ ಅಂತ ಆಶೀರ್ವಾದ ಮಾಡತೇನು; ಇನ್ನು ಮೇಲೆ ನೀನು ನಿನ್ನ ಆಟ ಸುರುಮಾಡುವಂಥವನಾಗು.

(ಸೂತ್ರಧಾರ ನಮಿಸುತ್ತಾನೆ)