ಮುದ್ದೆ ಮುದ್ದೆಯಾದ ಕಾಡು
ಮುದುರಿಕೊಂಡು ಬಿದ್ದಿದೆ.
ಬಾನ ಬೆರಳು ಬಿರುಬಿಸಿಲಿನ
ಹಚ್ಚಡವನು ಹೊಚ್ಚಿದೆ.

ಧೂಳುದಾರಿ ಕನವರಿಕೆಯ
ತೆರದಿ ಸುತ್ತಿ ತೆವಳಿದೆ
ಜೋಗದ ಜಲಪಾತ ಮಾತ್ರ
ಚೈತನ್ಯದಿ ಮೊರೆದಿದೆ !

ಬೆಟ್ಟಗಾಡ ಕಂದರಗಳು
ಆಕಳಿಸುತ ಒರಗಿವೆ
ಮರಮರದಲಿ ಪಕ್ಷಿಗಾನ
ದನಿರೆಕ್ಕೆಯ ಮುಚ್ಚಿವೆ.
ತುಂಡು ಮೋಡ ತೂಗಡಿಸುತ
ಬಾನ ಬಯಲನೆಡವಿದೆ
ಜೋಗದ ಜಲಪಾತ ಮಾತ್ರ
ಭೋರ್ಗರೆಯುತ ಹಾಡಿದೆ !

ತಳದೊಳಗಿನ ನೂರು ಬಂಡೆ
ಮರುಳುಗೊಂಡು ಕುಳಿತಿವೆ.
ತುಂತುರು ಹನಿ ಹೊಗೆ ಮೀಹದಿ
ಬಿರು ಬಿಸಿಲನು ಮರೆತಿವೆ.
ಚೈತನ್ಯದ ನಾಟಕದಲಿ
ಜಡಪ್ರೇಕ್ಷಕರಾಗಿವೆ.
ಜೋಗದ ಜಲಪಾತ ಮಾತ್ರ
ಚೈತನ್ಯವ ಸಾರಿದೆ !