(ಗಿಡ, ಗುಡಿಸಲು, ನಾಲ್ವರೂ ಬಂದೂಕು ತಗೊಂಡು ಬರುತ್ತಾರೆ)

ಒಬ್ಬ : ಕುರಿ ಬಂದಿಲ್ಲೇನ್ರೊ?

ಇನ್ನೊಬ್ಬ : ಅದೆಲ್ಲಿ ಬರತೈತಿ! ಕಾಣಾಕಾಣಾ ಸಾಯಾಕ ಯಾರ ಬರತಾರ ಹೇಳು?

ಮತ್ತೊಬ್ಬ : ಹಸವಾಗೇತಿ ನೀ ಊಟಾ ಯಾಕೊ ತರಲಿಲ್ಲಾ?

ಒಬ್ಬ : ಗೌಡ್ತಿ ಕೊಡೋದಿಲ್ಲಂದಳಪಾ, ಕಂಬಳಿ ಕೊಟ್ಟಳು, ತಗೊಂಬಂದೆ.

ಮಗದೊಬ್ಬ : ಇನ್ನೇನ ಬೆಳೆತನಕ ಹಸದ ಇಲ್ಲೇ ಕುಂತಿರೋದಾ?

ಒಬ್ಬ : ಬೆಳತನಕ ಯಾಕೋ, ಬಸಣ್ಯಾ ಈಗ ಬರತಾನ ತಡಿ.

ಇನ್ನೊಬ್ಬ : ಬಂದಾನಂದಿ?

ಮತ್ತೊಬ್ಬ ; ಇನ್ನೊಂದ ತಾಸೆರಡರಾಸ ನೋಡಿ ಹೋಗೋಣಂತ.

ಮಗದೊಬ್ಬ : ಆಮ್ಯಾಲ ಬಂದರ?

ಒಬ್ಬ : ಆವ ಅಂಜಬುರುಕಲ್ಲ, ತಡೀರೋ ಬಂದs ಬರತಾನ.

ಇನ್ನೊಬ್ಬ : ಛೇ ಛೇ, ಮನ್ನಿ ಮನ್ನಿ ಅವರಪ್ಪನ್ನ ಕೊಂದಿವಿ, ಇಂದ ಮತ್ತ ಮಗನ್ನ ಕೊಲ್ಲೋದಂದರ ಇದ ಭಾಳ ಪಾಪದ ಕೆಲಸಪಾ.

ಮತ್ತೊಬ್ಬ : ಪಾಪ ಪುಣ್ಯ ನಮಗ್ಯಾಕಪಾ? ನಾವಂದರ ಹೇಳಿ ಕೇಳಿ ಗೌಡರ ನಾಯಿ ಗೊಳೇನಪಾ! ಬೊಗಳಂದರ ಬೊಗಳಿದಾ, ಕಚ್ಚಂದರ ಕಚ್ಚಿದಾ.

ಇನ್ನೊಬ್ಬ : ಹಾಂಗ ನೋಡಿದರ ಬಸಣ್ಯಾಂದೇನ ತಪ್ಪೈತಿ?

ಮಗದೊಬ್ಬ : ಸಾಲಾ ಇಸಕೊಂಡ ಹೊಲಾ ಬರಕೊಟ್ಟದ್ದ ನನಗ ಗೊತ್ತs ಇಲ್ಲಂತಾನಲ್ಲೊ?

ಇನ್ನೊಬ್ಬ : ಅಲ್ರೋ, ನೀವs ನೋಡೀರಿ, ನಮ್ಮ ಗೌಡ, ಎಷ್ಟಷ್ಟ ಮಂದೀ ಹೊಲಾ ಹೆಂಗೆಂಗ ಮುಣಗಿಸಿಕೊಂಡಾನಂತ. ಮತ್ತ ಬಸಣ್ಯಾಂದs ತಪ್ಪಂತೀರಿ.

ಒಬ್ಬ : ಅದೆಲ್ಲಾ ನಮಗ್ಯಾಕಪಾ? ಹೇಳಿದಷ್ಟ ಮಾಡಿದರಾಯ್ತು. ಗೌಡರ ಚಾಕು ಹಿಡಿಯೋವಾಗ “ಗೌಡರs ನಿಮ್ಮ ಅನ್ನಕ್ಕ ನಾ ಎಂದೂ ಎರಡ ಬಗೆಯೋ ದಿಲ್ಲರಿ” ಅಂತ ಹನುಮಪ್ಪನ ಬೂದೀ ಮುಟ್ಟೀರಿ, ನೆನಪೈತಿಲ್ಲ?

ಇನ್ನೊಬ್ಬ : ಆತ ಬಿಡ್ರೆಪಾ

(ಒಮ್ಮೆಲೆ ಅವರ ಮಧ್ಯದಲ್ಲಿ ಬಸಣ್ಯಾ ಮೇಲಿನಿಂದ ಜಿಗಿಯುತ್ತಾನೆ. ಎಲ್ಲರೂ ಗಡಬಡಿಸಿ ಎದುರಿಸಬೇಕೆನ್ನುವಷ್ಟರಲ್ಲಿ ಬಸಣ್ಯಾ ಬಂದೂಕು ಕಡಿದುಕೊಂಡಿರುತ್ತಾನೆ. ಎಲ್ಲರೂ ಹೆದರಿ ಚೆಲ್ಲಾಪಿಲ್ಲಿಯಾಗುತ್ತಾರೆ.)

ಬಸಣ್ಣ : (ಬಂದೂಕು ತೋರಿಸುತ್ತ)

ನಮ್ಮ ದೇವರ ಹೆಸರೇನ ಗೊತ್ತೈತಿ? ಢಂಢಂ ದೇವರು! ಇವಗ ಇಲ್ಲೊಂದ ಕುದರಿ ಐತಿ. ಅದರ ಹಿಂದೊಂದ ಬೋಲ್ಟ್ ಐತಿ. ಎದುರಿಗಿ ಯಾರಿದ್ದರೂ ಸ್ವಾಮಿ ಒಮ್ಮೆ ಢಂ ಅಂದರಾಯ್ತು, ಎದುರಿಗಿದ್ದವನು ಏನ ಮಾಡ್ತಾರ ಹೇಳ್ರಿ? ………… ಮರಿಹಾಕ್ತಾರ ಮರಿ. ಸೂಳೀ ಮಕ್ಕಳ್ರಾ, ಗೌಡ ಎಲ್ಲಿದ್ದಾನ ಹೇಳ್ತೀರಲ್ಲ?

ಒಬ್ಬ : (ಹೆದರುತ್ತ)

ಶಾರೀ ಮನ್ಯಾಗ.

ಬಸಣ್ಣ : ನನ್ನ ಮುಗಸಬೇಕಂತ ಕಳಿಸಿದ್ದ ಹೌಂದಲ್ಲ?

ಒಬ್ಬ : ಬಸಣ್ಣಾ….

ಬಸಣ್ಣ : ನಮ್ಮಪ್ಪನ ಇಲ್ಲಿ ದೆವ್ವ ಕೊಂದಿತ್ತಲ್ಲ?

ಒಬ್ಬ : ಬಸಣ್ಣಾ ನಮ್ಮನ್ನ ಕೊಲ್ಲಬ್ಯಾಡೋ, ನಿನ್ನ ಕಾಲ ಬೀಳತೇವೋ!

ಇನ್ನೊಬ್ಬ : ಬಸಣ್ಣಾ, ತಪ್ಪಾಯ್ತೊ ಎಪ್ಪಾ, ನೀ ಹೇಳಿಧಾಂಗ ಕೇಳ್ತೀವೋ.

ಬಸಣ್ಣ : ಹೇಳಿಧಾಂಗ ಕೇಳ್ತೀರಿ?

ಇನ್ನೊಬ್ಬ : ಹೂನs ಎಪ್ಪ.

ಬಸಣ್ಣ : ಹಾಂಗಾದರ ಕುಂಡೀ ಎಳಕೊಂಡ ಗೌಡಗ ಸುದ್ದೀ ಹೇಳಿ, ಅವನ ಚೌಕರಿ ಬಿಡತೀರಿ?

ಒಬ್ಬ : ಬಂದೂಕ ಕೊಡ್ತಿ ಹಂಗಾದರ?

ಬಸಣ್ಣ : ಬಂದೂಕ ಬೇಕ?

(ಗುರಿ ಹಿಡಿಯುವನು)

ಎಲ್ಲರೂ : ಬ್ಯಾಡೋ ಎಪ್ಪಾ, ಬ್ಯಾಡೋ.

ಬಸಣ್ಣ : ಹೂ ಎಳಕೊಂಡ ಹೋಗ್ರಿ ಮತ್ತ. ಇನ್ನೊಮ್ಮಿ ಈ ಕಡೆ ಕಾಲ ಹಾಕಿದರ ನಿಮ್ಮನ್ನ ಜೀವಸಹಿತ ಬಿಡಾಣಿಲ್ಲs…..

(ಎಲ್ಲರೂ ಕುಂಡಿ ಎಳೆಯುತ್ತ ಹೋಗವರು. ಸ್ವಲ್ಪ ಹೊತ್ತು ಅತ್ತಿತ್ತ ಅಡ್ಡಾಡಿ, ಅವರು ಬಿಟ್ಟು ಹೋದ ಕಂಬಳಿ ಹೊತ್ತುಕೊಂಡು ಗುಡಿಸಲಲ್ಲಿ ಮಲಗುತ್ತಾನೆ. ತುಸು ಹೊತ್ತಾದ ಬಳಿಕ ಗೌಡ್ತಿ ಊಟ ತಗೊಂಡು ಬರುತ್ತಾಳೆ.)

ಗೌಡ್ತಿ : ಆಳಿಗಿ ಹೇಳಿಕಳಸದs ಒಂದ ಗಳಿಗಿ ನೀನs ಮನೀಗ ಬಂದಿದ್ದರ ಏನಾಗತಿತ್ತು? ಊಟ ಮಾಡಿ ಬರತಿರಲಿಲ್ಲಾ? ಬಸಣ್ಯಾನ ಜೋಡಿ ಜಗಳಾ ಮಾಡಿದೆಂತ, ಇಲ್ಲಿ ಬಂದೆಂತ. ಜಗಳಾ ನಾಳಿ ಮಾಡಿದ್ದರ ಆಗತಿರಲಿಲ್ಲಾ? ಎಷ್ಟ ಹೇಳೇನಿ ಇಂದ ಬರಾಕs ಬೇಕ ಊಟಕ್ಕಂತ. ಮುದ್ದಾಂ ತಪ್ಪಿಸಿಧಾಂಗ ಮಾಡತಿ, ಏಳ ಊಟ ಮಾಡೇಳ.

(ಗುಡಿಸಲ ಅಸ್ಪಷ್ಟ ಬೆಳಕಿನಲ್ಲಿ ಊಟ ಬಡಿಸುವಳು. ಬಸಣ್ಣ ಸುಮ್ಮನೇ ಊಟಾ ಮಾಡುವನು.)

ಹೊರಗ ಹೆಂತಾ ಚೆಂದ ಬೆಳದಿಂಗಳೈತಿ. ಹೊರಗ ಬಂದ ಉಣಬಾರದ? ಗೌಡಾ, ನನ್ನ ಖುಷಿ ಹೆಂಗ ಹೇಳಲಿ? ನಮ್ಮ ಚಂದ್ರನ್ನ ನೋಡೋ ಗೌಡಾ, ಹೆಂಗ ದೊಡ್ಡಾವಾಗಿ ಮೂಡ್ಯಾನ! ಏನೋ ಗಿಣೀ ಹಾಂಗ ಕೂಗತೈತಿ! ಅದ್ಯಾವ ಹಕ್ಕಿ? ಯಾಕ ಮಾತಾಡವೊಲ್ಲಿ? ನಾ ಒಬ್ಬಾಕೀನs ಮನೀ ಬಿಟ್ಟ ಬಂದದ್ದಕ್ಕ ಸಿಟ್ಟ ಮಾಡೀದೀ ಹೌಂದಲ್ಲ? ಗೌಡಾ, ನನ್ನ ಕರಳ ಬ್ಯಾನಿ ಹೆಂಗ ತಿಳಸಲಿ? ನೀ ಮೊದಲs ಗಂಡಸು; ಮಕ್ಕಳ ಬ್ಯಾಡಾ, ಮನೀ ಬ್ಯಾಡ, ಇದ್ದೇನಂತೀ ಒಂದs ಗೂಗೀಹಾಂಗ. ನಾ ಎಷ್ಟಂದರೂ ಹೆಂಗಸು. ಮಕ್ಕಳಿಲ್ಲದ ಹೆಂಗಿದ್ದೇನು? ಬಸಣ್ಯಾನ ಹಂತ್ಯಾಕ ಒಂದ ಗಿಣಿ ಐತೆಂತ, ಬಸ್ಸಿ ಹೇಳಿತಿದ್ಲು. ಮಂದೀ ಗಿಣಿ ನಮ್ಮ ಗಿಣಿ ಹೆಂಗಾದೀತು? ನಮ್ಮ ಗಿಣಿ ನನಗೀಗ ಕಣ್ಣಮುಂದ ಕಾಣಾಕ ಹತ್ತೇತಿ! ಇನ್ನs ಉಣ್ಣೋದ ಮುಗೀಲಿಲ್ಲೇನ ಅಂದರ?

(ಬಸಣ್ಣ ಗೌಡ್ತಿಯ ಸರಗು ಹಿಡಿದೆಳೆಯುವನು. ಗೌಡ್ತಿ ಸಂಭ್ರಮಿಸುತ್ತ ಹೊರಗೋಡಿ ಬರುವಳು. ಹಾಡು ಸಾಗುತ್ತಿದ್ದಂತೆ ಬೆಚ್ಚಿ ತಪ್ಪಿಸಿಕೊಳ್ಳಲೆತ್ನಿಸುವಳು.)

ಬಸಣ್ಣ :

ಏನ ಬಗಿ ಬಯಲಕ ಬಿದ್ದೆ ಭಾಳ ದಿನಾಕ
ಹುಣಿವೀ ಚಂದ್ರ ಮೂಡಿಧಾಂಗ ಮರತೇಕಾ

ಕಣ್ಣೀಗಿ ದೀಪಾ ಹಚ್ಚಿಧಾಂಗ ನಿನ್ನ ಬೆಳಕಾ||

ತೋಳ ತೊಡಿ ನಿವಳ ಸುದ್ದಾ ಬಾಳಿದಿಂಡಾ
ಎದೀಮ್ಯಾಗ ನಿಂಬಿಹಣ್ಣಾ
ಬಂದs ಸಿಕ್ಕೆ ಕೈಲಾಸ ಹರದ ಬಿದ್ಧಾಂಗ||

ಏನ ಹೆಣ್ಣ ಏನ ಬಣ್ಣ ನಡ ಸಣ್ಣಾ
ಮಾವಿನ ಹೋಳಿನಂಥಾ ಕಣ್ಣಾ
ಕೈಯ ಮ್ಯಾಲ ಕೈಯ ಹೊಡದ ಬಾರs ಕೂಡೋಣ||

ಗೌಡ್ತಿ : ಯಾಕೋ ಚೆಲುವಾ? ಯಾರ ಮುಂದ ಮಾತಾಡ್ತಿ ಗೊತ್ತೈತಿಲ್ಲ? ಗಂಡುಳ್ಳ ಗರತಿ, ಊರ ಗೌಡತೀನ ತರಿಬಿ ಕೇಳತಿ; ಎಚ್ಚರಿದ್ದೀಯಿಲ್ಲೋ? ಗೌಡ ಎಲ್ಲಿದ್ದಾನ ಹೇಳತಿಯಿಲ್ಲ?

ಬಸಣ್ಣ : ಅಬಬಬ! ನಿನ್ನ ಸರದಾರ ಗೌಡ ಬೇಕಾಗಿದ್ದಾ? ಊರಾಗೆಲ್ಲಾರ ಬಿದ್ದಿರಬೇಕು; ಹುಡುಕ್ಕೋಹೋಗು.

ಗೌಡ್ತಿ : ಈ ಕಂಬಳಿ ಹೆಂಗ ಬಂತ ನಿನ್ನ ಹಂತ್ಯಾಕ?

ಬಸಣ್ಣ : ನಮ್ಮಪ್ಪನ್ನ ಕೊಲ್ಲಿಸಿಧಾಂಗ ನನ್ನ ಕೊಲ್ಲಸಬೇಕಂತ ನಾಕ ಮಂದಿ ನಾಯಿಗಳನ್ನ ಕಳಿಸಿದ್ದಾ. ಅವರೆಲ್ಲಾ ಹೆದರಿಕೊಂಡ ಬಂದೂಕ ಕಂಬಳಿ ಬಿಟ್ಟ ಹೋದರು.

ಗೌಡ್ತಿ : ಇಂಥ ಪುಂಡ ನೀ ಯಾವನೋ? ಹೆಸರೇನ? ಕುಲ ಏನ? ಗೋತ್ರ ಏನ? ಹೇಳು.

ಬಸಣ್ಣ : (ನಗುತ್ತ)

ಮಾತಿನಾಗ ಹೇಳಲೊ? ಹಾಡಿನಾಗ ಹೇಳಲೊ?

ಗೌಡ್ತಿ : (ಹೆಜ್ಜೆ ಮುಂದಿಟ್ಟು)

ಹಲ್ಲ ಕಿಸೀಬ್ಯಾಡ. ಜೀವದ ಮ್ಯಾಲಿನ ಆಸೇ ಬಿಟ್ಟ ಹೇಳ ನನ್ನ ಕಾಲಿಗಿ.

ಬಸಣ್ಣ :

ಕಾಲಗೆಜ್ಜಿ ಝಣಾ ಝಣಾ ಹೆಜ್ಜಿ ಎದಿಮ್ಯಾಗ ಚೆಲ್ಲಿ
ಕೇಳತೀ ನಮ್ಮ ಹೆಸರಾ
ನಮ್ಮ ಹೆಸರಾ
ನಮ್ಮ ಹೆಸರ ಬರಕೊಳ್ಳ ನಿನ್ನ ಎದಿಯೊಳಗ||

ಊರ ಬಾಲೇರ ಬಾಯಿತುಂಬ ನಮ್ಮ ಹೆಸರಾ
ಅವರು ಹೇಳತಾರ
ಬಾಲೇರ ಕರೀತಾರ
ಬಾ ಬಾರೊ ಬಸಣ್ಯಾ ಮಾವ||

ಊರ ಗರತೇರ ಬಾಯಿತುಂಬ ನಮ್ಮ ಹೆಸರಾ
ಕದ್ದ ಕರೀತಾರ
ಕದ್ದ ಹೇಳತಾರ
ಬಂದ ಹೋಗೋ ಬಸಣ್ಯಾ ದೊರಿ||

ಊರ ಮುದಿಕೇರ ಬಾಯಿತುಂಬ ನಮ್ಮ ಹೆಸರಾ
ಅವರು ಹೇಳತಾರ
ಅವರು ಕರೀತಾರ
ಬಂದ ಹೋಗೋ ಜೋಕುಮಾರಾ||

ಹುಡಿಗಿ ನಾ ಹೇಳಿದ್ದಾದರೂ ತಿಳದ ಬಂತೇನ? ಊರ ಬಾಲೇರಿಗೆಲ್ಲಾ ನನ್ನ ಹೆಸರು ಬಸಣ್ಯಾ ಅಂತ ಗೊತ್ತು. ಗರತೇರಗಿ ಗೊತ್ತು. ಮ್ಯಾಲ ಮುದಿಕೇರಿಗಿ ಗೊತ್ತು. ಗೊತ್ತಿದ್ದೂ ಗೊತ್ತಿಲ್ಲದವರ‍್ಹಾಂಗ ಹಗರಣಾ ಮಾಡಬ್ಯಾಡ. ಅಂತಃ ಕರಣದಿಂದ ಬಾಯಿ ತೆರದ ಕೇಳತೇನು. ಇಲ್ಲನ್ನಬ್ಯಾಡ, ಗುಡಸಲಕ ಬಂದ ನಾಕ ಮಾತ ಮಾತಾಡಿ, ಎಲೀ ಅಡಿಕಿ ತಿಂದ ಹೋಗಂತಿದ್ದೇನ್ನೋಡು.

ಗೌಡ್ತಿ :

ಇದು ಯಾರದವ್ವ ಮಾನಗೇಡಿ ಮೂಳಾ
ಬಾಯಾಗ ಇಲ್ಲ ತಾಳಾ
ತಿನ್ನಾಕ ಇಲ್ಲ ಕೂಳಾ
ಮುಂದ ನಿಂತ ಜೊಲ್ಲ ಸುರಿಸಿ ನೆಕ್ಕೀತ ನನ್ನ ಕಾಲಾ||

ನಾ ಗಂಡುಳ್ಳ ಗರತಿ ಶೀಲವಂತಿ
ಮೈಮ್ಯಾಲ ಏರಿ ಬರತಿ
ತಿವದೇನೋ ಮೋತಿ ಮೋತಿ
ಬಾಯಿ ತೊಳದ ಮಾತನಾಡೋ ಕಿತ್ತೇನೋ ನಿನ್ನ ಮೀಸಿ||

ನಾವು ಊರ ಗೌಡರು ಸಾವ್ಕಾರ
ಗಂಡ ಸರದಾರ
ಕೇಳುವುದಲ್ಲೋ ತರಾ
ಕಡದಾನೊ ಹಾಡಾಹಗಲಿ ಮಾಡ್ಯಾನೊ ಚೂರ ಚೂರಾ||

ಬಸಣ್ಣ : ಓಹೊಹೊಹೊ! ನಿನ್ನ ಸರದಾರ ಗಂಡನ ಸುದ್ದೀ ಹೇಳಿದೀ? ನಿನ್ನ ಬಾದ್ದೂರ ಗಂಡನ ಸುದ್ದಿ ಹೇಳಿದೀ? ಯಾವ ನಿನ್ನ ಗಂಡ? ತಾನೂ ಗಂಡಸಂತ ತೋರಿ ಸೋದಕ್ಕ ಊರ ಬಾಲೇರ‍್ನ ಎಳದೆಳದ ಓಡಿ ಹೋಗ್ತಾನ, ಅವನs ಅಲ್ಲೇನ ನಿನ್ನ ಗಂಡ? ಸೂಳೇರ ಮೀಸಲಾ ಮುರಿಯೋ ದಿನ, ಕಂಬಳಿ ಹೊತ್ತ ಮಲಗತಾನ, ಅವನs ಅಲ್ಲೇನ ನಿನ್ನ ಬಾದ್ದರು? ಹೇಂತಿ ಹತ್ತ ವರ್ಷ ಬಾಯಿ ತೆರದರೂ ಒಂದ ಮಾತಾಡೊ ಗಿಣಿ ತರಲಿಕ್ಕಾಗಲಿಲ್ಲ. ಅವನs ಅಲ್ಲೇನ ನಿನ್ನ ಗಂಡ?

ಹುಡಿಗಿ ಬಾಯಿ ತೆರೆದ ಚಾಲಿವರದ
ಗಂಟ ಬಿದ್ದೇನ ನಾನಾ |
ಪಂಟ ಹೇಳಬ್ಯಾಡ ನಗನಗತ
ತೋರಿಸ ದಯ ಕರುಣಾ ||

ಜನಮದಾಗ ಏನೈತಿ
ಹತ್ತೇತಿ ನಿನ್ನ ಭ್ರಾಂತಿ |
ಒಲ್ಲಿನೆನಬ್ಯಾಡ ಕರಕೊಳ್ಳ
ನೀ ಯಾವ ದೊಡ್ಡ ಗರತಿ ||

ನಿನ್ನ ಅಂಗೈಯಾಗ ಹಿಡಕೊಳ್ಳ
ಆಡಿಸ ನನ್ನ ಪ್ರಾಣಾ |
ನೆವ ಹೇಳಬ್ಯಾಡ ಓಡಿ ಬಂದ
ಮಾಡಾಕ ಗೆಳಿತಾನಾ ||

ಗೌಡ್ತಿ: ಬಸಣ್ಣಾ, ಕಾಣಾ ಕಾಣಾ ಇಂಥಾ ಪಾಪಕ ಹೆಂಗ ಮನಸ ಮಾಡಿದಿ? ಹೇಳ್ತೇನ ಕೇಳು.

ಬಸಣ್ಣ : ಹುಡಿಗೀ ಚೆಂದದಿಂದ ಹೇಳುವಂಥವಳಾಗು.

ಗೌಡ್ತಿ :

ಅನ್ಯರ ಹೆಣ್ಣೊ ನಾನಾ
ಕರಿಬ್ಯಾಡೊ ಬಸಣ್ಣಾ ನನ್ನ
ಏನಾದ ಗೊತ್ತಿಲ್ಲೇನೋ ರಾವಣ||

ನಗಿ ಮಾಡಿ ಓಡಿ ಬಂದಿ
ಕೈಯೊಡ್ಡಿ ಬಾಯಿ ತೆರದಿ
ತಿಳಕೊಳ್ಳೊ ಬುದ್ಧಿಗೇಡಿ ರೀತಿ ನಡತಿ||

ಗಂಡುಳ್ಳ ಗರತಿ ನಾನಾ
ಹರಸೀಯೋ ಒಗತಾನಾ
ಪುಣ್ಯ ಪಾಪ ತಿಳಕೊಳ್ಳೊ ಹೈವಾನ||

ಬಸಣ್ಣ : ಜೋಕುಮಾರ ಸ್ವಾಮಿಯ ಪಲ್ಲೇವ
ಉಂಡಮ್ಯಾಗೆಲ್ಲಿ ಪುಣ್ಯೇವ ಪಾಪ
ನಮಗ ಹೇಳಬ್ಯಾಡ
ನಮಗ ತೋರಬ್ಯಾಡ ಶಾಸ್ತ್ರದ ಹಳಿಗಂಟ||

ನಾನು ಓದೇನ ಪುಸ್ತಕ ನೂರಾರಾ
ಎಲ್ಲಾ ಹೇಳತಾವ
ಎಲ್ಲಾ ಹೇಳತಾವ ಕೂಡಬೇಕ ಗಂಡಾಹೆಣ್ಣಾ||

ತಗೊ ಕೊಡತೇನ ನನ್ನ ಹಳಿ ರುಂಬಾಲಾ
ಗಂಟ ಕಟ್ಟಿ ಇಡ
ಗಂಟ ಕಟ್ಟಿ ಇಡ ಶಾಸ್ತ್ರದ ಪ್ರಸ್ತೇಕ||

ಹುಡಿಗೀ ನಾ ಹೇಳಿದ್ದಾದರೂ ತಿಳದ ಬಂತೇನ? ಜೋಕುಮಾರ ಸ್ವಾಮೀ ಪಲ್ಲೆ ಉಂಡಮ್ಯಾಲ ಪುಣ್ಯೆ ಎಲ್ಲಿ? ಪಾಪ ಎಲ್ಲಿ? ಬಂದ ಜೋಕುಮಾರ ಸ್ವಾಮೀ ಪಲ್ಲೆ ಉಣಿಸಿದಿ: ಬಿಟ್ಟೇನು? ನೀ ನಿಡಿದ್ದ ಉಂಡಮ್ಯಾಲs ಅಲ್ಲೇನ ಇಷ್ಟೆಲ್ಲಾ ಗರ್ದಿಗಮ್ಮತ್‌ಆದದ್ದ? ಮಾತಾಡೋ ಗಿಣಿ ಇದ್ದವರನ್ನ ಬಿಡತಿ, ಎಲ್ಲೆಲ್ಲೋ ಹುಡಕತಿ, ಹೆಂಗ ಸಿಕ್ಕೀತು? ಬಾ, ಗೆಣಿತಾನ ಮಾಡ, ಬೇಡು ಎಂಥಾವ ಬೇಕ ಅಂಥಾ ಹಕ್ಕಿ-

ಕಾದ ಮೇದ ಹೆಣ್ಣ ನೀನಾ ನೋಡವಲ್ಲಿ
ಕರೀತೇನ ಕಾಲಬಿದ್ದಾ ಬಾ ಬಾರs ಪೋರಿ|

ಹಾರ್ಯಾಡು ಹಕ್ಕಿಯ ಹಿಡದ ಕೊಟ್ಟೇನ ನಿನಗಾ
ಮಾತಾಡೊ ಅರಗಿಣಿಯ ತಂದ ಕೊಟ್ಟೇನ ನಿನಗಾ
ಮುಡಿಸೇನ ಹೂವಾ ಚಿಗುರಾ| ಎಲೆ ಹುಡಿಗಿ
ಕರೀತೇನ ಕಾಲಬಿದ್ದಾ ಬಾ ಬಾರs ಪೋರಿ||

ಹೌದಂಬೊ ಹಂಗಾಮ ಹುಣ್ಣಿಮಿ ಚಂದ್ರಾಮ
ಬಿಡ ಬಿಡ ಬಡಿವಾರ ಕೇಳ ಹಕ್ಕಿಯ ಹಾಡ
ಬೀಸ್ಯಾವ ಮೂಡಗಾಳಿ| ಎಲೆ ಹುಡುಗಿ
ಕರೀತೇನ ಕಾಲ ಬಿದ್ದಾ ಬಾ ಬಾರs ಪೋರಿ||

ಹುಡಿಗೀ ತಿಳೀತೇನ? ಹತ್ತ ವರ್ಷ ಹಕ್ಕಿ ಬೇಕಂತ ಹಂಬಲಿಸಿದಿ. ಹಕ್ಕಿ ಹಾರಿ ಬಂದ ತೊಡೀ ಮ್ಯಾಲ ಕುಂತೇನನ್ನೋ ಕಾಲಕ್ಕ ಬ್ಯಾಡಂತಿ! ಏನ ಕರಳ ನಿಂದಾ?

ಗೌಡ್ತಿ : ಏನ ಮಾಡ್ತಲಿ? ಒಮದ ಕಡೆ ಹಾಡೋ ಹಕ್ಕಿ, ಇನ್ನೊಂದ ಕಡೆ ಕಣ್ಣಾಗ ಚೂರಿ ಇಟ್ಟಕೊಂಡ ಗಂಡ! ಬಸಣ್ಣಾ, ನಡುವ ನೀ ಬಂದ ಯಾಕ ಜೀವಾ ಕೊಡತಿ? ನನ್ನ ಎಡ್ಯಾಗ ಇದ್ದದ್ದ ಉಣ್ಣತೇನು? ಸುಮ್ಮನ ದಾರಿ ಬಿಡ.

ಬಸಣ್ಣ : ನನ್ನ ಎಡ್ಯಾಗಿದ್ದದ್ದ ಉಂಡಮ್ಯಾಲs ಅಲ್ಲೇನ ಇಷ್ಟೆಲ್ಲಾ ಆದದ್ದು? ಹೋಗತಿದ್ದರ ಹೋಗು ಬ್ಯಾಡನ್ನಾಣಿಲ್ಲ. ನಾನೂ ಒಲ್ಲೆನ್ನೋ ಹೆಣ್ಣ ಎಳದಾವಲ್ಲ. ಹಾಂಗs ಹೋಗೋವಾಗ ಹೊಲೇರ ಶಾರೀ ಮನೀಗಷ್ಟ ಹೋಗು; ಗೌಡ ಬಿದ್ದಾನ ಎಬ್ಬಿಸಿಕೊಂಡ ಹೋದೀಯಂತ.

ಗೌಡ್ತಿ : ಹೊಲಕ್ಕ ಮಲಗಾಕ ಹೋಗತೇನಂದ ಅಲ್ಲಿ ಹೆಂಗಹೋಗಿ ಬಿದ್ದಿದ್ದಾನು!

ಬಸಣ್ಣ : ನಿನಗ ಇನ್ನೊಂದ ಸುದ್ದಿ ತಿಳಿದಿಲ್ಲ. ಗೌಡಗ ಈಗ ಗುರುಪಾದನ ಮಗಳು ನಿಂಗಿ ಬೇಕಾಗ್ಯಾಳಂತ!

ಗೌಡ್ತಿ : ಏನಂದಿ?

ಬಸಣ್ಣ : ಅಲ್ಲೇ ಶಾರೀನ ಕೇಳ್ಹೋಗು.

(ಗಿಣಿ ಚೀರಿದ ಸದ್ದು)

ಗೌಡ್ತಿ : ಗುಡಸಲದೊಳಗ ಯಾವುದೋ ಹಕ್ಕಿ ಚೀರಿಧಾಂಗಾಯ್ತಲ್ಲಾ?

ಬಸಣ್ಣ : ಅದs? ನನ್ನ ಮಾತಾಡೋ ಗಿಣಿ. ರಾತ್ರಿ ಇಲ್ಲೆ ತಂದಿಟ್ಟಕೊಂಡಿದ್ದೆ, ಪಂಜರ ಉರುಳಿಬಿತ್ತೊ, ಹಾವ ಕಂಡಿತೊ!

ಗೌಡ್ತಿ : ಲಗು ಹೋಗಿ ಏನಾಗೇತಿ ನೋಡಿ ಬಾ.

ಬಸಣ್ಣ : ನಿನಗs ಬ್ಯಾಡಾದ ಮ್ಯಾಲ ಗಿಣಿ ಇದ್ದರೆಷ್ಟು ಬಿಟ್ಟರೆಷ್ಟು?

ಗೌಡ್ತಿ : ಬ್ಯಾಡಂತ ನಾ ಎಲ್ಲಿ ಹೇಳಿದೆ?

ಬಸಣ್ಣ : ಬಾ ಹಂಗಾದರ

(ಗುಡಿಸಿಲಲ್ಲಿ ಹೋಗಿ ಗಿಣಿಯುಳ್ಳ ಪಂಜರ ತರುತ್ತಾನೆ. ಗೌಡ್ತಿ ನೋಡಿ ಸಂಭ್ರಮಿಸುತ್ತಾಳೆ.)

ಗೌಡ್ತಿ : ಏನಾಗಿಲ್ಲ ಹೌಂದಲ್ಲ?

ಬಸಣ್ಣ : ಏನಿಲ್ಲ

ಗೌಡ್ತಿ : ಇದ ಮಾತಾಡತೈತಿ?

ಬಸಣ್ಣ : ನೀ ಇನ್ನೂ ಇದರ ಮಾತ ಕೇಳಿಲ್ಲ. ಇದರ ಮಾತ ಕೇಳಿ ಬೆರಗಾಗಿ ಊರ ಹುಡಿಗೇರ ಹಾಂಗs ಬಾಯ್ತಗೀತಾರ! ಎಂತೆಂಥಾ ಕತೀ ಹೇಳತೈತಿ!

ಗೌಡ್ತಿ : ಇನ್ನ ನನಗ ಮಾತ್ರ ಈ ಗಿಣೀ ಮಾತು ಕತೀ ಕೇಳಿಸಬೇಕು – ಬಸಣ್ಯಾ, ಬಸಣ್ಯಾ-

ಗುಡಿಸಲದೊಳೀಕ!
ಪ್ರಿಯಾ ಒಳೀಕ
ಹೋಗೋಣು ನಡಿ
ಮಾತನಾಡೋಣ ಹಕ್ಕಿಯ ಜೋಡಿ||

ಮೂಡಗಾಳಿ ಬೀಸ್ಯಾವೊ
ಹೂವ ಹಸರ ಚಿಗುರ್ಯಾವೊ
ಕೇಳಿ ಬಂದಾವೊ ಹಕ್ಕಿಯ ಹಾಡಾ
ಮಾತನಾಡೋಣ ಹಕ್ಕಿಯ ಕೂಡಾ||

(ಸಂಗೀತ)