ಭಾರತದ ಸ್ವಾತಂತ್ರ‍್ಯಕ್ಕಾಗಿ ಬ್ರಿಟಿಷರ ವಿರುದ್ಧ ಸಿಂಹಸಾಹಸದಿಂದ ಹೋರಾಡಿದ ವೀರಪುರುಷರಲ್ಲಿ ಜೋಗೇಶಚಂದ್ರ ಚಟಿರ್ಜಿಯವರ ಜೀವನ ಅವಿಸ್ಮರಣೀಯವಾಗಿದೆ.

ಬಾಲವೀರ

ಜೋಗೇಶಚಂದ್ರರು ೧೮೯೫ರಲ್ಲಿ ಗಾವೋಡಿಯಾ ಎಂಬ ಚಿಕ್ಕ ಹಳ್ಳಿಯಲ್ಲಿ ಹುಟ್ಟಿದರು. ಈ ಹಳ್ಳಿ ಈಗಿನ ಬಾಂಗ್ಲಾ ದೇಶದ ಢಾಕಾ ಜಿಲ್ಲೆಯಲ್ಲಿದೆ. ತಂದೆ ಬಾಬು ಬಿಪಿನಚಂದ್ರ ಚಟರ್ಜಿ ವ್ಯಾಪಾರ ಮಾಡುತ್ತಿದ್ದರು. ಜೋಗೇಶಚಂದ್ರ ಬುದ್ಧಿವಂತ ಬಾಲಕ. ವಿವಿಧ ವಿಷಯಗಳಲ್ಲಿ ಆಸಕ್ತಿ ಈ ಬಾಲಕನಿಗೆ. ರಷ್ಯದಂತಹ ಬಲಾಢ್ಯ ದೇಶವನ್ನು ಚಿಕ್ಕ ಜಪಾನ್ ದೇಶ ಸೋಲಿಸಿದ ವಿಷಯವನ್ನು ತನ್ನ ಬಂಧುವೊಬ್ಬ ಹೇಳುವಾಗ ಚಿಕ್ಕ ವಯಸ್ಸಿನ ಹುಡುಗ ತನ್ಮಯನಾಗಿ ಕೇಳುತ್ತಿದ್ದ. ನಾವು ಬಿಳಿಯರನ್ನು  ಹೊರತಲ್ಲಬಲ್ಲೆವೆಂಬ ಆತ್ಮವಿಶ್ವಾಸ ಅವನಿಗೆ ಆ ಎಳೆಯ ವಯಸ್ಸಿನಲ್ಲೇ ಅಂಕುರಿಸಿತು.ಮನೆಯಲ್ಲಿ ತಾಯ್ನಾಡಿನ ವಿಮೋಚನೆಯ ಬಿಸಿ ಚರ್ಚೆ, ಶಾಲೆಯಲ್ಲಿ ಶಿಕ್ಷಕರ, ವಿದ್ಯಾರ್ಥಿಗಳ ಕ್ರಾಂತಿಕಾರಿ ಚಟುವಟಿಕೆಗಳು ಈ ಬಾಲಕನ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದವು. ಪೊಲೀಸರು ಶಿಕ್ಷಕರ, ವಿದ್ಯಾರ್ಥಿಗಳ ಮನೆಗಳಿಗೆ ನುಗ್ಗಿ ಅವರನ್ನು ಮನಬಂದಂತೆ ಹಿಂಸಿಸುತ್ತಿದ್ದರು.  ಇವನ್ನೆಲ್ಲ ನೊಡುತ್ತಿದ್ದ ಜೋಗೇಶಚಂದ್ರನ ಎದೆಯಲ್ಲಿ ಬೆಂಕಿ ಉರಿಯುತ್ತಿತ್ತು.

ಬಾಲ್ಯದಲ್ಲಿ ನಡೆದ ಒಂದು ಘಟನೆ ಜೋಗೇಶ ಚಂದ್ರರ ಉಜ್ವಲ ದೇಶಪ್ರೇಮವನ್ನು ಎತ್ತಿ ತೋರಿಸುವುದು. ಆಗ ಅವರು ಕೇವಲ ೯ ವರ್ಷ ವಯಸ್ಸಿನ ಬಾಲಕ. ಒಂದು ದಿನ ಅವರ ಹಳ್ಳಿಯಲ್ಲಿ ನಡೆದ ಸಭೆಯಲ್ಲಿ ಕೇವಲ ಸ್ವದೇಶಿ ವಸ್ತುಗಳನ್ನು ಮಾತ್ರ ಉಪಯೋಗಿಸಬೇಕು. ಪರದೇಶದ ವಸ್ತುಗಳಿಗೆ ಬಹಿಷ್ಕಾರ ಹಾಕಬೇಕು ಎಂದು ನಿರ್ಧರಿಸಲಾಯಿತು. ಇದರ ಫಲಸ್ವರೂಪವಾಗಿ ದುರ್ಗಾಪೂಜೆಯ ಉತ್ಸವದಲ್ಲಿ ಧರಿಸಲು ಜೋಗೇಶಚಂದ್ರನಿಗೆ ಒರಟು ಖಾದಿ ಬಟ್ಟೆಗಳು ದೊರೆತವು. ಬಂಗಾಳದಲ್ಲಿ ದುರ್ಗ ಪೂಜೆಯೆಂದರೆ  ನಮಗೆ ದೀಪಾವಳಿ ಹಬ್ಬವಿದ್ದಂತೆ. ಈ ದೊಡ್ಡ ಹಬ್ಬದಲ್ಲಿ ಬೇರೆಲ್ಲ ಮಕ್ಕಳು ಮಿಲ್ಲಿನ ಬಣ್ಣ ಬಣ್ಣದ ಹೊಸ ಬಟ್ಟೆಗಳನ್ನು ತೊಟ್ಟುಕೊಂಡು ಬಹು ಸಂಭ್ರಮದಲ್ಲಿದ್ದರು. ಆದರೆ ಬಾಲಕ ಜೊಗೇಶಚಂದ್ರ ಅಂದು ಹೆಮ್ಮೆಯಿಂದ ಖಾದಿ ಬಟ್ಟೆಗಳನ್ನು ಧರಿಸಿದ್ದ.

ಕ್ರಾಂತಿ ಸಮರದ ಯೋಧ

೧೯೦೭ರಲ್ಲಿ ಜೋಗೇಶಚಂದ್ರರು ಮೆಘ್ನಾ ನದಿಯ ಅಂಚಿನಲ್ಲಿರುವ ದೌಲತಖಾನ ಎಂಬಲ್ಲಿನ ಶಾಲೆಗೆ ಸೇರಿದರು. ಇಲ್ಲಿರುವಾಗಲೇ ಅವರು ಹಿತವಾದಿ ಮತ್ತು ವಂಗಭಾಷಿ ಎಂಬ ಎರಡು ಕ್ರಾಂತಿಕಾರಿ ಪತ್ರಿಕೆಗಳನ್ನು ಕುತೂಹಲದಿಂದ ಓದುತ್ತಿದ್ದರು. ಇದೇ ಸಮಯದಲ್ಲಿ ಆಲಿಪುರ, ಮುಝಫರಪುರ ಎಂಬ ಕಡೆಗಳಲ್ಲಿ ಬ್ರಿಟಿಷರ ಮೇಲೆ ಬಾಂಬ್ ಹಾಕಲಾಯಿತು. ಜೋಗೇಶ ಚಂದ್ರರು ಇವುಗಳನ್ನೆಲ್ಲ ಕಂಡು ರೋಮಾಂಚಿತರಾದರು ಬಾಲಕರಾಗಿರುವಾಗಲೇ ಅನುಶೀಲನ ಸಮಿತಿ ಎಂಬ ಕ್ರಾಂತಿಕಾರಿ ಸಂಘದ ಕಾರ್ಯಗಳನ್ನು ಕಂಡು ವಿಶೇಷವಾಗಿ ಆಕರ್ಷಿತರಾದರು. ಈ ಸಮಿತಿ ೧೯೦೨ರಲ್ಲಿ ಕಲ್ಕತ್ತದಲ್ಲಿ ಪಿ. ಮಿತ್ರ ಎಂಬುವರಿಂದ ಸ್ಥಾಪಿತವಾಯಿತು. ಅರವಿಂದರು, ಅವರ ತಮ್ಮ ಬಾರೀಂದ್ರ, ದೇಶಬಂಧು ದಾಸ್ ಮೊದಲಾದವರು ಸಮಿತಿಯ ಸದಸ್ಯರು. ಸಂಘದ ಏಕೈಕ ಧ್ಯೇಯ ಭಾರತದ ವಿಮೋಚನೆ. ಅದಕ್ಕಾಗಿ ಎಂತಹ ತ್ಯಾಗವನ್ನಾದರೂ ಶ್ರಮವನ್ನಾದರೂ ಸಹಿಸಬಲ್ಲವೆಂಬ ದೃಢಪ್ರತಿಜ್ಞೆ ಸದಸ್ಯರದು.

ದೌಲತ್ ಖಾನದ ಎರಡು ವರ್ಷಗಳ ಅಧ್ಯಯನದ ಅನಂತರ ಜೋಗೇಶ ಚಂದ್ರರು ಅಸ್ಸಾಮಿನ ಹತ್ತಿರವಿರುವ ಕೋಮಿಲ್ಲಾ ಎಂಬ ಸ್ಥಳಕ್ಕೆ ಬಂದರು. ಕೋಮಿಲ್ಲಾದಲ್ಲಿ ಅವರ ಸೋದರಮಾವ ವಿಶ್ವೇಶ್ವರ ಚಟರ್ಜಿ ವಕೀಲರಾಗಿದ್ದರು. ವಿಶ್ವೇಶ್ವರ ಚಟರ್ಜಿಯವರ ಮನೆಯಲ್ಲಿ  ಆಗಾಗ ಕ್ರಾಂತಿಕಾರಕ ಸಭೆ ಸೇರುತ್ತಿತ್ತು. ಜೋಗೇಶ ಚಂದ್ರರು ಕಲಿಯುತ್ತಿದ್ದ ವಿಕ್ಟೋರಿಯಾ ಶಾಲೆಯ ಮುಖ್ಯಾಧ್ಯಾಪಕ ಶಶಿಕುಮಾರರು ಎಳೆಯ ವಿದ್ಯಾರ್ಥಿಗಳ ಮನದಲ್ಲಿ ಸ್ವದೇಶ ಅಭಿಮಾನವನ್ನು ತುಂಬುತ್ತಿದ್ದರು.

ಶಾಲೆಯಲ್ಲಿರುವಾಗಲೇ ಜೋಗೇಶಚಂದ್ರರು ಅನುಶೀಲನ ಸಮಿತಿಯ ಸದಸ್ಯರೊಂದಿಗೆ ಸಾಹಸಮಯ ಕಾರ್ಯಗಳಲ್ಲಿ ಭಾಗಹಿಸಲು ಆರಂಭಿಸಿದರು. ಅವರ ಪೆಟ್ಟಿಗೆ ಮದ್ದು ಗುಂಡುಗಳಿಂದ ತುಂಬಿರುತ್ತಿತ್ತು. ಪೊಲೀಸಸರ ಕಣ್ಣು ಈ ಎಳೆಯ ವಯಸ್ಸಿನ ವಿದ್ಯಾರ್ಥಿಯ ಮೇಲೆ ಬೀಳಲು ತಡವಾಗಲಿಲ್ಲ. ಪೊಲೀಸರು ಮೆಲ್ಲನೆ ತಮ್ಮ ಬಲೆಯನ್ನು ಬೀಸಲು ಆರಂಭಿಸಿದರು.

ಚಿತ್ರಹಿಂಸೆ

ಒಂದು ದಿನ ಬೆಳಗಿನ ನಾಲ್ಕೂವರೆಯ ಗಂಟೆಯ ಸಮಯ. ಎಲ್ಲೆಡೆಗೂ ನೀರವತೆ ವ್ಯಾಪಿಸಿದೆ. ಜೋಗೇಶಚಂದ್ರರು ತಮ್ಮ ಮನೆಯಲ್ಲಿ ಸುಖ ನಿದ್ರೆಯಲ್ಲಿದ್ದರು. ಆ ಸಮಯದಲ್ಲಿ ಅವರ ಸೋದರಮಾವನ ಮಗ ಅವರನ್ನು ಭಯದಿಂದ ಎಚ್ಚರಿಸಿದ. ಮನೆ ಪೊಲೀಸರಿಂದ ಸುತ್ತುವರೆಯಲ್ಪಟ್ಟಿತ್ತು. ಕೂಡಲೆ ಅವರಿಬ್ಬರೂ ತಮ್ಮ ಎಲ್ಲ ರಹಸ್ಯ ಕಾಗದ ಪತ್ರಗಳನ್ನು ಸುಟ್ಟು ಹಾಕಿದರು. ಪೊಲೀಸ್ ಅಧಿಕಾರಿಗಳು ಮನೆಯನ್ನು ಪ್ರವೇಶಿಸಿದರು. ಸರ್ಕಾರಕ್ಕೆ ಅನುಮಾನ ಬಂದ ವ್ಯಕ್ತಿಗಳಲ್ಲಿ ಜೊಗೇಶಚಂದ್ರರ ಹೆಸರು ಕೂಡ ಸೇರಿತ್ತು. ಪೊಲೀಸ್ ಅಧಿಕಾರಿ ಎಳೆಯ ವಯಸ್ಸಿನ ಜೋಗೇಶಚಂದ್ರರನ್ನು ತೋರಿಸುತ್ತ ಹೇಳಿದ ” ನೋಡು ಇವನು ಬಹು ಚಿಕ್ಕವನಾದರೂ ಇವನ ಮೇಲೆ ಗಂಭೀರ ಆಪಾದನೆಯಿದೆ. ನಮಗೆ ಬೇಕಾಗಿರುವ ವ್ಯಕ್ತಿ ಇವನೇ’

ಅಧಿಕಾರಿಗಳು ಜೋಗೇಶಚಂದ್ರರ ಕೊಠಡಿಯನ್ನು ಶೋಧಿಸತೊಡಗಿದರು. ಶೋಧನೆ ನಡೆಯುತ್ತಿದ್ದಾಗಲೇ ಪೊಲೀಸ್ ಸೂಪರಿಂಟೆಂಡೆಂಟ್ ಹೆಚ್ಚಿನ ತನಿಖೆಗಾಗಿ ಅಲ್ಲಿಗೆ ಬಂದ. ಇಬ್ಬರು ಅಧಿಕಾರಿಗಳು ಈ ವಿಶೇಷ ಅಧಿಕಾರಿಯನ್ನು ಕರೆತರಲು ಹೊರಗೆ ಕಾಲಿಟ್ಟೊಡನೆಯೇ ಜೋಗೇಶಚಂದ್ರು ಹಿಂದಿನ ಬಾಗಿಲಿನಿಂದ ಬರಿಮೈಯಲ್ಲೇ ಓಡಿದರು. ಹಿಂದಿನ ಬಾಗಿಲನ್ನು ಕಾಯುತ್ತಿದ ಪೊಲೀಸಿನವನಿಗೆ ಸುಳ್ಳು ಹೆಸರು ಹೇಳಿ ತಪ್ಪಿಸಿಕೊಂಡರು.ಇದೇ ರೀತಿಯಾಗಿ ತಪ್ಪಿಸಿಕೊಂಡು ಬಂದ ಇನ್ನೊಬ್ಬ ವ್ಯಕ್ತಿ ತಾರಿಣಿ ಮಜುಮದಾರ್. ಅವನೊಂದಿಗೆ ಅವರು ರಾತ್ರಿ ಸುರಿಯುತ್ತಿದ್ದ ಮಳೆಯಲ್ಲಿ ೧೩ ಮೈಲಿಗಳನ್ನು ಕಷ್ಟದಿಂದ ನಡೆದು ಬೇರೊಂದು ಹಳ್ಳಿಯಲ್ಲಿ ಆಶ್ರಯವನ್ನು ಪಡೆದರು. ಕೆಲವು ದಿನಗಳ ನಂತರ ಅವರು ಕಲ್ಕತ್ತೆಗೆ ಬಂದರು.

ಮನೋಜಪಾಲ್ ಅವರನ್ನು ಮನಬಂದಂತೆ ಹೊಡೆದ

ಕಲ್ಕತ್ತದಲ್ಲಿ ಜೋಗೇಶಚಂದ್ರರು ತಲೆಮರೆಸಿಕೊಂಡಿರುವಾಗ ೧೯೧೬ನೇ ಇಸವಿಯ ಅಕ್ಟೋಬರ್ ತಿಂಗಳಿನ ಒಂದು ರಾತ್ರಿ ಸುಮಾರು ೧೦ ಗಂಟೆಗೆ ಗುಪ್ತಚಾರರು ಅವರಿದ್ದ ಮನೆಯನ್ನು ಮುತ್ತಿ ಅವರನ್ನು ಬಂಧಿಸಿದರು. ಪೊಲೀಸ್ ಕಛೇರಿಯಲ್ಲಿ ಅವರ ಕೂದಲನ್ನು ಹಿಡಿದೆಳೆದರು. ಮೈಮುಖ ನೋಡದೆ ಅವರನ್ನು ಪೊಲೀಸರು ಥಳಿಸಿದರು. ಮರುದಿನ ಅವರಿಂದ ಕ್ರಾಂತಿದಳದ ರಹಸ್ಯವನ್ನು ಬಾಯಿ ಬಿಡಿಸಲು ಅಮಾನುಷ ನಿರ್ದಯತೆಯನ್ನು ತೋರಿಸಲಾಯಿತು. ಮದ್ಯದ ಅಮಲಿನಿಂದ ಪಶುವಾಗಿ ಮನೋಜಪಾಲನೆಂಬಧಿಕಾರಿ ಕೋಲಿನಿಂದ ಅವರ ಮೂಳೆಗಳು ಊದಿಕೊಳ್ಳುವವರೆಗೆ ಹೊಡೆದ. ಆದರೂ ಅವರ ಬಾಯಿಯಿಂದ ಒಂದು ಶಬ್ದವೂ ಹೊರಡದಿರುವುದನ್ನು ಕಂಡು ಕೋಲಿನಿಂದ ಅವರ ಎದೆ, ಬೆನ್ನುಗಳನ್ನು ರಕ್ತ ಬರುವವರೆಗೆ ಹೊಡೆದು ದಣಿದ. ಜೋಗೇಶಚಂದ್ರರು ನೋವನ್ನು ಸಹಿಸಲಾರದೆ ಉಸಿರು ಕಟ್ಟಿದಂತಾಗಿ ನೆಲದ ಮೇಲೆ ಕುಸಿದರು. ಅವರ ಶರೀರದ ಅನೇಕ ಭಾಗಗಳಿಂದ ರಕ್ತ ಚಿಮ್ಮಿತು. ರಾತ್ರಿ ಪುನಃ ಅವರ ಕಾಲುಗಳ ಮೇಲೆ ಬೆತ್ತದೆ ಸಹನೀಯ ಪ್ರಹಾರದ ಮಳೆ  ಸುರಿಯಿತು. ರಾತ್ರಿ ಅವರಿಗೆ ಕೂಡಲು ಸಹ ಆಸ್ಪದವನ್ನು ಕೊಡಲಿಲ್ಲ. ಅವರು ಕೂಡುವ ಪ್ರಯತ್ನ ಮಾಡಿದರೆ ಬಂದೂಕಿನ ತುದಿಗಿರುವ ಚೂರಿಯಿಂದ ಅವರನ್ನು ತಿವಿದು ನಿಲ್ಲಿಸುವಂತೆ ಆಜ್ಞೆ ಮಾಡಲಾಯಿತು. ಆದರೆ ಕಾವಲುಗಾರರ ಎದೆಯಲ್ಲಿ ಸ್ವಲ್ಪ ದಯೆಯ ಅಂಶವಿದ್ದುದರಿಂದ ಅವರಿಗ ಮಲಗಲು ಅನುಮತಿ ಕೊಟ್ಟರು. ಮನೋಜಪಾಲ ತನ್ನ ಪ್ರಯತ್ನವನ್ನು ಬಿಡಲಿಲ್ಲ. ಮಲಮೂತ್ರಗಳನ್ನು ಜೋಗೇಶಚಂದ್ರದ ಬಾಯಲ್ಲಿ ಹಾಕಲು ತನ್ನ ಯತ್ನದಲ್ಲಿ ಯಶಸ್ವಿಯಾಗದೆ, ಅವರ ಮೈಮುಖಗಳ ಮೇಲೆ ಅವುಗಳನ್ನು ಸುರಿಸಿದ. ಮೂರು ದಿನಗಳವರೆಗೆ ಅವರಿಗೆ ಸ್ನಾನ ಮಾಡಲು ಅವಕಾಶವನ್ನು ಕೊಡಲಿಲ್ಲ. ಇನ್ನೂ ಅನೇಕ ಯಮಯಾತನೆಗಳ ಅನಂತರ ಅವರಿಗೆ ನಾಲ್ಕು ವರ್ಷಗಳ ಶಿಕ್ಷೆ ವಿಧಿಸಿ ಪ್ರೆಸಿಡೆನ್ಸಿ ಜೈಲಿಗೆ ವರ್ಗಾಯಿಸಲಾಯಿತು. ಆಗ ಅವರಿಗೆ ಕೇವಲ ಇಪ್ಪತ್ತು ವರ್ಷ ವಯಸ್ಸು.

ಪ್ರೆಸಿಡೆನ್ಸಿ ಜೈಲಿನಲ್ಲಿ ಚಿಕ್ಕ ಕತ್ತಲು ಕೋಣೆಗಳಲ್ಲಿ ಒಬ್ಬೊಬ್ಬರನ್ನೂ ಬೇರೆ ಬೇರೆಯಾಗಿ ಬಂಧನದಲ್ಲಿರಿಸಿದರು. ಬೇರೆಯವರ ಜೊತೆಗೆ ಮಾತನಾಡಲು ಅವಕಾಶವಿರಲಿಲ್ಲ. ಹೊರಗಡೆ ಬರಲು ಸಹ ಬಿಡುತ್ತಿರಲಿಲ್ಲ. ಬಂಧಿಗಳು ಈ ಕತ್ತಲು ಕೋಣೆಗಳಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಗಳೂ ಬಿದ್ದಿರಬೇಕಾಗಿತ್ತು. ಒಂದೂವರೆ ವರ್ಷಗಳಲ್ಲಿ ಮೂರು ಜನ ಕ್ರಾಂತಿಕಾರರಿಗೆ ಹುಚ್ಚು ಹಿಡಿದು ಹುಚ್ಚಾಸ್ಪತ್ರೆಗೆ ಸೇರಿಸಲ್ಪಟ್ಟರು. ಈ ದುರಂತದ ನಂತರ ಕಾರಾಗೃಹದ ಅಧಿಕಾರಿಗಳು ಎಚ್ಚೆತ್ತರು. ಜೈಲಿನ ಪರಿಸ್ಥಿತಿ ಸುಧಾರಿಸಿತು. ಇನ್ನೂ ಕೆಲವು ಅನುಕೂಲಗಳನ್ನು ಒದಗಿಸಿಕೊಡಬೇಕೆಂದು ಜೋಗೇಶಚಂದ್ರರು ಸರ್ಕಾರವನ್ನು ಒತ್ತಾಯಿಸಲು ಉಪವಾಸವನ್ನು ಆರಂಭಿಸಿದರು. ಆರು ದಿನಗಳ ಉಪವಾಸದ ನಂತರ ಅವರನ್ನು ರಾಜಾಶಾಹಿ ಸೆಂಟ್ರಲ್ ಜೈಲಿಗೆ ಕಳುಹಿಸಲಾಯಿತು. ರಾಜಾಶಾಹಿ ಕಾರಾಗೃಹದ ಸ್ಥಿತಿ ಚೆನ್ನಾಗಿತ್ತು. ಈ ಜೈಲಿನಲ್ಲಿ ಜೋಗೇಶಚಂದ್ರರು ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ಸಾಹಿತ್ಯ ಮೊದಲಾದ ವಿಷಯಗಳ ಜ್ಞಾನವನ್ನು ಸಂಪಾದಿಸಿದರು.

ಮನೆಯ ಕಷ್ಟಗಳು

೧೯೨೦ರ ಸೆಪ್ಟೆಂಬರ್ ೧ ರಂದು ೪ ವರ್ಷಗಳ ಸೆರೆಮನೆವಾಸದಿಂದ ಅವರ ಬಿಡುಗಡೆ ಆಯಿತು.

ಜೋಗೇಶಚಂದ್ರರ ಮನೆಯ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿತ್ತು. ತಂದೆ ಬಿಪಿನಚಂದ್ರ ಚಟರ್ಜಿಯವರ ವ್ಯಾಪಾರ ಕುಸಿದಿತ್ತು. ಮನೆಯ ಭವಿಷ್ಯತ್ತಿನ ಪ್ರಶ್ನೆ ಜೋಗೇಶಚಂದ್ರದ ಮನವನ್ನು ಕೊರೆಯಲಾರಂಭಿಸಿತು. ಕೆಲಸಕ್ಕೆ ಸೇರಿದರೆ ದೇಶಸೇವೆಗೆ ತಿಲಾಂಜಲಿಯನ್ನು ಕೊಡಬೇಕಾಗುತ್ತದೆ; ದೇಶ ಮುಕ್ತವಾಗುವವರೆಗೂ ತಾವು ವಿಶ್ರಮಿಸುವುದಿಲ್ಲವೆಂಬ ಪ್ರತಿಜ್ಞೆಗೆ ಭಂಗ ಬರುತ್ತದೆ. ಕೊನೆಗೆ ಭಾರತಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನು ಮುಡಿಪಾಗಿಡುವ ನಿರ್ಧಾರವನ್ನು ಅವರು ಕೈಗೊಂಡರು.

ಕೂಲಿಗಳ ದುಃಖ ಪರಿಹಾರ

ಅಸ್ಸಾಮ್ ಚಹದ ತೋಟಗಳಿಗೆ ಹೆಸರುವಾಸಿಯಾಗಿದೆ. ಈ ತೋಟಗಳು ಬಿಳಿಯರ ಸೊತ್ತಾಗಿದ್ದವು. ತೋಟಗಳಲ್ಲಿ ಕೆಲಸ ಮಾಡಲು ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರಗಳಿಂದ ಕೂಲಿಗಳನ್ನು ಕರೆತರಲಾಗುತ್ತಿತ್ತು. ತೋಟಗಳಲ್ಲಿ ಈ ಬಡಜನರು ಪಶುಗಳಂತೆ ದುಡಿಯುತ್ತಿದ್ದರು. ಅವರಿಗೆ ಕೊಡುತ್ತಿದ್ದ ಆಹಾರವು ಅಲ್ಪ. ಅವರನ್ನು ಹೊರಗಡೆ ಹೋಗಲೂ ಸಹ ಬಿಡುತ್ತಿರಲಿಲ್ಲ. ಗುಲಾಮರಂತೆ ಅವರನ್ನು ನಡೆಸಿ ಕೊಳ್ಳುತ್ತಿದ್ದರು.

ಇದೇ ಸಮಯದಲ್ಲಿ ಚಿತ್ರ ರಂಜನಾದಾಸರು ಅಸ್ಸಾಮಿಗೆ ಬಂದರು. ದೇಶ ಬಂಧುದಾಸರು ಬಹು ಪ್ರಸಿದ್ಧ ವಕೀಲರು; ಉಜ್ವಲ ದೇಶಾಭಿಮಾನಿಗಳು. ಅಸ್ಸಾಮಿನಲ್ಲಿ ಅವರ ಅಗ್ನಿ ಸದೃಶ ಭಾಷಣಗಳಿಂದ ಜನರ ಹೃದಯಗಳಲ್ಲಿ ಮನಸ್ಫೂರ್ತಿಯ ನಾಡಿಗಳಲ್ಲಿ ಹೊಸ ಚೇತನ ಮಿಡಿಯಿತು. ಕೂಲಿಗಳ ವಿಷಮ ಪರಿಸ್ಥಿತಿಯನ್ನು ಕೊನೆಗಾಣಿಸಲು ಅಸಹಕಾರದ ಅಂದೋಲನಕಾರರೊಂದಿಗೆ ಜೋಗೇಶಚಂದ್ರರು ಅವರ ನೆರಿವಿಗೆ ನುಗ್ಗಿದರು. ಕೂಲಿಗಳಲ್ಲಿಯೂ ಸಂಕಲ್ಪ ಶಕ್ತಿಯ ಜಾಗೃತವಾಯಿತು. ಅವರು ಕೆಲಸ ನಿಲ್ಲಿಸಿದರು. ಬಿಳಿಯರ ಕ್ರೋಧ ಭುಗಿಲ್ಲೆಂದಿತು. ನೂರಾರು ಕೂಲಿಗಳನ್ನು ಕೆಲಸದಿಂದ ತೆಗೆದು ಹೊರಕ್ಕೆ ತಳ್ಳಿದರು. ರೈಲ್ವೆ ಕೆಲಸಗಾರರು ತಮ್ಮ ದೇಶಬಾಂಧವರಿಗಾಗಿ ಸಹಾನುಭೂತಿಯನ್ನು ವ್ಯಕ್ತಿಪಡಿಸಿದ್ದರಿಂದ ೨೧ ದಿನಗಳವರೆಗೆ ರೈಲುಗಳ ಓಡಾಟ ನಿಂತಿತು. ಹಡಗುಗಳ ಕೆಲಸಗಾರರು ಸಹ ಅಸಹಕಾರ ಆಚರಿಸಿದರು. ಬ್ರಿಟಿಷ್ ಸರ್ಕಾರ ತಬ್ಬಿಬ್ಬಾಗಿ ಜನಶಕ್ತಿಯ ಎದುರು ಬಗ್ಗಲೇಬೇಕಾಯಿತು. ಕೂಲಿಗಳ ದುಸ್ಸಹನೀಯ ಬದುಕು ಸುಧಾರಿಸಿತು. ಈ ಆಂದೋಲನದಲ್ಲಿ ಜೋಗೇಶಚಂದ್ರರ ಪಾತ್ರ ದೊಡ್ಡದು. ಹಗಲಿರುಳೆನ್ನದೆ ಶ್ರಮಿಕರ ಕಲ್ಯಾಣಕ್ಕಾಗಿ  ಅವರು ದುಡಿದರು.

ಸೃಜನ ಶಕ್ತಿ

ಇನ್ನೂ ಬಾಲಕರಾಗಿದ್ದಾಗಲೇ ಜೋಗೇಶಚಂದ್ರರು ಅನುಶೀಲನ ಸಮಿತಿ ಎಂಬ ಕ್ರಾಂತಿಕಾರಿ ಸಂಘವನ್ನು ಸೇರಿದರಲ್ಲವೆ? ಭಾರತದ ಕಾರ್ಮಿಕರ ಬಡತನ, ಅವರ ದೈನ್ಯಾವಸ್ಥೆ ಅನುಶೀಲನ ಸಮಿತಿಯ ಸದಸ್ಯರಿಗೆ ಒಂದು ಮಹಾ ಸಮಸ್ಯೆಯಾಗಿತ್ತು. ಈ ದಾರಿದ್ರ‍್ಯದ ಸಂಕೋಲೆಗಳಿಂದ ಜನಸಾಮಾನ್ಯರನ್ನು ಪಾರು ಮಾಡಲು ಇರುವ ಒಂದೇ ಉಪಾಯ ಔದ್ಯೋಗಿಕರಣ ಎಂಬುದನ್ನು ಅವರು ಕಂಡುಕೊಂಡರು. ಹೊಸ ಕಾರ್ಖನೆಗಳನ್ನು ಸ್ಥಾಪಿಸಿ ಉತ್ಪಾದನೆಯನ್ನು ಬೆಳೆಸಿ ದೇಶದ ಸಂಪತ್ತನ್ನು ವೃದ್ಧಿ ಪಡಿಸುವುದು, ಬಿಳಿಯರ ಶೋಷಣೆಯಿಂದ ದುರ್ಬಲರಾದ ಅಸಹಾಯಕ ಬಡ ಜನತೆಯನ್ನು ಮುಕ್ತಗೊಳಿಸುವುದು ಜೋಗೇಶಚಂದ್ರರ ಇನ್ನಿತರರ ತಲೆಯಲ್ಲಿ ಈ ಆಲೋಚನೆ ಮಿಂಚಿದ್ದೇ ತಡ ಅವರೆಲ್ಲ ಉತ್ಸಾಹದಿಂದ ಕಾರ್ಯಪ್ರವೃತ್ತರಾದರು.  ಜೋಗೇಶಚಂದ್ರರು ತಮ್ಮ ಬಂಧುಬಾಂಧವರಿಂದ ಹಣವನ್ನು ಸಂಗ್ರಹಿಸಿ ಕೋಮಿಲ್ಲಾದಲ್ಲಿ ಬೆಂಕಿಪೆಟ್ಟಿಗೆ ತಯಾರಿಸುವ ಚಿಕ್ಕ ಕಾರ್ಖಾನೆಯನ್ನು ೧೯೨೨ರಲ್ಲಿ ಪ್ರಾರಂಭಿಸಿಯೇ ಬಿಟ್ಟರು.

ಕೇವಲ ೭ ಜನರಿಂದ ಕಾರ್ಖಾನೆಯ ಕಾರ್ಯ ಆರಂಭವಾಯಿತು. ಯಂತ್ರಗಳನ್ನು ಕೊಳ್ಳುವಷ್ಟು ದುಡ್ಡಿರಲಿಲ್ಲ. ಒಬ್ಬ ಮಾರವಾಡಿ ಕಂಪನಿಯ ಹತ್ತಿರ ನಿರುಪಯುಕ್ತವಾಗಿದ್ದ ಯಂತ್ರವೊಂದಿತ್ತು.  ಇಬ್ಬರು ಕುಶಲಕರ್ಮಿಗಳು ಆ ಯಂತ್ರದ ರಚನೆಯನ್ನು ಅಭ್ಯಸಿಸಿ ಅದೇ ಮಾದರಿಯ ಒಂದು ಯಂತ್ರವನ್ನು ಕೆಲವೇ ದಿನಗಳಲ್ಲಿ ತಯಾರಿಸಿದರು. ಬೆಂಕಿಪೆಟ್ಟಿಗೆಗಳ ಉತ್ಪಾದನೆ ಮತ್ತು ಮಾರಾಟ ಆರಂಭವಾಯಿತು. ತರುಣರ ಶ್ರಮ, ಸಹಕಾರಗಳಿಂದ ಕಾರ್ಖಾನೆ ಪ್ರಗತಿ ಪಥದಲ್ಲಿ ಮುನ್ನಡೆಯಿತು. ಅನೇಕ ಯುವಕರು ಸ್ಪೂರ್ತಿಗೊಂಡು ಕೆಲಸಕ್ಕೆ ಸೇರಿದರು. ಕೋಮಿಲ್ಲಾ ನಗರದಲ್ಲಿ ಈ ಕಾರ್ಖಾನೆಯ ಯುವಕರ ತ್ಯಾಗ ಸೇವೆ, ಬಡವರ ಬಗೆಗಿದ್ದ ಅವರ ಸಕ್ರಿಯ ಸಹಾನುಭೂತಿ ಹೆಮ್ಮೆಯ ವಿಷಯಗಳಾದವು.

ಸುಮಾರು ಎಂಟು ವರ್ಷಗಳ ಅನಂತರ ೧೯೩೦ರ ಭಾರತದ ವಿಷಮ ಆರ್ಥಿಕ  ಪರಿಸ್ಥಿತಿ ಕ್ರಾಂತಿಕಾರ ಕಾರ್ಖಾನೆಯ ಮೇಲೆಯೂ ತನ್ನ ದುಷ್ಪರಿಣಾಮವನ್ನು ಬೀರಿತು. ಜೋಗೇಶಚಂದ್ರರು ಉತ್ತರ ಭಾರತದಲ್ಲಿ ಕ್ರಾಂತಿಕಾರ್ಯವನ್ನು ಸಂಘಟಿಸಲು ತೆರಳಿದ್ದರಿಂದ ಸಾಲ ನೀಡಿದ ಬ್ಯಾಂಕು ಯುಕ್ತಿಯಿಂದ ಇವನ್ನು ವಶಪಡಿಸಿಕೊಂಡಿತು. ಆದರೆ ಭಾರತೀಯ ಯುವಕರು ಈ ಕಾರ್ಖಾನೆಯಿಂದ ತಮ್ಮಲ್ಲಿಯ ಸೃಜನ ಶಕ್ತಿಯ ಪರಿಚಯವನ್ನು ಪಡೆದರು.

ಉತ್ತರ ಭಾರತದಲ್ಲಿ ಕ್ರಾಂತಿಯ ಕರೆ

ಅನುಶೀಲನ ಸಮಿತಿಯ ಇಚ್ಛೆಯಂತೆ ಜೋಗೇಶಚಂದ್ರರು ಕೋಮಿಲ್ಲಾ ನಗರವನ್ನು  ತ್ಯಜಿಸಿ ಉತ್ತರ ಪ್ರದೇಶದಲ್ಲಿ ಕಾರ್ಯವನ್ನು ಸಂಘಟಿಸಲು ತೆರಳಿದರು. ತಂದೆತಾಯಿಗಳ ಕಣ್ಣೀರು ಅವರನ್ನು ವಿಚಲಿತಗೊಳಿಸಲಿಲ್ಲ. ಮನೆಯ ಭವಿಷ್ಯತ್ತು ಅವರನ್ನೇ ಅವಲಂಬಿಸಿದ್ದರೂ ಸರ್ವಸ್ವವನ್ನೂ  ತ್ಯಜಿಸಿ ಯುದ್ಧಕ್ಷೇತ್ರದಲ್ಲಿ  ಪುನಃ ಧುಮಿಕಿದರು. ನಿಂತಲ್ಲಿ, ಕುಳಿತಲ್ಲಿ, ಸ್ವಪ್ನದಲ್ಲಿಯೂ ಒಂದೇ ಚಿಂತೆ ಅವರ ಮನದಲ್ಲಿ ಅದುವೇ ಭಾರತದ ವಿಮೋಚನೆ. ಇದೇ ಬೆಂಕಿಯನ್ನು ಎದೆಯಲ್ಲಿ ಹೊತ್ತುಕೊಂಡು ಅವರು ಕಾಶಿಯಲ್ಲಿ ಕಾರ್ಯ ಆರಂಭಿಸಿದರು. ಅನೇಕ ಯುವಕರು ಅವರ ಆದರ್ಶದಿಂದ ಆಕರ್ಷಿತರಾಗಿ ನಾಡಿನ ಉದ್ಧಾರಕ್ಕಾಗಿ ಸೊಂಟ ಕಟ್ಟಿದರು. ತಮ್ಮ ಸ್ವಂತ ಆಸೆ, ಸುಖ, ಸಂತೃಪ್ತಿಗಳನ್ನು ಬದಿಗಿರಿಸಿ ಬ್ರಿಟಿಷರ ಬೆನ್ನೆಲುಬನ್ನು ಮುರಿಯುವ ಸಾಹಸದಲ್ಲಿ ತೊಡಗಿದರು.

ಅವರು ಕಾಶಿಯಲ್ಲಿರುವಾಗಲೇ ಅವರ ಸೋದರ ಮಾವ ವಿಶ್ವೇಶ್ವರ ಚಟರ್ಜಿ ಅವರ ಮನ ಒಲಿಸಿ ಅವರನ್ನು ತಿರುಗಿ ಮನೆಗೆ ಕರೆದುಕೊಂಡು ಹೋಗಲು ಬಂದರು. ಜೋಗೇಶಚಂದ್ರರು ಯಾವುದಾದರೊಂದು ವ್ಯಾಪಾರವನ್ನು ಆರಂಭಿಸುವುದಾದರೆ ತಾವು ಇಪ್ಪತ್ತು ಸಾವಿರ ರೂಪಾಯಿಗಳನ್ನು ಕೊಡುವೆವೆಂದು ಹೇಳಿದರು. ಆದರೆ ಜೋಗೇಶಚಂದ್ರರು ಯಾವುದಾದರಿಂದಲೂ ವಿಚಲಿತರಾಗಲಿಲ್ಲ.

ಕಾಶಿಯಲ್ಲಿ ಗೂಡಚಾರರು ಅವರನ್ನು ನೆರಳಿನಂತೆ ಹಿಂಬಾಲಿಸತೊಡಗಿದರು. ಅವರು ಪೊಲೀಸರ ಕಣ್ಣು ತಪ್ಪಿಸಿ ಕಾನ್ಪುರಕ್ಕೆ ತೆರಳಿದರು.

ಕಾನ್ಪುರದಲ್ಲಿ ಪಿ.ಸಿ. ರಾಯ್ ಎಂದು ಹೆಸರನ್ನು ಬದಲಿಸಿಕೊಂಡು ಕಾರ್ಯಪ್ರವೃತ್ತರಾದರು. ನ್ಯಾಷನಲ್ ಸ್ಕೂಲ್, ಆಂಗ್ಲೋ – ಬೆಂಗಾಲಿ ಸ್ಕೂಲ್ ಕ್ರಾಂತಿಕಾರಕ ಕೇಂದ್ರ ಸ್ಥಳಗಳಾದವು. ವಿದ್ಯಾರ್ಥಿಗಳು, ಶಿಕ್ಷಕರು, ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಭಾಗವಹಿಸಿದರು. ಜೋಗೇಶಬಾಬುಗಳು ಬುಂದೇಲಖಂಡ ಸಹಜಹಾಸನಪುರ, ಝಾನ್ಸಿ, ಅಲಹಾಬಾದ್  ಮುಂತಾದ ಸ್ಥಳಗಳಲ್ಲಿ ಮಿಂಚಿನಂತೆ ಸಂಚರಿಸಿ ಜನರಲ್ಲಿ ದೇಶಭಕ್ತಿಯ ಉರಿಯನ್ನು ಹೊತ್ತಿಸಿದರು. ಯುವಕರಲ್ಲಿ ನವಪ್ರೇರಣೆ, ಉತ್ಸಾಹಗಳನ್ನು ತುಂಬಿದರು. ಅವರು ಕಾನ್ಪುರದಲ್ಲಿರುವಾಗಲೇ ತೇಜಸ್ವಿ ಯುವಕ ಭಗತ್ ಸಿಂಗ್ ಪಂಜಾಬಿನಿಂದ ಒಂದು ಪರಿಚಯ ಪತ್ರವನ್ನು ತೆಗೆದುಕೊಂಡು ಅವರ ಹತ್ತಿರ ಬಂದ. ಅವನು ಕೇವಲ ೧೭ ವರ್ಷ ವಯಸ್ಸಿನ ಯುವಕ ಆಗ. ಅವರಿಬ್ಬರಲ್ಲಿ ಗಾಢವಾಡ ಸ್ನೇಹ, ಪ್ರೀತಿಗಳು ಬೆಳೆದವು.

ಜೋಗೇಶಚಂದ್ರರಿಗೆ ಅಜೀವ ಪರ್ಯಂತ ಕಠಿಣ ಸಜೆ ವಿಧಿಸಲಾಯಿತು.

ಮತ್ತೆ ಸೆರೆಮನೆ

ರಾಮಚರಣಲಾಲನೆಂಬ ಕ್ರಾಂತಿಕಾರಿ ಫ್ರೆಂಚರ ಅಧೀನದಲ್ಲಿದ್ದ ಪಾಂಡಿಚೆರಿಯಲ್ಲಿ ಗೃಹಬಂಧನದಲ್ಲಿದ್ದ. ಪ್ಯಾರಿಸಿನಲ್ಲಿದ್ದ ಭಾರತದ ಕ್ರಾಂತಿಕಾರರೊಡನೆ ಅವನು ಸಂಪರ್ಕವನ್ನಿಟ್ಟುಕೊಂಡಿದ್ದ. ಜೋಗೇಶ ಬಾಬುಗಳು ಇವನನ್ನು ಸಂಧಿಸಿ  ಪ್ಯಾರಿಸಿನಿಂದ ಆರ್ಥಿಕ ಸಹಾಯ ಪಡೆಯುವ ಉದ್ದೇಶದಿಂದ ಪಾಂಡಿಚೆರಿಗೆ ಬಂದರು. ಗೂಡಾಚಾರದ ಹದ್ದಿನ ದೃಷ್ಟಿಯಿಂದ ಪಾರಾಗಲು ತಾವೊಬ್ಬ ಉತ್ತರ ಭಾರತದ ರೇಷ್ಮೆ ವ್ಯಾಪಾರಿಯೆಂದು ಹೇಳಿಕೊಂಡರು. ಪಾಂಡಿಚೆರಿಯಲ್ಲಿ  ಗುಪ್ತಚಾರರು ಸಂದೇಹಗೊಂಡು ಅವರು ಹೋದಲೆಲ್ಲೆ ಅವರನ್ನು ಹಿಂಬಾಲಿಸತೊಡಗಿದರು. ಪ್ಯಾರಿಸಿಗೆ ತಮ್ಮ ಸಂದೇಶವನ್ನು ಕಳುಹಿಸುವ ಭರವಸೆ ದೊರೆತ ನಂತರ ಯುಕ್ತಿಯಿಂದ ಬೇಹುಗಾರರ ಕಣ್ಣು ತಪ್ಪಿಸಿ ಮದರಾಸಿಗೆ ಬಂದರು.  ಮದರಾಸಿನಲ್ಲಿ ಕೃಷ್ಣಸ್ವಾಮಿ ಎಂಬ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡರು.

ಮರುದಿನ ಅವರು ಮದರಾಸಿನಿಂದ ಕಲ್ಕತ್ತೆಗೆ ಹೊರಟಾಗ ಕೃಷ್ಣಸ್ವಾಮಿ ಗುಪ್ತಚಾರರಿಗೆ ಜೋಗೇಶಚಂದ್ರರ ವಿಷಯವಾಗಿ ಸುಳಿವನ್ನು ಕೊಟ್ಟ. ಮೂರು ಜನ ಗೂಢಚಾರರು ಮದರಾಸಿನಿಂದ ಕಲ್ಕತ್ತದವರೆಗೆ ಅವರನ್ನು ಹಿಂಬಾಲಿಸಿದರು.

ಕಲ್ಕತ್ತದಲ್ಲಿ ಅವರು ರೈಲಿನಿಂದ ಇಳಿದ ತಕ್ಷಣ ಹದಿನಾಲ್ಕು ಜನ ಪೊಲೀಸ್ ಅಧಿಕಾರಿಗಳು ಸುತ್ತುವರಿದು ಅವರನ್ನು ಬಂಧಿಸಿದರು. ಲಾಲ್ ಬಜಾರ ಪೊಲೀಸ್ ಕಛೇರಿಯ ನರಕಕುಂಡದಂತಿದ್ದ ಜೈಲಿನಲ್ಲಿ ಅವರನ್ಜು ತಳ್ಳಿದರು. ವಿಚಾರ‍ಣೆ ಮುಗಿದ ನಂತರ ಅವರನ್ನು ಬರ್ಹಾವರ್ ಪುರ ಕಾರಾಗೃಹಕ್ಕೆ ಕಳುಹಿಸಿದರು. ನೇತಾಜಿ ಸುಭಾಷ್ ಚಂದ್ರರು ಆ ಸಮಯದಲ್ಲಿ ಇದೇ ಜೈಲಿನಲ್ಲಿದ್ದರು. ಜೈಲಿನಲ್ಲಿ ಒಂದು ಹಸ್ತ ಪತ್ರಿಕೆಯನ್ನು ಆರಂಭಿಸಿದರು, ಈ ಪತ್ರಿಕೆಯಲ್ಲಿ ನೇತಾಜಿಯವರು ಪೋಲೇಂಡಿನ ಸ್ವಾತಂತ್ರ‍್ಯವನ್ನು ಕುರಿತೂ ಜೋಗೇಶಚಂದ್ರರು ಐರ್ಲೆಂಡಿನ ವಿಷಯವಾಗಿಯೂ ಲೇಖನಗಳನ್ನು ಬರೆದರು.

ಒಂದು ದಿನ ಸಾಯಂಕಾಲ ಜೋಗೇಶಚಂದ್ರ ಮತ್ತು ಇನ್ನಿಬ್ಬರಿಗೆ ಅಂದಿನ ರಾತ್ರಿಯೇ ಬಿಹಾರಿನ ಹಜಾರಿಬಾಗ ಸೆರೆಮನೆಗೆ ಹೋಗುವಂತೆ ತಿಳಿಸಲಾಯಿತು. ಮೂವರೂ ಪ್ರತಿಭಟಿಸಿದರೂ ಕೇಳದೆ ಅವರನ್ನು ಬಲಾತ್ಕಾರದಿಂದ  ಹೊತ್ತುಕೊಂಡು ಹೋಗಿ ರೈಲಿನಲ್ಲಿ ತಳ್ಳಿದರು. ಅಕ್ಟೋಬರ್ ತಿಂಗಳ ಕೊರೆಯವ ಚಳಿಗಾಲ. ಮೂವರ ಮೈಮೇಲೆ ಸೊಂಟದ ಸುತ್ತಲೂ ಇರುವ ಬಟ್ಟೆ ಬಿಟ್ಟರೆ ಬೇರಿಲ್ಲ. ಅಂಥ ಕೊರೆಯುವ ಚಳಿಯಲ್ಲಿ ನಿರ್ದಯವಾಗಿ ಅವರನ್ನು ಕರೆದೊಯ್ಯಲಾಯಿತು. ಜೋಗೇಶಬಾಬುಗಳ ಶರೀರ ಜ್ವರದ ತಾಪದಿಂದ ಬೆಂಕಿಯಾಗಿತ್ತು. ಮರುದಿನ ಜ್ವರ ೧೦೫ ಡಿಗ್ರಿಗಳನ್ನು ತಲುಪಿತು. ಅವರಿಗೆ ಜ್ಞಾನ ತಪ್ಪಿತು. ಪರಿಸ್ಥಿತಿ ತೀರ ಚಿಂತಾಜನಕವಾದುದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಈ ಮೂವರನ್ನು ಈ ರೀತಿ ಅಮಾನುಷವಾಗಿ ನಡೆಯಿಸಿಕೊಂಡುದು ಪತ್ರಿಕೆಗಳಲ್ಲಿ ಪ್ರಕಟವಾಯಿತು. ಬ್ರಿಟಿಷ್ ಸರ್ಕಾರ ನಾಚಿಕೆಯಿಂದ ತಲೆಬಾಗಿಸಬೇಕಾಯಿತು.

ಕಾಕೋರಿ ಮೊಕದ್ದಮೆ

ಕಾಕೋರಿ ಮೊಕದ್ದಮೆಯ ವಿಚಾರಣೆ ಲಕ್ನೋ ನ್ಯಾಯಾಲಯದಲ್ಲಿ ಆರಂಭವಾಗಲಿತ್ತು. ಇದರಲ್ಲಿ  ಜೋಗೇಶಬಾಬುಗಳ ಪಾತ್ರ ಇದ್ದುದರಿಂದ ಕೋರ್ಟಿನಲ್ಲಿ ಅವರ ವಿಚಾರಣೆಯಾಗಿ ಶಿಕ್ಷೆಯಾಗಲಿತ್ತು. ಇದೇ  ಕಾರಣಕ್ಕಾಗಿ ಅವರನ್ನು ಲಕ್ನೋ ಜೈಲಿಗೆ ಕರೆತರಲಾಯಿತು. ೧೯೨೫ರ ಆಗಸ್ಟ್ ಹತ್ತರಂದು ನಸುಕಿನಲ್ಲಿ ರೈಲು ಕಾಕೋರಿ ಎಂಬ ಸ್ಟೇಷನ್ನಿನಿಂದ  ಲಕ್ನೋಗೆ ಪ್ರಯಾಣವನ್ನು ಆರಂಭಿಸಿತು. ದಾರಿಯಲ್ಲಿ ಹತ್ತು ಜನ ಶಸ್ತ್ರಧಾರಿಗಳು ರೈಲನ್ನು ನಿಲ್ಲಿಸಿದರು. ಇವರು ಕ್ರಾಂತಿಕಾರರು. ಕಬ್ಬಿಣದ ಪೆಟ್ಟಿಗೆಯನ್ನು ಒಡೆದು ಸರ್ಕಾರದ ಹಣವನ್ನು ಎತ್ತಿಕೊಂಡು ಮಾಯವಾದರು. ಈ ಘಟನೆ ಸರ್ಕಾರಕ್ಕೆ ಒಂದು ಆಹ್ವಾನವಾಯಿತು. ಗೂಢಚಾರರು ಕಣ್ಣಿನಲ್ಲಿ ಕಣ್ಣಿಟ್ಟು, ಹಗಲಿರುಳೆನ್ನದೆ ಅಪರಾಧಿಗಳನ್ನು ಹಿಡಿಯುವ ಕೆಲಸದಲ್ಲಿ  ತೊಡಗಿದರು. ಅವರ ಪ್ರಯತ್ನ ವಿಫಲವಾಗಲಿಲ್ಲ. ಹಲವು ಕ್ರಾಂತಿವೀರರು ಬ್ರಿಟಿಷರ ಉಕ್ಕಿನ ಹಿಡಿತದಲ್ಲಿ ಸಿಕ್ಕಿಬಿದ್ದರು. ಕೆಲವರು ಪೊಲೀಸರ ಚಿತ್ರಹಿಂಸೆ ತಾಳಲಾರದೆ ತಪ್ಪೊಪ್ಪಿಕೊಂಡು ಬೇರೆಯವರ ಹೆಸರುಗಳನ್ನು ಹೇಳಿದರು. ಉತ್ತರ ಭಾರತದಲ್ಲಿ ನಡೆಯುತ್ತಿದ್ದ ರಹಸ್ಯಮಯ ಕಾರ್ಯಗಳು ಒಂದೊಂದಾಗಿ ಬೆಳಕಿಗೆ ಬಂದವು.

ಕಾಕೋರಿ ಪ್ರಸಂಗ ನಡೆಯುವ ಮುಂಚೆ ಅದರ ಬಗ್ಗೆ ಕ್ರಾಂತಿಕಾರಿಗಳು ಸಮಾಲೋಚಿಸಿದ್ದರು. ಈ ಸಂದರ್ಭದಲ್ಲಿ ಜೋಗೇಶಚಂದ್ರರು ಭಗತ್ ಸಿಂಗ್, ಶಚೀಂದ್ರನಾಥ ಸಂನ್ಯಾಲ್, ಶಚೀನ್ ಬಕ್ಷಿ ಮುಂತಾದವರ ಸಂಪರ್ಕ ಬೆಳೆಸಿದ್ದರು. ಕಾಕೋರಿ ಘಟನೆ ನಡೆದ ಮೇಲೆ ಸರ್ಕಾರ ಅದಕ್ಕೆ ಸಂಬಂಧಪಟ್ಟವರನ್ನೆಲ್ಲ ಬಂಧಿಸಲು ಪಣ ತೊಟ್ಟಿತು. ಜೋಗೇಶಚಂದ್ರರ ಮೇಲೂ ವಾರಂಟ್ ಹೊರಟಿತು. ಮೊದಲೇ ಬಂಧಿತರಾಗಿದ್ದ ಅವರ ಮೇಲೆ ಇನ್ನೊಂದು ಆಪಾದನೆ ಸೇರಿತು.

ಒಂದೂವರೆ ವರ್ಷಗಳವರೆಗೆ ನಡೆದ ಕಾಕೋರಿ ಮೊಕದ್ದಮೆಯ ತೀರ್ಪು ನೀಡುವ ದಿನ ಬಂದಿತು ಅಂದು ಸ್ವಾತಂತ್ರ‍್ಯ ವೀರರನ್ನು ಶೃಂಖಲೆಗಳಿಂದ ಬಂಧಿಸಿ ನ್ಯಾಯಾಲಯಕ್ಕೆ ಕರೆದುಕೊಂಡು ಬಂದರು. ಚಂಪಾಲಾಲನೆಂಬ ಜೈಲಿನ ಅಧಿಕಾರಿ ಇವರನ್ನು ಬೀಳ್ಕೊಡುವಾಗ ತಡೆಯಲಾರದೆ ಹೃದಯದಲ್ಲಿ ತಳಮಳ. ನಿರ್ಣಯವನ್ನು ಕೇಳುವ ಆತುರ. ನೂರಾರು ಜನರು ಕೋರ್ಟಿನ ಬಳಿ ಸೇರಿದ್ದರು. ಕ್ರಾಂತಿಯೋಧರು ಉರ್ದು ಭಾಷೆಯ ಉಜ್ವಲ ದೇಶಗೀತೆಯನ್ನು ಹಾಡುತ್ತಾ ನ್ಯಾಯಾಲಯವನ್ನು ಪ್ರವೇಶಿಸಿದರು. ರಾಮಪ್ರಸಾದ್ ಬಿಸ್ಮಿಲ್, ರಾಜೇಂದ್ರ ಲಾಹಿರಿ, ಠಾಕೂರ್ ರೋಶನ್ ಸಿಂಹ, ಅಶ್ಫಾಕ್ ಉಲ್ಲಾ. ಈ ನಾಲ್ವರಿಗೆ ಮೃತ್ಯುದಂಡನೆ ಆಯಿತು.

ಜೋಗೇಶಚಂದ್ರರಿಗೆ ಅಜೀವ ಪರ್ಯಂತ ಕಠಿಣ ಸಜೆಯನ್ನು ಕೊಡಲಾಯಿತು.

ಕಾರಾಗೃಹದ ನರಕ

ಫತೆಗಡ ಸೆಂಟ್ರಲ್ ಜೈಲಿನಲ್ಲಿ ಜೋಗೇಶಚಂದ್ರ ಮತ್ತು ಇತರರನ್ನು ಒಂದು ವರ್ಷದವರೆಗೆ ಸೆರೆಯಲ್ಲಿಟ್ಟರು. ಕಾರಾಗೃಹದಲ್ಲಿ ಅವರನ್ನು ಬಹು ತುಚ್ಛ ರೀತಿಯಲ್ಲಿ ನಡೆಸಿಕೊಳ್ಳಲಾಯಿತು.  ಇದನ್ನು  ಪ್ರತಿಭಟಿಸಿ ತಮ್ಮನ್ನು ರಾಜಕೀಯ ಕೈದಿಗಳಂತೆ ನಡೆಸಿಕೊಳ್ಳಬೇಕೆಂದು ಉಪವಾಸವನ್ನು ಆರಂಭಿಸಿದರು. ಗಂಡಾಸಿಂಗ್ ಜೈಲಿನ ಅಧಿಕಾರಿಯಾಗಿದ್ದ.  ಅವನು ಮಹಾ ದುಷ್ಟ, ಮೋಸಗಾರನಾಗಿದ್ದ.  ಎಂಥ ಹೀನ ಕೃತ್ಯಗಳನ್ನೂ ಮಾಡಲು ಹಿಂಜರಿಯದವ. ಉಪವಾಸ ಮಾಡಿ ಇವರೆಲ್ಲರ ಸ್ಥಿತಿ ಶೋಚನೀಯವಾಗಿದ್ದರೂ ಅವರನ್ನು ಕ್ರೂರ ರೀತಿಯಿಂದ ಹಿಂಸಿಸಿ ಪಿಶಾಚಿಯಂತೆ ಆನಂದವನ್ನು ಪಟ್ಟ. ಜೋಗೇಶಚಂದ್ರರು ಹೊರಗಡೆಯ ಸ್ನೇಹಿತರಿಂದ ಪಿಸ್ತೂಲನ್ನು ತರಿಸಿ ಬಚ್ಚಿಟ್ಟುಕೊಂಡಿದ್ದಾನೆಂದು ಸುಳ್ಳುಕತೆಯನ್ನು ಕಟ್ಟಿದ. ಈತನೂ ಭಾರತೀಯನೆ!

ಫತೆಗಡದಿಂದ ಆಗ್ರಾ ಜೈಲಿಗೆ ಜೋಗೇಶಚಂದ್ರರು ಪುನಃ ವರ್ಗಾಯಿಸಲ್ಪಟ್ಟರು., ಬಂದೂಕಧಾರಿಗಳಾದ ಅನೇಕ ಪೊಲೀಸರ ಬಲ್ವಾದ ರಕ್ಷಣೆಯಲ್ಲಿ  ಅವರನ್ನು ಆಗ್ರಾಕ್ಕೆ ಕರೆತರಲಾಯಿತು.

ಆಗ್ರಾ ಸೆಂಟ್ರಲ್ ಜೈಲಿನಲ್ಲಿ ಒಂದು ಚಿಕ್ಕ ಕತ್ತಲು ಕೋಣೆಯಲ್ಲಿ ಅವರನ್ನು ಕೂಡಿ ಹಾಕಲಾಯಿತು. ಕೈಕಾಲುಗಳಿಗೆ ಬೇಡಿ ತಪ್ಪಿರಲಿಲ್ಲ. ಹೊರಗಡೆ ಯಾವಾಗಲೂ ಬಲವಾದ ಕಾವಲು. ಭಾರವಾದ ಬೇಡಿಗಳಿಂದಾಗಿ ಅವರು ಊಟ ಮಾಡುವುದಕ್ಕೂ ಮಲಮೂತ್ರ ವಿಸರ್ಜನೆಗೂ ಆಪಾರ ಕಷ್ಟವಾಗತೊಡಗಿತು.  ಬಾಯಿಗೆ ಹಾಕಿಕೊಳ್ಳಲಾರದಷ್ಟು ಕೆಟ್ಟ ಆಹಾರವನ್ನೂ ಒದಗಿಸಲಾಗುತ್ತಿತ್ತು. ಇವೆಲ್ಲದರ ಪರಿಣಾಮವಾಗಿ ಅವರ ಶರೀರ ದಿನದಿಂದ ದಿನಕ್ಕೆ  ಕುಗ್ಗತೊಡಗಿತು. ಜೋಗೇಶಬಾಬುಗಳು ಜೈಲಿನ ನೀತಿಯನ್ನು ಬಲವಾಗಿ ಪ್ರತಿಭಟಿಸಲು ಆರಂಭಿಸಿದ್ದರಿಂದ  ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾಯಿತು. ಅವರ ಶರೀರದ ತೂಕ ೧೪೬ ಪೌಂಡುಗಳಿಂದ ೧೦೦ ಪೌಂಡುಗಳಿಗೆ ಇಳಿದಿತ್ತು. ಸೆರೆಮನೆಯಲ್ಲಿದ್ದರೂ ಅವರು ಅನುಶೀಲನ ಸಮಿತಿಯ ಸದಸ್ಯರೊಂದಿಗೆ ಬಹು ಕುಶಲತೆಯಿಂದ ಪತ್ರ ವ್ಯವಹಾರವನ್ನಿಟ್ಟುಕೊಂಡಿದ್ದರು. ಆಗಾಗ ಅವರಿಂದ ಹೊರಗಡೆಯ ಸಮಾಚಾರವನ್ನು ಪಡೆಯುತ್ತಿದ್ದರು.

ಬಿಡುಗಡೆಯ ಪ್ರಯತ್ನ

ಆಗ್ರಾ ಸೆಂಟ್ರಲ್ ಜೈಲಿನಲ್ಲಿ ಒಂದು ವರ್ಷ ಕಠಿಣ ಶಿಕ್ಷೆಯನ್ನು ಅನುಭವಿಸಿದ ಜೋಗೇಶಚಂದ್ರರನ್ನು ಲಕ್ನೋ ಸೆರೆಮನೆಗೆ ಸಾಗಿಸಲು ಸರ್ಕಾರ ನಿರ್ಧರಿಸಿತು. ಜೋಗೇಶಬಾಬುಗಳು ತಮ್ಮ ಸ್ನೇಹಿತರಿಗೆ ಈ ಸುದ್ದಿಯನ್ನು ತಲುಪಿಸಿದರು. ಅವರನ್ನು ದಾರಿಯಲ್ಲಿ ಮುಕ್ತಗೊಳಿಸಬೇಕೆಂಬ ಯೋಜನೆಯನ್ನು ಅವರ ಮಿತ್ರರು ಸಿದ್ಧಪಡಿಸಿಕೊಂಡರು. ಅಪಾಯಕಾರಿ ರಾಜಕೀಯ ಬಂಧಿಗಳನ್ನು ಸಾಮಾನ್ಯವಾಗಿ ರಾತ್ರಿಯ ರೈಲಿನಲ್ಲಿಯೇ ಕರೆದುಕೊಂಡು ಹೋಗುತ್ತಿದ್ದರು. ಕಾನ್ಫುರದ ಹತ್ತಿರ ಗಾಡಿಯನ್ನು ನಿಲ್ಲಿಸಿ ಜೋಗೇಶಬಾಬುಗಳನ್ನು ಪಾರು ಮಾಡುವ ಉದ್ದೇಶ ಅವರ ಹಿತೈಷಿಗಳದ್ದಾಗಿತ್ತು. ಆದರೆ ದುರ್ದೈವದಿಂದ ಜೋಗೇಶಚಂದ್ರರನ್ನು ಒಂದು ದಿನ ಸಾಯಂಕಾಲವೇ ಸ್ಟೇಷನ್ನಿಗೆ  ಕರೆದುಕೊಂದು ಹೋದರು.

ರೈಲು ಹೊರಡುವ ೧೫ ನಿಮಿಷಗಳ ಮೊದಲು ಜೋಗೇಶಚಂದ್ರರ ಗೆಳೆಯರು ಸ್ಟೇಷನ್ನಿಗೆ ಬಂದರು. ಆದರೆ ಮಧ್ಯದಲ್ಲಿ ಎಲ್ಲಿಯೂ ಅಡೆತಡೆಯಿಲ್ಲದೆ ರೈಲು ಕಾನ್ಫುರ ನಿಲ್ದಾಣವನ್ನು ತಲುಪಿತು. ಈ ಯೋಜನೆಯ ಅಸಫಲತೆಗೆ ಕಾರ‍ಣ ಅವರನ್ನು ರಾತ್ರಿ ಕರೆದುಕೊಂಡು ಬರದೆ ಸಾಯಂಕಾಲವೇ ಕರೆದುಕೊಂಡು ಬಂದುದು. ಕಾಂತ್ರಿಕಾರರ ಸಿದ್ಧತೆಯೆಲ್ಲ ತಲೆಕೆಳಗಾಯಿತು.

ವಿಷಾದದ ತೂಗುಯ್ಯಾಲೆ

ಲಕ್ನೋ ಸೆರೆಮನೆಯಲ್ಲಿರುವಾಗ ಜೋಗೇಶ ಬಾಬುಗಳಿಗೆ ಚಂದ್ರಶೇಖರ ಆಜಾದ್  ಹುತಾತ್ಮನಾದ ಸುದ್ದಿ ಸಿಡಿಲಿನಂತೆ ಎರಗಿತು.

ಲಕ್ನೋ ಸೆರೆಮನೆಯಲ್ಲಿರುವಾಗ ಜೋಗೇಶ ಬಾಬುಗಳಿಗೆ ಚಂದ್ರಶೇಖರ ಆಜಾದ್ ಹುತಾತ್ಮನಾದ ಸುದ್ದಿ ಸಿಡಿಲಿನಂತೆ ಎರಗಿತು. ಆಜಾದ್ ಅವರ ಬಿಡುಗಡೆಗಾಗಿ ಪ್ರಯತ್ನಿಸಿದ ಧೀರ ಪುರುಷ. ಅಲಹಾಬಾದಿನ ಆಲ್ ಫ್ರೆಡ್ ಪಾರ್ಕಿನಲ್ಲಿ ಆಜಾದ್ ತನ್ನ ಮಿತ್ರರೊಡನೆ ಕುಳಿತು ಮಾತುಕತೆಯಾಡುತ್ತಿದ್ದ ಒಂದು ದಿನ. ದ್ರೋಹಿಗಳು ಪೊಲೀಸರಿಗೆ ಸುಳಿವನ್ನು ಕೊಟ್ಟಿದ್ದರಿಂದ ಅವರೊಂದಿಗೆ ಹೋರಾಡುತ್ತ ತನ್ನ ಗುಂಡಿನಿಂದಲೇ ಆಜಾದನಾಗಿ ಪ್ರಾಣ ಅರ್ಪಿಸಿ ಭಾರತದ ಇತಿಹಾದಲ್ಲಿ ತನ್ನ ಹೆಸರನ್ನು ಅಮರವಾಗಿಸಿದ. ತಮ್ಮ ಪರಮಪ್ರಿಯ ಮಿತ್ರನನ್ನು ಕಳೆದುಕೊಂಡು ಜೋಗೇಶಚಂದ್ರರು ಬಹಳ ಸಂಕಟ ಪಟ್ಟರು. ಅನಂತರ ರಾಜಗುರು, ಭಗತ್ ಸಿಂಗರು ಸ್ವಾತಂತ್ರ‍್ಯ ಯುದ್ಧದಲ್ಲಿ ಪ್ರಾಣ ಒಪ್ಪಿಸಿದರು. ಇವುಗಳಲ್ಲದೆ  ಜೋಗೇಶಚಂದ್ರರ ತಂದೆಯ ಮರಣ, ಡಾ. ಖಾನನೆಂಬವನ ಅಲಕ್ಷ್ಯತನದಿಂದಾದ ಅವರ ಸೋದರಮಾವನ ಮಗ ಶೈಲೇಶ ಚಟರ್ಜಿಯ ಕಾರಾಗೃಹದಲ್ಲಿಯ ಸಾವು ಅವರ ಹೃದಯವನ್ನು ಅಲ್ಲೋಲ ಕಲ್ಲೋಲಗೊಳಿಸಿದವು.

ಜೈಲಿನ ಕತ್ತಲು ಕೋಣೆಯಲ್ಲಿ ಸಾಹಸಿಗಳಾದ ಜೋಗೇಶಚಂದ್ರರು ಏನನ್ನೂ ಮಾಡಲಾಗದೆ ಚಡಪಡಿಸುತ್ತಿದ್ದರು. ಕಾರಾಗೃಹದ ಎತ್ತರವಾದ ಗೋಡೆಯನ್ನು ಜಿಗಿದು ಓಡಿಹೋಗುವ ಪ್ರಯತ್ನವನ್ನು  ಸಹ ಮಾಡಿದರು. ಆದರೆ ಕಾವಲುಗಾರರು ಬಹು ಜಾಗರೂಕರಾಗಿದ್ದುದರಿಂದ ಅವರ ಯತ್ನ ಫಲಿಸದೆ ಹೋಯಿತು.

ಆಮರಣ ಉಪವಾಸ

ಲಕ್ನೋ ಸೆರೆಮನೆಯಲ್ಲಿ ಎಲ್ಲ ರಾಜಕೀಯ ಸೆರೆಯಾಳುಗಳನ್ನು ಬಹು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು. ಅವರ ಮೇಲೆ ಎಂಥ ಬಲಪ್ರಯೋಗ, ಅತ್ಯಾಚಾರ ಮಾಡಲೂ ಅಧಿಕಾರಿಗಳು ಹಿಂಜರಿಯುತ್ತಿರಲಿಲ್ಲ. ಈ ದುರ್ನಡತೆ, ಹಿಂಸೆಗಳ ವಿರುದ್ಧ ಮೇಲಧಿಕಾರಿಗಳಿಗೆ ಮಾರಿಕೊಂಡರೆ ಯಾವ ಪ್ರಯೋಜನವೂ ಆಗುತ್ತಿರಲಿಲ್ಲ. ಪ್ರತಿಭಟಿಸಿದವರಿಗೆ  ಉಗ್ರ ಸಜೆ ಕಾದಿರುತ್ತಿತ್ತು. ಬ್ರಿಟಿಷ್ ಶಾಸಕರ ದೃಷ್ಟಿಯಲ್ಲಿ ಸ್ವಾತಂತ್ರಕ್ಕಾಗಿ ಹೋರಾಡುತ್ತಿದ್ದವರು ಪರಮ ದ್ರೋಹಿಗಳು ; ಈ ಶತ್ರುಗಳು ದಯೆ, ಕರುಣೆಗೆ ಯೋಗ್ಯರಲ್ಲ.

ಜೋಗೇಶಚಂದ್ರರು ದೈತ್ಯಶಾಸಕರ ಗರ್ವವನ್ನು ಮುರಿಯುವ ಅಚಲ ನಿರ್ಧಾರವನ್ನು ಕೈಗೊಂಡರು. ಸರ್ಕಾರಕ್ಕೆ ತಮ್ಮ ಅತ್ಯಗತ್ಯವಾದ ಬೇಡಿಕೆಗಳನ್ನು ಮನ್ನಿಸಲು ಬರಹದ ಮೂಲಕ ತಿಳಿಸಿದರು. ದೇಶಕ್ಕಾಗಿ ಹೋರಾಡಿ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸೆರೆಯಾಳುಗಳೊಂದಿಗೆ ಸರಿಯಾಗಿ ವರ್ತಿಸಬೇಕು; ಅವರಿಗಾಗಿ ಪ್ರತ್ಯೇಕ ವ್ಯವಸ್ಥೆಯಾಗಬೇಕು; ಅವರಿಗೆ ಓದಲು ಗ್ರಂಥಗಳನ್ನು, ಪತ್ರಿಕೆಗಳನ್ನು ಒದಗಿಸಬೇಕು ; ಅವರಿಗೆ ಆಟವಾಡಲು; ವ್ಯಾಯಾಮ ಮಾಡಲು ಅವಕಾಶವನ್ನು ಕೊಡಬೇಕು – ಇವು ಅವರ ಮುಖ್ಯ ಕೇಳಿಕೆಗಳು. ಮೇಲಧಿಕಾರಿಗಳಿಂದ ಯಾವ ಪ್ರತಿಕ್ರಿಯೆಯನ್ನೂ ಕಾಣದೆ ಅವರು ಸರ್ಕಾರವನ್ನು ಬಗ್ಗಿಸಲೇಬೇಕೆಂಬ ಉದ್ದೇಶದಿಂದ ಆಮರಣ ಉಪವಾಸವನ್ನು ಪ್ರಾರಂಭಿಸಿದರು. ಇದಾದದ್ದು ೧೯೩೪ನೇ ಇಸವಿ ಜುಲೈ ತಿಂಗಳಿನಲ್ಲಿ.

ಒಂದಾದ ಮೇಲೊಂದರಂತೆ ದಿನಗಳುರುಳಿದವು. ಜೋಗೇಶಚಂದ್ರರು ೫೫ ದಿನಗಳವರೆಗೆ  ಕೇವಲ ನೀರನ್ನು ಮಾತ್ರ ಕುಡಿಯುತ್ತಿದ್ದರು. ೫೬ನೆಯ ದಿನದಿಂದ ನೀರನ್ನು ಸಹ ನಿಲ್ಲಿಸಿಬಿಟ್ಟರು. ಮೇಲಧಿಕಾರಿಗಳು ಅವರ ಹಟದಿಂದ ಜಗ್ಗಲಿಲ್ಲ. ’ನೀನು ಸತ್ತರೂ ಸರ್ಕಾರ ಲಕ್ಷಿಸದು’ ಎಂದು ತಿರಸ್ಕಾರದಿಂದ ಹೇಳಿದರು.  ನೀರು ಕುಡಿಯುವುದನ್ನು ನಿಲ್ಲಿಸಿದ್ದರಿಂದ ಅವರ ತೂಕ ಪ್ರತಿದಿನ ಒಂದು ಪೌಂಡಿನಂತೆ ಕಡಿಮೆಯಾಗತೊಡಗಿತು. ಅಧಿಕಾರಿಗಳು ಬಲಾತ್ಕಾರದಿಂದ ನೀರನ್ನು ಅವರ ಮೂಗಿನಿಂದ ಹೊಯ್ಯಲಾರಂಭಿಸಿದರು. ಜೋಗೇಶಚಂದ್ರರು ಇದನ್ನು ಕೂಡಲೇ ವಿರೋಧಿಸಿ ವಾಂತಿ ಮಾಡಿಕೊಳ್ಳಲಾರಂಭಿಸಿದರು.

ಉಪವಾಸದ ೬೮ನೆಯ ದಿನ ಅವರ ದೇಹಸ್ಥಿತಿ ಭೀಕರವಾಯಿತು. ಅಧಿಕಾರಿಗಳು ಅವರೊಂದಿಗೆ ಮಾತುಕತೆ ನಡೆಸಿ ಉಪವಾಸ ನಿಲ್ಲಿಸಲು ಯತ್ನಿಸಿದರು. ಬ್ರಿಟಿಷರಿಂದ ಪ್ರೇರಿತರಾದ ಕೆಲವು ಹಿರಿಯಿರು ಜೋಗೇಶಚಂದ್ರರನ್ನು ಸಂಧಿಸಿ’ ನಿನ್ನ ಯಾವ ಬೇಡಿಕೆಗಳನ್ನೂ ಬ್ರಿಟಿಷ್ ಸರ್ಕಾರ ಮನ್ನಿಸಲಾರದು. ನೀನು ವೃಥ ನಿನ್ನ ಪ್ರಾಣವನ್ನು ಕೊಡುತ್ತಿದ್ದಿ’ ಎಂದು ನಾನಾ ರೀತಿಯಾಗಿ ಉಪದೇಶಿಸಿ ಅವರ ಮನಸ್ಸನ್ನು ಬದಲಿಸಲು ಯತ್ನಿಸಿದರು. ಆದರೆ ಜೋಗೇಶಚಂದ್ರರು ಇವಾವುದಕ್ಕೂ ಕಿವಿಗೊಡಲಿಲ್ಲ. ದಿನದಿಂದ ದಿನಕ್ಕೆ ಅವರ ಆರೋಗ್ಯ ಕುಸಿಯುತಲ್ಲದೆ ಸಹಿಸಲಾಗದ ವೇದನೆಯೂ ಸಹ ಆರಂಭವಾಯಿತು. ಕೈಕಾಲುಗಳನ್ನು ಅಲ್ಲಾಡಿಸುವಷ್ಟು ಶಕ್ತಿಯೂ ಅವರಲ್ಲಿ ಉಳಿಯಲಿಲ್ಲ.  ಅವರು ಆತ್ಮಹತ್ಯೆ ಮಾಡಿಕೊಳ್ಳಬಾರದೆಂದು ಅವರ ಕೈಕಾಲುಗಳನ್ನು ಕಟ್ಟಿಹಾಕಲಾಗಿತ್ತು. ಸತತವಾದ ಉಪವಾಸದಿಂದ ಅವರ ಶರೀರ ಅಸ್ಥಿಪಂಜರವಾಯಿತು. ಅವರ ತೂಕ ಕೇವಲ ೭೬ ಪೌಂಡಿಗಿಳಿಯಿತು.  ಡಾಕ್ಟರರು ಸಹ ಹತಾಶರಾಗಿ ಕೈಚೆಲ್ಲಿದರು. ಈ ರೀತಿಯಾಗಿ ಸಾವು ನೋವುಗಳ ಉಯ್ಯಾಲೆಯಲ್ಲಿ ಅವರು ಹೊಯ್ದಾಡುತ್ತಿರುವಾಗ ಕೊನೆಗೆ ಉಚ್ಛ ಅಧಿಕಾರಿಯೊಬ್ಬ ಅವರನ್ನು ನೋಡಲು ಬಂದ, ಅವರ ಎಲ್ಲ ಬೇಡಿಕೆಗಳನ್ನೂ ಸರ್ಕಾರ ಒಪ್ಪಿಕೊಳ್ಳುವುದಾಗಿ ಅವರಿಗೆ ಭರವಸೆಯನ್ನಿತ್ತು ಉಪವಾಸವನ್ನು ಕೊನೆಗೊಳಿಸಲು ಅವರನ್ನು ಬೇಡಿಕೊಂಡ. ಅವರು ೧೪೨ ದಿನಗಳ ಉಪವಾಸವನ್ನು ಮುಕ್ತಾಯ ಗೊಳಿಸಿದರು. ಅವರ ಆರೋಗ್ಯ ಮೆಲ್ಲನೆ ಸುಧಾರಿಸಿತು.

ಆದರೆ ಸರ್ಕಾರ ತನ್ನ ವಚನವನ್ನು ಪಾಲಿಸಲಿಲ್ಲ. ರಾಜಕೀಯ ಸೆರೆಯಾಳುಗಳ ವಿಷಯದಲ್ಲಿ ಯಾವ ಬದಲಾವಣೆಗಳೂ ತೋರಿ ಬರಲಿಲ್ಲ. ಈ ಮೋಸವನ್ನು ಕಂಡು ಜೋಗೇಶಬಾಬುಗಳು ಸಿಡಿದೆದ್ದರು. ಪುನಃ ಉಪವಾಸವನ್ನು ಆರಂಭಿಸಿದರು. ಅವರ ಛಲ ದೇಶದ ನಾಯಕರ ಗಮನವನ್ನು ಸೆಳೆಯಿತು. ರಾಜೇಂದ್ರಪ್ರಸಾದ್, ಕಿದ್ವಾಯಿ ಮೊದಲಾದವರು ಈ ದಿಶೆಯಲ್ಲಿ ಕಾರ್ಯವನ್ನು ಆರಂಭಿಸಿದರು. ದೇಶದ ಎಲ್ಲ ಪತ್ರಿಕೆಗಳಲ್ಲಿ ವಿಷಯ ಪ್ರಕಟವಾಗಿ ಎಲ್ಲೆಡೆಯೂ ಬಿಸಿ ಚರ್ಚೆ ಆರಂಭವಾಯಿತು. ಉಪವಾಸದ ನೂರನೆಯ ದಿನ ಅವರ ಬಾಯಲ್ಲಿಯ ಒಸಡುಗಳಿಂದ ರಕ್ತಸ್ರಾವವಾಗಲಾರಂಭಿಸಿತು. ಉತ್ತರ ಪ್ರದೇಶ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಆಲೋಚಿಸಿ ಕೊನೆಗೆ ಜೋಗೇಶ ಚಂದ್ರರ ಸಾಹಸದ ಮುಂದೆ ತಲೆಬಾಗಿಸಿ ಅವರ ಕೇಳಿಕೆಗಳನ್ನು ಮನ್ನಿಸಿತು. ೧೧೧ನೆಯ ದಿನ ಅವರು ತಮ್ಮ ಸತ್ಯಾಗ್ರಹವನ್ನು ಕೊನೆಗೊಳಿಸಿದರು. ತಮ್ಮಜೀವನವನ್ನೇ ಪಣಕ್ಕಿಟ್ಟು ಜೋಗೇಶಚಂದ್ರರು ಯಶಸ್ವಿಯಾದರು.

ಕತ್ತಲಿನಿಂದ ಮತ್ತೆ ಬೆಳಕಿಗೆ

೧೯೩೭ರಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮಂತ್ರಿ ಮಂಡಲ ತನ್ನ ಪ್ರಥಮ ಆಡಳಿತ ಸೂತ್ರಗಳನ್ನು ವಹಿಸಿಕೊಂಡು ಕಾರ್ಯವನ್ನು ಆರಂಭಿಸಿತು. ಕಾಕೋರಿ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದ ಎಲ್ಲ ಸೆರೆಯಾಳುಗಳನ್ನೂ ಬಿಡುಗಡೆಗೊಳಿಸಬೇಕೆಂದು ಜನತೆ ಹೋರಾಟವನ್ನು ಆರಂಭಿಸಿತು. ಮಂತ್ರಿಮಂಡಲಕ್ಕೆ ಇದು ಬಿಡಿಸಲಾರದ ಸಮಸ್ಯೆಯಾಗಿತ್ತು. ಬ್ರಿಟಿಷ್ ಗರ್ವನರನು ಜನರ ಈ ಬೇಡಿಕೆಯನ್ನು ತಳ್ಳಿ ಹಾಕಿದ. ಕೂಡಲೇ ಮಂತ್ರಿಮಂಡಲ ತಾನು ರಾಜೀನಾಮೆಕೊಟ್ಟು ಆಡಳಿತದಿಂದ ಹೊರಬೀಳೂವುದಾಗಿ ಗವರ್ನರಿನಿಗೆ ಬೆದರಿಕೆ ಹಾಕಿತು. ಬೆದರಿಕೆ ತನ್ನ ಗುರಿಯನ್ನು ಸಾಧಿಸಿತು. ಗವರ್ನರನು ಮಣಿದು ಕಾರಾಗೃಹದಲ್ಲಿದ್ದ ಹಲವು ದೇಶಪ್ರೇಮಿಗಳನ್ನು ಮುಕ್ತಗೊಳಿಸಲು ಒಪ್ಪಿಕೊಂಡ. ಈ ಸುದ್ದಿ ಜನರಲ್ಲಿ ಆನಂದದ ಬುಗ್ಗೆಯನ್ನು ಚಿಮ್ಮಿಸಿತು. ಸಾವಿರಾರು ಜನ ಬಿಡುಗಡೆಯ ದಿನ ಸೆರೆಮನೆಯ ಎದುರಿಗೆ ಕ್ರಾಂತಿದೂತರನ್ನು ಸ್ವಾಗತಿಸಲು ನೆರೆದರು. ಈ ಎಲ್ಲ ಯೋಧರನ್ನು ವಿಶೇಷ ಮೆರವಣಿಗೆಯಲ್ಲಿ ಅಲಹಾಬಾದಿಗೆ ಕರೆದುಕೊಂಡು ಬಂದರು. ಆನಂದ ಭವನದಲ್ಲಿ ಜವಾಹರಲಾಲ್ ನೆಹರೂರವರು ಆತಿಥ್ಯವನ್ನಿತ್ತು ಸತ್ಕರಿಸಿದರು.

ಕಾನ್ಪುರ, ಲಕ್ನೋಗಳಲ್ಲಿ ನಾಡಿನ ಭವಿಷ್ಯ ನಿರ್ಮಾಪಕರನ್ನು ಸ್ವಾಗತಿಸಲು ಸಿದ್ದತೆಗಳಾದವು. ರೈಲ್ವೆ ನಿಲ್ದಾಣಗಳಲ್ಲಿ ಸಾವಿರಾರು ಜನ ಹೆಮ್ಮೆ, ಪ್ರೀತಿಗಳಿಂದ ಜೋಗೇಶಚಂದ್ರ ಮತ್ತು ಇತರರನ್ನು ಸ್ವಾಗತಿಸಿದರು. ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಒಂದು ಲಕ್ಷಕ್ಕೂ ಮೇಲ್ಪಟ್ಟು ಜನರು ಸಭೆಯಲ್ಲಿ ಕೂಡಿದರು.

ಮತ್ತೆ ಹೋರಾಟ

ಈ ಎಲ್ಲ ಆನಂದ, ಪ್ರದರ್ಶಾನಾದಿಗಳ ಮಧ್ಯೆ ಜೋಗೇಶಚಂದ್ರರ ಮನಸ್ಸು ಸೆರೆಮನೆಗಳಲ್ಲಿ ಕೊಳೆಯುತ್ತಿರುವ ಇತರ ರಾಷ್ಟ್ರಪ್ರೇಮಿಗಳ ಮುಕ್ತಿಗಾಗಿ ಚಿಂತಿಸುತ್ತಿತ್ತು. ಇದಕ್ಕಾಗಿ ತಮ್ಮ ಅಹರ್ನಿಶಿ ಪ್ರಯತ್ನವನ್ನು ಆರಂಭಿಸಿದರು. ಪ್ರತಿಯೊಂದು ಜಿಲ್ಲೆಯನ್ನೂ ಸಂದರ್ಶಿಸಿ ಕಾರಾಗೃಹದಲ್ಲಿ ಸಂಕಟಪಡುತ್ತಿರುವವರ ಬಿಡುಗಡೆ ಅತ್ಯವಶ್ಯ. ಅದಕ್ಕಾಗಿ ನಾವು ದುಡಿಯೋಣ ಎಂಬ ಕರೆಯನ್ನು ಕೊಟ್ಟರು. ಜನ ಉತ್ಸಾಹವನ್ನು ದ್ವಿಗುಣಗೊಳಿಸಿದರು. ಅನೇಕ ಗೂಢಚಾರರು. ಪೊಲೀಸರು ಅವರನ್ನು ಎಡೆಬಿಡದೆ ಹಿಂಬಾಲಿಸತೊಡಗಿದರು. ಸರ್ಕಾರ ಪುನಃ ಅವರನ್ನು ತಮ್ಮ ಉಕ್ಕಿನ ಪಂಜರದಲ್ಲಿ ಬಂಧಿಸುವುದಕ್ಕೆ ಕಾಯುತ್ತಿತ್ತು.

೧೯೩೭ರ ಡಿಸೆಂಬರ್ ೨ರಂದು ದೆಹಲಿಯಲ್ಲಿ ಸಭೆಯನ್ನು ಕರೆಯಲಾಗಿತ್ತು. ಜೋಗೇಶಚಂದ್ರರ ಮತ್ತು ಅವರ ಮಿತ್ರರು ಮುಖ್ಯ ಅತಿಥಿಗಳಾಗಿದ್ದರು. ಅವರೆಲ್ಲ ದೆಹಲಿ ಸ್ಟೇಷನ್ನಿನಲ್ಲಿ ಇಳಿದ ತಕ್ಷಣವೇ ಪೊಲೀಸರು ಯಾವ ಸಭೆ, ಮೆರವಣಿಗೆಗಳಲ್ಲಿ ಭಾಗವಹಿಸಬಾರದಲ್ಲದೆ. ೬ ಗಂಟೆಯೊಳಗಾಗಿ ದೆಹಲಿಯನ್ನು ಬಿಟ್ಟು ತೆರಳಬೇಕೆಂಬ ಸರ್ಕಾರದ ಆಜ್ಞೆಯನ್ನು ತೋರಿಸಿದರು. ಜೋಗೇಶಚಂದ್ರರು ಇದನ್ನು ಲೆಕ್ಕಿಸದೆ ಸಭೆಯ ವೇದಿಕೆಯ ಮೇಲೆ ನಿಂತು ಕೆಲವೇ ನಿಮಿಷ ಮಾತನಾಡುವಷ್ಟರಲ್ಲಿ ಪೊಲೀಸರು ಅವರನ್ನು ಹಿಡಿದು ಎಳೆದುಕೊಂಡು ಹೋದರು. ಸರ್ಕಾರದ ಆಜ್ಞೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ನಾಲ್ಕು ತಿಂಗಳ ಶಿಕ್ಷೆ ಆಯಿತು. ಅವರ ಶಿಕ್ಷೆ ಮುಗಿಯಲು ಇನ್ನು ಕೆಲವೇ ದಿನಗಳಿರುವಾಗ ಸುಭಾಷ್ ಚಂದ್ರ ಬೋಸರು ಅವರ ತಾಯಿ ಮೃತ್ಯುಶಯ್ಯೆಯಲ್ಲಿರುವುದಾಗಿಯೂ ಕೂಡಲೇ ಹೊರಟು ಬರಬೇಕೆಂದೂ ಸೂಚಿಸಿದರು. ಜೈಲಿನ  ಅಧಿಕಾರಿಗಳು ಜೋಗೇಶಚಂದ್ರರಿಗೆ ಹೋಗಲು ಅನುಮತಿ ನೀಡಿದರು. ತಮ್ಮ ತಾಯಿಯ ಕೊನೆಯ ದರ್ಶನಕ್ಕಾಗಿ ಜೋಗೇಶಚಂದ್ರರು ಬಂಗಾಳ ಪ್ರಾಂತವನ್ನು ತಲುಪಿದರು. ಅವರ ತಾಯಿ ಪಾರ್ಶ್ವವಾಯುವಿನ ಆಘಾತದಿಂದ ನಾಲ್ಕು ದಿನಗಳವರೆಗೆ ಪ್ರಜ್ಞಾಶೂನ್ಯರಾಗಿದ್ದರು. ಇದೇ ಸಮಯದಲ್ಲಿ ಬಂಗಾಳ ಸರ್ಕಾರ ಜೋಗೇಶಬಾಬುಗಳು ಕೂಡಲೇ ಬಂಗಾಳ ಪ್ರಾಂತವನ್ನು ಬಿಟ್ಟು ತೆರಳಬೇಕೆಂದು ಆಜ್ಞೆ ಮಾಡಿತು. ಉಪಾಯವಿಲ್ಲದೆ ಅವರು ಹೃದಯದಲ್ಲಿ ಅಪಾರ ವೇದನೆಯನ್ನು ಹೊತ್ತುಕೊಂಡು ಹೊರಬಿದ್ದರು.

ಸ್ವಾತಂತ್ರ‍್ಯ ಬಂದಿತು

೧೯೩೯ರಲ್ಲಿ  ಎರಡನೆಯ ಪ್ರಪಂಚ ಯುದ್ಧ ಆರಂಭವಾಯಿತು. ಇಂಗ್ಲೆಂಡ್ ಈ ಯುದ್ಧದಲ್ಲಿ ತೊಡಗಿತು. ಬ್ರಿಟಿಷರು ಮೈಮರೆತಿರುವಾಗಲೇ ಜಪಾನಿನ ಸಹಾಯದಿಂದ ಸ್ವಾತಂತ್ರ‍್ಯವನ್ನು ಸಾಧಿಸಬೇಕೆಂಬುದು ನೇತಾಜಿಯವರ ಮತ್ತು ಇನ್ನಿತರರ ಆಲೋಚನೆಯಾಗಿತ್ತು. ಜಪಾನಿಗೆ ತೆರಳಿ ಅವರ ಸಹಾಯ ಯಾಚಿಸಲು ಜೋಗೇಶಚಂದ್ರರಿಗೆ ಕರೆ ಬಂದಿತು. ಬ್ರಿಟಿಷ್ ಗೂಢಚಾರರು ಅವರನ್ನು ಬೇಟೆಯ ನಾಯಿಗಳಂತೆ ಹಿಂಬಾಲಿಸುತ್ತಿದ್ದುದರಿಂದ  ಅವರೆಲ್ಲರ ಕಣ್ಣು ತಪ್ಪಿಸಿ ಹೋಗುವುದು ಅಸಾಧ್ಯವಾಗಿತ್ತು. ಆದ್ದರಿಂದ ಅವರ ಪರದೇಶ ಯಾತ್ರೆ ಅರ್ಧಕ್ಕೆ ನಿಂತಿತು. ಲಕ್ನೋ ನಗರದಲ್ಲಿ ಬಡತನ, ಅನಾರೋಗ್ಯದಿಂದ  ಜೋಗೇಶಬಾಬುಗಳು ಬಹು ಸಂಕಟವನ್ನು ಅನುಭವಿಸಿದರು. ಆದರೂ ಅವರ ಚೇತನಶಕ್ತಿ ಬತ್ತಿರಲಿಲ್ಲ. ಉತ್ತರ ಪ್ರದೇಶ, ಬಿಹಾರಗಳಲ್ಲೆಲ್ಲ ರಹಸ್ಯವಾಗಿ ತಿರುಗಿ ಕ್ರಾಂತಿಯ ಬೀಜಗಳನ್ನು ಬಿತ್ತಿದರು. ೧೯೪೨ರಲ್ಲಿ ನೇತಾಜಿಯವರು ರಾಸಬಿಹಾರಿಯವರೊಂದಿಗೆ ಅಜಾದ್ ಹಿಂದ್ ಫೌಜ್ ಎಂಬ ಸೇನೆಯನ್ನು ಎದುರಿಸಿದರು. ನೇತಾಜಿಯವರ ಸೇನೆ ಜಯಗಳಿಸಿ ಮುನ್ನುಗ್ಗಿದರೆ ಅವರ ಸಹಾಯಕ್ಕೆಂದು ಜೋಗೇಶಚಂದ್ರರು ಅನೇಕ ತರುಣರನ್ನು ತರಬೇತಿಗೊಳಿಸಿದರು. ಆದರೆ ಆಜಾದ್ ಹಿಂದ್ ಪೌಜ್ ಕೆಲವು ದಿನಗಳ ಯುದ್ಧದ ನಂತರ ಪರಾಜಯ ಹೊಂದಿತು.

ಆಗಸ್ಟ್  ೧೯೪೨ರಲ್ಲಿ ಬ್ರಿಟಿಷರ ದಮನ ನೀತಿಯನ್ನು ಸಹಿಸಲಾರದ ಜನತೆ ಸಿಡಿದೆದ್ದಿತು. ಬ್ರಿಟಿಷರೇ ಭಾರತ ಬಿಟ್ಟು ಹೊರಡಿ ಚಳವಳಿ ಪ್ರಾರಂಭವಾಯಿತು. ಸಾವಿರಾರು ಜನ ಗುಂಡಿಗಾಹುತಿಯಾಗಿ ತಮ್ಮ ರಕ್ತವನ್ನು ಹರಿಸಿದರು. ಈ ಸಾಮೂಹಿಕ ಆಂದೋಳನದಲ್ಲಿ ಬ್ರಿಟಿಷ್ ಸರ್ಕಾರ ಜೋಗೇಶಚಂದ್ರರಿಗೆ ೧೦ ವರ್ಷಗಳ ಸಶ್ರಮ ಶಿಕ್ಷೆಯನ್ನು ವಿಧಿಸಿತು. ಏಪ್ರಿಲ್ ೧೯೪೬ರಲ್ಲಿ ಅವರನ್ನು ಬಿಡುಗಡೆಗೊಳಿಸಲಾಯಿತು. ದೇಶದಲ್ಲಿ ಜ್ವಾಲಾಮುಖಿ ಸಿಡಿಯುವ ಲಕ್ಷಣಗಳು ಆಗಲೇ ತೋರಿಬರುತ್ತಿದ್ದವು. ಮುಂದೆ ಸ್ವಲ್ಪ ಕಾಲದ್ಲೇ ವಿದೇಶಿಯರು ತಮ್ಮ ಪರಾಜಯವನ್ನು ಒಪ್ಪಿಕೊಂಡು ರಾಜ್ಯಭಾರತವನ್ನು ಭಾರತೀಯರಿಗೆ ಒಪ್ಪಿಸಿದರು.

ಸ್ವತಂತ್ರ ಭಾರತದಲ್ಲಿ ಸೇವೆ

ಜೋಗೇಶ ಬಾಬುಗಳ ಸುವರ್ಣ ಸ್ವಪ್ನ ಸತ್ಯವಾಯಿತು. ಈ ಪುಣ್ಯಮೂಹೂರ್ತಕ್ಕಾಗಿ ಅವರು ತಮ್ಮ ಸರ್ವಸ್ವವನ್ನೂ ತ್ಯಜಿಸಿ, ತಮ್ಮ ರಕ್ತದ ಹನಿ ಹನಿಯನ್ನೂ ರಾಷ್ಟ್ರಕ್ಕಾಗಿ ಹರಿಸಿದ್ದರು. ತಮ್ಮ ಜೀವನದ ೨೪ ವರ್ಷಗಳನ್ನು ಕಾರಾಗೃಹದ ಕತ್ತಲು ಕೋಣೆಗಳಲ್ಲಿ ಕಳೆದಿದ್ದರು.  ಸ್ವತಂತ್ರ ಭಾರತ ಬಂಗಾಳ ಪ್ರಾಂತದ ತನ್ನ ವೀರಪುತ್ರನನ್ನು ಹೆಮ್ಮೆಯಿಂದ ಸನ್ಮಾನಿಸಿತು. ನಾಯಕರು ಅವರ ಅಪೂರ್ವ ತ್ಯಾಗವನ್ನು, ಅಚಲ ಸಂಕಲ್ಪವನ್ನು ವರ್ಣಿಸಿದರು. ಪತ್ರಿಕೆಗಳು ಅವರ ಅಸಾಧಾರಣ ಸಾಹಸದ ಕತೆಗಳನ್ನು ಪ್ರಕಟಿಸಿದವು. ೧೯೪೭ರ ಸೆಪ್ಟಂಬರ‍್ ೧೨ ನೆಯ ದಿನಾಂಕದಂದು ಅವರನ್ನು ಸ್ವಾಗತಿಸಲು ಕಲ್ಕತ್ತದ ಎಲ್ಲ ಶಾಲೆ, ಕಾಲೇಜುಗಳಿಗೆ ಅರ್ಧ ದಿನದ ರಜೆಯನ್ನು ಸಾರಲಾಯಿತು. ೨೫,೦೦೦ ಜನ ಅವರನ್ನು ಎದುರುಗೊಳ್ಳಲು ರೈಲ್ವೆ ನಿಲ್ದಾಣದಲ್ಲಿ ಕೂಡಿದ್ದರು. ಜನ ಸಂಭ್ರಮದಿಂದ ಕ್ರಾಂತಿವೀರರನ್ನು ಸ್ವಾಗತಿಸಿದರು. ಅನೇಕ ಕಿಕ್ಕಿರಿದ ಸಭೆಗಳಲ್ಲಿ ಜನರು ಅವರ ರೋಮಾಂಚನಕಾರಿ ಅನುಭವಗಳನ್ನು ರಾಷ್ಟ್ರಾಭಿಮಾನ, ಆತ್ಮವಿಶ್ವಾಸಗಳನ್ನು ಕಂಡು ಕೇಳಿ ಮೆಚ್ಚಿಕೆಯಿಂದ ತಲೆಬಾಗಿದರು.

ನಮ್ಮ ರಾಷ್ಟ್ರ ಸ್ವತಂತ್ರವಾಗಲು ತಮ್ಮ ಎಲ್ಲ ಸುಖ, ಸಂಪತ್ತುಗಳನ್ನು ತ್ಯಜಿಸಿ, ಮನೆ ಮಾರುಗಳನ್ನು ಕಳೆದುಕೊಂಡರು, ಬಡತನದ ದುರ್ದೆಶೆಯಲ್ಲಿ ಬೆಂದ ಸ್ವಾತಂತ್ರ‍್ಯ ಯೋಧರಿಗೆ ಶ್ರದ್ಧಾಂಜಲಿಯನ್ನರ್ಪಿಸಲು ಜೋಗೇಶಬಾಬುಗಳು ೧೯೫೮ರಲ್ಲಿ ಕ್ರಾಂತಿಕಾರರ ಸಮ್ಮೇಳನವನ್ನು ಸಂಘಟಿಸಿಸರು. ದೇಶದ ಮಕ್ಕಳು ಈ ಧೀರಪುರುಷರ ಇತಿಹಾಸ, ಉದಾತ್ತ ಆದರ್ಶಗಳನ್ನು ಯಾವಾಗಲೂ ಸ್ಮರಣೆಯಲ್ಲಿಟ್ಟುಕೊಳ್ಳಬೇಕೆಂಬುದು ಜೋಗೇಶಚಂದ್ರರ ಇಚ್ಛೆಯಾಗಿತ್ತು.

ಜೋಗೇಶಚಂದ್ರರು ಅನೇಕ ವರ್ಷಗಳವರೆಗೆ ಭಾರತದ ಸಂಸತ್ತಿನ ಸದಸ್ಯರಾಗಿದ್ದರು.ಕಾರ್ಮಿಕರು, ಒಕ್ಕಲಿಗರ, ಬಡವರ ಏಳಿಗೆಗಾಗಿ ಅವರು ನಿರಂತರವಾಗಿ ದುಡಿದರು. ಅಖಿಲ ಭಾರತ ಕಿಸಾನ್ ಸಂಘ, ಉತ್ತರ ಪ್ರದೇಶದ ಕಿಸಾನ್ ಸಂಘ, ಕಾರ್ಮಿಕರ ಅನೇಕ ಸಂಘ, ಸಂಸ್ಥೆಗಳಲ್ಲಿದ್ದು ಅವರ ಉದ್ಧಾರಕ್ಕಾಗಿ ಕೆಲಸ ಮಾಡಿದರು. ಭಾರತದ ಭವಿಷ್ಯ ಉಜ್ವಲವಾಗಬೇಕೆಂಬುದೇ ಅವರ ಜೀವನದ ಧ್ಯೇಯವಾಗಿತ್ತು. ತಮ್ಮ ೭೪ನೆಯ ವಯಸ್ಸಿನಲ್ಲಿ ೧೯೬೯ರ ಏಪ್ರಿಲ್ ೨೨ ರಂದು ಈ ಧೀರ ಪುರುಷ ತಮ್ಮ ದೇಹವನ್ನು ತ್ಯಜಿಸಿದರು.