Categories
ಅಂಕಣಗಳು ತಂತ್ರಜ್ಞಾನ ವಿಜ್ಞಾನ

ಜ್ಞಾನಜಗತ್ತಿನ ಕಿಟಕಿಗಳು

ಚಿಕ್ಕಂದಿನಲ್ಲಿ ನಾನು ಇದ್ದದ್ದು ಮಲೆನಾಡಿನಲ್ಲಿ, ಬೆಟ್ಟದ ತಪ್ಪಲಲ್ಲೇ ಇದ್ದ ಪುಟ್ಟದೊಂದು ಹಳ್ಳಿಯಲ್ಲಿ. ಎಡೆಬಿಡದೆ ಸುರಿಯುವ ಮಳೆಗೆ ಬೆದರಿ ವಿದ್ಯುತ್ ಕೈಕೊಟ್ಟಾಗ ಹೊರಪ್ರಪಂಚದ ಕೊಂಡಿಯಾಗಿ ನಮ್ಮೊಡನೆ ಇರುತ್ತಿದ್ದದ್ದು ಆಕಾಶವಾಣಿ ಮಾತ್ರವೇ. ಜಗತ್ತಿನಲ್ಲಿ ಏನೆಲ್ಲ ನಡೆಯುತ್ತಿದೆ ಎಂದು ತಿಳಿಯಬೇಕೆಂದರೆ ಸಂಜೆಯ ಪ್ರದೇಶ ಸಮಾಚಾರವನ್ನೋ ರಾತ್ರಿಯ ವಾರ್ತೆಗಳನ್ನೋ ಕೇಳಬೇಕು.

ಕೆಲವೇ ನಿಮಿಷಗಳಲ್ಲಿ ಮುಗಿದುಹೋಗುತ್ತಿದ್ದ ಈ ಕಾರ್ಯಕ್ರಮಗಳ ಮೂಲಕ ಹೊಸ ವಿಷಯಗಳನ್ನು ತಿಳಿಯುವುದೆಂದರೆ ಒನ್‌ಡೇ ಮ್ಯಾಚಿನ ಹೈಲೈಟ್ಸ್ ನೋಡಿದಂತೆಯೇ. ಕುತೂಹಲ ಪೂರ್ತಿ ತಣಿಯದಿದ್ದರೂ ನಡೆದದ್ದೇನು ಎನ್ನುವುದು ಗೊತ್ತಾದ ಸಮಾಧಾನ ನಮಗೆ ಸಿಗುತ್ತಿತ್ತು.

ಪ್ರದೇಶ ಸಮಾಚಾರದಲ್ಲಿ ಕೇಳಿದ ಸುದ್ದಿಯ ವಿವರ ಮರುದಿನದ ಪತ್ರಿಕೆಯಲ್ಲಿ ಸಿಗುತ್ತಿತ್ತು ಸರಿ. ಆದರೆ ಮರುದಿನದ ಪತ್ರಿಕೆ ನಮಗೆ ಸಿಗಬೇಕಲ್ಲ! ಬೆಳಿಗ್ಗೆ ಹತ್ತರ ಮುನ್ನ ನಮ್ಮೂರಿಗೆ ಯಾವತ್ತೂ ಪೇಪರ್ ಬಂದದ್ದೇ ಇಲ್ಲ. ಊರಿಗೆ ಬಂದದ್ದನ್ನು ಮನೆಗೆ ಕರೆತರಲು ನಾವೇ ಎರಡು ಕಿಲೋಮೀಟರ್ ನಡೆದು ಹೋಗಬೇಕು, ಇಲ್ಲ ಏಜೆಂಟ್ ಮಹಾಶಯನ ಮರ್ಜಿ ಕಾಯಬೇಕು. ಅವನ ಮೂಡ್ ಸರಿಯಿಲ್ಲದ ಸಮಯದಲ್ಲಿ ಮೂರುಮೂರು ದಿನದ ಪತ್ರಿಕೆಗಳು ಒಟ್ಟಿಗೆ ಮನೆಗೆ ಬಂದದ್ದೂ ಇದೆ.

ಇನ್ನು ವಾರಪತ್ರಿಕೆ ಮಾಸಪತ್ರಿಕೆಗಳು ಬೇಕಾದರೆ ಕನಿಷ್ಟ ಇಪ್ಪತ್ತೈದು ಕಿಲೋಮೀಟರ್ ಪ್ರಯಾಣ ಬೇಕಾಗುತ್ತಿತ್ತು. ಹೊಸ ಪುಸ್ತಕಗಳನ್ನು ತರಬೇಕೆಂದರಂತೂ ನೂರೈವತ್ತು ಕಿಲೋಮೀಟರ್ ಪ್ರಯಾಣ ಗಟ್ಟಿ!

ಅಂದಿನ ಪರಿಸ್ಥಿತಿ ಇದ್ದದ್ದೇ ಹೀಗೆ. ಬಹುಶಃ ‘ಮಾಹಿತಿ ಸಾಕ್ಷರತೆ’ಯ ವಿಚಿತ್ರ ಸಮಸ್ಯೆಯೊಂದನ್ನು ಆಗ ನಾವು ಅನುಭವಿಸುತ್ತಿದ್ದೆವು ಎನ್ನಬಹುದು.

ಓದಲು ಬರೆಯಲು ತಿಳಿದಿರುವುದು ಸಾಕ್ಷರತೆ ಸರಿ, ಆದರೆ ಇದೇನು ಈ ಮಾಹಿತಿ ಸಾಕ್ಷರತೆ?

ಯಾವಾಗ ಮಾಹಿತಿಯ ಅಗತ್ಯ ಬೀಳುತ್ತದೆ ಎನ್ನುವುದನ್ನು ಅರಿತುಕೊಳ್ಳುವುದು, ಮಾಹಿತಿಯನ್ನು ಎಲ್ಲಿಂದ ಹೇಗೆ ಪಡೆಯಬಹುದೆಂದು ತಿಳಿದಿರುವುದು ಮತ್ತು ಹಾಗೆ ಪಡೆದ ಮಾಹಿತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವುದನ್ನು ತಜ್ಞರು ಇನ್‌ಫರ್ಮೇಶನ್ ಲಿಟರೆಸಿ, ಅಂದರೆ ‘ಮಾಹಿತಿ ಸಾಕ್ಷರತೆ’ ಎಂದು ಕರೆಯುತ್ತಾರೆ.

ಇಂದಿನ ಐಟಿ ಪ್ರಪಂಚದಲ್ಲಿ ಬಹುತೇಕ ಎಲ್ಲರೂ ಮಾಹಿತಿ ಸಾಕ್ಷರರೇ. ಈ ಸಾಕ್ಷರತೆಯನ್ನು ಚೆನ್ನಾಗಿ ಬಳಸಿಕೊಳ್ಳುವ ಅವಕಾಶವನ್ನು ಅಂತರಜಾಲದ ಮಾಯಾಜಾಲ ನಮಗೆ ನೀಡಿದೆ. ಬೇಕಾದಾಗ ಬೇಕೆಂದ ಕಡೆ ಬೇಕಾದ ವಿಷಯವನ್ನು ಕುರಿತ ಮಾಹಿತಿ ಪಡೆದುಕೊಳ್ಳುವುದು ಈಗ ಸಾಧ್ಯವಿದೆ: ಹೊಸ ವಿಷಯಗಳನ್ನು ತಕ್ಷಣವೇ ಪಡೆದುಕೊಳ್ಳಲು ಮೊಬೈಲ್ ಆಪ್‌ಗಳು, ಆ ಬಗ್ಗೆ ವಿಶ್ಲೇಷಣೆಗಳನ್ನು ಓದಲು ಆನ್‌ಲೈನ್ ಪತ್ರಿಕೆಗಳು, ಹೆಚ್ಚಿನ ಮಾಹಿತಿ ಪಡೆಯಲು ವಿಶ್ವಕೋಶಗಳು ಎಲ್ಲವೂ ಇವೆ.

ವರ್ಷಗಳ ಹಿಂದೆ ಮಲೆನಾಡಿನ ಮಳೆಯಲ್ಲಿ ಕುಳಿತಿದ್ದ ನಮಗೂ ಈ ಸೌಲಭ್ಯಗಳ ಅಂದಿನ ಅವತಾರಗಳ ಪರಿಚಯ ಇತ್ತು. ಆದರೆ ಅವೆಲ್ಲ ಸುಲಭಕ್ಕೆ ಕೈಗೆ ಸಿಗುತ್ತಿರಲಿಲ್ಲವಾದ್ದರಿಂದ ವಿಚಿತ್ರವಾದ ಸಮಸ್ಯೆಯೊಂದು ನಮ್ಮನ್ನು ಕಾಡುತ್ತಿತ್ತು ಅಷ್ಟೆ.

ಅಂತರಜಾಲ ಲೋಕದಲ್ಲಿ ಇಂದಿನ ಕನ್ನಡ ಓದುಗರೂ ಇಂತಹುದೇ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ತಮಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಬೇಕೆನ್ನುವ ಅರಿವು ಅವರಿಗಿದೆ, ಜಾಲಲೋಕದಲ್ಲಿ ಆ ವಿಷಯಗಳನ್ನು ಹುಡುಕಿಕೊಳ್ಳುವುದು ಹೇಗೆನ್ನುವುದೂ ಅವರಿಗೆ ಗೊತ್ತು. ಆದರೆ ಆ ಮಾಹಿತಿ ಕನ್ನಡ ಭಾಷೆಯಲ್ಲಿ ಎಲ್ಲಿ-ಹೇಗೆ ಸಿಗುತ್ತದೆ ಎನ್ನುವ ಪ್ರಶ್ನೆ ಮಾತ್ರ ಅವರನ್ನು ಗೊಂದಲದಲ್ಲಿ ಕೆಡವುತ್ತದೆ.

ಈ ಪ್ರಶ್ನೆಗೆ ಉತ್ತರ ದೊರಕಿಸುವ ಅನೇಕ ಪ್ರಯತ್ನಗಳು ಇಂದು ನಡೆಯುತ್ತಿವೆ. ಜಾಲಲೋಕದಲ್ಲಿ ಕನ್ನಡದ ಮಾಹಿತಿಯ ಕೊರತೆಯನ್ನು ತುಂಬಿಕೊಡಲು ಹಲವು ಹವ್ಯಾಸಿ ಬರಹಗಾರರು, ಪತ್ರಕರ್ತರು, ಪ್ರಕಾಶಕರು, ಉದ್ಯಮಿಗಳು ಪ್ರಯತ್ನಿಸುತ್ತಿದ್ದಾರೆ. ಸಮುದಾಯ ಚಾಲಿತ ಯೋಜನೆಗಳೂ ನಡೆಯುತ್ತಿವೆ. ಕರ್ನಾಟಕ ಸರಕಾರದ ಆಶ್ರಯದಲ್ಲಿ ರೂಪುಗೊಂಡಿರುವ, ಮಾಹಿತಿಯಿಂದ ತುಂಬಿಕೊಳ್ಳುತ್ತಿರುವ ‘ಕಣಜ’ ಕೂಡ ಇಂತಹುದೇ ಇನ್ನೊಂದು ಪ್ರಯತ್ನ. ಇಂತಹ ಪ್ರಯತ್ನಗಳು ಎಷ್ಟು ನಡೆದರೂ ಕನ್ನಡ ಭಾಷೆಗೆ ಅದರಿಂದ ಅನುಕೂಲವೇ!

ನೆನಪಿಡಿ, ಕನ್ನಡದ ಓದುಗರಿಗೆ ಬೇಕಾದ ಮಾಹಿತಿ ಪೂರೈಸಲು ನಡೆಯುತ್ತಿರುವ ಈ ಪ್ರಯತ್ನಗಳು ನಮ್ಮ ಸುತ್ತಲೂ ಇರುವ ಜ್ಞಾನದ ಜಗತ್ತಿಗೆ ಸಣ್ಣ-ದೊಡ್ಡ ಕಿಟಕಿಗಳಿದ್ದಂತೆ. ಈ ಕಿಟಕಿಗಳನ್ನು ಎಷ್ಟು ದೊಡ್ಡದಾಗಿ ತೆರೆಯುತ್ತೇವೆ, ಎಷ್ಟು ಬೆಳಕನ್ನು ಒಳಗೆ ಬಿಟ್ಟುಕೊಳ್ಳುತ್ತೇವೆ ಎನ್ನುವುದು ಮಾತ್ರ ನಮಗೇ ಬಿಟ್ಟದ್ದು!