ಭಾರತದ ಇತಿಹಾಸದಲ್ಲಿ ಗುರು ತೇಗ ಬಹಾದುರರ ಬಲಿದಾನ ಮಹತ್ವದ ಘಟನೆ. ಅವರು ಸಿಖ್ಖರ ಒಂಬತ್ತನೆ ಗುರು. ಆಗ ದೇಶದಲ್ಲಿ ಮೊಗಲರ ಆಳ್ವಿಕೆ. ಬಾದಶಹ ಔರಂಗಜೇಬ ಹಿಂದುಗಳು ಇಸ್ಲಾಂ ಧರ್ಮ ಸ್ವೀಕರಿಸುವಂತೆ ಮಾಡಲು ಅನೇಕ ರೀತಿಗಳಲ್ಲಿ ಕಿರುಕುಳ ನೀಡುತ್ತಿದ್ದ. ಇಡೀ ದೇಶವನ್ನು ಇಸ್ಲಾಂ ಅನುಯಾಯಿ ಮಾಡಲು ಆತ ನಿರ್ಧರಿಸಿದ್ದ. ಪ್ರಾಂತೀಯ ನವಾಬರುಗಳು ಕೂಡ ದಿಲ್ಲಿ ಸರಕಾರವನ್ನು ಖುಷಿಪಡಿಸಲು ಹಿಂದುಗಳನ್ನು ಇಸ್ಲಾಂ ಸ್ವೀಕರಿಸಲು ಸತಾಯಿಸುತ್ತಿದ್ದರು.

ಅನೇಕ ಕಡೆ ದೇವಾಲಯಗಳನ್ನು ಕೆಡವಿ ಮಸೀದಿಗಳ ನಿರ್ಮಾಣ ನಡೆಯಿತು. ಹಿಂದುಗಳ ಮೇಲೆ ಜಿಝಿಯಾ ತೆರಿಗೆ ಹಾಕಲಾಯಿತು. ಯಾವ ಹಿಂದುವೂ ಶಸ್ತ್ರ ಧರಿಸುವಂತಿಲ್ಲ. ಕುದುರೆ ಸವಾರಿ ಮಾಡುವಂತಿಲ್ಲ ಎಂಬ ಶಾಸನ ಜಾರಿಗೆ ಬಂತು. ಒಟ್ಟಿನಲ್ಲಿ ಮೊಗಲರ ಶಾಸನ ಹಿಂದೂ ಧರ್ಮ, ಸಂಸ್ಕೃತಿಗಳನ್ನು ಅಳಿಸಿಹಾಕಲು ಬಯಸಿತ್ತು.

ಕಾಶ್ಮೀರಿ ಪಂಡಿತರಿಗೆ ವಿಪತ್ತು

ಕಾಶ್ಮೀರಿ ಪಂಡಿತರು ವಿದ್ಯೆಗೆ ಹೆಸರುವಾಸಿ. ಅವರೆಂದರೆ ಜನರಿಗೆ ತುಂಬಾ ಗೌರವ. ಔರಂಗಜೇಬ್ ಕಾಶ್ಮೀರಕ್ಕೆ ಶೇರ್ ಆಫ್‌ಗನ್ ಎಂಬ ಸರದಾರನನ್ನು ನೇಮಿಸಿದ. ಅವನು ಈ ಪಂಡಿತರನ್ನು ಇಸ್ಲಾಂಗೆ ಸೇರಿಸಿಕೊಳ್ಳಬೇಕೆಂದು ತೀರ್ಮಾನಿಸಿದ. ಹೆದರಿದ ಕಾಶ್ಮೀರಿ ಪಂಡಿತರು ಒಂದೆಡೆ ಕಲೆತು ಯೋಚಿಸಿದತು. ಧರ್ಮ ರಕ್ಷಣೆಗಾಗಿ ಅವರು ಆನಂದಪುರದಲ್ಲಿದ್ದ ಗುರು ತೇಗ ಬಹಾದುರರ ಬಳಿ ಹೋಗುವುದೆಂದು ನಿರ್ಧರಿಸಿದರು.

ತೇಗ ಬಹಾದುರ್ ಸಿಖ್ಖರ ಒಂಬತ್ತನೆಯ ಗುರು ಎಂದು ಹೇಳಿದೆವಲ್ಲ? ಅವನದು ಧೀರ ಜೀವನ. ಹುಡುಗನಾಗಿ ಇತಿಹಾಸ, ಭಾಷೆ ಮೊದಲಾದವನ್ನು ಕಲಿತ. ಜೊತೆಗೆ ಬಾಣ ಬಿಡುವುದು, ಕುದುರೆ ಸವಾರಿ, ಕುಸ್ತಿ ಮಾಡುವುದು ಎಲ್ಲವನ್ನೂ ಕಲಿತ, ಪರಿಣತನಾದ. ತನ್ನ ತಂದೆ ಯುದ್ಧಕ್ಕೆ ಹೋದಾಗ ಚಿಕ್ಕ ವಯಸ್ಸಿನಲ್ಲೆ ತೇಗ ಬಹಾದುರ್ ತಂದೆಯೊಡನೆ ಹೋದ, ಯುದ್ಧದಲ್ಲಿ ಭಾಗವಹಿಸಿ ಶೌರ್ಯದಿಂದ ಹೋರಾಡಿ ಎಲ್ಲರ ಕಣ್ಮಣಿಯಾದ. ಅದುವರೆಗೆ ಅವನ ಹೆಸರು ತ್ಯಾಗಮಲ್. ಮಗನ ಶೌರ್ಯ ಕಂಡು ತಂದೆ ಅವನನ್ನು ತೇಗ ಬಹಾದುರ್ ಎಂದು ಕರೆದ. ತೇಗ ಎಂದರೆ ಖಡ್ಗ. ಬಹಾದುರ್ ಎಂದರೆ ಪ್ರವೀಣ. ಖಡ್ಗದ ಅಸಮಾನ ಪ್ರಭುವಾದ ಇವನು ತೇಗ ಬಹಾದುರ್. ಅವನು ೧೬೬೪ರಲ್ಲಿ ಸಿಖ್ಖರ ಗುರುವಾದ. ತುಂಬಾ ಪ್ರವಾಸ ಮಾಡಿದ. ಜನರ ಕಷ್ಟ ಸುಖಗಳನ್ನು ವಿಚಾರಿಸಿದ, ಅವರಿಗೆ ನೆರವಾದ. ನೀರಿಲ್ಲದ ಹಳ್ಳಿಗಳಲ್ಲಿ ಬಾವಿ ತೋಡಿಸುವುದು, ಬಡವರಿಗೆ ಗುಡಿಸಲು ಕಟ್ಟಿಸುವುದು, ಅನಾಥರಿಗೆ ಊಟದ ಏರ್ಪಾಡು ಮಾಡುವುದು, ದಾನ, ಧರ್ಮ ಇವುಗಳಲ್ಲಿ ನಿರತನಾಗಿದ್ದ.

ಇಂತಹ ಧೀರ, ದಾನಶೂರ ರಕ್ಷಕನ ಬಳಿಗೆ ಓಡಿ ಬಂದರು ಕಾಶ್ಮೀರಿ ಪಂಡಿತರು.

ಪಂಡಿತ ಕೃಪರಾಮನ ಹಿರಿತನದಲ್ಲಿ ಐದು ನೂರು ಮಂದಿ ಪಂಡಿತರ ಗುಂಪು ಆನಂದಪುರ ತಲುಪಿತು. ಅವರು ಗುರುಗಳ ಬಳಿ ತಮ್ಮ ಸಂಕಟ ತೋಡಿಕೊಂಡರು. ಸಂಗತಿ ತಿಳಿದ ಗುರುಗಳೂ ವ್ಯಾಕುಲವಾದರು. ಎಲ್ಲರೂ ಕೂಡಿ ಸಮಸ್ಯೆಗೆ ಪರಿಹಾರ ಯೋಚಿಸತೊಡಗಿದರು. ವಾತಾವರಣದಲ್ಲಿ ಗಂಭೀರ ಮೌನ.

ನಿಮಗಿಂತ ದೊಡ್ಡ ಮನುಷ್ಯರು ಯಾರಿದ್ದಾರೆ?

ಅಷ್ಟರಲ್ಲಿ ಗುರು ತೇಗ ಬಹಾದುರರ ಮಗ ಗೋವಿಂದ ಸಿಂಹ ತನ್ನ ಸಂಜೆಯ ಆಟ ಮುಗಿಸಿ ಬಂದ. ತಂದೆ ಮೌನವಾಗಿ ಪಂಡಿತರ ನಡುವೆ ಕುಳಿತಿರುವುದನ್ನು ಕಂಡು ಕಾರಣ ಕೇಳಿದ.

ಗುರು ಹೇಳಿದರು: “ನೋಡು ಮಗೂ, ಔರಂಗಜೇಬನು ಹಿಂದೂಗಳಿಗೆ ತೊಂದರೆ ಕೊಡುತ್ತಿದ್ದಾನೆ. ಈ ಕಾಶ್ಮೀರಿ ಪಂಡಿತರಿಗೆ ಅವರ ಧರ್ಮ ಬಿಟ್ಟು ತನ್ನ ಧರ್ಮಕ್ಕೆ ಬರಬೇಕೆಂದು ಹಿಂಸೆ ಕೊಡುತ್ತಿದ್ದಾನೆ. ಬಲಾತ್ಕಾರದಿಂದ ಯಾರನ್ನಾದರೂ ಬೇರೆ ಧರ್ಮಕ್ಕೆ ಎಳೆದುಕೊಂಡು ಹೋಗುವುದು ತಪ್ಪು. ಇವರಿಗೆ ಸಹಾಯ ಮಾಡಬೇಕು.

“ಏನು ಮಾಡುವುದು ಅಪ್ಪಾ?”

“ಒಂದೆ ದಾರಿ ಇರುವುದು, ಮಗೂ. ಮಹಾಪುರುಷನೊಬ್ಬ ಔರಂಗಜೇಬನ ಬಳಿಗೆ ಹೋಗಬೇಕು. ಅವನು ಮಾಡುತ್ತಿರುವ ತಪ್ಪನ್ನು ಅವನಿಗೆ ಹೇಳಬೇಕು. ಔರಂಗಜೇಬ ಅವನ ಮಾತನ್ನು ಕೇಳಬಹುದು. ಕೇಳಿದರೆ ಎಲ್ಲರಿಗೂ ಒಳ್ಳೆಯದು. ಆದರೆ ಅವನು ಆ ಮಹಾಪುರಷನ ಮಾತನ್ನು ಕೇಳದೆ ಅವನನ್ನು ಕೊಂದು ಹಾಕಬಹುದು.”

ಗೋವಿಂದ ಥಟ್ಟನೆ “ಅಪ್ಪಾ ನಿಮಗಿಂತ ದೊಡ್ಡ ಮಹಾಪುರುಷರು ಯಾರಿದ್ದಾರೆ?” ಎಂದ.

ಗುರುಗಳಿಗೆ ಸಮಸ್ಯೆಯ ಪರಿಹಾರ ಕಾಣಿಸಿತು. ಮಗನ ಸಾಹಸದ ಮಾತಿಗೆ ಸಂತಸಪಟ್ಟರು. ಗೋವಿಂದನಿಗೆ ಆಗ ಕೇವಲ ಒಂಬತ್ತು ವರ್ಷ.

ಕಾಶ್ಮೀರದ ಪಂಡಿತರ ಕಡೆ ನೋಡಿದ ಗುರುಗಳು “ನೀವು ಔರಂಗಜೇಬನಿಗೆ ಒಂದು ಪತ್ರ ಬರೆದು – ಗುರು ತೇಗ ಬಹಾದುರರು ಇಸ್ಲಾಂ ಸ್ವೀಕರಿಸಿದರೆ ನಾವೆಲ್ಲ ಸ್ವೀಕರಿಸುತ್ತೇವೆ ಎಂದು ತಿಳಿಸಿ” ಎಂದರು.

ಬಲಿದಾನ

ಕಾಶ್ಮೀರದ ಪಂಡಿತರು ಹಾಗೆಯೇ ಪತ್ರ ಬರೆದು. ಪತ್ರ ನೋಡಿದ ಔರಂಗಜೇಬನು ಕುಪಿತನಾದ. ಗುರುಗಳನ್ನು ದರಬಾರಿಗೆ ಬರಲು ಹೇಳಿಕಳಿಸಿದ. ಗುರುಗಳು ದಿಲ್ಲಿಗೆ ಹೊರಟರು. ಆದರೆ ಆಗ್ರಾ ತಲುಪಿದಾಗಲೇ ಅವರನ್ನು ಬಂಧಿಸಲಾಯಿತು.

ಔರಂಗಜೇಬನ ಅಧಿಕಾರಿಗಳು ತೇಗ ಬಹಾದುರರನ್ನು ದಿಲ್ಲಿಗೆ ಕರೆದೊಯ್ದರು. ಅವನ ದರಬಾರಿಗೆ ಅವರನ್ನು ಕೊಂಡೊಯ್ದರು.

ತೇಗ ಬಹಾದುರರು ದಿಟ್ಟತನದಿಂದ ಅವನ ಮುಂದೆ ನಿಂತರು.

ಔರಂಗಜೇಬ ಅವರನ್ನು ತಿರಸ್ಕಾರದಿಂದ ಮಾತನಾಡಿಸಿದ. “ಓಹೋ, ನೀನು ತೇಗ ಬಹಾದುರನೋ! ಖಡ್ಗ ಹಿಡಿಯುವುದರಲ್ಲಿ ನಿಸ್ಸೀಮನೋ! ಸರಿ, ಇಸ್ಲಾಂ ಸೇರು” ಎಂದ.

“ನಿನಗೇನು ಹುಚ್ಚೆ ಬಾದಶಹ, ಈ ಮಾತನಾಡುತ್ತಿಯಲ್ಲ?” ಗುರು ಎಂದರು.

“ನೀನು ದೊಡ್ಡ ಗುರು ಎಂದು ಹೇಳುತ್ತಾರಲ್ಲ. ಒಂದು ಪವಾಡವನ್ನು ಮಾಡಿತೋರಿಸು.”

“ಪ್ರಾಣ ಉಳಿಸಿಕೊಳ್ಳುವುದಕ್ಕೆ ಅದನ್ನೆಲ್ಲ ಮಾಡುವವನಲ್ಲ ನಾನು.”

ತೇಗ ಬಹಾದುರರನ್ನೂ ಅವರ ಹಿಂಬಾಲಕರನ್ನೂ ಸೆರೆಮನೆಯಲ್ಲಿ ಕೂಡಿಹಾಕುವಂತೆ ಔರಂಗಜೇಬನು ಆಜ್ಞೆ ಮಾಡಿದ.

ಅನಂತರ ದೆಹಲಿಯ ಚಾಂದನೀ ಚೌಕ್‌ನಲ್ಲಿ ತೇಗ ಬಹಾದುರರ ತಲೆಯನ್ನು ಕತ್ತರಿಸಿ ಕೊಲ್ಲಲಾಯಿತು. ಧರ್ಮಕ್ಕಾಗಿ ಅವರು ಬಲಿದಾನ ಮಾಡಿದರು.

ತನ್ನ ಬಲಿದಾನ ವ್ಯರ್ಥವಾಗಲಾರದೆಂದು ಅವರು ತಿಳಿದಿದ್ದರು. ಗುರು ತೇಗ ಬಹಾದುರರನ್ನು “ಹಿಂದ್ ಕೀ ಚಾದರ್ (ಭಾರತದ ಹೊದಿಕೆ) ಎಂದು ಕರೆಯಲಾಗಿದೆ.

ಗುರು ಗೋವಿಂದ

ತಂದೆಯ ಬಲಿದಾನದ ಬಳಿಕ ಬಾಲಕ ಗೋವಿಂದ ಸಿಖ್ಖರ ಗುರುವಾದ. ಒಂಬತ್ತರ ಪ್ರಾಯದಲ್ಲೆ ತಂದೆಯನ್ನು ಬಲಿದಾನಕ್ಕೆ ಪ್ರೇರಿಸಿದ್ದ ಈ ವೀರ ಬಾಲಕ ಮೊಗಲರೊಡನೆ, ಗುಡ್ಡಗಾಡಿನ ರಾಜರೊಡನೆ ಹಲವು ಸಲ ಹೋರಾಡಿ ಹೆಚ್ಚಿನೆಡೆ ಜಯ ಗಳಿಸಿದ.

ಗುರು ಗೋವಿಂದಸಿಂಹರು ಶ್ರೇಷ್ಠ ಯೋಧರು. ಹಾಗೇ ಅವರು ಕವಿಗಳೂ ಕೂಡ. ಕಲಿಯಾಗಿ ಖಡ್ಗ ಝಳಪಿಸಿದಷ್ಟೇ ಚಮತ್ಕಾರದಿಂದ ಕವಿಯಾಗಿ ಲೇಖನಿಯನ್ನೂ ಮಿಂಚಿಸಿದರು. ಅವರ ಕವಿತೆಗಳು ಸತ್ವಪೂರ್ಣವಾದವುಗಳು.

ಗುರು ಗೋವಿಂದಸಿಂಹರಿಗೆ ನಾಲ್ವರು ಗಂಡುಮಕ್ಕಳು ಇದ್ದರು. ಅಜಿತಸಿಂಹ, ಜುಝಾವರ್ ಸಿಂಹ, ಜೋರಾವರ್ ಸಿಂಹ, ಫತೇಸಿಂಹ – ಎಂದು ಅವರ ಹೆಸರುಗಳು.

ವಿಶ್ವಾಸಘಾತ

ಒಮ್ಮೆ ಗುರು ಗೋವಿಂದರು ಆನಂದಪುರದಲ್ಲಿದ್ದರು. ಮೊಗಲರು ಗುಡ್ಡಗಾಡಿನ ರಾಜರುಗಳ ನೆರವು ಪಡೆದು ಆನಂದಪುರದ ಕೋಟೆಗೆ ಮುತ್ತಿಗೆ ಹಾಕಿದರು. ಸತತ ದಾಳಿಯಾದರೂ ಕೋಟೆ ಜಗ್ಗಲಿಲ್ಲ. ನಿರಾಶನಾದ ಔರಂಗಜೇಬ ಗುರುಗಳಿಗೆ ಒಂದು ಸಂದೇಶ ಕಳಿಸಿದ. ಕುರಾನಿನ ಆಣೆ ಹಾಕಿ ಬರೆದ ಈ ಸಂದೇಶದಲ್ಲಿ ‘ಗುರು ಗೋವಿಂದಸಿಂಹರು ಆನಂದಪುರದ ಕೋಟೆ ತೆರವು ಮಾಡಿದರೆ ಅವರ ಮೇಲೆ ಯುದ್ಧ ಮಾಡುವುದಿಲ್ಲ’ ಎಂದು ತಿಳಿಸಿದ್ದ. ಗುರುಗಳಿಗೆ ಅವನ ಮಾತಿನಲ್ಲಿ ನಂಬಿಕೆ ಇರಲಿಲ್ಲ. ಆದರೂ ಸಿಖ್ಖರ ಜೊತೆ ಸಮಾಲೋಚನೆ ನಡೆಸಿ ಕೋಟೆ ಖಾಲಿ ಮಾಡಿದರು. ಮೊಗಲು ಉಪಾಯದಿಂದ ಗುರುಗಳನ್ನು ಕೋಟೆಯಿಂದ ಹೊರಕ್ಕೆಳೆಯಲು ಸಂಚು ಹೂಡಿದ್ದರು. ಅವರು ಕೆಲವೇ ಸೈನಿಕರ ಜೊತೆ ಹೊರಬಂದರು. ಒಡನೇ ಮೊಗಲಸೈನ್ಯ ಅವರ ಮೇಲೆರಗಿತು. ಸರಸಾ ನದಿಯ ದಡದಲ್ಲಿ ಭಯಂಕರ ಯುದ್ಧ ನಡೆಯಿತು. ಸಿಖ್ಖರ ಸಂಖ್ಯೆ ಕಡಿಮೆ. ಆದರೂ ಮೊಗಲ ಸೈನ್ಯದೊಡನೆ ಖಾಡಾಖಾಡಿ ಹೋರಾಟ ನಡೆಸಿ ಸಹಸ್ರಾರು ಸೈನಿಕರನ್ನು ಕತ್ತರಿಸಿ ಹಾಕಿದರು. ಗುರುಗಳು ಹೋರಾಡುತ್ತ ಚಮಕೌರ್‌ನ ಕಡೆ ಸಾಗಿದರು. ಅವರ ಹಿರಿಯ ಪುತ್ರ ಅಜಿತಸಿಂಹ ಮತ್ತು ಜುಝಾರ್ ಸಿಂಹ ಜೊತೆಗೇ ಇದ್ದರು.

ವೀರಗತಿ

ಸರಸಾ ನದಿ ದಾಟಿದ ಗುರುಗಳು ಮಾಜಪುರ ಎಂಬ ಗ್ರಾಮ ತಲುಪಿದರು. ಆಗಲೇ ಮೊಗಲ ಸೈನ್ಯ ಬರುವ ಸುದ್ದಿ. ಅಲ್ಲಿಂದ ಚಮಕೌರ್‌ಗೆ ಹೋಗಿ ತೋಪು ಒಂದರಲ್ಲಿ ಡೇರೆ ಹಾಕಿದರು. ಜಾಟ್ ರೈತನೊಬ್ಬನ ದೊಡ್ಡ ಮನೆಯನ್ನೇ ಕೋಟೆಯಂತೆ ಬಳಸಿಕೊಂಡು ಮೊದಲು ಆರು ಜನ ಸೈನಿಕರನ್ನು ಹೋರಾಟಕ್ಕೆ ಕಳಿಸಿದರು. ಅವರು ಅನೇಕ ಮೊಗಲ ಸೈನಿಕರನ್ನು ಕೊಂದು ವೀರಸ್ವರ್ಗ ಪಡೆದರು. ಬಳಿಕ ನಾಲ್ವರನ್ನು ಕಳಿಸಿದರು. ಅವರೂ ದಿಟ್ಟತನದಿಂದ ಹೋರಾಡಿ ಮಡಿದರು. ಕೊನೆಗೆ ಗುರುಗಳು ತಾವೇ ಕಣಕ್ಕಿಳಿದರು. ಅವರ ಹರಿತವಾದ ಬಾಣದಿಂದ ಮೊಗಲ ಸೇನಾಪತಿ ನಾಹರ್‌ಖಾನ್ ಹಾಗೂ ಬೈರನ್‌ಖಾನ್ ಸತ್ತು ಮಲಗಿದರು. ಆದರೂ ಮೊಗಲರು ಸೋಲು ಒಪ್ಪಿಕೊಳ್ಳಲಿಲ್ಲ. ಗುಡ್ಡಗಾಡಿನ ರಾಜರುಗಳ ಸಹಾಯದಿಂದ ಮತ್ತೆ ಹೋರಾಟಕ್ಕೆ ನಿಂತರು.

ಮರುದಿನ ಗುರುಗಳ ಹದಿನೆಂಟರ ಹರೆಯದ ಹಿರಿಮಗ ಅಜಿತಸಿಂಹ ಅಪ್ಪನ ಆಶೀರ್ವಾದ ಪಡೆದು ಐವರು ಸೈನಿಕರೊಡನೆ ರಣಕಣಕ್ಕಿಳಿದ. ಅನೇಕ ಮೊಗಲ ವೀರರನ್ನು ಕೊಂದ ಬಳಿಕ ಆತ ವೀರಮರಣ ಅಪ್ಪಿದ. ಮರುದಿನ ಎರಡನೇ ಮಗ ಜುಝಾರ್‌ಸಿಂಹ ಅಪ್ಪನ ಅಪ್ಪಣೆಯಂತೆ ಐವರು ಸೈನಿಕರೊಡನೆ ಯುದ್ಧಕ್ಕೆ ಸಿದ್ಧನಾದ. ಕೊನೆಯುಸಿರಿನ ತನಕ ಕಾದಾಡಿ ಆತನೂ ವೀರ ಸ್ವರ್ಗ ಸೇರಿದ.

ಚದರಿದ ಪರಿವಾರ

ಆನಂದಪುರ ಬಿಡುವಾಗಲೇ ಗುರು ಗೋವಿಂದ ಸಿಂಹರ ಪರಿವಾರ ಚದರಿಹೋಗಿತ್ತು. ಗುರುಗಳ ಇಬ್ಬರು ಕಿರಿಯ ಪುತ್ರರು ಅಜ್ಜಿ ಗುಜರೀತಾಯಿಯ ಜೊತೆ ಆನಂದಪುರ ಬಿಟ್ಟು ಮುಂದೆ ಹೋಗಿದ್ದರು. ಕಾಡುಮೇಡು ದಾಟಿ ಊರೊಂದನ್ನು ಸೇರಿದ್ದರು. ಅಲ್ಲಿ ಕಮ್ಮೋ ಎಂಬ ಬಡ ಕಾರ್ಮಿಕ ಭೇಟಿಯಾದ. ಆತ ನೀರು ಹೊರುವ ಕೆಲಸ ಮಾಡುತ್ತಿದ್ದ. ಗುಜರೀತಾಯಿಯನ್ನೂ ಗುರುಗಳ ಇಬ್ಬರು ಮಕ್ಕಳನ್ನೂ ಗುರುತಿಸಿದ ಕಮ್ಮೋ ತನ್ನ ಗುಡಿಸಲಿನಲ್ಲಿ ಅವರಿಗೆ ಜಾಗಕೊಟ್ಟು ಸತ್ಕರಿಸಿದ.

ಗಂಗೂ

ಗಂಗೂ ಎಂಬಾತ ಕಾರ್ಯನಿಮಿತ್ತ ಆ ಊರಿಗೆ ಬಂದಿದ್ದ. ಆತ ಇಪ್ಪತ್ತೆರಡು ವರ್ಷ ಗುರುಗಳ ಬಳಿ ಅಡಿಗೆಯವನಾಗಿದ್ದ. ಗುರುಗಳ ಮಕ್ಕಳು ಅಲ್ಲಿಗೆ ಬಂದ ಸುದ್ದಿ ತಿಳಿದು ಸಂತಸಗೊಂಡ. ಓಡೋಡುತ್ತ ಹೋಗಿ ಗುಜರೀತಾಯಿಯ ಮುಂದೆ ನಿಂತು “ತಾಯಿ, ನೀವೆಲ್ಲ ನನ್ನ ಊರು ಖೇಡಿಗೆ ಬನ್ನಿ” ಎಂದು ವಿನಂತಿಸಿದ.

ಗುಜರೀತಾಯಿಯೂ ಹುಡುಗರೂ ಕಾಡು ಮೇಡು ದಾಟಿದರು.

ಗುಜರೀತಾಯಿ ಯೋಚನೆಗೀಡಾದಳು. ‘ಏನು ಮಾಡಲಿ? ಈ ಗಂಗೂ ವಿಶ್ವಾಸಘಾತ ಮಾಡಿದರೆ? ಈ ಎಳೆಯ ಮಕ್ಕಳ ಪ್ರಾಣಕ್ಕೇ ಅಪಾಯ.’ ಎಡಬಿಡದೆ ಕಷ್ಟಗಳನ್ನೇ ಸಹಿಸುತ್ತ ಬಂದ ಅವಳ ಮನಸ್ಸು ನೊಂದಿತ್ತು. ಆದರೂ ಧೈರ್ಯಗೆಟ್ಟವಳಲ್ಲ. ವೀರ ಗುರು ಗೋವಿಂದ ಸಿಂಹನ ತಾಯಿ ಆಕೆ. ಈ ಮೊಮ್ಮಕ್ಕಳನ್ನು ಕಾಪಾಡಬೇಕು. ಸ್ವಲ್ಪ ಹೊತ್ತು ಯೋಚಿಸುತ್ತ ಕುಳಿತಳು.

ಗಂಗೂ ಹೇಳಿದ “ಅಮ್ಮಾ ನಾನು ನಿಮ್ಮ ಹಳೆಯ ಸೇವಕ. ನಿಮ್ಮ ಅನ್ನದ ಋಣ ನನ್ನ ಮೇಲಿದೆ. ಕಷ್ಟ ಕಾಲದಲ್ಲಿ ನಿಮ್ಮ ಸೇವೆ ಮಾಡುವ ಅವಕಾಶ ಕೊಡಿ. ನಿಮ್ಮ ಕುರಿತಾಗಲೀ ಮಕ್ಕಳ ಬಗೆಗಾಗಲೀ ಗಾಳಿಗೂ ಸುದ್ದಿ ಸಿಗದ ಹಾಗೆ ನೋಡಿಕೊಳ್ಳುತ್ತೇನೆ.”

ಗಂಗೂ ನೀಡಿದ ಆಶ್ವಾಸನೆಯಿಂದ ತೃಪ್ತಳಾದ ಗುಜರೀತಾಯಿ ಮೊಮ್ಮಕ್ಕಳ ಜೊತೆ ಖೇಡಿಗೆ ಹೋಗಲು ಒಪ್ಪಿದಳು. ಗಂಗೂ ಅವರ ಸಾಮಾನುಗಳನ್ನು ಹೇಸರ ಕತ್ತೆಗಳ ಮೇಲೆ ಹೇರಿಸಿ ಊರಕಡೆ ನಡೆದ.

ಹಿಂದೆ ಹಿಂದೆ ಮೊಮ್ಮಕ್ಕಳು ಅಜ್ಜಿಯ ಕೈಹಿಡಿದು ನಡೆದರು. ದಾರಿ ಉದ್ದಕ್ಕೂ ಅಜ್ಜಿ ಹೇಳುತ್ತಿದ್ದ ವೀರ ಪುರುಷರ ಶೌರ್ಯದ ಕತೆ ಕೇಳಿದರು. ದಿನವಿಡೀ ನಡೆದು ಕೊನೆಗೆ ಗಂಗೂನ ಮನೆ ತಲುಪಿದರು. ದಾರಿ ನಡೆದು ಸೋತು ಸುಣ್ಣವಾಗಿದ್ದ ಮಕ್ಕಳು ಮನೆ ತಲುಪುತ್ತಲೇ ಸ್ನಾನ-ಊಟ ಮಾಡಿ ಮಲಗಿದರು. ಅಕ್ಕಪಕ್ಕದಲ್ಲಿ ಮಲಗಿದ್ದ ಮೊಮ್ಮಕ್ಕಳು ಗಾಢನಿದ್ರೆಯಲ್ಲಿದ್ದರೆ ಅಜ್ಜಿ ಎಚ್ಚೆತ್ತೇ ಇದ್ದಳು. ಅವಳಿಗೆ ನಿದ್ದೆಬಾರದು. ಹಲವಾರು ಚಿಂತೆಯ ಜೊತೆಗೆ ಮೊಮ್ಮಕ್ಕಳನ್ನು ಕಾಪಾಡುವ ಚಿಂತೆ.

ದುರಾಸೆಯ ಗಂಗೂ

ಗುಜರೀಮಾತೆಯ ಬಳಿ ಇದ್ದ ಚಿನ್ನದ ನಾಣ್ಯ, ಆಭರಣ, ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ನೋಡಿದ ಗಂಗೂ ದುರಾಸೆಗೆ ಒಳಗಾದ. ಮನಸ್ಸಿನಲ್ಲೇ ಕರುಬಿದ. ಕೆಟ್ಟ ಯೋಚನೆ ಕಾಲು ಹಾಕಿತು. ನಾಣ್ಯಗಳನ್ನು ಬೆಲೆಬಾಳುವ ವಸ್ತುಗಳನ್ನು ಕದಿಯಬೇಕೆಂದು ಹವಣಿಸಿದ. ರಾತ್ರಿಯಾಯಿತು. ‘ಹುಡುಗರು ಮಲಗಿದ್ದಾರೆ. ಮುದುಕಿಯೂ ಮಲಗಿರಬಹುದು’. ಮೆಲ್ಲನೆ ಬಾಗಿಲು ದೂಡಿ ಗಂಗೂ ಕೋಣೆ ಹೊಕ್ಕ. ಮಂಚದಡಿ ಇಟ್ಟಿದ್ದ ಗಂಟಿನಿಂದ ನಾಣ್ಯಗಳನ್ನೂ, ಬೆಲೆಬಾಳುವ ವಸ್ತುಗಳನ್ನು ತೆಗೆದ. ಗುಜರೀತಾಯಿಗೆ ಎಚ್ಚರವಿತ್ತು. ಆದರೂ ನಿದ್ದೆ ಬಂದವಳಂತೆ ನಟಿಸಿ ಸುಮ್ಮನಿದ್ದಳು. ಹೊರಗೆ ಬಂದ ಗಂಗೂ ಹಾಗೆ ಬಾಗಿಲು ಎಳೆದುಕೊಂಡ.

ಬೆಳಿಗ್ಗೆ ಗಂಗೂ ಕೋಣೆಗೆ ಬಂದಾಗ ಗುಜರೀತಾಯಿ ನಾಣ್ಯ ಕಳವಾದ ಸಂಗತಿ ಹೇಳಿದಳು. ಅದೇನೊ ದೊಡ್ಡ ಸಂಗತಿಯಲ್ಲವೆಂಬಂತೆ ಗಂಗೂ “ರಾತ್ರಿ ಕಳ್ಳರು ಬಂದಿರಬಹುದು ಹೋಗಲಿ ಬಿಡಿ” ಎಂದ. “ಹೊರಗಿನ ಬಾಗಿಲು ಹಾಕಿಯೇ ಇತ್ತು. ಕಳ್ಳರು ಹೇಗೆ ಬರುತ್ತಾರೆ?” ಎಂದು ಆಕೆ ಹೇಳಿದಾಗ ಗಂಗೂ ಹೊರಗೆ ಓಡಿ “ಕಳ್ಳರು ಕಳ್ಳರು” ಎಂದು ಕೂಗಾಡತೊಡಗಿದ.

ಆತನನ್ನು ಒಳಕರೆದ ಗುಜರೀತಾಯಿ “ನೀನು ಹಾಗೆ ಕೂಗಾಡಿದರೆ ನಾವು ಇಲ್ಲಿರುವ ರಹಸ್ಯ ಎಲ್ಲರಿಗೂ ಗೊತ್ತಾಗುತ್ತದೆ. ನಿನಗೇನು ಬೇಕೋ ಅದನ್ನು ನನ್ನಿಂದ ಕೇಳಿ ಪಡೆಯಬಹುದಿತ್ತು. ಈಗಲೂ ನೀನು ತೆಗೆದುಕೊಂಡಿರುವುದನ್ನು ವಾಪಸ್ಸು ಕೇಳುವುದಿಲ್ಲ. ಅವೆಲ್ಲ ನಿನ್ನ ಬಳಿಯೇ ಇರಲಿ. ಆದರೆ ದಯವಿಟ್ಟು ಕೂಗಾಡಬೇಡ” ಎಂದಳು.

ಮುದುಕಿಯ ಮಾತು ಕೇಳಿದ ಗಂಗೂ ಕುಪಿತನಾದ, “ಏಯ್ ಮುದುಕಿ, ಅಯ್ಯೋ ಪಾಪಾ ಅಂತ ಜಾಗ ಕೊಟ್ಟರೆ ನನ್ನನ್ನು ಕಳ್ಳ ಅಂತ ಹೇಳ್ತಿಯಾ? ಇರು, ಮಾಡ್ತೀನಿ ನಿನಗೆ” ಅಂತ ಕೂಗಾಡಿದ.

ನವಾಬನಿಗೆ ಸುದ್ದಿ

ಕೂಗಾಡುತ್ತ ಗಂಗೂ ಮನೆಯಿಂದ ಹೊರಟ. ಅವನ ಮನಸ್ಸಿನಲ್ಲಿ ಇನ್ನೊಂದು ದುಷ್ಟ ವಿಚಾರ ಮೂಡಿತು. ‘ಗುರುಗಳ ಮಕ್ಕಳು ನನ್ನ ಮನೆಯಲ್ಲಿರುವ ಸುದ್ದಿ ನವಾಬನಿಗೆ ತಿಳಿಸಿದರೆ ನನಗೆ ಭಾರೀ ಬಹುಮಾನ ಸಿಗುವುದು ಖಂಡಿತ.’

ದುರಾಸೆಯಿಂದ ಹುರಿಗೊಂಡು ಗಂಗೂ ಬಿರಬಿರನೆ ಓಡಿದ. ಓಡುತ್ತ ಓಡುತ್ತ ಮುರಿಂಡಾದ ಠಾಣೆಗೆ ತಲುಪಿದ. ಅಲ್ಲಿನ ಕೊತವಾಲನಿಗೆ ಸಲಾಮು ಹಾಕಿ “ಸ್ವಾಮೀ, ತಮಗೊಂದು ಸಂತಸದ ಸುದ್ದಿ ತಂದಿದ್ದೇನೆ” ಎಂದ.

“ಏನು ಪಂಡಿತಜೀ? ಏನದು ಸಂತಸದ ಸುದ್ದಿ, ಹೇಳಿ” ಎಂದ ಕೊತವಾಲ. ಸ್ವಲ್ಪ ಧೈರ್ಯ ತಂದುಕೊಂಡು ಗಂಗೂ ಆಚೀಚೆ ನೋಡಿ ಪಿಸುಗುಟ್ಟಿದ “ಹುಜೂರ್, ಗುರು ಗೋವಿಂದ ಸಿಂಹರು ಬಾದಶಹರ ಶತ್ರುವೆಂಬ ಸಂಗತಿ ತಮಗೆ ತಿಳಿದಿದೆ. ಅವರು ಔರಂಗಜೇಬನ ವಿರುದ್ಧ ಜನರನ್ನು ದಂಗೆ ಏಳಿಸುತ್ತಾರೆ. ಅದೇ ಗುರು ಗೋವಿಂದ ಸಿಂಹರ ಇಬ್ಬರು ಮಕ್ಕಳು ನನ್ನ ಮನೆಯಲ್ಲಿದ್ದಾರೆ. ಅವರ ತಾಯಿಯೂ ಇದ್ದಾಳೆ. ನಿಮಗೆ ತಿಳಿದಂತೆ ನಾನು ಮೊಗಲ ಶಾಸನದ ನಿಷ್ಠಾವಂತ ನಾಗರೀಕ. ಸುದ್ದಿ ತಿಳಿಸುವುದು ನನ್ನ ಕರ್ತವ್ಯ” ಎಂದ.

ಬಂಧನ

ಗಂಗೂನ ಮಾತು ಕೇಳಿ ಕೊತವಾಲ ಸಂತಸಪಟ್ಟ. ಆತನ ಜೊತೆ ಕೆಲವು ಸೈನಿಕರನ್ನು ಕಳಿಸಿ ಗುಜರೀ ತಾಯಿಯನ್ನೂ ಮಕ್ಕಳನ್ನೂ ಬಂಧಿಸಿ ತರಲು ಆಜ್ಞೆ ಮಾಡಿದ. ಗಂಗೂ ಸಂತಸದಿಂದ ಸೈನಿಕರಿಗೆ ದಾರಿ ತೋರಿಸುತ್ತ ಮುಂದೆ ನಡೆದ. ಮೊಮ್ಮಕ್ಕಳ ಜೊತೆ ನಿಶ್ಚಿಂತೆಯಿಂದಿದ್ದ ಗುಜರೀತಾಯಿ ಗಂಗೂನ ಜೊತೆ ಸೈನಿಕರು ಬರುವುದನ್ನು ಕಂಡು ಸಂಗತಿ ಅರ್ಥಮಾಡಿಕೊಂಡಳು. ಸಿಪಾಯಿಗಳು ಕೊತವಾಲನ ಅಪ್ಪಣೆ ಓದಿ ಹೇಳಿ “ನಡೆಯಿರಿ ನಮ್ಮ ಜೊತೆಗೆ” ಎಂದರು.

ಬಾಲಕರಿಬ್ಬರೂ ಧೈರ್ಯವಾಗಿ ಎದ್ದುನಿಂತು ಶಿಸ್ತಿನಿಂದ ಅಜ್ಜಿಯ ಜೊತೆ ನಡೆದರು. ಗುಜರೀತಾಯಿಯ ಜೊತೆಗೆ ಹೋಗುತ್ತಿದ್ದ ಬಾಲಕರನ್ನು ಮೊದಲಬಾರಿಗೆ ಕಂಡ ಜನ ಗಾಬರಿಯಿಂದ ಕಂಗಾಲಾದರು. ವಿಧವಿಧವಾಗಿ ಮಾತಾಡಿಕೊಂಡರು. ಬಾಲಕರ ರೂಪ, ತೇಜಸ್ಸುಗಳನ್ನು ಧೈರ್ಯವನ್ನು ಕಂಡು ಮನಸಾರೆ ಹೊಗಳಿದರು. ಮುಂದೆ ನಡೆಯುತ್ತಿದ್ದ ಗಂಗೂವನ್ನು ನೋಡಿ ಇವನದೇ ಕಿತಾಪತಿಯಿಂದ ಈ ಕಾರ್ಯ ನಡೆಯಿತೆಂದು ತಿಳಿದು ಜನ ಅವನಿಗೆ ಶಾಪಹಾಕಿದರು – ಲಟಿಕೆ ಮುರಿದರು. ನಿಂದಿಸಿದರು. “ಉಂಡ ಮನೆಗೆ ಕನ್ನ ಹಾಕಿದ ದ್ರೋಹಿ, ರಾಕ್ಷಸ, ವಂಚಕ ಎಂದೆಲ್ಲ ಬೈದರು. ಗುಜರೀತಾಯಿ ಹಾಗೂ ಮಕ್ಕಳು ಮುಗುಳ್ನಗುತ್ತ ನಡೆಯುತ್ತಿದ್ದರು. ಗಂಗೂ ತಲೆತಗ್ಗಿಸಿ ನಡೆಯುತ್ತಿದ್ದ.

‘ವಾಹೆ ಗುರುಜೀ ಕಾ ಖಾಲಸಾ’

ಠಾಣೆಗೆ ಹೋದ ಕೂಡಲೇ ಗುಜರೀತಾಯಿಯನ್ನೂ, ಮಕ್ಕಳನ್ನೂ ಬಂಧಿಸಿ ಜೈಲಿನ ಕೋಣೆಗೆ ತಳ್ಳಿದರು.

ಸೆರೆಮನೆ ಸೇರಿದವರಿಗೆ ನಿದ್ರೆ ಹೇಗೆ ಬರಬೇಕು? ಅಜ್ಜಿಗಂತೂ ಕಳವಳ. ದುಷ್ಟರ ಕೈಗೆ ಸಿಕ್ಕಿದ್ದೇವೆ, ಮುಂದೇನಾಗುವುದೋ,  ಈ ಎಳೆಯ ಹುಡುಗರು ಯಾವ ಕಷ್ಟವನ್ನು ಎದುರಿಸಬೇಕಾಗುವುದೋ! ಪುಟ್ಟ ಹುಡುಗರು ಹೆದರಿಕೊಂಡು ಹೇಗೆ ನಡೆದುಕೊಳ್ಳುವರೋ!

ರಾತ್ರಿಯೆಲ್ಲಾ ಅವಳು ಮಕ್ಕಳಿಗೆ ಧೈರ್ಯವನ್ನು ಉಂಟುಮಾಡಲು ಅವರ ಪೂರ್ವಿಕರ ಸಾಹಸ ಮತ್ತು ಧೈರ್ಯಗಳನ್ನು ಬಿತ್ತರಿಸುವ ಕಥೆಗಳನ್ನು ಹೇಳಿದಳು. ಬಾಲಕರು ಆಸಕ್ತಿಯಿಂದ ಕೇಳಿದರು.

ಸರ್ಹಿಂದ್ ಕಡೆಗೆ

ಮರುದಿನ ಮಾತೆಯನ್ನೂ, ಮಕ್ಕಳನ್ನು ಎತ್ತಿನಗಾಡಿಯಲ್ಲಿ ಮೊಗಲ ಸೈನಿಕರು ಸರ್‌ಹಿಂದ್‌ನ ಕಡೆ ಕರೆದೊಯ್ದರು. ಧೀರಬಾಲಕರು ಅಜ್ಜಿಯ ಜೊತೆ ಧೈರ್ಯವಾಗಿ ಹೋಗುತ್ತಿರುವುದನ್ನು ನೋಡಲು ಜನ ಗುಂಪು ಗುಂಪಾಗಿ ನೆರೆದರು. ಗಾಬರಿಗೊಂಡ ಮೊಗಲ ಸೈನಿಕರು ಬೇಗ ಬೇಗ ಗಾಡಿ ಹೊಡೆದರು. ಸರ್‌ಹಿಂದ್ ನಗರ ತಲುಪಿದರೂ ತಾಯಿಗಾಗಲೀ ಮಕ್ಕಳಿಗಾಗಲೀ ಅನ್ನ ನೀರು ಸಿಗಲಿಲ್ಲ. ದಿನವಿಡೀ ಉಪವಾಸ, ಮಕರ ಮಾಸದ ಕಠೋರ ಚಳಿ. ಸುತ್ತಲೂ ಗಾಳಿ ಬೀಸುವ ಬುರುಜಿನ ಕೋಟೆಯಲ್ಲಿ ಅವರನ್ನು ಇರಿಸಿದ್ದರು. ಚಳಿಗೆ ಜಗ್ಗದ ಬಾಲಕರು ಅಜ್ಜಿಯ ಜೊತೆ ದೇವರ ಸ್ಮರಣೆ ಮಾಡುತ್ತ ಕುಳಿತಿದ್ದರು.

ಭರವಸೆ

ಗುಜರೀತಾಯಿ ರಾತ್ರಿಯಿಡೀ ಮೊಮ್ಮಕ್ಕಳಿಗೆ ವೀರಶೂರರ ಸಾಹಸದ ಕತೆ ಹೇಳಿ ಹುರಿದುಂಬಿಸಿದಳು. ಧೈರ್ಯ ನೀಡಿದಳು. ಕಷ್ಟಕಾಲದಲ್ಲಿ ಬಾಲಕರು ಹೆದರಿ ತಮ್ಮ ಧರ್ಮದಿಂದ ವಿಚಲಿತರಾಗುವರೇ ಎಂಬ ಭಯ ಆಕೆಗೆ. ಬಾಲಕರಿಬ್ಬರೂ ಅಜ್ಜಿಗೆ ಭರವಸೆ ನೀಡಿ “ನಾವು ಎಂದಿಗೂ ನಮ್ಮ ಧರ್ಮವನ್ನು ಬಿಡುವುದಿಲ್ಲ. ತಂದೆಯ ಹೆಸರನ್ನು ಮರೆಸುತ್ತೇವೆ” ಎಂದರು.

ಮುಂಜಾನೆ ಸೈನಿಕರು ಬಾಲಕರನ್ನು ದರಬಾರಿಗೆ ಕೊಂಡೊಯ್ಯಲು ಬಂದರು. ಧೀರಬಾಲಕರು ಅಜ್ಜಿಯ ಕಾಲು ಮುಟ್ಟಿ ನಮಸ್ಕರಿಸಿದರು. “ಜಯಶೀಲರಾಗಿ ಬಾಳಿ” ಎಂದು ಹರಸಿದಳು ಅಜ್ಜಿ. ಎದೆಯುಬ್ಬಿಸಿ, ತಲೆ ಎತ್ತಿ ನಿಂತ ವೀರಬಾಲಕರು ಮೊಗಲ ಸೈನಿಕರ ಜೊತೆ ಹೊರಟರು. ಕಾಲ್ನಡಿಗೆಯಲ್ಲೇ ಬಾಲಕರಿಬ್ಬರನ್ನೂ ನವಾಬ ವಜೀರ್‌ಖಾನನ ದರಬಾರಿಗೆ ಕರೆದೊಯ್ಯಲಾಯಿತು. ನವಾಬನ ಸುತ್ತ ಅಧಿಕಾರಿಗಳು. ಆಸ್ಥಾನದ ವೈಭವ ದರ್ಪಗಳಿಗೆ ಬಾಲಕರು ಹೆದರಲಿಲ್ಲ. ದರಬಾರಿಗೆ ಕಾಲಿಡುತ್ತಲೇ ಗಟ್ಟಿಯಾಗಿ,

“ವಾಹೆ ಗುರುಜೀ ಕಾ ಖಾಲಸಾ
ಶ್ರೀವಾಹೆ ಗುರುಜೀ ಕೀ ಫತಹ”

ಎಂದು ಜಯಘೋಷ ಮಾಡಿದರು. ದರಬಾರಿನಲ್ಲಿದ್ದವರೆಲ್ಲ ಬಾಲಕರನ್ನು ಬೆರಗುಗಣ್ಣಿನಿಂದ ನೋಡಿದರು.

ಬಾಲಕರು ಕೇಸರಿಬಣ್ಣದ ಉಡುಪು, ಪಗಡಿ, ಖಡ್ಗಗಳಿಂದ ಶೋಭಿಸುತ್ತಿದ್ದರು. ಅವರ ವೀರವೇಷ, ತೇಜಸ್ಸಿನಿಂದ ಬೆಳಗುವ ಮುಖಮಂಡಲ ನೋಡಿದ ನವಾಬ ವಜೀರ್‌ಖಾನನ ಕಲ್ಲುಮನಸ್ಸಿನಲ್ಲಿಯೂ ಕರುಣೆಮೂಡಿತು. ಬಾಲಕರಿಗೆ ಬುದ್ಧಿ ಹೇಳುವ ಸ್ವರದಲ್ಲಿ “ನೋಡಿ ಮಕ್ಕಳೇ, ನೀವು ನೋಡಲು ತುಂಬಾ ಮುದ್ದಾಗಿದ್ದೀರಿ. ನಿಮ್ಮನ್ನು ನವಾಬನ ಮಕ್ಕಳಂತೆ ನೋಡಿಕೊಳ್ಳಲಾಗುವುದು. ಆದರೆ ನೀವು ಇಸ್ಲಾಂ ಮತ ಸ್ವೀಕರಿಸಬೇಕು. ಜೊತೆಗೆ ನೀವು ಏನು ಬೇಕಾದರೂ ಕೇಳಿ, ಕೊಡುತ್ತೇನೆ. ಹೇಳಿ, ನನ್ನ ಮಾತು ನಿಮಗೆ ಒಪ್ಪಿಗೆಯೇ?” ಎಂದ.

ಹುಡುಗರಿಬ್ಬರೂ ಒಟ್ಟಿಗೆ ಹೇಳಿದರು “ನಮಗೆ ನಮ್ಮ ಧರ್ಮ ಪ್ರಾಣಕ್ಕಿಂತಲೂ ಪ್ರಿಯವಾದುದು. ಕೊನೆ ಉಸಿರಿನ ತನಕ ಅದನ್ನು ತ್ಯಜಿಸುವುದು ಸಾಧ್ಯವಿಲ್ಲದ ಸಂಗತಿ.”

ಮಕ್ಕಳು ನಿರಪರಾಧಿಗಳು

ಮಕ್ಕಳಿಗೆ ಶಿಕ್ಷೆ ವಿಧಿಸುವ ಮೊದಲು ನವಾಬ ಸಲಹೆಗಾಗಿ ಕಾಜಿಯನ್ನು ಕೇಳಿದ.

“ಇವು ಏನೂ ಅರಿಯದ ಎಳೆಕಂದಗಳು. ನಿರಪರಾಧಿಗಳು. ಇಸ್ಲಾಂನಂತೆ ಇವರಿಗೆ ಶಿಕ್ಷೆ ವಿಧಿಸುವಂತಿಲ್ಲ” ಎಂದ ಕಾಜಿ.

“ನಿಜ ಇವರು ಬಾಲಕರು ಹೌದು. ಆದರೆ ಇವರು ದೇಶದ್ರೋಹಿ ತಂದೆಯ ಮಕ್ಕಳು” ನವಾಬ ಹೇಳಿದ.

“ಆದರೂ ಅಪ್ಪನ ಶಿಕ್ಷೆ ಮಕ್ಕಳಿಗೆ ವಿಧಿಸುವಂತಿಲ್ಲ” ಕಾಜಿ ಹೇಳಿದ.

ನವಾಬ ಮತ್ತೊಮ್ಮೆ ಮಕ್ಕಳಿಗೆ ತಿಳಿಯ ಹೇಳಿದ “ಮಕ್ಕಳೇ, ಇನ್ನೂ ಕಾಲ ಮಿಂಚಿಲ್ಲ. ನೋಡಿ, ಯೋಚನೆ ಮಾಡಿ, ಸುಮ್ಮನೆ ಜೀವ ಕಳೆದುಕೊಳ್ಳಬೇಡಿ, ಇಸ್ಲಾಂ ಒಪ್ಪಿಕೊಂಡರೆ ರಾಜಕುಮಾರರಂತೆ ಬಾಳಬಹುದು.

ಪ್ರಾಣಕ್ಕಿಂತ ಧರ್ಮ ಹೆಚ್ಚು

ಬಾಲಕರು ನಿರ್ಭಯರಾಗಿ ಗಟ್ಟಿಯಾಗಿ ಹೇಳಿದರು “ನಾವು ಗುರು ಗೋವಿಂದಸಿಂಹರ ಮಕ್ಕಳು. ನಮ್ಮ ಅಜ್ಜ ತೇಗ ಬಹಾದುರರು ಧರ್ಮಕ್ಕಾಗಿ ಬಲಿಯಾದವರು. ನಾವು ಅವರ ಸಂತಾನ. ನಮ್ಮ ಧರ್ಮವನ್ನು ಎಂದೂ ಬಿಡುವವರಲ್ಲ. ಅದು ನಮಗೆ ಪ್ರಾಣಕ್ಕಿಂತಲೂ ಅಧಿಕ.”

ದಿವಾನ್ ಸುಚ್ಚಾನಂದ ಒಬ್ಬ ಆಸ್ಥಾನಿಕ. ಆತ ಕೇಳಿದ “ಒಂದು ವೇಳೆ ನಿಮ್ಮನ್ನು ಬಿಟ್ಟುಬಿಟ್ಟರೆ ಏನು ಮಾಡುವಿರಿ?”

ಬಾಲಕ ಜೋರಾವರ್ ಸಿಂಹ ಗುಡುಗಿದ “ಚದರಿ ಹೋದ ಸಿಖ್ಖ ಸೈನಿಕರನ್ನೆಲ್ಲ ಸಂಘಟಿಸುವೆವು. ನಿಮ್ಮ ಅನ್ಯಾಯದ ಸಾಮ್ರಾಜ್ಯವನ್ನು ಮುಳುಗಿಸಿಬಿಡಲು ಯುದ್ಧಮಾಡುವೆವು.”

“ನೀವು ಯುದ್ಧದಲ್ಲಿ ಸೋತು ಹೋದರೆ?” ದಿವಾನ್ ಸುಚ್ಚಾನಂದ ಮತ್ತೆ ಕೇಳಿದ.

“ನಾವು ಸೋಲುವುದಿಲ್ಲ. ನಮಗೆ ಸೋಲೆಂಬುದೇ ಇಲ್ಲ. ಈ ದುರಾಡಳಿತ ಮುಗಿಯಬೇಕು. ಇಲ್ಲ ನಾವು ಸಾಯಬೇಕು. ಆ ತನಕ ಹೋರಾಡುತ್ತೇವೆ” ಜೋರಾವರ್ ಮತ್ತೆ ಗರ್ಜಿಸಿದ.

ಸುಚ್ಚಾನಂದ ಮಕ್ಕಳನ್ನು ಹೆದರಿಸಲು ಹೇಳೀದ. “ಮಕ್ಕಳೇ, ನಿಮ್ಮ ತಂದೆ, ಅವರ ಸೈನಿಕರು, ಹಾಗೂ ನಿಮ್ಮ ಅಣ್ಣಂದಿರು ಯುದ್ಧಲ್ಲಿ ಸತ್ತಿದ್ದಾರೆ. ಈ ಜಗತ್ತಿನಲ್ಲಿ ನಿಮ್ಮವರೆಂದು ಯಾರೂ ಇಲ್ಲ. ಹಾಗಾಗಿ ನೀವು ನವಾಬರ ಮಾತು ಕೇಳಿ ಇಸ್ಲಾಂ ಸ್ವೀಕರಿಸುವುದು ಕ್ಷೇಮ. ಅದರಿಂದ ಸುಖವಾಗಿ ಇರಬಹುದು.”

ಬಾಲಕರು ಮತ್ತೆ ದೃಢವಾದ ದನಿಯಲ್ಲಿ ಉತ್ತರ ನೀಡಿದರು “ನಮ್ಮ ತಂದೆಯವರು ವೀರಯೋಧರು. ಅವರನ್ನು ಯಾರೂ ಕೊಲ್ಲಲಾರರು.”

ಬಾಲಕರ ಕಡೆ ಕನಿಕರ ತೋರಿಸುತ್ತಿದ್ದ ನವಾಬನ ಮನಸ್ಸನ್ನು ಕೆರಳಿಸಲು ದಿವಾನ ಸುಚ್ಚಾನಂದ ಆತನ ಕಡೆ ತಿರುಗಿ “ಕೇಳಿದಿರಾ! ನವಾಬ ಸಾಹೇಬರೇ! ಈ ಬಾಲಕರು ನಿಮ್ಮ ಶಾಸನವನ್ನು ಕಿತ್ತುಹಾಕಲು ನಿಂತವರು. ದೊಡ್ಡವರಾದ ನಂತರ ಶಾಹೀ ಸಾಮ್ರಾಜ್ಯವನ್ನು ಮುಗಿಸಿಬಿಡಲು ಅಪ್ಪನಂತೇ ಹೋರಾಡುವ ವೀರರಿವರು. ಇವರ ಶೌರ್ಯದ ಮಾತುಗಳನ್ನು ಹಗುರವಾಗಿ ಕಡೆಗಣಿಸುವಂತಿಲ್ಲ. ಈ ಹಾವಿನ ಮರಿಗಳನ್ನು ಎಳೆಯದರಲ್ಲಿಯೇ ಹೊಸಕಿಬಿಡಬೇಕು” ಎಂದ.

ಬಾಲಕರಿಬ್ಬರೂ ನವಾಬ-ದಿವಾನ ಸುಚ್ಚಾನಂದರ ನಡುವಿನ ಸಂಭಾಷನೆ ಕೇಳುತ್ತ ನಗುತ್ತಾ ನಿಂತಿದ್ದರು.

ನವಾಬ ಕಾಜಿಯನ್ನು ನೋಡಿ “ಮುಂದೆ ಈ ಬಾಲಕರು ದಂಗೆಕೋರರಾಗುತ್ತಾರೆ. ಸರಕಾರ ಉರುಳಿಸುತ್ತಾರೆ. ಇವರನ್ನು ಹಾಗೇ ಬಿಡಬಾರದು.” ಎಂದ.

ಕಾಜಿಯೂ ಮಕ್ಕಳ ಶೌರ್ಯ ಸಾಹಸದ ಮಾತುಗಳಿಂದ ಕೆರಳಿದ್ದ. ಆತ ತನ್ನ ತೀರ್ಪು ನೀಡುತ್ತ, “ಈ ಬಾಲಕರು ವಿದ್ರೋಹಕ್ಕೆ ಸಿದ್ಧರಾಗಿದ್ದಾರೆ. ಇವರು ಮೊಗಲ್ ಶಾಸನದ ಶತ್ರುಗಳು. ಇಸ್ಲಾಂ ವಿರೋಧಿಗಳು. ಇವರನ್ನು ಜೀವಂತವಾಗಿ ಗಾರೆ ಗೋಡೆಗೆ ಮೆತ್ತಿಸಿಡಬೇಕು” ಎಂದು ನುಡಿದ.

ಶಿಕ್ಷೆ

ತೀರ್ಪು ಕೇಳೀ ಬಾಲಕರು ನಗುತ್ತ ನಿಂತಿದ್ದರು. ಮಲೇರ್ ಕೋಟ್ಲಾದ ನವಾಬ ಶೇಖ್ ಮುಹಮ್ಮದ್ ಖಾನ. ಅವರ ಸೋದರ ಯುದ್ಧವೊಂದರಲ್ಲಿ ಗುರು ಗೋವಿಂದ ಸಿಂಹನ ಬಾಣಗಳಿಂದ ಹತನಾಗಿದ್ದ. ಅದನ್ನು ತಿಳಿದಿದ್ದ ಸರ್‌ಹಿಂದ್‌ನ ನವಾನಶೇಖ್ ಈ ಬಾಲಕರಿಗೆ ಶಿಕ್ಷೆ ವಿಧಿಸಲು ಮಕ್ಕಳನ್ನು ಆತನ ವಶಕ್ಕೆ ಒಪ್ಪಿಸುವ ನಿಶ್ಚಯಮಾಡಿದ.

ತುಂಬಿದ ಆಸ್ಥಾನದಲ್ಲಿ ತನ್ನ ಮಾತನ್ನು ಧಿಕ್ಕರಿಸಿದ ಈ ಹುಡುಗರಿಗೆ ಯಾವ ಶಿಕ್ಷೆ ಕೊಡುವುದು? ಗರ್ವಭಂಗವಾಗಿದ್ದ ನವಾಬನಿಗೆ ಒಂದು ಅತ್ಯಂತ ಕ್ರೂರ ಯೋಚನೆ ಬಂದಿತು. ಮಕ್ಕಳನ್ನು ನಿಲ್ಲಿಸಿ ಅವರ ಸುತ್ತ ಗೋಡೆ ಕಟ್ಟಿಸುವುದು! ಗೋಡೆಗಳ ಮಧ್ಯೆ ಉಸಿರು ಕಟ್ಟಿ ಅವರು ಸಾಯುವರು. ನೋಡುವವರಿಗೆ ಎದೆ ನಡುಗುತ್ತದೆ. ಮುಂದೆ ಯಾರೂ ತನ್ನ ವಿರುದ್ಧ ಧ್ವನಿ ಎತ್ತಲಾರದು. ಅಲ್ಲದೆ, ಗೋಡೆ ಮೇಲೇರುತ್ತಿದ್ದಂತೆ ಮಕ್ಕಳು ಹೆದರಿ ಇಸ್ಲಾಂ ಮತ ಸೇರಲು ಒಪ್ಪಬಹುದು. ಹೀಗೆ ಯೋಚಿಸಿ ನವಾಬ ಶೇಖ್ ಮುಹಮ್ಮದ್ ಖಾನನನ್ನು ಕರೆಸಿದ.

 

"ನಿಮ್ಮ ತಂದೆಯ ಹೆಸರು ಉಳಿಸಿದಿರಿ"

ಪಾಪ ಕಾರ್ಯ ನನ್ನಿಂದಾಗದು

“ನೋಡಿ, ಸಿಖ್ಖರು ನಿಮ್ಮ ಸೋದರರನ್ನು ಕೊಂದಿದ್ದಾರೆ. ಈಗ ಗುರು ಗೋವಿಂದಸಿಂಹನ ಇಬ್ಬರು ಮಕ್ಕಳು ನನ್ನ ವಶದಲ್ಲಿದ್ದಾರೆ. ಕಾಜಿಯರವರು ಈ ಮಕ್ಕಳನ್ನು ಜೀವಂತವಾಗಿ ಗಾರೆಯ ಗೋಡೆಗೆ ಮೆತ್ತಿಸಿ ಸಾಯಿಸಬೇಕೆಂದು ಆಜ್ಞೆ ಮಾಡಿದ್ದಾರೆ. ನಾನು ಇವರನ್ನು ನಿಮ್ಮ ವಶಕ್ಕೆ ಒಪ್ಪಿಸುತ್ತೇನೆ. ನೀವು ನಿಮ್ಮ ಸೋದರನ ಕೊಲೆಯ ಸೇಡು ತೀರಿಸಿಕೊಳ್ಳಿ” ಎಂದ ನವಾಬ ವಜೀರ್ ಖಾನ. ಮಲೇರ್ ಕೋಟ್ಲಾದ ನವಾಬ ಧರ‍್ಮಪರಾಯಣ. ವಜೀರ್‌ಖಾನನ ನಿರ್ಣಯ ಕೇಳಿ ಬೆವೆತುಹೋದ. “ಈ ಪಾಪಕಾರ್ಯ ನನ್ನಿಂದಾಗದು. ನನ್ನ ಸೋದರ ಯುದ್ದದಲ್ಲಿ ಮಡಿದ. ಅದರಲ್ಲಿ ಈ ಮುದ್ದುಮಕ್ಕಳದೇನೂ ತಪ್ಪಿಲ್ಲ. ಇವರನ್ನು ನಾನೇಕೆ ಕೊಲ್ಲಲಿ?” ಎಂದ. ಸರಹಿಂದ್‌ನ ನವಾಬ ನಿರುತ್ತರನಾದ.

ನನ್ನ ಮಾತು ಕೇಳಿ, ಇಲ್ಲವಾದರೆ…..

ಸಂಜೆ ವೇಳೆಗೆ ಬಾಲಕರಿಬ್ಬರನ್ನು ಅಜ್ಜಿಯ ಬಳಿಗೆ ಕಳಿಸಲಾಯಿತು. ನಗುನಗುತ್ತ ಬಂದ ಮಕ್ಕಳು ದರಬಾರಿನಲ್ಲಿ ನಡೆದ ಸಂಗತಿಗಳನ್ನು ಉತ್ಸಾಹದಿಂದ ಹೇಳಿದರು. ಅತ್ಯಂತ ಸಂತೋಷಗೊಂಡ ಅಜ್ಜಿ ಗುಜರೀತಾಯಿ ಮೊಮ್ಮಕ್ಕಳನ್ನು ತಬ್ಬಿಕೊಂಡು, “ಮಕ್ಕಳೇ, ನೀವು ನಿಮ್ಮ ತಂದೆಯ ಹೆಸರು ಉಳಿಸಿದಿರಿ” ಎಂದಳು.

ಮರುದಿನ ಮಕ್ಕಳನ್ನು ಮತ್ತೆ ದರಬಾರಿಗೆ ಕರೆದೊಯ್ಯಲಾಯಿತು. ಹೇಗಾದರೂ ಮಾಡಿ ಈ ಬಾಲಕರು ಇಸ್ಲಾಂ ಸ್ವೀಕರಿಸುವಂತೆ ಮಾಡಬೇಕೆಂಬುದೇ ನವಾಬನ ಸಂಕಲ್ಪ. ಹಾಗಾಗಿ ಮತ್ತೆ ನಯವಿನಯದಿಂದ ಹೇಳಿದ “ಮಕ್ಕಳೇ, ಈಗಲೂ ಅವಕಾಶವಿದೆ. ನನ್ನ ಮಾತು ಕೇಳಿ. ಇಸ್ಲಾಂ ಸ್ವೀಕರಿಸಿ ನಗುನಗುತ್ತ ಸುಖದಿಂದ ಬಾಳಿರಿ. ಒಂದು ವೇಳೆ ನನ್ನ ಮಾತು ಕೇಳದಿದ್ದರೆ ನಿಮ್ಮನ್ನು ಜೀವಂತವಾಗಿ ಹಸಿಗಾರೆಯ ಗೋಡೆಗೆ ಮೆತ್ತಿಸಿಬಿಡುತ್ತೇನೆ.”

ಸಾವಿಗೆ ಹೆದರುವುದಿಲ್ಲ

ಬಾಲಕರು ಮತ್ತೆ ಅದೇ ಧೈರ್ಯದಿಂದ ಉತ್ತರಿಸಿದರು. “ಸಾವು ನಮ್ಮನ್ನು ಮುಟ್ಟಲಾರದು. “ಸಾವಿಗೆ ನಾವು ಹೆದರುವವರೂ ಅಲ್ಲ. ಯಾವುದೇ ಕಾರಣಕ್ಕೂ ನಾವು ಇಸ್ಲಾಂ ಸ್ವೀಕರಿಸಲಾರೆವು. ನಮಗೆ ಧರ್ಮ ಪ್ರಾಣಕ್ಕಿಂತಲೂ ಅಧಿಕ.”

ಉತ್ತರ ಕೇಳಿದ ನವಾಬ ವಜೀರ್ ಖಾನ ಕಿಡಿಕಿಡಿಯಾದ. ಆದರೆ ದರಬಾರಿನಲ್ಲಿದ್ದ ಇತರರು “ಶಹಬಾಶ್ ವೀರರೇ’ ಎಂದು ಅವರು ಶೌರ್ಯದ ಮಾತಿಗೆ ಸಂತಸ ವ್ಯಕ್ತಪಡಿಸಿದರು. ಕೋಪಗೊಂಡ ನವಾಬ “ಪಿಶಾಚಿಗಳನ್ನು ಕೂಡಲೇ ಹಸಿ ಗಾರೆಯ ಗೋಡೆಗೆ ಮೆತ್ತಿಸಿ ಬಿಡಿ”, ಎಂದು ಆಜ್ಞೆಮಾಡಿದ.

ಆಸ್ಥಾನದಲ್ಲಿ ದೆಹಲಿ ಬಂದಿದ್ದ ಇಬ್ಬರು ಕಟುಕರಿದ್ದರು. ನಿಶಾಲ್ ಬೇಗ್ ಹಾಗೂ ವಿಶಾಲ್ ಬೇಗ್ ಎಂದು ಅವರ ಹೆಸರು. ಬಾಲಕರನ್ನು ವಧೆಗಾಗಿ ಅವರ ವಶಕ್ಕೆ ಒಪ್ಪಿಸಲಾಯಿತು. ಅವರಿಗೆ ಹಬ್ಬದೂಟ ಬಡಿಸಿದಷ್ಟು ಸಂತಸ. ವೀರಬಾಲಕರು ಮದುವೆ ಮನೆಗೆ ಹೋಗುವ ಸಂತಸದಿಂದ ಕಟುಕರ ಜೊತೆ ನಡೆದರು.

ಮರಣವೇ ಬರಲಿ

ಸುದ್ದಿ ಬಿರುಗಾಳಿಯಂತೆ ನಗರಕ್ಕೆ ವ್ಯಾಪಿಸಿತು. ಸಹಸ್ರಾರು ಜನ ಈ ವೀರಬಾಲಕರನ್ನು ನೋಡಲು ದಾರಿಯುದ್ದಕ್ಕೂ ಕಿಕ್ಕಿರಿದು ನಿಂತರು. ಕೆಲವರು ಗಂಗೂವನ್ನು ಶಪಿಸುತ್ತಿದ್ದರು. ಮತ್ತೆ ಕೆಲವರು ನವಾಬನಿಗೆ ಶಾಪ ಹಾಕುತ್ತಿದ್ದರು. ಇನ್ನು ಕೆಲವರು ಬಾಲಕರ ಧೈರ್ಯ ಸಾಹಸಗಳನ್ನು ಹೊಗಳುತ್ತಿದ್ದರು.

ಗೊತ್ತು ಮಾಡಿದ ಜಾಗಕ್ಕೆ ಬಾಲಕರನ್ನು ಕರೆತರಲಾಯಿತು. ಹುಡುಗರನ್ನು ನಡುವೆ ನಿಲ್ಲಿಸಿ ಆಳುಗಳು ಗಾರೆಯ ಗೋಡೆ ಕಟ್ಟತೊಡಗಿದರು. ನಗರದ ನಾಲ್ಕೂ ಕಡೆಯಿಂದ ಜನ ಅಲ್ಲಿಗೂ ನುಗ್ಗಿ ಬಂದರು. ನವಾಬ, ಆತನ ಪಕ್ಕದಲ್ಲೇ ಕಾಜಿ ಮತ್ತಿತರ ಪರಿವಾರದವರೂ ನಿಂತಿದ್ದರು. ಕಾಜಿ ಕೊನೆಯಬಾರಿಗೆಂದು ಮಕ್ಕಳಿಗೆ ಇಸ್ಲಾಂ ಸ್ವೀಕರಿಸುವ ಉಪದೇಶ ಮಾಡಿದ. ವೀರಬಾಲಕ ಮತ್ತೆ ಅದೇ ದೃಢಸ್ವರದಲ್ಲಿ ಹೇಳಿದರು: “ಜಗತ್ತಿನ ಯಾವ ಶಕ್ತಿಯೂ ನಮ್ಮನ್ನು ನಮ್ಮ ಧರ್ಮದಿಂದ ಬೇರ್ಪಡಿಸಲಾರದು. ನಾವು ಇಸ್ಲಾಂ ಸ್ವೀಕರಿಸುವುದಿಲ್ಲ. ಅದಕ್ಕೆ ಬದಲು ಮರಣವೇ ಬರಲಿ.”

ನಿಮ್ಮ ಕಾರ್ಯ ಮಾಡಿ

ಕಟುಕರು ಕೂಡಾ ಬಾಲಕರಿಗೆ ಪ್ರಾಣ ಉಳಿಸಿಕೊಳ್ಳಲು ಇಸ್ಲಾಂ ಸ್ವೀಕರಿಸಿ ಎಂದು ಹೇಳಿದರು. ಆಗ ಬಾಲಕರು “ನೀವು ನಮ್ಮ ಸುತ್ತ ಕಟ್ಟುವ ಈ ಪಾಪದ, ಅತ್ಯಾಚಾರದ ಗೋಡೆ ಬಹಳಕಾಲ ಇರಲಾರದು. ಇದು ಎಷ್ಟುಬೇಗ ಮೇಲಕ್ಕೇಳುವುದೋ ಅಷ್ಟು ಬೇಗ  ಮೊಗಲ ಸಾಮ್ರಾಜ್ಯದ ಪತನವಾಗುತ್ತದೆ. ನಿಮ್ಮ ಕೆಲಸ ನೀವು ಮಾಡಿ, ನಮಗೆ ನಿಮ್ಮ ಉಪದೇಶ ಬೇಡ” ಎಂದು ಹೇಳಿ ದೇವತಾ ಪ್ರಾರ್ಥನೆ ಮಾಡತೊಡಗಿದರು.

ಇದೇಕೆ ಕಣ್ಣೀರು?

ಸುಣ್ಣದ ಗಾರೆಯಿಂದ ಕಟ್ಟುತ್ತಿದ್ದ ಇಟ್ಟಿಗೆ ಗೋಡೆರ ಸರಸರನೆ ಮೇಲೇರುತ್ತಿತ್ತು. ನಗರದ ಜನ ಸುತ್ತನಿಂತು ಹನಿದುಂಬಿದ ಕಣ್ಣುಗಳಿಂದ ನೋಡುತ್ತಿದ್ದರು. ನೋಡು ನೋಡುತ್ತ ಗೋಡೆ ಬಾಲಕರ ಕಿವಿಮಟ್ಟಕ್ಕೆ ಬಂತು. ಜೋರಾವರ್ ಸಿಂಹ ಕೊನೆಯ ಬಾರಿಗೆಂದು ತಮ್ಮ ಫತೇಸಿಂಹನ ಕಡೆ ನೋಡಿದ. ಆತನ ಕಣ್ಣುಗಳಲ್ಲಿ ನೀರು ತುಂಬಿತ್ತು. ಫತೇಸಿಂಹ ತನ್ನ ಅಣ್ಣನ ಕಣ್ಣುಗಳಲ್ಲಿ ನೀರು ತುಂಬಿರುವುದನ್ನು ನೋಡಿ “ಅಣ್ಣಾ ಇದೇನು? ವೀರನಾದ ನಿನ್ನ ಕಣ್ಣುಗಳಲ್ಲಿ ನೀರು? ಬಲಿದಾನಕ್ಕೆ ಹೆದರಿದೆಯಾ?” ಎಂದ. ತಮ್ಮನ ಮಾತುಗಳು ಅಣ್ಣ ಜೋರಾವರಸಿಂಹನ ಎದೆಗೆ ಈಟಿಯಂತೆ ನಾಟಿದವು. ಕಿಲಕಿಲನೆ ನಗುತ್ತ ಹೇಳಿದ. “ತಮ್ಮ ಫತೇಸಿಂಹ! ನೀನು ಬರೀ ಮೊದ್ದು. ನಾನು ಸಾವಿಗೆ ಹೆದರುವೆನೆ? ಸಾವೇ ನನಗೆ ಹೆದರುತ್ತದೆ. ಹಾಗಾಗಿ ಅದು ಮೊದಲು ನಿನ್ನ ಕಡೆ ಬರುತ್ತಿದೆ. ನನಗೆ ದುಃಖವೇಕೆಂದರೆ ಈ ನೆಲಕ್ಕೆ ನನಗಿಂತ ನಂತರ ಬಂದ ನಿನಗೆ ನನಗಿಂತ ಮೊದಲು ಬಲಿದಾನ ನೀಡುವ ಅವಕಾಶ ಸಿಕ್ಕಿತಲ್ಲಾ.” ಅಣ್ಣನ ಮಾತು ಕೇಳಿ ಫತೇಸಿಂಹನ ದುಃಖ ದೂರವಾಯಿತು.

ವೀರರು ಮರೆಯಾದರು

ಸೂರ್ಯ ಮುಳುಗುವ ಹೊತ್ತು. ಗಾರೆ ಕೆಲಸದವರು ಸರಸರನೆ ಕೆಲಸ ಮಾಡುತ್ತಿದ್ದರು. ಕ್ಷಣಕ್ಷಣಕ್ಕೂ ಗೋಡೆ ಮೇಲೇರುತ್ತಿತ್ತು.  ಬಾಲಕರಿಬ್ಬರೂ ಕಣ್ಣು ಮುಚ್ಚಿ ತಮ್ಮ ಆರಾಧ್ಯ ದೈವವನ್ನು ಸ್ಮರಿಸತೊಡಗಿದರು. ಗೋಡೆ ಬಾಲಕರ ತಲೆಮೀರಿ ಏರಿತು. ಮೇಲೆ ಗಚ್ಚಿನ ಮುಚ್ಚಳ ಮೆತ್ತಿದರು. ಗೋಡೆ ವೀರಬಾಲಕರನ್ನು ತಮ್ಮೊಳಗೆ ಸೇರಿಸಿಕೊಂಡಿತು. ಸುತ್ತನಿಂತ ಜನ ಬಾಲಕರ ಅಪೂರ್ವ ಧರ್ಮನಿಷ್ಠೆ ನೋಡಿ ತಮ್ಮ ಹೇಡಿತನಕ್ಕೆ ಹಳಿದುಕೊಂಡರು.

ನಿರ್ದಯ ಹತ್ಯೆ

ಕೆಲವು ಗಂಟೆಗಳ ನಂತರ ಗೋಡೆ ಉರುಳಿಸಲಾಯಿತು. ಬಾಲಕರಿಬ್ಬರೂ ಉಸಿರು ಕಟ್ಟಿ ಮೂರ್ಛೆ ಹೋಗಿದ್ದರು. ಪಾಶವೀ  ಶಾಸನದ ಆದೇಶದಂತೆ ಮೂರ್ಛೆ ಹೋದ ಬಾಲಕರನ್ನು ಕತ್ತರಿಸಿ ಕೊಲ್ಲಲಾಯಿತು. ಈ ರೀತಿ ಬಾಲಕರನ್ನು ನಿರ್ದಯವಾಗಿ ಹತ್ಯೆ ಮಾಡಿದ ದಾಖಲೆ ಜಗತ್ತಿನ ಯಾವ ಇತಿಹಾಸದಲ್ಲಿಯೇ ಎಲ್ಲೂ ದೊರೆಯದು. ಹಾಗೇ ಈ ಬಾಲಕರು ತೋರಿದ ಧೈರ್ಯ ಸಾಹಸದ ಕತೆಯೂ ಬೇರೆ ಎಲ್ಲೂ ಇಲ್ಲ. ಆಗಿನ ಭಾರತೀಯರು ತಮ್ಮ ಕಣ್ಣೆದುರಿಗೇ ಈ ಕ್ರೂತ ಕೃತ್ಯ ನೋಡುತ್ತ ನಿಂತರು. ಅವರ ಪೌರುಷ ಸತ್ತಹೋಗಿತ್ತು. ಈ ಎಳೆಯ ಮಕ್ಕಳ ಬಿಸಿರಕ್ತದ ತರ್ಪಣವೂ ಅವರಲ್ಲಿ ಚೈತನ್ಯ ಬರಿಸಲಿಲ್ಲ. ಹೇಡಿತನಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇರೆ ಇಲ್ಲ

ಗುಜರೀತಾಯಿಯ ಹತ್ಯೆ

ಗುಜರೀತಾಯಿಯನ್ನು ಕೋಟೆಯ ಬುರುಜಿನಲ್ಲೇ ಬಂಧಿಸಲ್ಪಟ್ಟಿದ್ದರಷ್ಟೇ. ಮುಗ್ದ ಧೀರಬಾಲಕರನ್ನು ಕೊಂದ ನವಾಬನ ಹೃದಯದಲ್ಲಿನ ಬೆಂಕಿ ಇನ್ನೂ ಆರಿರಲಿಲ್ಲ. ಆ ಮುದುಕಿಯ ಕೊಲೆಯಲ್ಲಿ ತನ್ನ ಹಗೆತನ ತೀರಿಸಿಕೊಂಡ. ಅವಳನ್ನು ಆ ರಾತ್ರಿಯೇ ಬುರುಜಿನಿಂದ ಕೆಳಕ್ಕೆ ತಳ್ಳಿ ಕೊಲ್ಲುವಂತೆ ಅಪ್ಪಣೆ ಮಾಡಿದ. ಅವನ ಸೇವಕರು ಅವನ ಆಜ್ಞೆಯನ್ನು ನಡೆಸಿದರು. ಧೀರ ವೃದ್ಧೆಯ ಪ್ರಾಣಪಕ್ಷಿ ಹಾರಿತು. ಮೊಮ್ಮಕ್ಕಳ ಜೊತೆ ಅಜ್ಜಿಯೂ ಹೋದಳು.

ಅಂತ್ಯ ಸಂಸ್ಕಾರ

ವಜೀರ್‌ಖಾನನಂತಹ ಕೊಲೆಗಡುಕ ನವಾಬನ ದರಬಾರಿನಲ್ಲಿ ತೋದರಮಲ್ಲನಂತಹ ಸತ್ಪುರುಷ ದಿವಾನನಿದ್ದ. ಬಾಲಕರು ಕೊಲೆಯಾದ ರೀತಿ ಕಂಡು ಆತ ಮರುಗಿದ ಬಾಲಕರ ಜೀವ ಉಳಿಸಲಾಗಲಿಲ್ಲವಲ್ಲ ಎಂಬ ದುಃಖದಿಂದ ನರಳಿದ ಆತ ಅಳುತ್ತ ನವಾಬನ ಬಳಿಹೋಗಿ ಆ ವೀರಬಾಲಕರರ ಅಂತ್ಯ ಸಂಸ್ಕಾರಕ್ಕೆ ಅನುಮತಿ ಬೇಡಿದ.

ಮನುಷ್ಯತ್ವ ಕಳೆದುಕೊಂಡಿದ್ದ ನವಾಬ ದೇಹ ಸಂಸ್ಕಾರಕ್ಕೆ ಬೇಕಾಗುವ ನೆಲದ ಬೆಲೆ ಕೇಳಿದ.

“ತೋದರಮಲ್ಲರೇ, ನಿಮಗೆಷ್ಟು ಜಾಗಬೇಕೋ ಅಷ್ಟು ಆಯ್ದುಕೊಳ್ಳಿ, ಆದರೆ ಈ ಜಾಗದಷ್ಟಗಳ ಚಿನ್ನದ ನಾಣ್ಯಗಳನ್ನು ಹರಡಿಬಿಡ.”

ತೋದರಮಲ್ಲ ಶ್ರೀಮಂತ ವ್ಯಾಪಾರಿ. ಆತನ ಬಳಿ ಚಿನ್ನದ ನಾಣ್ಯಗಳ ಭಂಡರವೇ ಇತ್ತು. ಮನೆಗೆ ಹೋಗಿ ಚೀಲಗಳಲ್ಲಿ ಚಿನ್ನದ ನಾಣ್ಯ ತುಂಬಿದ ತಂದ. ದಹನ ಸಂಸ್ಕಾರಕ್ಕೆ ಬೇಕಾಗುವಷ್ಟು ಜಾಗದ ತುಂಬ ಚಿನ್ನದ ನಾಣ್ಯ ಹರಡಿದ.

ದಹನ ಸಂಸ್ಕಾರ ಗೌರವ ಪೂರ್ಣವಾಗಿ ನಡೆಯಿತು. ಹತ್ತಿರದಲ್ಲೇ ಗುಜರೀಮಾತೆಯ ಅಂತ್ಯ ಸಂಸ್ಕಾರವೂ ನೆರವೇರಿತು. ಉರಿಯುತ್ತಿರುವ ಚಿತೆಯನ್ನು ನೋಡಿದ ತೋದರಮಲ್ಲ ಬಿಕ್ಕಿಬಿಕ್ಕಿ ಅತ್ತ.

ಈಗ ಮೊಗಲ್ ಸಾಮ್ರಾಜ್ಯದ ಬುಡ ಕುಸಿಯಿತು

ಗುರು ಗೋವಿಂದಸಿಂಹರು ಒಂಟಿಯಾಗಿಬಿಟ್ಟರು. ಅವರ ಪರಿವಾರವೆಲ್ಲ ದೇಶಕ್ಕಾಗಿ ಮಡಿದಿತ್ತು. ಇಬ್ಬರು ಹಿರಿಯಮಕ್ಕಳೂ ಚಮಕೌರ್ ಯುದ್ಧದಲ್ಲಿ ಮಡದಿದ್ದರು. ಅಲೆಯುತ್ತ ಬಂದ ಗುರುಗಳು ಮಾಛೀವಾಡದಲ್ಲಿ ಒಂದು ಮರದ ಕೆಳಗೆ ಕುಳಿತು ಯೋಚಿಸುತ್ತಲಿದ್ದರು. ಅಲ್ಲಿಗೆ ಬಂದ ಒಬ್ಬ ವ್ಯಕ್ತಿ ಅವರ ಇಬ್ಬರು ಕಿರಿಯಮಕ್ಕಳು, ತಾಯಿ ಗುಜರೀತಾಯಿ, ಕೊಲೆಯಾದ ಸುದ್ದಿ ತಿಳಿಸಿದ. ಗುರುಗಳು ವಿಚಲಿತರಾಗಲಿಲ್ಲ. ಕೈಯಲ್ಲಿದ್ದ ಬಾಣದಿಂದ ಹತ್ತಿರದ ಮುಳ್ಳು ಪೊದೆಯ ಬುಡ ಕಿತ್ತುಹಾಕಿ “ಈಗ ಮೊಗಲ ಸಾಮ್ರಾಜ್ಯದ ಬುಡ ನಿಜಕ್ಕೂ ಕುಸಿಯಿತು” ಎಂದರು.

ಬಂದಾ ಬೈರಾಗಿ

ಕಾಡುಮೇಡು ದಾಟುತ್ತ ಗುರು ಗೋವಿಂದಸಿಂಹರು ಗೋದಾವರಿ ತೀರಕ್ಕೆ ಬಂದರು. ನದಿಯ ದಡದಲ್ಲಿ ಒಂದು ಸನ್ಯಾಸಿಯ ಕುಟೀರ ಕಾಣಿಸಿತು.

ಅದು ಮಾಧವದಾಸ ಸನ್ಯಾಸಿಯ ಕುಟೀರ. ಸನ್ಯಾಸಿ ಒಳಗೆ ಧ್ಯಾನಮಗ್ನನಾಗಿ ಕುಳಿತಿದ್ದ. ಗುರು ಗೋವಿಂದ ಸಿಂಹರು ಒಳಗೆ ನುಗ್ಗಿದರು. ಫಕ್ಕನೆ ನುಗ್ಗಿಬಂದ ವ್ಯಕ್ತಿಯನ್ನು ಕಂಡು ಸನ್ಯಾಸಿ ಕುಪಿತನಾಗಿದ್ದ. ಆತನ ಧ್ಯಾನಕ್ಕೆ ಭಂಗ ಉಂಟಾಗಿತ್ತು.

“ಯಾರು ನೀನು? ಅಪ್ಪಣೆಯಿಲ್ಲದೆ ಒಳಗೆ ಬರಲು ನಿನಗೆ ಎಷ್ಟು ಧೈರ್ಯ? ಏಕೆ ಬಂದೆ?” ಎಂದು ಸನ್ಯಾಸಿ ಗದರಿದ.

ಗುರುಗಳು ಶಾಂತ ಸ್ವರದಲ್ಲಿ ಹೇಳಿದರು: “ನಾನು ಯಾರೆಂದು ಕೇಳುವೆಯಾ? ನಿನಗೆ ಗೊತ್ತಿದೆ. ನಿನ್ನನೇ ಕೇಳಿಕೊ. ಯಾರೆಂದು ತಿಳಿಯುತ್ತದೆ.”

ಮಾಧವ ಸನ್ಯಾಸಿಗೆ ಗುರುಗಳ ಗುರುತು ಹತ್ತಿತು. ಅವರ ಕಾಲಿಗೆರಗಿದ. “ಗುರುಗಳೇ, ನಾನು ನಿಮ್ಮ ಬಂದಾ (ಸೇವಕ)” ಗುರುಗಳು ಆತನನ್ನು ಮೇಲೆತ್ತಿ ‘ಬಂದಾಸಿಂಹ ಬದಾಹುರ್; ಎಂದು ಹೆಸರಿಟ್ಟರು. ಐದು ಬಾಣ, ತನ್ನ ಸ್ವಂತ ಖಡ್ಗ, ಹಾಗೂ ಧ್ವಜ ನೀಡಿ ಸನ್ಯಾಸಿಯನ್ನು ವೀರ ಸೇನಾಪತಿಯನ್ನಾಗಿ ಮಾಡಿದರು.

ಬಂದಾಸಿಂಹ ಮರುದಿನದಿಂದಲೇ ಸೈನ್ಯ ಸಂಘಟಿಸಿದ. ಗುರುಗಳ ಬಾಲಕರ ಹತ್ಯೆ ಮಾಡಿದ ನೀಚರಿಗೆ ಪಾಠ ಕಲಿಸುವ ಸಂಕಲ್ಪಮಾಡಿ ಪಂಜಾಬಿನ ಕಡೆ ಸಾಗಿದ. ಬಹಳ ಕಷ್ಟ ಸಾಹಸದಿಂದ ಸಂಘಟಿಸಿದ ಸೈನ್ಯದ ಜೊತೆ ಪಂಜಾನಿನಲ್ಲಿ ಅನೇಕ ಸಿಖ್ಖರೂ ಸೇರಿಕೊಂಡರು.

ಕೊನೆಗೊಂದು ದಿನ ಸಕಲ ಸಿದ್ಧತೆಗಳೊಂದಿಗೆ ಬಂದಾ ಬಹಾದೂರ್ ಸರಹಿಂದ್‌ನ ಮೇಲೆ ಆಕ್ರಮಣ ಮಾಡಿದ. ನವಾಬ ವಜೀರ್ ಖಾನನನ್ನು ಕತ್ತರಿಸಿ ಹಾಕಿದ. ಕೊನೆಗೆ ಇಡಿಯ ಸರಹಿಂದ್ ನಗರವನ್ನೇ ಧ್ವಂಸಮಾಡಿದ.

ಈ ರೀತಿ ಬಂದಾಸಿಂಹ ಗುರು ಗೋವಿಂದಸಿಂಹರ ವೀರ ಮಕ್ಕಳನ್ನು ಕೊಂದ ಪಾಪಿಗಳಿಗೆ ಶಿಕ್ಷೆ ನೀಡಿದ.