ಹುಟ್ಟುವಾಗಲೇ ಬಡತನ, ಬಾಲ್ಯದಲ್ಲೆ ತಂದೆ ತಾಯಿಗಳನ್ನು ಕಳೆದುಕೊಳ್ಳುವ ದುಃಖ, ತಪ್ಪು ನಂಬಿಕೆಗಳಿಂದ ಕಾಡುತ್ತಿರುವ ಸಮಾಜದ ಅನಾದರ-ಹೀಗೆ ಸಂಕಷ್ಟಗಳು ಒಂದಲ್ಲ, ಹಲವು ಸಾಲು ಹಿಡಿದು ಮನುಷ್ಯನನ್ನು ಕಾಡುವುದುಂಟು. ಸಾಮಾನ್ಯರು ಅವುಗಳನ್ನು ಎದುರಿಸಲಾರದೆ ಸೋಲುತ್ತಾರೆ, ಸಾಮಾನ್ಯರಾಗಿಯೇ ಬದುಕಿ ಸಾಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಯಾವುದಕ್ಕೂ ಜಗ್ಗದೆ, ಮನಸ್ಸಿನಲ್ಲಿ ಗೊಂದಲವಿಲ್ಲದೆ ಎದುರಿಸಿ, ಹಿರಿಮೆಯನ್ನು ಸಾಧಿಸುವವರು ವಿರಳ. ಇಂತಹ ಕೆಲವೇ ಮಂದಿ ಮಹಾತ್ಮರೆನಿಸುತ್ತಾರೆ; ಇತಿಹಾಸದ ಪುಟಗಳಲ್ಲಿ ಬದುಕಿ ಉಳಿಯುತ್ತಾರೆ. ಅವರ ನೆನಪಿನಿಂದ, ಜೀವನ ಚರಿತ್ರೆಯಿಂದ ಹಲವರಿಗೆ ದಾರಿ ಬೆಳಕು ಸಿಕ್ಕುತ್ತದೆ. ಇಂತಹ ವಿರಳ ವ್ಯಕ್ತಿಗಳಲ್ಲಿ ಜ್ಞಾನದೇವರೂ ಒಬ್ಬರು.

ಇವರು ಬದುಕಿದ್ದು ಕೇವಲ ೨೧ ವರ್ಷಗಳ ಕಾಲ (೧೨೭೫-೧೨೯೬) ಮಾತ್ರ. ಇಷ್ಟು ಸ್ವಲ್ಪ ಕಾಲದಲ್ಲಿ ಅವರು ಅಸಾಧಾರಣ ಜ್ಞಾನವನ್ನು ಪಡೆದರು; ಶ್ರೇಷ್ಠ ಗ್ರಂಥಗಳನ್ನು ರಚಿಸಿದರು. ಇವರು ಸಾಮಾನ್ಯರಲ್ಲ, ಪವಾಡಪುರುಷರೇ ಸರಿ ಎಂಬ ನಂಬಿಕೆಯೂ ಬೆಳೆದು ಬಂದಿದೆ. ಇವರನ್ನು ಕುರಿತು ಹಲವು ಅದ್ಭುತಗಳ ಕಥೆಗಳನ್ನೂ ಜನರು ಹೇಳುತ್ತಾರೆ.

ಜ್ಞಾನದೇವರು ಹಿರಿಯರು

ಗೋದಾವರಿಯ ಉತ್ತರ ದಂಡೆಯಲ್ಲಿ ’ಅಪೇಗಾವ’ ಎಂಬ ಗ್ರಾಮವಿದೆ. ಜ್ಞಾನದೇವರ ಹಿರಿಯರು ಅಲ್ಲಿನ ಕುಲಕರಣಿ (ಶ್ಯಾನುಭಾಗ) ಗಳಾಗಿದ್ದರು.

ತ್ರ್ಯಂಬಕ ಪಂತರು ಜ್ಞಾನದೇವರ ಮುತ್ತಜ್ಜ. ಗೋವಿಂದ ಪಂತರು ಅಜ್ಜ. ಇವರ ಮಗ ವಿಠಲ ಪಂತರೇ ಜ್ಞಾನದೇವರ ತಂದೆ.

ವಿಠಲ ಪಂತರ ಪತ್ನಿ ರುಕ್ಮಿಣಿ ಬಾಯಿ. ಅವರು ಆಳಂದಿಯ ಕುಲಕರಣಿ ಸಿದ್ಧೋಪಂತರ ಮಗಳು. ಮದುವೆಯಾದೊಡನೆ ವಿಠಲ ಪಂತರು ಪತ್ನಿಯೊಂದಿಗೆ ಪಂಢರಾಪುರ, ಶ್ರೀಶೈಲ, ರಾಮೇಶ್ವರಗಳಿಗೆ ಯಾತ್ರೆ ನಡೆಸಿದರು. ಭಜನೆ, ಯಾತ್ರೆಗಳೆಂದರೆ ಪಂತರಿಗೆ ಎಲ್ಲಿಲ್ಲದ ಉತ್ಸಾಹ. ಇದರಿಂದ ಅವರಿಗೆ ಸಂಸಾರದಲ್ಲಿ ಆಸಕ್ತಿ ಕಡಿಮೆಯಾಗಬೇಕೆಂದೂ ಆಸೆಯಾಯಿತು.

ಒಂದು ದಿನ ಪಂತರು ಪತ್ನಿಯೊಡನೆ, “ನನಗೇಕೋ ಸಂಸಾರದಲ್ಲಿ ಮನಸ್ಸು ನಿಲ್ಲದು. ಎಲ್ಲವನ್ನೂ ಬಿಟ್ಟು ಸಂನ್ಯಾಸಿಯಾಗಬೇಕು ಎನಿಸುತ್ತದೆ” ಎಂದರು. ಈ ಮಾತು ಕೇಳಿ ರುಕ್ಮಿಣಿ ಬಾಯಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ನಿಂತ ನೆಲವೇ ನಡುಗಿದಂತಾಯಿತು. ಅವಳು ದಿಕ್ಕು ಕಾಣದಾದಳು. ಆದರೂ ಧೈರ್ಯ ತಂದುಕೊಂಡು, “ಈಗೇಕೆ ವೈರಾಗ್ಯದ ಮಾತು? ನಮಗಿನ್ನೂ ಮಕ್ಕಳಿಲ್ಲ. ಸಂತತಿಯಾಗದೆ ಸಂನ್ಯಾಸ ಸ್ವೀಕರಿಸುವುದು ಧರ್ಮವಿರೋಧವಲ್ಲವೇ?” ಎಂದು ಶಾಸ್ತ್ರವಿಚಾರವನ್ನು ಪಂತರ ಗಮನಕ್ಕೆ ತಂದಳು. ಆಕೆ ಹೇಳಿದ ಮಾತು ಧರ್ಮಸಮ್ಮತವಾಗಿತ್ತು. ಆದುದರಿಂದ ಪಂತರಿಗೆ ಏನು ಹೇಳಲೂ ತೋಚಲಿಲ್ಲ.”ಅದೂ ಸರಿಯೆ!” ಎಂದು ಅವರು ಸುಮ್ಮನಿರಬೇಕಾಯಿತು. ಆದರೂ ಸಂನ್ಯಾಸದ ಆಸೆ ಅವರನ್ನು ಬಿಟ್ಟು ಹೋಗಲಿಲ್ಲ.

ಒಮ್ಮೆ ರಕ್ಮಿಣಿ ಬಾಯಿ ಯಾವುದೋ ಚಿಂತೆಯಲ್ಲಿದ್ದಳು. ಆಗ ಪಂತರು ಅವಳೊಡನೆ,”ನಾನು ಮನೆ ಬಿಟ್ಟು ಕಾಶಿಗೆ ತೆರಳುವೆ, ಆಗಬಹುದೇ?” ಎಂದು ಕೇಳಿದರು. ಅರೆ ನಿದ್ರೆಯಲ್ಲಿದ್ದಂತಿದ್ದ ಆಕೆ ಆ ಮಾತಿನ ಬಗ್ಗೆ ಹೆಚ್ಚು ಯೋಚಿಸಲಿಲ್ಲ. “ಆಗಲಿ” ಎಂದಳು.

ತಾವು ಮನೆ ಬಿಡುವುದಕ್ಕೆ, ಸಂನ್ಯಾಸಿಯಾಗುವುದಕ್ಕೆ ಹೆಂಡತಿಯ ಅನುಮತಿ ದೊರೆಯಿತು ಎಂದು ವಿಠಲ ಪಂತರು ತೀರ್ಮಾನಿಸಿಕೊಂಡರು. ನೇರ ಕಾಶಿಗೆ ತೆರಳಿದರು. ಆಗ ಕಾಶಿಯಲ್ಲಿ ರಮಾನಂದ ಸ್ವಾಮಿಗಳೆಂಬುವರಿದ್ದರು. ವಿಠಲ ಪಂತರು ಅವರ ಆಶ್ರಯ ಪಡೆದರು; ತಮಗೆ ಸಂನ್ಯಾಸ ನೀಡಬೇಕೆಂದು ಬೇಡಿಕೊಂಡರು. ಆದರೆ ತಮಗೆ ಮದುವೆಯಾಗಿದ್ದ ಸಂಗತಿಯನ್ನು ತಿಳಿಸಲೇ ಇಲ್ಲ. ಸ್ವಾಮಿಗಳು ಸಂನ್ಯಾಸಕ್ಕೆ ಒಪ್ಪಿಗೆ ನೀಡಿದರು. ವಿಠಲ ಪಂತರು ’ಚೈತನ್ಯಾಶ್ರಮ’(ಚೈತನ್ಯ ಸ್ವಾಮಿ) ಎಂಬ ಹೆಸರಿನ ಸಂನ್ಯಾಸಿಯಾದರು.

ಕೆಲವು ದಿನಗಳಲ್ಲೇ ರುಕ್ಮಣಿಬಾಯಿಗೆ ಗಂಡನು ಸಂನ್ಯಾಸಿಯಾದ ಸುದ್ದಿ ತಿಳಿಯಿತು. ಅವಳ ದುಃಖಕ್ಕೆ ಪಾರವೇ ಇಲ್ಲ. ಆದರೂ ಅವಳೇನು ಮಾಡಿಯಾಳು? ಆಪೇಗಾದಿಂದ ತವರೂರಾದ ಆಳಂದಿಗೆ ಮರಳಿದಳು. ’ದೇವರೇಗತಿ’ ಎಂದು ಹರಿಧ್ಯಾನದಲ್ಲಿ ಮುಳುಗಿದಳು.

ರಮಾನಂದ ಸ್ವಾಮಿಗಳು ಕಾಶಿಯಿಂದ ಯಾತ್ರೆ ಹೊರಟವರು ಆಳಂದಿಗೂ ಬಂದರು. ರುಕ್ಮಿಣಿ ಬಾಯಿ ಅವರ ದರ್ಶನ ಪಡೆಯಲು ಹೋದಳು; ನಮಸ್ಕರಿಸಿದಳು. ಸ್ವಾಮಿಗಳು ಸಂಪ್ರದಾಯದಂತೆ ’ಪುತ್ರವತೀಭವ’ಮಕ್ಕಳನ್ನು ಪಡೆ) ಎಂದು ಆಶೀರ್ವದಿಸಿದರು. ಅದನ್ನು ಕೇಳಿ ಆಕೆಗೆ ದುಃಖ ತಡೆಯಲಾಗಲಿಲ್ಲ. “ಗಂಡನು ಸಂನ್ಯಾಸಿಯಾದ ಮೇಲೆ ನನಗೆಲ್ಲಿ ಆ ಭಾಗ್ಯ?” ಎಂದು ಕಂಬನಿದುಂಬಿ ನುಡಿದಳು. ರಮಾನಂದ ಸ್ವಾಮಿಗಳು ಅವಳ ಕಥೆಯನ್ನೆಲ್ಲಾ ಕೇಳಿ ತಿಳಿದುಕೊಂಡರು. ತಮ್ಮಲ್ಲಿಗೆ ಬಂದು ಚೈತನ್ಯಾಶ್ರಮ ಎಂಬ ಹೆಸರಿನಿಂದ ಸಂನ್ಯಾಸಿಯಾದ ವ್ಯಕ್ತಿಯೇ ಈಕೆಯ ಗಂಡ ಎಂದು ಅವರಿಗೆ ಹೊಳೆಯಿತು. ವಿಠಲ ಪಂತರು ಮಾಡಿದ್ದು ಸರಿಯಲ್ಲ ಎಂದು ಅವರಿಗೆ ಗೊತ್ತಾಯಿತು.

ರಮಾನಂದ ಸ್ವಾಮಿಗಳ ಅಪ್ಪಣೆಯಂತೆ ಹೆಂಡತಿ ಮತ್ತು ಮಾವನನ್ನು ಪಂತರು ಸೇರಿಕೊಂಡರು. ಮರಳಿ ಸಂಸಾರಿಗಳಾದರು.

ಆ‌ದರೆ ಸಂನ್ಯಾಸಿಯಾದವನು ಪುನಃ ಗೃಹಸ್ಥನಾದುದು ಹಲವರಿಗೆ ಸರ ಕಾಣಲಿಲ್ಲ. ಅದು ಧರ್ಮವಿರೋಧ ಎಂಬ ನಿಂದೆ ಆರಂಭವಾಯಿತು. ಎಲ್ಲರೂ ವಿಠಲ ಪಂತರ ಮನೆತನಕ್ಕೆ ಬಹಿಷ್ಕಾರ ಹಾಕಿದರು. ನೆಂಟರಿಷ್ಟರೂ ಅವರ ಸಂಬಂಧವನ್ನು ಬಿಟ್ಟುಬಿಟ್ಟರು.

ಜ್ಞಾನದೇವರ ಜನನ

ವಿಠಲ ಪಂತ, ರುಕ್ಮಿಣಿ ಬಾಯಿಯರು ನಿಂದೆ, ಅಪಪ್ರಚಾರಗಳನ್ನು ತಾಳಿಕೊಳ್ಳಬೇಕಾಯಿತು. ಭಗವಂತನ ಧ್ಯಾನವೊಂದೇ ಅವರಿಗೆ ಶಾಂತಿ ನೀಡುವ ವಿಷಯವಾಗಿತ್ತು. ಕಾಲಕ್ರಮೇಣ ಅವರಿಗೆ ಮೂವರು ಗಂಡುಮಕ್ಕಳೂ ಒಬ್ಬ ಮಗಳೂ ಜನಿಸಿದರು.

ನಿವೃತ್ತಿನಾಥ ಹಿರಿಯ ಮಗ. ಎರಡನೆಯ ಮಗ ಜನಿಸಿದುದು ೧೨೭೫ರಲ್ಲಿ, ಶ್ರೀ ಕೃಷ್ಣಾಷ್ಟಮಿ (ಶ್ರಾವಣ ಬಹುಳ ಅಷ್ಟಮಿ) ಯಂದು. ಈ ಮಗುವಿಗೆ ಜ್ಞಾನದೇವ ಎಂದು ಹೆಸರಿಟ್ಟರು. ಮೂರನೆಯ ಮಗುವಿನ ಹೆಸರು ಸೋಪಾನದೇವ. ಕೊನೆಯ ಮಗಳನ್ನು ಮುಕ್ತಾದೇವಿ ಎಂದು ಕರೆದರು.

’ನಿವೃತ್ತಿ’ (ವೈರಾಗ್ಯ) ’ಜ್ಞಾನ’ಗಳ ’ಸೋಪಾನ’ (ಮೆಟ್ಟಿಲು) ಏರಿದರೆ ’ಮುಕ್ತ’ನಾಗಬಹುದು ಎಂಬ ಅರ್ಥ ಕೊಡುವಂತಿದ್ದವು ಆ ನಾಲ್ಕು ಹೆಸರುಗಳು.

ಅಸಾಧಾರಣ ಬಾಲಕ

ಜ್ಞಾನದೇವ ಮುದ್ದಾಗಿದ್ದ. ಅವನ ಮುಖದಲ್ಲಿ ವಿಶೇಷವಾದ ಕಾಂತಿ, ಕಣ್ಣುಗಳಲ್ಲಿ ಹೆಚ್ಚಿನ ಹೊಳಪು. ಯಾವಾಗಲೂ ಯಾವುದೋ ಆಲೋಚನೆಯಲ್ಲಿ ಮುಳುಗಿದ್ದಂತೆ ಇರುತ್ತಿದ್ದನು. ಅವನ ಕಣ್ಣಮುಂದೆ ವಿಠಲನದೇ ಚಿತ್ರ, ಮನಸ್ಸು ಒಳಗಿದೊಳಗೆ ವಿಠ್ಠಲ ವಿಠ್ಠಲ, ಎನ್ನುತ್ತಲೇ ಇತ್ತು.

ಬಾಲ್ಯದಲ್ಲಿಯೇ ಜ್ಞಾನದೇವನಿಗೆ ಹಾಡುಗಾರಿಕೆಯಲ್ಲಿ ಆಸಕ್ತಿ. ಅವನು ರಾಗವಾಗಿ ವಿಠ್ಠಲ ಭಜನೆ ಮಾಡುತ್ತಿದ್ದ. ಆ ಹಾಡಿನಲ್ಲಿ ಭಕ್ತಿ ತುಂಬಿ ಬರುತ್ತಿತ್ತು.

ಈ ನಾಲ್ವರು ಮಕ್ಕಳೂ ಎಲ್ಲರಂತಲ್ಲ. ಅವರು ಜಗಳ ಮಾಡಿದ್ದನ್ನಾಗಲೀ ಬಿರುನುಡಿಗಳನ್ನಾಡಿದ್ದಾಗಲೀ ಯಾರೂ ಕಾಣರು, ಕೇಳರು. ಕಾಡುಹರಟೆಯಲ್ಲಿ ಅವರು ಸಮಯವನ್ನು ಹಾಳುಮಾಡುತ್ತಿರಲಿಲ್ಲ. ಹೆಚ್ಚಿನ ವೇಳೆಯನ್ನು ಭಜನೆಯಲ್ಲೇ ಕಳೆಯುತ್ತಿದ್ದರು.

ತಂದೆಯೆಂದರೆ ಜ್ಞಾನದೇವರ ಪಾಲಿಗೆ ಪ್ರತ್ಯಕ್ಷದೇವರು. ಅಣ್ಣ ನಿವೃತ್ತಿಯೆಂದರೆ ಗುರುವೆಂಬ ಆದರ. ತನ್ನ ಹಿರಿಯರ ಕುರಿತು ಕೊಂಕು ನುಡಿಗಳನ್ನು ಆತ ಕೇಳಿ ಸುಮ್ಮನಿರಲಾರ. ಹಾಗೆಂದು ಅವನು ಯಾರಿಗೂ ನೋಯುವಂತೆ ಮರುನುಡಿದದ್ದಿಲ್ಲ. ಹಿರಿಯರು ಕೇಳಿ ತಲೆದೂಗುವಂತಹ ಒಳ್ಳೆಯ ಮಾತುಗಳಿಂದಲೇ ಎದುರಾಳಿಯ ಬಾಯಿ ಮುಚ್ಚಿಸುತ್ತಿದ್ದ. ಜಗಳಕ್ಕೆ ಬಂದವರೂ ’ತಮ್ಮದು ತಪ್ಪಾಯಿತು’ ಎಂದು ಒಪ್ಪಿಕೊಳ್ಳುವಂತಿತ್ತು. ಜ್ಞಾನದೇವನ ಮಾತಿನ ರೀತಿ.

ಪುಟ್ಟ ಹುಡುಗನ ದಿಟ್ಟ ನುಡಿ

ಒಮ್ಮೆ ಆಪೇಗಾವದಲ್ಲಿ ವಿಶೇಷವಾದ ಸಂತರ್ಪಣೆ ನಡೆಯಿತು. ಸಿದ್ಧೋ ಪಂತನು ಮೊಮ್ಮಕ್ಕಳೊಂದಿಗೆ ಅಲ್ಲಿಗೆ ಹೋದ. ಎಲ್ಲರ ಜೊತೆಯಲ್ಲಿ ಈ ಐವರೂ ಊಟಕ್ಕೆಂದು ಎಲೆಗಳ ಮುಂದೆ ಕುಳಿತಿದ್ದರು.

ಈ ಮಕ್ಕಳನ್ನು ಕಂಡು ಕೆಲವರಿಗೆ ನಾಲಿಗೆ ಸುಮ್ಮನಿರಲಿಲ್ಲ. ’ಕುಲಗೆಟ್ಟ ಸಂತಾನ’ ಎಂದು ಹಳಿಯ ತೊಡಗಿದರು. ತಮ್ಮ ಸಾಲಿನಲ್ಲೇ ಸಂನ್ಯಾಸಿಯ ಮಕ್ಕಳೂ ಊಟಕ್ಕೆ ಕುಳಿತಿರಕೂಡದು ಎಂದು ಕೆಲವರು ಹಟ ಹಿಡಿದರು. ಈ ಮುದುಕನನ್ನೂ ಮಕ್ಕಳನ್ನೂ ಹೊರಕ್ಕೆ ದಬ್ಬಬೇಕೆಂದೂ ಆರ್ಭಟಿಸಿದರು. ಆಗ ಸಿದ್ಧೋ ಪಂತನಿಗೂ ಅವರಿಗೂ ಮಾತು ಬೆಳೆಯಿತು. ಕೆಲವರು ಮುನ್ನಗ್ಗಿ ಸಿದ್ಧೋಪಂತನ ಮೈಮೇಲೆ ಕೈಮಾಡಿದರು. ಏಟು ತಾಗಿ ಆ ಮುದುಕ ನೆಲಕ್ಕೆ ಬಿದ್ದುಬಿಟ್ಟ. ಜ್ಞಾನದೇವ ಇದೆಲ್ಲವನ್ನೂ ನೋಡುತ್ತಿದ್ದ. ಅವನಿಗೆ ಇನ್ನೂ ಸುಮ್ಮನಿರಲಾಗಲಿಲ್ಲ. ಮುಂದೆ ಬಂದು, “ನೀವೆಲ್ಲ ಏಕೆ ನಮ್ಮಜ್ಜನನ್ನು ಬೈಯುತ್ತಿದ್ದೀರಿ? ನೆಲಕ್ಕೆ ಬೀಳಿಸಿದ್ದೀರಿ? ಅವರು ಮಾಡಿದ ತಪ್ಪಾದರೂ ಏನು?” ಎಂದು ಪ್ರಶ್ನಿಸಿದ.

ಪುಟ್ಟ ಹುಡುಗನ ದಿಟ್ಟ ನುಡಿಗಳನ್ನು ಕೇಳಿ ಅಲ್ಲಿದ್ದವರಿಗೆಲ್ಲ ಅಚ್ಚರಿಯಾಯಿತು. ಆದರೂ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳದೆ, ’ಈ ಎಳೆ ಹುಡುಗನಿಗಿಷ್ಟು ಸೊಕ್ಕು? ಎಷ್ಟೆಂದರೂ ಸಂನ್ಯಾಸಿಯ ಸಂತಾನವಲ್ಲವೇ?’ ಎನ್ನುತ್ತ ಜ್ಞಾನದೇವನ ಮೇಲೆ ಬೀಳತೊಡಗಿದರು. ಆಗ ಜ್ಞಾನದೇವನು ಸಿಡಿಲ ಮರಿಯಂತೆ ಅವರನ್ನು ಎದುರಿಸಿದನು. ನಿವೃತ್ತಿ, ಸೋಪಾನರೂ ಅವನೊಂದಿಗೆ ಸೇರಿಕೊಂಡರು. ಜ್ಞಾನದೇವನು “ಮುಂದೆ ಕಾಲಿಟ್ಟರೆ ಎಚ್ಚರಿಕೆ!” ಎಂದು ಗರ್ಜಿಸಿದಾಗ ಜನರೆಲ್ಲ ದಂಗಾದರು, ಹೆಜ್ಜೆ ಹಿಂದಕ್ಕಿರಿಸಿದರು.

ಇದರಿಂದಾಗಿ ಜ್ಞಾನದೇವನ ಹೆಸರು ಊರಲ್ಲೆಲ್ಲಾ ಹಬ್ಬತೊಡಗಿತು. ’ಆ ಹುಡುಗ ಸಾಮಾನ್ಯನಲ್ಲ, ಧೈರ್ಯ, ಮಾತುಗಾರಿಕೆಗಳಲ್ಲಿ ಅವನ ಮುಂದೆ ಎಲ್ಲರೂ ತಲೆ ತಗ್ಗಿಸಬೇಕು. ಅವನಲ್ಲೇನೋ ವಿಶೇಷವಾದ ಶಕ್ತಿ ಇರಲೇಬೇಕು’ ಎಂದು ಜನರು ಆಡತೊಡಗಿದರು.

ಮಹಾತ್ಮರ ಅನುಗ್ರಹ

ನಿವೃತ್ತಿನಾಥನಿಗೆ ಎಂಟನೆಯ ವಯಸ್ಸು. ಉಪನಯನವಾಗಬೇಕಾದ ಕಾಲ. ತಂದೆ ತಾಯಿಗಳು ಮಗನಿಗೆ ’ಬ್ರಹ್ಮೋಪದೇಶ’(ಉಪನಯನ) ನೀಡಬೇಕೆಂದು ಬಯಸಿದರು. ಆದರೆ ಯಾವ ಪುರೋಹಿತನೂ ಉಪನಯನ ನಡೆಸಿಕೊಡಲು ಒಪ್ಪಲಿಲ್ಲ. ’ಸಂನ್ಯಾಸಿಯ ಮಗನಿಗೆ ಸಂಸ್ಕಾರವೇ?’ ಎಂದು ಗೇಲಿ ಮಾಡತೊಡಗಿದರು. ಇದನ್ನು ವಿಠಲ ಪಂತರು ಸಹಿಸಿಕೊಂಡು ಹೆಂಡತಿ ಮಕ್ಕಳೊಂದಿಗೆ ತ್ರ್ಯಂಬಕೇಶ್ವರಕ್ಕೆ ನಡೆದರು.

ತ್ರ್ಯಂಬಕೇಶ್ವರದಲ್ಲಿ ಗಹಿನೀ (ಗೈನೀ) ನಾಥರೆಂಬ ಮಹಾತ್ಮರ ದರ್ಶನವಾಯಿತು. ವಿಠಲ ಪಂತ ಮತ್ತು ಅವರ  ಮಕ್ಕಳ ಪರಿಸ್ಥತಿಯನ್ನು ಗಹಿನೀನಾಥರು ತಿಳಿದುಕೊಂಡರು. ನಿವೃತ್ತಿನಾಥನಿಗೆ ತಾವೇ ಬ್ರಹ್ಮೋಪದೇಶ ನೀಡಿದರು. ನಿವೃತ್ತಿನಾಥನು ತಾನು ಪಡೆದ ಉಪದೇಶವನ್ನು ತಮ್ಮಂದಿರಿಗೂ ತಂಗಿಗೂ ತಿಳಿಸಿದನು. ಹೀಗೆ, ಅಣ್ಣ ನಿವೃತ್ತಿನಾಥನೇ ಜ್ಞಾನದೇವನಿಗೆ ಉಪದೇಶ ನೀಡಿದ ಗುರುವೆನಿಸಿದನು.

ನೀವೆಲ್ಲ ಶಾಸ್ತ್ರವನ್ನು ಸರಿಯಾಗಿ ಅರ್ಥಮಾಡಿಕೊಂಡಂತೆ ತೋರುವುದಿಲ್ಲ.’

ತಬ್ಬಲಿ ಮಕ್ಕಳು

ಇಷ್ಟಾದರೂ ವಿಠಲ ಪಂತರಿಗೆ ಸಮಾಧಾನವಾಗಲಿಲ್ಲ. ಅವರು ಸನಾತನ ಸಂಪ್ರದಾಯದಲ್ಲೇ ಬೆಳೆದು ಬಂದವರು. ತಮ್ಮ ಮಕ್ಕಳಿಗೆ ವಿಧಿಪೂರ್ವಕ ಉಪನಯನ ನಡೆಯಬೇಕು ಎನ್ನುವುದು ಅವರ ಆಸೆ. ತ್ರ್ಯಂಬಕೇಶ್ವರದಲ್ಲಿದ್ದ ಪುರೋಹಿತರೊಡನೆಯೂ ತಮ್ಮ ಆಸೆಯನ್ನು ತೋಡಿಕೊಂಡರು. ಆದರೆ ಅವರು ಒಪ್ಪಲಿಲ್ಲ.

“ನನ್ನ ತಪ್ಪಿಗಾಗಿ, ನಾನು ಸಂನ್ಯಾಸಿಯಾದ ತಪ್ಪಿಗಾಗಿ ಏನೂ ತಪ್ಪುಮಾಡದ ಮಕ್ಕಳಿಗೇಕೆ ಶಿಕ್ಷೆ?” ಎಂದು ಪಂತರು ವಿಚಾರಿಸಿದರು.

“ನಾವೇನು ಮಾಡೋಣ? ಧರ್ಮವೇ ಹಾಗಿದೆ. ಸಂನ್ಯಾಸಿಯ ಮಕ್ಕಳಿಗೆ ಉಪನಯನ ಮಾಡಲು ಶಾಸ್ತ್ರಾಧಾರವಿಲ್ಲ” ಎಂದು ಉತ್ತರ ಬಂತು.

“ಈ ವಿಚಾರದಲ್ಲಿ ಯಾವ ಪರಿಹಾರವೂ ಇಲ್ಲವೇ?” ವಿಠಲ ಪಂತರು ಮತ್ತೆ ಪ್ರಶ್ನಿಸಿದರು.

“ಇಲ್ಲದೆ ಏನು? ಶಾಸ್ತ್ರದಲ್ಲಿ ಪ್ರಾಯಶ್ಚಿತ್ತವನ್ನೂ ಹೇಳಲಾಗಿದೆ” – ಅವರು ಹೀಗೆಂದಾಗ, ಪಂತರು ಕುತೂಹಲದಿಂದ, “ಎಂತಹ ಪ್ರಯಶ್ಚಿತ್ತ ಮಾಡಿಕೊಂಡರೆ ನನ್ನ ಮಕ್ಕಳಿಗೆ ಯಪನಯನವಾದೀತು?” ಎಂದು ಕೇಳಿದರು.

“ದೇಹಾಂತರ ಹೊರತು ಇದಕ್ಕೆ ಬೇರೆ ಪ್ರಾಯಶ್ಚಿತ್ತವೇ ಇಲ್ಲ!”

ಶಾಸ್ತ್ರದ ಈ ನಿರ್ಣಯಕ್ಕೆ ವಿಠ್ಠಲ ಪಂತರು ತಲೆಬಾಗಿದರು. ರುಕ್ಮಿಣಿ ಬಾಯಿಯೂ ಇವರ ಜೊತೆ ಸೇರಿಕೊಂಡರು. ಯಾತ್ರೆಯ ನೆಮ ಹೇಳಿ ಮಕ್ಕಳನ್ನೆಲ್ಲ ಬಿಟ್ಟು – ದೇವರ ಪಾದಕ್ಕೆ ಒಪ್ಪಿಸಿಕೊಟ್ಟು – ಗಂಡ ಹೆಂಡತಿ ಪ್ರಯಾಗಕ್ಕೆ ನಡೆದರು. ಅಲ್ಲಿ ಗಂಗಾ – ಯಮುನಾ ಸಂಗಮದ ತುಂಬು ಪ್ರವಾಹದಲ್ಲಿ ಇಬ್ಬರೂ ದೇಹತ್ಯಾಗ ಮಾಡಿದರು. ಶಾಸ್ತ್ರಕ್ಕಾಗಿ ಪ್ರಾಣ ಕಳೆದುಕೊಂಡರು.

ತಂದೆ ತಾಯಿಗಳು ಹೀಗೆ ಸಮಾಜದ ನಿಯಮಕ್ಕೆ ಆಹುತಿಯಾದ ವಿಷಯ ಜ್ಞಾನದೇವನಿಗೆ ಆಮೇಲೆ ತಿಳಿಯಿತು. ಜನರ ಹುಚ್ಚು ನಂಬಿಕೆಗಳು, ತಪ್ಪು ಅಭಿಪ್ರಾಯಗಳು ತಮ್ಮ ಪ್ರೀತಿಯ ತಂದೆ ತಾಯಿಗಳನ್ನು ಬಲಿ ತೆಗೆದುಕೊಂಡವಲ್ಲ ಎಂದು ಅವನು ಮರುಗಿದನು. ಆದರೆ ಎನು ಮಾಡುವುದಕ್ಕೂ ಸಾಧ್ಯವಿರಲಿಲ್ಲ. ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು? ಆದರೂ ಈ ಘಟಟೆ ಜ್ಞಾನದೇವನ ಎಳೆ ಮನಸ್ಸಿನ ಮೇಲೆ ಅಳಿಸಲಾಗದ ಪರಿಣಾಮ ಬೀರಿತು. ಕುರುಡು ಸಮಾಜದ ಕಣ್ಣು ತೆರೆಸಬೇಕು ಎಂದು ಅವನು ಮನಸ್ಸಿನಲ್ಲಿಯೇ ನಿರ್ಧರಿಸಿಕೊಂಡನು.

ಅಂತೂ ನಾಲ್ವರು ಮಕ್ಕಳೂ ತಬ್ಬಿಲಿಗಳಾದರು. ಅವರಿಗೆ ಜೀವನೋಪಾಯಕ್ಕೆ ತಕ್ಕಷ್ಟು ಆಸ್ತಿಪಾಸ್ತಿಗಳಿರಲಿಲ್ಲ. ಭಿಕ್ಷೆ ಬೇಡಿಯಾದರೂ ಎಷ್ಟು ದಿನ ಒಂದೆಡೆ ಬದುಕಬಹುದು? ಮೊಮ್ಮಕ್ಕಳನ್ನು ಅಜ್ಜನು ಕಣ್ಣುಮುಚ್ಚಿದ. ಈಗಂತೂ ಮಕ್ಕಳು ಅಕ್ಷರಶಃ ಅನಾಥರೇ ಆದರು.

ವಿಜಯ

ಈಗ ಜ್ಞಾನದೇವನಿಗೆ ಉಪನಯನದ ವಯಸ್ಸು. ಆ ಕುರಿತು ಅವನಿಗೆ ಹೆಚ್ಚಿನ ಆಸಕ್ತಿಯೇನೂ ಇರಲಿಲ್ಲ. ಆದರೂ ಸಮಾಜದ ಸತ್ಯಪರೀಕ್ಷೆ ಮಾಡಬೇಕೆಂದು ಅವನು ಯೋಚಿಸಿದ. ’ಶಾಸ್ತ್ರಕ್ಕೆ ಮಣಿದು ತಂದೆತಾಯಿಗಳು ಆತ್ಮಾರ್ಪಣೆ ಮಾಡಿಕೊಂಡಾಯಿತು. ಆಮೇಲೂ ಏನೂ ತಪ್ಪುಮಾಡದ ತಾನೇಕೆ ಸಮಾಜದ ಶಿಕ್ಷೆಗೊಳಗಾಗಬೇಕು? ಉಪನಯನ ಸಂಸ್ಕಾರಕ್ಕೆ ತಾನೇಕೆ ಅನರ್ಹ?’ ಎನ್ನುವುದು ಅವನ ತರ್ಕ.

ಆದರೆ, ಆಳಂದಿಯಲ್ಲಿ ಯಾವನೂ ಜ್ಞಾನದೇವನೂ ಉಪನಯನ ಮಾಡಲು ಒಪ್ಪಲಿಲ್ಲ. ಜ್ಞಾನದೇವನೂ ಸುಮ್ಮನಿರಲಿಲ್ಲ. “ಹಾಗಾದರೆ ನಾನು ಏನು ಮಾಡಬೇಕು? ಶಾಸ್ತ್ರ ನಿರ್ಣಯದಂತೆ ಪ್ರಾಯಶ್ಚಿತ್ತ ನಡೆದ ಮೇಲೂ ನೀವೇಕೆ ಹಿಂಜರಿಯುತ್ತೀರಿ? ನಿಮ್ಮ ಶಾಸ್ತ್ರ ಈಗ ಏನು ಹೇಳುತ್ತದೆ?” ಎಂದು ಕೇಳತೊಡಗಿದರು. ಅವನ ಪ್ರಶ್ನೆಗಳಿಗೆ ಯಾರಿಗೂ ಉತ್ತರ ಹೊಳೆಯಲಿಲ್ಲ.

ಕೊನೆಗೆ ಆಚಾರವಂತರು ಒಂದು ಉಪಾಯ ಮಾಡಿದರು. “ಮಕ್ಕಳೇ, ನೀವೆಲ್ಲ ಪೈಠಣಕ್ಕೊಮ್ಮೆ ಹೋಗಿಬನ್ನಿ. ಅಲ್ಲಿನ ಬ್ರಹ್ಮವೃಂದದಿಂದ ಒಂದು ಶುದ್ಧೀಪತ್ರ ತನ್ನಿ. ಆಮೇಲೆ ಉಪನಯನ ಮಾಡಿಸೋಣ. ಆಗದೇ?” ಎಂದರು.

ಜ್ಞಾನದೇವನ ನಾಯಕತ್ವದಲ್ಲಿ ಮೂವರು ಮಕ್ಕಳೂ ಆಳಂದಿಯಿಂದ ಪೈಠಣಕ್ಕೆ ಬಂದರು.

ಆಳಂದಿಯಿಂದ ಬಂದ ಸಂನ್ಯಾಸಿಯ ಮಕ್ಕಳ ವಿಚಾರವಾಗಿ ಪೈಠಣದ ಬ್ರಹ್ಮಸಭೆ ಅಲೋಚಿಸಿತು. ಆ  ಮಕ್ಕಳಿಗೆ ಉಪನಯನ ಮಾಡಲು ಶಾಸ್ತ್ರಾಧಾರ ಇವರಿಗೂ ಸಿಕ್ಕಲಿಲ್ಲ. ಇದನ್ನು ತಿಳಿದು ಜ್ಞಾನದೇವ ಸುಮ್ಮನಿರಲಿಲ್ಲ. ಆ ಬ್ರಹ್ಮಸಭೆಯ ಮುಂದೆ ನಿಂತು, “ನಿಮ್ಮ ಶಾಸ್ತ್ರದಲ್ಲಿ ಬಹಿಷ್ಕಾರ ಹಾಕುವುದಕ್ಕೆ, ಪ್ರಾಯಶ್ಚಿತ್ತದ ವಿಧಿ ವಿಧಿಸಿ, ಕೊಲ್ಲುವುದಕ್ಕೆ ಮಾತ್ರ ಅವಕಾಶಗಳಿವೆ ಎಂದ ಹಾಗಾಯಿತು. ಸಂಸ್ಕಾರವನ್ನು ಬಯಸಿ ಬಂದವರಿಗೆ ಬಾಗಿಲು ಮುಚ್ಚಬೇಕೆಂದು ಶಾಸ್ತ್ರ ಹೇಳುತ್ತದೆಯೇ? ನೀವೆಲ್ಲ ಶಾಸ್ತ್ರವನ್ನು ಸರಿಯಾಗಿ ಅರ್ಥ ಮಾಡಿಕೊಂಡಂತೆ ತೋರುವುದಿಲ್ಲ. ಅದರೊಳಗಿನ ರಸವನ್ನು ಮರೆತು ಹೊರಗಿನ ತೊಗಟೆಯನ್ನು ಜಗಿಯುತ್ತಿರುವಂತೆ ನನಗೆನಿಸುತ್ತದೆ. ಯಾವ ತಪ್ಪೂ ಮಾಡದ ನಮಗೇಕೆ ಬಹಿಷ್ಕಾರ? ಉತ್ತರ ಹೇಳಿ” ಎಂದರು.

ಜ್ಞಾನದೇವನ ಮಾತುಗಳನ್ನು ಕೇಳುತ್ತಿದ್ದಂತೆ ಸಭಿಕರು ತಬ್ಬಿಬ್ಬಾದರು. ಬಾಲಕನ ಮಾತು ಸರಿಯಾದದ್ದೇ ಎಂದುಕೊಂಡರು. ಆದರೂ ಸಂಪ್ರದಾಯವೊಂದು ಅಡ್ಡ ಬರುತ್ತಿದೆಯಲ್ಲಾ ಎಂದು ಯೋಚಿಸುವಂತಾಯಿತು. ಕೊನೆಗೆ ’ಹಾವೂ ಸಾಯಬಾರದು, ಕೋಲೂ ಮುರಿಯಬಾರದು’ ಎಂಬಂತೆ ಉಪಾಯವಾಗಿ,”ಮಕ್ಕಳೇ, ನೀವು ಎಲ್ಲರಂತಲ್ಲ ನಿಮ್ಮದೇನೂ ತಪ್ಪಿಲ್ಲ. ಜ್ಞಾನದೇವ ವಯಸ್ಸಿನಿಂದ ಕಿರಿಯನಾದರೂ ಬಹು ದೊಡ್ಡ ಜ್ಞಾನಿಯೇ ಸರಿ. ನಿಮ್ಮಂತಹವರಿಗೆ ಉಪನಯನವಾದರೂ ಏಕೆ? ಅದಿಲ್ಲದೆಯೂ ನೀವು ಶುದ್ಧರಾಗಿ ಬಾಳಬಹುದಲ್ಲ? ಹರಿಸ್ಮರಣೆಗಿಂತ ಉತ್ತಮ ಸಂಸ್ಕಾರವಾದರೂ ಉಂಟೆ? ಎನ್ನಬೇಕಾಯಿತು ಬ್ರಹ್ಮಸಭೆ.

ಹೀಗೆ ಜ್ಞಾನದೇವ ಪ್ರಥಮ ಪರೀಕ್ಷೆಯಲ್ಲೆ ಅಪ್ರತಿಮ ವಿಜಯವನ್ನು ಪಡೆದ. ಜ್ಞಾನಸಿದ್ಧಿಯೇ ನಿಜವಾದ ಬ್ರಾಹ್ಮಣ್ಯ. ಅದೇ ನಿಜವಾದ ಉಪನಯನ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟ.

ಪೈಠಣದ ಕೋಣ

ಇನ್ನೂ ಕಿರಿವಯಸ್ಸಿನ ಜ್ಞಾನದೇವನ ಬಾಯಿಯಿಂದ ದೊಡ್ಡದಡ್ಡ  ವಿಚಾರಗಳೇ ಹೊರಬರುತ್ತಿದ್ದುವಷ್ಟೆ! ಹಲವರಿಗೆ ಆ ಮಾತುಗಳು ಅರ್ಥವಾಗುತ್ತಿರಲಿಲ್ಲ. ಇನ್ನು ಕೆಲವರು ಈ ಬಾಲಕನನ್ನು ಕಂಡು ಸಹಿಸದೆ ಹಾಸ್ಯ ಮಾಡುವುದಕ್ಕೂ ಹಿಂದಾಗಲಿಲ್ಲ.

ಒಮ್ಮೆ ಕೋಣವೊಂದು ದಾರಿ ಹಿಡಿದು ಸಾಗುತ್ತಿತ್ತು. ಜ್ಞಾನದೇವನೂ ಅಲ್ಲೇ ನಡೆಯುತ್ತಿದ್ದ. ಪೈಠಣದವನೊಬ್ಬನಿಗೆ ಒಂದು ಕೆಟ್ಟ ಯೋಚನೆ  ಹೊಳೆಯಿತು. ಜ್ಞಾನದೇವನಿಗೆ ಗೇಲಿ ಮಾಡಬೇಕು ಎನಿಸಿತು. ಜ್ಞಾನದೇವನಿಗೆ ಕೇಳಿಸುವಂತೆ, “ಹೆಸರಲ್ಲೇನಿದೆ ಮಹಾ? ತಮ್ಮ ಮನಸ್ಸಿಗೆ ಬಂದಂತೆ ಹೆಸರಿಟ್ಟುಕೊಳ್ಳುತ್ತಾರೆ ಮೂರ್ಖರು. ಈ ಕೋಣಕ್ಕೂ ’ಜ್ಞಾನದೇವ’ ಎಂದರೆ ತಪ್ಪೇನು?” ಎಂದನು.

ಈ ಮಾತು ಕೇಳಿ ಜ್ಞಾನದೇವನು  ನಕ್ಕ.  “ನಿಜ, ಈ  ಕೋಣಕ್ಕೂ ನನಗೂ ಏನೇನೂ ಭೇದವಿಲ್ಲ. ಎಲ್ಲ ಪ್ರಾಣಿಗಳ ದೇಹದಲ್ಲೂ ಆತ್ಮವು ಸಮಾನವಾಗಿರುವುದು. ನೀರು ತುಂಬಿದ ಹಲವು ಪಾತ್ರೆಗಳಲ್ಲಿ ಒಬ್ಬನೇ ಸೂರ್ಯನು  ಹಲವಾಗಿ ಪ್ರತಿಬಿಂಬಿಸುವುದಿಲ್ಲವೇ? ಅದರಂತೆಯೇ ಈ ಕೋಣದಲ್ಲಿ ಮತ್ತು ನನ್ನಲ್ಲಿ ಒಂದೇ ಆತ್ಮವಿದೆ” ಎಂದನು.

 

‘ಶು‌ದ್ಧ ಪ್ರೇಮಭಾವದಿಂದ, ಗುರ ಕೃಪೆಯಿಂದ ಮಾತ್ರ ಜ್ಞಾನೋದಯವಾಗುವುದು.’

ಜ್ಞಾನದೇವನ ಈ ಮಾತಿನ ಪರೀಕ್ಷೆ ಮಾಡಬೇಕೆನ್ನಿಸಿತು ಆ ವ್ಯಕ್ತಿಗೆ. ಅವನು ಬಾರುಕೋಲು ಹಿಡಿದು ಆ ಕೋಣದ  ಬೆನ್ನಿಗೆ ಮೂರು ಏಟುಗಳನ್ನು  ಹೊಡೆದನು. ಕೋಣದ  ಮೈಮೇಲೆ ಏಟಿನ ಗಾಯಗಳು ಮೂಡುತ್ತಿದ್ದಂತೆ, ಜ್ಞಾನದೇವನು ತನ್ನ ಮೈಮೇಲೆಯೇ ಗಾಯಗಳಾದಷ್ಟು ನೊಂದನು; ಅವನ ದೇಹದ ಮೇಲೂ ಏಟಿನ ಗುರುತುಗಳು ಕಾಣಿಸಿಕೊಂಡವಂತೆ. ಜ್ಞಾನದೇವನನ್ನು ಪರೀಕ್ಷಿಸಹೊರಟ ವ್ಯಕ್ತಿ ಸೋತು. ’ಜ್ಞಾನದೇವ ಸಾಮಾನ್ಯನಲ್ಲ, ಅವನನ್ನು ಪವಾಡಪುರುಷನೆಂದರೂ ತಪ್ಪಾಗದು’ ಎಂದು ಅವನು ಕ್ಷಮೆ ಯಾಚಿಸಬೇಕಾಯಿತು.

ಜ್ಞಾನದೇವನ ಪರೀಕ್ಷೆ ಇನ್ನೂ ಮುಂದುವರಿಯಿತು ಎಂದು ಭಕ್ತರು ಹೇಳುತ್ತಾರೆ. ಮತ್ತೊಬ್ಬ ತರುಣನು ಜ್ಞಾನದೇವನಿಗೆ, “ನಿನ್ನಲ್ಲಿ ನಿಜವಾಗಿ ಸಾಮರ್ಥ್ಯವಿದ್ದರೆ ಕೋಣದ ಬಾಯಿಯಲ್ಲಿ ವೇದಮಂತ್ರಗಳನ್ನು ಹೇಳಿಸು” ಎಂದನಂತೆ. ಜ್ಞಾನದೇವನು ಕೋಣದ ತಲೆಯ ಮೇಲೆ ಕೈ ಇಟ್ಟಾಗ ಅದರ ಬಾಯಿಯಿಂದ ವೇದಮಂತ್ರಗಳು ತಪ್ಪಿಲ್ಲದೆ ಬಂದವಂತೆ. ಜ್ಞಾನದೇವನನ್ನು ಹಾಸ್ಯ ಮಾಡಿದ್ದವರು ’ತಮ್ಮದು ತಪ್ಪಾಯಿತು’ ಎಂದು ಒಪ್ಪಿ ತಲೆ ಬಾಗಿದರಂತೆ.

ಎಲ್ಲ ಜೀವಿಗಳನ್ನೂ ತಮ್ಮಂತೆಯೇ ಭಾವಿಸುವುದು, ಅವುಗಳ ಸುಖದುಃಖಗಳಲ್ಲಿ ತಾವೂ ಪಾಲುಗೊಳ್ಳುವುದು ಮಹಾತ್ಮನ ಗುಣ. ಇದು ಚಿಕ್ಕ ವಯಸ್ಸಿನಲ್ಲೆ ಜ್ಞಾನದೇವನಿಗೆ ರಕ್ತಗತವಾಗಿದ್ದಿತು ಎಂಬುದನ್ನು ಇಂತಹ ಕಥೆಗಳು ತೋರಿಸುತ್ತವೆ.

ಪವಾಡ ಪುರುಷ

ಅಸಾಧಾರಣ ಹಿರಿಮೆ ಇರುವವರನ್ನು ಕಂಡರೆ ಸಾಮಾನ್ಯ ಜನ ಬೆರಗಾಗುತ್ತಾರೆ. ಅಂತಹವರ ವಿಷಯದಲ್ಲಿ ಅನೇಕ ಕಥೆಗಳು ಜನರ ಬಾಯಿಯಲ್ಲಿ ನಿಲ್ಲುತ್ತವೆ. ಅವು ನಿಜವೇ ಎಂದು ನಿರ್ಧರಿಸುವುದು ಕಷ್ಟ. ಅವು ನಿಜ ಎಂದು ಅನೇಕ ಮಂದಿ ಭಕ್ತರು ನಂಬುತ್ತಾರೆ. ಜ್ಞಾನದೇವರ ವಿಷಯದಲ್ಲಿಯೂ ಇಂತಹ ಹಲವಾರು ಕಥೆಗಳಿವೆ. ಒಂದು ಇದು:

ಕೃಷ್ಣಾಜಿ ಪಂತರ ತಂದೆಯ ಶ್ರಾದ್ಧದ ದಿನ, ಕರೆದರೂ ಬೇಡಿದರೂ ಯಾವ ಬ್ರಾಹ್ಮಣನೂ ಬರಲಿಲ್ಲವಂತೆ. ಅವರಿಗೊಂದು ಪಾಠ ಕಲಿಸಬೇಕೆಂದು ಜ್ಞಾನದೇವ ಯೋಚಿಸಿದ. ಪಂತರಿಗೆ, “ಚಿಂತೆ ಮಾಡಬೇಡಿ, ಶ್ರಾದ್ಧಕರ್ಮ ಪ್ರಾರಂಭಿಸಿ, ಎಲ್ಲವೂ ಸರಿಹೋಗುತ್ತದೆ” ಎಂದು ಹೇಳಿದ. ಪಂತರು ಪ್ರಾರಂಭಿಸಿದರು. ಅನೇಕ ಮಂದಿ ’ಪಂತರಲ್ಲಿ ಶ್ರಾದ್ಧ ಹೇಗೆ ನಡೆಯುತ್ತದೆ?’ ಎಂದು ಕುತೂಹಲದಿಂದ ನೋಡಲು ಬಂದರು. ಪಿತೃಲೋಕದಿಂದ ಪಿತೃಗಳೇ ಬಂದು ಕುಳಿತಂತೆ ಅವರಿಗೆ ಕಂಡಿತು. ಅವರೆಲ್ಲರಿಗೂ ಜ್ಞಾನದೇವನ ಹಿರಿಮೆ ಅರ್ಥವಾಯಿತು.

ವೈಠಣದ ಬ್ರಹ್ಮ ಸಭೆ ತನ್ನ ತಪ್ಪನ್ನು ತಿದ್ದಿಕೊಂಡು ಆ ಮಕ್ಕಳಿಗೆ ಶುದ್ಧೀಪತ್ರವನ್ನು ಕೊಟ್ಟತು.

ಅಂತೂ ಜ್ಞಾನದೇವನು ಜ್ಞಾನದೇವರೆನಿಸಿದನು. ಸಾಮಾನ್ಯರ ದೃಷ್ಟಿಯಲ್ಲಿ ಪವಾಡಪುರುಷನೆನಿಸಿದನು.

ನಾಲ್ವರೂ ಪೈಠಣದಿಂದ ಆಳಂದಿಗೆ ಮರಳಿದರು.

ಮತ್ತೊಂದು ಕಥೆ

ಆಳಂದಿಯಲ್ಲಿ ವಿಸೋಬಾ ಚಾಟಿ ಎಂಬವನಿದ್ದ. ಅವನು ಅಹಂಕಾರಿ. ಕೈಯಲ್ಲಿ ನಾಲ್ಕು ಕಾಸೂ ಸೇರಿತ್ತು. ಊರೆಲ್ಲ ತಾನು ಹೇಳಿದಂತೆ ಕೇಳುತ್ತದೆ ಎಂಬ ದರ್ಪ ಬೇರೆ. ಇವನಿಗೆ ಜ್ಞಾನದೇವ ಮತ್ತು ಅವರ ಸೋದರರನ್ನು ಕಂಡರೆ ಆಗದು.

ದೀಪಾವಳಿ ಹಬ್ಬ ಬಂದಿತು. ಈ ಮಕ್ಕಳು ಮಂಡಿಗೆ ಮಾಡಿಕೊಂಡು ತಿನ್ನಲು ಆಸೆಪಟ್ಟರು.

ಮಂಡಿಗೆ ಕಾಯಿಸುವುದಕ್ಕೆ ಕಾವಲಿ ಬೇಕಷ್ಟೆ. ಅದನ್ನು ತರಲು ಮುಕ್ತಾ ಕುಂಬಾರ ಮನೆಗೆ ನಡೆದಳು. ಇದು ವಿಸೋಬಾ ಚಾಟಿಗೆ ತಿಳಿಯಿತು. ಯಾವ ಕುಂಬಾರನೂ ಮುಕ್ತಾಳಿಗೆ ಕಾವಲಿಯನ್ನು ಕೊಡಬಾರದೆಂದು ಬೆದರಿಕೆ ಹಾಕಿದರು. ಇದರಿಂದ ಮಂಡಿಗೆ ಮಾಡಲು ಬೇಕಾದ ಕಾವಲಿ ಸಿಕ್ಕದೆ ಮುಕ್ತಾ ಅಳುತ್ತಾ ಮನೆಗೆ ಮರಳಿದಳು. ಜ್ಞಾನದೇವರು ತಂಗಿಯನ್ನು ಕರೆದು, “ಮುಕ್ತಾ, ಅಳಬೇಡ, ಕುಂಬಾರರು ಕಾವಲಿ ಕೊಡದಿದ್ದರೇನಾಯಿತು? ದೇವರು ಕೊಟ್ಟ ಈ  ಕಾವಲಿ ಇದ್ದೇ ಇದೆಯಲ್ಲಾ!” ಎನ್ನುತ್ತಾ ತಮ್ಮ ಬೆನ್ನನ್ನು ತೋರಿಸಿದರಂತೆ. ” ಹಿಟ್ಟು ಕಲಸು, ಮಂಡಿಗೆ ತಟ್ಟು” ಎಂದು ತಂಗಿಗೆ ಹೇಳುತ್ತಾ ಅವರು ಯೋಗಬಲದಿಂದ ಜಠರಾಗ್ನಿ (ಹೊಟ್ಟೆಯೊಳಗಿ ಬೆಂಕಿ)ಯನ್ನು ಹೊತ್ತಿಸಿದರಂತೆ. ಮುಕ್ತಾ ಜ್ಞಾನದೇವರ ಬೆನ್ನಮೇಲೆಯೇ ಮಂಡಿಗೆ ಕಾಯಿಸಿದಳು; ಹಬ್ಬ ನಡೆಸಿದಳು.

ವಿಸೋಬ ಚಾಟಿ ಅವರ ಮನೆಗೆ ಬಂದ. ಜ್ಞಾನ ದೇವರ ಹಿರಿಮೆ ಏನೆಂದು ಅವನಿಗೂ ಮನದಟ್ಟಾಯಿತು. ತನ್ನದು ತಪ್ಪಾಯಿತು. ಕ್ಷಮಿಸಬೇಕು ಎಂದು ಜ್ಞಾನದೇವರ‌ನ್ನು ಕೇಳಿಕೊಂಡನು.

“ವಿಸೋಬಾ ಚಾಟಿ, ಮಾಡಿದ ತಪ್ಪನ್ನು ತಿದ್ದಿಕೊಳ್ಳುವುದೇ ಉದ್ಧಾರದ ದಾರಿ. ಮನುಷ್ಯದೇಹವನ್ನು ಯೋಗಬಲದಿಂದ ಬೇಕಾದಂತೆ ಉಪಯೋಗಿಸಿಕೊಳ್ಳಬಹುದು. ಇದನ್ನು ನೀನೂ ಕಂಡೆಯಲ್ಲ! ನಿನಗೂ ಏಳಿಗೆಯ ಮಾರ್ಗ ತೆರೆದಿದೆ” ಎಂದು ಜ್ಞಾನದೇವರು ಅವನನ್ನು ಅನುಗ್ರಹಿಸಿದರು. ಮುಂದೆ ಈ ವಿಸೋಬಾ ಚಾಟಿಯೇ ಬ್ರಹ್ಮಜ್ಞಾನಿಯಾದನು. ಮಹಾಭಕ್ತರೆಂದು ಪ್ರಸಿದ್ಧರಾದ ನಾಮದೇವರ ಗುರುವೆನಿಸಿದನು.

ಆತ್ಮಬಲದಿಂದ ಅಸಾಧ್ಯವಾದುದಾವುದೂ ಇಲ್ಲ. ಮಂಡಿಗೆಯ ಕಥೆಯ ಒಳಗುಟ್ಟು ಇದೇ ಇರಬೇಕು.

ಅಹಮ್ಮದನಗರ ಜಿಲ್ಲೆಯಲ್ಲಿ ಪ್ರವರಾ ನದಿ ಹರಿಯುತ್ತದೆ. ಇದರ ದಂಡೆಯ ಮೇಲೆ ನೇವಾಸ ಎಂಬ ಗ್ರಾಮವಿದೆ. ಇದನ್ನು ’ಪಂಚಕ್ರೋಶಿ ಕ್ಷೇತ್ರ’ ಎಂದೂ ಕರೆಯುತ್ತಾರೆ. ಅಲ್ಲಿಯ ಮಹಾಲಯಾದೇವಿ ಮಂದಿರವು ಒಂದು ಯಾತ್ರಾ ಕೇಂದ್ರ.

ಜ್ಞಾನದೇವರು ತಮ್ಮ ಸೋದರರೊಂದಿಗೆ ನೇವಾಸಕ್ಕೆ ಬಂದಿದ್ದರು. ಇಲ್ಲಿ ಸತ್ತುಹೋಗಿದ್ದ ಸಚ್ಚಿದಾನಂದ ಎಂಬಾತನನ್ನು ಅವರು ಬದುಕಿಸಿದರು ಎಂದು ಭಕ್ತರು ಹೇಳುತ್ತಾರೆ.

‘’ಜ್ಞಾನೇಶ್ವರ ವಿಜಯ’’ ಎಂಬ ಗ್ರಂಥವನ್ನು ಸಚ್ಚಿದಾನಂದ ಕುಲಕರಣಿ ಎಂಬಾತ ಬರೆದಿದ್ದಾನೆ. ಅದರಲ್ಲಿ ಜ್ಞಾನದೇವರ ಮಹಿಮೆಯ ವರ್ಣನೆ ಇದೆ.

ಅಮರಕೃತಿ – ’ಜ್ಞಾನೇಶ್ವರಿ’

ಹೀಗೆ ಜ್ಞಾನದೇವರು ಪವಾಡಪುರುಷರೆಂದೇ ಪ್ರಸಿದ್ಧರಾದರು. ಆದರೆ ಅವರ ಪಾಲಿಗೆ ಪವಾಡಗಳು ಮುಖ್ಯವಾಗಿರಲಿಲ್ಲ. ಶಾಶ್ವತವಾದ ಜ್ಞಾನದ ಕಡೆಗೇ ಅವರ ಗಮನ. ಇದರ ಸಾಧನೆಯಲ್ಲಿ ಭಗವದ್ಗೀತೆಯ ಅಭ್ಯಾಸ, ಚಿಂತನಗಳು ಸಹಕಾರಿ ಎಂದು ಅವರಿಗೆನಿಸಿತು.

ಕುರುಕ್ಷೇತ್ರದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಮಾಡಿದ ಉಪದೇಶವೇ ಭಗವದ್ಗೀತೆ. ಯುದ್ಧಭೂಮಿಯಲ್ಲಿ ಯುದ್ಧಮಾಡಲಾರೆನೆಂದು ಅರ್ಜುನ ಹಿಂಜರಿದ. ಅವನಿಗೆ ಅವನ ಕರ್ತವ್ಯವನ್ನು ತಿಳಿಸಿ ಎಚ್ಚರಸುವುದೇ ಗೀತೆಯು ಉದ್ದೇಶ. ಆದರೂ ಅದರಲ್ಲಿ ಎಲ್ಲರನ್ನೂ ಎಚ್ಚರಿಸುವ ವಿಚಾರಗಳಿವೆ. ಪ್ರತಿಯೊಬ್ಬನೂ ಒಂದಲ್ಲ ಒಂದು ತೆರನಾದ ’ಯುದ್ಧಭೂಮಿ’ಯಲ್ಲೆ ಇದ್ದಾನೆ. ಏನು ಮಾಡಬೇಕೆಂದು  ತಿಳಿಯದೆ, ಅಜ್ಞಾನದಿಂದ ತೊಳಲಾಡುತ್ತಾ ಇರುತ್ತಾನೆ. ಅಂತಹವರಿಗೆ ದಾರಿ ಬೆಳಕಿನಂತಿದೆ ಶ್ರೀಕೃಷ್ಣನ ಗೀತೋಪದೇಶ ಎಂದು ಕಂಡುಕೊಂಡನು.

ಗೀತೆಯಲ್ಲಿ ೧೪ ಅಧ್ಯಾಯಗಳು, ೭೦೦ ಶ್ಲೋಕಗಳು ಇವೆ. ಅವುಗಳನ್ನೆಲ್ಲ ಜ್ಞಾನದೇವರು ಚೆನ್ನಾಗಿ ಅರ್ಥಮಾಡಿಕೊಂಡರು. ಅಲ್ಲಿನ ಪ್ರತಿಯೊಂದು ಮಾತೂ ಅವರ ಮನಸ್ಸಿನಲ್ಲಿ ಮನೆ ಮಾಡಿತ್ತು. ಗೀತೆ ಇರುವುದು ಸಂಸ್ಕೃತ ಭಾಷೆಯಲ್ಲಿ. ಎಲ್ಲರಿಗೂ ಗೀತೆಯ ಗುಟ್ಟು ತಿಳಿಯುವಂತಾದರೆಲ ಎಷ್ಟು ಚೆನ್ನಾಗಿರುತ್ತದೆ ಎಂದು ಅವರು ಯೋಚಿಸಿದರು. ಜನಸಾಮಾನ್ಯರಿಗೂ ತಿಳಿಯುವಂತೆ ಜನಸಾಮಾನ್ಯರ ಭಾಷೆಯಲ್ಲಿ ಗೀತೆಗೊಂದು ವ್ಯಾಖ್ಯಾನ ರಚಿಸಬೇಕೆಂದು ಅವರು ನಿರ್ಧರಿಸಿದರು.

ನೇವಾಸದ ಮಹಾಲಯಾದೇವೀ ಮಂದಿರದಲ್ಲಿ ಜ್ಞಾನದೇವರು ಲೋಕಪ್ರಸಿದ್ಧವಾದ ಈ ಮಹತ್ಕಾರ್ಯವನ್ನು ಮಾಡಿದರು. ಅಲ್ಲೇ ’ಭಾವಾರ್ಥ ದೀಪಿಕಾ’ ಎಂಬ ಹೆಸರಿನ ಗ್ರಂಥ ರಚನೆಯಾಯಿತು. ಇದು ಭಗವದ್ಗೀತೆಯ ಭಾಷ್ಯ (ವಿವರಣೆ); ಮರಾಠಿ ಭಾಷೆಯಲ್ಲಿದೆ. ಇದರಲ್ಲಿ ೯೦೦೦ಕ್ಕೂ ಮಿಕ್ಕಿ ಓವಿಗಳಿವೆ (ಓವಿ ಎಂದರೆ ಮರಾಠಿಯಲ್ಲಿ ಒಂದು ಜಾತಿಯ ಪದ್ಯದ ಹೆಸರು.). ಜ್ಞಾನದೇವರು ರಚಿಸಿದ್ದರಿಂದ ’ಭಾವಾರ್ಥ ದೀಪಿಕೆ’ಗೆ ’ಜ್ಞಾನೇಶ್ವರಿ’ ಎಂಬ ಹೆಸರೇ ಹೆಚ್ಚು ಪ್ರಸಿದ್ಧವಾಯಿತು.

’ಜ್ಞಾನೇಶ್ವರಿ’ ಯಂತಹ ಪುಸ್ತಕ ಇನ್ನೊಂದಿಲ್ಲ ಎಂಬ ಕೀರ್ತಿಯನ್ನು ಅದು ಗಳಿಸಿದೆ. ಜ್ಞಾನದೇವರ ಜ್ಞಾನ-ಭಕ್ತಿ ವಿಚಾರಗಳಿಗೆ ಈ ಗ್ರಂಥವೊಂದು ಕೈಗನ್ನಡಿ; ಅವರ ಕೀರ್ತಿಯನ್ನು ಶಾಶ್ವತಗೊಳಿಸಿದ ಅವರಕೃತಿ.

‘’ಅಮೃತಾನುಭವ’’ ಎಂಬುವುದು ಜ್ಞಾನೇಶ್ವರರ ಇನ್ನೊಂದು ತಾತ್ವಿಕ  ಗ್ರಂಥ. ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈ ಕೃತಿಯಲ್ಲಿ ಹೇಳಿದ್ದಾರೆ.

ಜ್ಞಾನದೇವ – ನಾಮದೇವ – ಗೋರೋಬಾ

ಜ್ಞಾನದೇವರು ಸೋದರ ಸೋದರಿಯರೊಂದಿಗೆ ಹಲವಾರು ಪುಣ್ಯಕ್ಷೇತ್ರಗಳಿಗೆ ಯಾತ್ರೆ ನಡೆಸಿದರು. ಒಮ್ಮೆ ಇವರು ಚಾಕಣ ಎಂಬ ಹೆಸರಿನ ಗ್ರಾಮದ ದಾರಿಯಾಗಿ ಮುಂದುರಿಯಬೇಕಾಗಿತ್ತು. ಆ ಊರಿನಲ್ಲಿ ಮಹೀಪತಿರಾಯಬೇಕಾಗಿತ್ತು. ಆ ಊರಿನಲ್ಲಿ ಮಹೀಪತಿರಾಯನೆಂಬ ಶ್ರೀಮಂತನಿದ್ದನು. ಜ್ಞಾನದೇವರ ಮೇಲೆ ಅವನಿಗೆ ಅಪಾರ ಗೌರವ. ಅವರನ್ನು ಕರೆದು ಸತ್ಕರಿಸಿ, ಧನ್ಯನಾದನು.

ಮಹೀಪತಿರಾಯನ ಮಗಳು ಸೀತಾಬಾಯಿ. ಅವಳಿಗೆ ಕರ್ಹಾಡದ ರಾಮರಾಯನೆಂಬ ಇನಾಂದಾರನೊಂದಿಗೆ ಮದುವೆಯಾಗಿತ್ತು. ಸೀತಾ ಬಾಯಿಗೂ ತಂದೆಯಂತೆಯೇ ಜ್ಞಾನದೇವರೆಂದರೆ ಪೂಜ್ಯಭಾವನೆ. ಆದರೆ ಅವಳ ಗಂಡ ಮಾತ್ರ ಹಾಗಲ್ಲ. ಸಾಧುಸಂತರೆಂದರೆ ಅವನಿಗೆ ಆಗದು.

ಜ್ಞಾನದೇವರ ಅನುಗ್ರಹದಿಂದಲಾದರೂ ತಮ್ಮ ಅಳಿಯನ ಬುದ್ಧಿ ತಿದ್ದೀತು ಎಂದು ಮಹೀಪತಿರಾಯನು ಯೋಚಿಸಿದನು. ಹಾಗಾಗಿ ಜ್ಞಾನದೇವರೊಡನೆ, “ತಾವು ಕರ್ಹಾಡಕ್ಕೆ ಹೋದಾಗ ನನ್ನ ಮಗಳಿಗೂ ದರ್ಶನ ನೀಡಬೇಕು.” ಎಂದು ಪ್ರರ್ಥಿಸಿದನು. ಜ್ಞಾನದೇವರು “ಆಗಲಿ” ಎಂದರು.

ಯಾತ್ರೆ ಪಂಢರಾಪುರಕ್ಕೆ ಸಾಗಿತು. ಅಲ್ಲಿ ನಾಮದೇವರೆಂಬ ಇನ್ನೊಂಬ ಸಂತರಿದ್ದರು. ಜ್ಞಾನದೇವರು ಅವರನ್ನು ಭೇಟಿಯಾದರು. ನಾಮದೇವರನ್ನು ತಮ್ಮ ಜೊತೆಯಲ್ಲಿ ಯಾತ್ರೆಗೆ ಕರೆದೊಯ್ಯಬೇಕೆಂದು ಜ್ಞಾನದೇವರ ಅಪೇಕ್ಷೆಯಾಗಿತ್ತು. ಆದರೆ ಪಂಢರಾಪುರದ ವಿಠ್ಠಲನ ಭಕ್ತರಾದ ನಾಮದೇವರು ವಿಠ್ಠಲನ ಅಪ್ಪಣೆಯಾಗದೆ ಅಲ್ಲಿಂದ ಕದಲಲಾರರು. ಜ್ಞಾನದೇವರು ವಿಠ್ಠಲನನ್ನೇ ಪ್ರಾರ್ಥಿಸಬೇಕಾಯಿತು. ವಿಠ್ಠಲನೇ ಪ್ರತ್ಯಕ್ಷನಾಗಿ ನಾಮದೇವರನ್ನು ಜ್ಞಾನದೇವರಿಗೊಪ್ಪಿಕೊಟ್ಟರೆಂದೂ ಹೇಳುತ್ತಾರೆ. ಅಂತೂ ನಾಮದೇವರು ಜ್ಞಾನದೇವರೊಂದಿಗೆ ಯಾತ್ರೆಯಲ್ಲಿ ಸೇರಿಕೊಂಡರು. ಪ್ರವಾಸದಲ್ಲಿ ಪಾಲುಗೊಂಡಿದ್ದರೂ ನಾಮದೇವರ ಮನಸ್ಸು ಪಂಢರಾಪುರದ ವಿಠ್ಠಲನ ಕಡೆಗೇ ಇತ್ತು.  ಅವರು ಸದಾ ವಿಠ್ಠಲನ ಭಜನೆಯಲ್ಲೆ ತನ್ಮಯರಾಗಿರುತ್ತಿದ್ದರು. ನಾಮದೇವರ ಹಾಡುಗಳನ್ನು ಕೇಳುತ್ತಿದ್ದಂತೆ ಜ್ಞಾನದೇವರು ಆನಂದದಿಂದ ರೋಮಾಂಚನ ಹೊಂದುತ್ತಿದ್ದರು.

ಸಂತರ ತಂಡ ತೇದಗಾಂವ  ಎಂಬಲ್ಲಿಗೆ ಬಂದಿತು. ಅಲ್ಲಿ ’ಭಕ್ತ ಕುಂಬಾರ’ನೆಂದು ಪ್ರಸಿದ್ಧನಾಗಿದ್ದ ಗೋರೋಬಾನ ಭೇಟಿಯಾಯಿತು. ಅವನ ’ಕೊಟ್ಟಗೆ’ಯಲ್ಲಿ ಸಂತರಿಗೆಲ್ಲ ಆದರದ ಸತ್ಕಾರ ದೊರೆಯಿತು. ಮೂವರು ಮಹಾಜ್ಞಾನಿಗಳು ಒಂದು ಕಡೆ ಸೇರಿದಂತಾಗಿತ್ತು.

ಕೆಲವರು ಭಕ್ತರು

ಭಕ್ತವೃಂದ ಕರ್ಹಾಡದತ್ತ ಸಾಗಿತು. ಅಲ್ಲಿನ ಇನಾಂದಾರನಾಗಿದ್ದ ರಾಮರಾಯನು ಯಾವ ಸಂತರೂ ಊರೊಳಕ್ಕೆ ಬಾರದಂತೆ ಕಟ್ಟಳೆ ಮಾಡಿದನು. ಇದರಿಂದ ಜ್ಞಾನದೇವ, ನಾಮದೇವ ಮೊದಲಾದ ಎಲ್ಲ ಸಂತ ಶ್ರೇಷ್ಠರೂ ಊರಿ ಹೊರಗೇ ಇಳಿದುಕೊಳ್ಳಬೇಕಾಯಿತು. ಇವರ ಮಹಿಮೆ ರಾಮರಾಯನಿಗೆ ತಿಳಿಯದು.

ಈ ಸುದ್ದ ತಿಳಿದ ಸೀತಾ ಬಾಯಿ ಬಹಳ ನೊಂದಳು. ಅವನು ತನ್ನ ಒರಟುತನ ಬಿಡಲಿಲ್ಲ. “ನಿನ್ನ ಸಂತರಿಗೆಲ್ಲ ಧಿಕ್ಕಾರ!” ಎಂದು ಸಿಡಿದು ನುಡಿದನು.

ಕಡೆಗೂ ಸೀತಾ ಬಾಯಿ ಉಪಾಯದಿಂದ ಗಂಡ ಒಪ್ಪವುಂತೆ ಮಾಡಿದಳು. ಜ್ಞಾನದೇವರನ್ನು ಕಂಡು ಅವರ ಮಾತುಗಳನ್ನು ಕೇಳಿ ರಾಮರಾಯನೂ ಅವರ ಹಿರಿಮೆಯನ್ನು ಅರ್ಥಮಾಡಿಕೊಂಡನು.

ಉಜ್ಞಯಿನಿಯಲ್ಲಿ ವೀರಮಂಗಲನೆಂಬ  ಜೋಯಿಸನಿದ್ದ. ಅವನು ರಾಮಾನಂದರ ಮಾತಿನಂತೆ ಜ್ಞಾನ ದೇವರ ಆಗಮನವನ್ನು ಎದುರುನೋಡುತ್ತಿದ್ದನು. ಈ ನಿರೀಕ್ಷೆಯಲ್ಲಿ ೭ ವರ್ಷಗಳ ಕಾಲ ಕೇವಲ ಹಾಲು ಮಾತ್ರ ಸೇವಿಸಿ ಬದುಕಿದ್ದನು. ರಾಮಾಯಣದ ಶಬರಿಯ ಭಕ್ತಿಯಂತಿತ್ತು. ಅವನ ಭಕ್ತಿ.

ಜ್ಞಾನದೇವರು ಉಜ್ಞಯಿನಿಗೆ ಬಂದು ವೀರಮಂಗಲನಿಗೆ ದರ್ಶನ ನೀಡಿದರು. ಅವನ ಆನಂದಕ್ಕೆ ಪಾರವಿಲ್ಲ. ಜ್ಞಾನದೇವರ ಪಾದತಲದಲ್ಲಿ ಬಿದ್ದು ’ನಾನು ಧನ್ಯನಾದೆ!’ ಎನ್ನುತ್ತಾ ವೀರಮಂಗಲು ಕೊನೆಯುಸಿರನ್ನೆಳೆದನು. ಅವನು ದೇಹತ್ಯಾಗ ಮಾಡಿದ ಸ್ಥಳದಲ್ಲಿ ಜ್ಞಾದೇವರು ಶಿವಲಿಂಗ ಸ್ಥಾಪನೆ ಮಾಡಿದರು. ಆ ಶಿವಲಿಂಗವು ಈಗಲೂ ಉಜ್ಜಯಿನಿಯ ಹೊರಭಾಗದಲ್ಲಿ ಸಾಂದೀಪನರ ಆಶ್ರಮದ ಬಳಿ ಇದೆ.

ಕಾಶಿಯಲ್ಲಿ ಅಗ್ರಪೂಜೆ

ವಯಸ್ಸಿನಿಂದಲೂ ಆಕೃತಿಯಿಂದಲೂ ಜ್ಞಾನ ದೇವರು ಸಣ್ಣವರೇ ಆಗಿದ್ದರು. ಆದರೆ ಅವರ ಕೃತಿ, ಕೀರ್ತಿಗಳಿಂದಾಗಿ ಹೋದಲ್ಲೆಲ್ಲ ಎಲ್ಲರೂ ಅವರನ್ನು ವಂದಿಸುವವರೇ. ಪ್ರಯಾಗ ಯಾತ್ರೆ ಮುಗಿಸಿಕೊಂಡು ಜ್ಞಾನದೇವರು ಕಾಶಿಗೆ ತೆರಳಿದ್ದರು. ಅಲ್ಲಿ ಮಣಿಕರ್ಣಿಕಾ ಘಾಟಿನಲ್ಲಿ ಮುದ್ಗಲಾಚಾರ್ಯರೆಂಬುವರು ಯಜ್ಞವೊಂದನ್ನು ನಡೆಸುತ್ತಿದ್ದರು. ಯಜ್ಞಮಂಟಪದಲ್ಲಿ ಬಹುಮಂದಿ ವಿದ್ವಾಂಸರು ಸೇರಿದ್ದರು. ಅವರಲ್ಲಿ ಯಾರಿಗೆ ಅಗ್ರಪೂಜೆ) ಮುಖ್ಯ ಸ್ಥಾನ) ಎಂದು ನಿರ್ಣಯಿಸುವುದು ಸುಲಭವಾಗಿರಲಿಲ್ಲ. ಆಚಾರ್ಯರು ಅದಕ್ಕಾಗಿ ಒಂದು ಉಪಾಯ ಹೂಡಿದರಂತೆ. ಆನೆಯ ಸೊಂಡಿಲಲ್ಲಿ ಹೂಮಾಲೆಯನ್ನು ಕೊಟ್ಟರು. ಅದು ಯಾರ ಕೊರಳಿಗೆ ಹೂಮಾಲೆಯನ್ನು ತೊಡಿಸು‌‌ವುದೋ ಅವರಿಗೆ ಅಗ್ರಪೂಜೆ ಎಂದು ಸಾರಿದರು.

 

ವಯಸ್ಸಿನಲ್ಲಿ ಕಿರಿಯರಾಗಿದ್ದ ಜ್ಞಾನದೇವರಿಗೆ ಅಗ್ರಪೂಜೆ ಸಂದಿತು.

ಆನೆಯು ನೇರವಾಗಿ ಬಂದು ಜ್ಞಾನದೇವರ ಕೊರಳಿಗೇ ಹೂಮಾಲೆ ತೊಡಿಸಿತು. ಒಡನೆ ಅವರಿಗೆ ವಿಶೇಷವಾದ ಗೌರವ, ಸತ್ಕಾರ ದೊರೆಯಿತು. ಅಲ್ಲೇ ಮತ್ಸ್ಯೇಂದ್ರನಾಥ, ಗೋರಕ್ಷನಾಥರ ಸಂದರ್ಶನವೂ ಅವರಿಗೆ ಲಭಿಸಿತು.

ಹೀಗೆ ಹೋದಲ್ಲೆಲ್ಲ ತಮ್ಮ ಅರ್ಹತೆಯಿಂದಾಗಿ ಹಿರಿಮೆಯನ್ನು ಸ್ಥಾಪಿಸುತ್ತಾ ಜ್ಞಾನದೇವರು ತಮ್ಮ ಬಳಗದೊಂದಿಗೆ ಪಂಢರಾಪುರಕ್ಕೆ ಮರಳಿದರು. ಅಲ್ಲಿ ಕೆಲವು ದಿನಗಳಿದ್ದು, ಆಳಂದಿಗೆ ಬಂದರು.

’ಚಾಂಗದೇವ ಪಾಸಷ್ಟಿ’

ತಾಪೀ ನದೀ ತೀರದ ಆಶ್ರಮದಲ್ಲಿ ಯೋಗಿಯೊಬ್ಬನಿದ್ದನು. ಚಾಗದೇವನೆಂದು ಅವನ ಹೆಸರು. ಯೋಗಬಲದಿಂದ ತನ್ನ ಮರಣವನ್ನೆ ತಡೆಹಿಡಿದಿದ್ದನು ಎಂಬ ಕೀರ್ತಿ ಅವನಿಗಿತ್ತು. ಆಗ ಅವನಿಗೆ ೧೪೦೦ ವರ್ಷ ವಯಸ್ಸಾಗಿತ್ತೆಂದೂ ಜನರು ನಂಬಿದ್ದರು.

ಇಷ್ಟಿದ್ದರೂ ಚಾಂಗದೇವನಲ್ಲಿ ಪ್ರೇಮಭಾವನೆಗಿಂತಲೂ ಹೆಚ್ಚು ಅಹಂಭಾವವೇ ತುಂಬಿತ್ತು. ತನ್ನ ಯೋಗಬಲದಿಂದ ಎಲ್ಲವನ್ನೂ ಸಾಧಿಸಬಲ್ಲೆ ಎಂಬ ದರ್ಪ ಅವನಿಗಿತ್ತು. ಜ್ಞಾನದೇವರ ಹಿರಿಮೆಯನ್ನು ಚಾಂಗದೇವ ಕೇಳಿತಿಳಿದಿದ್ದ. ಅವರನ್ನೊಮ್ಮೆ ತನ್ನಲ್ಲಿಗೆ ಬರಮಾಡಿಸಬೇಕು. ತನ್ನ ಯೋಗಶಕ್ತಿಯನ್ನು ಅವರ ಮುಂದೆ ಪ್ರದರ್ಶಿಸಬೇಕು ಎಂದು ಇವನಿಗೆನ್ನಿಸಿತು.

ಅದಕ್ಕಾಗಿ ಜ್ಞಾನದೇವರಿಗೆ ಒಂದು ಪತ್ರ ಬರೆಯುವುದೆಂದು ಚಾಂಗದೇವ ನಿರ್ಧರಿಸಿದನು. ಆದರೆ ಪತ್ರವನ್ನು ಹೇಗೆ ಪ್ರಾರಂಭಿಸುವುದೆಂದೇ ಅವನಿಗೆ ಗೊತ್ತಾಗಲಿಲ್ಲ. ಜ್ಞಾನದೇವರನ್ನು ಚಿರಂಜೀವಿ ಎಂದು ಕರೆಯುವುದೇ? ತೀರ್ಥರೂಪ ಎನ್ನಲು, ಸ್ವಾಭಿಮಾನಿಯಾಗಿದ್ದ ಚಾಂಗದೇವನ ಮನಸ್ಸು ಒಪ್ಪದು. ಹಾಗಾಗಿ ಏನನ್ನೂ ಬರೆಯದೆ, ಬರಿಯ ಕಾಗದವನ್ನೆ ಶಿಷ್ಯರ ಮೂಲಕ ಜ್ಞಾನದೇವರಿದ್ದಲ್ಲಿಗೆ ಕಳುಹಿಸಿಕೊಟ್ಟನಂತೆ.

ಶಿಷ್ಯರು ಆ ಪತ್ರದೊಂದಿಗೆ ಆಳಂದಿಗೆ ಬಂದರು. ಅವರು ತಿಳಿಸುವುದಕ್ಕಿಂತ ಮೊದಲಾಗಿಯೇ ಜ್ಞಾನದೇವರು ಚಾಂಗದೇವನ ಎಲ್ಲ ವಿಚಾರಗಳನ್ನೂ ತಿಳಿದಿದ್ದರು. ಶಿಷ್ಯರು ಏನನ್ನೂ ಹೇಳುವ ಮೊದಲೇ, “ಚಾಂಗದೇವರು ನಮ್ಮ ಕಡೆಗೆ ಏನನ್ನೂ ಬರೆಯದಿರುವ ಕಾಗದವನ್ನು ಕಳುಹಿಸಿರುವರಲ್ಲವೇ? ಎಲ್ಲಿ ನೋಡೋಣ?”  ಎಂದರಂತೆ. ಈ ಮಾತುಗಳನ್ನು ಕೇಳುತ್ತಿದ್ದಂತೆ ಚಾಂಗದೇವನ ಶಿಷ್ಯರಿಗೆ ಆಶ್ಚರ್ಯವಾಯಿತು. ಬರೆಯದ ಕಾಗದವನ್ನೆ ಅವರ ಕೈಗೆ ಕೊಟ್ಟರು. ಚಾಂಗದೇವನ ಖಾಲಿ ಕಾಗದವನ್ನು ಕಂಡು, ಅಲ್ಲೇ ಇದ್ದ  ಮುಕ್ತಾಬಾಯಿ, “ಏನು? ೧೪೦೦ ವರ್ಷ ತಪಸ್ಸು ಮಾಡಿದರೂ ಇನ್ನೂ ಖಾಲಿ ಕಾಗದವೇ ಉಳಿದಿರುವುದಲ್ಲ!” ಎಂದು ನಕ್ಕಳಂತೆ.

ಚಾಂಗದೇವನ ಅಹಂಕಾರ ಕರಗುವಂತೆ ಅವನಿಗೊಂದು ಪತ್ರ ಬರೆಯುವಂತೆ ಜ್ಞಾನದೇವರಿಗೆ ನಿವೃತ್ತಿನಾಥರು ಸೂಚಿಸಿದರು. ಅಣ್ಣನ ಆಜ್ಞೆಯಂತೆ ಜ್ಞಾನದೇವರು ಅರವತ್ತೈದು ಓವಿ (ಪದ್ಯ) ಗಳುಳ್ಳ ಒಂದು ಕಾಗದವನ್ನು ಚಾಂಗದೇವನಿಗೆ ಬರೆದರು. ಈ ಪತ್ರವು ’ಚಾಂಗದೇವ ಪಾಸಷ್ಟಿ’ (ಪಾಸಷ್ಟಿ ಎಂದರೆ ೬೫) ಎಂದು ಹೆಸರು ಪಡೆದಿದೆ. ಪಾಸಷ್ಟಿಗಳಲ್ಲಿ ಎರಡನ್ನು ಇಲ್ಲಿ ಕೊಟ್ಟಿದೆ.

“ಹತ್ತಿಯಿಂದ ನೂತ ನೂಲಿನಿಂದ ಆದ ಸೀರೆಯಲ್ಲಿ ನೂಲಿನ ಅಡ್ಡ ಉದ್ದ ಎಳೆಗಳೇ ಇರುವುವು. ಸೀರೆಯೆಂಬ ಹೆಸರು ಮಾತ್ರ ಬೇರೆ. ಎಲ್ಲವೂ ಹತ್ತಿಯ ನೂಲೇ ನೂಲು! ಅದರಂತೆ ದೃಷ್ಟ (ಕಾಣುವ), ದೃಶ್ಯ (ಕಾಣಲ್ಯಡುವ)ಗಳ ರೂಪದಿಂದ ಜ್ಞಾನರೂಪವಾದ ಆತ್ಮಸ್ವರೂಪವು ಒಂದೇ ಇರುವುದು!”

“ಈ ಜಗತ್ತಿನಲ್ಲಿ ವಿವಿಧ ರೂಪ, ಆಕೃತಿಗಳು ಇರುವುದೇನೋ ನಿಜ. ಅವುಗಳಿಗೆ ಬೇರೆಬೇರೆ ಹೆಸರುಗಳಿದ್ದರೂ ಅವುಗಳಲ್ಲೆಲ್ಲಾ ಒಂದೇ ಆತ್ಮವು ತುಂಬಿದೆ. ಹೀಗಿದ್ದೂ ನಾನು ನೀನು ಎಂಬ ಭೇದ, ಅಹಂಕಾರಗಳಿಗೆ ಅರ್ಥವೇ ಇಲ್ಲ.”

ಇದು ಜ್ಞಾನದೇವರ ಉಪದೇಶದ ಸಾರಸಂಗ್ರಹ.

’ಆತ್ಮ ಜ್ಞಾದ ದಾರಿ ಇದು -’

ಜ್ಞಾನದೇವ – ಚಾಂಗದೇವರ ಭೇಟಿಯನ್ನು ಕುರಿತು ಭಕ್ತರು ಒಂದು  ಸ್ವಾರಸ್ಯವಾದ ಕಥೆಯನ್ನು ಹೇಳುತ್ತಾರೆ.

ಪಾಸಸ್ಟಿಯನ್ನು ಓದಿದರೂ ಚಾಂಗದೇವನ ಅಹಂಕಾರವು ಪೂರ್ಣ ಕರಗಲಿಲ್ಲ. ತನ್ನ ಯೋಗಬಲದಿಂದ ಜ್ಞಾನದೇವರನ್ನು ಬೆಚ್ಚಿಸಬೇಕೆಂಬ ಬಯಕೆ ಬಿಡಲಿಲ್ಲ.

ಚಾಂಗದೇವನು ಯೋಗಬಲದಿಂದ ಹೆಬ್ಬುಲಿಯನ್ನೇರಿ ಜ್ಞಾನದೇವರಿದ್ದಲ್ಲಿಗೆ ಹೊರಟನಂತೆ. ಸರ್ಪವನ್ನೇ ಬಾರುಕೋಲಾಗಿ ಮಾಡಿಕೊಂಡನಂತ. ಸಾಮಾನ್ಯರು ದೂರದಿಂದಲೇ ಕಂಡು ಬೆದರಬೇಕಾದ ನೋಟ ಚಾಂಗದೇವನದು.

ಜ್ಞಾನದೇವರು ತಮ್ಮ ಒಡಹುಟ್ಟಿದವರೊಂದಿಗೆ ಮಾತನಾಡುತ್ತಾ ಮನೆಯ ಗೋಡೆಯ ಮೇಲೆ ಕುಳಿತಿದ್ದರಂತೆ. ದೂರದಿಂದ ಚಾಂಗದೇವರು ಬರುವುದು ಅವರಿಗೆ ಕಾಣಿಸಿತು. ’ಎಂತಹ ಹುಚ್ಚು ಸಾಹಸ! ಎಂತಹ ದರ್ಪ ಪ್ರದರ್ಶನ’ ಎನ್ನಿಸಿತು ಜ್ಞಾನದೇವರಿಗೆ. ಚಾಂಗದೇವನಿಗೆ ಬುದ್ಧಿ ಕಲಿಸಲು ತಕ್ಕ ಉಪಾಯ ಹೂಡಿದರು. ಅವರು ತಮ್ಮ ಆತ್ಮಬಲದಿಂದ ಕುಳಿಗಿದ್ದ ಗೋಡೆಯೇ ಚಲಿಸುವಂತೆ ಮಾಡಿದರಂತೆ.

ಚಾಂಗದೇವನಿಗೆ ಜ್ಞಾದೇವರು ತನಗಿಂತ ಮಹಿಮರು ಎಂದು ಗೊತ್ತಾಯಿತು. ಆತ್ಮಜ್ಞಾನದ ಮುಂದೆ ಯೋಗದ ಹಠ ಪ್ರದರ್ಶನವು ಅಲ್ಪ ಎನ್ನಿಸಿತು. ಅವನ ಅಹಂಕಾರವು ಕರಗತೊಡಗಿತು. ಹೃದಯವು ಪ್ರೇಮಮಯವಾಗತೊಡಗಿತು. ಹುಲಿಯ, ಬೆನ್ನಿನಿಂದ ತಾನೇ ಉರುಳಿ, ಜ್ಞಾನದೇವರ ಕಾಲಿನ ಮೇಲೆ ಬಿದ್ದನು. ಅವನನ್ನು ಪ್ರೀತಿಯಿಂದ ಜ್ಞಾನದೇವರು ಮಾತನಾಡಿಸಿದರು.

“ಚಾಂಗದೇವ, ಯೋಗ-ಯಾಗ ವಿಧಿಯಿಂದ ಆತ್ಮಜ್ಞಾನ ಲಭಿಸದು. ಅವೆಲ್ಲ ಡಂಭಾಚಾರಗಳು. ಅಜ್ಞಾನಿಗಳನ್ನು ಮರುಳು ಮಾಡುವ ಸಾಧನಗಳು: ಶುದ್ಧ ಪ್ರೇಮಭಾವದಿಂದ, ಗುರುಕೃಪೆಯಿಂದ ಮಾತ್ರ ಜ್ಞಾನೋದಯವಾಗುವುದು.”

ಚಾಂಗದೇವರು ಮುಂದೆ ಜ್ಞಾನದೇವರ ಬಳಿಯೇ ಇರುವುದಾಗಿ ನಿರ್ಧರಿಸಿದನು. ಮುಕ್ತಬಾಯಿಯೇ ಅವನ ಗುರುವೆನಿಸಿದಳು.

ಸಮಾಧಿ

ಜ್ಞಾನದೇವರು ತಮ್ಮ ಕೊನೆಯ ದಿನಗಳನ್ನು ಆಳಂದಿಯಲ್ಲಿ ಕಳೆದರು.

೧೨೯೬ ಕಾರ್ತಿಕ ಬಹುಳ ತ್ರಯೋದಶಿ ಗುರುವಾರ ಮಧ್ಯಾಹ್ನದ ಸಮಯ. ಜ್ಞಾನದೇವರು ದೇಹತ್ಯಾಗಕ್ಕೆ ಸಿದ್ಧರಾದರು. ಪಂಢರಾಪುರದ ವಿಠ್ಠಲ ಮತ್ತು ಸಂತರನ್ನೆಲ್ಲ ಸ್ಮರಿಸಿದರು. ತಮ್ಮ ಒಳಗಣ್ಣಿನಿಂದ ಅವರೆಲ್ಲರ ದರ್ಶನ ಹೊಂದುತ್ತಾ ಜ್ಞಾನದೇವರು ಸಮಾಧಿ ಹೊಂದಿದರು.

ಜ್ಞಾನದೇವರು ಸಮಾಧಿ ಪ್ರವೇಶ ಮಾಡಿದ್ದನ್ನು ಕಣ್ಣಾರೆ ಕಂಡಿದ್ದ ನಾಮದೇವರು ಹೀಗೆ ವರ್ಣಿಸಿದ್ದಾರೆ. “ಜ್ಞಾನದೇವರು ಜೀವನ್ಮುಕ್ತರು…… ಅವರು ಸಮಾಧಿ ಪ್ರವೇಶಿಸಿ ಆಸನವನ್ನು ಸ್ವೀಕರಿಸಿದರು. ’ಜ್ಞಾನೇಶ್ವರಿ’ಯನ್ನು ತಮ್ಮ ಮುಂದಿರಿಸಿಕೊಂಡರು. ಮೂರು ಬಾರಿ ಕೈ ಜೋಡಿಸಿ ನಮಸ್ಕರಿಸಿದರು. ಕಣ್ಣುಗಳನ್ನು ಮುಚ್ಚಿದರು.”

ಒಂದೆರಡು ವರ್ಷಗಳ ಅಂತರದಲ್ಲಿ ನಿವೃತ್ತಿನಾಥ, ಸೋಪಾನದೇವ, ಮುಕ್ತಾಬಾಯಿ ಎಲ್ಲರೂ ದಿವಂಗತರಾದರು.

ಆರದ ಬೆಳಕು

ಬೆಂಕಿಯಲ್ಲಿ ಹಾಕಿ ಕಾಯಿಸಿದಷ್ಟೂ ಬಂಗಾರವು ಹೆಚ್ಚುಹೆಚ್ಚು ಬೆಳಗುವುದಲ್ಲವೆ! ಗಂಧದ ಕೊರಡನ್ನು ತೇಯ್ದಷ್ಟೂ ಅದರಿಂದ ಇನ್ನಷ್ಟು ಸುವಾಸನೆ ಹೊರಹೊಮ್ಮುವುದಲ್ಲವೆ! ಹಾಗೆಯೇ, ಜ್ಞಾನದೇವರು ಬದುಕಿನ ಬೆಂಕಿಯಲ್ಲಿ ಪುತ್ಥಳಿಯಾದರು, ಕಷ್ಟಗಳ ಕಲ್ಲಿನಲ್ಲಿ ತಕ್ಕಿಕೊಂಡರೂ ಕೀರ್ತಿಸುಗಂಧವನ್ನು ಹೊರಸೂಸಿದರು.

ಜ್ಞಾನದೇವರ ಜೀವನ ಚರಿತ್ರೆಯಲ್ಲಿ ತುಂಬಿಕೊಂಡಿರುವ ಪವಾಡಗಳನ್ನು ಮರೆತರೂ ಅವರ ಹಿರಿಮೆಗೆ ಕುಂದಿಲ್ಲ.

ಜಗತ್ತನ್ನು ಬಿಟ್ಟಾಗ ಅವರಿಗೆ ಇಪ್ಪತ್ತೊಂದು ವರ್ಷ. ಈ ವಯಸ್ಸಿನಲ್ಲಿ ಬಹುಮಂದಿ ಇನ್ನೂ ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಒಳ್ಳೆಯ ಪದವಿ ಸಂಪಾದಿಸಬೇಕು. ಹಣ ಸಂಪಾದಿಸಬೇಕು, ಅಧಿಕಾರ ಸಂಪಾದಿಸಬೇಕು, ಸುಖ ಪಡಬೇಕು ಎಂದು ಕನಸು ಕಾಣುತ್ತಿರುತ್ತಾರೆ. ಚಿಕ್ಕಂದಿನಲ್ಲೆ ತುಂಬಾ ದುಃಖದ ಸನ್ನಿವೇಶದಲ್ಲಿ ಜ್ಞಾನದೇವರು ತಂದೆತಾಯಿಯನ್ನೂ ಅಜ್ಜನನ್ನೂ ಕಳೆದುಕೊಂಡರು.ಮೂಢನಂಬಿಕೆಗೆ ಸಿಕ್ಕಿದ್ದ ಸಮಾಜ ಅವರಿಗೆ ಕಷ್ಟವನ್ನೇ ಕೊಟ್ಟಿತು. ಜ್ಞಾನ ದೇವರದು ಸ್ವಯಂಪ್ರಕಾಶ. ಎಲ್ಲ ಆಸೆಗಳನ್ನೂ ಗೆದ್ದರು; ಗೀತೆಯಂತಹ ಮಹಾಗ್ರಂಥವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ಇತರರಿಗೂ ಅವರವರ ಭಾಷೆಯಲ್ಲೆ ತಿಳಿಸಿಕೊಟ್ಟರು; ಬಾಲ್ಯದಿಂದ ಬರಿಯ ಶಾಸ್ತ್ರಜ್ಞಾನ ಸಂಪ್ರದಾಯ ಇವು ಮುಖ್ಯವಲ್ಲ ಎಂದು ವಾದಿಸಿದರು; ಅಹಂಕಾರವನ್ನು ಗೆದ್ದು ಎಲ್ಲ ಜೀವಿಗಳನ್ನೂ ಮಮತೆಯಿಂದ; ಗೌರವದಿಂದ ಕಾಣುವುದನ್ನೂ ಕಲಿಸಿಕೊಟ್ಟರು. ಅವರು ಭಾಗವತ ಧರ್ಮಕ್ಕೆ ಬುನಾದಿ ಹಾಕಿದವರು. ಅನುಭವಾಮೃತ, ಚಾಂಗದೇವರ ಪಾಸಷ್ಟಿ, ಗಾಢಾ (ಅಭಂಗಗಳೆಂಬ ಭಕ್ತಿಗೀತೆಗಳು) ಗಳು ಅವರ ರಚನೆಗಳಾಗಿದ್ದು ಜ್ಞಾನದೇವರ ಹೆಸರನ್ನು ಅನ್ವರ್ಥಗೊಳಿಸಿವೆ.  ಅವರ ಅದ್ಭುತ ಕೃತಿಯಾದ ’ಬಾವಾರ್ಥ ದೀಪಿಕೆ’ ಯಂತೂ ’ಜ್ಞಾನೇಶ್ವರಿ ’ ಎಂಬ ಹೆಸರಿನಿಂದ ಅವರ ನೆನಪನ್ನು ಚಿರಂಜೀವಿಗೊಳಿಸಿದೆ.

ಅವರ ಸ್ಮರಣೆ ನಮಗೂ ದಾರಿ ತೋರುವಂತಾಗಲಿ.