. ಉಪೋದ್ಘಾತ:
ಎಲ್ಲಮ್ಮನ ಸಂಪ್ರದಾಯ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಬೆಳೆದು ಬಂದಿರುವುದನ್ನು ಕಾಣುತ್ತೇವೆ. ಇವರಲ್ಲಿ ಜೋಗಪ್ಪ ಎಂದು ಕರೆಯಿಸಿಕೊಳ್ಳುವವರು ಹೆಂಗಸರ ವೇಷದಲ್ಲಿರುವ ಗಂಡಸರು. ಅವರು ಸೀರೆಯುಟ್ಟು ಕುಪ್ಪಸ ತೊಟ್ಟು ಜಡೆ ಬೆಳೆಸಿಕೊಂಡು ಜೋಗತಿಯರಂತೆ ಅಲಂಕಾರಗಳನ್ನು ಮಾಡಿಕೊಂಡಿರುತ್ತಾರೆ. ಈ ಜೋಗಪ್ಪ ಮತ್ತು ಜೋಗವ್ವಗಳ ಸಂಪ್ರದಾಯ ಎಲ್ಲಮ್ಮ, ರೇಣುಕಾ ಅಥವಾ ಏಕವೀರಾ ಎಂಬ ಪೌರಾಣಿಕ ಸ್ತ್ರೀಯ ಕತೆಯ ಮೇಲೆ ಬೆಳೆದಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಹಬ್ಬಿಕೊಂಡಿರುವ ಜೋಗಪ್ಪ ಜೋಗಮ್ಮ ಮತ್ತು ಭಕ್ತರ ಅಂಕಿ ಸಂಖ್ಯೆಗಳು ಇನ್ನೂ ಗೊತ್ತಾಗಿರುವುದಿಲ್ಲ. ಅವರಲ್ಲಿ ಅನೇಕರು ನಪುಂಸಕರು ಹಾಗೂ ಉಭಯ ಲಿಂಗಿಗಳು ಇರುವರೆಂದು ಗೊತ್ತಾಗಿದೆ. ಶಿವಮೊಗ್ಗೆ ಜಿಲ್ಲೆಯ ಒಂದು ಹಳ್ಳಿಯಲ್ಲಿ ಉಭಯ ಲಿಂಗವುಳ್ಳ ಒಬ್ಬ ಜೋಗತಿಯು ವೇಶ್ಯೆಯರಂತೆ ಇಚ್ಛೆಯುಳ್ಳವರೊಡನೆ ಸಮಾಗಮ ಮಾಡುತ್ತಿದ್ದುದು ಕಂಡು ಬಂದಿತು. ಈ ಉಭಯಲಿಂಗೀ ಜೋಗತಿಯ ಹತ್ತಿರ ಅನೇಕ ಕಾಮುಕ ಪುರುಷರು ತಮ್ಮ ಲೈಂಗಿಕ ತೃಪ್ತಿಗಾಗಿ ಸ್ನೇಹ ಬೆಳೆಸಿರುವುದು ಗೊತ್ತಾಯಿತು. ಅನೇಕ ಜನ ಜೋಗಪ್ಪಗಳು ಸಮಲಿಂಗಿಗಳಾಗಿರುವರೆಂದೂ [Homo Sexual] ಮತ್ತು ವ್ಯಭಿಚಾರಿಗಳಾಗಿರುವರೆಂದೂ ತಿಳಿದು ಬಂದಿದೆ. ಇದನ್ನು ಜೋಗತಿ ಸಂಪ್ರದಾಯವನ್ನು ಅಭ್ಯಾಸ ಮಾಡುವಾಗ ಮಾನವ ಶಾಸ್ತ್ರಜ್ಞರಾದ ಡಾ.ಎನ್‌.ಜೆ. ಬ್ರಾಡ್‌ಫೋರ್ಡ್ ಮತ್ತು ಶ್ರೀ ಆರ್.ಎಸ್‌. ಹಿರೇಮಠ ಅವರು ತಮ್ಮ ಗಮನಕ್ಕೆ ತಂದುಕೊಂಡಿದ್ದಾರೆ. ಸಂಸಾರದಲ್ಲಿ ವಿರಸಗೊಂಡವರು, ಗಂಡ-ಹೆಂಡಂದಿರಲ್ಲಿ ಹೊಂದಾಣಿಕೆಯಾಗದಿದ್ದವರು ಒಬ್ಬರು ಮತ್ತೊಬ್ಬರನ್ನು ತ್ಯಜಿಸಿ ಜೋಗಪ್ಪ ಜೋಗಮ್ಮಗಳಾಗುವುದುಂಟು. ಅದೂ ಎಲ್ಲಮ್ಮನ ಮಹಿಮೆಯೇ. ಅದನ್ನು ಜನಪದ ಗೀತೆಯಲ್ಲಿ ಹೀಗೆ ಹೇಳಲಾಗಿದೆ.

“ಗಂಡ ಹೆಂಡಿರ ಬಿಡಿಸಿ
ಭಂಡಾರ ಚೀಲವ ಕೊಡಿಸಿ
ರಂಡಿ ಹುಣವಿ ದಿನ ರಾಜ ಮುತ್ತೈದೆಯಾದೆವ್ವ”

ಇಲ್ಲವೆ ವಿರಸಗೊಂಡ ಗಂಡನು ಹೆಂಡತಿಯನ್ನು ಬಿಟ್ಟು ಈ ರೀತಿಯಾಗಿ ಜೋಗತಿಯಾಗಲಿಕ್ಕೆ ಹೇಳುತ್ತಾನೆ.

“ಚಿತ್ತ ಚಂಚಲವಾಗಿ
ಎತ್ತಲಾದರೂ ಹೋಗಿ
ಹುಲ್ಲಿದ್ದಡೆ ಮೇದು
ನೀರಿದ್ದ ಕಡೆ ಕುಡಿದು
ಒಂದು ಉತ್ತಮವಾದ ಸ್ಥಳಕ್ಕೆ ಸೇರಿ
ಬದುಕಿಕೊ ಉಧೋ
ಎಕ್ಕಲ್ದೊ ಉಧೋ”

ಈ ಪದ್ಯವು ಸ್ತ್ರೀಯರನ್ನು ದನಗಳಂತೆ ಬಸವಿಯನ್ನಾಗಿ ಬಿಡುವ ಪ್ರಸಂಗಕ್ಕೆ ಹೋಲಿಸುತ್ತದೆ.

ಶ್ರೀ ಮತಿಘಟ್ಟ ಕೃಷ್ಣಮೂರ್ತಿಯವರು ಸಂಗ್ರಹಿಸಿದ ಜನಪದ ಹಾಡಿನಲ್ಲಿ ಜೋಗಪ್ಪನಿಗೆ ಮರುಳಾದ ಜೋಗವ್ವನನ್ನು ಈ ರೀತಿ ವಿವರಿಸಲಾಗಿದೆ.

ಕಿನ್ನುಡಿ ನುಡಿಸೋನ ದನಿ ಚಂದವೋ
ಕಿನ್ನುಡಿ ನುಡಿಸೋನ ಬೆಳ್ಳು ಚೆಂದವೋ
ಕಿನ್ನುಡಿ ನುಡಿಸೋನ ಬೆಳ್ಳಿನ ಚೆಂದವಾ ನೋಡಿ
ಬೆಳ್ಳಿ ಉಂಗ್ರಕ್ಕೆ ನಾರಿ ಗ್ಯಾನ ಬಿದ್ದಳೇ
ಚುಕ್ಕಿ ಉಂಗ್ರಕ್ಕೆ ನಾರಿ ಮನಸ್ಸಿಟ್ಟಳೇ            ||ಪ||

ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ತಳಮನೆ
ಅಂಟ್ರಮುಖಿ ದಂಟ್ರಮುಖಿ
ಇಲ್ಲೀಗರವತ್ತು ಗಾವುದ ಅರಮನೆ
ಇಲ್ಲಿಗೆಪ್ಪತ್ತು ಗಾವುದ ತಳಮನೆ-      || ಕಿನ್ನುಡಿ || ೧ ||

ಇದ್ದಬಿದ್ದ ಬಟ್ಟೆನೆಲ್ಲ ಗಂಟುಮೂಟೆ ಕಟ್ಟಿಕೊಂಡು
ಹೊಂಟಾಳು ಜೋಗಪ್ಪನ ಹಿಂದುಕೂಟೇ
ಹೊಂಟಾಳು ಜೋಗಪ್ಪನ ಮುಂದಕೂಟೆ-       || ಕಿನ್ನುಡಿ || ೨ ||

ಎಳ್ಳಿನ ಹೊಲವಾ ಬಿಟ್ಟೆ ಒಳ್ಳೆ ಗಂಡನ ಬಿಟ್ಟೆ
ತಳ್ಯಾಡ್ತ ಜೋಗೀಕೂಟೆ ಬರಬೈದೆ ನಾನ್‌
ಹೊಳ್ಯಾಡ ಜೋಗಿಕೂಟೆ ಬರಬೈದೆ  || ಕಿನ್ನುಡಿ || ೩ ||

ಕಡಲೆ ಹೊಲವಾ ಬಿಟ್ಟೆ ಕಡಿದಾಡೊ ಗಂಡನ ಬಿಟ್ಟೆ
ಕೆಡವಾಗ್ತ ಜೋಗಿಕೂಟೆ ಬರಬೈದೆ ನಾನ್‌
ಬಡಿದಾಡ್ತ ಜೋಗಿಕೂಟೆ ಬರಬೈದೆ   || ಕಿನ್ನುಡಿ || ೪ ||

ಉದ್ದಿನ ಹೊಲವಾ ಬಿಟ್ಟೆ ಮುದ್ದಾಡೊ ಗಂಡನ ಬಿಟ್ಟೆ
ಗುದ್ದಾಡ್ತ ಜೋಗಿಕೂಟೆ ಬರಬೈದೆ -ನಾನ್‌
ಒದ್ದಾಡ್ತ ಜೋಗಿಕೂಟೆ ಬರಬೈದೆ      || ಕಿನ್ನುಡಿ || ೫ ||

ಜೋಗಪ್ಪ ಜೋಗಮ್ಮಗಳು ಅರಿಸಿಣ ಪುಡಿಯನ್ನು ಭಂಡಾರವೆಂದು ಹೇಳಿ ಹಣೆಗೆ ಹಚ್ಚಿ ಜನರಿಂದ ಭಿಕ್ಷೆ ಬೇಡುತ್ತಾರೆ. ಈ ಭಂಡಾರಕ್ಕೆ ಧಾರ್ಮಿಕ ಜನರು ಕುಂಕುಮ, ತಿಲಕ, ವಿಭೂತಿ, ಗಂಧ ಮತ್ತು ಅಂಗಾರಗಳಿಗೆ ಇರುವ ಮಹತ್ವವನ್ನೇ ಕೊಡುತ್ತಾರೆ. ಈ ಅರಿಸಿಣ ಪುಡಿಗೆ ಹಣದ ಸಂಗ್ರಹಕ್ಕೆ ಇರುವ ಭಂಡಾರದ ಹೆಸರನ್ನು ಕೊಡಲಾಗಿದೆ.

ಜೋಗಪ್ಪ-ಜೋಗಮ್ಮ ಮತ್ತು ಎಲ್ಲಮ್ಮನ ಭಕ್ತರಲ್ಲಿ ಜಾತಿ ಭೇದವಿಲ್ಲ ಮತ್ತು ಲಿಂಗಭೇದವಿಲ್ಲ. ಬಡವರು, ಬಲ್ಲಿದರು, ಬೇರೆ ಭಕ್ತಿ ಭಾಷಾ ವರ್ಗಗಳಿಗೆ ಸೇರಿದವರು, ಬೇರೆ ಮತ-ಪಂಥಗಳಿಗೆ ಸೇರಿದವರು ಎಲ್ಲರೂ ಎಲ್ಲಮ್ಮನ ಭಕ್ತರೆಂದೇ ತಿಳಿದುಕೊಳ್ಳಲ್ಪಟ್ಟಿದ್ದಾರೆ. ಜನಪದ ಸಮಾಜದ ಒಂದು ಪದ್ಯದಲ್ಲಿ ಅದನ್ನು ಈ ರೀತಿ ವರ್ಣಿಸಿದ್ದಾರೆ.

‘ಮುನಿಗಳಂತಕೆ ಮಾಡಿದೆಮ್ಮ
ಮಹೇಶ್ವರಿ ಕುಲವ ನೀ ಕೆಡೆಸಿದೆಯಮ್ಮ
ನೀನೇ ಎಲ್ಲವೂ ಶಿವಶಕ್ತಿ ರಾಣಿ ಅಲ್ಲವೇನೆ?

ಜೋಗತಿ ಸಂಪ್ರದಾಯದಲ್ಲಿ ಬರುವ ನಪುಂಸಕವಾದ ವಿಶ್ವವ್ಯಾಪಿಯಾದುದು. ಚೀನಾ ದೇಶದ ರಾಜಕೀಯ ವರ್ಗಗಳಲ್ಲಿ ಅವರಿಗೆ ಮಹತ್ವದ ಸ್ಥಾನವಿತ್ತು. ಆಫ್ರಿಕಾದ ದೇಶಗಳಲ್ಲಿ ಅನೇಕ ಕಾಡು ಜನಾಂಗಗಳು ರಾಜನು ನಪುಂಸಕನಾದರೆ ಅಭಿವೃದ್ಧಿಗೆ ಕಂಟಕನಾದವನೆಂದು ಕೊಂದು ಹಾಕುತ್ತಾರೆ. ಸುಮೇರಿಯಾದ ಸಂಸ್ಕೃತಿಯಲ್ಲಿ ಯಜ್ಞದ ವಿಧಿಗಳಲ್ಲಿ ನಪುಂಸಕರಿಗೆ ವಿಶಿಷ್ಟವಾದ ಸ್ಥಾನವಿತ್ತು. ಅನೇಕ ಸಂಸ್ಕೃತಿಗಳಲ್ಲಿ ಯಜ್ಞದ ವಿಧಿಗಳಲ್ಲಿ ನಪುಂಸಕರಿಗೆ ವಿಶಿಷ್ಟವಾದ ಸ್ಥಾನವಿತ್ತು. ಕೆಲವು ಸಂಸ್ಕೃತಿಗಳಲ್ಲಿ ನಪುಂಸಕರನ್ನು ರಾಣಿವಾಸದಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದರು. ಭಾರತದ ಸಂಸ್ಕೃತಿಯಲ್ಲಿ ಅರ್ಜುನನು ಅಜ್ಞಾತವಾಸದಲ್ಲಿ ಬೃಹನ್ನಳೆಯಾಗಿ ಸ್ತ್ರೀ ವೇಷದಲ್ಲಿ ಕಾಲ ಕಳೆದನು. ಭೀಮನು ಕೀಚಕನನ್ನು ಕೊಲ್ಲುವಾಗ ಅವನಿಗೆ ದ್ರೌಪದಿಯ ವೇಷದಲ್ಲಿ ಕಾಣಿಸಿಕೊಂಡನು. ಷಂಡತ್ವವನ್ನು ಮತ್ತು ಉಭಯ ಲಿಂಗಿಗಳ ಸಮಾಜವನ್ನು ಮಾನವನು ತನ್ನ ಸಾಮಾಜಿಕ ಹಿತಕ್ಕಾಗಿ ಬಳಸಿಕೊಂಡಿರುವನು. ಸ್ತ್ರೀ-ಪುರುಷರು ವೇಷ ಬದಲಿಸಿಕೊಳ್ಳುವುದು ಅನೇಕ ಸಂದರ್ಭಗಳಲ್ಲಿ ಮತ್ತು ಸಾಂಸ್ಕೃತಿಕ ಇತಿಹಾಸಗಳಲ್ಲಿ ಕಂಡು ಬರುತ್ತದೆ.

ಜೋಗಪ್ಪ ಜೋಗಮ್ಮಗಳು ಒಮ್ಮೆಮ್ಮೆ ಹುಟ್ಟಿನಿಂದಲೇ ನಪುಂಸಕರಾಗಿರದಿದ್ದರೂ ಹೆಣ್ಣಿನಂತೆ ನಟಿಸಿ, ಹೆಣ್ಣಿನಂತೆ ವೇಷ ಭೂಷಣ ಧರಿಸಿ ಧಾರ್ಮಿಕ ಆದೇಶದ ಮೇರೆಗೆ ಒಮ್ಮೆಮ್ಮೆ ತಾವಾಗಿಯೇ ನಪುಂಸಕತ್ವವನ್ನು ತಂದುಕೊಳ್ಳುತ್ತಾರೆ. ಜೋಗವ್ವಗಳು ಹಳದಿ ಬಣ್ಣದ ನಿಲುವಂಗಿಯನ್ನು ತೊಟ್ಟು ಗಂಡಸರಂತೆ ವರ್ತಿಸುತ್ತಾರೆ. ಆದ್ದರಿಂದ ಎಲ್ಲಮ್ಮನು ಮನಸ್ಸು ಮಾಡಿದರೆ ಹೆಣ್ಣನ್ನು ಗಂಡನ್ನಾಗಿಯೂ ಗಂಡನ್ನು ಹೆಣ್ಣನ್ನಾಗಿಯೂ ಪರಿವರ್ತಿಸಬಲ್ಲಳೆಂದು ಭಕ್ತರು ಆಡಿಕೊಳ್ಳುತ್ತಾರೆ.

ಎಲ್ಲಮ್ಮನು ನಪುಂಸಕತ್ವ ತರಿಸಿಕೊಳ್ಳಲಿಕ್ಕೆ ಜನರನ್ನು ಹೇಗೆ ಪ್ರೇರಿಸುವಳೆಂಬುದಕ್ಕೆ ಶಿಶುನಾಳ ಶರೀಫರ ಈ ಕೆಳಗಿನ ಪದ್ಯ ಸಾಕ್ಷಿಯಾಗಿದೆ.

ಚೆಲ್ವ ಹೆಂಗಸರ ಸೀರಿ ಸೆಳೆದು
ಚೆಲ್ಲಣ ತೊಡಿಸಿ ಬುಲ್ಲಿ ತುಂಬ ಅರ್ಲ ಬಡಿದು
ಕೋಲು ದೀವಟಿಗೆ ಬತ್ತಿ ಮೇಲೆ ಜಗವ ಹೊತ್ತಿ
ಭೂಲೋಕದೊಳು ನಿನ್ನ ಜಾಲಕಿನ್ನೆಣೆಯುಂಟೆ ಎಂದು ಹೇಳಿದ್ದಾರೆ.

ಜೋಗಪ್ಪ-ಜೋಗಮ್ಮಗಳು ತಮ್ಮ ಸಮಾಜಗಳಲ್ಲಿ ಧರ್ಮಪ್ರಸಾರಕರಂತೆ ಸಂಪ್ರದಾಯಗಳನ್ನು ಕಾಪಾಡುವ ವಿಶೇಷ ಕೆಲಸವನ್ನು ಮಾಡಿದ್ದಾರೆ.

. ಜೋಗತಿಯಾಗುವ ವಿಧಿಗಳು:
‘ಜೋಗಪ್ಪ-ಜೋಗಮ್ಮ ಆಗುವವರಿಗೆ ಬೇರೆ ಬೇರೆ ಪ್ರದೇಶಗಳಲ್ಲಿ ವಿಧ ವಿಧದ ದೀಕ್ಷೆಗಳನ್ನು ಕೊಡುವ ಪದ್ಧತಿಗಳು ಬೆಳೆದು ಬಂದಿವೆ. ಈ ದೀಕ್ಷೆಯನ್ನು ಎಲ್ಲಮ್ಮನ ದೇವಸ್ಥಾನದಲ್ಲಿ ಮತ್ತು ಎಲ್ಲಮ್ಮ ದೇವಸ್ಥಾನದ ಪೂಜಾರಿಯ ಮನೆಯಲ್ಲಿ ನೆರವೇರಿಸುತ್ತಾರೆ. ಸವದತ್ತಿಯ ಎಲ್ಲಮ್ಮನ ದೇವಸ್ಥಾನಕ್ಕೆ ಹೋಗಲಿಕ್ಕೆ ಆಗದವರು ತಮ್ಮ ಸಮೀಪದ ಊರಿನಲ್ಲಿಯ ಎಲ್ಲಮ್ಮನ ಗುಡಿಯಲ್ಲಿಯೂ ಈ ದೀಕ್ಷಾ ಸಮಾರಂಭವನ್ನು ಏರ್ಪಡಿಸಬಹುದು.

ಎಲ್ಲಮ್ಮನ ಗುಡ್ಡದಲ್ಲಿ ಜೋಗತಿಯಾಗುವವರು ತಮ್ಮ ಸಂಬಂಧಿಕರೊಡನೆ ಮತ್ತು ಹಿರಿಯ ಜೋಗತಿಯರೊಡನೆ ವಾದ್ಯ ಸಮೇತವಾಗಿ ಕೈಯಲ್ಲಿ ಕಾಣಿಕೆ, ನೈವೇದ್ಯ ಮತ್ತು ಪರಶುರಾಮನ ಮೂರ್ತಿಯನ್ನು ಹಿಡಿದುಕೊಂಡು ಎಲ್ಲಮ್ಮನ ಪೂಜಾರಿಯ ಮನೆಗೆ ಹೋಗುವರು. ಅಲ್ಲಿ ಎಲ್ಲಮ್ಮನನ್ನು ಮತ್ತು ಪರಶುರಾಮನನ್ನು ಪೂಜಿಸಲಾಗುವುದು. ಜೋಗತಿಯಾಗುವವರಿಗೆ ಜೋಗತಿಯಾದವರು ಕೊರಳಲ್ಲಿ ಹೂವಿನ ಹಾರವನ್ನು ಹಾಕುತ್ತಾರೆ. ಅನಂತರ ಪೂಜಾರಿಯು ದೈನಂದಿನ ಜೀವನದಲ್ಲಿ ಮಾಡಬೇಕಾದ ವ್ರತಗಳನ್ನು ಮತ್ತು ಬಹಿಷ್ಕರಸಿಬೇಕಾದ ಕೆಲಸಗಳನ್ನು [Taboos]  ಉಪದೇಶಿಸುತ್ತಾನೆ. ಆ ಮೇಲೆ ಅವಳು ಐದು ಮನೆಗಳಿಂದ ಭಿಕ್ಷೆ ಬೇಡುವಳು. ಜೋಗತಿಯಾದವಳು ತನ್ನ ಊರಿಗೆ ಹೋದ ಮೇಲೆ ದಿನಗಳವರೆಗೆ ಚರ್ಮಕಾರರ ಮನೆಯಲ್ಲಿ ಮಾತಂಗಿ ಕಟ್ಟೆಯ ನೀರಿನಿಂದ ಶುದ್ಧಳಾಗಿ ಮಾತಂಗಿಯನ್ನು ಪೂಜಿಸಬೇಕು ಮತ್ತು ಬಡವರಿಗೆ ಊಟ ಹಾಕಬೇಕು.

ದೀಕ್ಷಾ ಸಮಾರಂಭಕ್ಕಾಗಿ ಜೋಗತಿಯರು ಮೂರು ತರಹದ ಉಡುಪುಗಳನ್ನು ಧರಿಸುತ್ತಾರೆ. ಅವು (೧) ಬೇವಿನ ಉಡಿಗೆ [ಹುಟಗಿ] (೨) ವಸ್ತ್ರದ ಉಡಿಗೆ ಮತ್ತು (೩) ಆಕಾಶದ ಉಡಿಗೆ (ದಿಗಂಬರ). ದಿಗಂಬರವಾಗಿರುವುದು ಅತೀ ಕ್ರೂರವಿಧಿಯೆಂದು ತಿಳಿದುಕೊಳ್ಳುತ್ತಾರೆ. ಅವರು ಜೋಗುಳ ಬಾವಿಯ (ಜೋಗಿಗಳ ಬಾವಿ) ಹತ್ತಿರ ಮತ್ತು ರೇಣುಕಾ ದೇವಿಯ ಗುಡಿಯ ಹತ್ತಿರ ಮಾತ್ರ ನಗ್ನವಾಗಿರುತ್ತಾರೆ. ಅವರು ಮೇಲೆ ಕಾಣಿಸಿದ ಮೂರರಲ್ಲಿ ಒಂದು ಬಗೆಯ ಉಡುಪಿನೊಂದಿಗೆ ಜೋಗುಳ ಬಾವಿಯಲ್ಲಿ ಸ್ನಾನ ಮುಗಿಸಿಕೊಂಡು ರೇಣುಕಾದೇವಿಯ ದೇವಾಲಯದವರೆಗೆ ಮಡಿಯಿಂದ ನಡೆದುಕೊಂಡು ಬರುತ್ತಾರೆ. ಅವರೊಂದಿಗೆ ವಾದ್ಯಗಾರರು, ಸಂಬಂಧಿಕರು ಮತ್ತು ಸ್ನೇಹಿತರಿರುತ್ತಾರೆ. ದಿಗಂಬರವಾಗಿದ್ದವರು ಬೆಳಗಾಗುವುದರ ಪೂರ್ವದಲ್ಲಿಯೇ ವಿಧಿಯನ್ನು ಮುಗಿಸುತ್ತಾರೆ. ಉಳಿದವರು ಬೆಳಗು ಮುಂಜಾನೆ ಮುಗಿಸುತ್ತಾರೆ. ಆಗ ಜೋಗತಿಯಾಗುವವರಿಗೆ ಬೇವಿನ ಎಲೆಗಳ ಗೊಂಚಲದಿಂದ ಮುಖಕ್ಕೆ ಪವಿತ್ರ ನೀರನ್ನು ಸಿಂಪಡಿಸಲಾಗುವುದು. ದೇವಾಲಯವನ್ನು ಮುಟ್ಟಿದನಂತರ ಜೋಗತಿಯಾಗುವವರು ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ದೇವರುಗಳ ಪೂಜೆ ಮಾಡಿ ತಮ್ಮ ಉಡುಪುಗಳನ್ನು ಬದಲಿಸುತ್ತಾರೆ. ಉಡುಪಿನ ಮೆರವಣಿಗೆ ಮುಗಿದ ನಂತರ ಪವಿತ್ರ ಕೊಂಡಗಳಲ್ಲಿ ಸ್ನಾನ ಮಾಡುತ್ತಾರೆ.

ಜನಪದ ಹಾಡಿನಲ್ಲಿ ನಗ್ನವಾಗಿರುವುದನ್ನು ಜೋಗತಿಯರು ಹೀಗೆ ಹಾಡಿದ್ದಾರೆ.

“ಭಾಳ ಮಂದಿ ಬತ್ಲ ಮಾಡಿ
ಬೇವ ಉಡಿಸಿ ಮೋಜ ನೋಡಿದಿ”.

ಸೌದತ್ತಿಯ ಎಲ್ಲಮ್ಮನ ದೇವಸ್ಥಾನಕ್ಕೆ ಹೋಗಲಿಕ್ಕೆ ಆಗದವರು ತಮ್ಮ ಊರಿನಲ್ಲಿಯ ಎಲ್ಲಮ್ಮನ ಗುಡಿಯ ಮುಂದೆ ಶುಚಿ ಮಾಡಿ ಸಾರಿಸಿ ಒಂಬತ್ತು ಬಗೆಯ ಬಣ್ಣದ ಪುಡಿಗಳಾದ ಹಳದಿ, ಬಿಳಿ, ಕೆಂಪು, ಹಸಿರು, ನೀಲಿ, ಇದ್ದಿಲು ಪುಡಿ, ರಂಗೋಲಿ, ಕುಂಕುಮ ಮತ್ತು ಭಂಡಾರಗಳನ್ನು ತಂದು ಸಾರಿಸಿದ ನೆಲದ ಮೇಲೆ ‘ಜೋಗ್ತಿ ಪಟ್ಟದ’ ಚಿತ್ರವನ್ನು ಬರೆಯುತ್ತಾರೆ. ಅದರ ನಾಲ್ಕು ಮೂಲೆಗಲನ್ನು ಬಾಳೆ, ವೀಳೆಯದೆಲೆ, ಅಂಗನೂಲು, ಅಕ್ಷತೆ ಮತ್ತು ಗಂಧಗಳಿಂದ ಅಲಂಕರಿಸಿ ಕಳಸವನ್ನಿಡಲಾಗುವುದು, ಎಲ್ಲಾ ಕಳಸಗಳಿಗೂ ಒಂದು ವಿಭೂತಿ ಪಟ್ಟ, ಒಂದು ಬೆಲ್ಲದ ಕಣ್ಣು, ಒಂದು ಕೊಬ್ಬರಿ ಚಿಪ್ಪು, ಬಾಳೆಹಣ್ಣು, ಎಲೆ ಅಡಿಕೆ ಮತ್ತು ಐದು ತರಹದ ಹಣ್ಣುಗಳನ್ನು ಇಡುತ್ತಾರೆ. ನಾಲ್ಕು ಕಳಸಗಳನ್ನು ಕೂಡಿಸುವಂತೆ ಹಸಿ ನೂಲಿನಿಂದ ಸುತ್ತುತ್ತಾರೆ. ಪಟ್ಟದ ನಡುವೆ ಹೆಣ್ಣುಮಗಳನ್ನು ಕುಳ್ಳಿರಿಸಿ ನಾಲ್ಕೂ ಕಳಸದ ಕುತ್ತಿಗೆಯಿಂದಲೂ ಒಂದೊಂದೆಳೆ ಹಸಿನೂಲನ್ನೆಳೆದು ಅವಳ ಕುತ್ತಿಗೆಗೆ ಕಟ್ಟುತ್ತಾರೆ. ಅನಂತರ ಎಲ್ಲಮ್ಮನ ವಂಶಜನೆಂದು ಹೇಳುವ ಕ್ಷತ್ರಿಯ ಕುಲದ ತಾನಿಕನು (ಸ್ಥಾನಿಕನು) ದರ್ಶನ ಮಣಿ ಇಲ್ಲವೆ ಮುತ್ತು ಎಂದು ಹೇಳುವ ೨-೫ ಇಲ್ಲವೆ ೯ ಹಾಲು ಮಣಿಗಳನ್ನು ಪೋಣಿಸಿದ ದಾರವನ್ನು ಗುಡಿಯಲ್ಲಿರುವ ಎಲ್ಲಮ್ಮನ ಕೈಗೆ ಒಂದು ತುದಿಯನ್ನೂ ಜೋಗತಿಯಾಗುವವಳ ಕುತ್ತಿಗೆಗೆ ಮತ್ತೊಂದು ತುದಿಯನ್ನು ಕಟ್ಟುತ್ತಾನೆ. ಈಗ ಎಲ್ಲಮ್ಮ ದೇವಿಯನ್ನು ಚೌಡಕಿಯ ದನಿಯೊಡನೆ ಧೂಪ, ದೀಪಗಿಳಿಂದ ಬಗೆ ಬಗೆಯಾಗಿ ಅರ್ಚಿಸುವ ತಾನಿಕನು ಎಲ್ಲಮ್ಮನ ಕೈಗೆ ಕಟ್ಟಿರುವ ದಾರದ ತುದಿಯಿಂದ ದರ್ಶನ ಮಣಿಗಳನ್ನು ಜೋಗತಿಯ ಕುತ್ತಿಗೆಯ ವರೆಗೆ ತಂದು “ಉಧೋ ಎಲ್ಲಮ್ಮ ಉಧೋ ಜಯ” ಎಂದು ಹೇಳಿ ಮುತ್ತುಗಳನ್ನು ಕುತ್ತಿಗೆಗೆ ಕಟ್ಟುತ್ತಾನೆ. ನಂತರ ಜೋಗತಿಗೆ ತಾನಿಕನು ಪರಂಪರೆಯಿಂದ ಬಂದ ಕೆಲವು ಸಿದ್ಧ ಪ್ರಶ್ನೆಗಳನ್ನು ಕೇಳಿ ಸಿದ್ಧ ಉತ್ತರಗಳನ್ನು ಪಡೆಯುತ್ತಾನೆ. ನಂತರ ಅವನು ಹೊಸ ಜೋಗತಿಗೆ ಈ ಪ್ರಕಾರವಾಗಿ ಉಪದೇಶಿಸುತ್ತಾನೆ: ಕಟ್ಟಿದ ಕರು ಕಿತ್ತುಕೊಂಡರೆ ಹಸುವಿನ ಮೊಲೆಯುಣ್ಣುತ್ತಿದ್ದರೆ ಅದನ್ನು ಬಿಡಿಸಬಾರದು. ಸುಳ್ಳು ಹೇಳಬಾರದು, ನಿಸ್ಸಹಾಯಕ ಜನರಿಗೆ ಸಹಾಯ ಮಾಡಬೇಕು. ಸೇಡು ತೀರಿಸಿಕೊಳ್ಳಬಾರದು, ಎಂಜಲನ್ನು ಊಟ ಮಾಡಬಾರದು”. ಇಷ್ಟೆಲ್ಲ ಉಪದೇಶಿಸಿದ ಮೇಲೆ ತಾನಿಕನು “ಉಧೋ ಎಲ್ಲಮ್ಮ ಉಧೋ ಜಯ, ಎಕ್ಕಲ್ದೊ ಉಧೋ, ಜೋಗಲ್ದೋ ಉಧೋ” ಎಂದು ಹೇಳಿ ಜೋಗತಿಯ ತಲೆಯ ಮೇಲೆ ಎಲ್ಲಮ್ಮನ ಜಗ ಹೊರಿಸುತ್ತಾನೆ. ಜೋಗಪ್ಪಗಳ ಕೈಗೆ ಚೌಡಿಕೆ ಕೊಡುತ್ತಾನೆ.

ಇದಾದ ನಂತರ ಊರ ಜನರು ಹೊಸ ಜೋಗತಿಯನ್ನು ಭಕ್ತಿಯಿಂದ ಬರಮಾಡಿಕೊಳ್ಳುತ್ತಾರೆ. ಅವರಲ್ಲಿ ಕೆಲವರು ಮರದಲ್ಲಿ ಅಕ್ಕಿ ಅರಿಸಿಣ, ಕುಂಕುಮ, ಊದಿನ ಕಡ್ಡಿ, ಎಲೆಯಡಿಕೆ, ಒಂದಿಷ್ಟು ದುಡ್ಡು ಮುಂತಾದವುಗಳನ್ನು ತೆಗೆದುಕೊಂಡು ಜಗಕ್ಕೆ ಇಲ್ಲವೆ ಚೌಡಿಕೆಗೆ ಭಯ-ಭಕ್ತಿಗಳಿಂದ ಪೂಜೆ ಮಾಡಿ ಜೋಗಿತಯ ಪಾದಕ್ಕೆ ನಮಸ್ಕಾರಮಾಡಿ ಭಿಕ್ಷೆ ನೀಡುತ್ತಾರೆ. ಜೋಗತಿಯಾದವರು ಅವರ ಹಣೆಗೆ ಭಂಡಾರ ಹಚ್ಚಿ ಮುಂದೆ ಸಾಗುತ್ತಾರೆ. ಈ ಪ್ರಕಾರ ಅವರು ೩, ೫ ಅಥವಾ ೯ ಮನೆಗಳಲ್ಲಿ ಭಿಕ್ಷೆ ಬೇಡಿ ಬಂದ ಅಕ್ಕಿಯಿಂದ ಬೆಲ್ಲದನ್ನವಾಗಲಿ ಇಲ್ಲವೆ ಉಗ್ಗೆದನ್ನವನ್ನಾಗಲಿ (ಅರಿಸಿಣದ ಅನ್ನ) ಮಾಡಿ ಎಲ್ಲಮ್ಮನಿಗೆ ತಳಿಗೆ ಎರೆಯುತ್ತಾರೆ. ಈ ಪ್ರಸಾದವನು ಕೂಡಿದವರು ಕಣ್ಣಿಗೆ ಒತ್ತಿಕೊಂಡು ಸೇವಿಸುತ್ತಾರೆ.

ಇಷ್ಟೆಲ್ಲ ವೆಚ್ಚ ಮಾಡಲಿಕ್ಕೆ ಆಗದವರು ಬೆಳಗಾವಿ ಜಿಲ್ಲೆಯ ಸವದತ್ತಿಯ ಎಲ್ಲಮ್ಮನ ಗುಡ್ಡಕ್ಕೆ ಇಲ್ಲವೆ ಶಿವಮೊಗ್ಗೆ ಜಿಲ್ಲೆಯ ಚಂದ್ರಗುತ್ತಿಯ ಎಲ್ಲಮ್ಮನ ಗುಡಿಗೆ ಇಲ್ಲವೆ ಬಳ್ಳಾರಿ ಜಿಲ್ಲೆಯ ಉಚ್ಚಂಗಿ ದುರ್ಗದಲ್ಲಿರುವ ಎಲ್ಲಮ್ಮನ ಗುಡಿಗೆ ಹೋಗಿ ಜೋಗತಿಯಾಗುವವರನ್ನು ಎಲ್ಲಮ್ಮನಿಗೆ ಲಗ್ನ ಮಾಡಿಸುತ್ತಾರೆ.

ಹೀಗೆ ವಿಧಿವತ್ತಾಗಿ ಚೌಡಿಕೆ ಹಿಡಿದವರು ಜೋಗತಿಯರಾಗುತ್ತಾರೆಯೇ ಹೊರತು ಚೌಡಿಕೆ ಹಿಡಿದವರೆಲ್ಲರೂ ಜೋಗತಿಯರೆಂದು ತಿಳಿದುಕೊಳ್ಳಬಾರದು. ನಿಜವಾಗಿ ನೋಡಿದರೆ ಈ ರೀತಿಯ ಜೋಗತಿಯರು ಅತಿ ವಿರಳ. ನಿಜವಾದ ಜೋಗತಿಯರಿಗೆ ಸಮಾಜದಲ್ಲಿ ಮರ್ಯಾದೆಯೂ ಉಂಟು.

ಜೋಗಪ್ಪ-ಜೋಗಮ್ಮಳಿಗೆ ಮದುವೆಯಾಗಲಿಕ್ಕೆ ಬರುವುದಿಲ್ಲ. ಜೋಗಮ್ಮ ಆದವರು ತಾವು ಬಯಸಿದ ಉಪಚಾರದ ಗಂಡನೊಡನೆ ಕೂಡುವ ದಿವಸ ಹೆಚ್ಚಳ ಮಾಡುತ್ತಾಳೆ. ಈ ಶೋಭನದ ಕಾರ್ಯ ಎಲ್ಲಮ್ಮನ ಪೂಜೆಯ ಪವಿತ್ರ ಕಾರ್ಯದಷ್ಟೇ ಮಹತ್ವವಾದುದೆಂದು ಅವರು ಭಾವಿಸಿದ್ದಾರೆ. ಜೋಗಪ್ಪ-ಜೋಗಮ್ಮಗಳ ತಲೆಯ ಕೂದಲು ಜಡೆ ಕಟ್ಟಿಕೊಂಡರೆ ಅದು ಎಲ್ಲಮ್ಮನ ವರವೆಂದು ತಿಳಿದುಕೊಳ್ಳುತ್ತಾರೆ. ಆದರೆ ಇದು ವಿಜ್ಞಾನಿಗಳ ದೃಷ್ಟಿಯಲ್ಲಿ ಕೇವಲೊ ಒಂದು ದೈಹಿಕ ಪ್ರಕ್ರಿಯೆಯಾಗಿದೆ.

ಜೋಗಪ್ಪ-ಜೋಗಮ್ಮ ಆದವರು ನಿಧನರಾದರೆ ಅವರ ಶವವನ್ನು ಮಡಿ ಮಾಡಿ ಒಂಬತ್ತು ಬಣ್ಣದ ಪುಡಿಗಳ ರಂಗವಲ್ಲಿಯ ಮೇಲೆ ಪೂರ್ವಕ್ಕೆ ಮುಖಮಾಡಿ ಕೂಡಿಸುತ್ತಾರೆ. ನಾಲ್ಕು ಕಳಸಗಳಿಂದ ಬೆಳಗುತ್ತಾರೆ. ಹೆಣದ ಕುತ್ತಿಗೆಯಲ್ಲಿಯ ದರ್ಶನಮಣಿ ಹಾರವನ್ನು ತೆಗೆದು ಕಳಸಕ್ಕೆ ಹಾಕುತ್ತಾರೆ.

ಹೀಗೆ ಮಾಡಿದರೆ ಜೋಗತಿಯನ್ನು ಪ್ರಾಣದೇವರ ಸೆರಗಿನಿಂದ ಬಿಡಿಸಿ ಕೊಂಡಂತಾಯಿತೆಂದು ನಂಬುತ್ತಾರೆ. ಹೀಗೆ ಮಾಡದಿದ್ದರೆ ಅವರು ಅಂತರ್ ಪಿಶಾಚಿಯಾಗುವರೆಂದು ನಂಬಿಕೆ. ಈಗ ಶವವನ್ನು ಪಟ್ಟದಿಂದ ತೆಗೆದುಕೊಂಡು ದಹನ ಮಾಡುವರು ಇಲ್ಲವೆ ದಫನ್‌ ಮಾಡುವರು.

. ಎಲ್ಲಮ್ಮನ ಭಕ್ತರಲ್ಲಿ ವಿಧಗಳು:

ಜೋಗಪ್ಪ-ಜೋಗಮ್ಮ ಮತ್ತು ಇನ್ನುಳಿದ ಎಲ್ಲಮ್ಮನ ಭಕ್ತರಲ್ಲಿ ಅನೇಕ ವಿಧದವರಿದ್ದಾರೆ. ಅವರನ್ನು ಈ ಕೆಳಗಿನವುಗಳಂತೆ ವಿಂಗಡಿಸಬಹುದು.
(೧) ಗರತಿ ಮುತ್ತು ಹಾಕಿಕೊಂಡ ಜೋಗವ್ವಗಳು (೨) ಸೂಳೆ ಮುತ್ತು ಹಾಕಿಕೊಂಡ ಜೋಗವ್ವಗಳು (೩) ಜೋಗತಿ ಮುತ್ತು ಧರಿಸಿದ ಜೋಗಮ್ಮಗಳು (೪) ಪುರುಷ ವೇಷ ಧರಿಸಿದ ಜೋಗವ್ವಗಲು (೫) ಸ್ತ್ರೀ ವೇಷ ಧರಿಸಿದ ಜೋಗಪ್ಪಗಳು. (೬) ಮಂಗಳಾರತಿ ಜೋಗತಿಯರು ಮತ್ತು (೭) ಸಾದಾ ಭಕ್ತರು.

ಗರತಿಯರಾದ ಜೋಗವ್ವಗಳು ಬಿಳಿ ಬಣ್ಣದ ಮುತ್ತುಗಳನ್ನು ಧರಿಸಿ ಸಂಸಾರಿಕರಾಗಿರುತ್ತಾರೆ. ಸೂಳೆಯರಾದ ಜೋಗತಿಯರು ಕೆಂಪು ಬಣ್ಣದ ಮುತ್ತುಗಳನ್ನು ಕೊರಳ ಸರಗಳಲ್ಲಿ ಧರಿಸಿ ವ್ಯಭಿಚಾರಿಗಳಾಗಿರುತ್ತಾರೆ. ಸಾಮಾನ್ಯ ಜೋಗತಿಯರು ಬಿಳಿ ಮತ್ತು ಕೆಂಪು ಬಣ್ಣದ ಮಿಶ್ರ ಮುತ್ತುಗಳ ಸರಗಳನ್ನು ಕೊರಳಲ್ಲಿ ಧರಿಸುತ್ತಾರೆ. ಕೆಲವು ಶ್ರೀಮಂತ ಸ್ತ್ರೀಯರು ಜೋಗತಿಯರಾದರೆ ಬಂಗಾರದ ತಗಡಿನಿಂದ ದೇವರ ಮೂರ್ತಿಗಳನ್ನು ಮಾಡಿಸಿ ಸರದಲ್ಲಿ ಪೋಣಿಸಿ ಕೊರಳಲ್ಲಿ ಧರಿಸುತ್ತಾರೆ. ಜೋಗತಿ ಮುತ್ತುಗಳನ್ನು ಸಾಮಾನ್ಯವಾಗಿ ಎಲ್ಲ ಭಕ್ತರು ಪುರುಷರಾಗಲೀ, ಸ್ತ್ರೀಯರಾಗಲೀ ನಪುಂಸಕರಾಗಲೀ, ವಿಧವೆಯರಾಗಲೀ ಎಲ್ಲರೂ ಧರಿಸುವರು. ಯಾವುದೇ ತರದ ಮುತ್ತುಗಳನ್ನು ಧರಿಸದೆಯೇ ಎಲ್ಲಮ್ಮನ ಭಕ್ತರಾಗಲಿಕ್ಕೆ ಕೇವಲ ಭಂಡಾರ ಧರಿಸಿದರೆ ಸಾಕು.

ಎಲ್ಲಮ್ಮ ದೇವತೆಯ ಆದೇಶದ ಮೇರೆಗೆ ಈ ಜೋಗಪ್ಪ ಜೋಗವ್ವಗಳು ಪುರುಷರ ವೇಷವನ್ನಾಗಲೀ ಸ್ತ್ರೀಯರ ವೇಷವನ್ನಾಗಲೀ ಹಾಕಿಕೊಳ್ಳುತ್ತಾರೆ. ಮಂಗಳಾರತಿ ಜೋಗತಿಯರು ಎಲ್ಲಮ್ಮನ ದೇವಾಲಯಗಳ ಪೂಜಾರಿಗಳ ನಿವಾಸದ ಹತ್ತಿರವೇ ವಾಸವಾಗಿರುತ್ತಾರೆ. ಇವರು ದೇವಾಲಯದಲ್ಲಿ ಮಂಗಳಾರತಿ ಹಿಡಿದು ಪಣತಿಗಳಿಗೆ ಮತ್ತು ಆರತಿಗಳಿಗೆ ಎಣ್ಣೆ ಹಾಕಿ ಗುಡಿಯನ್ನು ಸ್ವಚ್ಛವಾಗಿಡುವ ಕೆಲಸಗಳಲ್ಲಿ ಪ್ರವೃತ್ತರಾಗಿರುತ್ತಾರೆ. ಇವರು ತಮ್ಮ ಮನಸ್ಸಿಗೆ ಬಂದವರೊಡನೆ ಸಮಾಗಮ ಮಾಡಲೂ ಬಹುದು.

ಮನೆಮನೆಗೆ ಹೋಗಿ ಧರ್ಮ ಪ್ರಚಾರ ಮಾಡುವ ಜೋಗಪ್ಪ ಜೋಗಮ್ಮಗಳನ್ನು ನಾಲ್ಕು ವಿಧದವರೆಂದು ಹೇಳಬಹುದು. (೧) ಕೊಡ ಹೊತ್ತವರು (೨) ಜಗ ಹೊತ್ತವರು (೩) ಪಡಲಗಿ ಹಿಡಿದವರು ಮತ್ತು (೪) ಚೌಡಿಕೆ ಹಿಡಿದವರು. ಜೋಗತಿಯಾಗಬಯಸುವವರು ದೀಕ್ಷೆಯನ್ನು ಪಡೆಯಬೇಕೆಂದೇ ಇಲ್ಲ.. ಅವರು ಅನುವಂಶಿಕವಾಗಿಯೂ ಜೋಗತಿಯಾಗಲಿಕ್ಕೆ ಬರುತ್ತದೆ. ಜೋಗತಿಯಾಗಬಯಸುವವರು ತಮ್ಮ ತಾಯಿಯಿಂದಾಗಲೀ ಇಲ್ಲವೆ ಅತ್ತೆಯಿಂದಾಗಲೀ ಕೊರಳಲ್ಲಿ ಧರಿಸುವ ಮುತ್ತಿನ ಸರವನ್ನು ಪಡೆದು ಜೋಗತಿಯರಾಗಬಹುದು.

ಜೋಗಪ್ಪ ಜೋಗುಳಮ್ಮಗಳನ್ನು ಸಾಮಾನ್ಯವಾಗಿ ಅವರು ಧರಿಸುವ ವೇಷ ಭೂಷಣಗಳ ಮೇಲೆ ಗುರುತಿಸಬಹುದು. ಅವರು ಕೈಯಲ್ಲಿ ಜಾಗಟೆ ಹಿಡಿದಿರುವರು. ಕರಡಿಯ ಕೂದಲುಗಳಿಂದ ಮಾಡಿದ ಚೌರಿಯನ್ನು ಹಿಡಿದಿರುವರು. ಕೊರಳಲ್ಲಿ ಕವಡೆ ಸರವನ್ನು ಧರಿಸುವರು. ಕಾಲಲ್ಲಿ ತೋಡೆ ಮತ್ತು ಗೆಜ್ಜೆಯ ಸರಗಳನ್ನು ಹಾಕುವರು. ಹಣೆಯ ಮೇಲೆ ಕುಂಕುಮ ಮತ್ತು ಅರಿಷಿಣ ಧರಿಸುವರು. ತಲೆಯ ಮೇಲೆ ಕೊಡ ಇಲ್ಲವೆ ಜಗ ಹೊರುವರು. ಕೈಯಲ್ಲಿ ಹಡಲಗಿ ಇಲ್ಲವೆ ಚೌಡಕಿ ಹಿಡಿದಿರಬಹುದು. ಅವರಿಗೆ ತಲೆಯ ಮೇಲೆ ಹೊತ್ತ ಜಗವು ಜಗತ್ತಿನ ಸ್ವರೂಪವೇ ಆಗಿದೆ. ಅದರಲ್ಲಿ ಎಲ್ಲಮ್ಮ ದೇವತೆ ಆಸೀನಳಾಗಿದ್ದಾಳೆ. ಕೊಡ ಹೊತ್ತಿದ್ದರೆ ಅದು ಎಲ್ಲಮ್ಮ ಕೊಡ ಹೊತ್ತು ನೀರು ತರುತ್ತಿದ್ದುದರ ದ್ಯೋತಕವಾಗಿದೆ. ಅವರ ವಾದ್ಯವಾದ ಚೌಡಿಕಿಯು ಕಟ್ಟಿಗೆಯಿಂದ ಮಾಡಲ್ಪಟ್ಟಿರುತ್ತದೆ. ಎರಡು ಅಡಿ ಉದ್ದದ ಒಂದು ಕಟ್ಟಿಗೆಯ ಕೋಲಿನ ತುದಿಗೆ ಒಂದು ಅಡಿ ಉದ್ದ, ಅರ್ಧ ಅಡಿ ವ್ಯಾಸದ ಸಿಲೆಂಡರಾಕಾರದ ಬುಟ್ಟಿಯನ್ನು ಜೋಡಿಸಿ ಕೋಲಿನ ಮತ್ತೊಂದು ತುದಿಯಿಂದ ತಂತಿಗಳನ್ನು ತಂದು ಸಿಲೆಂಡರಿನ ಒಳಭಾಗಕ್ಕೆ ಜೋಡಿಸಿ ಈ ವಾದ್ಯವನ್ನು ತಯಾರಿಸುತ್ತಾರೆ. ಈ ಸಿಲೆಂಡರಿನ ಸುತ್ತಳತೆ ೩೫ ಇಂಚು ಹೊರಗಾತ್ರದ ಅಳತೆಯದಾಗಿರುತ್ತದೆ. ಇದು ಸಾಮಾನ್ಯವಾಗಿ ತಂಬೂರಿಗಿಂತ ಸ್ವಲ್ಪ ಭಿನ್ನವಾಗಿ ಕಾಣುತ್ತದೆ.

. ಜನಪದ ಗೀತೆಗಳಲ್ಲಿ ಎಲ್ಲಮ್ಮನ ಜೋಗತಿಯರು:
ಜೋಗಪ್ಪ ಜೋಗಮ್ಮಗಳಲು ಮನೆಮನೆಗೆ ಹೋಗಿ ಮತ್ತು ಎಲ್ಲಮ್ಮನ ಗುಡಿಯ ಮುಂದೆ ಪಾತ್ರೆಗಳಲ್ಲಿ ಮತ್ತು ಇನ್ನುಳಿದ ದಿನಗಳಲ್ಲಿ ಜನಪದ ಹಾಡುಗಳನ್ನು ಹೇಳುತ್ತಾ ಕುಣಿಯುತ್ತಾರೆ. ಅವರ ಈ ಜನಪದ ಪದ್ಯಗಳಿಂದ ಅವರ ಪರಂಪರೆ ಮತ್ತು ಸಂಸ್ಕೃತಿಯ ಅನೇಕ ಮಹತ್ವದ ಸಂಗತಿಗಳನ್ನು ತಿಳಿದುಕೊಳ್ಳಬಹುದಾಗಿದೆ. ಅನೇಕ ವಿದ್ವಾಂಸರು ಈಗಾಗಲೇ ಇಂಥ ಪದ್ಯಗಳನ್ನು ಕಲೆ ಹಾಕಿ ಇಲ್ಲವೆ ಪ್ರಕಟಿಸಿ ಕನ್ನಡದ ಜನಕೋಟಿಗೆ ಉಪಕಾರ ಮಾಡಿದ್ದಾರೆ. ಇಂಥ ಕೆಲವು ಹಾಡುಗಳನ್ನು ಉದಾಹರಿಸಿ ಜನಪದ ಸಮಾಜಗಳಲ್ಲಿಯ ಜೋಗಪ್ಪ ಜೋಗಮ್ಮ ಇವರ ಜೀವನ ಮತ್ತು ಭಕ್ತಿ ಪಂಥದ ಪರಂಪರೆ ಮತ್ತು ಸಂಸ್ಕೃತಿಗಳನ್ನು ಈ ಕೆಳಗಿನಂತೆ ಗುರುತಿಸಬಹುದಾಗಿದೆ.

ಎಲ್ಲಮ್ಮನ ಭಕ್ತರ ಎಲ್ಲಮ್ಮನನ್ನು ಪೂಜಿಸುವಾಗ ಮತ್ತು ಜಾತ್ರೆಗೆ ಹೋಗುವಾಗ ಈ ಕೆಳಗಿನ ಘೋಷಣೆಗಳನ್ನು ಒಕ್ಕೂರಲಿನಿಂದ ಕೂಗುವರು.

“ಎಲ್ಲಮ್ಮಾ ನಿನ್ನಾಲ್ಕು ಉಧೋ ಉಧೋ
ಜೋಗುಳಬಾವಿ ಸತ್ಯವ್ವ ಉಧೋ ಉಧೋ
ತಂಗಿ ಮಾತಂಗಿ ಉಧೋ ಉಧೋ
ಜಮದಗ್ನಿ ನಿನ್ನಾಲ್ಕ ಉಧೋ ಉಧೋ” ಇತ್ಯಾದಿ.

ಇಲ್ಲಿ ಎಲ್ಲಮ್ಮನನ್ನು, ಅವಳ ತಾಯಿಯಾದ ಸತ್ಯವ್ವನನ್ನು, ಗಂಡನಾದ ಜಮದಗ್ನಿಯನ್ನು, ಮಗನಾದ ಪರಶುರಾಮನನ್ನು ಮತ್ತು ಅವಳ ಇನ್ನೂ ನಾಲ್ಕು ಮಕ್ಕಳನ್ನು ನೆನೆದು ಜಯಕಾರ ಮಾಡುವುದನ್ನು ಕಾಣಬಹುದು. ಇನ್ನು ಎಲ್ಲಮ್ಮನ ಕಥೆಗೆ ಸಂಬಂಧಿಸಿದ ಅನೇಕ ಮಹಾಪುರುಷರನ್ನು ನೆನೆಯುತ್ತಾರೆ.

ಸಿದ್ಧ ಸಂಪ್ರದಾಯದ ಸಿದ್ಧರು ಎಲ್ಲಮ್ಮನ ಪೂಜೆಯನ್ನು ವಿರೋಧಿಸಿದಂತೆ ಕಾಣುತ್ತದೆ. ಅದಕ್ಕಾಗಿ ಸಿದ್ಧರ ಸಂಹಾರವಾಗಿ, ಅವರು ಅವಳ ಉಪಾಸಕರಾಗುವಂಥೆ ಮಾಡಿದುದನ್ನು ಕೆಳಗಿನ ಜನಪದ ಪದ್ಯಗಳಲ್ಲಿ ಕಾಣಬಹುದು.

“ಮುನ್ನೂರರವತ್ತು ಸಿದ್ಧರ ಗುಡದಾಗ
ಆಳ್ವಿಕೆ ಮಾಡ್ಯಾರೋ ಬಲ್ಲಂಗ
ಚಕ್ರಹತಿಯಾರ ತಯ್ಯಾರ ಮಾಡ್ಯಾಳ್ಳಾಗ
ಸಿದ್ಧರ ಹೊಡದಾಳೊ ಕ್ಷಣದಾಗ,
ದೈತ್ಯರನ ಹೊಡದಾಳೊ ಗಳಿಗ್ಯಾಗ.”

ಈ ಪದ್ಯದಲ್ಲಿ ಎಲ್ಲಮ್ಮನ ಗುಡ್ಡದಲ್ಲಿ ಬಹಳ ಪ್ರಬಲರಾದ ಸಿದ್ಧರನ್ನು ಎಲ್ಲಮ್ಮನ ಭಕ್ತರು ಸಂಹರಿಸಿದರೆಂದು ತಿಳಿಯಬಹುದಾಗಿದೆ. ಭಾರತದಲ್ಲಿ ಸಿದ್ಧ ಸಂಪ್ರದಾಯ ಶೈವ ಸಂಪ್ರದಾಯದಲ್ಲಿ ತಾಂತ್ರಿಕರ ಒಂದು ಪಂಥ. ಅಂತಹವರನ್ನು ಈ ಶಕ್ತಿ ಸಂಪ್ರದಾಯ ಸಂಹರಿಸಿತೆಂಬ ಒಂದು ಐತಿಹಾಸಿಕ ಸತ್ಯ ಈ ಜನಪದ ಹಾಡಿನಿಂದ ಬೆಳಕಿಗೆ ಬರುತ್ತದೆ. ಪ್ರಾಚೀನ ಸಿದ್ಧ ಸಂಪ್ರದಾಯವು ಬಂಗಾಲದಲ್ಲಿ ಬೆಳೆದು ಕರ್ನಾಟಕದಲ್ಲಿ ಮಧ್ಯ ಯುಗದಲ್ಲಿ ಬಹಳ ಹಬ್ಬಿಕೊಂಡಿದ್ದಾಗ ಅದನ್ನು ಶಕ್ತಿ ಸಂಪ್ರದಾಯದವರು ಹತ್ತಿಕ್ಕಿದ ಉದಾಹರಣೆ ಇಲ್ಲಿ ಕಂಡು ಬರುತ್ತದೆ.

ಮತ್ತೊಂದು ಜನಪದ ಹಾಡಿನಲ್ಲಿ ಸಿದ್ಧರನ್ನು ಸಂಹರಿಸಿದ್ದನ್ನು ಹೀಗೆ ಹೇಳಲಾಗಿದೆ.

ಸಿದ್ಧರಿಗೆ ಬಂದಿತ ಯಮನ ಬಾದಿ
ಗವ್ಯಾಗ ಹೋಗಿಸಿದ
ಗುಂಡು ಬಡಿಸಿದಿ ಮಾಡಿಸಿ ಬಂಧೂರ.

ಮತ್ತೊಂದು ಜನಪದ ಹಾಡಿನಲ್ಲಿ:

“ಮಂಡಲದೊಳು ಮಾಯಕಾರ್ತಿ
ಮುನಿಗಳ ಗವಿಗೆ ಗುಂಡು ಜಡಿದು
ಗುಮರಿ ಹಾಕಿದಿ”.

ಎಂದು ಈ ಸಿದ್ಧ ಮುನಿಗಳನ್ನು ಯಾವ ಪ್ರಕಾರವಾಗಿ ಗವಿಯೊಳಗೆ ಬಂದು ಮಾಡಿ ಬಂಧನದಲ್ಲಿಟ್ಟರೆಂಬುದನ್ನು ವಿವರಿಸುತ್ತದೆ. ಮತ್ತೊಂದು ಜನಪದ ಹಾಡಿನಲ್ಲಿ

“ಏಳು ಕೋಟಿ ಸಿದ್ಧರನು ಹಾಳು ಮಾಡಿದ ದೇವಿ
ದಯಮಾಡು ಉಚ್ಚಂಗಿ ದೇವಿ”

ಎಂದು ಹೇಳಲಾಗಿದೆ.

ಮತ್ತೊಂದು ಕಡೆಗೆ

“ನಿಖಳ ನಿರ್ಜನರೆಂಬ ಮುನಿಗಳ ಕೆಡೆಸಿದೆ” ಎಂದು ಜನಪದ ಹಾಡಿನಲ್ಲಿ ವ್ಯಕ್ತವಾಗಿದೆ. ಮತ್ತೊಂದು ಜನಪದ ಪದ್ಯದಲ್ಲಿ

“ಏಳು ಮಂದಿ ಸಿದ್ಧರವರು
ಬ್ಯಾಟಿ ಆಡಿ ಬರುವುದರೊಳಗ
ಹೇಳಿದಂತ ಊಟ ತಯಾರು ಮಾಡಿ ಮಾಡಿ”.

ಉಂಡು ತಿಂದು ಕಕುಂತ ಬಳಿಕ
ರಂಗಿನ ಸಿದ್ಧರೇನಂತಾರ
ತಲಬಾತು ತಂದು ಕೊಡು ಗಾಂಜಿ ಪುಡಿ ಪುಡಿ
ನನ್ನವ್ವ ತಲಬಾತು ತಂದು ಕೊಡು ಗಾಂಜಿ ಪುಡಿ”.

ಅರವಿಯೊಂದ ಕಕ್ಕಡ ಮಾಡಿ
ಮರವಿನೊಂದ ಚಿಲುಮೆ ಮಾಡಿ
ಹದಮಾಡಿ ತಂದು ಕೊಟ್ಟಾಳ ಗಾಂಜಿ ಪುಡಿ ಪುಡಿ
ನನ್ನವ್ವ ಹದ ಮಾಡಿ ಕೊಟ್ಟಾಳ ಗಾಂಜಿ ಪುಡಿ.

ಏಳು ಮಂದಿ ಸಿದ್ಧರವರು ಗಾಂಜಿ ಸೇದಿ
ದಂಗು ಹಾರಿ ದಿಕ್ಕಿಗೊಬ್ಬರೋಡಿ ಓಡಿ
ಅವರು ಕಿತ್ತಿಪೊಗದ್ರು ನೆತ್ತಿಮ್ಯಾಗಿನ ಜಡಿ ಜಡಿ
ಅಷ್ಟರೊಳಗೆ ಒಬ್ಬ ರೇವಣಸಿದ್ಧ
ಕೊಲ್ಲಬ್ಯಾಡ ತಾಯಿಯೆಂದು
ಹುಲು ಕಡ್ಡಿ ಕಚ್ಚಿ ಶರಣ ಮಾಡಿ ಮಾಡಿ
ನನ್ನವ್ವ ಹುಲ್ಲು ಕಡ್ಡಿ ಕಚ್ಚಿ ಶರಣ ಮಾಡಿ ಮಾಡಿ

ಏಳು ಮಂದಿ ಸಿದ್ಧರನಾಗ ಒತ್ತಿ ಬಿಟ್ಟಾಳ
ಪಾತಾಳಕ ದೂಡಿ ದೂಡಿ
ಮ್ಯಾಲಿನಿಂದ ಸೀಸದ ಗುಂಡು ಓಡಿ ಓಡಿ
ನನ್ನವ್ವ ಮ್ಯಾಲಿನಿಂದ ಸೀಸದ ಗುಂಡು ಓಡಿ ಓಡಿ”.

ಈ ಜನಪದ ಹಾಡಿನಲ್ಲಿ ಸಿದ್ಧರನ್ನು ಸಂಹರಿಸಿ ಎಲ್ಲಮ್ಮ ಭಕ್ತರನ್ನಾಗಿ ಹೇಗೆ ಮಾಡಿಕೊಂಡಳೆಂಬುದನ್ನು ವಿವರಿಸಲಾಗಿದೆ. ಈ ಕತೆಗೆ ಸಂಬಂಧಿಸಿದಂತೆ ರೇವಣ ಸಿದ್ಧರ ಗುಡಿಯು ಎಲ್ಲಮ್ಮನ ಗುಡ್ಡದಲ್ಲಿ ಇಂದಿಗೂ ಸಾಕ್ಷಿಯಾಗಿ ನಿಂತಿದೆ. ಇಂಥ ಅನೇಕ ಪದ್ಯಗಳು ಎಲ್ಲಮ್ಮನ ಮಾಯೆ ಮತ್ತು ಮಹಿಮೆಯನ್ನು ಹೊಗಳುತ್ತವೆ. ಮತ್ತೊಂದೆಡೆಗೆ ಅವಳ ಮಹಿಮೆಯ ಬಗ್ಗೆ ಹೀಗೆ ಹೇಳಲಾಗಿದೆ.

“ವಾಸುಳ್ಳ ಹುಡಗನ್ನ
ಮೀಸೆಯ ತೆಗಿಸ್ಯಾಳ” ಎಂದು.

ಭಾರತದ ಧರ್ಮಗಳಲ್ಲಿ ಪುರಾತನ ಕಾಲದಿಂದಲೂ ಸಿದ್ಧಿಯ ತತ್ವವು ಮಾನಸಿಕ ಮತ್ತು ದೈವಿಕ ಶಕ್ತಿಯ ದ್ಯೋತಕವಾಗಿ ಬೆಳೆದು ಬಂದಿದೆ. ಇದನ್ನು ಬೆಳೆಸಿಕೊಂಡವರೇ ಸಿದ್ಧರು. ಈ ದೈವಿಕ ಶಕ್ತಿಯು ಯೋಗದಿಂದಲೇ ಬೆಳೆಯುತ್ತದೆ ಎಂದು ನಂಬಿದ್ದಾರೆ. ಆದರೆ ಜೋಗಿಗಳು ಯೋಗಕ್ಕೆ ಮಹತ್ವ ಕೊಟ್ಟು ಸಿದ್ಧರನ್ನು ಬೇರೆ ಒಂದು ಪಂಥದವರೆಂದು ಗಣಿಸಿರುವುದು ಪಾಂಥಿಕ ಭಿನ್ನತೆಯನ್ನು ತೋರಿಸುತ್ತದೆ. ನಾಥ ಯೋಗಿಗಳಿಗೂ ಸಿದ್ಧರಿಗೂ ಧಾರ್ಮಿಕ ಪಾಂಥಿಕ ಮತಗಳಲ್ಲಿ ಭಿನ್ನತೆ ಎದ್ದು ಅದು ಘರ್ಷಣೆಗೂ ಎಡೆಮಾಡಿಕೊಟ್ಟಂತೆ ತೋರುತ್ತದೆ. ಎಲ್ಲಮ್ಮನ ಜೋಗಿಗಳು ಏಕನಾಥ ಮತ್ತು ಜೋಗಿನಾಥರನ್ನು ಸ್ಮರಿಸುವುದನ್ನು ನೋಡಿದರೆ ನಾಥ ಜೋಗಿಗಳ ಸಂಪ್ರದಾಯಕ್ಕೆ ಒಳಪಟ್ಟ ಇವರನ್ನು ಸಿದ್ಧಯೋಗಿಗಳು ಎದುರಿಸಿದ್ದು ಪೌರಾಣಿಕ ಮತ್ತು ಐತಿಹಾಸಿಕ ಸತ್ಯವನ್ನು ತೋರಿಸುತ್ತದೆ. ಇಂದಿಗೂ ಎಲ್ಲಮ್ಮನ ಪೂಜೆಯನ್ನು ಮತ್ತು ಅವಳ ಜೋಗಿಗಳನ್ನು ವಿರೋಧಿಸುವ ಪಂಥದ ಜನರು ಇದ್ದಾರೆ.  ಅವರು ಭಂಡಾರವನ್ನು ಧರಿಸಲು ನಿರಾಕರಿಸುವರು.

ನಾಥ ಸಂಪ್ರದಾಯದ ಪ್ರಕಾರ ಈ ಜಗತ್ತು ಹುಟ್ಟುವ ಪೂರ್ವದಲ್ಲಿ ಎಲ್ಲವೂ ಕತ್ತಲುಮಯವಾಗಿತ್ತು. ಈ ಕತ್ತಲಿನಲ್ಲಿ ಒಂದು ಅಂಡವು ಜನನವಾಯಿತು. ಅದರಿಂದ ಆದಿನಾಥನು ಹುಟ್ಟಿ ಬಂದನು. ಅವನ ಬೆವರಿನಿಂದ ಮಸನಾ ಎಂಬ ಅವನ ಹೆಂಡತಿಯು ಹುಟ್ಟಿ ಬಂದಳು. ಅವರೀರ್ವರಿಗೆ ಬ್ರಹ್ಮ, ವಿಷ್ಣು ಮತ್ತು ಶಿವ ಹುಟ್ಟಿದರು. ಆದಿನಾಥನು ಸತ್ತ ನಂತರ ಅವನ ಶರೀರದ ಬೂದಿಯಿಂದ ಐದು ಜನ ಆದಿನಾಥರು ಹುಟ್ಟಿದರು. ಅವರೇ ನಾಥ ಸಂಪ್ರದಾಯಕ್ಕೆ ಬುನಾದಿ ಹಾಕಿದವರು. ಈ ಐದು ಜನ ನಾಥರ ಹೆಸರುಗಳು ಹೀಗಿವೆ. ಮೀನನಾಥ, ಗೋರಖನಾಥ, ಘೋರ, ಹಾದಿಪ ಮತ್ತು ಕನುಪ.

ನಾಥರು ಮುಖ್ಯವಾಗಿ ಶೈವ ಪಂಥದವರಾದರೂ ನಂತರ ವೈಷ್ಣವ ಪಂಥವನ್ನು ಅಂಗೀಕರಿಸಿದಂತೆ ತೋರುತ್ತದೆ. ಅವರು ರುದ್ರಾಕ್ಷಿಗಳನ್ನು ಧರಿಸಿ ಮೂರು ಪಟ್ಟದ ವಿಭೂತಿ ಧರಿಸಿ ಕೈಯಲ್ಲಿ ತ್ರಿಶೂಲ ಹಿಡಿಯುತ್ತಿದ್ದರು. ಭಾರತದ ಪೌರಾಣಿಕ ಮತ್ತು ಐತಿಹಾಸಿಕ ಕತೆಗಳಲ್ಲಿ ಸಿದ್ಧರಿಗೂ ಮತ್ತು ನಾಥರಿಗೂ ವೈರತ್ವ ಬೆಳೆದಿತ್ತಲ್ಲದೆ ಒಮ್ಮೊಮ್ಮೆ ಒಮ್ಮತವೂ ಆಗುತ್ತಿತ್ತು. ಅದಲ್ಲದೆ ಸಿದ್ಧರು ಮತ್ತು ನಾಥರು ತಮ್ಮಲ್ಲಿಯೇ ತಾತ್ವಿಕ ಒಳಭೇದಗಳನ್ನು ಮಾಡಿಕೊಂಡು ವೈರತ್ವ ಬೆಳೆಯಿಸಿಕೊಳ್ಳುತ್ತಿದ್ದರು. ಆದ್ದರಿಂದ ಈ ಯೋಗಿಗಳಿಗೆ ಅಥವಾ ಜೋಗಿಗಳಿಗೆ ನಾಥ-ಸಿದ್ಧರೆಂದೂ ಕರೆಯುತ್ತಿದ್ದರು. ಈ ತಾಂತ್ರಿಕರ ಪಂಥವು ಭಾರತ , ಟಿಬೇಟಗಳ ಬೌದ್ಧರಿಂದಲೂ, ಜೈನರಿಂದಲೂ, ವೈಷ್ಣವರಿಂದ ಶೈವರಿಂದಲೂ, ವೀರಶೈವರಿಂದಲೂ ಅಂಗೀಕರಿಸಲ್ಪಟ್ಟಿತು ಮತ್ತು ಜೋಗಿಗಳ ಗುಂಪು ಜೋಗಿ ಅಥವಾ ಜೋಗ್ಯಾರು ಅನ್ನುವ ಒಂದು ಜಾತಿಯನ್ನೇ ನಿರ್ಮಿಸಿತು. ಈ ಜಾತಿಯವರು ಈಗಲೂ ಮುತ್ತು ಮಣಿಗಳನ್ನು ಚಿಕ್ಕ ಪುಟ್ಟ ಸೌಂದರ್ಯದ ಸಾಮಾನುಗಳನ್ನು ಮಾರಾಟ ಮಾಡುತ್ತ ತಿರುಗುತ್ತಾರಲ್ಲದೆ ಚಿಕ್ಕ ಪುಟ್ಟ ತಗಡಿನ ಮತ್ತು ಕಬ್ಬಿಣದ ರಿಪೇರಿ ಕೆಲಸಗಳನ್ನೂ ಮಾಡುತ್ತಾರೆ.

ಕರ್ಪೂರದಾರತಿ ಮತ್ತು ಕರ್ಪೂರ ಸುಡುವುದು ಎಲ್ಲಮ್ಮನಿಗೆ ಅತೀ ಪ್ರೀತಿಯ ಪೂಜೆಯೆಂದು ಜನಪದ ಹಾಡುಗಳಲ್ಲಿ ವ್ಯಕ್ತವಾಗಿದೆ. ಅಲ್ಲದೆ

“ಹೂ ನನಗೆ ಮೀಸಲು
ಹಣ್ಣು ನನಗೆ ಮೀಸಲು
ಕಾಯಿ ಮೀಸಲು
ಕರ್ಪೂರ ಮೀಸಲು
ಸೀರಿ ಮೀಸಲು
ಕುಪ್ಪಸ ಮೀಸಲು
ಭಕ್ತಿ ನನಗೆ ಮೀಸಲು”

ಎಂದು ಹೇಳಲಾಗಿದೆ. ಮತ್ತೊಂದು ಜನಪದ ಪದ್ಯದಲ್ಲಿ ಶರೀಫ ಸಾಹೇಬರು ಹೀಗೆ ಹೇಳಿದ್ದಾರೆ.

“ಎಲ್ಲಮ್ಮಾನಂತಾಕೀ ಎಲ್ಲಿ ಕಾಣೆ
ಸೊಕ್ಕಿದ ಜನರ ಮನಸಾ ಕಂಡಿ
ಕಾರಿಕ-ಕಾಯಿಕ್ಕಿ ಕರ್ಪೂರ ಕಾಣಿಕಿಗೊಂಡಿ
ದಿಕ್ಕಿನೋಳ್‌ ಶಿಶುನಾಳ ಮುಕ್ಕನೊಳ್‌ ಕೂಡಿ
ಅಕ್ಕರದಲ್ಲಿ ಗುರುನಾಥ ಗೋವಿಂದಗೊಲಿದಿ”

ಎಂದು ಹೇಳಿದ್ದಾರೆ. ಎಲ್ಲಮ್ಮನ ಅವತಾರವನ್ನು ಜೋಗತಿಯರು ಈ ರೀತಿ ವರ್ಣಿಸಿದ್ದಾರೆ. ಆದ್ದರಿಂದ ಎಲ್ಲಮ್ಮನು ಅವತಾರ ವ್ಯಕ್ತಿಯೂ ಹೌದು.

“ಕೃತ ಯುಗದಿ ಆದಿಶಕ್ತಿರೂಪದಿ
ತ್ರೇತ್ರಾಯುಗದಿ ಸೀತೆಯ ರೂಪದಿ
ದ್ವಾಪರ ಯುಗದಿ ದ್ರೌಪದಿಯಾಗಿ
ಕಲಿಯುಗದಲ್ಲಿ ಶ್ರೀ ಎಲ್ಲಮ್ಮನೆಂಬ
ಅಚಲ ನಾಮವನು ಧರಿಸಿ ನೀ ಮೆರದಿ”

ಎಂದು ಹೇಳಲಾಗಿದೆ. ಆದರೆ ಎಲ್ಲಮ್ಮನನ್ನು ಹೀಯಾಳಿಸಿದವರು, ಅಪಮಾನ ಮಾಡಿದವರು ಅವಳ ಕೋಪಕ್ಕೆ ತುತ್ತಾದ ಅನೇಕ ಉದಾಹರಣೆಗಳಿವೆ = (ಜನಪದ ಹಾಡಿನಲ್ಲಿ). ಇಂಥವುಗಳಲ್ಲಿ ಮಾಲಗಾರ ನಾಗಶೆಟ್ಟಿ ಎಂಬುವನೂ ಒಬ್ಬ. ಅವನ ಬಗ್ಗೆ ಜೋಗತಿಯರು ಹೀಗೆ ಹಾಡುತ್ತಾರೆ.

“ಬೆಳ್ಳಿ ತಕ್ಕಡಿ ಮಾಡಿ
ಬಂಗಾರ ಪರಡಿ ಮಾಡಿ
ತೂಗ್ತಾನ ಮಾಲಗಾರ ನಾಗಶೆಟ್ಟಿ
ಒಂದು ಉಳ್ಳೇಗಡ್ಡಿ ಬೇಡುವಾಗ
ಬಾಯಿಮೇಲೆ ಹೊಡೆದೇನಂದ.
ಅವನ ಎಂಟೆತ್ತು ಸತ್ತಾವ
ಅವನ ಎಂಟೆಮ್ಮ ಸತ್ತಾವ
ಅವನ ತುಟಿ ನೋಡ ತುಬ್ರಿ ಹುಣ್ಣು
ದೇವಿ ಸಾಕ ಮಾಡಾ ಜಗದಂಬಾ
ಯವ್ವ ಹಿರಿಯ ಗುಡ್ಡ ಹತ್ತುತೀನಿ
ಯವ್ವ ಸೀರಿ ಕುಬಸ ಉಡಸತೀನಿ”.

ನಾಗಶೆಟ್ಟಿಯೂ ಅಲ್ಲದೆ ಓರಂಗಲ್ಲ ರಾಜನೂ ಕೂಡಾ ಎಲ್ಲಮ್ಮನ ಮಾಯಕ್ಕೆ ಸೋತ ಉದಾಹರಣೆಯ ಗೀತವಿದೆ.

“ಓರಂಗಲ್ಲ ರಾಯನೆಂಬ ಶೀಲವಂತ |
ಭಾಳ ಶೀಲವಂತನ |
ಎಲ್ಲಾ ಪಂತಗಾರನ |
ಅಂಥವನ ಮನೆಗೆ ಹ್ವಾದಾಳೆಲ್ಲಿ
ಜೋಗಿ ಹೇಳಿ ನಿಂತಾಳೆಲ್ಲಿ
ಭಿಕ್ಷನಾದರೂ ನೀಡೋ ಮಗನ |
ದಾನಾ ಆದರೂ ಕೊಡೋ ಮಗನ |

ಹೆಣ್ಣೆಂಬ ದೇವತೆಗಳು ನಮ್ಮಲ್ಲಿಲ್ಲ ಹೋಗೆಂದ |
ಭಂಡಾರ ಕೊಟ್ರ ನಾವು ಇಂದು ಧರಿಸೋದಿಲ್ಲ ಹೋಗೆಂದ |
ಎಂಟು ಎತ್ತಿನ ಬಾರಕೋಲ
ಸುತ್ತಿ ಸುತ್ತಿ ಬಡದಾನಲ್ಲ
……………………….
ಓರಂಗಲ್ಲ ರಾಯಗೆಲ್ಲ ಬ್ಯಾನಿ ಎಂಥಾದಾಕ್ಯಾಳ
ಅಂಗಾಲ ಬ್ಯಾನಿ ಘನವಾದವೆಲ್ಲ
ತಗಿ ನನ ಜಗದಮಬಾ |
ಗಿರಿವಾಸಾದರ ಏರೇನಂದಾನ
ಪೌಳಿ ಮ್ಯಾಲೆ ಕುಣಿದೇನೆಂದಾನ.”

ಮತ್ತೊಂದು ಜನಪದ ಹಾಡಿನಲ್ಲಿ ಶೂರ ಧೀರ ರಾಜರನ್ನು ಜೋಗಪ್ಪರನ್ನಾಗಿ ಮಾಡಿದ ಮಹಿಮೆಯ ಜನಪದ ಗೀತವು ಡಾ. ಬಿ.ಎಚ್‌. ಬಸವರಾಜಪ್ಪ ಇವರಿಂದ ಸಂಗ್ರಹಿಸಲ್ಪಟ್ಟಿದ್ದು ಹೀಗಿದೆ.

“ಎಲ್ಲಾಡಿ ಎಲ್ಲಾಡಿ ಬಂದೆಮ್ಮ | ಎಲ್ಲಮ್ಮ ದೇವಿ
ನೀ ಎಲ್ಲಾಡಿ ಎಲ್ಲಾಡಿ ಬಂದೆಮ್ಮಾ
ಓರಂಗಲ್ಲಿಗೆ ಹೋದೆವ್ವ
ನೀ ಜೋಗನ ಮಾಡಿದೆ
ಓರಂಗಲ್ಲಯ್ಯ ದೊಡ್ಡವನೆಂದರೆ
ವಿಭೂತಿ ಮ್ಯಾಲೆ ಭಂಡಾರ ಇಡಿಸ್ಯಾಳ
ದಿಲ್ಲಿ ಪಟ್ಟಣಕೆ ಹೋದೆವ್ವ
ನೀ ಜೋಗಾನ ಮಾಡಿದೆ
ನೀ ಆಗ ಜೋಗಾನ ಮಾಡಿದೆ
ದಿಲ್ಲಿ ಪಟ್ಟಣದವ ದೊಡವನೆಂದರೆ
ಬೆಳ್ಳಿಯ ಪಡಲಗಿಯ ಹೊರಿಸಿದೆ
ಎಲ್ಲವ್ವಾ ಎಲ್ಲಾಡಿ ಎಲ್ಲಾಡಿ ||

ಆನೆಗೊಂದಿಗೆ ಹೋದೆವ್ವ
ಹೋಗಿ ಜೋಗಾನ ಮಾಡಿದೆ
ಆಗ ನೀ ಜೋಗಾನ ಮಾಡಿದೆ
ಆನೆಗೊಂದಿರಾಯ ದೊಡ್ಡವನೆಂದರೆ
ನಾಮದ ಮ್ಯಾಲೆ ಭಂಡಾರವ ಇಡಿಸ್ಯಾಳ.”

ಈ ಮೇಲಿನ ಜೋಗತಿಯರ ಪದದಲ್ಲಿ ಎಲ್ಲಮ್ಮನು ಓರಂಗಲ್ಲಿನ ರಾಜನಾದ ಪ್ರತಾಪರುದ್ರನನ್ನು, ದಿಲ್ಲಿಯ ಅರಸನನ್ನೂ , ಆನೆಗೊಂದಿಯ ಅರಸನನ್ನೂ ಜೋಗಿಗಳನ್ನಾಗಿ ಪರಿವರ್ತಿಸಿದ ಮಹಿಮೆಯನ್ನು ಕೊಂಡಾಡಲಾಗಿದೆ. ರೇಣುಕಾ ಮಹಾತ್ಮೆ ಇಡೀ ಭಾರತ ದೇಶದ ತುಂಬೆಲ್ಲ ಹಬ್ಬಿದ ಸಂಗತಿಯನ್ನು ವಿವರಿಸಲಾಗಿದೆ. ಇಲ್ಲಿ ಜೋಗತಿಯರು ಎಲ್ಲಮ್ಮನ ಪ್ರತಿರೂಪವೇ ಎಂಬಂತೆ ಹೇಳಿಕೊಳ್ಳಲಾಗಿದೆ.

ಉತ್ತರ ಕರ್ನಾಟಕದ ಜನಪದ ಗೀತೆಗಳಲ್ಲಿ ಜೋಗಪ್ಪ ಜೋಗಮ್ಮಗಳು ಎಲ್ಲಮ್ಮನಿಗೆ ಪ್ರಾಣಿ ಬಲಿ ಕೊಡದಿರುವ ಪದ್ಯಗಳನ್ನು ಮತ್ತು ಮಧ್ಯ ಕರ್ನಾಟಕದ ಜನಪದ ಗೀತೆಗಳಲ್ಲಿ ಪ್ರಾಣಿವಧೆಯನ್ನು ಮಾಡುವ ಉದಾಹರಣೆಗಳು ಗಮನಾರ್ಹವಾಗಿವೆ. ಉತ್ತರ ಕರ್ನಾಟ          ಕದ ಗೀತಗಳಲ್ಲಿ

“ಹೂ ನನಗೆ ಮೀಸಲು ರಾಮ
ಹಣ್ಣು ನನಗೆ ಮೀಸಲು ರಾಮ
ಹೂವು ಎಂಬುದು ಹುಳುವಿನ ಎಂಜಲು
ಹೆಣ್ಣೆಂಬುದು ನೊಣವಿನೆಂಜಲು
ಕಾಯಿ ಮೀಸಲು ಕರ್ಪೂರ ಮೀಸಲು
ಕಾಯಿ ಎಂಬುದು ಕಲ್ಲಿನೆಂಜಲು
ಕರ್ಪೂರವೆಂಬುದು ಕಡ್ಡಿನೆಂಜಲು
ಸೀರೆ ಮೀಸಲು ಕುಪ್ಪುಸ ಮೀಸಲು
ಸೀರಿ ಎಂಬುದು ಲಾಳಿ ಎಂಜಲು
ಕುಪ್ಪಸ ಎಂಬುದು ಕತ್ರಿ ಎಂಜಲು

ಹುಗ್ಗಿ ನನಗೆ ಮೀಸಲು ರಾಮ
ಹೋಳಿಗೆ ನನಗೆ ಮೀಸಲು ರಾಮ
ಹುಗ್ಗಿ ಎಂಬುದು ಹುಟ್ಟಿನೆಂಜಲು
ಹೋಳಿಗೆ ಎಂಬುದು ಕಲ್ಲಿನೆಂಜಲು” ಇತ್ಯಾದಿ.

ಅದೇ ಮಧ್ಯ ಕರ್ನಾಟಕದಲ್ಲಿ ಡಾ. ಬಿ.ಎಚ್‌. ಬಸವರಾಜಪ್ಪ ಸಂಗ್ರಹಿಸಿದ ಜನಪದ ಹಾಡಿನಲ್ಲಿ ಪ್ರಾಣಿವಧೆ ಕಂಡು ಬಂದಿದೆ.

“ಕುರಿಯು ನನಗೆ ಮೀಸಲು ರಾಮ
ಕೋಣ ನನಗೆ ಮೀಸಲು ರಾಮ
ಕುರಿ ಎಂಬುದು ಚೂರಿ ಎಂಜಲು
ಕೋಣವೆಂಬುದು ಕೊಡಲಿ ಎಂಜಲು
ಯಾವುದು ಮೀಸಲು ತಾಯಿ” ಇತ್ಯಾದಿ

ಅವರೇ ಸಂಗ್ರಹಿಸಿದ ಮತ್ತೊಂದು ಮಧ್ಯ ಕರ್ನಾಟಕದ ಜನಪದ ಹಾಡಿನಲ್ಲಿ ಪ್ರಾಣಿವಧೆಯು ಈ ರೀತಿಯಾಗಿ ವ್ಯಕ್ತವಾಗಿದೆ.

“ವರವನ್ನು ಪಾಲಿಸು ಜಗದಂಬಾ
ವರಗಳು ಮುಗಿದಾವು ಕೊಡು ಬೇಗನೆ ತಾಯಿ
ಮಂಗಳವಾರ ಮೆರೆವುದು ಪಲ್ಲಕ್ಕಿ ಸೇವೆ
ದಯಮಾಡು ಉಚ್ಚಂಗಿ ದೇವಿ |

ದೇವಿ ಜಾತ್ರಿ ಆಗುವುದು ಬಹು ಚೆಂದ
ರಕ್ತವು ಹರಿದು ಗುಡಿ ಮುಂದೆ
ದಯ ಮಾಡು ಉಚ್ಚಂಗಿ ತಾಯಿ
ವರವನ್ನು ಪಾಲಿಸು ಜಗದಂಬಾ ಮಾಯಿ”

ಜೋಗತಿಯರ ಜನಪದ ಜೀವನದ ಚಿತ್ರವನ್ನು ನಾವು ಶ್ರೀ ಮತಿಘಟ್ಟ ಕೃಷ್ಣಮೂರ್ತಿಯವರು ಸಂಗ್ರಹಿಸಿದ ಜನಪದ ಹಾಡಿನಲ್ಲಿ ಕಾಣಬಹುದು.

ಎತ್ತಲಿಂದ ಬಂದೇ ಹುಚ್ಚು ನನ್ನ ಜೋಗತಿ-

ತಂದನ್ನಿ ತಾನೋ
ಅತ್ತೆ ಇದ್ದಾಳೆ ಮನೆಯಾಗೇ
ಅತ್ತೆ ಇದ್ದಾಳೆ ಮನೆಯಾಗೆ ಎಲ್ಲಮ್ಮ
ಇತ್ತಲ ಬೀದೀಲಿ ಬರದೀರೇ
ಅತ್ತೆಯ ಕೊಂದಾಳೇ ಇತ್ತಲಾಗೆ ಎಸದಾಳೆ

ಮಾವನ ಕಣ್ಣ ಕಳದಾಳೆ ಎಲ್ಲವ್ವ
ಗಂಡನಿಗೆ ಹುಚ್ಚು ಹಿಡಿಸ್ಯಾಳೆ ಎಲ್ಲವ್ವ
ಕಂದನಿಗೆ ಬೇವ ಬೆರಸಾಳೆ
ಬೇಗೆಯ ನಿಶ್ಯಾಳ ಬೇಲ್ಯಾಗ ನಿಂತಾಳೆ
ನಾನಲ್ಲವೆಂದು ನಗತಾಳೇ

ಹಟ್ಟೀಲಿ ಕಂಡೇನೆ ಬಟ್ಟೆ ಮುಖದ ಜೋಗತಿಯ
ಬೆಟ್ಟಾಗಿಭೋತೀ ಧರಿಸೋಳೆ ಎಲ್ಲವ್ವ
ದೃಷ್ಟಿ ಇಟ್ಟಾಳ್ಳೆ ಕರಿಯಲ್ಲ
ಹಾದೀಲೆ ಕಂಡೇನೆ ಹಾಲಿನಂಥ ಜೋಗತಿಯ
ಹಣೆಯಲೀಭೂತಿ ಧರಿಸೋಳೆ ಎಲ್ಲವ್ವ
ದೃಷ್ಟಿ ಇಟ್ಟಳ್ಳೆ ಶರಿಯಲ್ಲ”.

. ಉಪಸಂಹಾರ:

ಈ ಮೇಲಿನ ವಿವರಣೆಗಳಿಂದ ಜೋಗಪ್ಪ-ಜೋಗಮ್ಮ ಮತ್ತು ಇನ್ನುಳಿದ ಎಲ್ಲಮ್ಮನ ಭಕ್ತರ ಸಂಪ್ರದಾಯ ಭಾರತ ತುಂಬೆಲ್ಲಾ ಹಬ್ಬಿದುದೆಂದೂ ಮತ್ತು ಅತೀ ಪುರಾತನ ಕಾಲದಲ್ಲಿಯೇ ಅಂದರೆ ರಾಮಾಯಣಕ್ಕೆಕ ಪೂರ್ವದಲ್ಲಿಯೇ ಇಂಥ ಪಂಥ ಪ್ರಾರಂಭವಾಯಿತೆಂದೂ ನಾವು ದೃಢವಾಗಿ ಹೇಳಬಹುದು. ಎಲ್ಲಾ ಜೋಗಪ್ಪ ಮತ್ತು ಜೋಗವ್ವಗಳು ವೇಶ್ಯಾ ಪದ್ಧತಿಯನ್ನು ಅನುಸರಿಸುವರೆಂದು ತಿಳಿದುಕೊಳ್ಳಬಾರದು. ಈ ಮೊದಲೇ ಹೇಳಿದಂತೆ ಸೂಳೆ ಮುತ್ತುಗಳನ್ನು ಧರಿಸಿದವರು ಮಾತ್ರ ವೇಶ್ಯಾವೃತ್ತಿಗೆ ಇಳಿದವರು.

ಜೋಗತಿಯರಲ್ಲಿ ಮತ್ತು ದೇವದಾಸಿಯರಲ್ಲಿ ಇರುವ ಅತೀ ಮಹತ್ವದ ವ್ಯತ್ಯಾಸವೆಂದರೆ ಜೋಗತಿಯರು ಕೇವಲ ಎಲ್ಲಮ್ಮನ ಪಂಥವನ್ನು ಪ್ರಸಾರ ಮಾಡುತ್ತಾರೆ. ಆಚಾರವಂತರಾಗಿ ಧಾರ್ಮಿಕ-ಭಿಕ್ಷುಕ ವೃತ್ತಿಯವರಾಗಿದ್ದಾರೆ.  ಜೋಗತಿಯರಲ್ಲಿ ವ್ಯಭಿಚಾರ ಇರಲಿಕ್ಕೆ ಒಂದು ಧಾರ್ಮಿಕ ಕಾರಣವೂ ಇರಬಹುದು. ಯಾಕೆಂದರೆ ಶಾಕ್ತ ಸಂಪ್ರದಾಯದಲ್ಲಿ ಮದ್ಯ, ಮಾಂಸ, ಮತ್ಸ್ಯ, ಮೈಥುನ ಮತ್ತು ಮುದ್ರಾ ಎಂಬ ಪಂಚ ‘ಮ’ ಕಾರಗಳನ್ನು ದೇವತೆಯನ್ನು ಒಲಿಸುವ ಸಾಧನಗಳೆಂದು ತಿಳಿಯಲಾಗಿದೆ. ಆದ್ದರಿಂದ ಈ ಶಾಕ್ತ ಸಂಪ್ರದಾಯದ ಜೋಗಿಗಳು ಮೈಥುನವನ್ನು ವ್ಯಭಿಚಾರದ ರೂಪದಲ್ಲಿ ಅಲ್ಲಗಳೆಯಲಿಲ್ಲವೆಂದು ತೋರುತ್ತದೆ. ಇಂಥ ವಿಧಿಗಳಿಗೆ ಧರ್ಮಶಾಸ್ತ್ರದಲ್ಲಿ ವಾಮಾಚಾರವೆಂದೂ ಕರೆಯುತ್ತಾರೆ.  ಈ ಸಂಪ್ರದಾಯದವರು ಆಚರಿಸುವ ಬೆತ್ತಲೆ ಸೇವೆಯೂ ಇಂಥ ವಾಮಾಚಾರಗಳಲ್ಲಿ ಒಂದು ಎಂದು ಹೇಳಬಹುದು.

ದೇವದಾಸಿಯರು ಕೆಲವೊಂದು ದೇವಾಲಯಗಳ ದೇವರುಗಳ ಹೆಸರಿನಲ್ಲಿ ಬದುಕುತ್ತಾರೆ. ಆದ್ದರಿಂದ ಜೋಗತಿ ಪದ್ಧತಿ, ದೇವದಾಸಿ ಪದ್ಧತಿ ಮತ್ತು ವೇಶ್ಯಾವೃತ್ತಿಗಳಲ್ಲಿ ಮೂಲತಃ ಮಹತ್ವದ ಅಂತರವಿದೆ. ದೇವದಾಸಿ ಪದ್ಧತಿ ಮತ್ತು ಜೋಗತಿ ಪದ್ಧತಿಗಳು ಸಾಮಾಜಿಕ ಬದಲಾವಣೆಯಿಂದಾಗಿ ಅಳಿದು ಹೋಗುತ್ತಿವೆ.

ಜೋಗತಿ ಪದ್ಧತಿಯನ್ನು ಹೆಚ್ಚಾಗಿ ಹಿಂದುಳಿದ ಜಾತಿಯ ಜನರು ಅನುಕರಿಸುತ್ತಿರುವುದರಿಂದ ಅದೊಂದು ಚಿಕ್ಕ ಸಂಪ್ರದಾಯವಾಗಿ [Little Tradition] ಬೆಳೆದಿದೆ. ಎಲ್ಲಮ್ಮ ಅಥವಾ ರೇಣುಕಾ ದೇವಿಯ ಬಗ್ಗೆ ಅನೇಕ ಪುರಾಣಗಳಲ್ಲಿ ಹೇಳಿರುವುದರಿಂದ ಮತ್ತು ಅವಳ ಮಗನಾದ ಪರಶುರಾಮನು ವಿಷ್ಣುವಿನ ಅವತಾರವೆಂದು ಹಿಂದೂ ಜನರು ನಂಬಿರುವುದರಿಂದ ಮತ್ತು ಅವರ ಪಂಥವನ್ನು ಮಹಾ ಸಂಪ್ರದಾಯದ [Great Tradition] ಜನರೂ ಅನುಸರಿಸುತ್ತಿರುವುದರಿಂದ ಅದು ಭಾರತದಲ್ಲಿ ಮಹಾಸಂಪ್ರದಾಯವೂ ಆಗಿದೆ.

ಅಷ್ಟೇ ಅಲ್ಲದೆ ದುರ್ದೈವದಿಂದ ಜೋಗತಿ ಸಂಪ್ರದಾಯವು ದೇವದಾಸಿ ಪದ್ಧತಿಯಂತೆ ವೇಶ್ಯಾವೃತ್ತಿಯನ್ನು ಉಲ್ಬಣಗೊಳಿಸುತ್ತಿರುವುದರಿಂದ ಅದು ತನ್ನ ನೈತಿಕ, ಧಾರ್ಮಿಕ ಮತ್ತು ಸಾಮಾಜಿಕ ಮಹತ್ವವನ್ನು ಕಳೆದುಕೊಂಡಿದೆ. ಬಡವರಿಗೆ ನಿಸ್ಸಹಾಯಕರಿಗೆ, ಊನರಿಗೆ, ಮಾನಸಿಕ ರೋಗಿಗಳಿಗೆ ಮತ್ತು ನಪುಂಸಕರಿಗೆ ಧರ್ಮದ ಹೆಸರಿನಲ್ಲಿ ಹೊಟ್ಟೆ ತುಂಬಿಕೊಳ್ಳಲಿಕ್ಕೆ ಅನುಕೂಲ ಮಾಡಿಕೊಟ್ಟಿದೆ.

ಎಲ್ಲಮ್ಮನ ಜೋಗಪ್ಪಗಳು ಮತ್ತು ಜೋಗಮ್ಮಗಳು ಧಾರ್ಮಿಕ ವೃತ್ತಿಯ ಭಿಕ್ಷುಕರಾಗಿದ್ದಾರೆ. ಆದರೆ ಅದೇ ಸಿದ್ಧ-ನಾಥ ಪಂಥದ ಜೋಗಿಗಳು ಬೇರೆ ಒಂದು ಜಾತಿಯನ್ನೇ ನಿರ್ಮಿಸಿದ್ದಾರೆ. ಪುರಾಣದಲ್ಲಿ ಪರಶುರಾಮನು ಕ್ಷತ್ರಿಯರನ್ನು ಸಂಹರಿಸಿ ಎಲ್ಲಮ್ಮನಿಗೆ ಶರಣಾಗತರಾಗುವಂತೆ ಮಾಡಿದುದನ್ನು ನೋಡಿದರೆ ಈ ಜೋಗಿಗಳ ಸಂಪ್ರದಾಯ ಎಷ್ಟು ಪುರಾತನವೆಂಬುದು ತಾನೇ ಸ್ಪಷ್ಟವಾಗುತ್ತದೆ. ಸಿದ್ಧ-ನಾಥ ಜೋಗಿಗಳಲ್ಲಿ ಧಾರ್ಮಿಕ ವೃತ್ತಿಯ ಭಿಕ್ಷುಕರೂ ಇದ್ದಾರೆ. ಈ ಜೋಗಿಗಳು ಎಲ್ಲಮ್ಮನ ಜೋಗಿಗಳಾಗಿರುವುದಿಲ್ಲ.

ಮಹಾರಾಷ್ಟ್ರದಲ್ಲಿಯ ಜೇಜೂರಿ ಎಂಬಲ್ಲಿಯ ಏಕವೀರ (ರೇಣುಕಾ) ಎಂಬ ದೇವತೆಯ ದೇವದಾಸಿಯರನ್ನು ಮುರಲಿ ಮತ್ತು ವ್ಯಾರ್ಷ್ಯಾ ಎಂದು ಕರೆಯುತ್ತಾರೆ. ಪೂರ್ವ ಮಹಾರಾಷ್ಟ್ರದಲ್ಲಿ ಬಹಳಷ್ಟು ಮನೆತನದ ಜನರು ಮಹೂರಗಡದ ರೇಣುಕಾದೇವಿಯನ್ನು ಪೂಜಿಸುತ್ತಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಸರಗೋಡ ಊರಿನ ಹತ್ತಿರ ಅರೇಬಿಯಾದಿಂದ ಬಂದ ನವಾಯತ ಜನರು ಸಮೀಪದ ಒಂದು ಗುಡ್ಡಕ್ಕೆ “ಎಲ್ಲಾರ್ಯ ಗುಡೋ” ಎಂದು ಕೊಂಕಣಿ ಭಾಷೆಯ ಪ್ರಭಾವದಿಂದ ಕರೆಯುತ್ತಾರೆ. ಇದು ಅಚ್ಚಗನ್ನಡದಲ್ಲಿ ಎಲ್ಲಮ್ಮನ ಗುಡ್ಡವೆಂದೇ ಅರ್ಥವಾಗುತ್ತದೆ. ಅದು ಅವರಿಗೆ ಪೂಜ್ಯಸ್ಥಾನವಾಗಿದೆ. ಅವರ ಸಂಪ್ರದಾಯದ ನಂಬಿಗೆಯಂತೆ ಆ ಗುಡ್ಡದ ಮೇಲಿನಿಂದ ಇಬ್ಬರು ಜೋಗತಿಯರು ಹಾರಿ ಮಹಾಸತಿಯರಾದರೆಂದು ತಿಳಿದು ಬರುತ್ತದೆ. ಕೊಂಕಣ ಪ್ರದೇಶವು ಪರಶುರಾಮನ ನಾಡೆಂದು ಪುರಾಣ ಪ್ರಸಿದ್ಧಿಯನ್ನು ಪಡೆದಿದೆ. ಆದ್ದರಿಂದ ಈ ಜಿಲ್ಲೆಯ ಎಲ್ಲಾಪುರವೆಂಬ ಊರು ತನ್ನ ಹೆಸರನ್ನು ಈ ಪಂಥದವರಿಂದ ಪಡೆದಿರಬೇಕು. ಜೋಗಿಗಳ ಸಂಪ್ರದಾಯ ರೇಣುಕಾ ದೇವಿಯ ಇರುವಾಗಲೇ ಪ್ರಾರಂಭವಾಗಿ ಹಾಗೆ ಮುಂದುವರಿಯಲಿಕ್ಕೆ ಸಾಕು.

 

ಆಧಾರ ಗ್ರಂಥಗಳು

ಕಡೆತೋಟದ, ಎನ್‌.ಕೆ. : ಎಲ್ಲಮ್ಮನ ಜೋಗತಿಯರು ಹಾಗೂ ದೇವದಾಸಿ ಪದ್ಧತಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೮೩.

ಗುಬ್ಬಣ್ಣನವರ ಶಿವಾನಂದ: ಬರಕೋ ಪದಾ ಬರಕೋ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೮೦.

ಮತಿಘಟ್ಟ, ಕೃಷ್ಣಮೂರ್ತಿ:    ಗೀತಗಳು, ಗುರುಮೂರ್ತಿ ಪ್ರಕಾಶನ, ಬೆಂಗಳೂರು, ೧೯೭೫.

ಸುಂಕಾಪುರ, ಎಂ.ಎಸ್‌.:   ಜೋಗತಿ ಹಾಡು: ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೭.

D’ Souza, Victor S.:    The Navayats of Kanara, Kannada Research Institute, Dharwad 1955.

Haridas Bhattacharya:            The Cultural Heritage of India Vol.IV Ramakrishna Mission, Calcutta 1969

Thurston E.: Castes and Tribes of Southern India, Madras Govt Press, Madras 1969.

 ಶಬ್ದಾರ್ಥ

 

ಎರೆ-ಹೊಯ್ಯು = ಸುರಿ

ತಲಬಾತು = ತಲಬು = ಚಟ

ದಪನ = ಹುಗಿಯುವುದು

ಹೆಚ್ಚಳೆ = ಸಂತೋಷಕೂಟ

ಹುಟಗಿ = ಉಡಿಗೆ

ಉಭಯಲಿಂಗಿ = ಸ್ತ್ರೀ ಮತ್ತು ಪುರುಷರ ಲಿಂಗವುಳ್ಳವರು

ನಪುಂಸಕರು = ಷಂಡರು

ಜೋಗಿ = ಯೋಗಿ

ಬುಲ್ಲಿ = ಶಿಶ್ನ, ಪುರುಷರ ಜನನೇಂದ್ರಿಯ

ಮರವಿನ = ಕಟ್ಟಿಗೆಯ

ಏಕವೀರಾ-ಎಲ್ಲಮ್ಮಾ = ರೇಣುಕಾ

ತಳಿಗೆ = ವಿಶೇಷ ನೈವೇದ್ಯ

ದಹನ = ಸುಡುವುದು

ಸಮಲಿಂಗಿ = ಒಂದೇ ಲಿಂಗವುಳ್ಳವರು ಲೈಂಗಿಕ ವೃತ್ತಿ ನಡೆಸುವುದು

ಜಗ = ದೊಡ್ಡ ಬುಟ್ಟಿ = ಜಗತ್ತು

ಪಡಲಗಿ = ಸಣ್ಣ ಬುಟ್ಟಿ

ಜೋಗಿಯ ಕೂಟೆ = ಜೋಗಿಯ ಕೂಡ

ಜೋಗನ = ಜೋಗಪ್ಪನ

ವಾಸುಳ್ಳ = ವಾಸಿಯಾದ, ಜೆನ್ನಾಗಿದ್ದ

ಗಾವುದ = ೪ ಮೈಲು