ಜ್ಞಾನಶಾಸ್ತ್ರವು ಜ್ಞಾನದ ಬಗೆಗಿನ ವಿಸ್ತೃತ ಚರ್ಚೆಯಲ್ಲಿ ಒಳಗೊಂಡಿದೆ. ಜ್ಞಾನದ ವಿವಿಧ ಪ್ರಕಾರಗಳು ಹಾಗೂ ವಿಶ್ಲೇಷಣೆಗಳಿಗೆ ಇಲ್ಲಿ ಪ್ರಾಶಸ್ತ್ಯ ನೀಡಲಾಗಿ. ಜ್ಞಾನದ ಹೇಳಿಕೆಗೆ ಸಮರ್ಥನೆ ಒದಗಿಸುವುದು ಈ ಶಾಸ್ತ್ರದ ಬಹುಮುಖ್ಯ ಉದ್ದೇಶವಾಗಿದೆ. ಇಂಗ್ಲಿಷಿನ ಎಪಿಸ್ಟೇಮೋಲಜಿ ಎಂಬ ಪದದ ಪರ‍್ಯಾಯವಾಚಕವಾಗಿ ಬಳಸಲ್ಪಡುವ ಈ ಶಾಸ್ತ್ರ ಗ್ರೀಕ್‌ನ ಎಪಿಸ್ಟೆಮ್ (ತಿಳಿವು) ಮತ್ತು ಲೋಗೋಸ್ (ಶಬ್ದ) ಎಂಬ ಶಬ್ದಗಳಿಂದ ರಚಿತವಾಗಿದೆ. ತಿಳಿವಿನ ಮೂಲ ಮತ್ತು ವ್ಯಾಪ್ತಿಯ ಬಗ್ಗೆ, ಹೆಚ್ಚು ವಿಶ್ಲೇಷಣಾತ್ಮಕವಾಗಿ ಮತ್ತು ವಿರಣಾತ್ಮಕವಾಗಿ ಇಲ್ಲಿ ಚರ್ಚಿಶಲಾಗಿದೆ. ಜ್ಞಾನ ಉಂಟಾಗಲು ಕಾರಣವಾದ ಸತ್ಯ ಮತ್ತು ನಂಬುಗೆಗಳ ಸಂಬಂಧದ ಬಗೆಗೆ ಈ ಶಾಸ್ತ್ರ ಹೆಚ್ಚು ಚಿಂತನೆ ಮಾಡುತ್ತದೆ.  ತತ್ವಶಾಸ್ತ್ರದ ಭಾಗವಾಗಿಯೇ ವಿವರಿಸಲ್ಪಡುವ ಈ ಶಾಸ್ತ್ರ ಐತಿಹಾಸಿಕವಾಗಿ ಸಂಶೋಧನೆಗೆ ಒಟ್‌ಟ ಹಾಗೂ ಹೆಚ್ಚು ವಾದಗ್ರಸ್ತ ಎನಿಸಿದೆ. ಆದರೆ ಇತ್ತೀಚಿನ ಅಧ್ಯಯನಗಳು ಹಳೆಯ ಬಹುತರ ಪರಿಕಲ್ಪನೆಗಳನ್ನು ಪರಿಷ್ಕರಿಸಿ, ಸದಾ ಚೈತನ್ಯಶೀಲತೆ ಹಾಗೂ ಸಮಕಾಲೀನತೆಯನ್ನು ಈ ಶಾಸ್ತ್ರಕ್ಕೆ ಒದಗಿಸಿವೆ.

ಜ್ಞಾನದ ಬಗೆಗಿನ ವೈಧಾನಿಕತೆಯನ್ನು ನಿರೂಪಿಸುವ ಈ ಶಾಸ್ತ್ರ ‘ನಾವು ಹೇಗೆ ತಿಳಿಯುವುದು’ ಎಂಬ ಪ್ರಶ್ನೆಗೆ ಉತ್ತರಿಸುತ್ತ ಹೋಗುತ್ತದೆ. ನಮ್ಮ ವಿಚಾರ ವಿಧಾನದ ಅಥವಾ ಕಾರ್ಯವೈಖರಿಯ ಕುರಿತು ಬಹು ಅಂಶಗಳ ಮೂಲಕ ಚಿಂತನೆ ನಡೆಸುತ್ತದೆ. ಪರಿಕಲ್ಪನೆಗಳ ಸ್ವರೂಪ, ಪರಿಕಲ್ಪನೆಗಳ ರಚನಾಕ್ರಮ, ಇಂದ್ರಿಯಜನ್ಯ ಜ್ಞಾನದ ನೈಜತೆ, ತರ್ಕಬದ್ಧ ವಿಚಾರಸರಣಿ, ಭಾವನೆಗಳು, ನೆನಪುಗಳು ಹೀಗೆ ಇವೇ ಮೊದಲಾದ ಅಂಶಗಳನ್ನು ಇದು ಒಳಗೊಳ್ಳುತ್ತದೆ. ಅಸತ್ಯದಿಂದ ಸತ್ಯವನ್ನು ಬೇರ್ಪಡಿಸಲು,  ಶೋಧಿಸಲು ಇದು ಸರಿಯಾದ ಮಾಪಕವನ್ನು ಒದಗಿಸುವುದು. ಜ್ಞಾನದ ಸಹಾಯವಿಲ್ಲದೆ, ನಾವು ವಿಚಾರಗಳನ್ನು ತಿಳಿದುಕೊಳ್ಳಲಾಗುವುದಿಲ್ಲ. ಹಾಗಾಗಿ ನಮ್ಮ ವಿಚಾರಧಾರೆಯ ಮೌಲ್ಯವನ್ನು ನಿರ್ಧರಿಸಲು, ಜಗತ್ತಿನ ಜ್ಞಾನವನ್ನು ಅರ್ಜಿಸಿ, ಅದನ್ನು ಬಳಸಲು ಜ್ಞಾನಶಾಸ್ತ್ರ ತುಂಬ ಮಹತ್ವಪೂರ್ಣವಾಗಿದೆ. ಜ್ಞಾನವು ಎಷ್ಟು ಮಟ್ಟಿನ ಪ್ರಮಾಣದಲ್ಲಿರುತ್ತದೆಯೋ ಅಷ್ಟು ಪ್ರಮಾಣದಲ್ಲಿ ಜಗತ್ತಿನ ತಿಳಿವು ಇರುತ್ತದೆ. ಅದೇ ಪ್ರಮಾಣದಲ್ಲಿ ಸಾಧನೆಯು ಇರುತ್ತದೆ.

ಸತ್ಯದ ಶೋಧನೆ ಜ್ಞಾನಶಾಸ್ತ್ರದ ಗುರಿ. ತಿಳಿವಳಿಕೆಗೆ ಸತ್ಯದ ಆಧಾರ ಬೇಕು. ಸತ್ಯ ತನ್ನನ್ನು ತೋರ್ಪಡಿಸಿಕೊಳ್ಳುವಲ್ಲಿ ವಾಸ್ತವಿಕತೆಯರೂಪ ತಳೆಯುತ್ತದೆ. ಸತ್ಯದ ಸಾಕ್ಷಾತ್ಕಾರವಾಗಿ ಸತ್ಯದ ಅಸ್ತಿತ್ವದ ಗೋಚರವಾಗುವಿಕೆ ಸತ್ಯತ್ವ ಎನಿಸಿಕೊಳ್ಳುತ್ತದೆ. ಒಂದು ವಾದದ ಪ್ರಕಾರ ಸತ್ಯತ್ವವು ವಿವಿಧ ವಿಷಯಗಳ ಮೇಲಿನ ವಿಚಾರಧಾರೆಗಳ ಸಮುಚ್ಚಯ. ಸತ್ಯತ್ವ ಎಂದರೆ ವಿವಿಧ ವಿಚಾರಧಾರೆಗಳ ಮೇಲಿನ ಅಭಿಪ್ರಾಯ. ಈ ಸತ್ಯತ್ವ ಅಥವಾ ವಾಸ್ತವಿಕತೆಯ ಸ್ವರೂಪವನ್ನು ಎರಡು ರೀತಿಯಲ್ಲಿ ತಿಳಿಯಬಹುದಾಗಿದೆ. ಮೊದಲನೆಯದಾಗಿ ಪ್ರತಿಯೊಂದು ವಿಚಾರಧಾರೆಯ ಹೇಳಿಕೆ ಸರಿ ಅಥವಾ ತಪ್ಪು ಎಂಬುದಾಗಿ ವಿಂಗಡಿಸುವುದು. ಎರಡನೆಯದಾಗಿ ಯಾವುದಾದರೂ ಹೇಳಿಕೆ ಸರಿ ಅಥವಾ ತಪ್ಪು ಎಂಬ ಅಭಿಪ್ರಾಯ ನಮ್ಮ ತಿಳಿವಳಿಕೆಯ ಮೇಲೆ ಅವಲಂಬಿತವಾಗಿಲ್ಲ ಎಂದು ಮನಗಾಣುವುದು.

ನಮ್ಮ ಇಂದ್ರಿಯಗಳು ಜಗತ್ತಿನ ಜ್ಞಾನವನ್ನು ಗಳಿಸಲು ಸಮರ್ಥವಾದವುಗಳು. ಕಾರಣ (ಹೇತುವು) ಈ ಜ್ಞಾನದ ತಿಳಿವಳಿಕೆಯನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗಿರುತ್ತದೆ. ತರ್ಕವು ನಮ್ಮ ಜ್ಞಾನದ ಪರಿಧಿಯಲ್ಲಿನ ನಿರಂತರತೆಯನ್ನು, ಸುಸಂಗತಿಯನ್ನು ಕಾಪಾಡುವ ಸಾಧನ. ಸುಸಂಗತಿಯು ಜ್ಞಾನವನ್ನು ‘ಸತ್ಯ’ದ ಜೊತೆಗಿನ ಸಂಬಂಧವನ್ನು ಅರ್ಥೈಸಲು ಹಾಗೂ ನಿರ್ಣಯಿಸಲು ಸಹಕಾರಿಯಾಗಿದೆ. ಪರಿಕಲ್ಪನೆಗಳು ಈ ಸತ್ಯದ ವಿಶಿಷ್ಟ ವಿವರಣೆಗಳ ಸಂಸ್ಕರಿತ ರೂಪವಾಗಿದೆ. ಹಾಗಾಗಿಯೇ ತರ್ಕಬದ್ಧ ಜ್ಞಾನಶಾಸ್ತ್ರವೇ ಉತ್ತಮ ಜ್ಞಾನಶಾಸ್ತ್ರವೆನಿಸಿದೆ. ಜ್ಞಾನಶಾಸ್ತ್ರದ ಬೇರೆ ಬೇರೆ ಅಂಶಗಳು ಯಾವ ರೀತಿಯಲ್ಲಿ ಜ್ಞಾನದ ಉತ್ಪತ್ತಿಗೆ ಕಾರಣಗಳಾಗುತ್ತವೆ ಎಂಬುದನ್ನು ಇಲ್ಲಿ ನಿರೂಪಿಸಲಾಗಿದೆ.

ನೆನಪು, ಸ್ಮೃತಿ

ಸ್ಮೃತಿ ಅಥವಾ ನೆನಪು ಇದು ನಂಬಿಕೆಗಳಿಗೆ ಒಂದು ಉಗ್ರಾಣದಂತೆ ಕೆಲಸ ಮಾಡುತ್ತದೆ. ನೆನಪಿನ ಶಕ್ತಿಯ ಮೇಲೆ ನಂಬಿಕೆಗಳು ಆಧಾರಭೂತವಾಗಿರುತ್ತವೆ. ಬೇಕಾದ ಸಮಯದಲ್ಲಿ ನಂಬಿಕೆಗಳನ್ನು, ವಿಚಾರಗಳನ್ನು, ಖಚಿತವಾಗಿ, ವಿಶ್ವಾಸಾರ್ಹವಾಗಿ ಬಳಶಲು ನೆನಪು ಅತ್ಯವಶ್ಯಕವಾಗಿದೆ.

ಡ್ಯೂಪ್ಲೆಕ್ಸ್ ಸಿದ್ದಾಂತದ ಪ್ರಕಾರ ಎರಡು ಬಗೆಯ ಸ್ಮೃತಿಗಳಿವೆ. ಮೊದಲನೆಯದಾಗಿ ದೀರ್ಘಕಾಲದ ಹಾಗೂ ಎರಡನೆಯದಾಗಿ ಸಂಕ್ಷಿಪ್ತ ಕಾಲದ ಎಂಬುದು. ದೀರ್ಘಕಾಲದ ಸ್ಮೃತಿಕೋಶದಲ್ಲಿ ವಿಷಯಗಳನ್ನು ಬಹಳ ದೀರ್ಘಕಾಲದವರೆಗೆ ಕಾಪಾಡಬಹುದು. ಈ ಸ್ಮೃತಿಕೋಶಕ್ಕೆ ದೊಡ್ಡ ಸಾಮರ್ಥ್ಯವಿರುತ್ತದೆ.ಜ್ಞಾನ ಪ್ರಕ್ರಿಯೆಯಲ್ಲಿ ಸುಲಭವಾಗಿ ಈ ಸ್ಮೃತಿಕೋಶಕ್ಕೆ ದೊಡ್ಡ ಸಾಮರ್ಥ್ಯವಿರುತ್ತದೆ.ಜ್ಞಾನ ಪ್ರಕ್ರಿಯೆಯಲ್ಲಿ ಸುಲಭವಾಗಿ ಈ ಸ್ಮೃತಿಕೋಶ ಪಾಲ್ಗೊಳ್ಳುವುದಿಲ್ಲ. ಈ ಸ್ಮೃತಿಕೋಶದಲ್ಲಿನ ಮಾಹಿತಿಯನ್ನು ಸಂಕ್ಷಿಪ್ತ ಕಾಲದ ಸ್ಮೃತಿಕೋಶದಲ್ಲಿ ತಂದು ತದನಂತರ ಅದರಲ್ಲಿನ ಮಾಹಿತಿಯನ್ನು ಉಪಯೋಗಿಸಬೇಕಾಗುತ್ತದೆ. ದೀರ್ಘಸ್ಮೃತಿಕೋಶದ ವಿಷಯಗಳು ಬಹಳ ಕಾಲದವರೆಗೆ ಅಳಿಸುವುದಿಲ್ಲ. ಸಂಕ್ಷಿಪ್ತ ಕಾಲದ ಸ್ಮೃತಿಕೋಶದಲ್ಲಿ ಅಲ್ಪ ಪ್ರಮಾಣದ ಮಾಹಿತಿಯನ್ನು ಶೇಖರಿಸಬಹುದು. ಇದು ಒಂದು ಕಾರ್ಯಾಗಾರದಂತೆ ಕೆಲಸ ಮಾಡುತ್ತದೆ. ಮಾಹಿತಿಯ ಆಧಾರದ ಮೇಲೆ ಹೊಸ ವಿಚಾರಗಳನ್ನು ಕಟ್ಟಬಹುದು. ಅದರಂತೆ ಹೊಸ ವಿಚಾರಗಳಿಗೆ ಇಲ್ಲಿ ಸ್ವಾಗತವಿರುತ್ತದೆ.

ಕೆಲವೊಮ್ಮೆ ಎಲ್ಲ ವಿವರಗಳು ನೆನಪಿದ್ದರೂ ನಮ್ಮ ಸಮಯಕ್ಕೆ, ಸಂದರ್ಭಕ್ಕೆ ಆ ನೆನಪುಗಳನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂದರೆ ಸ್ಮೃತಿಯಲ್ಲಿ ಎಲ್ಲ ವಿವರಗಳು ಇದ್ದರೂ ಪೂರ್ಣ ಪ್ರಮಾಣದಲ್ಲಿ ಒದಗುತ್ತವೆ ಎನ್ನಲು ಸಾಧ್ಯವಿಲ್ಲ. ಅಂದರೆ ನಮ್ಮಲ್ಲಿ ಎರಡು ಬಗೆಯಲ್ಲಿ ಸ್ಮೃತಿ ಕಾರ್ಯನಿರ್ವಹಿಸುತ್ತದೆ. ಕಾರ್ಯಶೀಲ ನಂಬಿಕೆಯಾಗಿ, ಅಕ್ರಿಯಾಶೀಲ ನಂಬಿಕೆಯಾಗಿ, ಈ ಕಾರಣವಾಗಿ ದೀರ್ಘಕಾಲದ ಸ್ಮೃತಿಕೋಶದೊಳಗಿನ ವಿಷಯಗಳನ್ನು ಕೆಲವೊಮ್ಮೆ ಬಳಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಉಪಯೋಗಿಸಿದಾಗ ಕೂಡ ಹೇಗೆ ಸಾಧ್ಯವಾಯಿತು ಎಂಬ ಆಶ್ಚರ‍್ಯ ಮೂಡುತ್ತದೆ. ಮನೋವಿಜ್ಞಾನಿಗಳು ಹೀಗಾಗುವುದಕ್ಕೆ ಮೂರು ಕಾರಣಗಳನ್ನು ಸೂಚಿಸುತ್ತಾರೆ. ೧. ದೀರ್ಘಕಾಲೀನ ಸ್ಮೃತಿಕೋಶದ ಸಾಮಾನ್ಯ ಗುಣಧರ್ಮ ೨. ವ್ಯಕ್ತಿಯ ವೈಯಕ್ತಿಕ ಸ್ಮೃತಿಗಳನ್ನು ಹೊಂದಿಸುವ ಕ್ರಮ ೩. ಸ್ಮೃತಿಯನ್ನು ಕ್ರಿಯಾಶೀಲವನ್ನಾಗಿ ಮಾಡುವ ಮೂಲಗಳು.

ತಿಳಿವಳಿಕೆಗೆ ನಿಜ ನಂಬಿಕೆಗಿಂತ ಜಾಸ್ತಿಯಾದ ವಿಶ್ಲೇಷಣೆಯ ಅವಶ್ಯಕತೆ ಇದೆ. ದೋಷವನ್ನು ಸಮರ್ಥವಾಗಿ ತಳ್ಳಿ ಹಾಕಬಹುದಾದುದು ಈ ತಿಳಿವಳಿಕೆ, ಈ ದೋಷಗಳು ಮೂರು ರೀತಿಯಾಗಿವೆ.

೧. ಇಂದ್ರಿಯಗಳ ವೈಫಲ್ಯ (ತಿಳಿವಳಿಕೆಗೆ ಸಂಬಂಧಿಸಿದಂತೆ)

೨. ಮನಸ್ಸು ಮತ್ತು ಇಂದ್ರಿಯ ಜ್ಞಾನದ ವಸ್ತುಗಳ ನಡುವಿನ ಸಂಬಂಧ

೩. ಊಹೆ ಮತ್ತು ಆಧಾರಗಳ ನಡುವಿನ ತರ್ಕದ ಸೇತುವೆ

ಕಾರಣಗಳನ್ನು ಸಕಾಲಕ್ಕೆ ಗುರುತಿಸುವಿಕೆಯಲ್ಲಿನ ವೈಫಲ್ಯವು ಇಂದ್ರಿಯಗಳ ತಿಳಿವಳಿಕೆಯನ್ನು ಗ್ರಹಿಸುವ ದೋಷವಾಗುತ್ತದೆ. ಹಾಗಾಗಿಯೇ ಇಂದ್ರಿಯಗಳ ಆಧಾರದಿಂದ ಜಗತ್ತನ್ನು ವೈಚಾರಿಕೆ ನೆಲೆಗಟ್ಟಿನ ಮೇಲೆ ಅಡಕಗೊಳಿಸಲು ಹೊರಟ ಮಾನವನ ಪ್ರಯತ್ನಗಳು ಸಂಕೀರ್ಣ ಮತ್ತು ಬಗೆಹರಿಸಲಾಗದ ಕಠಿಣ ಸವಾಲಾಗಿ ಪರಿಣಮಿಸುತ್ತವೆ

ವಸ್ತುಗಳನ್ನು ನಾವು ಇಂದ್ರಿಯಗಳ ಮುಖಾಂತೆ ಗ್ರಹಿಸಿ ಅದರ ಬಗೆಗೆ ಮನಸ್ಸಿನಲ್ಲಿ ವಿಶ್ಲೇಷಣೆ ಮಾಡಿದಾಗ ಹಲವಾರು ಸಲ ಅದು ದೋಷಕ್ಕೆ ಎಡೆಮಾಡಿಕೊಡುತ್ತದೆ. ಪ್ಲೇಟೊನ ಪ್ರಕಾರ ಭೌತ ವಸ್ತುಗಳು ಯಾವತ್ತೂ ಪ್ರವಾಹದ ಸ್ಥಿತಿಯಲ್ಲಿ ಇರುತ್ತವೆ. ಆದ್ದರಿಂದ ಆ ಕ್ಷಣ ಗೋಚರವಾಗುವ ದೃಶ್ಯ ತಿಳಿವಳಿಕೆಯ ಮೇಲೆ ಪ್ರಭಾವ ಬೀರುತ್ತದೆ. ಇತ್ತೀಚಿನ ವಾದದ ಪ್ರಕಾರ ವಸ್ತುವಿನ ನೇರ ಸಂಪರ್ಕದಿಂದ ಉಂಟಾಗುವ ಜ್ಞಾನದಲ್ಲಿನ ದೋಷಕ್ಕಿಂತ, ಆ ವಸ್ತುವಿನ ಸಂಸ್ಕರಿತ ರೂಪದ ಅಧ್ಯಯನದಿಂದ ನುಸುಳುವ ಲೋಪ-ದೋಷಗಳು ಹೆಚ್ಚು ಸವಾಲಾಗಿದೆ. ಏಕೆಂದರೆ ವಸ್ತುವಿನ ಸಂಗತಿಯ ಸಂಸ್ಕರಿತ ರೂಪ ಮನಸ್ಸಿನ ವಿಶ್ಲೇಷಣೆಯ ಸಾಮರ್ಥ್ಯಕ್ಕೆ ಸವಾಲೊಡ್ಡುತ್ತವೆ.

ಆಧಾರಗಳು ಒಂದು ವೇಳೆ ನಿರ್ಣಯಗಳನ್ನು ತೆಗೆದುಕೊಳ್ಳಲು ವಿಫಲವಾದರೆ, ಭಿನ್ನವಾದ ಊಹಾ ಸಿದ್ಧಾಂತವನ್ನು ಆಶ್ರಯಿಸಬೇಕಾಗುತ್ತದೆ. ಆಧಾರಗಳು ಸರಿಯಾದ ಊಹಾ ಸಿದ್ಧಾಂತವನ್ನು ಪ್ರಚೋದಿಸಲು ಸಾಧ್ಯವಾದರೆ ಆ ಆಧಾರಗಳು ಉಪಯುಕ್ತವೆನಿಸುತ್ತವೆ. ಇಲ್ಲಿ ತರ್ಕಶಾಸ್ತ್ರದ ಪ್ರಸಿದ್ಧ ಹೇಳಿಕೆ ಯತ್ರ ಯತ್ರ ಧೂಮಃ ತತ್ರ ತತ್ರ ವಹ್ನಿಃ ಎಂಬುದನ್ನು ಹೇಳಬಹುದಾಗಿದೆ. ‘ಹೊಗೆ ಇರುವೆಡೆಗೆ ಅಗ್ನಿ ಇರುತ್ತದೆ’ ಹೊಗೆ ಇರುವುದನ್ನು, ಅಗ್ನಿ ಇರುವುದನ್ನು ಸಿದ್ಧಪಡಿಸಲು ಆಧಾರಗಳು, ಪ್ರಮಾಣಗಳು ಉಪಯುಕ್ತವಾಗಿರುತ್ತವೆ.

ಇದು ಅನುಮಾನ ಪ್ರಮಾಣಕ್ಕೆ ದಾರಿ ಮಾಡಿಕೊಡುತ್ತದೆ.

‘Reasoning is knowledge of the unknown (resulting) fromthat which is known’ Reasoning is knowledge of unknown from some known object, by means of knownrelation (History of Indian Epistemology, P. 200)

ತಿಳಿವಳಿಕೆ ಇರುವ ವಿಷಯದಿಂದ ಆರಂಭಿಸಿ, ತಿಳಿಯದಿರುವ ವಿಷಯದೆಡೆಗಿನ ಪಯಣ. ಪ್ರತ್ಯಕ್ಷವಾಗಿರುವ ಜ್ಞಾನ, ಅಪ್ರತ್ಯಕ್ಷವಾಗಿರುವ ಜ್ಞಾನದ ಹುಡುಕಾಟಕ್ಕೆ ಸಹಕಾರಿಯಾಗಿರುತ್ತದೆ. ಅಗ್ನಿ ವ್ಯಾಪಕ ವಸ್ತು, ಧೂಮ ವ್ಯಾಪ್ಯ ವಸ್ತು. ವ್ಯಾಪ್ಯ ವಸ್ತುವಿನಿಂದ ವ್ಯಾಪಕ ವಸ್ತುವನ್ನು ಊಹಿಸುವುದು. ಪ್ರತ್ಯಕ್ಷದಿಂದ ವ್ಯಾಪ್ಯ ವ್ಯಾಪಕಗಳಾದ ಎರಡು ವಸ್ತುಗಳನ್ನು ತಿಳಿದುಕೊಳ್ಳುವುದು ವ್ಯಾಪ್ತಿ ಜ್ಞಾನ ಎನಿಸುತ್ತದೆ. ಈ ವ್ಯಾಪ್ತಿ ಜ್ಞಾನದ ಮೂಲಕ ಆಲೋಚನಾತ್ಮಕ ದೃಷ್ಟಿ ಬೆಳೆಯುತ್ತದೆ.

ಪ್ರತ್ಯಕ್ಷ ಪ್ರಮಾಣವೆಂದರೆ ‘ಪ್ರತ್ಯಕ್ಷ ಜ್ಞಾನಕರಣಂ ಪ್ರತ್ಯಕ್ಷಂ, ಇಂದ್ರಿಯಾರ್ಥ ಸನ್ನಿಕರ್ಷಜನ್ಯ ಜ್ಞಾನಂ ಪ್ರತ್ಯಕ್ಷಂ’ ಪ್ರತ್ಯಕ್ಷ ಜ್ಞಾನಕ್ಕೆ ಕರಣ ಎಂದರೆ ಅಸಾಧಾರಣ ಕಾರಣವಾಗಿರುವುದು, ಎಂದರೆ ‘ಇಂದ್ರಿಯ’ ಮತ್ತು ಅರ್ಥ ಎಂದರೆ ‘ವಿಷಯ’. ಇವೆರಡರ ಸನ್ನಿಕರ್ಷ ಅಂದರೆ ಸಂಬಂಧದಿಂದ ಹುಟ್ಟುವ ಜ್ಞಾನ ‘ಪ್ರತ್ಯಕ್ಷ’. ಸನ್ನಿಕರ್ಷಜನ್ಯಂ ಜ್ಞಾನಂ ಪ್ರತ್ಯಕ್ಷಂ, ತತ್ಕರಣಂ ಇಂದ್ರಿಯಂ ತಸ್ಮಾತ್, ಇಂದ್ರಿಯಂ ಪ್ರತ್ಯಕ್ಷ ಪ್ರಮಾಣಂ ಇತಿಸಿದ್ಧಂ, ಸನ್ನಿಕರ್ಷ ಎಂದರೆ ಬಾಹ್ಯ ಮತ್ತು ಅಂತರ ಸಂಬಂಧಗಳ ಸಹಕಾರ. ಅಂದರೆ ಅಂತರ ಸಂಬಂಧವಿಲ್ಲದೆ ಬಾಹ್ಯ ಸಂಬಂಧವು ಜ್ಞಾನವನ್ನು ಉಂಟು ಮಾಡಲಾರದು. ಅಂದರೆ ಮನಸ್ಸು ಇಂದ್ರಿಯದೊಡನೆ ಸಹಕರಿಸಿದರೆ ಜ್ಞಾನ ಹುಟ್ಟುತ್ತದೆ. ‘ಆತ್ಮಾ ಮನಸಾ ಸಂಯುಜ್ಯತೇ, ಮನಃ ಇಂದ್ರಿಯೇಣ, ಇಂದ್ರಿಯಮರ್ಥೇನ’ ಎಂಬ ಮಾತು ಜ್ಞಾನದ ಉತ್ಪತ್ತಿಗೆ ಇಂದ್ರಿಯ, ಮನಸ್ಸು ಯಾವ ರೀತಿ ಕಾರಣವಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಅಲ್ಲದೆ ಈಗಾಗಲೇ ಮೇಲೆ ಹೇಳಿದಂತೆ ತ್ರಿದೋಷಗಳ ನಿವಾರಣೆ ತಿಳಿವಳಿಕೆ ಮೂಡುವಲ್ಲಿ ಹೇಗೆ ಅನಿವಾರ‍್ಯವಾಗುತ್ತದೆ ಎಂಬುದು ಗಮನೀಯ ಅಂಶವೆನಿಸಿದೆ.

ಸಮರ್ಥನೆ

ಜ್ಞಾನವನ್ನು ‘ನಿಜ ನಂಬಿಕೆ’ಯಿಂದ ಭಿನ್ನವಾಗಿ ನಿಲ್ಲಿಸುವ ಕಾರ್ಯ ಮಾಡುವುದೇ ‘ಸಮರ್ಥನೆ’ ಕೆಲಸ. ಜ್ಞಾನಶಾಸ್ತ್ರದಲ್ಲಿ ನಿಜ ಸ್ವರೂಪದ ನಂಬುಗೆಗಳಿಗೆ ಸಮರ್ಥನೆಯ ಆಧಾರ ಕೊಡುವ ಕೆಲಸ ಸಾಮಾನ್ಯವಾಗಿ ನಡೆಯುತ್ತಿರುತ್ತದೆ. Theaetetus ವ್ಯಾಖ್ಯೆಯ ಪ್ರಕಾರ ನಾವು ಸಂಗತಿಗಳನ್ನು ನೋಡದೇ ನಂಬಬಹುದಾದ ಸಾಧ್ಯತೆ ಇದೆ. ಅದರರ್ಥ ನಂಬುಗೆಗಳು ನಿಜವಿರಬೇಕು. ಎಂದೆನಿಲ್ಲ ನಂಬುಗೆಗಳು ಅಸತ್ಯವಾಗಿರಬಹುದು. ಅಂದರೆ ಕೆಲವೊಮ್ಮೆ ನಾವು ಏನನ್ನು ತಿಳಿದುಕೊಂಡಿರುತ್ತೇವೋ ಅದನ್ನು ನಾವು ನಂಬುತ್ತೇವೆ. ತತ್ವಶಾಸ್ತ್ರದ ಪ್ರಕಾರ ‘ಜ್ಞಾನವನ್ನು’ ಸಮರ್ಥನೆಯಿಂದ ಕೂಡಿದ ನಂಬುಗೆಯಾಗಿ ಸ್ವೀಕರಿಸುವ ಪರಂಪರೆಯಿದೆ. ಆದರೆ ಬೇರೆ ಬೇರೆ ಸಮಯದಲ್ಲಿ ಸಮರ್ಥನೆಯ ವಿಧಾನದ ಬಗ್ಗೆ ವಿವಿಧ ಸಮೀಕರಣಗಳನ್ನು ನೋಡಬಹುದಾಗಿದೆ.

ನಂಬಿಕೆಗಳು ಮತ್ತು ಪ್ರತಿಪಾದನೆಗಳು

ನಂಬಿಕೆಗಳು ಮಾನಸಿಕ ಚಟುವಟಿಕೆಯಾಗಿ ಗುರುತಿಸಲ್ಪಡುತ್ತವೆ. ಕೆಲವು ನಿರ್ದಿಷ್ಟ ವಿಷಯದ ಮೇಲೆ ನಂಬಿಕೆಗಳ ಅಡಿಪಾಯ ನಿಂತಿರುತ್ತದೆ. ನಂಬಿಕೆ ಒಂದು ಮಾನಸಿಕ ವರ್ಗೀಕೃತ, ದ್ವೈತಭಾವ ಹೊಂದಬಹುದಾದ ಚಟುವಟಿಕೆ. ಇಲ್ಲಿ ದ್ವೈತಭಾವವೆಂದರೆ ಕೆಲವು ನಂಬಿಕೆಗಳ ಬದ್ಧತೆ ಪ್ರಶ್ನಾರ್ಥಕವಾದಾಗ ಸನ್ನಿವೇಶಕ್ಕೆ ಅನುಗುಣವಾಗಿ ನಂಬಿಕೆಯನ್ನು ವ್ಯಕ್ತಪಡಿಸುವ ಪರಿ, ಪ್ರತಿಪಾದನೆಯಲ್ಲಿ ನಂಬಿಕೆಯ ಪ್ರಮಾಣವನ್ನು ಮತ್ತು ಆ ನಂಬಿಕೆಗಳ ಬಗೆಗಿನ ಬದ್ಧತೆಯನ್ನು ಗುರುತಿಸುವ ಪ್ರಯತ್ನವಿರುತ್ತದೆ. ನಮ್ಮ ಮಾನಸಿಕ ಸ್ಥಿತಿಯು ಕೆಲವು ಸಲ ನಮ್ಮ ನಂಬಿಕೆಗಳನ್ನು ಪ್ರತಿಪಾದಿಸಲು ಉದ್ಯುಕ್ತಗೊಳಿಸುತ್ತದೆ ಮತ್ತು ಕೆಲವು ಸಲ ನಂಬಿಕೆಗಳಲ್ಲಿ ಪ್ರತಿಪಾದಕ ಗುಣವಿರುವುದಿಲ್ಲ. ನಂಬಿಕೆಗಳ ಪಾತ್ರ ಮತ್ತು ಅದನ್ನು ಪ್ರತಿಪಾದಿಸುವ ವೈಖರಿಯನ್ನು ನೋಡುವ ಪ್ರಯತ್ನ ಒಂದಕ್ಕೊಂದು ಪೂರಕವಾಗಿವೆ.

ಜ್ಞಾನಶಾಸ್ತ್ರ ಜ್ಞಾನದ ಅಗಾಧ, ಅಪರಿಮಿತ ಹರಿವಿನ, ಅರಿವಿನ, ಕುರಿತಾಗಿ ಚಿಂತನೆ ನಡೆಸಿದೆ. ಈ ಶಾಸ್ತ್ರ ತತ್ವಜ್ಞಾನದ ಒಂದು ತಾತ್ವಿಕ ಶೋಧವಾಗಿದ್ದು, ತರ್ಕಬದ್ಧ ನಂಬುಗೆ ಮತ್ತು ಜ್ಞಾನದ ನಿರ್ಧರಿತ ಮೌಲ್ಯಗಳ ಬಗೆಗಿನ ಚರ್ಚೆ ನಡೆಸುತ್ತದೆ. ತತ್ವಶಾಸ್ತ್ರವು ಈ ಶಾಸ್ತ್ರದ ಪ್ರಮುಖ ನಿರ್ವಾಹಕವಾದರೂ ಕೂಡ ಕೇವಲ ತತ್ವಶಾಸ್ತ್ರವೊಂದೇ ಇದರ ಗುರಿಯಲ್ಲ. ಇದರ ಜೊತೆಗೆ ಸ್ವಾನುಭವದಿಂದ ಕೂಡಿದ ಜ್ಞಾನ ಅವಶ್ಯಕವಾಗಿ ಸ್ವಾನುಭವ ನಿಷ್ಠತೆಯನ್ನು ಪ್ರತಿಪಾದಿಸುತ್ತದೆ. ಕೇವಲ ತತ್ವಶಾಸ್ತ್ರದಿಂದ ಮಂಡಿಸುವ ವಿಷಯ ಜ್ಞಾನಶಾಸ್ತ್ರದ ಏಕಮುಖಿ ಚಿಂತನೆಯನ್ನು ನಮ್ಮ ಮುಂದಿಡುತ್ತದೆ. ಬದಲಾದ ಸಂದರ್ಭಕ್ಕನು ಗುಣವಾಗಿ ಬಹುಮುಖಿ ಚಿಂತನಾ ಕ್ರಮಗಳನ್ನು ಕೂಡ ಜ್ಞಾನಶಾಸ್ತ್ರ ಪ್ರತಿಪಾದಿಸುತ್ತಿದೆ. ಜ್ಞಾನಶಾಸ್ತ್ರ ಎರಡು ವಿಧಗಳಲ್ಲಿರುವುದನ್ನು ಈ ವಾದ ಸ್ಪಷ್ಟಪಡಿಸುತ್ತದೆ. ವ್ಯಕ್ತಿನಿಷ್ಠ ಜ್ಞಾನಶಾಸ್ತ್ರ (Individual Epistemology) ಸಮಾಜನಿಷ್ಠ ಜ್ಞಾನಶಾಸ್ತ್ರ (Social Epistemology) ಈ ಎರಡೂ ವಿಧಗಳು ಮನುಷ್ಯನ ಅರಿವಿನ ನೆಲೆಯನ್ನು ಒಳಗೊಳ್ಳುತ್ತದೆ. ವ್ಯಕ್ತಿನಿಷ್ಠ ಜ್ಞಾನಶಾಸ್ತ್ರವು ಮನುಷ್ಯನ ಮನಸ್ಸು ಬುದ್ಧಿಯ ರಚನಾ ವೈಶಿಷ್ಟ್ಯವನ್ನು ಬಿಂಬಿಸುವ ಪ್ರಥಮ ಹಂತದ ಜ್ಞಾನಶಾಸ್ತ್ರವಾಗಿರುತ್ತದೆ. ಸಮಾಜನಿಷ್ಠ ಜ್ಞಾನಶಾಸ್ತ್ರವು ಸಮಾಜಶಾಸ್ತ್ರ ಮತ್ತು ಮಾನವಿಕಗಳನ್ನು ಕುರಿತಾಗಿರುತ್ತದೆ. ಇದು ಸಾಮಾಜಿಕ ವ್ಯವಸ್ಥೆಯ, ಸಂಸ್ಕೃತಿ ಬಗೆಗಿನ ವಿವಿಧ ನಮೂನೆಗಳನ್ನು, ವಿಚಾರಗಳನ್ನು ದೃಷ್ಟಿಕೋನಗಳನ್ನು ಒಳಗೊಳ್ಳುತ್ತದೆ.

ಅರಿವಿನ ಬಗ್ಗೆ ಇರುವ ಅಂದರೆ ಮೊದಲ ಹಂತದ ಜ್ಞಾನ ಮೀಮಾಂಸೆಯ ಕುರಿತಾಗಿ ವಿಚಾರ ಮಾಡುವಾಗ ಸಮಾಜನಿಷ್ಠ ಜ್ಞಾನಶಾಸ್ತ್ರದ ಕುರಿತಾದ ಅಭಿಪ್ರಾಯ ಏನು ಎಂಬುದು ಅಷ್ಟೇ ಮಹತ್ವದ್ದಾಗುತ್ತದೆ. ಜ್ಞಾನ ಮೀಮಾಂಸೆ; ಅರಿವನ್ನು ಕುರಿತಾಗಿ ನಿರ್ವಚಿಸುತ್ತದೆ. ಇದು ವ್ಯಕ್ತಿಯೊಬ್ಬನ ಮಾನಸಿಕ ಸ್ಥಿತಿಗೆ ಸಂಬಂಧಿಸಿರುತ್ತದೆ. ಅಂದರೆ ಮನಸ್ಸಿನ ಬಗೆಗೆ ಇರುತ್ತವೆ. ಹಾಗಾದಲ್ಲಿ ಸಾಮಾಜಿಕ ಬದ್ಧತೆಯನ್ನು ಜ್ಞಾನಶಾಸ್ತ್ರ ಹೇಗೆ ಸಮೀಕರಿಸುತ್ತದೆ. ಎಂಬುದು ಪ್ರಶ್ನೆಯಾಗುತ್ತದೆ. ಒಂದು ಹಂತದಲ್ಲಿ ಚಾರಿತ್ರಿಕವಾಗಿ ಕೂಡ ಅಂತರಶಿಸ್ತೀಯ ಅಧ್ಯಯನಕ್ಕೆ ವಿರೋಧ ಕಂಡು ಬಂದಿತು. ಮುಂದಿನ ಅಂಶಗಳು ವ್ಯಕ್ತಿ ನಿಷ್ಠ ಜ್ಞಾನಶಾಸ್ತ್ರವೇ ಗ್ರಾಹ್ಯ ಎಂಬುದನ್ನು ಪುಷ್ಟೀಕರಿಸುತ್ತದೆ. ಅವುಗಳು ಯಾವುವೆಂದರೆ ೧. ಜ್ಞಾನಶಾಸ್ತ್ರ ತನ್ನದೇ ಸ್ವಾಯತ್ತತೆಯನ್ನು ನಿರೂಪಿಸುತ್ತದೆ. ೨. ಜ್ಞಾನಶಾಸ್ತ್ರವು ಜ್ಞಾನ, ಬಂಧ, ತರ್ಕಬದ್ಧತೆಯಂತಹ ಪರಿಕಲ್ಪನೆಗಳ ವಿಶ್ಲೇಷಣೆಗೆ ಮಾತ್ರ ಸಂಬಂಧಿಸಿರುತ್ತದೆ. ಆದರೆ ಈ ಪರಿಕಲ್ಪನೆಗಳು ಅಥವಾ ಭಾಷಿಕ ವಿಶ್ಲೇಷಣೆಗಳು ತತ್ವಶಾಸ್ತ್ರದ ಪರಿಧಿಯಲ್ಲಿ ಬರುವುದರಿಂದ ಸಮಾಜವಿಜ್ಞಾನಗಳಿಗೆ ಇದರಲ್ಲಿ ಸ್ಥಾನವಿಲ್ಲ. ೩. ಜ್ಞಾನಶಾಸ್ತ್ರವು ವೈಚಾರಿಕ ಪದ್ಧತಿಯಿಂದ ಕೂಡಿದ್ದು ಈ ವೈಚಾರಿಕತೆ, ತರ್ಕ, ಸಾಧ್ಯತೆ, ಸಂಖ್ಯಾಶಾಸ್ತ್ರಗಳಿಂದ ಸಂಸ್ಕರಣಗೊಂಡಿರಬೇಕು. ಆದರೆ ಜ್ಞಾನಶಾಸ್ತ್ರದ ಸಾಮಾಜಿಕ ಬಂಧವನ್ನು ಈ ಮೇಲೆ ಹೇಳಿದಂತೆ ತಿರಸ್ಕರಿಸುವುದು ಸಮಂಜಸವಲ್ಲ. ಜ್ಞಾನಶಾಸ್ತ್ರದ ಬಹುಶಿಸ್ತೀಯ ಕಲ್ಪನೆ ಹೆಚ್ಚು ಪ್ರಸ್ತುತ ಹಾಗೂ ಸ್ವಾಯತ್ತ ಸ್ವರೂಪದ್ದು. ಬಹುಶಿಸ್ತೀಯತೆ ಒಂದೇ ಶಾಸ್ತ್ರದ ಆಧಾರವಲ್ಲವಾದರೂ ಅದು ಹೆಚ್ಚು ಫಲದಾಯಕ. ಪ್ರಸ್ತುತ ಹಲವು ಆಸಕ್ತಿಕರ ಬೆಳವಣಿಗೆಗಳು ಜ್ಞಾನಶಾಸ್ತ್ರದಲ್ಲಿ ನಡೆದಿವೆ. ಈ ಎಲ್ಲ ಅಂತರಶಿಸ್ತೀಯ, ಬಹುಶಿಸ್ತೀಯ ಅಧ್ಯಯನದ ಫಲವಾಗಿ ಜ್ಞಾನಶಾಸ್ತ್ರ ಸಮಾಜಮುಖಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಆಯಾಮದ ನೆಲೆಯಲ್ಲಿ ಜ್ಞಾನಶಾಸ್ತ್ರದ ಕುರಿತಾದ ಚಿಂತನೆಗಳು ನಡೆಯುತ್ತಿವೆ. ಯಾಕೆಂದರೆ, ಜ್ಞಾನಶಾಸ್ತ್ರ ಮಾನವಿಕಶಾಸ್ತ್ರದ ಜಟಿಲ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಲು ಪ್ರಯತ್ನಿಸುತ್ತದೆ. ಸಾಧ್ಯತೆ, ನೈಸರ್ಗಿಕತೆ ಹಾಗೂ ಮನುಷ್ಯ ಸಾಧನೆಯ ಸೀಮತತೆಯನ್ನು ಈ ಪ್ರಯತ್ನ ಒಳಗೊಳ್ಳುತ್ತದೆ ಅಥವಾ ಜ್ಞಾನಶಾಸ್ತ್ರದ ಸಾಧ್ಯತೆಗಳ ಹುಡುಕಾಟ, ನಿಸರ್ಗ ಮತ್ತು ಮಾನವ ಜನಾಂಗದ ಸೀಮಿತ/ಅಸೀಮತತೆಯನ್ನು ಈ ಪ್ರಯತ್ನವು ಒಳಗೊಳ್ಳುತ್ತದೆ. ಜ್ಞಾನ ಮತ್ತು ಅಭಿಪ್ರಾಯಗಳ ನಡುವಿನ ವ್ಯತ್ಯಾಸವನ್ನು ಜ್ಞಾನಶಾಸ್ತ್ರ ಎತ್ತಿ ಹೇಳುತ್ತದೆ.

ಯಾವುದನ್ನು ಜನ ‘ಸತ್ಯ’ವೆಂದು ನಂಬುತ್ತಾರೋ ಅಥವಾ ಯಾವುದಕ್ಕೆ ಸತ್ಯದ ಲಕ್ಷಣಗಳನ್ನು ಆರೋಪಿಸುತ್ತಾರೋ, ಅದು ನಿಜವಾದ ಅರ್ಥದಲ್ಲಿ ಜ್ಞಾನವಾಗಿರಲಿಕ್ಕಿಲ್ಲ. ಬದಲಾಗಿ ಏನನ್ನು ನಿಜವಾಗಿ ತಿಳಿದುಕೊಳ್ಳಬೇಕಾಗಿದೆಯೋ ಅಥವಾ ಏನನ್ನು ಅರ್ಥೈಸಿಕೊಳ್ಳಲು ಜನ ವಿಫಲರಾಗುತ್ತಾರೋ ಅಂತಹ ಮಾರ್ಗವನ್ನು ಜ್ಞಾನಶಾಸ್ತ್ರ ತಿಳಿಸಿ ಕೊಡಲು ಉದ್ಯುಕ್ತವಾಗಿದೆ. ತಿಳಿವಳಿಕೆಯ ವಿವರಣೆಯಾಚೆಗಿನ ಪಯಣವಾಗಿ ಮತ್ತು ನಂಬುಗೆಯಾಚೆಗಿನ ಸತ್ಯಶೋಧನೆಗೆ ಜ್ಞಾನಶಾಸ್ತ್ರ ಲಗ್ಗೆ ಹಾಕುತ್ತದೆ. ಈ ಜ್ಞಾನ ಮೀಮಾಂಸೆಯು ಜ್ಞಾನದ ಮತ್ತು ತರ್ಕಬದ್ಧ ನಿಲುವುಗಳ ವಿವಿಧ ಸ್ತರಗಳನ್ನು ಸಂಶೋಧಿಸಲು ಉದ್ಯುಕ್ತವಾಗಿದೆ. ಎಲ್ಲರಿಗೂ ಸಾಮಾನ್ಯವಾದ ಹಾಗೂ ಎಲ್ಲ ಕಡೆಗೂ ಇರಬಹುದಾದ ಸತ್ಯಾಂಶಗಳನ್ನು ಮಾನವ ಜನಾಂಗದ ನೆಲೆಯಲ್ಲಿ ಅರ್ಥೈಸುವುದು ಹಾಗೂ ಅದರ ಪರಿಕಲ್ಪನೆಗಳನ್ನು ವಿವರಗಳೊಂದಿಗೆ ಗಟ್ಟಿಗೊಳಿಸುವುದು ಜ್ಞಾನಶಾಸ್ತ್ರದ ಕೆಲಸವಾಗಿದೆ. ಕೆಲವು ಸಲ ಇಂದ್ರಿಯಗಳ/ತಿಳುವಳಿಕೆಯ ಮುಖಾಂತರ ಗಳಿಸಿದ ಜ್ಞಾನದ ವಿಶ್ವಾಸಾರ್ಹತೆಯ ಮೇಲೆ ಅನುಮಾನ ಮೂಡುತ್ತದೆ. ಏಕೆಂದರೆ ಇಂತಹ ತಿಳಿವಳಿಕೆ ಸಕಾರಣ ವಿವರಣೆ ನಮಗೆ ದಕ್ಕುತ್ತದೆ ಎಂಬ ನಂಬಿಕೆ ಇರುವುದಿಲ್ಲ. ಆದ್ದರಿಂದ ಸಮಕಾಲೀನ ಜ್ಞಾನಶಾಸ್ತ್ರವು ಜ್ಞಾನದ ನಿರಪೇಕ್ಷ ಭಾವಕ್ಕಿಂತ ಸಾಪೇಕ್ಷ ಭಾವಕ್ಕೆ ಒತ್ತು ಕೊಡುತ್ತದೆ.

ಜ್ಞಾನಶಾಸ್ತ್ರವು ತಿಳಿವಳಿಕೆಯ (ಜ್ಞಾನದ) ಪರಿಪ್ರೇಕ್ಷ್ಯಗಳನ್ನು ಅರ್ಥೈಸಲು ಪ್ರಯತ್ನಿಸುತ್ತದೆ. ಜ್ಞಾನಶಾಸ್ತ್ರದ ಒಂದು ಭಾಗವಾಗಿ ತತ್ವಶಾಸ್ತ್ರದ ಕೆಲವು ಅಂಶಗಳನ್ನು ಅರ್ಥೈಸಬಹುದು. ವೈಜ್ಞಾನಿಕ ತತ್ವಶಾಸ್ತ್ರ ಮತ್ತು ಮನಸ್ಸಿನ ತತ್ವಶಾಸ್ತ್ರದ ಅಂತರಸಂಬಂಧ ನೇಯ್ಗೆಯನ್ನು ಜ್ಞಾನಶಾಸ್ತ್ರ ವಿವರಿಸಲು ಯತ್ನಿಸುತ್ತದೆ. ಜ್ಞಾನಶಾಸ್ತ್ರವನ್ನು ಸಾಮಾಜಿಕವಾಗಿ ಹಾಗೂ ವ್ಯಕ್ತಿ ಸಾಪೇಕ್ಷವಾಗಿ ವಿಂಗಡಿಸಬಹುದು. ಸಾಮಾಜಿಕ ರೂಢಿ/ಪಥ, ಸಾಮಾಜಿಕ ಸಂಸ್ಥೆಗಳು ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿ ಜ್ಞಾನ ಮೀಮಾಂಸೆಯನ್ನು ಪ್ರಭಾವಿಸುತ್ತವೆ. ಸಾಮಾಜಿಕ ವಾಹಕ ಶಕ್ತಿಗಳಿಗೆ ಮಣಿದು ಜ್ಞಾನದ ಅಭಿವ್ಯಕ್ತಿ ಬದಲಾಗಬಹುದು. ಈ ವಿಚಾರಗಳು ಮಾನವಿಕಶಾಸ್ತ್ರದಲ್ಲಿ ಹೆಚ್ಚು ಬೆಲೆಯನ್ನು ಪಡೆದುಕೊಂಡಿವೆ. ಆದರೆ ಜ್ಞಾನಮುಖಿ (ಸತ್ಯಾನ್ವೇಷಕ) ತಿಳಿವಳಿಕೆಗೆ ಮುಖಮಾಡಿರುವ ವಿದ್ವಾಂಸರು ಜ್ಞಾನಕ್ಕಿರುವ ಸಾಮಾಜಿಕ ಬದ್ಧತೆಯನ್ನು ತಿರಸ್ಕರಿಸುತ್ತಾರೆ.

ಜ್ಞಾನವೆಂದರೇನು? ಎಂಬ ಪ್ರಶ್ನೆ ಪ್ಲೇಟೋನ ಕಾಲದಿಂದ ಇದೆ. ಜ್ಞಾನವೆಂದರೆ ಇದಮಿತ್ಥಂ ಎಂದು ಹೇಳಲು ಸಾಧ್ಯವಿದೆಯೇ/ಇಲ್ಲವೇ ಎಂಬುವುದಕ್ಕಿಂತ, ಜ್ಞಾನದ ಬಗೆಗಿನ ಕೆಲವಿಚಾರಗಳನ್ನು, ವಾದಗಳನ್ನು ಗಮನಿಸಿದಾಗ ಜ್ಞಾನದ ಅಗಾಧತೆ ವ್ಯಕ್ತವಾಗುತ್ತದೆ. ಕೆಲವೊಮ್ಮೆ ಅನಂತತೆ ತೋರುತ್ತ ತಿಳಿಯಲು ಅಸಾಧ್ಯವಾದುದು ಎನಿಸಿದರೂ ಕೂಡ, ಜ್ಞಾನಕ್ಕೂ ಅನೇಕ ವ್ಯಾಖ್ಯೆಗಳಿವೆ ಎಂಬುದು ಅಷ್ಟೇ ಸತ್ಯ. ಪ್ಲೇಟೋ ಜ್ಞಾನದ ಬಗೆಗೆ ‘Justified true belief’ ಎಂಬುದಾಗಿ ಹೇಳುತ್ತಾರೆ. ಅಂದರೆ ನ್ಯಾಯಬದ್ಧ (ಸಮರ್ಥವಾದ) ನಿಜನಂಬುಗೆ ಅಥವಾ ಸಮರ್ಥನೆಯಿಂದ ಯುಕ್ತವಾದ ನಿಜನಂಬುಗೆ. ಯಾವುದನ್ನು ನಾವು ಜ್ಞಾನವೆಂದು ಕರೆಯುತ್ತೇವೋ ಅದು ಸತ್ಯವಾಗಿರಬೇಕು. ಅದು ಸತ್ಯವೆಂದು ಎಲ್ಲರೂ ನಂಬುವಂತಿರಬೇಕು. ಸಾಕ್ರಟೀಸ್ ಪ್ರಕಾರ ಇದು ಅಪೂರ್ಣ ವ್ಯಾಖ್ಯೆ. ಮೇಲಿನ ವ್ಯಾಖ್ಯೆಯಲ್ಲಿನ ಅಂಶಗಳ ಜೊತೆಗೆ ತರ್ಕಸಮ್ಮತ ಕಾರಣವಿರಬೇಕು ಎಂಬುದನ್ನು ಸಾಕ್ರಟೀಸ್ ಪ್ರತಿಪಾದಿಸುತ್ತಾರೆ.

ಪಾಶ್ಚಾತ್ಯ ವಿದ್ವಾಂಸರು ಜ್ಞಾನದ ಎರಡು ಬಗೆಗಳನ್ನು ಗುರುತಿಸುತ್ತಾರೆ.

೧. ಪೂರ್ವ ಸಂಕಲ್ಪಿತ ಜ್ಞಾನ (Priori) – ಕಾರಣವನ್ನು ಪ್ರಮುಖವಾಗಿರಿಸಿಕೊಂಡು ಸಿದ್ಧಪಡಿಸಿದ ಜ್ಞಾನ. ಇಲ್ಲವೇ ಪ್ರತ್ಯಕ್ಷ ಹಾಗೂ ಪರೋಕ್ಷ ಅನುಭವದ ಪ್ರಭಾವ  ಇಲ್ಲದೇ ಸಿಗುವ ಜ್ಞಾನ. ಇಲ್ಲಿ ಅನುಭವವೆಂದರೆ ಜಗತ್ತಿನ ಬಗೆಗಿನ ಇಂದ್ರಿಯಗಳ ಜ್ಞಾನ.

೨. ಅನುಭವ ಜನ್ಯ ಜ್ಞಾನ (Posteriori) – ಅನುಭವದ ಆಧಾರವಾಗಿಗಳಿಸಿದ ಅಥವಾ ಸಿದ್ಧಪಡಿಸಿದ ಜ್ಞಾನ. ಸ್ವಾನುಭವನಿಷ್ಠ ಜ್ಞಾನವೆಂದೂ ಕರೆಯಬಹುದಾಗಿದೆ. ಯಾವ ಕಾರಣಗಳಿಗೆ ಸಮರ್ಥನೆಯ ಬೆಂಬಲ ಇದೆಯೋ ಹಾಗೂ ಆ ಸಮರ್ಥನೆಗೆ ಅನುಭವದ ಬೆಂಬಲ ಇದೆಯೋ ಅದು ಅನುಭವ ಜನ್ಯ ಜ್ಞಾನ.

ಜ್ಞಾನ ಮೀಮಾಂಸೆಯ ಒಂದು ಮೂಲಭೂತ ಪ್ರಶ್ನೆಯೆಂದರೆ ಸ್ವಯಂಸಿದ್ಧವಾದ ಜ್ಞಾನವಿದೆಯೇ ಎಂಬುದು. ಸಾಮಾನ್ಯ ತಾರ್ಕಿಕ ವಿದ್ವಾಂಸರು ಇದನ್ನು ಇದೆ ಎಂದು ನಂಬುತ್ತಾರೆ. ಆದರೆ ಅನುಭವಜನ್ಯ ಜ್ಞಾನದ ಪ್ರತಿಪಾದಕರು ಎಲ್ಲ ಜ್ಞಾನವು ಅಂತಿಮವಾಗಿ ಅನುಭವಜನ್ಯವೇ ಆಗಿರುತ್ತದೆ ಎಂಬುದನ್ನು ಪ್ರತಿಪಾದಿಸುತ್ತಾರೆ. ಸ್ವಯಂಸಿದ್ಧ ಜ್ಞಾನದ ಪ್ರತಿಪಾದಕರಿಗೆ ಗಣಿತ ಮತ್ತು ತರ್ಕಗಳು ಆಧಾರಭೂತವಾಗಿವೆ. ಅನುಭವಜನ್ಯ ಜ್ಞಾನದ ಪ್ರತಿಪಾದಕರು ಕ್ಷೇತ್ರಾಧಾರಿತ ವಾದವನ್ನು ಮಂಡಿಸುತ್ತಾರೆ. ಇದನ್ನೇ ಆಧರಿಸಿ ಡೇವಿಡ್ ಹ್ಯೂಮೆನು ‘ಅನುಭವ ಇಲ್ಲದೇ ಸತ್ಯದ ಸಂಪೂರ್ಣ ಸಾಕ್ಷಾತ್ಕಾರವಾಗುವುದಿಲ್ಲ’ ಎಂಬ ವ್ಯಾಖ್ಯೆಯನ್ನು ಪ್ರತಿಪಾದಿಸುತ್ತಾನೆ.

ಶುದ್ಧ ಸ್ವರೂಪ ಜ್ಞಾನ (Virtue Epistemology)

ಜ್ಞಾನಶಾಸ್ತ್ರದ ಸಮಸ್ಯೆಗಳಿಗೆ ಜ್ಞಾನ ಸ್ವರೂಪ ಮೂಲಗಳಿಂದ, ಹುಡುಕಾಟದ ಪ್ರಯತ್ನವೇ ಶುದ್ಧ ಸ್ವರೂಪ ಜ್ಞಾನ. ಜ್ಞಾನವು ನಿಯಮಬದ್ಧ ಶಾಖೆಯಾಗಿದೆ. ಈ ನಿಯಮಬದ್ಧತೆಗೆ ನೀತಿಯೇ ಆಧಾರ. ಶುದ್ಧ ಸ್ವರೂಪದಲ್ಲಿ ನೈತಿಕತೆಗೆ ಎಷ್ಟು ಮಹತ್ವವಿದೆಯೋ ಅದರಂತೆ ಶುದ್ಧ ಜ್ಞಾನ ಸ್ವರೂಪದ ಶಾಖೆಗೆ ವಿಧಿ ಬಿಂದುಗಳಿಂದ ಕೂಡಿದ ಪರಿಕಲ್ಪನೆಗಳೇ ಆಧಾರ. ಆದ್ದರಿಂದಲೇ ಶುದ್ಧ ಸ್ವರೂಪ ಜ್ಞಾನವು ವಸ್ತು ಸಾಪೇಕ್ಷವೇ ಹೊರತಾಗಿ ನಂಬಿಕೆ ಸಾಪೇಕ್ಷ್ಯವಲ್ಲ. ಸಮರ್ಥವಾಗಿ ಮಂಡಿತವಾದ ನಂಬಿಕೆಗಳನ್ನು ಶುದ್ಧ ಸ್ವರೂಪದ ಜ್ಞಾನವು ತನ್ನ ನಿಯಮವಾಗಿ ಸ್ವೀಕರಿಸುತ್ತದೆ. (Linda Zagzebski) ಯ ಪ್ರಕಾರ ಜ್ಞಾನವೇ ನಂಬಿಕೆಯ ನಿಜ ಸ್ವರೂಪ. ಇದು ಪ್ರತಿಭೆಯ ಸಂಸ್ಕರಣದಿಂದಾಗುವ ಕ್ರಿಯೆ.

ಸಂಸ್ಕರಣಾತ್ಮಕ ಮತ್ತು ವಿಶ್ಲೇಷಣಾತ್ಮಕ ವ್ಯಾಖ್ಯೆಗಳು

ಯಾವ ವ್ಯಾಖ್ಯೆಗೆ ಸಮರ್ಥನೆ ಬೇಕಾಗಿಲ್ಲವೋ ಮತ್ತು ಅರ್ಥವು ಸಹಜವಾಗಿ ಸ್ಫುರಿಸುತ್ತಿದೆಯೋ ಅಂತಹ ವ್ಯಾಖ್ಯೆಗಳಿಗೆ ವಿಶ್ಲೇಷಣಾತ್ಮಕ ವ್ಯಾಖ್ಯೆ ಎನ್ನಲಾಗಿದೆ. ಅದರಲ್ಲಿ ವ್ಯಾಖ್ಯೆಯ ಒಳರಚನೆಯಲ್ಲೇ ಪರಿಕಲ್ಪನೆಯ ವಿವರಣೆ ಇರುತ್ತದೆ. ಗಣಿತೀಯ ವ್ಯಾಖ್ಯೆಗಳು ಸಾಮಾನ್ಯವಾಗಿ ವಿಶ್ಲೇಷಣಾತ್ಮಕವಾಗಿರುತ್ತವೆ. ಸಂಸ್ಕರಣಾತ್ಮಕ ವ್ಯಾಖ್ಯೆಗಳಲ್ಲಿ ವಿಷಯ ಮತ್ತು ವಿವರಣೆ ಪ್ರತ್ಯೇಕವಾಗಿರುತ್ತವೆ.

ಜ್ಞಾನಶಾಸ್ತ್ರದ ವಾದಗಳು

ಅತಾರ್ಕಿತ/ತರ್ಕಾತೀತವಾದ (Irrationalism)

ಯಾವುದೇ ನಂಬುಗೆಯ ಸಮರ್ಥನೆಗೆ ತರ್ಕವೊಂದೇ ಬೇಕಾಗಿರುವುದಿಲ್ಲ. ಕಾರ್ಯ ಕಾರಣ ಇರಬೇಕೆಂದೇನೂ ಇಲ್ಲ. ಇವೆಲ್ಲದರ ಹೊರತಾಗಿಯೂ ಸತ್ಯ ಇರಬಹುದು. ಸಮಕಾಲೀನ ಅನುಭಾವದ ವ್ಯಾಖ್ಯೆಯಂತೆ ಜ್ಞಾನದ. ಸಮರ್ಥನೆಗೆ ತರ್ಕಾತೀತ ಅಥವಾ ಅನುಭಾವ ಕೂಡ ಅನ್ವಯವಾಗುತ್ತದೆ. ಭಾವಾವೇಶವು ಸತ್ಯದ ಆಧಾರವಾಗಿದ್ದಲ್ಲಿ ಅದು ಅನುಭಾವ ಜ್ಞಾನವಾಗುತ್ತದೆ.

ತರ್ಕಬದ್ಧತೆ (Rationality)

ತತ್ವಜ್ಞಾನ ಪಂಡಿತರ ಪ್ರಕಾರ ಯಾವುದನ್ನು ನಾವು ಜ್ಞಾನವೆನ್ನುತ್ತೇವೆಯೋ ಅದು ಜ್ಞಾನವಾಗಿರಲಿಕ್ಕಿಲ್ಲ. ಇದನ್ನು ಸಿದ್ಧ ಮಾಡುವುದಕ್ಕಾಗಿ ತರ್ಕಬದ್ಧ ವಾದಗಳನ್ನು ಮಂಡಿಸುತ್ತಾರೆ. ಒಂದು ನಂಬುಗೆಯನ್ನು ಪ್ರಶ್ನಿಸಿದಾಗ ಅದು ಇನ್ನೊಂದು ನಂಬುಗೆಯ ಮೇಲೆ ಅವಲಂಬಿತವಾಗಿರುತ್ತದೆ. ಅದನ್ನು ಇನ್ನೊಂದು ನಂಬುಗೆಯು ಸಮರ್ಥಿಸುತ್ತದೆ. ಹೀಗೆ ಈ ನಂಬುಗೆಯ ಸರಪಳಿಯು ಮುಂದುವರಿಯುತ್ತಿರುತ್ತದೆ. ಇದನ್ನು ಮೇಲಿನ ವಾದದ ಸಮರ್ಥನೆಗಾಗಿ ಕೊಡುತ್ತಾರೆ. ಅನೇಕ ಸರಪಳಿಗಳ ನೋಟ ಯಾವುದೇ ಜ್ಞಾನದ ಅಭಿವ್ಯಕ್ತಿಗೆ ಅಡ್ಡಿಯಾಗುತ್ತದೆ. ಪೀಟರ್ ಕ್ಲೇನನ ಪ್ರಕಾರ ಕಾರ್ಯ-ಕಾರಣ ಸಂಬಂಧದ ಅಸ್ತಿತ್ವ ಅನಂತವಾದುದು. ಈ ಅನಂತತೆಯನ್ನು ಆತ ಪರಿಹಾರದ ಒಂದು ಸಾಧನ ಎಂದೆನ್ನುತ್ತಾನೆ. ಸಾಧ್ಯತೆಗಳ ಅನಂತತೆಯನ್ನು ಕೆಲವು ತತ್ವಜ್ಞಾನಿಗಳು ಸಹಜವೆಂದು ತಿಳಿದುಕೊಳ್ಳುತ್ತಾರೆ. ಕಾರಣಗಳನ್ನು ಸಂದರ್ಭಕ್ಕೆ ತಕ್ಕಂತೆ ಜೋಡಿಸುವುದು ತತ್ವಜ್ಞಾನಿಗಳ ಕೆಲಸ. ನಾವು ಸತ್ಯದ ಜ್ಞಾನವನ್ನು ಅರಸುವಾಗ ಈ ಮೇಲಿನ ಕಾರಣಗಳ ಅನಂತತೆಯಲ್ಲಿನ ಉಪಯುಕ್ತ ಕೊಂಡಿಗಳನ್ನು ತೆಗೆದುಕೊಳ್ಳಬೇಕು.

ಮೂಲಭೂತ ತತ್ವವಾದ (Foundamentalism)

ಯಾವ ತತ್ವ ಬೇರೊಂದು ತತ್ವಕ್ಕೆ ಆಧಾರಭೂತವಾಗಿ ನಿಲ್ಲುತ್ತದೆಯೋ, ಯಾವ ತತ್ವಕ್ಕೆ ಸಮರ್ಥನೆ ಬೇಕಾಗುವುದಿಲ್ಲವೋ, ಅಂದರೆ ಯಾವುದು ನೇರವಾಗಿ ನಮ್ಮ ಅರಿವಿಗೆ ಬರುವುದೋ ಅದು ಮೂಲಭೂತವಾದ. ಉದಾ: ಯಾವ ನಂಬುಗೆಗಳ ಬಗೆಗೆ ಮಾನವ ಜನಾಂಗಕ್ಕೆ ನೇರವಾದ ಅರಿವು ಇದೆಯೋ, ಅಥವಾ ಯಾವ ನಂಬುಗೆಗಳು ಸ್ವಯಂಸಿದ್ಧವಾಗಿವೆಯೋ, ಯಾವ ನಂಬುಗೆಯ ಪತನ ಅಥವಾ ಸ್ಖಾಲಿತ್ಯ ಎಂದು ಗೋಚರವಾಗುವುದಿಲ್ಲವೋ ಅಂತಹ ತತ್ವಗಳು ಈ ವಾದದಲ್ಲಿ ಬರುತ್ತವೆ. ಯಾವುದೇ ನಂಬುಗೆಯು ಮೂಲತತ್ವದ ಅಡಿಯಲ್ಲಿ ಬರಬೇಕಾದರೆ ಆ ನಂಬುಗೆಯು ಸತ್ಯವೆನಿಸಬೇಕು. ಆ ಸತ್ಯವು ಮುಂದಿನ ಸಂಶೋಧನೆಗಳು ಅದನ್ನು ಸೋಲಿಸುವವರೆಗೂ ಅದೇ ಸತ್ಯವೆಂದು ಪ್ರತಿಪಾದಿತವಾಗುತ್ತದೆ.

ಸುಸಂಗತಿವಾದ (Coherentism)

ಅನಂತತೆವಾದಕ್ಕೆ ಪ್ರತಿಯಾಗಿ ಜ್ಞಾನದ ಬಗ್ಗೆ ಇರುವ ಇನ್ನೊಂದು ವಾದ. ವ್ಯಕ್ತಿಗತ ನಂಬುಗೆಗಳಿಗೆ ಸಮರ್ಥನೆಯನ್ನು ಸಮಾನ್ಯ ಶೃಂಖಲಾತ್ಮಕವಾಗಿ ಕೂಡಿದ ಕಾರ್ಯಕಾರಣಗಳಿಂದ ಸರಳ ಮಾರ್ಗದಿಂದ ಸಿದ್ಧಪಡಿಸುವುದು ಉತ್ತಮವಲ್ಲ. ಕಾರಣಗಳ ಶೃಂಖಲೆಯಲ್ಲಿ ಸುಸಂಗತಿ ಗೋಚರವಾಗಿ ಸತ್ಯದ ಪ್ರತಿಷ್ಠಾಪನೆಯಾಗಬೇಕು ಎಂಬುದು ಈ ವಾದದ ಪ್ರತಿಪಾದನೆ ಆದರೆ ಕೆಲವು ಸಲ ಈ ಸುಸಂಗತಿಗಳು ಸತ್ಯವನ್ನು ಪ್ರತಿಪಾದಿಸುತ್ತವೆ ಎಂಬುದನ್ನು ಹೇಳಲಾಗುವುದಿಲ್ಲ.

ಬದ್ಧತಾವಾದ (Responsibilism)

ಈ ವಾದದ ಪ್ರಕಾರ ಸ್ವಾಭಾವಿಕ ಬದ್ಧತೆಯೆಂಬುದು ಜ್ಞಾನಶಾಸ್ತ್ರದ ಲಕ್ಷಣ. ಹಾಗಾಗಿಯೇ ಪ್ರಥಮವಾಗಿ ಸಿದ್ಧಪಡಿಸಿದ ಕಾರ್ಯಕಾರಣ ಸಂಬಂಧ ಮೂಲಕ್ಕೆ ಹೆಚ್ಚು ಹತ್ತಿರವಾಗಿರುತ್ತದೆ. ಎರಡನೆಯ ಹಾಗೂ ತದನಂತರದ ಸಂಸ್ಕರಣಗೊಂಡ ಜ್ಞಾನ, ಮೂಲ ಜ್ಞಾನಕ್ಕೆ ದೂರವಾಗಿ ವ್ಯಕ್ತಿ ಅಥವಾ ಘಟನೆಯ ಸಾಪೇಕ್ಷವಾಗಿ ವರ್ಣಿಸಲ್ಪಡುತ್ತದೆ. ಆದ್ದರಿಂದಲೇ ಜ್ಞಾನಶಾಸ್ತ್ರದಲ್ಲಿನ ಸ್ವಾಭಾವಿಕ ಬದ್ಧತಾವಾದವು ವ್ಯಕ್ತಿ, ಸಮಾಜಕೇಂದ್ರಿತ ನಡವಳಿಕೆ ಹಾಗೂ ಸಾಮಾಜಿಕ ಜೀವನದ ಅಂಶಗಳಾಗಿ, ಅವನ ಸಾಂಸ್ಕೃತಿಕ ಚಟುವಟಿಕೆಗಳನ್ನು ಸಮಗ್ರವಾಗಿ ಚಿಂತಿಸುತ್ತದೆ. ವ್ಯಕ್ತಿಯ ಜ್ಞಾನ ಸಮುದಾಯದ ಭಾಗವಾಗಿ, ನೈತಿಕ ಮತ್ತು ಉತ್ತಮಿಕೆಯ ಬದ್ಧತೆಯಾಗಿ ಗುರುತಿಸಲ್ಪಟ್ಟಾಗ, ಜ್ಞಾನಶಾಸ್ತ್ರವು ಸಮಾಜದೆಡೆಗಿನ ಬದ್ಧತೆಯನ್ನು ಪುನರ್ ಪ್ರತಿಷ್ಠಾಪಿಸುತ್ತದೆ. ಇಲ್ಲಿ ಜ್ಞಾನಿಯ ಕ್ರಿಯಾಶಕ್ತಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಜ್ಞಾನಿಯ ಕ್ರಿಯಾಶೀಲತೆಯು ಅವನ ಆಯ್ಕೆಯ ಭಾಗವಾಗಿರುತ್ತದೆ. ಕ್ರಿಯಾಶೀಲವಲ್ಲದ, ನೇತ್ಯಾತ್ಮಕ ಅನುಭವಗಳು ನೈಜವೆಂದು ಒಪ್ಪಿಕೊಂಡರೂ, ಕ್ರಿಯಾಶೀಲ ಜ್ಞಾನಮಾತ್ರ ಒರೆಗಲ್ಲಿಗೆ ಹಚ್ಚಲು ಬರುತ್ತದೆ. ಇದೇ ಕಾರಣಕ್ಕಾಗಿ ಜ್ಞಾನಶಾಸ್ತ್ರದ ಬದ್ದತಾವಾದ ಜ್ಞಾನದ ಜೀವಾಳವಾಗಿದ್ದು, ಆದರಿಂದಲೇ ಉಳಿದ ಶಾಖೆಗಳು ಪ್ರವಹಿಸುತ್ತವೆ. ಉದಾಹರಣೆ ಹಾಗೂ ಪ್ರತಿ ಉದಾಹರಣೆಗಳು ಎಂಬ ಸರಳ ಮಾರ್ಗದ ಮೂಲಕ ಜ್ಞಾನ ವ್ಯಾಖ್ಯೆಯನ್ನು ಅರ್ಥೈಸುವ ಬದಲು ಇತಿಹಾಸ, ಸಮಾಜ. ಪರಸ್ಪರ ಸಂಘರ್ಷದ ಸನ್ನಿವೇಶಗಳ ಮೂಲಕ ಜ್ಞಾನ ಮೀಮಾಂಸೆಗೆ ಅಣಿಯಾಗುವ ಬಗೆ ಹೆಚ್ಚು ಉಪಯುಕ್ತ. ವೈಚಾರಿಕತೆಯ/ಪ್ರಬುದ್ಧತೆಯ ಗುಣವನ್ನು ಜ್ಞಾನದ ಶಾಖೆಯಾಗಿ ಅಥವಾ ಸಾಮರ್ಥ್ಯವಾಗಿ ಗುರುತಿಸುವ ಪ್ರಯತ್ನ ಇದಾಗಿದೆ. ಅರಿಸ್ಟಾಟಲ್ ಪ್ರಕಾರ ಜ್ಞಾನಸ್ಫೂರ್ತಿ ಅಂದರೆ ಪ್ರಾಥಮಿಕ ಮೂಲತತ್ವಗಳನ್ನು ತಿಳಿದುಕೊಳ್ಳುವುದು ಹಾಗೂ ವಿಜ್ಞಾನವೆಂದರೆ ಇದರ ಮುಖಾಂತರ ಮುಂದಿನ ಸತ್ಯಗಳನ್ನು ಸಿದ್ಧಪಡಿಸುವುದು. ಅಥವಾ James Montmarquet ಪ್ರಕಾರ, ವೈಚಾರಿಕತೆಯ ಪದ್ಧತಿ ಮತ್ತು ವಿಧಾನಗಳ ಮೂಲಕ ಜ್ಞಾನವನ್ನು ಅರಸುವುದಕ್ಕಿಂತ, ಜ್ಞಾನವನ್ನು ವ್ಯಕ್ತಿ ಮಟ್ಟದ ಗುಣವಾಗಿ ಗುರುತಿಸುವುದು. ಪರ‍್ಯಾಯವಾಗಿ ಜ್ಞಾನವನ್ನು ಅದನ್ನು ಅರಸುವ ವ್ಯಕ್ತಿಯ ವ್ಯಕ್ತಿತ್ವ ಗುಣವಾಗಿ ಸ್ವೀಕರಿಸುವುದು.