ಮೇಳ :
ಮೂಡಿ ಬಾರಯ್ಯಾ ಬಾರೊ ಗಿಣಿರಾಮ||
ಮೂಡಣ ಗಾಳಿಗೆ ಸುಖಿಸಿ
ಚಂದ್ರ| ಬೆಳದಿಂಗಳೊಳು ಭರಿತನಾಗಿ
ಬಿರಿತಂಥ ಭೂಮಿಗೆ
ಚಿಗುರ ಹೂವಿನ ಚೈತ್ರ
ಬೇರೆ ನಾಡಿನ ಹಕ್ಕಿ ತಾರೊ||
ಎದಿಯೊಳಗೆ ತುಂಬ್ಯಾವ ಮಳಲಾ
ಜೋತ| ಬಿದ್ದಾವ ಒಣಗಿಡಕ ಗೂಡಾ
ಮೂರು ಸಂಜಿಯ ರಾತ್ರಿ
ಕೂಗ್ಯಾವ ಮರಿಗೂಸ
ಹೌಹಾರಿ ನಿಂತೇನ ಬಾರೊ||
(ಪಡಸಾಲೆಯಲ್ಲಿ ಗೌಡ್ತಿ, ಒಳಗಡೆ ಅಡಿಗೆ ಮನೆಯಲ್ಲಿ ಬಸ್ಸಿಯಿದ್ದಾಳೆ. ಬಸ್ಸಿ ಒಳಗಿನಿಂದಲೇ ಮಾತಾಡುತ್ತಾಳೆ.)
ಗೌಡ್ತಿ : ಬಸ್ಸೀ-
ಬಸ್ಸಿ : ಬಂದಿನೇ ಎವ್ವ.
ಗೌಡ್ತಿ : ಲಗೂ ಬಾ. ಸುಣ್ಣದಾಗ ಎಷ್ಟಹೊತ್ತ ಕೈ ಹಾಕಿಕೊಂಡ ಕೂರತೀಯೇ?
ಬಸ್ಸಿ : ಕೈ ಒರಸಿಕೊಂಡರ ಮುಗೀತ.
ಗೌಡ್ತಿ : ಬಾ, ಇನ್ನs ನೆಲಾ ಗುಡಿಸಬೇಕು. ಹೊಚ್ಚಲಾ ತೊಳೀಬೇಕು.
ಬಸ್ಸಿ : (ಹೊರಗೆ ಬಂದು)
ನೀ ಜಳಕಾ ಮಾಡಿದಿ?
ಗೌಡ್ತಿ : ಯಾಕ ಮಾಡಿಧಾಂಗ ಕಾಣ್ಸಾಣಿಲ್ಲಾ? ಎಷ್ಟ ಮಾಡಿದರೂ ಅಷ್ಟs. ಅಂಗಾಲಿನಿಂದ ನೆತ್ತೀತನಕ ನೀರಡಿಸಿಧಾಂಗ ಆಗತೈತಿ. ಗೌಡ ಬರೂದರಾಗs ಎಲ್ಲಾ ಮುಗೀಬೇಕ. ಶಿವೀಗಿ ಏನ ಹೇಳಿ ಕಳಿಸಿದಿ?
ಬಸ್ಸಿ : ಹೋಗು ಸೂತ್ರಧಾರನ ಹಂತ್ಯಾಕ ಜೋಕುಮಾರ ಸ್ವಾಮೀನ್ನ ಇಸಕೊಂಬಾ ಅಂತ ಹೇಳಿ ಕಳಿಸಿದೆ.
(ಮುಂದಿನ ಮಾತು ನಡೆದಾಗ ಬಸ್ಸಿ ನೆಲ ಗುಡಿಸುವುದು, ಸಾರಿಸುವುದು, ರಂಗವಲ್ಲಿ ಹಾಕುವುದು, ಒಲೆ ಹೂಡುವುದು ಮಾಡುತ್ತಾನೆ. ಗೌಡ್ತಿ ಆಗೀಗ ನೆರವಾಗುತ್ತಾಳೆ.)
ಗೌಡ್ತಿ : ಬಸ್ಸೀ,
ಬಸ್ಸಿ : ಯಾಕೆವ್ವ?
ಗೌಡ್ತಿ : ಈ ಪೂಜಿ ಬರೋಬರಿ ಆದರ ಮಕ್ಕಳಾದಾವೇನ?
ಬಸ್ಸಿ : ಎವ್ವಾ ಸುಳ್ಳ ಯಾಕೆ ಹೇಳೇನು? ತೆಗ್ಗಿನ ಮನಿ ದೇವೀರಿಲ್ಲಾ?
ಗೌಡ್ತಿ : ನನ್ನ ಮದಿವೀ ದಿನಾನs ಮದಿವ್ಯಾಗಿತ್ತು; ಅಕೀನs ಹೌಂದಲ್ಲ?
ಬಸ್ಸಿ : ಅದs ದೇವೀರಿ.
ಗೌಡ್ತಿ : ಆಕಿಗಿ ಮಕ್ಕಳಾಗ್ಯಾವಲ್ಲ.
ಬಸ್ಸಿ : ಹೌಂದ ಖರೆ. ಅದೂ ಒಂದ ದೊಡ್ಡ ಕತೀನs ಎವ್ವ. ಆಕೀಗೂ ನಿನ್ಹಾಂಗ ಭಾಳ ದಿನಾ ಮಕ್ಕಳs ಆಗಲಿಲ್ಲಾ. ಇನ್ನೊಂದ ಮದಿವ್ಯಾಗಬೇಕಂತ ಗಂಡ ತಯ್ಯಾರಾದ. ಅಲ್ಲಿಲ್ಲಿ ಕನ್ಯಾ ನೋಡಿ ಬಂದರು. ಒಂದ ದಿನಾ ದೇವೀರಿ ಹೊಲಕ್ಕೆ ಬಂದ ಮಾರಿಗಿ ಸೆರಗ ಹಾಕಿಕೊಂಡ ಅಳತಿದ್ದಳು. ಯಾಕs ಮಗಳs ಹಿಂಗ ಅಳತಿ?’ ಅಂದೆ. ’ಏನ ಹೇಳ್ಲೆ ಹಡದವ್ವಾ, ನನ್ನ ಗಂಡ ಇನ್ನೊಂದ ಮದಿವ್ಯಾಗತಾನಂತ. ದೇವರ ನನ್ನ ಹಣ್ಯಾಗ ಮಕ್ಕಳಾ ಬರದಿಲ್ಲಾ’ ಅಂದ್ಲು. ನೀ ಏನs ಹೇಳs ಎವ್ವಾ, ಬಂಜಿ ಯಾರಾ, ತಾಯಿ ಯಾರಾ-ನನಗ ತಿಳೀದs ಇರತೈತಿ? ಅಷ್ಟುದೂರ ನಿಂತರ ಇಲ್ಲಿ ಹರಗಿದ ಹೊಲಧಾಂಗ ನಾರತಿದ್ದಳ ದೇವೀರಿ!
ಗೌಡ್ತಿ : ಎದಕ್ಕೆಲ್ಲಾ ಒಂದೊಂದ ಹಂಗಾಮ ಇರತಾವs. ಹೌಂದನ್ನೊ ಹಂಗಾಮ ಮೀರಿದರ ಹೆಂಗ ಹೇಳು?
ಬಸ್ಸಿ : ನೀ ಏನs ಅನ್ನು. ಸಾವಿರ ಕೊಟ್ಟರೂ ಗೌಡನ ನಡಾವಳಿ ಹೇಳಬ್ಯಾಡ ತಗಿ. ಊರ ತುಂಬ ಹೊಲಾ ಇಟ್ಟಕೊಂಡ ಏನ ಮಾಡೋದೈತಿ? ಸತ್ತಮ್ಯಾಲ ಇದನೆಲ್ಲಾ ಯಾರಿಗಿ ಮಾಡತಾನ ಹೇಳು, ತಿಳೀಬಾರದ?- ಮನ್ಯಾಗ ಎಳೀ ಹುಡಿಗಿ, ಹಣೀಮ್ಯಾಲ ಕೈ ಇಟ್ಟುಕೊಂಡ ಸೋ ಅಂತ ಹಾಡಿಕೊಂಡ ಕುಂತಿರ್ತಿ. ಹೇಂತೀ ಮುಖಾ ನೋಡೋ ಗೌಡಾ ಅಂದರ ಸೂಳೇರ ಮಣಕಾಲ ನೋಡೇನು ಅಂತಾನ!
ಗೌಡ್ತಿ : ಎದಕ್ಕೆಲ್ಲಾ ದೈವಬಲಾ ಬೇಕ ಬಾ.
ಬಸ್ಸಿ : ಎವ್ವಾ, ಮೊದಲs ನನ್ನ ಬಾಯಿ ಕಡಿಮೀದ, ಅದನ್ಯಾಕ ಮಾತಾಡಸ್ತಿ? ಬೀಜ ಬಲಾನs ಇಲ್ಲದಿದ್ದರ ದೈವಬಲ ಏನ ಮಾಡೀತು? ಹೆಂಗಸಿನ ಹೊಟ್ಟೀ ಮ್ಯಾಲ ಗೆರೀ ಮೂಡಸಾಕ ತಾಕತ್ತ ಬೇಕೇನವಾ! ಬರಿ ಬಾಯ್ಲೆ ಜಬರ ಮಾಡಿದರ ಏನ ಬಂತು? ನೋಡಬಾರದ ನನ್ನ ಗಂಡನ್ನ? ಮದಿವ್ಯಾಗಿ ಇಷ್ಟ ವರ್ಷಾಯ್ತು,- ಒಂದ ದಿನಾ ನನಗ ಬಾರಕೋಲ ತೋರಿಸಿಲ್ಲ. ಆದರೂ ಇನ್ನs ಅಲ್ಲಿ ಬರ್ತಾನಂದರ ಇಲ್ಲಿ ಗಾಳಿಹೊಕ್ಕ ಬಳ್ಳೀಹಾಂಗ ನಡಗತೇನ. ಸುಳ್ಳಲ್ಲ ಎವ್ವಾ, ಅವನ ಉಚ್ಚೇ ದಾಟಿದರ ಮುದಿಕೇರ ಸೈತ ಬಸರಾಗತಾರ!
ಗೌಡ್ತಿ : ಬೇಡಿ ಬಂದೀ ಬಾ. ಸೆರಗೊಡ್ಡಿದರ ಶಿವಾ ನನ್ನ ಉಡ್ಯಾಗ ಕಸಬರಿಗಿ ಹಾಕಿ ಕಳಿಸ್ತಾನ.
ಬಸ್ಸಿ : ಅಷ್ಟ ಯಾಕ ಮನಸಿಗಿ ಹಳಹಳಿ ಮಾಡಿಕೊಳ್ತಿ? ಈ ಪೂಜಿ ಹುಸಿ ಹೋದರ ನನ್ನ ಹೆಸರ ಬಸ್ಸಿ ಅಲ್ಲಾ ಅಂತ ತಿಳಿ.
ಗೌಡ್ತಿ : ಅಂಧಾಗ ದೇವೀರಿಗಿ ಏನ ಹೇಳಿದಿ?
ಬಸ್ಸಿ : ಹಾ! ದೇವೀರಿ ಕಣ್ಣೀರ ಹಾಕಿ ಅಳತಿದ್ಲು- ’ಯಾಕ ಮಗಳs?’ ಅಂದೆ. ’ಏನ ಹೇಳ್ಲೆ ಹಡದವ್ವಾ, ನನ್ನ ಗಂಡ ನನ್ನ ಮ್ಯಾಲೊಂದ ಸವತೀನ ತರತಾನಂತ’- ಅಂದ್ಲು. ’ಸವತೀನ ಯಾಕ ತರತಾನಂತ?’ ’ನನಗ ಬಂಜೀ ಅಂತ ಬೈಯಾಕ’ ಅಂತ್ಹೇಳಿ ಅಳಾಕ ಸುರು ಮಾಡಿದಳು. ನಾನs ನೋಡೇನಲ್ಲ ಎವ್ವಾ ಗಂಡಸರ ಹಂತ್ಯಾಕ ಬಂದರ – ದೇವೀರೀ ಕಣ್ಣ, ಬಳ್ಳಿ ಎಲೀ ಹಾಂಗ ನಡಗತಾವ! ಮಕ್ಕಳಾಗಾಣಿಲ್ಲಂದರ ಹೆಂಗ ನಂಬಲಿ?
ಗೌಡ್ತಿ : ಎಷ್ಟ ಸಲ ಹೇಳೇನಿ : ಈ ಮನೀಗಿ ಮಕ್ಕಳ ಬೇಕೋ ಗೌಡಾ-ಅಂತ. ಹೇಳಿದಾಗೊಮ್ಮಿ ’ದಣಿದೀದಿ ಆರಾಮ ತಗೋ ಹೋಗ’ಂತಾನ. ಹಾಡಾಹಗಲಿ ಮಕ್ಕಳ ಸೈತ ಈ ಕಡೆ ಬರಾಕ ಹೆದರತಾವ. ಮನ್ನಿ ಉಡೀತುಂಬ ಹುರಗಡ್ಲಿ ತಗೊಂಡ ಆಡೋ ಮಕ್ಕಳ್ನ ಕರದs ಕರದೆ. ಒಂದs ಒಂದ ಹೊಲ್ಯಾರ ಕೂಸಾದರೂ ತಿರಿಗಿ ನೋಡೀತೇನ! ಓಡಿ ಹೋಗೋ ಮಕ್ಕಳ್ನ ನೋಡಿ ಎದಿ ಬೆವರಿತು. ಅಂಗಳದಾಗ ಹುರಗಡ್ಲಿ ಚೆಲ್ಲಿ ತಲೀಮ್ಯಾಲ ಕೈಹೊತ್ತ ’ಶಿವನs ಏನ ಹೆಣ್ಣಿನ ಜನ್ಮ?’ ಅಂದೆ. ನನ್ನ ಉಸರಿನ ಜಳ ಶಿವನಿಗೆ ಎಲ್ಲಿ ತಾಗೀತ ಹೇಳು? ಅವನ ಎದ್ಯಾಗ ಬರೀ ಕಲ್ಲs ತುಂಬ್ಯಾವೋ ಏನೊ!
ಬಸ್ಸಿ : ನೋಡs ಎವ್ವಾ, ನನಗ ಎಂಥಾ ಹೊಲತಿ ಅನ್ನವೊಲ್ಯಾಕ, ಮನೀ ಅಂದ ಮ್ಯಾಲ ಕಲ ಕಲ ಸಪ್ಪಳಿರಬೇಕು, ಮಕ್ಕಳು ಅಳತಿರಬೇಕು, ತಾಯಿ, ಮಕಿಕಳಿಗಿ ದೆವ್ವಿನ ಅಂಜಿಕಿ ಹಾಕತಿರಬೇಕು-ಅಂದರ ಚೆಂದ. ಇದೇನ ತಾಯಿ? ರಾತ್ರಿ ಈ ಕಡೆ ಬಂದರ ಒಂದs ಮನಿ; ಒಂದs ದೀಪ-ಮಿಣಕ್ ಮಿಣಕ್! ಈಗ ಆರಲ್ಯೊ? ಆಗ ಆರಲ್ಯೊ? ಶಿವನ್ನ ಕರೀಲ್ಯೊ? ಶಂಭೋ ಅನ್ನಲ್ಯೋ? ಮನ್ಯಾಗ ಮಂದಿ ಇದ್ದಾರೊ ಇಲ್ಲೋ! ಇದ್ದವರೆಲ್ಲ ಬರೀ ನಿಟ್ಟುಸಿರನಾಗs ಮಾತಾಡತಾರೊ!
ಗೌಡ್ತಿ : ದೇವೀರಿಗಿ ಏನ ಹೇಳದಿ?
ಬಸ್ಸಿ : ಚಿಂತೀ ಮಾಡಬ್ಯಾಡ ಮಗಳs, ಜೋಕುಮಾರಸ್ವಾಮೀ ಪೂಜೀ ಮಾಡು ಅಂದೆ. ಪೂಜಿ ಮಾಡಿ ಸ್ವಾಮೀನ್ನ ಮಾಡಿದಳು. ಗಂಡಗ ನೀಡಿದಳು. ತಿಂದ್ನೊ ಇಲ್ಲೊ? ತಲೀ ಕೆಟ್ಟವರ್ಹಾಂಗ ಬಾಯಿ ತೆರಕೊಂಡ ದೇವೀರೀ ಬೆನ್ನ ಹತ್ತಿದನಲ್ಲ! ಯಾವಾಗ ನೋಡಿದರೂ ಗಂಡ ದೇವೀರಿ ಸೀರಿ ಸೆರಗಿನಾಗs ಇರತಿದ್ದ! ಆಮ್ಯಾಲ ಏನ ಕೇಳ್ತಿ? ಬುದವಾರಕೊಂದ, ಶನಿವಾರಕೊಂದ ಕೂಸs ಕೂಸ! ಹಡಿಯೋದಂದರ ತತ್ತಿ ಇಟ್ಟಷ್ಟ ಸರಳs ಎವ್ವಾ!
ಗೌಡ್ತಿ : ಆಕಿಗೂ ಜೋಕುಮಾರ ಸ್ವಾಮೀಂದs ಮಕ್ಕಳಾದುವು?
ಬಸ್ಸಿ : ಜೋಕುಮಾರ ಸ್ವಾಮಿ ಸಣ್ಣ ದೇವರಲ್ಲs ಎವ್ವಾ.
ಗೌಡ್ತಿ : ಬಸ್ಸೀ, ಯಾರಾದಾದರೂ ಮನ್ಯಾಗ ಗಿಣೀ ಐತೇನ?
ಬಸ್ಸಿ : ಗಿಣಿ? ಹಾ! ಬಸಣ್ಯಾ ಇಲ್ಲಾ ಎವ್ವಾ? ಅವನ ಹಂತ್ಯಾಕೊಂದ ಗಿಣೀ ಐತಿ. ಭಾಳ ಚೆಂದ ಐತಿ. ಪಂಜರದಾಗಿಂದ ಬಿಟ್ಟರೂ ಹಾರಿ ಹೋಗಾಣಿಲ್ಲ,-ಅವನ ಹೆಗಲ ಮ್ಯಾಲs ಕುಂತಿರತೈತಿ!
ಗೌಡ್ತಿ : ಹೌಂದೇನ?
ಬಸ್ಸಿ : ಎವ್ವ, ಅದಕ್ಕ ಮಾತ ಬ್ಯಾರಿ ಕಲಿಸ್ಯಾನ. ತೊದಲಿ ತೊದಲಿ ಎಂಥಾ ಚೆಂದ ಮಾತಾಡತೈತಿ!
ಗೌಡ್ತಿ : ಅಯ್ ಶಿವನ! ಖರೇ ಏನ?
ಬಸ್ಸಿ : ಖರೇಖರೇನ. ಊರ ಹುಡಿಗೇರೆಲ್ಲಾ ನೀರ ತರಾಕ ಹೋದಾಗೊಮ್ಮಿ ಅದನ್ನ ಮಾತಾಡಿಸಿ ಬರತಾರ!
(ಶಿವಿ ಬರುವಳು)
ಶಿವಿ : ಕೆಲಸ ಕೆಟ್ಟಿತಲ್ಲs ಎವ್ವ.
ಗೌಡ್ತಿ : ಯಾಕ?
ಶಿವಿ : ನಾವು ಹೋಗೋದರೊಳಗ ಹೊಲೇರ ಶಾರಿ ಹೋಗಿದ್ದಳಂತ ಆ ಸೂತ್ರಧಾರನ ಹಂತ್ಯಾಕ. ಜೋಕುಮಾರ ಸ್ವಾಮೀನ್ನ ಇಸಕೊಂಡ ಹೋದಳಂತ.
ಗೌಡ್ತಿ : ಹಾಂಗs ನೀ ಹೊಲಗೇರಿಗ್ಯಾಕ ಹೋಗಿ ಬರಲಿಲ್ಲ?
ಶಿವಿ : ಹೊಲಗೇರಿಗಿ ನಾ ಹೆಂಗ ಹೋಗಲಿ?
ಗೌಡ್ತಿ : ನನ್ನ ಸಲುವಾಗಿ ಹೋಗs. ಇನ್ನೊಂದ ವರ್ಷದ ತನಕ ಸ್ವಾಮೀ ಹೆಸರಿನಿಂದ ಹಾಂಗs ಹೆಂಗ ಕುಂತಿರಲಿ? ನಿನಗ ಉಡೀತುಂಬ ಆಯಾರ ಮಾಡತೇನ ಹೋಗs.
ಶಿವಿ : ಗಂಡುಳ್ಳ ಗರತೇರ ಸೂಳಿ ಮನೀಗಿ ಹೆಂಗ ಹೋದಾರs ಎವ್ವಾ!
ಗೌಡ್ತಿ : ಖರೆ, ತಾ ಸಾಯದs ಸ್ವರ್ಗ ಸಿಗಾಣಿಲ್ಲಂತ. ಇಲ್ಲೇ ಇರ್ರಿ; ಬರತೇನ
(ಹೋಗುವಳು)
* * *
Leave A Comment